ಜನರು ಸ್ವಾಭಿಮಾನಿಗಳಾಗಿದ್ದರೆ ಹೊರತು ದುರಭಿಮಾನಿಗಳಾಗಿದ್ದಿಲ್ಲ. ಬೇರೆಯವರ ಘನತೆಯನ್ನು ಹಣ, ಅಂತಸ್ತು ಮತ್ತು ಹುದ್ದೆಗಳಿಂದ ಅಳೆಯುತ್ತಿರಲಿಲ್ಲ. ಮಾನವರಿಗೆ ಒಳ್ಳೆಯತನವೇ ಆಸ್ತಿಯಾಗಿತ್ತು. ಈ ಆಸ್ತಿ ಕಳೆದುಕೊಂಡರೆ ಸತ್ತುಹೋದಂತೆಯೆ ಎಂಬ ಭಾವ ಅವರಿಗಿತ್ತು. ಎಲ್ಲ ಸಮಾಜದವರನ್ನು ಗೌರವಿಸುತ್ತ ಸಾಧ್ಯವಾದ ಕಡೆಗಳಲ್ಲೆಲ್ಲ ಅವರ ಆಚರಣೆಗಳಲ್ಲಿ ಭಾಗವಹಿಸುತ್ತ ಎಲ್ಲರೊಳಗೊಂದಾಗಿ ಬದುಕುತ್ತಿದ್ದರು.  ಯಾವುದೋ ಒಂದು ಕ್ಷಣದಲ್ಲಿ ಸಂಬಂಧ ಕೆಟ್ಟರೂ ಅದನ್ನು ಸರಿ ಮಾಡುವವರೆಗೆ ಅವರು ಮಾನಸಿಕ ನೋವನ್ನು ಅನುಭವಿಸುತ್ತಿದ್ದರು. ರಂಜಾನ್ ದರ್ಗಾ ಬರೆಯುವ  ಆತ್ಮಕತೆ  ‘ನೆನಪಾದಾಗಲೆಲ್ಲ’ ಸರಣಿಯ 26ನೆಯ ಕಂತು 

ನಾವೆಲ್ಲ ವಿಚಿತ್ರ ಸಾಮಾಜಿಕ ನಡವಳಿಕೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಈ ನಡವಳಿಕೆಗಳು ದ್ವೇಷ ಸಂಸ್ಕೃತಿಯ ಮೇಲೆ ನಿಂತಿವೆ. ತಮ್ಮ ತಮ್ಮ ಧರ್ಮಗಳ ಬಗ್ಗೆ ದುರಭಿಮಾನವನ್ನೂ ಇತರರ ಧರ್ಮಗಳ ಬಗ್ಗೆ ದ್ವೇಷವನ್ನೂ ಹೊಂದಿರುವ ಕೋಮುವಾದಿಗಳು, ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ತಮ್ಮ ತಮ್ಮ ಸಮಾಜಗಳ ನಾಯಕರಾಗಿ ವಿಜೃಂಭಿಸುತ್ತಿದ್ದಾರೆ. ‘ನೀವು ದುರ್ಬಲರಾದರೆ ಇತರ ಧರ್ಮಗಳ ವೈರಿಗಳು ನಿಮ್ಮನ್ನು ನಿರ್ನಾಮ ಮಾಡುತ್ತಾರೆ’ ಎಂದು ಅವರು ಮೊದಲಿಗೆ ತಮ್ಮ ಧರ್ಮದವರಿಗೆ ಭಯ ಹುಟ್ಟಿಸುತ್ತಾರೆ. ಆ ಭಯದ ಕಾರಣದಿಂದ ವಿವಿಧ ಧರ್ಮಗಳ ನೆರೆಹೊರೆಯವರು ಪರಸ್ಪರ ಸಂಶಯದಿಂದ ನೋಡಲು ಪ್ರಾರಂಭಿಸುತ್ತಾರೆ. ಆಮೇಲೆ ಆಯಾ ಧರ್ಮಗಳ ಧರ್ಮಪಂಡಿತರ ಕಡೆಯಿಂದ ಹೇಳಿಸುತ್ತಾರೆ.

ಶಾಖಾಹಾರ–ಮಾಂಸಾಹಾರ, ಸಾಕಾರ ದೇವರು-ನಿರಾಕಾರ ದೇವರು, ಏಕದೇವೋಪಾಸನೆ-ಬಹುದೇವೋಪಾಸನೆ, ಮಂದಿರ–ಮಸೀದಿ, ಕೇಸರಿ-ಹಸಿರು, ಆ ವಸ್ತçಸಂಹಿತೆ–ಈ ವಸ್ತçಸಂಹಿತೆ, ಈ ಸಂಪ್ರದಾಯದ ಹಿಂದೆ ಇಂಥ ಕ್ರೌರ್ಯವಿದೆ–ಆ ಸಂಪ್ರದಾಯದ ಹಿಂದೆ ಅಂಥ ಕ್ರೌರ್ಯವಿದೆ, ಅವನು ಇವನ ಧರ್ಮದಲ್ಲಿ ದೋಷ ಕಾಣುತ್ತಾನೆ–ಇವನು ಅವನ ಧರ್ಮದಲ್ಲಿ ದೋಷ ಕಾಣುತ್ತಾನೆ. ಹೀಗೆ ವ್ಯತ್ಯಾಸ ಸೃಷ್ಟಿಸುತ್ತಾರೆ.

ಕೊನೆಗೆ ‘ಎರಡು ಸಂಸ್ಕೃತಿಗಳು ಒಂದಾಗಿ ಬಾಳಲಾರವು’ ಎಂಬ ವಾದ ಎಲ್ಲೆಡೆ ಹಬ್ಬುತ್ತದೆ. “ಇದು ನಿಜವೆ?” ಎಂದು ಜನಸಾಮಾನ್ಯರಿಗೆ ಕೇಳಿದರೆ, ಅವರು ನಕ್ಕುಬಿಡುತ್ತಾರೆ. ಭಾರತದ ಬಹುತ್ವ ಸಂಸ್ಕೃತಿಯ ನಿಜವಾದ ವಕ್ತಾರರು ಜನಸಾಮಾನ್ಯರೇ ಆಗಿದ್ದಾರೆ. ಅವರು ತಮ್ಮ ದೈನಂದಿನ ಬದುಕಿನ ಅನುಭವದ ಮೇಲೆ ಬದುಕುತ್ತಾರೆ. ಪರಸ್ಪರ ಸಹಾಯವಿಲ್ಲದೆ ಅವರ ಬದುಕು ದುಸ್ತರವಾಗುತ್ತದೆ. ಅವರ ಜೀವನ ವಿಧಾನದಲ್ಲಿ ಎಲ್ಲ ದೇವರುಗಳು, ಎಲ್ಲ ಪಣ್ಯಕ್ಷೇತ್ರಗಳು, ಎಲ್ಲರ ಹಬ್ಬಹರಿದಿನಗಳು ಮತ್ತು ಸಂಪ್ರದಾಯಗಳು ಹಾಸುಹೊಕ್ಕಾಗಿವೆ. ಅವರು ತಮ್ಮ ಜೀವನವಿಧಾನವನ್ನು ಪ್ರೀತಿಸುವುದರ ಜೊತೆಗೆ ಬೇರೆಯವರ ಜೀವನವಿಧಾನವನ್ನು ಗೌರವಿಸುತ್ತಾರೆ. ಅವರು ದುಡಿದು ತಿನ್ನುವವರು. ಅವರಿಗೆ ದ್ವೇಷ ಸಾಧಿಸುವ ಮನಸ್ಸಿಲ್ಲ, ಉಪದ್ವಾö್ಯಪಿ ಚಟುವಟಿಕೆಗಳಿಗೆ ಸಮಯವೂ ಇಲ್ಲ. ಮುಖ್ಯವಾಗಿ ಅವರು ಸೂಫಿಗಳ, ಶರಣರ, ದಾಸರ, ಸಂತರ ಮತ್ತು ಅನುಭಾವಿ ಕವಿಗಳ ಪ್ರಭಾವದಲ್ಲಿ ಬೆಳೆದಿದ್ದಾರೆ. ನಿರಕ್ಷರಿಗಳಾದರೂ ಕೇಳಿ, ನೋಡಿ ಬದುಕಿನ ಸಾರವನ್ನು ಸವಿದಿದ್ದಾರೆ. ಭಾರತದ ಬಗ್ಗೆ ಅವರಿಗಿರುವ ತಿಳಿವಳಿಕೆ ಮುಂದೆ ಮೌಲ್ವಿಗಳ, ಪಂಡಿತರ, ಸ್ವಾಮಿಗಳ, ಧಾರ್ಮಿಕ ಮತ್ತು ವಿದ್ಯಾಲಯಗಳ ವಿದ್ವಾಂಸರ ತಿಳಿವಳಿಕೆ ಶಿಥಿಲವಾದುದಾಗಿದೆ ಎಂಬುದಕ್ಕೆ ವರ್ತಮಾನವೇ ಸಾಕ್ಷಿ ಇದೆ.

ನನ್ನ ಬಾಲ್ಯದಲ್ಲಿ ನಾನು ಭಾರತವನ್ನು ಅಲ್ಲೀಬಾದಿ ಹಳ್ಳಿ ಹಾಗೂ ಅಂದಿನ ವಿಜಾಪುರ ಪಟ್ಟಣದ ಕೊರವರ ಮತ್ತು ನಾವಿಗಲ್ಲಿ ಓಣಿಯ ಮೂಲಕ ನೋಡಿದ್ದೇನೆ. ಇವೆಲ್ಲ ಸೇರಿ ನನ್ನ ದೇಶ ಮತ್ತು ಜಗತ್ತು ಆಗಿದ್ದವು. ಇಲ್ಲಿಯ ಜನರ ಬದುಕಿನ ಕ್ಷಣಿಕ ಸಣ್ಣತನಗಳು ಮತ್ತು ಜೀವನಾನುಭವದಿಂದ ಕೂಡಿದ ದೊಡ್ಡತನಗಳು ನನ್ನ ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಆರು ದಶಕಗಳಷ್ಟು ಹಿಂದಿನ ಈ ವಾತಾವರಣ ನನ್ನ ಮನದಲ್ಲಿ ಸುಳಿದಾಗ ಈಗ ಎಂಥ ದುರಂತ ಸ್ಥಿತಿಯಲ್ಲಿ ಬದುಕುತ್ತಿದ್ದೇನೆ ಎಂಬ ಭಾವ ಮೂಡುತ್ತದೆ. ಆ ಕಾಲದಲ್ಲಿ ನನ್ನ ಇಡೀ ದೇಶ ಅಲ್ಲೀಬಾದಿ ಹಳ್ಳಿಯಾಗಿತ್ತು, ನಾವಿಗಲ್ಲಿಯ ಹಾಗೇ ಇತ್ತು ಎಂಬುದು ಅನೇಕ ಹಿರಿಯರ ಅನುಭವ ಕಥನಗಳನ್ನು ಓದುವಾಗ ತಿಳಿಯಿತು.
ಜನರು ಸ್ವಾಭಿಮಾನಿಗಳಾಗಿದ್ದರೆ ಹೊರತು ದುರಭಿಮಾನಿಗಳಾಗಿದ್ದಿಲ್ಲ. ಬೇರೆಯವರ ಘನತೆಯನ್ನು ಹಣ, ಅಂತಸ್ತು ಮತ್ತು ಹುದ್ದೆಗಳಿಂದ ಅಳೆಯುತ್ತಿರಲಿಲ್ಲ. ಮಾನವರಿಗೆ ಒಳ್ಳೆಯತನವೇ ಆಸ್ತಿಯಾಗಿತ್ತು. ಈ ಆಸ್ತಿ ಕಳೆದುಕೊಂಡರೆ ಸತ್ತುಹೋದಂತೆಯೆ ಎಂಬ ಭಾವ ಅವರಿಗಿತ್ತು. ಎಲ್ಲ ಸಮಾಜದವರನ್ನು ಗೌರವಿಸುತ್ತ ಸಾಧ್ಯವಾದ ಕಡೆಗಳಲ್ಲೆಲ್ಲ ಅವರ ಆಚರಣೆಗಳಲ್ಲಿ ಭಾಗವಹಿಸುತ್ತ ಎಲ್ಲರೊಳಗೊಂದಾಗಿ ಬದುಕುತ್ತಿದ್ದರು. ಹೀಗಾಗಿ ಎಲ್ಲ ಸಮಾಜಗಳು ಒಂದಾಗಿ ಬದುಕುತ್ತ ಸಾಮಾಜಿಕ ಮೌಲ್ಯಗಳು ರೂಪುಗೊಳ್ಳುತ್ತಿದ್ದವು. ಯಾವುದೋ ಒಂದು ಕ್ಷಣದಲ್ಲಿ ಸಂಬಂಧ ಕೆಟ್ಟರೂ ಅದನ್ನು ಸರಿ ಮಾಡುವವರೆಗೆ ಅವರು ಮಾನಸಿಕ ನೋವನ್ನು ಅನುಭವಿಸುತ್ತಿದ್ದರು. ನೆರೆಮನೆಯವರ ಜೊತೆ ಮುಖ ತಿರುಗಿಸಿಕೊಂಡು ನಡೆಯುವುದು ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸುತ್ತಿತ್ತು. ಕೊನೆಗೆ ‘ನಾನು ಹೀಗೆ ಹೇಳಿದ್ದಕ್ಕೆ ಅವನು ಹಾಗೆ ಹೇಳಿದ್ದು ಸರಿ’ ಎಂಬ ಭಾವ ಮೂಡುತ್ತಿತ್ತು. ಸಾವು ನೋವು ಸಂಭವಿಸಿದಾಗ ಮಾತು ಬಿಟ್ಟವರೂ ಬಂದು ಕೈಲಾದ ಸಹಾಯ ಮಾಡುತ್ತಿದ್ದರು. ಸಮಾಧಾನ ಹೇಳುತ್ತಿದ್ದರು. ಮನೆಯಲ್ಲಿ ಶುಭ ಕಾರ್ಯಗಳಾಗುವಾಗ ಮನೆಯವರೇ ಸ್ವತಃ ಮಾತು ಬಿಟ್ಟವರ ಮನೆಗೆ ಹೋಗಿ ಆಹ್ವಾನ ನೀಡುತ್ತಿದ್ದರು. ಅವರು ಕೂಡ ಅಂಥ ದಿನಕ್ಕಾಗಿ ಕಾಯುತ್ತಿದ್ದರು. ಒಂದು ವೇಳೆ ತೊಂದರೆಯ ಅಥವಾ ವಿಶೇಷ ದಿನಗಳು ಬರದೆ ಹೋದರೆ, ಸಂಕ್ರಮಣ ಮತ್ತು ದಸರಾ ಹಬ್ಬಗಳು ಬರುವುದಂತೂ ಖಚಿತ. ಹಬ್ಬಗಳ ಹಿನ್ನೆಲೆ ಏನೇ ಇದ್ದರೂ ಜನರಿಗೆ ಅವೆಲ್ಲ ಮುಖ್ಯವಾಗುತ್ತಿರಲಿಲ್ಲ. ಅವು ಸುಖಸಂತೋಷದ ಜೊತೆ ಜನರನ್ನು ಕೂಡಿಸುವ ಹಬ್ಬಗಳಾಗಿದ್ದವು.

(ಮನೆಯ ಒಳಾಂಗಣ)

ನೆರೆಮನೆಯವರ ಜೊತೆ ಮುಖ ತಿರುಗಿಸಿಕೊಂಡು ನಡೆಯುವುದು ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸುತ್ತಿತ್ತು. ಕೊನೆಗೆ ‘ನಾನು ಹೀಗೆ ಹೇಳಿದ್ದಕ್ಕೆ ಅವನು ಹಾಗೆ ಹೇಳಿದ್ದು ಸರಿ’ ಎಂಬ ಭಾವ ಮೂಡುತ್ತಿತ್ತು. ಸಾವು ನೋವು ಸಂಭವಿಸಿದಾಗ ಮಾತು ಬಿಟ್ಟವರೂ ಬಂದು ಕೈಲಾದ ಸಹಾಯ ಮಾಡುತ್ತಿದ್ದರು. ಸಮಾಧಾನ ಹೇಳುತ್ತಿದ್ದರು. ಮನೆಯಲ್ಲಿ ಶುಭ ಕಾರ್ಯಗಳಾಗುವಾಗ ಮನೆಯವರೇ ಸ್ವತಃ ಮಾತು ಬಿಟ್ಟವರ ಮನೆಗೆ ಹೋಗಿ ಆಹ್ವಾನ ನೀಡುತ್ತಿದ್ದರು.

ಅಹಂ ಇಂದ ಹೊರಬರುವುದನ್ನು ಸಂಕ್ರಮಣ ಸೂಚಿಸುತ್ತದೆ. ಎಳ್ಳು ಬೆಲ್ಲ ಹಂಚುವಾಗ ‘ನಾವು ನೀವು ಎಳ್ಳು ಬೆಲ್ಲದ ಹಾಗೆ ಇರೋಣ’ ಎಂದು ಹೇಳುತ್ತಿದ್ದರು. ಕಿರಿಯರಾಗಿ (ನಿರಹಂಕಾರಿಗಳಾಗಿ) ಮತ್ತು ಮಧುರ ಮನಸ್ಸಿನವರಾಗಿ ಕೂಡಿ ಬಾಳೋಣ ಎಂಬುದು ಅವರ ಅನಿಸಿಕೆ ಆಗಿತ್ತು. ಇನ್ನು ದಸರೆಯಲ್ಲಿ ಜನ ಬಂಗಾರದ ಹೆಸರಲ್ಲಿ ಬನ್ನಿ ತಪ್ಪಲನ್ನು ಹಂಚುತ್ತ ‘ನಾವು ನೀವು ಬಂಗಾರದ್ಹಂಗ ಇರೋಣ’ ಎಂದು ಹೇಳುತ್ತಿದ್ದರು. ಮಾತು ಬಿಟ್ಟವರು ಕೂಡ ಎಲ್ಲ ಅಹಂ ಬಿಟ್ಟು ಮಾತನಾಡಲು ಅವಕಾಶ ಕಲ್ಪಿಸುವ ಹಬ್ಬಗಳಿವು. ನಮಗೋ ಜನರನ್ನು ಭೇಟಿ ಆಗುವ ಆನಂದವೇ ಆನಂದ. ಸುತ್ತಿ ಸುತ್ತಿ ಕಾಲುಗಳು ನೋಯುತ್ತಿರಲಿಲ್ಲ. ಮಿತ್ರರನ್ನು, ಶಿಕ್ಷಕರನ್ನು, ಹಿರಿಯರನ್ನು ಭೇಟಿಯಾಗುವ ಸಡಗರ, ಎಲ್ಲಿಲ್ಲದ ಉತ್ಸಾಹದ ಬುಗ್ಗೆಂiÀiನ್ನು ಸೃಷ್ಟಿಸುತ್ತಿತ್ತು. ಮಾತು ಬಿಟ್ಟವರ ಜೊತೆ ಮತ್ತೆ ಮಾತನಾಡುವ ಸುಖದ ಮುಂದೆ ಯಾವುದೂ ಇಲ್ಲ ಎಂಬುದು ಸ್ವಾನುಭವದ ಮಾತೂ ಆಗಿದೆ. ಕೂಡಿ ಬಾಳಬೇಕೆಂಬುದು ಪ್ರತಿಯೊಬ್ಬರ ಮನದಾಳವಾಗಿತ್ತು.

ನಮ್ಮ ನಾವಿಗಲ್ಲಿ ಮನೆಯ ಸುತ್ತುಮುತ್ತೆಲ್ಲ ಬಡವರ ಮನೆಗಳೇ ಹೆಚ್ಚಾಗಿದ್ದವು. ಕಡು ಬಡವರು, ಬಡವರು, ಮೇಲ್ಮಟ್ಟದ ಬಡವರು, ಕೆಳ ಮಧ್ಯಮ ವರ್ಗದವರು ಹೆಚ್ಚಾಗಿದ್ದರು. ಮೇಲ್ ಮಧ್ಯಮ ವರ್ಗದವರು ಬಹಳ ಕಡಿಮೆ ಇದ್ದರು. ಆದರೆ ಇವರಾರೂ ಬಡತನ ಶ್ರೀಮಂತಿಕೆಯ ಅಳತೆಗೋಲನ್ನು ಬಳಸಿದವರಲ್ಲ. ಒಳ್ಳೆಯತನ, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಗಳೇ ಮೌಲ್ಯಮಾಪನಗಳಾಗಿದ್ದವು. ಘನತೆವೆತ್ತ ಬದುಕು ಅವರದಾಗಿತ್ತು. ಸಮಾಜದಲ್ಲಿ ಯಾರಾದರೂ ತಪ್ಪು ಮಾಡಿದರೆ ನಾಚಿಕೆಯಿಂದ ತಲೆತಗ್ಗಿಸಿ ತಿರುಗುತ್ತಿದ್ದರು.
ನಮ್ಮ ಜನರ ವಾಗ್ವಾದ ಮತ್ತು ಜಗಳಗಳು ಕೂಡ ಇಂದಿಗೂ ಆಶ್ಚರ್ಯವೆನಿಸುತ್ತದೆ. ಅವರು ಎದುರಿನವರನ್ನು ಅರ್ಥೈಸಿಕೊಳ್ಳುವ ರೀತಿ ನಾನು ಯಾವುದೇ ಗ್ರಂಥದಲ್ಲಿ ಓದಿಲ್ಲ.

ಕಡುಬಡವ ಹೆಣ್ಣುಮಕ್ಕಳು ಕಸ ಮುಸುರಿ ಕೆಲಸ ಮಾಡುತ್ತಿದ್ದರು. ಆ ಕಾಲದಲ್ಲಿ ತಿಂಗಳಿಗೆ ಬಹಳವೆಂದರೆ ಸವಾ (೧.೨೫) ರೂಪಾಯಿ ಕೊಡುತ್ತಿದ್ದರು ಎಂದು ಕಾಣುತ್ತದೆ. (ಆಗ ಒಂದು ತೊಲಿ ಬಂಗಾರಕ್ಕೆ ನೂರು ರೂಪಾಯಿ ಮತ್ತು ಒಂದು ಎಕರೆ ಜಮೀನಿಗೆ ಸಾವಿರ ರೂಪಾಯಿ ಇದ್ದುದನ್ನು ನಮ್ಮ ಮನೆಯವರು ಮಾತನಾಡುವಾಗ ಕೇಳಿದ್ದು ಇಂದಿಗೂ ನೆನಪಿದೆ.) ಆಗ ನಮ್ಮ ಮನೆಯ ಬಳಿ ಇರುವ ಒಬ್ಬ ಕಡುಬಡವಿ ಅಜ್ಜಿ ಸ್ವಲ್ಪ ದೂರದಲ್ಲಿದ್ದ ಮೇಲ್ಮಟ್ಟದ ಬಡವಿಯ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು. ಒಮ್ಮೆ ಅವರು ಜಗಳವಾಡುತ್ತಿದ್ದರು. ಜಗಳಗಳಿಗೆ ಬೀದಿಯೆ ರಂಗಸ್ಥಳ. ಧ್ವನಿಗೆ ಮೈಕೇ ಬೇಕಿರಲಿಲ್ಲ. ಹೀಗಾಗಿ ಎಲ್ಲರ ಜಗಳಗಳು ರಸ್ತೆಯ ಎಲ್ಲ ಮನೆಯವರಿಗೆ ಸಹಜವಾಗೇ ಕೇಳಿಸುತ್ತಿದ್ದವು. ಅವರು ಬಹಳ ಕೆಟ್ಟದಾಗಿ ಜಗಳಾಡಿದರು. ಕೊನೆಗೆ ತಮ್ಮ ತಮ್ಮ ಮನೆ ಸೇರಿದರು. ನಂತರ ಸ್ವಲ್ಪ ಹೊತ್ತಿನಲ್ಲಿ ಆ ಮೇಲ್ಮಟ್ಟದ ಬಡವಿ ಉಂಡು ಉಳಿದ ರೊಟ್ಟಿ ಪಲ್ಯೆ ಮುಂತಾದವುಗಳನ್ನು ಒಂದು ಪ್ಲೇಟಲ್ಲಿ ಹಾಕಿಕೊಂಡು ಕಡುಬಡವಿಯ ಮನೆಗೆ ತಂದಳು! ಅವಳು ಮಾತನಾಡದೆ ಮನೆಯ ಮುಂದೆ ನಿಂತಳು. ಆ ಅಜ್ಜಿ ಹೊರಗೆ ಬಂದು ಮಾತನಾಡದೆ ಆ ಪ್ಲೇಟ್ ಇಸಿದುಕೊಂಡಳು! ಇದು ನಮ್ಮ ಜನರ ಅಂತಃಕರಣ ಮತ್ತು ಪ್ರಸಾದ ಪ್ರಜ್ಞೆ. ಆ ಅಜ್ಜಿಗೆ ಊಟ ಇಲ್ಲ ಎಂಬ ಕಾಳಜಿ ಒಂದುಕಡೆಯಾದರೆ, ಪ್ರಸಾದ ಕೆಡಿಸಬಾರದು ಎಂಬ ಪ್ರಜ್ಞೆ ಇನ್ನೊಂದು ಕಡೆ. ಆ ಅಜ್ಜಿ ಮತ್ತೆ ಎಂದಿನಂತೆ ಮರುದಿನ ಮನೆಗೆಲಸಕ್ಕೆ ಹೋದಳು. ಇಂಥ ಅನೇಕ ಜಗಳಗಳನ್ನು ಮತ್ತು ಕೂಡಿ ಬದುಕುವುದನ್ನು ನೋಡಿದ್ದೇನೆ. ಆಧುನಿಕ ಜಗತ್ತಿನಲ್ಲಿ ‘ಯಾರಾದರೂ ಮಾತನಾಡಿದರೆ ಬೇಸರ’ ಎನ್ನುವ ಪರಿಸ್ಥಿತಿ ಉಂಟಾಗಿದೆ. ಆದರೆ ಆ ಕಾಲದ ಜನರಿಗೆ ನೆರೆಹೊರೆಯವರ ಮಾತುಕತೆಗಳೇ ಮುಖ್ಯವಾಗಿದ್ದವು. ಬೇರೆಯವರು ಮಾತನಾಡದಿದ್ದರೆ ಬದುಕು ನಿರರ್ಥಕ ಎನಿಸುತ್ತಿತ್ತು.

ಆಗ ನಮ್ಮ ಓಣಿಗಳಲ್ಲಿ ವಾರಕ್ಕೆ ಒಂದು ದಿನ ಮಾತ್ರ ನಲ್ಲಿಯಲ್ಲಿ ನೀರು ಬರುತ್ತಿತ್ತು. ಇಡೀ ಓಣಿಯಲ್ಲಿ ಒಬ್ಬರ ಮನೆಯಲ್ಲಿ ಮಾತ್ರ ನಳ ಇತ್ತು. ನೀರು ಸಂಗ್ರಹಿಸುವುದು ದೊಡ್ಡ ಸಾಹಸದ ಮಾತಾಗಿತ್ತು. ಮಂಗಳವಾರ ನೀರು ಬರುವ ದಿನ ನಸುಕಿನಲ್ಲಿ ಎದ್ದು ಕೊಡ ಮತ್ತು ಬಾದಲಿ (ಬಕೆಟ್)ಗಳನ್ನು ಒಯ್ದು ನಳದ ಮುಂದೆ ಪಾಳಿ ಹಚ್ಚಬೇಕಿತ್ತು. ನಮ್ಮಂಥ ಬಡವರ ಮನೆಗಳಲ್ಲಿ ಹೆಚ್ಚಿನ ನೀರು ತುಂಬುವ ಪಾತ್ರೆಗಳು ಇದ್ದಿದ್ದಿಲ್ಲ. ಆಗಿನ ಕಾಲದಲ್ಲಿ ಪ್ಲಾö್ಯಸ್ಟಿಕ್ ಕೊಡಗಳೂ ಇರುತ್ತಿರಲಿಲ್ಲ. ಮಣ್ಣಿನ ಕೊಡಗಳು ಗದ್ದಲದಲ್ಲಿ ಒಡೆದು ಹೋಗುತ್ತಿದ್ದವು. ಕೆಳಮಧ್ಯಮ ವರ್ಗದವರಲ್ಲಿ ಹೆಚ್ಚಿನ ಕೊಡಗಳು ಮತ್ತು ಬಾದಲಿಗಳು ಇರುತ್ತಿದ್ದವು. ಅವರಲ್ಲಿ ಕೆಲವರು ಧಾಡಸಿ ಕೂಡ ಇರುತ್ತಿದ್ದರು. ಹೀಗಾಗಿ ಅವರ ಕೊಡಗಳು ತುಂಬುವ ವರೆಗೆ ಹಿಂದಿನವರು ಕಾಯಬೇಕಿತ್ತು. ಇಂಥ ಸಂದರ್ಭದಲ್ಲಿ ಬಹಳ ವಾಗ್ವಾದಗಳಾಗುತ್ತಿದ್ದವು. ಕೆಲವೊಂದು ಸಲ ಪರಿಸ್ಥಿತಿ ವಿಪರೀತಕ್ಕೆ ಹೋಗಿ ಜಗಳಗಳಾಗುತ್ತಿದ್ದವು. ಇದೆಲ್ಲ ನಲ್ಲಿಯಲ್ಲಿ ನೀರು ನಿಲ್ಲುವ ವರೆಗೆ ಇದ್ದದ್ದೇ. ಈ ವಿಶಿಷ್ಟ ವಾಗ್ವಾದ ಮತ್ತು ಜಗಳಗಳನ್ನು ಬರುವ ಮಂಗಳವಾರದ ವರೆಗೆ ಮುಂದೂಡಲಾಗುತ್ತಿತ್ತು.

ವಿಚಿತ್ರವೆಂದರೆ ಬೆಳಿಗ್ಗೆ ನೀರು ಬಂದಾಗ ನಾವೆಲ್ಲ ಮಕ್ಕಳು ಗಾಬರಿಯಾಗುವ ಹಾಗೆ ಜಗಳವಾಡುತ್ತಿದ್ದ ಈ ಹೆಣ್ಣುಮಕ್ಕಳು ಮಧ್ಯಾಹ್ನದ ನಂತರ ಸೀತಾರಾಮ ಪೈಲ್ವಾನನ ಚಾಳದ ಎತ್ತರ ಗೋಡೆಯ ನೆರಳಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಬೆಳಗಿನ ಜಗಳ ಅವರಿಗೆ ಸಹಜ ಎನ್ನುವ ಹಾಗೆ ಮರೆತು ಹೋಗಿರುತ್ತಿತ್ತು. ಎಲ್ಲರಿಗೂ ಕಷ್ಟ, ನೀರಿಲ್ಲದೆ ಬದುಕಲಿಕ್ಕಾಗದು, ಹೀಗಾಗಿ ನೀರು ತುಂಬುವ ಆತುರ ಮತ್ತು ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಆಗುವ ಜಗಳವನ್ನು ನೆನಪಿಟ್ಟುಕೊಂಡು ಬದುಕಿನ ಸುಖದ ಕ್ಷಣಗಳನ್ನು ಕಳೆದುಕೊಳ್ಳುವುದು ದಡ್ಡತನ ಎಂಬು ಅರಿವು ಅವರಿಗಿತ್ತು. ಇಂಥವರು ನನ್ನ ಬದುಕಿನ ಮಾರ್ಗದರ್ಶಕರಾಗಿದ್ದು ನನ್ನ ಸುಯೋಗವೇ ಸರಿ.

ಇದೆಲ್ಲ ೧೯೬೦ರ ಅವಧಿಯವರೆಗಿನ ನೆನಪುಗಳು. (ಆ ಅವಧಿಯ ನೆನಪುಗಳು ಇನ್ನೂ ಬಹಳ ಇವೆ.) ಆದರೆ ೧೯೭೬ರ ಬೆಂಗಳೂರಿನ ಘಟನೆಯೊಂದನ್ನು ಹೇಳಲೇ ಬೇಕು. ೧೯೭೬ನೇ ಆಗಸ್ಟ್ ೧೬ರಂದು ನಾನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕೃಷಿಪೇಟೆ ಮಾಸಪತ್ರಿಕೆಯ ಉಪ ಸಂಪಾದಕನಾಗಿ ಬೆಂಗಳೂರು ಸೇರಿದೆ. ಸೇರಿದ ಹೊಸದರಲ್ಲಿ ಒಂದು ಮಧ್ಯಾಹ್ನ ಕಬ್ಬನ್ ಪಾರ್ಕ್ನಲ್ಲಿ ಹಾಯ್ದು ವಿಧಾನಸೌಧದ ಕಡೆಗೆ ಹೋಗುತ್ತಿದ್ದೆ. ಮರವೊಂದರ ಕೆಳಗೆ ಒಬ್ಬ ವ್ಯಕ್ತಿ ವಿರಮಿಸುತ್ತಿದ್ದ. ಅವನು ನಮ್ಮ ವಿಜಾಪುರದವನ ಹಾಗೆ ಕಂಡ. ಅವನನ್ನು ನೋಡುತ್ತ ಹೋಗುವಾಗ ಆವನೂ ನೋಡಿದ. ‘ಯಾ ಊರು’ ಎಂದು ಕೇಳಿದೆ. ‘ವಿಜಾಪುರ್ ರಿ ಸಾಹೇಬ್ರ’ ಎಂದ. ನನಗೆ ಖುಷಿಯಾಯಿತು. ‘ಯಾವ ಓಣಿ’ ಎಂದೆ. ‘ನಾವಿಗಲ್ಲಿ ರಿ’ ಎಂದ. ಕುಳಿತೇ ಬಿಟ್ಟೆ. ನಾವಿಗಲ್ಲಿ ಬಿಟ್ಟು ಬಹಳ ವರ್ಷಗಳಾಗಿದ್ದವು. ಈತ ನನ್ನ ನಾವಿಗಲ್ಲಿಯ ನೆನಪುಗಳನ್ನು ಹೊತ್ತು ತಂದವರ ಹಾಗೆ ಕಂಡ. ಹೆಸರು ಕೇಳಿದೆ. ಹೇಳಿದ. (ಈಗ ಆ ಹೆಸರು ಮರೆತುಹೋಗಿದೆ. ನಾವು ನಾವಿಗಲ್ಲಿ ಬಿಟ್ಟಮೇಲೆ ಈತ ಅಲ್ಲಿಗೆ ಬಂದಿರಬಹುದು. ಇಲ್ಲದಿದ್ದರೆ ನಾವಿಬ್ಬರು ಗುರುತು ಹಿಡಿಯುತ್ತಿದ್ದೆವು.)
ಅವನ ಕೂಡ ದೇಶಾವರಿ ಮಾತನಾಡುತ್ತ, ಬೆಂಗಳೂರಿಗೆ ಬಂದ ಕಾರಣ ಕೇಳಿದೆ. ಆತನ ಅಣ್ಣ ಗೌಂಡಿ ಕೆಲಸಕ್ಕೆ ಬಂದವನು ಒಂದಿಷ್ಟು ಹಣ ಸಂಪಾದಿಸಿ ಕೊಳಗೇರಿಯಲ್ಲಿ ಒಂದು ಕೋಣೆಯ ಮನೆ ಮಾಡಿದ. ವಿಜಾಪುರಕ್ಕೆ ಹೋದಾಗ ಈತನನ್ನೂ ಕರೆದುಕೊಂಡು ಬಂದ. ಅಣ್ಣನ ಕೆಲಸವನ್ನೇ ಈತ ಕೂಡ ಮಾಡತೊಡಗಿದ. ನಂತರ ಕೊಳಗೇರಿಯಲ್ಲಿ ಯಾವಳೋ ಯುವತಿಯ ಜೊತೆ ಸಂಬಂಧ ಬಂದು ಮದುವೆಯಾಯಿತು. ಒಂದೇ ಕೋಣೆ ಇದ್ದ ಕಾರಣ ಅಣ್ಣ ಹೊರಗೆ ಹಾಕಿದ. ಆಗ ಈತನಿಗೆ ವಸತಿ ಸಮಸ್ಯೆ ಉಂಟಾಯಿತು. ಆತ ಅಲ್ಲಿ ಇಲ್ಲಿ ಮಲಗುತ್ತ, ಬೆಳಿಗ್ಗೆ ಎದ್ದು ಸಿಕ್ಕ ಕೂಲಿ ಮಾಡುತ್ತ ದಿನದೂಡತೊಡಗಿದ. ಹೀಗೆ ಎಲ್ಲ ಗೋಳಿನ ಕತೆ ಹೇಳಿದ.

ಆತ ಧೋತರದ ಮೇಲೆ ವೈದ್ಯರ ಬಿಳಿ ಮೇಲಂಗಿ (ಎಪ್ರಾನ್) ಹಾಕಿದ್ದ. ತಾನು ಏನು ಹಾಕಿಕೊಂಡಿರುವೆ ಎಂಬುದು ಆತನಿಗೆ ಗೊತ್ತೇ ಇರಲಿಲ್ಲ. ಒಂದು ರೀತಿ ಮಜಾ ಅನಿಸಿತು. ನಗುತ್ತ ‘ನಿನ್ನ ಅಂಗಿ ಬಹಳ ಚೆಂದ ಐತಿ’ ಅಂದೆ. ‘ಹಳಿ ಬಟ್ಟಿ ಅಂಗಡಿಗಿ ಹೋಗಿ ಹುಡಕ್ಯಾಡಿ ಇದನ್ನ ತೊಗೊಂಡಿನ್ರಿ. ಇದನ್ನ ತೊಗೊಳಾಕ ಅಣ್ಣನ ಕರಕೊಂಡ ಹೋಗಿದ್ದೆ ರಿ’ ಎಂದು ಹೇಳಿದ. ‘ಅಲ್ಲಪಾ ನಿಮ್ಮ ಅಣ್ಣ ನಿನಗ ಹೊರಗ ಹಾಕ್ಯಾನ. ಒಂದು ಹಳಿ ಅಂಗಿ ತೊಗೊಳಾಕ ನಿಮ್ಮ ಅಣ್ಣಗ ಕರಕೊಂಡ ಹೋದಿ?’ ಎಂದು ಕೇಳಿದೆ. ಆತನಿಗೆ ಬೇಸರವಾಯಿತು. ‘ಏನ ಹೇಳತಿರಿ ಸಾಹೇಬ್ರ. ಎಷ್ಟಾದ್ರೂ ಅಣ್ಣ ಅಣ್ಣನೆ. ಅವನ ಬಿಟ್ ನಾ ಎಂದೂ ಏನೂ ಖರೀದಿ ಮಾಡಿಲ್ರಿ. ಏನೇ ಆದ್ರೂ ನಮ್ಮ ಕಳ್ಳುಬಳ್ಳಿ ಒಂದೇ ಐತಿ ನೋಡ್ರಿ. ಅಣ್ಣಾ ತಮ್ಮರ ನಡು ಹಿಂಗ ಕೇಳೂದು ಛಲೋ ಅಲ್ರಿ’ ಎಂದು ನೋವಿನಿಂದ ಹೇಳಿದ. ‘ಹೌದು ಹೌದು ಅಣ್ಣಾ ತಮ್ಮಾ ಹೀಗೇ ಇರಬೇಕು’ ಎಂದು ಹೇಳಿದೆ. ಅಷ್ಟೊತ್ತಿಗೆ ಹುರಿದ ಸೇಂಗಾ ಮಾರುವವ ಬಂದ. ಎರಡು ಪುಡಿಕೆ ಸೇಂಗಾ ಕೊಂಡು ಅವನಿಗೆ ಒಂದು ಕೊಟ್ಟೆ. ಇಬ್ಬರೂ ತಿಂದೆವು. ಅವನಿಗೆ ಒಳ್ಳೆಯದಾಗಲಿ ಎಂದು ಹೇಳಿ ಹೊರಟೆ.

ಅವನ ಮಾತು ಮರೆಯಲು ಸಾಧ್ಯವೇ ಇಲ್ಲ. ಇದು ನಾವಿಗಲ್ಲಿ ಸಂಸ್ಕೃತಿ, ವಿಜಾಪುರದ ಸಂಸ್ಕೃತಿ, ಇಡೀ ಭಾರತದ ಸಂಸ್ಕೃತಿಯಾಗಿತ್ತು. ಈಗನೋಡಿ ಏನಾಗುತ್ತಿದೆ. ಧರ್ಮಗಳ ಸಂಬಂಧಗಳು, ಸಾಮಾಜಿಕ ಸಂಬಂಧಗಳು ಮತ್ತು ಕೌಟುಂಬಿಕ ಸಂಬಂಧಗಳು ಶಿಥಿಲವಾಗುತ್ತಲೇ ಇವೆ. ಇದನ್ನೆಲ್ಲ ನೋಡುತ್ತ ಮನಸ್ಸು ಬೇಸರಗೊಂಡಾಗಲೆಲ್ಲ ಬಾಲ್ಯದ ನೆನಪುಗಳು ನೆಮ್ಮದಿ ಕೊಡುತ್ತಿವೆ.

(ಚಿತ್ರಗಳು: ಸುನೀಲ ಸುಧಾಕರ)

(ನೆನಪಾದಾಗಲೆಲ್ಲ ಸರಣಿಯ  ಹಿಂದಿನ ಬರಹಗಳು)