ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು ಮುಂದರಿಸಿ ವಾಲಿಗೆ ಜ್ಞಾನೋದಯವಾದ ಪದಗಳನ್ನು ಮಾತ್ರ ಹಾಡಬೇಕು. ವಾಲಿಯೂ, ಆಗ ಒಂದೊಂದು ಪದಕ್ಕೂ ಅರ್ಧರ್ಧ ಗಂಟೆ ಉಸಿರು ಕಟ್ಟಿಕೊಂಡು ಅರ್ಥ ಹೇಳಿ, ರಾಮನನ್ನು ತುಂಬಾ ಕೊಂಡಾಡಬೇಕು. ಇದು ಮಾರಯ್ಯನ ತಾಳಮದ್ದಳೆಯ ಕ್ರಮ.
ಡಾ.ಬಿ.ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಹುರುಳಿ ಭೀಮರಾವ್ ಬರೆದ ಕತೆ “ಮಾರಯ್ಯನ ಕವಾತು ” ಈ ಭಾನುವಾರದ ನಿಮ್ಮ ಓದಿಗೆ

 

ಗೇಣಯ್ಯ ಆ ಊರಿನ ತಾಲೂಕ್ ಆಫೀಸಿನ ಪೇದೆ. ಅವನಿಗೊಬ್ಬ ಮಗ – ಮಾರಯ್ಯ. ಹೀಗೆ ಗೇಣಯ್ಯ – ಮಾರಯ್ಯ ತಂದೆ ಮಕ್ಕಳು. ಇವರ ವಂಶಸ್ಥರಾಗಿ ಯಾರಾದರೂ ಫರ್ಲಾಂಗಯ್ಯ, ಹರದಾರಯ್ಯ ಎಂದೂ ಇದ್ದರೇನೋ ತಿಳಿಯದು.

ಮಾರಯ್ಯ ಭಾರಿ ಆಳು; ಉದ್ದದಲ್ಲಿ ಭರ್ತಿ. ಹಾಗಾಗಿ `ಲಾಂಗ್ಮ್ಯಾನ್’ ಕಂಪೆನಿ ಎಂಬ ಆ ಹೆಸರು ಬರಲಿಕ್ಕೆ ಕಾರಣ ಇವನಾಗಿರಬಹುದೇ ಎಂದು ಹಲವರಿಗೆ ಸಂದೇಹ.

ಮಾರಯ್ಯ ಅಲ್ಲಿನ ಹೆಡ್ ಕಾನ್ಸ್ಟೇಬಲ್. ಆದರೆ ಕೆಲವರು, `ಹೆಡ್ಡ ಕನಿಷ್ಠಬಿಲ್ಲ ಯಾರಯ್ಯ’ ಎಂದೋ, `ಹೆಡ್ಡ ಕೋಣಸ್ಟೇಬಲ್ ಸುಮಾರಯ್ಯ’ ಎಂದೋ ಕರೆಯುವರು. ಬುದ್ಧಿಯಲ್ಲಿ ಹೆಡ್ಡ; ನೋಡಿದರೆ ಕೋಣ; ಇವನಿಗಿರಲು ಸ್ಥಳ ಲಾಯ, ಕೊಟ್ಟಿಗೆ ಎಂದು ಮಾರಯ್ಯನನ್ನು ಸುಮಾರು ಮಾಡಲಿಕ್ಕೆ ಅವರು ಆ ಟಾೈಟಲ್ (ಬಿರುದು) ಅವನಿಗೆ ಕೊಟ್ಟದ್ದಲ್ಲ. ಜನರಿಗೆ ಆ ಹೆಡ್ ಕಾನ್ಸ್ಟೇಬಲ್ ಶಬ್ದ ಉಚ್ಚರಿಸಲು ಬಾರದಿದ್ದುದೇ ಕಾರಣ.

ಮಾರಯ್ಯನಿಗೆ ಬರಾಸರಾ ಕಡಿಮೆ. ಸರಾಬರಾ ಹೆಚ್ಚು. ಅಂದರೆ ವಿದ್ಯೆ ಕಡ. ನೇವಿದ್ಯ ಅದರಲ್ಲಿಯೂ ಪರಮಾನ್ನ ಸುರಿಯುವ ಸರಾಬರಾ ಬರಾಬರಿ. ಆದರೆ ಬಾಯಿ ಪಕ್ಕಾ; ಮಾತು ಮಜಬೂತು – ಎಲ್ಲಾ ಜಂಗಲಿ ಕಾನೂನಿನಂತೆ ಪಟಾಕಿ ಪೆಟ್ಟಿಗೆಗಳು. ಈ ನಮೂನೆಯ ಕಾನೂನಿನ ಪಾಂಡಿತ್ಯ ಯಾವ ಲಾ ಮೆಂಬರರಿಗೂ ಇಲ್ಲವೆಂದು ಊರವರಾಡುತ್ತಿದ್ದರು.

ಇದ್ದಕ್ಕಿದ್ದ ಹಾಗೆ, ಒಂದು ದಿನ, ಮಾರಯ್ಯನನ್ನು, ಪೋಲೀಸ್ ಇನ್ಸ್ಪೆಕ್ಟರರು ಕರೆದು, `ದೊರೆಗಳು ಬರುತ್ತಾರೆ. ಬುಧವಾರ. ಇನ್ಸ್ಪೆಕ್ಷನ್. ಸರಬರಾಯಿ ಸ್ಟೇಶನ್ ಕೆಲಸ ಕವಾತು ಎಲ್ಲವನ್ನೂ ನೋಡಿಕೋ! ಹುಷ್ಯಾರ್’ ಎಂದರು.

ಮಾರಯ್ಯ ಗಡಿಬಿಡಿಯಲ್ಲಿ ಬಿದ್ದ. ಪಾಪ! ತಿಂಗಳಿಗೆ ಮೊದಲೇ ಅವನು ಆ ಊರಲ್ಲಿ ಎರಡು ತಾಳಮದ್ದಳೆಗಳಾಗಬೇಕೆಂದು ಏರ್ಪಡಿಸಿ ದಿನವಿಡಿಸಿದ್ದ. ಆ ಸಮಯದಲ್ಲಿಯೇ ದೊರೆಗಳ ಇನ್ಸ್ಪೆಕ್ಷನ್ – ಸರಬರಾಯಿ -ಸ್ಟೇಶನಿನ ಕೆಲಸ – ಕವಾತು ಗಿವಾತು – `ನೋಡಿಕೋ -ಹುಷ್ಯಾರು’ ಎಂದರೆ ಎಲ್ಲಿಯ ಗ್ರಹಚಾರ!

ಮಾರಯ್ಯನ ತಾಳಮದ್ದಲೆಯ ಕುರಿತು ಎರಡು ಮಾತು. ವಸ್ತುತಃ ಮಾರಯ್ಯನಿಗೆ ಅರ್ಥ ಹೇಳುವ ಹುಚ್ಚು ವಿಪರೀತ. ಪ್ರಸಂಗ ಓದಲೂ ಬಾರದಾದರೂ, ಅವನ ಅರ್ಥ ಅನರ್ಥಕ್ಕೆ ಅನ್ವರ್ಥವಾಗುವಂತೆ ಇತ್ತು. ಅವನ ಅಮರಕೋಶದಲ್ಲಿ `ಹಸ್ತಿರಥಪದಾತಿ’ ಗಳ ಬದಲು ಆಸ್ತಿವ್ರತ ಪದಾರ್ತಿಗಳಂಥ ಶಬ್ದಗಳೇ ತುಂಬಿದ್ದುವಾದರೂ, ತಾಳಮದ್ದಳೆಗಳಾಗುವಲ್ಲಿ ಅವನನ್ನು ಕರೆಯದಿದ್ದರೆ, ಕರೆದೂ ಮುಖ್ಯ ಪಾತ್ರಗಳಲ್ಲಿ ಒಂದನ್ನು ಕೊಡದಿದ್ದರೆ, ತಯಾರ್ ಅವರ ಮೇಲೆ ಪ್ರಕರಣ 144. ಅಷ್ಟೇ ಅಲ್ಲ. ಮಾರಯ್ಯನಿಗೆದುರಾಗಿ ಅರ್ಥ ಹೇಳತಕ್ಕವನಿಗೆ, ಅವನ ಎಲ್ಲ ಪದಗಳ ಅರ್ಥವನ್ನೂ ಹೇಳುವ `ಲಾೈಸನ್ಸು’ ಮಾರಯ್ಯನದು ಇರಲೇ ಇಲ್ಲ.

ಉದಾಹರಣೆಗಾಗಿ, ವಾಲಿ ಸುಗ್ರೀವರ ಕಾಳಗ; ಮಾರಯ್ಯ ರಾಮ ಅನ್ನುವ, ಆಗ ವಾಲಿ `ರಾಮಾ! ಮಂಗನ ಮಾಂಸ ತಿನ್ನುವವನೇ!’ ಎಂದು ಮುಂತಾಗಿ, ರಾಮನನ್ನು ಜರಿದು ಮಾತಾಡಲೇಕೂಡದು; ಆ ಮೂಲಕ ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು ಮುಂದರಿಸಿ ವಾಲಿಗೆ ಜ್ಞಾನೋದಯವಾದ ಪದಗಳನ್ನು ಮಾತ್ರ ಹಾಡಬೇಕು. ವಾಲಿಯೂ, ಆಗ ಒಂದೊಂದು ಪದಕ್ಕೂ ಅರ್ಧರ್ಧ ಗಂಟೆ ಉಸಿರು ಕಟ್ಟಿಕೊಂಡು ಅರ್ಥ ಹೇಳಿ, ರಾಮನನ್ನು ತುಂಬಾ ಕೊಂಡಾಡಬೇಕು. ಇದು ಮಾರಯ್ಯನ ತಾಳಮದ್ದಳೆಯ ಕ್ರಮ. ಇಂಥದೇ ಎರಡು ತಾಳಮದ್ದಳೆಯ ಕೂಟಗಳೇ ಅದೇ ಸಮಯದಲ್ಲಿ! ಏನು ಗ್ರಹಚಾರ!
ಆದರೂ, ಮಾರಯ್ಯ ಬಿಡಲಿಲ್ಲ. ಆಗಲೇ ತಾಳಮದ್ದಳೆಯ ಕೂಟಗಳನ್ನು ಜರುಗಿಸಿಯೇ ಬಿಟ್ಟ. `ಕುಂತೀಪುತ್ರೋ ವಿನಾಯಕ’ ಎಂದಾದರೂ ಮುಖ್ಯ ಪಾತ್ರದ ಅರ್ಥ ಬೆಳಗಾಗುವವರೆಗೂ ಬಜಾಯಿಸಿಯೇ ಬಿಟ್ಟ.

•••

ಬೆಳಗಿನ ಹೊತ್ತು. ವಿನೋದಪ್ರಿಯರೂ, ಜನಪ್ರೀತರೂ ಆದ ಮ್ಯಾಜಿಸ್ಟ್ರೇಟ್ ರಾಮಪ್ಪಯ್ಯನವರು, ನಮ್ಮ ಮನೆಯ ಚಾವಡಿಯಲ್ಲಿ ಕುಳಿತಿದ್ದಾರೆ. ಮಾರಯ್ಯನು ಒಬ್ಬನನ್ನು ಮುಂದೆ ಮಾಡಿಕೊಂಡು ಅಲ್ಲಿಗೆ ಬಂದು, ಮ್ಯಾಜಿಸ್ಟ್ರೇಟರಿಗೆ ಕೈ ಮುಗಿದು, ಚಾವಡಿ ಹತ್ತಿ ದೂರ ನಿಂತ.

“ಏನು, ಮಾರಯ್ಯ! ನ್ಯೂಯಿಸೆನ್ಸ್ ಕೇಸೋ?”

“ಅಲ್ಲ ಖಾವಂದ್ರೆ! ನಾಯಿಸೆಸ್ ಅಲ್ಲ ; ದೊಡ್ಡ ತಸ್ಕೀರು.”

“ಖೂನಿ?”

“ಅದಕ್ಕಿಂತಲೂ ದೊಡ್ಡದು ಖಾವಂದ್ರೆ, ಅದು ಕಿರುನಾಲಿಗೆ (ಕ್ರಿಮಿನಾಲು) ಸೆಕ್ಷನ್ ಸಾಡೇಸಾತ್.”

ಮ್ಯಾಜಿಸ್ಟೇಟರಿಗೆ ಮಾರಯ್ಯನ ಈ ಸೆಕ್ಷನ್ ಸಾಡೇಸಾತ್ ಪಕ್ಕನೆ ಅರ್ಥವಾಗಲಿಲ್ಲ. `ನಿನ್ನ ಸೆಕ್ಷನ್ ಹಾಗಿರಲಿ. ಸಂಗತಿ ಏನು ಹೇಳು’ ಅಂದರು.

“ಸಂಗತಿ ಇಷ್ಟೇ. ಈಗ ಉತ್ತರ ಹಿಂದುಸ್ಥಾನದಲ್ಲಿ ಸ್ವದೇಶೀ ಪರ್ದೇಶಿ ಗಲಾಟೆಯಂತೆ, ನಮ್ಮ ಗವಣರಮೆಂಟಿಗೆ ಎದುರು ನಿಲ್ಲಿ ಎಂತ ಜನರಿಗೆ ಕೇಡಿಗಳು ಲೋಟೀಸು ಹಂಚುತ್ತಾರಂತೆ. ಪೈಕಿ ಸದ್ರಿ ಒಬ್ಬನನ್ನು ಅವನು ಲೋಟೀಸ್ ಹಂಚುವಾಗ ಕೈದು ಮಾಡಿ ತಂದಿದ್ದೇನೆ – ಸನ್ನಿಧಾನಕ್ಕೆ.”

ಮ್ಯಾಜಿಸ್ಟ್ರೇಟರಿಗೆ ಈಗ ಆ `ಸಾಡೇಸಾತಿನ’ ಅರ್ಥವಾಯಿತು. `ಸಾಡೇಸಾತ್’ ಎಂದರೆ ಸೆಡೀಸಿಯಸ್ (ರಾಜದ್ರೋಹಾತ್ಮಕ) ಎಂದು. ಅವರು ಆಶ್ಚರ್ಯಪಡಲಿಲ್ಲ. ಮಾರಯ್ಯನ ಗುಟ್ಟು ಅವರಿಗೆ ಗೊತ್ತು. ಸ್ವಲ್ಪ ವಿನೋದ ಮಾಡೋಣವೆಂದು : –

`ಆ ನೋಟೀಸು ಇದೆಯೋ?’

`ಉಂಟು’

`ಹಾಗಾದರೆ ದೊಡ್ಡ ಫಡಾವ್ ಹೊಡದಿ; ಮಾರಯ್ಯಾ. ಅದು ರಾಜದ್ರೋಹದ ಪ್ರಕರಣ. ದೊಡ್ಡ ತಕ್ಸೀರು. ಇದು ರುಜುವಾತಾದರೆ, ನಮ್ಮ ಸಂಸ್ಥಾನದ ಪೋಲೀಸ್ ಶಾಖೆಗೇ ದೊಡ್ಡ ಕೀರ್ತಿ, ನಿನಗೂ ಬೇಗನೇ ಭಡ್ತಿ.’

`ಏನೋ, ಖಾವಂದ್ರೆ! ನನ್ನ ಹೆಂಡರ ಮಕ್ಕಳ ಪುಣ್ಯ. ಇಷ್ಟು ವರ್ಷಗಳಿಂದಲೂ ಸರಕಾರದ ಚಾಕರಿ ತಮ್ಮಂಥವರ ಆಶ್ರಯ ಮಾಡುತ್ತಿದ್ದೇನೆ. ಖಾವಂದರ ಶಿಫಾರಸು ಆದರೆ.’

`ಶಿಫಾರಸು ಮತ್ತೆ. ಆ ನೋಟೀಸು ತೆಗಿ, ನೋಡುವ.’

ಮಾರಯ್ಯನಿಗೆ ಬರಾಸರಾ ಕಡಿಮೆ. ಸರಾಬರಾ ಹೆಚ್ಚು. ಅಂದರೆ ವಿದ್ಯೆ ಕಡ. ನೇವಿದ್ಯ ಅದರಲ್ಲಿಯೂ ಪರಮಾನ್ನ ಸುರಿಯುವ ಸರಾಬರಾ ಬರಾಬರಿ. ಆದರೆ ಬಾಯಿ ಪಕ್ಕಾ; ಮಾತು ಮಜಬೂತು – ಎಲ್ಲಾ ಜಂಗಲಿ ಕಾನೂನಿನಂತೆ ಪಟಾಕಿ ಪೆಟ್ಟಿಗೆಗಳು. ಈ ನಮೂನೆಯ ಕಾನೂನಿನ ಪಾಂಡಿತ್ಯ ಯಾವ ಲಾ ಮೆಂಬರರಿಗೂ ಇಲ್ಲವೆಂದು ಊರವರಾಡುತ್ತಿದ್ದರು.

ಮಾರಯ್ಯ ಆ ನೋಟೀಸನ್ನು ಜೇಬಿನಿಂದ ತೆಗೆದು ಮ್ಯಾಜಿಸ್ಟ್ರೇಟರಲ್ಲಿ ಕೊಟ್ಟ. ಮ್ಯಾಜಿಸ್ಟ್ರೇಟರು ಓದಿಕೊಂಡು, ನಗುತ್ತಾ, “ಇದು ದ್ರೋಹದ ನೋಟೀಸು ಎಂದು ನಿನಗೆ ಹ್ಯಾಗೆ ಗೊತ್ತಾಯಿತು. ಮಾರಯ್ಯಾ!”

`ಗುಮಾನೀ ಮೇಲೆ; ಆದ್ದರಿಂದ ಅಪರಾಧಿಯನ್ನು ಅರಿಸ್ಟ (ಅರೆಸ್ಟ್ = ಕೈದು)ವೂ ಮಾಡಲಾಗಿದೆ. ನಾನಿರುವಾಗ ಅಗತ್ಯವಿಲ್ಲ. ಆದರೂ ಈತನಿಗೆ ಹಂಡೆಕಪ್ಪು (ಹ್ಯಾಂಡ್ಕಫ್= ಕೈಕೋಳ) ಹಾಕಬೇಕು.

`ಮಾರಯ್ಯ! ಹಾಗಾದರೆ ನಿನ್ನ ಗುಮಾನಿ ತಪ್ಪು, ಇವನು ಬೆಪ್ಪ ಕೆಪ್ಪ; ಇವನಿಗೆ ಪುಣ್ಯಾತ್ಮರು ಧರ್ಮ ಕೊಡಬೇಕಂತ ಈ ನೋಟೀಸಿನಲ್ಲಿ ಬರೆದಿದೆ. ಅದನ್ನೇ ಹಂಚಿ ಹೊಟ್ಟೆ ತುಂಬಿಸುತ್ತಿರುವವನಿವನು. ಆದ್ದರಿಂದ ಹೋಗಲಿ, ಬಿಟ್ಟುಬಿಡು ಅವನನ್ನು.’

ಮಾರಯ್ಯ ಇಷ್ಟರಲ್ಲಿ ಮನಸ್ಸಿನಲ್ಲಿಯೇ ಇನ್ಸ್ಪೆಕ್ಟರರ ಪಗಡಿಗೆ ಹೊಂದಿದ್ದವನು ಪಾತಾಳಕ್ಕಿಳಿದ. ಮ್ಯಾಜಿಸ್ಟ್ರೇಟರು ಒಂದಾಣೆ ಪಾವಲಿ ತಂದು ಆ ಬಡವನಿಗೆ ಕೊಟ್ಟು ಹೋಗೆಂದು ಕೈಸನ್ನೆ ಮಾಡಿದರು. ಆ ಭಿಕ್ಷುಕ ತನ್ನನ್ನು ಕರೆತಂದು ಒಂದೇ ಸಲಕ್ಕೆ ಈ ಒಂದಾಣೆ ಭಿಕ್ಷೆ ಕೊಡಿಸಿದ ಮಾರಯ್ಯನ ಉಪಕಾರಕ್ಕಾಗಿ ಅವನಿಗೆ ಮೊದಲು ಮನಸ್ಕಾರ ಮಾಡಿ, ಮತ್ತೆ ಮ್ಯಾಜಿಸ್ಟ್ರೇಟರಿಗೆ ಕೈಮುಗಿದು ನಡೆದ.

`ಹೌದೋ ಮಾರಯ್ಯ! ನಿನ್ನ ಹತ್ತಿರ ಒಂದು ಸಂಗತಿ ವಿಚಾರಿಸಬೇಕಂತ ಇದ್ದೆ.’

`ಅಪ್ಪಣೆಯಾಗಲಿ, ಖಾವಂದರೆ!’

`5 – 6 ದಿನಗಳ ಕೆಳಗೆ ದೊರೆಗಳು ಬಂದಿದ್ದರು. ನೀನು ಕವಾತ್ ಮಾಡಿಸಿದೆ. ಆಗ ನಾನೂ, ನಿಮ್ಮ ಇನಸ್ಪೆಕ್ಟರರೂ ದೊರೆಗಳ ಹತ್ತರ ಮಾತಾಡುತ್ತಾ ನಿಂತಿದ್ದೆವು.’

`ಹೌದು; ಖಾವಂದ್ರೆ!’

`ಆದರೆ ಮಾರಯ್ಯ! ನಿನ್ನ ಕವಾತಿನ ಮಾತು, ಸಂಕೇತ ಏಂಥಾದ್ದು? ಬಹಳ ವಿಚಿತ್ರವಾಗಿತ್ತು.’

`ಖಾವಂದರೆ! ತಮ್ಮೆದುರು ನಾನು ಯಾಕೆ ಸುಳ್ಳು ಹೇಳಲಿ? ನನಗೆ ಇಂಗ್ಲೀಸು ಬಾರದು, ಬಂದದ್ದೂ ಬರೇ ಪೊಟ್ಟು ಪೊಟ್ಟು. ಹಾಗೇ ನಮ್ಮ ಪೋಲೀಸಿನವರಿಗೂ ಇಂಗಲೀಸು ಸೊನ್ನೆ. ಅನ್ನುವಾಗ ನಾನೇನು ಮಾಡಲಿ? ದೊರೆಗಳ ಎದುರು ಕವಾತು ಮಾಡಿಸದಿದ್ದರೆ ನಿರ್ವಾಹವುಂಟೆ? ಅದಕ್ಕಾಗಿ ಕೆಲವು ಸಂಕೇತಗಳನ್ನು ನಾನೇ ಏರ್ಪಡಿಸಿಕೊಂಡು, ತಮ್ಮ ಪೋಲೀಸರಿಗೂ ಅವನ್ನೇ ಹೇಳಿಕೊಟ್ಟು, ಕವಾತಿನ ಕೆಲಸ ಪೂರೈಸಿದೆ.’

`ಆ ಕವಾತಿನ ಸಂಕೇತ ಹೊಸದೋ, ಹಳತೋ, ಎಂಥಾದ್ದದು?’

`ಖಾವಂದ್ರೆ! ಅದು ನಮ್ಮೂರಿನದೇ, `ಸ್ವದೇಶೀ’.

ಮ್ಯಾಜಿಸ್ಟ್ರೇಟರು ನಗುತ್ತಾ `ಎಲ್ಲಿ ನೋಡುವ! ಇನ್ನೊಮ್ಮೆ – ನಿನ್ನ ಸ್ವದೇಶೀ ಕವಾತಾಗಲಿ!’

`ಬೇಡ ; ಖಾವಂದ್ರೆ!’

`ಚಿಂತಿಲ್ಲ ; ಮಾರಯ್ಯ! ನಮ್ಮ ಹುಡುಗರೂ ಒಂದಿಷ್ಟು ಕೇಳಲಿ! ನಿನ್ನ ಕವಾತು ಭಾರೀ ಸ್ವಾರಸ್ಯವುಂಟು.’

`ಖಾವಂದರೆ, ಹಾಗಾದರೆ ನನ್ನ ಕವಾತಿನ ಗುಟ್ಟು ಇಷ್ಟೆ! `ದುಂಬು ಪೋ’ (ಮುಂದೆ ಹೋಗು), `ಬಲಕ್ ತಿರ್ಗ್’ (ಬಲಕ್ಕೆ ತಿರುಗು), `ಮೋಣೆ ದೆರ್ಪ್’(ಮುಖವೆತ್ತು), ‘ಪಾರ್ ವೋ’ (ಬೇಗ ನಡೆ), `ತಿರ್ತ್ ಪಾಡ್’ (ಕೋವಿ ನೆಲದ ಮೇಲಿಡು), `ದಂಬೂಕ್ ದೆಪ್’ (ಬಂದೂಕ್ ಮೇಲಕ್ಕೆತ್ತು), `ಸರ್ತ್ ಪತ್’ (ನೆಟ್ಟಗೆ ಹಿಡಿ) – ಇದೇ ನನ್ನ ತುಳು ಕವಾತಿನ ಕ್ರಮ. ಕಡೆಯ ಅಕ್ಷರ ಅರ್ಧವಾಗಿ ಒದರಿದರೆ ಸರಿ. ಇಂಗ್ಲೀಸ್ ಕವಾತಾಯಿತು.’
`ಅಲ್ಲ, ಮಾರಯ್ಯ, `ಚತ್ತ್ ಪೋಯ್’ ಅಂದರೇನು? ನಿನ್ನ ಕವಾತಿನಲ್ಲಿ ಅಂದು ಅದೂ ಇದ್ದ ಹಾಗಿತ್ತಲ್ಲಾ!’

`ಅದು ಮತ್ತೇನಿಲ್ಲಾ, ಖಾವಂದ್ರೆ! ಒಬ್ಬ ಹೊಸಬ ಪೋಲೀಸಿನವ. ಬರೇ ದಡ್ಡ. ನಾನು `ದುಂಬ್ ಪೋ’ ಅನ್ನುವಾಗ, ಅವನು ಹಿಂದೆ ಬಂದ. ನನಗೆ ಸಿಟ್ಟು ನೆತ್ತಿಗೇರಿತು. ಅದಕ್ಕೆ ನಾನು `ಸೈತ್ ಪೋ’ ನೀನು ಸತ್ತೇ ಹೋಗು ಎಂದು ಒದರಿಬಿಟ್ಟದ್ದು. ಪುಣ್ಯಕ್ಕೆ ದೊರೆಗಳು ಈಚೆಗೆ ಕಿವಿ ಕೊಡದೆ, ತಮ್ಮ ಹತ್ತಿರ ಮಾತನಾಡುತ್ತಾ ಇದ್ದ ಕಾರಣ, ನಾನು ಬಚಾವಾದೆ.’

`ಒಳ್ಳೆಯ ಮಾರಯ್ಯ; ಪಸಂದು ಕವಾತು! `ದುಂಬು ಪೋ’ `ಪಿರ ಪೋ’ `ಸೈತ್ ಪೋ!’ ಹ್ಯಾಗೂ ಕೆಲಸ ಸುಧಾರಿಸಿದೆ. ಗಟ್ಟಿಗ, ಇನ್ನು ನೀನು ಮಾರಯ್ಯನಲ್ಲ; ಮಹಾರಾಯ!’

`ಖಾವಂದರೆ! ನನಗಿನ್ನು ಪೆನ್ಶನಿಗೆ ಹೆಚ್ಚು ಸಮಯವಿಲ್ಲ. ಅಷ್ಟರವರೆಗೆ ಬದುಕಬೇಕಲ್ಲ! ಅಷ್ಟಕ್ಕೇ ಇಷ್ಟೆಲ್ಲ ಪೇಚಾಟ. ಬರುತ್ತೇನೆ. ಅಪ್ಪಣೆಯಾಗಲಿ.’’

(ಕಂಠೀರವ, 1936)