ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೊ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. ‘ಬರ್ತೇನೆ, ಕೆಲಸವಿದೆ’ ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು. ಆದರೆ ಹಾಗೆ ವಿರಸಕ್ಕೆ ಎಡೆ ಕೊಡುವುದರ ಪರಿಣಾಮವೇನೆಂದು ಊಹಿಸುವುದು ಕಷ್ಟವಾಗಿರಲಿಲ್ಲ. ಬಹಿರಂಗವಾಗಿ ನಂಬಿಯಾರರನ್ನು ಕೆಣಕುವುದೆಂದರೆ, ತನ್ನ ಕೆಲಸಕ್ಕೆ ತಾನೇ ಸಂಚಕಾರ ತಂದುಕೊಂಡ ಹಾಗೆ.
ಡಾ.ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾ ಸರಣಿಯಲ್ಲಿ ನಿರಂಜನರು ಬರೆದ “ಚಿರಸ್ಮರಣೆ” ಕಾದಂಬರಿಯ ಕೆಲ ಪುಟಗಳು

 

ಮಾಸ್ತರು, ಸಂಜೆ ಶಾಲೆಯಲ್ಲಿ ಪತ್ರಿಕೆಯನ್ನೋದಿ ಹೇಳುವ ಪರಿಪಾಠವನ್ನು ಆರಂಭಿಸಿದರು. ಅದು ಚರ್ವತ್ತೂರು ರೈಲ್ವೆ ನಿಲ್ದಾಣದಿಂದ ಅವರು ದಿನವೂ ತರಿಸುತ್ತಿದ್ದ ಪತ್ರಿಕೆ. ಮೊದಮೊದಲು ಯಾರಿಗೂ ಆಸಕ್ತಿ ಇರಲಿಲ್ಲ. ಆದರೆ ನಡುನಡುವೆ ಯಾವುದೋ ಕತೆ – ಯಾವುದೋ ಹರಟೆ – ನುಸುಳಿಕೊಂಡು, ಪತ್ರಿಕೆಯ ವಾಚನ ಕಾಲಯಾಪನೆಗೊಂದು ಸಾಧನವಾಯಿತು. ಕೆಲಸವಿಲ್ಲದೇ ಇದ್ದಾಗ ರೈತರು ಬೀಡಿ ಸೇದುತ್ತಲೋ ಎಲೆ ಅಡಿಕೆ ಜಗಿಯುತ್ತಲೋ ಶಾಲೆಯ ಜಗಲಿಯಲ್ಲಿ ಕುಲಿತು ಮಾಸ್ತರರ ಮಾತುಗಳಿಗೆ ಕಿವಿಗೊಟ್ಟರು.

ಆ ಊರಿನ ಪ್ರಮುಖ ಜಮೀನ್ದಾರರು ಇಬ್ಬರು. ಒಬ್ಬರು ಮಹಾ ಬ್ರಾಹ್ಮಣ ನಂಬೂದಿರಿ. ಅವರ ಮನೆಯ ಹೆಂಗಸರು, ಬಾಗಿಲಿನಿಂದ ಹೊರಕ್ಕೆ ಮುಖವಿಡುತ್ತಲೇ ಇರಲಿಲ್ಲ. ಇನ್ನೊಬ್ಬರು ನಂಬಿಯಾರ್. ಹೊಲೆಯರನ್ನಾದರೂ ಸರಿಯೆ, ಮೈ ಮುಟ್ಟಿಯೋ ಬೆನ್ನು ತಟ್ಟಿಯೋ ಕೆನ್ನೆಗೆ ಏಟುಬಿಗಿದೋ ಮಾತನಾಡಿಸುವ ಸಮರ್ಥ. ವಯಸ್ಸಿನಲ್ಲಿ ಅವರು ನಂಬೂದಿರಿಗಿಂತ ಕಿರಿಯ. ಮಾಸ್ತರು ಅಲ್ಲಿಗೆ ಬರುವುದಕ್ಕೆ ಮುಂಚೆ ಆ ಊರಿಗೆ ಪತ್ರಿಕೆ ಇರುತ್ತಿದ್ದುದು ಅವರೊಬ್ಬರ ಮನೆಯಲ್ಲೇ. ಪತ್ರಿಕೆ ತರಿಸುತ್ತಿದ್ದ ತಾವು ಆಧುನಿಕರೆಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

ಮಾಸ್ತರು ಪತ್ರಿಕೆ ತರಿಸುತ್ತಿದ್ದರೆಂದು ತಿಳಿದಾಗ ನಂಬಿಯಾರರು ಭುಜ ಕುಪ್ಪಳಿಸಿದರು. ‘ಹೋಗಲಿ, ವಿದ್ಯಾವಂತ. ಓದುವ ಚಟವಾದರೂ ಮರೀಬಾರದಲ್ಲ. ಇಲ್ದಿದ್ರೆ ಹುಡುಗರಿಗೆ ಪಾಠ ಏನು ಹೇಳಿಕೊಡ್ತಾನೆ?’ ಎಂದು ಸುಮ್ಮನಾಗಿದ್ದರು.

ಆದರೆ, ಶಾಲೆಯ ಜಗಲಿಯ ಮೇಲೆ ಸಂಜೆ ರೈತರೂ ಬಂದು ಕುಳಿತುಕೊಳ್ಳತೊಡಗಿದುದು ತಿಳಿದಾಗ, ನಂಬಿಯಾರರಿಗೆ ರೇಗಿತು. ಶಾಲೆಯ ವಿಶ್ವಸ್ಥ ಸಮಿತಿಯ ಮುಖ್ಯಸ್ಥರಾದ ಅವರು ಮಾಸ್ತರಿಗೆ ಕರೆಕಳುಹಿಸಿದರು.

ಮಾಸ್ತರು ಜಮೀನ್ದಾರರೆದುರು ಬೀರಿದುದು ಸ್ವಾಭಾವಿಕವಾದ ಮಗುಳುನಗೆ.

ಕೆತ್ತನೆಯ ಕುರ್ಚಿಯ ಮೇಲೆ ಮೆತ್ತನೆಯ ಗಾದಿಗೊರಗಿ ಕುಳಿತಿದ್ದ ನಂಬಿಯಾರರು ತಮ್ಮೆದುರು ದೂರದಲ್ಲಿದ್ದ ಬೆಂಚನ್ನು ತೋರಿಸುತ್ತ , ಸಿಗರೇಟಿಗೆ ಬೆಂಕಿಕಡ್ಡಿ ಅಂಟಿಸುತ್ತ, ಹೇಳಿದರು :

“ಕೂತ್ಕೊಳ್ಳಿ.”

ಮಾಸ್ತರು ವಿನಯದಿಂದಲೆ ಕುಳಿತರು. ಅವರ ಕೈಯಲ್ಲಿ ಆ ದಿನದ ‘ಮಾತೃಭೂಮಿ’ ಪತ್ರಿಕೆಯ ಸುರುಳಿ ಇತ್ತು. ನಂಬಿಯಾರರು ಅದನ್ನೊಮ್ಮೆ ಕಡೆಗಣ್ಣಿನಿಂದ ದಿಟ್ಟಿಸಿ ನೋಡಿ, ಹುಬ್ಬು ಮೇಲಕ್ಕೇರಿಸಿ, ಕೆಳಕ್ಕಿರಿಸಿ ಸಿಗರೇಟಿನ ಹೊಗೆಯುಗುಳಿ, ಒಂದು ಕ್ಷಣ ಮೌನವಾಗಿದ್ದು ಕೇಳಿದರು :

“ಶಾಲೆಯ ಕೆಲಸ ಕಾರ್ಯಗಳೆಲ್ಲ ಸರಿಯಾಗಿ ನಡೀತಾ ಇವೆಯೋ?”

“ಓಹೋ”

“ನೀವು ಸೊಗಸಾಗಿ ಪಾಠ ಹೇಳ್ತೀರಂತೆ. ನಮ್ಮ ಹುಡುಗ ದಿನಾಲೂ ನಿಮ್ಮನ್ನು ಹೊಗಳ್ತಾನೇ ಇರ್ತಾನೆ.”

ಈ ಸೊಗಸು ಮಾತಿನ ಹಿಂದೆ, ಬೇರೇನೋ ಮುಖಮರೆಸಿಕೊಂಡಿದೆ ಎಂದು ಮಾಸ್ತರು ತಿಳಿಯದಿರಲಿಲ್ಲ. ಅವರು ನಕ್ಕು ಹೇಳಿದರು:
“ಅದೇನು ಹೇಳ್ತಾನೋ…. ಅಂತೂ ಹುಡುಗರು ತಪ್ಪಿಸ್ಕೊಳ್ಳೋದು ಬಹಳ ಕಡಿಮೆ.”

ಇಷ್ಟು ಮೃದುವಾಗಿ ಈತನೊಡನೆ ಮಾತನಾಡುವ ಅಗತ್ಯವಾದರೂ ಏನು ಎಂದು ಜಮೀನ್ದಾರರು ತಮ್ಮ ವರ್ತನೆಯ ವಿಷಯದಲ್ಲಿ ತಾವೇ ಅಸಹನೆ ತೋರಿ ಕತ್ತು ಕುಲುಕಿದರು. ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಬೇಕೆನಿಸಿತು. ಆದರೆ ಕಟುಮಾತು, ತಮ್ಮ ಉದ್ದೇಶ ಸಾಧನೆಗೆ ಪ್ರತಿಕೂಲವಾಗಬಹುದೆಂದು, ಸಿಟ್ಟು ನುಂಗಿಕೊಂಡು, ಮೌನವಾಗಿಯೇ ಇದ್ದು ಸಿಗರೇಟು ಸೇದಿದರು.

ಕರೆಕಳುಹಿಸಿದ ಕಾರಣವನ್ನು ಮಾಸ್ತರು ಆಗಲೇ ಊಹಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರದಿಂದಿರಲು ತೀರ್ಮಾನಿಸಿಯೇ ಅವರು ಬಂದಿದ್ದರು. ಆಡಬೇಕಾದ ಮಾತುಗಳನ್ನು ಮೊದಲೇ ತೂಗಿನೋಡಿ ಸಂವಾದ ಬೆಳೆಸಲು ಸಿದ್ಧರಾಗುತ್ತ, ಅವರೆಂದರು :
“ಅದೇನೋ ಮಾತನಾಡಬೇಕು ಎಂದಿರಂತೆ.”

ಆ ಮಾತಿನ ಧ್ವನಿಯಿಂದ ಮಾಸ್ತರನ್ನು ಅಳೆಯಲೆತ್ನಿಸುತ್ತ ನಂಬಿಯಾರರೆಂದರು :
“ಅವಸರವೇನೂ ಇಲ್ಲವಷ್ಟೆ?”

“ಹೌದು, ಹೌದು. ಆಟಗಳನ್ನು ಆಡಿಸಿ ಮಕ್ಕಳನ್ನು ಕಳಿಸ್ಬಿಟ್ಟೆ.”

“ಅಂದಮೇಲೆ ಬೇಕಾದಷ್ಟು ಬಿಡುವಿದೆ ಅಂತಾಯ್ತು.”

ರೈತರಿಗೆ ಪತ್ರಿಕೆಯೋದಿ ಹೇಳುವ ಕೆಲಸವಿದೆಯೆಂದು ಮಾಸ್ತರರ ಬಾಯಿಯಿಂದಲೇ ಹೊರಡಿಸಲು ನಂಬಿಯಾರರು ಯತ್ನಿಸಿದರು. ಆದರೆ ಆ ಮಾಸ್ತರು ಅಷ್ಟು ಸುಲಭವಾಗಿ ಬಲೆಯ ಬಳಿಗೆ ಸುಳಿಯುವ ಮೀನಾಗಿರಲಿಲ್ಲ. ಅವರು ಎಂದರು:

“ನೀವು ಸರಿಯಾಗಿ ಹೇಳಿದಿರಿ. ಹೊತ್ತು ಕಳೆಯೋದು ಕಷ್ಟ ಅಂತ ಪತ್ರಿಕೆ ತರಿಸ್ಕೊಂಡು ಓದ್ತಾ ಇರ್ತೇನೆ.”

“ಎಲಾ!” ಎಂದರು. ನಂಬಿಯಾರರು ಮನಸ್ಸಿನೊಳಗೇ. ‘ನನಗೇ ಇಟ್ಟನಲ್ಲ!’ ಬಹಿರಂಗವಾಗಿ ಗಾಂಭೀರ್ಯದ ಮುಖವಾಡ ಧರಿಸುತ್ತ , ಅವರು ಹೇಳಿದರು:
“ಆ ವಿಷಯವಾಗಿಯೆ ಮಾತನಾಡೋಣಂತ ನಿಮ್ಮನ್ನು ಕರೆಸ್ದೆ. ರೈತರೆಲ್ಲ ಸಾಯಂಕಾಲದ ಹೊತ್ತು ಶಾಲೆಯ ಜಗಲೀಲಿ ಸೇರ್ತಾರಂತೆ. ಅವರಿಗೇನೊ ಬುದ್ದಿ ಇಲ್ಲ. ಹೊಲಸು ಜನ. ನೀವು ಪಾಪ, ಏನೂ ತೀಳೀದೆ ಅವರ ಜತೇಲಿ ಮಾತಾಡ್ತಾ ಇರ್ತೀರಿ. ಅವರೆಂಥವರು ಅನ್ನೋದು ನಿಮಗೆ ಗೊತ್ತಿಲ್ಲ. ಬೆಟ್ಟು ಕೊಟ್ಟರೆ ಸಾಕು, ಕೈಯನ್ನೇ ನುಂಗೋ ಜಾತಿ.”

ಮುಖ ಕೆಂಪೇರುವ ಹಾಗಾದರೂ ಮಾಸ್ತರು ತಾಳ್ಮೆಯಿಂದಿದ್ದು, ಸದ್ದಿಲ್ಲದೆ, ಜಮೀನ್ದಾರರ ಕಣ್ಣು ತಪ್ಪಿಸಿ ಉಗುಳು ನುಂಗಿದರು.
“ಹಾಗೇನೂ ಇಲ್ಲ” ಎಂದು ಅವರ ನಾಲಿಗೆ ಮೆಲ್ಲನೆ ನುಡಿಯಿತು.

“ನಿಮಗೆ ತಿಳಿಯೋದಿಲ್ಲ ಮಾಸ್ತರೆ. ಈ ಜನ ಎಂಥವರು ಅನ್ನೋದು ನನಗೆ ಗೊತ್ತಿದೆ! ನಾವು ಅವರನ್ನು ದೂರವಿಟ್ಟರೆ ಮಾತ್ರ ಅವರು ನಮ್ಮನ್ನು ಗೌರವಿಸುತ್ತಾರೆ. ವಿದ್ಯೆ ಇಲ್ಲದೋರು – ವಿದ್ಯಾವೀಹೀನಂ ಸಂಸ್ಕೃತದಲ್ಲಿ ಗಾದೆ ಇದೆಯಲ್ಲ ಹಾಗೆ – ಬರೇ ಮೃಗಗಳು. ಅವರನ್ನು ಮೃಗಗಳೆಂದೇ ನೋಡ್ಬೇಕು. ಅವಕ್ಕೆ ಅರ್ಥವಾಗೋದು ಒಂದು ಭಾಷೆ, ಬಾರುಕೋಲಿನ ಭಾಷೆ. ಏನು ಹೇಳ್ತೀರಾ?”

ಮಾಸ್ತರು ಏನೂ ಹೇಳಲಿಲ್ಲ. ಅವರ ಮುಖ ಮತ್ತೂ ಕೆಂಪಗಾಯಿತು. ತುಟಿಗಳು ಸೂಕ್ಷ್ಮವಾಗಿ ಕಂಪಿಸಿದುವು. ಪತ್ರಿಕೆಯನ್ನು ಹಿಡಿದಿದ್ದ ಮುಷ್ಟಿ ಬಿಗಿಯಾಯಿತು. ದ್ವೇಷದಿಂದ, ತಿರಸ್ಕಾರದಿಂದ ಕಟುವಾಗಿ ಉತ್ತರ ಕೊಡುವಂತೆ ಪ್ರೇರೇಪಿಸುತ್ತ, ಮೆದುಳು ತಪ್ತವಾಯಿತು. ಆದರೂ ಮಾಸ್ತರು ಶಾಂತಿ ಮಂತ್ರ ಜಪಿಸಿದರು. ಮೌನವಾಗಿ ‘ಮೈಮರೆತು ಮೂರ್ಖನಾಗಬೇಡ’ ಎಂದು ತನಗೆ ತಾನೇ ವಿವೇಕ ಹೇಳಿದರು.

ಸುಮ್ಮನೆ ಕುಳಿತ ಮಾಸ್ತರನ್ನು ನಂಬಿಯಾರರ ದೃಷ್ಟಿ ಪರೀಕ್ಷಿಸಿ ನೋಡಿತು. ತಮ್ಮ ಮಾತಿನ ಪ್ರಭಾವಕ್ಕೆ ಒಳಗಾಗಿ ಬೆದರಿದ ಮಗುವಿನಂತೆ ಮಾಸ್ತರು ಕಂಡರೇ ಹೊರತು ಬೇರೆ ಯಾವ ಸಂದೇಹವೂ ಅವರಲ್ಲಿ ಮೂಡಲಿಲ್ಲ. ತಾವು ಆಡಿದ ಮಾತುಗಳ ಬಗೆಗೆ ತಾವೇ ಹೆಮ್ಮೆಪಡುತ್ತ ಅವರು, ಕೊನೆಯ ಬಾರಿ ಸಿಗರೇಟಿನ ಉಸಿರೆಳೆದು ಹೊಗೆ ಬಿಟ್ಟರು. ಬಳಿಕ ಮುಗುಳು ನಕ್ಕು ಅವರೆಂದರು :

“ನಿಮಗೊಂದು ರಹಸ್ಯ ಹೇಳ್ತೇನೆ. ನನ್ನ ಮಾವ ಇದ್ದಷ್ಟು ಕಾಲವೂ ಇಲ್ಲಿ ಶಾಲೆ ತೆರೆಯೋದನ್ನು ವಿರೋಧಿಸಿದ್ರು. ಆಡುವವರ ಮಕ್ಕಳು ಆಡ್ಬೇಕು; ಬೇಡುವವರ ಮಕ್ಕಳು ಬೇಡ್ಬೇಕು ಅನ್ನೋದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಆದರೆ ಅವರ ತಲೆಮಾರು ಬೇರೆ, ನಮ್ಮ ತಲೆಮಾರು ಬೇರೆ. ನಾನು ಒಪ್ಪಿಲ್ಲ.”

ಮೆಚ್ಚುಗೆ ಸೂಚಿಸಿ ಉಸಿರಾಡಲು ಒಂದು ಅವಕಾಶ ದೊರೆಯಿತೆಂದು ಮಾಸ್ತರೆಂದರು :
“ನಿಮ್ಮ ವಿಚಾರ ಸರೀಂತ ಯಾರು ಬೇಕಾದರೂ ಹೇಳಿಯಾರು.”

ನಂಬಿಯಾರರಿಗೆ ಆ ಪ್ರಶಂಸೆ ಕೇಳಿ ಸಂತೋಷವಾಯಿತು. ಆ ಸಂತೋಷದ ಭರದಲ್ಲಿ ಗೋಪ್ಯವಾಗಿ ಮಾತನಾಡುವಂತೆ, ಸ್ವರ ತಗ್ಗಿಸಿ ಅವರೆಂದರು :
“ಆ ನಂಬೂದಿರಿಗೂ ಶಾಲೆ ತೆರೆಯೋದು ಇಷ್ಟವಿರ್ಲಿಲ್ಲ. ನಾನು ಮತ್ತು ಆತ ಸ್ನೇಹಿತರಾದ್ರೂ – ನಿಮ್ಮಲ್ಲಿ ಹೇಳೋದಕ್ಕೇನಂತೆ?-ಅವನು ಮಹಾ ಖದೀಮ. ಶೂದ್ರರು ಯಾರಿಗೂ ವಿದ್ಯೆ ಅಗತ್ಯವಿಲ್ಲಾಂತ ಅವನ ಅಭಿಪ್ರಾಯ. ನನಗೆ ಗೊತ್ತಿಲ್ಲವಾ ಅದೆಲ್ಲ? ಹಟತೊಟ್ಟು ಶಾಲೆ ತೆರೆಯೋ ಹಾಗೆ ಮಾಡ್ದೆ. ಹೊರಗಿನಿಂದ ಅಧಿಕಾರಿಗಳು ದೊಡ್ಡವರು ಯಾರಾದರೂ ಬಂದಾಗ ಶಾಲೇನೆಲ್ಲ ನೋಡಿ, ಕೊಂಡಾಡೋದು ಯಾರನ್ನು ಹೇಳಿ?”

ತುಟಿ ಪಿಟ್ಟೆನ್ನದಿದ್ದರೂ ನಂಬಿಯಾರರ ಮಾತನ್ನು ನಾನು ಕೇಳುತ್ತಿದ್ದೇನೆ ಎಂಬುದಕ್ಕೆ ಸೂಚನೆಯಾಗಿ ಮಾಸ್ತರು ತಲೆಯಾಡಿಸಿದರು. ಮೈಯೆಲ್ಲ ಬೆವೆತು ಬೇಯುತ್ತಿದ್ದಂತೆ ಕಂಡೂ ಅವರು ಸ್ಥೈರ್ಯದಿಂದ ಕುಳಿತರು.

ಆದರೆ ಮಾಸ್ತರ ಇರುವಿಕೆಯನ್ನೇ ಅಣಕಿಸುವ ಹಾಗೆ ಇನ್ನೊಂದು ಮಾತು ಬಂತು:

“ಈ ರೀತಿ ಶಾಲೆಯ ಸ್ಥಾಪನೆಗೆ ನಾನೇ ಮೂಲ ಕಾರಣನಾದರೂ ರೈತರ ಮಕ್ಕಳಿಗೆಲ್ಲ ವಿದ್ಯೆ ಕೊಡೋ ವಿಷಯದಲ್ಲಿ ನನ್ನದೇ ಆದ ಅಭಿಪ್ರಾಯವುಂಟು. ಈ ಜನ ಯಾರೂ ಕಾಲೇಜಿಗೆ ಹೋಗಬೇಕಾಗಿಲ್ಲ ; ಹೈಸ್ಕೂಲು ಇವರಿಗೆ ಅಗತ್ಯವಿಲ್ಲ. ರೈತರ ಮಕ್ಕಳು ಸಹಿ ಹಾಕೋದಕ್ಕೆ ಕಲಿತರೆ ಸಾಕು. ಇಷ್ಟು ವಿದ್ಯೆಯಾದರೂ ಯಾಕೆ ಗೊತ್ತೆ? ಬರೇ ಹೆಬ್ಬಿಟ್ಟಿನ ರುಜುವೇ ಇದ್ದರೆ, ಏನೂ ತೀಳೀದೋರಿಗೆ ಮೋಸಮಾಡ್ತಾ ಇದ್ದಾರೇಂತ ಇವರು ಬಡ್ಕೋಬಹುದು. ಮುಂದೆ ಹಾಗಲ್ಲ. ಕರಾರು ಪತ್ರ ಏನಿದ್ದರೂ, ಬರೆದದ್ದು ಪೂರ್ತಿ ಅರ್ಥವಾಗಿದೆ ಅಂತ ಹೇಳಿ, ಅವರು ಅಕ್ಷರದಲ್ಲೇ ಸಹಿ ಹಾಕ್ಬಹುದು, ಏನು ಹೇಳ್ತೀರಾ?”

ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೊ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. ‘ಬರ್ತೇನೆ, ಕೆಲಸವಿದೆ’ ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು. ಆದರೆ ಹಾಗೆ ವಿರಸಕ್ಕೆ ಎಡೆ ಕೊಡುವುದರ ಪರಿಣಾಮವೇನೆಂದು ಊಹಿಸುವುದು ಕಷ್ಟವಾಗಿರಲಿಲ್ಲ. ಬಹಿರಂಗವಾಗಿ ನಂಬಿಯಾರರನ್ನು ಕೆಣಕುವುದೆಂದರೆ, ತನ್ನ ಕೆಲಸಕ್ಕೆ ತಾನೇ ಸಂಚಕಾರ ತಂದುಕೊಂಡ ಹಾಗೆ. ಉಪಾಧ್ಯಾಯ ವೃತ್ತಿಯಿಂದ ಹೊರಬಿದ್ದ ಬಳಿಕ ರೈತರ ಬಿಡುವಿನ ತನ್ನ ದುಡಿಮೆಯೂ ಕೊನೆಗಂಡಹಾಗೆ. ಇದು ಸ್ಪಷ್ಟವಾಗಿದ್ದ ಮಾಸ್ತರು, ಭಾವನೆಗಳನ್ನು ತನ್ನ ಹತೋಟಿಯೊಳಗಿಟ್ಟು ತಣ್ಣಗಿರಲು ಯತ್ನಿಸಿದರು. ನೇರವಾಗಿ ಕುಳಿತರಲಾರದೆ ಸ್ವಲ್ಪ ಕುಗ್ಗಿ, ಒಣಗಿಹೋಗಿದ್ದ ತುಟಿಗಳನ್ನು ನಾಲಿಗೆಯಿಂದ ಸವರಿದರು.

ಇಷ್ಟು ಮೃದುವಾಗಿ ಈತನೊಡನೆ ಮಾತನಾಡುವ ಅಗತ್ಯವಾದರೂ ಏನು ಎಂದು ಜಮೀನ್ದಾರರು ತಮ್ಮ ವರ್ತನೆಯ ವಿಷಯದಲ್ಲಿ ತಾವೇ ಅಸಹನೆ ತೋರಿ ಕತ್ತು ಕುಲುಕಿದರು. ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಬೇಕೆನಿಸಿತು. ಆದರೆ ಕಟುಮಾತು, ತಮ್ಮ ಉದ್ದೇಶ ಸಾಧನೆಗೆ ಪ್ರತಿಕೂಲವಾಗಬಹುದೆಂದು, ಸಿಟ್ಟು ನುಂಗಿಕೊಂಡು, ಮೌನವಾಗಿಯೇ ಇದ್ದು ಸಿಗರೇಟು ಸೇದಿದರು.

ಮಾಸ್ತರ ಮೌನವನ್ನು ಕಂಡು ಜಮೀನ್ದಾರರಿಗೆ, ತಮ್ಮ ಮಾತು ಪರಿಣಾಮಕಾರಿಯಾಯಿತೆಂಬ ಅಭಿಪ್ರಾಯ ಹೆಚ್ಚು ದೃಢವಾಯಿತು. ಅವರು ಊಳಿಗದವನನ್ನು ಕರೆದು ಚಹ ತರಲು ಹೇಳಿದರು. ಮಾಸ್ತರ ಸುಖದುಃಖ ವಿಚಾರಿಸುತ್ತ ಅವರೆಂದರು:

“ಶಾಲೆಯಲ್ಲಿ ನೀವು ಇರೋದಕ್ಕೆ ಎಲ್ಲ ಅನುಕೂಲವಾಗಿದೆಯೋ?”

“ಇದೆ” ಎಂದು ಮಾಸ್ತರು ಉತ್ತರ ಕೊಟ್ಟರು. ಸ್ವರ ಕ್ಷೀಣವಾಗಿತ್ತು.

“ಬೇಕಾದರೆ ಆ ಹಿತ್ತಿಲಲ್ಲೇ ಒಂದಿಷ್ಟು ತರಕಾರಿ ಬೆಳೆಸ್ಬಹುದು. ನಮ್ಮ ರೈತರಿಗೆ ಹೇಳ್ತೇನೆ. ಬಂದು ಕೆಲಸ ಮಾಡ್ತಾರೆ.”

“ಅಯ್ಯೋ ಬೇಡಿ! ಒಬ್ಬನಿಗೆ ಎಷ್ಟು ಬೇಕು? ಈ ಊರಲ್ಲಿ ತರಕಾರಿಗೇನು ಕಡಿಮೆಯೇ? ಧಾರಾಳವಾಗಿ ಸಿಗ್ತದೆ.”

ಸಾಮಾನ್ಯವಾಗಿ ಮಾಸ್ತರಿಗೆ ಬೇಕಾದ ತರಕಾರಿಯನ್ನೆಲ್ಲ ವಿದ್ಯಾರ್ಥಿಗಳೇ ತಂದುಕೊಡುತ್ತಿದ್ದರು; ಮಾಸ್ತರು ಬೇಡವೆಂದರೂ ತರುತ್ತಿದ್ದರು. ದುಡ್ಡು ಕೊಡಹೋದರೂ ತೆಗೆದುಕೊಳ್ಳುತ್ತಿರಲಿಲ್ಲ.

ತರಕಾರಿಯ ನಂತರ, ಅಕ್ಕಿಯ ವಿಷಯ ಜಮೀನ್ದಾರರು ಪ್ರಸ್ತಾಪಿಸಿದರು.

“ನಿಮಗೆ ಅಕ್ಕಿದೇನಾದರೂ ತೊಂದರೆ ಇದ್ರೆ ಹೇಳಿ ಕಳಸ್ತೇನೆ, ಸಂಕೋಚ ಪಡಬೇಡಿ.”

“ಛೆ! ಛೆ! ಸಂಕೋಚ ಯಾತರದು? ಅಕ್ಕಿಯೂ ದಾಸ್ತಾನಿದೆ, ಬೇಕಾದ್ರೆ ಖಂಡಿತ ಬಂದು ಕೇಳ್ತೇನೆ.”

ಅಷ್ಟರಲ್ಲಿ ಮನೆಯ ತಲೆಬಾಗಿಲಲ್ಲಿ ಜಮೀನ್ದಾರರ ಹುಡುಗನ ಕಾಣಿಸಿಕೊಂಡು ಮಾಸ್ತರನ್ನು ನೋಡಿ ಮುಗುಳ್ನಕ್ಕ. ಆತನ ತಾಯಿಯೋ ಮಲ ತಾಯಿಯೋ ಹಿರಿಯಕ್ಕನೋ – ಅಂತೂ ಕೆಲ ಹೆಂಗಸರೂ ಹುಡುಗನ ಹಿಂದೆ ಬಾಗಿಲ ಮರೆಯಲ್ಲಿ ನಿಂತು ಮಾಸ್ತರನ್ನು ನೋಡಿದರು. ಆ ದೃಷ್ಟಿಯ ಶಾಖ ತಗಲಿದಂತೆ ಮಾಸ್ತರು ಅತ್ತಿತ್ತ ಮಿಸುಕಿದರು.

ಈ ದೃಷ್ಟಿಸಂಚಾರವನ್ನು ಗಮನಿಸಿದ ಜಮೀನ್ದಾರರು ಕರೆದರು.

“ಕರುಣಾಕರ, ಇಲ್ಲಿ ಬಾ!”

ಹುಡುಗ ಶರಟಿನೊಂದು ಕೊನೆಯನ್ನು ಕಚ್ಚುತ್ತ , ಮುದ್ದಾದ ದೊಡ್ಡ ಕಣ್ಣುಗಳನ್ನು ಹೊರಳಿಸುತ್ತ , ನಡೆದು ಬಂದು ತಂದೆಯ ಪಕ್ಕದಲ್ಲಿ ನಿಂತ.
“ಮಾಸ್ತರಿಗೆ ನಮಸ್ಕಾರ ಮಾಡಿದೆಯಾ?” ಎಂದು ನಂಬಿಯಾರರು ಕೇಳಿದರು. ಹುಡುಗ “ನಮಸ್ಕಾರ ಸರ್” ಎಂದ.

ನಂಬಿಯಾರರು ಅರ್ಥವಾಗುದುದೇನನ್ನೋ ಗೊಣಗಿ, ಮಗನ ಶರಟಿನತ್ತ ಕೈಹಾಕಿ, ಕಚ್ಚಿಕೊಂಡಿದ್ದನ್ನು ತಪ್ಪಿಸಿ, ಶರಟನ್ನು ಬಿಡಿಸಿದರು. ಮಾಸ್ತರತ್ತ ನೋಡಿ ಅವರೆದರು :

“ಬಹಳ ದಿವಸದಿಂದ ನಿಮ್ಮನ್ನು ಕೇಳ್ಬೇಕೂಂತಿದ್ದೆ . ನಮ್ಮ ಕರುಣಾಕರನಿಗೆ ದಿನಾಲೂ ಸ್ವಲ್ಪ ಹೊತ್ತು ನೀವು ಹೆಚ್ಚಿಗೆ ಪಾಠ ಯಾಕೆ ಹೇಳಿಕೊಡ್ಬಾರ್ದು?”

ಬಿಕ್ಕಟ್ಟಿನಲ್ಲಿ ಸಿಲುಕಿದ ಹಾಗಾಯಿತು ಮಾಸ್ತರಿಗೆ. ಈ ಹೊಸ ಭಾರವನ್ನು ಹೊತ್ತುಕೊಳ್ಳುವುದು ಅವರಿಗೆ ಏನೇನೂ ಇಷ್ಟವಿರಲಿಲ್ಲ. ಅವರು ಒಮ್ಮೆಲೆ ಉತ್ತರ ಕೊಡಲಾರದೆ ಹೋದರು. ಆದರೆ ನಿರುತ್ತರವಾಗಿ ಸುಮ್ಮನಿರುವುದೂ ಸಾಧ್ಯವಿರಲಿಲ್ಲ. ಕಳೆದುಹೋಗಿದ್ದ ಸ್ವರವನ್ನು ಮರಳು ಹುಡುಕಿ ಪಡೆಯುತ್ತ ಅವರೆಂದರು:

“ಆಗಲಿ, ಅದಕ್ಕೇನಂತೆ?”

“ಹಾಗಾದರೆ ಸಾಯಂಕಾಲದ ಹೊತ್ತು ಯಾವಾಗಲೂ ಇಲ್ಲಿಗೆ ಬರ್ತಾ ಇರಿ ಆಗದೆ?”

ಸಾಯಂಕಾಲವನ್ನೆಲ್ಲಾ ತಮ್ಮಿಂದ ಕಸಿದುಕೊಳ್ಳುವ ಯತ್ನ ಬಲು ಕ್ರೂರವಾಗಿ ಮಾಸ್ತರಿಗೆ ತೋರಿತು. ಒಪ್ಪಿಗೆ ಸೂಚಿಸದೆ ಸುಮ್ಮನಿದ್ದ ಮಾಸ್ತರನ್ನು ಜಮೀನ್ದಾರರು ಅರೆಕ್ಷಣ ಹುಬ್ಬು ಗಂಟಿಕ್ಕಿ ನೋಡಿ, ವೇಗವಾಗಿ ಮಾತನಾಡುತ್ತ ಅಂದರು :

“ನನಗೆ ಬ್ಯಾಡ್ಮಿಂಟನ್ ಅಂದರೆ ಇಷ್ಟ. ನಾನು ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಬಹಳ ಪ್ರಸಿದ್ಧನಾಗಿದ್ದೆ. ಇಲ್ಲಿ ಯಾರೂ ಜತೆ ಇಲ್ಲದೆ ಬೇಜಾರಾಗಿತ್ತು. ಇಲ್ಲೇ ಎದುರಿಗೆ ಕೋರ್ಟು ಹಾಕಿಸ್ತೇನೆ. ನನಗೆ ಪುರುಸೊತ್ತು ಆದಾಗಲೆಲ್ಲ ಸಾಯಂಕಾಲ ಒಂದೊಂದು ಆಟವೂ ಆಡ್ಬಹುದು.”
ಮಾಸ್ತರು ಉತ್ತರವಿತ್ತರು : “ನನಗೆ ಬ್ಯಾಡ್ಮಿಂಟನ್ ಬರೋದಿಲ್ಲ.”

“ಆಶ್ಚರ್ಯ! ಈಗಿನ ಕಾಲದ ನೀವೇ ಹೀಗಿರೋದು ಮಹದಾಶ್ಚರ್ಯ!”

“ಹೇಳೋದಕ್ಕೆ ನಾಚಿಕೆಯಾಗ್ತದೆ. ಪಂದ್ಯಾಟ ಅಂದರೆ ನನಗೆ ಅಷ್ಟಷ್ಟೇ.”
ಜಮೀನ್ದಾರರು ನಕ್ಕರು.

“ಹಾಗಾದರೆ, ಜೋಡು ನಳಿಗೆ ಬಂದೂಕೆತ್ತಿ ನೀವು ಬೇಟೆಯಾಡೋದೆಲ್ಲ ಅಷ್ಟರಲ್ಲೇ ಇದೆ!”
ಮಾಸ್ತರು ನಗೆಯ ಉತ್ತರವಿತ್ತರು.

“ಹೋಗಲಿ, ಇಸ್ಪೀಟಾದರೂ ಆಡ್ತೀರೊ?”

“ಅದೂ ಇಲ್ಲ.”

“ಹಾಗಾದರೆ ನೀವು ಪುಸ್ತಕ ಕೀಟ ಅಂತ ತೋರ್ತದೆ.”

ಆ ಮಾತನ್ನು ತಮ್ಮ ಉಪಯೋಗಕ್ಕೆ ತಿರುಗಿಸಿಕೊಂಡು ಮಾಸ್ತರರೆಂದರು:

“ನಿಜ ಹೇಳಿದ್ರಿ. ನಾನು ಮೊದಲಿನಿಂದಲೂ ಅಷ್ಟೆ. ಪುಸ್ತಕದ ಹುಚ್ಚ. ಈಗ ಸಹ ಬಿಡುವು ಸಿಕ್ಕಿದರೆ ಸಾಕು, ಪುಸ್ತಕ ಹುಡುಕಿಕೊಂಡು ನೀಲೇಶ್ವರಕ್ಕೋ ಹೊಸದುರ್ಗಕ್ಕೋ ಓಡ್ತಿರ್ತೇನೆ.”

ಈ ಓಡಾಟದ ಗೂಡಾರ್ಥವನ್ನು ತಿಳಿಯದ ಜಮೀನ್ದಾರರು ನಕ್ಕು ತಲೆ ಅಲ್ಲಾಡಿಸಿ ಅಂದರು :

“ಈ ಪುಸ್ತಕದ ವಿಷಯ ನನಗೆ ಎಣ್ಣೆ ಸೀಗೆ ಇದ್ದ ಹಾಗೆ!”

ಆಳು ಚಹ ತಂದ. ಚೀಣಿ ಪಿಂಗಾಣಿಯ ಕಪ್ ಮತ್ತು ಸಾಸರು; ಹಳ್ಳಿಯ ಬಡ ಹೋಟಲಿನ ಗಾಜಿನ ಲೋಟವಲ್ಲ.

“ಒಳಗೆ ಓಡು” ಎಂದು ನಂಬಿಯಾರರು ಮಗಗಿನಿಗೆ ಆಜ್ಞೆ ಇತ್ತರು. ಮಾಸ್ತರರ ದೃಷ್ಟಿ, ಓಡುತ್ತಿದ್ದ ಹುಡುಗನನ್ನು ಹಿಂಬಾಲಿಸಿತು. ಬಾಗಿಲ ಬಳಿ ಈಗ ಹೆಂಗಸರಿರಲಿಲ್ಲ.

ಒಂದು ಸಿಗರೇಟು ಹಚ್ಚಿ ಜಮೀನ್ದಾರರು ಚಹಾವನ್ನೆತ್ತಿಕೊಂಡ ‘ತಗೊಳ್ಳಿ’ ಎಂದು ಮಾಸ್ತರಿಗೆ ಹೇಳಿದರು.

ಕಪ್ಪಿನಷ್ಟೇ ಸೊಗಸಾಗಿತ್ತು ಪಾನೀಯ ಕೂಡಾ. ಶ್ರೀಮಂತ ಚಹ ಮತ್ತೇರುವಷ್ಟು ರುಚಿಕರ.
ಒಂದು ಗುಟುಕನ್ನು ಹೀರಿದ ಬಳಿಕ ಜಮೀನ್ದಾರರೆಂದರು:

“ಕರುಣಾಕರನಿಗೆ ಮುಂದೆ ಕಾಲೇಜು ಓದಿಸ್ಬೇಕೂಂತ ನಿರ್ಧಾರ ಮಾಡಿದ್ದೇನೆ. ಮಾವನ ಕಡೆಯಿಂದ ಅವನಿಗೆ ಆಸ್ತಿಯೂ ಬರ್ತದೆ. ವಕೀಲನಾಗಿ ಆತ ರಾಜಕೀಯಕ್ಕೆ ಇಳೀಬೇಕೂಂತ ನನ್ನ ಆಪೇಕ್ಷೆ.”

ಚಹ ಕುಡಿಯುತ್ತ ಮಾಸ್ತರು ತನ್ನ ಬಡ ವಿದ್ಯಾರ್ಥಿಗಳನ್ನು ಸ್ಮರಿಸಿಕೊಂಡರು. ಜಮೀನ್ದಾರರ ಮಗನಷ್ಟೇ ಅಂತಸ್ತು ಇದ್ದ ಬೇರೆ ಇಬ್ಬರು ಹುಡುಗರೆಂದರೆ ನಂಬೂದಿರಿಯ ಮಕ್ಕಳು – ತಾವು ಮಡಿ ಬ್ರಾಹ್ಮಣರೆಂದು ಯಾವಾಗಲೂ ಪ್ರತ್ಯೇಕವಾಗಿಯೇ ಕುಳಿತು, ಮನೆಗೆ ಹೋದೊಡನೆ ಸ್ನಾನ ಮಾಡಿ ಮೈಲಿಗೆ ಕಳೆಯುತ್ತಿದ್ದ ಎಳೆಯರು. ನಂಬಿಯಾರರ ಹಾಗೆಯೇ ಮಕ್ಕಳಿಗೆ ಕಾಲೇಜು ವಿದ್ಯಾಭ್ಯಾಸ ಕೊಡಿಸುವ ಮಾತನ್ನಾಡುವ ಸಾಮರ್ಥ್ಯ ಆ ಹಳ್ಳಿಯಲ್ಲಿ ಬೇರೆಯೂ ಒಬ್ಬ ವ್ಯಕ್ತಿಗಿದ್ದುದೆಂದರೆ ನಂಬೂದಿರಿಗೆ ಮಾತ್ರ. ಇತರರು ಯಾರೂ ಅಂಥ ಕನಸನ್ನು ಕೂಡ ಕಾಣುವ ಸ್ಥಿತಿಯಲ್ಲಿರಲಿಲ್ಲ.

(ಚಿರಸ್ಮರಣೆ – 1955 – ಕಾದಂಬರಿಯ ಕೆಲವು ಪುಟಗಳು)