ತಾನು ಸುರು ಮಾಡಿದ ಕೆಲಸವು ಇಷ್ಟೊಂದು ಸುಗಮವಾಗಿ ಸಾಗಬಹುದೆಂದು ಗೋಪಿನಾಥನು ಕನಸಿನಲ್ಲೂ ನಿರೀಕ್ಷಿಸಿಲಿಲ್ಲ. ಗ್ರಾಮದ ಶ್ಯಾನುಭೋಗರಿಂದ ಪ್ರಾರಂಭವಾಗಿ ಜಿಲ್ಲಾ ಕಲೆಕ್ಟರವರವರೆಗೂ ಅಧಿಕಾರಿಗಳು ಎಬ್ಬಿಸಿದ ಧೂಳಿನಿಂದ ಮುಚ್ಚಲ್ಪಟ್ಟ ಕಮಿಶನರ ಕಣ್ಣುಗಳನ್ನು ತೆರೆದು ತೊಳೆದು ಜನತಾ ಕಾರುಣ್ಯವನ್ನು ತುಂಬಿಸಿ ಅವರ ಸಹಾನುಭೂತಿಯನ್ನು ಗಳಿಸುವಷ್ಟು ಕಾರ್ಯದಕ್ಷತೆ ತನ್ನಲ್ಲಿದೆಯೆಂದು ಆತ ತಿಳಿದಿರಲಿಲ್ಲ. ತಿಳಿಯಲು ಸಂದರ್ಭ ಒದಗಿರಲಿಲ್ಲ. ಶಕ್ತಿಮೀರಿ ದುಡಿಯುವ ಅಗತ್ಯವೇನು? ಯಾರಿಗಾಗಿ? ಏಕಾಂಗಿಯಾದ ಗಂಡಸಿನ ಒಣ ಜೀವನದಲ್ಲಿ ಕಾರ್ಯಕುತೂಹಲವೆಲ್ಲಿಂದ? ಕೈಗೆ ಬಂದುದನ್ನು ಶಿಸ್ತಿನಿಂದ ಪರಿಷ್ಕಾರವಾಗಿ ನಿರ್ವಹಿಸುತ್ತಿದ್ದನೇನೋ ನಿಜ.
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ಬೆಳ್ಳೆ ರಾಮಚಂದ್ರ ರಾವ್ ಬರೆದ ಕಥೆ ‘ಫುಡ್ ಕಮಿಷನರರ ಆಗಮನ’

 

ಶನಿವಾರ ಬೆಳಿಗ್ಗೆ ಸಹಕಾರಿ ಸಂಘಗಳ ಡಿಪ್ಯೂಟಿ ರಿಜಿಸ್ಟ್ರಾರವರಿಂದ ಗೋಪಿನಾಥನಿಗೊಂದು ಗುಪ್ತ ಪತ್ರಬಂತು. ಆಹಾರ ಇಲಾಖೆಯ ಪ್ರಧಾನ ಅಧಿಕಾರಿಯಾದ ಕಮೀಶನರು ಮದ್ರಾಸಿನಿಂದ ಸೋಮವಾರ ಸಾಯಂಕಾಲ ಬರುತ್ತಾರೆ. ಅದೇ ದಿನ ವರ್ತಕ ಸಂಘದವರಾಗಲಿ ಇನ್ನಿತರ ಸಂಸ್ಥೆಯವರಾಗಲಿ ಅವರನ್ನು ಕಂಡು ಮಾತನಾಡುವ ಮುಂಚಿತವಾಗಿ ಗೋಪಿನಾಥನು ಭೇಟಿಮಾಡಿ ಜಿಲ್ಲೆಯ ನಿಜಸ್ಥಿತಿಯನ್ನು ಕೂಲಂಕುಷವಾಗಿ ವಿವರಿಸಿ ಹೇಳಬೇಕು ಎಂಬ ಸೂಚನೆಯಿತ್ತು ಅದರಲ್ಲಿ. ಹಾಗಾದರೆ ತಾನಿನ್ನು ಸ್ವಪ್ನಶಾಯಿಯಾಗಿದ್ದರೆ ಪ್ರಯೋಜನವಿಲ್ಲ. ಕಾರ್ಯ ಪ್ರವರ್ತನಾಗಬೇಕು. ವಿಪಕ್ಷದವರು ಕಮಿಶನರನ್ನು ತಮ್ಮ ಪಂಥಕ್ಕೆ ತಿರುಗಿಸುವ ಪ್ರಯತ್ನ ಮಾಡದೆ ಇರಲಾರರು, ಅದಕ್ಕೆ ಮುಂಚಿತವಾಗಿಯೇ ಅವರ ದೃಷ್ಟಿಯನ್ನು ಜನತೆಯ ಹಿತಚಿಂತನೆಯ ಕಡೆಗೆ ಪರಿವರ್ತಿಸುವಂತೆ ಮಾಡುವುದು ಅತ್ಯಗತ್ಯ. ಅದಕ್ಕಾಗಿ ಇಡೀ ಜಿಲ್ಲೆಯ ವಸ್ತುಸ್ಥಿತಿಯ ವಿವರಗಳನ್ನು, ಅಂಕೆ ಸಂಖ್ಯೆ ಸಮಾಚಾರಗಳನ್ನು ಸಂಗ್ರಹಿಸಿಕೊಳ್ಳಬೇಕು. ಅಂದರೆ ಜಿಲ್ಲೆಯೆಲ್ಲ ಸುತ್ತಾಡಬೇಕು, ಮುಂದಿರುವ ಮೂರೇ ದಿನಗಳಲ್ಲಿ ಎಂದು ನಿರ್ಧಾರಕ್ಕೆ ಬಂದನು.

ಸರಕಾರದ ಸಾಗುವಳಿಯ ಲೆಕ್ಕ ಪತ್ರಗಳು ನಿಷ್ಪ್ರಯೋಜನವೆಂತ ಆತಗೆ ಮೊದಲೇ ಗೊತ್ತು. ಹಿಂದೆ ಇದೇ ಕಮೀಶನರು ದಕ್ಷಿಣ ಕನ್ನಡ ಜಿಲ್ಲೆ ‘ತೇಮಾನು’ ಕ್ಷೇತ್ರವೋ ಅಥವಾ ‘ಕೊಸರು’ ಕ್ಷೇತ್ರವೋ ಎಂದು ಕಲೆಕ್ಟರಿಗೆ ಬರೆದು ವಿಚಾರಿಸಿದ್ದಾಗ, ಅವರು ತಮ್ಮ ಜಿಲ್ಲೆಯಲ್ಲಿ ಯಾವುದಕ್ಕೂ ಕೊರತೆಯಿಲ್ಲ, ಬೇಕಾದರೆ ಮಲಬಾರು ಜಿಲ್ಲೆಗಳಿಗೂ ಕೊಡುವಷ್ಟು ಧಾನ್ಯವಿದೆಯೆಂದು ಮರುಟಪ್ಪಾಲಿಗೇನೇ ಉತ್ತರ ಕಳುಹಿಸಿದ್ದರು. ಅಂದರೆ ತಮ್ಮ ಅಧಿಕಾರ ಕ್ಷೇತ್ರದ ನ್ಯೂನತೆಯನ್ನು ಒಪ್ಪಿಕೊಂಡರೆ ತಮ್ಮ ಆಡಳಿತಕ್ಕೆ ಎಲ್ಲಿ ನ್ಯೂನತೆ ಬರುತ್ತದೋ ಎಂಬ ಭಯದಿಂದ ನಾಲ್ಕು ಗೆರೆ ಗೀಚಿಬಿಟ್ಟು ಜಿಲ್ಲೆಯ ಹದಿಮೂರು ಲಕ್ಷ ಪ್ರಜೆಗಳಿಗೆ ಒಂದು ವರ್ಷದಲ್ಲಿ ಮೂರು ತಿಂಗಳ ಉಪವಾಸ ವಿಧಿಸಿಬಿಟ್ಟಿದ್ದರು. ತಮ್ಮ ನೌಕರಿ, ತಮ್ಮ ಸಂಬಳ, ತಮ್ಮ ಗೌರವ ಇವುಗಳ ಪಾಲನೆಯಲ್ಲೇ ಜೀವಸವೆಯಿಸುವ ಸರಕಾರಿ ಅಧಿಕಾರಿಗಳ ಆಶ್ರಯದಲ್ಲಿ ಇಂಥ ಪರೋಪಕಾರದ ಕೆಲಸ ಪೂರೈಸಲಾರದು ಎಂಬುದು ಆತನಿಗೆ ಅನೇಕವೇಳೆ ಮನದಟ್ಟಾಗಿತ್ತು. ಈ ವಿಚಾರದಲ್ಲಿ ಭೂಮಾಲೀಕರೆಷ್ಟು ಮಂದಿ, ಒಕ್ಕಲಿಗರೆಷ್ಟು ಮಂದಿ, ಹೊಲಗಳೆಷ್ಟು, ಉತ್ಪತ್ತಿಯೆಷ್ಟು, ಪರದೇಶದಿಂದ ಬರತಕ್ಕ ಆಹಾರ ಸಾಮಗ್ರಿಗಳೆಷ್ಟು? ಇದೆಲ್ಲ ವಿವರಗಳನ್ನು ಸ್ವಲ್ಪ ಸ್ವಲ್ಪವಾಗಿ ಕೆಲವು ತಿಂಗಳುಗಳಿಂದ ಸಂಗ್ರಹಿಸುತ್ತಲೇ ಇದ್ದನು. ಆದರೆ ಕಮಿಶನರನ್ನು ಕಾಣುವ ಮೊದಲು ಈ ಭಾಗದಲ್ಲಿ ಸಂಪೂರ್ಣ ಸಿದ್ಧತೆಯಿರಬೇಕೆಂತ ಡಿಪ್ಯೂಟಿ ರಿಜಿಸ್ಟ್ರಾರಿಗೆ ಬರೆದು ತಿಳಿಸಿದನು.

ಅರ್ಧತಾಸಿನೊಳಗಾಗಿ ಅವರೇ ಬಂದರು. ಪ್ರತಿಯೊಂದು ಕೇಂದ್ರಕ್ಕೂ ಸ್ವತಃ ಹೋಗಬೇಕೆಂದು ಅಭಿಪ್ರಾಯಪಟ್ಟರು. ಅವರನ್ನೂ ಬರುವಂತೆ ವಿಜ್ಞಾಪಿಸಿಕೊಂಡುದಕ್ಕೆ ಇಂಥ ಪತ್ತೇದಾರಿ ಕೆಲಸಕ್ಕೆ ತಾನು ಎದುರು ಬೀಳುವುದು ಸಮಂಜಸವಲ್ಲ, ಗೋಪಿನಾಥ ಒಬ್ಬನೇ ಹೋಗುವುದು ಉಚಿತ, ತನ್ನ ಕಾರು ಆತನ ವಶವಿರಲಿ, ಕೆಲಸ ಮುಗಿಯುವತನಕ ಎಂದರು. ಈ ಪ್ರಕಾರ ಅಂದೇ ಹನ್ನೊಂದು ಗಂಟೆಗೆ ಊಟಮಾಡಿ ಸಂಚಾರಕ್ಕೆ ಹೊರಡುವುದಾಗಿ ಗೋಪಿನಾಥ ನಿಶ್ಚಯಿಸಿದನು. ಆ ಕೂಡಲೇ ಹೊರಟಿದ್ದರೆ ಊಟಕ್ಕೆ ಉಡುಪಿಯಲ್ಲಿರಬಹುದಿತ್ತು. ಆದರೆ ಹೋಗುವ ಮುನ್ನ ಒಮ್ಮೆಯಾದರೂ ಮಾಲತಿಯನ್ನು ನೋಡುವ ಹಾರೈಕೆ. ತಾಯಿಗೆ ತಿಳಿಸಲು ಹೋಗಿ ನೋಡುವಾಗ ಇಂದಿರಮ್ಮ ಅವರ ಕೋಣೆಯಲ್ಲಿರಲಿಲ್ಲ. ತೀರ ವಾಸಿಯಾಗುವಷ್ಟರಲ್ಲಿ ಹೀಗೂ ಮಾಡುತ್ತಾಳಲ್ಲ ಎಂದು ಚಿಂತಿಸುತ್ತ ಬರುವಾಗ ಅವರೇ ಬಂದರು. ಒಳಗಿಂದ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಅವರ ಬಲಗೈ ಬೆರಳೊಂದನ್ನು ಹಿಡಿದು ಮೊಮ್ಮಗಳು ನಡೆಸಿಕೊಂಡು ಬರುತ್ತಿದ್ದಳು. ಅವರಿಗೆ ತನ್ನ ಪ್ರವಾಸದ ಕಾಲಕ್ರಮವನ್ನು ತಿಳಿಸಿ,

“ಮಾಲತಿ ಬಂದ್ರೆ ಇವೊತ್ತು ಇಲ್ಲೇ ನಿಲ್ಲಿಸಿಕೊಮ್ಮ’ ಎಂದನು. ತಾನಿರುವಾಗ ಆಕೆ ಬರಲು ಸಾಧ್ಯವಿಲ್ಲದ್ದರೂ ತನ್ನ ಮನೆಯಲ್ಲಿ ತಾನಿಲ್ಲದಿದ್ದಾಗಲಾದರೂ ಒಂದು ರಾತ್ರೆ ಇರಲಿ. ತನ್ನ ಮಂಚದ ಮೇಲೆ ಮಲಗಿ ನಿದ್ರಿಸಲಿ. ಆಕೆಯ ಚೆಲುವಿನ ಚಾರುಚಂದ್ರಿಕೆ ತನ್ನ ಶಯ್ಯಾಗೃಹದಲ್ಲಿ ತುಂಬಲಿ, ಎಂಬ ಬಯಕೆಯಿಂದ.

“ಇಲ್ಯಾಕಪ್ಪ ಇರ್ತಾಳೆ, ಮನೆಬಿಟ್ಟು?” ಎಂದು ಇಂದಿರಮ್ಮ ಆಕ್ಷೇಪವೆತ್ತಿದರು.

“ಅವಳ ಗಂಡ ಇವತ್ತಿನ ರೈಲಿಗೆ ಮದ್ರಾಸಿಗೆ ಹೋಗಿದ್ದಾನಂತೆ. ಇಲ್ಲಿರದೇಯೇನು?’’

“ಏನೋಪ್ಪ, ನೋಡೋಣ. ಯಾವುದಕ್ಕೂ ಅವಳು ಬರಲಿ” ಅಂದರು.

ಪ್ಯಾಕು ಮಾಡುವಾಗ ಗಂಟಲೊಳಗೆ ಹಾಡತೊಡಗಿದನು. ಅಷ್ಟರಲ್ಲಿ ಹೊರಗೊಂದು ಜಟಕ ಬಂದು ನಿಂತಿತು. ಮಾಲತಿ ಇರಬೇಕು, ಮತ್ಯಾರು? ಆದರೆ ಶಾರದಮ್ಮನ ಸ್ವರ ಮಾತ್ರ ಕೇಳಿಸಿತು. ಹೋಗಿ ನೋಡಲು ಕಾಲೇ ಬರಲಿಲ್ಲ. ಎದೆ ಬಡಿದುಕೊಳ್ಳುತ್ತಿತ್ತು. ಇಂದಿರಮ್ಮನೂ ಶಾರದಮ್ಮನೂ ಮಾತನಾಡುತ್ತಿರುವುದನ್ನು ತನ್ನ ಕೋಣೆಯ ಹೊಸಲಬಳಿ ನಿಂತು ಕೇಳಿದನು. ಮಾಲತಿ ಮದ್ರಾಸಿಗೆ ಹೋದಳು? ಅಹುದು. ಫಕ್ಕನೆ ಮನಸ್ಸಾಯಿತು ಗಂಡನ ಜತೆಗೆ ಹೋಗಬೇಕೂಂತ. ಹೋಗಿಬಿಟ್ಟಳು. ಯಾರಿಗೂ ಗೊತ್ತಿರಲಿಲ್ಲ. ಪೆಟ್ಟಿಗೆ ಕಟ್ಟಿದ್ದೇ ಗೊತ್ತು. ಸೋಮವಾರ ಇಬ್ಬರೂ ಬರುತ್ತಾರೆ. ಆಶ್ಚರ್ಯ! ಪರಮಾಶ್ಚರ್ಯ! ಅಲ್ಲಾ, ಒಂದು ಮಾತಾದರೂ ಹೇಳಿಹೋಗಬಹುದಿತ್ತು. ಆದರೆ ಯಾವಾಗ, ಅವಕಾಶವೆಲ್ಲಿ? ಗೋಪಿನಾಥನಿಗೆ ಆ ದಿನದ ಗೋಪುರದ ಕಲಶವೇ ಕಳಚಿಬಿದ್ದು ಚೂರು ಚೂರಾದಂತಾಯಿತು. ಇನ್ನೊಂದು ಗಳಿಗೆಯಲ್ಲಿ ಹೊರಟೇತೀರಬೇಕು.

ಆದರೆ ಆತನಿಗೆ ಮನೆಬಿಟ್ಟು ಹೊರಡುವಾಗಿದ್ದ ಎದೆಸಂಕಟ ಕಾರಿನಲ್ಲಿ ಕುಳಿತಮೇಲೆ ಬಹಳ ಸಮಯ ಇರಲಿಲ್ಲ. ಮೊದಲೇ ಉಬ್ಬಾಳಾಗಿದ್ದ ಡ್ರೈವರನಿಗೆ ತಾನು ಹೊರಟ ಕೆಲಸದ ಹಿರಿಮೆಯನ್ನೂ ತರಾತುರಿಯನ್ನೂ ತಿಳಿಸಿ ಹುರಿದುಂಬಿಸಿದ್ದರಿಂದ ಆತ ಹೊಸ ಕಾರನ್ನು ಹಾರಿಸಿದ, ಹೆಮ್ಮೆಯಿಂದ. ಅದು ನೀರಿನ ಮೇಲೆ ಹಕ್ಕಿ ಚಿಮ್ಮಿದಂತೆ ಚಲಿಸುವಾಗ ಮುಖದ ಮೇಲೆ ರುಮುರುಮು ಬೀಸುತ್ತಿದ್ದ ಗಾಳಿಯೊಂದಿಗೆ ವೇಗದ ಅಮಲು ತಲೆಗೇರಿತು. ಗೋಪಿನಾಥನಿಗೆ ಹಗಲುಗನಸುಗಳು ಸಾಲುಸಾಲಾಗಿ ತೇಲಿ ಬಂದು ತೇಲಿ ಹೋದವು.

ಮೂಡಬಿದ್ರೆ, ಕಾರ್ಕಳ, ಉಡುಪಿ, ಭಾನುವಾರ ಕುಂದಾಪುರ. ರಾತ್ರಿ ಮರಳಿ ಮಂಗಳೂರು. ಸೋಮವಾರ ಬೆಳಿಗ್ಗೆ ಪುತ್ತೂರು. ಅಲ್ಲಿಂದ ಕಾಸರಗೋಡು. ಸಂಜೆ ಮರಳಿ ಮಂಗಳೂರು. ಹೋದಲ್ಲೆಲ್ಲಾ ಸಹಕಾರ ಸಂಘಗಳ ಆಫೀಸುಗಳಲ್ಲೊ, ಮಂಡಿಗಳಲ್ಲೋ ತಂಗಿದನು. ಸಭೆ ಕೂಡಿಸಿದನು. ಲೆಕ್ಕ ಪತ್ರ ತರಿಸಿದನು. ಎಡೆಬಿಡದೆ ದೆವ್ವ ಹಿಡಿದವನಂತೆ ದುಡಿದನು. ಸೋಮವಾರ ಸಂಜೆ ಮಂಗಳೂರಿಗೆ ತಲುಪುವಾಗ ಜಿಲ್ಲೆಯ ಆಹಾರದ ವಿಚಾರ ಆತನಿಗೆ ಗೊತ್ತಿಲ್ಲದ ವಿಷಯವೇ ಇರಲಿಲ್ಲವೆನ್ನಬಹುದು.

ಅಂದು ಸಾಯಂಕಾಲ ಮದ್ರಾಸಿನಿಂದ ಮೈಲುಗಾಡಿ ಬರುವ ವೇಳೆಗೆ ಮಂಗಳೂರಿನ ಸ್ಟೇಶನ್ ಪ್ಲಾಟುಫಾರ್ಮಿನಲ್ಲಿ ವಿಶೇಷ ಗಲಿಬಿಲಿ. ರೈಲು ಬರುವ ಒಂದು ಗಂಟೆಗೆ ಮುಂಚಿತವಾಗಿಯೇ ಹಾಜರಾಗಿದ್ದ ಸರಕಾರಿ ಅಧಿಕಾರಗಳ ದಲಾಯಿತರು, ದಫೇದಾರರು ಹಲವಾರು ದವಾಲೆ ಹಾಕಿಕೊಂಡು ಠೀವಿಯಿಂದ ಸ್ಟೇಶನು ತುಂಬ ಓಡಾಡುತ್ತ ರೈಲ್ವೆ ಇಲಾಖೆಯ ಕೀಳು ನೌಕರರ ಎದುರಿಗೆ ಮೆರೆಯುತ್ತಿದ್ದರು. ಇನ್ನು ಕೆಲವರು ಹೊರಗಡೆ ಜಗಲಿಯ ಮೇಲೆ ತಂಡ ತಂಡವಾಗಿ ಕುಕ್ಕರಿಸಿ ತಮ್ಮ ಧಣಿಗಳ ಕಾರುಗಳ ಆಗಮನವನ್ನು ನಿರೀಕ್ಷಿಸುತ್ತ ಒಂದೇ ಒಂದು ಕಾಗೆಯನ್ನಾಗಲಿ ನಾಯಿಯನ್ನಾಗಲಿ ಹತ್ತಿರ ಬರಲು ಬಿಡುತ್ತಿರಲಿಲ್ಲ.

ಸಮಯ ಸಮೀಪಿಸಿದ ಹಾಗೆಲ್ಲ ಒಬ್ಬೊಬ್ಬರೇ ಜಿಲ್ಲಾಧಿಕಾರಿಗಳು ಚಿತ್ಐಸಿದರು. ಕಮಿಶನರು ಪತ್ನಿಸಮೇತರಾಗಿ ಬರುತ್ತಾರೆಂತ ವರ್ತಮಾನವಿದ್ದುದರಿಂದ ದೊಡ್ಡದೊಡ್ಡವರೆಲ್ಲ ಸಪತ್ನಿಯರಾಗಿಯೇ ಬಂದಿದ್ದರು. ಕಲಾಬತು ಅಂಚಿನ ರಾಜನೀಲಿ ರೇಶ್ಮೆ ಸೀರೆಯನ್ನುಟ್ಟು ಸುಶೀಲಮ್ಮನೂ ಬಂದಿದ್ದರು. ಬಂಡಿ ಬರುವುದಕ್ಕೆ ಒಂದು ನಿಮಿಷಕ್ಕೆ ಮೊದಲು ಜಿಲ್ಲಾ ಕಲೆಕ್ಟರೂ ಅವರ ದೊರೆಸಾನಿಯೂ ಬಂದರು. ಒಂದು ತಾಸಿನ ಮುಂಚೆ ನಿರ್ಜನ – ನಿರ್ಜೀವವಾಗಿದ್ದ ಪ್ಲಾಟುಫಾರ್ಮು ಸ್ವಲ್ಪ ಸಮಯದೊಳಗೆ ಪುರ ಪ್ರಮುಖರ ಪ್ರದರ್ಶನ ಕೇಂದ್ರವಾಗಿಬಿಟ್ಟಿತು.

ಜಿಲ್ಲಾ ಕಲ್ಲೆಕ್ಟರು, ಅವರ ಪರ್ಸನಲ್ ಅಸ್ಟಿಸ್ಟೆಂಟರು, ಅಸಿಸ್ಟೆಂಟು ಕಲೆಕ್ಟರು, ಡಿಪ್ಯುಟಿ ರಿಜಿಸ್ಟ್ರಾರು, ಸಬ್ ಡಿಪ್ಯೂಟಿ ರಿಜಿಸ್ಟ್ರಾರು ಹಲವರು, ತಹಸೀಲ್ದಾರರೂ ಅವರ ಗಣಗಳೂ, ಸಹಕಾರಿ ಸೆಂಟ್ರಲ್ ಸ್ಟೋರ್ಸಿನ ಅಧ್ಯಕ್ಷರು, ಸಪ್ಲೈ ಆಫೀಸರು, ಇವರೇ ಮೊದಲಾದ ಉನ್ನತಾಧಿಕಾರಿಗಳೂ ಅವರ ಕೈಕೆಳಗಿನವರೂ ಅಲ್ಲದೆ ಬೆಂಡೋಲೆಯಷ್ಟು ಗಾತ್ರದ ವಜ್ರದ ಗುಂಡಿಗಳಿಂದ ರೇಷ್ಮೆ ಜುಬ್ಬದ ಹೊದಿಕೆಯಿದ್ದ ಡೊಳ್ಳು ಹೊಟ್ಟೆಯ ವರ್ತಕ ಸಂಘದ ಅಧ್ಯಕ್ಷರೂ, ಆರಿಂಚು ಎತ್ತರದ ಗಾಂಧಿಟೋಪಿಯ ಕಾಂಗ್ರೆಸು ಮುಖಂಡರೂ ಲುಂಗಿಯ ಮೇಲೆ ಮೊಳಕಾಲುದ್ದ ಜುಬ್ಬಹಾಕಿ ಅದರ ಮೇಲೆ ನಶ್ಯ ಬಣ್ಣದ ವೆಸ್ಟುಕೋಟು ತೊಟ್ಟಿದ್ದ ಕಮ್ಯುನಿಷ್ಟ ಕಾಮ್ರೇಡರೂ, ವರ್ಷಕ್ಕೆ ಸುಮಾರು ಇಪ್ಪತ್ತು ಸಹಸ್ರ ರೂಪಾಯಿ ಕಂದಾಯ ತೆರುವ ಹಿರಿಮೆಯಿಂದ ಕತ್ತು ಜಗ್ಗಿಹೋದ ಭೂಮಾಲಿಕರ ಪ್ರೆಸಿಡೆಂಟರು ಅಪ್ಪಾಭಟ್ಟರೂ ನೆರೆದಿದ್ದರು. ಅಪ್ಪಾಭಟ್ಟರು ಇಂಥ ಸಂಭ್ರಮಗಳಿಗಾಗಿಯೇ ಮೀಸಲಾಗಿ ಹೊಲಿಸಿದ್ದ ಕರೆ ಅಲ್ಪಾಕ ಕೋಟನ್ನು ಹಾಕಿ, ಅದರ ಮೇಲೆ ಜರಿತಾರಿನ ರೇಷ್ಮೆ ಶಾಲನ್ನು ಕೊರಳಿನ ಇಬ್ಬದಿಯನ್ನೂ ದರ್ಜಿಯ ಲಾಡಿಯಂತೆ ಇಳಿಬಿಟ್ಟು ಕಲಾಬತಿನ ರುಮಾಲನ್ನು ಸುತ್ತಿಕೊಂಡಿದ್ದರು. ಜತೆಗೆ ಬಂದಿದ್ದ ಅವರ ಹೆಂಡತಿ ಸಮಯೋಚಿತವಾಗಿ ಭಾರಿ ಸೀರೆಯನ್ನುಟ್ಟು ಅರೆನೆರೆತ ಕೂದಲನ್ನು ತಲೆ ಹಿಂದುಗಡೆ ಬಿಗುವಾಗಿ ತುರುಬುಹಾಕಿ ಅದರ ಮೇಲೆ ಅಂಗೈಯಷ್ಟು ದೊಡ್ಡ ಚಿನ್ನದ ಗುಲಾಬಿ ಹೂವನ್ನು ಕುಕ್ಕಿಕೊಂಡಿದ್ದರು. ಅವರು ತಮ್ಮ ಹಳ್ಳಿಯಿಂದ ಬಂದುದು ಮತ್ಯಾವುದಕ್ಕೂ ಅಲ್ಲ. ಕಮಿಶನರ ದೊರೆಸಾನಿಯನ್ನ ಕಂಡು ನಾಲ್ಕು ಮಾತನಾಡಿಬಿಡಬೇಕೆಂಬ ಒಂದೇ ಚಪಲಕ್ಕಾಗಿ. ಒಂದೆರಡು ದೊರೆಗಳನ್ನು ಎಲ್ಲೋ ನೋಡಿದ್ದು ನೆನಪಿತ್ತು. ಆದರೆ ದೊರೆಸಾನಿಗಳನ್ನು ನೋಡಿರಲಿಲ್ಲ. ಸೇರುಕಟ್ಟಳೆ ಚಿನ್ನಾಭರಣಗಳಿಂದಲಂಕೃತರಾಗಿ ವೃದ್ಧ ವರಲಕ್ಷ್ಮಿಯಂತಿದ್ದರು.

ಈ ದಿಬ್ಬಣಿಗರ ಗಡಿಬಿಡಿಯಲ್ಲಿ ರೈಲು ಬರುವ ಸ್ವಲ್ಪ ಮುಂಚೆ ಸ್ಟೇಷನಿಂದ ಒಳಹೊಕ್ಕ ಗೋಪಿನಾಥನನ್ನು ಯಾರೂ ಗಮನಿಸಲಿಲ್ಲ. ಆತನಿಗೂ ಅಷ್ಟೇ ಬೇಕಾದ್ದು. ತಮಾಷೆ ನೋಡಲು ಬರುವವರಂತೆ ಒಂದು ಧೋತ್ರ, ಅದರ ಮೇಲೊಂದು ಜುಬ್ಬವನ್ನಷ್ಟೇ ಹಾಕಿಕೊಂಡಿದ್ದನು. ಬಂದವನು ಹಿಗಿನ್ ಬಾತೆಮ್ಸಿನ ಪುಸ್ತಕ ಮಾರುವವನೊಂದಿಗೆ ಮಾತನಾಡುತ್ತ ನಗುತ್ತ ನಿಂತಿದ್ದನು.

ಬಿರುಗಾಳಿ ಅಟ್ಟಿಕೊಂಡು ಬಂದ ದನಕರುಗಳಂತೆ ರೇಲ್ವೆ ನೌಕರರು ಜೆಲ್ಲಾಪಿಲ್ಲಿಯಾಗಿ ಅತ್ತಿತ್ತ ಓಡಾಡಲಾರಂಭಿಸಿದರು. ಬಹುದೂರದಿಂದ ‘ಕೋ’ ಅಂತ ಕೀಚುಸ್ವರ ಕೂಗಿತು. ಕಣ್ಣುಮುಚ್ಚಾಲೆ ಆಡುವ ಮಕ್ಕಳಂತೆ. ಮರುಕ್ಷಣ ರೈಲು ಕಾಣಬಂತು. ಹೊಗೆ ಕಾರುತ್ತ, ಗರ್ಜಿಸುತ್ತ, ನೆಲನಡುಗಿ ಸುತ್ತ ನೋಡುತ್ತಿದ್ದ ಹಾಗೇ ಬಂದೇಬಿಟ್ಟಿತು. ಮಹಾ ಕಾರ್ಕೋಟಕದಂತೆ. ಸ್ಟೇಶನ್ನಿನಲ್ಲಿ ನಿಲ್ಲುವದಿಲ್ಲವೋ ಎನ್ನುವಷ್ಟು ರಭಸದಿಂದ ಬಂತು. ಕಟಕಟ, ತಟತಟ ಅಂತ ಹಲವುಗಾಡಿಗಳು ಮಿಂಚಿಹೋದವು. ಫಕ್ಕನೆ ಪ್ಲಾಟು ಫಾರ್ಮಿಗೆ ಅಡ್ಡನಾಗಿ ಉದ್ದಕ್ಕೂ ನಿಂತುಬಿಟ್ಟಿತು. ಸಾಲುಸಾಲಾಗಿ ನಿಂತಿದ್ದ ಸ್ವಾಗತಕೂಟದವರು ಒಂದನೇ ತರಗತಿಯ ಗಾಡಿಯಿದ್ದಲ್ಲಿಗೆ ಹೋಗಿ ಮುತ್ತಿದರು. ಕಲೆಕ್ಟರ ಹೆಂಡತಿ ವಿನಹ ಮಿಕ್ಕ ಹೆಂಗಸರೆಲ್ಲ ಲೇಡೀಸ್ ವೈಟಿಂಗ್ ರೂಮಿನಲ್ಲಿದ್ದರು. ಗೋಪಿನಾಥ ನಿಂತಲ್ಲೇ ಎದುರು ಒಂದು ಫಸ್ಟ್ ಕ್ಲಾಸ್ ಗಾಡಿಯಿಂದ ಬಾಗಿಲನ್ನು ತೆರೆದು ಮಾಲತಿ ಕೆಳಕ್ಕೆ ಹಾರಿದಳು. ಆಕೆಯ ಬೆನ್ನಿಗೆ ನಗುತ್ತಿದ್ದ ಕಮಿಶನರ ಹೆಂಡತಿಯೂ ಇದ್ದರು. ಪಕ್ಕದ ಕಂಪಾರ್ಟುಮೆಂಟಿನಿಂದ ಕಮಿಶನರೂ ಅವರ ನಂತರ ರಾಘವೇಂದ್ರರಾಯರೂ ಹೊರಗೆ ಬಂದರು. ಅಲ್ಲಿ ಸಭೆಸೇರಿದ್ದವರ ಪರಿಚಯ ಮಾಡಿಸಿಕೊಡುವ ಕೆಲಸ ರಾಘವೇಂದ್ರರಾಯರು ನಿರ್ವಹಿಸಿದರು. ಕಲೆಕ್ಟರ ಹೆಂಡತಿ ಕಮಿಶನರ ಹೆಂಡತಿ ಹತ್ರ ಮಾತನಾಡುತ್ತ ಅವರ ಸಂದರ್ಶನಕ್ಕಾಗಿ ಹಲವು ಮಹಿಳೆಯರು ವೈಟಿಂಗ್ ರೂಮಿನಲ್ಲಿ ಕಾದಿರುವರೆಂತ ಹೇಳಿದೊಡನೆ ಅವರು ‘ಮಾಲ್ಲಾತಿ’ ಅಂತ ಮಾಲತಿಯನ್ನು ಕರೆದು ಆಕೆ ಜತೆಯಲ್ಲಿ ವೈಟಿಂಗ್ ರೂಮಿಗೆ ಹೋದರು.

ಕಲೆಕ್ಟರ ದೊರೆಸಾನಿಯ ನಂತರ ಲೇಡಿ ಕಮಿಶನರ ಪರಿಚಯದ ಮಾರ್ಯಾದೆ ತನಗೇನೇ ಸಲ್ಲತಕ್ಕದ್ದೆಂತ ಹೆಮ್ಮೆಪಟ್ಟು ಸುಶೀಲಮ್ಮ ಮುಂದೊತ್ತಿ ಬಂದರು. ಆದರೆ ಮಾಲತಿ ಅವರನ್ನು ನೋಡದ ಹಾಗೆ ನಟಿಸಿ ಮಿಕ್ಕವರೆಲ್ಲರ ಪರಿಚಯ ಮಾಡಿಸಿದ ನಂತರವೇ ಅವರಿಗೆ ಆಗಂತುಕರ ಕೈಕುಲುಕಿಸುವ ಭಾಗ್ಯ ಒದಗಿಸಿಕೊಟ್ಟಳು. ಅಪ್ಪಾಭಟ್ಟರ ಹೆಂಡತಿಯನ್ನು ನೋಡಿ ಕಮಿಶನರರ ಹೆಂಡತಿಗೆ ಸುಖ ಸಂತೋಷವಾಯಿತು.

“Tell the old lady I am delighted to see her” ಅಂದರು ಮಾಲತಿಗೆ. ಮಾಲತಿ ಈ ಸಂಭಾಷಣೆಯನ್ನು ಒಪ್ಪಿಸಿದಳು. ಈ ಉತ್ತೇಜನದಿಂದ ಭಟ್ಟರ ಹೆಂಡತಿಗೆ ಕೇಳಬೇಕೆಂದಿದ್ದ ಪ್ರಶ್ನೆಗಳ ಪಟ್ಟಿಯನ್ನು ಹೊರತೆಗೆಯುವ ಧೈರ್ಯ ಬಂತು.
“ಇವಳಿಗೆ ವಯಸ್ಸೆಷ್ಟು?’’ ಎಂದು ಕಣ್ಸನ್ನೆ ಮಾಡುತ್ತ ಮಾಲತಿ ಹತ್ರ ಕೇಳಿದರು. ಮಾಲತಿ ಕಿಂಚಿತ್ತಾದರೂ ಚಮಕಿತಳಾಗದೆ, “ನೀವಿಲ್ಲಿ ಎಷ್ಟು ದಿನ ಇದ್ದಿರೀಂತ ಕೇಳ್ತಾರೆ” ಅಂದಳು.

“Oh! only a couple of days. I’am afraid” ಅಂದರು ಕಮೀಶನರ ಹೆಂಡತಿ.
“ಮೂವತ್ತೆರಡು ವರ್ಷ” ಅಂತ ಭಟ್ಟರ ಹೆಂಡತಿಗೆ ದಾಟಿಸಿದಳು.
“ಮಕ್ಕಳೆಷ್ಟಂತೆ?’’
“ಇನ್ನೆರಡು ದಿನಗಳಾದ್ರೂ ಇದ್ರೆ ಚೆನ್ನಾಗಿತ್ತೂಂತಾರೆ.’’

“I should have loved to. But we have our program cut out.”

“ಎರಡು ಗಂಡು. ಒಂದು ಹೆಣ್ಣು. ಇಬ್ಬರು ವಿಲಾಯತಿಯಲ್ಲಿ, ಕೊನೆಯವಳು ಮದ್ರಾಸಿನಲ್ಲಿ.’’

“ಅವಳ ಗಂಡಗೆ ಪ್ರಾಯ, ಸಂಬಳ? ಇವಳು ಎರಡನೆಯ ಸಂಬಂಧವೋ? ವಿಲಾಯತಿಯ ಹೆಂಗಸರು ಮುಟ್ಟಾದರೆ ಹೊರಗೆ ಕೂತುಕೊಳ್ಳುತ್ತಾರೋ ಇಲ್ಲವೋ?’’ ಇಂಥ ಸವಾಲುಗಳನ್ನು ರೂಪಾಂತರಗೊಳಿಸಿ ಕೇಳಿ ಬಂದ ಜವಾಬುಗಳನ್ನು ಬದಲಿಸಿ ಹೇಳುತ್ತಿದ್ದ ಮಾಲತಿಗೆ ಪ್ರಾಣಕ್ಕೆ ಬಂತು. ಆದರೂ ಸ್ವಲ್ಪವೂ ಹಿಂದೆಗೆಯದೆ ಚಮತ್ಕಾರದಿಂದ ನಿಭಾಯಿಸಿದಳು. ಬೆರಗಾಗಿ ನೋಡುತ್ತಿದ್ದ ಮಿಕ್ಕ ಮಾನಿನಿಯರ ಮಾನವನ್ನು ಕಾಪಾಡಿದಳು.

ಈ ಪ್ರಹಸನ ಮುಗಿದ ಮೇಲೆ ಕಮಿಶನರರ ಹೆಂಡತಿ ಭಟ್ಟರ ಹೆಂಡತಿಯ ಕಡೆಗೆ ಕೈ ನೀಡಿದರು. ಆದರೆ ಅವರು ಹಿಂಜರಿದು ಕೈ ಜೋಡಿಸಿ ನಮಸ್ಕರಿಸಿದರು. “ಯಾವ ಮೈಲಿಗೆಯೋ ಏನೋ! ನಾನವಳನ್ನು ಮುಟ್ಟುವದಿಲ್ಲಾಂತ ಹೇಳಿಬಿಡು” ಅಂತ ಮಾಲತಿಗೆ ಹೇಳಿದರು.

“ನಮ್ಮ ದೇಶದ ಪದ್ಧತಿಯಂತೆ ವಂದಿಸುತ್ತಿದ್ದಾರೆ” ಅಂದಳು ಮಾಲತಿ. ಅದಕ್ಕೆ ಕಮಿಶನರ ಹೆಂಡತಿ ನಗುತ್ತ ತಾನೂ ಪರಿಷ್ಕಾರವಾಗಿ ಕೈಜೋಡಿಸಿ ನಮಸ್ಕರಿಸಿ ಎಲ್ಲರಿಗೂ ವಂದಿಸಿ ಹೊರಗೆ ಹೋದರು.

ತನ್ನಷ್ಟಕ್ಕೆ ತಾನು ನಿಲುಗಡೆಯಲ್ಲಿ ಅಡ್ಡಾಡುತ್ತಿದ್ದ ಅಧಿಕಾರಿಗಳ ಅಟ್ಟಹಾಸವನ್ನು ನೋಡುತ್ತಿದ್ದ ಗೋಪಿನಾಥನಿಗೆ ಮಾಲತಿಯು ಕೇವಲ ಅಪರಿಚಿತರೊಂದಿಗೆ ಬೆರತು ಅವರ ಬೆಡಗಾಟಕ್ಕೆ ತಾನೂ ಹಿಗ್ಗಿ ಹಾರುವುದು ಆಶ್ಚರ್ಯಕರವಾಗಿತ್ತು. ಈ ಮಾಟಗಾರ್ತಿಗೆ ಯಾವ ವೇಷ ಹಾಕಿದರೂ ಒಪ್ಪುತ್ತದಲ್ಲ! ಈ ಜನಮೆಚ್ಚಿನ ಮರುಳು ಈಕೆಯ ಹುಟ್ಟುಗುಣವಾಗಿರಬಹುದೇ? ಅಥವಾ ಪ್ರಸಂಗಕ್ಕೆ ಹಾಕಿಕೊಂಡ ಬಣ್ಣವೇ? ಅಥವಾ ಗಂಡನ ಸಂಸರ್ಗ ದೋಷವೆ? ರಾಘವೇಂದ್ರರಾಯರಿಗಂತೂ ಇತ್ತಲಾಗಿನ ಅಕ್ಕಲೇ ಇರಲಿಲ್ಲ. ಅದನ್ನು ನೋಡುತ್ತ ಗೋಪಿನಾಥನಿಗೆ “ಇದೇನು ಹುಲಿಕುಣಿತ! ಕಮಿಶನರರ ಬಾಲಹಿಡಿದು ಹೀಗೂ ಒದ್ದಾಡಬೇಕೇ? ಮಹಾರಾಯ! ಡೌಲು ದೇವೇಂದ್ರಂದು, ಬುದ್ಧಿ ದಫೇದಾರಂದು.” ಎಂದನಿಸಿತು.

ಅಷ್ಟರಲ್ಲಿ ಆತನಿದ್ದಲ್ಲಿಗೆ ಡಿಪ್ಯೂಟಿ ರಿಜಿಸ್ತ್ರಾರವರು ದುಡುದುಡು ಓಡಿ ಬಂದರು. ಗೋಪಿನಾಥ್ ರಾವ್ ನಿಮ್ಮನ್ನಾಗಲೇ ನೋಡಿದೆ. ನೀವು ಎದುರು ಬೀಳದೆ ಇದ್ದುದೇ ಅನುಕೂಲವಾಯಿತು. ಇಂದು ರಾತ್ರೆಯೇ ಎಂಟು ಗಂಟೆಗೆ ನಿಮ್ಮ ಇಂಟರ್ವ್ಯೂ ನಿರ್ಣಯವಾಗಿದೆ, ಅವರ ಬಂಗ್ಲೇಲಿ. ಈ ವಿಷಯ ನನಗೆ ಮಾತ್ರ ಗೊತ್ತು. ಕಲ್ಲೆಕ್ಟ್ರಿಗೂ ಗೊತ್ತಿಲ್ಲ. ಮುಂದಿನ ಕೆಲಸ ನಿಮ್ಮ ಕೈಲಿ; ಏನು?’’ ಅನ್ನುತ್ತ ಆತನ ಕೈ ಹಿಡಿದು ಕುಲುಕಿಸಿ ದುಡುದುಡು ಹೋಗಿಬಿಟ್ಟರು. ಅಷ್ಟರಲ್ಲಿ ಕಮಿಶನರರ ದಿಬ್ಬಣವೆಲ್ಲ ಹೊರಗೆ ಸರಿದು ಪ್ಲಾಟುಫಾರ್ಮು ಬರಿದಾಗುತ್ತ ಬಂದಿತ್ತು. ಗೋಪಿನಾಥ ನಿಧಾನವಾಗಿ ಹೊರಗೆ ಹೋದನು. ಅಧಿಕಾರಿಗಳ ಪರಿವಾರವೂ ಕಾರುಗಳೂ ಹೋಗಿಬಿಟ್ಟು ವರ್ತಕ ಸಂಘದ ಅಧ್ಯಕ್ಷರದು, ಕಾಂಗ್ರೇಸ್ ಮುಖಂಡರದು ಎರಡೇ ಕಾರುಗಳಿದ್ದವು. ದೂರದಲ್ಲಿ ಒಂದು ಬಿಡಿ ಜಟಕವೂ ಇತ್ತು. ಸ್ಟೇಶನಿನ ಮುಖಮಂಟಪದ ಒಂದೆಡೆ ಎರಡು ಸೂಟು ಕೇಸುಗಳು. ಒಂದು ಹೋಲ್ಡಾಲು ಇವುಗಳನ್ನು ಕಾದುಕೊಂಡು ಕೈಯಲ್ಲಿ ಪತ್ರಿಕೆಗಳ ಕಟ್ಟೊಂದನ್ನು ಹಿಡಿದುಕೊಂಡು ಮಾಲತಿಯೊಬ್ಬಳೇ ನಿಂತಿದ್ದಳು, ಖಿನ್ನ ಮನಸ್ಕಳಾಗಿ. ಗೋಪಿನಾಥನು ಆಕೆಯನ್ನು ಮಾತನಾಡಿಸುವುದರೊಳಗಾಗಿ ನಿಂತಿದ್ದ ಒಂದು ಕಾರಿನ ಮರೆಯಿಂದ ರಾಘವೇಂದ್ರರಾಯರು ಧಾವಿಸಿ ಬಂದು ಆತನನ್ನು ಕಂಡು,

“ಲೋ, ಗೋಪಿನಾಥ? ಬರುವಾಗ ಲೇಟಾಯಿತೇ?’’ ಎಂದರು. ಆಚೆಗೆ ನೋಡುತ್ತಿದ್ದ ಮಾಲತಿ ತಬ್ಬಿಬ್ಬಾಗಿ ತಿರುಗಿ ನೋಡಿದಳು.

“ಆಗಲೇ ಬಂದಿದ್ದೆ. ಬುಕ್ ಸ್ಟಾಲ್ ಪಕ್ಕದಲ್ಲಿದ್ದೆ.”

“ಅಲ್ಲಾಂದ್ರೆ ನನಗೆ ಹೇಳಬಾರದಿತ್ತೇನೊ? ಕಮಿಶನರಿಗೆ ಇಂಟ್ರೊಡ್ಯೂಸ್ ಮಾಡಿಸುತ್ತಿದ್ದೆನಲ್ಲಾ?”

“ಪರವಾಯಿಲ್ಲ. ಈ ಪೋಲಿಡ್ರೆಸ್ಸು ನೋಡಿ ಏನು ತಿಳಿಕೋತಿದ್ರೊ!”

“ತುಂಬಾ ಯೋಗ್ಯರು. ಅವರ ಮಿಸೆಸ್ಸೂ ಹಾಗೇನೇ. ಮಾಲತಿಗೆ ಗೊತ್ತು. ಅಲ್ವೇನೇ” ಎಂದು ಹಿಗ್ಗುತ್ತ ಹೆಂಡತಿಯನ್ನು ನೋಡಿದರು. ಆಕೆ ಸುಮ್ಮಗಿದ್ದಳು. ಆಕೆಯ ಮುಖ ಭಾವರಹಿತವಾಗಿತ್ತು.

“ಈಗ ನೀನು ಮನೆಗೆ ತಾನೇ ಹೋಗೋದು? ಅಥವಾ ಬೇರೆಲ್ಲಿಗಾದರೂ ತಿರುಗಾಟಕ್ಕೆ…”

“ಇಲ್ಲ. ನನಗೇನೂ ಕೆಲಸವಿಲ್ಲ. ಏನಾಗಬೇಕು, ಹೇಳು.”

“ಒಂದು ಕೆಲಸಮಾಡು. ಮಾಲತಿ ಒಬ್ಬಳೇ ಆಗಿದ್ದಾಳೆ. ಸಾಮಾನು ಬೇರೆ ಇದೆ. ನನಗೀಗ ಜರೂರು ಕೆಲಸವಿದೆ. ಬರೋದಕ್ಕಾಗೋದಿಲ್ಲ. ನೀನವಳನ್ನು ಮನೆಗೆ ತಲಪಿಸಿಬಿಟ್ಟು ಹೋಗು..”

******

ಆಹಾರ ಕಮಿಶನರಲ್ಲಿಗೆ ಗೋಪಿನಾಥನು ಹೋದ ನಿಯೋಗವು ತೀರಾ ಫಲಕಾರಿಯಾಗುವಂತಿತ್ತು. ಅವನೂ ಅವನ ಅನುಯಾಯಿಗಳೂ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಕಾರ್ಯಸಿದ್ಧಿಯಾಗುವ ಸಂಭವವಿತ್ತು. ಎರಡು ಗಂಟೆ ಸಮಯ ಕಮಿಶನರರಿಗೂ ಗೋಪಿನಾಥನಿಗೂ ಕೂಲಂಕಷ ಚರ್ಚೆ ನಡೆಯಿತು. ಸರಕಾರದ ಮೇಲಧಿಕಾರಿಗಳು ಹಲವರ ಅಸಡ್ಡೆ, ಅಜಾಗರೂಕತೆ, ಲಂಚಕೋರತನ, ವರ್ತಕರನೇಕರ ಕಟುಕತನ, ಕಪಟ, ಲೋಭ, ಅವರ ಕಳ್ಳಸಂತೆಗೆ ಪರಜನರಿಂದಲೂ ಸರಕಾರದಿಂದಲೂ ಒದಗುವ ಒಳಸಂಚಿನ ಬೆಂಬಲ; ಕಾಂಗ್ರೆಸ್ಸಿನ ರಾಜಕೀಯ ವೇಷದಿಂದ ಪುರಜನರನ್ನು ವರ್ತಕರು ವಂಚಿಸುವ ವಿಧಾನ; ಜಿಲ್ಲೆಗೆ ಈ ಹಿತಶತ್ರುಗಳಿಂದುಂಟಾದ ದುರ್ಭಿಕ್ಷೆ, ಯಾವುದನ್ನೂ ಮರೆಮಾಚದೆ, ದಾಕ್ಷಿಣ್ಯವಿಲ್ಲದೆ ಅಂಕೆ ಸಂಖ್ಯೆ ವಸ್ತುಸ್ಥಿತಿಗಳನ್ನು ಸವಿಸ್ತಾರವಾಗಿ ಗೋಪಿನಾಥನು ವಿಶದೀಕರಿಸಿದನು.

ಕಮಿಶನರು ಮೊದಮೊದಲು ಈತ ಯಾವುದೋ ಒಂದು ಸಮಿತಿಯ ಪರವಾಗಿ ಬಂದಿರಬೇಕು; ತನ್ನ ಪಕ್ಷವನ್ನು ಪ್ರತಿಪಾದಿಸುತ್ತಿದ್ದಾನೆ, ಮರ್ಯಾದೆಯಿಂದ ಮೆತ್ತಗೆ ಮಾತನಾಡಿ ಕಳುಹಿಸಿಕೊಟ್ಟರಾಯಿತು ಎಂದು ತಿಳಿದಿದ್ದರು. ಆದರೆ ಒಂದೊಂದಾಗಿ ಗಣನೀಯ ವಿಚಾರಗಳನ್ನು ಕೇಳುತ್ತ ಆರಾಮವಾಗಿ ಕುಳಿತಿದ್ದವರು ಎದ್ದು ಕುಳಿತರು. ಕೊಠಡಿಯ ಬಾಗಿಲು ಮುಚ್ಚಿಕೊಂಡರು. ಪೈಪ್ ಸೇದಬಹುದಷ್ಟೇ ಎಂದು ಹೇಳುತ್ತ ತಂಬಾಕಿನ ನಳಿಕೆಯನ್ನು ಹೊತ್ತಿಸಿದರು. ಸರಕಾರವನ್ನು ದೂಷಿಸಿದಾಗ ರೇಗಿದರು. ಎಗರಿಬಿದ್ದರು. ಅವರು ರೋಷಾವೇಶವನ್ನು ತಾಳಿದಂತೆಲ್ಲಾ ಗೋಪಿನಾಥನು ಇನ್ನಷ್ಟು ನಮ್ರತೆಯಿಂದಲೂ ಆತುರದಿಂದಲೂ ನಿರ್ಭೀತಿಯಿಂದಲೂ ಕಲ್ಲು ಮನಸ್ಸು ಕೂಡ ಕರಗುವ ರೀತಿ ಊರ ಜನರ ದಾರುಣ ಪರಿಸ್ಥಿತಿಯನ್ನು ನಿರೂಪಿಸಿದನು. ಕ್ರಮೇಣ ಒಂದೊಂದಾಗಿ ವಿಷಯಗಳು ಕಮಿಶನರ ಮನಸ್ಸಿಗಿಳಿದು ನಾಟಿದವು. ಅವರಿಗೆ ಆಶ್ಚರ್ಯವಾಯಿತು; ವ್ಯಥೆಯಾಯಿತು. ಗೋಪಿನಾಥ ಮುಗಿಸಿ ಹೊರಟಾಗ ಅವರು ಪುನಃಪೂರ್ವಕವಾಗಿ ಕೃತಜ್ಞತೆ ಗೌರವಗಳಿಂದ ಆತನನ್ನು ಅಭಿನಂದಿಸಿ, ಅವನ ಶ್ರೇಯಸ್ಕರವಾದ ಕಾರ್ಯಕ್ಕೆ ತಮ್ಮ ಪರಿಪೂರ್ಣ ಬೆಂಬಲವನ್ನು ವಾಗ್ದಾನ ಮಾಡಿ, ಶಾಂತಿ ಸುಭಿಕ್ಷೆ ನೆಲೆಸುವಂತೆ ತಾವು ಕೈಕೊಂಡ ಯತ್ನದಲ್ಲಿ ನೆರವಾಗಬೇಕೆಂದು ಆತನಲ್ಲಿ ಹೇಳಿ, ಕೊನೆಗೆ “ನೀವೂ ನನ್ನಂತೆ ತಂಬಾಕು ಸೇವಕನಾಗಬೇಕು. ದೇವರು ದಯಪಾಲಿಸಿದ ಅತ್ಯುತ್ತಮ ವಸ್ತುಗಳಲ್ಲಿ ತಂಬಾಕಿಗೆ ಪ್ರಥಮ ಸ್ಥಾನವಿದೆ” ಎಂದನ್ನುತ್ತ ನಕ್ಕು ಬೀಳ್ಕೊಟ್ಟರು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಹೋಗುವ ಮುನ್ನ ಒಮ್ಮೆಯಾದರೂ ಮಾಲತಿಯನ್ನು ನೋಡುವ ಹಾರೈಕೆ. ತಾಯಿಗೆ ತಿಳಿಸಲು ಹೋಗಿ ನೋಡುವಾಗ ಇಂದಿರಮ್ಮ ಅವರ ಕೋಣೆಯಲ್ಲಿರಲಿಲ್ಲ. ತೀರ ವಾಸಿಯಾಗುವಷ್ಟರಲ್ಲಿ ಹೀಗೂ ಮಾಡುತ್ತಾಳಲ್ಲ ಎಂದು ಚಿಂತಿಸುತ್ತ ಬರುವಾಗ ಅವರೇ ಬಂದರು. ಒಳಗಿಂದ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಅವರ ಬಲಗೈ ಬೆರಳೊಂದನ್ನು ಹಿಡಿದು ಮೊಮ್ಮಗಳು ನಡೆಸಿಕೊಂಡು ಬರುತ್ತಿದ್ದಳು.

ತಾನು ಸುರು ಮಾಡಿದ ಕೆಲಸವು ಇಷ್ಟೊಂದು ಸುಗಮವಾಗಿ ಸಾಗಬಹುದೆಂದು ಗೋಪಿನಾಥನು ಕನಸಿನಲ್ಲೂ ನಿರೀಕ್ಷಿಸಿಲಿಲ್ಲ. ಗ್ರಾಮದ ಶ್ಯಾನುಭೋಗರಿಂದ ಪ್ರಾರಂಭವಾಗಿ ಜಿಲ್ಲಾ ಕಲೆಕ್ಟರವರವರೆಗೂ ಅಧಿಕಾರಿಗಳು ಎಬ್ಬಿಸಿದ ಧೂಳಿನಿಂದ ಮುಚ್ಚಲ್ಪಟ್ಟ ಕಮಿಶನರ ಕಣ್ಣುಗಳನ್ನು ತೆರೆದು ತೊಳೆದು ಜನತಾ ಕಾರುಣ್ಯವನ್ನು ತುಂಬಿಸಿ ಅವರ ಸಹಾನುಭೂತಿಯನ್ನು ಗಳಿಸುವಷ್ಟು ಕಾರ್ಯದಕ್ಷತೆ ತನ್ನಲ್ಲಿದೆಯೆಂದು ಆತ ತಿಳಿದಿರಲಿಲ್ಲ. ತಿಳಿಯಲು ಸಂದರ್ಭ ಒದಗಿರಲಿಲ್ಲ. ಶಕ್ತಿಮೀರಿ ದುಡಿಯುವ ಅಗತ್ಯವೇನು? ಯಾರಿಗಾಗಿ? ಏಕಾಂಗಿಯಾದ ಗಂಡಸಿನ ಒಣ ಜೀವನದಲ್ಲಿ ಕಾರ್ಯಕುತೂಹಲವೆಲ್ಲಿಂದ? ಕೈಗೆ ಬಂದುದನ್ನು ಶಿಸ್ತಿನಿಂದ ಪರಿಷ್ಕಾರವಾಗಿ ನಿರ್ವಹಿಸುತ್ತಿದ್ದನೇನೋ ನಿಜ. ಆದರೆ ಅದರಿಂದ ಬಿಡುಗಡೆಯೂ ಇತ್ತು, ಬಂಧನವೂ ಇತ್ತು. ಬದುಕಿನಲ್ಲಿ ಬೇಸರದಿಂದ ಬಿಡುಗಡೆ, ಮಾಡದೆ ಗತ್ಯಂತರವಿಲ್ಲದ್ದರಿಂದ ಬಂಧನ. ಆತನ ಹೃದಯ ತಳದಲ್ಲಿ ಮನಮೆಚ್ಚಿನ ಚೆಲುವೆಯೊಬ್ಬನ್ನೊಲಿಸಿ ಅವಳ ಒಲುಮೆಯ ಒಡನಾಟದಿಂದ ಜನ್ಮವನ್ನು ಸಫಲಗೊಳಿಸಬೇಕೆಂಬ ಆಸೆಯೊಂದು ಚಿರಶ್ರುತಿಯನ್ನು ಮೀಟುತ್ತಲೇ ಇತ್ತು.

******

ಮರುದಿನ ಗೋಪಿನಾಥ ಬಗೆಬಗೆಯ ಕೆಲಸಗಳಲ್ಲಿ ಮುಳುಗಿದ್ದನು. ಸಂಜೆ ಆರು ಗಂಟೆ ಹೊತ್ತಿಗೆ ಸ್ವಲ್ಪ ವಿಶ್ರಾಂತಿಗಾಗಿ ಕ್ಲಬ್ಬಿಗೆ ಹೋದನು. ವಾಡಿಕೆಯಂತೆ ನಡೆದೇ ಹೋದನು. ಹೋಗುವಾಗ ದಾರಿಯುದ್ದಕ್ಕೂ ಮಾಲತಿಯದೇ ನೆನಸು. ಆಕೆ ಹಂಪನಕಟ್ಟೆ ಕಡೆಗೆ ಬಂದಿದ್ದರೆ, ಅಥವಾ ವಿಹಾರಕ್ಕೆ ಬಾವುಟಗುಡ್ಡಕ್ಕೆಂತ ಬಂದಿದ್ದರೆ, ಕಾಣಸಿಗಬಹುದೆಂಬ ಹಂಬಲ.

ಕ್ಲಬ್ಬಿನಲ್ಲಿ ಎಂದಿನಂತೆ ನಿಬಿಡ ಸಮೂಹ, ವಿಶ್ರಾಂತಿಗಾಗಿ ಉಗ್ರ ಪರಿಶ್ರಮ. ಮನಶ್ಶಾಂತಿಗಾಗಿ ಕೋಲಾಹಲ. ‘ಪೋಲಿ’ ಪಂಗಡದ ಬಯಲಲ್ಲಿ ಮಾತ್ರ ನಿಶ್ಶಬ್ದವಾಗಿತ್ತು. ನರಸಿಂಹ ಕಮ್ತಿಯರು, ಕೃಷ್ಣಯ್ಯ ಇಬ್ಬರೇ ಇದ್ದರು. ಕೃಷ್ಣಯ್ಯ ‘ಪೇಷನ್ಸ್’ ಆಡುತ್ತಿದ್ದರು. ಕಮ್ತಿಯರು ಸಚಿತ್ರ ಮಾಸಿಕ ಪತ್ರಿಕೆಯ ಹಾಳೆಯೊಂದರಲ್ಲಿದ್ದ ಸಿನೆಮಾ ತಾರೆಯೊಬ್ಬಳ ನಿತಂಬವನ್ನು ನೋಡಿ ನೋಡಿ ಸಾಕಾಗದೆ ಹಾಳೆಯನ್ನು ತಿರುವಿ ಅದರಾಚೆ ಏನಿದೆಯೆಂದು ಇಣಿಕಿ ನೋಡುತ್ತಿದ್ದರು. ಗೋಪಿನಾಥನನ್ನು ಕಂಡು ಕೃಷ್ಣಯ್ಯ,

“ಒಳ್ಳೇ ಸಮಯಕ್ಕೆ ಬಂದಿ ಗೋಪಿ, ಕೂತುಕೋ. ನಾಳೆಯಿಂದ ಬಹುಶ ನಮ್ಮ ಕಂಪನಿಯ ಒಂದಿಸಮು ಖಾಲಿಯಾಗುತ್ತೆ” ಎಂದರು. ಕಮ್ತಿಯರು ಕುತೂಹಲದಿಂದ ತಲೆಯೆತ್ತಿ ನೋಡಿದರು. ಗೋಪಿನಾಥ ಕುಳಿತು,

“ಹಾಗಾದರೆ ಇಂದೇ ಅವರ ಲೆಕ್ಕಕ್ಕೆ ಕಾಫಿ ಕುಡಿದುಬಿಡೋಣ” ಅಂದನು.

“ಯಾರಂತ ಮಾಡಿದಿ? ಕಮ್ತೇರು, ಕಣಯ್ಯಾ, ಕಮ್ತೇರು ಮಿಲಿಟರಿಗೆ ಸೇರ್ತಾರೆ.”

“ಹೊಟ್ಟೆ ತುಂಬೋದು ಸುಲಭಾಂತಲೋ?”

“ಹೊಟ್ಟೆ ಯೋಚ್ನೆ ಚಿಕ್ಕಂದಿನಿಂದಲೂ ಅವರಿಗಿಲ್ಲವೇ ಇಲ್ಲ. ಅದು ತಾನಾಗಿ ತುಂಬಿಕೊಳ್ಳುತ್ತೆ, ಹೇಗಾದರೂ ಎಲ್ಲಾದರೂ. ಅವರು ಯುದ್ಧ ಮುಖರಾದ್ದು ಅದಕ್ಕಲ್ಲ. ಅವರ ಕೈಲಿದೆ ನೋಡು, ಚಿತ್ರ, ಇಲ್ಕೊಡ್ರಿ, ಕಮ್ತೇರೆ, ಅದೇ ನೋಡು, ಅಂತಹ ನೂರಾರು ಮಂದಿ ಹುಡುಗಿಯರನ್ನು ಸೈನಿಕರ ಮನೋರಂಜನೆಗೆ ಕಳುಹಿಸುತ್ತಾರಂತೆ; ಬೆಂಗಳೂರಿಗೆ ಮದ್ರಾಸಿಗೆಲ್ಲ. ಇದೊಂದು ಹೊಸ ಯುದ್ಧ ಸಾಮಗ್ರಿ. ಒಂದು ಕೈನೋಡೋಣಾಂತಿದ್ದಾರೆ, ಕಮ್ತೇರು.”

ಇದನ್ನೆಲ್ಲ ಅತ್ಯಾಶ್ಚರ್ಯದಿಂದ ಕಿವಿಗೊಟ್ಟು ಕೇಳುತ್ತಿದ್ದ ಕಮ್ತಿಯರು. “ಹೌದೇನ್ರೀ? ಬೆಂಗಳೂರಿಗೂ ಬರ್ತಾರೇನ್ರೀ?’’ ಎಂದು ಕೇಳಿದರು. ಕೃಷ್ಣಯ್ಯ ಉತ್ತರ ಹೇಳುವಷ್ಟರಲ್ಲಿ ಸಂಜೀವರಾಯರು ಬಂದು ಗೋಪಿನಾಥನ ಬಳಿ ಕುಳಿತು.

“ನಾನು ಬಿಸಿ ಬಿಸಿ..”
ಅಷ್ಟು ಕೇಳಿದ್ದೇ ತಡ, ಕಮ್ತಿಯವರು ಜಗ್ಗನೆ ಎದ್ದು ಪಕ್ಕದ ಮೇಜಿಗೆ ಕೈ ಬಡಿದು,

“ರೈಟ್, ಹೋ; ನೀನೇ ಭೂಪತಿ, ಕೈಕೊಡು, ನನಗೂ ಹೇಳಿದ್ದೀಯೋ ಇಲ್ಲವೋ?” ಎಂದು ಸಂತೋಷದಿಂದ ಅರಚುತ್ತ ಕೈ ನೀಡಿದರು. ಸಂಜೀವ ರಾಯರು ಹೇವರಿಸಿ, “ಥೋ..! ಹಂದಿ ಮುಂಡೇದು! ಯಾವಾಗ ನೋಡಿದರೂ ತಿಂಡಿತೀರ್ಥದ್ದೇ ಜಪ! ತೆಗೆಯೋ ಕೈ.” ಅನ್ನುತ್ತ ಮಿಕ್ಕವರ ಕಡೆಗೆ ತಿರುಗಿ “ನಾನು ಹೇಳ್ತಿದ್ದಿದ್ದು, ಬಿಸಿಬಿಸಿ ವರ್ತಮಾನವಿದೇಂತ. ಡಿಪ್ಯೂಟಿ ರಿಜಿಸ್ತ್ರಾರವರ ಆಫೀಸಿಂದ. ಕಾಫಿ ತಿಂಡಿ ವಿಚಾರವಲ್ಲ. ಕಮ್ತೀಗೆ ಹಾಗೂ ಬಾಯಿಂದ ನೀರು ಸುರೀತಾಯಿದ್ರೆ ಮಹಿಳಾ ಸಭೆಗೆ ಹೋಗಿ ಹೊರಗೆ ನಿಂತು ನಾಲಿಗೆ ಚಾಚಿ ಬಾಲ ಅಲ್ಲಾಡಿಸ್ತಾ ಇರ್ಲಿ. ಫುಡ್ ಕಮಿಶನರ ಹೆಂಡ್ತಿಗೆ ಭಾರೀ ಟೀಪಾರ್ಟಿ ಇದೆಯಂತೆ” ಎಂದರು.

“ಗೋಪಿನಾಥರಾಯರೇ ಈ ವಿಚಾರ ನಿಮಗೆ ಸಂಬಂಧ ಪಟ್ಟದ್ದು. ಎಷ್ಟು ಸುಳ್ಳೋ, ಎಷ್ಟು ಸತ್ಯವೋ, ನೀವೇ ನೋಡಿಕೊಳ್ಳಿ. ನಾನು ಕೈಕೊಡು ಎಂದಾಗ ಈ ಪ್ರಾಣಿ ಶೇಕ್ ಹ್ಯಾಂಡ್ ಮಾಡೋದಕ್ಕೇಂತ ಗ್ರಹಿಸಿದ, ಆತನ ಜಂಭಕ್ಕೆ. ಆದರೆ ತುಪ್ಪದ ತಿಂಡಿಯೇನಾದ್ರೂ ತಿಂದು ಬಂದಿದ್ರೆ ಅಂಗೈ ವಾಸನೆಯಿಂದ ಪತ್ತೆ ಮಾಡೋಣಾಂತ ನಾನು ಹೇಳಿದ್ದು. ಅದಕ್ಕೆ ತಿಂದಮೇಲೆ ಕೈ ತೊಳಕೊಳ್ಳೋ ಅಭ್ಯಾಸ ಇಲ್ಲವಷ್ಟೆ” ಅನ್ನುತ್ತ ಕಮ್ತಿಯರು ಜೋಲು ಮುಖಮಾಡಿಕೊಂದು ತನ್ನ ಕುರ್ಚಿಯನ್ನು ಸೇರಿದರು.

“ಫುಡ್ ಕಮಿಶನರು ಇವತ್ತು ಮಧ್ಯಾಹ್ನದಮೇಲೆ ಫೈನಲ್ ಆರ್ಡರು ಪಾಸುಮಾಡಿದ್ದಾರಂತೆ. ಇನ್ನೊಂದು ಆರ್ಡರು ಬರೋತನಕ ಆಹಾರ ಸಾಮಗ್ರಿಗಳ ಸಂಗ್ರಹಣ, ಹಂಚೋಣ – ಎಲ್ಲಾ ಸಹಕಾರ ಸಂಘದವರೇ ನಿಭಾಯಿಸಬೇಕು. ಸಾಹುಕಾರರಿಗೆ ಸರ್ವಥಾ ಕೊಡೋಣಾಗುವದಿಲ್ಲ ಅಂತ. ಇದು ಖಾತ್ರಿ ವರ್ತಮಾನ” ಅನ್ನುತ್ತ ಸಂಜೀವರಾಯರು ಸಾರಿ ಪ್ರಕಟಿಸಿದರು. ಈ ಶುಭವಾರ್ತೆಯನ್ನು ಕೇಳಿ ಗೋಪಿನಾಥನಿಗೆ ತುಂಬ ಸಂತೋಷವಾಯಿತು. ಇದರೆಡೆ ಎಲ್ಲರಿಗೂ ಮುಂಚಿತವಾಗಿ ಸಂಜೀವರಾಯರಿಗೆ ಈ ವಿಷಯ ಗೊತ್ತಾದುದು ಹೇಗೆಂತ ಆಶ್ಚರ್ಯವೂ ತಲೆದೋರಿತು. ಕೃಷ್ಣಯ್ಯನನ್ನೂ ಅದೇ ಕುತೂಹಲ ಕಾಡುತ್ತಿತ್ತು. “ಊರಿಗಿಂತ ಮೊದಲು ನಿನಗೆ ಹೇಗೆ ಗೊತ್ತಾಯಿತು ಈ ಗುಟ್ಟು?” ಎಂದು ಕೇಳಿದರು.

“ಗೊತ್ತಿಲ್ವೇ ನಿಮಗೆ?” ಎಂದು ಕಮ್ತಿಯರು ನಡುವೆ ಬಂದರು. “ಡಿಪ್ಯೂಟಿಯವರ ಆಫೀಸಿನಲ್ಲಿ ಮೂರು ಮಂದಿ ಟಾೈಪಿಸ್ಟರಿದ್ದಾರೆ. ಇವರಿಗೆ ಬೇಕಾದವರು” ಅನ್ನುತ್ತ ಸಂಜೀವರಾಯರನ್ನು ಕಣ್ಸನ್ನೆ ಮಾಡಿ ಸೂಚಿಸಿದರು.

“ಮೂರು ಮಂದಿನೂ ಇಟ್ಟುಕೊಂಡು ಹೇಗ್ರೀ ಆ ಡಿಪ್ಯೂಟಿಯವರು ಕೆಲಸ ಮಾಡ್ತಾರೆ?” ಎಂಬುದಾಗಿ ಕೃಷ್ಣಯ್ಯ ತನ್ನ ಸಮಸ್ಯೆಯನ್ನು ಹೊರಗೆಡವಿದರು.

“ಇಬ್ಬರಿಗೆ ರಜಾಕೊಟ್ಟು ಕಳುಹಿಸಿದರಾಯಿತು” ಎಂಬ ಕಮ್ತಿಯರ ಸಲಹೆಯನ್ನು ಕೇಳಿ ಎಲ್ಲರೂ ನಕ್ಕರು. ತಾನು ಕೃತ್ಯಕೃತ್ಯನಾದುದರ ಸಲುವಾಗಿ ಡಾಕ್ಟರು ವಾಸುದೇವ ಪೈಗಳು ಬಂದರೆ ಮಾತ್ರ ಅಂದೇ ಸಂತೋಷಕೂಟವೊಂದನ್ನು ಮಾಡೋಣವೆಂತ ಗೋಪಿನಾಥ ತನ್ನೊಳಗೆ ನಿಶ್ಚಯಿಸಿಕೊಂಡಿದ್ದರೂ ಕಮ್ತಿಯವರು ಬಿಡಲಿಲ್ಲ. ಅಂಥ ಅಪೂರ್ವ ವಿಜಯೋತ್ಸವಕ್ಕೆ ಕ್ಲಬ್ಬಿನ ಹೋಟೆಲಿನಿಂದ ಸಾಲದು, “ಕೃಷ್ಣ ಭವನದಿಂದಲೇ” ತರಿಸಬೇಕೆಂತ ಹಟಮಾಡಿ, ಜವಾನನನ್ನು ಕೂಗಿ ಬರಮಾಡಿ ಸವಿವರವಾಗಿ ಆರ್ಡರು ಬರಕೊಟ್ಟು ಕಳುಹಿಸಿದರು.

“ವರ್ತಕ ಸಂಘ ಸೋತಿತೂಂತ ಕಮ್ತೇರಿಗೆ ಬೇಜಾರವೇನೂ ಇದ್ದ ಹಾಗೆ ಕಾಣೋದಿಲ್ಲ” ಎಂದು ಕೃಷ್ಣಯ್ಯ ಕಿರುಕುಳ ಎಬ್ಬಿಸಿದರು.

“ಅದೇನಿಲ್ಲ ಅವರಿಗೆ. ಸುಮ್ಮಗೆ ಹೇಳಬಾರದು. ಅವರದೊಂದು ದೊಡ್ಡ ಗುಣ. ಬ್ರೆಡ್ಡಿನ ಯಾವ ಬದಿಗೆ ಬೆಣ್ಣೆ ಹಚ್ಚಿದೇಂಬದು ನೋಡದೇನೇ ಗೊತ್ತು. ಅವರಿಗೆ, ಇವತ್ತಂತು ಇನ್ನೊಂದು ಕಾರಣವಿದೆ. ಒಂದು ವಿಲಕ್ಷಣವಾದ ಕೇಸು ಕಿಸೆಗೆ ಬಿದ್ದಿದೆ.” ಎಂದರು ಸಂಜೀವರಾಯರು.

“ಅದೇನ್ರೀ ಕೇಸು?” ಅಂತ ಗೋಪಿನಾಥ ಕೇಳಿದ.

“ಏನೋ ಒಂದು ಚಿಕ್ಕ ಕಳವಿನ ಕೇಸು” ಎಂದರು ಕಮ್ತಿಯರು.

‘ಡಿಫೆನ್ಸೇನೋ?’ ಎಂದ ಗೋಪಿನಾಥ.

“ನೋಡಬೇಕಷ್ಟೆ. ಮಾಡಿದ್ದು ಹೌದು. ಆದ್ರೆ ಆಸಾಮಿಗೆ ತಾನು ಮಾಡಿದ್ದು ತಪ್ಪೂಂತ ಗೊತ್ತೇ ಆಗೋದಿಲ್ಲವಲ್ಲ! ಏನು ಮಾಡಲಿ?” ಎಂದು ಆಶಾವಿಹೀನರಾದರು.

“ಹೊಟ್ಟೇಗಿಲ್ದೇ ಕದ್ದನೋ ಏನೋ, ಪಾಪ” ಅಂತ ಗೋಪಿನಾಥ ಪಶ್ಚಾತ್ತಾಪ ಪಟ್ಟನು.

“ಹಾಗಲ್ಲ, ಆತನ ತರ್ಕ. ದೇವರ ಕಣ್ಣು ತಪ್ಪಿಸೋದಕ್ಕೆ ಸಾಧ್ಯವಿಲ್ಲಾಂದಮೇಲೆ ದೇವರ ದುಡ್ಡು ಕದಿಯೋದಕ್ಕೂ ಇತರರ ದುಡ್ಡು ಕದಿಯೋದಕ್ಕು ವ್ಯತ್ಯಾಸವೇನು? ಎರಡನೇದಾಗಿ ಕಾಳಮ್ಮಗೆ ಕಾಸಿಗೇನು ಧಾಡಿ? ಕದ್ದರೆ ಕಡಿಮೆಯಾಗೋದಿಲ್ಲ. ಅಲ್ಲದೆ, ತಪ್ಪು ಕಾಣಿಕೆ ಬೇರೆ ಹಾಕಿದ್ದಾನಂತೆ, ಕದ್ದ ದುಡ್ಡಿನಿಂದ” ಅಂದರು ಕಮ್ತಿಯರು.

“ಇಂಥ ಅಸ್ಸಲ್ ಗಿರಾಕಿಗಳು ನಿಮ್ಮನ್ನ ಬಿಟ್ಟು ಬೇರೆಲ್ಲಿಗೂ ಹೋಗೋದಿಲ್ಲೇನ್ರೀ?” ಎಂದು ಗೋಪಿನಾಥ ಕೇಳಿದ.

“ಏನೋ, ಪಾಪ! ನಾನು ಹಣದಾಸೆಗೆ ಕೆಲಸ ಮಾಡೋದಲ್ಲಾ, ಪರೋಪಕಾರಕ್ಕೇಂತ ತಿಳಿದು ಬರ್ತಾರೆ.”

“ಇವನಪ್ಪ ಇನ್ನೊಬ್ಬನಿದ್ದನಲ್ಲ, ಕಳೆದ ವರ್ಷ? ನೆರೆಮನೆಯವನ ಹೆಂಡ್ತೀನ ಅಪಹರಿಸಿ, ಬೇಕಾದ್ರೆ ಆಕೇನ ವಾರಕ್ಕೊಂದು ಸಲ ಗಂಡನ ಮನೇಗೆ ಕಳುಹಿಸಿಕೊಡ್ತೇನೆ. ಅದಕ್ಕಿಂತ ಹೆಚ್ಚಿನ ನೆರೆಹೊರ್ಕೆ ಎಲ್ಲಿದೆ ಲೋಕದಲ್ಲೀಂತ ಕೇಳಲಿಲ್ವೇ ನಿಮ್ಮ ಹತ್ರ?” ಎಂದು ಸಂಜೀವರಾಯರು ನೆನಪು ಮಾಡಿಕೊಟ್ಟರು.

ಈ ಕತೆ ಹೇಳಿ ಗೋಪಿನಾಥನಿಗೆ ಹಠಾತ್ತಾಗಿ ಎದೆ ಶೂಲೆಯೆದ್ದಿತು. ಆ ಕಥಾನಾಯಕನಿಗೂ ತನಗೂ ಇದ್ದ ಸಾಮ್ಯ ಆತನ ಮನಸ್ಸಿಗೆ ನಾಟಿತು. ಮೆಲ್ಲಮೆಲ್ಲನೆ ಒಳಗೆ ಕರುಳನ್ನು ಕೊರೆಯಲು ಪ್ರಾರಂಭಿಸಿತು.

‘ಕೃಷ್ಣ ಭವನ’ ದಿಂದ ಫಲಾಹಾರದ ಪಿಂಗಾಣಿ ಪರಿಹಾರವೇ ಬಂದು ಬಿಟ್ಟಿತು. ಆ ನಂತರದ ಕಾಲು ಗಂಟೆಯಲ್ಲಿ ತಟ್ಟಿ ಬಟ್ಟಲು ಚಮಚೆಗಳ ಶಬ್ದವೂ ಕಮ್ತಿಯರ ವಚನವೂ ಅಲ್ಲದೆ ಬೇರೇನೂ ಕೇಳಿಸುತ್ತಿದ್ದಿಲ್ಲ.

ಗೋಪಿನಾಥನಿಗೆ ಕ್ಲಬ್ಬಿಗೆ ಹೋಗುವಾಗ ಇದ್ದ ಮನೋಲ್ಲಾಸ ಅಲ್ಲಿಂದ ಮರಳಿ ಮನೆಗೆ ಬರುವಾಗ ಇರಲಿಲ್ಲ. ‘ವನಸ್ಪತಿ’ ಎಂಬ ಕೃತಕ ತುಪ್ಪದ ತಂಡಿ ತಿಂದುದರಿಂದಲೋ ಅಥವಾ ಪರಸ್ತ್ರೀ ಚೋರನ ಕಥೆ ಕೇಳಿದರಿಂದಲೋ ಆತಗೆ ಹೊಟ್ಟೆತೊಳೆಸುತ್ತಿತ್ತು. ಊಟ ಮಾಡಲಿಲ್ಲ. ಒಂದು ಲೋಟ ನೀರು ಮಜ್ಜಿಗೆಗೆ ಉಪ್ಪು, ಶುಂಠಿ, ಲಿಂಬೆಹಣ್ಣು, ಹಿಂಗು ಹಾಕಿ ಬೆರಸಿಕೊಟ್ಟಿದ್ದನ್ನು ಕುಡಿದನು. ಸ್ವಲ್ಪ ವಾಸಿಯಾಯಿತು. ಮನಸ್ಸಿಗೂ ಗಾಳಿಬೆಳಕು ಸಂಚಾರವಾದಂತಾಗಿ ತಿಳಿಯಾಯಿತು. ಹಗುರವಾಯಿತು. ಪಂಬಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ರೇಡಿಯೋದಲ್ಲಿ ಸಂಗೀತವೇನಿದೆಯಂತ ಮೈಸೂರಿನ ಆಕಾಶವಾಣಿಯನ್ನು ಹಾಕಿ ಕೇಳಿದನು. ಯಾರದೋ ವೀಣೆಯಿತ್ತು, ತಕ್ಕಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೆ ಒಂದೆರಡು ನಿಮಿಷಗಳಲ್ಲೇ ಮುಗಿದುಬಿಟ್ಟು ಇನ್ನಾರದೋ ಹರಟೆ ಪ್ರಾರಂಭವಾದ್ದರಿಂದ ಮದ್ರಾಸಿಗೆ ತಿರುಗಿಸಿದನು.

ಫಕ್ಕನೆ ಒಂದು ಘನವಾದ ಕಚೇರಿಯೇ ಆತನ ಮೇಲೆ ಸುರಿದು ಬಿತ್ತು. ಧ್ವನಿಯನ್ನು ಸ್ವಲ್ಪ ತಗ್ಗಿಸಿದನು. ಗಾಯಕನು ಷಣ್ಮುಗಪ್ರಿಯರಾಗವನ್ನಾಲಾಪನೆ ಮಾಡುತ್ತಿದ್ದನು. ನಾದವು ಗಂಟಲೊಡೆದು ಬರುತ್ತಿತ್ತು. ಎದೆಯೊಡೆದು ಬರುವಂತಿದ್ದರೆ ಉತ್ತಮವಿತ್ತು. ಆಲಾಪನೆ ಮುಗಿದು ಕೀರ್ತನೆ ಸುರುವಾಯಿತು. ವಿದ್ವತ್ತಿನ ಹೆಮ್ಮೆಯಿಂದ ಆರಂಭದಲ್ಲೇ ಕುಸ್ತಿಗೆ ತೊಡಗಿದನು. ಮುತ್ತಿನ ಮಣಿಗಳನ್ನು ಎಣಿಕೆ ಹಾಕುವಂತೆ ಸ್ವರವಿಸ್ತಾರ ಮಾಡುವುದರ ಬದಲು ಮುಷ್ಟಿ ಮುಷ್ಟಿ ಕಲ್ಲು ಹರಳುಗಳನ್ನು ಎರಚಿದನು. ಅದನ್ನಾದರೂ ಒಂದು ವೇಳೆ ಕೇಳಿ ಸುಮ್ಮಗಿರಬಹುದಿತ್ತು. ಆದರೆ ಮೃದಂಗದ ಜತೆಗೆ ಮೂರ್ಸಿಂಗದ ಮೂಗು ಮುರಿತ ಆರಂಭವಾದ ತಕ್ಷಣ ಗೋಪಿನಾಥನಿಗೆ ಸಹಿಸಲಾರದ ಅಸಹ್ಯವಾಗಿ ಗರ್ರಕ್ಕನೆ ದೆಹಲಿಗೆ ತಿರುಗಿಸಿ ಬಿಟ್ಟನು. ಅಲ್ಲಿಂದ ಯಾವಳೋ ಒಬ್ಬಳ ಉಲಿವು ಕೇಳಿಸಿತು. ಆಕೆಯ ರೋದನ, ನರಳಿದಂತೆ ಸಾರಂಗಿಯ ಮೊರೆ. ಇವರಿಬ್ಬರಿಗೂ ತಾತನಾಗುವವನೊಬ್ಬನು ಹಿಂದಿನಿಂದ ‘ಖಟ್ಕ ಖಟ್ಕ’ ಅಂತ ಕೋಲೂರಿಕೊಂಡು ಬಂದಂತೆ ತಬಲೆಯ ಟೇಕಾ. ಗೋಪಿನಾಥನಿಗೆ ಬೇಸರವಾಯಿತು. ಎಲ್ಲಿ ನೋಡಿದರೂ ಇದೇ ಅವಸ್ಥೆ. ನಾದನಿಷ್ಠುರತೆ; ಇಲ್ಲವೆ ನಿರಾಶೆ.

ಸಂಗೀತಗಾರರೆಲ್ಲರೂ ಉದ್ದಾಮ ಪಂಡಿತರು. ಉಗ್ರನರಸಿಂಹ ಮೂರ್ತಿಗಳು ಇಲ್ಲವೆ ನೋವಿನಿಂದ ನರಳುವ ನಿರ್ಭಾಗ್ಯರು. ಗಾಳಿಯಂತೆ ಹಗುರವಾದ, ಆಕಾಶದಂತೆ ವಿಶಾಲವಾದ, ಇವೆರಡನ್ನೂ ಬೆಳಗಿಸಿ ರೂಪಲಾಲಿತ್ಯವನ್ನು ಕೊಡುವ ಮನೋಜನಿತವಾದ ಸಂಗೀತ ಎಲ್ಲಿಯೂ ಇಲ್ಲವೆ? ಎನ್ನುತ್ತ ಪಾಶ್ಚಾತ್ಯ ತಾಣಗಳನ್ನೊಂದೊಂದಾಗಿ ನೋಡಿದನು. ಲಂಡನಿನಿಂದ ವಾದ್ಯಮೇಳವೊಂದು ಕಿವಿಗೆ ಬಿತ್ತು. ಅದನ್ನು ಕೇಳಿ ಪಂಬಿ ಕೈ ಚಪ್ಪಾಳೆ ಹೊಡೆದು ತೊಡೆಯ ಮೇಲೆ ಕುಳಿತಲ್ಲೇ ಕುದುರೆ ಸವಾರಿಗೆ ಸುರುಮಾಡಿದ್ದರಿಂದ ಕೇಳಿಬಿಡೋಣವೆಂತ ಅಲ್ಲೇ ಒರಗಿ ಕಣ್ಣು ಮುಚ್ಚಿದನು. ಸಾವಿರಾರು ಮೈಲುಗಳಾಚೆ ಹಲವಾರು ಮಂದಿ ಕೆಂಪು ಜನರು ವಿವಿಧ ವಾದ್ಯಗಳಿಂದ ಹೊರಚೆಲ್ಲಿದ ಸ್ವರಮೇಳದ ಲಾಲನೆಯಿಂದ ಆತನಿಗೆ ಅಪೂರ್ವ ನೆಮ್ಮದಿಯುಂಟಾಯಿತು.

(‘ಚಿರವಿರಹಿ’ ಕಾದಂಬರಿಯ ಆಯ್ದ ಭಾಗ : 1950)

ಟಿಪ್ಪಣಿ:
ಬೆಳ್ಳೆ ರಾಮಚಂದ್ರ ರಾವ್:
ಮಂಗಳೂರಿನಲ್ಲಿ ಎರಡು ಮೂರು ತಲೆಮಾರಿನಿಂದ ನೆಲೆಸಿದ್ದ ಕರ್ನಾಟಕ ವೈಷ್ಣವ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬೆಳ್ಳೆ ರಾಮಚಂದ್ರ ರಾಯರು (1900 – 1983) ಮದರಾಸಿನಲ್ಲಿ ಇಂಗ್ಲಿಷ್ ಎಂ. ಎ. ಮತ್ತು ಕಾನೂನು ಪದವಿಯನ್ನು ಪಡೆದು ಪುತ್ತೂರಿನಲ್ಲಿ ವಕೀಲರಾಗಿದ್ದರು (1925 – 1972). ಅವರು ಪುತ್ತೂರಿನ ಸಾಂಸ್ಕೃತಿಕ ಚಟುವಟಿಕೆಗಳನ್ನು, ದಸರಾ ನಾಡಹಬ್ಬಗಳನ್ನು ಸಂಯೋಜಿಸುವುದರಲ್ಲಿ ಮುಂದಾಳುವಾಗಿದ್ದರು. ‘ಚಿರವಿರಹಿ’ (1950) ಮತ್ತು ‘ರಾಯರು ಕಂಡ ರಂಗು’ (1953) ಅವರ ಎರಡು ಕಾದಂಬರಿಗಳು. ಪ್ರಸ್ತುತ ಕಥಾಭಾಗವನ್ನು `ಚಿರವಿರಹಿ’ ಕಾದಂಬರಿಯಿಂದ ಆರಿಸಿಕೊಳ್ಳಲಾಗಿದೆ. ವಿಶ್ವಯುದ್ಧಗಳ ಕಾಲದಲ್ಲಿ ಆಹಾರ ಸಾಮಗ್ರಿಗಳ ಹತೋಟಿ, ಆಗಿನ ರಾಜಕೀಯ ಇವುಗಳನ್ನು ಹೇಳುವ ಕಥಾಭಾಗ ಇದು.