ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ ಒಮ್ಮೆ ಎಣಿಸಿಬಿಟ್ಟೆ!
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ “ಉದ್ಧಾರ” ಈ ಭಾನುವಾರದ ನಿಮ್ಮ ಓದಿಗೆ

 

1. ರಂಗರಾಯ
2. ಮಾಧವರಾಯ (ಮಿಶನ್ ಶಾಲೆಯ ಹುಡುಗರು)
3. ರಾಮಾಚಾರಿ
4. ಕೃಷ್ಣ ಶಾಸ್ತ್ರಿ (ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು)
5. ಸುದರ್ಶನರಾಯ (ದೇಶ ಸೇವಕ)

ಸ್ವಯಂ ಸೇವಕಿಯರು (ಮೂರುಮಂದಿ); ಪೋಲೀಸರು (ಇಬ್ಬರು); ಹೋಟೆಲ್ ಮ್ಹಾಲಕ (ಒಬ್ಬ); ಮಾಣಿ (ಒಬ್ಬ).

ದೃಶ್ಯ 1
ಪಾರ್ಕಿನ ಸೀನ್ – ಮಗ್ಗುಲಲ್ಲಿ ಒಂದು ಕಬ್ಬಿಣದ ಒರಗು ಬೆಂಚು. ಸ್ಕೌಟುಗಳ ಡ್ರೆಸ್ಸಿನ ರಂಗರಾಯ – ಮತ್ತು ಮಾಧವರಾಯ – ಇವರ ಪ್ರವೇಶ.

ರಂಗ : ಹೌದು! ಆ ಗಾಂಧಿ ಹೇಳೋದು ಸತ್ಯವೆ! ಅಲ್ಲವಾದರೆ ನೋಡು! ಮೊನ್ನೆ ಪೋಲೀಸಿನವರು ಏನನ್ಯಾಯ ಮಾಡಿಬಿಟ್ಟರು! ಹಾಗಾದರೆ ಹೇಳೋರು ಕೇಳೋರು ಇಲ್ಲವೆ?

ಮಾಧು : ಸತ್ಯವೆ. ಅದರಲ್ಲೇನು ಸಂದೇಹ? ನಮ್ಮದು ದೇಶ – ಅದರ ಉದ್ಧಾರಕ್ಕಾಗಿ ಹೆಣಗಾಡಿದರೆ ನಮ್ಮವರಿಂದಲೇ ನಮಗೆ ಹೊಡಿಸುವುದೆಂದರೆ! ನಾಯಿಗಿಂತಲೂ ಕಡೆಯಾಯಿತಲ್ಲ ನಮ್ಮ ಬಾಳುವೆ?

ರಂಗ : ಅದನ್ನೆಲ್ಲಾ ಎಣಿಸುವಾಗ ನೋಡು! ನನಗೆ ಒಂದೊಂದು ತಡವೆ ಎಲ್ಲಿ ಇಲ್ಲದ ‘ಸ್ಪಿರಿಟ್’ ಬಂದು ಬಿಡ್ತದೆ!

ಮಾಧು : ನನಗೂ ಕೂಡಾ ಹಾಗೇನೇ. ಆದರೆ – ಗಾಂಧಿ ಕಡೆಯವರದ್ದು ಅದೊಂದು ಮಾತ್ರ ತಪ್ಪು ನೋಡು!

ರಂಗ : ಏನದು?

ಮಾಧು : ಅಲ್ಲ ಮತ್ತೆ! ಸುಮ್ಮಗಾದರೂ ನಿಂತು ಪೆಟ್ಟು ಹೊಡಿಸಿಕೊಳ್ಳೋದೆಂದರೆ ಏನರ್ಥ ಹಾಗಂದರೆ? ಅದೊಂದು ಇಲ್ಲದಿದ್ದರೆ – ಖಂಡಿತ ನಾನೂ ಮೂಮೆಂಟಿಗೆ ಸೇರಿ ಬಿಡ್ತಿದ್ದೆ! –

(ರಾಮಾಚಾರಿ ಕೃಷ್ಣ ಶಾಸ್ತ್ರಿ ಇವರ ಪ್ರವೇಶ. ಇಬ್ಬರ ಕೈಯಲ್ಲೂ ಒಂದೊಂದು ಸಂಸ್ಕೃತ ಪುಸ್ತಕ. ಉಡುಪು :- ಪಟ್ಟಿಕಚ್ಚೆ, ಶಾಲು ಹೊದೆದುದು, ಹಣೆಯಲ್ಲಿ ದೊಡ್ಡ ಅಂಗಾರ ಅಕ್ಷತೆ.)

ರಾಮು : (ಸುತ್ತಲೂ ನೋಡಿ) ನೋಡಿದೆಯಾ? ಎಷ್ಟು ಸೊಗಸಾಗಿದೆ ಈ ಜಾಗ! ಇಲ್ಲೇ ಕುಳಿತು ಚಿಂತನೆ ಮಾಡೋಣ!

ಕೃಷ್ಣ : ಅದು ಹೌದು, ಬಹಳ ಒಳ್ಳೇ ಜಾಗ.
(ಇಬ್ಬರೂ ಒಂದು ಬೆಂಚಿನಲ್ಲಿ ಕುಳಿತುಕೊಳ್ಳುವರು.)

ರಂಗ : ಏ! ನಾವು ಕೂಡ ಸ್ವಲ್ಪ ಕುಳಿತುಕೊಳ್ಳೋಣ! ಇಷ್ಟು ಬೇಗ ಶಾಲೆಗೆ ಹೋಗಿ ಏನು ಮಾಡೋದು?

ಮಾಧು : ಆದೀತಲ್ಲ! ಯಾರು ಬೇಡಾಂದ್ರು?
(ಅದೇ ಬೆಂಚಿನಲ್ಲಿ ಕುಳಿತುಕೊಳ್ಳುವರು)

ರಂಗ :  (ಹೊಸಬರೊಡನೆ) ನೀವು ಯಾವ ಶಾಲೆಯವರ್ರೀ?

ರಾಮು : ನಾವು ಸಂಸ್ಕೃತ ಮಹಾಪಾಠಶಾಲೆಯವರು.

ಕೃಷ್ಣ : ನೀವು ಯಾವ ಶಾಲೆಯವರು?

ರಂಗ : ನಮ್ಮದು ಮಿಶ್ಶನ್ ಶಾಲೆ.

ಕೃಷ್ಣ : ಮಿಶ್ಶನ್ ಶಾಲೆಯೆ? (ಎಂದು ಸ್ವಲ್ಪ ದೂರ ಸರಿದು ಕುಳಿತುಕೊಳ್ಳುವನು-)

ಮಾಧು : ಏನಯ್ಯ? ದೂರ ಸರಿದಿದ್ದೀರಿ! ನೀವಿನ್ನೂ ಈ ಯುಗಕ್ಕೆ ಬರಲಿಲ್ಲಾಂತ ತೋರುತ್ತೆ!

ಕೃಷ್ಣ : ಇಲ್ರೀ. ನಮ್ಮ ಶಾಸ್ತ್ರದಲ್ಲಿ ಈ ಯುಗಾಂತ ಒಂದು ಕಾಲ ಗಣನೆ ಮಾಡಿಲ್ಲ. ಒಟ್ಟು ನಾಲ್ಕೇ ಯುಗ; ಕೃತ-ತ್ರೇತ-ದ್ವಾಪರ-ಕಲಿ.

ಮಾಧು : (ಬೇಸರದಿಂದ) ಅದು ಯಾಕೀಗ ಪುರಾಣ?

ಕೃಷ್ಣ : ಅಲ್ಲ. ನೀವು ಈ ಯುಗಾಂದ್ರಿ. ಅದಕ್ಕೆ ತಪ್ಪು ತೋರಿಸಿಕೊಟ್ಟೆ.

ಮಾಧು : ಹಾಗಲ್ಲಯ್ಯ! ಈ ಯುಗಾಂದ್ರೆ – ನಮ್ಮನ್ನು ಕಂಡು ದೂರ ಸರಿದುಕೊಂಡಿರಿ. ಅದಕ್ಕೆ ಬಹಳ ಹಿಂದಿನ ಕಾಲದವರ ಹಾಗಿದ್ದೀರಿ. ಅಂತಂದದ್ದು.

ರಾಮು : ಅಂದ್ರೆ ಮತ್ತೇನಿಲ್ಲ. ನಿಮ್ಮ ಶಾಲೆಯಲ್ಲಿ ಎಲ್ಲಾ ಒಂದೇ ಜಾತಿ – ಹೊಲೆಯರೂ ಕೂಡಿದ್ದಾರೆ.

ರಂಗ : ಏನಾಯ್ತೀಗಾ? ಹೊಲೆಯನಾದರೇನು – ಹಾರುವನಾದರೇನು? ಎಲ್ಲರೂ ಬಂದದ್ದು ಒಂದೇ ದಿಕ್ಕಿನಿಂದ – ಹೋಗೋದು ಅಲ್ಲಿಗೇ! ಮತ್ತೇನು?

ಕೃಷ್ಣ : ಯಾರಂದದ್ದು? ಅದೇ ತಪ್ಪು ನೋಡಿ. ಹೊಲೆಯ ಹೋಗೋದು ಅಂಧಂ ತಮಸ್ಸಿಗೆ! ಅವ ಮುಕ್ತಿಬಾಹಿರ. ಆದರೆ ನಾವು ಮುಕ್ತಿಯೋಗ್ಯ ಜೀವಿಗಳು!

ರಾಮು : ಹೇಳಿದೆಯಲ್ಲ ವೇದದಲ್ಲಿ ‘ಬ್ರಾಹ್ಮಣೋಸ್ಯ ಮುಖ ಮಾಸೀತ್’ – ಅಂತ! ಆದರೆ ಆ ಗಾಂಧಿಯೊಬ್ಬ – ಕಲಿ ಸ್ವರೂಪಿ! ಎಲ್ಲಾ ಜಾತಿಯೂ ಒಂದೇಂತ ಹೇಳತೊಡಗಿದ್ದಾನೆ.

ಕೃಷ್ಣ : ಅವನಿಗೆ ನಾಯಿಯೂ ಒಂದೇ, ದನವೂ ಒಂದೇ! ಅದಕ್ಕೆ ಅಂತವರಿಗೆ ದೇವರು ಕೈ ಬಿಡೋದು!

ಮಾಧು : ದೇವರು ಕೈಬಿಟ್ಟದ್ದೇನೀಗ?

ಕೃಷ್ಣ : ಮತ್ತೇನು ಪೆಟ್ಟು ತಿಂದು ಸಾಯುತ್ತಾ ಇದ್ದಾರಲ್ಲ ಅವನ ಕಡೆಯವರೆಲ್ಲ?

ರಂಗ : ಸತ್ತರೂ ಅದರಲ್ಲಿ ಕೀರ್ತಿಯಿದೆ. ಪುಣ್ಯವಿದೆ! – ‘ಪರೋಪಕಾರಾರ್ಥಮಿದಂ ಶರೀರಂ’- ! ಮತ್ತೇಕೆ ಸಾಯಬಾರದು?

ರಾಮು : (ತಾತ್ಸಾರವಾಗಿ) ಪುಣ್ಯವಲ್ಲ – ಏಳೇಳು ಜನ್ಮಕ್ಕೂ ರೌರವ ನರಕ!

ಕೃಷ್ಣ : ನಮ್ಮ ಸ್ಮೃತಿಗಳಲ್ಲಿ ಏನು ಹೇಳಿದೆಯಂತ ತಮಗೆ ಗೊತ್ತಿದೆಯೆ? ‘ರಾಜಾ ಪ್ರತ್ಯಕ್ಷ ದೇವತಾ’! ರಾಜದ್ರೋಹ ಎಂದರೆ ಅದರಿಂದ ಮೇಲಿನ ತಪ್ಪೇ ಇಲ್ಲ. ಅದೇ ದೈವ ದ್ರೋಹ!

ಮಾಧು : (ಬೇಸರದಿಂದ) ಎಂತಹ ರಾಜನಯ್ಯ! ಊರು ಹಾಳು ಮಾಡೋದೂ ಒಂದು ರಾಜಧರ್ಮವೆ?

ರಾಮು : (ಆಶ್ಚರ್ಯದಿಂದ) ಹಾಳು? ಹಾಳು ಮಾಡಿದ್ದೇನೀಗ? ಎಷ್ಟು ಒಳ್ಳೇ ಸ್ಥಿತಿಗೆ ಬಂತು ನಮ್ಮ ದೇಶ! ಮೊದಲು ನಮ್ಮ ಊರಲ್ಲಿ ಎಷ್ಟು ಸಂಸ್ಕೃತ ಶಾಲೆಯಿದ್ದಿತು? ಈಗ ನೋಡಿ! ನಮ್ಮ ಶಾಲೆಗೆ ಎರಡು ಸಾವಿರ ರೂಪಾಯಿ ಗ್ರೆಂಟ್ ಕೊಡಿಸುತ್ತಾ ಇದ್ದಾನಲ್ಲ ಪುಣ್ಯಾತ್ಮ! ಇದಕ್ಕಿಂತ ದೊಡ್ಡ ಧರ್ಮವೇನಿದೆ?

ರಂಗ : ಅದೇನ್ರೀ? ನಿಮ್ಮ ಶಾಲೆಗೆ ಗ್ರೆಂಟ್ ಸಿಕ್ಕಿಬಿಟ್ಟರೆ ದೊಡ್ಡ ಧರ್ಮ ಆಯಿತೆ?

ರಾಮು : ಮತ್ತೆ! ನಮ್ಮದು ಧಾರ್ಮಿಕ ಭಾಷೆ! ದೇವಭಾಷೆ!

ಮಾಧು : ನಮ್ಮದು ಮತ್ತೆ?

ರಾಮು : ನಿಮ್ಮದು ಮ್ಲೇಂಛ ಭಾಷೆ.

ರಂಗ : ಎಂದರೆ?

ರಾಮು : ಹೂಣ ಭಾಷೆ!

ಮಾಧು : ಹೂಣ ಭಾಷೆಯಾದರೇನಾಯಿತು?

ಕೃಷ್ಣ : ಹೂಣರೆಂದರೆ ಪಾಷಂಡಿಗಳು – ನಾಸ್ತಿಕರು! ಆದುದರಿಂದ ಅವರ ಭಾಷೆಯೂ ನಿಷಿದ್ಧ! ವೇದದಲ್ಲೇ ಹೇಳಿದೆ – ನ ಮ್ಲೇಂಛಿತ ವೈ ನಾಪಭಾಷಿತ ವೈ – ಮ್ಲೆಂಛೋ ಹವಾ ಏಷ ಯದಪಶಬ್ದಃ – ಅಂತ!

ಮಾಧು : ಹಾಗಾದರೆ – ಮ್ಲೇಂಛರೆಂದರೆ ಅಷ್ಟು ನಿಷಿದ್ಧ?

ರಾಮು : ಅಡ್ಡಿಯೇನು? ಅವರು ಧರ್ಮದ್ರೋಹಿಗಳು!

ರಂಗ : (ನಗುತ್ತ) ಹಾಗಾದರೆ – ನಿಮ್ಮ ರಾಜಾ ಪ್ರತ್ಯಕ್ಷ ದೇವತಾಂತ ತತ್ವ ಎಲ್ಲಿಗೆ ಹೋಯಿತಯ್ಯ?

ರಾಮು : (ದಿಗಿಲುಬಿದ್ದು) ರಾಜ ಆದರೆ ಚಿಂತಿಲ್ಲ.

ಮಾಧು : ಅವ ಏನು ಮ್ಲೇಂಛ ಅಲ್ಲವೆ?
(ರಾಮು, ಕೃಷ್ಣಶಾಸ್ತ್ರಿ ಮುಖ – ಮುಖ ನೋಡಿಕೊಳ್ಳುವರು – ಇವರು ನಗುವರು)

ಕೃಷ್ಣ : (ಸಿಟ್ಟಿನಿಂದ) ನೀವು ಮಿಶ್ಶನ್ ಶಾಲೆಯವರು! ಫಟಿಂಗರು! ನಿಮ್ಮ ಕೂಡೆ ಮಾತಾಡಿದ್ದೆ ತಪ್ಪು!

ರಂಗ :  (ನಗುತ್ತ) ಹಾ! ಅದು ಸರಿ! ಚೆನ್ನಾಯಿತು. (ಕಿವಿಗೊಟ್ಟು) ಏನದು ಸಂಗೀತ?

ಮಾಧು : (ಕೇಳಿ) ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ ಒಮ್ಮೆ ಎಣಿಸಿಬಿಟ್ಟೆ!

ರಾಮು : (ಕಿವಿಮುಚ್ಚಿ) ಶಾಂತಂ ಪಾಪಂ! ಶಾಂತಂ ಪಾಪಂ! ಏನಿದು? ಪರಸ್ತ್ರೀಯರ ವರ್ಣನೆ ಮಾಡೋದು?

ರಂಗ : ಅದಕ್ಕೇನು? ಮಹಾಕವಿ ಕೀಟ್ಸ್ ಹೇಳಿದ್ದಾನೆ –
“A thing of beauty is a joy for ever;
Its loveliness increases, – it will never
Pass into nothingness…..”

ರಂಗ : ಛೇ ಛೇ! ಅನ್ಯಾಯ! ಅದರಿಂದ ಮೇಲಿನ ಪಾಪವೇ ಇಲ್ಲ. ನಮ್ಮ ಶಾಸ್ತ್ರದಲ್ಲಿದೆ – ಮಾತೃವತ್ ಪರದಾರೇಷು – ಅಂತ.

ಕೃಷ್ಣ : ಅದಕ್ಕೆ ಹೇಳೋದು ಮಿಶನ್ ಶಾಲೆಯವರೂಂತ! ರಾಮು! ನಾವು ಅವರನ್ನು ನೋಡೋದು ಬೇಡ. ಚಿಂತನೆ ಮಾಡೋಣ!
(ಇಬ್ಬರೂ ಪುಸ್ತಕದಿಂದ ಮುಖವನ್ನು ಮರೆಮಾಡಿಕೊಂಡು ಓದುವರು-)

ಹೂಣರೆಂದರೆ ಪಾಷಂಡಿಗಳು – ನಾಸ್ತಿಕರು! ಆದುದರಿಂದ ಅವರ ಭಾಷೆಯೂ ನಿಷಿದ್ಧ! ವೇದದಲ್ಲೇ ಹೇಳಿದೆ – ನ ಮ್ಲೇಂಛಿತ ವೈ ನಾಪಭಾಷಿತ ವೈ – ಮ್ಲೆಂಛೋ ಹವಾ ಏಷ ಯದಪಶಬ್ದಃ – ಅಂತ!

(ಮೂವರು ಸ್ವಯಂಸೇವಕಿಯರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಹಾಡುತ್ತಾ ಬರುವರು.)

ಝಂಡಾ ಊಂಚಾ ರಹೇ ಹಮಾರಾ
ವಿಜಯೀ ವಿಶ್ವತಿರಂಗಾ ಪ್ಯಾರಾ |

ಮಾಧು : (ಕಣ್ಣು ಮಿಟಕಿಸಿ) ನೋಡಿದೆಯಾ! ಅದೇ ಹುಡುಗಿ!

(ಇಬ್ಬರೂ ಕಣ್ಣೆವೆ ಮುಚ್ಚದೆ ನೋಡುತ್ತಿರುವರು)
(ರಾಮು – ಕೃಷ್ಣರದ್ದೂ ಕಣ್ಣುಗಳು ಪುಸ್ತಕದಿಂದ ಹೊರಗೆ)
(ಸ್ವಯಂಸೇವಕಿಯರು ಹೋಗುವರು-)

ರಂಗ : (ತಿರುಗಿ ನೋಡಿ ನಗುತ್ತ) ಏನಯ್ಯ ಮಹಾ ಧಾರ್ಮಿಕರು! ಎಲ್ಲಿ ಹಾರಿಹೋಯಿತು ನಿಮ್ಮ ಶಾಸ್ತ್ರ – ‘ಮಾತೃವತ್ ಪರದಾರೇಷು’

(ರಂಗ – ಮಾಧು ಇಬ್ಬರೂ ನಗುವರು)
(ಸ್ವಯಂಸೇವಕರ ಉಡುಪಿನಲ್ಲಿ ಸುದರ್ಶನರಾಯನ ಪ್ರವೇಶ)

ಸುದ : (ರಂಗ – ಮಾಧು ಇವರನ್ನು ನೋಡಿ) ನೀವಾರಯ್ಯ? ಸ್ವಯಂಸೇವಕರೆ?

ರಂಗ : ಅಲ್ಲ, ನಾವು ಸ್ಕೌಟುಗಳು!

ಸುದ : ಸ್ಕೌಟುಗಳೆ? ಹಾಗಾದರೆ ಬನ್ನಿ. ಪಿಕೆಟಿಂಗಿಗೆ ಹೋಗೋಣ!

ಮಾಧು : ಛೆ ಛೇ! ಸಮಯವಿಲ್ಲರೀ! ಈ ಹೊತ್ತು ನಮ್ಮ ಶಾಲೇಲಿ ನಮ್ಮದು ‘ಕೇಂಪ್ ಫಯರ್’!

ಸುದ : ಕೇಂಪ್ ಫಯರ್! ದೇಶದಲ್ಲೇ ದಾರಿದ್ರ್ಯದ ಬೆಂಕಿ ಏಳುತ್ತಾ ಇರುವಾಗ ಮತ್ತೆ ನಿಮ್ಮ ‘ಕೇಂಪ್ ಫಯರ್’|

ರಂಗ : ಅಲ್ರೀ! ಅದು ಸ್ಕೌಟುಗಳ ‘ಸಿಸ್ಟಮ್!’

ಸುದ : (ಬೇಸರದಿಂದ) ಬೆಂಕಿ ಹಾಕಿದರು ನಿಮ್ಮ ಸಿಸ್ಟಮಿಗೆ! ಕೆಲಸಕ್ಕೆ ಬಾರದ ಕೂಟ!

ಮಾಧು : (ಸಿಟ್ಟಿನ ಸೋಗಿನಿಂದ) ಹಾಗಾದರೆ ಏನ್ರೀ? ನಮ್ಮ ಜಗತ್ಪ್ರಸಿದ್ಧ ಪೋವೆಲ್ ಸಾಹೇಬರು ತೊಡಗಿದ ಸ್ಕೌಟ್ ಸಿಸ್ಟಮ್! ಅದನ್ನು ಹೀಗೆ ಹಳಿಯೋದೆಂದ್ರೆ!

ಸುದ : ಹಳಿಯದೆ ಮತ್ತೇನು ಉದ್ಧಾರ ಮಾಡಿರುವಿರಿ ನೀವು?

ರಂಗ :  ಉದ್ಧಾರಂದ್ರೆ! ಮೊನ್ನೆ ನಮ್ಮ ಎಜ್ಯುಕೇಶನ್ ಮಿನಿಷ್ಟರ್ ಬಂದಾಗ ನಮ್ಮ ಕೇಂಪ್ ಫಯರ್ ನೋಡಿ ಮೆಚ್ಚಿಬಿಟ್ಟಿದ್ದಾರೆ! ಆ ದಿನ ನಮ್ಮ ಈ ಮಾಧವ ರಾಯರ ಹಕ್ಕಿಗಳ ಕೂಗಿನ ಇಮಿಟೇಶನ್ ಕೇಳಿ ಎಲ್ಲರೂ ಬೆರಗಾಗಿ ಹೋದರು!

ಸುದ : (ಪಶ್ಚಾತ್ತಾಪದಿಂದ) ಅಯ್ಯೋ ಬಡವರ ಕರುಳಿನ ಕೂಗೇ ದಿನ ದಿನಕ್ಕೂ ದಿಗಂತ ವ್ಯಾಪಿಯಾಗುತ್ತಿರುವಾಗ ನಿಮ್ಮ ಈ ಹಕ್ಕಿಗಳ ಕೂಗೇ!
(ರಾಮು – ಶಾಸ್ತ್ರಿ ಇವರು – ಇನ್ನು ತಮ್ಮೊಡನೆ ಕೇಳುವನೋ ಎಂಬ ಭೀತಿಯಿಂದ ಮುಂಚಿತವಾಗಿಯೇ ಓದತೊಡಗಿದರು.)

ರಾಮು : ಅತ್ರ ಭೂತಲೆ ಘಟೋ ನಾಸ್ತೀತಿ ಪ್ರತೀತಿ ಸಾಕ್ಷಕೋಯೋ ಆಭಾವಃ!

ಕೃಷ್ಣ : ಘಟಾಭಾವಃ –

ಸುದ : (ತಡೆದು) ಅಲ್ಲ ಅಲ್ಲ! ತಲೆ ಬುರುಡೆಯ ಅಭಾವ! ಏನು? ನೀವಾದರೂ ಬರುತ್ತೀರೋ?

ರಾಮು : (ಏನೂ ಅರಿಯದವರಂತೆ) ಎಲ್ಲಿಗೆ?

ಸುದ : ಪಿಕೆಟಿಂಗಿಗೆ!

ರಾಮು : ಛೇ – ಛೇ! ನಾವೆಲ್ಲ ಅಂತಹ ರಾಜದ್ರೋಹಗಳಿಗೆ ಕೈ ಹಾಕುವಂತೆಯೇ ಇಲ್ಲ. ಅದು ನಮ್ಮ ಶಾಸ್ತ್ರಕ್ಕೆ ತೀರಾ ವಿರುದ್ಧ!

ಕೃಷ್ಣ : ಮತ್ತು ನೋಡಿ! ನಾವು ಬ್ರಾಹ್ಮಣರು! ಹಾಗೆಲ್ಲ ಶೂದ್ರರ ಅಂಗಡಿ ಮುಂದೆ ನಿಂತು ಬಂದವರಿಗೆಲ್ಲಾ ಕೈಮುಗಿದು ಕಾಲು ಹಿಡಿಯೋ ಹಾಗಿಲ್ಲ!

ಸುದ : (ಪಶ್ಚಾತ್ತಾಪದಿಂದ) ಅಯ್ಯೋ! ನಮ್ಮ ಮುಂದಿನ ಜನಾಂಗವೆ! ಇಂತಹ ನಿರ್ಜೀವ ಸಂತತಿಯಿಂದ ನಮ್ಮೀ ಭಾರತ ವರ್ಷವು ಹೇಗೆ ತಾನೆ ಉದ್ಧಾರವಾದೀತು? (ಅವರೊಡನೆ) ಹಾಗಾದರೆ ಯಾರೂ ಬರುವಂತಿಲ್ಲ?
(ಉತ್ತರವಿಲ್ಲ)
(ಧಿಕ್ಕಾರದಿಂದ) ಛೀ! ಆ ಎಳೆ ಹುಡುಗಿಯರಿಗಿಂತಲೂ ಕೀಳಾಯಿತಲ್ಲ ನಿಮ್ಮ ಬಾಳು!
(ಹೊರಟು ಹೋಗುವನು)

ರಂಗ : ಅಲ್ಲ. ನಾವೇನೂ ಹುಡುಗಿಯರಿಗಿಂತ ಕೀಳಲ್ಲ. ಆದರೆ ಅದನ್ನು ಸಿದ್ಧಾಂತ ಮಾಡಿ ತೋರಿಸಲಿಕ್ಕೆ ಮಾತ್ರ ಪ್ರಕೃತ ತಯಾರಿಲ್ಲ – ಅಷ್ಟೆ!

ಮಾಧು : (ತಲೆದೂಗುತ್ತ) ಅದು ಹೌದು!

ರಾಮು : ಏನ್ರೀ! ಈಗ ತಾನೇ ಗಾಂಧಿ ವಿಷಯ ದೊಡ್ಡ ವಾಖ್ಯಾನ ಕೊಟ್ಟಿರಲ್ಲ! ಮತ್ತೇಕೆ ದೇಶೋದ್ಧಾರಕ್ಕೆ ಹೊರಡಲಿಲ್ಲ? (ನಗುತ್ತ -) ಇಷ್ಟೆಯೇ ನಿಮ್ಮ ಉಪದೇಶ?

ಕೃಷ್ಣ : ‘ಪರೋಪದೇಶೇ ಪಾಂಡಿತ್ಯಂ’ –
(ಇಬ್ಬರೂ ನಗುವರು.)

ಮಾಧು : (ಬೇಸರದಿಂದ) ಸುಮ್ಮನಿರಿಯಯ್ಯ! ಹೇಳಿದಂತೆ ಮಾಡಬೇಕೆಂದು ಯಾರು ಹೇಳಿರುವರು? ರಂಗ! ನಾವಿನ್ನು ಹೋಗೋಣ! (ಕಿವಿಗೊಟ್ಟು) ಏನಿದು ಸದ್ದು?

ರಂಗ : ಅಹುದು. ಯಾರೋ ಈ ಕಡೆಗೆ ಬರುವಂತಿದೆ.

ಮಾಧು : (ನೋಡಿ ಗಾಬರಿಯಿಂದ) ರಂಗ! ಕೆಟ್ಟಿತಲ್ಲೊ ಕೆಲಸ! ಬೇಗ ಹೊರಡು.

ರಂಗ : (ಎದ್ದು ನಿಂತು) ಏನಾಯಿತು?

ಮಾಧು : ನೋಡು ಪೋಲೀಸಿನವರು ಲಾಥೀ ಚಾರ್ಜಿಗೆ ಬರ್ತಾಯಿದ್ದಾರೆ! ಕೊನೆಗೆ ನಮ್ಮ ಡ್ರೆಸ್ ನೋಡಿ ವಲಂಟೀಯರ್ಸ್ ಅಂತ ನಮಗೂ ಚಡಸಿ ಬಿಟ್ರೆ?

ರಾಮು : ಏನಾಯ್ತಿಗ? ‘ಪರೋಪಕಾರಾರ್ಥಮಿದಂ ಶರೀರಂ -’

ಮಾಧು : (ಕಿವಿಗೊಡದೆ) ಏನು ಮಾಡೋದೀಗ?

ಕೃಷ್ಣ : ಮಾಡೋದು ಮತ್ತೇನು? ಪಲಾಯನ ಸೂಕ್ತ ಪಾರಾಯಣ ಒಂದು ತಡವೆ ಮುಗಿಸಿಬಿಡೋದು!
(ಇಬ್ಬರೂ ಚಪ್ಪಾಳೆ ತಟ್ಟಿ ನಗುವರು)

ಮಾಧು : (ರಂಗನ ಕೈಹಿಡಿದು) ಬಾ! ಬೇಗ ಬಾ! (ಇಬ್ಬರೂ ಓಡುವರು)
(ಲಾಥಿ ಹಿಡಿದ ಪೋಲೀಸರಿಬ್ಬರ ಪ್ರವೇಶ)

ಒಬ್ಬ : (ಅಬ್ಬರದಿಂದ) ಯಾರಯ್ಯ? ಅದು ಓಡಿಹೋದ್ದು? ಏನು ಮಾಡ್ತಾ ಇದ್ದೀರಿ ಇಲ್ಲಿ ಕೂಟ ಕೂಡಿಸಿಕೊಂಡು? 144ನೇ ಸೆಕ್ಷನ್ ಜಾರಿಯಾದ್ದು ಗೊತ್ತಿಲ್ವೆ?

ಮತ್ತೊಬ್ಬ : ಹೌದು! ಈ ಹುಡುಗರಿಗೆಲ್ಲಾ ಒಂದೊಂದು ತಡವೆ ಬಿಸಿ ಮಾಡದಿದ್ದರೆ ಆಗೋದಿಲ್ಲ!

ರಾಮು : (ಬೆದರಿ) ಅಯ್ಯೋ! ನಾವೇನು ಮಾಡಿತಪ್ಪ ಅನ್ಯಾಯ? ನಾವು ಪಾಠ ಶಾಲೆಯವರು!

ಕೃಷ್ಣ : ಹಾಗೆಲ್ಲ ನಾವು ಆ ಹಾಳು ಗಾಂಧೀಮತಕ್ಕೆ ಕೈ ಹಾಕೋದೇ ಇಲ್ಲ!

ಒಬ್ಬ : ಮತ್ತಿಲ್ಲಿ ಕೂಡಿಕೊಂಡು ಏನ್ಮಾಡುತಿದ್ದೀರಿ?

ರಾಮು : (ದೈನ್ಯದಿಂದ) ಏನಿಲ್ಲ! ಒಂದಿಷ್ಟು ಚಿಂತನೆ ಮಾಡ್ತಿದ್ದೆವು!

ಮತ್ತೊಬ್ಬ : (ದರ್ಪದಿಂದ) ಚಿಂತನೆ. ಇಬ್ಬರು ವಲಂಟೀಯರ್ಸ್ ಓಡಿಹೋದರಲ್ಲ ಇಲ್ಲಿಂದ? ಮತ್ತೀಗ ಸುಳ್ಳು ಹೇಳ್ತೀರಿ! ಅಲ್ಲವೆ? (ಲಾಥಿ ಎತ್ತಿ) ಹುಂ! ಜಾಗ್ರತೆ!

ರಾಮು : (ಕೈಮುಗಿದು) ಇಲ್ಲಪ್ಪ! ಅದು ಯಾರೋ ಏನೋ!

ಕೃಷ್ಣ : ಅವರಿಗೂ ನಮಗೂ ಸಂಬಂಧವೇ ಇಲ್ಲ. (ಕಾಲಿಗೆ ಬಿದ್ದು ಅಳುತ್ತಾ) ದಮ್ಮಯ್ಯ! ನಾವು ಗಾಂಧಿ ಕಡೆಯವರೇ ಅಲ್ಲ. ನಾವು ಪಾಠಶಾಲೆಯ ಹುಡುಗರು.

(ಆ ಕಡೆ ಮರೆಯಿಂದ ರಂಗ – ಮಾಧು ಹಣಕುವರು)

ಒಬ್ಬ : (ಮತ್ತೊಬ್ಬನೊಡನೆ) ಪಾಠಶಾಲೆಯವರಂತೆ! ಪಾಪ! ಬಡಪ್ರಾಣಿಗಳು. ನಾವು ಮುಂದೆ ಹೋಗೋಣ.

ರಾಮು : (ಕೈಮುಗಿದು ನಡುಗುತ್ತಾ) ಹೌದು; ಹೌದು; ನಾವು ಪಾಠ ಶಾಲೆಯವರು, ಬಡಪ್ರಾಣಿಗಳು.
(ಪೋಲೀಸರು ಅವರಿಬ್ಬರನ್ನೂ ಒಮ್ಮೆ ದಿಟ್ಟಿಸಿ ನಗುತ್ತಾ ಹೋಗುವರು)

ರಾಮು :  (ಉಸಿರ್ಗರೆದು) ಒಂದು ತಡವೆಗೆ ಬಚಾವಾಯಿತಪ್ಪಾ!
(ರಂಗ ಮಾಧು, ಮರೆಯಿಂದ ನಗುತ್ತಾ ಬಂದು)

ರಂಗ : ಏನ್ರೀ! ಮಹಾಬ್ರಾಹ್ಮಣರು, ಶೂದ್ರರ ಕಾಲು ಹಿಡಿದು ಅಳೋದೇ?

ರಾಮು : ಎಲ್ಲಿಗೆ ಹೋಯಿತು ನಿಮ್ಮ ಶಾಸ್ತ್ರ? ‘ಬ್ರಾಹ್ಮಣೋಸ್ಯ ಮುಖಮಾಸೀತ್’. ಆವಾಗಲೇ ನಮ್ಮ ಕೂಡೆ ಪಲಾಯನ ಸೂಕ್ತ ಪಾರಾಯಣ ಮಾಡುತ್ತಿದ್ದರೆ ಈ ಕಷ್ಟ ಬರ್ತಿತ್ತೆ?
(ಇಬ್ಬರು ಕೈತಟ್ಟಿ ನಗುವರು)

ರಾಮು : (ಸಿಟ್ಟಿನಿಂದ) ಶಾಸ್ತ್ರಿ! ನಾವು ಇಲ್ಲಿಂದ ಹೋಗೋಣ! ಈ ಫಟಿಂಗರ ಸಾವಾಸವೇ ನಮಗೆ ಬೇಡ!
(ಇಬ್ಬರೂ ಪುಸ್ತಕ ಹಿಡಿದುಕೊಂಡು ಹೋಗುವರು)

ರಂಗ : ಮಾಧು! ನಾವೂ ಹೋಗೋಣ! ಟೈಮಾಯಿತೋ ಏನೋ ಕೇಂಪ್ ಫಯರಿಗೆ!

ಮಾಧು : ಅದು ಹೌದು ಬೇಗ ಹೋಗೋಣ!
(ಹೋಗುವರು)

(‘ಎರಡು ಏಕಾಂಕ ನಾಟಕಗಳು’ (1935) ಇದರಲ್ಲಿರುವ ‘ಉದ್ಧಾರ’ ನಾಟಕದ ಒಂದು ದೃಶ್ಯ.)

*******

ಟಿಪ್ಪಣಿ: ಸಾಂತ್ಯಾರು ವೆಂಕಟರಾಜ

‘ಕವಿರಾಜ ಹಂಸ’ ಎಂಬ ಬಿರುದು ಪಡೆದಿದ್ದ ಉಡುಪಿ ಜಿಲ್ಲೆಯ ಬಹುಮುಖ್ಯ ಸಾಹಿತಿಗಳಲ್ಲೊಬ್ಬರಾದ ಎಸ್.(ಸಾಂತ್ಯಾರು) ವೆಂಕಟರಾಜರು (1913-1988) ಮೂವತ್ತರ ದಶಕದಿಂದಲೇ ಕತೆಗಳನ್ನು ಬರೆಯಲು ಪ್ರಾರಂಭಿಸಿದ್ದರು; ಅಂದಿನ ಅವಿಭಜಿತ ದಕ್ಷಿಣ ಕನ್ನಡದ ಶ್ರೇಷ್ಠ ಕತೆಗಾರರೆಂದು ಮಾನ್ಯರಾಗಿದ್ದರು. ‘ಆಕಾಶಗಂಗೆ’ (1945) ಮತ್ತು ‘ಸಪ್ತಸಾಗರ’ (1947) ಅವರ ಪ್ರಕಟಿತ ಕಥಾಸಂಕಲನಗಳು. ಅವರ ಹಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಸಂಕಲಿತವಾಗದೆ ಉಳಿದಿವೆ. ಪ್ರಸ್ತುತ ಕತೆ ಅವರದೇ ಆದ ‘ವೀರಭೂಮಿ’ ಮಾಸಿಕದಲ್ಲಿ ಪ್ರಕಟವಾಗಿತ್ತು. ವೆಂಕಟರಾಜರು ಸಾಂತ್ಯಾರು, ಬೈರಂಪಳ್ಳಿ, ಬೆಳ್ಳರ್ಪಾಡಿ ಗ್ರಾಮಗಳ ಪಟೇಲರಾಗಿದ್ದರು. ತಮ್ಮ ‘ಮಾನಸಗಂಗೆ’ ಕವನ ಸಂಕಲನಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದ ಅವರು 7 ಕವನಸಂಕಲನಗಳು, 3 ಕಾದಂಬರಿಗಳು, 8 ನಾಟಕಗಳು, 54 ಕತೆಗಳು, ಸಂಪಾದಕೀಯ ಲೇಖನಗಳು, ಲಲಿತಪ್ರಬಂಧಗಳು, ಅಂಕಣ ಬರಹಗಳು ಮುಂತಾಗಿ ಎಲ್ಲ ಬಗೆಯ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.