ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು.
ಡಾ.ಬಿ.ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬಿರಾಯನಕಾಲದ ಕತೆಗಳ ಸರಣಿಯಲ್ಲಿ ಎಂ. ಎನ್. ಕಾಮತ್ ಬರೆದ ಕತೆ “ಕದ್ದವರು ಯಾರು?” ಈ ಭಾನುವಾರದ ನಿಮ್ಮ ಓದಿಗೆ

 

ಆ ಊರಿನಲ್ಲಿ ಅಂದು ಸಂತೆ. ವಾರದಲ್ಲೊಂದು ದಿನ ಸಂತೆಯೆಂದ ಬಳಿಕ ಹಳ್ಳಿಯೆಲ್ಲ ಅಂದು ಗದ್ದಲದಿಂದ ತುಂಬಿಯೇ ಇದ್ದಿತು. ಅದರಲ್ಲೂ ಜಿಲ್ಲಾ ಕಲೆಕ್ಟರರವರು ಖುದ್ದಾಗಿ ಚಿತ್ರೈಸಿದ್ದಾರೆ. ಜಮಾಬಂದಿಯಲ್ಲ, ಸ್ಥಳ ತನಿಖಿಯಲ್ಲ, ಕಚೇರಿಯಲ್ಲ – ಒಬ್ಬರೇ. ಎಂದಿನಂತೆ ಯಾರೂ ಸರಬರಾಯಿಯ ತೊಂದರೆಗೀಡಾಗಬಾರದೆಂದು ಈ ದೊರೆಗಳು ತಮ್ಮ ಬಟ್ಲರನನ್ನೆ ಸಂತೆಗೆ ಕಳುಹಿ ಎಲ್ಲ ಸಾಮಾನನ್ನು ನಗದಾಗಿ ಕ್ರಯಕ್ಕೆ ಕೊಂಡುಬರಲು ತಿಳಿಸಿದ್ದಾರೆ. ಮೊಕ್ಕಾಂ ನಾಲ್ಕು ದಿನವಂತೆ. ಉಗ್ರಾಣಿಗೆ ಮಿಕ್ಕ ಇಂತಹ ಸರ್ಕೀಟು ಕಾಲಗಳಲ್ಲಾದರೆ ಈ ನಾಲ್ಕು ದಿನಗಳೂ ಒಂದೇ ಉದ್ದ ಹಗಲಿನಂತಾಗುತ್ತಿದ್ದಿತು; ಶಾನುಭಾಗರಿಗೆ ಕ್ರೊಸ್ ಸ್ಟಾಪು (Cross staff) ಸಂಕೋಲೆಗಳ ಸನ್ನಾಹದಿಂದ ರಿಕಾರ್ಡು ಲೆಕ್ಕಗಳ ಹಾಗೂ ಅಡಂಗಲುಗಳ ದಫ್ತರಿನಲ್ಲಿ ಅವಿತುಕೊಂಡಂತೆ ಜೀವಿಸುವಂತಾಗುತಿದ್ದಿತು. ಪಠೇಲರ ಮಾತೇ ಬೇಡ. ಗ್ರಾಮದ ಗ್ರಾಮವನ್ನೇ ತನ್ನ ಉದರದಲ್ಲಿಟ್ಟುಕೊಂಡು ಕಾಪಾಡುವ ಗ್ರಾಮದೇವತೆಯಾಗಿರುವ ಗ್ರಾಮೋದರನಾಗಿ ಮೆರೆವಂತಾಗುತಿದ್ದಿತು. ಈ ಸಲ ಮಾತ್ರ, ಉಗ್ರಾಣಿ, ಶಾನುಭಾಗರ ಎಮ್ಮೆಯಿದ್ದ ಹಟ್ಟಿಯ ಮಾಡಿಗೆ ಮುಳಿಛಾವಣಿ ಮಾಡುತಿದ್ದಾನೆ. ಶಾನುಭಾಗರು ಪಠೇಲರ ಒಕ್ಕಲುಗಳಿಗಾಗಿ ಹೊಸ ಚಾಲಗೇಣಿ ಚೀಟುಗಳನ್ನು ಬರೆದು ಅವುಗಳಿಗೆ ಅವರ ಬಲಗೈ (ಎಡಗೈ?) ಹೆಬ್ಬೆಟ್ಟಿನ ಮುದ್ರೆಗಳನ್ನು ಒತ್ತಿಕೊಳ್ಳುತ್ತಾರೆ. ಮತ್ತು ಪಠೇಲರು ವೀಳೆದೆಲೆ ಜಗಿಯುತ್ತ ತೂಗುಮಂಚದ ಹಲಗೆಯ ಮೇಲೆ ಪವಡಿಸಿದ್ದು ಅಡಿಕೆ ಹಾಳೆಯ ಬೀಸಣಿಗೆಯಿಂದ ಗಾಳಿ ಹಾಕಿಕೊಳ್ಳುತ್ತಿದ್ದಾರೆ.

ಕಲೆಕ್ಟರರ ಸವಾರಿ ಆ ಊರಿಗೆ ಬಂದುದೇಕೆಂದು ಯಾರಿಗೂ ತಿಳಿದಿಲ್ಲ; ಅವರ ಆಫೀಸಿನ ಗುಮಾಸ್ತರಾಗಲಿ, ಪೇದೆಗಳಾಗಲಿ ಇದ್ದಿದ್ದರೆ, ಪಟೇಲರಿಂದ ಸಿಹಿಯಾಳಗಳನ್ನೂ, ಶಾನುಭಾಗರಿಂದ ನಸ್ಯವನ್ನೂ, ಉಗ್ರಾಣಿಯಿಂದ ಧೂಪದೆಣ್ಣೆಯ ಉಂಡೆಗಳನ್ನೂ ಕಾಣಿಕೆ ಪಡೆವಾಗ, ಕಲೆಕ್ಟರರ ಮನಸ್ಸಿನ ಇಂಗಿತವನ್ನು (ತಮಗೇ ತಿಳಿದಿದೆ ಎಂಬಂತೆ) ಮೆಲ್ಲನೆ ನಸುನಗುತ್ತ ಅಥವಾ ತುಸು ಗಂಭೀರವಾಗಿ ಸಣ್ಣ ಸ್ವರದಲ್ಲಿ ಸೂಚಿಸುತ್ತಿದ್ದರು. ಈಗ ದೊರೆಗಳ ಜತೆಯಲ್ಲಿ ಇರುವ ಪರಿವಾರವೆಲ್ಲವೂ ಒಬ್ಬ ಬಟ್ಲರನಲ್ಲೇ ಅಡಕವಾಗಿದ್ದಿತು. ದೊರೆಗಳಿಗೆ ಅಗತ್ಯವಾದುದನ್ನು ತರಲು ಅವನು ಗ್ರಾಮದಲ್ಲಿ ಕಾಣಸಿಗುವನು. ದೊರೆಗಳ ಜತೆಯವನಾಗಿ ಹಲವು ಜಿಲ್ಲೆಗಳಲ್ಲಿ ಇರುತಿದ್ದನಾದ ಕಾರಣ ಅವನ ಮಾತುಗಳು ಎಲ್ಲ ದ್ರಾವಿಡ ಭಾಷೆಗಳ ಒಂದು ಸಮ್ಮಿಲಿತ ಭಾಷೆಯಾಗಿ ಹೊರಡುತ್ತಿದ್ದುವು. ನಮ್ಮ ಶುದ್ಧ ತುಳುವರಿಗೆ ಅವನೊಡನೆ ಸಂಭಾಷಣೆ ಮಾಡುವುದೆಂದರೆ – ಹಕ್ಕಿಗಳೊಡನೆ ಮಾತಾಡಿದ ಹಾಗಾಗುತಿದ್ದಿತು. ಅವನೊಡನೆ ಯಾವ ಭಾಷೆಯಿಂದ ಆಡಿದರೂ ಅವನಿಗೆ ತಿಳಿಯುತಿದ್ದಿತು. ಅವನ ನುಡಿಗಟ್ಟು ಮಾತ್ರ ಯಾವನಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಕಲೆಕ್ಟರರು ಬಂದುದೇಕೆಂದು ಯಾರಿಗೂ ತಿಳಿಯಲೇ ಇಲ್ಲ. ತಿಳಿಯದಿದ್ದರೆ ಸುಮ್ಮನಿರುವರೇ? ಊಹಾಪೋಹಗಳಿಗೆ ಪ್ರಾರಂಭವಾಯಿತು. ಯಾರೋ ಒಬ್ಬ ಜೈನ ಶ್ರೀಮಂತನು ಮಡಿದಿರುವನಂತೆ, ಅವನ ಆಸ್ತಿಗೆ ವಾರಸುದಾರರಿಲ್ಲದುದರಿಂದ, ಅವನ ಆಸ್ತಿಯ ನಿಗಾ ನೋಡಲು, ಅದಕ್ಕೆ ಸರಕಾರವೇ ವಾರಸಿನದೆಂದು ತೀರ್ಮಾನಿಸಲು ಅವರು ಬಂದಿರುವರೆಂದರು; ಗುತ್ತಿನ ಮನೆಯವರು ಹೊಸ ಭೂತಗುಡಿಯನ್ನು ಕಟ್ಟಿಸಲು ತೋಡುವಾಗ ಅಲ್ಲಿ ಕೊಪ್ಪರಿಗೆ ದೊರೆತುದನ್ನು ಇವರು ಹೇಗೋ ತಿಳಿದುಕೊಂಡು ಅದರ ಗೊತ್ತು ಹಚ್ಚಲು ಬಂದಿರುವರೆಂದರು; ಸಂಜೆ ಹೊತ್ತಿಗೆ ಕೆಲವರು ಎಮ್ಮೆಗಳನ್ನು ಯಾವುದೋ ಊರಿನಿಂದ ಈ ಗ್ರಾಮದ ಹಾದಿಯಾಗಿ ಸಾಗಿಸಿ ಮಾರುವರಂತೆ; ಅವರು ಕಳ್ಳರೆಂದು ಅವರನ್ನು ಹಿಡಿಯಲು ತಾವೇ ದಯಮಾಡಿಸಿದ್ದಾರೆಂದರು; ಹಲವು ಬೇನಾಮೀ ಅರ್ಜಿಗಳು ಪಠೇಲರ ವಿಷಯವಾಗಿ ಕಲೆಕ್ಟರರಿಗೆ ತಲುಪಿರಲು ಅವುಗಳ ವಿಚಾರಣೆಗಾಗಿ ಸ್ವತಃ ಚಿತ್ತೈಸಿರುವರೆಂದರು; ಪುನಃ ಹೊಸ ಸೆಟ್ಲ್ಮೆಂಟನ್ನು ಜ್ಯಾರಿಗೆ ತರುವರು, ಎಲ್ಲರಿಗೆ ದಾಕು ಹಾಕಿಸುವರು, ಆ ಊರನ್ನು ದೊಡ್ಡ ಶಹರನ್ನಾಗಿ ಮಾಡಿ ಈ ತಾಲೂಕಿನ ರಾಜಧಾನಿಯಾಗಬೇಕೆಂದು ಹೇಳುತ್ತಿರುವರು, ಯುದ್ಧಕ್ಕೆ ಜನ – ಸರಂಜಾಮುಗಳನ್ನು ಇಲ್ಲಿಂದ ಮಾಡುವ ಆಲೋಚನೆಯಲ್ಲಿರುವರು; ಇತ್ಯಾದಿ ಇತ್ಯಾದಿ ವದಂತಿಗಳು ಹರಡಿದುವು – ಪಿಸುಮಾತಿನಲ್ಲೇ. ಇವೆಲ್ಲವೂ ಒಂದೆರಡು ಮೂರು ಒಂದಾಗಿ, ಭೂತ ಗುಡಿಯ ಬಳಿಯಲ್ಲಿ ಕೆಲವರು ಎಮ್ಮೆಗಳನ್ನು ಕೂಡಿಸಿ ಯುದ್ಧದ ಸರಂಜಾಮಿಗಾಗಿ ಕಳುಹುವರಂತೆ – ಜೈನ ಶ್ರೀಮಂತನು ಮಡಿದಿರುವನೆಂದು ಬೇನಾಮೀ ಅರ್ಜಿಗಳನ್ನು ಪಠೇಲರು ಬರೆದುಕೊಂಡು ಮೃತರ ಆಸ್ತಿಯಿಂದ ಒಂದು ಕೊಪ್ಪರಿಗೆಯನ್ನು ಯುದ್ಧದ ಖರ್ಚಿಗೆ ಪಡೆಯುವಂತೆ ಸೂಚಿಸುವುದಕ್ಕಾಗಿ ಬಂದವರಂತೆ – ಎಂದೆಷ್ಟೋ ಹರಟೆಗಳೂ, ಪುರಾಣಗಳೂ, ಅನ್ಯಾಯ ವಾರ್ತೆಗಳೂ ಹಬ್ಬಿದುವು – ಪಿಸುಮಾತಿನಲ್ಲೇ.

ಪಿಸುಮಾತಿನಲ್ಲೇ, – ಏಕೆಂದರೆ ಈ ದೊರೆಗಳಿಗೆ ತುಳು, ಕನ್ನಡ, ಕೊಂಕಣಿ ಭಾಷೆಗಳು ಚೆನ್ನಾಗಿ ಬರುತಿದ್ದುವು. ಶ್ರೀಮಂತರೊಬ್ಬರ ಮನೆಯಲ್ಲಿ ದೇವಾಲಯಕ್ಕಾಗಿ ಮೋಪನ್ನು ಕಾಡಿನಿಂದ ಕಡಿದು ತರಲು ನಡೆದ ಹಂಚಿಕೆಯೊಂದನ್ನು ಇವರು ವೇಷ ಪಲ್ಲಟಿಸಿ ರಾತ್ರಿ ಹೊತ್ತಿಗೆ ಹೊಂಚಿನಿಂದ ಕೇಳಿ, ಮರುದಿನ ಭಜಕರು ಕಾಡಿನಲ್ಲಿ ಪ್ರವೇಶಿಸುವಾಗ ಅಲ್ಲಿದ್ದು ಅವರನ್ನು ವಿಪರ್ಯಾಸಕ್ಕೊಡ್ಡಿದರೆಂದೂ ಗ್ರಾಮದಲ್ಲೊಂದು ವೃತ್ತಾಂತವು ಹರಡಿದ್ದಿತು. ಅದಲ್ಲದೆ ಆ ಬಟ್ಲರನೂ ಆಗಾಗ ಗ್ರಾಮದಲ್ಲಿ ಸುಳಿದಾಡುತ್ತಿದ್ದನು; ದೊರೆಗಳು ಬೆಳಿಗ್ಗೂ, ಸಂಜೆಗೂ ಒಬ್ಬರೇ ಗ್ರಾಮದಲ್ಲಿ ಯಾರೊಡನೆ ಮಾತಾಡದೆ, ದಡದಡನೆ ಮೂರು ನಾಲ್ಕು ಮೈಲು ಅಡ್ಡಾಡುತ್ತಿದ್ದರು. ಹೀಗಾಗಿ ಉಸಿರಿನೊಳಗೆ ಮಾತುಗಳು ಸುಳಿಯುವಂತೆ ಮಾತ್ರ ಗ್ರಾಮಸ್ಥರು ಪರಸ್ಪರವಾಗಿ ಇಂತಹ ಊಹೆಗಳನ್ನು ಆಡಿಕೊಳ್ಳುತ್ತಿದ್ದರು.

ಶಾನುಭಾಗರು ಪಠೇಲರ ಬರಹಗಾರರು. ಪಠೇಲರು ಪರಂಪರೆಯಾಗಿ ಬಂದಿದ್ದ ಹುದ್ದೆಯನ್ನು ನೋಡುತ್ತ ತಮ್ಮ ಒಕ್ಕಲುಗಳಷ್ಟೇ ಹೆಬ್ಬೆಟ್ಟಿನ ಮುದ್ರೆಯನ್ನೊತ್ತುವ ವಿದ್ಯಾವಂತರಾಗಿದ್ದರು. ಪಠೇಲರಿಗೆ ಅರ್ಧ ಗ್ರಾಮವೇ ಅಡಿಯಾಳಾಗಿದ್ದಿತು; ಇಂತಹವರ ಹಣೇಬರಹವೇ ಶಾನುಭಾಗರ ಕೈಯಲ್ಲಿದ್ದಿತು. ಉಗ್ಗಪ್ಪ ಶೆಟ್ರು ಪಠೇಲರು, ನಾರಾಯಣ ರಾಯರು ಶಾನುಭಾಗರು – ಆದರೂ ನಾರಾಯಣ ಶೆಟ್ರು ಎಂದು ಪಠೇಲರ ಹೆಸರು ಎಂದು ಚಾಲಗೇಣಿ ಒಕ್ಕಲುಗಳ ಹೇಳಿಕೆಯಿದ್ದಿತು. ಅವರಿಬ್ಬರೊಳಗೆ ಮೈತ್ರಿ, ವಿಶ್ವಾಸ ಅಷ್ಟಾಗಿದ್ದಿತು. ಈ ಒಕ್ಕಲುಗಳಿಗೆ ಜಿನಸಿನ ಅಂಗಡಿಯಾಗಿ ನಾರಾಯಣ ರಾಯರ ಅಂಗಡಿಯೇ ಇದ್ದಿತು. ಚಾಲಗೇಣಿ ಸಲ್ಲಿಸಿ ಒಕ್ಕಲುಗಳು ಏನಾದರೂ ಉಳಿಸಿದ್ದರೆ ಅದನ್ನು ಆ ಅಂಗಡಿ ನುಂಗುತಿದ್ದಿತು. ಈ ಅಂಗಡಿಯಲ್ಲಿ ವ್ಯಾಪಾರ ಮಾಡದಿದ್ದರೆ ಒಕ್ಕಲುಗಳಿಗೆ ಮುಂದಣ ವರ್ಷ ಗೇಣಿಗೆ ಯಾವ ಗದ್ದೆಯೂ ದೊರೆಯುವಂತಿರಲಿಲ್ಲ; ಶಾನುಭಾಗರಿಗೆ ಆಯವು ಹೆಚ್ಚುವಂತಿರಲಿಲ್ಲ. ಗ್ರಾಮ ಉದ್ಯೋಗಸ್ಥನೆಂದು ಗೌರವ ಮಾತ್ರವಿದ್ದರೆ ಸಾಕೇ? ಗೌರವವೆಂಬುದೇನು ಆಹಾರ ಪದಾರ್ಥವಲ್ಲವಷ್ಟೇ? ಅಂಗಡಿ ವ್ಯಾಪಾರವೇ ಶಾನುಭಾಗರ ಜೀವನ ವ್ಯಾಪಾರವಾಗಿದ್ದಿತು.

ಈ ಸಂತೆಯ ದಿನ ಕಲೆಕ್ಟರರು ಆ ಊರಿನಲ್ಲಿ ಮೊಕ್ಕಾಂ ಮಾಡಿದ ಮೂರನೆಯ ದಿನ. ಶಾನುಭಾಗರ ಮನೆಯಲ್ಲಿ ಶಾನುಭಾಗರೇ ಅಡುಗೆ ಮಾಡುವ ದಿನವಾಗಿ ಬಂದಿದ್ದಿತು. ಶಾನುಭಾಗರ ಕುಟುಂಬ ನಾಗಮ್ಮ ಕೆರೆಗೆ ಹೋಗಿದ್ದರು; ಅವರು ನಾಳಿನ ದಿನ ತಾನೇ ಮನೆಯೊಳಗೆ ಅಡುಗೆ ಮಾಡಬಹುದಾಗಿದ್ದಿತು. ಹೀಗಾಗಿ ಶಾನುಭಾಗರು ಪಠೇಲರ ಚಾವಡಿಯಿಂದ ಗೇಣಿ ಚೀಟುಗಳನ್ನು ಬೇಗನೇ ಬರೆದು ಮುಗಿಸಿ, ದಫ್ತರು ಕಟ್ಟಿ ಹೊರಡುವುದರಲ್ಲಿದ್ದರು. ಅಷ್ಟರಲ್ಲಿ ಪಠೇಲರ ಧರ್ಮಪತ್ನಿಯವರು ಕೆರೆಯಿಂದ ಮಿಂದು ಒಳಕ್ಕೆ ಬಂದವರೇ, “ನನ್ನ ಗೆಜ್ಜೆಟೀಕು ಕಳವಾಗಿದೆ” ಎಂದರು. “ಕೆರೆಗೆ ಮೀಯಲು ಹೋದಾಗ ಅಲ್ಲಿ ನಾಗಮ್ಮನವರೊಡನೆ ಮಾತುಕತೆಯಾಯಿತು. ಮೀಯುತಿದ್ದೆವು. ನಾನು ಬಂದೆ. ನಾಗಮ್ಮ ಅಲ್ಲೇ ಇನ್ನೂ ಮೀಯುತ್ತಿದ್ದರು. ಅರ್ಧ ದಾರಿ ಬರುತ್ತಲೇ ಕೊರಳು ಹಗುರವಾಗಿ ತೋರಿತು. ತಲೆಯ ಮೇಲಕ್ಕೆ ಒಂದು ಕಾಗೆ ಕರ್ರೆಂದು ಕೂಗಿತು. ಕೊರಳು ಮುಟ್ಟಿದಾಗ ಎದೆಯಿಂದೇನೊ ಜೀವ ಹಾರಿತು! ಗೆಜ್ಜೆಟೀಕು ಇರಲಿಲ್ಲ. ಅದಕ್ಕಾಗಿ ಪುನಃ ಕೆರೆಗೆ ಓಡಿದೆ. ನಾಗಮ್ಮ ಮನೆಗೆ ಹಿಂತಿರುಗಿದ್ದರು. ಅವರ ಬೆನ್ನು ಹಿಡಿದು ನಡೆದೆ. ‘ನಿಮ್ಮಾಣೆ ನಾನರಿಯೆ’, ಎಂದರು. ಅಂತೂ ಇನ್ನಾರೂ ಅಲ್ಲಿಗೆ ಮೀಯಬಂದವರಿಲ್ಲ. ದನ ಕಾಯುವ ಹುಡುಗರು ಸಹ ಇದ್ದಿಲ್ಲ. ಭೂತಕ್ಕೊಂದು ತೆಂಗಿನಕಾಯಿ ಒಪ್ಪಿಸಬೇಕು. ಗೆಜ್ಜೆಟೀಕು ಬೇಗನೇ ಪತ್ತೆಯಾಗಬೇಕು,” ಎಂದು ಪಠೇಲರಿಗೆ ಧರ್ಮಪತ್ನಿಯ ದೂರು, ಮೊರೆ, ಕೂಗು.

ಶಾನುಭಾಗರು ಕಟ್ಟುತಿದ್ದ ದಫ್ತರು ಮೂಟೆಯ ಗಂಟು ಕಡಿದು ಗೇಣಿಚೀಟುಗಳೂ, ಲೆಕ್ಕದ ಪುಸ್ತಕಗಳೂ ಅದರ ಕರುಳಂತೆ ಹೊರಬಿದ್ದುವು. ಪಠೇಲರು ತೂಗುಮಂಚದಿಂದ ಫಕ್ಕನೆ ಏಳಲು ಯತ್ನಿಸಿ, ಹಲಗೆ ತೂಗಿ, ಯಾರೋ ಹಿಂದಣಿಂದ ನೂಕಿದಂತೆ ಜಗಲಿಯ ಮೇಲೆ ಬಿದ್ದರು! ಒಕ್ಕಲುಗಳಿಗೆ ನಗುವೂ ಇಲ್ಲ, ಅಳುವೂ ಇಲ್ಲ – ದಿಗಿಲು! ಕೂಡಲೇ ಕುಪ್ಪಣ್ಣಯ್ಯ (ಮಾರಿಗುಡಿಯ ಅರ್ಚಕ)ನನ್ನು ಕರೆಯಲು ಯಾವನನ್ನೋ ಓಡಿಸಿದ್ದಾಯಿತು.

ಕುಪ್ಪಣ್ಣಯ್ಯನೂ ತನ್ನನ್ನೇಕೆ ಶೆಟ್ಟಿ – ಅಲ್ಲ, ಪಠೇಲರು – ಕರೆದುದೆಂದು ಕರೆಯಲು ಬಂದಿದ್ದ ಆಳಿನಿಂದ ತಿಳಿದೇ, ಅತ್ತ ಬರುತ್ತಾ ದಾರಿಯಲ್ಲಿ ಒಂದು ಕೇರೆಹಾವು ಕಪ್ಪೆಯನ್ನು ಅಟ್ಟಿಹೋದುದನ್ನೂ, ಒಂದು ಕೋಳಿಪಿಳ್ಳೆಯನ್ನು ಗಿಡುಗನು ಎತ್ತಿಕೊಂಡು ಹಾರಿಹೋದುದನ್ನೂ, ಶಕುನಗಳನ್ನಾಗಿ ತಿಳಿದು ನೆನಪಿನಲ್ಲಿಟ್ಟುಕೊಂಡು, ಚಾವಡಿಗೆ ಬರುವ ಮೊದಲೇ ಕಾಲು ತೊಳೆದುಕೊಂಡೇ ಬಂದನು.

ಕಾರ್ಯಕಾರಣಗಳನ್ನು ತಿಳಿಸುವ ಮೊದಲೇ ಕುಪ್ಪಣ್ಣಯ್ಯನು ಪಂಚಾಂಗವನ್ನು ತೆಗೆದುಕೊಂಡು, ತಾನು ದಾರಿಯಲ್ಲಿ ಕಂಡ ಶಕುನಗಳಲ್ಲಿ ಭರವಸೆಯನ್ನಿಟ್ಟು, ಕದ್ದವನನ್ನು ಬಲು ವೇಗವಾಗಿ ಹಿಡಿದು ತರುವಂತೆ ಅವನ ಬೆನ್ನಿಗೆ ಮಾರಿಯಮ್ಮನು ಗಣಗಳನ್ನು ಕಳುಹಿರುವಳೆಂದೂ, ಅವನನ್ನು ಒಂದೇ ದಿನದಲ್ಲಿ ಎತ್ತಿಕೊಂಡು ಚಾವಡಿಗೆ ತಂದು ಮುಟ್ಟಿಸಿ ಕೋಳ ಹಾಕುವರೆಂದೂ ಇತ್ಯಾದಿ ಹೇಳಿ, ಕಾಣೆಯಾದ ಗೆಜ್ಜೆಟೀಕಿನ ಮುನ್ನೂರು ರೂಪಾಯಿಗಳ ನಷ್ಟದ ನೋವನ್ನು ಕಡಿಮೆಯಾಗುವಂತೆ ಮಾಡಿದನು. ಎರಡು ಸೇರು ಅಕ್ಕಿ, ಎರಡು ತೆಂಗಿನಕಾಯಿ, ಒಂದು ಕುಂಬಳಕಾಯಿ – ಇಷ್ಟು ಕಾಣಿಕೆ ಪಡೆದು, ವೀಳೆಯ ಜಗಿದು, ಶಾನುಭಾಗರೊಡನೆ ತನ್ನ ಮನೆಯ ದಾರಿ ಹಿಡಿದು ನಡೆದನು.

ಶಾನುಭಾಗರಿಗೆ ಸಿಡಿಲು ಬಡಿದಂತಾಗಿದ್ದಿತು. ನಾಗಮ್ಮ ಅವರ ಮೂರನೆಯ ಹೆಂಡತಿ. ತಂದೆತಾಯಿ ಇಲ್ಲದ ಆ ಅನಾಥ ಕನ್ಯೆಯನ್ನು ನಾರಾಯಣ ರಾಯರು ವಿವಾಹವಾಗಿ ಎರಡು ವರ್ಷ ಮಾತ್ರ ದಾಟಿದ್ದಿತು. ನಾಗಮ್ಮ ತೀರ ಹಳ್ಳಿಯ ಹುಡುಗಿ – ಹದಿನೈದೇ ವರ್ಷ ವಯಸ್ಸಿನ ಹುಡುಗಿ. ನಾರಾಯಣ ರಾಯರಿಗೆ ಪುತ್ರ ಸಂತತಿಯಿದ್ದಿದ್ದರೆ ಇವಳನ್ನು ಅವರು ವಿವಾಹವಾಗುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ನಾರಾಯಣರಾಯರ ಪ್ರಥಮ ಪತ್ನಿಯು ಪುತ್ರರತ್ನವನ್ನು ಹಿಂದೆ ಬಿಟ್ಟಿದ್ದರೆ ನಾಗಮ್ಮನು ರಾಯರ ಸೊಸೆಯಾಗಬಹುದೆಂದು ನಾವೂ ನೀವೂ ತಪ್ಪಾಗಿ ಎಣಿಸುವಂತಾಗುತ್ತಿದ್ದಿತು. ಅನಾಥೆ, ಗತಿಹೀನೆ, ಮೂಢೆ. ಅದು ಕಾರಣವೇ ಅವಳಲ್ಲಿ ಠಕ್ಕಿಲ್ಲ, ವಂಚನೆಯಿಲ್ಲ, ಸರಳ ಸ್ವಭಾವ. ತಿಂಗಳಲ್ಲಿ ಅವೇ ಮೂರು ದಿನ ಹಿತ್ತಲ ಹೊರಗೆ ಯಾರೊಡನೆಯಾದರೂ ಮುಕ್ತ ಭಾಷಣ ಮಾಡಬಹುದಾಗಿದ್ದಿತು. ತಿಂಗಳಲ್ಲಿ ಇಪ್ಪತ್ತೇಳು ದಿನವೂ ಹಿತ್ತಲಲ್ಲಿಯೇ ಇರುವಳು. ಯಾರೊಡನೆ ಮಾತಾಡುವುದಕ್ಕೂ ಜಾತಿ ಕಟ್ಟಳೆ ಇದೆ. ಪತಿದೇವನ ಗೌರವ ಸಂರಕ್ಷಣೆಯ ಭಾರ ಬೇರೆ. ಹೀಗಾಗಿ ಹಳ್ಳಿಯ ಹವೆ, ಹಿತ್ತಲ ಹೊರಗೆ ಉಸಿರಾಡಲು ದೊರೆವುದೆಂದರೆ ತಿಂಗಳಲ್ಲಿ ಅವೇ ಮೂರು ದಿನ. ಮನೆಯಲ್ಲಿನ ಬಟ್ಟೆಗಳನ್ನು ಒಗೆದೂ, ತಾನೂ ಸುಖವಾಗಿ ಮಿಂದೂ, ಮನೆಗೆ ಬಂದು – ಅವೇ ಮೂರು ದಿನ ಸ್ವಯಂಪಾಕದ ಕಷ್ಟ, ಹಾಳಾದ ಅಡುಗೆಯ ನಷ್ಟ, ಇವುಗಳನ್ನು ತಿಳಿದ ಸಿಡುಮೋರೆಯ ಗಂಡನಿಕ್ಕುವ ಕೂಳಿಷ್ಟು ಸಂತೋಷವಾಗಿ ಉಣ್ಣುವಳಾದರೂ, ಹೊರಬಯಲಲ್ಲಿ ಕೆರೆಯ ಬಳಿಯಲ್ಲಿ ಕಾಣಿಸಿದ ಇತರ ಹೆಂಗಸರೊಡನೆ ಆಡಿದ ಸಂಭಾಷಣೆಯ ನೆನಪೇ ಈ ಅನ್ನವು ಪರಮಾನ್ನವಾಗುವಂತೆ ಈ ಪದಾರ್ಥಗಳಿಗೆಲ್ಲ ಒಗ್ಗರಣೆ ಹಾಕಿದಂತೆ ಅವಳಿಗೆ ತೃಪ್ತಿಯನ್ನೂ, ರುಚಿಯನ್ನೂ ಉಂಟುಮಾಡುತಿದ್ದಿತು.

ಸಿಡಿಲು ಬಡಿದಂತಾಗಿದ್ದ ಶಾನುಭಾಗರು ಮನೆಗೆ ಬಂದು ಮುಟ್ಟುತ್ತಲೇ ತನಗೆ ಬಡಿದಂತಾಗಿದ್ದ ಸಿಡಿಲನ್ನು ನಾಗಮ್ಮನ ಮೇಲೆ ಕೆಡವಿದರು. ಎರಡು ಮಾರು ದೂರದಿಂದ, “ಬಂದ ಮನೆಗೆ ಬೆಂಕಿ ಇಟ್ಟಿಯಾ? ಹುಟ್ಟಿದಲ್ಲಿ ಸುಟ್ಟು ಸುಡುಗಾಡು ಮಾಡಿದೆ. ಅಷ್ಟೇ ಸಾಲದಾಗಿದ್ದಿತೆ?” ಎಂದೊಮ್ಮೆಗೇ ಶಾನುಭಾಗರು ನುಡಿದ ಮಾತುಗಳ ಅರ್ಥವು ಅವಳಿಗೆ ತಿಳಿಯಲೇ ಇಲ್ಲ. ಅವಳು ಮನೆಯ ಮಾಡು ನೋಡಿದಳು; ದಿಗಿಲಿನಿಂದ ನೋಡಿದಳು; ಬೆಂಕಿಯ ಮಾತಿರಲಿ, ಹೊಗೆ ಕೂಡ ಏಳುತ್ತಿಲ್ಲ. “ನಾನು ಮನೆಯೊಳಗೆ ಕಾಲಿಡುವುದೇ ನಾಳೆ ಮಿಂದಾದ ಬಳಿಕವಲ್ಲವೆ? ಆಗ ತಾನೆ ಬೆಂಕಿ ಮುಟ್ಟಬಹುದಲ್ಲವೆ?” ಎಂದಳು. ಶಾನುಭಾಗರು ಮೈ ಮುರಿದುಕೊಂಡು ಇವಳು ತನ್ನನ್ನೇ ಹೀಯಾಳಿಸಿದಳೆಂದು ಸಿಟ್ಟಾಗಿ – “ನೀನು ಮನೆಯೊಳಗೆ ಕಾಲಿಡುವುದು ನಾಳೆ! ಮಿಂದಾದಮೇಲೆ! ‘ನಾಳೆ’ಯೆಂದರೆ ಗಣಪತಿಯ ಮದುವೆಯಾದ ‘ನಾಳೆ!’ ನೀನಿನ್ನು ಮೀಯುವುದುಂಟೆ? ನಿನ್ನನ್ನು ಮೀಯಿಸುವುದು, ಅಲ್ಲಿಂದಲೇ ಕೊಂಡೊಯ್ಯುವುದು – ಶ್ಮಶಾನಕ್ಕೆ!” ಎಂದು ಗರ್ಜಿಸಿಬಿಟ್ಟರು – ಒಂದು ಮಾರು ದೂರದಿಂದ.

ಶಾನುಭಾಗರು ಸಿಡಿಲೆರಗಿದಂತಾಗಿದ್ದರಷ್ಟೆ! ಈ ಹುಡುಗಿಯು (ಶಾನುಭಾಗರ ಪತ್ನಿ) ನಕ್ಷತ್ರಗಳನ್ನೇ ಕಂಡಳು. ಅವಳಿಗೆ ಈ ಮಾತುಗಳ ಅರ್ಥವಾಗಲಿಲ್ಲ. ಆದರೂ ಅಭಿಪ್ರಾಯವಾಯಿತು; ತನ್ನ ಮೇಲೆ ಏನೋ ಭಯಂಕರ ಅಪರಾಧ ಅಥವಾ ಅಪವಾದದ ಆರೋಪವಾಗಿದೆಯೆಂದು. ಅಂಗಳದಲ್ಲಿ ನಿಂತವಳು ಕೂತಳು. ಶಾನುಭಾಗರು ತಮ್ಮ ಎಲ್ಲ ವಸ್ತ್ರ, ಕೈಕೋಲುಗಳನ್ನು ಜಗಲಿಯ ಮೇಲೆ ಮಡಗಿದರು. ಹಟ್ಟಿ ಮಾಡಿಗೆ ಮುಳಿಛಾವಣಿ ಮಾಡುತ್ತಿದ್ದ ಉಗ್ರಾಣಿಯು ಈ ಸಂಭಾಷಣೆಗೆ ಕಿವಿಕೊಟ್ಟನು.

“ನೀನು ಕರೆಯಲ್ಲಿ ಮೀಯುತ್ತಿದ್ದಾಗ ಮತ್ತಾರಿದ್ದರು?”

“ಪಠೇಲರ ಹೆಂಡತಿ. ಬೇರೆ ಯಾವ ಹೆಂಗಸರು ಸಹ ಇದ್ದಿಲ್ಲ. ಗಂಡಸರ ಮಾತಿರಲಿ.”

“ಗಂಡಸರು ಸಾಯಲಿ! ಪಠೇಲರ ಹೆಂಡತಿಯೊಡನೆ ಏನು ಮಾತಾಡುತ್ತಿದ್ದೆ?”

“ಅವಳು, ಈ ದಿನ ಸಂತೆಯ ದಿನವಲ್ಲ, ಮುಂದಿನ ವಾರ ಸಂತೆಯ ದಿನ, ಅಂದರೆ ಇನ್ನೆಂಟು ದಿನಗಳಲ್ಲಿ ತನ್ನ ತಾಯಿಯ ಮನೆಗೆ ಹೋಗುತ್ತೇನೆಂದಳು. ‘ನನ್ನ ತಂದೆಯ ಮನೆಯೂ ಅಲ್ಲೇ ಹತ್ತಿರ. ಆದರೆ ನನಗೆ ತಂದೆತಾಯಿಯಿಬ್ಬರೂ ಇಲ್ಲ’ ಎಂದೆ. ಅವಳು ಸ್ವಲ್ಪ ಮರುಗಿದಳು. ಹಾಗೇ ಅವಳು ಮಿಂದು ಹೋದಳು. ಅವಳು ಮೀಯುವ ನೀರು ಮಡಿಯಾಗಲೆಂದು ಸ್ವಲ್ಪ ಕಾದು ನಾನು ಮಿಂದು ಬಂದೆ. ಅಷ್ಟೆ.”

“ಹೆತ್ತವರು ಸತ್ತರೂ ಅವರ ಹೆಸರಿಗೂ ಮಸಿ ಬಳೆಯಲು ಅವರ ನೆನಪೇಕೆ ನಿನಗೆ? ನೀರು ಮಡಿಯಾಗಲೆಂದು ಕಾಯುತಿದ್ದೆಯಾ? ಅಥವಾ ಅವಳು ಅತ್ತ ಹೋಗುತ್ತಲೇ ಅವಳು ಅಲ್ಲಿ ಬಿಟ್ಟುದನ್ನು ಎತ್ತಿ ತರಲು ಕಾಯುತಿದ್ದೆಯಾ?”

“ಅವಳು ಬಿಟ್ಟುದೇನು? – ಓಹೋ! ನಾನು ಬರುವಾಗ ದಾರಿಯಲ್ಲಿ ನನ್ನನ್ನು ಪುನಃ ಮಾತಾಡಿಸಿ ತನ್ನ ಕೊರಳ ಗೆಜ್ಜೆಟೀಕನ್ನು ಕೆರೆಯ ಬಳಿ ನೋಡಿದೆನೆ? – ಎಂದಳು. ಅವಳ ಕೊರಳಿಗಿದ್ದಾಗ ಸಹ ನಾನು ನೋಡಿದ್ದಿಲ್ಲ ಎಂದೆನು. ಅಷ್ಟೇ, ಅವಳು ಅತ್ತ ಹೋದಳು, ನಾನು ಇತ್ತ ಬಂದೆ.”

“ ‘ಇತ್ತ ಬಂದೆ’ ಎನ್ನಬೇಡ, ‘ಇತ್ತ ತಂದೆ’ ಎನ್ನು. ಎಲ್ಲಿಟ್ಟಿದ್ದಿ ಅದನ್ನು? ಈಗಲೇ ಕೊಡು. ನಾನು ಬಡವನು. ಈ ಮನೆ, ಹಿತ್ತಿಲು ಎಲ್ಲವೂ ಪಠೇಲರದು. ಅವರ ಪಠೇಲಿಕೆಯೂ, ನನ್ನ ಶಾನುಭೋಗಿಕೆಯೂ ನನ್ನವಾದರೂ, ನಮ್ಮಿಬ್ಬರ ಜೀವನವು ನಡೆಯುತ್ತಿರುವುದು ಅವರ ಅನುಗ್ರಹದಿಂದ. ಬಡತನವಿದ್ದರೆ ಚಿಂತಿಲ್ಲ. ಮೂಗುತಿಯಿದ್ದರೆ ಸಾಕು, ಮಂಗಲ ಸೂತ್ರ ಸಾಕು; ಗೆಜ್ಜೆಟೀಕಿನ ಆಸೆ ಮಾಡಬೇಡ. ಇದಾರಿಗೂ ಗೊತ್ತಿಲ್ಲ. ನಿನ್ನಲ್ಲಿ ಯಾರೂ ತಪ್ಪೆಣಿಸಿಲ್ಲ. ಭೂತಕ್ಕೆ ಹೇಳಿಕೊಂಡಿದ್ದಾರೆ. ಮಾರೀ ಗುಡಿಗೆ ಬಲಿಯಾಗುವೆ. ಅದನ್ನು ಇತ್ತ ಕೊಡು. ಅಥವಾ ಎಲ್ಲಿದೆಯೆಂದು ಹೇಳು. ನಾನು ಅದು ಕೆರೆಯ ಬಳಿಯಲ್ಲೇ ಸಿಕ್ಕಿತೆಂದು ಪಟೇಲರಿಗೆ ಹೇಳಿ ನಂಬಿಸಿ ಬರುತ್ತೇನೆ. ಇತ್ತಕೊಡು. ಮೂರನೆಯವಳು ನೀನು. ನೀನು ಸತ್ತರೆ ನನಗೆ ಬಹಳ ಸಂಕಷ್ಟ. ಇನ್ನೊಂದು ಮದುವೆಯಾಗುವುದೂ ಕಷ್ಟ. ನಾನು ಅಡುಗೆ ಮಾಡಿಕೊಂಡಿರುವುದೂ ಕಷ್ಟ. ಇತ್ತ ಕೊಡು, ಅಯ್ಯೊ – ನಿನ್ನನ್ನು ಮುಟ್ಟುವುದಕ್ಕಿಲ್ಲವಲ್ಲಾ! ಶೂರ್ಪನಖಿಯಂತೆ ನಿನ್ನನ್ನು ಮಾಡಿಬಿಡುತ್ತಿದ್ದೆ. ಆದರೂ ನೋಡು ದಂಡಿಸಬೇಕಾಗುವುದು; ಅನ್ನಾಹಾರ ಕೊಡಲಾರೆ. ಇತ್ತ ಕೊಡು. ಇಲ್ಲದಿದ್ದರೆ ತಲೆಯ ಮೇಲೆ ಕಲ್ಲು ಹೊತ್ತು ಹಾಕುತ್ತೇನೆ. ಬೇಗ ಕೊಡು.”

ನಾಗಮ್ಮ ಅಂಗಳದಲ್ಲಿ ಬಿಸಿಲಿಗೇ ಕೂತಿದ್ದಳು. ನಕ್ಷತ್ರ ಕಂಡು ಕೂತಿದ್ದವಳು ಈಗ ಆ ನಕ್ಷತ್ರಗಳೆಲ್ಲ ಒಂದಾಗಿ ಚಂದ್ರನಂತಾಗಿ, ಆ ಚಂದ್ರನೇ ಅಡ್ಡವಾಗಿ ಕಪ್ಪು ಮೋಡದಂತಾಗಿ, ಅದರಿಂದ ಜಡಿಮಳೆ ಸುರಿದಂತಾಗಿ….. ಗೊಳೋ ಎಂದು ಅತ್ತಳು. ಮುಟ್ಟಾದವಳು ನೀರನ್ನು, ಮೀಯುವ ಮೊದಲು ಕುಡಿಯಲಾರದೆ, ಹಸಿವು ನೀರಡಿಕೆಗಳಿಂದ ಬೆಳಗ್ಗಿನಿಂದಲೂ ಬಾಡಿದ್ದಳು. ಪತಿದೇವನ ಒಂದೊಂದು ವಾಕ್ಯ, ಅದರೊಡನೆ ಹರಿದ ಬಿಸಿ ಉಸಿರು, ಅವನ ಕೈಕಣ್ಣುಗಳ ಕರಾಳ ಅಭಿನಯ, ಅವನು ಭೂತ, ಮಾರಿ, ಶೂರ್ಪನಖಿಗಳ ಹೆಸರೆತ್ತಿದ ಬಗೆ, ನೋಟಕ್ಕಿಂತ ನಾಲಗೆಯ ತೀಕ್ಷ್ಣತೆ, ಇವುಗಳೆಲ್ಲಕ್ಕೂ ಮೇಲಾಗಿ “ತಲೆಯ ಮೇಲೆ ಕಲ್ಲು ಹೊತ್ತು ಹಾಕುವ” ಹೊಸ ವಾಗ್ದಾನ – ಇವುಗಳಿಂದಾಗಿ “ಇತ್ತಕೊಡು” ಎಂದು ಅವನು ಒಮ್ಮೊಮ್ಮೆ ಹೇಳುತ್ತಿದ್ದಂತೆ, ಒಂದೊಂದಾಗಿ ಅವಳ ಪ್ರಾಣಗಳು ಅವಳ ದೇಹವನ್ನು ಬಿಡುವಂತಾಗಲು, – “ಬೇಗ ಕೊಡು” ಎಂದು ಅವನು ಕೊನೆಯ ಸಲ ಗರ್ಜಿಸಿದ್ದೇ, ಬಿಸಿಯಾದ ಅಂಗಳದ ಧೂಳಿನಲ್ಲಿ ತನ್ನ ಕಣ್ಣೀರ ಧಾರೆಯಿಂದ ತಂಪನ್ನುಂಟು ಮಾಡುತ್ತ ಅಲ್ಲೇ ಮಲಗಿದಳು.

ಶಾನುಭಾಗರು ಬಿಡುವರೆ? “ಈ ಆಟ ನನ್ನೊಡನೆಯೆ? ಇಷ್ಟರಲ್ಲೇ ಭೂತ ಹಿಡಿಯಿತೆ? ಮಾರಿ ಬಡಿಯಿತೆ?” ಎನ್ನುತ್ತ ನಿಜವಾಗಿಯೂ ಒಂದು ಕಲ್ಲನ್ನೆತ್ತಿಕೊಂಡು ಅವಳ ತಲೆಯನ್ನು ಈಗಲೇ ಜಜ್ಜುವೆನೆಂಬಂತೆ ಅಭಿನಯಿಸಿದರು. ನಾಗಮ್ಮನ ಕೈಮೈಗಳು ರವಷ್ಟೂ ಕದಲಲಿಲ್ಲ.

ಸಂಭಾಷಣೆಯ ಸ್ವಾರಸ್ಯವನ್ನು ಕೇಳುತ್ತಿದ್ದ ಉಗ್ರಾಣಿ ಪೂವನು ಮೆಲ್ಲನೆ ಮಾಡಿನಿಂದ ಕೆಳಕ್ಕಿಳಿದು, ಸದ್ದಿಲ್ಲದೆ ಶಾನುಭಾಗರ ಹಿಂದಕ್ಕೆ ಬಂದು, ಅವರ ಕೈಗಳಿಂದ ಆ ಕಲ್ಲನ್ನು ಫಕ್ಕನೆ ಕಿತ್ತುಕೊಂಡು ಅದನ್ನು ದೂರಕ್ಕೊಗೆದನು.

ಬಹುಶಃ ತಾತ್ಕಾಲಿಕ ಉನ್ಮತ್ತತೆಯಿಂದ ನಾಗಮ್ಮನನ್ನು ಕೊಂದುದಕ್ಕೆಂದು ಶಾನುಭಾಗರು ಜನ್ಮಾಂತ್ಯದವರೆಗೂ ಬಂದೀಖಾನೆಗೆ ಹೋಗಬಹುದಾಗಿದ್ದ ಪ್ರಸಂಗದಿಂದ ಅವರನ್ನು ಪೂವನೇ ಉಳಿಸಿದನು. ಉಗ್ರಾಣಿಯೆಂದರೆ ಗ್ರಾಮಪೋಲೀಸಲ್ಲವೆ? ಕೈಯಲ್ಲಿದ್ದ ಕಲ್ಲು ಮಾಯವಾದೊಡನೆ ಶಾನುಭಾಗರಿಗೆ ಹಿಡಿದ ಆವೇಶವು – ಪಾತ್ರಿಯ ಕೈಯ್ಯಲ್ಲಿದ್ದ ಬೆತ್ತಮುದ್ರಿಕೆ ಕಿತ್ತರೆ ಮುಗಿವಂತೆ – ಮುಗಿಯಿತು.

“ಶಾನುಭಾಗರೆ! ಒಂದು ಕೊಡಪಾನ ನೀರು ತಂದು ಅಮ್ಮನ ಮುಖದ ಮೇಲೆ ಚೆಲ್ಲಬಾರದೆ? ನೀವು ತಡಮಾಡಿದರೆ ಅವರು ಸತ್ತಾರು. ಇಲ್ಲವೇ ನಾನೇ ತಂದು ಚೆಲ್ಲುತ್ತೇನೆ,” ಎಂದನವನು.

ಪೂವನೇನು ಬ್ರಾಹ್ಮಣನೆ? ಅವನು ಚೆಲ್ಲುವ ನೀರಿನ ಒಂದು ತಟಕಾದರೂ ಅವಳ ತುಟಿಗೆ ಅಂಟಿದರೆ ಅವಳ ಜಾತಿ ಕೆಡುವುದಲ್ಲ! ತಾವೇ ಓಡಿಹೋಗಿ ಒಂದು ಚೆಂಬು ನೀರನ್ನು ತಂದು ಅವಳ ತಲೆಯ ಮೇಲೆ ತಮ್ಮ ನಡುಗುವ ಕೈಗಳಿಂದ ಚೆಲ್ಲಿದರು, ಸುರಿದರು. “ನಿನ್ನನ್ನು ಮೀಯಿಸುವುದು,” ಎಂದು ಅವಳನ್ನು ಬೆದರಿಸಿ ಆಗ ಹೇಳಿದ ಮಾತಿನ ನೆನಪಾಗಿದ್ದಿತೆ ಶಾನುಭಾಗರಿಗೆ?

ಶಾನುಭಾಗರು ಕಟ್ಟುತಿದ್ದ ದಫ್ತರು ಮೂಟೆಯ ಗಂಟು ಕಡಿದು ಗೇಣಿಚೀಟುಗಳೂ, ಲೆಕ್ಕದ ಪುಸ್ತಕಗಳೂ ಅದರ ಕರುಳಂತೆ ಹೊರಬಿದ್ದುವು. ಪಠೇಲರು ತೂಗುಮಂಚದಿಂದ ಫಕ್ಕನೆ ಏಳಲು ಯತ್ನಿಸಿ, ಹಲಗೆ ತೂಗಿ, ಯಾರೋ ಹಿಂದಣಿಂದ ನೂಕಿದಂತೆ ಜಗಲಿಯ ಮೇಲೆ ಬಿದ್ದರು! ಒಕ್ಕಲುಗಳಿಗೆ ನಗುವೂ ಇಲ್ಲ, ಅಳುವೂ ಇಲ್ಲ – ದಿಗಿಲು!

ಹುಡುಗಿ ಮೆಲ್ಲನೆ ಕಣ್ತೆರೆದು ನೋಡಿದಳು. ಉಗ್ರಾಣಿಯು, “ಅಮ್ಮಾ! ಏಳಿ ಏಳಿ, ಇಲ್ಲಿ ಬಿಸಿಲು ಬಹಳ. ಹಟ್ಟಿಯ ಛಾವಣಿ ಮುಗಿದಿದೆ. ಅಲ್ಲಿ ಹೋಗಿ ಕೂತಿರಿ. ಊಟಕ್ಕಾದೊಡನೆ ಕರೆಯುವರು,” ಎಂದನು.

ಶಾನುಭಾಗರ ಮಾತಿಲ್ಲ. ಅಮ್ಮ ಮೆಲ್ಲನೆ ಅಲ್ಲಿಗೆ ಹೋಗಿ ಕೂತಳು. ಶಾನುಭಾಗರ ಅಂದಿನ ಅಡಿಗೆ – ಏನು ಹೇಳಬಹುದು! ನಳಪಾಕ, ಭೀಮಪಾಕ ಕೇಳಿರಬಹುದಷ್ಟೇ – ಇದು ಶಾನುಭಾಗಪಾಕ. ಉಪ್ಪನ್ನು ಬೇಯಿಸಿದರೆ ಅಕ್ಕಿಯನ್ನವಾಗುವುದುಂಟೆ? ಅಕ್ಕಿಯ ತೋವೆಗೆ ಒಗ್ಗರಣೆ ಹಿಡಿದೀತೇ? ಬದನೆ ಸುಟ್ಟದ್ದು ಸುಟ್ಟು ಬೂದಿಯಾಯಿತು. ಬೂದಿಯ ಗೊಜ್ಜು ಆಗುವುದುಂಟೆ? ಹೀಗಿರುವಾಗ ಬಡಿಸುವುದೇನು? ಉಣ್ಣುವುದೇನು?

ಆದರೆ ಸುಖಸಂತೃಪ್ತಿ ಇಷ್ಟರಲ್ಲೇ ಒದಗಿತು. ಪುಣ್ಯಕ್ಕೆ ಅಂದು ಸ್ಮಾರ್ತ ಏಕಾದಶಿ. ನಾಗಮ್ಮನ ಅಪರಾಧ ಅಪವಾದಗಳೂ, ನಾರಾಯಣ ರಾಯರ ಉನ್ಮಾದಪ್ರಮಾದಗಳೂ ಈ ವಿಪರ್ಯಾಸದಿಂದ ಉಪವಾಸದಿಂದ ಪ್ರಾಯಶ್ಚಿತ್ತ ಹೊಂದಿ ಮಾಯವಾದುವು.

ಪಠೇಲರ ಮನೆಯಲ್ಲಿ ಗೆಜ್ಜೆಟೀಕು ಸಿಕ್ಕುವ ಹಾಗೆ ಎಷ್ಟೋ ದೇವರಿಗೆ ಎಂತೆಂತಹವೋ ಹರಕೆಗಳಾದವು. ಆದರೂ ಗೆಜ್ಜೆಟೀಕಿನ ಒಂದು ಗೆಜ್ಜೆಯಾದರೂ ಠೀಕಾಗಿ ಎಲ್ಲಿದೆಯೆಂದು ತಿಳಿಯಲೂ ಇಲ್ಲ; ಅದನ್ನು ಪಠೇಲರ ಪತ್ನಿ ಅಬ್ಬಕ್ಕೆ ಹೆಂಗಸು ಏನು ಮಾಡಿರಬಹುದೆಂಬ ಪ್ರಶ್ನೆಗೆ ಯಾವ ಮಂತ್ರವಾದಿ, ಪೂಜಾರಿ, ಜೋಯಿಸ ಮೊದಲಾದವರ ಟೀಕೆಯೂ ಹೊರಡಲಿಲ್ಲ.

ರಾತ್ರಿಯೂ ನಿರಾಹಾರವೆ! ನಾಗಮ್ಮ ಹಟ್ಟಿಯಲ್ಲೇ! ನಾರಾಯಣ ರಾಯರು ಜಗುಲಿಯಲ್ಲೇ! ಗ್ರಾಮಪೋಲೀಸು – ಉಗ್ರಾಣಿ, ಮನೆ – ಹಟ್ಟಿಗಳಲ್ಲಿನ ಇವರಿಬ್ಬರ ಕಾವಲಿಗಾಗಿ ಇಲ್ಲೇ.

ನಾರಾಯಣ ರಾಯರಿಗೆ ನಿದ್ದೆ ಹತ್ತದು. ಶೆಟ್ತಿಯ ಮಾತನ್ನು ಪಠೇಲನಂತೂ – ಮುನ್ನೂರು ರೂಪಾಯಿ ಮೌಲ್ಯದ ಸೊತ್ತನ್ನು ಕಳಕೊಂಡ ಉಗ್ರಪ್ಪ ಶೆಟ್ಟಿಯಂತೂ – ನಂಬದಿರಲಾರನು. ತಿಂಗಳಿಗೊಂದು ಮುಡಿ ಅಕ್ಕಿಕೊಟ್ಟು ಆತನು ಚಿಕ್ಕ ಸಾಲೆಯ ಮಾಸ್ತರರನ್ನು ತನ್ನ ಕೆಲಸಕ್ಕೆ ಇಟ್ಟುಕೊಳ್ಳುವನು. ಒಕ್ಕಲುಗಳ ಭತ್ತ (ಕಾಣಿಕೆಗಳು ಸಹ) ತನಗೆ ತಪ್ಪುವುದು. ಇತ್ತ ಅಂಗಡಿ ಮನೆಗಳನ್ನು ಬಿಡಬೇಕೆನ್ನುವನು; ವ್ಯಾಜ್ಯವಾಗಲಿಲ್ಲ – ಅವನ ಅಕ್ಕಿ ದಾಸ್ತಾನು ಇಡುವ ಸ್ಥಳಕ್ಕಾಗಿ. ಅದರಿಂದ ಉಪ್ಪನ್ನದ ಕಾಸುಗಳು ಮಾಯವಾಗುವುವು. ಇಷ್ಟಕ್ಕೆಲ್ಲ ಕಾರಣ ನಾಗಮ್ಮ ಆ ಕೆರೆಗೆ ಮೀಯುವುದಕ್ಕೆ, ಶೆಟ್ತಿ ಹೋದಾಗಲೇ ಹೋದುದರಿಂದಾಯಿತು. ನಾಗಮ್ಮನ ಮೇಲೆ ಖಂಡಿತ ಸಂಶಯವಿದ್ದರೂ ಆತನ ರಿಕಾರ್ಡೆಲ್ಲ ತನ್ನ ಸ್ವಾಧೀನದಲ್ಲಿರುವುದಕ್ಕಿಂತೂ ಆತನ ಒಕ್ಕಲುಗಳ ಗೇಣಿಚೀಟು ರಶೀದಿಗಳೆಲ್ಲ ತನ್ನಿಂದಾಗಬೇಕಾದುದರಿಂದ, ತನ್ನ ಬದಲು ಮತ್ತೊಬ್ಬ ದೊರೆವವರೆಗೆ ನಾಗಮ್ಮನ ಮೇಲೆ ಸಂಶಯವಿಲ್ಲದಂತೆ ಪಠೇಲನು ತೋರಿಸಿಕೊಳ್ಳುವನು. ಆದುದರಿಂದ ತಾನೇ ನಾಗಮ್ಮನಲ್ಲಿ ಸಂಶಯವುಳಿಯದಂತೆ ಪ್ರಮಾಣ ಮಾಡಲು ಸರ್ವ ಪ್ರಯತ್ನಗಳನ್ನು ಮಾಡಬೇಕಾಗಿದೆ, – ಎಂದು ಇಡೀ ರಾತ್ರಿ ಚೆನ್ನಾಗಿ ಆಲೋಚಿಸಿ ನಿಶ್ಚೈಸುತ್ತಲೇ ಮುಂಜಾವಿನ ಹುಂಜವು ಕೂಗಲು, ನಾಗಮ್ಮನನ್ನು – ಅಂತರಿಕ್ಷದಲ್ಲಿ ಗಾಳಿಪಟದಂತೆ (ಪಿಶಾಚಿಯಂತೆ ಎನ್ನಲು ಹೇಸುವೆವು) ಅಲೆದಾಡುತ್ತಿದ್ದ ಕನಸಿನಲ್ಲಿ ಇಡೀ ರಾತ್ರಿಯನ್ನು ಕಳೆದ ನಾಗಮ್ಮನನ್ನು – ಎಬ್ಬಿಸಿ, ಉಗ್ರಾಣಿಯ ಕಾವಲಲ್ಲಿ ಕೆರೆಗೆ ಹೋಗಿ ಮಿಂದುಬಾರೆಂದು ಕಳುಹಿಸಿದನು.

ನಾಗಮ್ಮನೊಬ್ಬಳೇ ಹೋಗಿದ್ದರೆ – ಇನ್ನಾರೂ ದಾರಿಯಲ್ಲಿ ಸಿಕ್ಕರೆ ಹಿಂದಿನ ದಿನದ ವೃತ್ತಾಂತ ಹೊರಡಬಹುದು; ಅವಳಾದರೂ ನೀರಲ್ಲಿ ಮುಳುಗಿ ಸಾಯುವಂತೆ ಪ್ರಯತ್ನಿಸಲೂಬಹುದು – ಎಂದೇ ಶಾನುಭಾಗರ ಎಚ್ಚರಿಕೆಯಿದು. ಅವಳು ಮಿಂದು ಬರುವುದರೊಳಗೆ ಮುಂದಿನ ಕಾರ್ಯಕ್ರಮವು ಗೊತ್ತಾಗಬೇಕಾಗಿದೆ.

ಅದೇ ವರ್ಷವೇನೋ ನಮ್ಮ ಸೆಟ್ಲ್ಮೆಂಟು ಆಗಿದ್ದಿತು. ಯುಗ ಯುಗಕ್ಕೆ ಭಗವಂತನು ಅವತಾರವನ್ನೆತ್ತುವ ಹಾಗೆ ತಲಾಂತರಕ್ಕೊಮ್ಮೆ ನಮ್ಮಲ್ಲಿ ಸೆಟ್ಲ್ಮೆಂಟಿನ ಅವತಾರವಾಗುವುದುಂಟು. ಅಧರ್ಮವನ್ನು ಕಿತ್ತು, ಧರ್ಮವನ್ನು ದೃಢಗೊಳಿಸಿ ಭಗವಂತನು ವೈಕುಂಠಕ್ಕೆ ತೆರಳುವನು. ಪ್ರಪಂಚವನ್ನು ಅಳೆದು ಬಲಿಯನ್ನು ಮೆಟ್ಟಿ ವಾಮನನು ಇಂದ್ರನ ಪದವಿಗೆ ಕೊರತೆಯಿಲ್ಲದಂತೆ ಮಾಡಿದನು. ಸೆಟ್ಲ್ಮೆಂಟು ಮಾಡಲು ಬರುವ ಉದ್ಯೋಗಸ್ಥರು ಭೂಮಿಯನ್ನೆಲ್ಲ ಅಳೆದು ಯಾರನ್ನೂ ಮೆಟ್ಟುವುದಿಲ್ಲವೆಂದರೂ, ದೇಶದ ಸುಧಾರಣೆಯ ಖರ್ಚಿಗೆ ಕೊರತೆಯಿಲ್ಲದಂತೆ ಮಾಡುವ ವಾಮನಾವತಾರಿಗಳೇ ಆಗಿ ಮೂವತ್ತು ವರುಷಗಳವರೆಗೆ ತಮ್ಮ ನಿಜಗೃಹವನೈದುವರು.

ಈ ಅಧಿಕಾರಿಗಳ ಪರಿವಾರದಲ್ಲಿ ಆಗ ನೂರಾರು ಆಳುಗಳು ಬಂದಿದ್ದರು. ಇಲ್ಲಿಯ ಅಲೆದಾಟ ಮುಗಿದ ಬಳಿಕ ಇವರಲ್ಲಿ ಹೆಚ್ಚಿನವರಿಗೆ ಸ್ವದೇಶಕ್ಕೆ ಹಿಂತಿರುಗಲು ಮನವೇತಕ್ಕೆ ಒಡಂಬಡುವುದಿಲ್ಲವೋ ತಿಳಿಯದು. ಇವರ ಜೀವನಕ್ಕೆ ತಾಯ್ನಾಡು ಹಾಲೂಡಿಸದಿರಬಹುದು. ಇಲ್ಲಿಟ್ಟ ಕಾಲು ಹಿಂದೆಗೆಯಲು ಈ ವೀರರಿಗೆ ಮನ ಒಪ್ಪದಿರಬಹುದು. ಆಗಲೇ ಅವರು ತಮ್ಮ ಸರ್ವಾಂಗಪರಿಣತ ಬುದ್ಧಿಯನ್ನು ಪ್ರಕಟಿಸಿರುವರು. ಕೆಲವರು ‘ಬೀಡಾ, ಸೋಡಾ’ ಮಾರುವರು. ಕೆಲವರು ಕಂಚಿನ ಪಾತ್ರೆಗಳನ್ನು ಎರಕ ಹೊಯ್ಯುವರು. ಕೆಲವರು ಜಟ್ಕಾ ಸಾರಥಿಗಳಾಗುವರು. ಕೆಲವರು ನಾರುಹುಣ್ಣಿನ ಕೈಕಾಲುಗಳನ್ನು ಪ್ರದರ್ಶಿಸುವ ಅಭಿನಯ ಮಾಡುತ್ತ, ತೋಡಿ ರಾಗದಲ್ಲಿ ತಮ್ಮ ದುಃಖವನ್ನು ಹಾಡುತ್ತ, ತೋಡುಗಳ ಮಗ್ಗುಲಲ್ಲೂ, ಸಾರಂಗ ರಾಗದಲ್ಲಿ ತಮ್ಮಂತರಂಗವನ್ನು ಬಹಿರಂಗಪಡಿಸುತ್ತ ದಾರಿದಾರಿಗಳಲ್ಲೂ ನಿಂತು ಕಾಸುಗಳನ್ನೂ ಕೂಡಿಸುವರು. ಕೆಲವರು ಉತ್ತಮವಾದ ಕಾವಿಯ ಬಟ್ಟೆ ಧರಿಸಿ ಬೇಸಿಗೆಯಲ್ಲಿ ಉಪ್ಪಾರ ಮೇಸ್ತ್ರಿಗಳಾಗಿಯೂ, ಮಳೆಗಾಲದಲ್ಲಿ ಗೋಕರ್ಣಕ್ಕೆ ಹೋಗುವ ಯಾತ್ರಿಕರಾಗಿಯೂ ಪುರುಷಾರ್ಥ, ಪರಮಾರ್ಥಗಳೆರಡನ್ನೂ ಸಾಧಿಸುವರು. ಯಾವ ಊರಾದರೇನು? ಯಾವ ಜಾತಿಯಾದರೇನು? ಯಾವುದೊಂದು ಉದ್ಯೋಗದಿಂದ ಬದುಕಬಲ್ಲವರೇ ಬಲ್ಲವರು. ಒಂದೊಂದು ವೇಳೆ ರೈಲ್ವೇ ಸ್ಟೇಶನು, ಸಂತೆ, ಮಾರ್ಕೆಟು ಮೊದಲಾದವುಗಳ ಬಳಿಯಲ್ಲಿ ಇವರ ಕೈಯಲ್ಲಿ ಯಾರು ಯಾರ ಕಿಸೆಯಲ್ಲಿಂದ ಮಾಯವಾದ ವಸ್ತುಗಳು ದೊರೆತುದುಂಟು. ಜ್ಯೋತಿಷ್ಯ, ಶಕುನ ಫಲ ಹೇಳುವುದರಲ್ಲಿ ಅಸಾಧಾರಣ ಪಾಂಡಿತ್ಯವುಳ್ಳವರೂ ಇವರಲ್ಲಿರುವರು.

ಸಂಸ್ಕೃತವನ್ನು ಇವರ ಬಾಯಿಯಿಂದ ಕೇಳಿದರೆ ದೇವತೆಗಳೂ ಮರುಗುವರು, – ಇವರಲ್ಲಿಷ್ಟು ಸಂಸ್ಕೃತಿಯಿಲ್ಲೆಂದು. ಇವರು ಕನ್ನಡವನ್ನಾಡಿದರೂ ಅದು ತುಳು, ತುಳುವನ್ನಾಡಿದರೂ ಅದು ತಮಿಳೋ, ಮಲೆಯಾಳಿಯೋ ಆಗಿ ವಿಚಿತ್ರ ಪ್ರತ್ಯಯಗಳನ್ನೂ, ವಿಶೇಷ ಧ್ವನಿಗಳನ್ನೂ ಕೂಡಿ ಹೊರಡುತಿದ್ದುದರಿಂದ ಇವರು ಯಾವ ಭಾಷೆಯನ್ನಾಡಿದರೂ ಅದು ಆ ಭಾಷೆಯಾಗಿರದೆ ಮನುಷ್ಯಮಾತ್ರರಿಗೆ ಸಂಬಂಧವಿರದ ದೇವಭಾಷಾಸ್ವರೂಪವನ್ನು ಹೊಂದುವಂತಾಗುವುದು. ಇದಕ್ಕಾಗಿಯೇ ಮಾತೆಲ್ಲವೂ ನಾನೇ – ಅಕ್ಷರವೆಲ್ಲವೂ ನಾನೇ – ಎಂದು ಹಿರಿಯರ ಪವಿತ್ರ ವಾಕ್ಯವಿದೆ.

ಹೀಗೆ ಹಿಂದುಳಿದ ಆಳುಗಳಲ್ಲಿ ಆವೂರಿಗೆ ಸಮೀಪದ ಗ್ರಾಮದಲ್ಲಿ ಕಲ್ಲುಕುಟಿಗ – ಮಂತ್ರವಾದಿ ಕಂಚುಗಾರನೊಬ್ಬನಿದ್ದನು. ಪ್ರೇತಗಳ ಉಚ್ಚಾಟನೆ, ಭೂತಬಾಧಾ ನಿವಾರಣೆ, ಗ್ರಹಪೀಡಾ ಶಾಂತಿ, ಇವುಗಳಿಂದ ಹಣ ಸಂಪಾದನೆಯಾಗದಿದ್ದರೆ ಮಾತ್ರ ಇವನು ಕಂಚುಗಾರನು, ಅದೂ ಸಾಗದಿದ್ದರೆ ಕಲ್ಲುಕುಟಿಗನು. ಆದರೆ ತನಗಾಗಿ ಒಂದು ತೋಟವನ್ನೂ ಮಾಡಿಕೊಂಡಿರಲಿಲ್ಲ. ಅಂತಹ ನಿಪುಣ. ತೋಟಗಾರನಾಗುವ ಬದಲು ಮಾಟಗಾರನಾಗುವುದುತ್ತಮವೆಂದೇ ಇವನ ಅಭಿಪ್ರಾಯವೆಂದು ಗ್ರಾಮದಲ್ಲಿನ ವೀರಭದ್ರಗುಡಿಯ ಕೀಳುಶಾಂತಿ ಮೇಲುಶಾಂತಿಗಳು ಇವನನ್ನು ದೂರುತ್ತ ತಮ್ಮ ಮಾತ್ಸರ್ಯವನ್ನು ಸಮಾಧಾನ ಮಾಡಿಕೊಳ್ಳುತ್ತಿದ್ದರು.

ಇವನ ನೆನಪು ಶಾನುಭಾಗರಿಗೆ ಆ ದಿನ ಬೆಳಿಗ್ಗೆ ಉಂಟಾಯಿತು. ಪೂವನು ರಾತ್ರೆಗೆ ಮನೆಗೆ ಬಾರದಿರಲು ಕಾರಣವೇನೆಂದು ಸುಖನಿದ್ರೆಯಿಂದೆದ್ದುಬಂದ ಬಾಡಿದ ಮೋರೆಯ ರುಕ್ಕು ಹೆಂಗಸು (ಉಗ್ರಾಣಿಯ ಪತ್ನಿ) ಈ ನೆನಪಿಗೆ ಹಾಯಾಗಿ ಒದಗಿದಳು. ರುಕ್ಕು ಹೆಂಗಸನ್ನು ಒಮ್ಮೆ ಕಂಡಮೇಲೆ ಅವಳ ನೆನಪು ಅಳಿಸಿಹೋಗುವುದು ಕಡಿಮೆ. ಆವೂರಿನಲ್ಲಿ ಯಾವುದೊಂದು ಬಗೆಯಲ್ಲಿ ಗಣನೆಗೆ ಬರುವ ಯಾವ ಗಂಡಸೂ, ಹೆಂಗಸೂ ಇವಳೊಡನೆ ಸಂಭಾಷಿಸದೆ ಇಲ್ಲ. ಕ್ಷತ್ರಿಯರ ಮೈಕಟ್ಟು, ಕುದುರೆಯ ನಡಿಗೆ, ಡ್ರಿಲ್ ಜಮೇದಾರನ ಬಾಯಿ! ಇವನ್ನು ನೋಡಿಯೇ ಕೆಲವರು ಇವಳು “ಗ್ರಾಮಪೋಲೀಸಿ’’ ಎಂದು ಕುಚೋದ್ಯ ಮಾಡುತ್ತಿದ್ದರು. ಆದರೂ ರುಕ್ಕು ನಿಜವಾಗಿಯೂ ರುಕ್ಮಿಣಿಯ ತದ್ಭವರೂಪವಾಗಿದ್ದಳು, ಎಂದರೆ ಅವಳ ಬಣ್ಣನೆ ಮುಗಿವಂತಿದೆ.

ಶಾನುಭಾಗರು ನಸುನಕ್ಕರು. ರುಕ್ಕುವಿಗೆ ತನ್ನ ಈ ಮನೋರಮಣನ ವಿಷಯವಾಗಿ ಧೈರ್ಯವೂ ನಿಶ್ಚಿಂತೆಯೂ ಆಗಲು, ಅವರು, “ರುಕ್ಕೂ – ಆ ಮಂತ್ರವಾದಿಯನ್ನು ಇಲ್ಲಿಗೆ ಬರಮಾಡಬೇಕು. ಈ ಗಳಿಗೆಯಲ್ಲಿ ನಾಗಮ್ಮ ಮಿಂದುಬರುವಾಗ ಅವನು ಇಲ್ಲಿ ಹಾಜರಿರಬೇಕು,’’ ಎಂದು ಉಗ್ರಾಣಿಗೆ ಕೊಡುವ ಅಪ್ಪಣೆಗಳನ್ನು ಉಗ್ರಾಣೀಪತ್ನಿಗೆ (ವಿನಯದಿಂದ) ಕೊಡುತ್ತ, ಅವಳ ಕುತೂಹಲ ಸಮಾಧಾನಕ್ಕಾಗಿ ಏಕೆಂಬ ಯಾವತ್ತೂ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಿದರು. ರುಕ್ಕು (ಸಿಟ್ಟಾಗಬಾರದು) ಬೆಕ್ಕಿನಂತೆ ಮಂತ್ರವಾದಿಯ ಮನೆಯ ಕಡೆಗೆ ತೆರಳಿದಳು; ಒಂದೆರಡು ಬಾರಿ ಹಿನ್ನೋಟ ಬೀರಿದಳು; ಅದೇಕೆಂದು ಯಾರು ಬಲ್ಲರು? ಇದು ಅವಳ ಪದ್ಧತಿಯೆಂದೇ ಕೆಲವರು, ಇದು ರುಕ್ಕುವಿನ ಸೊಕ್ಕು ಎಂದೇ ಕೆಲವರು ಎನ್ನುವುದಿದ್ದಿತು. ಇರಲಿ, ನಮಗೇನು?

ರುಕ್ಕು ಮಂತ್ರವಾದಿಯ ಮನೆಗೆ ಹೋಗುವಾಗ – ಅವನು ಹಣೆಗೆ ಭಸ್ಮ ಹಚ್ಚಿಕೊಳ್ಳುತ್ತ, ಕೈಲಾಸದಲ್ಲಿ ಪಾರ್ವತಿಯನ್ನೇ ಅರ್ಧಾಂಗವನ್ನಾಗಿಟ್ಟುಕೊಂಡ ಶಿವಶಂಕರನನ್ನು ಆತನ ಯೋಗನಿದ್ರೆಯಿಂದ ಎಬ್ಬಿಸುವಂತೆ ಕೂಗುತಲಿದ್ದಾನೆ! ರುಕ್ಕುವಿಗೆ ವೀಳೆಯ ಜಗಿಯಕೊಟ್ಟು, ಗ್ರಾಮ ಉದ್ಯೋಗಸ್ಥರಾಗಿರುವ ಶಾನುಭಾಗರು ತನ್ನಂತಹ ಪ್ರಜೆಯನ್ನು ಅಷ್ಟು ತ್ವರೆಯಾಗಿ ಬರಲು ಹೇಳಿಕಳುಹಿಸಿದ ಕಾರಣವೇನೆಂದು ರುಕ್ಕುವು ತಿಳಿಸದೆಯೇ ತಿಳಿದುಕೊಂಡನು. ಕವಡಿಗಳ ಚೀಲ, ಪಂಚಾಂಗದಂತಹದೊಂದು ಪುಸ್ತಕ, ಜೇಡಿಯ ತುಂಡು, ಎಲ್ಲವನ್ನೂ ತೆಗೆದುಕೊಂಡು ಎದ್ದು ರುಕ್ಕುವಿನೊಡನೆಯೇ ಶಾನುಭಾಗರಲ್ಲಿಗೆ ಬಂದನು. ಹಾದಿಯಲ್ಲಿ ನಡೆದು ಬರುತ್ತ ಅವರೊಳಗೆ ನಡೆದ ಮಾತುಕತೆ ಬರೆಯಲು ನಾವು ಸಮರ್ಥರಲ್ಲ. ಅದನ್ನು ಬರೆಯಬೇಕೆಂದಿದ್ದೆವು. ಬರೆದರೆ ಅವನಾಡುವ ಆ ದೇವಭಾಷಾ ಸಾರೂಪ್ಯ ಹೊಂದಿದ ತುಳುಕನ್ನಡಗಳ ಪರಿಚಯವೂ ಸಾಕಷ್ಟಾಗುತಿದ್ದಿತು. ಆದರೆ ಅದಕ್ಕನುಕೂಲವಾದ ಅಕ್ಷರ ಸಾರೂಪ್ಯವುಳ್ಳ ಅಚ್ಚಿನ ಮೊಳೆಗಳು ಇನ್ನೂ ಸಿದ್ಧವಾಗಿಲ್ಲ. ಈ ಮಂತ್ರವಾದಿಯೇ ಮಾತ್ರ ಅದನ್ನು ಕಂಚಿನಲ್ಲಿ ಎರಕ ಹೊಯ್ದು ಕೊಡಬಹುದಾಗಿದ್ದಿತು. ಆದರೆ ಅದಕ್ಕೂ ಅವನಿಗೆ ಪ್ರೋತ್ಸಾಹ ದೊರೆತಿಲ್ಲ. ಈ ದಿನಗಳೇ ಇಂತಹವು. ಉದ್ಯೋಗ ಮಾಡಬಲ್ಲವರು ನಿರುದ್ಯೋಗಿಗಳಾಗುವಂತೆ ನಾವು ಮಾಡುತ್ತೇವೆ. ಕೂಡಲೇ ನಿರುದ್ಯೋಗಿಗಳ ಸಮಸ್ಯೆ ಬಿಡಿಸಲು ಗಂಭೀರ ತರ್ಕಗಳನ್ನು ಮಾಡುತ್ತೇವೆ. ಹೀಗಾಗಿ ಕಂಚುಗಾರನು ಮಂತ್ರವಾದಿಯಾಗಬೇಕಾಯಿತಲ್ಲದೆ ನೂತನ ಭಾಷಾ ಶಬ್ದಗಳನ್ನು ಮುದ್ರಣ ಮಾಡಲು ಯೋಗ್ಯ ಸಹಾಯಕನಾಗಲಾರದೆ ಉಳಿಯುವಂತಾದ ದೋಷವೂ ಇತರರ ಪಾಲಿಗೆ ಬಂದಿತು.

ಶಾನುಭಾಗರು ಮಂತ್ರವಾದಿಯನ್ನು ಕೂಡಿಸುತ್ತಲೇ ಅವನು ತಾನು ಕಲ್ಲುಕುಟಿಗನಾಗಿದ್ದು ಕಟ್ಟಿದ ಯಾವುದೋ ಒಂದು ಮನೆಯ ಕೋಣೆಗಳ ನಕಾಶವನ್ನು ಜೇಡಿಮಣ್ಣಿನ ತುಂಡಿನಿಂದ ಬರೆದು, ಆಯಾ ಕೋಣೆಯಲ್ಲಿ ಇಷ್ಟಿಷ್ಟು ಕವಡಿಗಳನ್ನಿಟ್ಟು, ನಾಲ್ಕಾರು ದೇವರ ಹೆಸರುಗಳನ್ನು ಉಚ್ಚರಿಸಿ ಪ್ರಶ್ನೆ ಹೇಳತೊಡಗಿದನು. ನಮ್ಮ ಮಾತಿನಲ್ಲಿ ಅದರ ಅಭಿಪ್ರಾಯ ಚಮತ್ಕಾರವು ಹೀಗಾಗಿದೆ:-

ಬಹು ಬೆಲೆಯದೊಂದು ವಸ್ತು ಕಾಣೆಯಾಗಿದೆ. ಅದನ್ನು ಯಾರೋ ಒಬ್ಬರು ಕದ್ದಿರಬಹುದಾಗಿ ಅನುಮಾನವೂ ಇದೆ. ಕದ್ದಿರಬಹುದಾದ ವ್ಯಕ್ತಿ ಕದ್ದುದಲ್ಲ. ಆದರೆ ಜಲುದುರ್ಗೆಯ ಪ್ರೇರಣೆಯಿಂದ ಆ ವಸ್ತುವನ್ನು ಅಡಗಿಸಿಟ್ಟ ಮಾಯೆಯಾಗಿದೆ. ಆ ವ್ಯಕ್ತಿಯನ್ನು ಹಿಡಿದ ಜಲದುರ್ಗೆಯನ್ನು ಉಚ್ಚಾಟನೆಗೊಳಿಸಬೇಕು. ಆಗ ದುರ್ಗೆ ಬಿಟ್ಟುಹೋಗುವಾಗ ಆ ವಸ್ತುವನ್ನು ವ್ಯಕ್ತಿಯ ಕೈಯಿಂದ ತಂದೊಪ್ಪಿಸುವಳು. ಜಲದುರ್ಗೆಯನ್ನು ಓಡಿಸಲು ಅಗ್ನಿದರ್ಶನವಾಗಬೇಕು. ಅಗ್ನಿಕುಂಡವನ್ನು ಮಾಡಿ ವ್ಯಕ್ತಿಯನ್ನು ಅದರ ಬಳಿ ನಿಲ್ಲಿಸಿ, ಕುಳ್ಳಿರಿಸಿ, ಬೆಂಕಿಯನ್ನು ಮುಟ್ಟಿಸಿ, ಕೆಂಡಗಳಿಂದ ಮೀಯಿಸಿ ವ್ಯಕ್ತಿಯ ಮೈಯಲ್ಲಿ ತುಂಬಿರುವ ಜಲದುರ್ಗೆಯನ್ನು ಓಡಿಸುವ ಪ್ರಯತ್ನ ಮಾಡಿದಲ್ಲಿ ಕಾರ್ಯವು ಕೈಗೂಡುವುದು.

ಇಷ್ಟು ಚೆನ್ನಾಗಿ ವಿಜ್ಞಾನಶಾಸ್ತ್ರಕ್ಕೆ ಸರಿಯಾಗಿ, ಗ್ರಾಮ್ಯನಂಬಿಕೆಗಳಿಗೆ ಒಪ್ಪುವಂತೆ, ರುಕ್ಕುವಿನೊಡನೆ ನಾಲ್ಕು ಮಾತು ಆಡುವುದರೊಳಗೆ ಇವನು ಹೇಗೆ ಸ್ಪಷ್ಟವಾಗಿ ಪ್ರಶ್ನೆಯನ್ನು ಉತ್ತರಿಸುವನೆಂಬುದು ಚಮತ್ಕಾರವಲ್ಲವೇ! ಮಂತ್ರವಾದಿಯೆಂದರೆ ಸುಮ್ಮನೆ ಮಂತ್ರಬಲದಿಂದಲೇ ಆಗಲಾರನು; ವಾದಿಯೂ ಆಗಿರಬೇಕು.

ಆಗಲೇ ಮಿಂದು ಬಂದ ನಾಗಮ್ಮನನ್ನೇ ಜಲದುರ್ಗೆಯ ಪ್ರವೇಶ ಹೊಂದಿದ್ದಾಳೆಂದು, ನಾರಾಯಣ ರಾಯರು ಉಗ್ರಾಣಿಯಿಂದ ಒಂದು ಚಿಕ್ಕ ಹೊಂಡ ತೋಡಿಸಿ, ಅದರಲ್ಲಿ ಕಂಟಿಕಡ್ಡಿ ಎಲೆಗಳನ್ನು ಕೂಡಹಾಕಿ, ಬೆಂಕಿ ಹೊತ್ತಿಸಿ, ಆಗಾಗ ಛಾವಣಿಗಾಗಿ ತಂದಿದ್ದ ಹುಲ್ಲನ್ನು ಉರಿಸಿ, ಅಗ್ನಿಕುಂಡವನ್ನು ನಿರ್ಮಿಸಿ ಮಂತ್ರವಾದಿಯು ಕಾರ್ಯಕ್ರಮವನ್ನು ಪ್ರಾರಂಭಿಸಬಹುದೆಂದರು.

ನಾಗಮ್ಮನಿಗೆ ಕನಸಿನಲ್ಲಿ ಕಂಡುದೆಲ್ಲ ಮಾಯವಾಗಿದ್ದಿತಾದರೂ ಮನಸ್ಸಿನಲ್ಲೇನೂ ಮಾಯವಾಗಿದ್ದಿಲ್ಲವಷ್ಟೆ. “ಕಲ್ಲಿನ ಬದಲಾಗಿ ಕೆಂಡ” ವೆಂದೆಣಿಸಿದಳು. ಬಾಯಿ ಬಾರದು.

ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು. ನಿರಾಹಾರ, ದುಃಖ, ಜಾಗರಣ ಇವುಗಳಿಂದಾಗಿ ಕೆಂಪಗೆ ಉರಿಯುತ್ತಿದ್ದ ಕಣ್ಣುಗಳಲ್ಲಿ ಈ ಕುಂಡದಿಂದೇಳುವ ಹೊಗೆಯು ಇನ್ನಷ್ಟು ಉರಿಯನ್ನೂ ಚುರುಕನ್ನೂ ಹಬ್ಬಿಸಿತು. ಬಾಡಿದ ಮುಖ ಒಣಗಿತು ಬಳಲಿದ ದೇಹ ದಣಿಯಿತು. ಜ್ವರವೇರಿತು.

ಕುಂಡದಲ್ಲಿ ಇನ್ನೂ ಮುಳಿಹುಲ್ಲು, ಕಡ್ಡಿಗಳು ಮತ್ತು ಸೌದೆಯ ಚೂರು ಸುರಿಯಲು, ಪ್ರಶ್ನೆಗಳು ಮಳೆಗರೆಯಲು ಉತ್ತರವು ಹೊರಡದಿರಲು – ನಾಗಮ್ಮನು ಧೊಪ್ಪನೆ ಕುಂಡದೊಳಗೆ ಬಾಗಿ ಬಿದ್ದಳು. ನಾರಾಯಣರಾಯರು ಅವಳನ್ನು ಎತ್ತಲು ಧಾವಿಸಿದರು. ಮಂತ್ರವಾದಿಯು ತಾನೇ ಅವಳನ್ನು ಎತ್ತಿದನು. ತಲೆ, ಮುಖ, ಎದೆಯ ಬಟ್ಟೆ – ಇಷ್ಟೇ ಸ್ವಲ್ಪ ಸ್ವಲ್ಪ ಮಾತ್ರ ಸುಟ್ಟಿದ್ದುವು. ಮಂತ್ರವಾದಿಯು “ಜಲದುರ್ಗೆಯಿನ್ನು ಕೂಡಲೇ ಹೊರಡುವಳು’’ ಎಂದನು. ನಾರಾಯಣ ರಾಯರು, “ಸುಟ್ಟಲ್ಲಿಗೆ ಏನು ಮುಟ್ಟಿಸಬೇಕು?’’ ಎಂದರು. ಬೆಣ್ಣೆಯೆಂದಾಯಿತು; ಅದಿಲ್ಲ, ಸೆಗಣಿಯೆಂದಾಯಿತು. ಈ ವೇಳೆಗೆ ತಕ್ಕ ಬೆಣ್ಣೆ!

ನಾಗಮ್ಮನ ಮಾತಿಲ್ಲ! ಉಸಿರೇಳುತ್ತಿದೆ! ಬೆದರಿದರು! ಆದರೂ ಮಂತ್ರವಾದಕ್ಕೆ ಆತಂಕವೇ?

ಅಷ್ಟರಲ್ಲಿ ಪಠೇಲರ ಮನೆಯಿಂದ ಹತ್ತಿಪ್ಪತ್ತು ಮಂದಿ ಒಕ್ಕಲುಗಳು ಶಾನುಭಾಗರಲ್ಲಿಗೆ ಅವರನ್ನು ಕರೆಯಬಂದರು. “ನಿನ್ನೆಯಿಂದ ಶಾನುಭಾಗರೇ ಇಲ್ಲ. ಗೆಜ್ಜೆಟೀಕನ್ನು ಹಿಡಿದು ಗಂಡನು ಮಾಯವಾದನೇ? ನೋಡೋಣ!’’ ಎಂದು ಪಠೇಲರು ಈ ನೆವದಿಂದ ಒಕ್ಕಲುಗಳನ್ನು ಅಲ್ಲಿಗೇ ಕಳುಹಿಸಿದ್ದರು. ಈ ಪರಿಯನ್ನು ನೋಡಿ ಅವರಿಗೆ ಅರ್ಥವಾಗದೇ? ಆದರೂ ಮಂತ್ರವಾದದ ಕಾರ್ಯಕ್ಕೆ ವಿಘ್ನವಾದೀತೆಂದು ಅವರೂ ಸುತ್ತುಗಟ್ಟಿ ನಿಂತರು.

ಮಂತ್ರವಾದವೇನೋ ಸಾಗಿತು; ನಾಗಮ್ಮನಿಗೆ ಮಾತ್ರ ಪ್ರಜ್ಞೆಯಿಲ್ಲ.

ಮಂತ್ರವಾದಿಯು, “ಇನ್ನು ರಾಹುಕಾಲ, ಇದು ದಾಟುವತನಕ ನನ್ನಿಂದೇನೂ ಸಾಗದು’’ ಎಂದು ದೂರವಾದನು. ಶಾನುಭಾಗರು, “ಇನ್ನೂ ಬಾಯಿ ಬಿಡುವುದಿಲ್ಲಯ್ಯ! ನಿನ್ನದೆಂತಹ ಮಂತ್ರ?’’ ಎಂದು ಗದರಿಸಿದರು; ಅಂತರಂಗದಲ್ಲಿ ಬೆದರಿದರು. ಜನ ಕೂಡಿದುದಕ್ಕೆ ಒಮ್ಮೆ ಹೆದರಿದರು, ಮತ್ತೊಮ್ಮೆ, “ನಾನೆಷ್ಟು ಪಠೇಲರಿಗಾಗಿ ಸೊತ್ತು ಸಿಗುವಂತೆ ಪ್ರಯತ್ನಿಸುತ್ತಿದ್ದೇನೆಂದು ಇವರೂ ಸಾಕ್ಷ್ಯ ನುಡಿಯುವರು. ಚೆನ್ನಾಯಿತು,’’ ಎಂದು ಸಮಾಧಾನ ಮಾಡಿಕೊಂಡರು.

ಸುಮಾರು ಹನ್ನೆರಡು ಹೊಡೆಯುವ ಹೊತ್ತು. ಕಲೆಕ್ಟರರ ಬಟ್ಲರನು ಶಾನುಭಾಗರಲ್ಲಿಗೆ ಬಂದನು. ಅವನು ಎರಡು ತಾಸುಗಳ ಹಿಂದೆ ಆ ಕಂಚುಗಾರನಲ್ಲಿಗೆ ಹೋಗಿದ್ದನು. ಕಲೆಕ್ಟರರು ಅಂದೇ ರಾಜಧಾನಿಗೆ ಹೊರಡುವರು. ಅವರಿಗೆ ಆ ಊರಲ್ಲಿ ಜನರು ಪೂಜಿಸುವ ದೇವತೆಗಳ ಕಂಚಿನ ವಿಗ್ರಹಗಳಿದ್ದರೆ ಬೇಕಾಗಿದ್ದಿತು. ಅಂತಹವನ್ನು ಅವರೆಷ್ಟೋ ಸಂಗ್ರಹಿಸಿದ್ದಾರೆ. ಕಂಚುಗಾರನು ಇಲ್ಲಿಗೆ ಬಂದುದನ್ನು ತಿಳಿದು ಬಟ್ಲರನೂ ಇಲ್ಲಿಗೇ ಬಂದಿದ್ದನು.

“ಪಂಜುರ್ಲಿಯದೊಂದು ಚೆಲುವಾದ ವಿಗ್ರಹ ಉಂಟು. ನಾಲ್ಕು ರೂಪಾಯಿಗೆ ಕೊಡಬಹುದು. ಗಿರಾಕಿಗಳಿಲ್ಲದೆ ಒಳಗೇ ಉಳಿದಿದೆ. ಹೊಸ ಭೂತಗುಡಿಯೇ ಆಗಲಿಲ್ಲವಲ್ಲ. ನೀವಾದರೂ ಕೊಂಡುಹೋಗಿರಿ. ಈ ಮಂತ್ರವಾದ ಮುಗಿಯುತ್ತಲೇ ಇನ್ನೆರಡು ತಾಸುಗಳಲ್ಲಿ ಬಂಗಲೆಗೆ ತರುತ್ತೇನೆ,’’ ಎಂದು ಕಂಚುಗಾರನೆಂದನು. ಬಟ್ಲರನು ಅಲ್ಲಿಂದ ಎಲ್ಲವನ್ನೂ ನೋಡಿ ಹೊರಟುಹೋದನು.

ಕಂಚುಗಾರನ ಮನಸ್ಸು ನಾಲ್ಕು ರೂಪಾಯಿ ಸಿಗುವ ವ್ಯಾಪಾರದ ಮೇಲೆ. ಶಾನುಭಾಗರ ಮನಸ್ಸು ಮಂತ್ರವಾದ ಮುಗಿಸದಿರುವ ಮಂತ್ರವಾದಿ ಕಂಚುಗಾರನ ಮೇಲೆ. ಹೀಗಾಗಿ ಸ್ವಲ್ಪ ಕಲ್ಮಷ ಹುಟ್ಟಿತು. ಮಂತ್ರ ಮುಗಿಸದೆ, ಜಲದುರ್ಗೆಯನ್ನು ಹೊರಡಿಸದೆ ಕಂಚುಗಾರನು ಹೋಗಲಾರನು; ಅವನು ಹೋಗದೆ, ಪಂಜುರ್ಲಿಯ ವಿಗ್ರಹ ಕಲೆಕ್ಟರರ ಕೈಸೇರದು. ಅಂತೂ ರಗಳೆಗಿಟ್ಟಿದೆ.

ಅರೆತಾಸಿನೊಳಗೆ ಪಠೇಲರು, ಉಗ್ರಾಣಿ ಮತ್ತು ಶಾನುಭಾಗರು ಕಲೆಕ್ಟರರ ಬಂಗಲೆಗೆ ಬರಬೇಕೆಂದೂ, ಕಂಚುಗಾರನೂ ಅಲ್ಲಿಗೆ ಬರಬೇಕೆಂದೂ ದೊರೆಗಳ ಅಪ್ಪಣೆಯಾಗಿದೆಯೆಂದು ಬಟ್ಲರನೇ ಅಲ್ಲಿಗೆ ಬಂದು ತಿಳಿಸಿದನು. ಮೀರುವುದಕ್ಕುಂಟೇ? ಇಷ್ಟೂ ಮಂದಿ ಹೊರಡುವಾಗ ದೊರೆಗಳೇ ಅಲ್ಲಿಗೆ ದಯಮಾಡಿಸಿದರು!

“ನಿಮಗೆಲ್ಲರಿಗೆ ಅಲ್ಲಿಗೆ ಬರಹೇಳಿದ್ದೆ. ಆದರೆ ಇಲ್ಲಿ ನಿಮ್ಮ ಮತ ಸಂಬಂಧವಾದ ಏನೋ ಕೆಲಸವಾಗುತ್ತಿದೆಯೆಂದು ಪುನರಾಲೋಚಿಸಿ, ಅದನ್ನು ಭಂಗಗೊಳಿಸಬಾರದೆಂದು ನಾನೇ ಇಲ್ಲಿಗೆ ಬಂದೆ. ಇದೇನಾಗುತ್ತಲಿದೆ?’’ ಎಂದು ಅಪ್ಪಣೆ ಕೊಡಿಸಿದರು.

ತುಳು, ತಮಿಳು, ಕನ್ನಡ ಎಲ್ಲವೂ ಕಲೆಕ್ಟರರಿಗೆ ಗೊತ್ತಾಗುವುದೆಂದು ಎಲ್ಲರಿಗೂ ಗೊತ್ತು. ಮಂತ್ರವಾದಿಯ ಮಾತುಗಳು ಹೀಗಾದುವು :-

“ಇದು ಜಲದುರ್ಗೆಯ ಉಚ್ಚಾಟನೆ. ಈ ಹೆಂಗಸಿನ ದೇಹವನ್ನು ನಿನ್ನೆ ಇವಳು ಕೆರೆಯಲ್ಲಿ ಮೀಯುವಾಗ ಪ್ರವೇಶಿಸಿ, ಇವಳ ಮೂಲಕ ಪಠೇಲರ ಹೆಂಡತಿಯ ಗೆಜ್ಜೆಟೀಕನ್ನು ಅಡಗಿಸಿಡುವಂತೆ ಆ ದೇವತೆಯು ಮಾಡಿರುವಳು. ಮಂತ್ರದಿಂದ ನೋಡಿದ್ದಲ್ಲಿ ಇವಳೇ ಕದ್ದವಳೆಂದು ತಿಳಿದುಬರುತ್ತಿದೆ.’’
ಕಲೆಕ್ಟರರು (ಗಂಭೀರವಾಗಿ ನಕ್ಕು) – “ವಿಚಿತ್ರ ಮಂತ್ರವಾದ! ಇನ್ನೇನು ಮಾಡಬೇಕು?’’

ಮಂತ್ರವಾದಿ : “ಅಗತ್ಯವಾದಲ್ಲಿ ಆ ಕುಂಡದಲ್ಲಿ ಇವಳನ್ನು ಕೂಡ್ರಿಸಬೇಕು. ಏನೂ ಅಪಾಯವಿಲ್ಲ.’’

ಕಲೆಕ್ಟರರು : “ಇವಳೇ ಕದ್ದಳೆಂದು ಪ್ರಶ್ನೆಯಲ್ಲಿ ಹೇಗೆ ತಿಳಿಯಿತು?’’

ಮಂತ್ರವಾದಿ : “ಗ್ರಹಚಾರಫಲದಿಂದ’’

ಕಲೆಕ್ಟರರು : “ಆಶ್ಚರ್ಯ! ಇಲ್ಲಿ ಬರಲು ನಿನಗೆ ಹೇಳಿದವರು ಯಾರು?’’

ಮಂತ್ರವಾದಿ : “ಏನೂ ತಿಳಿಯದ ಈ ಹೆಂಗಸು’’

ಉಗ್ರಾಣಿ : “ಬಡವೆ, ಅವಳ ತಪ್ಪಿಲ್ಲ. ದೇವರೇ! ನನ್ನ ಹೆಂಡತಿಯವಳು.’’

ಕಲೆಕ್ಟರರು : “ನಿನ್ನನ್ನು ಇಲ್ಲಿ ಕರೆಕಳುಹಿಸಿದ್ದು ಯಾರು?’’

ಶಾನುಭಾಗರು : “ನಾನು ದೇವರೇ! ನನ್ನ ಹೆಂಡತಿ ಒಬ್ಬಳೇ ಮಾತ್ರ ಕೆರೆಯಲ್ಲಿ ಮೀಯುತ್ತಿದ್ದಳಂತೆ. ಆಗ ತಾನೇ ಪಠೇಲರ ಹೆಂಡತಿಯ ಗೆಜ್ಜೆಟೀಕು ಕಾಣೆಯಾಯಿತೆಂದು ತಿಳಿದುಬಂದಿತು. ಇವಳು ಎಷ್ಟು ವಿಚಾರಿಸಿದರೂ ತನಗೆ ತಿಳಿದಿಲ್ಲವೆಂದಳು. ಹೀಗಾಗಿ ಮಂತ್ರವಾದಿಯನ್ನು ಕರೆದುತರಬೇಕಾಯಿತು. ಈಗ ಸತ್ಯ ಹೊರಡುತ್ತಿದೆ.’’

ಶಾನುಭಾಗರು ಮಂತ್ರವಾದಿಯನ್ನು ಕೂಡಿಸುತ್ತಲೇ ಅವನು ತಾನು ಕಲ್ಲುಕುಟಿಗನಾಗಿದ್ದು ಕಟ್ಟಿದ ಯಾವುದೋ ಒಂದು ಮನೆಯ ಕೋಣೆಗಳ ನಕಾಶವನ್ನು ಜೇಡಿಮಣ್ಣಿನ ತುಂಡಿನಿಂದ ಬರೆದು, ಆಯಾ ಕೋಣೆಯಲ್ಲಿ ಇಷ್ಟಿಷ್ಟು ಕವಡಿಗಳನ್ನಿಟ್ಟು, ನಾಲ್ಕಾರು ದೇವರ ಹೆಸರುಗಳನ್ನು ಉಚ್ಚರಿಸಿ ಪ್ರಶ್ನೆ ಹೇಳತೊಡಗಿದನು.

ಕಲೆಕ್ಟರರು ಪಠೇಲರ ಹೆಂಡತಿಯನ್ನು ಕರೆಯಿಸಿದರು. ಆಕೆ ಎಲ್ಲವನ್ನೂ ಹಿಂದೆ ಹೇಳಿದಂತೆಯೇ ಹೇಳಿದಳು.

ಪಠೇಲರನ್ನು ವಿಚಾರಿಸಲು, ತಾನು ಯಾರನ್ನೂ ಅನುಮಾನಿಸಿಲ್ಲವಾದರೂ, ದೇವತೆಗಳಿಗೆಲ್ಲ ಹರಕೆ ಹೇಳಿಕೊಂಡಿದ್ದೇನೆಂದು ಅವರ ಮಾತು. ಖಂಡಿತವಾಗಿಯೂ ಆಭರಣ ಸಿಕ್ಕುವುದೆಂದೇ ಅವರ ವಿಶ್ವಾಸ!

ಕಲೆಕ್ಟರರು : “ಆಭರಣ ಸಿಕ್ಕಿದರೆ?’’

ಪಠೇಲರು : “ನನಗಾಯಿತು. ಇನ್ನು ಅದನ್ನು ನನ್ನ ಹೆಂಡತಿ, ಮೈಮೇಲಿನ ಪರಿವೆಯಿಲ್ಲದ ಹೆಂಡತಿ, ಇಟ್ಟುಕೊಳ್ಳುವುದು ಬೇಡ. ಮುನ್ನೂರು ರೂಪಾಯಿ, ದೇವರೇ!” ಅವರ ಒಂದೊಂದು ನಿಟ್ಟುಸಿರಿಗೂ ಮುನ್ನೂರು ಮುನ್ನೂರು ರೂಪಾಯಿಯ ಬೆಲೆ ಬರುವಂತಿದ್ದಿತು.

ಪಠೇಲರ ಹೆಂಡತಿ : “ಆದೀತು, ನೀವು ಕೊರಳಿಗಿಟ್ಟುಕೊಳ್ಳಿ. ಹೇಗೂ ತೋಳುಸರಿಗೆ, ಒಂಟಿ, ಕೈ ಬಳೆ ಇತ್ಯಾದಿ ಇವೆ; ಚಾವಡಿಯಲ್ಲಿ ಶೃಂಗಾರವಾದೀತು.’’

ಶಾನುಭಾಗರು : “ನನಗಿಷ್ಟು ಕಷ್ಟವಾಗಿದೆ. ದೇವರೇ! ಈ ಖರ್ಚಿನ ಹಣವನ್ನಾದರೂ ಪಡೆಯಬೇಕಲ್ಲವೇ, ಪಠೇಲರಿಂದ? ಇಲ್ಲದಿದ್ದರೆ ಅವರ ಉದ್ಯೋಗಕ್ಕೆ ಸಂಬಂಧಪಟ್ಟ ರಿಕಾರ್ಡು, ಅವರ ಮನೆತನದ ಲೆಖ್ಖಾಚಾರ – ಇವನ್ನೆಲ್ಲ ನಾನೇಕೆ ಮಾಡುತ್ತಿರಬೇಕು? ಇಲ್ಲವೇ, ಆ ಕೆಲಸ, ಈ ಮನೆ ಅಂಗಡಿಗಳಾದರೂ ನನಗೆ ಶಾಶ್ವತ ಸಿಗಬೇಕು.’’

ಉಗ್ರಾಣಿಯ ಹೆಂಡತಿ : “ಮಂತ್ರವಾದವು ಕೈಗೂಡುವಂತೆ ಅವನನ್ನು ನಾನೇ ಕರೆದುತಂದವಳು. ನನಗೇನು ಬಹುಮಾನ?’’

ಉಗ್ರಾಣಿ : “ಶಾನುಭಾಗರ ಮತ್ತು ಅವರ ಹೆಂಡತಿಯ ಜಾಗ್ರತೆ ನೋಡುತ್ತ ಕಾವಲು ನಿಂತವನು ನಾನು. ಇಲ್ಲದಿದ್ದರೆ ಇಲ್ಲಿ ನಿನ್ನೆ ಒಂದೋ, ಎರಡೋ ಹೆಣ ಬೀಳುತ್ತಿರಲಿಲ್ಲವೇ?’’

ಇಷ್ಟಾಗುವಾಗ – ನಾಗಮ್ಮನು ಅತಿ ಕಷ್ಟದಿಂದ, “ಹೂಂ’’ ಎಂದು ಕಣ್ತೆರೆದಳು.

“ಶಹಭಾಸ್! ಕೊಡು ನನ್ನ ಸೊತ್ತನ್ನು!’’ ಎಂದು ಮಂತ್ರವಾದಿ ವಿಕಾರವಾಗಿ ಆರ್ಭಟಿಸಿದನು! “ಕೂಡಲೆ ಕೊಡು, ಗೊತ್ತಿದೆ ನನಗೆ. ದೇವರಿಲ್ಲಿದ್ದಾರೆ, ಪಂಜುರ್ಲಿಯನ್ನು ಮಾರಬೇಕವರಿಗೆ, ತಡಮಾಡಬೇಡ!”

ನಾಗಮ್ಮನು ಒಂದು ಮಾತನ್ನೂ ಆಡಲಿಲ್ಲ. ಮಂತ್ರವಾದಿ ಇನ್ನೂ ಇನ್ನೂ ವಿಕಾರವಾಗಿ ಮುಖಮಾಡಿ ಅವಳನ್ನು ಚುರಚುರನೆ ನೋಡಿದನು.

ಕಲೆಕ್ಟರರು ಮೆಲ್ಲನೆ ದಿಗ್ಭ್ರಾಂತರಾದಂತೆ ಮಾಡಿ, ಮೈಯ್ಯಲೆಲ್ಲ ಹುಡುಕಿದಂತೆ ನಟಿಸಿ, ತಮ್ಮ ಅಂಗಿ ಕಿಸೆಯಿಂದ ಗೆಜ್ಜೆಟೀಕನ್ನು ಹೊರಗೆತ್ತಿ, ಏನೂ ಒಂದು ತಿಳಿಯದವರಂತೆ, “ಇದೆಲ್ಲಿಯದು, ನನ್ನ ಚೀಲದಲ್ಲಿ? ನಾನೇನೋ ಸುರುಳಿಕಟ್ಟಿದ ಹಾವಿನಂತಾಗಿದೆಯೆಂದು ಬೆದರಿದ್ದೆ!’’ ಎಂದರು.

ಸರ್ವರಿಗೂ ಆಶ್ಚರ್ಯವಾಯಿತು. ದೊರೆಗಳ ಮೇಲಿಂದ ದೇವಿ ದಯೆತೋರಿದಳು. ರಾಜದೈವ, ರಾಜಮರ್ಯಾದೆ ಕೊಟ್ಟಿತು. ಅಂತೂ ಗೆಜ್ಜೆಟೀಕು ದೊರೆಯಿತು.

ಮಂತ್ರವಾದಿಯ ಮುಖ ಬಹಳವಾಗಿ ಅರಳಿತು. ಇನ್ನೂ ಅದು ಅರಳಿದ್ದಲ್ಲಿ ಅವನ ಬಾಯಿ ಸೀಳಿಹೋಗುತಿದ್ದಿತು. ಪಟೇಲರು ತಮ್ಮ ಬಳೆತೊಟ್ಟ ಕೈಯನ್ನು ಬಹಳ ಮೇಲಕ್ಕೆತ್ತಿ. “ಓ, ಓ’’ ಎಂದರು. ಅವರ ಹೆಂಡತಿ ನಕ್ಕು ಉಕ್ಕಿ, ಬಿಕ್ಕಿ ಅತ್ತಳು. ಶಾನುಭಾಗರು ನಿಂತವರು ಕೂತರು; ಕೂತು ಎದ್ದುನಿಂತರು. ಉಗ್ರಾಣಿಯು ಕೈಬೀಸಿ ಸಂಕೋಲೆಯಿಂದ ಹೊಲವನ್ನು ಅಳೆದಂತೇನೋ ಅಭಿನಯ ಮಾಡಿದನು. ರುಕ್ಕು ಆ ಗೆಜ್ಜೆಟೀಕನ್ನೇ ನೋಡಿ ಕಣ್ಣಿನಿಂದಲೇ ಅದನ್ನು ನುಂಗುವಳೋ ಎಂಬಂತಿದ್ದಳು.

ಧರ್ಮಾವತಾರಿಗಳಾದ ದೊರೆಗಳ ಸನ್ನಿಧಾನ ಪ್ರಭಾವದಿಂದಲೇ ಈ ಒಡವೆಯು ತಾನಾಗಿ ದೊರೆಯುವಂತಾಯಿತೆಂದು ಅವರ ಮಹಿಮೆಯನ್ನು ಕೊಂಡಾಡಲು ಒಕ್ಕಲ ಕೂಟವು ಬಾಯ್ತೆರೆಯಿತು. ಎಲ್ಲರ ಕಣ್ಣುಗಳೂ ದೊರೆಗಳ ಮೇಲೆಯೇ!

“ಪಠೇಲರೇ! ನಿಮ್ಮ ಸೊತ್ತು ದೊರೆಯಿತಲ್ಲ! ಇನ್ನೇನೆನ್ನುವಿರಂತೆ?’’ ಎಂದು ದೊರೆಗಳು ಪಠೇಲರನ್ನು ಕೇಳಿದರು.

“ನಾವು ಹೇಳಿಕೊಂಡ ಹರಕೆಗಳನ್ನು ಆಯಾ ದೇವತೆಗಳಿಗೆ ಸಲ್ಲಿಸುತ್ತೇವೆ. ಇನ್ನು ಈ ಒಡವೆಯ ಮರೆಯಾಗದಂತೆ ಎಚ್ಚರವನ್ನು ತೆಗೆದುಕೊಳ್ಳುತ್ತೇವೆ. ಎಂತೂ ಮಂತ್ರವಾದಿಯವರ ಪ್ರಯತ್ನಗಳಿಗೆ ಅವರಿಗೆ ಬಹುಮಾನ ಕೊಡಬೇಕಾಗಿದೆ.’’

“ಪಠೇಲರೇ! ಈ ಹುಡುಗಿಗೆ ತಲೆಮೈ ಸುಟ್ಟಿವೆ. ಬಹಳ ಕಂಗಾಲಾಗಿದ್ದಾಳೆ. ಇವಳ ಮೇಲೆ ಮಂತ್ರವಾದ ನಡೆದೇ ಇದು ದೊರೆವಂತಾಗಿದೆಯಲ್ಲ! ಅವಳಿಗೇನು ಕಷ್ಟಪರಿಹಾರ?’’

“ಅವಳಿಗೇನು? ಮಾಮೂಲಿನಂತೆ ಮುತ್ತೈದೆಯರಿಗೆ ನಮ್ಮ ಗುತ್ತಿನಿಂದ ಉಪಚಾರಗಳು ಸಲ್ಲುವುದುಂಟು. ಅದನ್ನು ಕೊಡಿಸುತ್ತೇನೆ. ಅವಳ ಮೇಲೆ ಉಂಟಾದ ಗುಮಾನು ನಿಜವಾದಂತಾಯಿತು. ಈ ಮಂತ್ರವೆಲ್ಲ ಅವಳ ಮೇಲೆ ನಡೆಯದಿರುತ್ತಿದ್ದರೆ ಒಡವೆ ಸಿಗುತ್ತಿತ್ತೇ?”

“ಶಾನುಭಾಗರೇನಂತೆ?’’

“ದೈವ ಹಿಡಿದು ಹೀಗೆಲ್ಲ ನನಗೆ ನಗೆಗೇಡು ಮಾಡುವ ಹೆಂಡತಿಯೆಂದೇನು? ನನ್ನ ಸಂಕಟ ಅಪಾರ, ದೇವರೇ!’’

“ಮಂತ್ರವಾದಿ, ಇಷ್ಟು ವಿಚಿತ್ರವಾದ, ಅದ್ಭುತವಾದ ಶಕ್ತಿಯು ನಿನ್ನಲ್ಲಿರುವಾಗ ಈ ಹಾಳು ಗ್ರಾಮದಲ್ಲಿ ನೀನಿನ್ನು ವಾಸಮಾಡುವುದು ಪ್ರಯೋಜನಕರವೇ? ರಾಜಧಾನಿಗೆ ಹೋಗೋಣ.’’

“ಅಪ್ಪಣೆಯಾದಂತೆ’’

ಪಠೇಲರು, ಶಾನುಭಾಗರು, ಮೊದಲಾದವರು ಮಂತ್ರವಾದಿಯನ್ನು ವರ್ಗಾಯಿಸುವುದು ಬೇಡವೆಂದು ದೊರೆಯನ್ನು ಕೇಳಿಕೊಂಡರು.

ಆಗ ದೊರೆಯವರು ಅಪ್ಪಣೆ ಕೊಡಿಸಿದುದೇನೆಂದರೆ :

“ನಿನ್ನ ಬೆಳಿಗ್ಗೆ ಕೆರೆಯಲ್ಲಿ ಮೀನು ಶಿಕಾರಿ ಮಾಡಲು ನಾನು ಹೋಗಿದ್ದೆ. ಹಿಂದಿರುಗುವಾಗ ಒಂದು ಕಡೆ ವೀಳೆಯ ಕಟ್ಟಿದ್ದ ಚಿಕ್ಕ ವಸ್ತ್ರವೊಂದೂ, ಅದರ ಅಡಿಯಲ್ಲಿ ಈ ಆಭರಣವೂ ಅಲ್ಲಿದ್ದುದನ್ನು ಕಂಡೆ. ಅವನ್ನು ಎತ್ತಿಕೊಂಡು ಬಂಗಲೆಗೆ ಬಂದು, ಅವುಗಳ ವಾರಸಿ ಹುಡುಕಿಕೊಡಲು ಪೋಲೀಸ್ ಆಫೀಸರರು ಅವನ್ನು ಅಮಾನತು ಇರಿಸಬೇಕೆಂದು ಸೂಚನೆ ಬರೆದು, ಈ ಹೊತ್ತು ರಾಜಧಾನಿಗೆ ಹೋಗುವಾಗ ಒಡವೆಯನ್ನು ಕೊಂಡುಹೋಗಬೇಕೆಂದು ಚೀಲದಲ್ಲಿ ಮಡಗಿಕೊಂಡಿದ್ದೆ. ಆದರೂ ಇಟ್ಟ ಸ್ಥಳವನ್ನು ಮರೆತು, ಈ ಬಡಹುಡುಗಿಯೇ ಅದನ್ನು ಕದ್ದಿರಬಹುದೆಂದು ನೀವು ಊಹಿಸುವಂತೆ ಆದುದಕ್ಕೆ ಕಾರಣ ಯಾರು? ಪಠೇಲರೂ ಶಾನುಭಾಗರೂ ಕಾಣೆಯಾದುದನ್ನು ಗ್ರಾಮದಲ್ಲಿ ತಲಾಸಿ ಮಾಡುವ ಕ್ರಮವೇನೆಂದು ಕೇಳಿದ್ದೆ. ಈಗ ತಿಳಿದೆ, ಕಣ್ಣಾರೆ ಕಂಡೆ. ಮಂತ್ರಗಾರನಿಗೆ ಹೇಳಿಕೆ ಹೋಗುತ್ತಲೇ ಎಲ್ಲವನ್ನೂ ಅವನು ಈ ಹೆಂಗಸಿನಿಂದ ತಿಳಿದು, ಪ್ರಶ್ನೆಯನ್ನು ಕಂಡಂತೆಯೇ ಹೇಳುವನು. ಸಣ್ಣಹಳ್ಳಿ, ಏನೊಂದು ಸುದ್ದಿ ಮನೆಯಿಂದ ಮನೆಗೆ ಸುಲಭವಾಗಿ ಹರಡುತ್ತದೆ. ಅದೇ “ಗ್ರಹಚಾರಫಲ’’ ವಾಗಿ ತೋರಬಹುದು. ಏನೂ ಅರಿಯದ ಈ ಬಡ ಹುಡುಗಿಯ ಮೇಲೆ ಬಹಳ ಅತ್ಯಾಚಾರ ನಡೆದಿದೆ. ಇದಕ್ಕೆ ಹೊಣೆಗಾರನು ಈ ಮಂತ್ರವಾದಿಯೇ. ಇವನನ್ನು ರಾಜಧಾನಿಗೆ ವರ್ಗಾಯಿಸಿ ಅಲ್ಲಿ ಅವನ ವಿಚಾರಣೆ ನಡೆಯಬೇಕಾಗಿದೆ.

“ಹಳ್ಳಿಯ ಜನರಲ್ಲಿರುವ ಮೂಢನಂಬಿಕೆಗಳನ್ನು ತನ್ನ ಪ್ರಯೋಜನಕ್ಕೆ ತಿದ್ದಿಕೊಂಡು, ಹಳ್ಳಿಗರನ್ನು ಕೊಳ್ಳೆಹೊಡೆವ ಈ ಮಂತ್ರಗಾರನು ಈಗ ಮಾಡಿರುವ ಈ ತಕ್ಷೀರಿಗೆ ಎರಡು ವರ್ಷ ಕಠಿನ ಸಜೆಯನ್ನಾದರೂ ಅನುಭವಿಸಬೇಕಾದೀತು. ಅವನಿಗೆ ಸಹಾಯಕರಾಗಿದ್ದ ಶಾನುಭಾಗರು, ಈ ಹೆಂಗಸು, ಈ ಉಗ್ರಾಣಿ, ಮೊದಲಾದವರ ಅಪರಾಧವು ಎಷ್ಟಾಗುವುದೆಂದು ನೋಡಿದರೆ, ಶ್ಯಾನುಭಾಗರ ಅನ್ಯಾಯವು ಬಹಳವಾಗಿರುವಂತೆ ತೋರುತ್ತದೆ. ಇವರು ಈ ಕೆಲಸಕ್ಕೆ ಯೋಗ್ಯರಲ್ಲ. ಆದರೆ ಬರ್ತರಫ್ ಮಾಡಿದರೆ ಆ ಬಡ ಹೆಂಗಸು ಇನ್ನೂ ಹೆಚ್ಚಾಗಿ ನರಳುವಂತಾಗುವುದು. ಅದಕ್ಕಾಗಿ ಇವರ ನಡತೆಯನ್ನು ನಜರಿನಲ್ಲಿಟ್ಟುಕೊಳ್ಳುವೆವು. ಇಂತಹವರು ಪಠೇಲರ ಖಾಸಗಿ ಕೆಲಸ ಮಾಡುತ್ತಿದ್ದು, ಪಠೇಲರು ಇವರ ಹಂಗಿನ ಮನುಷ್ಯರಾಗಿರುವ ಕಾರಣ, ಸ್ವತಃ ಓದುಬರಹ ಬಲ್ಲ ಯೋಗ್ಯರು ಯಾರೂ ಪಠೇಲರ ಕುಟುಂಬದಲ್ಲಿದ್ದಾರಾದರೆ, ಅವರನ್ನು ಹುಡುಕಿ, ಪಠೇಲಿಕೆಯನ್ನು ಅವರಿಗೆ ಕೊಡುವುದು ಉತ್ತಮವೆಂದು ತೋರುತ್ತದೆ. ಉಗ್ರಾಣಿ! ನಿನ್ನ ನಜರು ನಿನ್ನ ಹೆಂಡತಿಯ ಮೇಲೂ ಇರತಕ್ಕದ್ದಲ್ಲವೇ?’’

ಅತಿ ಸುಲಭವಾಗಿರುವ ಮಾತುಗಳಲ್ಲಿ ಈ ಅಭಿಪ್ರಾಯವನ್ನು ದೊರೆಗಳು ಅಪ್ಪಣೆ ಕೊಡಿಸಿದರು. ಆಗತಾನೇ ಒಕ್ಕಲುಗಳು ಆ ಮಂತ್ರವಾದಿಯ ಕಡೆಗೂ ರುಕ್ಕುವು ಈ ಬಡ ಹುಡುಗಿಯ ಕಡೆಗೂ ಧಾವಿಸಿದರು. ತಮ್ಮನ್ನು ಬಗೆಬಗೆಯಾಗಿ ಸುಲಿದ ಮಂತ್ರವಾದಿಯನ್ನು ಕೊನೆಯ ಬಾರಿ ಕಾಣುವುದಕ್ಕೆಂದು ಒಕ್ಕಲುಗಳು ತವಕಗೊಂಡರು. ರುಕ್ಕುವು ದೊರೆಗಳು ನಾಗಮ್ಮನಲ್ಲಿಟ್ಟ ಕನಿಕರವನ್ನು ತಿಳಿದು, ಎಷ್ಟೆಂದರೂ ಅವಳ ಹೆಂಗರುಳು ಕರಗಿ, ನಾಗಮ್ಮನ ಆರೈಕೆ ಮಾಡತೊಡಗಿದಳು. ತಾನು ಉಗ್ರಾಣಿಯ ಹೆಂಡತಿ, ಅಥವಾ, ತಾನು ಬ್ರಾಹ್ಮಣ ಹೆಂಗಸಲ್ಲವೆಂಬ ವಿಚಾರಗಳಾದರೂ ಅವಳಲ್ಲಿ ಉಂಟಾಗಲಿಲ್ಲ. ಪಠೇಲರು ಐವತ್ತು ರೂಪಾಯಿ ರೊಕ್ಕವನ್ನು, ಎಲವಸ್ತ್ರದ ಸೆರಗಿನಿಂದ ಗಂಟುಬಿಚ್ಚಿ, ಹೆಂಡತಿಯ ಕೈಯಿಂದ ನಾಗಮ್ಮನ ಬಳಿ ಭಕ್ತಿಯಿಂದ ಕಾಣಿಕೆ ಇಡಿಸಿದರು. ಉಗ್ರಾಣಿಯು ಕಂಚುಗಾರನ (ಮಂತ್ರವಾದಿಯ) ಮನೆಗೆ ಓಡಿಹೋಗಿ, ಪಂಜುರ್ಲಿಯ ವಿಗ್ರಹ ತಂದು, ಬಟ್ಲರನ ಕೈಯಲ್ಲಿ ಭಕ್ತಿಯಿಂದ ಕಾಣಿಕೆಯಿಟ್ಟನು. ಶಾನುಭಾಗರು ದೊರೆಗಳು ನಿಂತಲ್ಲಿಯೇ ತಾವು ಕೂತರು. ಹೀಗೊಂದು ಕೊನೆಯ ಅಂಕದ ತೆರೆ ಇಳಿಯುವ ಸನ್ನಿವೇಶವಾಯಿತು. ನಂತರ ದೊರೆಗಳು ಆ ಗೆಜ್ಜೆಟೀಕನ್ನು ಪಠೇಲರಿಗೆ ಕೊಟ್ಟರೆ, ಮಂತ್ರವಾದಿಯನ್ನು, ನಾಲ್ಕು ರೂಪಾಯಿ (ವಿಗ್ರಹದ ಬೆಲೆ) ಕೊಟ್ಟು, ಇನ್ನು ಮಾಟಗಾರನಾಗುವ ಬದಲು ತೋಟಗಾರನಾಗಬೇಕೆಂದು ಬೋಧಿಸಿದರು. ತಮ್ಮ ಚೀಲದಿಂದ ಎಂತಹದೋ ಮುಲಾಮನ್ನು ನಾಗಮ್ಮನ ಸುಟ್ಟಗಾಯಗಳಿಗೆ ಹಚ್ಚಲು ಕೊಡಿಸಿದರು. ಅಲ್ಲಿಂದ ನಸುನಗುತ್ತ ಬಂಗಲೆಗೆ ಹೊರಟರು.

“ಸುಮ್ಮನೇ ಸೆಟ್ಲ್ಮೆಂಟ್ ಮಾಡುತ್ತಾರೆ, ತೀರ್ವೆ ಹೆಚ್ಚಿಸುತ್ತಾರೆ.’’ ಎಂದು ದೂರುತ್ತಾರಲ್ಲ! ಇವರೇ ದೊರೆಗಳು. ಸೆಟ್ಲ್ಮೆಂಟ್ ಬಾಬುಗಳನ್ನು ವಿಚಾರ ಮಾಡುತ್ತ ತೀರ್ವೆ ಕೂಡಿಸುವವರು ನಿಜ. ಆದರೆ ಏನೂ ಹೇಳಿರಿ. ದೊರೆಗಳು ಎಷ್ಟು ಚೆನ್ನಾಗಿ ನ್ಯಾಯ ತೀರಿಸಿದರು! ಬ್ರಿಟಿಷರಲ್ಲಿರುವ ನ್ಯಾಯಬುದ್ಧಿಯ ಮಂತ್ರಬಲವು ಎಂತಹ ಮಂತ್ರವಾದವನ್ನೂ ಗೆಲ್ಲುವುದಲ್ಲವೇ?’’ ಎಂದು ಶಾನುಭಾಗರು ಪಠೇಲರಿಗೂ ಪಠೇಲರು ಶಾನುಭಾಗರಿಗೂ ಹೇಳುತ್ತಿರುವಾಗ ಒಕ್ಕಲುಗಳು ಕೇಳುತ್ತ ವಿಸ್ಮಿತರಾಗಿದ್ದರು.

ರುಕ್ಕುವಂತೂ ನಾಗಮ್ಮನನ್ನು ಬಿಟ್ಟಳೆಂಬ ಜಲದುರ್ಗೆಗಿಂತ ನೂರುಮಡಿ ಹೆಗ್ಗಳಿಕೆಯ ನೆಲದುರ್ಗೆಯಾಗಿ, ನಾಗಮ್ಮನ ಪೂರ್ಣ ಸೌಖ್ಯವಾಗುವತನಕವೂ ಅವಳ ಸೇವೆ ಮಾಡಿದಳು. ಶಾನುಭಾಗರ ಹಟ್ಟಿಯಲ್ಲಿ ಮಾತ್ರ ಎಮ್ಮೆಯಿಲ್ಲ. ಅದು ಚೊಕ್ಕವಾಗಿ, ಸುಂದರವಾಗಿ, ಹದವಾಗಿ, ರುಕ್ಕು ಪೂವರ ಸಂಸಾರಕ್ಷೇತ್ರವಾಯಿತು.


ಯಾವ ಮಂತ್ರವು ಬಲವೂ ಇಲ್ಲದೆ ರುಕ್ಕುವು ಈಗ ಒಂದು ಮಗುವಿನ ತಾಯಿಯಾಗಿದ್ದಾಳೆ. ಮಗುವಿನ ಹೆಸರು ನಾಗಮ್ಮ. ರುಕ್ಕುವು ಈಗ ನಾಗಮ್ಮನನ್ನು ಗೆಜ್ಜೆಟೀಕಿಗಿಂತಲೂ ಬಿಗಿಯಾಗಿ ಕೊರಳಿಗೆ ಕಟ್ಟಿಕೊಂಡಿದ್ದಾಳೆ.

ಟಿಪ್ಪಣಿ
ಹಿಂದಿನ ಕತೆಯಲ್ಲಿ ನೇಟಿವ್ ಅಧಿಕಾರಿಗಳ ಕಾರ್ಯವೈಖರಿಯ ಚಿತ್ರಣ ಇದೆ. ಎಂ. ಆರ್. ಶಾಸ್ತ್ರಿಗಳ ಕತೆಯಲ್ಲಿ ‘ರಂಗಪ್ಪನ ಪಠೇಲಿಕೆ’ ಮತ್ತು ಹುರುಳಿ ಭೀಮರಾಯರ ‘ಮಾರಪ್ಪನ ಕವಾತು’ ಇಂಥದೇ ಸಂಗತಿಗಳನ್ನು ಲಘು ಹಾಸ್ಯದ ಧಾಟಿಯಲ್ಲಿ ಹೇಳುತ್ತವೆ. ಇಲ್ಲೆಲ್ಲ ಪಟೇಲರು ಮತ್ತು ಶಾನುಭಾಗರು ಒಳ್ಳೆಯವರು ಎಂದು ತೋರಿಸುವ ಮಾನದಂಡ ಅವರು ಬ್ರಿಟಿಷ್ ಸರಕಾರದ ಕಠಿಣ ಶಾಸನದ ಅಡಿಯಲ್ಲಿ (ಕೆಲವೊಮ್ಮೆ ಅದನ್ನು ಸಣ್ಣಮಟ್ಟಿಗೆ – ಪ್ರಭುತ್ವಕ್ಕೆ ಗೊತ್ತಾಗದ ರೀತಿಯಲ್ಲಿ ಧಿಕ್ಕರಿಸಿಯೂ) ಜನಸಾಮಾನ್ಯರಿಗೆ ಸಹಾಯ ಮಾಡುತ್ತಿದ್ದದ್ದಾಗಿತ್ತು. ಹಾಗೆಯೇ ಪಟೇಲ ಶಾನುಭಾಗರ ಶೋಷಣೆ ಅಂದರೆ ಅದು ಬ್ರಿಟಿಷ್ ಸರಕಾರದ ಶೋಷಣೆ ಆಗುತ್ತಿರಲಿಲ್ಲ. ಸರಕಾರ ನ್ಯಾಯ ಧರ್ಮವನ್ನು ಪಾಲಿಸುತ್ತಿದೆ ಎನ್ನುವುದು ಜನರ ಒಟ್ಟಿನ ಅಭಿಪ್ರಾಯವಾಗಿತ್ತು. ಹಿಂದೆ ಹೇಳಿದ ಹಾಗೆ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಮೇಲೆ ಪಟೇಲ ಶಾನುಭೋಗರ ಮೌಲ್ಯಮಾಪನದ ಮಾನದಂಡವೇ ಬದಲಾಯಿತು. ಹೀಗೆ ಬದಲಾಗುವಲ್ಲಿ ಸಾಹಿತಿಗಳು ಮತ್ತು ಸ್ವಾತಂತ್ರ್ಯಹೋರಾಟಗಾರು ಮಾಡಿದ ಜನಜಾಗೃತಿ ಬಹಳ ಮುಖ್ಯ ಪಾತ್ರ ವಹಿಸಿದೆ.

ಎಂ. ಎನ್. ಕಾಮತರ ಈ ಕತೆಯಲ್ಲಿ ಪಟೇಲ ಶಾನುಭಾಗರು ದಾರಿತಪ್ಪಿದರೆ ಬ್ರಿಟಿಷ್ ಅಧಿಕಾರಿಗಳು ಅಥವಾ ಸರಕಾರ ಜನರಿಗೆ ನ್ಯಾಯ ಒದಗಿಸುತ್ತಿತ್ತು ಎನ್ನುವ ಸೂಕ್ಷ್ಮ ಚಿಂತನೆ ಅಂತರ್ಗತವಾಗಿರುವುದನ್ನು ಕಾಣಬಹುದು. ಎಂ. ಎನ್. ಕಾಮತರು ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುವುದಕ್ಕಿಂತ ಪೂರ್ವದ, ಬ್ರಿಟಿಷ್ ಪ್ರಭುತ್ವ ನಮಗೆ ಉತ್ತಮ ಸರಕಾರವನ್ನು ನೀಡಿದೆ ಎಂದು ಭಾವಿಸಿದ್ದ ಸಮಾಜದ ಪ್ರತಿನಿಧಿಯಾಗಿದ್ದರು ಎನ್ನುವುದು ಗಮನಾರ್ಹ,