ಶ್ಯಾನುಭಾಗ ಶ್ಯಾಮಣ್ಣನವರದ್ದು ಆನುವಂಶಿಕ ಶ್ಯಾನುಭಾಗತಿಕೆಯಾಗಿದ್ದುದರಿಂದ ಅವರ ಹಿರಿಯರು ಮನೆಯ ಪಕ್ಕದಲ್ಲೇ ಸರಕಾರಿ ಅಧಿಕಾರಿಗಳು ಉಳಿದುಕೊಳ್ಳಲೆಂದೇ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಅದರಲ್ಲಿ ಒಂದು ಅಡುಗೆ ಕೋಣೆ, ಮಲಗುವ ಕೋಣೆ, ಬರವಣಿಗೆ ನಡೆಸಲು ಮೇಜು ಕುರ್ಚಿಗಳಿರುವ ಮೊಗಸಾಲೆ ಮುಂತಾದ ಎಲ್ಲಾ ಅನುಕೂಲತೆಗಳು ಇದ್ದವು. ತಹಸಿಲ್ದಾರರ ಬಿಡಾರಕ್ಕೆ ಬೇಕಾದ ಅಡುಗೆಯ ಲವಾಜಮೆ ಮತ್ತು ಇತರ ಸಂರಜಾಮುಗಳನ್ನು ಮೊದಲೇ ಅಲ್ಲಿ ಶೇಖರಿಸಿಡಲಾಗಿತ್ತು.
ಡಾ.ಬಿ.ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬಿರಾಯನಕಾಲದ ಕತೆಗಳ ಸರಣಿಯಲ್ಲಿ ತುದಿಯಡ್ಕ ವಿಷ್ಣ್ವಯ್ಯನವರು ಬರೆದ ಕತೆ “ಶ್ಯಾನುಭಾಗ ಶ್ಯಾಮಣ್ಣನವರು”

 

1. ಮಣೆಗಾರನ ಗರ್ವಭಂಗ

ಶ್ಯಾನುಭಾಗ ಶ್ಯಾಮಣ್ಣನವರು ಎರಡು ಗ್ರಾಮದ ಶ್ಯಾನುಭಾಗರು. ಅವರ ಈ ಉದ್ಯೋಗ ಆನುವಂಶಿಕವಾಗಿ ಬಂದದ್ದು. ಶ್ಯಾಮಣ್ಣನವರ ತಂದೆ ರಾಮಕೃಷ್ಣಯ್ಯನವರು, ಅಜ್ಜ ನಾರಾಯಣಯ್ಯನವರು, ಮುತ್ತಾತ ಇಚ್ಚಣ್ಣನವರು – ಇವರೆಲ್ಲ ಶ್ಯಾನುಭಾಗತಿಕೆ ಮಾಡಿ ಸಾಕಷ್ಟು ಹೆಸರು ಪಡೆದವರೇ. 1837ನೇ ಇಸವಿಯಲ್ಲಿ ಬ್ರಿಟಿಷರ ವಿರುದ್ಧವಾಗಿ ನಡೆದ ಕಲ್ಯಾಣಪ್ಪನ ಕಾಟಕಾಯಿ ಎಂಬ ಸ್ವಾತಂತ್ರ್ಯ ಹೋರಾಟದಲ್ಲಿ ಶ್ಯಾಮಣ್ಣನವರ ಹಿರಿಯರು ಸೇರಿದ್ದರು ಎಂದು ಈ ಮನೆತನದ ಶ್ಯಾನುಭಾಗತಿಕೆಯನ್ನು ಆಂಗ್ಲ ಸರಕಾರ ರದ್ದು ಮಾಡಿತ್ತು. ಆದರೂ ಶ್ಯಾಮಣ್ಣನವರ ಅಜ್ಜ ನಾರಾಯಣಯ್ಯನವರು ಸರಕಾರದೊಡನೆ ವ್ಯವಹರಣೆ ನಡೆಸಿ ಉದ್ಯೋಗವನ್ನು ತಿರುಗಿ ಪಡೆಯುವಲ್ಲಿ ಸಫಲರಾಗಿದ್ದರು. ಶ್ಯಾಮಣ್ಣನವರು ಐಗಳ ಮಠದಲ್ಲಿ ಮೂರನೇ ತರಗತಿಯ ತನಕ ಕಲಿತವರಾಗಿದ್ದರೂ ಕುಮಾರವ್ಯಾಸನ ಭಾರತ, ಲಕ್ಷ್ಮೀಶನ ಜೈಮಿನಿ ಭಾರತ, ಕನಕದಾಸನ ನಳಚರಿತ್ರೆ ಮುಂತಾದ ಕಾವ್ಯಗಳನ್ನೂ ಹಲವಾರು ಯಕ್ಷಗಾನ ಪ್ರಸಂಗಗಳನ್ನೂ ಪರಿಚಯ ಮಾಡಿಕೊಂಡಿದ್ದರು. ಚುರುಕು ಬುದ್ಧಿಯವರಾದ ಅವರು ತಾಲೂಕಿನ ಸಮರ್ಥ ಶ್ಯಾನುಭಾಗರಲ್ಲೊಬ್ಬರು ಎಂದು ಸರಕಾರದಲ್ಲೂ ಹೆಸರು ಪಡೆದಿದ್ದರು.

ಆಟಿ ತಿಂಗಳ ಜಡಿಮಳೆ – ತೋಡು ತೊರೆ, ನದಿ ಕೆರೆ ಎಲ್ಲ ತುಂಬಿ ಹರಿಯುತ್ತಿತ್ತು. ಶ್ಯಾನುಭಾಗರು ಮನೆಯ ಇದಿರಿನ ಗದ್ದೆಗಳಿಗೆ ಬಯಲಿನ ಒತ್ತಿಗೆ ಹರಿಯುತ್ತಿದ್ದ ಪಯಸ್ವಿನೀ ನದಿಯ ನೀರು ದಡಮೀರಿ ಮಗುಚಿ ಬಿಡುತ್ತದೋ ಎಂದು ಅನುಮಾನ ಪಟ್ಟುಕೊಂಡು ಚಾವಡಿಯಲ್ಲಿ ಕುಳಿತುಕೊಂಡು ಎಲೆಯಡಕೆ ಜಗಿಯುತ್ತಿದ್ದರು. ಆಗ ಅವರ ಉಗ್ರಾಣಿ ಉಸ್ಮಾನ್ ಸಾೈಬ ಒದ್ದೆಮುದ್ದೆಯಾಗಿ ಆ ಬಿರುಮಳೆಯಲ್ಲಿಯೇ ಬಂದು ಮಳೆಗೆ ಒದ್ದೆಯಾಗದಂತೆ ಜಾಗ್ರತೆಯಿಂದ ಅಂಗಿ ಕಿಸೆಯಲ್ಲಿ ಒಣಗಿದ ಬಾಳೆ ಎಲೆಯಲ್ಲಿ ಸುತ್ತಿ ಇಟ್ಟಿದ್ದ ಒಂದು ಕಾಗದದ ತುಂಡನ್ನು ಶ್ಯಾಮಣ್ಣನವರ ಕೈಯಲ್ಲಿಟ್ಟ.

ಶ್ಯಾನುಭಾಗರು ಮೂಗಿಗೆ ಕನ್ನಡಕ ಏರಿಸಿ ಕಾಗದವನ್ನು ಬಿಡಿಸಿ ಓದಿ ನೋಡಿ ಸಾೈಬನಲ್ಲಿ ಹೇಳಿದರು – “ಈ ಹುಡುಗ ಯಾವುದೋ ಆಫೀಸಿನಿಂದ ವರ್ಗವಾಗಿ ಈಗಷ್ಟೆ ಇಲ್ಲಿಗೆ ಮಣೆಗಾರನಾಗಿ ಬಂದಾತ. ಇವನಿಗೆ ನಮ್ಮ ಮಲೆನಾಡಿನ ಜಡಿಮಳೆಯ ಹೊಡೆತ ಏನು ಗೊತ್ತು? ಧರ್ಮಪ್ಪನ ದರಖಾಸ್ತು ತನಿಖೆಗೆ ಸೋಮವಾರ ಬರುತ್ತಾನಂತೆ. ನೋಟೀಸಿನಲ್ಲಿ ಹಾಗಿದೆ. ನಾಳೆ ಬೆಳಗ್ಗೆ ನೀನು ಹೋಗಿ ಅವನಲ್ಲಿ ಹೇಳು. ಈ ದರಖಾಸ್ತು ಸ್ಥಳಕ್ಕೆ ಇಲ್ಲಿಂದ ನಾಲ್ಕು ಮೈಲು ದೂರವಿದೆ. ಅಲ್ಲಿಗೆ ಮುಟ್ಟಬೇಕಾದರೆ ಗುಡ್ಡ ಹತ್ತಬೇಕು. ಎರಡು ತೋಡು ದಾಟಬೇಕು. ಈ ಮಳೆಗೆ ಅವನು ಇಳಿದು ದಾಟಲು ಸಾಧ್ಯವಿಲ್ಲ. ಅವಕ್ಕೆ ಹಾಕಿದ ಪಾಲಗಳು (ಕಾಲು ಸಂಕ) ಈಗ ನೆರೆಯಿಂದಾಗಿ ಉಳಿದಿರಲಿಕ್ಕಿಲ್ಲ. ಕಾಡುದಾರಿ, ಜಿಗಣೆಗಳ ಕಾಟ, ಜಾಗವನ್ನು ಅಳತೆ ಮಾಡುವರೆ ಸಂಕಲೆ ಎಳೆಯಲು ಈ ಮಳೆಗೆ ಸಾಧ್ಯವಿಲ್ಲ, ಯಾವುದಕ್ಕೂ ಮೂರು ತಿಂಗಲು ಕಳೆಯಲಿ.”

ಉಸ್ಮಾನ್ ಸಾೈಬನು ಶ್ಯಾನುಭಾಗರ ಬಚ್ಚಲ ಮನೆಯತ್ತ ತೆರಳಿ ಒದ್ದೆಯಾದ ಬಟ್ಟೆಬರೆಗಳನ್ನು ಹಿಂಡಿ, ಉರಿಯುತ್ತಿದ್ದ ಒಲೆಯ ಹತ್ತಿರ ಹಿಡಿದು ತಕ್ಕಮಟ್ಟಿಗೆ ಒಣಗಿಸಿಕೊಂಡು ತಿರುಗಿ ತೊಟ್ಟುಕೊಂಡ. ಮನೆಗೆ ಬಂದು ಶ್ಯಾಮಣ್ಣನವರ ಹೆಂಡತಿ ಶಾರದಮ್ಮನವರು ಕೊಟ್ಟ ಕಾಫಿ ತಿಂಡಿಗಳನ್ನು ಹೊಟ್ಟೆಗೆ ಇಳಿಸಿ ತನ್ನ ಮನೆಯತ್ತ ಕಾಲು ಹಾಕಿದ.

ಮರುದಿನ ಸಂಜೆ ಬಂದ ಉಸ್ಮಾನ್ ಮಣೆಗಾರರು ಬರುವುದು ಖಂಡಿತವಂತೆ, ಅವರಿಗೆ ಆಮೇಲೆ ಬೇರೆ ಗ್ರಾಮಗಳಿಗೆ ಹೋಗುವ ಅರ್ಜೆಂಟು ಕೆಲಸಗಳಿವೆಯಂತೆ, ಇಲ್ಲಿಗೆ ದಾರಿ ತೋರಿಸಲು ನಾನು ಬೆಳಗ್ಗೆ ಅವರಲ್ಲಿಗೆ ಹೋಗಬೇಕಂತೆ – ಎಂಬ ಮಣೆಗಾರರ ಸಂದೇಶವನ್ನು ಶ್ಯಾನುಭಾಗರಿಗೆ ತಲುಪಿಸಿದ. ಅವರು ಒಳಗೊಳಗೆ ಈತನ ತಾಕತ್ತು ಎಷ್ಟಿದೆ ಎಂದು ಪರೀಕ್ಷಿಸಿಯೇ ಬಿಡೋಣ ಎಂದು ನಿಶ್ಚೈಸಿ “ಆಗಲಿ” ಎಂದರು.

ಮಣೆಗಾರ ಮಾಧವರಾಯ ಇಪ್ಪತ್ತೈದು ವರುಷ ಪ್ರಾಯದ ತರುಣ. ತಾಲೂಕು ಕಛೇರಿಯಲ್ಲಿ ಗುಮಾಸ್ತನಾಗಿದ್ದು ಮಣೆಗಾರ ಹುದ್ದೆಗೆ ಬಂದು ಎರಡು ತಿಂಗಳಾಗಿತ್ತಷ್ಟೆ. ತರುಣನಾದುದರಿಂದ ಹುರುಪಿನಿಂದ ಕೆಲಸ ಮಾಡಿ ಮೇಲಧಿಕಾರಿಗಳ ಮೆಚ್ಚುಗೆ ಪಡೆದು ಆದಷ್ಟು ಬೇಗ ತಹಶಿಲ್ದಾರನಾಗಬೇಕೆಂದು ಕನಸು ಕಾಣುತ್ತಿದ್ದ ವ್ಯಕ್ತಿ . ಶ್ಯಾಮಣ್ಣನವರ ಗ್ರಾಮಗಳಿಗೆ ಈ ತನಕ ಮಾಧವರಾಯ ಕಾಲಿಟ್ಟಿದ್ದಿಲ್ಲ. ಆ ಗ್ರಾಮಗಳ ಒಂದೆರಡು ಕಡತಗಳನ್ನು ಶ್ಯಾಮಣ್ಣನವರನ್ನು ತನ್ನ ಆಫೀಸಿಗೆ ಬರಮಾಡಿಕೊಂಡು ಅವರಿಂದ ಮಾಹಿತಿ ಪಡೆದು ಅಲ್ಲಿಂದಲೇ ವಿಲೇವಾರಿ ಮಾಡಿದ್ದ.

ಧರ್ಮಪ್ಪನ ದರಖಾಸ್ತು ರಿಕಾರ್ಡಿನಲ್ಲಿ ಒಂದು ಇಕ್ಕಟ್ಟು ಇತ್ತು. ಅವನ ನೆರೆಯಾತ ಆ ಸ್ಥಳ ತನ್ನ ಕುಮ್ಕಿ, ಅದರಲ್ಲಿ ಹಾದು ಹೋಗುವ ಮಾಮೂಲು ದಾರಿ ಇದೆ. ಆದುದರಿಂದ ಧರ್ಮಪ್ಪನಿಗೆ ಆ ಸ್ಥಳವನ್ನು ದುರಖಾಸ್ತಿಗೆ ಕೊಡಬಾರದು ಎಂದೆಲ್ಲ ತಕರಾರು ಹೂಡಿದ್ದ. ಈ ವ್ಯಕ್ತಿಗೆ ತಾಲೂಕು ಕಚೇರಿಯ ಪರಿಚಯವಿದ್ದುದರಿಂದ ದರಖಾಸ್ತಿನ ಕಡತವನ್ನು ಮಣೆಗಾರರೇ ಸ್ವತಃ ತನಿಖೆ ಮಾಡಿ ಕೂಡಲೇ ತಾಲೂಕು ಕಚೇರಿಗೆ ಕಳುಹಿಸಬೇಕೆಂದು ಹುಕುಂ ಮಾಡಿಸುವಲ್ಲಿ ಯಶಸ್ವಿಯಾಗಿದ್ದ. ಇದರಿಂದಾಗಿ ಮಣೆಗಾರರಿಗೆ ಈ ಕೆಲಸವನ್ನು ಬೇಗನೆ ಮಾಡಿ ಮುಗಿಸೋಣವೆಂದು ಕಂಡಿತು.

ಮಣೆಗಾರನ ಆಫೀಸು ಇರುವ ಪೇಟೆಯಿಂದ ಶ್ಯಾನುಭಾಗರಲ್ಲಿಗೆ ಬರಬೇಕಾದರೆ ಅವರ ಮನೆಯ ಹತ್ತಿರವಿರುವ ಪಯಸ್ವಿನೀ ನದಿಯನ್ನು ದಾಟಬೇಕು. ವರುಷದ ಏಳು ತಿಂಗಳಲ್ಲಿ ಅಭ್ಯಾಸವಿದ್ದವರಿಗೆ ನದಿಯನ್ನು ಇಳಿದು ದಾಟಲು ಸಾಧ್ಯವಾಗುತ್ತದೆ. ಮಳೆಗಾಲದಲ್ಲಿ ನದೀ ಪಾತ್ರ ತುಂಬಿದಾಗ ಸುಮಾರು ಇಪ್ಪತ್ತೈದು ಅಡಿ ಉದ್ದದ ಹನ್ನೆರಡರಿಂದ ಹದಿನಾಲ್ಕು ಬಿದಿರುಗಳನ್ನು ಜೋಡಿಸಿ ತಯಾರು ಮಾಡಿದ ತೆಪ್ಪವೇ ನದಿಯನ್ನು ಹಾಯಲಿಕ್ಕಿರುವ ಸಾಧನ. ಅದನ್ನು ಸುಮಾರು ಹದಿನೈದು ಅಡಿ ಉದ್ದದ ಸಪೂರವಾದ ಬಿದಿರಿನ ಜಲ್ಲೆಯಿಂದ ನಡೆಸಬೇಕು. ಈ ತೆಪ್ಪವನ್ನು ನಡೆಸಲು ಗೊತ್ತಾಗಿದ್ದ ಶ್ಯಾನುಭಾಗರ ಒಕ್ಕಲು ಓಡ್ಯಪ್ಪ ಸಾಧಾರಣ ಮೂವತ್ತೈದು ವರುಷ ಪ್ರಾಯದ, ತುಂಬ ಚಟುವಟಿಕೆಯ ವ್ಯಕ್ತಿ. ಮರ ಏರುವುದರಲ್ಲಿ, ಕಂಬಳದ ಕೋಣಗಳನ್ನು ಓಡಿಸುವುದರಲ್ಲಿ, ಹೊಳೆ ಈಜುವುದರಲ್ಲಿ, ಎತ್ತಿನ ಬಂಡಿ ನಡೆಸುವುದರಲ್ಲಿ ಈತ ಎತ್ತಿದ ಕೈ. ಹೊಳೆಯಲ್ಲಿ ನೆರೆ ಬಂದು ತೆಪ್ಪ ನಡೆಸಲು ಸಾಧ್ಯವಿಲ್ಲದಿದ್ದಾಗ ಅಗತ್ಯಬಿದ್ದರೆ ತಲೆಗೆ ಒಂದು ಬೈರಾಸು ಸುತ್ತಿ ಈಸು ಬಿದ್ದು ಆಚೆ ದಡಕ್ಕೆ ಹೋಗುತ್ತಿದ್ದ.

ಸೋಮವಾರ ಬೆಳಗ್ಗೆ ಮಣೆಗಾರರು, ಅದರ ಪೇದೆ, ಉಗ್ರಾಣಿ ಉಸ್ಮಾನ್ ಸಾೈಬ ಈ ಮೂವರು ಹೊಳೆಯ ದಡಕ್ಕೆ ಬಂದರು. ಸಾೈಬನು ಈಚೆ ಬದಿಯಿಂದ ಆಚೆ ದಡಕ್ಕೆ ತೆಪ್ಪ ತರಲು ‘ಕೂ’ ಹಾಕಿದ. ಆಚೆ ದಡಕ್ಕೆ ಮಣೆಗಾರರ ಬರೋಣವನ್ನು ನಿರೀಕ್ಷಿಸಿಕೊಂಡಿದ್ದ ಶ್ಯಾಮಣ್ಣನವರು ಮೊದಲೇ ಓಡ್ಯಪ್ಪನನ್ನು ಮನೆಗೆ ಕರೆಸಿಕೊಂಡಿದ್ದರು. ಉಗ್ರಾಣಿಯ ‘ಕೂ’ ಕೇಳಿ ಆತ ನದಿಯ ಕಡೆಗೆ ಹೆಜ್ಜೆ ಇಡುವಾಗ ಶ್ಯಾನುಭಾಗರು ಅವನ ಕಿವಿಯಲ್ಲಿ ಏನೋ ಹೇಳಿದರು. ಓಡ್ಯಪ್ಪ ಆದೀತೆಂದು ತಲೆ ಅಲ್ಲಾಡಿಸಿ ನಸು ನಗುತ್ತಾ ತೆಪ್ಪದ ಕಡೆಗೆ ತೆರಳಿದ.

ನದಿಯ ದಡದಲ್ಲಿದ್ದ ದೊಡ್ಡ ಚಾಕಟೆ ಮರದ ಬೇರಿಗೆ ಕಬ್ಬಿಣದ ಸಂಕಲೆಯಿಂದ ಬಿಗಿದಿದ್ದ ತೆಪ್ಪವನ್ನು ಬಿಚ್ಚಿ ಜಲ್ಲೆಯನ್ನು ತೆಗೆದುಕೊಂಡು ನಡೆಸುತ್ತಾ ಓಡ್ಯಪ್ಪ ಇದಿರು ದಡವನ್ನು ಮುಟ್ಟಿದ. ತೆಪ್ಪದಿಂದ ಇಳಿದು ಸಂಕಲೆಯನ್ನು ಎಳೆದು ಹೊಳೆಯ ದಂಡೆಗೆ ತಾಗಿ ಅದನ್ನು ನಿಲ್ಲಿಸಿದ. ಮೊದಲು ದಫ್ತರದ ಕಟ್ಟು ಸಹಿತ ಉಸ್ಮಾನ್ ತೆಪ್ಪವನ್ನು ಏರಿದ. ಅನಂತರ ಮಣೆಗಾರರ ಪೇದೆ ತೆಪ್ಪವನ್ನು ಹತ್ತಲು ಬರುವಾಗ ಜಾರಿ ಬಿದ್ದ. ಬಟ್ಟೆಗೆ ತಗಲಿದ ಕೆಸರನ್ನು ತೆಪ್ಪ ಏರಿದ ಮೇಲೆ ತೊಳೆಯ ತೊಡಗಿದ. ಪೇದೆ ಬಿದ್ದದ್ದನ್ನು ನೋಡಿ ಮಣೆಗಾರರಿಗೆ ಒಳಗೆ ತುಸು ಹೆದರಿಕೆಯಾದರೂ ಅಡ್ಡ ಧೈರ್ಯದಿಂದ ತೆಪ್ಪದ ಮೇಲೆ ಕಾಲಿಡುವುದಕ್ಕೂ ಆವರೆಗೆ ಇಲ್ಲದ ಮಳೆ ಹನಿ ಹಾಕಲಿಕ್ಕೂ ಸರಿಯಾಯಿತು.

ಅಷ್ಟು ಹೊತ್ತಿಗೆ ಶ್ಯಾನುಭಾಗರು ಕೊಡೆ ಬಿಡಿಸಿಕೊಂಡು ಬಂದು ಹೊಳೆಯ ಈಚೆ ಬದಿಯಲ್ಲಿ ನಿಂತರು. ಓಡ್ಯಪ್ಪ ಮಳೆಗೆ ಹೆದರದೆ ತಲೆಗೆ ಬೈರಾಸು ಸುತ್ತಿಕೊಂಡು ಜಲ್ಲೆ ಹಾಕಿ ತೆಪ್ಪವನ್ನು ನಡೆಸಲು ತೊಡಗಿದ. ತೆಪ್ಪದ ಮೇಲಿದ್ದವರು ಕೊಡೆ ಬಿಡಿಸಿದರು. ತೆಪ್ಪ ಹೊರಟಲ್ಲಿಂದ ಮೊದಲು ಪ್ರವಾಹಕ್ಕೆ ಇದಿರಾಗಿ ದಡದ ಬದಿಯಲ್ಲೇ ಅರ್ಧ ಪರ್ಲಾಂಗಿನಷ್ಟು ಮೇಲೆ ಹೋಗಬೇಕು. ಅನಂತರ ನದಿಗೆ ಅಡ್ಡಲಾಗಿ ಅದನ್ನು ತಿರುಗಿಸಿ ಬೇಗ ಬೇಗನೆ ಜಲ್ಲೆ ಹಾಕುತ್ತಾ ವೇಗವಾಗಿ ಹರಿಯುವ ಪ್ರವಾಹದಲ್ಲಿ ನದಿಯ ನಡುಭಾಗವನ್ನು ದಾಟಿಸಿ ತೆಪ್ಪವನ್ನು ಮತ್ತೊಂದು ದಡಕ್ಕೆ ಮುಟ್ಟಿಸಬೇಕು. ತೆಪ್ಪ ನಡೆಸುವವನ ಚಲಾಕು ಗೊತ್ತಾಗುವುದು ಇಲ್ಲಿಯೇ. ಪಳಗದವರು ನಡುನೀರಿನಲ್ಲಿ ಜಲ್ಲೆಯನ್ನು ನದಿಯ ತಳಕ್ಕೆ ಬಾಗಿ ಒತ್ತುವಾಗ ಸಮತೋಲನ ತಪ್ಪಿ ನೀರಿಗೆ ಬಿದ್ದು ಬಿಡುವ ಅಪಾಯವಿದೆ, ಕೆಲವು ಸಲ ಹಾಗೆ ಬಿದ್ದವನ ತಲೆಯ ಮೇಲೆಯೇ ತಲೆ ಎತ್ತಲು ಬಿಡದೆ ತೆಪ್ಪ ತೇಲಿ ಹೋಗುವ ಸಾಧ್ಯತೆ ಇದೆ. ಒಮ್ಮೊಮ್ಮೆ ಜಲ್ಲೆಯೇ ಕೈಯಿಂದ ಜಾರಿ ಬಿಡುತ್ತದೆ.

ಓಡ್ಯಪ್ಪ ನದಿಯ ದಡದಲ್ಲಿಯೇ ಪ್ರವಾಹಕ್ಕೆ ಇದಿರಾಗಿ ತೆಪ್ಪವನ್ನು ನಡೆಸುತ್ತಾ ಹೋದ. ಗೊತ್ತಾದ ಜಾಗದಲ್ಲಿ ಅದನ್ನು ಅಡ್ಡಲಾಗಿ ತಿರುಗಿಸಲೆಂದು ಜಲ್ಲೆಯನ್ನು ಹೊಳೆಯ ತಳದಲ್ಲಿ ಊರಿದ. ಜಲ್ಲೆಯನ್ನು ಮೇಲೆ ಎಳೆದುಕೊಳ್ಳಬೇಕೆಂದಿರುವಾಗ ಅವನ ಕೈಯಿಂದ ಜಲ್ಲೆ ಜಾರಿ ನೀರಿನಲ್ಲಿ ತೇಲತೊಡಗಿತು. ಓಡ್ಯಪ್ಪ ಅದನ್ನು ಹಿಡಿಯಲು ತಟ್ಟನೆ ನೀರಿಗೆ ಹಾರಿದ. ಪ್ರವಾಹದೊಂದಿಗೆ ತೇಲಿ ಹೋಗುತ್ತಿದ್ದ ಜಲ್ಲೆಯನ್ನು ಹಿಡಿಯಲು ವೇಗವಾಗಿ ಈಜತೊಡಗಿದ. ತೆಪ್ಪ ಪ್ರವಾಹದಲ್ಲಿ ತೇಲತೊಡಗಿತು.

ಮಣೆಗಾರರ ಭಂಡ ಧೈರ್ಯವೆಲ್ಲ ಹಾರಿಹೋಯಿತು. ಏನು ಮಾಡುವುದೆಂದು ತೋಚದೆ ಅಷ್ಟರವರೆಗೆ ತೆಪ್ಪದಲ್ಲಿ ಕುಳಿತಿದ್ದವರು ಎದ್ದು ನಿಲ್ಲಲು ಹೋದರು. ಮಳೆ ಬರುತ್ತದೆಂದು ಕೊಡೆ ಬಿಡಿಸಿಕೊಂಡಿದ್ದ ಕಾರಣ ಬೀಸುತ್ತಿದ್ದ ಗಾಳಿಯ ರಭಸಕ್ಕೆ ಕೊಡೆಯ ಒಳಗೆ ಗಾಳಿ ಸೇರಿ ಮಣೆಗಾರರು ತೆಪ್ಪದ ಮೇಲೆ ಮುಗ್ಗರಿಸಿದರು. ಕೊಡೆಯ ಒಳ ಬದಿ ಹೊರಬದಿಯಾಗಿ ಎರಡು ಕಡ್ಡಿಗಳು ತುಂಡಾದುವು. ಆಚೆ ದಡದಲ್ಲಿದ್ದ ಶ್ಯಾನುಭಾಗರು “ಗಡಿಬಿಡಿ ಮಾಡಬೇಡಿ, ಕೊಡೆ ಮಡಚಿ ಕುಳಿತುಕೊಳ್ಳಿ. ಕೈಯಲ್ಲಿ ತೆಪ್ಪದ ಬಿದಿರನ್ನು ಗಟ್ಟಿ ಹಿಡಿದುಕೊಳ್ಳಿ” ಎಂದು ಸೂಚನೆ ಕೊಟ್ಟರು. ತೆಪ್ಪ ದಾಟುವ ಕಡವಿನಿಂದ ಎರಡು ಫರ್ಲಾಂಗು ದೂರದಲ್ಲಿ ತೆಂಕು ಬಡಗಾಗಿ ಹರಿಯುವ ಹೊಳೆ ಪೂರ್ವ ದಿಕ್ಕಿಗೆ ತಿರುಗುತ್ತವೆ. ಆ ಭಾಗದ ಹೊಳೆಯ ನಡುವಿನಲ್ಲಿ ಹೆಬ್ಬಂಡೆಯೊಂದು ಎದ್ದು ನಿಂತಿದೆ. ಹತ್ತಿರದಲ್ಲಿ ನೀರಿನ ಭಯಂಕರ ಸುಳಿ ಇದೆ. ಅದು ತುಂಬ ಅಪಾಯದ ಸ್ಥಳ. ಈ ಸಂಗತಿಯನ್ನು ಮಣೆಗಾರರ ಪೇದೆಯ ಹತ್ತಿರ ಉಗ್ರಾಣಿ ಹೇಳುತ್ತಿದ್ದಾಗ ಕೇಳಿಸಿಕೊಂಡ ಮಣೆಗಾರರು “ಶ್ಯಾನುಭಾಗರೇ, ನಾವು ನೀರು ಪಾಲಾಗುತ್ತೇವೆ, ಸರಕಾರದ ದಫ್ತರೂ ಮುಳುಗಿ ಹೋಗುತ್ತದೆ” ಎಂದು ಬೊಬ್ಬಿಟ್ಟರು. ನಿಜದಲ್ಲಿ ಅವರಿಗೆ ಸರಕಾರದ ದಫ್ತರಿಗಿಂತಲೂ ಒಳಗೊಳಗೆ ನೆನಪಾದದ್ದು ತನ್ನ ಮಡದಿ ಮತ್ತು ನಾಲ್ಕು ತಿಂಗಳ ಮುದ್ದು ಮಗುವಿನ ಮುಖಗಳು.

ಈಗ ಮಣೆಗಾರರ ಮಾತುಗಳು ಸ್ಪಷ್ಟವಾಗಿ ಶ್ಯಾನುಭಾಗರಿಗೆ ಕೇಳಿಸದೆ ಹೋದರೂ ಅವರು ಸಂಪೂರ್ಣವಾಗಿ ಎದೆಗುಂದಿದ್ದಾರೆಂದು ಅರ್ಥಮಾಡಿಕೊಂಡ ಅವರು “ಹೆದರಬೇಡಿ, ಏನೂ ಆಗಲಿಕ್ಕಿಲ್ಲ” ಎಂದು ಗಟ್ಟಿಯಾಗಿ ಬಾಯಿಯಲ್ಲಿ ಹೇಳುತ್ತಾ ಕೈಯಲ್ಲಿಯೂ ಸನ್ನೆ ಮಾಡಿದರು.

ತೆಪ್ಪ ಮತ್ತೂ ಮುಂದಕ್ಕೆ ಹೋಯಿತು. ಉಸ್ಮಾನ್ ಸಾೈಬನು ತಿಳಿಸಿದ ಭಯಂಕರ ಸುಳಿಯ ಹತ್ತಿರ ತಲುಪಲು ಒಂದು ನೂರು ಮಾರು ಸಹ ಇಲ್ಲ. ತೆಪ್ಪದಲ್ಲಿ ಕಂಗಾಲಾಗಿ ಕುಳಿತಿದ್ದ ಮಣೆಗಾರರಿಗೆ ಉಸ್ಮಾನ್ ಹೇಳಿದ ಸ್ಥಳ ಯಾವುದೆಂದು ತಿಳಿದುಹೋಯಿತು. ಅವರ ಪೇದೆಗೂ ಅದರ ಅರಿವಾಯಿತು. ಅಷ್ಟರ ತನಕ ಮೌನವಾಗಿದ್ದ ಆತ ‘ಬದುಕಿ ಉಳಿದರೆ ಉಳ್ಳಾಗಳು ದೈವಕ್ಕೆ ಒಂದು ಬೊಂಡದ ಗೊನೆಯನ್ನೂ, ಪಾಷಾಣಮೂರ್ತಿಗೆ ಒಂದು ಹುಂಜವನ್ನೂ ಒಪ್ಪಿಸುತ್ತೇನೆ’ ಎಂದು ಗಟ್ಟಿಯಾಗಿ ಹೇಳುತ್ತಾ ಹರಕೆ ಹೊತ್ತ. ತಮ್ಮ ಪೇದೆಯ ಮಾತನ್ನು ಕೇಳಿಸಿಕೊಂಡಾಗ ಮಣೆಗಾರರ ಗಂಟಲ ತೇವ ಸಂಪೂರ್ಣ ಆರಿ ಹೋಯಿತು. ಬೆರಗುಗಣ್ಣಿಂದ ಅವರು ಹೊಳೆ ನೀರನ್ನೇ ನೋಡತೊಡಗಿದರು.

ಈಗ ಓಡ್ಯಪ್ಪ ಜಲ್ಲೆಯನ್ನು ಹಿಡಿದುಕೊಂಡು ವೇಗವಾಗಿ ಈಜುತ್ತಾ ತೆಪ್ಪವನ್ನು ಏರಿ, ಒಮ್ಮೆಗೇ ಜಲ್ಲೆಯನ್ನು ಎತ್ತಿ ಹಾಕುತ್ತಾ ರಭಸದಿಂದ ತೆಪ್ಪವನ್ನು ಮಣೆಗಾರರು ಮೊದಲು ಬಂದು ನಿಂತಿದ್ದ ದಡದಲ್ಲಿಯೇ ನಿಲ್ಲಿಸಿದ. ತೆಪ್ಪ ನದಿಯ ದಡಕ್ಕೆ ತಾಗಿತು ಎಂಬಷ್ಟರಲ್ಲಿ ಮಣೆಗಾರರು ನದಿಯ ದಂಡೆಗೆ ಹಾರಿದರು, ಪೇದೆಯೂ ಹಾರಿದ. ಉಗ್ರಾಣಿ ಉಸ್ಮಾನ್ ಸಾೈಬನು ದಫ್ತರ ಕಟ್ಟು ಹಿಡಿದುಕೊಂಡು ಮೆಲ್ಲನೆ ಇಳಿದ. ಮಣೆಗಾರರು ಒಣಗಿದ್ದ ಗಂಟಲಲ್ಲೇ “ಶ್ಯಾನುಭಾಗರಲ್ಲಿ ಹೇಳು, ನಾಲ್ಕು ತಿಂಗಳ ಅನಂತರ ಸ್ಥಳ ತನಿಖೆಯ ವಿಚಾರ ಮಾಡುವ” ಎಂದು ಓಡ್ಯಪ್ಪನಲ್ಲಿ ಹೇಳಿ ಮುರಿದ ಕೊಡೆಯನ್ನು ಹಿಡಿದುಕೊಂಡು ತಮ್ಮ ಆಫೀಸಿನತ್ತ ಹೊರಟರು.

ಅವರ ತಲೆ ಕಾಣುವುದಿಲ್ಲ ಎಂದಾಗ ಓಡ್ಯಪ್ಪ ತೆಪ್ಪವನ್ನು ಸಲೀಸಾಗಿ ನಡೆಸಿಕೊಂಡು ಬಂದು “ನೀವು ಹೇಳಿದಂತೆ ಮಾಡಿದೆ” ಎಂಬ ಮುಖಭಾವದಿಂದ ಶ್ಯಾನುಭಾಗರ ಬಳಿ ನಿಂತ. ಶ್ಯಾನುಭಾಗರು “ಮಣೆಗಾರರಿಗೆ ಈ ಪಾಠ ಹೊಸತು. ಪಕ್ಕನೆ ಮರೆಯುವಂಥಾದ್ದಲ್ಲ. ನಿನಗೆ ಚಳಿಯಾಗುತ್ತಿದೆಯೋ? ಮನೆಗೆ ಬಾ, ಬಿಸಿ ಬಿಸಿ ಕಾಫಿ ಕುಡಿದು ಹೋಗು” ಎಂದು ಹೇಳುತ್ತಾ ಒದ್ದೆ ಮೈಯ ಓಡ್ಯಪ್ಪನನ್ನು ಕರೆದುಕೊಂಡು ಹೋದರು.

ಈ ತೆಪ್ಪವನ್ನು ನಡೆಸಲು ಗೊತ್ತಾಗಿದ್ದ ಶ್ಯಾನುಭಾಗರ ಒಕ್ಕಲು ಓಡ್ಯಪ್ಪ ಸಾಧಾರಣ ಮೂವತ್ತೈದು ವರುಷ ಪ್ರಾಯದ, ತುಂಬ ಚಟುವಟಿಕೆಯ ವ್ಯಕ್ತಿ. ಮರ ಏರುವುದರಲ್ಲಿ, ಕಂಬಳದ ಕೋಣಗಳನ್ನು ಓಡಿಸುವುದರಲ್ಲಿ, ಹೊಳೆ ಈಜುವುದರಲ್ಲಿ, ಎತ್ತಿನ ಬಂಡಿ ನಡೆಸುವುದರಲ್ಲಿ ಈತ ಎತ್ತಿದ ಕೈ. ಹೊಳೆಯಲ್ಲಿ ನೆರೆ ಬಂದು ತೆಪ್ಪ ನಡೆಸಲು ಸಾಧ್ಯವಿಲ್ಲದಿದ್ದಾಗ ಅಗತ್ಯಬಿದ್ದರೆ ತಲೆಗೆ ಒಂದು ಬೈರಾಸು ಸುತ್ತಿ ಈಸು ಬಿದ್ದು ಆಚೆ ದಡಕ್ಕೆ ಹೋಗುತ್ತಿದ್ದ.

2. ಕಾಡು ಹಂದಿಯೂ ಪಾರ್ಕರ್ ಪೆನ್ನೂ

ಶ್ಯಾನುಭಾಗ ಶ್ಯಾಮಣ್ಣನವರು ಆಗಷ್ಟೆ ಬೆಳಗ್ಗಿನ ಕಾಫಿ ತಿಂಡಿ ಮುಗಿಸಿ ಚಾವಡಿಯಲ್ಲಿ ಕುಳಿತು ಎಲೆಯಡಕೆ ಹರಿವಾಣಕ್ಕೆ ಕೈ ಹಾಕಿದ್ದರು. ಅಷ್ಟರಲ್ಲಿ ಮಣೆಗಾರರ ಪೇದೆ ಪರಮೇಸ್ರ ಬಂದು ಒಂದು ನೋಟೀಸನ್ನು ತಂದು ಅವರ ಕೈಯಲ್ಲಿಟ್ಟ. ಅದರಲ್ಲಿ ಅವರ ಗ್ರಾಮದ ದೇವಪ್ಪ ಗೌಡನ ದರಖಾಸ್ತಿನ ಸ್ಥಳ ತನಿಖೆಗೆ ಆ ತಿಂಗಳ ಹದಿನೈದನೇ ತಾರೀಕಿಗೆ ತಹಸೀಲ್ದಾರರು ಖುದ್ದು ಬರಲಿರುವರು, ಅವರ ಕೇಂಪಿಗೆ ತಕ್ಕ ಏರ್ಪಾಡು ಮಾಡುವುದಲ್ಲದೆ ಅವರು ಬರುವ ದಿವಸ ಗ್ರಾಮದ ಪಟೇಲರು ಅವರ ಉಗ್ರಾಣಿ ಮತ್ತು ದೇವಪ್ಪ ಗೌಡ ಸ್ವತಹ ಹಾಜರಿರತಕ್ಕದ್ದು ಎಂದು ಸೂಚಿಸಲಾಗಿತ್ತು.

ದೇವಪ್ಪ ಗೌಡನ ದರಖಾಸ್ತಿನ ಹಿಂದೆ ಸಣ್ಣ ಇತಿಹಾಸ ಇದೆ. ಆ ಸ್ಥಳ ಅಮ್ಟಾಜೆ ಗ್ರಾಮದ ಗಡಿ ಪ್ರದೇಶದಲ್ಲಿದ್ದು ಅದಕ್ಕೆ ತಾಗಿಕೊಂಡು ಸರಕಾರದ ಕಾದಿಟ್ಟ ಅರಣ್ಯ ಇತ್ತು. ಗೌಡ ಸುಮಾರು ಎರಡು ಎಕ್ರೆ ಸ್ಥಳದಲ್ಲಿ ಕಷ್ಟಪಟ್ಟು ಗುಡ್ಡ ಕಡಿದು ಒಂದು ಮುಡಿ ಗದ್ದೆ ಮಾಡಿದ್ದ. ತುಂಬ ನೀರಾಶ್ರಯದ ಸ್ಥಳವಾದುದರಿಂದ ಐವತ್ತು ತೆಂಗಿನ ಗಿಡ, ನೂರು ಕಂಗಿನ ಗಿಡಗಳನ್ನು ಹಾಕಿದ್ದಲ್ಲದೆ ಹಲಸು, ಗೇರು, ಮಾವು ಮುಂತಾದವುಗಳನ್ನೂ ನೆಟ್ಟಿದ್ದ. ಅವೆಲ್ಲ ಈಗ ಫಲಕೊಡಲು ಸಿದ್ಧವಾಗಿದ್ದವು. ಇಷ್ಟರಲ್ಲಿ ಅದೇ ಗ್ರಾಮದವನಾಗಿದ್ದ ಫಾರೆಸ್ಟ್ ಗಾರ್ಡ್ ಗೋವಿಂದನಿಗೆ ಆ ಸ್ಥಳದ ಮೇಲೆ ಕಣ್ಣು ಬಿತ್ತು. ಆತ ತನ್ನ ಮೇಲಧಿಕಾರಿಯವರ ಕಿವಿಯೂದಿ ದೇವಪ್ಪ ಗೌಡ ಕೃಷಿ ಮಾಡುವ ಸ್ಥಳ ಅರಣ್ಯ ಇಲಾಖೆಗೂ ಕಂದಾಯ ಇಲಾಖೆಗೂ ಮಧ್ಯೆ ಇರುವ ಕಾಪುತಡೆ (ಃuಜಿಜಿeಡಿ ಚಿಡಿeಚಿ) ಸ್ಥಳವಾದುದರಿಂದ ಗೌಡನಿಗೆ ಆ ಸ್ಥಳವನ್ನು ದರಖಾಸ್ತಿಗೆ ಕೊಟ್ಟರೆ ಅರಣ್ಯ ಇಲಾಖೆಗೆ ತೊಂದರೆಯಾಗುತ್ತದೆ. ಆದುದರಿಂದ ಅವನನ್ನು ಅಲ್ಲಿಂದ ಹೊರ ಹಾಕಬೇಕು ಎಂಬ ತಕರಾರು ಎಬ್ಬಿಸಿದ. ಅರಣ್ಯ ಇಲಾಖೆಯ ಆಕ್ಷೇಪಣಾ ಅರ್ಜಿ ಜಿಲ್ಲಾ ಕಲೆಕ್ಟರರಿಗೂ ಮದ್ರಾಸು ಸರಕಾರದ ರೆವೆನ್ಯೂ ಸೆಕ್ರೆಟರಿಗೂ ಹೋಯಿತು. ಪರಿಣಾಮವಾಗಿ ಸರಕಾರದಿಂದ ತಹಸೀಲ್ದಾರರೇ ಸ್ವತಹ ಸ್ಥಳ ತನಿಖೆ ಮಾಡಿ ರಿಪೋರ್ಟು ಮಾಡಬೇಕು ಎಂಬ ಆದೇಶ ಹೊರಟಿತು. ತಹಸಿಲ್ದಾರರ ಕೇಂಪಿಗೆ ಇದೇ ಕಾರಣ.

ಹದಿನೈದನೇ ತಾರೀಕಿನ ಸಂಜೆ ಸುಮಾರು ನಾಲ್ಕು ಗಂಟೆಗೆ ತಹಸಿಲ್ದಾರ್ ತೋಮಸ್ಸರು ಶ್ಯಾನುಭಾಗರಲ್ಲಿಗೆ ತಲುಪಿದರು. ಅವರ ಜೊತೆಗೆ ಪೇದೆ ಪುಟ್ಟ, ಅಡುಗೆಯ ಅಂತೋಣಿ, ಮಣೆಗಾರರು, ಅವರ ಪೇದೆ ಇಷ್ಟು ಜನರಿದ್ದರು. ಅವರನ್ನು ಇದಿರುಗೊಳ್ಳಲು ಪಟೇಲ್ ಪದ್ಮನಾಭರಾಯರೂ ತಮ್ಮ ಉಗ್ರಾಣಿಯೊಂದಿಗೆ ಬಂದಿದ್ದರು. ದೇವಪ್ಪ ಗೌಡನಂತೂ ಮಧ್ಯಾಹ್ನವೇ ಶ್ಯಾನುಭಾಗರಲ್ಲಿ ಹಾಜರಿದ್ದ.

ಶ್ಯಾನುಭಾಗ ಶ್ಯಾಮಣ್ಣನವರದ್ದು ಆನುವಂಶಿಕ ಶ್ಯಾನುಭಾಗತಿಕೆಯಾಗಿದ್ದುದರಿಂದ ಅವರ ಹಿರಿಯರು ಮನೆಯ ಪಕ್ಕದಲ್ಲೇ ಸರಕಾರಿ ಅಧಿಕಾರಿಗಳು ಉಳಿದುಕೊಳ್ಳಲೆಂದೇ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಅದರಲ್ಲಿ ಒಂದು ಅಡುಗೆ ಕೋಣೆ, ಮಲಗುವ ಕೋಣೆ, ಬರವಣಿಗೆ ನಡೆಸಲು ಮೇಜು ಕುರ್ಚಿಗಳಿರುವ ಮೊಗಸಾಲೆ ಮುಂತಾದ ಎಲ್ಲಾ ಅನುಕೂಲತೆಗಳು ಇದ್ದವು. ತಹಸಿಲ್ದಾರರ ಬಿಡಾರಕ್ಕೆ ಬೇಕಾದ ಅಡುಗೆಯ ಲವಾಜಮೆ ಮತ್ತು ಇತರ ಸಂರಜಾಮುಗಳನ್ನು ಮೊದಲೇ ಅಲ್ಲಿ ಶೇಖರಿಸಿಡಲಾಗಿತ್ತು.

ಸಂಜೆಯ ಲಘು ಉಪಹಾರದ ಆನಂತರ ತಹಸೀಲ್ದಾರರು ಶ್ಯಾನುಭಾಗರನ್ನು ಕರೆಸಿಕೊಂಡು ದರಖಾಸ್ತು ರಿಕಾರ್ಡನ್ನು ಬಿಡಿಸಿ ತನಿಖೆ ಮಾಡಬೇಕಾದ ಸ್ಥಳದ ದೂರ, ಹೋಗುವ ದಾರಿ, ಸ್ಥಳದ ಮಾಹಿತಿ ಎಲ್ಲವನ್ನೂ ವಿವರವಾಗಿ ಕೇಳತೊಡಗಿದರು. ಶ್ಯಾನುಭಾಗರು ಗೌಡನ ಶ್ರಮದ ಕುರಿತು ಮೊದಲು ತಿಳಿಸುತ್ತಾ 1905ನೇ ಇಸವಿಯ ಕೋಚ್ ಮೇನ್ ದೊರೆಯ ಸೆಟ್ಲ್ಮೆಂಟು ರಿಜಸ್ತ್ರಿಯಲ್ಲಿರುವ ವಿವರಕ್ಕೂ ವಸ್ತುಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಈ ಗ್ರಾಮ ಪುನಃ ಸರ್ವೆಯಾಗಲಿಲ್ಲ. ಸ್ಥಳವನ್ನು ತಾನು ಅಳತೆ ಮಾಡಿರುತ್ತೇನೆ, ಅರಣ್ಯ ಇಲಾಖೆಯವರ ವಾದವನ್ನು ಒಪ್ಪಿಕೊಳ್ಳಲಾಗದು, ಆ ಸ್ಥಳಕ್ಕೆ ಇಲ್ಲಿಂದ ಐದು ಮೈಲು ದೂರವಿದೆ, ಕಾಲುದಾರಿ, ಗುಡ್ಡ ಏರಿ ಇಳಿಯಬೇಕು, ತೋಡು ದಾಟಬೇಕು, ಸಂಚಾರ ಕಾಡಿನಲ್ಲಿಯೇ, ಪ್ರಯಾಣ ಸುಲಭವಲ್ಲ ಎಂದು ಸೇರಿಸಿದರು. ಕೊನೆಯ ಮಾತು ಕೇಳಿ ನಡು ವಯಸ್ಸು ದಾಟಿದ ಸ್ಥೂಲ ಶರೀರದ ತೋಮಸ್ಸರಿಗೆ ಕೆಣಕಿದ ಹಾಗಾಯಿತು. ಅವರು ತುಸು ಏರುದನಿಯಲ್ಲಿ “ಶ್ಯಾನುಭಾಗರೇ, ನಾನು ಕುಂದಾಪುರ, ಕಾರ್ಕಳ ತಾಲೋಕುಗಳಲ್ಲಿ ಕೆಲಸ ಮಾಡಿದವ. ಪಶ್ಚಿಮ ಘಟ್ಟದ ಸೆರಗಿನ ಕೊಲ್ಲೂರು, ಕಬ್ಬಿನಾಲೆ, ಬಚ್ಚಪ್ಪು ಮುಂತಾದ ಸ್ಥಳಕ್ಕೆ ನಡೆದೇ ಹೋದವ, ಒಮ್ಮೆ ಜಿಲ್ಲಾ ಕಲೆಕ್ಟರರ ಜೊತೆಗೆ ಕುದುರೆಮುಖಕ್ಕೂ, ಬಂಗಾಡಿ ಮಿತ್ತಬಾಗಿಲಿಗಾಗಿ ಕಳಸಕ್ಕೂ ಹೋಗಿದ್ದೇನೆ. ನಿಮ್ಮ ಗ್ರಾಮದ ಐದು ಮೈಲು ನನಗೆ ಯಾವ ಲೆಕ್ಕ? ಬೆಳಗ್ಗೆ ಎಂಟು ಗಂಟೆಗೆ ಹೊರಡುವ, ಎಲ್ಲ ಸಿದ್ಧತೆಯಾಗಲಿ” ಎಂದು ಆಜ್ಞೆ ಮಾಡಿದರು.

‘ಸರಿ’ ಎಂದು ತಲೆ ಅಲ್ಲಾಡಿಸುತ್ತಾ ಶ್ಯಾನುಭಾಗರು ಮನೆಗೆ ತೆರಳಿದರು. ಸೂರ್ಯ ಮುಳುಗುವ ಹೊತ್ತಿಗೆ ತಹಸಿಲ್ದಾರರ ಪೇದೆ ಪುಟ್ಟನನ್ನು ಗುಟ್ಟಿನಲ್ಲಿ ಕರೆದು “ತಹಸೀಲ್ದಾರರ ಮರ್ಜಿ ಹೇಗೆ?” ಎಂದು ಆತನಲ್ಲಿ ಪ್ರಶ್ನೆ ಹಾಕಿದರು. ತಹಸಿಲ್ದಾರರು ಲಂಚಗಿಂಚ ಮುಟ್ಟದೆ ಪ್ರಾಮಾಣಿಕತೆಯಿಂದ ಬ್ರಿಟಿಷ್ ಸರಕಾರದ ಮರ್ಜಿಯನ್ನು ಚಾಚೂ ತಪ್ಪದೆ ಪಾಲಿಸುವವರು, ರಿಟಾಯರ್ ಆಗುವ ಮೊದಲು ಡಿಪ್ಯೂಟಿ ಕಲೆಕ್ಟರ್ ಸ್ಥಾನಕ್ಕೆ ಏರಲು ನಿಷ್ಠೆಯಿಂದ ದುಡಿಯುವವರು ಎಂಬ ಮಾಹಿತಿ ಅವನಿಂದ ಶ್ಯಾನುಭಾಗರಿಗೆ ಸಿಕ್ಕಿತು. ಶ್ಯಾನುಭಾಗರಾದರೋ ತುಂಬ ಅನುಭವಸ್ಥರು, ಚಾಣಾಕ್ಷತೆ ಮತ್ತು ಕೆಲಸದ ಮರ್ಮ ಅವರಿಗೆ ಪರಂಪರೆಯಿಂದ ರಕ್ತಗತವಾಗಿದೆ; ತುಂಬ ಸಾಚಾ ಎನ್ನುವ ದರ್ಪದ ಅಧಿಕಾರಿಗಳಿಗೂ ಏನಾದರೊಂದು ಸಣ್ಣ ದೌರ್ಬಲ್ಯ ಇದ್ದೇ ಇದೆ ಎಂದು ಕಂಡುಕೊಂಡವರು. ಅವರು ಪುಟ್ಟನಲ್ಲಿ ಓರೆಯಾಗಿ “ರಾಯರಿಗೆ ಯಾವ ತಿಂಡಿ ತಿನಸುಗಳಲ್ಲಿ ಇಷ್ಟ? ಸಾಧ್ಯವಾದರೆ ಅದನ್ನು ಮಾಡಿಸುವ ಎಂದು ಕೇಳಿದೆ, ಬೇರೆ ಯಾವುದಕ್ಕೂ ಅಲ್ಲ” ಎಂದರು ನಗುತ್ತಾ. ಪುಟ್ಟ ಮೆಲ್ಲನೆ ಬಾಯಿ ಬಿಟ್ಟ. “ಗೇರು ಹಣ್ಣಿನ ಶರಾಬು ಮತ್ತು ಕಾಡುಹಂದಿಯ ಮಾಂಸ ಎಂದರೆ ತೋಮಸ್ಸರಿಗೆ ಅತ್ಯಂತ ಪ್ರೀತಿ. ವಿಷಯ ತಾನು ತಿಳಿಸಿದ್ದು ಎಂಬುದು ಗೊತ್ತಾಗಬಾರದು” ಎಂದು ಗುಟ್ಟು ಹೊರ ಹಾಕಿದ.

ಶ್ಯಾನುಭಾಗರು ತಮ್ಮ ಮೀಸೆಯಡಿಯಲ್ಲಿ ನಗುತ್ತಾ ಪಟೇಲರ ಉಗ್ರಾಣಿ ಉಳಿಯಪ್ಪನನ್ನು ಕರೆದು ಕೂಡಲೆ ಪಾಂಡಿ ಪೂಜಾರಿಯಲ್ಲಿಗೆ ಹೋಗಿ ಎರಡು ಬಾಟ್ಳಿ ಗೇರು ಹಣ್ಣಿನ ಊಚು ಶರಾಬನ್ನು ತಾ ಎಂದು ಅಟ್ಟಿದರು. ದೇವಪ್ಪನನ್ನು ಕರೆದು, ‘ನೀನು ಒಳ್ಳೆಯ ಈಜುಗಾರನಲ್ಲವೆ? ಕೋವಿಯನ್ನೂ ತೋಟೆಗಳನ್ನೂ ಕೊಡುತ್ತೇನೆ, ಹೇಗಾದರೂ ಮಾಡಿ ಬೆಳಗಾಗುವುದರೊಳಗೆ ಒಂದು ಕಾಡು ಹಂದಿಯನ್ನು ಗುಂಡು ಹೊಡೆದು ಉರುಳಿಸಿ ತಾ’ಎಂದು ಹೇಳಿ ತನ್ನ ಹನ್ನೆರಡು ಬೋರಿನ ‘ವೆಬ್ಲೀ ಎಂಡ್ ಸ್ಕಾಟ್’ ಕೋವಿಯನ್ನೂ ನಾಲ್ಕು ಒಂಟಿ ಗುಂಡು ಹಾಗೂ ಆರು ಎಲ್.ಜಿ. ತೋಟೆಗಳನ್ನೂ ಕೊಟ್ಟರು.

ಪಾಂಡಿ ಪೂಜಾರಿಯಲ್ಲಿ ಹೋಗಿದ್ದ ಉಳಿಯಪ್ಪ ಎರಡು ಬಾಟ್ಳಿ ಗೇರು ಹಣ್ಣಿನ ಶರಾಬು ತಂದು ಪೇದೆ ಪುಟ್ಟನ ಕೈಗೆ ಕೊಟ್ಟ. ರಾತ್ರಿಯ ಊಟಕ್ಕೆ ತಹಸಿಲ್ದಾರರಿಗೆ ಉಗ್ರಾಣಿ ಉಸ್ಮಾನ್ ಸಾೈಬನ ಮೆಹನತ್ತಿನಿಂದ ತಯಾರಾದ ಕೋಳಿ ರೊಟ್ಟಿ ಸಿದ್ದವಾಗಿತ್ತು. ಮೂಗಿನ ತನಕ ಕೋಳಿ ರೊಟ್ಟಿ ಹೊಡೆದ ತಹಸಿಲ್ದಾರರು ಆರಾಮ ಕುರ್ಚಿಯಲ್ಲಿ ಕುಳಿತು ತಮ್ಮ ಗುಡಾಣ ಹೊಟ್ಟೆಯ ಮೇಲೆ ಕೈಯಾಡಿಸುತ್ತಿರುವಾಗ ಪೇದೆ ಪುಟ್ಟನ ಮೂಲಕ ಬಂದಿದ್ದ ಗೇರು ಹಣ್ಣಿನ ಶರಾಬು ಬಾಟ್ಳಿಗಳ ಸುದ್ದಿ ಅಡುಗೆಯ ಅಂತೋಣಿ ಅವರ ಕಿವಿಗೆ ಮುಟ್ಟಿಸಿದ. ಶರಾಬು ಎಂದ ಕೂಡಲೇ ತೋಮಸ್ಸರ ಮುಖ ಅರಳಿತು, ಒಂದು ಬಾಟ್ಳಿಯ ಅರ್ಧದಷ್ಟು ಖಾಲಿಯಾಯಿತು. ಕಾಲುಗಂಟೆಯಲ್ಲಿ ಮಂಚದ ಮೇಲಿನ ಹಾಸಿಗೆಯಲ್ಲಿ ಬಿದ್ದುಕೊಂಡ ತಹಸಿಲ್ದಾರರು ಗೊರಕೆ ಹೊಡೆಯತೊಡಗಿದರು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಕೋವಿ ಹಿಡಿದುಕೊಂಡು ಹೆಗಲ ಮೇಲಿದ್ದ ತುಂಡು ಬೈರಾಸನ್ನು ತಲೆಗೆ ಸುತ್ತಿ ಹೊರಟ ಗೌಡನಿಗೆ ದಾರಿಯಲ್ಲಿದ್ದ ಕಬ್ಬಿಣದ ಕೆಲಸದ ಕಮ್ಮಾರ ಕಣ್ಣಪ್ಪಾಚಾರಿಯ ನೆನಪಾಯಿತು. ಇದಕ್ಕೆ ಕಾರಣವೂ ಇತ್ತು. ಕೋವಿ ಬ್ರಾಹ್ಮಣ ಶ್ಯಾನುಭಾಗರದ್ದು, ಅದನ್ನು ಅವರು ಭತ್ತದ ಪೈರಿಗೆ ಮಂಗಗಳು ದಾಳಿಯಿಟ್ಟಾಗ ಹುಸಿ ಗುಂಡು ಹಾರಿಸಲು ಮಾತ್ರ ಉಪಯೋಗಿಸುವುದು. ಆದುದರಿಂದ ಕೋವಿಯನ್ನು ಕಮ್ಮಾರನ ಕೈಯಲ್ಲಿ ಕೊಟ್ಟು ನಳಿಗೆ – ಕೊತ್ತುಗಳನ್ನು ಪರೀಕ್ಷಿಸಿ ಅಗತ್ಯಬಿದ್ದರೆ ಎಣ್ಣೆ ಹಾಕಿ ಶುಚಿ ಮಾಡಿಸುವ; ಹಂದಿ, ಹುಲಿ, ಮೊದಲಾದವುಗಳ ಬೇಟೆಗೆ ಕೋವಿ ಸರಿಯಾಗಿರದಿದ್ದರೆ ಅಪಾಯ -ಇದು ಗೌಡನ ಯೋಚನೆ.

ಕಣ್ಣಪ್ಪಾಚಾರಿ ಗೌಡನ ಕೈಯಲ್ಲಿ ಕೋವಿ ನೋಡಿದವನೇ “ಇದು ಧನಿಗಳ ಕೋವಿ, ಅವರು ಇದನ್ನು ಎಂದೂ ಬೇರೆಯವರ ಕೈಗೆ ಕೊಟ್ಟವರಲ್ಲ, ನಿನ್ನ ಕೈಗೆ ಹೇಗೆ ಬಂತು?” ಎಂದು ಪ್ರಶ್ನಿಸಿದ. ದೇವಪ್ಪಗೌಡ ಇದ್ದ ಸಂಗತಿ ಹೇಳಿದ. ಆಚಾರಿ ಕೋವಿಯ ನಳಿಗೆಯ ಒಳಗೆ ಕಣ್ಣು ಹಾಯಿಸಿ ನೋಡಿದ, ಕುದುರೆ ಎಳೆದ, ಎಲ್ಲ ಸರಿ ಉಂಟು ಎಂದು ಶಿಫಾರಸು ಮಾಡಿ ಕೊನೆಗೆ ಒಂದು ಸಲಹೆ ಕೊಟ್ಟ – ಅವನ ಮನೆಯಿಂದ ಒಂದು ಮೈಲು ದೂರದಲ್ಲಿರುವ ಕಾಟಿಕಜೆ ಕಾಳು ನಾಯ್ಕ ಹತ್ತು ಹದಿನೈದು ಗೆಣಸಿನ ಸಾಲು ನೆಟ್ಟಿದ್ದಾನೆ, ಅದರಲ್ಲಿ ಗೆಡ್ಡೆ ಇಳಿಯುತ್ತಾ ಬಂದಿದೆ. ಹಿಂದಿನ ದಿವಸ ರಾತ್ರಿ ಹಂದಿಗಳು ಒಂದು ಸಾಲು ಗೆಣಸನ್ನು ಒಕ್ಕಿ ಹಾಕಿದ್ದಾವಂತೆ, ಇವತ್ತು ಬೆಳಗ್ಗೆ ಕತ್ತಿಗೆ ಹಿಡಿ ಹಾಕಿಸಲೆಂದು ಬಂದಿದ್ದಾಗ ಹೇಳಿದ್ದ. ನಿನ್ನೆ ಗೆಣಸಿನ ರುಚಿ ಕಂಡ ಹಂದಿಗಳು ಈ ದಿನ ರಾತ್ರಿಯೂ ಬರಬಹುದು. ಒಂದು ಪ್ರಯತ್ನ ಮಾಡಬಹುದು.
ಗೌಡ ಕಾಳು ನಾಯ್ಕನ ಮನೆಗೆ ದೌಡಾಯಿಸಿದ. ಅವನಲ್ಲಿ ಕೇಳಿ ಲಾಟಾನು ತೆಗೆದುಕೊಂಡು ಗೆಣಸಿನ ಸಾಲುಗಳಿರುವ ಗದ್ದೆಯ ಬಳಿಗೆ ಹೋಗಿ ಹಿಂದಿನ ದಿವಸ ಹಂದಿಗಳು ಬಂದ ದಾರಿ, ಗುಂಡು ಹೊಡೆಯಲು ನಿಲ್ಲಬೇಕಾದ ಸ್ಥಳ ಮುಂತಾದವನ್ನೆಲ್ಲ ಪರೀಕ್ಷಿಸಿ ರಾತ್ರಿ ಸುಮಾರು ಹತ್ತು ಗಂಟೆಗೆ ಗೆಣಸು ಸಾಲುಗಳಿರುವ ಗದ್ದೆಯ ಹುಣಿಯಲ್ಲಿದ್ದ ಹುಣಿಸೆ ಮರದ ಗೆಲ್ಲಿನಲ್ಲಿ ಕುಳಿತು ಕೋವಿಗೆ ಒಂಟಿ ಗುಂಡು ತೋಟೆಯನ್ನು ತುಂಬಿಸಿ ಕಾದು ಕುಳಿತ.

ಹುಣ್ಣಿಮೆ ಕಳೆದು ಪಂಚಮಿಯ ದಿನವಾದ ಅಂದು ಚಂದ್ರ ಮೂಡಿ ಒಂದು ಘಳಿಗೆಯಾಗಿರಬಹುದು. ನಾಲ್ಕೈದು ಹಂದಿಗಳು ನಿಧಾನವಾಗಿ ಕಾಳು ನಾಯ್ಕನ ಗೆಣಸಿನ ಸಾಲಿನತ್ತ ಬರತೊಡಗಿದವು. ಒಂದು ಸಲ ಏನಾದರೂ ಸದ್ದು ಕೇಳಿಸುತ್ತದೊ ಎಂದು ಕಿವಿ ನಿಗುರಿಸಿನಿಂತವು. ಮೂಗರಳಿಸಿ ಹೊಸ ವಾಸನೆ ಇದೆಯೋ ಎಂದು ಪರೀಕ್ಷಿಸಿದವು. ಏನೂ ಸಂಶಯವಿಲ್ಲವೆಂಬ ಧೈರ್ಯದಿಂದ ಗೆಣಸಿನ ಸಾಲನ್ನು ಒಕ್ಕತೊಡಗಿದವು. ದೇವಪ್ಪ ಆಯ ನೋಡಿ ಬಂದೂಕಿನ ಕುದುರೆಯನ್ನು ಸಡಿಲಿಸುವ ಕೀಲನ್ನೆಳೆದ. “ಢಂ” ಎಂದು ಒಂಟಿ ಗುಂಡು ಹಾರಿತು. “ಟ್ರೀಂ” ಎಂಬ ಸದ್ದು ಮಾಡಿ ಒಂದು ಹಂದಿ ನೆಗೆಯಿತು. ಉಳಿದ ಹಂದಿಗಳು ಚಲ್ಲಾಪಿಲ್ಲಿಯಾಗಿ ಓಡತೊಡಗಿದವು. ಇನ್ನೊಂದು ಹಂದಿ ಗೌಡ ಕುಳಿತಿದ್ದ ಮರದ ಕಡೆಗೇ ಬಂತು. ಅದಕ್ಕೂ ಒಂದು ಗುಂಡು ಬಿತ್ತು, ಹಂದಿ ಗದ್ದೆಯ ಕಟ್ಟಹುಣಿಯ ಆಚೆಗಿದ್ದ ಸಣ್ಣ ತೋಡಿಗೆ ಹಾರಿತು.

ಅರೆಪೆಟ್ಟಾದ ಹಂದಿ, ಹುಲಿಗಳು ಬಹಳ ಅಪಾಯದ ಪ್ರಾಣಿಗಳು. ಇದಿರು ಸಿಕ್ಕಿದವರ ಮೇಲೆ ಜೀವದ ಹಂಗು ತೊರೆದು ಆಕ್ರಮಣ ಮಾಡುತ್ತವೆ. ನುರಿತ ಬೇಟೆಗಾರ ದೇವಪ್ಪ ಗೌಡ ಒಂದು ಘಳಿಗೆ ಕಾದು ಸಿಳ್ಳು ಹಾಕಿ ಮೆಲ್ಲಗೆ ಮರದಿಂದ ಇಳಿದ. ಲಾಟಾನು ಹಚ್ಚಿ ಮನೆಯಲ್ಲಿ ಕಾಯುತ್ತಿದ್ದ ಕಾಳು ನಾಯ್ಕ ಗೌಡನ ಗುಂಡಿನ ಸದ್ದು ಕೇಳಿ ಲಾಟಾನು ದೊಡ್ಡದು ಮಾಡಿ ಗೌಡನ ಸಿಳ್ಳಿಗೆ ‘ಕೂ’ ಎಂದು ಉತ್ತರಿಸಿ ಲಾಟಾನು ಸಹಿತ ಗೆಣಸಿನ ಸಾಲಿನತ್ತ ಬಂದ. ಮೊದಲ ಗುಂಡು ತಾಗಿದ ಹಂದಿ ಗೆಣಸಿನ ಸಾಲುಗಳಿಂದ ಇಪ್ಪತ್ತೈದು ಮಾರು ದೂರ ದಾಡೆಯನ್ನು ನೆಲಕ್ಕೆ ಕುತ್ತಿ ಬಿದ್ದು ಸತ್ತಿತ್ತು. ಒಂಟಿ ಗುಂಡು ಅದರ ಕಿವಿಯ ಬದಿಯಿಂದ ಒಳ ನುಗ್ಗಿತ್ತು. ಎರಡನೆಯ ಹಂದಿ ತೋಡಿನಿಂದ ಮೇಲೆ ಏರಲು ಸಾಧ್ಯವಾಗದೆ ನೂರು ಮಾರು ದೂರದಲ್ಲಿ ಹೊರಳಾಡಿ ಪ್ರಾಣ ಬಿಟ್ಟಿತ್ತು.

ದೇವಪ್ಪ ಸಂತೋಷದಿಂದ ಒಂದೇ ಉಸಿರಿಗೆ ಶ್ಯಾನುಭಾಗರ ಮನೆಗೆ ಕೋವಿ ಸಹಿತ ಓಟಕಿತ್ತ. ನಿದ್ರಿಸುತ್ತಿದ್ದ ಅವರನ್ನು ಎಬ್ಬಿಸಿ ಹಂದಿಗಳು ಬಿದ್ದ ಸುದ್ದಿ ತಿಳಿಸಿದ. ಅವರು ದೊಡ್ಡ ಹಂದಿಯನ್ನು ಬೆಳ ಬೆಳಗ್ಗೆ ಇಲ್ಲಿಗೆ ತಂದು ಹಾಕಬೇಕು. ಬೈಲಿನವರನ್ನು ಹಂದಿ ತಹಸಿಲ್ದಾರರಿಗೆ ಎಂದು ಒಟ್ಟುಗೂಡಿಸು. ತಹಸಿಲ್ದಾರರ ಸುದ್ದಿ ಕೇಳಿ ಜನರು ಬಂದೇ ಬರುತ್ತಾರೆ. ಮತ್ತೊಂದನ್ನು ನೀನೂ ಹಂದಿ ಹೊತ್ತವರೂ ಹಂಚಿಕೊಳ್ಳಿ ಎಂದು ತಾಕೀತು ಮಾಡಿದರು. ಗೌಡ ಹಂದಿ ಬಿದ್ದಲ್ಲಿಗೆ ಹೋದ. ಶ್ಯಾನುಭಾಗರು ಹಾಸಿಗೆಯ ಮೇಲೆ ಉರುಳಿದರು.

ಯಾವಾಗಲೂ ಬೆಳಗ್ಗೆ ಬೇಗನೆ ಏಳುವ ತಹಸಿಲ್ದಾರರು ಹಿಂದಿನ ರಾತ್ರಿಯ ಕೋಳಿ ರೊಟ್ಟಿ ಶರಾಬುಗಳಿಂದಾಗಿ ಏಳುವಾಗ ಏಳು ಗಂಟೆ ಕಳೆದಿತ್ತು. ಆಕಳಿಸುತ್ತಾ ಹೊರಗೆ ಬಂದಾಗ ಅಂಗಳದ ಬದಿಯಲ್ಲಿ ಗೌಡನವರು ತಂದು ಹಾಕಿದ್ದ ಹಂದಿಯನ್ನು ನೋಡಿದವರೇ ಕಾಲಿನಿಂದ ಅದಕ್ಕೆ ಒಂದು ಒದೆತ ಕೊಟ್ಟು “ಶ್ಯಾನುಭಾಗರೇ ಇದು ಎಲ್ಲಿ ಸಿಕ್ಕಿತು?” ಎಂದು ಕೇಳಿದರು. ಅದು ದೇವಪ್ಪ ಗೌಡನ ಸಾಹಸ ಎಂದು ತಿಳಿದಾಗ ಅವರ ತಲೆಯಲ್ಲಿ ಏನೋ ಯೋಚನೆ ಹೊಳೆಯಿತು. ಬೇಗ ಬೇಗನೆ ನಿತ್ಯ ಕರ್ಮ ಮುಗಿಸಿ ತಹಸಿಲ್ದಾರರು ಹಂದಿಯ ಗಾತ್ರ, ದಾಡೆಗಳ ಉದ್ದಗಳನ್ನು ಪರೀಕ್ಷಿಸಿ ತೂಕದ ಅಂದಾಜು ಮಾಡಿದರು. ಆಂತೋಣಿಯ ಹತ್ತಿರ ಬೇಗ ಉಪಹಾರ ಸಿದ್ದಪಡಿಸಲು ತಿಳಿಸಿ ದೇವಪ್ಪನ ದರ್ಖಾಸ್ತು ರಿಕಾರ್ಡನ್ನು ಬಿಡಿಸಿ ಪೇದೆ ಪುಟ್ಟನನ್ನು ಕರೆದು ಶ್ಯಾನುಭಾಗರನ್ನು ಬರಿಸಿ ಹೇಳಿದರು. “ಶ್ಯಾನುಭಾಗರೇ, ನೀವು ನಮ್ಮ ತಾಲೋಕಿನ ಶ್ಯಾನುಭಾಗರ ಪೈಕಿ ಸಮರ್ಥರು ಎಂದು ಹೆಸರು ಪಡೆದವರು, ಹೊಸತಾಗಿ ಬಂದ ತರುಣ ಡೆಪ್ಯೂಟಿ ಕಲೆಕ್ಟರುಗಳಿಗೆ ಸರ್ವೆ ಕಲಿಸುವವರು. ನಿಮ್ಮ ರಿಕಾರ್ಡುಗಳೂ ಗಟ್ಟಿ. ನಿಜವಾಗಿ ಗೌಡನ ದರ್ಖಾಸ್ತು ರದ್ದಾಗಿ ಬಿಟ್ಟರೆ ಆತನಿಗೆ ತುಂಬಾ ಅನ್ಯಾಯವಾಗುವುದಿಲ್ಲವೇ? ನಾನು ರಿಕಾರ್ಡನ್ನು ಸರಿಯಾಗಿ ಪರಿಶೀಲಿಸಿದ್ದೇನೆ. ನೀವು ತಯಾರಿಸಿದ ನಕ್ಷೆ ಮತ್ತು ರಿಪೋರ್ಟನ್ನು ನೋಡಿದೆ, ಮಣೆಗಾರರ ಟಿಪ್ಪಣಿಯನ್ನೂ ಓದಿದೆ.”

ಶ್ಯಾನುಭಾಗರಿಗೆ ತಹಸಿಲ್ದಾರರ ಮನಸ್ಸು ಕವಲುದಾರಿಯಲ್ಲಿದೆ ಎಂದು ತಿಳಿದು ಬಿಟ್ಟಿತು. ಅವರು ಅರಣ್ಯ ಇಲಾಖೆಯವರ ತಕರಾರಿನ ಹಿಂದೆ ಇರುವ ನಿಜಸಂಗತಿಯನ್ನು ವಿವರವಾಗಿ ತಿಳಿಸಿ, “ಬಡವನನ್ನು ಬದುಕಿಸಿದರೆ ತಮಗೆ ಪುಣ್ಯ ಬರುತ್ತದೆ. ಕಷ್ಟಪಟ್ಟು ದುಡಿದು ಬೆಳೆಯುವುದು ಒಬ್ಬ, ಧರ್ಮಕ್ಕೆ ತಿನ್ನುವುದು ಇನ್ನೊಬ್ಬ ಎಂದಾದರೆ ದೇವರು ಮೆಚ್ಚಿಯಾನೆ?” ಎಂದು ಮನ ಒಲಿಸುವ ಮಾತನ್ನು ಹೇಳಿದರು.

ಅಷ್ಟರಲ್ಲಿ ಅಂತೋಣಿ ಉಪಾಹಾರಕ್ಕಾಯಿತು ಎಂದು ತಹಸಿಲ್ದಾರರಲ್ಲಿ ತಿಳಿಸಿದ. ಶ್ಯಾನುಭಾಗರೂ ಕಾಫಿ ಕುಡಿಯಲು ಹೋದರು. ಹತ್ತು ನಿಮಿಷದಲ್ಲಿ ಪಟೇಲರೂ ಉಗ್ರಾಣಿಗಳೂ ಬಂದು ಸೇರಿದರು. ಕಾಫಿ ತಿಂಡಿ ತೀರಿಸಿದ ತಹಸಿಲ್ದಾರರು ಪೇದೆ ಪುಟ್ಟನನ್ನು ಕಳುಹಿಸಿ ಪುನಃ ಶ್ಯಾನುಭಾಗರನ್ನು ಬರಮಾಡಿಕೊಂಡು ಹೇಳಿದರು. “ಶ್ಯಾನುಭಾಗರೇ, ನಾಲ್ಕು ಜನರನ್ನು ತಲಾಷೆ ಮಾಡಿ ಹಂದಿಯನ್ನು ಮಾಂಸ ಮಾಡಬೇಕು, ಚಿಮಿಣಿ ಎಣ್ಣೆ ಖಾಲಿ ಡಬ್ಬಗಳಲ್ಲಿ ಅದನ್ನು ಉಪ್ಪುಹಾಕಿ ತುಂಬಿಸಿಕೊಂಡು ಮಂಗಳೂರಿಗೆ ಹೋಗಬೇಕು, ಅದರ ಉಸ್ತುವಾರಿ ನನ್ನ ಪೇದೆ ಪುಟ್ಟ ನೋಡಿಕೊಳ್ಳುತ್ತಾನೆ.”

ಶ್ಯಾನುಭಾಗರು ಮುಗುಳು ನಗುತ್ತಾ “ಹಾಗಾದರೆ ಸ್ಥಳ ತನಿಖೆ?” ಎಂದು ಕೇಳಿದಾಗ ತಹಸಿಲ್ದಾರರು ಮೂಗಿಗೆ ಕನ್ನಡಕ ಏರಿಸಿ “ನಾನು ನಿನ್ನೆಯೇ ಹೇಳಿದ್ದೇನಲ್ಲ. ನೀವು ತಯಾರಿಸಿದ ನಕ್ಷೆ ದರ್ಖಾಸ್ತು ರಿಕಾರ್ಡು ತುಂಬ ಅಚ್ಚುಕಟ್ಟಾಗಿದೆ, ಅದರಲ್ಲಿ ಸಂಶಯ ಪಡುವಂಥ ಯಾವ ಅಂಶವೂ ಇಲ್ಲ. ಅರಣ್ಯ ಇಲಾಖೆಯವರದ್ದು ದುರುದ್ದೇಶ. ಏನೋ ಒಳಸಂಚಿನಿಂದ ಈ ಆಕ್ಷೇಪ ಮಾಡಿದ್ದಾಗಿದೆ. ಹತ್ತು ಹದಿನೈದು ವರುಷ ಒಬ್ಬಾತ ಕಷ್ಟಪಟ್ಟು ಕೃಷಿ ಮಾಡಿದ್ದಾನೆ, ಈಗ ಆತನನ್ನು ಸ್ಥಳದಿಂದ ಹೊರ ಹಾಕುವುದು ನ್ಯಾಯವಲ್ಲ. ನಾನು ಸ್ಥಳ ತನಿಖೆ ಮಾಡಿದ್ದೇನೆ ಎಂದು ಶಿಫಾರಸು ಮಾಡುತ್ತೇನೆ. ನೋಡಿ ನನ್ನ ಪಾರ್ಕರ್ ಪೆನ್ನಿನಲ್ಲಿ ಬರೆದ ಶಿಫಾರಸನ್ನು ಜಿಲ್ಲಾ ಕಲೆಕ್ಟರರು ಬಿಡಿ, ಮದ್ರಾಸು ಸರಕಾರದ ರೆವೆನ್ಯೂ ಸೆಕ್ರೆಟರಿಗಳೂ ಎತ್ತಿ ಹಿಡಿಯುತ್ತಾರೆ. ನಾನು ಮಧ್ಯಾಹ್ನದ ಮೇಲೆ ಇಲ್ಲಿಂದ ಹೊರಡುತ್ತೇನೆ, ಪೇಟೆಯ ತನಕ ಮಾಂಸದ ಟಿನ್ನುಗಳನ್ನು ಹೊರಲು ಜನ ಒದಗಿಸಿ,” ಎಂದು ತನ್ನ ಮೆಚ್ಚಿನ ಪಾರ್ಕರ್ ಪೆನ್ನಿನ ಟಾಪನ್ನು ತೆರೆದರು.

ಹಂದಿಯನ್ನು ಹೊತ್ತುಕೊಂಡು ಹೋಗಿ ಹತ್ತಿರದ ಹೊಳೆಯ ಬದಿಯಲ್ಲಿ ಮಾಂಸ ಮಾಡಲು ತೊಡಗಿದರು. ಶ್ಯಾನುಭಾಗರಲ್ಲಿಂದ, ಪಟೇಲರಲ್ಲಿಂದ, ಪೇಟೆಯಿಂದ ಎಂದು ಮುಂತಾಗಿ ಸಂಗ್ರಹಿಸಿದ ಖಾಲಿ ಚಿಮಿಣಿ ಡಬ್ಬಿಗಳಲ್ಲಿ ನೀರು ತುಂಬಿಸಿ ಸೀಗೆ ಪುಡಿ ಹಾಕಿ ಒಲೆಯಲ್ಲಿಟ್ಟು ಕುದಿಸಿ, ಎಣ್ಣೆಯ ವಾಸನೆಯನ್ನು ತೆಗೆಯಲಾಯಿತು. ಶ್ಯಾನುಭಾಗರು ಮಳೆಗಾಲಕ್ಕೆಂದು ದಾಸ್ತಾನು ಮಾಡಿ ಅಟ್ಟದಲ್ಲಿರಿಸಿದ್ದ ಉಪ್ಪಿನಲ್ಲಿ ಒಂದು ಕುಕ್ಕೆ ಉಪ್ಪು ಹೊರಗೆ ಬಂತು. ಉಪ್ಪು ಬೆರೆಸಿ ಮಾಂಸವನ್ನು ಡಬ್ಬಿಗಳಲ್ಲಿ ತುಂಬಿಸಿ ಆಗುವಾಗ ಮಧ್ಯಾಹ್ನವಾಯಿತು.

ಎಲ್ಲ ಸಿದ್ಧತೆಯಾಯಿತು ಎಂದು ಗೊತ್ತಾದಾಗ ತಹಸಿಲ್ದಾರರು ಸ್ವತಹ ಮಾಂಸದ ಡಬ್ಬಿಗಳನ್ನು ಪರಿಶೀಲಿಸಿದರು. ಅದನ್ನು ಪೇಟೆಯವರೆಗೆ ಹೊತ್ತು ಬೃಗಾಂಜನ ಬಸ್ಸಿಗೆ ಏರಿಸುವವರು ಯಾರು ಎಂದು ತಿಳಿದುಕೊಂಡರು. ಹಿಂದಿನ ದಿನ ತನಗೆ ಸರಬರಾಜು ಆಗಿ ಉಳಿದಿರುವ ಗೇರು ಹಣ್ಣಿನ ಶರಾಬನ್ನು ಜಾಗ್ರತೆಯಾಗಿ ಪೆಟ್ಟಿಗೆಗೆ ತುಂಬಿಸಲು ಅಂತೋಣಿಯಲ್ಲಿ ಹೇಳಿದರು. ದೇವಪ್ಪ ಗೌಡನ ಹೇಳಿಕೆ ಬರೆದು ಹೆಬ್ಬೆಟ್ಟು ಒತ್ತಿಸಿಕೊಂಡರು. ಪೇದೆ ಪುಟ್ಟನ ಹತ್ತಿರ ಹೇಳಿ ದಫ್ತರು ಕಟ್ಟಿಸಿದರು. ಪಾರ್ಕರ್ ಪೆನ್ನಿನ ಟೋಪನ್ನು ಹಾಕುತ್ತಾ, “ಎಲ್ಲ ಸರಿಯಾಯಿತಲ್ಲ ಶ್ಯಾನುಭಾಗರೇ” ಎಂದು ಮಧ್ಯಾಹ್ನದ ಊಟವನ್ನು ಬೇಗ ಬೇಗನೆ ಮುಗಿಸಿ ಉರಿ ಬಿಸಿಲಿಗೆ ಹೊರಟೇಬಿಟ್ಟರು.

ಶ್ಯಾನುಭಾಗರು ಗೌಡನ ಕಡೆಗೆ ನೋಡಿ ಕಣ್ಣು ಮಿಟುಕಿಸಿ ಮುಗುಳು ನಗೆ ನಕ್ಕು ಮೀಸೆಯ ಮೇಲೆ ಬೆರಳಾಡಿಸಿದರು. ದೇವಪ್ಪ ಗೌಡ ತಾನು ಹೊಡೆದಿದ್ದ ಇನ್ನೊಂದು ಹಂದಿಯ ಮಾಂಸದ ತನ್ನ ಪಾಲನ್ನು ಪಡೆಯಲು ಹೆಜ್ಜೆ ಹಾಕಿದ.

ಟಿಪ್ಪಣಿ:
ಶಾನುಭೋಗರ ವಂಶದವರಾಗಿದ್ದ ತುದಿಯಡ್ಕ ವಿಷ್ಣ್ವಯ್ಯನವರು ವಸಾಹತುಕಾಲದ ಕೆಲವು ಮುಖ್ಯ ಕತೆಗಳನ್ನು ಕೊಟ್ಟವರು. ಅವರ ‘ಶ್ಯಾನುಭೋಗ ಶ್ಯಾಮಣ್ಣನವರು’ (‘ಮಣೆಗಾರನ ಗರ್ವಭಂಗ’ ಮತ್ತು ‘ಕಾಡುಹಂದಿಯೂ ಪಾರ್ಕರ್ ಪೆನ್ನೂ’ ಎಂಬ ಬರಹಗಳನ್ನು ಸೇರಿಸಿ ಮಾಡಿದ) ಕತೆಯಲ್ಲಿ ಗ್ರಾಮಾಡಳಿತಗಾರರ ಮತ್ತು ನೇಟಿವ್ ಅಧಿಕಾರಿಗಳ ಕಾರ್ಯವೈಖರಿಯ ಚಿತ್ರಣ ಇದೆ.
ಆ ಕಾಲದ ಗ್ರಾಮಾಡಳಿತಗಾರರಾದ ಪಟೇಲರು ಸಾಮಾನ್ಯವಾಗಿ ಶ್ರೀಮಂತ ಜಮೀನುದಾರರಾಗಿರುತ್ತಿದ್ದರು. ಮೇಲುವರ್ಗದವರಾದ ಜೈನ, ಬಂಟ, ಬ್ರಾಹ್ಮಣರು ಹೆಚ್ಚಾಗಿ ಪಟೇಲರಾಗಿರುತ್ತಿದ್ದರು. ಗ್ರಾಮಾಡಳಿತ ನಿಜವಾಗಿ ಪಟೇಲರ ಮಂತ್ರಿಗಳಂತೆ ಇರುತ್ತಿದ್ದ ಶಾನುಭೋಗರ ಕೈಯಲ್ಲಿರುತ್ತಿತ್ತು. ಶಾನುಭೋಗರು ಸರಕಾರದ ಕಾನೂನುಗಳನ್ನು ಸರಿಯಾಗಿ ತಿಳಿದಿರುತ್ತಿದ್ದ ವಿದ್ಯಾವಂತರಾಗಿರುತ್ತಿದ್ದರು; ಅವರು ಸಾಮಾನ್ಯವಾಗಿ ಬ್ರಾಹ್ಮಣರಾಗಿರುತ್ತಿದ್ದದ್ದು (ಸ್ಥಾನಿಕ, ಗೌಡ ಸಾರಸ್ವತ ಮತ್ತು ಶಿವಳ್ಳಿ) ಹೆಚ್ಚು. ಸರಕಾರ ಮತ್ತು ಪ್ರಜೆಗಳ ನಡುವಿನ ಕೊಂಡಿಗಳಾಗಿ ಗ್ರಾಮಾಡಳಿತಗಾರರಾದ ಪಟೇಲರು ಮತ್ತು ಶಾನುಭೋಗರಿದ್ದರು.
ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗುವ ಮುನ್ನ ಈ ಗ್ರಾಮಾಡಳಿತಗಾರರು ಮಾನವಾಂತಃಕರಣ ಉಳ್ಳವರೋ, ಜನಪರರೋ, ದುಷ್ಟರೋ, ಸ್ವಾರ್ಥಿಗಳೋ ಎಂಬ ಅಂಶಕ್ಕೆ ಪ್ರಾಧಾನ್ಯವನ್ನು ನಮ್ಮ ಲೇಖಕರು ಕೊಟ್ಟಿದ್ದಾರೆ. ನಂತರ ಇವರು ಸ್ವಾತಂತ್ರ್ಯ ಹೋರಾಟಗಾರರ ಪರವಾಗಿರುವವರೋ, ಬ್ರಿಟಿಷರ ಪರವಾಗಿದ್ದು ಸ್ವಾತಂತ್ರ್ಯ ಹೋರಾಟವನ್ನು ದಮನಿಸಿದವರೋ ಎಂಬ ಅಂಶಕ್ಕೆ ಪ್ರಾಧಾನ್ಯ ಬಂದಿದೆ. ಪಟೇಲ, ಶಾನುಭೋಗರ ಗುಣಾವಗುಣಗಳು ನಿರ್ಧಾರ ಆಗುವ ಮಾನದಂಡಗಳು ಹೀಗೆ ಬದಲಾದುದು ಅಧ್ಯಯನಯೋಗ್ಯವಾಗಿದೆ.
ಮುಂದೆಯೂ ಕೆಲವು ಪಟೇಲ ಶಾನುಭೋಗರ ಕತೆಗಳು ಹಿಂಬಾಲಿಸುತ್ತವೆ.