ನನ್ನ ತಂದೆಗೆ ಆ ತೂತಿನ ದುಡ್ಡು ಕೇಳಿದೆ. ಅವರು ಕೊಡಲಿಲ್ಲ. ಆ ದುಡ್ಡು ನನ್ನದಲ್ಲ ಎಂದರು. ನನಗೆ ಅರ್ಥವಾಗಲಿಲ್ಲ. ಆ ತೂತಿನ ದುಡ್ಡಿಗಾಗಿ ಕೊಂಯಾ ಕೊಂಯಾ ಮಾಡುತ್ತಿದ್ದೆ. ಸೇಂಗಾ ಬೆಲ್ಲ ಕೊಳ್ಳುವವರೆಗೂ ಆ ತೂತಿನ ದುಡ್ಡಿನಲ್ಲಿ ಕಿರುಬೆರಳು ಸೇರಿಸಿ ಆಡುವ ಖುಷಿಯೂ ಇತ್ತು. ಹೀಗೆ ಆ ದುಡ್ಡು ಡಬಲ್ ಧಮಾಕಾ ಇಫೆಕ್ಟ್ ಕೊಡುತ್ತಿತ್ತು. ಅಂದು ಇದೊಂದು ದೊಡ್ಡ ಚಿಂತೆಯಾಯಿತು. ನನ್ನ ತಂದೆ ಇಷ್ಟೇಕೇ ಕಠೋರ ಆಗಿದ್ದಾರೆ ಎಂಬುದು ತಿಳಿಯಲಿಲ್ಲ. ಅಂತೂ ಶನಿದೇವರ ಗುಡಿಯ ಮುಂದೆ ಹೋದೆವು.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 42ನೇ ಕಂತು ಇಲ್ಲಿದೆ.

ಕ್ಷೌರಿಕರು, ಸಿಂಪಿಗರು, ಕಿರಾಣಿ ಅಂಗಡಿಯವರು, ವೈದ್ಯರು ಹೀಗೆ ವಿವಿಧ ವೃತ್ತಿಯಲ್ಲಿರುವವರು ತಮ್ಮ ವೃತ್ತಿಯಲ್ಲಿ ನುರಿತವರಾಗಿರಬೇಕು ಎಂಬುದು ನನ್ನ ತಂದೆಯ ಆಶಯವಾಗಿತ್ತು. ಅಂಥವರ ಜೊತೆಯೆ ಅವರ ಒಡನಾಟ. ಆ ಎಲ್ಲ ವೃತ್ತಿಯವರ ಜೊತೆ ಆತ್ಮೀಯ ಸಂಬಂಧವೂ ಬೆಳೆದಿರುತ್ತಿತ್ತು. ಹೀಗಾಗಿ ಕಂಡ ಕಂಡಲ್ಲೆಲ್ಲ ಖರೀದಿ ಮಾಡುವುದನ್ನು ಅವರು ಇಷ್ಟಪಡುತ್ತಿದ್ದಿಲ್ಲ. ಅವರು ಎಲ್ಲ ವ್ಯವಹಾರಗಳಲ್ಲಿ ತಜ್ಞತೆ ಮತ್ತು ಮಾನವಸಂಬಂಧವನ್ನು ಬಯಸುತ್ತಿದ್ದರು. ಅವರಿಗೆ ಆಪ್ತ ಮಿತ್ರರು ಕೂಡ ಹೆಚ್ಚಿಗೆ ಇರಲಿಲ್ಲ. ನಾಲ್ಕಾರು ಮಂದಿ ಮಾತ್ರ. ಆದರೆ ಉಳಿದ ಎಲ್ಲರ ಜೊತೆಗೂ ಮಿತ್ರಭಾವದಿಂದಲೇ ಇರುತ್ತಿದ್ದರು. ಆಪ್ತ ಗೆಳೆಯರಾರಿಗೂ ಯಾವುದೇ ಚಟಗಳು ಇರಲಿಲ್ಲ. ಅವರು ಒಬ್ಬರಿಗೊಬ್ಬರು ಕೊಡುವ ಗೌರವ ಇಂದಿಗೂ ಆಶ್ಚರ್ಯವೆನಿಸುತ್ತದೆ.

ಅವರ ಆಪ್ತ ಗೆಳೆಯರೆಲ್ಲ ಕುಳಿತು ಅನೇಕ ಬೌದ್ಧಿಕ ಕಸರತ್ತಿನ ಸಮಸ್ಯೆಗಳನ್ನು ಇಟ್ಟು ಬಿಡಿಸಲು ಹಚ್ಚುತ್ತಿದ್ದರು. ಗೋಠೆ ಅಡ್ಡ ಹೆಸರಿನ ಒಬ್ಬ ಹಿರಿಯರಿದ್ದರು. ಅವರು ಮನೆಯಲ್ಲೇ ಪೆಪ್ಪರಮೆಂಟ್ ತಯಾರಿಸಿ ಮಾರುತ್ತಿದ್ದರು. ಇವರ ಗೆಳೆಯರ ಬಳಗದಲ್ಲಿ ಅವರೂ ಇದ್ದರು. ರಾಮಣ್ಣ ಎಂಬವರು ಎರಡು ಕುಸುಬಿ ಎಣ್ಣಿಯ ಗಾಣ ಇಟ್ಟುಕೊಂಡಿದ್ದರು. ಇವರೆಲ್ಲ ಅರ್ಜುನ ಮಾಮಾನ ತೋಟದಲ್ಲಿ ಸೇರುತ್ತಿದ್ದರು. ಬೆಂಕಿಯ ಸುತ್ತ ಕುಳಿತು ಮೆಕ್ಕಿತೆನಿ ಸುಟ್ಟು ತಿನ್ನುತ್ತ ಇಲ್ಲವೆ ಸೀತನಿ ತಿನ್ನುತ್ತ ಕಠಿಣವಾದ ಬೌದ್ಧಿಕ ಕಸರತ್ತಿನ ಪ್ರಶ್ನೆಗಳನ್ನು ಹಾಕುತ್ತಿದ್ದರು. ಒಂದು ಸಲ ಗೋಠೆಯವರು ಎತ್ತಿದ ಪ್ರಶ್ನೆ ಇನ್ನೂ ನೆನಪಿದೆ.

ಒಬ್ಬ ವ್ಯಕ್ತಿ ನದಿ ದಾಟಬೇಕಿದೆ. ಆತ ಹುಲಿ, ಕುರಿ ಮತ್ತು ಹುಲ್ಲಿನ ಪೆಂಡಿಯೊಂದಿಗೆ ನದಿ ಪಾರು ಮಾಡುತ್ತಾನೆ. ದೋಣಿಯಲ್ಲಿ ಆತ ಹುಲಿ, ಕುರಿ ಮತ್ತು ಹುಲ್ಲಿನ ಪೆಂಡಿಯಲ್ಲಿ ಒಂದನ್ನು ಮಾತ್ರ ಒಯ್ಯಲು ಸಾಧ್ಯವಿದೆ. ಹೇಗೆ ಒಯ್ಯುತ್ತಾನೆ ಎಂದು ಗೋಠೆ ಅವರು ಪ್ರಶ್ನಿಸಿದರು. ಆತ ಮೊದಲಿಗೆ ಕುರಿ ಒಯ್ಯಬಹುದು. ಏಕೆಂದರೆ ಹುಲಿ ಹುಲ್ಲನ್ನು ತಿನ್ನುವುದಿಲ್ಲ. ನಂತರ? ಹುಲಿ ಒಯ್ದು ಬಿಟ್ಟು ಬಂದರೆ? ಹುಲಿ ಕುರಿಯನ್ನು ತಿನ್ನುತ್ತದೆ. ಏಕೆಂದರೆ ಅಲ್ಲಿ ಮೊದಲೇ ಬಿಟ್ಟು ಬಂದ ಕುರಿ ಇರುತ್ತದೆ. ಹುಲ್ಲನ್ನು ಒಯ್ದು ಇಟ್ಟು ಬಂದರೆ ಅಲ್ಲೇ ಇದ್ದ ಕುರಿ ಹುಲ್ಲನ್ನು ತಿನ್ನುತ್ತದೆ. ಹುಲಿಯನ್ನೇ ಮೊದಲಿಗೆ ತೆಗೆದುಕೊಂಡು ಹೋದರೆ ಕುರಿ ಹುಲ್ಲನ್ನು ತಿನ್ನುತ್ತದೆ. ಈ ಸಮಸ್ಯೆ ಹೇಗೆ ಬಗೆ ಹರಿಸೋದು?

ನಾನು ಮೆಕ್ಕಿತೆನಿ ತಿನ್ನುತ್ತ ಅವರ ಬೌದ್ಧಿಕ ಕಸರತ್ತಿನ ಕಡೆ ಗಮನ ಹರಿಸಿದ್ದೆ. ಬಹಳ ಹೊತ್ತಿನ ನಂತರ ನನ್ನ ತಂದೆ ಹೇಳಿದರು. ಆತ ಮೊದಲು ಕುರಿಯನ್ನು ಒಯ್ಯುತ್ತಾನೆ. ವಾಪಸ್ ಬಂದು ಹುಲ್ಲನ್ನು ಒಯ್ದು ನದಿಯ ಆಚೆ ದಂಡೆಗೆ ಇಟ್ಟು ದೋಣಿಯಲ್ಲಿ ಕುರಿಯನ್ನು ಹಾಕಿಕೊಂಡು ಬರುತ್ತಾನೆ. ನಂತರ ಕುರಿಯನ್ನು ಬಿಟ್ಟು ಅಲ್ಲಿದ್ದ ಹುಲಿಯನ್ನು ತೆಗೆದುಕೊಂಡು ಹೋಗಿ ಹುಲ್ಲಿನ ಪೆಂಡಿಯ ಬಳಿ ಬಿಟ್ಟು ವಾಪಸ್ ಬಂದು ಕುರಿಯನ್ನು ಕರೆದುಕೊಂಡು ಹೋಗುತ್ತಾನೆ. ಇಂಥ ಬೌದ್ಧಿಕ ಕಸರತ್ತುಗಳನ್ನು ನಮ್ಮ ನಿರಕ್ಷರಿ ಹಿರಿಯರು ಬಹಳ ಖುಷಿ ಪಡುತ್ತಿದ್ದರು.

ಇವರ ಚರ್ಚೆಯ ವಿಷಯಗಳು ಬಹಳ ರಂಜಕವಾಗಿರುತ್ತಿದ್ದವು. ಅವರು ಕಲ್ಕತ್ತಾದ ಹೌರಾ ಬ್ರಿಜ್ ಕಟ್ಟಿದ್ದರ ಬಗ್ಗೆ ಮಾತನಾಡುವಾಗ ನಾನು ಕಿವಿಗೊಟ್ಟು ಕೇಳುತ್ತಿದ್ದೆ. ಅವರು ಒಂದು ಸಿನಿಮಾ ನೋಡಿ ಬಂದ ಬಗ್ಗೆ ಮಾತನಾಡುತ್ತಿದ್ದರು. (ನನ್ನ ತಂದೆ ಸಿನಿಮಾಕ್ಕೆ ಹೋಗಿದ್ದು ನನಗೆ ಗೊತ್ತೇ ಇಲ್ಲ. ಬಹುಶಃ ನಾನು ಹುಟ್ಟುವ ಮೊದಲು ಹೋಗಿರಬಹುದು.) ಅದನ್ನು ಬಹಳ ರೈತರು ನೋಡಿರಬಹುದು. ಏಕೆಂದರೆ ಅದು ಎತ್ತುಗಳ ಕತೆ ಆಗಿತ್ತಂತೆ. ಆ ಸಿನಿಮಾದ ಹೆಸರು ‘ಹೀರಾ ಮೋತಿ’ ಅದು ಎರಡು ಎತ್ತುಗಳ ಕತೆ ಎಂಬುದು ಅವರ ಚರ್ಚೆಯಿಂದ ಗೊತ್ತಾಯಿತು. ಹೀರಾ ಮತ್ತು ಮೋತಿ ಎಂಬ ಎತ್ತುಗಳ ಸಾಮರ್ಥ್ಯ, ಧೈರ್ಯ ಮತ್ತು ಮಾಲಕನನ್ನು ರಕ್ಷಿಸುವ ಪ್ರಜ್ಞೆ ಮುಂತಾದವುಗಳು ಆ ಸಿನಿಮಾದಲ್ಲಿ ಇದ್ದದ್ದರ ವಿಶ್ಲೇಷಣೆ ಮಾಡುತ್ತಿದ್ದರು. ನನಗೆ ಇದಷ್ಟೇ ನೆನಪಿದೆ. ಆದರೆ ಆ ಎತ್ತುಗಳು ನನ್ನ ತಂದೆಯ ಮನಸ್ಸಿನ ಮೇಲೆ ಮಾಡಿದ ಪರಿಣಾಮ ಅಗಾಧವಾಗಿತ್ತು. ಇನ್ನೊಂದು ಮರಾಠಿ ಸಿನಿಮಾ ಕುರಿತು ಅವರು ಮಾತನಾಡುತ್ತಿದ್ದುದು ನೆನಪಿದೆ. ಆ ಸಿನಿಮಾ ಹೆಸರು ‘ಸಾಸರವಾಡಿ’ ಎಂದು ಇದ್ದಿರಬಹುದು. ಆ ಗುಂಪಿನಲ್ಲೊಬ್ಬ ಆ ಸಿನಿಮಾ ಹಾಡನ್ನು ಹಾಡುತ್ತಿದ್ದ. ಸಾಸರವಾಡಿ ಎಂದರೆ ಮಾವನ ಮನೆ ಎಂದು ಅರ್ಥವಿದ್ದರಬಹುದು. ‘ಸಾಂಗಾ ಯಾ ವೇಡಿಲಾ, ಮಾಜಾ ಗುಲ್ ಛಡಿಲಾ, ತುಜಾ ಸಾಟಿ ಆಲೋ ಮಿ ಸಾಸರವಾಡಿಲಾ’ ಎಂದು ಆ ಹಾಡು ಪ್ರಾರಂಭವಾಗುತ್ತಿತ್ತು. ‘ಈ ಹುಚ್ಚಿಗೆ, ನನ್ನ ಹೂವಿನ ಕೋಲಿಗೆ ಹೇಳಿರಿ, ನಿನಗೋಸ್ಕರ ನಾನು ಮಾವನ ಮನೆಗೆ ಬಂದಿದ್ದೇನೆ’ ಎಂಬ ಭಾವ ಆ ಹಾಡಿನಲ್ಲಿ ಇದೆ ಎಂದು ಅನಿಸುತ್ತಿದೆ. ಕುಟುಂಬ ಪ್ರೇಮ, ಮುನಿಸು, ದಾಂಪತ್ಯ ಸಂಬಂಧದ ಆಳ ಮುಂತಾದವುಗಳನ್ನು ಆ ಹಾಡು ಧ್ವನಿಸುತ್ತಿತ್ತು. ಆ ಹಾಡು ಮರೆತುಹೋದರು ಜನರು ಅದನ್ನು ಮೆಚ್ಚಿಕೊಂಡ ರೀತಿ ಮರೆತಿಲ್ಲ. ಎಲ್ಲವನ್ನೂ ಕುಟುಂಬದಲ್ಲೇ ಪಡೆಯುವ ಛಲವನ್ನು ಅಂದಿನ ಗುಣವಂತ ಜನರು ಹೊಂದಿದ್ದರು ಎಂಬ ಅನಿಸಿಕೆ ನನ್ನದು.

(ರಾಮ ಮಂದಿರದ ಒಳಗೆ)

ಆ ಕಾಲದಲ್ಲೂ ಗಂಡ ಹೆಂಡಿರ ಜಗಳಗಳು ಆಗುವುದನ್ನು ನೋಡಿದ್ದೇನೆ. ಆದರೆ ಅವರಾರು ವಿವಾಹ ವಿಚ್ಛೇದನದ ಮಾತು ಆಡುತ್ತಿರಲಿಲ್ಲ. ಜಗಳಗಳು ಮರೆತು ಹೋಗುವಷ್ಟು ಹಗುರಾಗಿರುತ್ತಿದ್ದವು. ಬಹುಶಃ ಯಾವ ಮನೆಯಲ್ಲಿ ಹೆಣ್ಣುಮಕ್ಕಳು ತಮ್ಮ ಬೇಸರವನ್ನು ವ್ಯಕ್ತಪಡಿಸುವ ವಾತಾವರಣವನ್ನು ಹೊಂದಿರುತ್ತಾರೋ ಆ ಮನೆಯಲ್ಲಿ ಆತ್ಮಹತ್ಯೆ ಅಥವಾ ವಿಚ್ಛೇದನದ ಪ್ರಸಂಗಗಳು ಬಹಳ ಕಡಿಮೆ ಎಂಬುದು ನನ್ನ ಜೀವಮಾನದ ಅನಿಸಿಕೆ.

ಅವರು ನಿರಕ್ಷರಿಗಳಾಗಿದ್ದಿರಬಹುದು ಬಹಳ ವ್ಯವಹಾರ ಜ್ಞಾನ ಮತ್ತು ಸಂಸ್ಕಾರಗಳೊಂದಿಗೆ ಬದುಕುತ್ತಿದ್ದರು. ಅವರ ಜೀವನ ಗುರಿ ಒಂದೇ ಆಗಿತ್ತು. ಅದೇನೆಂದರೆ ಯಾರಿಂದಲೂ ಅನ್ನಿಸಿಕೊಳ್ಳದೆ ಬದುಕುವುದು! ಸ್ವಾವಲಂಬಿಯಾಗಿ ಮಾತಿಗೆ ತಪ್ಪದೆ ನಡೆಯುವ ಮೂಲಕ ಅದನ್ನು ಅವರು ಸಾಧಿಸಿದ್ದರು. ‘ಬೇಡುವಾತ ಭಕ್ತನಲ್ಲ’ ಎಂದು ಬಸವಣ್ಣನವರು ಹೇಳಿದ್ದರ ಮಹತ್ವ ಇಂಥವರನ್ನು ನೋಡಿಯೆ ಗೊತ್ತಾಗಿದ್ದು. ಸತ್ಯಕ್ಕನ ಹಾಗೆ ‘ಸಿಕ್ಕಿದ್ದು ತಮ್ಮದಲ್ಲ’ ಎಂಬ ಭಾವ ಅವರಲ್ಲಿತ್ತು.

ಕಂಡ ಕಂಡಲ್ಲೆಲ್ಲ ಖರೀದಿ ಮಾಡುವುದನ್ನು ಅವರು ಇಷ್ಟಪಡುತ್ತಿದ್ದಿಲ್ಲ. ಅವರು ಎಲ್ಲ ವ್ಯವಹಾರಗಳಲ್ಲಿ ತಜ್ಞತೆ ಮತ್ತು ಮಾನವಸಂಬಂಧವನ್ನು ಬಯಸುತ್ತಿದ್ದರು. ಅವರಿಗೆ ಆಪ್ತ ಮಿತ್ರರು ಕೂಡ ಹೆಚ್ಚಿಗೆ ಇರಲಿಲ್ಲ. ನಾಲ್ಕಾರು ಮಂದಿ ಮಾತ್ರ. ಆದರೆ ಉಳಿದ ಎಲ್ಲರ ಜೊತೆಗೂ ಮಿತ್ರಭಾವದಿಂದಲೇ ಇರುತ್ತಿದ್ದರು. ಆಪ್ತ ಗೆಳೆಯರಾರಿಗೂ ಯಾವುದೇ ಚಟಗಳು ಇರಲಿಲ್ಲ.

ತಂದೆಯ ಜೊತೆ ಶನಿದೇವರ ಗುಡಿಗೆ ಹೋಗುವಾಗ ನಡೆದ ಒಂದು ಘಟನೆ ನೆನಪಾಗುತ್ತಿದೆ. ನಾನು ರಂಜಾನ್ ತಿಂಗಳ ಶನಿವಾರ ಹುಟ್ಟಿದ್ದೇನೆ. ವರ್ಷ ಮತ್ತು ದಿನಾಂಕ ಗೊತ್ತಿಲ್ಲ. ನನ್ನ ತಂದೆಯ ಜೊತೆ ಪ್ರತಿ ಶನಿವಾರ ಶನಿದೇವರ ಗುಡಿಗೆ ಹೋಗುವುದಂತೂ ತಪ್ಪುತ್ತಿದ್ದಿಲ್ಲ. ವಿಜಾಪುರದಲ್ಲಿ ರಾಮಮಂದಿರದ ಒಂದು ಭಾಗದಲ್ಲಿ ಶನಿದೇವರ ಗುಡಿ ಇದೆ. ನಮ್ಮ ಮನೆಯಿಂದ ಹೋಗುವಾಗ ಮಧ್ಯದಲ್ಲಿ ಗುಡಿಗೆ ಒಂದಿಷ್ಟು ಸಮೀಪ ಚಿಕ್ಕ ಕಿರಾಣಿ ಅಂಗಡಿಯಲ್ಲಿ ತೆಂಗಿನ ಕಾಯಿ ತೆಗೆದುಕೊಂಡು ಹೋಗುತ್ತಿದ್ದೆವು. ಗುಡಿಯ ಹತ್ತಿರ ಹೂವು ಊದುಬತ್ತಿ ತೆಗೆದುಕೊಳ್ಳುತ್ತಿದ್ದೆವು. ಕಿರಾಣಿ ಅಂಗಡಿ ಇನ್ನೂ ದೂರದಲ್ಲಿತ್ತು. ನಾವು ನಡೆದುಕೊಂಡು ಹೋಗುತ್ತಿದ್ದಾಗ ನನ್ನ ತಂದೆ ಒಂದು ಹೆಜ್ಜೆ ಮುಂದೆ ಹೋಗಿ ಹೊರಳಿ ನೋಡಿದರು. ಏನೋ ತುಳಿದದ್ದಕ್ಕಾಗಿ ಅವರು ಹಾಗೆ ಹೊರಳಿದ್ದರು. ಇಟ್ಟಿಗೆ ಬಣ್ಣದ ಎರಡು ರೂಪಾಯಿ ನೋಟು ಕಾಣಿಸಿತ್ತು. ಅದನ್ನು ತುಳಿದದ್ದಕ್ಕಾಗಿ ಒರೆಸಿ ನಮಸ್ಕರಿಸಿ ಇಟ್ಟುಕೊಂಡರು. ಕಿರಾಣಿ ಅಂಗಡಿಯಲ್ಲಿ ಅದನ್ನು ಮುರಿಸಿದರು. ಆಗಿನ ಕಾಲದಲ್ಲಿ ಅಂಗಡಿಗಳಲ್ಲಿ ಚಿಲ್ಲರೆ ಬಹಳ ಬೀಳುತ್ತಿತ್ತು. ಯಾರಾದರೂ ಚಿಲ್ಲರೆ ಕೇಳಿದರೆ ಖುಷಿಯಿಂದ ಕೊಡುತ್ತಿದ್ದರು. ತೂತಿನ ದುಡ್ಡು ಬಹಳಷ್ಟು ಸಂಗ್ರಹವಾದಾಗ ತಂತಿಯಲ್ಲಿ ಪೂಣಿಸಿ ಲಕ್ಷ್ಮೀ ಫೋಟೊಗೆ ಹಾರ ಮಾಡಿ ಹಾಕುತ್ತಿದ್ದರು. ಚಿಲ್ಲರೆ ಕೇಳಿದಾಗ ಅಂಗಡಿಯವ ಖುಷಿಯಿಂದ ಕೊಟ್ಟ. ಚಿಲ್ಲರೆಯಲ್ಲಿ ಒಂದು ತೂತಿನ ದುಡ್ಡೂ ಇತ್ತು. ನನ್ನ ತಂದೆ ನನಗೆ ಒಂದು ತೂತಿನ ದುಡ್ಡು ಕೊಡುತ್ತಾರೆ ಎಂಬ ಭರವಸೆ ಇತ್ತು. ಆದರೆ ಅವರು ಆ ಚಿಲ್ಲರೆಯನ್ನು ತಮ್ಮ ಕುಂಬಳ ಛಾಟಿಯ ಕಿಸೆಯಲ್ಲಿಟ್ಟರು. ತೆಂಗಿನಕಾಯಿ ಖರೀದಿಸಿ ತಮ್ಮಲ್ಲಿನ ಒಂದಿಷ್ಟು ದುಡ್ಡು ಕೊಟ್ಟು ಮುಂದೆ ನಡೆದರು. ನನಗೆ ಆ ತೂತಿನ ದುಡ್ಡು ಬೇಕಾಗಿತ್ತು. ಒಂದು ದುಡ್ಡಿನಿಂದ ಕಿರಾಣಿ ಅಂಗಡಿಯಲ್ಲಿ ಹುರಿದ ಸೇಂಗಾ ಕೊಳ್ಳಬಹುದಿತ್ತು. ನಾವು ಹುಡುಗರು ಸ್ಲಲ್ಪ ಬೆಲ್ಲ ಕೇಳಿದರೆ ಕೊಡುತ್ತಿದ್ದರು. ದುಡ್ಡಿನ ವ್ಯಾಪಾರ ಮಾಡಿದಾಗ ಒಂದಿಷ್ಟು ಬೆಲ್ಲ ಸಿಗುವುದೆಂಬ ಗ್ಯಾರಂಟಿ ಇತ್ತು. ಆಗ ನನ್ನಂಥ ಬಡ ಹುಡುಗರಿಗೆ ಸೇಂಗಾ ಬೆಲ್ಲ ಅಮೃತ ಸಮಾನವಾಗಿತ್ತು. (ಅದಕ್ಕಿಂತ ಹೆಚ್ಚಿನ ಸಿಹಿ ತಿಂಡಿ ಪಡೆಯುವ ಶಕ್ತಿಯುಳ್ಳವರಿಗೆ ಕೂಡ ಈ ಕಾಂಬಿನೇಷನ್ ಬಹಳ ಇಷ್ಟ ಆಗುತ್ತಿತ್ತು.)

ನನ್ನ ತಂದೆಗೆ ಆ ತೂತಿನ ದುಡ್ಡು ಕೇಳಿದೆ. ಅವರು ಕೊಡಲಿಲ್ಲ. ಆ ದುಡ್ಡು ನನ್ನದಲ್ಲ ಎಂದರು. ನನಗೆ ಅರ್ಥವಾಗಲಿಲ್ಲ. ಆ ತೂತಿನ ದುಡ್ಡಿಗಾಗಿ ಕೊಂಯಾ ಕೊಂಯಾ ಮಾಡುತ್ತಿದ್ದೆ. ಸೇಂಗಾ ಬೆಲ್ಲ ಕೊಳ್ಳುವವರೆಗೂ ಆ ತೂತಿನ ದುಡ್ಡಿನಲ್ಲಿ ಕಿರುಬೆರಳು ಸೇರಿಸಿ ಆಡುವ ಖುಷಿಯೂ ಇತ್ತು. ಹೀಗೆ ಆ ದುಡ್ಡು ಡಬಲ್ ಧಮಾಕಾ ಇಫೆಕ್ಟ್ ಕೊಡುತ್ತಿತ್ತು. ಅಂದು ಇದೊಂದು ದೊಡ್ಡ ಚಿಂತೆಯಾಯಿತು. ನನ್ನ ತಂದೆ ಇಷ್ಟೇಕೇ ಕಠೋರ ಆಗಿದ್ದಾರೆ ಎಂಬುದು ತಿಳಿಯಲಿಲ್ಲ. ಅಂತೂ ಶನಿದೇವರ ಗುಡಿಯ ಮುಂದೆ ಹೋದೆವು. ತಂದೆ ಆ ಎರಡು ರೂಪಾಯಿ ಚಿಲ್ಲರೆ ದುಡ್ಡನ್ನು ಕುಂಬಳ ಚಾಟಿಯ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ತೆಂಗಿನಕಾಯಿ ಕೊಳ್ಳುವಾಗ ತಮ್ಮಲ್ಲಿನ ದುಡ್ಡು ಕೊಟ್ಟ ಹಾಗೆ ಹೂವು ಊದುಬತ್ತಿ ಕೊಳ್ಳುವಾಗಲೂ ಕೊಟ್ಟರು. ಇದೆಲ್ಲ ವಿಚಿತ್ರ ಎನಿಸತೊಡಗಿತು. ಅನ್ಯಮನಸ್ಕನಾಗಿ ಶನಿದೇವರಿಗೆ ಕೈಮುಗಿದು ಶನಿದೇವರ ಕಾಟಕ್ಕೆ ಬೇಸತ್ತು ಪಕ್ಕದ ರಾಮಮಂದಿರಕ್ಕೆ ಹೋದೆವು. ಸೀತಾ ರಾಮ ಮತ್ತು ಲಕ್ಷ್ಮಣರ ಸುಂದರ ಮೂರ್ತಿಗಳನ್ನು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಕೆಳಗಡೆ ಆಂಜನೇಯ ಕುಳಿತದ್ದು ನೆನಪಾಗುತ್ತಿಲ್ಲ. ಆ ಮೂರ್ತಿಗಳನ್ನು ಪೂಜಿಸುವ ಪೂಜಾರಿಗಳು ಉತ್ತರ ಭಾರತದವರು. ಅವರು ಮೂರ್ತಿಗಳಿಗೆ ಮಾಡುವ ಅಲಂಕಾರ ಮನಸೂರೆಗೊಳ್ಳುವಂಥದ್ದು. ರಾಮನವಮಿಯ ಸಂದರ್ಭದಲ್ಲಿ ವಾರಗಟ್ಟಲೆ ಮಂದಿರದೊಳಗೆ ಉತ್ತರ ಭಾರತದಿಂದ ಕರೆಸಿದ ಕಲಾವಿದರಿಂದ ರಾಮಾಯಣದ ಏಕಾಂಕ ಹಿಂದಿ ನಾಟಕಗಳು ಪ್ರತಿದಿನ ಇರುತ್ತಿದ್ದವು. ಅವರ ಸಾಂಪ್ರದಾಯಿಕ ಪೋಷಾಕು, ನಟನೆ ಹಾಗೂ ಸಂಗೀತ ಬಹಳ ಖುಷಿ ಕೊಡುತ್ತಿದ್ದವು.

ಅಂತೂ ರಾಮನಿಗೆ ನಮಸ್ಕರಿಸಿ ಹೊರಗೆ ಬಂದೆವು. ಮಂದಿರದ ಎದುರಿನ ರಸ್ತೆಯ ಆಚೆ ಬದಿಗೆ ಬಹಳಷ್ಟು ಜನ ಕುಷ್ಠರೋಗಿಗಳು ಭಿಕ್ಷೆಗಾಗಿ ಕುಳಿತಿರುತ್ತಿದ್ದರು. ಶನಿವಾರ ಮಾತ್ರ ಇಷ್ಟೊಂದು ಜನ ಕುಷ್ಠರೋಗಿಗಳು ಕೂಡುತ್ತಿದ್ದರೆಂದು ಕಾಣುತ್ತದೆ. ಒಬ್ಬಳು ಮಾತ್ರ ಆ ಸಾಲಿನಲ್ಲಿ ಕೂಡದೆ ದೂರ ಕುಳಿತಿದ್ದಳು. ನಾನು ಕುತೂಹಲದಿಂದ ದೂರ ಕುಳಿತದ್ದರ ಬಗ್ಗೆ ಕೇಳಿದೆ. ‘ನಾ ಹೊಲ್ಯಾರಕಿರಿ ಅವ್ರು ಮೇಲ್ಜಾತಿ ಜನ’ ಎಂದು ಹೇಳಿದಳು. ನನಗೆ ಅಲ್ಲೀಬಾದಿಯ ಅನುಭವ ನೆನಪಾಯಿತು. ಈ ದುಃಖದಲ್ಲಿ ತೂತಿನ ದುಡ್ಡಿನ ದುಃಖವನ್ನು ಮರೆತೆ. ನನಗೆ ಈಗಲೂ ಅನಿಸುತ್ತದೆ, ಜಾತಿ ಎಂಬುದು ಕುಷ್ಠರೋಗಕ್ಕಿಂತಲೂ ಭಯಂಕರವಾದುದು.

ನನ್ನ ತಂದೆ ಕುಂಬಳ ಚಾಟಿಯಿಂದ ಚಿಲ್ಲರೆ ದುಡ್ಡು ತೆಗೆದರು. ದೂರ ಕುಳಿತ ಈ ಹೆಣ್ಣುಮಗಳಿಂದಲೇ ದುಡ್ಡು ಕೊಡಲು ಪ್ರಾರಂಭಿಸಿದರು. ಆ ದುಡ್ಡು ಮುಗಿದ ಮೇಲೆ ತಾವು ಪ್ರತಿಸಲ ಕೊಡುವ ಹಾಗೆ ತಮ್ಮಲ್ಲಿನ ಚಿಲ್ಲರೆ ದುಡ್ಡನ್ನು ಭಿಕ್ಷುಕರಿಗೆ ಕೊಟ್ಟು ಆಕಾಶದ ಕಡೆಗೆ ಕೈ ಮಾಡಿ ‘ಆ ದುಡ್ಡು ಕಳೆದುಕೊಂಡವನಿಗೆ ಈ ದಾನದ ಪುಣ್ಯ ಕೊಡು’ ಎಂದು ಭಾವಪೂರ್ಣವಾಗಿ ಹೇಳಿದರು. ಆ ಮಾತು ಕೇಳಿ ನನ್ನ ದುಡ್ಡಿನ ಬೇಸರ ಸರ್ರನೆ ಇಳಿದುಹೋಯಿತು.

ಆ ಕಾಲದಲ್ಲಿ ನನ್ನ ತಂದೆ ಎರಡು ರೂಪಾಯಿ ಗಳಿಸಲು ಬಹಳ ಕಷ್ಟಪಡಬೇಕಿತ್ತು. ಹಮಾಲಿ ಕೂಲಿ ಒಂದು ಕ್ವಿಂಟಲ್ ಚೀಲಿಗೆ ಒಂದು ದುಡ್ಡು ಇತ್ತು. ಲಾರಿಯಲ್ಲಿದ್ದ ಒಂದು ನೂರು ಕಿಲೊ ಜೋಳದ ಇಲ್ಲವೆ ಗೋದಿಯ ಚೀಲವನ್ನು ಹೊತ್ತು ಅಡತಿ ಅಂಗಡಿಯ ಹಿಂದೆ ಇರುವ ವಖಾರಗೆ ಹೋಗಿ ಜೋಡಿಸಿ ಇಡುವುದಕ್ಕೆ ಕೇವಲ ಒಂದು ದುಡ್ಡು. 64 ದುಡ್ಡು ಸೇರಿದರೆ ಒಂದು ರೂಪಾಯಿ ಆಗುತ್ತಿತ್ತು. ಎರಡು ರೂಪಾಯಿ ಗಳಿಸಲು 128 ಕ್ವಿಂಟಲ್ ಭಾರವನ್ನು ಹೊತ್ತು ವಖಾರಕ್ಕೆ ಒಯ್ದು ಚೀಲಗಳನ್ನು ಜೋಡಿಸಿಡಬೇಕಿತ್ತು. ದುಡಿದೇ ಬದುಕಬೇಕೆನ್ನುವವರೇ ಪರಿಪೂರ್ಣ ಬದುಕನ್ನು ಅನುಭವಿಸುವವರು ಎಂದು ನನಗೆ ಅನೇಕ ಸಲ ಅನಿಸಿದೆ. ಆದರೆ ಹಾಗೆ ಬದುಕುವ ಯೋಗ್ಯತೆ ಇರಬೇಕಲ್ಲ! ಅದು ಕಸಗುಡಿಸುವ ಸತ್ಯಕ್ಕನಿಗೆ ಇತ್ತು. ನನ್ನ ತಂದೆಯಂಥವರಿಗೆ ಇತ್ತು.

(ಚಿತ್ರಗಳು: ಸುನೀಲಕುಮಾರ ಸುಧಾಕರ)