ಈ ಹೊತ್ತಿನಲ್ಲಿಯೂ ಹಳ್ಳಿ ಮನೆಗಳಿಗೆ ಹೋದರೆ ನಮಗೆ ಉಪಚರಿಸುವ ಬಗೆ ಹೇಗೆಲ್ಲ ಇರುತ್ತೆ ಅನ್ನುವುದರ ಪರಿಚಯವಾಗುತ್ತೆ. ‘ಮಳೆ ಬಂದ್ರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ’ ಅನ್ನುವ ಗಾದೆಯಂತೆಯೇ ಮನೆಗೆ ಬಂದವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಅವರ ಪ್ರೀತಿ ಯಾವಾಗಲೂ ದೈತ್ಯವೇ. ಕೆಲವೊಮ್ಮೆ ತಡೆದುಕೊಳ್ಳೋಕೆ ಕಷ್ಟವಾದ್ರೂ, ಮತ್ತೆಮತ್ತೆ ಆ ಪ್ರೀತಿಯ ಸೊಬಗು ದಕ್ಕದ ಕಾರಣ, ಬಡಿಸುವಾಗ, ಹೊಟ್ಟೆತುಂಬಿದಮೇಲೂ ಒಂದು ತುತ್ತು ತಿನ್ನಬೇಕು. ಹಾಗಂತಲೇ ನಾನವತ್ತು ಹೋಳಿಗೆಯ ಜೊತೆ ಸಕ್ಕರೆಪಾಕವನ್ನು ತಿಂದದ್ದು!
ರೂಪಶ್ರೀ ಕಲ್ಲಿಗನೂರ್ ಅಂಕಣ.

 

ಆವತ್ತು ನನಗೆ ಕೆಲಸಕ್ಕೆ ರಜೆಯಿದ್ದ ದಿನ. ಸಂಜೆ ಕಾಫಿ ಕುಡಿದು, ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದೆ. ಒಳ್ಳೆಯ ಹರಿವಿದ್ದ ಭಾಷೆ ಮತ್ತು ವಿಷಯ, ಓದನ್ನು ಸುಲಭಗೊಳಿಸಿತ್ತು. ಹಾಗಾಗಿ ಗೋಡೆಗಿಟ್ಟ ದಿಂಬಿಗೆ ತಲೆಯಾನಿಸಿ, ರಜಾದಿನದ ಓದನ್ನು ಎಂಜಾಯ್ ಮಾಡುತ್ತಿದ್ದೆ. ಓದು ಶುರುವಾಗಿ ಕೆಲಹೊತ್ತಾಗಿತ್ತಷ್ಟೇ. ಪಕ್ಕದ ಮನೆಯ ಹೆಂಗಸು ಅಮ್ಮನೊಟ್ಟಿಗೆ ಹರಟುವ ಸದ್ದು ಕೇಳಲಾರಂಭಿಸಿತು. ಅಷ್ಟಕ್ಕೇ ಅಬ್ಬ ಆ ಹೆಂಗಸೇ! ಅನ್ನುವ ಉದ್ಗಾರ ಮನಸ್ಸಲ್ಲಿ ಸುಳಿದಾಡಿತು. ಯಾಕಂದ್ರೆ ಸದಾ ಯಾವುದಾದ್ರೊಂದು ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಅಮ್ಮನಿಗೆ ಹಾಗೆ ಖಾಲಿಪ್ರಾಟಿ ಹರಟೆ ಹೊಡೆಯೋದಂದ್ರೆ ಯಾವತ್ತೂ ಇಷ್ಟವಾಗಲ್ಲ. ಅದ್ರಲ್ಲೂ ಹೇಳಿದ್ದನ್ನೇ  ಮತ್ಮತ್ತೆ ಹೇಳುತ್ತ, ಹಳೆಯ ಟೇಪ್ ರೆಕಾರ್ಡುಗಳಂಥ ಜನರಂದ್ರೆ, ಒಂದಿಷ್ಟೂ ಅವರಿಗೆ ಹಿಡಿಸಲ್ಲ. ಆದ್ರೆ ಮಾಡೋದಾದ್ರೂ ಏನು. ಪಕ್ಕದ ಮನೆಯ ಹೆಂಗಸೇ. ಹಾಗೆ ಸಾರಾಸಗಟಾಗಿ ಯಾರಿಗಾದ್ರೂ ಏನನ್ನಾದ್ರೂ ಹೇಳುವ ಮುಂಚೆ ಬಹಳ ಪ್ರಜ್ಞಾಪೂರ್ವಕವಾಗಿ ಯೋಚಿಸೋ ಅಮ್ಮ, ಅವರಿಗೆ ನೋವಾಗಬಹುದು ಅಂತ ಅವರ ‘ನಾನ್ ಸ್ಟಾಪ್’ ಮಾತಿನ ಬಗ್ಗೆ ಮುಖದ ಮೇಲೆ ಹೇಳಿರಲಿಲ್ಲ. ಹಾಗಂತಲೇ ಆವತ್ತೂ ಆಕೆಯ ಮಾತು ಪುಂಖಾನುಪುಂಖವಾಗಿ ಪಕ್ಕದ ರಸ್ತೆಯವರೆಗೂ ವಿಷಯ ಗೊತ್ತಾಗುವಂತೆ ಮಾತಿನ ಓಘ ಓಡುತ್ತಿತ್ತು. ನನಗೋ ಕಿರಿಕಿರಿ. ಓದಲು ಕೂತಾಗ ಇಂಥ ವಟವಟ ಕಪ್ಪೆಗಳನ್ನು ಸಹಿಸೋಕೆ ನಿಜಕ್ಕೂ ಕಷ್ಟ. ಹಾಗಾಗಿ ಚಹಾ ಕೇಳುವ ನೆಪದಲ್ಲಿ ಅಮ್ಮನನ್ನು ಒಳಗೆ ಕರೆದುಕೊಂಡು ಬಂದರಾಯ್ತು ಅಂತ ಹೋಗಿ, ಕೆಲಕಾಲ ಅವರ ಮಾತು ಕೇಳುವವಳಂತೆ ನಿಂತೆ.

ಅವರ ಮಾತಿನ ತುಂಬಾ ತಕರಾರೇ ತುಂಬಿ ತುಳುಕುತಿತ್ತು. ಅದಕ್ಕೆ ಅವರ ಮನೆಗೆ ಬಂದ ಅವರ ಅಕ್ಕನೇ ಕಾರಣವಂತೆ. ಹಿಂದೆಲ್ಲ ಅಮ್ಮನೊಟ್ಟಿಗೆ ಮಾತನಾಡುವಾಗ, ಅವರ ಅಕ್ಕನ ಊರಿಗೆ ಹೋದಾಗ, ತಮ್ಮನ್ನ ಅವರು ನೋಡಿಕೊಳ್ಳುವ ಪರಿಯ ಬಗ್ಗೆ ಇಷ್ಟಗಲ ಕಣ್ಣಗಲಿಸಿ, ಅಕ್ಕನನ್ನು ಕೊಂಡಾಡಿ ಮಾತನಾಡುವುದನ್ನು ಕೇಳಿದ್ದೆ. ನಗರದಲ್ಲಿ ಒಂದು ಸ್ವಂತ ಮನೆಯೂ ಇಲ್ಲದವರನ್ನು ಅವರು ಎಷ್ಟೆಲ್ಲ ಪ್ರೀತಿಯಿಂದ ಕಾಣ್ತಾರೆ? ಅಕ್ಕನ ಸೊಸೆಯಂದಿರು ರಾತ್ರಿ ತನ್ನ ಮಕ್ಕಳಿಗೆ ಕೊಡುವ ನೊರೆ ಹಾಲಿನ ಬಗ್ಗೆ, ಹಂಚಿನಿಂದ ತಟ್ಟೆಗೆ ಹಾಕಿಕೊಡುವ ಬಿಸಿಬಿಸಿ ರೊಟ್ಟಿಯ ಬಗ್ಗೆ, ಕೆನೆಮೊಸರನ್ನ ಇಡಿಇಡಿಯಾಗಿ ಇವರಿಗೆ ತಿನ್ನಿಸುವ ಬಗೆಯನ್ನೆಲ್ಲ ಹೇಳಿದ್ದನ್ನ ನಾನು ಅದೆಷ್ಟು ಬಾರಿ ಕೇಳಿದ್ದೆ. ಆದರೀಗ ಆ ಅಕ್ಕ ಇವರ ಮನೆಗೆ ಬಂದು ಮೂರು ದಿನಗಳಾಯ್ತು ಅಷ್ಟೇ. ಇಡೀ ಮನೆಮಂದಿಗೆ “ಇನ್ನೂ ಹೋಗ್ತಾಯಿಲ್ವಲ್ಲ ಇವರು” ಅನ್ನೋ ಬೇನೆ ಶುರುವಾಗಿತ್ತು. “ಅತಿಥಿ ದೇವೋ ಭವ” ಅನ್ನುವ ಪಾಠವನ್ನು ಅವರ ತಾಯಿ, ಈ ಹೆಂಗಸಿಗೆ ಕಲಿಸದೆ, ದೊಡ್ಡ ಮಗಳಿಗೆ ಮಾತ್ರ ಹೇಳಿಕೊಟ್ಟಿದ್ದರಾ? ಏನೋ ನನಗೆ ಅರ್ಥವಾಗಲಿಲ್ಲ.

**************

ನಾವೊಂದಷ್ಟು ಮಂದಿ ಶಿವಮೊಗ್ಗದಿಂದ ಶಿರಸಿಗೆ ಹೊರಟಿದ್ವಿ. ಶಿರಸಿ ಅಂದ್ರೆ ಶಿರಸಿ ಅಲ್ಲ. ಅದಕ್ಕೂ ಮುಂದೆ ಇರುವ ಒಂದು ಹಳ್ಳಿಯಂತೆ. ಪ್ರಯಾಣ ಆರಂಭಿಸಿದ ನಮಗೆ ಇದ್ದ ಮಾಹಿತಿ ಅಷ್ಟೇ. ಹಾಗಾಗಿ ಶಿರಸಿ ತಲುಪಿದ್ದೇ ಅಂದು ರಾತ್ರಿ ನಾವು ಜಾಂಡಾ ಊರಲಿದ್ದ ಮನೆಯವರಿಗೆ ಫೋನಾಯಿಸಿದ್ದೆವು. ಅವರು ಇಂತಿಷ್ಟು ಕಿಲೋಮೀಟರ್, ಹೀಗೆ ಹೀಗೆ ಅಂತೆಲ್ಲ ನಾವು ಕ್ರಮಿಸಬೇಕಾದ ದಾರಿಯ ವಿವರಣೆ ಕೊಟ್ಟರು. ಇನ್ನೇನು ಹೊರಡಬೇಕು. ಅಷ್ಟರಲ್ಲಿ ಅವರಿಂದಲೇ ವಾಪಾಸ್ಸು ಕರೆ ಬಂದಿತ್ತು. “ನಮ್ಮ ಹುಡುಗನೊಬ್ಬ ಶಿರಸಿಯಿಂದ ಇಲ್ಲಿಂದ ಬರಲಿದ್ದಾನೆ. ನಿಮಗೆ ತೊಂದರೆ ಆಗದಿದ್ದಲ್ಲಿ ಕರ್ಕೊಂಡು ಬರ್ಬಹುದಾ? ಅವ್ನು ಸಿರ್ಸಿ ತಲ್ಪೋಕೆ ಇನ್ನೂ ಹದಿನೈದು ನಿಮಿಷ ಆದ್ರೂ ಬೇಕಾಗ್ತದೆ….” ಅಂತ ಬೇಡಿಕೆ ಇಟ್ಟವರಂತೆ ಕೇಳಿದರು. ಅವರು ಹಾಗೆ ಕೇಳಿಕೊಂಡ ರೀತಿ ನಮಗೇ ಒಂದು ಥರ ಅನ್ನಿಸಿತ್ತು. ಯಾಕಂದ್ರೆ ಹೀಗೆ ಶಿರಸಿಯ ಬಳಿ ಬರಲಿದ್ದೇವೆ ಅಂದದ್ದೇ ತಡ, “ಅಲ್ಲೇ ನಮ್ಮನೆ ಇದೆ, ನೀವು ಅಲ್ಲಿಗೇ ಬಂದು ಉಳಿದುಕೊಳ್ಳಬೇಕು” ಅಂತ ನಮ್ಮ ಇಡೀ ಬೆಟಾಲಿಯನ್ನಿಗೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುವ ಮಾತನಾಡಿದ ಜನ ಅವರು. ಅಂಥದ್ರಲ್ಲಿ ಅವರ ಹುಡುಗನೊಬ್ಬನನ್ನು ನಮ್ಮೊಟ್ಟಿಗೆ ಕರೆದುಕೊಂಡು ಹೋಗುವುದಕ್ಕೆ ಹೀಗೆ ಕೇಳುತ್ತಿದ್ದಾರಲ್ಲ ಅಂದುಕೊಂಡು “ಅಯ್ಯೋ ಬರಲಿ ಬಿಡಿ, ಕಾಯುತ್ತೇವೆ” ಅಂದು ಅವರು ಹೇಳಿದ ಹಳೇ ಬಸ್ಟ್ಯಾಂಡಿನ ಸರ್ಕಲ್ ನ ರಸ್ತೆ ಬದಿಯಲ್ಲಿ ನಮ್ಮ ಕಾರನ್ನು ನಿಲ್ಲಿಸಿ, ಅದರ ಓಟಕ್ಕೊಂದು ಸಣ್ಣ ವಿರಾಮ ಕೊಟ್ವಿ.

ಆ ಮನೆಯ ಜನ ಹೇಳಿದಂತೆ ಹದಿನೈದು ಇಪ್ಪತ್ತು ನಿಮಿಷಕ್ಕೆ ಅವರ ಹುಡುಗ ಬಂದೇಬಿಟ್ಟಿದ್ದ. ಅವನೂ ಸಹ ನಮ್ಮನ್ನು ಕಾಯಿಸಿದೆನೋ ಏನೋ ಎಂಬಂತೆ ಮಾತನಾಡುತ್ತ ಗಾಡಿ ಹತ್ತಿದ. ಮತ್ತೆ ಅವನೂರಿಗೆ ಸಂಜೆ ಏಳರ ಮೇಲೆ ಬಸ್ಸಿಲ್ಲವಾದ್ದರಿಂದ ಈಗ ಇಲ್ಲೇ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳಬೇಕಿತ್ತು. ನೀವು ಸಿಕ್ಕಿದ್ದು ಒಳ್ಳೆದಾಯ್ತು ಅಂತೆಲ್ಲ ಹೇಳಿದ. ಹಾಗೆ ಹೇಳಿದಾಗ ‘ನಾವು ಅವನಿಗೆ’ ಸಿಕ್ಕಿದ್ದು ಒಳ್ಳೆಯದಾಯ್ತು ಅಂದುಕೊಂಡ ನಮಗೆ, ಅವನೇ ದೇವರಂತೆ ಸಿಕ್ಕಿದನಲ್ಲ ದೇವರೆ! ಎಂಬ ಉದ್ಗಾರ ತೆರೆಯುವಂಥ ಪರಿಸ್ಥಿತಿ ಬರಲಿದೆ ಅನ್ನುವ ಸುಳಿವೂ ಇರಲಿಲ್ಲ.

ಆ ಹುಡುಗನ ಮಾರ್ಗದರ್ಶನದಂತೆ ನಮ್ಮ ‘ಡಾಕ್ಟರ್’ ಕಾರು ಚಲಿಸತೊಡಗಿದ್ದರು. ಹೊತ್ತು ಅದಾಗಲೇ 7.30 ಕ್ಕೂ ಮೀರಿತ್ತು. ಅತ್ತಿತ್ತಲೂ ಮತ್ತೆ ಸುತ್ತಮುತ್ತಲೂ ಕತ್ತಲು, ಕಾಡು ಮುತ್ತುವರಿದಿತ್ತು. ಕಾರಿನ ಹೆಡ್ ಲೈಟ್ ಮತ್ತು ಆ ಹುಡುಗನೇ ನಮಗೆ ದಾರಿದೀಪ! ಏಕೆಂದರೆ ಶಿರಸಿಯಿಂದ ಸುಮಾರು ಮೂವತೈದು ಕಿಲೋಮೀಟರ್ ದೂರಕ್ಕೆ ಕ್ರಮಿಸಿದ ಹಾದಿಯಲ್ಲಿ ಯಾರೆಂದರೆ ಯಾರೊಬ್ಬರೂ ನಮ್ಮ ಕಣ್ಣಿಗೆ ಕಾಣಸಿಗಲಿಲ್ಲ. ಅಲ್ಲಲ್ಲಿ ರಸ್ತೆಗಳು ಎಡಕ್ಕೆ ಬಲಕ್ಕೆ ಅಂತ ತಿರುವು ಪಡೆದುಕೊಂಡಿದ್ದವು. ಅಲ್ಲದೇ ಹಲವೆಡೆ ಟಿಸಿಲೊಡೆದ ರಸ್ತೆಗಳಂತೂ ಬಹಳ ಸಿಕ್ಕವು. ಅಕಸ್ಮಾತ್ ನಾವಷ್ಟೇ ಹೊರಟುಬಂದು, ಒಂದೇ ಒಂದು ರಸ್ತೆ ತಪ್ಪಿ, ಇನ್ಯಾವುದೋ ರಸ್ತೆಗೆ ಹೋಗಿಬಿಟ್ಟರೆ, ಏನನ್ನಾದರೂ ಕೇಳಲು ಯಾರಾದರೂ ಸಿಗಬಹುದು ಅನ್ನೋ ನಂಬಿಕೆ ಅಂತೂ ನಮ್ಮಲ್ಲಿ ಇರಲಿಲ್ಲ. ಅಷ್ಟು ನಿರ್ಜನ ದಾರಿಯದು. ಕಥೆ ಹೀಗಿರುವಾಗ ಈ ಹುಡುಗ ಸಿಕ್ಕಿದ್ದು ನಮ್ಮ ಅದೃಷ್ಟವಲ್ಲದೇ ಅವನದ್ದಾ? ನಾವು ಸಿಕ್ಕದೇ ಹೋಗಿದ್ದರೆ, ಅವನು ಮಾರನೆಯ ದಿನ ಬೆಳಗ್ಗೆ ಬಸ್ ಹತ್ತಿ ಮನೆ ತಲುಪಬಹುದಿತ್ತು. ಅದವನಿಗೆ ರೂಢಿ ಆಗಿರಲೂಬಹುದು. ಆದರೆ ನಾವು ದಾರಿ ತಪ್ಪಿದ್ದಿದ್ದರೆ? ನೆನೆಸಿಕೊಂಡರೇ ಭಯವಾಗುತ್ತಿತ್ತು. ಅವರ ಮನೆ ತಲುಪಿದಾಗ ಇಲ್ಲಿನ ಮನೆಮಕ್ಕಳು ಓದಲು ಎಷ್ಟು ದೂರ ಓಡಾಡಬೇಕಪ್ಪ ಅನ್ನಿಸಿತು. ಹಾಗಂತ ಅವನಿಗೆ ಕೇಳಿದ್ರೆ “ಶಾಲೆ ಆದ್ರೆ ಸ್ವಲ್ಪ ದೂರಹೋಗಬೇಕಷ್ಟೇ. ಆದ್ರೆ ಕಾಲೇಜಿಗೆಲ್ಲ ಇಷ್ಟೆಲ್ಲ ಓಡಾಡ್ಲೇಬೇಕಲ್ಲ. ಬೇರೆ ಆಯ್ಕೆ ಇಲ್ಲ” ಅಂದ.

‘ನಾವು ಅವನಿಗೆ’ ಸಿಕ್ಕಿದ್ದು ಒಳ್ಳೆಯದಾಯ್ತು ಅಂದುಕೊಂಡ ನಮಗೆ, ಅವನೇ ದೇವರಂತೆ ಸಿಕ್ಕಿದನಲ್ಲ ದೇವರೆ! ಎಂಬ ಉದ್ಗಾರ ತೆರೆಯುವಂಥ ಪರಿಸ್ಥಿತಿ ಬರಲಿದೆ ಅನ್ನುವ ಸುಳಿವೂ ಇರಲಿಲ್ಲ.

ಅಲ್ಲಿಗೆ ಹೋದ ನಮಗೆಲ್ಲ, ಆ ಮನೆಯ ಜನ ಒಂದಿಷ್ಟೂ ಕರುಣೆಯ ರಿಯಾಯಿತಿ ಕೊಡದೇ ಭರಪೂರ ಊಟಮಾಡಿಸಿದರು. ಮತ್ತೆ ಹೊದ್ದುಕೊಳ್ಳಲು ಅಷ್ಟೇ ಭರಪೂರ ಬೆಚ್ಚಗಿನ ರಗ್ಗುಗಳನ್ನು ಹೊದಿಸಿ ‘ಚಿಂತೆಯಿಲ್ಲದ’ ನಿದ್ರೆಗೂ ಅವಕಾಶ ಕೊಟ್ಟರು. ಸ್ವಲ್ಪ ಹೆಚ್ಚಿಗೇ ಬಳಲಿದ್ದವರು ಕೊಂಚ ತಡವಾಗಿ ಎದ್ದಿದ್ದೆವು. ಅಂಥ ನಾವುಗಳು ಕಣ್ಣುಜ್ಜಿಕೊಳ್ಳುತ್ತ ಅಡುಗೆಮನೆಯತ್ತ ಕಾಲಿಟ್ಟರೆ ಅದಾಗಲೇ ಎದ್ದ ಸ್ನೇಹಿತರು ಎಲೆಯ ಮುಂದೆ ಪಟ್ಟಾಗಿ ಕುಳಿತು ತೆಳ್ಳೇವಿಗೆ (ತೆಳು ದೋಸೆ) ಬೆಲ್ಲ-ತುಪ್ಪದ ಮಿಶ್ರಣವನ್ನು ಹಚ್ಚಿಕೊಂಡು ಬ್ಯಾಟಿಂಗ್ ಆರಂಭಿಸಿದ್ದರು. ಉಳಿದವರಿಗೂ ಅಷ್ಟೇ, ಸ್ನಾನಕ್ಕೆ ಮುಂಚೆಯೇ ಎಲೆಯ ಮೇಲೆ ಒಂದಾದಮೇಲೊಂದರಂತೆ ಕನಿಷ್ಟ ನಾಲ್ಕಾದರೂ ತೆಳ್ಳೇವುಗಳನ್ನು ಬಡಿಸುತ್ತ, ಪಕ್ಕದಲ್ಲಿದ್ದ ಲೋಟಕ್ಕೆ ಟೀ ಸುರಿಯುತ್ತಿದ್ದರು. ಅದು ಖಾಲಿಯಾದಂತೆಲ್ಲ ನಮ್ಮಮಾತಿಗೂ ಕಾಯದೇ ಚಾ ಸುರಿಯುತ್ತಿದ್ದರೆ, ಚಹಾದ ಲೋಟವೂ ನನಗೆ ಅಕ್ಷಯ ಪಾತ್ರೆಯಂತೆ ಕಾಣುತ್ತಿತ್ತು. ತಿಂಡಿಯ ಜೊತೆ ಮನೆಯ ಜನರೆಲ್ಲರ ಜೊತೆಯ ಹರಟೆಯೂ ಬೆಳಗ್ಗಿನಿ ತಿನಿಸಿಗೆ ಬೆಲ್ಲ ಹಚ್ಚಿದಂತೆಯೇ ಸಿಹಿ ಅನ್ನಿಸುತ್ತಿತ್ತು.

“ನಮ್ಮನೇಲಿ ವರ್ಷದ ಮುನ್ನೂರರವತೈದು ದಿನದಲ್ಲಿ ಮುನ್ನೂರರವತ್ತೆರಡು ದಿನಾ ದೋಸೇನೇ, ಅದ್ರಲ್ಲಿ ಮೂರ್ ದಿನಾ ಯಾಕೆ ಮಾಡಲ್ಲ ಅಂದ್ರೆ, ದೀಪಾವಳಿ ಮತ್ತೆ ಇನ್ನೆರಡು ದಿನ ಉಪವಾಸ” ಅಂದರು. ಹೀಗಂತ ಹೇಳಿದ್ದು ಮನೆಯ ಗಂಡಸರು. ಅದನ್ನು ಕೇಳಿದ್ದೆ ಪಟ್ಟನೇ ಮನೆಯ ಹೆಣ್ಣುಮಕ್ಕಳ ಮುಖ ನೋಡಿದೆ. ಹೌದೆಂಬಂತೆ ನಗುನಗುತ್ತ ಯಾವ್ಯಾವ ಥರ ದೋಸೆಯನ್ನೆಲ್ಲ ಮಾಡುತ್ತೇವೆ ಅನ್ನುವುದನ್ನು ನಮಗೆಲ್ಲ ತಿಂಡಿ ಬಡಿಸುತ್ತಿದ್ದ ಆ ಮನೆಯ ಸೊಸೆ ಹೇಳಿದರು. ಅಡುಗೆಮನೆಯಲ್ಲಿ ಅವರ ಅತ್ತೆ ಕೆಳಗೆ ಕೂತು ದೋಸೆ ಹಾಕುತ್ತಿದ್ದರು. ವಿವರಣೆ ಕೇಳಿಯೇ ನನಗೆ ಸುಸ್ತಾಗಿ ಹೋಯ್ತು. ಯಾಕಂದ್ರೆ ತೆಳ್ಳೇವು ಮಾಮೂಲಿ ದೋಸೆಯಂತಲ್ಲ. ಸಾಧಾರಣ ದೋಸೆಗೆ ಹಾಕುವ ಅರ್ಧದಷ್ಟೇ ಹಿಟ್ಟನ್ನು, ಹಂಚಿನ ಮೇಲೆ ಹುಯ್ದು ಅದನ್ನು ತೆಳುವಾಗಿ ದುಂಡಗೆ ಅಗಲಿಸಬೇಕು. ಹಾಗಾಗಿ ಎರಡು ದೋಸೆ ತಿನ್ನುವವರು ನಾಲ್ಕು ದೋಸೆ ತಿನ್ನಬೇಕು. ಇನ್ನು ಐದಾರು ದೋಸೆ ತಿನ್ನುವ ಗಂಡಸರಿಗೆ…! ಅಬ್ಬಬ್ಬ ಇವರ್ಯಾಕಪ್ಪ ನಮಗೆಲ್ಲ ದೋಸೆ ಮಾಡಿದ್ರು ಅನ್ನಿಸಿಬಿಟ್ಟಿತ್ತು ನನಗೆ. ಏಕೆಂದರೆ ಎರಡು ಪುಟ್ಟ ಮಕ್ಕಳನ್ನು ಹಿಡಿದು ಒಟ್ಟು ಎಂಟು ಜನರ ಗುಂಪು ನಮ್ಮದು. ಅದರ ಜೊತೆ ಅವರ ಮನೆಯವರೇ ಆರು ಜನ. ಏನಿಲ್ಲವೆಂದರೂ ಕನಿಷ್ಟ 40 ದೋಸೆಯನ್ನಂತೂ ಆ ತಾಯಿ ಮಾಡಿದ್ದರಲ್ಲ… ಆದರೂ ಅವರ ಮುಖದಲ್ಲಿ ಅಸಹನೆಯಾಗಲೀ, ಸುಸ್ತಾಗಲೀ ನನಗೆ ಕಾಣಿಸಲೇ ಇಲ್ಲ. ಈ ಮಟ್ಟಿಗಿನ ಸಹನೆ ನಮಗೆ, ಅಂದ್ರೆ ನಗರವಾಸಿಗಳಿಗೆ ಸಾಧ್ಯವೆ? ಬೆಂಗಳೂರಿಗೆ ವಾಪಾಸ್ಸಾಗುವವರೆಗೂ ಈ ಮಾತನ್ನು ನನಗೆ ನಾನೇ ಕೇಳಿಕೊಳ್ಳುತ್ತಿದ್ದೆ.

ನಗರದಲ್ಲಿ ನಾವು ಕೊಳ್ಳುವ ವಸ್ತುಗಳನ್ನು ಬಿಟ್ಟರೆ ಮಿಕ್ಕ ಯಾವುವೂ ನಮ್ಮದಲ್ಲ. ಆದರೂ ಅವುಗಳ ನಡುವೆ ವಾಸಿಸುವ ನಮಗೆ “ಇಡೀ ಭೂಮಿಯೇ ನಮ್ಮದು” ಎಂಬ ಪೊಳ್ಳು ಅಹಂ ಭಾವ ಬೆಳೆದುಬಿಟ್ಟಿರುತ್ತೆ. ಆದರೆ ಪಕ್ಕದ ಮನೆಯವರು ಪಾಟ್ ನಲ್ಲಿ ಬೆಳೆದ ದಾಸವಾಳವನ್ನೂ ಅವರ ಅನುಮತಿಯಿಲ್ಲದೇ ಕಿತ್ತು, ದೇವರಿಗೆ ಮುಡಿಸಲಾಗುವುದಿಲ್ಲ ಅನ್ನುವ ಸತ್ಯವನ್ನು ನಾವು ಸರಿಯಾಗಿ ಅರ್ಥೈಸಿಕೊಂಡಂತೆ ಕಾಣುತ್ತಿಲ್ಲ. ‘ಉದ್ಧಾರ’ವಾಗುವ ಭ್ರಮೆಯಲ್ಲಿ ನಗರಕ್ಕೆ ಸೇರಿಕೊಂಡು, ಇಲ್ಲಿರಲೂ ಆಗದೇ ವಾಪಾಸ್ಸು ಊರಿಗೆ ಹೋಗಲೂ ಆಗದೇ ಒದ್ದಾಡುವವರೆಷ್ಟೋ. ಕೆಲವೊಂದಷ್ಟು ಜನಕ್ಕೆ ಆ ಭಾವವೂ ಇರೋಲ್ಲ. ಏನೇ ಆದ್ರೂ ನಗರಗಳನ್ನು ಬಿಡಲು ಅವರ ಮನಸ್ಸು ಒಪ್ಪಲ್ಲ. ಮನೆಗೆ ಬಂದವರಿಗೆ ಏನನ್ನಾದರೂ ಮಾಡುವ ಮನಸ್ಸಿರುವ ಜನ ಕಡಿಮೆಯೇ. ಹಾಗಂತ ಅಚ್ಚುಕಟ್ಟಾಗಿ ಉಪಚಾರ ಮಾಡುವ ಜನರು ಇಲ್ಲವೇ ಇಲ್ಲ ಎಂದಲ್ಲ. ಆದರೆ ನೆಚ್ಚಿಕೊಂಡ ಕೆಲಸಗಳ ಸಲುವಾಗಿಯೋ, ಜಿದ್ದಿಗೆ ಬಿದ್ದು ದುಡ್ಡು ಗಳಿಸುವ ಚಟಕ್ಕೆ ಬಿದ್ದೋ, ಮನೆಗೆ ಬರುವ ಒಬ್ಬಿಬ್ಬರನ್ನು ಸಂಭಾಳಿಸಲೂ ಹೆಣಗಾಡುತ್ತಾರೆ. ಆದರೆ ಹಳ್ಳಿಗಳಲ್ಲಿ ಹಾಗಲ್ಲ. ಅವರ ಮನೆ, ನಿಲ್ಲುವ ಮಣ್ಣು, ಭೂಮಿ, ಮರ, ಗಿಡ, ಬೆಟ್ಟಗಳಷ್ಟೇ ಅಲ್ಲ ಸುತ್ತಮುತ್ತಲ ಜನರೆಲ್ಲ ಅವರ ಜನರೇ. ನಾವು ಹೋದ ಮನೆಗಳಂತೂ ಬೆಂಗಳೂರಿನ ದೊಡ್ಡದೊಡ್ಡ ಕಲ್ಯಾಣ ಮಂಟಪಗಳಷ್ಟು ದೊಡ್ಡವಿದ್ದವು. ಅಡುಗೆ ಮನೆಗಳು ಮತ್ತು ಮಲಗುವ ಕೋಣೆಗಳಂಥೂ ನಗರಗಳ ಮಿನಿ ಫಂಕ್ಷನ್ ಹಾಲ್ ಗಳಷ್ಟು ದೊಡ್ಡವು. ಒಂದೇ ಏಟಿಗೆ ಮೂವತ್ತು ಜನ ಕುಳಿತು ಉಣ್ಣಬಹುದಾದ ಅಡುಗೆ ಮನೆಗಳಂತೂ, ಆ ಮನೆಗಳ ಹೃದಯ ಭಾಗವೇನೋ ಅನ್ನಿಸುತ್ತಿತ್ತು. ಯಾಕಂದ್ರೆ ಅಲ್ಲೇ ಅವರ ಪ್ರೀತಿಯ ಪರಿ ವ್ಯಕ್ತವಾಗುವ ಸ್ಥಳ.


ಸ್ನಾನಕ್ಕೆ ಮುಂಚೆಯೇ ಎಲೆಯ ಮೇಲೆ ಒಂದಾದಮೇಲೊಂದರಂತೆ ಕನಿಷ್ಟ ನಾಲ್ಕಾದರೂ ತೆಳ್ಳೇವುಗಳನ್ನು ಬಡಿಸುತ್ತ, ಪಕ್ಕದಲ್ಲಿದ್ದ ಲೋಟಕ್ಕೆ ಟೀ ಸುರಿಯುತ್ತಿದ್ದರು. ಅದು ಖಾಲಿಯಾದಂತೆಲ್ಲ ನಮ್ಮಮಾತಿಗೂ ಕಾಯದೇ ಚಾ ಸುರಿಯುತ್ತಿದ್ದರೆ, ಚಹಾದ ಲೋಟವೂ ನನಗೆ ಅಕ್ಷಯ ಪಾತ್ರೆಯಂತೆ ಕಾಣುತ್ತಿತ್ತು. ತಿಂಡಿಯ ಜೊತೆ ಮನೆಯ ಜನರೆಲ್ಲರ ಜೊತೆಯ ಹರಟೆಯೂ ಬೆಳಗ್ಗಿನಿ ತಿನಿಸಿಗೆ ಬೆಲ್ಲ ಹಚ್ಚಿದಂತೆಯೇ ಸಿಹಿ ಅನ್ನಿಸುತ್ತಿತ್ತು.

ಮನೆಗೆ ಬಂದ ಅತಿಥಿಗಳನ್ನು ಆದಷ್ಟು ಚನ್ನಾಗಿ ನೋಡಿಕೊಂಡು, ಅವರಿಗೆ ಖುಷಿಯಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಅನ್ನುವ ಪರಂಪರೆಯ ಹಿನ್ನೆಲೆಯಿಂದ ಬಂದವರು ನಾವು. ಹಿಂದೆ ಮನೆಗಳಲ್ಲಿ ಅದೇ ಪಾಠಗಳನ್ನು ಹೇಳಿಕೊಡಲಾಗುತ್ತಿತ್ತು. ಹಿಂದೆ ಏಕೆ? ಈ ಹೊತ್ತಿನಲ್ಲಿಯೂ ಹಳ್ಳಿ ಮನೆಗಳಿಗೆ ಹೋದರೆ ನಮಗೆ ಉಪಚರಿಸುವ ಬಗೆ ಹೇಗೆಲ್ಲ ಇರುತ್ತೆ ಅನ್ನುವುದರ ಪರಿಚಯವಾಗುತ್ತೆ. ‘ಮಳೆ ಬಂದ್ರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ’ ಅನ್ನುವ ಗಾದೆಯಂತೆಯೇ ಮನೆಗೆ ಬಂದವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಅವರ ಪ್ರೀತಿ ಯಾವಾಗಲೂ ದೈತ್ಯವೇ. ಕೆಲವೊಮ್ಮೆ ತಡೆದುಕೊಳ್ಳೋಕೆ ಕಷ್ಟವಾದ್ರೂ, ಮತ್ತೆಮತ್ತೆ ಆ ಪ್ರೀತಿಯ ಸೊಬಗು ದಕ್ಕದ ಕಾರಣ, ಬಡಿಸುವಾಗ, ಹೊಟ್ಟೆತುಂಬಿದಮೇಲೂ ಒಂದು ತುತ್ತು ತಿನ್ನಬೇಕು. ಹಾಗಂತಲೇ ನಾನವತ್ತು ಹೋಳಿಗೆಯ ಜೊತೆ ಸಕ್ಕರೆಪಾಕವನ್ನು ತಿಂದದ್ದು!

ಹಾಗವತ್ತು ಶಿರಸಿ ಬಳಿಯ ಮನೆಯಿಂದ ಬೀಳ್ಕೊಟ್ಟು ನಮ್ಮ ಸವಾರಿ ಯಾಣದ ಕಡೆಗೆ ಹೊರಟಿತ್ತು. ದಾರಿ ನಡುವೆಯೇ ನಮ್ಮ ‘ಡಾಕ್ಟ್ರ’ ಇನ್ನೊಬ್ಬ ಸ್ನೇಹಿತರ ಮನೆ. ಅಲ್ಲಿಗೆ ಹೋದವರು ಒಂದೆರೆಡು ನಿಮಿಷ ಮಾತನ್ನಾಡಿಸಿ ಯಾಣಕ್ಕೆ ಮುಂದುವರೆಯುವುದು ನಮ್ಮ ಯೋಜನೆ. ಬೇಡವೆಂದರೂ ಬಿಡಲಿಲ್ಲ. ‘ಚಾ’ ಅಷ್ಟಾದ್ರೂ ಆಗಲೇಬೇಕು ಅಂತ ಅಂದುಬಿಟ್ಟರು. ಆಗಲಿ ಅಂತ ಅಡುಗೆ ಮನೆಯೊಳಗೆ ಕಾಲಿಟ್ಟೆವು. ಅಲ್ಲಿ ಸಾಲಾಗಿ ಹತ್ತಾರು ಚಿಕ್ಕಚಿಕ್ಕ ಎಲೆಗಳನ್ನು ಹಾಕಲಾಗಿತ್ತು. ಅಯ್ಯೋ ಟೀ ಅಂತಂದು ಇವರೇನೋ ತಿಂಡಿಬೇರೆ ಕೊಡ್ತಿದ್ದಾರಲ್ಲ ಅಂದುಕೊಳ್ಳುತ್ತಲೇ ನಾವು ಎಲೆ ಮುಂದೆ ಕುಳಿತೆವು. ಚಹಾಕ್ಕೆ ಕಾಂಬಿನೇಷನ್ ಯಾವುದು? ಖಾರವಲ್ಲವೇ. ನಮ್ಮೆಲ್ಲರ ತಲೆಯಲ್ಲಿದ್ದದ್ದೂ ಅದೇ. ಅಲ್ಲಿ ನಮ್ಮ ಉಪಚಾರಕ್ಕೆ ಆ ಮನೆಯ ಸೊಸೆ ಮತ್ತು ಮಗಳು ಇಬ್ಬರೂ ನಿಂತಿದ್ದರು. ಎಲೆಯ ಪಕ್ಕ ಇಟ್ಟಿದ್ದ ಲೋಟಗಳಿಗೆ ಒಬ್ಬರು ಚಹಾ ಹಾಕುತ್ತ ಬಂದರು. ಮತ್ತೊಬ್ಬರು ತಟ್ಟೆಯಲ್ಲಿದ್ದ ಹಳದಿ ಬಣ್ಣದ ಯಾವುದೋ ತಿನಿಸನ್ನು ಬಡಿಸುತ್ತ ಬಂದರು. ದೂರದಿಂದ ಅದು ಹೋಳಿಗೆಯ ರೀತಿ ಕಾಣುತ್ತಿತ್ತು. ಆದ್ರೆ ಚಾ ಜೊತೆ ಯಾರಾದ್ರೂ ಹೋಳಿಗೆ ಕೊಡ್ತಾರ? ಅಂತ ನನ್ನ ಕಣ್ಣ ದೃಷ್ಟಿಕೋನವನ್ನು ಬೈದುಕೊಂಡೆ. ಮತ್ತೀಗ ಕಣ್ಣಿನ ಲೆನ್ಸ್ ಅನ್ನು ಸರಿಯಾಗಿ ಫೋಕಸ್ ಮಾಡಿ ತಟ್ಟೆಯಲ್ಲಿದ್ದ ಪದಾರ್ಥವನ್ನು ಗಮನಿಸಿದೆ. ಹಾಗೆ ಗಮನಿಸುತ್ತಾ ಇರುವಾಗಲೇ ಅದು ನನ್ನ ತಟ್ಟೆಗೂ ಬಂದು ಬಿದ್ದಿತ್ತು. ಈಗ ಕನ್ಫರ್ಮ್. ಅದು ಹೋಳಿಗೆಯೇ. ಸರಿ ಬಿಡು. ಏನ್ಮಾಡೋದು. ಈ ಕಡೆ ಪದ್ಧತಿ ಹೀಗೆ ಅನ್ಸತ್ತೆ ಅಂದುಕೊಂಡು ಸುಮ್ಮನಾದರೆ ಆಮೇಲೆ ಮತ್ತೊಂದು ಶಾಕ್. ಅವರ ಹಿಂದೆ ಹಿಂದೆಯೇ ಬಂದವರು ಅದಕ್ಕೆ ಎರಡು ಚಮಚ (ಸಣ್ಣದಲ್ಲ ಮತ್ತೆ ದೊಡ್ಡ ಚಮಚ) ತುಪ್ಪ ಸುರಿದಿದ್ದಲ್ಲದೇ, ಅದರ ಮೇಲೆ ಸಾರಿನ ಸೌಟಿನಲ್ಲಿ ಸಕ್ಕರೆ ಪಾಕ ತುಂಬಿಸಿ, ಹೋಳಿಗೆಯ ಮೇಲೆ ಸುರಿದುಬಿಟ್ಟರು.

(ಚಿತ್ರಗಳು: ‘ಸಾಲಿಗ’ ಬಳಗ)

ಒಂದು ವರ್ಷದಿಂದ ಚಹಾಕ್ಕೆ ಬೆಲ್ಲವನ್ನೇ ಬಳಸುವ ರೂಢಿಮಾಡಿಕೊಂಡಿದ್ದ ನಾನು ಸಕ್ಕರೆ ಚಹಾ ಕುಡಿದದ್ದೇ ಬಹಳ ದಿನವಾಗಿತ್ತು. ಅಂಥದ್ದರಲ್ಲಿ ಹೀಗೆ ಹೋಳಿಗೆಯ ಮೇಲೆ ಸಕ್ಕರೆಯ ಪಾಕ ಬಿದ್ದರೆ ಹೇಗನ್ನಿಸಬೇಡ. ಎರಡುವಾರವಾಗಿತ್ತಷ್ಟೇ ಕೀಟೋ ಡಯಟ್ಟು ಶುರುಮಾಡಿ. ಅದೀಗ ಅವರ ಪ್ರೀತಿಯ ಸಾಗರದಲ್ಲಿ ಕೊಚ್ಚಿಹೋಗುತ್ತಿದ್ದುದನ್ನು ನೋಡಲಾಗುತ್ತಿರಲಿಲ್ಲವಾದರೂ, ಅನುಭವಿಸದೇ ಬೇರೆ ವಿಧಿಯಿರಲಿಲ್ಲ. ಅನ್ನದ ಮುಂದೆ ಇನ್ನು ದೇವರಿಲ್ಲ. ಅಲ್ಲದೇ ಅವರ ಪ್ರೀತಿಯ ಮುಂದೆ ನನ್ನ ಡಯಟ್ಟಿನ ಬಗ್ಗೆ ತಲೆಕೆಡಿಸಕೊಳ್ಳಲಾಗುತ್ತದೆಯೇ? ಬಂದದ್ದು ಬರಲಿ ಅಂತ ಗಟ್ಟಿ ಮನಸ್ಸು ಮಾಡಿ ತಿನ್ನಲಾರಂಭಿಸಿದೆ. ಎರಡು ಮೂರು ತುತ್ತು ಹೋಳಿಗೆಗೆ ಸಕ್ಕರೆ ಪಾಕ ಅತಿ ಅನ್ನಿಸಿದರೂ, ವಾಪಾಸ್ಸು ಅಲ್ಲಿಂದ ಹೊರಡುವ ದಿನ, ಹೋಳಿಗೆಗೆ ಸಕ್ಕರೆಪಾಕದ ರುಚಿ ನಾಲಿಗೆ-ಮನಸ್ಸು ಎರಡಕ್ಕೂ ಖುಷಿ ಅನ್ನಿಸಿತ್ತು. ಅಷ್ಟಲ್ಲದೇ ಅಲ್ಲಿದ್ದ ಒಂದಿಡೀ ದಿನ ಇಡೀ ಮನೆಮಂದಿ ನಮ್ಮಸುತ್ತ ಓಡಾಡುತ್ತ, ಅವರೂರ ಚಂದವನ್ನು ನಮಗೂ ಉಣ್ಣಿಸಿದರು.


ಈ ಪ್ರೀತಿಯ ಸುಖವನ್ನು ಮನೆಗೆ ಬಂದ ಅತಿಥಿಗಳಿಗೆ ನಗರವಾಸಿಗಳು ಕೊಡಲು ಸಾಧ್ಯವಾ? ಬಹುತೇಕರಿಗೆ ಅದು ಕಷ್ಟದ ವಿಷಯವೇ ಅನ್ನಿಸುತ್ತೆ ನನಗೆ. ಆದರೆ ಮನುಷ್ಯ ಸಂಘಜೀವಿ. ಎಲ್ಲವನ್ನೂ ಬಿಟ್ಟು ಎಲ್ಲೋ ಓಡಿಹೋಗುವುದಾಗಲೀ ಅಥವಾ ಎಲ್ಲರನ್ನೂ ಬಿಟ್ಟು ಶ್ರೀಮಂತಿಕೆ ಬೆನ್ನು ಬೀಳುವುದಾಗಲೀ ಸರಿಹೋಗುವುದಿಲ್ಲ. ಯಾಕೆಂದರೆ ಹಾಗೆ ಹೋದವರ ಹಿಂದೆ ಯಾರೂ ಬರುವುದಿಲ್ಲ. ಇಷ್ಟೆಲ್ಲ ಬರೆಯುವ ಹೊತ್ತಿಗೆ ಯಾಕೋ ‘ಇನ್ ಟೂ ದ ವೈಲ್ಡ್’ ಚಿತ್ರದ ದುರಂತ ನಾಯಕ ಕ್ರಿಸ್ಟೋಫರ್ ಕ್ಯಾಂನ್ಡ್ ಲೆಸ್ ನೆನಪಾಗುತ್ತಿದ್ದಾನೆ.