ಕಥೆಕೂಟವೆಂಬ ವಾಟ್ಸ್ ಆಪ್ ಗ್ರೂಪ್ ಆರು ವರ್ಷಗಳಿಂದ ಸದ್ದು ಮಾಡುತ್ತಿದೆ. ಹೊಸತಲೆಮಾರಿನ ಕತೆಗಾರರು , ಹಿರಿಯ ಬರಹಗಾರರು ಸೇರಿಕೊಂಡು ಸಾಹಿತ್ಯದ ನೆಪದಲ್ಲಿ ಬದುಕಿನ ಅನೇಕ ವಿಚಾರಗಳನ್ನು, ಸಿದ್ಧಾಂತಗಳನ್ನು ಚರ್ಚಿಸುತ್ತಾರೆ. ಅನುಭವಲೋಕದ ಜಿಜ್ಞಾಸೆಗಳೊಂದಿಗೆ ಆ ಮಾತಿನ ಮಂಟಪ ರಂಗೇರುತ್ತದೆ. ಆನ್ ಲೈನ್ ನಲ್ಲಿ ನಡೆಯುವ ಚರ್ಚೆ ಆಫ್ ಲೈನ್ ನ ಸಮಾವೇಶಗಳಲ್ಲಿ ಇನ್ನಷ್ಟು ಪ್ರೀತಿಯ ನೇವರಿಕೆಯೊಂದಿಗೆ ಸಾಗುತ್ತಿದೆ. ಅದುವೇ ಕಥೆಕೂಟದ ವಾರ್ಷಿಕ ಸಮಾವೇಶ. ಜೂನ್ 25 ಮತ್ತು 26ರಂದು ಆರನೇ ವರ್ಷದ ಸಮಾವೇಶ ನೆಲಮಂಗಲದ ಬಳಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಥೆಕೂಟದ ಕತೆಗಾರ್ತಿ ಪ್ರಿಯಾ ಕೆರ್ವಾಶೆ ಡಿಜಿಟಲ್ ಲೋಕದ ತಮ್ಮ ಅನುಭವಗಾಥೆಯನ್ನು ಇಲ್ಲಿ ಮಂಡಿಸಿದ್ದಾರೆ.

777 ಚಾರ್ಲಿ ಸಿನಿಮಾದ ಧರ್ಮನಂಥಾ ಲೈಫ್‌ಸ್ಟೈಲು. ಮನೆ, ಆಫೀಸ್, ಇಡ್ಲಿ, ಟೆನ್ಶನ್, ಹಳಹಳಿಕೆ ಇವಿಷ್ಟರಲ್ಲೇ ಓಡುತ್ತಿದ್ದ ದಿನಗಳು. ಅಂಥಾ ಸಮಯದ ಒಂದು ಮಧ್ಯಾಹ್ನ ವಾಟ್ಸಾಪ್ ಸೌಂಡ್ ಮಾಡಿದ್ದು ನೋಡಿ ತೆರೆದರೆ ಕಥೆಕೂಟ ಅನ್ನುವ ಗ್ರೂಪಿನೊಳಗೆ ನನ್ನ ಹೆಸರು. ಗ್ರೂಪುಗಳಿಗೇನು, ಹೊಸ ಪ್ರಾಜೆಕ್ಟ್ ಬಂದರೆ ಗ್ರೂಪ್, ಜರ್ನಿ ಮಾಡ್ಬೇಕಂದ್ರೆ ಗ್ರೂಪು, ಸಂಬಂಧಿಕರ, ಕ್ಲಾಸ್ ಮೇಟ್ ಗಳ ಗ್ರೂಪು.. ಇಂಥಾ ಹತ್ತಾರು ಗ್ರೂಪಿನ ನಡುವೆ ಇದೊಂದು ಹೊಸ ಗ್ರೂಪ್ ಬಂದಾಗ ಅಂಥಾ ವಿಶೇಷ ಅನಿಸದಿದ್ದರೂ ಆ ಗ್ರೂಪಿನೊಳಗಿರುವ ಸದಸ್ಯರನ್ನು ಗಮನಿಸಿದಾಗ ಇದು ಸ್ವಲ್ಪ ಬೇರೆ ಥರ ಇರಬಹುದಾ ಅನಿಸೋದಕ್ಕೆ ಶುರುವಾಯ್ತು. ಅಲ್ಲಿರುವವರಲ್ಲಿ ನಾಲ್ಕೈದು ಜನರೇಶನ್‌ನವರಿದ್ದರು. ಚಿಂತನೆಯಲ್ಲಿ, ಉದ್ಯೋಗದಲ್ಲಿ, ಬದುಕುವ ರೀತಿಯಲ್ಲಿ ವ್ಯತ್ಯಾಸ ಇತ್ತು. ಆದರೆ ‘ಕಥಾ ವ್ಯಾಮೋಹಿಗಳು’ ಅನ್ನುವ ಕಾಮನ್ ಫ್ಯಾಕ್ಟರ್ ನಮ್ಮನ್ನೆಲ್ಲ ಒಂದು ಗ್ರೂಪಿನಡಿಗೆ ತಂದು ಬಿಟ್ಟಿತ್ತು. ಈ ಗ್ರೂಪ್ ಗೆ ಒಬ್ಬರೇ ಅಡ್ಮಿನ್ ಅದು ಗೋಪಾಲಕೃಷ್ಣ ಕುಂಟಿನಿ.  ಈ ಗ್ರೂಪಿನಲ್ಲಿದ್ದ ಇನ್ನೊಬ್ಬರು ಜೋಗಿ.

ಜೊತೆಗೆ ಸುಬ್ರಾಯ ಚೊಕ್ಕಾಡಿ ಅವರಂಥಾ ಹಿರಿಯ ಸಾಹಿತಿಗಳು ಕಿರಿಯರ ನಡುವೆ ಬೆರೆತು ಕತೆಗಾರಿಕೆಯ ಬಗ್ಗೆ, ಅದನ್ನು ಇನ್ನಷ್ಟು ತೀವ್ರವಾಗಿಸುವ ಬಗ್ಗೆ ತಿಳಿಸಿಕೊಡುತ್ತಾರೆ, ಕೆಲವು ಮಂದಿ ಸಂಸ್ಕೃತ ವಿದ್ವಾಂಸರು, ವಿಮರ್ಶಕ ಮನಸ್ಥಿತಿಯವರು, ಕ್ರಿಯೇಟಿವ್ ಯೋಚನೆಯ ಎಳೆಯ ಗೆಳೆಯರು.. ಹೀಗೆ ಇಂಟರೆಸ್ಟಿಂಗ್ ಅನಿಸುವ ಅನೇಕ ವ್ಯಕ್ತಿಗಳಿದ್ದರು.

ಕಾಲೇಜಲ್ಲಿದ್ದಾಗ ಕಥೆ ಬರೆದು ಪ್ರೈಜು ತಗೊಂಡಿದ್ದೆ. ಕಬೋರ್ಡ್ ಮೂಲೆಯ ಫೈಲ್‌ನೊಳಗಿದ್ದ ಒಂದಿಷ್ಟು ಸರ್ಟಿಫಿಕೇಟ್ ಗಳ ನಡುವೆ ಕತೆಗೆ ಪ್ರೈಸು ಬಂದ ಪ್ರಶಸ್ತಿ ಪತ್ರವೂ ವರ್ಷಕ್ಕೊಮ್ಮೆ ಕ್ಲೀನಿಂಗ್ ಮಾಡುವಾಗ ಹೊರಬಂದು ಹುಳ್ಳಗೆ ನಗು ಮೂಡಿಸಿ ಮತ್ತೆ ಫೈಲಿನೊಳಗೆ ಲೀನವಾಗುತ್ತಿತ್ತು. ಅಲ್ಲಿಗೆ ಕಥೆಗಾರ್ತಿ ಪಟ್ಟಕ್ಕೆ ನಿಟ್ಟುಸಿರಿನ ಶ್ರದ್ಧಾಂಜಲಿ. ಆದರೆ ಈ ನಿಟ್ಟುಸಿರು ಕತೆ ಬರೆಯುವ ಹುಮ್ಮಸ್ಸಾಗಿ ಬದಲಾಗುವ ಸೂಚನೆ ಸಿಕ್ಕಿದ್ದು ಕಥೆಕೂಟಕ್ಕೆ ಸೇರಿದಾಗ.

ಕಥೆಕೂಟಕ್ಕೆ ನಮ್ಮನ್ನು ಸೇರಿಸಿದಾಗ ವಿಧಿಸಿದ ಮೊದಲ ಷರತ್ತೇ ಕಥೆ ಬರೆಯಬೇಕು ಅನ್ನುವುದು. ಬರೆಯುವ ಕಥೆ ಹೇಗೇ ಇರಲಿ, ಆದರೆ ಪ್ರಯತ್ನ ಜೀವಂತವಾಗಿರಬೇಕಿತ್ತು. ಅಲ್ಲಿರುವ ಪ್ರತಿಯೊಬ್ಬರೂ ಸದಸ್ಯರ ಕಥೆಯ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯ ಹೇಳಬೇಕಾದ್ದು ಕಡ್ಡಾಯ. ಆ ಕತೆಗಳ ಬಗ್ಗೆ ಚರ್ಚೆ, ಆ ಕತೆಯಲ್ಲಿ ವಿಸ್ತರಿಸಬಹುದಾಗಿದ್ದ ಹೊಸ ಸಾಧ್ಯತೆಗಳ ಬಗ್ಗೆ ಮುಕ್ತ ಸಂವಾದ, ಇದಕ್ಕೆ ಪೂರಕವಾಗಿ ಓದಬೇಕಾದ ಕೃತಿಗಳ ಬಗ್ಗೆ ಪರಿಚಯ. ಫುಲ್ ಬ್ಯುಸಿ, ಟೈಮೇ ಇರ್ಲಿಲ್ಲ. ಆ ಪ್ರಾಬ್ಲೆಂ, ಮನೆ, ಜವಾಬ್ದಾರಿ ಹೀಗೆಲ್ಲ ಕಾರಣ ಹೇಳಿದರೆ ಅಡ್ಡಿಯಿಲ್ಲ. ಆದರೆ ಕಥೆಕೂಟದ ಈ ಚಟುವಟಿಕೆಗಳಲ್ಲಿ ಭಾಗವಹಿಸಲಾಗದಿದ್ದರೆ ಗ್ರೂಪಿಂದ ಹೊರಗೆ ಹೋಗಬೇಕು ಅಷ್ಟೇ. ಒಬ್ಬರ ಸೋಮಾರಿತನ ಇನ್ನೊಬ್ಬರ ಕಥಾ ಕಲಿಕೆಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅಡ್ಡಿ ಆಗಬಾರದು. ಇದರ ಜೊತೆಗೆ ಕತೆಯ ಮೇಲೆ ಹೊಸ ಹೊಸ ಪ್ರಯೋಗಗಳೂ ನಡೆಯುತ್ತಿದ್ದವು. ಅದಕ್ಕೆ ತಕ್ಕ ಮಾರ್ಗದರ್ಶನವೂ ಸಿಗುತ್ತಿತ್ತು.

ಕಥೆಯ ಅಗಾಧ ಸಾಧ್ಯತೆಯ ಬಗ್ಗೆ ನನಗೆ ಅರಿವಾದದ್ದು ಇಲ್ಲೇ. ಒಂದಿಷ್ಟು ಕತೆಗಳನ್ನು ಬರೆದ ಮೇಲೆ ನಾನೂ ಕತೆ ಬರೆಯಬಲ್ಲೆ ಅನ್ನುವ ಆತ್ಮವಿಶ್ವಾಸ ಬಂದದ್ದಂತೂ ನಿಜ. ಪಟ್ಟಾಗಿ ಕೂತು ಧ್ಯಾನಿಸಿದರೆ ಚೆನ್ನಾಗಿರುವ ಕತೆಗಳು ಈಗಲೂ ನನ್ನಿಂದ ಹೊರಬರಬಲ್ಲವು ಅನ್ನೋದರ ಅರಿವಾದದ್ದೂ ಸತ್ಯ.

ಆರಂಭದಲ್ಲಿ ಅತ್ಯುತ್ಸಾಹ, ಕೊಂಚ ದಿನಗಳ ಬಳಿಕ ನಿರುತ್ಸಾಹ, ಮತ್ತೆ ಮನೆ, ಆಫೀಸು, ಟೆನ್ಶನ್ ದಿನಚರಿ. ಆಗ ಸುಡುಗಣ್ಣಿನ ಇಮೋಜಿಯೊಂದು ಕಥೆಕೂಟದೊಳಗೆ ದುರುಗುಟ್ಟಿ ನೋಡುತ್ತಿತ್ತು. ಎಲ್ಲೆಲ್ಲೋ ಕಳೆದುಹೋದವರನ್ನೆಲ್ಲ ಮರಳಿ ಕಥೆಗಳ ಜಾತ್ರೆಗೆ ಕರೆದೊಯ್ಯುವ ಶಕ್ತಿ ಆ ಕಣ್ಣುಗಳಿಗೆ ಇರುತ್ತಿದ್ದವು. ಅದೂ ಇದೂ ಸಬೂಬು ಹೇಳುತ್ತಾ, ಮುಂದೆ ಉತ್ಸಾಹದಿಂದ ಪಾಲ್ಗೊಳ್ಳುವ ಪ್ರಾಮಿಸ್ ಮಾಡುತ್ತಾ ಎಲ್ಲರೂ ಕಥೆಗಳ ಧ್ಯಾನಕ್ಕೆ ಶರಣಾಗುತ್ತಿದ್ದೆವು.

ಇಲ್ಲಿ ಬರೀ ನಮ್ಮ ಕತೆಗಳಷ್ಟೇ ಅಲ್ಲ, ಆ ಹೊತ್ತಿನಲ್ಲಿ ಬಂದ ಹೊಸಬಗೆಯ, ಹೊಸತನದ ಕತೆಗಳ ಚರ್ಚೆಯೂ ಸಾಮಾನ್ಯ. ಜೊತೆಗೆ ಜಗತ್ತಿನ ಅತ್ಯುತ್ತಮ ಕತೆಗಳು, ಕ್ಲಾಸಿಕ್ ಗಳ ಬಗ್ಗೆ ಚರ್ಚೆ, ಲ್ಯಾಟಿನ್ ಅಮೆರಿಕನ್ ಕತೆಗಳ ಓದು ಇತ್ಯಾದಿಗಳೆಲ್ಲ ಕಥೆಗಳ ಬಗ್ಗೆ ನಮ್ಮ ಜ್ಞಾನ ಹೆಚ್ಚಿಸುವ ಜೊತೆಗೆ ನಮ್ಮ ಬರವಣಿಗೆಯ ಹದಗೊಳ್ಳುವಿಕೆಗೂ ಕಾರಣವಾಗುತ್ತಿದ್ದವು.

ಕಥೆಕೂಟ ಆರಂಭವಾದಂದಿನಿಂದ ಆ ದಿನಗಳಿಂದ ಈವರೆಗೆ ಅಂದರೆ ಕಳೆದ ಆರು ವರ್ಷಗಳಿಂದ ಕೂಟದಲ್ಲಿದ್ದೇನೆ. ಕತೆಗಳ ಓದು ನನ್ನ ತಿಳಿವಳಿಕೆ ಹೆಚ್ಚಿಸಿದೆ. ಕಥೆಯ ಬರವಣಿಗೆಯಲ್ಲಿ ಹದ ಸಿಗುತ್ತಿದೆ. ನನ್ನ ಹಾಗೆ ಹೊಸದಾಗಿ ಕಥಾ ಜಗತ್ತಿಗೆ ಅಡಿಯಿಟ್ಟ ಒಂದಿಷ್ಟು ಸದಸ್ಯರ ಕಥಾ ಸಂಕಲನಗಳೂ ಹೊರಬಂದಿವೆ. ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕೂಟದವರಲ್ಲಿ ಕಥೆಗಳ ವ್ಯಾಮೋಹ ಹೆಚ್ಚಾಗಿದೆ.

ಕಥೆಕೂಟ ಅಂದ್ರೆ ಪ್ರೀತಿ. ಕಥೆಕೂಟ ಅಂದ್ರೆ ಸ್ಫೂರ್ತಿ. ಕಥೆಕೂಟ ಇಲ್ಲದೇ ಹೋಗಿದ್ದರೆ ನಾನು ಕತೆಗಳನ್ನು ಬರೆಯುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಕಥೆಕೂಟದಿಂದಾಗಿಯೇ ನಾನು ಕತೆ ಬರೆಯುತ್ತಾ ಹೋದೆ. ಕಥೆಕೂಟ ನನ್ನ ಪಾಲಿಗೆ ಕೈಹಿಡಿದು ಮುನ್ನಡೆಸುವ ಪ್ರೇರಕ ಶಕ್ತಿ.
– ರಾಜೇಶ್ ಶೆಟ್ಟಿ

ಕಥೆ ಕೂಟದ ಬಗ್ಗೆ ಉದಯೋನ್ಮುಖ ಲೇಖಕಿ ಅನನ್ಯ ತುಷಿರಾ ಕೂಡ ಇದದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಕಥೆಗಳ ಹಾದಿಯ ತಿರುವುಗಳನ್ನು ತೋರಿಸುತ್ತ, ನನ್ನೊಳಗೇ ಮತ್ತೊಂದು ಲೋಕವನ್ನು ಸೃಷ್ಟಿಸಿಕೊಟ್ಟ ಕಥೆಕೂಟಕ್ಕೆ ಈಗ ೬ ನೇ ಹುಟ್ಟುಹಬ್ಬದ ಸಂಭ್ರಮ. ಒಂದು ಸಿದ್ಧ ಮಾದರಿಯ ಕಥಾ ಚೌಕಟ್ಟನ್ನು ಮುಂದಿರಿಸದೇ ತಮ್ಮ ಕಥೆಗಳಿಂದ, ತಮ್ಮ ಅನುಭವಗಳಿಂದ ನಮ್ಮನ್ನೂ, ನಮ್ಮ ಪುಟ್ಟ ಕಥಾ ಪ್ರಪಂಚವನ್ನು ಪೊರೆಯುತ್ತಿರುವ ಕೂಟ ಇದು’.

‘ಕಥೆಕೂಟ ನನ್ನ ಅಕ್ಷರಲೋಕದ ಪ್ರೀತಿಯ ತಾಣ. ಕಥೆಕೂಟ ನಳನಳಿಸುತ್ತಲೇ ಇರಲಿ, ನಮ್ಮೊಳಗಿನ ಕಥೆಗಳಿಗೆ ದ್ವನಿಯೊಂದು ತಾಕುತ್ತಲೇ ಇರಲಿ’ ಎಂದು ಹಾರೈಸುತ್ತಾರೆ.

ಕಥೆಕೂಟ ಸಮಾವೇಶ ವರ್ಷಕ್ಕೊಮ್ಮೆ ಆಗುವ ರೂಢಿ. ಮಕ್ಕಿತಿಟ್ಟ, ಹುಕ್ಲು, ಕುಂಟಿನಿ ಮೊದಲಾದೆಡೆ ಈಗಾಗಲೇ ಸಮಾವೇಶಗಳು ನಡೆದಿವೆ. ಈ ಸಮಾವೇಶ ಯಾವ ಲಿಟರರಿ ಫೆಸ್ಟಿವಲ್‌ಗಳಿಗೆ ಕಡಿಮೆ ಇಲ್ಲದ ಹಾಗೆ ನಡೆಯೋದು ವಿಶೇಷ. ಈ ಬಾರಿ ಬೆಂಗಳೂರಿಂದ ಒಂದೆರಡು ಗಂಟೆಗಳ ಪ್ರಯಾಣವಿರುವ ನೆಲಮಂಗಲ ಸಮೀಪದ ‘ಗುಬ್ಬಿಗೂಡು’ ರೆಸಾರ್ಟ್ ನಲ್ಲಿ ನಮ್ಮ ಕಥೆಕೂಟದ ಆರನೇ ವರ್ಷದ ಸಮಾವೇಶ ನಡೆಯುತ್ತಿದೆ.

ಸಮಾವೇಶದಲ್ಲಿ ಭಾಗವಹಿಸಲು ಎದುರು ನೋಡುತ್ತಿರುವ ಪ್ರಮೋದ್ ಹೆಗಡೆ ಕೂಡ  ಉತ್ಸಾಹದ ಮಾತುಗಳನ್ನು ಹೇಳುತ್ತಾರೆ. ‘ಕಥೆಕೂಟ ನನ್ನ ಪಾಲಿಗೆ ಮತ್ತೊಂದು ಮನೆಯಿದ್ದಂತೆ! ಇಲ್ಲಿನ ವಾತಾವರಣ ಅತ್ಯಂತ ಆತ್ಮೀಯವಾದದ್ದು. ಕಥೆಗಾರನಾಗಿ ಬೆಳೆಯಲು ಒಬ್ಬರಿಗೆ ಮತ್ತೊಬ್ಬರು ಮೆಟ್ಟಿಲು ಕಟ್ಟಿಕೊಡುತ್ತಾರೆ. ನಾನು ಮೊದಲೂ ಬರೆಯುತ್ತಿದ್ದೆ, ಆದರೆ ಬರವಣಿಗೆಗೆ ಶಿಸ್ತು ಬಂದಿದ್ದು ಕಥೆಕೂಟದಿಂದ’  ಎನ್ನುವ  ಅವರು ಈ  ಡಿಜಿಟಲ್ ವೇದಿಕೆಯ ಬಗ್ಗೆ ಅಭಿಮಾನ ಹೊಂದಿದವರು.

 

ಸಮಾವೇಶದ ಹೈಲೈಟ್ಸ್

ಮುಂಗಾರು ಮಳೆಯ ಆಗಮನದ ಹೊತ್ತಿಗೆ ಜೂನ್ ಕೊನೆಯ ವಾರ ಅಂದರೆ 25, 26ಕ್ಕೆ ಗುಬ್ಬಿಗೂಡಿನಲ್ಲಿ ನಡೆವ ಸಮಾವೇಶದಲ್ಲಿ ಅನೇಕ ವಿಶೇಷತೆ ಇದೆ. ಕನ್ನಡದ ಹೆಸರಾಂತ ನಿರ್ದೇಶಕ ಕಥೆಕೂಟದ ಸದಸ್ಯ ಬಿ ಎಸ್ ಲಿಂಗದೇವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷರು ಕಥೆಕೂಟದ ಅಡ್ಮಿನ್ ಗೋಪಾಲಕೃಷ್ಣ ಕುಂಟಿನಿ. ಜೋಗಿ ಅವರು ಈ ವೇಳೆ ‘ಕತೆ ಮತ್ತು ನಾನು’ ಅನ್ನುವ ವಿಷಯದ ಬಗ್ಗೆ ಮಾತನಾಡುತ್ತಾರೆ. ಇದು ಜೂನ್ ೨೬ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ. ಶನಿವಾರ ಸಂಜೆ ಮುಸ್ಸಂಜೆ ಕಥಾ ಪ್ರಸಂಗದಲ್ಲಿ ಉತ್ಸಾಹಿ ಕಥೆಗಾರರ ತಂಡ ಕಥೆಗಳ ಬಗ್ಗೆ ಚರ್ಚೆ ನಡೆಸಲಿದೆ. ಭಾನುವಾರ ಉದ್ಘಾಟನೆಯ ಬಳಿಕ ಕತೆಗಳ ಕಷ್ಟ ಸುಖದ ಬಗ್ಗೆ ಮಾತುಕತೆ, ನಮ್ಮೊಳಗೂ ಕತೆಗಳಿವೆ ಅನ್ನುವ ಬಗ್ಗೆ ಮಾತುಕತೆ, ಹುಟ್ಟಿದ ಕತೆ, ಕಟ್ಟಿದ ಕತೆ ಅನ್ನುವ ವಿಚಾರವಾಗಿ ಸಂವಾದ, ಓದು ಜನಮೇಜಯ ಎಂಬ ಕತೆಗಳ ಓದಿನ ಬಗೆಗಿನ ವಿಶಿಷ್ಟ ಚರ್ಚೆಗಳು ಮಧ್ಯಾಹ್ನದೊಳಗೆ ನಡೆಯಲಿವೆ. ಆ ಬಳಿಕ ಗೋಪಾಲಕೃಷ್ಣ ಕುಂಟಿನಿ ಹಾಗೂ ಜೋಗಿ ನೇತೃತ್ವದಲ್ಲಿ ಸಮಾರೋಪ ಸಮಾರಂಭ.

ಕಥೆಕೂಟದ ನೆಪದೊಂದಿಗೆ ಮೊದಲ ಬಾರಿಗೆ ಕತೆ ಬರೆದ ಸಚಿನ್ ತೀರ್ಥ ಹಳ್ಳಿ ಈ  ಕೂಟದಲ್ಲಿ ಕೇಳುವ ಕಿವಿಯಿದೆ ಎಂದು ಅಭಿಪ್ರಾಯಪಡುತ್ತಾರೆ.  ‘ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಕತೆಯನ್ನ ಜಗತ್ತಿಗೆ ಹೇಳಬೇಕು ಮತ್ತೂ ನಾನು ಹೇಳುವಾಗ ಅದು ತನ್ಮಯವಾಗಿ ಕೇಳಿಸಿಕೊಳ್ಳಬೇಕು ಎನ್ನುವ ಹಂಬಲವಿರುತ್ತದೆ. ಕತೆ ಎಲ್ಲರಲ್ಲೂ ಇರುತ್ತದೆ ಆದರೆ ನಿಂತು ಹೇಳುವ ವೇದಿಕೆ ಸಿಗುವ ಭಾಗ್ಯ ಕೆಲವರಿಗಷ್ಟೆ ಸಿಗುತ್ತದೆ. ಹಾಗೆ ನನ್ನ ಕತೆಗಳನ್ನ ಹೇಳಲು ಸಿಕ್ಕ ಅಪರೂಪದ ವೇದಿಕೆ ಕತೆಕೂಟ. ನಾನು ಕಂಡ ಕನಸು, ಬರೆದ ಪಾತ್ರಗಳು, ದಿನಗಟ್ಟಲೆ ಕಾಡಿದ ಸನ್ನಿವೇಶಗಳನ್ನ ಒಂದು ಚೌಕಟ್ಟಲ್ಲಿ ಕೂರಿಸಿ ಒಂದು ಕತೆ ಬರೆದು ಮುಗಿಸಿದಾಗ ನನ್ನಲ್ಲೊಂದು ಭಾವಾವೇಶ ತಾಂಡವವಾಡುತ್ತಿರುತ್ತದೆ. ಆ ಕತೆಯನ್ನ ಯಾರಾದರೂ ಓದಿದಾಗಲೇ ಮನಸ್ಸು ಒಂದು ತಹಬದಿಗೆ ಬರುವುದು. ಅಂತಹ ಅನೇಕ ಸಮಾಧಾನದ ಕ್ಷಣಗಳು ಕತೆಕೂಟ ಶುರುವಾದ ಮೊದಲ ದಿನದಿಂದಲೂ ನನಗೆ ದಕ್ಕಿದೆ’ ಎನ್ನುವ ಅವರು,  ನೂರಾರು  ನೆನಪುಗಳನ್ನ ಕೊಟ್ಟ ಕತೆಕೂಟಕ್ಕೀಗ ಆರನೇ ಹುಟ್ಟುಹಬ್ಬ.ಅದನ್ನು ಸೆಲೆಬ್ರೇಟ್ ಮಾಡಲು ಮತ್ತು ಈ ನೆಪದಲ್ಲಿ ಮೈಚಳಿ ಬಿಟ್ಟು ಮತ್ತೊಂದಿಷ್ಟು ಕತೆಗಳನ್ನು ಬರೆಯಲು ನಾನು ಕಾಯುತ್ತಿರುವೆ ಎಂದು ಉತ್ಸಾಹದ ಮಾತುಗಳನ್ನು ಹೇಳುತ್ತಾರೆ.