ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ. ಇವನ ಎದೆಯೊಳಗೂ ಎಂಥದೋ ಆತಂಕ ಕಳೆದ ನಿರಾಳತೆ. ಅವನ ಮುಖದ ಪ್ರಸನ್ನತೆಗೆ ಅರ್ಥವೇನೋ… ಮೂವರೂ ಮೌನವಾಗಿ ಆ ಕ್ಷಣದ ಆಪ್ಯಾಯತೆಯನ್ನು ಅನುಭವಿಸುತ್ತಿದ್ದಾರೆ. ಇವನನ್ನು ಮನೆ ಮುಟ್ಟಿಸಿದ ಅವನು ಇವನಿಂದ ಸಣ್ಣ ಕೃತಜ್ಞತೆಯನ್ನೂ ನಿರೀಕ್ಷಿಸದೆ ಹೊರಟೇ ಹೋಗುತ್ತಾನೆ.
ಆಶಾ ಜಗದೀಶ್ ಅಂಕಣ

 

ಎಲ್ಲರಿಂದೊಂದೊಂದು ಕಲಿತು ಎನ್ನುವ ಹಾಗೆ ಒಂದೊಂದನ್ನು ಕಲಿಸಿದ ಮಾನಸಿಕ ಗುರುಗಳಲ್ಲಿ ಜಯಂತರೂ ಒಬ್ಬರು. ಅವರ ಕವಿತೆಗಳು ನನಗೆ ಕವಿತೆಗಳನ್ನು ಹೇಗೆ ಬರೆಯಬೇಕೆಂಬುದನ್ನು ಕಲಿಸಿಕೊಟ್ಟಿವೆ. ಸಾಹಿತ್ಯವನ್ನು ಅನುಭೂತಿಯಾಗಿ ಅನುಭವಿಸುವಂತೆ ಮಾಡಿ, ಎದೆಯ ನೇವರಿಸಿವೆ. ಕುವೆಂಪು, ಬೇಂದ್ರೆ, ಅಡಿಗರು, ಎ.ಕೆ. ರಾಮಾನುಜನ್ ಅವರು, ಕೆ.ವಿ.ತಿರುಮಲೇಶರು… ಹೀಗೆ ತಮ್ಮ ಸಂಪರ್ಕಕ್ಕೆ ಬರುವ ಎಲ್ಲವನ್ನೂ ಸೆಳೆದುಕೊಳ್ಳುವ ನಂತರ ಒಳಗೊಳ್ಳುವ ಕವಿತೆಗಳನ್ನು ಬರೆದವರ ಪಟ್ಟಿಯಲ್ಲಿ ಜಯಂತರದೂ ವಿಶಿಷ್ಟ ಸ್ಥಾನ. ಅವರ ಕವಿತೆಗಳ ಸೂಕ್ಷ್ಮತೆ, ನವುರಾದ ಭಾವದ ಗಟ್ಟಿ ನಿಲುವು ಸೋಜಿಗಗೊಳಿಸುತ್ತವೆ. ನಗರ ಜೀವನದ ಅತ್ಯಾಧುನಿಕತೆ ಈ ಕವಿತೆಗಳಿಗೆ ಹಾಸುಹೊಕ್ಕು, ಮುಂಬೈ ಭಾಷೆಯನ್ನು ಬ್ಲೆಂಡ್ ಮಾಡಿಕೊಂಡು ಮತ್ತಷ್ಟು ಆಳ ಎನಿಸುವಷ್ಟು ಗಾಢವಾಗುವ ರೀತಿ ಬಹಳ ತೀವ್ರ.

ಜಯಂತರು ‘ಒಂದು ಜಿಲೇಬಿ’ ಕವನ ಸಂಕಲನವನ್ನು ಅರ್ಪಿಸಿರುವ ರೀತಿ ನನಗೆ ಬಹಳ ಇಷ್ಟವಾಗಿತ್ತು.

“ಬೇಡ ಸರ್ ನಾನು ನಿಮ್ಮ ಹಳೇ ವಿದ್ಯಾರ್ಥಿ ಸರ್ ಎಂದರೂ
ಅವರು ಬಹುವಚನ ಕೊಟ್ಟು ತೆಪ್ಪಗೆ ನೋಡುತ್ತಿದ್ದಾರೆ
ಎರೆಡು ಬಿಗಿಯಿರಿ ಸರ್ ದಯವಿಟ್ಟು
ಪ್ರೀತಿಯ ಪೆಟ್ಟು ತಿಂದು ಯುಗವಾಯಿತು ಸರ್”
-ಒಂದು ಜಿಲೇಬಿ

“ಮೂವತ್ತೈದು ವರ್ಷಗಳ ಹಿಂದೆ
ನನಗೆ ಕವಿತೆಯ ರುಚಿ ಹತ್ತಿಸಿದ
ಗಂಗಾಧರ ಚಿತ್ತಾಲರ “ಹರಿವ ನೀರಿದು”
ಎ.ಕೆ. ರಾಮಾನುಜನ್ ರ “ಹೊಕ್ಕುಳಲ್ಲಿ ಹೂವಿಲ್ಲ”
ಕೆ.ವಿ. ತಿರುಮಲೇಶರ “ಮುಖಾಮುಖಿ”
ಸಂಕಲನಗಳಿಗೆ…”
-ಒಂದು ಜಿಲೇಬಿ

ವಿನಾಕಾರಣ ಬದುಕಿಗೆ ಇಣುಕುವ ಅದೆಷ್ಟೋ ಜನರು ಯಾಕೆ ಸಿಕ್ಕರು, ಮತ್ತೆ ಅದ್ಯಾಕೆ ಅವಸರವಸರವಾಗಿ ಎದ್ದು ಹೋದರು ಎಂದು ಅಷ್ಟೇ ವಿನಾಕಾರಣ ಪೇಚಾಡಿಕೊಳ್ಳುವಂತೆ ಮಾಡಿಬಿಡುತ್ತಾರೆ. ಅವರ ಇಣುಕಿಗೊಂದು ಅಸ್ತಿತ್ವವಿಲ್ಲ ಅನಿಸುವ ಹೊತ್ತಲ್ಲೇ ಮುರಿದ ಹುಳುಕು ಹಲ್ಲಿನ ಉಳಕೊಂಡ ಬೇರಿನಂತೆ ಆಗಾಗ ಕಾಡುವ ಅವರ ನೆನಪು ಹೀಗೂ ಉಳಿಯುವ ಸಾಧ್ಯತೆಗೆ ಕನ್ನಡಿಯಾಗಿ ನಿಲ್ಲುತ್ತದೆ.

ಆದರೆ ಕಿರುಬೆರಳಾಗಿ ನಡೆಸಿದವರ ಹಂಗು ಸಾಗಿಹೋದ ಹೆಜ್ಜೆಗಳ ಸಾಲಿಗಾದರೂ ಏಕೆ, ಯಾವಾಗಲೂ ಪರ್ಫೆಕ್ಟ್ ಅನಿಸಿಕೊಳ್ಳುವ, ಸ್ವಾಭಾವಿಕ ಆಕಾರವನ್ನು ಒಪ್ಪಿಕೊಳ್ಳದೆ ಟ್ರಿಮ್ಮಿಸಿಕೊಂಡು ಪಾಚುಗಟ್ಟಿದ ಹಲ್ಲ ಬಿಳುಪನ್ನು ಬೆಳದಿಂಗಳಿಗೆ ಹೋಲಿಸಿಕೊಳ್ಳುವ ತಿಕ್ಕಲುತನದ ಜಗತ್ತಿಗೆ ಜನರಿಗೆ ತಮಗೆ ಬೇಡವೆನಿಸಿದ್ದನ್ನು ಕತ್ತರಿಸುವುದು ಆತ್ಮಸಾಕ್ಷಿಗೆ ನಿಲುಕದ ಕೌಶಲ. ಹಾಗಾಗಿ ನಾವು ಬೇಕಾಗೇ ಜೌಗಾಗುತ್ತೇವೆ… ಸ್ವಾಭಾವಿಕ ಭಾವಗಳ ಪಸೆ ಆರಿ ಶುಷ್ಕರಾಗತೊಡಗುತ್ತೇವೆ.

ನಮಗೆ ಒಳ್ಳೆಯವರು ಎನ್ನುವ ಹಣೆಪಟ್ಟಿಹಚ್ಚಿಕೊಳ್ಳುವ ಹುಚ್ಚು. ಒಳ್ಳೆಯ ಕೆಟ್ಟ ಎನ್ನುವ ಹೆಸರುಗಳ ಮಾಯೆಯಾದರೂ ಏನು? ಜಗತ್ತು ತನಗೆ ಬೇಕಾದ್ದನ್ನು ಒಳ್ಳೆಯದು ಎನ್ನುತ್ತದೆ, ತನಗೆ ಬೇಡದ್ದನ್ನು ಕೆಟ್ಟದ್ದು ಎಂದು ತಳ್ಳಿಹಾಕುತ್ತದೆ. ಆದರೆ ಅದರ ರೀತಿ ನೀತಿ ಜೀವಪರ ಎನ್ನುವುದಕ್ಕಿಂತಲೂ ನಿಷ್ಠುರವೇ ಹೆಚ್ಚು.

ಈಗ ಒಂದು ಸಣ್ಣ ಸಿಚುವೇಶನ್ ನೋಡಿ. ಜೋರು ಮಳೆ ಬರ್ತಿದೆ. ಪುಟ್ಟ ಹುಡುಗನೊಬ್ಬ ನೆನೆಯುತ್ತಾ ಮನೆ ಕಡೆ ಓಡುತ್ತಿರುತ್ತಾನೆ. ದಾರಿ ಮಧ್ಯೆ, ರಸ್ತೆ ಬದಿ ನಿಲ್ಲಿಸಿದ ಕಾರಿನ ಕೆಳಗೆ ಪುಟ್ಟ ನಾಯಿಮರಿಯೊಂದು ಭಯದಿಂದ ಕುಯ್ಗುಡುತ್ತಾ ಹೆದರಿ ನಡುಗುತ್ತಾ ಕೂತಿದೆ. ಇದನ್ನು ನೋಡಿದ ಹುಡುಗನಿಗೆ ಒಂದು ಕ್ಷಣ ಅಯ್ಯೋ ಪಾಪಚ್ಚಿ ಎನಿಸಿ ಅದನ್ನು ಮುದ್ದು ಮುದ್ದಾಗಿ ಎದೆಗವಚಿಕೊಂಡು ತಾನು ನೆನೆಯುತ್ತಿದ್ದರೂ, ಅದನ್ನು ನೆನೆಯದಂತೆ ತಬ್ಬಿಕೊಂಡು ನಡೆಯತೊಡಗುತ್ತಾನೆ.

ವಿನಾಕಾರಣ ಬದುಕಿಗೆ ಇಣುಕುವ ಅದೆಷ್ಟೋ ಜನರು ಯಾಕೆ ಸಿಕ್ಕರು, ಮತ್ತೆ ಅದ್ಯಾಕೆ ಅವಸರವಸರವಾಗಿ ಎದ್ದು ಹೋದರು ಎಂದು ಅಷ್ಟೇ ವಿನಾಕಾರಣ ಪೇಚಾಡಿಕೊಳ್ಳುವಂತೆ ಮಾಡಿಬಿಡುತ್ತಾರೆ. ಅವರ ಇಣುಕಿಗೊಂದು ಅಸ್ತಿತ್ವವಿಲ್ಲ ಅನಿಸುವ ಹೊತ್ತಲ್ಲೇ ಮುರಿದ ಹುಳುಕು ಹಲ್ಲಿನ ಉಳಕೊಂಡ ಬೇರಿನಂತೆ ಆಗಾಗ ಕಾಡುವ ಅವರ ನೆನಪು ಹೀಗೂ ಉಳಿಯುವ ಸಾಧ್ಯತೆಗೆ ಕನ್ನಡಿಯಾಗಿ ನಿಲ್ಲುತ್ತದೆ.

ಆಗ ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ. ಇವನ ಎದೆಯೊಳಗೂ ಎಂಥದೋ ಆತಂಕ ಕಳೆದ ನಿರಾಳತೆ. ಅವನ ಮುಖದ ಪ್ರಸನ್ನತೆಗೆ ಅರ್ಥವೇನೋ… ಮೂವರೂ ಮೌನವಾಗಿ ಆ ಕ್ಷಣದ ಆಪ್ಯಾಯತೆಯನ್ನು ಅನುಭವಿಸುತ್ತಿದ್ದಾರೆ. ಇವನನ್ನು ಮನೆ ಮುಟ್ಟಿಸಿದ ಅವನು ಇವನಿಂದ ಸಣ್ಣ ಕೃತಜ್ಞತೆಯನ್ನೂ ನಿರೀಕ್ಷಿಸದೆ ಹೊರಟೇ ಹೋಗುತ್ತಾನೆ. ನಂತರದ ದಿನಗಳಲ್ಲಿ ಇವನ್ಯಾರೋ ಅವನ್ಯಾರೋ… ಆದರೆ ಇಂದಿಗೂ ಅವನೊಳಗೆ ಇವನು ಇವನೊಳಗೆ ಅವನು ದಾಖಲಾಗದ ಸತ್ಯ….

ಹೀಗೆ ಹಾಜರಿ ಹಾಕಿ ಗೈರಾಗುವವರ ಬಗ್ಗೆ ದಾಖಲಿಸುವುದಿರಲಿ ಮನಸಿನಿಂದ ಮುಟ್ಟಲಿಕ್ಕೂ ಹೆದರುವ ಮನಸ್ಥಿತಿಯ ಬಗ್ಗೆ ನಿಜಕ್ಕೂ ಅರ್ಥಹೀನ ಬದುಕು ಎಂದರೆ ಇದೇ ಇರಬೇಕು ಅನಿಸಿಬಿಡುತ್ತದೆ. ಹೀಗಿರುವಾಗ ಜಯಂತರ ಪ್ರತಿ ಬರಹವೂ (ಕಥೆ ಕವಿತೆ ಲೇಖನ…) ಅಂತಹ ಅದೆಷ್ಟೋ ಅನುಭವವಾದ ವ್ಯಕ್ತಿಗಳನ್ನು ದಾಖಲಿಸುತ್ತವೆ… ಬದುಕನ್ನು ಹೀಗೂ ನೋಡಬಹುದಲ್ಲ ಎನ್ನುವ ಅನಂತ ಕೋನವನ್ನು ತೆರೆದಿಡುತ್ತವೆ. ಈ ಕಾರಣಕ್ಕೇ ಜಯಂತರೆಂದರೆ ಅಸಾಧ್ಯ ಪ್ರೀತಿ.

“ಆದರೆ ಆತ ಬಂದಿದ್ದಾಗ ಬರೇ ಕಡೆಗಣ್ಣಿಂದ ನೋಡಿ
ಎಲ್ಲ ಒಂದಿಂಚು ಹಿಂದುಳಿದೆವಲ್ಲ
ಬೆಂಗಡೆ ಮೆಲ್ಲಗವ ಇಳಿದು ಹೋದದ್ದು
ತಿಳಿದೂ ಸುಮ್ಮನಿದ್ದೆವಲ್ಲ
ಬೇಕಿದ್ದ ಎಳೆ ಅವನಿಗೆ ಸಿಕ್ಕಿದ್ದಿದ್ದರೆ…”
-ಅಂಚು

ಎಂದು ಅವರು ಮಿಡುಕಿ ಬರೆಯುವಾಗ ನಾವಿಲ್ಲಿ ನೆನೆಯುತ್ತೇವೆ. ಅವರ ಬೊಗಸೆಯಲ್ಲಿ ಮಳೆ, ಒಂದು ಜಿಲೇಬಿ, ಶ್ರಾವಣ ಮಧ್ಯಾಹ್ನ, ಮುಬೈನ ಕಥಾನಕಗಳು, ಅನೇಕ ಸಣ್ಣಕತೆಗಳು…. ಯಾವೆಲ್ಲ ಏನೆಲ್ಲಾ ಎಷ್ಟೆಲ್ಲ ಎದೆಕೋಣೆಗಳ ಭಿತ್ತಿಗಳ ತಿದಿ ಒತ್ತಿವೆಯೋ….

“ಸ್ವಪ್ನದಲ್ಲಿ ಅಳುತ್ತಿದ್ದವರು
ಬೆಚ್ಚಿ ಕೂತಿದ್ದೀರಿ ಎದ್ದು
ಕಣ್ಣಂಚಿನಲ್ಲಿ ಕಂಬನಿಯಿದೆ ನೋಡಿ
ಹೇಳಿ ಸಾರ್ ಈ ಪುಟ್ಟ ಕೋರಾ ಕಂಬನಿ
ಯಾವ ಲೋಕದ್ದು…”

ಜಯಂತರ ಕವಿತೆಗಳೂ ಸಹ ಅವರ ಕವಿತೆಯ ಸಾಲುಗಳಂತೆಯೇ ಈ ಲೋಕದವು ಅಂತನಿಸುವುದೇ ಇಲ್ಲ… ಅವರ “ಹೆಸರು” ಕವಿತೆ ಓದಿಯಾದ ಮೇಲೆ ಮ್ಲಾನವಾಗಿ ಕುಳಿತವಳು ಮತ್ತಷ್ಟು ಕವಿತೆಗಳ ಗುಂಗು ಹಚ್ಚಿಕೊಳ್ಳುತ್ತಾ ಮತ್ತಷ್ಟು ಬರೆಯುವ ಹುಕಿಗೆ ಬಿದ್ದದ್ದು ಸುಳ್ಳಲ್ಲ… ಒಂಚೂರೂ ಸಮಯ ಕೊಡದ ಒತ್ತಡದ ಬದುಕನ್ನು ಹಿಗ್ಗಾಮುಗ್ಗಾ ಬಯ್ದದ್ದು ಸುಳ್ಳಲ್ಲ… ಒಂದೊಂದೇ ಕ್ಷಣವನ್ನು ಹುಂಡಿಗೆ ಹಾಕಿಡುತ್ತಾ ಮತ್ತೆ ಬರೆಯುವ ಅವಧಿಗಾಗಿ ಕೂಡಿಡುತ್ತಿರುವುದೂ ಸುಳ್ಳಲ್ಲ…

(ಮುಂದುವರಿಯುತ್ತದೆ..)