”ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು. ತೂತುಗಳಿಂದ ನೀರು ಹೊಕ್ಕಿತು. ಗಟ್ಟಿಮುಕ್ಕಾಲುಗಳ ಭಾರದಿಂದ ದೋಣಿಗಳೆಲ್ಲ ನಡುಹೊಳೆಯ ಗಯದಲ್ಲಿ ದಂಡಿನೊಂದಿಗೆ ಮುಳುಗಿದುವು”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹನ್ನೊಂದನೆಯ ಕಥಾನಕ ಈ ಭಾನುವಾರದ ನಿಮ್ಮ ಓದಿಗಾಗಿ.

 

ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ಮಂಗಳೂರಲ್ಲಿ ಕರಣಿಕ ದೇವಪ್ಪಯ್ಯನು ಒಬ್ಬ ಗಣ್ಯ ವ್ಯಕ್ತಿ. ಕ್ರಿ.ಶ. 1830ರ ಕಾಲಕ್ಕೆ ಅವನು ಹಜೂರು ಶಿರಸ್ತೇದಾರನಾಗಿದ್ದನು. ಅಂದಿನ ದಿನಗಳಲ್ಲಿ ಹಜೂರು ಶಿರಸ್ತೇದಾರನೆಂದರೆ ಒಬ್ಬ ತುಂಡರಸು ಇದ್ದ ಹಾಗೆ. ಊರಿನ ಎಲ್ಲ ಮಾನ ಮರ್ಯಾದೆಗಳು ಮುಂದಾಗಿ ಅವನಿಗೇ ಸಲ್ಲುತ್ತಿದ್ದುವು. ಅದರಲ್ಲಿಯೂ ದೇವಪ್ಪಯ್ಯನು ತನ್ನ ಗುಣಾತಿಶಯಗಳಿಂದ ಇಡೀ ಜಿಲ್ಲೆಯ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದನು.

ಅವನು ಕನ್ನಡ, ಮರಾಠಿ, ಪಾರ್ಶಿ ಭಾಷೆಗಳನ್ನು ಬಲ್ಲವನಾಗಿದ್ದನು. ಹುದ್ದೆಗೆ ಸೇರಿದ ಮೇಲೆ ಇಂಗ್ಲಿಷ್ ಅಧಿಕಾರಿಗಳ ಒಡನಾಟದಿಂದ ಇಂಗ್ಲಿಷನ್ನೂ ತಕ್ಕಷ್ಟು ಕಲಿತುಕೊಂಡಿದ್ದನು. ಉದ್ಯೋಗದಲ್ಲಿ ಬಹು ಪರಿಶ್ರಮಿಯಾಗಿದ್ದುದರಿಂದ ಅಧಿಕಾರಿಗಳ ಮೆಚ್ಚನ್ನು ಪಡೆದಿದ್ದನು. ಧೀರನೂ ಗುಣವಂತನೂ ಆಗಿ ಊರಲ್ಲೆಲ್ಲ ತನ್ನ ವರ್ಚಸ್ಸನ್ನು ಬೀರಿದ್ದನು. ಅವನ ಶಿಸ್ತು, ಕ್ರಮ, ಓಜೆಗಳು ಆಗಿನ ಕಲೆಕ್ಟರಿಗೆ ಚೆನ್ನಾಗಿ ಹಿಡಿಯುತ್ತಿದ್ದುದರಿಂದ ಕಚೇರಿಯಲ್ಲಿ ಅವನ ಮಾತು ನಡೆಯುತ್ತಿತ್ತು. ಕಲೆಕ್ಟರನ ಬಲಗೈಯಾಗಿ ಹಜೂರಿನ ಪಾರುಪತ್ಯವೆಲ್ಲ ಅವನ ಕೈಯಲ್ಲೇ ಇತ್ತು. ಆದರೂ ಅವನ ಅಧಿಕಾರದ ಕಾಲವು ಬಹು ಬಿಕ್ಕಟ್ಟಿನದಾಗಿದ್ದುದರಿಂದ ಹಲವು ಗಂಡಾಂತರಗಳನ್ನು ಇದಿರಿಸಬೇಕಾಗಿತ್ತು.

ಕ್ರಿ.ಶ. 1834ರಲ್ಲಿ ಇಂಗ್ಲೀಷರು ದೊಡ್ಡ ಸೈನ್ಯವನ್ನು ಕಳುಹಿಸಿ, ಕೊಡಗಿನ ವೀರರಾಜೇಂದ್ರ ಒಡೆಯನನ್ನು ಸೆರೆಹಿಡಿದು, ಕೊಡಗು ಸೀಮೆಯನ್ನು ಸ್ವಾಧೀನಪಡಿಸಿಕೊಂಡು ಅಮರ, ಸೂಳ್ಯ, ಪಂಜ, ಬೆಳ್ಳಾರೆ ಮಾಗಣೆಗಳನ್ನು ಕನ್ನಡ ಜಿಲ್ಲೆಗೆ ಸೇರಿಸಿಕೊಂಡರು. ಕೊಡಗು ಅಧಿಕಾರಿಗಳನ್ನು ತೆಗೆದು ಇಂಗ್ಲೀಷು ಅಧಿಕಾರಿಗಳನ್ನು ನೇಮಕ ಮಾಡಿದರು. ಇದರಿಂದ ನಾಲ್ಕು ಮಾಗಣೆಗಳ ಕೊಡಗರಿಗೆ ಬೇಸರ ಹುಟ್ಟಿತು. ಅದೇ ಸಮಯಕ್ಕೆ ಭೂಕಂದಾಯವನ್ನು ನಗದಿಯಿಂದ ತೆರಬೇಕೆಂದು ಸರಕಾರದ ಹುಕುಮ್ ಹೊರಟಿತು. ಇದರಿಂದ ರೈತರೆಲ್ಲ ಕಂಗಾಲಾದರು. ಅಂದಿನ ದಿನಗಳಲ್ಲಿ ರೈತರಿಗೆ ಹಣ ವಟಾಯಿಸುವುದು ಕಷ್ಟವಾಗಿತ್ತು. ಸ್ವಲ್ಪ ಹಣಕ್ಕೆ ತುಂಬ ಧಾನ್ಯ ಕೊಡಬೇಕಾಗಿತ್ತು. ಅಷ್ಟು ಧಾನ್ಯವನ್ನು ಸಾಹುಕಾರರಲ್ಲದೆ ಬೇರೆ ಯಾರು ಕೊಂಡುಕೊಳ್ಳುವವರಿರಲಿಲ್ಲ. ಸಾಹುಕಾರರು ಅತ್ಯಲ್ಪ ಬೆಲೆಗೆ ರಾಶಿ ಧಾನ್ಯವನ್ನು ಪಡೆದು ಹೇರಳ ಲಾಭ ಹೊಡೆಯುತ್ತಿದ್ದರು. ರೈತರು ತಾವು ಬೆಳೆಸಿದ ಧಾನ್ಯವನ್ನೆಲ್ಲ ಸಾಹುಕಾರರಿಗೆ ಅಳತೆಕೊಟ್ಟು, ಸಿಕ್ಕಿದ ಹಣವನ್ನು ತೀರ್ವೆಗೆ ತುಂಬಿಸಿ, ಮಿಗತೆ ಧಾನ್ಯ ಹೊಟ್ಟೆಗೆ ಸಾಲದೆ ಪೇಚಾಡುತ್ತಿದ್ದರು. ಇದರೊಂದಿಗೆ ಸರ್ಕಾರದವರು ಉಪ್ಪಿನ ಮೇಲೆ ಕರಹೊರಿಸಿ ಉಪ್ಪಿನ ಕೋಟಿಗಳನ್ನು ತೆರೆದರು. ಹೊಗೆಸೊಪ್ಪು ಮಾರಾಟದ ಗುತ್ತಿಗೆಯನ್ನು ಏರ್ಪಡಿಸಿದರು. ಇದರಿಂದೆಲ್ಲ ಪ್ರಜೆಗಳು ಮನನೊಂದಿದ್ದರು.

ಹೀಗೆ ಮನನೊಂದ ಜನರ ಒಂದು ಪಂಗಡವು ದಿನದಿಂದ ದಿನಕ್ಕೆ ಬೆಳೆಯುತ್ತಾ ಬಂತು. ಎಂತಾದರೂ ಕೊಡಗನ್ನು ಹಿಂದೆ ಪಡೆದು ಸ್ವತಂತ್ರವಾಗಿ ಆಳಬೇಕೆಂದು ಸಂಚು ಹೂಡಿತು. ಏಳು ಸಾವಿರ ಸೀಮೆಯ ಪುಟ್ಟಬಸಪ್ಪನೆಂಬ ಜಂಗಮನು, ಕಲ್ಯಾಣ ಸ್ವಾಮಿ ನಂಜುಂಡರಸು ಎಂಬ ಹೆಸರನ್ನಿಟ್ಟುಕೊಂಡು, ತಾನು ಕೊಡಗಿನ ಅರಸು ಪೀಳಿಗೆಯವನೆಂದೂ ಪಟ್ಟಕೆ ಹಕ್ಕುದಾರನೆಂದೂ ಬಹಿರಂಗಪಡಿಸಿದನು. ಅಮರ, ಸೂಳ್ಯ, ಪಂಜ, ಬೆಳ್ಳಾರೆ, ನಾಲ್ಕು ಮಾಗಣೆಗಳ ಜನರು ಅವನನ್ನು ಸೇರಿಕೊಂಡರು. ಕಷ್ಟಕ್ಕೀಡಾಗಿದ್ದ ರೈತರೂ ಅವನ ಪಕ್ಷ ಹಿಡಿದರು.

ಕಲ್ಯಾಣಸ್ವಾಮಿಯನ್ನು ಹೀಗೆ ಒಂದು ದೊಡ್ಡ ದಂಡನ್ನು ಕೂಡಿಸಿಕೊಂಡು ಬೆಳ್ಳಾರೆಗೆ ಹೋಗಿ ಸರಕಾರಿ ಖಜಾನೆಯನ್ನು ಒಡೆದನು. ಊರನ್ನೆಲ್ಲ ಸುಲಿಗೆ ಮಾಡಿ, ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಹೋಗಿ, ಅಲ್ಲಿಂದ ಪುತ್ತೂರಿಗೆ ಹೊರಟನು. ಹೋದಲ್ಲೆಲ್ಲ “ನಾವು ಮೂರು ವರ್ಷಗಳವರೆಗೆ ಭೂಕಂದಾಯವನ್ನು ಎತ್ತುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಉಪ್ಪು ಮತ್ತು ಹೊಗೆಸೊಪ್ಪು ಮಾರಾಟದ ಗುತ್ತಿಗೆಯನ್ನು ರದ್ದುಗೊಳಿಸುವೆವು. ಬೇರೆ ಕಡೆಗಳಲ್ಲಿ ಬ್ರಿಟಿಷ್ ಅಧಿಕಾರವು ಅಡಗಿದೆ. ಇಲ್ಲಿಯೂ ಸದ್ಯದಲ್ಲಿಯೇ ಅಡಗುವುದು. ಆದುದರಿಂದ ನಮ್ಮಲ್ಲಿ ವಿಶ್ವಾಸವಿಟ್ಟು ಕೊಡ್ಗಿ ಅರಸುತನದಲ್ಲಿ ಭಕ್ತಿಯಿಟ್ಟು ಪ್ರಜೆಗಳೆಲ್ಲ ನಮ್ಮನ್ನು ಸೇರಿಕೊಳ್ಳುವುದು ಲೇಸು! ಲೇಸು!!” ಎಂದು ಇಸ್ತಿಹಾರನ್ನು ಪ್ರಕಟಿಸಿದನು.

ಉಪ್ಪಿನಂಗಡಿಯ ತಹಸಿಲ್ದಾರನು ಈ ವರ್ತಮಾನ ಕೇಳಿ ಮಂಗಳೂರಿನಲ್ಲಿದ್ದ ಕಲೆಕ್ಟರನಿಗೆ ವರದಿಕೊಟ್ಟನು. ಕಲೆಕ್ಟರನು ಗಾಬರಿಗೊಂಡು ಏನು ಮಾಡುವುದೆಂದು ಕರಣಿಕ ದೇವಪ್ಪಯ್ಯನೊಡನೆ ಆಲೋಚಿಸಿದನು. ಧೈರ್ಯಶಾಲಿಯಾದ ದೇವಪ್ಪಯ್ಯನು ಕಾಟಕಾಯಿಯನ್ನು ಇದಿರಿಸುವುದೇ ಸರಿಯೆಂದನು. ಕಲೆಕ್ಟರನಿಗೂ ಅದು ಒಪ್ಪಿಗೆಯಾಯಿತು. ದೇವಪ್ಪಯ್ಯನು ಕೂಡಲೇ ಕಚೇರಿಯ ಎಲ್ಲ ಜವಾನರನ್ನು ಕೂಡಿಸಿ, ಅವರನ್ನು ಹುರಿದುಂಬಿಸಿ, ಬಡ್ತಿಯ ಆಸೆಯನ್ನು ಹುಟ್ಟಿಸಿ, ಕಾಟಕಾಯಿಯನ್ನು ಅಡಗಿಸುವ ಪ್ರಯತ್ನ ಮಾಡಬೇಕೆಂದು ಬೋಧಿಸಿದನು. ದೇವಪ್ಪಯ್ಯನ ಮಾತು ಎಲ್ಲರಿಗೂ ಸಮ್ಮತವಾಯಿತು. ಕೂಡಲೇ ಕತ್ತಿ, ದೊಣ್ಣೆ, ಕೊಡಲಿ, ಕಠಾರಿಗಳನ್ನು ತೆಗೆದುಕೊಂಡು, ಕಚ್ಚೆ ಬಿಗಿದು ಅಣಿಯಾದರು. ಅವರನ್ನೆಲ್ಲ ಕರೆದುಕೊಂಡು ಕಲೆಕ್ಟರು ಮತ್ತು ದೇವಪ್ಪಯ್ಯ ತರಾತುರಿಯಿಂದ ಪುತ್ತೂರಿನ ದಾರಿಯನ್ನು ಹಿಡಿದರು. ಪುತ್ತೂರನ್ನು ಸೇರಿ ಕಚೇರಿ ನಡೆಸುವಷ್ಟರಲ್ಲಿ ಕಲ್ಯಾಣಸ್ವಾಮಿಯು ದೊಡ್ಡ ದಂಡಿನೊಡನೆ ಪುತ್ತೂರನ್ನು ಸಮೀಪಿಸಿದನೆಂಬ ಸುದ್ದಿ ಬಂತು. ಈ ಸುದ್ದಿಯನ್ನು ಕೇಳಿ ಕಲೆಕ್ಟರನು ದೇವಪ್ಪಯ್ಯನಿಗೆ ಪುತ್ತೂರಿನ ಜವಾಬುದಾರಿಯನ್ನು ವಹಿಸಿಕೊಟ್ಟು, ತಾನು ಹಜೂರು ಬಂದೋಬಸ್ತಿಗೆ ಹೋಗುವೆನೆಂದು ಕುದುರೆ ಹತ್ತಿಕೊಂಡು ಹಿಂತೆರಳಿಬಿಟ್ಟನು.

ಪುತ್ತೂರಿನ ಜವಾಬುದಾರಿಯೆಲ್ಲ ದೇವಪ್ಪಯ್ಯನ ಮೇಲೆ ಬಿತ್ತು. ಪಾಪ ಅವನು ಹತ್ತಾರು ಪೇದೆಗಳನ್ನು ಕಟ್ಟಿಕೊಂಡು ಏನು ಮಾಡಬಲ್ಲನು? ಕಾಟಕಾಯಿಯ ಕುರಿತು ಹಲವು ಭಯಂಕರ ಸುದ್ದಿಗಳು ಬರುತ್ತಿದ್ದುವು. ಧೀರನಾದ ದೇವಪ್ಪಯ್ಯನು ಸ್ವಲ್ಪವೂ ಹೆದರಲಿಲ್ಲ. ಖಜಾನೆಯ ಹಣವನ್ನೆಲ್ಲ ತೆಗೆದು, ಯಾರಿಗೂ ತಿಳಿಯದಂತೆ ಬಚ್ಚಿಟ್ಟು ಬರಿಯ ಖಜಾನೆಗೆ ಬೀಗ ಮುದ್ರೆ ಹಾಕಿದನು. ಮುಖ್ಯ ಲೆಕ್ಕಪತ್ರಗಳ ದಫ್ತರುಗಳನ್ನೆಲ್ಲ ಸಾಗಿಸಿ, ಕರಡು ಕಾಗದಗಳು ಮಾತ್ರ ಕಣ್ಣಿಗೆ ಬೀಳುವಂತಿರಿಸಿ, ಇನಿತಾದರೂ ಸಂಶಯ ತಟ್ಟದಂತೆ ಕಚೇರಿಯನ್ನು ವ್ಯವಸ್ಥೆಗೊಳಿಸಿದನು. ತನ್ನ ಜತೆಯಲ್ಲಿ ಬಂದಿದ್ದ ಪೇದೆಗಳ ಪಡೆಗೂ, ಪುತ್ತೂರಿನ ಸಿಬ್ಬಂದಿಗೂ, ತನ್ನಲ್ಲಿ ವಿಶ್ವಾಸವಿಟ್ಟು ನೆರೆದಿದ್ದ ಊರ ಜನರಿಗೂ ಧೈರ್ಯ ಭರವಸೆಗಳನ್ನು ಕೊಡುತ್ತ ಕಚೇರಿಯಲ್ಲಿ ಕುಳಿತಿದ್ದನು. ನಡುಹರೆಯದ ದೇವಪ್ಪಯ್ಯನ ರಕ್ತಛಾಯೆ ತುಂಬಿದ ಬೆಳ್ಳಗಿನ ಮೈಬಣ್ಣ, ಲಕ್ಷಣವಾದ ದುಂಡುಮೊಗ, ಭವ್ಯವಾದ ಆಕೃತಿಯಲ್ಲಿ ಘನತೆ ಗಾಂಭೀರ್ಯಗಳು ಎದ್ದುಕಾಣುತ್ತಿದ್ದುವು. ಉಟ್ಟ ಹುಬ್ಬಳ್ಳಿ ಧೋತ್ರ, ತೊಟ್ಟ ಕರಿಯ ಅಲ್ಪಾಕಿನ ನಿಲುವಂಗಿ, ಇಟ್ಟ ಗರ್ಭಸುತ್ತಿನ ದೊಡ್ಡ ಮುಂಡಾಸು ಆ ಘನತೆ ಗಾಂಭೀರ್ಯಗಳಿಗೆ ಇಮ್ಮಡಿ ಕಳೆ ಕೊಟ್ಟಿದ್ದುವು. ಎಂಥವನಾದರೂ ಅವನನ್ನು ಕಂಡಾಕ್ಷಣ ಅವನ ಆಕರ್ಷಕವಾದ ಆ ಅಸಾಧಾರಣ ವರ್ಚಸ್ಸಿಗೆ ಮಣಿಯದಿರನು.

ಹೀಗೆ ಮನನೊಂದ ಜನರ ಒಂದು ಪಂಗಡವು ದಿನದಿಂದ ದಿನಕ್ಕೆ ಬೆಳೆಯುತ್ತಾ ಬಂತು. ಎಂತಾದರೂ ಕೊಡಗನ್ನು ಹಿಂದೆ ಪಡೆದು ಸ್ವತಂತ್ರವಾಗಿ ಆಳಬೇಕೆಂದು ಸಂಚು ಹೂಡಿತು. ಏಳು ಸಾವಿರ ಸೀಮೆಯ ಪುಟ್ಟಬಸಪ್ಪನೆಂಬ ಜಂಗಮನು, ಕಲ್ಯಾಣ ಸ್ವಾಮಿ ನಂಜುಂಡರಸು ಎಂಬ ಹೆಸರನ್ನಿಟ್ಟುಕೊಂಡು, ತಾನು ಕೊಡಗಿನ ಅರಸು ಪೀಳಿಗೆಯವನೆಂದೂ ಪಟ್ಟಕೆ ಹಕ್ಕುದಾರನೆಂದೂ ಬಹಿರಂಗಪಡಿಸಿದನು.

ಅಷ್ಟರಲ್ಲಿ ಕಾಟಕಾಯಿ ಬಂತೇ ಬಂತು. ದೂರದಿಂದಲೇ ಅದರ ಬೊಬ್ಬೆ ಅಟ್ಟಹಾಸ ಕೇಳಿಸುತ್ತಿದ್ದಿತು. ದಂಡಿನ ತುಳಿತದಿಂದ ಎದ್ದ ಧೂಳಿಯು ಮೋಡದಂತೆ ಕವಿದಿದ್ದಿತು. ಈ ಗಲ್ಲು ಗಲಭೆಯನ್ನು ಕೇಳಿ ಊರ ಜನರೆಲ್ಲ ಸಿಕ್ಕ ಸಿಕ್ಕಲ್ಲಿ ಅವಿತುಕೊಂಡರು. ಅಳುತ್ತಿದ್ದ ಮಕ್ಕಳು ಕೂಡ ಅಲ್ಲಲ್ಲೆ ಬಾಯಿಮುಚ್ಚಿಕೊಂಡವು. ಮಾರಿ ಹಿಂಡು ಮಸಣವನ್ನು ಹೊಗುವಂತೆ ಕಾಟಕಾಯಿ ಊರನ್ನು ಹೊಕ್ಕು ಸೊರೆ ಸುಲಿಗೆ ಮಾಡುತ್ತ, ಕಂಡದ್ದಕ್ಕೆಲ್ಲ ಕಿಚ್ಚಿಡುತ್ತ ಕಚೇರಿಯನ್ನು ಸಮೀಪಿಸಿತು.

ಕಲ್ಯಾಣ ಸ್ವಾಮಿಯು ದರ್ಪದಿಂದ ಕಚೇರಿಯನ್ನು ನುಗ್ಗಿ, ಕಲೆಕ್ಟರು ಕಚೇರಿ ನಡೆಸುವ ಉಚ್ಚಾಸನವನ್ನೇರಿ, ಕಾಲಮೇಲೆ ಕಾಲುಹಾಕಿ ಕುಳಿತುಕೊಂಡನು. ಕರ್ರಗಿನ ಕರಾಳರೂಪಿನ ಅವನನ್ನು ನೋಡುವಾಗ ಮೈ ಜುಮ್ಮೆನಿಸುತ್ತಿತ್ತು. ಅವನ ಕೆಂಗಣ್ಣುಗಳು ಕಿಡಿ ಕಾರುತ್ತಿದ್ದುವು. ಅವನು ಕೊಡಗರ ಉಡಿಗೆಯನ್ನು ತೊಟ್ಟಿದ್ದನು. ಚಲ್ಲಣ ಹಾಕಿ ಕರಿಯ ಕುಪ್ಪಸವನ್ನು ತೊಟ್ಟು ರೇಶಿಮೆಯ ಕೆಂಪು ದಟ್ಟಿಯನ್ನು ಬಿಗಿದಿದ್ದನು. ದಟ್ಟಿಯಲ್ಲಿ ‘ಪೀಚೆ ಕತ್ತಿ’ಯ ಬೆಳ್ಳಿ ಹಿಡಿಯ ಹೊಳೆಯುತ್ತಿದ್ದಿತು. ತಲೆಗೆ ಜರಿ ಮುಂಡಾಸನ್ನು ಕಟ್ಟಿದ್ದನು. ಕೈಯಲ್ಲಿ ಜೋಡು ಧಾರೆಯ ಬಿಚ್ಚು ಗತ್ತಿಯು ಜಗಜಗಿಸುತ್ತಿದ್ದಿತು. ಅವನ ಸುತ್ತಲೂ ಪೀಚೆ ಕತ್ತಿ, ಒಡಿಕತ್ತಿ, ಕೊಡಲಿ, ಕೋವಿ, ಕೊರಡೆಗಳನ್ನು ಹಿಡಿದುಕೊಂಡು ಭೀಕರ ಸ್ವರೂಪದ ಪುಂಡರು ಸಾಲು ಸಾಲಾಗಿ ನಿಂತಿದ್ದರು. ಕೆಲವರು ಕೊತ್ತಳಿಗೆಯನ್ನೂ, ಇನ್ನು ಕೆಲವರು ಚಿಟ್ಬಿಲ್ಲು, ಕವಣೆಕಲ್ಲು, ತಿರಿಕಲ್ಲುಗಳನ್ನೂ ಹಿಡಿದುಕೊಂಡು ನಿಂತಿದ್ದರು. ಕಲ್ಯಾಣಸ್ವಾಮಿಯು ಸುತ್ತಲೊಮ್ಮೆ ಕಣ್ಣು ಹೊರಳಿಸಿದನು. ಎಲ್ಲರಿಗೂ ಒಮ್ಮೆ ಎದೆ ಹಾರಿತು. ದೇವಪ್ಪಯ್ಯನನ್ನು ಕಾಣುತ್ತಲೇ ಅವನ ಕಣ್ಣು ಕುಕ್ಕಿದಂತಾಯಿತು. ಅವನನ್ನು ತನ್ನ ಮುಂದೆ ಎಳೆದು ತರುವಂತೆ ಆಜ್ಞಾಪಿಸಿದನು. ಪುಂಡರು ಅವನನ್ನು ದರದರನೆ ಎಳೆದುತಂದು ಮುಂದೆ ನಿಲ್ಲಿಸಿದರು. ಕಠೋರವಾದ ಕಂಠದಿಂದ ‘ನೀನು ಯಾರೋ’ ಎಂದು ಕೇಳಿದನು.

ದೇ- ನಾನೇ ಕರಣಿಕ ದೇವಪ್ಪಯ್ಯ, ಮಂಗಳೂರಿನ ಶಿರಸ್ತೇದಾರ.
ಕ- ನೀನಿನ್ನು ನಮ್ಮ ಕರಣಿಕನಾಗಬೇಕು !
ದೇ- ನಿನ್ನ ಚಾಕರಿ ಬೇಕಾಗಿಲ್ಲ ನನಗೆ.
ಕ- ಎಲೊ! ಯಾರೊಡನೆ ಮಾತಾಡುತ್ತಿರುವೆ ನೀನು? ಗೊತ್ತುಂಟೋ? ನಮ್ಮ ಅಪ್ಪಣೆ ಮೀರಿದರೆ ನಿನ್ನ ತಲೆ ಹಾರಿಸಿಬಿಟ್ಟೇನು. ರಾಜ್ಯವೀಗ ನಮ್ಮದು. ನಿನ್ನ ಬ್ರಿಟಿಷ್ ಸರಕಾರ ಅಳಿಯಿತು. ಅದರೊಡನೆ ನೀನೂ ಸಾಯುವೆ – ಎಂದು ಹೇಳಿ ಅವನ ಅಂಗಿ ಮುಂಡಾಸುಗಳನ್ನೆಲ್ಲ ಕಳಚಿಸಿ ಅವನನ್ನು ಕಠಿಣವಾದ ಪಹರೆಯಲ್ಲಿಡುವಂತೆ ಅಪ್ಪಣೆಕೊಟ್ಟನು.

ಕಲ್ಯಾಣಸ್ವಾಮಿಯ ಪರಿಚಾರಕರಲ್ಲಿ ಅನಂತು ಎಂಬ ಒಬ್ಬ ಗೌಡಸಾರಸ್ವತನಿದ್ದನು. ದೇವಪ್ಪಯ್ಯನಿಗೆ ಅವನನ್ನು ಕಂಡ ಗುರುತಿತ್ತು. ಅವನನ್ನು ನೋಡಿ ಸಲುಗೆಯಿಂದ ‘ತುಂ ಹಮ್ ಗೆಲೆ ಅಂತೂ ಪೂತು ಅನಂತೂರೆ?’ ಎಂದು ಕೊಂಕಣಿ ಮಾತಿನಲ್ಲಿ ಕೇಳಿದನು. ಕೊಡ್ಗಿ ಅರಸನ ಆಳೆಂಬ ಹೆಮ್ಮೆಯಿಂದ ಆ ಊಳಿಗದವನು ಕನ್ನಡದಲ್ಲಿ ‘ಏನಂದೆ ನೀನು? ಮಹಾಸ್ವಾಮಿಯವರೊಡನೆ ಹೇಳಿ ನಿನ್ನ ತಲೆ ಕಡಿಸಿಬಿಟ್ಟೇನು. ಗೊತ್ತುಂಟೋ?’ ಎಂದು ತಲೆಮೀರಿ ಮಾತಾಡಿದನು. ದೇವಪ್ಪಯ್ಯನು ಮುಗುಳು ನಗುತ್ತ ಸುಮ್ಮನಾದನು.

ಅವನು ಪುಂಡನ ಕೈಸಿಕ್ಕಿ , ಬಂದಿಯಾಗಿ ಬಹಳ ಕಷ್ಟಕ್ಕೀಡಾದನು. ಕಾಟಕಾಯಿ ಹೋದಲೆಲ್ಲ ಇತರ ಬಂದಿಗಳೊಡನೆ ಅವನನ್ನೂ ತೆಗೆದುಕೊಂಡು ಹೋಗುತ್ತಿದ್ದರು. ದೇವಪ್ಪಯ್ಯನು ಹೋದಲೆಲ್ಲ ಕಾಟಕಾಯಿ ನಡೆಸಿದ ಕ್ರೂರತನ, ಕೊಲೆ, ಸುಲಿಗೆ ಹಾವಳಿಗಳ ಪ್ರತ್ಯಕ್ಷ ಸಾಕ್ಷಿಯಾಗಿದ್ದನು. ಕಾಟಕಾಯಿಗೆ ನೆರವು ಕೊಟ್ಟವರನ್ನೆಲ್ಲ ತಿಳಿದುಕೊಂಡನು. ಹೀಗೆ ಸೆರೆಯಾಳಾಗಿದ್ದರೂ ಸರ್ಕಾರದ ಸೇವೆಯನ್ನು ಮರೆಯದೆ ಎಲ್ಲಾ ಸುಳಿವುಗಳನ್ನೂ ಅರಿತುಕೊಳ್ಳುತ್ತಿದ್ದನು. ಕೆಲವು ದಿನಗಳು ಕಳೆಯಲು ಅವನು ಅಂತುವಿನಲ್ಲಿ ವಿಶ್ವಾಸ ಬೆಳೆಸಿಕೊಂಡು ಸೆರೆಯಿಂದ ತಪ್ಪಿಸಿಕೊಳ್ಳುವ ಹಂಚಿಕೆ ಮಾಡುತ್ತಿದ್ದನು.

ಒಂದು ದಿನ ಅಂತು ಒಬ್ಬನೇ ಇದ್ದ ಸಮಯ ನೋಡಿ ಅವನನ್ನು ಬಳಿಗೆ ಕರೆದು ‘ಹೌದೋ ಅಂತು! ಊರ ಮೇಲೆ ಊರು ಬಿದ್ದರೆ ಶಾನಭಾಗರಿಗೆ ಬಂದದ್ದೇನು? ಹೇಳು. ನಾವಿಬ್ಬರೂ ಶಾನಭಾಗರೆ. ನಾನೂ ನೀನೂ ಒಂದೆ. ನಮಗೆ ಕುಂಪಣಿ ಸರಕಾರವಾದರೇನು! ಕೊಡ್ಗಿ ಅರಸ್ತನವಾದರೇನು! ನಮ್ಮನ್ನೆಲ್ಲ ಕೊಂಕಣದಿಂದ ಕರೆದುತಂದ ಕೆಳದಿ ಅರಸುತನವೇ ಅಳಿಯಿತು. ಈಗ ಕೊಡಗು ಅರಸನೂ ಒಂದು ಕೈನೋಡಲಿ. ಯಾವ ರಾಯನ ಕಾಲಕ್ಕೂ ಶಾನಭಾಗಿಕೆ ನಮಗೆ ಕಟ್ಟಿಟ್ಟದ್ದೇ, ಆದುದರಿಂದ ನಾನೊಂದು ಗುಟ್ಟನ್ನು ನಿನಗೆ ಹೇಳುವೆನು, ಕೇಳುವೆಯಾ?’ ಎಂದನು.
ಆಗ ಅಂತುವು, ‘ಅದೇನು ಗುಟ್ಟಪ್ಪಾ! ಹೇಳಿ ನೋಡುವ, ಯಾರಿಗೂ ಹೇಳಲಿಕ್ಕಿಲ್ಲ’ ಎಂದನು.

‘ನೋಡು ಅಂತು, ಈ ಕಾಟಕಾಯಿಯಿಂದ ಬ್ರಿಟಿಷರಿಗೆ ಪರಿಣಾಮವಿಲ್ಲೆಂದು ಕಾಣಿಸುತ್ತದೆ. ಇದನ್ನು ನೋಡಿ ಈಗೀಗ ನನ್ನ ಮನಸ್ಸು ಎಳತಾಗಿಬಿಟ್ಟಿದೆ. ಎಷ್ಟೆಂದರೂ ಕೊಡಗರು ನಮ್ಮ ಜನರೇ ಅಲ್ಲವೆ? ಆ ಫರಂಗಿ ಜನರಿಗಿಂತ ಇವರೇ ವಾಸಿ. ಆದುದರಿಂದ ಕಾಟಕಾಯಿಗೆ ನನ್ನಿಂದಾದ ಸಹಾಯವನ್ನು ಮಾಡಬೇಕೆಂದು ನಿರ್ಧರಿಸಿರುವೆನು. ನಂದಾವರದ ಲಕ್ಷ್ಮಪ್ಪರಸನು ಸರಕಾರದಿಂದ ದೊರೆಯುವ ಮಲ್ಲಿಖಾನೆಯನ್ನು ನನ್ನ ಮುಖಾಂತರವೇ ಪಡೆಯಬೇಕಾಗಿರುವುದರಿಂದ ಅವನು ನನ್ನ ಹಂಗಿನಲ್ಲಿರುವನು. ಅವನು ಜೈನ ಅರಸರಲ್ಲಿ ಬಹು ಸಾಮರ್ಥ್ಯವುಳ್ಳವನು. ಬೇಕಾದ ಸೇನೆ ಸರಂಜಾಮುಗಳನ್ನು ಒದಗಿಸಬಲ್ಲನು. ನಾನು ಒಂದು ಮಾತು ಹೇಳಿದರೆ ಒಲ್ಲೆನೆನ್ನ. ಯಾವುದಕ್ಕೂ ಹೀಗೆ ಕೈದಿಯಾಗಿ ಏನು ಮಾಡಲಿ ಹೇಳು. ನೀನು ನಿನ್ನ ಒಡೆಯನ ಕಿವಿಯಲ್ಲಿ ಮೆಲ್ಲಗೆ ಈ ಮಾತನ್ನು ಹಾಕಿನೋಡು. ಖಂಡಿತವಾಗಿಯೂ ಕಾಟಕಾಯಿ ಗೆಲುವುದು. ಆದರೆ ಮಾರಾಯ! ಈ ಗುಟ್ಟೆಲ್ಲಿಯಾದರೂ ರಟ್ಟಾದರೆ ಕೆಲಸ ಕೆಟ್ಟೀತು ಕಂಡ್ಯಾ’ ಎಂದನು.
ಅಂತುವಿಗೆ ಈ ಮಾತು ಮೆಚ್ಚಿತು. ‘ನಾಳೆಯೇ ತಿಳಿಸುತ್ತೇನೆ’ ಎಂದು ತನ್ನ ಕೆಲಸಕ್ಕೆ ಹೋದನು.

ಒಂದು ದಿನ ಅಂತು ಒಬ್ಬನೇ ಇದ್ದ ಸಮಯ ನೋಡಿ ಅವನನ್ನು ಬಳಿಗೆ ಕರೆದು ‘ಹೌದೋ ಅಂತು! ಊರ ಮೇಲೆ ಊರು ಬಿದ್ದರೆ ಶಾನಭಾಗರಿಗೆ ಬಂದದ್ದೇನು? ಹೇಳು. ನಾವಿಬ್ಬರೂ ಶಾನಭಾಗರೆ. ನಾನೂ ನೀನೂ ಒಂದೆ. ನಮಗೆ ಕುಂಪಣಿ ಸರಕಾರವಾದರೇನು! ಕೊಡ್ಗಿ ಅರಸ್ತನವಾದರೇನು! ನಮ್ಮನ್ನೆಲ್ಲ ಕೊಂಕಣದಿಂದ ಕರೆದುತಂದ ಕೆಳದಿ ಅರಸುತನವೇ ಅಳಿಯಿತು.

ಮರುದಿನ ಕಲ್ಯಾಣಸ್ವಾಮಿಯು ದೇವಪ್ಪಯ್ಯನನ್ನು ಗುಟ್ಟಿನಲ್ಲಿ ಕರೆಸಿ ‘ನೀನು ನಮ್ಮ ಪಕ್ಷಕ್ಕೆ ತಿರುಗಿರುವೆಯಂತೆ. ಸಂತೋಷ. ನಿನ್ನನ್ನು ನಮ್ಮ ಕರಣಿಕನನ್ನಾಗಿ ಮಾಡಿಕೊಳ್ಳುವೆನು. ಅದಕ್ಕೆ ಮುಂಚೆ ಬಂಗರಾಜನು ನಮಗೆ ನೆರವಾಗುವಂತೆ ಮಾಡುವೆಯಾ?’ ಎಂದು ಕೇಳಿದನು.

ದೇ – ಕೆಲವು ದಿನಗಳಿಂದ ಅದೇ ಯೋಚನೆಯಲ್ಲಿರುವೆನು. ತಮ್ಮ ಸಾಹಸಗಳನ್ನು ಕಂಡಂತೆಲ್ಲ ತಮಗೆ ತನ್ನ ಅಳಿಲ ಸೇವೆಯನ್ನಾದರೂ ಸಲಿಸಬೇಕು ಅನ್ನಿಸುತ್ತದೆ. ಶತಪ್ರಯತ್ನ ಮಾಡಿ ಬಂಗರಾಜನು ಕಾಟಕಾಯಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುವಂತೆ ಮಾಡುವೆನು.

ಕ – ಸರಿ! ಹಾಗಾದರೆ ನಿನ್ನನ್ನು ಈಗಲೇ ಬಿಡುಗಡೆ ಮಾಡುವೆನು. ನಮಗೆ ಬೇಕಾದ ಎಲ್ಲಾ ಸಹಾಯಗಳನ್ನು ಒದಗಿಸು. ಆದರೆ ನೋಡು! ಎಲ್ಲಿಯಾದರೂ ಮೀರಿ ನಡೆದರೆ, ವಂಚನೆ ದ್ರೋಹ ಮಾಡಿದರೆ ಇದೇ ಕತ್ತಿಯಿಂದ ನಿನ್ನ ರುಂಡವನ್ನು ಹಾರಿಸಿಯೇನು. ತಿಳಿಯಿತೇ? – ಎಂದು ಕತ್ತಿಯನ್ನೊಮ್ಮೆ ಝಳಪಿಸಿದನು.

ದೇ – ಕೊಡಗು ರಾಯರನ್ನು ವಂಚಿಸಿ ಬದುಕುವುದುಂಟೆ! ನಾನು ಅಷ್ಟನ್ನು ತಿಳಿಯೆನೆ? ಕೊಡ್ಗಿ ರಾಜ್ಯ ಕಟ್ಟುವುದರಲ್ಲಿ ನನ್ನದೂ ಒಂದು ಅಳಿಲ ಭಕ್ತಿಯಿರಲಿ! ಅಷ್ಟೆ.

ಕ – ಹಾಗಾದರೆ ನಿನ್ನಲ್ಲಿ ನಂಬಿಗೆಯಿರಿಸಿ ಬಿಡುಗಡೆಪಡಿಸಿರುವೆವು – ಎಂದು ಕಾವಲುಗಾರರ ಕಡೆಗೆ ನೋಡಲು ಅವರೆಲ್ಲ ಹಿಂದೆ ಸರಿದರು. ದೇವಪ್ಪಯ್ಯನು ಕೈಮುಗಿದನು.
“ಸರಿ. ಈಗಲೇ ಹೊರಡು!”
ದೇ – ಅಪ್ಪಣೆ ! ಬರುವೆನು.

ಹೀಗೆ ಉಪಾಯದಿಂದ ತಪ್ಪಿಸಿಕೊಂಡು ದೇವಪ್ಪಯ್ಯನು ನೆಟ್ಟಗೆ ಮಂಗಳೂರಿಗೆ ಹೋಗಿ ಹಜೂರಲ್ಲಿ ಕಲೆಕ್ಟರನ್ನು ಕಂಡು ಸಂಗತಿಯನ್ನೆಲ್ಲ ಬಣ್ಣಿಸಿದನು. ಕಲೆಕ್ಟರನು ಕುತೂಹಲಗೊಂಡು ಎಲ್ಲವನ್ನೂ ಕೇಳಿ ತನ್ನ ಶಿರಸ್ತೆದಾರನ ಧೈರ್ಯ, ಸಾಮರ್ಥ್ಯ ರಾಜಭಕ್ತಿಗಾಗಿ ಹೆಮ್ಮೆಪಟ್ಟನು. ಅಂದಿನಿಂದ ಕಲೆಕ್ಟರನೂ ದೇವಪ್ಪಯ್ಯನೂ ಕಾಟಕಾಯಿಯನ್ನು ಅಡಗಿಸುವುದಕ್ಕಾಗಿ ಹೆಣಗಾಡಿದರು. ಕಾಟಕಾಯಿ ಮಂಗಳೂರಿಗೆ ಬಂದರೆ ಏನು ಮಾಡಬೇಕೆಂದು ಮೊದಲೇ ನಿರ್ಧರಿಸಿಕೊಂಡರು. ತಲಚೇರಿಯಲ್ಲಿದ್ದ ಸೈನ್ಯಕ್ಕೂ ಬೆಂಗಳೂರು ಸೈನ್ಯಕ್ಕೂ ಸುದ್ದಿ ಹೋಯಿತು. ದೇವಪ್ಪಯ್ಯನು ಕಲ್ಯಾಣಸ್ವಾಮಿಯ ಕ್ರೂರತ್ವ, ಅನ್ಯಾಯ, ಅನೀತಿಗಳನ್ನು ಜನರಿಗೆ ಬೋಧಿಸಿ ಎಲ್ಲರನ್ನೂ ಸರಕಾರದ ಕಡೆಗೆ ಒಲಿಸಿಕೊಂಡನು.

ಇತ್ತ ಕಲ್ಯಾಣಸ್ವಾಮಿಯು ಪುತ್ತೂರನ್ನು ಸುಲಿಗೆಮಾಡಿ ಪಾಣೆಮಂಗಳೂರಿಗೆ ಹೋದನು. ದೇವಪ್ಪಯ್ಯನು ನೆನಸಿದ್ದಂತೆ ನಂದಾವರದ ಬಂಗರಸನು ಕಾಟಕಾಯಿಗೆ ತುಂಬ ಸಹಾಯಮಾಡಿದನು. ಪುಂಡರ ಪಡೆಗೆ ಊಟ ಉಪಚಾರ ಮಾಡಿಸಿ ಉಡಿಗೆ ತೊಡಿಗೆಗಳನ್ನು ಕೊಡಿಸಿದನು. ನೂರಾರು ಜನರನ್ನು ಕೂಡಿಸಿಕೊಟ್ಟನು. ಕಲ್ಯಾಣಸ್ವಾಮಿಯು ಇದೆಲ್ಲವೂ ದೇವಪ್ಪಯ್ಯನಿಂದಲೇ ಆಯಿತೆಂದು ನಂಬಿದನು. ಹುರುಪುಗೊಂಡು ಸಾಗಿ ಬಂಟವಾಳಕ್ಕೆ ಮುತ್ತಿಗೆ ಹಾಕಿ ಸೂರೆ ಮಾಡಿದನು. ಅಲ್ಲಿಂದ ಮಂಗಳೂರಿನ ದಾರಿಯನ್ನು ಹಿಡಿದನು.
ಈಗ ಅವನ ದಂಡು ಬಹಳ ದೊಡ್ಡದಾಗಿತ್ತು. ಪುಂಡರೆಲ್ಲ ಸೊಕ್ಕೇರಿ ಹುಚ್ಚರಾಗಿದ್ದರು. ಊರು ಕೇರಿಗಳನ್ನೆಲ್ಲ ಕೊಳ್ಳೆಯಿಡುತ್ತ ನಡೆದರು. ಕಾಟಕಾಯಿ ಬರುತ್ತದೆಂದು ಊರೆಲ್ಲ ಭಯಗೊಂಡಿತು. ಎಲ್ಲೆಲ್ಲಿಯೂ ಬೊಬ್ಬೆಯೆದ್ದಿತು. ಇಂಗ್ಲೀಷು ಅಧಿಕಾರಿಗಳೆಲ್ಲ ಹೆದರಿ ಕಣ್ಣಾನೂರಿಗೆ ಹೋಗಲು ಅಳಿವೆ ಬಾಗಿಲಲ್ಲಿ ಹಡಗನ್ನು ಕಾಯುತ್ತಿದ್ದರು. ಕಲ್ಯಾಣಸ್ವಾಮಿಯು ಸೆರೆಮನೆಗೆ ಹೋಗಿ ಕೈದಿಗಳನ್ನೆಲ್ಲ ಬಿಡಿಸಿ ತನ್ನ ದಂಡಿಗೆ ಸೇರಿಸಿಕೊಂಡನು. ತಾಲೂಕು ಕಚೇರಿಗೆ ಹೋಗಿ ಖಜಾನೆಯನ್ನು ದೋಚಿದನು. ಇಂಗ್ಲೀಷ್ ಅಧಿಕಾರಿಗಳ ಮನೆಗಳಿಗೆ ಬೆಂಕಿಕೊಟ್ಟನು. ಸಿಕ್ಕಿದ್ದನ್ನು ಸುಲಿಯುತ್ತ ಕಂಡದ್ದನ್ನು ಕೆಡಿಸುತ್ತ ಹಾವಳಿಮಾಡುತ್ತಿದ್ದನು.

ಈ ಸಂದರ್ಭವನ್ನು ನೋಡಿಕೊಂಡು ತೆಂಕುಂಬಳೆಯ ಕೋಟೆಯ ಒಳಿಯಲ್ಲಿದ್ದ ಸುಬ್ರಾಯ ಹೆಗ್ಗಡೆಯೆಂಬವನು ಕೆಲವು ಪೋಲಿಗಳನ್ನು ಕೂಡಿಕೊಂಡು, ಕಲ್ಯಾಣಸ್ವಾಮಿಯನ್ನು ಸೇರಿ, ಅವನ ಸೂಚನೆಯಂತೆ ಕುಂಬಳೆ ಕಡೆಯಿಂದ ದಂಗೆಯೆಬ್ಬಿಸಿ ಮಂಗಳೂರಿಗೆ ಬರುತ್ತಿದ್ದನು. ದೇವಪ್ಪಯ್ಯನು ಈ ಸೋವನ್ನು ತಿಳಿದುಕೊಂಡು ತಕ್ಕ ಮುಂಜಾಗ್ರತೆಯನ್ನು ವಹಿಸಿದ್ದನು.

ಹೀಗೆ ಉಪಾಯದಿಂದ ತಪ್ಪಿಸಿಕೊಂಡು ದೇವಪ್ಪಯ್ಯನು ನೆಟ್ಟಗೆ ಮಂಗಳೂರಿಗೆ ಹೋಗಿ ಹಜೂರಲ್ಲಿ ಕಲೆಕ್ಟರನ್ನು ಕಂಡು ಸಂಗತಿಯನ್ನೆಲ್ಲ ಬಣ್ಣಿಸಿದನು. ಕಲೆಕ್ಟರನು ಕುತೂಹಲಗೊಂಡು ಎಲ್ಲವನ್ನೂ ಕೇಳಿ ತನ್ನ ಶಿರಸ್ತೆದಾರನ ಧೈರ್ಯ, ಸಾಮರ್ಥ್ಯ ರಾಜಭಕ್ತಿಗಾಗಿ ಹೆಮ್ಮೆಪಟ್ಟನು. ಅಂದಿನಿಂದ ಕಲೆಕ್ಟರನೂ ದೇವಪ್ಪಯ್ಯನೂ ಕಾಟಕಾಯಿಯನ್ನು ಅಡಗಿಸುವುದಕ್ಕಾಗಿ ಹೆಣಗಾಡಿದರು.

ಸುಬ್ರಾಯನ ದಂಡು ಮಂಜೇಶ್ವರ ಮತ್ತು ಉಳ್ಳಾಲಕ್ಕೆ ಬಂದಾಗ ಅಲ್ಲಿಯ ಜನರು ಊಟ, ಉಪಚಾರ, ಉಡಿಗೆ, ಉಚಿತಗಳನ್ನು ಕೊಟ್ಟು ಸಂತೈಸಿ ಕೊಳ್ಳೆಯಿಡದಂತೆ ಬೇಡಿಕೊಂಡರು. ಸುಬ್ರಾಯನು ಅಲ್ಲಿಂದ ಹೊಳೆ ದಾಟಿ ಮಂಗಳೂರನ್ನು ಸೇರಬೇಕೆಂದಿದ್ದನು. ಆದರೆ ಅವನ ಆಸೆಯು ಈಡೇರಲಿಲ್ಲ. ದೇವಪ್ಪಯ್ಯನಿಗೆ ಉಳ್ಳಾಲದಲ್ಲಿ ಹಲವು ಸಾಹುಕಾರರ ಸ್ನೇಹವಿದ್ದಿತು. ದೇವಪ್ಪಯ್ಯನ ಅಪೇಕ್ಷೆಯಂತೆ ಅವರು ಸುಬ್ರಾಯನಿಗೆ ಸಹಾಯಮಾಡುವಂತೆ ನಟಿಸಿ ದಂಡಿಗೆ ಹೊಳೆದಾಟಲು ಬೇಕಾದ ದೋಣಿಗಳನ್ನು ಒದಗಿಸಿಕೊಟ್ಟರು. ದೋಣಿಗಳ ಅಡಿಯಲ್ಲಿ ಕೂತುಗಳನ್ನು ಕೊರೆಯಿಸಿ ಮೇಣ ಮೆತ್ತಿದ್ದರು. ಅರ್ಧಾಣೆಯ ಗಟ್ಟಿ ಮುಕ್ಕಾಲುಗಳನ್ನು ಚೀಲಗಳಲ್ಲಿ ತುಂಬಿಸಿ ತಮ್ಮ ಕಾಣಿಕೆಯೆಂದು ದೋಣಿಗಳಲ್ಲಿ ತುಂಬಿಸಿದರು.

ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು. ತೂತುಗಳಿಂದ ನೀರು ಹೊಕ್ಕಿತು. ಗಟ್ಟಿಮುಕ್ಕಾಲುಗಳ ಭಾರದಿಂದ ದೋಣಿಗಳೆಲ್ಲ ನಡುಹೊಳೆಯ ಗಯದಲ್ಲಿ ದಂಡಿನೊಂದಿಗೆ ಮುಳುಗಿದುವು. ಸುಬ್ರಾಯನೂ ಹಲವು ಪುಂಡರೂ ಮುಳುಗಿ ಸತ್ತರು. ಈಜಾಡಿ ದಡ ಸೇರುತ್ತಿದ್ದವರನ್ನು ಸರಕಾರದ ಕೆಲವು ಸೈನಿಕರು ಗುಂಡುಹಾರಿಸಿ ಕೊಂದರು. ದೇವಪ್ಪಯ್ಯನು ಸುಬ್ರಾಯನ ದಂಡನ್ನು ಹೀಗೆ ಉಪಾಯದಿಂದ ಹೊಳೆಯಲ್ಲಿ ಮುಳುಗಿಸಿ ಮಂಗಳೂರನ್ನು ಸೇರಿದನು.

ಆ ವೇಳೆಗೆ ತಲಚೇರಿಯ ಸೈನ್ಯವು ಪತ್ತೆಮಾರಿಗಳಲ್ಲಿಯೂ, ಬೆಂಗಳೂರಿನ ಸೈನ್ಯವು ನೆಲದಾರಿಯಾಗಿಯೂ ಬಂದು ತಲುಪಿದುವು. ಸೈನ್ಯ ಬಂದ ಸುದ್ದಿ ಸಿಕ್ಕಿದೊಡನೆ ಕಲ್ಯಾಣ ಸ್ವಾಮಿಯ ದಂಡು ಚೆಲ್ಲಾಪಿಲ್ಲಿಯಾಗಿ ಚದರಿತು. ಕಲ್ಯಾಣ ಸ್ವಾಮಿಯು ಸೂಳ್ಯಕ್ಕೆ ಓಡಿಹೋದನು. ಕೊಡಗಿನ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಲೀ ಹಾರ್ಡಿಯು ಕಲ್ಯಾಣಸ್ವಾಮಿಯನ್ನೂ, ನಂದಾವರದ ಬಂಗರಸನನ್ನೂ, ಇತರ ಮುಖಂಡರನ್ನೂ ಸೆರೆಹಿಡಿದು ತನಿಕೆ ನಡೆಸಿದನು. ದೇವಪ್ಪಯ್ಯನು ಬೇಕಾದಷ್ಟು ಸಾಕ್ಷಿಗಳನ್ನೂ ರುಜುವಾತುಗಳನ್ನೂ ಹಾಜರುಪಡಿಸಿದನು. ಲೀ ಹಾರ್ಡಿಯು ಬಂಡುಗಾರನಾದ ಕಲ್ಯಾಣ ಸ್ವಾಮಿಗೂ, ಬಂಗರಸನಿಗೂ ಮರಣದಂಡನೆಯನ್ನು ವಿಧಿಸಿ ಮಂಗಳೂರಿನ ಬಿಕ್ರನಕಟ್ಟೆ ಪದವಿನಲ್ಲಿ ಗಲ್ಲಿಗೇರಿಸಿದನು. ಕಾಟಕಾಯಿಗೆ ಸಹಾಯ ಮಾಡಿದ ಹಲವರಿಗೆ ಏಳರಿಂದ ಹದಿನಾಲ್ಕು ವರ್ಷಗಳ ವರೆಗಿನ ಕಠಿಣ ಸಜೆಯಾಯಿತು. ಹಲವರಿಗೆ ಸಿಂಗಾಪುರಕ್ಕೆ ದ್ವೀಪಾಂತರವಾಯಿತು. ಸರಕಾರಕ್ಕೆ ಸಹಾಯಕರಾದ ಹಲವರಿಗೆ ದೇವಪ್ಪಯ್ಯನ ಸಿಫಾರಸಿನ ಮೇರೆಗೆ ಸರಕಾರದ ಬಹುಮಾನ ದೊರೆಯಿತು. ಬಂಟವಾಳದ ಜಮೀನುದಾರ ರಂಗ ಬಾಳಿಗನು ಇಂಗ್ಲಿಷ್ ಸೈನ್ಯಕ್ಕೆ ಪಾಣೆ ಮಂಗಳೂರಿನಲ್ಲಿ ನದಿದಾಟುವುದಕ್ಕೆ ದೋಣಿಗಳನ್ನು ಒದಗಿಸಿಕೊಟ್ಟು ಬಂಟವಾಳದಲ್ಲಿ ಧಾರಾಳ ಅಕ್ಕಿ ಸರಬರಾಯಿ ಮಾಡಿದುದರಿಂದ ಅವನಿಗೆ ಮೂರು ತಲಾಂತರಗಳವರೆಗೆ ತೀರ್ವೆಯನ್ನು ಮಾಫಿಬಿಟ್ಟು ‘ಚಾವಲ್ ಕೀ ರಾಜ್’ ಎಂಬ ಹೆಸರನ್ನು ಕೊಟ್ಟರು.
ಹೀಗೆ ದೇವಪ್ಪಯ್ಯನ ಛಲ ಪರಿಶ್ರಮಗಳಿಂದ ಕಾಟಕಾಯಿಯು ಒಂದು ತಿಂಗಳಲ್ಲಿ ಹೇಳ ಹೆಸರಿಲ್ಲದಂತೆ ಅಡಗಿಹೋಯಿತು. ಮಂಗಳೂರಿನ ಕಲೆಕ್ಟರನೂ ಕೊಡಗಿನ ಮಿಲಿಟರಿ ಗವರ್ನರನೂ ಕೊಡಗಿನ ಈ ಕಾಟಕಾಯಿಯ ಕೈಫಿಯತ್ತಿನಲ್ಲಿ ಅವನ ಜಾಣ್ಮೆ ಸಾಹಸಗಳನ್ನು ಮನವಾರೆ ಕೊಂಡಾಡಿರುವರು.


ಮಂಗಳೂರಿನಲ್ಲಿ ಈಗ ಉಡುಪಿ ಶ್ರೀ ಕೃಷ್ಣ ಭವನವಿರುವ ಸ್ಥಳದಲ್ಲಿ ಅವನ ಪುರಾತನದ ದೊಡ್ಡ ಮನೆಯಿತ್ತು. ಆ ಮನೆಯಿಂದಲೇ ಆ ಬೀದಿಗೆ ‘ಕರಣಿಕ ರಸ್ತೆ’ ಎಂದು ಹೆಸರಾಯಿತು. ಸಾರಸ್ವತ ಬ್ರಾಹ್ಮಣರ ಎಲ್ಲೋರಕರ ಕುಟುಂಬದ ಅವನ ಹಿರಿಯರು ಇಕ್ಕೇರಿ ನಾಯಕರ ಕಾಲದಿಂದ ಕರಣಿಕ ವೃತ್ತಿಯನ್ನವಲಂಬಿಸಿಕೊಂಡು ಕೊಂಕಣದಿಂದ ಇಲ್ಲಿಗೆ ಬಂದು ನೆಲಸಿದ್ದರು. ಶರವು ಗಣಪತಿ ದೇವಾಲಯದ ಇದಿರಿಗಿರುವ ‘ಕರಣಿಕ ಸತ್ರ’ ‘ಕರಣಿಕ ಕಟ್ಟೆ’ ಮುಂತಾದುವು ಕರಣಿಕ ದೇವಪ್ಪಯ್ಯನ ಹಲವಾರು ಧರ್ಮಕಾರ್ಯಗಳ ಕುರುಹಾಗಿ ಇಂದಿಗೂ ಉಳಿದಿವೆ.

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ
ಕಲ್ಯಾಣಪ್ಪನ ಹೋರಾಟದ ಕಾಲದಲ್ಲಿ ಕಲ್ಯಾಣಸ್ವಾಮಿಯ ಸೈನ್ಯಕ್ಕೆ ಧನಸಹಾಯವನ್ನು ಕೂಡಿಸುವ ನೆವದಿಂದ ಊರೂರನ್ನು ಕೊಳ್ಳೆಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವನ ಹೆಸರು ಹೇಳಿಕೊಂಡು ಚಿರಂಜೀವಿ ಸುಬ್ರಾಯನಂತಹ ಪುಂಡರು ದರೋಡೆಗಾರರಾಗಿ ತಿರುಗಾಡಿಕೊಂಡಿದ್ದರು. ಇಂತಹ ಪರಿಸ್ಥಿತಿಯ ಚಿತ್ರಣ ಬೇಕಲ ರಾಮನಾಯಕರ ಐತಿಹ್ಯ ಕತೆಗಳಲ್ಲಿದೆ (ಉದಾಹರಣೆಗೆ, ‘ಕೂಡಲು ಸುಬ್ಬಯ್ಯ ಶಾನಭಾಗ’). ಇತರ ಹಲವು ಗದ್ಯ ಬರಹಗಾರರ ಕತೆ, ಕಾದಂಬರಿಗಳಲ್ಲಿ ಕಲ್ಯಾಣಪ್ಪನ ಕಾಟಕಾಯಿಯ ಕಾಲದಲ್ಲಿ ಜನರಿಗೆ ತೊಂದರೆಯೇ ಆದುದರ ಉಲ್ಲೇಖಗಳಿವೆ. ಕಲ್ಯಾಣಪ್ಪನ ಹೋರಾಟದ ವಿಷಯವನ್ನು ನಿರಂಜನ, ಪ್ರಭಾಕರ ನೀರ್ ಮಾರ್ಗ ಮತ್ತು ಪ್ರಭಾಕರ ಶಿಶಿಲ ಇವರು ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಿ. ಕೆ. ಚೌಟರ ‘ಮಿತ್ತಬೈಲ್ ಯಮುನಕ್ಕ’ ಕಾದಂಬರಿಯಲ್ಲಿಯೂ ಈ ವಿಷಯ ಪ್ರಧಾನವಾಗಿ ಬಂದಿರುವುದನ್ನು ಹಿಂದಿನ ಕಂತಿನಲ್ಲಿ ನೋಡಿದ್ದೇವೆ.
ಇದೇ ಕಾಲದ ಐತಿಹ್ಯಗಳಲ್ಲಿ ಕಾಣಿಸಿಕೊಳ್ಳುವ ಮತ್ತೊಬ್ಬ ಐತಿಹಾಸಿಕ ವ್ಯಕ್ತಿ ಕರಣಿಕ ದೇವಪ್ಪಯ್ಯ. ಕರಣಿಕ ದೇವಪ್ಪಯ್ಯ ಬ್ರಿಟಿಷರ ಪರವಾಗಿದ್ದವನು. ಅವನ ಕುರಿತಾಗಿ ಬೇಕಲ ರಾಮನಾಯಕರ ಐತಿಹ್ಯ ಕಥೆಯೊಂದಿದೆ. ಪ್ರಭಾಕರ ನೀರ್ ಮಾರ್ಗ ಅವರ ‘ಮಂಗಳೂರ ಕ್ರಾಂತಿ’ ಕಾದಂಬರಿಯಲ್ಲಿ ಕರಣಿಕ ದೇವಪ್ಪಯ್ಯ ಖಳನಾಯಕನಾಗಿ ಬರುತ್ತಾನೆ.
‘ಕರಣಿಕ ದೇವಪ್ಪಯ್ಯ’ ಎಂಬ ಕತೆಯಲ್ಲಿ ಬೇಕಲ ರಾಮನಾಯಕರು ಕಲ್ಯಾಣಪ್ಪನ ಕ್ರಾಂತಿಯ ಸಂದರ್ಭದಲ್ಲಿ ದೇವಪ್ಪಯ್ಯ ಎಂಬ ಬ್ರಿಟಿಷರಿಗೆ ನಿಷ್ಠನಾಗಿದ್ದ ಕರಣಿಕ ಉಪಾಯದಿಂದ ಕಲ್ಯಾಣಪ್ಪನ ಸೋಲಿಗೆ ಕಾರಣನಾದ ವಿವರಗಳನ್ನು ನೀಡಿದ್ದಾರೆ. ಶೀನಪ್ಪ ಹೆಗ್ಗಡೆಯವರು ಕೂಡಾ, “ ಶಾ. ಶ. 1759 ರಲ್ಲಿ (ಅಂದರೆ ಕ್ರಿ. ಶ. 1837 ರಲ್ಲಿ) ಕೊಡಗಿನ ಕಲ್ಯಾಣಪ್ಪನೆಂಬವನು ಕೆಲವು ಸೈನ್ಯಗಳ ಸಮೇತ ಪುತ್ತೂರನ್ನು ಕೊಳ್ಳೆಹೊಡೆದು, ಮಂಗಳೂರಿಗೆ ಬಂದು ಜೈಲನ್ನು ಮುರಿದನು. ಆಗ ಕರಣಿಕ ದೇವಪ್ಪನವರು ಮಾಡಿದ ಸಾಹಸವು ಚಿರಸ್ಮರಣೀಯವಾದದ್ದು” ಎಂದು ಶ್ಲಾಘಿಸಿದ್ದಾರೆ. ಆದರೆ ಪ್ರಭಾಕರ ನೀರ್ ಮಾರ್ಗ ಅವರು ತಮ್ಮ ‘ಮಂಗಳೂರ ಕ್ರಾಂತಿ’ ಕಾದಂಬರಿಯಲ್ಲಿ ದೇವಪ್ಪಯ್ಯ ನೀಚ, ದುಷ್ಟ ಎಂದೆಲ್ಲ ಹಳಿಯುತ್ತಾರೆ. ಸ್ವಾತಂತ್ರ್ಯೋತ್ತರ ಕಾಲದ ಲೇಖಕರಲ್ಲಿ ಆಗಿರುವ ಮನೋಭಾವದ ಬದಲಾವಣೆಯನ್ನು ಇದು ಸೂಚಿಸುತ್ತದೆ. ಪ್ರಭಾಕರ ಅವರ ಕಾದಂಬರಿಯ ಭಾಗವನ್ನು ಮುಂದಿನ ಕಂತಿನಲ್ಲಿ ನೋಡಬಹುದು.