ಕರುಣೆ

ಹೇಗೆ ನಿಂತಿದೆ ನೋಡಿ ಆ ಮರ
ಅಣಕಿಸುವಂತೆ ನನ್ನ!
ಕೊಂಬೆ ರೆಂಬೆಗಳಲ್ಲಿ ಹರಡಿ
ಫಲಪುಷ್ಪಗಳಲ್ಲಿ ಅಡಗಿ!

ಹೋಗಿದ್ದೆ ನಿನ್ನೆ ಇದರ ನೆರಳಿಗೆ
ಕಡು ಬಿಸಿಲು ತಡೆಯಲಾಗದೆ
ಬೀಸುವ ಗಾಳಿ ಕರೆಯದೇ ಬಂತು
ಅದೇ ಆದಂತೆ ಬೀಸಣಿಗೆ

ಇದ್ದೆ ಸುಮಾರಾಗಿ ಕೆಲಹೊತ್ತು
ಬಿದ್ದೀತೇ ಒಂದು ಹಣ್ಣು ಕೆಳಗೆ
ಎನ್ನುತ್ತಿದ್ದಂತೆ ಬಿತ್ತು ಹಣ್ಣು ಹಣ್ಣಾಗಿ
ಹಣ್ಣೇ ಕೃಪೆ ತೋರಿದಂತೆ

ಬಳಿ ಸಾರಿದರೆ, ಆ ಹಣ್ಣು
ಒಡೆದು ಹೋಗಿತ್ತು ಭಾಗವಾಗಿ
ನಿನಗಲ್ಲ ಎಂಬಂತೆ, ಆದರೂ
ಭೃಂಗಗಳು ಬಂದುವು ಬೆನ್ನೇರಿ

ಸಿಟ್ಟು ಕಣ್ಣಲಿ ಹುಟ್ಟಿ ಎದ್ದು ನಿಂತವ ನಾನು
ಒದ್ದೆ ಬಲವಾಗಿ ಮರಕ್ಕೆ
ಬೀಳಲೇ ಇಲ್ಲ ಒಂದೂ ಹಣ್ಣು
ಕ್ರೂರಿ ಅಲ್ಲವೆ ಇಡೀ ಮರವೆ!

ಹೊರಟೆ, ತಿರಸ್ಕರಿಸುವಂತೆ ಆ ಮರವ
ಆಕಾಶ ನೋಡುತ್ತ ಮೆಲ್ಲ
ಆಗ ಬೀಳಬೇಕೇ ಒಂದು ಹಣ್ಣು
ಎತ್ತಿ ಕೊಡುವಂತೆ ಮುತ್ತು.