”ಒಳಗೆ ಕರುಳು ಕಿವುಚಿದಂತಾಯಿತು. ಇದುವರೆಗೂ ಕಪ್ಪು ಕತ್ತಲಲಿ ಮುಚ್ಚಿಟ್ಟ ಬೆಳಕನ್ನು ಕಿತ್ತೆಸೆದು ಹೊರಬರುವ ಸ್ವರಗಳು ಸಮಾಜವನ್ನೇ ಧಿಕ್ಕರಿಸಿ ಕೂಗಿದಂತೆ. ಎಂದಿನಿಂದಲೋ ಆ ಕಬ್ಬಿಣದ ಬಾಗಿಲಲ್ಲಿ ತೂಗಿಬಿದ್ದ ಬೀಗಗಳು ತಮ್ಮ ಕೀಲಿ ಕಳೆದುಕೊಂಡು… ತಮ್ಮನ್ನು ಬಂಧಿಸಿಟ್ಟು ಕೂಡಿ ಹಾಕಿದ ಗೋಡೆಗಳ ನಡುವೆ ನ್ಯಾಯದ ಕೀಲಿಯ ಹುಡುಕಾಟದಲ್ಲಿದ್ದಂತೆ ತೋರಿದವು.ಈ ಕಾಲದಲ್ಲೇ ಇದನ್ನು ಕೇಳುತಿದ್ದೇವೆ ಎನ್ನುವಂತೆ ಜೀನ್ಸ್ ತೊಟ್ಟ ಹುಡುಗಿಯರು ಕ್ಯಾಮೆರಾ ಕ್ಲಿಕ್ ಎನಿಸಿ ಬೆಳಕ ತೋರಿ ನಮ್ಮನ್ನೆಚ್ಚರಿಸಿದರು.ಅವರ ಕ್ಯಾಮೆರಾ ಅಲ್ಲಿ ಹರಿದಾಡುತ್ತಿದ್ದ ಇತಿಹಾಸವನ್ನು ಹುಡುಕುತ್ತಿದ್ದವು”
ಸುಜಾತಾ ತಿರುಗಾಟ ಕಥನ

 

ಇಕ್ಕಟ್ಟಿನ ದಾರಿ. ಪಿತುಗುಡುವ ಜನ. ಹೆಣ್ಣಿನ ಕಾಡಿಗೆ ಗಂಡಿನ ಕಣ್ಣಲ್ಲಿ… ಹೆಣ್ಣಿನ ಕಣ್ಣು ಕಪ್ಪು ಗೂಡಲ್ಲಿ. ಇದು ಗುಲ್ಬರ್ಗಾದ ತಾಜಾ ಬಂದಾ ನವಾಝ್ ದರ್ಗಾದ ಹಾದಿ. ಎರಡೂ ಅಕ್ಕಪಕ್ಕದಲ್ಲಿ ಕೂಗಿ ಕರೆವ ಗುಲಾಬಿ ಹಾರಗಳು. ಅದರಿಂದ ಬರುವ ತಾಜಾ ಗಂಧಕ್ಕೆ ಸಾಕ್ಷಿಯಾಗಿ ಮುತ್ತುತ್ತಿದ್ದ ಜೇನ್ನೊಣದ ಸದ್ದು. ಪರಿಮಳಕ್ಕೆ ಮೂಗರಳಿಸಿ ಗಮನಿಸಿದರೆ ಈಗ ಅಪರೂಪವಾಗಿರುವ ನಾಟಿ ತಳಿ ಪನ್ನೀರು ಗುಲಾಬಿ ರಾಶಿ ರಾಶಿ ಇದ್ದವು. ತೆಂಗಿನಕಾಯಿ ಗುಡ್ಡೆಯವರೂ ಚಪ್ಪಲಿ ಬಿಡಲು ಒತ್ತಾಯವಿಟ್ಟು ಕೂಗುತ್ತಿದ್ದರು.

ಸೂಫಿಸಂತ “ಸಜ್ಜಾದೆ ಸಾಬ್” ಬದುಕಿ ಸಮಾಧಿಯಾಗಿ ಇಲ್ಲಿ ಐನೂರು ವರುಷಗಳು ಕಳೆದಿವೆ. ಹತ್ತಾರು ಗುಂಬಜ್ ಗಳಿವೆ. ಹೆಣ್ಣು ಹೃದಯದ ಸಂತರು ಬದುಕಿದ ಗುರುತಿಗೆ ಅವರ ಮಕ್ಕಳು ಮೊಮಕ್ಕಳು ಬಂಧುಗಳ ಭರ್ತಿ ಸಮಾಧಿಗಳೋ ಸಮಾಧಿಗಳು ದರ್ಗಾವನ್ನು ತುಂಬಿವೆ. ಅಂತೆಯೇ ಗುಂಬಜ್ ಒಳಮೈಗೆ ಮೆತ್ತಿದ ಕನ್ನಡಿ ಚೂರುಗಳ ಹೊಳೆಹೊಳೆಯುವ ರತ್ನ ಕಿರಣಗಳ ಕಣ್ಣುಕಟ್ಟಿನ ಹೊಳಪು ಇರುಳಲ್ಲಿ ಕಣ್ಸೆಳೆಯುತ್ತವೆ. ಆದರೆ ಹೆಂಗಸರು ಬಗ್ಗಿ ನೋಡಿ ಮಾತ್ರ ಖುಶಿಪಡೆಯಬೇಕು. ಗುಮ್ಮಟದ ಒಳಗೆ ಹೆಂಗಸರ ಪ್ರವೇಶವಿಲ್ಲ.

ದರ್ಗಾದ ಆದಾಯದಲ್ಲಿ ಒಂದು ಶಿಕ್ಷಣ ಸಂಸ್ಥೆಯೂ ನಡೆಯುತ್ತಿದೆ. ನಾವು ಅಲ್ಲಿದ್ದ ಸಮಯದಲ್ಲಿ ವಿ. ಐ. ಪಿ ಯಂತೆ ಜನರ ನಡುವಲ್ಲಿ ಬಂದ ಅವರ ರಕ್ತ ಸಂಬಂಧೀ ಕುಟುಂಬದವರು ಜನರ ಅತ್ಯಾದರದಿಂದ ಸಲಾಮು ಸ್ವೀಕರಿಸಿ ಕೆಲವು ಸಮಾಧಿಗಳ ಬಟ್ಟೆ ತೆಗೆದಿಟ್ಟು ಅವರು ತಂದ ಹೂವಿನ ರಾಶಿಯಿಂದ ಅಲಂಕರಿಸಿ ಪೂಜೆಗೈದು ಹೋದರು. ಅದು ಹಳೆ ಕಾಲದ ಒಂದು ಕನಸಿನ ದಿನದಂತೆ ಆ ವಾತಾವರಣದಲ್ಲಿ ಕಾಣಿಸುತ್ತಿತ್ತು.

ದರ್ಗಾದ ತುಂಬ ಬೇಡುವ ಜನರು ತುಂಬಿಹೋಗಿದ್ದಾರೆ. ಅಸಹಾಯಕರ ಜೊತೆಗೆ ಬೇಡುವುದನ್ನ ರೂಢಿ ಮಾಡಿಕೊಂಡವರೂ ಇದ್ದಾರೆ. ಒಳಗೆ ಮೇಯುವ ಕುರಿಮರಿಗಳು ಸಿಗುತ್ತವೆ. ನಾಕಾರು ಕಬ್ಬಿಣದ ಬಾಗಿಲಿಗೆ ನೇತುಬಿದ್ದ ಸಾವಿರಾರು ಬೀಗಗಳು ಸಾವಿರಾರು ಕಥೆಯನ್ನು ಬಂಧಿಸಿ ಇಳಿಬಿದ್ದಿವೆ. ಎಕರೆಗಟ್ಟಳೆ ಹರಡಿರುವ ದರ್ಗಾಕ್ಕೆ ನಂಬಿಕೆಯೊಂದಿಗೆ ಬಂದು ಇದ್ದುಹೋಗುವ ಜನಸಂಖ್ಯೆ ಸಾವಿರಾರು. ಅಲ್ಲಿಗೆ ನಡೆದುಕೊಳ್ಳುವ ಎಲ್ಲರೂ ಮುಂದಿರುವ ಕೊಳದಲ್ಲಿ ಕೈ ಕಾಲು ಮುಖ ತೊಳೆದು ಮುಂದೆ ಸಾಗುತ್ತಾರೆ.

ಅಲ್ಲಲ್ಲೇ ಮುಸ್ಲಿಮ್ ಹಾಗೂ ಹಿಂದು ಕುಟುಂಬಗಳು ಬಟ್ಟೆ ಹಾಸಿ ಒಂದೆರಡು ದಿನ ಇದ್ದು ತಮ್ಮ ಮನಸ್ಸಿನ ಸಂಕಲ್ಪದ ಹರಕೆ ಹೊರುತ್ತಾರೆ. ಬಂದು ಸೇವೆ ಮಾಡುತ್ತಿರುತ್ತಾರೆ. ಸೂಫಿ ಕಾಲದಿಂದಲೂ ಬೇರೂರಿದ ಅಲ್ಲಿನ ಬೇವಿನ ಮರದ ಬೇರ ನೆರಳಲ್ಲಿ ಅವರ ನಂಬಿಕೆಗಳು ಅಡಗಿ ಕುಳಿತಿವೆ. ಉರಿಯುವ ಬಿಸಿಲಿನಲ್ಲೂ ಕಪ್ಪುಬಟ್ಟೆ ಹೊದ್ದು ಕತ್ತಲು ಗುಮ್ಮಗಳಂತೆ ಓಡಾಡುವ ಮುಸ್ಲಿಮ್ ಹೆಣ್ಣುಗಳನ್ನು ಅವರ ಉಸಿರುಗಟ್ಟಿಸುವ ಪರದೆಯೊಳಗಿಂದ ಕೈ ಬೀಸಿ ದರ್ಗಾದ ತಂಪು ನೆರಳು ಕರೆಯುತ್ತಿದೆಯೇನೋ ಎಂದನ್ನಿಸುತ್ತದೆ.

ಆಮ್ಲಜನಕ ಅವರಿಗೆ ಬಿಡುಗಡೆಯ ಉಸಿರೊಂದನ್ನು ಎಳೆದು ತರುವಂತೆ ನನಗೆ ಅನ್ನಿಸಿದ್ದು ಯಾಕೋ ಏನೋ ನನಗೇ ಗೊತ್ತಾಗಲಿಲ್ಲ. ಇಲ್ಲಿ ಮಾನಸಿಕ ವ್ಯಾಕುಲತೆಯಿರುವ ಬಳಲುವ ಹೆಣ್ಣುಗಳು ಬಂದು ಸೂಫಿ ಸಮಾಧಿಗೆ ಶಿರಬಾಗಿ ಹಣೆಹಚ್ಚಿ ಕುಳಿತಿರುತ್ತಾರೆ. ಅವರೊಂದಿಗೆ ಅವರ ಬಂಧುಗಳು. ಆದರೆ ವ್ಯಾಕುಲತೆಯ ಗಂಡುಗಳ ಸಂಖ್ಯೆ ಶೇಖಡಾ ಐದು ಇರಬಹುದು. ಹುಶಾರಾದವರು ಅಲ್ಲಿ ಗುಡಿಸುವ ಹಾಗೂ ಬಂದವರ ಸಹಾಯಕ್ಕೆ ಕೈ ಹಚ್ಚುತ್ತಾ ಇಲ್ಲದಿರೆ ಹರಕೆ ತೀರಿಸುತ್ತ ಅಲ್ಲಿಗೆ ನಡೆದುಕೊಳ್ಳುತ್ತಾರೆ. ಎಲ್ಲಾನೋಡಿ ಕೊನೆಗೆ ಇಳಿದಿಳಿದು ಬಲ ತುದಿಗೆ ಬಂದೆವು.

ಭೂಮಿಯೊಳಗೆ ಬಿಟ್ಟ ಬೇರಲ್ಲಿ ನಿಲ್ಲಲಾರದೆ, ಭಾರವನ್ನೂ ತಡೆಯದೆ, ನೆಲಕ್ಕೆ ತನ್ನ ಮೈಭಾರ ಒರಗಿಸಿ, ನೆರಳು ನೀಡುತ್ತಿದ್ದ ಆ ಪುರಾತನ ಬೇವಿನಮರದ ಕೆಳಗಿನ ಸಂತನ ಸಮಾಧಿಗೆ ಹಣೆ ಹಚ್ಚಿ ಕುಳಿತಿದ್ದ ಕೆಲವರು ಆ ಉರಿಬಿಸಿಲಲ್ಲೂ ಕಪ್ಪು ಗುಮ್ಮಗಳಂತೆ ಬುರ್ಕಾ ತೊಟ್ಟೇ ಕುಳಿತಿದ್ದರು. ತಮ್ಮ ಗುರುತನ್ನೇ ಮುಚ್ಚಿ ಕುಳಿತಿದ್ದ ಹೆಂಗಸರ ಕಣ್ಣನ್ನು ನೋಡುತ್ತಾ ನಿಂತಾಗ…..

ಅದೇನದು? ಆ ಆಲಾಪನೆ. ಅಳುತ್ತಳುತ್ತಲೇ ತಮ್ಮ ನಿವೇದನೆಯನ್ನು ಹೇಳಿಕೊಳ್ಳುವಂಥ ಸ್ವರಗಳು. ಅದು… ಅದು…ಹೆಣ್ಣುಗಳದ್ದು. ಉರಿಉರಿ ಸೂರ್ಯನಡಿ ಕಣ್ಣುಚುಚ್ಚುವ ಬೆಳಕ ಕಿರಣದ ಅಡಿಯಲ್ಲಿ ಒಳಗೇ ಬೆಂದು ಬಸವಳಿದು ಓಡಾಡುವ ಕಪ್ಪುಗುಮ್ಮಗಳ ಜೀವಸ್ವರ. ಹುಚ್ಚು ಹೆಚ್ಚಾದ ಹೆಣ್ಣುಗಳನ್ನು ಅಲ್ಲಿ ಕೂಡಿ ಹಾಕಿರುತ್ತಾರೆ. ಆ ನಂತರ ದೇವರ ಹರಕೆಯಿಂದ ಸುಧಾರಿಸಿದ ನಂತರ ಅವರನ್ನು ಹೊರಬಿಡಲಾಗುತ್ತದೆ ಎಂದು ತಿಳಿಯಿತು.

ಒಳಗೆ ಕರುಳು ಕಿವುಚಿದಂತಾಯಿತು. ಇದುವರೆಗೂ ಕಪ್ಪುಕತ್ತಲಲಿ ಮುಚ್ಚಿಟ್ಟ ಬೆಳಕನ್ನು ಕಿತ್ತೆಸೆದು ಹೊರಬರುವ ಸ್ವರಗಳು ಸಮಾಜವನ್ನೇ ಧಿಕ್ಕರಿಸಿ ಕೂಗಿದಂತೆ. ಎಂದಿನಿಂದಲೋ ಆ ಕಬ್ಬಿಣದ ಬಾಗಿಲಲ್ಲಿ ತೂಗಿಬಿದ್ದ ಬೀಗಗಳು ತಮ್ಮ ಕೀಲಿ ಕಳೆದುಕೊಂಡು… ತಮ್ಮನ್ನು ಬಂಧಿಸಿಟ್ಟು ಕೂಡಿ ಹಾಕಿದ ಗೋಡೆಗಳ ನಡುವೆ ನ್ಯಾಯದ ಕೀಲಿಯ ಹುಡುಕಾಟದಲ್ಲಿದ್ದಂತೆ ತೋರಿದವು.

ಸೂಫಿ ಕಾಲದಿಂದಲೂ ಬೇರೂರಿದ ಅಲ್ಲಿನ ಬೇವಿನ ಮರದ ಬೇರ ನೆರಳಲ್ಲಿ ಅವರ ನಂಬಿಕೆಗಳು ಅಡಗಿ ಕುಳಿತಿವೆ. ಉರಿಯುವ ಬಿಸಿಲಿನಲ್ಲೂ ಕಪ್ಪುಬಟ್ಟೆ ಹೊದ್ದು ಕತ್ತಲು ಗುಮ್ಮಗಳಂತೆ ಓಡಾಡುವ ಮುಸ್ಲಿಮ್ ಹೆಣ್ಣುಗಳನ್ನು ಅವರ ಉಸಿರುಗಟ್ಟಿಸುವ ಪರದೆಯೊಳಗಿಂದ ಕೈ ಬೀಸಿ ದರ್ಗಾದ ತಂಪು ನೆರಳು ಕರೆಯುತ್ತಿದೆಯೇನೋ ಎಂದನ್ನಿಸುತ್ತದೆ.

ಈ ಕಾಲದಲ್ಲೇ ಇದನ್ನು ಕೇಳುತಿದ್ದೇವೆ ಎನ್ನುವಂತೆ ಜೀನ್ಸ್ ತೊಟ್ಟ ಹುಡುಗಿಯರು ಕ್ಯಾಮೆರಾ ಕ್ಲಿಕ್ ಎನಿಸಿ ಬೆಳಕ ತೋರಿ ನಮ್ಮನ್ನೆಚ್ಛರಿಸಿದರು. ಅವರ ಕ್ಯಾಮೆರಾ ಅಲ್ಲಿ ಹರಿದಾಡುತ್ತಿದ್ದ ಇತಿಹಾಸವನ್ನು ಹುಡುಕುತ್ತಿದ್ದವು. ಮೇಲೆ ಬರಲು ಮೆಟ್ಟಿಲು ಹತ್ತುವಾಗ ಮರದ ಕಲ್ಲುಕಟ್ಟೆಯ ಮೇಲೆ ಗಿಳಿಗಳ ಕಚಿಪಿಚಿ. ಅಡ್ಡಾಡುವ ಮೇಕೆಮರಿಗಳ ನಡುವೆ ಒಬ್ಬಳು ಕೈ ಬೀಸಿ ಕರೆದು ಕಟ್ಟೆಯ ಮೇಲಿನ ಕಸೂತಿಯ ಪರದೆ ಎತ್ತಿ ಕಲ್ಲಮೇಲೆ ಕೆತ್ತಿದ್ದ ಗಿಳಿ ಚಿತ್ರವೊಂದನ್ನು ತೋರಿದಳು. ಅದಕ್ಕೆ ಹರಕೆ ಎಂದು ಸಕ್ಕರೆ ಚೆಲ್ಲಿದ್ದರು. ದಕ್ಷಿಣೆವಸೂಲಿಯಾದ ಮೇಲೆ ಪಕ್ಕಕ್ಕಿದ್ದ ಛಾದರವಿಲ್ಲದ ಒಂದು ಕೊಠಡಿಗೆ ಕರೆದುಕೊಂಡು ಹೋದಳು.

ಅಲ್ಲಿ ಒಂದು ಸಮಾಧಿ. ಅದು ಮುಖ್ಯ ಸಂತರ ಮಗಳದಂತೆ. ಅವರಿಗೆ ಹೆಣ್ಣು ಮಕ್ಕಳು ಬಲು ಇಷ್ಟವಂತೆ. ಆದರೆ ಅವರಿಗೆ ಗಂಡುಮಗು ಆಯಿತಂತೆ. ಆಮೇಲೆ ಅವರು ದೇವರಿಗೆ ಸಲ್ಲಿಸಿದ ಬೇಡಿಕೆಯಿಂದ ಅದು ತಟ್ಟನೆ ಹೆಣ್ಣಾಯಿತಂತೆ. ಅಲ್ಲೇ ಮೂಲೆಯಲ್ಲಿ ಇನ್ನೊಂದು ಮರಿ ಸಮಾಧಿಯಲ್ಲಿದ್ದವಳು ಅವಳ ಹೆಣ್ಣು ಮಗು. ಮೊದಲು ತೋರಿದ ತೋತೆ ಅಂದ್ರೆ ಕಲ್ಲಲ್ಲಿ ಕೆತ್ತಿದ ಗಿಳಿ ಅವಳದಂತೆ.

ಅದೂ ಕೂಡ ಅವಳಂತೆ ದೇವರ ಸೇವೆಯ ಮಾತುಗಳನ್ನು ಕಣಿಕಣಿನೆ ಆಡುತಿತ್ತೆಂದು ಹೇಳಿದಳು. ಮರದ ಮೇಲಿನ ಗಿಳಿಗಳು ಕಿಚಗುಡುತ್ತ ಅಹುದಹುದೆಂದವು. ಗೋಡೆಯಲ್ಲಿದ್ದ ದೀಪದ ಗೂಡಲ್ಲಿ ಎಣ್ಣೆಯಿಳಿಬಿಟ್ಟ ದೀಪವೂ ಅದರ ಮಸಿಯೂ ಕಾಲಕಾಲದಿಂದಲೂ ಉರಿದು ಆರಿದಂತೆ ತೋರುತ್ತಿದ್ದವು.

ಇಲ್ಲಿ ಔರಂಗ಼ಝೇಬನ ಮಗಳೂ ಬಂದು ಶಿಷ್ಯೆಯಾಗಿ ಇದ್ದಳೆಂದೂ, ಅಂತೆಯೇ ಅವಳನ್ನು ಹುಡುಕಿಬಂದ ತಂದೆಯೂ ಕೆಲಕಾಲ ಇದ್ದರೆಂದು ದಾಖಲೆಗಳಿವೆ. “ಭವದ ಮುಕ್ತಿ ಭಕ್ತಿಯಲ್ಲಿ ತಾನೇ” ಅನ್ನಿಸಿತು. ಹಾಗೆಯೇ ಈ ಸೂಫಿಸಂತರ ಹಿಂದು ಶಿಷ್ಯ ರಾಣಾ ಇವರಿಂದ ಬೇರ್ಪಟ್ಟು ಅನಿತು ದೂರದಲ್ಲಿ ಎತ್ತರದ ಜಾಗದಲ್ಲಿ ನೆಲೆಯಾಗಿದ್ದರಿಂದ ರಾಣಾ ದರ್ಗಾ ಎಂದು ಹೆಸರಾಗಿ ಅದು ಇವತ್ತಿಗೂ ಉಳಿದಿದೆ. ಹಾಗೆಯೇ ಇದು ಜಾತೀಯತೆಯ ನೆಲೆಯ ಒಂದು ಉದಾಹರಣೆಯಾಗಿ ನಿಂತಿದೆ ಎಂದು ಇತಿಹಾಸಕಾರರು ಗುರುತಿಸುತ್ತಾರೆ.

ಅದೇನೇ ಇರಲಿ. ಇದಕ್ಕೆ ಹೆಣೆದುಕೊಂಡ ಜನಸಾಮಾನ್ಯನೊಬ್ಬನ ಕಥೆಯೊಂದಿರುತ್ತದಲ್ಲ! ನಮ್ಮ ಕಾರು ಚಲಿಸುವಾಗ ಎತ್ತರದಲ್ಲಿದ್ದ ಆ ದರ್ಗಾವನ್ನು ತೋರಿ ಚಾಲಕರು ಹೇಳಿದ್ದು ಹೀಗೆ…. ರಾಣಾನ ದರ್ಗಾದಲ್ಲಿ ನಿಂತಾಗ ಬಂದೇ ನವಾಜಿನ ಅಕ್ಕಪಕ್ಕದ ಸ್ಥಳವೆಲ್ಲವೂ ನಿಚ್ಚಳವಾಗಿ ಕಾಣುತ್ತವೆ. ಆದರೆ ಬಂದೇ ನವಾಝರ ದರ್ಗಾ ಕಂಡು ಬರುವುದಿಲ್ಲ.

ಇದು ಗುರುವನ್ನು ತಲುಪಲಾಗದ ಶಿಷ್ಯನ ಹುಡುಕಾಟದಂತೆ ಕಾಣಿಸಿತು. ಇದರ ಸುತ್ತಲೂ ಅವರ ಭಕ್ತರು ಕಟ್ಟಿದ ಎತ್ತರದ ಗೋಡೆ ಅಥವಾ ವಾಸ್ತುಶಿಲ್ಪದಿಂದ ಅದು ಕಾಣದೆ ಇರಬಹುದೇನೋ…….

ಆದರೆ ಚಾಲಕರ ಇನ್ನೊಂದು ಮಾತು ನಗು ತರಿಸುವಂಥದ್ದು. ಅವು ಸರಳ ಮಾತುಗಳಾಗಿದ್ದರೂ ಮಾರ್ಮಿಕವಾಗಿ ಕಂಡವು. ಏನೆಂದರೆ ಗುರುವಿರುವೆಡೆಯಲ್ಲಿ ಕುರಿ ಬಲಿ ಆಗುವುದನ್ನು ನೋಡಲಾರದೆ ತಡೆಯಲಾರದೆ ಅದನ್ನು ಸಹಿಸದೆ ಈ ರಾಣಾ ಎಂಬ ಶಿಷ್ಯ ಸಿಡಿದು ದೂರದಲ್ಲಿ ನೆಲೆಗೊಂಡರೆಂಬುದು.

ಇವತ್ತಿಗೂ ನಾವು ತಿನ್ನುವ ಆಹಾರ ಪದ್ಧತಿಗಳನ್ನು ಅನುಸರಿಸಿ, ಸಮಾಜ ಅದರ ಸುತ್ತ ಕಟ್ಟುತ್ತಿರುವ ಕೋಟೆ ಗೋಡೆಗಳು ಅಂದೂ ಎದ್ದು ನಿಂತಿರಬಹುದೋ ಏನೋ? ಭೂಮಿ ಮೇಲೆದ್ದ ಗೋಡೆಗಳಿಗೆ ಎಷ್ಟೊಂದು ಕತೆಗಳು.