ಗ್ರಾಮೀಣ ಭಾಗದ ಜನಜೀವನವನ್ನು ಆರಂಭದ ಎರಡು ಕಥೆಗಳಲ್ಲಿ ತೋರ್ಪಡಿಸುತ್ತಲೇ ಜಾಗತೀಕರಣದ ಸಮಸ್ಯೆಗಳಿಗೆ ಹಾರೊಗೇರಿ ತೆರೆದುಕೊಳ್ಳುವ ಕಥನಗಾರಿಕೆ ವಿಶಿಷ್ಟವಾದದ್ದು. ಆಧುನಿಕ ಕಾಲದಲ್ಲೂ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ‘ನಿಂದ ನಿಲುವಿನ ಘನ’ ಕಥೆಯ ಮಾನಿಂಗಯ್ಯನಂತವರು ದಲಿತ ಮಹಿಳೆಯರ ಮೇಲೆ ನೀರೆರೆಚುವ ಪದ್ಧತಿಯು ಆತನ ರಾಕ್ಷಸ ಸ್ವಭಾವ ತೋರುತ್ತದೆ. ಮೇಲ್ವರ್ಗದ ಈ ಸಂಪ್ರದಾಯವನ್ನು ರಮೇಶನ ಪ್ರಭಾವದಿಂದ ಕೆಂಚವ್ವಳು ನೀರೋಕುಳಿ ಆಚರಣೆಗೆ ವಿರೋಧಿಸುತ್ತಾಳೆ.
ಕಲ್ಲೇಶ್ ಕುಂಬಾರ್ ಬರೆದ‌ ‘ನಿಂದ ನಿಲುವಿನ ಘನʼ ಕಥಾಸಂಕಲನದ ಕುರಿತು ಡಾ.ಎಂ.ವೇದಾಂತ ಏಳಂಜಿ ಬರಹ

 

ಕಲ್ಲೇಶ ಕುಂಬಾರ್ ಅವರು ‘ಉರಿಯ ನಾಲಿಗೆಯ ಮೇಲೆ’ ಮತ್ತು ‘ಉಸುರಿನ ಪರಿಮಲವಿರಲು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿ ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿದ್ದಾರೆ. ಇದೀಗ ‘ನಿಂದ ನಿಲುವಿನ ಘನ’ ಎನ್ನುವ ಮತ್ತೊಂದು ಕಥಾಸಂಕಲವನ್ನು ಹೊರತಂದಿದ್ದಾರೆ. ಮೊದಲೆರಡು ಕಥಾಸಂಕಲನದಿಂದ ಮೂಡಿಸಿದ್ದ ಭರವಸೆಯನ್ನು ಮೂರನೇ ಕೃತಿಯಲ್ಲಿಯೂ ಉಳಿಸಿಕೊಂಡಿದ್ದಾರೆ. ಇದರಲ್ಲಿ ಒಂಬತ್ತು ಕಥೆಗಳಿವೆ. ಈ ಸಂಕಲನವು ಹಲವು ಕಾರಣಗಳಿಂದ ವೈಶಿಷ್ಟ್ಯಪೂರ್ಣವಾಗಿದ್ದು ಓದುಗರ ಗಮನ ಸೆಳೆಯುತ್ತದೆ.

ಬಹುತೇಕ ಕಥೆಗಳ ಕ್ರಿಯಾಕ್ಷೇತ್ರವು ತಾವು ವಾಸಿಸುವ ಹಾರೊಗೇರಿಯಾಗಿದ್ದು, ಅಲ್ಲಿನ ಜೀವಾತ್ಮಗಳನ್ನು ತಮ್ಮ ಒಡಲಿನಲ್ಲಿ ಅಡಗಿಸಿಕೊಂಡು ವಸ್ತುಗಳನ್ನಾಗಿಸಿಕೊಂಡಿದ್ದಾರೆ. ಕಥನಗಾರಿಕೆಯ ಮುಖ್ಯ ಕೇಂದ್ರ ಬಿಂದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು. ಅವರ ನೋವುಗಳನ್ನು ತನ್ನ ನೋವೆಂದು ಪರಿಗಣಿಸಿ ಚಿಕಿತ್ಸಕ ದೃಷ್ಠಿಯಲ್ಲಿ ನೋಡುವ ಅವರ ಕಥನಗಾರಿಕೆಯಲ್ಲಿ ಬಹುಮುಖ್ಯವಾಗಿ ಎರಡು ಅಂಶಗಳನ್ನು ಗುರುತಿಸಬಹುದು. ಒಂದು ಹಾರೊಗೇರಿಯ ಒಳಗಿನ ಸಾಮಾನ್ಯರ ಜನಜೀವನದ ಕಥಾತತ್ವ. ಎರಡನೆಯದು ಆಧುನೀಕರಣ, ಜಾಗತೀಕರಣ, ಖಾಸಗೀಕರಣಗಳಿಂದಾಗಿ ಹಾರೊಗೇರಿಯಲ್ಲಿ ಉಂಟಾದ ಬದಲಾವಣೆಗಳು. ಈ ತಾತ್ವಿಕ ಮೌಲ್ಯಗಳನಿಟ್ಟು ಕಥೆಯನ್ನು ಕಟ್ಟುವಾಗ ಯಾವುದು ವಾಸ್ತವ ಮತ್ತು ಯಾವುದು ಕಲ್ಪನೆಯೆಂಬುದು ತಿಳಿಯದಂತೆ ಮಾಡುತ್ತಾರೆ.

(ಕಲ್ಲೇಶ್ ಕುಂಬಾರ್)

ಕಥೆಯನ್ನು ನಿರೂಪಿಸಲಿಕ್ಕೆ ಬಳಸುವ ಹಿನ್ನೋಟ ತಂತ್ರ. ಸಣ್ಣ ವಿವರಗಳಿಂದ ಕಾವ್ಯದ ಶೈಲಿಯಲ್ಲಿ ಆರಂಭವಾಗುವ ನಿರೂಪಣಾ ಶೈಲಿ. ವರ್ತಮಾನದಲ್ಲಿ ಗತಿಸಿ ಹೋದ ಬದುಕಿನ ಬಗೆಗೆ ಮೂಡಿಸುವ ಅಸ್ಪಷ್ಟ ಚಿತ್ರಣವನ್ನು ಭೂತದಲ್ಲಿ ಹೆಚ್ಚು ನಿರೂಪಿತವಾಗುವ ಇಲ್ಲಿನ ಕಥೆಗಳು ಒಂದೊಂದು ವಿಶಿಷ್ಟ ಅನುಭವಗಳನ್ನು, ದರ್ಶನವನ್ನು ನೀಡುತ್ತಾ ಕ್ರಮೇಣ ಕೇಂದ್ರ ಪಾತ್ರಗಳ ವಿರಾಟ್ ಸ್ವರೂಪವನ್ನೇ ಪರಿಚಯಿಸುತ್ತವೆ. ಗಂಡು ಪಾತ್ರಗಳಿಗಿಂತಲೂ ಹೆಣ್ಣು ಪಾತ್ರಗಳಿಗೆ ಜೀವ ತುಂಬುವ ಇಲ್ಲಿನ ಕಥೆಗಳು ನಾಗವ್ವ, ತಾರವ್ವ, ಸಾವಿತ್ರಿ, ಮಾಯವ್ವ, ಕೆಂಚವ್ವ, ರಜಿಯಾ, ಹೂ ಹುಡುಗಿಯಂತಹ ಪಾತ್ರಗಳ ಅಂತರಂಗವನ್ನು ಒಳಹೊಕ್ಕವಂತೆ ಕಂಡುಬರುತ್ತವೆ. ಹೆಣ್ಣಿನ ನೋವು-ನಲಿವುಗಳಿಗಿಂತಲೂ ಹೆಚ್ಚಾಗಿ ನೋವುಗಳಿಗೆ ಮುಕ್ತಿಯನ್ನು ನೀಡುವಲ್ಲಿ ಇಲ್ಲಿನ ಹೆಣ್ಣು ಪಾತ್ರಗಳು ಚಿತ್ರಿತವಾಗಿವೆ. ಹಾಗಂತ ಕಥೆಯನ್ನು ಪರಿಪೂರ್ಣವಾಗಿ ಕಟ್ಟುವುದಿಲ್ಲ. ಕಥೆಯೆಂಬುದು ಅರ್ಧ ಸತ್ಯವೆಂಬುದು ಎಷ್ಟು ಸತ್ಯವೋ ಅದರ ಚೌಕಟ್ಟಿನೊಳಗೆ ಪಾತ್ರಗಳಿಗೆ ನ್ಯಾಯ ಒದಗಿಸಬಲ್ಲವು. ದುರಿತ ಕಾಲದ ಸಂದರ್ಭದಲ್ಲಿ ಈ ನಿಲುವುಗಳು ಆಧುನಿಕ ಕಥನ ಪರಂಪರೆಗೆ ಅಗತ್ಯವೂ ಹೌದು.

ಕಲ್ಲೇಶ ಕುಂಬಾರ್ ಅವರ ಕಥೆಗಳು ಮನುಷ್ಯ ಸಂಬಂಧಗಳಲ್ಲಿ ಸಾಮಾಜಿಕ ಚಹರೆಯನ್ನು ಹುಡುಕುತ್ತಾ, ಮನುಷ್ಯ ಬದುಕಿನ ನೈತಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ಅದರ ತಿರುಳನ್ನು ಬಿಡಿಸಿಡುತ್ತವೆ. ಕಥೆಗಳ ತಾತ್ವಿಕ ನಿಲುವುಗಳು ಸಹಜವೆಂಬಂತೆ ನಿರೂಪಿಸುವ ಕಾರಣಕ್ಕೆ ನಮ್ಮ ಸುತ್ತಲಿನಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳು ಎಂಬಂತೆ ಭಾಸವಾಗುತ್ತವೆ. ಸಂಕಲನದ ಒಟ್ಟು ಕಥೆಗಳನ್ನು ಗಮನಿಸಿದಾಗ ಒಂದು ಕಥೆಯು ಮತ್ತೊಂದು ಕಥೆಯ ವಸ್ತು-ವಿಷಯಗಳಲ್ಲಿ ಭಿನ್ನವಾದರೂ ಆ ಪಾತ್ರಗಳು ಮತ್ತೊಂದು ಕಥೆಯಲ್ಲಿ ಬೇರೊಂದು ಸ್ವರೂಪದಲ್ಲಿ ಮೈದಾಳಿವೆ. ಬಿಡಿ ಕಥೆಗಳನ್ನು ಓದಿದಾಗ ಅನುಭವ ಭಿನ್ನವಾದರು, ಒಟ್ಟಿಗೆ ನೋಡಿದಾಗ ಒಂದು ಕಥೆಯ ಪಾತ್ರಗಳ ಸಮಸ್ಯೆ ಮುಗಿದು, ಬೇರೊಂದು ಕಥೆಯಲ್ಲಿ ಮರುಸೃಷ್ಟಿಗೊಂಡು ಹೋರಾಡಿದಂತೆ ಕಂಡುಬರುತ್ತವೆ.

ಕಥೆಯಿಂದ ಕಥೆಗೆ ಭಿನ್ನವಾಗಿದ್ದರು ಅದರ ಅಂತರಸಂಬಂಧಗಳಿಂದಾಗಿ ಬಿಡಿ ಬಿಡಿ ಭಾಗಗಳ ಕಾದಂಬರಿಯ ಸ್ವರೂಪದಂತೆ ಭಾಸವಾಗುತ್ತವೆ. ಅವರ ಕಥಾವಸ್ತುವಿನ ಗಟ್ಟಿತನ, ಪ್ರಾದೇಶಿಕ ಭಾಷೆಯ ತಾಜಾತನ, ಹದವರಿತ ಸಂಭಾಷಣಾ ಚಾತುರ್ಯ, ಗ್ರಾಮೀಣ ಸೊಗಡು, ದಲಿತರ ಮುಗ್ಧತೆಯ ಚಿತ್ರಣ, ನಿರೂಪಣಾ ತನ್ಮಯತೆ, ಸಂಪ್ರದಾಯ ಮತ್ತು ಜಾತಿ ಸಂಘರ್ಷ, ಗ್ರಾಮೀಣ ಬದುಕು, ಬಡತನ, ರೈತ ಸಂಕಷ್ಟಗಳು, ಸ್ತ್ರೀಸಂವೇದನೆ, ಮೌಢ್ಯತೆ, ನಗರ ಜೀವನದ ವಿಷಾಧತೆ, ಜೀವನೋತ್ಸಾಹದಂತಹ ವಿಷಯಗಳು ಇಲ್ಲಿನ ಕಥೆಗಳಿಗೆ ಪ್ರಮುಖ ವಸ್ತುಗಳಾಗಿವೆ. ಉತ್ತರ ಕರ್ನಾಟಕದ ಪ್ಯೂಡಲ್ ವ್ಯವಸ್ಥೆಯು ಮೋಜಿಗಾಗಿ ಸೃಷ್ಠಿಸಿಕೊಂಡ ಆಚರಣೆಗಳನ್ನು, ಸಾಮಾಜಿಕ ಸಮಸ್ಯೆಗಳ ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಸದ್ದಿಲ್ಲದೆ ಪಲ್ಲಟಗೊಳಿಸಿ ಬಂಡಾಯ ಸಾರುತ್ತವೆ.

ಗ್ರಾಮೀಣ ಭಾಗದ ಜನಜೀವನವನ್ನು ಆರಂಭದ ಎರಡು ಕಥೆಗಳಲ್ಲಿ ತೋರ್ಪಡಿಸುತ್ತಲೇ ಜಾಗತೀಕರಣದ ಸಮಸ್ಯೆಗಳಿಗೆ ಹಾರೊಗೇರಿ ತೆರೆದುಕೊಳ್ಳುವ ಕಥನಗಾರಿಕೆ ವಿಶಿಷ್ಟವಾದದ್ದು. ಆಧುನಿಕ ಕಾಲದಲ್ಲೂ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ‘ನಿಂದ ನಿಲುವಿನ ಘನ’ ಕಥೆಯ ಮಾನಿಂಗಯ್ಯನಂತವರು ದಲಿತ ಮಹಿಳೆಯರ ಮೇಲೆ ನೀರೆರೆಚುವ ಪದ್ಧತಿಯು ಆತನ ರಾಕ್ಷಸ ಸ್ವಭಾವ ತೋರುತ್ತದೆ. ಮೇಲ್ವರ್ಗದ ಈ ಸಂಪ್ರದಾಯವನ್ನು ರಮೇಶನ ಪ್ರಭಾವದಿಂದ ಕೆಂಚವ್ವಳು ನೀರೋಕುಳಿ ಆಚರಣೆಗೆ ವಿರೋಧಿಸುತ್ತಾಳೆ. ಮಾನಿಂಗಯ್ಯನ ಅಸ್ತಿತ್ವವನ್ನು ಬುಡಮೇಲು ಮಾಡಲು ಹೊರಟಿರುವ ರಮೇಶನನ್ನು ಬಲಿ ಪಡಿಯುತ್ತಾನೆ. ಮಗನಿಗಾಗಿ ಹಂಬಲಿಸಿ ಕೆಂಚವ್ವಳು ಜೀವ ಬಿಡುತ್ತಾಳೆ. ಆ ಜಾಗದಲ್ಲಿ ಮಗಳು ಮಾಯವ್ವಗೆ ನೀರೋಕುಳಿಯ ವಿಳ್ಯ ಕೊಟ್ಟಾಗ, ಗೌಡನ ವಿರುದ್ಧ ರಮೇಶನ ಅಶರೀರವಾಣಿಯಿಂದ ಪ್ರೇರಣೆ ಪಡೆದ ಮಾಯವ್ವ ಕಾನೂನು ಸಮರಕ್ಕೆ ಸಿದ್ಧಳಾಗುತ್ತಾಳೆ.

ಅವರ ನೋವುಗಳನ್ನು ತನ್ನ ನೋವೆಂದು ಪರಿಗಣಿಸಿ ಚಿಕಿತ್ಸಕ ದೃಷ್ಠಿಯಲ್ಲಿ ನೋಡುವ ಅವರ ಕಥನಗಾರಿಕೆಯಲ್ಲಿ ಬಹುಮುಖ್ಯವಾಗಿ ಎರಡು ಅಂಶಗಳನ್ನು ಗುರುತಿಸಬಹುದು. ಒಂದು ಹಾರೊಗೇರಿಯ ಒಳಗಿನ ಸಾಮಾನ್ಯರ ಜನಜೀವನದ ಕಥಾತತ್ವ.

ರಮೇಶನ ಆಶಯ ಜೀವಂತಗೊಳಿಸುವ ಆ ಧ್ವನಿಯನ್ನು ಅತೀತ ಶಕ್ತಿಯಂತೆ ಬಿಂಬಿಸದೆ ಕಥೆಗೆ ಸಹಜವೆಂಬಂತೆ ಚಿತ್ರಿಸುವುದು ಕಲ್ಲೇಶರ ವಿಶಿಷ್ಟತೆಗಳಲ್ಲಿ ಒಂದು. ಕಥೆಯನ್ನು ಹೀಗೂ ಕಟ್ಟಬಹುದು ಎಂಬುದಕ್ಕೆ ‘ಹೂ ಹುಡುಗಿ’ ನಿದರ್ಶನದಂತಿದೆ. ಪ್ರೀತಿಯಲ್ಲಿ ಅರಳಬೇಕಾದ ಯುವತಿ ಜಾತಿ ವ್ಯವಸ್ಥೆಯಲ್ಲಿ ಕಮರಿ ಕಣ್ಮರೆಯಾಗುತ್ತಾಳೆ. ಪ್ರೇಯಸಿಯ ನೆನಪೆಂಬ ಭಾವಗಳು ನಿರೂಪಕನಲ್ಲಿ ಕಾವ್ಯಮಯವಾಗಿ ಹೇಳುವ ಈ ಕಥೆಯು ಹೆಚ್ಚು ಆಪ್ತವೆನಿಸುತ್ತದೆ. ಕಥೆಯನ್ನು ಕಟ್ಟುವ ಧ್ಯಾನಸ್ಥ ಮನಸ್ಥಿತಿಗೆ ‘ಕಪಿಲೆ’ ಕಥನವು ಸಾಕ್ಷಿಯೆಂಬಂತಿದೆ. ಕಪಿಲೆಯೆಂಬ ಹಸುವನ್ನು ಮುಖ್ಯ ಪಾತ್ರವಾಗಿಸಿ, ಮನುಷ್ಯನಲ್ಲಿರಬೇಕಾದ ಪ್ರೀತಿ, ಅಪ್ಯಾಯಮಾನತೆಯನ್ನು ಹಸುವಿನಲ್ಲಿ ಕಾಣಿಸುವ ಮೂಲಕ ಮಾನವತಾವಾದವೊಂದನ್ನು ಸದ್ದಿಲ್ಲದೆ ಕಪಿಲೆಯ ಮೂಲಕ ಮನ ತಾಕಿಸುತ್ತದೆ. ನಮ್ಮೊಳಗಿನ ಅಂತಃಸತ್ವವನ್ನು ಎಚ್ಚರಿಸುವಂತೆ ಮಾಡುತ್ತಾರೆ. ಹಸುವಿಗೆ ಒಂದು ಭಾವವನ್ನು, ಭಾಷೆಯನ್ನು ಸೃಷ್ಟಿಸುವುದು, ಅದರ ಜೀವಂತಿಕೆಯನ್ನು ಹಿಡಿದಿಡುವುದು ಸಾಮಾನ್ಯಕ್ಕೆ ನಿಲುಕುವುದಲ್ಲ. ಆದರೆ ಕಲ್ಲೇಶರು ಅದನ್ನು ಸೃಷ್ಟಿಸಿದ ಪರಿ, ತಿದ್ದಿ ಬೆಳೆಸಿ ನಿರೂಪಿಸಿ ಓದುಗರಿಗೆ ಸಹಜವೆಂಬಂತೆ ಒಪ್ಪಿಸಿದ್ದಾರೆ.

ಕಥೆಗಾರನಿಗೆ ವರ್ತಮಾನದ ಸಂಗತಿಗಳ ಬಗ್ಗೆ ಮನಸ್ಸು ಸದಾ ತೆರೆದೇ ಇರಬೇಕಾಗುತ್ತದೆ ಎಂಬುದಕ್ಕೆ ‘ಒಳಗಣ ಜ್ಯೋತಿ’ ಕಥೆ ಮುಖ್ಯವಾಗುತ್ತದೆ. ಬೆಳಗಾವಿಯ ಸುವರ್ಣಸೌಧದ ಎದುರು ನಡೆದ ಕಬ್ಬು ಬೆಳೆಗಾರರ ಹೋರಾಟವನ್ನು ನೆನಪಿಸುವ ಈ ಕಥೆಯು ರೈತ ಬದುಕಿನ ದುರಂತವನ್ನು ತಿಳಿಸುವುದಲ್ಲದೆ, ರೈತ ಆತ್ಮಹತ್ಯೆಗಳಿಗೆ ಕಾರಣಗಳನ್ನು ಮತ್ತು ಉತ್ತರವನ್ನು ಹುಡುಕುತ್ತದೆ. ಸಾಮಾನ್ಯವಾಗಿ ಸರ್ಕಾರಗಳು ಬಂಡವಾಳಶಾಹಿ ಆಗಮನವನ್ನು ರೆಡ್ ಕಾರ್ಪೆಟಿನ ಸ್ವಾಗತಿಸುತ್ತವೆ. ಈ ನಡೆಗಳು ಸರ್ಕಾರಕ್ಕೆ ಲಾಭವನ್ನು ತಂದು ಕೊಟ್ಟರೆ, ರೈತರನ್ನು, ಕಾರ್ಮಿಕರನ್ನು ಅಡಿಯಾಳು ಆಗಿಸಿಕೊಳ್ಳುತ್ತದೆ. ಜನಸಾಮಾನ್ಯರ ಬದುಕನ್ನು ದುಬಾರಿಗೊಳಿಸುತ್ತದೆ. ಬಂಡವಾಳಶಾಹಿಗಳ ತಂತ್ರಗಳಿಗೆ ಸಂಗಣ್ಣನಂತಹ ಎಷ್ಟೋ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಪರಿತಪ್ಪಿಸುತ್ತಾರೆ. ಪರಿಹಾರಕ್ಕಾಗಿ ಸರ್ಕಾರದ ಕಡೆ ಮುಖಮಾಡುತ್ತಾರೆ. ಅಲ್ಲಿಯೂ ವಿಫಲವಾದಾಗ ಆತ್ಮಹತ್ಯೆಗೆ ಮುಂದಾಗುತ್ತಾರೆ. ರೈತ ಆತ್ಮಹತ್ಯೆಗಳನ್ನೇ ದಾಖಲಿಸದೆ ಪರಿಹಾರ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಸರ್ಕಾರದ ವಂಚಕತನಕ್ಕೆ ಈ ಕಥೆ ಬದುಕಿನ ಭರವಸೆಯನ್ನು ಮೂಡಿಸುತ್ತದೆ.

ಕಥೆಯ ಕೊನೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾರುಕಟ್ಟೆಯ ವಿರುದ್ಧ ದೇಸಿ ಉತ್ಪನ್ನವಾದ ಬೆಲ್ಲದ ಗಾಣವನ್ನು ಮರು ತಿರುಗಿಸುವ ಮೂಲಕ ತನ್ನದೇ ಸಾಂಪ್ರದಾಯಿಕ ಮಾರುಕಟ್ಟೆ ಸೃಷ್ಠಿಸಿಕೊಳ್ಳುವ ಆತನ ಛಲವೂ ಬಂಡವಾಳಶಾಹಿಗಳಿಗೆ ಸವಾಲಿನದ್ದು. ಗಾಂಧಿಜೀ ಸ್ವರಾಜ್ಯದ ಕಲ್ಪನೆಯನ್ನು, ಅಂಬೇಡ್ಕರ್ ಅವರ ರಾಷ್ಟ್ರ, ರಾಜ್ಯಗಳನ್ನು ಒಳಗೊಳ್ಳುವ ರಾಜಕೀಯ ಆರ್ಥಿಕತೆಯ ತತ್ವವನ್ನು ಅಳವಡಿಸಿಕೊಂಡರು ಉತ್ಪಾದಕ ವಲಯವು ಅನ್ಯರ ಕೈಗೆ ಸಿಲುಕದೆ ಕಾಪಾಡಿಕೊಳ್ಳುವುದು ಈ ಕಾಲದಲ್ಲಿ ಬಹುಮುಖ್ಯವಾದ ಅಂಶಗಳಲ್ಲಿ ಒಂದು. ಇಂತಹ ನಿಲುವುಗಳಿಂದಾಗಿ ಶ್ರಮಿಕರೇ ಮತ್ತೇ ಮತ್ತೇ ತೊಂದರೆ ಗೀಡಾಗುವುದನ್ನು ತಪ್ಪಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ‘ಒಳಗಣ ಜ್ಯೋತಿ’ ಕಥೆಯು ಭವಿಷ್ಯತ್ತಿಗೆ ಮಾರಕವಾಗುವುದನ್ನು ತಪ್ಪಿಸುವ, ಸ್ವಾಭಿಮಾನದಿಂದ ದುಡಿಯುವ ಮಾರ್ಗಗಳನ್ನು ತಿಳಿಸುವ ಕಥೆಯಾಗಿ ಮಹತ್ವದ್ದಾಗಿದೆ.

ಈ ಸಂಕಲನದ ಬಹುಮುಖ್ಯ ಕಥೆಗಳಲ್ಲಿ ‘ರಜಿಯಾ’ ಒಂದು. ಧಾರ್ಮಿಕ ವಿಚಾರಗಳು ಸೈದ್ಧಾಂತಿಕವಾಗಿ ಜಗತ್ತಿನ ಪ್ರೀತಿಯನ್ನು ಗಳಿಸುವಲ್ಲಿ ಎಲ್ಲಾ ಕಾಲಕ್ಕೂ ವಿಫಲವಾಗಿದೆ. ಭಾರತದಲ್ಲಿ ಅದರ ಕರಾಳ ಮುಖ ಇನ್ನೂ ಭಿನ್ನವಾದದ್ದು. ಬಾಲ್ಯದ ಸ್ನೇಹಬಂಧವು ಯೌವ್ವನದಲ್ಲಿ ಪ್ರೀತಿಯಾದಾಗ ತನ್ನ ಸ್ನೇಹದಲ್ಲಿ ಬಿರುಕು ಮೂಡುತ್ತದೆ. ಮನುಷ್ಯರಲ್ಲಿ ಸಹಜ ಪ್ರಕ್ರಿಯೆಯಾಗಿ ನಡೆಯಬೇಕಿದ್ದ ಅಂತರಜಾತಿ ವಿವಾಹಗಳು ಧಾರ್ಮಿಕ ಮುಖಂಡರ ಪ್ರತಿಷ್ಠೆಗೆ ಕಾರಣವಾಗಿವೆ. ಸರ್ಕಾರ, ಕೋರ್ಟ್‌ಗಳು ಲವ್ ಜಿಹಾದಿ ಮದುವೆಗಳ ದುರ್ಬಳಕೆಗಳ ಕುರಿತು ಸಾಕ್ಷಾಧಾರವಿಲ್ಲದೆ ಸ್ಪಷ್ಟವಾಗಿ ತಳ್ಳಿ ಹಾಕಿವೆ. ಆದರೂ ಧಾರ್ಮಿಕ ಸಂಘಟನೆಗಳ ತಲೆ ಮೇಲೆ ಹೊತ್ತು ಮೆರೆಸುತ್ತವೆ. ಯುವಕರಲ್ಲಿ ಜೀವಪರತೆಯನ್ನು ಮರೆಮಾಡಿಸಿ ಕಥೆಯ ಶಿವ್ರಾಜನಂತಹ ಧಾರ್ಮಿಕ ವಿಚಾರಗಳನ್ನು ಮೀರಿ ಮನುಷ್ಯಪ್ರೀತಿಗೆ ಹಂಬಲಿಸುವನನ್ನು ರಾಜಕೀಯ ಪಿತೂರಿಗೆ ಬಲಿಯಾಗುತ್ತಾನೆ. ಕಥೆಯ ಕೊನೆಯಲ್ಲಿ ‘ಲೇ ಸಂಗಪ್ಪ… ನಿನ್ನ ಅಣ್ಣ ಶಿವ್ರಾಜನ ಸಾವಿಗಿ ಖರೇನ ಫಿರೋಜ್ ಕಾರಣ ಆಗಿರ್ಲಿಕ್ಕಿಲ್ಲ! ಹಂಗಂತ ನನ್ನ ಮನ್ಸು ಹೇಳ್ಲಿಕ್ಕತ್ತೆದ…’ ಅನ್ನುವ ಕಾಡಜ್ಜನ ಮಾತುಗಳಲ್ಲಿ ಜನಸಾಮಾನ್ಯರಿಗೆ ಬೇಕಿಲ್ಲದ ಕ್ರೌರ್ಯಗಳ ಕುರಿತು ಆಲೋಚಿಸುವಂತೆ ಮಾಡುತ್ತದೆ.

ಕಲ್ಲೇಶರ ಕಥೆಗಳು ಗ್ರಾಮೀಣ ಪ್ರದೇಶವನ್ನು ಪ್ರತಿಬಿಂಬಿಸುತ್ತವಾದರೂ ಲೋಕದೃಷ್ಟಿಯಿಂದ ಪಡೆದ ಅನೇಕ ಸಂಗತಿಗಳನ್ನು ನಿರೂಪಿಸುವಲ್ಲಿ ಕಲ್ಪಿತ ವಾಸ್ತವಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಕೆಲವು ಕಥೆಗಳ ವಸ್ತುಗಳ ಆಯ್ಕೆಯಲ್ಲಿ ಗಟ್ಟಿತನವನ್ನು ಕಂಡರೆ, ಕೆಲವು ಕಥೆಗಳಾಗಿಸುವ ಉದ್ದೇಶಕ್ಕೆ ಆಯ್ದದಂತಿದೆ. ಹಾರೊಗೇರಿಯ ಭಾಷೆಯ ಸೊಗಡು ಪಾತ್ರಗಳ ಮುಖಾಮುಖಿ ಸನ್ನಿವೇಶಗಳಲ್ಲಿ ಮತ್ತಷ್ಟು ಹದಗೊಳಿಸಬೇಕಿದೆ. ಇಲ್ಲಿನ ಪ್ರಜ್ಞಾಪೂರ್ವಕ ನಿರೂಪಣೆಗಳು ಇಲ್ಲಿನ ಕೆಲವು ಕಥೆಗಳನ್ನು ಸರಳ ಎನಿಸುವ ಅಪಾಯಗಳಿವೆ. ಅವುಗಳ ಬಗ್ಗೆ ಎಚ್ಚರಿಸಬೇಕಾದದ್ದು ಅವರ ಅಗತ್ಯತೆಗಳಲ್ಲಿ ಒಂದು. ಒಟ್ಟಾರೆ ಕಲ್ಲೇಶರ ‘ನಿಂದ ನಿಲುವಿನ ಘನ’ ಸಂಕಲನವು ಮನುಷ್ಯತ್ವದ ತಿರುಳನ್ನು ಹೇಳುತ್ತಾ ಸಾಮಾಜಿಕ ಚಹರೆಯನ್ನು ಬದಲಾಯಿಸುವ ವಿಶಿಷ್ಟ ಸಂಕಲನವಾಗಿ ಮುಖ್ಯವಾಗುತ್ತದೆ.


(ಕೃತಿ: ನಿಂದ ನಿಲುವಿನ ಘನ (ಕಥಾ ಸಂಕಲನ), ಲೇಖಕರು: ಕಲ್ಲೇಶ್ ಕುಂಬಾರ್‌, ಪ್ರಕಾಶಕರು:‌ ಸಿವಿಜಿ ಪ್ರಕಾಶನ, ಬೆಲೆ: 150/- )