ಹಿಂದೆ ಡೇವಿಡ್ ಕ್ಯಾಮರೂನ್, ಈಗ ಥೆರೆಸಾ ಮೇಮತ್ತೆ ಸದ್ಯದಲ್ಲಿ ಆಯ್ಕೆಯಾಗಲಿರುವ ಕನ್ಸರ್ವೇಟಿವ್ ಪಕ್ಷದ ಹೊಸನಾಯಕ ಹೊಸ ಪ್ರಧಾನಿ, ಎಲ್ಲರಿಗೂ ಆತ್ಮೀಯ ಪರಿಚಯಸ್ಥ ಲ್ಯಾರಿ ಅಮೇರಿಕಾದ ಒಬಾಮ, ಟ್ರಂಪ್ ರನ್ನೂ ಮಾತಾಡಿಸುವ ಸಲಿಗೆ ಬೆಳೆಸಿಕೊಂಡಿದೆ. ಪ್ರಧಾನಿ ನಿವಾಸದ ಒಂದು ದಶಕಕ್ಕಿಂತ ಹೆಚ್ಚಿನ ಬದುಕಿನಲ್ಲಿ ಬೇಟೆಯಾಡಿ ಸುದ್ದಿ ಆಗಿದ್ದಕ್ಕಿಂತ ಏನೂ ಹಿಡಿಯದ ಆಲಸಿ ಎನ್ನುವ ಅಪವಾದದಲ್ಲೇ ಹೆಚ್ಚು ಪ್ರಸಿದ್ಧಿಗೆ ಬಂದಿರುವ ಲ್ಯಾರಿ ಕೆಲಸ ಮಾಡಲಿ ಮಾಡದಿರಲಿ ತನ್ನ ಮನೆಯಲ್ಲಿ ಜಾಗ ಹೇಗೆ ಉಳಿಸಿಕೊಳ್ಳಬೇಕು ಎನ್ನುವ ರಾಜಕೀಯದ ಪಟ್ಟು ಮಟ್ಟುಗಳನ್ನು ಕರಗತ ಮಾಡಿಕೊಂಡಿದೆ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ಬ್ರಿಸ್ಟಲಿನಲ್ಲಿ ನಾನು ವಾಸಿಸುವ ಆಸುಪಾಸಿನ ರಸ್ತೆಗಳಲ್ಲಿ ತಿರುಗಾಡುವವರಿಗೆ ಈ ಸೂಚನೆ ಕಂಡಿರಬೇಕಲ್ಲ. ಯಾವುದೋ ಮನೆಯ ಅಪರಿಚಿತ ಪಾಗಾರ, ರಸ್ತೆಯ ಬದಿಯ ಗುರುತಿಲ್ಲದ ತಂತಿಕಂಬಗಳಂತಹ ಖಾಲಿ ಜಾಗಗಳಲ್ಲಿ ಚಿತ್ರಸಹಿತ ಸಂದೇಶ ಅಂಟಿಸಿದ್ದು ನಮ್ಮ ಬೀದಿಯಲ್ಲಿ ನಡೆಯುವರನ್ನು ಒಮ್ಮೆ ನಿಂತುಸಾಗುವಂತೆ ಮಾಡುತ್ತಿದೆ. ಬಿಳಿ ಹಾಳೆಯ ಮೇಲೆ ಕೆಂಪು ಅಕ್ಷರಗಳು. ಮಳೆಯಲ್ಲಿ ನೆನೆಯಬಾರದು ಚಳಿಯಲ್ಲಿ ನಡುಗಬಾರದು ಗಾಳಿಗೆ ಉದುರಬಾರದು ಎನ್ನುವ ಕಾಳಜಿಯಲ್ಲಿ ಚಿತ್ರಸಂದೇಶವನ್ನು ಗಟ್ಟಿಯಾಗಿ ಹಚ್ಚಿದ್ದಾರೆ.

ವಿಷಯ ಏನೆಂದರೆ “ಫೆಲಿಕ್ಸ್ ಕಳೆದುಹೋಗಿದ್ದಾನೆ “. ಏಪ್ರಿಲ್ 24ರ ಹತ್ತು ಗಂಟೆಯ ನಂತರ ಈತ ಮನೆಯಲ್ಲಿ ಕಂಡುಬಂದಿಲ್ಲ. ಈ ಮೊದಲೆಂದೂ ಫೆಲಿಕ್ಸ್ ಕಾಣೆಯಾಗಿದ್ದಿಲ್ಲ. ಈತನ ಮೈಮೇಲೆ ಮಧ್ಯಮ ಗಾತ್ರದ ಕಪ್ಪು ಬಿಳಿಬಣ್ಣದ ಕೂದಲುಗಳು, ಪ್ರಾಯ ಹನ್ನೊಂದು ತಿಂಗಳು. ಜನನಾಂಗವನನ್ನು ನಿಷ್ಕ್ರಿಯಗೊಳಿಸಲಾಗಿರುವ ನಿರುಪದ್ರವಿ ಸಾಕುಜೀವಿ ಇವನಂತೆ. ಸ್ವಭಾವದಲ್ಲಿ ಸ್ನೇಹಪರನಂತೆ ಹಾಗು ಪ್ರವೃತ್ತಿಯಲ್ಲಿ ಸಾಹಸಿಯಂತೆ. ಇವನ ಬಗ್ಗಿನ ವಿವರಗಳೆಲ್ಲ ಈತನ ಮೈಯೊಳಗೆ ಕೂರಿಸಲಾದ ಮೈಕ್ರೋಚಿಪ್ ನಲ್ಲೂ ಇದೆಯಂತೆ. ಈತನ ತಮ್ಮ “ಸ್ಟ್ರೋಮ್” ಮತ್ತು ಮನೆಯ ಯಜಮಾನರು ಈತ ಕಳೆದು ಹೋದಂದಿನಿಂದ ಬಹಳ ನೊಂದಿದ್ದಾರೆ. ನಿಮ್ಮ ಮನೆಯ ಹಿಂದು ಮುಂದಿನ ಗ್ಯಾರೇಜ್, ಶೆಡ್ ಗಳನ್ನು ಪರೀಕ್ಷಿಸಿ ಎಂದೂ ಸಂದೇಶವನ್ನು ಓದುವವರನ್ನು ಕೇಳಿಕೊಳ್ಳುತ್ತಿದ್ದಾರೆ. ಹುಡುಕಿಕೊಟ್ಟವರಿಗೆ ಬಹುಮಾನ ದೊರೆಯಲಿದೆ ಎಂದೂ ಬರೆದಿದ್ದಾರೆ.

“ಫೆಲಿಕ್ಸ್”ಎಂಬ ಕಾಣೆಯಾದ ಬೆಕ್ಕಿನ ಹುಡುಕಾಟದ ಸಂದೇಶದಲ್ಲಿ ಇಷ್ಟೆಲ್ಲಾ ವಿಚಾರಗಳು. ನಮ್ಮ ಬೀದಿಯ ಪುರಾತನ ವಾಸಿಗಳಾದ ಗುಂಡಗಿನ ಕಪ್ಪು ಕಂದು ಪಟ್ಟೆಪಟ್ಟೆಯ ಬೆಕ್ಕುಗಳೆಲ್ಲ ನಿತ್ಯವೂ ಈ ಸಂದೇಶವನ್ನು ನೋಡುತ್ತಾ ಓದುತ್ತ ತಿರುಗಾಡುತ್ತಿವೆ. ಬಾಲ ಬೀಸುತ್ತ ಮೀಸೆ ಕುಣಿಸುತ್ತ ಓಡಾಡುತ್ತಿವೆ. ಫೆಲಿಕ್ಸ್ ನ ಸುಳಿವು ಯಾವ ಬೆಕ್ಕಿನ ವಾಸನೆಗೂ ಇನ್ನೂ ಸಿಕ್ಕಿದಂತಿಲ್ಲ. ಗೋಡೆಗಂಟಿಸಿದ ಸಂದೇಶದ ಕೇಂದ್ರ ಸ್ಥಾನದಲ್ಲಿ ಕಾಣೆಯಾದವನ ಗಂಭೀರ ಮುಖಮುದ್ರೆಯ ಚಿತ್ರವೂ ಇದೆ. ಮನೆಯ ಉಪ್ಪರಿಗೆಯ ಮೆಟ್ಟಿಲನ್ನು ಇಳಿಯುವಾಗ ಮೆಟ್ಟಿಲನ ಬದಿಗಿರುವ ಮರದ ಕಡಾವಿನ ಕಂಬಗಳ ನಡುವಿನ ಎಡೆಯಲ್ಲಿ ಈತ ನಿಂತ ಚಿತ್ರ ಅದು. ಕಂಬಗಳ ಹಿಂದೆ ನಿಂತ ಇವನ ಚಿತ್ರವನ್ನು ನೋಡಿದರೆ, ಬಹುಷ್ಯ ಮನೆಯೇ ಸೆರೆಮನೆಯಾಯಿತೋ ಅದಕ್ಕೆ ಓಡಿಹೋದನೊ ಎನ್ನುವ ಸಂಶಯವೂ ಇಲ್ಲಿನ ಇತರ ಬೆಕ್ಕುಗಳಿಗೆ ಬರಬಹುದು.

ಈ ದೇಶದಲ್ಲಿ ಕನಿಷ್ಠ ಬೆಕ್ಕುಗಳಿಗಂತೂ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಇರಲಿಕ್ಕಿಲ್ಲ ಬಿಡಿ. ಪ್ರಕರಣದ ಯಾರದೋ ಮನೆಯದಾಗಿದ್ದರೆ ರಸ್ತೆಯಲ್ಲಿ ನಿಂತು ಕುಳಿತು ಮಾತಾಡುವ ಇತರ ಬೆಕ್ಕುಗಳ ನಡುವೆ ಹೀಗೆಲ್ಲ ಊಹಾಪೋಹಗಳು ಹಬ್ಬುವುದು ಸಹಜವೇ. ಹೀಗೆ ಬೀದಿ ಬದಿಯಲ್ಲಿ ಗುಸುಗುಸು ಪಿಸಿಪಿಸಿ ಆದ ಮೇಲೆ ಯಾರ ಮನೆಯ ಒಳಕತೆಗಳ ಉಸಾಬರಿ ನಮಗೇಕೆ ಎನ್ನುತ್ತಾ ಬೆಕ್ಕುಗಳು ತಮ್ಮ ತಮ್ಮ ಮನೆಗೆ ತೆರಳುವುದೂ ಇದೆ.

ಕಳೆದು ಹೋದ ಬೆಕ್ಕುಗಳು ಕೆಲ ಕಾಲದ ನಂತರ ಸಿಕ್ಕಿದ್ದು ಅಥವಾ ಎಂದೆಂದೂ ಸಿಗದಿದ್ದು ಎಲ್ಲವೂ ಈ ದೇಶದಲ್ಲಿ ನಡೆಯುತ್ತದೆ ಎನ್ನುವುದು ಈ ದೇಶದ ಬೆಕ್ಕುಬೆಕ್ಕಿಗೂ ತಿಳಿದಿರುವ ವಿಷಯವೇ ಇರಬೇಕು. ಫೆಲಿಕ್ಸ್ ಕಾಣೆಯಾದ ಬ್ರಿಸ್ಟಲ್ ಎನ್ನುವ ಊರಿನಿಂದ ಇನ್ನೂರು ಕಿಲೋಮೀಟರು ದೂರದ ದಕ್ಷಿಣ ದಿಕ್ಕಿನ ಪ್ಲೈಮೌತ್ ಎನ್ನುವ ಸಮುದ್ರ ತೀರದ ನಗರಿಯಲ್ಲಿ “ಹ್ಯಾಟ್ಟಿ” ಎನ್ನುವ ಬೆಕ್ಕು ಇತ್ತೀಚೆಗಷ್ಟೇ ಕೋಲಾಹಲ ಉಂಟುಮಾಡಿತ್ತು. ಐದು ವರ್ಷ ಪ್ರಾಯದ ಹ್ಯಾಟ್ಟಿ ಅದೇ ಊರಿನ ರಾಯಲ್ ಆಲ್ಬರ್ಟ್ ರೈಲ್ವೆ ಬ್ರಿಡ್ಜ್ ನಲ್ಲಿ ಸಿಕ್ಕಿಬಿದ್ದದ್ದರ ಬಗ್ಗೆ ಕೇಳಿದವರು ಓದಿದವರು ಸುಮಾರು ಜನ. ತನ್ನ ಮನೆಯಿಂದ ನೂರೈವತ್ತು ಮೀಟರ್ ದೂರದ ರೈಲ್ವೆ ಬ್ರಿಡ್ಜ್ ನಲ್ಲಿ ಆರು ದಿನಗಳ ಕಾಲ ಅದು ಹೊರ ಬರುವ ದಾರಿ ಕಾಣದೇ ಬಂಧಿಯಾಗಿತ್ತು. ಮನೆಯಿಂದ ಎರಡು ವಾರಗಳ ಹಿಂದೆ ಕಾಣೆಯಾಗಿದ್ದ ಹ್ಯಾಟ್ಟಿ, ನೆಲದಿಂದ ಮೂವತ್ತು ಅಡಿ ಎತ್ತರದಲ್ಲಿ ಇರುವ ರೈಲ್ವೆ ಬ್ರಿಡ್ಜ್ ನಿಂದ ಕೂಗುವುದು ಕೇಳಿಸಿದ ಮೇಲೆಯೇ ಬೆಕ್ಕಿನ ಯಜಮಾನ್ತಿಗೂ ಆಸುಪಾಸಿನ ಜನರಿಗೂ ವಿಷಯ ಗೊತ್ತಾದದ್ದು. ತಡ ಮಾಡದ ಅಗ್ನಿಶಾಮಕ ದಳದವರು ಎತ್ತರದ ಏಣಿಯನ್ನು ರೈಲ್ವೆ ಬ್ರಿಡ್ಜ್ ನ ಕಂಬಕ್ಕೆ ತಾಗಿಸಿ ಇಟ್ಟು, ಮೇಲೆ ಹತ್ತಿ, ಬೆಕ್ಕನ್ನು ಹೊರ ತೆಗೆಯುವ ಪರಿಪರಿಯ ಯತ್ನ ಮಾಡಿದ್ದರು. ಪ್ರತಿರೈಲು ಸಾಗುವಾಗಿನ ಚಿಕುಬುಕು ಸದ್ದಿಗೆ, ಹಳಿಗಳ ಕೆಳಗೆ ಅಡಗಿರುವ ಹ್ಯಾಟ್ಟಿ ಬೆದರಿ ಯಾರು ಕರೆದರೂ ಹೊರಬರಲು ಮನಸ್ಸು ಮಾಡುತ್ತಿರಲಿಲ್ಲ. ಅಗ್ನಿಶಾಮಕ ದಳದವರು ಮೇಲೆ ಕೊಂಡೊಯ್ದು ತೋರಿಸಿದ ರುಚಿಯಾದ ತಿಂಡಿ ತುಂಡುಗಳ ಕರುಣೆಗೂ ಆಸೆಗೂ ಅದು ಹೊರಬರಲಿಲ್ಲ. ಇಷ್ಟಾದರೂ ಬಾರದ ಬೆಕ್ಕಿನ ಬಗ್ಗೆ ಅದರ ಯಜಮಾನ್ತಿ ತೀವ್ರ ದುಃಖದಲ್ಲಿರುವಾಗ ಅಗ್ನಿಶಾಮಕ ಸಿಬ್ಬಂದಿಗಳು ಮರುದಿನ ಬ್ರಿಡ್ಜ್ ನ ಮೇಲೆ ರೇಲ್ವೆಸಂಚಾರವನ್ನು ನಿಲ್ಲಿಸಿ ಬೆಕ್ಕಿನ ರಕ್ಷಣೆ ಮಾಡುವ ಯೋಜನೆ ಹಾಕಿದ್ದರು. ಬಹುಷ್ಯ ಹಾಗೆಯೇ ಆಗಿದ್ದರೆ ತನಗೋಸ್ಕರ ಒಂದು ರೈಲುಮಾರ್ಗವನ್ನು ಬಂದ್ ಮಾಡಿಸಿದ ಖ್ಯಾತಿಯ ಬೆಕ್ಕು ಎಂದು ಬ್ರಿಟಿಷ್ ಇತಿಹಾಸ ಪುಟದಲ್ಲಿ ದಾಖಲಾಗುತ್ತಿತ್ತೇನೋ.

ಕಳವಾದ ಬೆಕ್ಕಿನ ಸಮಸ್ಯೆ ಇಷ್ಟು ದೊಡ್ಡದಾಗುವ ಮೊದಲೇ ಅಂದರೆ ರೈಲುಸಂಚಾರ ಸ್ಥಗಿತಗೊಳ್ಳುವ ದಿನದ ಹಿಂದಿನ ದಿನದ ರಾತ್ರಿ ಬೆಕ್ಕಿನ ಯಜಮಾನತಿಗೆ ಮನೆ ಬಾಗಿಲ ಎದುರು ಪರಿಚಯಸ್ಥ ಬೆಕ್ಕಿನ ಸುಸ್ವರ ಮ್ಯಾಂವ್ ಮ್ಯಾಂವ್ ಕೇಳಿಸಿತಂತೆ. ಬಾಗಿಲು ತೆರೆದು ನೋಡಿದರೆ ಹ್ಯಾಟ್ಟಿ… ಮನೆಗೆ ಮರಳಿದ ಬೆಕ್ಕು ಅಂದು ಮನೆಯಲ್ಲಿ ಯಾರೊಂದಿಗೂ ಮಾತಾಡದೆ, ಆಟ ಆಡದೆ ಊಟ ಮಾಡಿ ತನ್ನ ಹಾಸಿಗೆಯಲ್ಲಿ ಶಾಂತವಾಗಿ ಮಲಗಿತು ಎಂದು ಮರುದಿನ ಹ್ಯಾಟ್ಟಿಯ ಒಡತಿ ಪತ್ರಿಕಾ ಗೋಷ್ಠಿಯಲ್ಲಿ ತನ್ನ ಬೆಕ್ಕಿನ ಕತೆ ಹೀಗೆ ಸುಖಾಂತ್ಯವಾಯಿತೆಂದು ನಿಟ್ಟುಸಿರು ಬಿಟ್ಟಿದ್ದಾಳೆ.

ಬ್ರಿಸ್ಟಲ್ ನ ಫೆಲಿಕ್ಸ್, ಪ್ಲೈಮೌತ್ ನ ಹ್ಯಾಟ್ಟಿಯರಂತೆಯೇ ಪ್ರಚಾರಕ್ಕೆಬಂದ ಬೆಕ್ಕುಗಳು ಈ ದೇಶದಲ್ಲಿ ಇನ್ನೂ ಇವೆ. ಬೆಕ್ಕಿನ ಬಗ್ಗಿನ ಕೆಲವು ವಿಶೇಷಗಳು ದೇಶದ ಮುಖ್ಯ ಸುದ್ದಿವಾಹಿನಿಗಳಲ್ಲೂ ವರದಿಯಾಗುತ್ತವೆ, ದೂರ ದೂರದ ಬೆಕ್ಕು ಪ್ರೇಮಿಗಳಲ್ಲಿ ಸಂಘಸಂಸ್ಥೆಗಳಲ್ಲಿ ಚರ್ಚೆಯಾಗುತ್ತವೆ. ಒಂದು ಅಂಕಿಅಂಶದ ಪ್ರಕಾರ ಬ್ರಿಟನ್ನಿನ ವಯಸ್ಕರಲ್ಲಿ 25% ಜನರು ಬೆಕ್ಕನ್ನು ಸಾಕುವವರೇ. ಇಲ್ಲಿಒಂದು ಕೋಟಿಗಿಂತ ಹೆಚ್ಚು ಸಾಕುಬೆಕ್ಕುಗಳಿವೆ. ಸರಾಸರಿ ಹದಿನೈದು ವರ್ಷ ಬದುಕುವ ಸಾಕು ಬೆಕ್ಕೊಂದಕ್ಕೆ ಅದರ ಆಯುಸ್ಸಿನಲ್ಲಿ ಹತ್ತರಿಂದ ಹದಿನೆಂಟು ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. ಬೆಕ್ಕಿನ ಖರೀದಿ, ತರಬೇತಿ, ಊಟ ವಸತಿ ಆರೈಕೆ, ವಿಮೆ, ಆಟ, ಲಸಿಕೆ, ಶುಶ್ರೂಷೆ ಇತ್ಯಾದಿ ಹೀಗೆ ಬೆಕ್ಕಿನ ಬದುಕಿನ ಜಮಾ ವೆಚ್ಚದ ವಿವರಗಳ ಪಟ್ಟಿ ಬೆಳೆಯುತ್ತದೆ.

ಜನಸಾಮಾನ್ಯರ ಮನೆಯ ಬೆಕ್ಕಿನ ವಿಷಯ ಇಷ್ಟಾದರೆ ಇನ್ನು ಇಂಗ್ಲೆಂಡಿನ ರಾಣಿಯ ಮಂಚದ ಕೆಳಗೆ ಅವಿತು ಆಟ ಆಡುವ ಮುದ್ದಿನ ಸೊಕ್ಕಿನ ಬೆಕ್ಕಿನ ಬದುಕನ್ನು ನಿಭಾಯಿಸಲು ಎಷ್ಟು ಖರ್ಚೆಂದು ಯಾವುದಾದರೂ ಅನುಭವಸ್ಥ ಹಿರಿಯರಾಣಿ ಬೆಕ್ಕೇ ಹೇಳಬೇಕು. ಮತ್ತೆ ಬ್ರಿಟನ್ನಿನ ಪ್ರಧಾನಿ ವಾಸಿಸುವ “ನಂಬರ್ ಹತ್ತು, ಡೌನಿಂಗ್ ಸ್ಟ್ರೀಟ್” ನಿವಾಸದಲ್ಲಿ ವಾಸಿಸಿದ ಬೆಕ್ಕುಗಳ ಸುಧೀರ್ಘ ಇತಿಹಾಸವೇ ಇದೆ. ಲ್ಯಾರಿ ಎನ್ನುವ ಹೆಸರಿನ ಬೆಕ್ಕು 2007ರಿಂದ ಬ್ರಿಟಿಷ್ ಪ್ರಧಾನಿಯ ಮನೆಯಲ್ಲಿ ವಾಸವಾಗಿದೆ. ಪ್ರಧಾನಿ ವಾಸದಲ್ಲಿ “ಚೀಫ್ ಮೌಸರ್” ಅಂದರೆ “ಮುಖ್ಯ ಇಲಿ ಬೇಟೆಗಾರ” ಎಂದು ಕರೆಸಿಕೊಳ್ಳುವ ಲ್ಯಾರಿಗೆ ಇರುವ ಜವಾಬ್ದಾರಿಗಳು ಒಂದೆರಡಲ್ಲ. ಬೆಕ್ಕುಗಳ ಅನಾಥಾಲಯದಿಂದ ಆಯ್ದು ತಂದ ಲ್ಯಾರಿ ಬೆಕ್ಕು ಪ್ರಧಾನಿಯ ಮನೆ ಸೇರಿ ಸುಮಾರು ನಾಲ್ಕು ವರ್ಷ ಒಂದು ಇಲಿಯನ್ನೂ ಹಿಡಿಯದ ಕಾರಣ ಕಂಡವರಿಂದ ಆಡಿಸಿಕೊಂಡು ಶುದ್ಧ ಆಲಸಿ ಎನ್ನುವ ಬಿರುದನ್ನೂ ಪಡೆದಿತ್ತು. ಹಿಂದೆ ಪ್ರಧಾನಿಯ ಮನೆಯಲ್ಲಿ ಇದ್ದು ಹೋದ ಬೆಕ್ಕುಗಳ ಜೊತೆ ಹೋಲಿಸಿಕೊಂಡು ಅಪಹಾಸ್ಯಕ್ಕೊಳಗಾಗಿತ್ತು.

ಈ ದೇಶದಲ್ಲಿ ಕನಿಷ್ಠ ಬೆಕ್ಕುಗಳಿಗಂತೂ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಇರಲಿಕ್ಕಿಲ್ಲ ಬಿಡಿ. ಪ್ರಕರಣದ ಯಾರದೋ ಮನೆಯದಾಗಿದ್ದರೆ ರಸ್ತೆಯಲ್ಲಿ ನಿಂತು ಕುಳಿತು ಮಾತಾಡುವ ಇತರ ಬೆಕ್ಕುಗಳ ನಡುವೆ ಹೀಗೆಲ್ಲ ಊಹಾಪೋಹಗಳು ಹಬ್ಬುವುದು ಸಹಜವೇ. ಹೀಗೆ ಬೀದಿ ಬದಿಯಲ್ಲಿ ಗುಸುಗುಸು ಪಿಸಿಪಿಸಿ ಆದ ಮೇಲೆ ಯಾರ ಮನೆಯ ಒಳಕತೆಗಳ ಉಸಾಬರಿ ನಮಗೇಕೆ ಎನ್ನುತ್ತಾ ಬೆಕ್ಕುಗಳು ತಮ್ಮ ತಮ್ಮ ಮನೆಗೆ ತೆರಳುವುದೂ ಇದೆ.

2011ರಲ್ಲಿ ಮೊದಲಬಾರಿ ಸಾರ್ವಜನಿಕವಾಗಿ ಇಲಿಯೊಂದನ್ನು ಹಿಡಿದು ತನ್ನ ಮೇಲಿರುವ ಟೀಕೆಗಳನ್ನು ತಾತ್ಕಾಲಿಕವಾಗಿ ದೂರ ಮಾಡಿತ್ತು.ಮುಂದೆ 2012ರಲ್ಲಿ ಅಂದಿನ ಪ್ರಧಾನಿ ಡೇವಿಡ್ ಕ್ಯಾಮರೂನರ ಓದುವ ಕೋಣೆಯಲ್ಲಿ ಕಣ್ಣೆದುರೇ ಹರಿದಾಡುತ್ತಿದ್ದ ಇಲಿಯನ್ನು ಬೇಟೆಯಾಡದೆ ಕೈಚೆಲ್ಲಿ ಇನ್ನೇನು ಕೆಲಸ ಕಳೆದುಕೊಂಡೇ ಬಿಟ್ಟಿತು ಎನ್ನುವ ಸುದ್ದಿಯೂ ಹಬ್ಬಿತ್ತು. ಇಂತಹ ಗುರುತರ ಹೊಣೆಗಾರಿಕೆಯ ಬೆಕ್ಕೊಂದರ ಬಗ್ಗೆ ಬ್ರಿಸ್ಟಲ್ ಅಥವಾ ಬ್ರಿಟನ್ನಿನ ಬೀದಿಯ ಬೆಕ್ಕುಗಳು ತಾವಾದರೂ ಬೇಕೆಂದಲ್ಲಿ ತಿಂದು ಉಂಡು ಬೇಜವಾಬ್ದಾರಿಯಲ್ಲಿ ಸುಖವಾಗಿ ತಿರುಗಾಡಿಕೊಂಡಿದ್ದೇವೆ ಎಂದುಕೊಂಡಿರಲೂಬಹುದು. ಅಥವಾ ದೂರದಿಂದಲಾದರೂ ಐಷಾರಾಮಿ ಸೆಲೆಬ್ರಿಟಿಯಂತೆ ತೋರುವ ಬದುಕು ತಮಗೆಂದು ದೊರೆವುದೋ ಎಂದೂ ಕನವರಿಸರಲೂಬಹುದು. ಯಾವ ಬೆಕ್ಕು ತನ್ನ ಬಗ್ಗೆ ಏನೆಂದುಕೊಂಡರೇನಂತೆ, ತನ್ನ ಕೆಲಸ ಉಳಿಸಿಕೊಳ್ಳುವ ಒತ್ತಡದಲ್ಲೋ, ಹಸಿದೋ ಅಥವಾ ಹೆದರಿಯೋ 2013ರಲ್ಲಿ ಎರಡು ವಾರಗಳಲ್ಲಿ ನಾಲ್ಕು ಬೆಕ್ಕುಗಳನ್ನು ಹಿಡಿದ ಲ್ಯಾರಿ ಪ್ರಧಾನಿ ನಿವಾಸದವರಿಂದ ಭೇಷ್ ಎನಿಸಿಕೊಂಡಿತ್ತು.

ಹೀಗೆ ಏಳುಬೀಳುಗಳ ರಾಜಕೀಯ ಸಾಮಾಜಿಕ ವೈಯಕ್ತಿಕ ಜೀವನವನ್ನು ನಡೆಸುವ ಲ್ಯಾರಿ ಈಗಲೂ ಪ್ರಧಾನಿ ನಿವಾಸದಲ್ಲಿಯೇ ಇದೆ. ಪ್ರಧಾನಿ ಬದಲಾದರೂ, ಗದ್ದುಗೆ ಪಲ್ಲಟವಾದರೂ ಮನೆಯಲ್ಲಿ ಬೆಕ್ಕಿನ ಸ್ಥಾನ ಗಟ್ಟಿಯಾಗಿದೆ. ಹಿಂದೆ ಡೇವಿಡ್ ಕ್ಯಾಮರೂನ್, ಈಗ ಥೆರೆಸಾ ಮೇಮತ್ತೆ ಸದ್ಯದಲ್ಲಿ ಆಯ್ಕೆಯಾಗಲಿರುವ ಕನ್ಸರ್ವೇಟಿವ್ ಪಕ್ಷದ ಹೊಸನಾಯಕ ಹೊಸ ಪ್ರಧಾನಿ, ಎಲ್ಲರಿಗೂ ಆತ್ಮೀಯ ಪರಿಚಯಸ್ಥ ಲ್ಯಾರಿ ಅಮೇರಿಕಾದ ಒಬಾಮ, ಟ್ರಂಪ್ ರನ್ನೂ ಮಾತಾಡಿಸುವ ಸಲಿಗೆ ಬೆಳೆಸಿಕೊಂಡಿದೆ. ಪ್ರಧಾನಿ ನಿವಾಸದ ಒಂದು ದಶಕಕ್ಕಿಂತ ಹೆಚ್ಚಿನ ಬದುಕಿನಲ್ಲಿ ಬೇಟೆಯಾಡಿ ಸುದ್ದಿ ಆಗಿದ್ದಕ್ಕಿಂತ ಏನೂ ಹಿಡಿಯದ ಆಲಸಿ ಎನ್ನುವ ಅಪವಾದದಲ್ಲೇ ಹೆಚ್ಚು ಪ್ರಸಿದ್ಧಿಗೆ ಬಂದಿರುವ ಲ್ಯಾರಿ ಕೆಲಸ ಮಾಡಲಿ ಮಾಡದಿರಲಿ ತನ್ನ ಮನೆಯಲ್ಲಿ ಜಾಗ ಹೇಗೆ ಉಳಿಸಿಕೊಳ್ಳಬೇಕು ಎನ್ನುವ ರಾಜಕೀಯದ ಪಟ್ಟು ಮಟ್ಟುಗಳನ್ನು ಕರಗತ ಮಾಡಿಕೊಂಡಿದೆ. ಆಡಳಿತ ಪಕ್ಷದ ಮಂತ್ರಿ ಮಹೋದಯರು ಹಿರಿಯ ರಾಜಕಾರಣಿಗಳು ಬಂದು ಹೋಗುವ, ದೇಶದ ರಾಜಕೀಯದ ಬಗ್ಗಿನ ಗೋಪ್ಯ ಕುಟಿಲಗಳು ಚರ್ಚಿಸಲ್ಪಡುವ ಮನೆಯಲ್ಲಿ ನೋಡಿ ಕೇಳಿ ಕಲಿತ ಬಲಿತ ಲ್ಯಾರಿ ಬ್ರಿಟನ್ನಿನ ಪ್ರಭಾವಿ ಬೆಕ್ಕಾಗಿ ಬದುಕುತ್ತಿದೆ.

ಬೆಕ್ಕುಗಳ ಕತೆಯ ಕಂತೆಯನ್ನು ಬಿಡಿಸಿದಷ್ಟೂ ಬ್ರಿಸ್ಟಲ್ ನ ಬೀದಿಯ ಸಾಮನ್ಯ ಬೆಕ್ಕಿನಿಂದ ಹಿಡಿದು ಲಂಡನ್ ನ ಪ್ರಧಾನಿ ನಿವಾಸದವರೆಗಿನ ವರ್ಚಸ್ವಿ ಬೆಕ್ಕುಗಳ ತರತರಹದ ಕತೆಗಳು ಕೇಳಿಸುತ್ತವೆ ಕಾಣಿಸುತ್ತವೆ. “ಕತೆ ಕತೆ ಕಾರಣ ಬೆಕ್ಕಿನ ತೋರಣ” ಎನ್ನುತ್ತಾ ಒಂದೊಂದು ಊರಿನ ಒಂದೊಂದು ಬೀದಿಯ ಬೆಕ್ಕಿನ ಪ್ರಕರಣಗಳು ಬಿಡಿಸಿಕೊಳ್ಳುತ್ತವೆ. ಒಂದು ಊರಿನಲ್ಲಿ ಬೆಕ್ಕು ಕಾಣೆಯಾದ ಆತಂಕ ಕಾಡುವಾಗಲೇ ಮತ್ತೊಂದು ಊರಿನಲ್ಲಿ ಯಾವ ಸುಳಿವಿಲ್ಲದೆ ಕಳೆದುಹೋದ ಬೆಕ್ಕು ಅದ್ಯಾವುದೋ ಮಾಯಕದಲ್ಲಿ ತಾನಾಗಿಯೇ ಮನೆಗೆ ಮರಳಿ ನೆಮ್ಮದಿಯನ್ನೂ ನೀಡಿರುತ್ತದೆ. ಈ ಹುಲು ಮನುಜರಲ್ಲೂ ಒಂದು ಮನೆಯವರು ಮರಣದ ಶೋಕದಲ್ಲಿ ಮುಳುಗಿರುವಾಗ ಇನ್ನೊಂದು ಮನೆಯಲ್ಲಿ ಹೊಸ ಹುಟ್ಟಿನ ಸಂಭ್ರಮ ನಡೆಯುತ್ತಿರುತ್ತದಲ್ಲ ಬಹುಷ್ಯ ಹಾಗೆಯೇ ಬೆಕ್ಕಿನ ಬದುಕೂ “ನೀರ ಮೇಲಣ ಗುಳ್ಳೆ” ಯಂತೆಯೇ ಕಾಣುತ್ತದೆ. ಅಥವಾ ಮನುಷ್ಯರ ಅತೀವ ಸಹವಾಸದಲ್ಲಿ ಬದುಕುವ ಬ್ರಿಟನ್ನಿನ ಬೆಕ್ಕುಗಳ ಬದುಕೂ ಮನುಷ್ಯರಂತೆಯೇ ಸುಭದ್ರ ಅಭದ್ರ, ನಿಶ್ಚಿತ, ಅನಿಶ್ಚಿತ, ಶಾಶ್ವತ ನಶ್ವರಗಳ ನಡುವೆ ತೂಗುತ್ತಿರುತ್ತದೆ.

ಸುಮ್ಮನೆ ಕಾಡಾಡಿಯಾಗಿಯೋ ಬೀದಿಯ ಪೋಲಿಯಾಗಿಯೋ ಪೊದೆ ತೋಟದ ಗಿಡಗಳ ನಡುವೆ ಇಲಿ ಹೆಗ್ಗಣ ಮಿಡತೆ ಹಕ್ಕಿಗಳನ್ನು ತಿಂದು ಬದುಕಬಹುದಾದ ಬೆಕ್ಕಿಗೆ ಹೀಗೆ ಮಾನವರ ಸಹವಾಸದಲ್ಲಿ ಮೆತ್ತನೆಯ ಹಾಸಿಗೆ, ಅರಮನೆಯ ಉಪಚಾರ, ಬಿಸಿನೀರ ಜಳಕ, ಕಾಲಕಾಲಕ್ಕೆ ಮೀನು ಬಾಡೂಟ, ತರಕಾರಿ ಪಲ್ಯ, ಆಟಕ್ಕೆ ಚೆಂಡು ಬುಗರಿಗಳು ವ್ಯವಸ್ಥೆಯಾಗಿ ಅತ್ತ ಬೆಕ್ಕಾಗಿ ಉಳಿಯದೆ ಇತ್ತ ಮನುಷ್ಯ ಜನುಮ ಸಿದ್ಧಿಯಾಗದೆ ತೊಳಲಾಟದಲ್ಲಿರುತ್ತವೆ.

ಸದಾ ಸಂಸಾರಿಯಾಗಿ “ಬೆಕ್ಕಿನ ಬಿಡಾರ” ಕಟ್ಟಿಕೊಂಡು ಹಾಯಾಗಿರುವ ಚರಿತ್ರೆಯುಳ್ಳ ಬೆಕ್ಕುಗಳು ಇಲ್ಲಿ ಮನೆ ಯಜಮಾನರ ಒತ್ತಾಯದಲ್ಲಿ ಗರ್ಭನಿರೋಧಕ ಚಿಕಿತ್ಸೆ ಸಂತಾನಹರಣ ಶಸ್ತ್ರಚಿಕಿತ್ಸೆ ಇತ್ಯಾದಿ ಮಾಡಿಸಿಕೊಂಡು ಒಂಟಿಯಾಗಿ ಯಾರದೋ ಪ್ರೀತಿಯ ವಸ್ತುವಾಗಿ ಯಾರಿಗೋ ಖುಷಿ ಕೊಡುವ ಗೊಂಬೆಯಾಗಿ ಬದುಕುತ್ತವೆ. ತಮ್ಮನ್ನು ಅದಮ್ಯವಾಗಿ ಪ್ರೀತಿಸುವ ಹೆಮ್ಮೆಯ, ಸವಲತ್ತುಗಳು ಸಂಪನ್ನತೆಗಳು ಭೋಗ ಭಾಗ್ಯಗಳು ಯಥೇಚ್ಛ ದೊರೆಯುವ ದೇಶದಲ್ಲಿ “ಬೆಕ್ಕಿನ ಜಲುಮ”ದ ತುಂಬಾ ಎಷ್ಟೆಲ್ಲಾ ಸುಖ ದುಃಖಗಳು ನೋವು ನಲಿವುಗಳು ಸಂತಸ ಸಂಕಟಗಳು ಎಂದೂ “ಮ್ಯಾಂವ್” ಗುಡುತ್ತವೆ.