ಕವಿಜೋಡಿಯ ದುರಂತ ಅಂತ್ಯವೂ ಬಹಳ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಕಾವ್ಯದೇವಿಯೇ ಹೇಳಿ ಮಾಡಿಸಿದಂಥ ಜೋಡಿಯೊಂದು ಪರಸ್ಪರರ ವಿಶ್ವಾಸ ನಂಬಿಕೆಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ. ತನ್ನ ಗಂಡ ಆಸಿಯಾ ಎಂಬುವವಳ ಜೊತೆ ಸಲಿಗೆಯಿಂದ ಇರುವುದನ್ನು ಸಹಿಸಲಾಗದೆ ತಮ್ಮಿಬ್ಬರ ಪ್ರೇಮದ ಕುರುಹಾಗಿದ್ದ ಕವಿಕುಟೀರದಿಂದ ಅವನ ಕವಿತೆ-ಟಿಪ್ಪಣಿಗಳ ಪುಸ್ತಕವನ್ನು ಸುಟ್ಟು ಟೆಡ್ ನನ್ನು ಹೊರಹಾಕುವುದು, ಕೊನೆಗೆ ಸಿಲ್ವಿಯಾ ಗ್ಯಾಸ್ ಒಲೆಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವುದು ಗಾಢವಾದ ವಿಷಾದವನ್ನು ಉಂಟುಮಾಡುತ್ತದೆ.
ಎಸ್. ಸಿರಾಜ್‌ ಅಹಮದ್‌ ಬರೆಯುವ ಅಂಕಣ

ಪ್ರಸಿದ್ಧ ಕವಿಗಳಾದ ಸಿಲ್ವಿಯಾ ಪ್ಲಾತ್ ಹಾಗೂ ಟೆಡ್ ಹ್ಯೂಸ್ ಅವರ ಮೋಹಕವಾದ ಪ್ರೇಮ-ಕಾಮ, ಯಾತನಾಮಯ ದಾಂಪತ್ಯ, ದಾರುಣವಾದ ಅಂತ್ಯ ಇವೆಲ್ಲವುಗಳನ್ನೂ ಒಂದೇ ದಾರದಲ್ಲಿ ಹೆಣೆದಿರುವ ನಟರಾಜ ಹುಳಿಯಾರರ “ಕವಿ ಜೋಡಿಯ ಆತ್ಮಗೀತ” ಎಂಬ ಕಥಾಕಾವ್ಯವು, ಹಲವು ಪ್ರಕಾರಗಳ ನಡುವಲ್ಲಿ ಟಿಸಿಲೊಡೆದಿರುವ ಹೊಸಬಗೆಯ ಬರವಣಿಗೆಯಾಗಿದೆ. ಈ ನಿರೂಪಣೆಯಲ್ಲಿ ಕತೆ, ಆತ್ಮಕತೆ, ಮಹಾಕಾವ್ಯ, ಇಬ್ಬರು ಕವಿಗಳನ್ನೂ ಅರಿಯಲು ಬೇಕಾಗಿರುವ ಬಹಳ ಸೂಕ್ಷ್ಮವಾದ ವಿಮರ್ಶಾತ್ಮಕ ಓದು –ಒಂದು ಇನ್ನೊಂದರ ಮೇಲೆ ಆವರಿಸಿಕೊಳ್ಳದೆ ಹದವಾಗಿ ಬೆರೆತುಕೊಂಡಿವೆ. ಈಗಾಗಲೇ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆಯಲು ಪ್ರಯತ್ನಿಸಿರುವ ನಟರಾಜರು ಎಲ್ಲವನ್ನೂ ಬೆರೆಸಿ ಹೊಸಪೀಳಿಗೆಯ ಓದುಗರಿಗೆ ಹೊಸ ಓದಿನ ಕ್ರಮವನ್ನು ಕಲಿಸಿಕೊಟ್ಟಂತಿದೆ.

(ನಟರಾಜ್ ಹುಳಿಯಾರ್)

ಇಬ್ಬರು ಮಹಾಸಂವೇದನಾಶೀಲ ಕವಿಗಳ ಸಾಧನೆ, ಜೀವನದ ಏಳುಬೀಳಿನ ಕಥನವನ್ನು ಹೇಳುವಾಗ ನಟರಾಜರು ಕಾವ್ಯದ ತೆಳುಚಾದರದ ಮೇಲೆ ಹಬ್ಬಿಸಿರುವ ಪಾರಿಭಾಷಿಕಗಳಿಂದ ಭಾರವಾಗದ ಚೇತೋಹಾರಿ ಗದ್ಯವನ್ನೇ ಬಳಸುತ್ತಾರೆ. ಮನೋವಿಜ್ಞಾನಿಗಳಿಗೆ, ಆಧುನಿಕ ಸ್ತ್ರೀವಾದಿಗಳಿಗೆ, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿ ಚಿಂತನೆಗಳಿಗೆ ಸಮರ್ಥ ರೂಪಕಗಳನ್ನು ಒದಗಿಸುವ ಕಾರಣಕ್ಕಾಗಿ ವಿಶ್ವಾದ್ಯಂತ ಅಪಾರ ಜನಮನ್ನಣೆ ಪಡೆದಿರುವ ಸಿಲ್ವಿಯಾ ಪ್ಲಾತ್ ಹಾಗೂ ಆಧುನಿಕ ಜಗತ್ತಿನ ಸಾಮಾಜಿಕ ರಾಜಕೀಯ ವಿಕಾರಗಳನ್ನು ಪ್ರಾಣಿಜಗತ್ತಿನ ರೂಪಕಗಳ ಮೂಲಕ ಅಭಿವ್ಯಕ್ತಗೊಳಿಸಿದ ಟೆಡ್ ಹ್ಯೂಸ್ –ಇಬ್ಬರ ಅನನ್ಯ ಪ್ರತಿಭಾ ವಿಲಾಸವನ್ನು ಪರಿಚಯಿಸಿದಂತೆಯೇ ಅವರ ವ್ಯಕ್ತಿತ್ವದ ಕೊರಕಲುಗಳಾದ ವಿಕ್ಷಿಪ್ತತೆ, ಲಂಪಟತನ, ಹಠಮಾರಿತನ ಮೊದಲಾದ ಮನುಷ್ಯ ಸಹಜ ದೌರ್ಬಲ್ಯಗಳನ್ನೂ ಕಾಣಿಸುತ್ತಾರೆ. ಈ ಕಾರಣಕ್ಕಾಗಿಯೇ ನಟರಾಜರು ಸಿಲ್ವಿಯಾ ಮತ್ತು ಟೆಡ್ ಎಂಬ ಇಬ್ಬರು ಮಹಾಕವಿಗಳ ಆತ್ಮಕತೆಯನ್ನು ಹೇಳುತ್ತಲೇ ಮನುಷ್ಯಲೋಕದ ಅಪೂರ್ಣತೆಗಳ ಕಡೆಗೂ ಬೆಳಕು ಹಾಯಿಸುತ್ತಾರೆ. ಇಬ್ಬರು ಕವಿಗಳ ಕಾವ್ಯ, ಆತ್ಮಚರಿತ್ರೆಯ ಪುಟಗಳು, ವಿಮರ್ಶೆ ಮೊದಲಾದ ಆಕರಗಳಿಂದ ರೂಪಿತವಾಗಿರುವ ಈ ಬಗೆಯ ಬರವಣಿಗೆ ಸಾಹಿತ್ಯವಿಮರ್ಶೆಯ ಏರುಹುಬ್ಬಿನ ಶೈಲಿಯನ್ನು ಪಕ್ಕಕ್ಕೆ ಸರಿಸಿದಂತೆ ಕಾಣುತ್ತದೆ.

ಟೆಡ್-ಸಿಲ್ವಿಯಾ ಅವರ ಮೋಹಕ ಪ್ರೇಮ, ಮದುವೆ, ದಾಂಪತ್ಯದ ಕಲಹ ಹಾಗೂ ಮೂವತ್ತರ ಪ್ರಾಯದಲ್ಲಿಯೇ ಸಿಲ್ವಿಯಾಳ ದಾರುಣವಾದ ಆತ್ಮಹತ್ಯೆಯ ನಾಲ್ಕು ಕವಲುಗಳಲ್ಲಿ ಹರಡಿಕೊಂಡಿರುವ ಈ ಕಥನಕಾವ್ಯದ ಆರಂಭದಲ್ಲಿ ಇಬ್ಬರೂ ಕವಿಗಳ ಬಾಲ್ಯ ಮತ್ತು ಯೌವನದ ಆಪ್ತವಾದ ವಿವರಗಳಿವೆ. ಜರ್ಮನ್ ಹಿನ್ನೆಲೆಯ ತಂದೆ-ಜ್ಯೂಯಿಶ್/ಜಿಪ್ಸಿ ಮೂಲದ ತಾಯಿಯ ಮುದ್ದಿನ ಮಗಳಾಗಿ ಬೆಳೆದ ಸಿಲ್ವಿಯಾ ಒಂಬತ್ತರ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಆ ಕಾರಣಕ್ಕಾಗಿಯೇ ತನ್ನ ಜೀವನದುದ್ದಕ್ಕೂ ವಿಚಿತ್ರವಾದ ಅಭದ್ರತೆ, ವ್ಯಗ್ರತೆ ಮತ್ತು ವಿಹ್ವಲತೆಯ ಗುಣಗಳನ್ನು ಬೆಳೆಸಿಕೊಂಡಿದ್ದನ್ನು ನಟರಾಜರು ಬಹಳ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಹಾಗೆಯೇ ಟೆಡ್ ನ ಜೀವನ ವಿವರಗಳನ್ನು ದಾಖಲಿಸುವಾಗಲೂ ಹಳ್ಳಿಹೈದನ ಒರಟುತನ, ಪೋಲಿ ಫಟಿಂಗತನಗಳನ್ನೂ ಕಾಣಿಸುತ್ತಾರೆ. ಅದೇನೇ ಇದ್ದರೂ ಇಬ್ಬರು ಕವಿಗಳು ತಮ್ಮೆಲ್ಲ ಮಿತಿಗಳ ಆಚೆಗೂ ಒಬ್ಬರು ಇನ್ನೊಬ್ಬರ ಕಾವ್ಯದ ಮಾಂತ್ರಿಕತೆಗೆ ಮೋಹಿತರಾಗುವುದು ಅವರಿಬ್ಬರ ತಾತ್ಕಾಲಿಕ ದೈಹಿಕ ಆಕರ್ಷಣೆಗಿಂತ ಮಿಗಿಲಾದದ್ದು ಎಂಬಂತೆ ನಿರೂಪಿತವಾಗಿರುವುದು ಈ ಕಥನದ ಶಕ್ತಿಯಾಗಿದೆ. ಒಬ್ಬರು ಇನ್ನೊಬ್ಬರ ಕವಿತೆಗಳನ್ನು ತಿದ್ದುತ್ತ, ಕವಿತೆಯ ವಸ್ತುಗಳನ್ನು, ಪ್ರತಿಮೆಗಳನ್ನು ಹಂಚಿಕೊಳ್ಳುತ್ತ ಒಬ್ಬರು ಇನ್ನೊಬ್ಬರೊಳಗೊಂದಾಗಿ ಬೆಳೆಯುವ ಅಪೂರ್ವ ಸಾಂಗತ್ಯದ ಮಾದರಿಯೇ ಇಂಥದೊಂದು ಆರ್ದ್ರ ಕಥನವನ್ನು ಬರೆಯಲು ನಟರಾಜರನ್ನು ಪ್ರೇರೇಪಿಸಿದಂತೆ ಕಾಣುತ್ತದೆ.

ಇದೇ ಕಾರಣಕ್ಕಾಗಿಯೇ ಕವಿಜೋಡಿಯ ದುರಂತ ಅಂತ್ಯವೂ ಬಹಳ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಕಾವ್ಯದೇವಿಯೇ ಹೇಳಿ ಮಾಡಿಸಿದಂಥ ಜೋಡಿಯೊಂದು ಪರಸ್ಪರರ ವಿಶ್ವಾಸ ನಂಬಿಕೆಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ. ತನ್ನ ಗಂಡ ಆಸಿಯಾ ಎಂಬುವವಳ ಜೊತೆ ಸಲಿಗೆಯಿಂದ ಇರುವುದನ್ನು ಸಹಿಸಲಾಗದೆ ತಮ್ಮಿಬ್ಬರ ಪ್ರೇಮದ ಕುರುಹಾಗಿದ್ದ ಕವಿಕುಟೀರದಿಂದ ಅವನ ಕವಿತೆ-ಟಿಪ್ಪಣಿಗಳ ಪುಸ್ತಕವನ್ನು ಸುಟ್ಟು ಟೆಡ್ ನನ್ನು ಹೊರಹಾಕುವುದು, ಕೊನೆಗೆ ಸಿಲ್ವಿಯಾ ಗ್ಯಾಸ್ ಒಲೆಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವುದು ಗಾಢವಾದ ವಿಷಾದವನ್ನು ಉಂಟುಮಾಡುತ್ತದೆ.

ಹಾಗೆ ನೋಡಿದರೆ ಮನೋವಿಜ್ಞಾನ ಮತ್ತು ಸ್ತ್ರೀವಾದಿ ಸಂಕಥನದಲ್ಲಿ ಬಹಳ ವಿವಾದಾತ್ಮಕ ಚರ್ಚೆಗಳಿಗೆ ಈಡಾಗಿರುವ ಜೀವನಕಥನವನ್ನು ನಟರಾಜರು ಬಹಳ ಸಮತೂಕದಲ್ಲಿ ನಿರ್ವಹಿಸಿರುವುದು ಬರಹದ ಅಗ್ಗಳಿಕೆಯಾಗಿದೆ. ಇಬ್ಬರ ನಡುವೆ ಸ್ವಂತವನ್ನು ಮೀರುವ ಸಂತ ದನಿ ಮೂಡದೇ ಹೋಗಿದ್ದೇ ಅರ್ಥಪೂರ್ಣವಾಗಬಹುದಾಗಿದ್ದ ಕಾವ್ಯಜೀವನವೊಂದರ ನಾಶಕ್ಕೆ ಕಾರಣವಾಯಿತು ಎಂದು ಕಥನಕಾರ ಒತ್ತಿ ಹೇಳುತ್ತಾನೆ. ಸ್ವಂತದನ್ನೆಲ್ಲ ಬರೆಯುವ ಕವಿಗಳಿಗೆ ಸ್ವಂತದ ತೀವ್ರಶೋಧವೂ ಕೂಡ ತಮ್ಮ ಗಂಭೀರ ಜವಾಬ್ದಾರಿಯಾಗಿರಬೇಕು ಎಂದು ಹೇಳುವ ಮೂಲಕ ತಮ್ಮ ಸಂವೇದನೆಯ ಹದ ಎಂಥದ್ದು ಎಂದು ತೋರಿಸುತ್ತಾರೆ. ನವ ಸ್ತ್ರೀವಾದಿಯುಗದ ಪ್ರತಿನಿಧಿಯಂತೆ ಉಲ್ಲೇಖಿಸಲಾಗುವ ಸಿಲ್ವಿಯಾಳನ್ನು ಕುರಿತು ಬರೆಯುವಾಗ, ಗಂಡಿನ ವಂಚನೆ-ಕಡಿವಾಣಗಳನ್ನು ಕಿತ್ತೊಗೆದು ಒಬ್ಬಂಟಿಯಾಗಿ ಬದುಕಿ ಬಾಳುವ ಹೊಸಯುಗದ ಸ್ತ್ರೀವಾದಿ ಛಲವನ್ನು ಯಾಕೆ ಆಕೆ ತನ್ನ ಜೀವನದಲ್ಲಿ ತೋರಲಿಲ್ಲ ಎಂಬ ಗಂಭೀರ ಪ್ರಶ್ನೆಯನ್ನು ಕಥನದ ಮೂಲಕ ಕೇಳುತ್ತಾರೆ.