”ಕುಂದೇರನ ಪ್ರಕಾರ ಸರ್ವಾಧಿಕಾರವೆನ್ನುವುದು ನರಕವಷ್ಟೇ ಅಲ್ಲ, ಅದು ಸ್ವರ್ಗದ ಕನಸೂ ಕೂಡ.ಅಂತಹ ‘ಸ್ವರ್ಗ’ ಸಾಕಾರವಾಗುತ್ತಿರುವಾಗ ಅದರ ಬಗ್ಗೆ ತಕರಾರುಗಳು ಹುಟ್ಟುತ್ತವೆ.ಹಾಗೆ ಅಡ್ಡಗಾಲು ಹಾಕುವವರನ್ನು ನಿವಾರಿಸಿಕೊಳ್ಳಲು ಆ ಸ್ವರ್ಗದ ಒಂದು ಮೂಲೆಯಲ್ಲಿ ಯಾತನಾಶಿಬಿರ ಗಳು ನಿರ್ಮಾಣವಾಗುತ್ತವೆ. ಬರಬರುತ್ತಾ ಯಾತನಾಶಿಬಿರಗಳ ಪ್ರಮಾಣ ದೊಡ್ಡದಾಗುತ್ತಾ ಹೋಗಿ ಸ್ವರ್ಗದ ಗಾತ್ರ ಕ್ಷೀಣಿಸುತ್ತಾ ಹೋಗುತ್ತದೆ”
ಕಾದಂಬರಿಕಾರ ಮಿಲನ್ ಕುಂದೇರಾThe Unbearable Lightness of Being ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕಿ ಸುಕನ್ಯಾ ಕನಾರಳ್ಳಿ ಬರೆದ ಪ್ರಸ್ತಾವನೆ.

 

ಝೆಕ್!

ಮರೀನಾ ತ್ಸಾವೆತಾಯೆವಾ ಒಂದು ಪದ್ಯ ಪ್ರಾಗ್ ನ ವ್ಲತಾವ ನದಿಯ ದಡದಲ್ಲಿರುವ ಸೇತುವೆಯಲ್ಲಿ ಸ್ಥಾಪಿಸಲ್ಪಟ್ಟ ಯೋಧನ ಮೂರ್ತಿಯನ್ನು ಉದ್ದೇಶಿಸಿ ಹೀಗೆ ಹೇಳುತ್ತದೆ:

ಚಿಮ್ಮಿ ಹರಿಯುವ ನದಿಯ
ಸರಿದು ಹೋದ ವರುಷಗಳ
ಕಣ್ಣಿನಲಿ ಕಾಪಿಟ್ಟು ನಿಂತ
ಮ್ಲಾನ ಮುಖದ ಯೋಧನೇ
ಶಿಲೆಯ ತಟಕ್ಕೆ ಅಪ್ಪಳಿಸಿ ಚೂರಾದ
ಒಪ್ಪಂದಗಳಿಗೆ ನೀನೇ ಸಾಕ್ಷಿ!

ಅದನ್ನವಳು ಬರೆದಿದ್ದು 1936 ರಲ್ಲಿ. ಪ್ರಾಗ್, ನಾಜಿ ಜರ್ಮನಿಗೆ ಹೇಗೋ ಹಾಗೇ ಕಮ್ಯೂನಿಸ್ಟ್ ರಷಿಯಾದ ಸನಿಹದಲ್ಲೇ ಇರಬೇಕಾದಂತ ದುರದೃಷ್ಟಕರ ಪ್ರದೇಶ. ಒಡೆಯುವ ಒಪ್ಪಂದಗಳಿಗೆ, ಮುರಿದು ಬೀಳುವ ಕರಾರುಗಳಿಗೆ ಒಡ್ಡಿಕೊಳ್ಳಲೇ ಬೇಕಾಗಿದ್ದ ಪುಟ್ಟ ದೇಶವೇ ಝೆಕ್.

ಕುಂದೇರಾ: ‘ಹುಟ್ಟಿದ್ದು ಝೆಕೆಸ್ಲೋವಾಕಿಯಾದಲ್ಲಿ, ಇರುವುದು ಫ್ರಾನ್ಸಿನಲ್ಲಿ’

ಮಿಲನ್ ಕುಂದೇರಾ ಬ್ರನೋ ಪಟ್ಟಣದ ಸುಸಂಸ್ಕೃತ ಮಧ್ಯಮವರ್ಗದ ಕುಟುಂಬವೊಂದರಲ್ಲಿ 1929 ರಲ್ಲಿ ಹುಟ್ಟಿದ. ತಂದೆ ಲುದ್ವಿಕ್ ಕುಂದೇರಾ ಒಬ್ಬ ಪ್ರಮುಖ ಸಂಗೀತಶಾಸ್ತ್ರಜ್ಞ ಮತ್ತು ಪಿಯಾನೋ ವಾದಕನಾಗಿದ್ದ. ಮಿಲನ್ ಕುಂದೇರಾ ಸಹ ಸಂಗೀತಶಾಸ್ತ್ರವನ್ನು ಅಭ್ಯಸಿಸಿದ್ದ. ಫಿಲ್ಮ್ ಅಕಾಡೆಮಿಯಿಂದ ಪದವಿ ಪಡೆದ 1952 ರಲ್ಲಿ ಅಲ್ಲಿಯೇ ವಿಶ್ವಸಾಹಿತ್ಯದ ಉಪನ್ಯಾಸಕನಾಗಿ ಕೆಲಸವೂ ಸಿಕ್ಕಿತು. ಕುಂದೇರಾ ಬೆಳೆಯುವ ವರುಷಗಳಲ್ಲಿ ಅವನ ವಯಸ್ಸಿನವರ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದು ಎರಡನೆಯ ಮಹಾ ಯುದ್ಧ ಮತ್ತು ಜರ್ಮನಿಯ ಸರ್ವಾಧಿಕಾರ. ಅದು ಮಾರ್ಕ್ಸ್ ವಾದದತ್ತ ವಾಲಲು ಪ್ರೇರಣೆಯೂ ಆಯಿತು. ಹದಿವಯಸ್ಸಿನಲ್ಲಿಯೇ ಕುಂದೇರಾ 1948 ರಲ್ಲಿ ಆಡಳಿತದಲ್ಲಿದ್ದ ಅಂದಿನ ಝೆಕ್ ಕಮ್ಯೂನಿಸ್ಟ್ ಪಾರ್ಟಿಯ ಸದಸ್ಯನೂ ಆಗಿದ್ದ. ಸಂಘವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆಪಾದನೆ ಹೊತ್ತು 1950 ರಲ್ಲಿ ಪಾರ್ಟಿಯಿಂದ ಉಚ್ಛಾಟಿಸಲ್ಪಟ್ಟು, ಮತ್ತೆ 1956 ರಲ್ಲಿ ಮರಳಿ, ಮತ್ತೆ ಎರಡನೆಯ ಬಾರಿಗೆ 1970 ರಲ್ಲಿ ಹೊರ ಹಾಕಲ್ಪಟ್ಟಿದ್ದು ಅವನ ಬಯಾಗ್ರಫಿಯ ಭಾಗವಿರಬಹುದು. ಆದರೆ ಕುಂದೇರಾಗೆ ತನ್ನ ಜೀವನದ ಘಟನೆಗಳ ಬಗೆಗೆ ಮಾತಾಡುವುದು ಒಂದಿಷ್ಟೂ ರುಚಿಸದ ವಿಷಯ. ಅವನ ಮಾತಿನಲ್ಲಿಯೇ ಹೇಳುವುದಾದರೆ ಅವು ‘ನೋಬಡೀಸ್ ಬಿಸಿನೆಸ್’ (‘nobody’s business’). ಅವನ ಕೃತಿಗಳನ್ನು ಸಾಹಿತ್ಯದಾಚೆಯ ವಾಸ್ತವಕ್ಕೆ ತಾಳೆ ಹಾಕಿ ಯಾವುದು ಬಯಾಗ್ರಫಿ ಎಂದು ತೂಗಿ ನೋಡುವ ಪ್ರಯತ್ನವೇ ಹಾಸ್ಯಾಸ್ಪದ. ಬಯಾಗ್ರಫಿಯೆನ್ನುವುದೂ ಮತ್ತೆ ಮತ್ತೆ ಬರೆಯಲಾರದ್ದಂತದ್ದೇನಲ್ಲ. ವಸ್ತುನಿಷ್ಠ ರಾಜಕೀಯ ಚರಿತ್ರೆ ಎನ್ನುವುದು ಹೇಗೆ ಇಲ್ಲವೋ ಹಾಗೆಯೇ ವಸ್ತುನಿಷ್ಠ ಜೀವನಚರಿತ್ರೆಯೂ ಇಲ್ಲ, ಆತ್ಮಚರಿತ್ರೆಯೂ ಇಲ್ಲ. ತನ್ನ ಒಳ ಬದುಕನ್ನು ತನ್ನ ಕೃತಿಗಳಲ್ಲಿ ಸೂಚಿಸುವುದರಲ್ಲಾಗಲಿ, ಬಿಚ್ಚಿಡುವುದರಲ್ಲಿ ಅವನಿಗೆ ಆಸಕ್ತಿಯಿಲ್ಲ. ವೇಷ ಮರೆಸಿಕೊಂಡು ಬರುವ ಆತ್ಮಕಥಾನಕಗಳೆಂದರೆ ಅವನಿಗೆ ದೂರವೇ.

‘ಬರಹಗಾರನು ತನ್ನ ಒಳ ಬದುಕನ್ನು ಕಾಪಾಡಿಕೊಳ್ಳಬೇಕು. ಕಮ್ಯೂನಿಸ್ಟ್ ದೇಶದಲ್ಲಿ ನಿಮ್ಮ ಒಳ ಬದುಕಿನ ಮೇಲೆ ಪೋಲೀಸರು ಕಣ್ಣಿಟ್ಟಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅದೇ ಕೆಲಸವನ್ನು ಮಾಡಲು ಮಾಧ್ಯಮಗಳು ಹೇಗೂ ಹುಟ್ಟಿಕೊಂಡಿವೆ. ಬರಬರುತ್ತಾ ಸಾಮಾನ್ಯರಿಗೆ ಹೊರ ಮತ್ತು ಒಳ ಬದುಕಿನ ಅಂತರವೇನು ಎಂಬುದರ ಪ್ರಜ್ಞೆಯೇ ನಶಿಸುತ್ತಾ ಹೋಗುತ್ತದೆ. ಆದರೆ ಒಳ ಬದುಕೆನ್ನುವುದು ಇಲ್ಲದಿರುವ ವ್ಯಕ್ತಿಗೆ ಪ್ರೀತಿಯೂ ಸಾಧ್ಯವಿಲ್ಲ, ಸೃಜನಶೀಲತೆಯೂ ಸಾಧ್ಯವಿಲ್ಲ’ ಎನ್ನುವುದು ಆತನ ನಿಲುವು. ಅದಕ್ಕೇ ಏನೋ, ಅವನ ಹಲವಾರು ಕೃತಿಗಳ ಫ್ರೆಂಚ್ ಆವೃತ್ತಿಗಳಲ್ಲಿ ಅವನ ಅಧಿಕೃತ ಬಯಾಗ್ರಫಿಯಡಿ ಇರುವುದು ಎರಡೇ ಸಾಲು: “ಮಿಲನ್ ಕುಂದೇರಾ -ಹುಟ್ಟಿದ್ದು 1929 ರಲ್ಲಿ, ಝೆಕೆಸ್ಲೋವಾಕಿಯಾದಲ್ಲಿ. 1975 ರಿಂದ ಇರುವುದು ಫ್ರಾನ್ಸಿನಲ್ಲಿ.” ತಾನು ಐವತ್ತರ ಮತ್ತು ಅರವತ್ತರ ದಶಕದಲ್ಲಿ ಬರೆದ ಸಾಹಿತ್ಯದ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ. ಅವನ ಪ್ರಕಾರ ಬರಹಗಾರನಿಗೆ ತನ್ನ ‘ಅಪಕ್ವ’ ಸಾಹಿತ್ಯವನ್ನು ಆಚೆಗಿಡುವ ಹಕ್ಕಿರಬೇಕು. ಸಂಗೀತಕಾರರಿಗೆ ಇರುವುದಿಲ್ಲವೇ? ಹಾಗೇ. ತನ್ನ ಬದುಕಿನ ಬಗ್ಗೆ ಮಾತಾಡಬೇಕಾದಾಗೆಲ್ಲ ಕುಂದೇರಾ ಮನುಷ್ಯನಿಗೆ ತನ್ನ ನೆಲವನ್ನು ಕಳೆದುಕೊಳ್ಳುವ ಭಯದ ಬಗ್ಗೆ ಮಾತಾಡುತ್ತಾನೆ. ‘ಹುಡುಗನಾಗಿದ್ದಾಗ ನನಗೆ ಯಾರಾದರೂ ನಿನ್ನ ದೇಶ ಯಾವತ್ತಾದರೂ ಮಾಯವಾಗುತ್ತದೆ ಎಂದು ಹೇಳಿದ್ದರೆ ಹೇಳುವವರು ಎಂಥಾ ಹುಚ್ಚರಪ್ಪಾ ಎಂದು ತಳ್ಳಿಬಿಡುತ್ತಿದ್ದೆ. ಮನುಷ್ಯ ಸಾಯುತ್ತಾನೆ ನಿಜ, ಅದು ಎಲ್ಲರಿಗೂ ಗೊತ್ತಿದ್ದೇ. ಆದರೆ ನೆಲ, ದೇಶ ಎನ್ನವುದು ಯಾವತ್ತಿಗೂ ಇರುತ್ತದೆ ಎಂದುಕೊಂಡಿರುತ್ತೇವಲ್ಲ? ಆದರೆ 1968 ರಲ್ಲಿ ರಷಿಯಾ ಝೆಕ್ ಅನ್ನು ಆಕ್ರಮಿಸಿಕೊಂಡ ಮೇಲೆ ತನ್ನ ದೇಶ ಯುರೋಪಿನಿಂದ ತಣ್ಣಗೆ ಅಳಿಸಿಹಾಕಲ್ಪಡುತ್ತದೆ ಎಂಬ ಭಯ ಪ್ರತಿಯೊಬ್ಬ ಝೆಕ್ ಪ್ರಜೆಯನ್ನು ಕಾಡಿದ್ದು ನಿಜ… ದೇಶವೇ ನಾಶವಾಗುವ ಸಾಧ್ಯತೆ ಬದುಕಿನ ಪ್ರಜ್ಞೆಯನ್ನೇ ಬದಲಾಯಿಸಿಬಿಡುವಂತ ಶಕ್ತಿಯುಳ್ಳದ್ದು. ಇತ್ತೀಚೆಗೆ ಯುರೋಪ್ ಸಹ ಯಾವಾಗ ಬೇಕಾದರೂ ಒಡೆದು ಹೋಗುವಷ್ಟು ನಾಜೂಕಾಗಿ ನನ್ನ ಕಣ್ಣಿಗೆ ಕಾಣಿಸಲಾರಂಭಿಸಿದೆ.’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ.

ಕುಂದೇರಾ ಬೆಳೆಯುವ ವರುಷಗಳಲ್ಲಿ ಅವನ ವಯಸ್ಸಿನವರ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದು ಎರಡನೆಯ ಮಹಾ ಯುದ್ಧ ಮತ್ತು ಜರ್ಮನಿಯ ಸರ್ವಾಧಿಕಾರ. ಅದು ಮಾರ್ಕ್ಸ್ ವಾದದತ್ತ ವಾಲಲು ಪ್ರೇರಣೆಯೂ ಆಯಿತು. ಹದಿವಯಸ್ಸಿನಲ್ಲಿಯೇ ಕುಂದೇರಾ 1948 ರಲ್ಲಿ ಆಡಳಿತದಲ್ಲಿದ್ದ ಅಂದಿನ ಝೆಕ್ ಕಮ್ಯೂನಿಸ್ಟ್ ಪಾರ್ಟಿಯ ಸದಸ್ಯನೂ ಆಗಿದ್ದ. ಸಂಘವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆಪಾದನೆ ಹೊತ್ತು 1950 ರಲ್ಲಿ ಪಾರ್ಟಿಯಿಂದ ಉಚ್ಛಾಟಿಸಲ್ಪಟ್ಟು, ಮತ್ತೆ 1956 ರಲ್ಲಿ ಮರಳಿ, ಮತ್ತೆ ಎರಡನೆಯ ಬಾರಿಗೆ 1970 ರಲ್ಲಿ ಹೊರ ಹಾಕಲ್ಪಟ್ಟಿದ್ದು ಅವನ ಬಯಾಗ್ರಫಿಯ ಭಾಗವಿರಬಹುದು. ಆದರೆ ಕುಂದೇರಾಗೆ ತನ್ನ ಜೀವನದ ಘಟನೆಗಳ ಬಗೆಗೆ ಮಾತಾಡುವುದು ಒಂದಿಷ್ಟೂ ರುಚಿಸದ ವಿಷಯ. ಅವನ ಮಾತಿನಲ್ಲಿಯೇ ಹೇಳುವುದಾದರೆ ಅವು ‘ನೋಬಡೀಸ್ ಬಿಸಿನೆಸ್’ (‘nobody’s business’). ಅವನ ಕೃತಿಗಳನ್ನು ಸಾಹಿತ್ಯದಾಚೆಯ ವಾಸ್ತವಕ್ಕೆ ತಾಳೆ ಹಾಕಿ ಯಾವುದು ಬಯಾಗ್ರಫಿ ಎಂದು ತೂಗಿ ನೋಡುವ ಪ್ರಯತ್ನವೇ ಹಾಸ್ಯಾಸ್ಪದ.

ಎಂಭತ್ತನೆಯ ದಶಕದಲ್ಲಿ ಕುಂದೇರಾ ಬರೆದ ಕಾದಂಬರಿಗಳ ಬಗ್ಗೆ ಕೆಲವು ಝೆಕ್ ಚಿಂತಕರು ಪ್ರತಿಕ್ರಿಯಿಸುತ್ತಾ ಫ್ರಾನ್ಸಿಗೆ ಹೋದ ಮೇಲೆ ತನಗೂ ಕಮ್ಯೂನಿಸಮ್ಮಿಗೂ ಸಂಬಂಧವೇ ಇರಲಿಲ್ಲ, ತಾನೊಬ್ಬ ಯಾವಾಗಲೂ ಭಿನ್ನಮತೀಯ ಬರಹಗಾರನಾಗಿಯೇ ಇದ್ದೆ ಎಂದು ‘ಪೋಸು’ ಕೊಡುವ ಕುಂದೇರಾನನ್ನು ಕಟುವಾಗಿ ಟೀಕಿಸುತ್ತಾರೆ. ಫಿಲಿಪ್ ರಾತ್ ಎಂಬುವವನಿಗೆ 1980 ರಲ್ಲಿ ಇತ್ತ ಸಂದರ್ಶನದಲ್ಲಿ ಕುಂದೇರಾ ಹೇಳಿಕೊಳ್ಳುವುದು ಹೀಗೆ: “…ಆಮೇಲೆ ನನ್ನನ್ನು ವಿಶ್ವವಿದ್ಯಾಲಯದ ಕೆಲಸದಿಂದ ನನ್ನನ್ನು ತೆಗೆದುಹಾಕಲಾಯಿತು. ನಾನಾಗ ಕಾರ್ಮಿಕರ ಜೊತೆ ಬದುಕುತ್ತಿದ್ದೆ. ಪುಟ್ಟ ಪಟ್ಟಣಗಳ ಜಾಸ್ ಸಂಗಿತಗಾರರ ತಂಡದಲ್ಲಿ ಸೇರಿಕೊಂಡು ಟ್ರಂಪೆಟ್, ಪಿಯಾನೋ ನುಡಿಸುತ್ತಾ ಕಾಲ ಹಾಕುತ್ತಿದ್ದೆ. ಕವನ ಬರೆಯುತ್ತಿದ್ದೆ. ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಇಟ್ ವಾಸ್ ಆಲ್ ನಾನ್ ಸೆನ್ಸ್… ಹೇಳಿಕೊಳ್ಳಬಹುದಾದ ಕತೆ ಬರೆದಿದ್ದು ನನ್ನ ಮೂವತ್ತನೆಯ ವಯಸ್ಸಿನಲ್ಲಿ. ‘ಲಾಫಬಲ್ ಲವ್ಸ್’ (Laughable Loves) ಕೃತಿಯಲ್ಲಿ ಬರುವ ಮೊದಲನೆಯ ಕತೆ ಅದು. ನನ್ನ ಬರಹದ ಬದುಕು ಪ್ರಾರಂಭವಾಗಿದ್ದು ಅಲ್ಲಿಂದಲೇ. ಅದಕ್ಕೂ ಮೊದಲು ನನ್ನ ಬದುಕಿನ ಅರ್ಧ ಭಾಗವನ್ನು ಅಷ್ಟೇನೂ ಮಂದಿಗೆ ಗೊತ್ತಿಲ್ಲದ ಒಬ್ಬ ಝೆಕ್ ಚಿಂತಕನಾಗಿ ಕಳೆದೆ…” ಅದಕ್ಕೆ ಪ್ರತಿಕ್ರಿಯಿಸುತ್ತಾ ಪ್ರಮುಖ ಝೆಕ್ ಸಾಹಿತ್ಯ ವಿಮರ್ಶಕ ಮಿಲನ್ ಯೂಂಗ್ ಮನ್ “ಐವತ್ತರ ಮತ್ತು ಅರವತ್ತರ ದಶಕದ ಮಿಲನ್ ಕುಂದೇರಾನನ್ನು ಬಲ್ಲವರಿಗೆ ಈ ಕುಂದೇರಾನನ್ನು ಗುರುತು ಹಿಡಿಯುವುದು ಸ್ವಲ್ಪ ಕಷ್ಟವೇ. ತನ್ನ ಸ್ವ-ಚಿತ್ರಣವನ್ನು ಕುಂದೇರಾ ಹೇಗೆ ರಿ-ಟಚ್ ಮಾಡಿಕೊಂಡಿದ್ದಾನೆಂದರೆ ಅದರಲ್ಲಿ ನಿಜವಾದ ಕುಂದೇರಾ ಮಾಯವೇ ಆಗಿಬಿಟ್ಟಿದ್ದಾನೆ. ಝೆಕ್ ಚರಿತ್ರೆಯ ಕಳೆದ ದಶಕಗಳಲ್ಲಿ ಕುಂದೇರಾ ಮುಂಚೂಣಿಯಲ್ಲಿದ್ದ ಒಬ್ಬ ಪ್ರಭಾವಿ ಚಿಂತಕ ಎನ್ನುವ ಸತ್ಯವನ್ನೇ ಅದುಮಿ ಹಿಡಿಯಲಾಗಿದೆ” ಎಂದು ಟೀಕಿಸಿದ.

ಐವತ್ತರ ಮತ್ತು ಅರವತ್ತರ ದಶಕಗಳಲ್ಲಿ ಕುಂದೇರಾ ಅಧಿಕೃತ ಝೆಕ್ ಕಮ್ಯೂನಿಸ್ಟ್ ಸಾಹಿತ್ಯದ ಪ್ರಗತಿಪರ ಶಕ್ತಿಯಾಗಿ ಕೆಲಸ ಮಾಡಿದ್ದು ನಿಜ. ಸ್ಟಾಲಿನ್ ಧೋರಣೆಯನ್ನು ಬೆಂಬಲಿಸಿ ಕಾವ್ಯವನ್ನು ಬರೆದಿದ್ದೂ ನಿಜ. ಅವನ ಮಹತ್ವದ ಕೃತಿಗಳಾದ ‘ದ ಜೋಕ್’ (The Joke, 1967) ಮತ್ತು ‘ಲಾಫಬಲ್ ಲವ್ಸ್’ (Laughable Loves, 1969) ಗಳಲ್ಲಿ ಅವನಾಗಲೇ ಸರ್ವಾಧಿಕಾರ ವಿರೋಧಿಯಾಗಿ ಗುರುತಿಸಲ್ಪಟ್ಟಿದ್ದರೂ ಸಹ, 1968 ರಲ್ಲಿ ಸೋವಿಯತ್ ಆಕ್ರಮಣದ ನಾಲ್ಕು ತಿಂಗಳ ನಂತರವೂ ಕುಂದೇರಾ ತನ್ನನ್ನು ಒಬ್ಬ ಜಾಗತಿಕ ಸಮಾಜವಾದದ, ಅಂದರೆ ಕಮ್ಯೂನಿಸಮ್ಮಿನ ಬೆಂಬಲಿಗನಾಗಿಯೇ ಗುರುತಿಸಿಕೊಳ್ಳುತ್ತಾನೆ. ಅರವತ್ತರ ದಶಕದ ಎರಡನೆಯ ಭಾಗದಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಪ್ರಗತಿಪರ ಸದಸ್ಯರಾಗಿದ್ದ ಬರಹಗಾರರು, ಚಿಂತಕರು ಹೆಚ್ಚು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸರ್ವಾಧಿಕಾರಶೀಲ ಆಡಳಿತವನ್ನು ಒತ್ತಾಯಿಸಿದ್ದರು. ಜೂನ್ 1967 ರಲ್ಲಿ ನಡೆದ ನಾಲ್ಕನೆಯ ಕಾಂಗ್ರೆಸ್ ಸಮಾವೇಶದಲ್ಲಿ ಝೆಕ್ ಬರಹಗಾರರು ಕಮ್ಯೂನಿಸ್ಟ್ ನಾಯಕತ್ವಕ್ಕೆ ಸ್ಪಷ್ಟವಾಗಿ ತಿರುಗಿ ಬಿದ್ದಿದ್ದರು. ಕುಂದೇರಾ ಆ ಚಳುವಳಿಯ ಮುಂಚೂಣಿಯಲ್ಲಿದ್ದವನು. ಅವನು ಆಗ ಮಾಡಿದ ಭಾಷಣ ಸ್ವ-ವಿಮರ್ಶಾತ್ಮಕ ಸ್ವತಂತ್ರ ಝೆಕ್ ವಿಚಾರಧಾರೆಯ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿತು. ‘ಸಣ್ಣ ಪುಟ್ಟ ರಾಷ್ಟ್ರಗಳು ಯಾವಾಗಲೂ ವಿನಾಶದ ಅಂಚಿನಲ್ಲಿ ಜೋಲಿ ಹೊಡೆಯುತ್ತಾ ನಿಂತಿರುತ್ತವೆ. ಎಲ್ಲವನ್ನೂ ಸ್ವಾಹಾ ಮಾಡಿಕೊಳ್ಳುತ್ತಾ ಮುನ್ನಡೆಯುವ ಜಾಗತಿಕ ಶಕ್ತಿಗಳ ಎದುರು ಝೆಕ್ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳಬೇಕೆಂದರೆ, ಮಾನವಕುಲಕ್ಕೆ ತನ್ನ ಕೊಡುಗೆಯನ್ನು ನೀಡಬೇಕೆಂದರೆ, ಝೆಕ್ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಸಂಪೂರ್ಣ ಸ್ವಾತಂತ್ರ್ಯದ ಮಣ್ಣಿನಲ್ಲಿ ಅರಳಬೇಕು. ಸತ್ಯದ ಅನ್ವೇಷಣೆ ಮತ್ತು ಆವಿಷ್ಕಾರ ಅಂತಹ ವಾತಾವರಣದಲ್ಲಿ ಮಾತ್ರ ನಡೆಯಲು ಸಾಧ್ಯ. ಝೆಕ್ ಜನ ಪ್ರಜಾಪ್ರಭುತ್ವ, ನಾಜಿ ದುರಾಡಳಿತ, ಸ್ಟಾಲಿನಿಸಂ, ಮತ್ತು ‘ಸಮಾಜವಾದ’ ಎಲ್ಲವನ್ನೂ ಅನುಭವಿಸಿ ಶ್ರೀಮಂತವಾದಂತ ಸಮುದಾಯ. ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ತಾವೇ ರೂಪಿಸಿಕೊಳ್ಳಲು ತಾಕತ್ತಿರುವ ಜನಾಂಗ’ ಎಂದು ವಾದಿಸಿದ ಕುಂದೇರಾ ಝೆಕ್ ರಾಷ್ಟ್ರೀಯ ಸಮುದಾಯಕ್ಕೆ ಇದೆಂತ ಅವಕಾಶ ಎನ್ನುವುದರ ಅರಿವಿದೆಯೇ ಎನ್ನುವುದು ನಿಜವಾದ ಪ್ರಶ್ನೆ ಎಂದು ತನ್ನ ಭಾಷಣವನ್ನು ಮುಗಿಸಿದ್ದ. ಕುಂದೇರಾ ಝೆಕ್ ಸಂಸ್ಕೃತಿಯಲ್ಲಿ ಹೇಗೆ ಗಾಢವಾಗಿ ನೆಲೆಯೂರಿದ್ದ, ಅದರ ಬಗ್ಗೆ ಅವನಿಗೆ ಎಂತಹ ಕಳಕಳಿ ಇತ್ತು ಎನ್ನುವುದನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ಭಾಷಣವಾಗಿತ್ತು ಅದು.

ರಷಿಯಾ ಆಕ್ರಮಣದ 1968 ರ ನಂತರ ಕುಂದೇರಾ ತನ್ನ ನೆಲದಲ್ಲಿ ತಾನೇ ಹೊರಗಿನವನಾದ. ಪ್ರಾಗ್ ಫಿಲ್ಮ್ ಅಕಾಡೆಮಿಯ ಅಧ್ಯಾಪಕ ಹುದ್ದೆಯಿಂದ ಅವನನ್ನು ಹೊರಗೆ ಹಾಕಲಾಯಿತು. ಲೈಬ್ರರಿಗಳಲ್ಲಿ, ಪುಸ್ತಕದಂಗಡಿಗಳಲ್ಲಿ ಅವನ ಪುಸ್ತಕಗಳನ್ನು ಇಡುವ ಹಾಗಿರಲಿಲ್ಲ. ಅವನಂತ ಸುಮಾರು ಮುನ್ನೂರು ಬರಹಗಾರರನ್ನು ಝೆಕ್ ಸಾಂಸ್ಕೃತಿಕ ಚರಿತ್ರೆಯಿಂದ ಕಿತ್ತೊಗೆಯುವ ಪ್ರಯತ್ನಗಳು ನಡೆದವು. ಏಳು ವರುಷಗಳ ನಂತರ, ಕೆಲವು ಪುಸ್ತಕಗಳನ್ನು ಮತ್ತು ಬಟ್ಟೆಗಳನ್ನು ಕಾರಿನ ಬೂಟಿನಲ್ಲಿ ಒಟ್ಟಿಕೊಂಡು ತನ್ನ ಹೆಂಡತಿ ವೆರಾಳ ಜೊತೆ 1975 ರಲ್ಲಿ ಝೆಕೆಸ್ಲೋವಾಕಿಯ ತೊರೆದು ಫ್ರಾನ್ಸ್ ಗೆ ವಲಸೆ ಹೋದ. ನಂತರದ ವರುಷಗಳಲ್ಲಿ ಮೊದಲ ಬಾರಿಗೆ ತಾನು ಸ್ವತಂತ್ರವಾಗಿ ಬರೆಯಬಹುದೆಂಬುದನ್ನು ಮನಗಂಡ. ‘ಬೊಹೆಮಿಯಾದಲ್ಲಿ ನನ್ನ ಪುಸ್ತಕಗಳು ಹೇಗೂ ಪ್ರಕಟವಾಗುವುದಿಲ್ಲ. ಸರ್ವಾಧಿಕಾರಿ ಶಕ್ತಿಗಳ ಕಣ್ಣಿಗೆ ಹೇಗೂ ಬೀಳುವುದಿಲ್ಲ’ ಎಂದು ಸಮಾಧಾನದ ಉಸಿರೆಳೆದ.

ಕುಂದೇರಾನಿಗೆ ಪೂರ್ವ ಯುರೋಪ್ ಎಂದರೆ ರಷಿಯಾವೇ. ಬೊಹೆಮಿಯಾ, ಪೋಲೆಂಡ್, ಹಂಗೇರಿ, ಆಸ್ಟ್ರಿಯ ಎಲ್ಲವೂ ಮಧ್ಯ ಯುರೋಪಿಗೆ ಸೇರಿದ್ದು. ಯುರೋಪಿನ ಅತಿ ಮಹತ್ತರ ಸಾಂಸ್ಕೃತಿಕ ಸ್ಥಿತ್ಯಂತರಗಳೆಲ್ಲವೂ ಘಟಿಸಿದ್ದು ಈ ಮಧ್ಯ ಯುರೋಪಿನಲ್ಲಿ ಮನೋವಿಜ್ಞಾನ, ರಾಚನಿಕವಾದ, ಕಾಫ್ಕಾನ ಕಾದಂಬರಿ ಪ್ರಜ್ಞೆ ಮುಂತಾದ ಆಧುನಿಕ ಜಗತ್ತಿನ ಬದುಕನ್ನು ರೂಪಿಸಿದ ಶಕ್ತಿಗಳು ಮೂಡಿದ್ದು ಈ ಭಾಗದಲ್ಲಿಯೇ. ಆ ಭಾಗದ ಹೆಚ್ಚಿನಂಶವನ್ನು ಜಾಗತಿಕ ಯುದ್ಧದ ನಂತರ ರಷಿಯಾ ವಶಪಡಿಸಿಕೊಂಡದ್ದು ಪಾಶ್ಚಿಮಾತ್ಯ ಸಂಸ್ಕೃತಿ ತನ್ನ ಗುರುತ್ವಕೇಂದ್ರವನ್ನೇ ಕಳೆದುಕೊಳ್ಳುವಂತೆ ಮಾಡಿತು. ಇಪ್ಪತ್ತನೆಯ ಶತಮಾನದ ಅತಿ ಮಹತ್ತರ ಘಟನೆಯೆಂದರೆ ಇದೇ. ಮಧ್ಯಯುರೋಪಿನ ಈ ಅಂತ್ಯ ಇಡೀ ಯುರೋಪಿನ ಅವಸಾನದ ಪ್ರಾರಂಭವಾಗಿ ಕಾಣುವ ಸಾಧ್ಯತೆಯನ್ನಂತೂ ತಳ್ಳಿ ಹಾಕುವ ಹಾಗಿಲ್ಲ’ ಎಂದು ಕುಂದೇರಾ ಕಳವಳಿಸುತ್ತಾನೆ.

ಎಂಭತ್ತನೆಯ ದಶಕದಲ್ಲಿ ಕುಂದೇರಾ ಬರೆದ ಕಾದಂಬರಿಗಳ ಬಗ್ಗೆ ಕೆಲವು ಝೆಕ್ ಚಿಂತಕರು ಪ್ರತಿಕ್ರಿಯಿಸುತ್ತಾ ಫ್ರಾನ್ಸಿಗೆ ಹೋದ ಮೇಲೆ ತನಗೂ ಕಮ್ಯೂನಿಸಮ್ಮಿಗೂ ಸಂಬಂಧವೇ ಇರಲಿಲ್ಲ, ತಾನೊಬ್ಬ ಯಾವಾಗಲೂ ಭಿನ್ನಮತೀಯ ಬರಹಗಾರನಾಗಿಯೇ ಇದ್ದೆ ಎಂದು ‘ಪೋಸು’ ಕೊಡುವ ಕುಂದೇರಾನನ್ನು ಕಟುವಾಗಿ ಟೀಕಿಸುತ್ತಾರೆ. ಫಿಲಿಪ್ ರಾತ್ ಎಂಬುವವನಿಗೆ 1980 ರಲ್ಲಿ ಇತ್ತ ಸಂದರ್ಶನದಲ್ಲಿ ಕುಂದೇರಾ ಹೇಳಿಕೊಳ್ಳುವುದು ಹೀಗೆ: “…ಆಮೇಲೆ ನನ್ನನ್ನು ವಿಶ್ವವಿದ್ಯಾಲಯದ ಕೆಲಸದಿಂದ ನನ್ನನ್ನು ತೆಗೆದುಹಾಕಲಾಯಿತು. ನಾನಾಗ ಕಾರ್ಮಿಕರ ಜೊತೆ ಬದುಕುತ್ತಿದ್ದೆ. ಪುಟ್ಟ ಪಟ್ಟಣಗಳ ಜಾಸ್ ಸಂಗಿತಗಾರರ ತಂಡದಲ್ಲಿ ಸೇರಿಕೊಂಡು ಟ್ರಂಪೆಟ್, ಪಿಯಾನೋ ನುಡಿಸುತ್ತಾ ಕಾಲ ಹಾಕುತ್ತಿದ್ದೆ. ಕವನ ಬರೆಯುತ್ತಿದ್ದೆ. ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಇಟ್ ವಾಸ್ ಆಲ್ ನಾನ್ ಸೆನ್ಸ್… ಹೇಳಿಕೊಳ್ಳಬಹುದಾದ ಕತೆ ಬರೆದಿದ್ದು ನನ್ನ ಮೂವತ್ತನೆಯ ವಯಸ್ಸಿನಲ್ಲಿ.

ರಷಿಯಾ ಆಕ್ರಮಣದ ಫಲವಾಗಿ ಅರವತ್ತರ ದಶಕದ ಝೆಕ್ ಉದಾರೀಕರಣ, ಪ್ರಗತಿಪರತೆ ಎಲ್ಲವೂ ಥಟ್ಟನೆ ಉಸಿರು ಕಟ್ಟಿದಂತೆ ನರಳಿದವು. 1989 ರ ತನಕವೂ ಅದು ಸುಧಾರಿಸಲಿಲ್ಲ. ಅದರ ಬಗ್ಗೆ ಮಾತನಾಡುತ್ತಾ ಎಂಬತ್ತರ ದಶಕದಲ್ಲಿ ಕುಂದೇರಾ ವಿವಾದವೊಂದನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾದ. ನ್ಯೂಯಾರ್ಕ್ ರೆವ್ಯೊ ಆಫ್ ಬುಕ್ಸ್ ನ ಫಿಲಿಪ್ ರಾತ್ ಗೆ ಇತ್ತ ಸಂದರ್ಶನದಲ್ಲಿ ರಷಿಯನ್ನರನ್ನು ನೇರವಾಗಿ ಅ-ಯುರೋಪಿಯನ್ನರು, ಅನ್ಯರು, ಮಧ್ಯ ಯುರೋಪಿನ ಸಂಸ್ಕೃತಿಯನ್ನು ನಾಶ ಮಾಡಿದವರು, ಇಡೀ ಯುರೋಪಿನ ಸಂಸ್ಕೃತಿಯನ್ನು ಆಳಿಸಿ ಹಾಕುವ ಉದ್ದೇಶವುಳ್ಳವರು, ಅವರು ನಮ್ಮಲ್ಲಿ ಒಬ್ಬರಲ್ಲ… ಇತ್ಯಾದಿಯಾಗಿ ಜರೆದ. “ವೈವಿಧ್ಯತೆಯನ್ನು ಆದರಿಸುವ ಮಧ್ಯ ಯುರೋಪೀಯ ಸಂಸ್ಕೃತಿಗೆ ಕೇಂದ್ರೀಕರಿಸುವ, ಏಕರೂಪಕ್ಕೆ ಒಳಪಡಿಸುವ ರಷಿಯಾಗಿಂತ ಹೆಚ್ಚಾದ ಮಾರಕ ಶಕ್ತಿಯಿರಲು ಸಾಧ್ಯವಿಲ್ಲ. ರಷಿಯಾಗೆ ಇರುವುದು ಒಂದೇ ಉದ್ದೇಶ: ಜಗತ್ತಿನ ರಾಷ್ಟ್ರಗಳೆಲ್ಲವನ್ನೂ ರಷಿಯಾಕರಿಸಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವುದು…” ಅಷ್ಟೇ ಅಲ್ಲ, ರಷಿಯಾವನ್ನು ಹೀಗೆಳೆಯುವ ತನ್ನ ಮಾತಿನಲ್ಲಿ ಕುಂದೇರಾ ದಾಸ್ತೋವೆಸ್ಕಿಯನ್ನೂ ಸಹ “ಭಾವನಾತಿರೇಕದ ಬರಹಗಾರ’ ಎಂದು ಹೀಗೆಳೆದ. ಪ್ರತಿಕ್ರಿಯೆಯಾಗಿ ವಾದ ವಿವಾದಗಳು ಬಿರುಸಾಗಿ ನಡೆದವು. ಝೆಕ್ ಸಾಹಿತಿ ಮಿಲನ್ ಸಿಮೆಕ್ಕಾ ಮಧ್ಯ ಯುರೋಪಿನ ಸಂಸ್ಕೃತಿಯನ್ನು ಸ್ಟಾಲಿನ್ ನಾಶ ಮಾಡುವ ಮುಂಚೆಯೇ ಜರ್ಮನಿಯ ಹಿಟ್ಲರ್ ನಾಶ ಮಾಡಿದ್ದ ಎಂದು ಪ್ರತಿಪಾದಿಸಿದ.

ಫ್ರಾನ್ಸಿಗೆ ವಲಸೆ ಹೊದ ಕುಂದೇರಾನನ್ನು ತಾಯಿನೆಲ ಕಾಡಿದ್ದುಂಟೇ? ಕಾಡುವುದು ಎಂದರೇನು, ಯಾರಿಗೆ ಗೊತ್ತು? ಆದರೆ ತಾನೆಲ್ಲಿಗೋ ಬಂದಿದ್ದೇನೆ, ಮರಳಿ ಹೋಗಬೇಕೆನ್ನುವ ತಹತಹವೆಂದೂ ಅವನಿಗೆ ಬಂದಿಲ್ಲವಂತೆ. ಬರಹಗಾರನಾದವನಿಗೆ ಹಲವು ದೇಶಗಳಲ್ಲಿ ಬದುಕುವ ಅವಕಾಶ ಒಂದು ವರವಿದ್ದಂತೆ. ಜಗತ್ತನ್ನು ಹಲವಾರು ಮಗ್ಗಲುಗಳಿಂದ ನೋಡಿದರೇನೇ ಬದುಕಿನ ಸಂಕೀರ್ಣತೆ ಅರ್ಥವಾಗಲು ಸಾಧ್ಯ ಎನ್ನುವ ಕುಂದೇರಾ “ಫ್ರಾನ್ಸ್ ನನ್ನ ಬಿಡದಿ ಮನೆಯಲ್ಲ, ನಿಜವಾದ ಮನೆ, ಕೊನೆಯ ಮನೆ… ಪ್ರಾಗ್ ನಲ್ಲಿ ಈಗ ಪರಕೀಯ ಭಾವನೆ ಕಾಡುವಷ್ಟು ಪ್ಯಾರಿಸ್ ನಲ್ಲಿ ಕಾಡುವುದಿಲ್ಲ,” ಎನ್ನುವಷ್ಟು ಮಟ್ಟಿಗೆ ಫ್ರೆಂಚ್ ಸಂಸ್ಕೃತಿಯಲ್ಲಿ ಬೆರೆತು ಹೋಗಿದ್ದಾನೆ. ಅದರ ಬಗ್ಗೆಯೂ ಝೆಕ್ ಬರಹಗಾರರ ಕಟು ವಿಮರ್ಶೆಗೆ ಕುಂದೇರಾ ತುತ್ತಾಗಿದ್ದಾನೆ. ಸಾಹಿತ್ಯಿಕ ಕಾರಣಗಳಿಗಲ್ಲದಿದ್ದರೂ ಸಹ, ಆಕ್ರಮಣದ ನಂತರ ಹಲವಾರು ಬರಹಗಾರರನ್ನು ಸರ್ವಾಧಿಕಾರ ಶಕ್ತಿಗಳು ಬೇಟೆಯಾಡಿದವು, ಅವರು ಕಿಟಕಿ ತೊಳೆಯುತ್ತಲೋ, ಒಲೆ ಊದುತ್ತಲೋ ಬದುಕನ್ನು ನಿಭಾಯಿಸಬೇಕಾದಾಗ ಕುಂದೇರಾ ಪಶ್ಚಿಮದಲ್ಲಿ ಪ್ರಸಿದ್ಧಿಯಲ್ಲಿ ತೇಲಾಡುತ್ತಿದ್ದನಲ್ಲ!

ಕುಂದೇರಿಯ ‘ಜೋಕ್’ ‘ಲಾಫ್ಟರ್’ ಮತ್ತು ‘ಕಿಚ್’

ಕುಂದೇರಾ ಪ್ರಪಂಚಕ್ಕೆ ಝೆಕ್ ನಾಡನ್ನು ಪರಿಚಯಿಸಿದ ಮೊದಲಿಗನೇನಲ್ಲ. ಪ್ರಖ್ಯಾತ ಚಿತ್ರ ನಿರ್ದೇಶಕ ಮೈಲೋಸ್ ಫಾರ್ಮನ್ (One Flew Over the Cuckoo’s Nest ನ ನಿರ್ದೇಶಕ) ಪ್ರಾಗ್ ನ್ನು ಪ್ರಪಂಚಕ್ಕೆ ಆಗಲೇ ಪರಿಚಯಿಸಿದ್ದ. ನಿರಾಶಾವಾದ ತುಂಬಿ ತುಳುಕುವ ಹಾಸ್ಯ, ಚರಿತ್ರೆಯನ್ನು ಕೆಳಗಿಂದ, ಸಾಮಾನ್ಯ ಮನುಷ್ಯನ ನೆಲೆಯಿಂದ ನೋಡುವ ತವಕ, ಹೊಡೆದೆಬ್ಬಿಸುವ ಸರಳತೆ ಇವು ಅವನ ಪಾತ್ರಗಳ ಮುಖ್ಯ ಗುಣಗಳು. ಅವನ ಚಿತ್ರವೊಂದರಲ್ಲಿ ಝೆಕ್ ನಿಂದ ವಲಸೆ ಹೋಗಲು ಅನುಮತಿ ಕೇಳಿ ಪಾತ್ರವೊಂದು ಸಂಬಂಧಪಟ್ಟ ಆಫೀಸಿಗೆ ಹೋಗುತ್ತದೆ. “ಎಲ್ಲಿಗೆ ಹೋಗಬೇಕೆಂದು ನಿನ್ನ ಇಚ್ಛೆ?” ಎಂದು ಅಧಿಕಾರಿ ಕೇಳುತ್ತಾನೆ. “ಎಲ್ಲಿಗಾದರೂ” ಎಂದು ಉತ್ತರವಿತ್ತವನ ಮುಖ ನೋಡಿದ ಅಧಿಕಾರಿ ಅವನ ಕಡೆಗೆ ಗ್ಲೋಬ್ ಒಂದನ್ನು ತಳ್ಳಿ “ನೋಡು, ಎಲ್ಲಿಗೆ ಎಂದು ಆರಿಸಿಕೋ,” ಎನ್ನುತ್ತಾನೆ. ಇವನು ಅದನ್ನು ಒಮ್ಮೆ ನಿಧಾನವಾಗಿ ತಿರುಗಿಸಿ, ದಿಟ್ಟಿಸಿ ನೊಡಿ, “ಇದು ಬೇಡ, ಬೇರೆ ಇನ್ನೊಂದು ಇದ್ದರೆ ತೋರಿಸಿ,” ಎನ್ನುತ್ತಾನೆ.

ಫ್ರೆಂಚ್ ಸಾಹಿತ್ಯ ಲೋಕದಲ್ಲಿ ಅತ್ಯಂತ ಮಹತ್ವದ ಕಾದಂಬರಿಕಾರರಾದ ದಿದೆರೋ ಮತ್ತು ಸ್ಟರ್ನ್ ರಿಂದ ತುಂಬ ಪ್ರಭಾವಿತನಾದ ಕುಂದೇರಾ ಕಾದಂಬರಿಯೆಂಬ ಪ್ರಕಾರ ತನ್ನ ಸಾಧ್ಯತೆಗಳೆಲ್ಲವನ್ನೂ ಶೋಧಿಸಿ ನಿರ್ವಾತ ಸ್ಥಿತಿಯನ್ನು ತಲುಪಿದೆ ಎನ್ನುವುದನ್ನು ಸುತಾರಾಂ ಒಪ್ಪುವುದಿಲ್ಲ. ಕಾದಂಬರಿಯೆನ್ನುವುದು ಅಗಾಧ ಪ್ರಮಾಣದ ಸ್ವಾತಂತ್ರ್ಯವನ್ನು ತನ್ನಲ್ಲಿ ಹುದುಗಿಸಿಕೊಂಡಿರುವಂತಹ ಪ್ರಕಾರ. ಆ ಮಹಾನ್ ಕಾದಂಬರಿಕಾರರು ಸೂಚಿಸಿದ ಹಲವಾರು ಸಾಧ್ಯತೆಗಳನ್ನು ನಂತರದವರು ಅನ್ವೇಷಿಸಲೇ ಹೋಗಿಲ್ಲ ಎನ್ನುವುದು ಅವನ ಅಳಲು. ಪ್ರಪಂಚವನ್ನು ಗಂಭೀರವಾಗಿ ಪರಿಗಣಿಸುವುದು ಅಂದರೇನು? ನಾವು ಏನನ್ನು ನಂಬಬೇಕೆಂದು ಪ್ರಪಂಚ ನಿರೀಕ್ಷಿಸುತ್ತದೆಯೋ, ಅದನ್ನು ನಂಬುವುದು. ‘ಡಾನ್ ಕ್ವಿಕ್ಸಾಟ್’ ನಿಂದ ‘ಯೂಲಿಸಿಸ್’ ತನಕವೂ ಕಾದಂಬರಿ ಆ ನಂಬುವ ಪ್ರಕ್ರಿಯೆಯನ್ನೇ ಪ್ರಶ್ನಿಸುತ್ತಾ ಬಂದಿದೆ. ಕುಂದೇರಾನ ಪ್ರಕಾರ ‘ರಾಜಕೀಯ ದಮನ ಸಾಹಿತಿಯನ್ನು ನೀತಿವಾದದ ಕಡೆಗೆ ವಾಲಿಸುತ್ತದೆ. ಆಗ ಸಾಹಿತಿ ಸತ್ಯದ ಅನ್ವೇಷಕನಾಗುವುದಿಲ್ಲ, ಬೋಧಕನಾಗುತ್ತಾನೆ. ಅದರಲ್ಲಿ ತಪ್ಪೇನು ಎಂದು ಮಾನವತಾವಾದಿಗಳು ಕೇಳಬಹುದು. ಸಾಹಿತ್ಯದ ದೃಷ್ಟಿಯಿಂದ ಅದು ಭಯಂಕರವಾದ ನಷ್ಟ. ಕಾದಂಬರಿಕಾರ ಬದುಕನ್ನು ಪ್ರಶ್ನೆಯಾಗಿ ನೋಡುವುದನ್ನು ತನ್ನ ಓದುಗನೊಂದಿಗೆ ಹಂಚಿಕೊಳ್ಳುತ್ತಿರುತ್ತಾನೆ. ಸಿದ್ಧಾಂತಗಳು ಉತ್ತರ ನೀಡುವ ಪ್ರಯತ್ನ ಮಾಡುತ್ತಿರುತ್ತವೆ. ಕಾದಂಬರಿ ಸಿದ್ಧಾಂತವಲ್ಲ’ ಎಂದು ಕುಂದೇರಾ ವಾದಿಸುತ್ತಾನೆ.

(ಪತ್ನಿಯೊಂದಿಗೆ ಕುಂದೇರಾ)

ನಿರಾಶಾವಾದ ತುಂಬಿ ತುಳುಕುವ ಹಾಸ್ಯ, ಚರಿತ್ರೆಯನ್ನು ಕೆಳಗಿಂದ, ಸಾಮಾನ್ಯ ಮನುಷ್ಯನ ನೆಲೆಯಿಂದ ನೋಡುವ ತವಕ, ಹೊಡೆದೆಬ್ಬಿಸುವ ಸರಳತೆ ಇವು ಅವನ ಪಾತ್ರಗಳ ಮುಖ್ಯ ಗುಣಗಳು. ಅವನ ಚಿತ್ರವೊಂದರಲ್ಲಿ ಝೆಕ್ ನಿಂದ ವಲಸೆ ಹೋಗಲು ಅನುಮತಿ ಕೇಳಿ ಪಾತ್ರವೊಂದು ಸಂಬಂಧಪಟ್ಟ ಆಫೀಸಿಗೆ ಹೋಗುತ್ತದೆ. “ಎಲ್ಲಿಗೆ ಹೋಗಬೇಕೆಂದು ನಿನ್ನ ಇಚ್ಛೆ?” ಎಂದು ಅಧಿಕಾರಿ ಕೇಳುತ್ತಾನೆ. “ಎಲ್ಲಿಗಾದರೂ” ಎಂದು ಉತ್ತರವಿತ್ತವನ ಮುಖ ನೋಡಿದ ಅಧಿಕಾರಿ ಅವನ ಕಡೆಗೆ ಗ್ಲೋಬ್ ಒಂದನ್ನು ತಳ್ಳಿ “ನೋಡು, ಎಲ್ಲಿಗೆ ಎಂದು ಆರಿಸಿಕೋ,” ಎನ್ನುತ್ತಾನೆ. ಇವನು ಅದನ್ನು ಒಮ್ಮೆ ನಿಧಾನವಾಗಿ ತಿರುಗಿಸಿ, ದಿಟ್ಟಿಸಿ ನೊಡಿ, “ಇದು ಬೇಡ, ಬೇರೆ ಇನ್ನೊಂದು ಇದ್ದರೆ ತೋರಿಸಿ,” ಎನ್ನುತ್ತಾನೆ.

ಕುಂದೇರಾನ ಪ್ರಬುದ್ಧ ಕೃತಿಗಳಲ್ಲಿ ಹಲವಾರು ಕಥೆಗಳ ಎಳೆಗಳಿರುತ್ತವೆ. ಅರ್ಥೈಸುವ ಅನಂತ ಸಾಧ್ಯತೆಗಳನ್ನು ಅವು ಹುದುಗಿಸಿಕೊಂಡಿರುತ್ತವೆ. ಸಾಂಕೇತಿಕ ಅರ್ಥಸಾಪೇಕ್ಷತೆ ಆಧುನಿಕ ಕಾದಂಬರಿಯ ಒಂದು ಮಹತ್ವ ಗುಣ. ಕುಂದೇರಾನ ಪ್ರಬುದ್ಧ ಕೃತಿಗಳಲ್ಲಿ ಇಷ್ಟೇ, ಇದೇ, ಎಂದು ಮಿತಿಗೊಳಿಸಲಾಗದ ಸಂಕೇತಗಳ ಸಮೂಹವಿದೆ. ಅವು ವಿಚಿತ್ರ ಜೋಡಣೆಯಲ್ಲಿ ವಿಶಿಷ್ಟ ಅರ್ಥಗಳನ್ನು ಹೊಳೆಸುತ್ತಾ ಹೋಗುತ್ತವೆ. ಸಂಕೇತಗಳ ಜೊತೆ ಚೆಲ್ಲಾಟವಾಡುತ್ತಿರುವಂತೆ ಕಂಡು ಬರುವ ಕುಂದೇರಾನಿಗೆ ಆಸಕ್ತಿಯಿರುವುದು ಅನಂತ ಸಾಧ್ಯತೆಗಳನ್ನು ಒಳಗೊಂಡ, ಆದರೆ ಪುನರಾವರ್ತಿಸಲಾಗದ ಮನುಷ್ಯ ಬದುಕಿನಲ್ಲಿ.

‘ಲಾಫಬಲ್ ಲವ್ಸ್’ ತನ್ನ ಅಚ್ಚುಮೆಚ್ಚಿನ ಕೃತಿ, ತನ್ನ ಬದುಕಿನ ಅತ್ಯಂತ ಸಂತೋಷದ ಅರವತ್ತರ ದಶಕದಲ್ಲಿ ತಾನದನ್ನು ಬರೆದಿದ್ದು” ಎಂದು ಕುಂದೇರಾ ಸಂಭ್ರಮಿಸುತ್ತಾನೆ. ಈ ಕೃತಿಯ ಹೆಚ್ಚಿನಂಶದ ಕತೆಗಳು ಮನುಷ್ಯನ ಗಾಢ ಸಂಬಂಧಗಳ ಒಳಹೊಕ್ಕು ನೋಡಲು ಪ್ರಯತ್ನಿಸುತ್ತವೆ. ಅದರಲ್ಲೂ ಲೈಂಗಿಕ ಸಂಬಂಧಗಳ ನಾಟಕೀಯತೆಯನ್ನು ಯಾವ ಎಗ್ಗೂ ಇಲ್ಲದೇ ದಿಟ್ಟಿಸಿ ನೋಡುವ ಪ್ರಯತ್ನ ಅಲ್ಲಲ್ಲಿ ದಿಕ್ಕು ತಪ್ಪಿಸುವಂತೆ ಕಾಣುವುದರ ಜೊತೆಗೆ ಅಚ್ಚರಿಯನ್ನೂ ಹುಟ್ಟಿಸುತ್ತದೆ. ತನ್ನ ಪಾತ್ರಗಳನ್ನು ಅವರ ಲೈಂಗಿಕ ಬದುಕಿನ ಪ್ರಿಸಮ್ ಮೂಲಕ ನೋಡುವುದು ಮನುಷ್ಯ ಸ್ವಭಾವದ ಅನೂಹ್ಯ ಮಗ್ಗುಲುಗಳನ್ನು ಅತ್ಮೀಯವಾಗಿ ಅರಿಯುವ ಪ್ರಾಮಾಣಿಕ ಪ್ರಯತ್ನ ಎಂದು ಕುಂದೇರಾ ನಂಬಿದ್ದ. ದಾನ್ ಯುವಾನ್ ನ ಮಿತ್ ಸಹ ಬೇರೊಂದು ರೂಪ ಧರಿಸಿ ಅವನ ಕತೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಆಧುನಿಕ ದಾನ್ ಯುವಾನ್ ಹೆಣ್ಣುಗಳನ್ನು ಗೆಲ್ಲುವುದರಲ್ಲಿ ಆಸಕ್ತಿ ಇರುವವನಲ್ಲ. ಬದಲಿಗೆ ಅವರನ್ನು ಟ್ರೋಫಿಗಳಂತೆ ಗುಡ್ಡೆ ಹಾಕಿಕೊಳ್ಳುವುದರಲ್ಲಿ ಮಗ್ನನಾಗಿರುವವನು. ಯಾಕೆಂದರೆ ಆಧುನಿಕ ಬದುಕಿನಲ್ಲಿ ಗುಡ್ಡೆ ಹಾಕಿಕೊಳ್ಳುವುದೇ ಒಂದು ಮೌಲ್ಯ! ಕುಂದೇರಾನ ಹೆಚ್ಚಿನ ಕಾದಂಬರಿಗಳು ಮುಗಿಯುವುದೇ ಸಂಭೋಗದಲ್ಲಿ. ಹಿಂದಿನಂತೆ ಲೈಂಗಿಕ ನಿಷೇಧವಿಲ್ಲದ ಈ ದಿನಗಳಲ್ಲಿ ಅದರ ಬಿಡುಬೀಸಿನ ಸಂಭ್ರಮವಾಗಲಿ, ತಪ್ಪೊಪ್ಪಿಗೆ ಮಾದರಿಯ ವರ್ಣನೆಯಾಗಲಿ ಬೋರು ಹೊಡೆಸುತ್ತದೆ ಅನ್ನುತ್ತಾನೆ. ಅವನಿಗೆ ಆಸಕ್ತಿಯಿರುವುದು ಸಂಭೋಗದ ಗೇಯ ಅಭಿವ್ಯಕ್ತಿಯಲ್ಲಿ ಅಲ್ಲ. ಅದರ ದಾರ್ಶನಿಕ ಅರ್ಥಲೋಕದಲ್ಲಿ. ಪಾತ್ರಗಳ ನಡುವಿನ ಲೈಂಗಿಕ ಆತ್ಮೀಯತೆ ವಿಚಿತ್ರವಾದ ಬೆಳಕೊಂದನ್ನು ಸೃಷ್ಟಿಸಿ, ಆ ಬೆಳಕಲ್ಲಿ ಕಥೆಯ ಮತ್ತು ಪಾತ್ರಗಳ ಸಾರವೆಲ್ಲವೂ ಝಳಝಳನೆ ಹೊಳೆಯುವ ಸಾಧ್ಯತೆಯಿರುವುದರಿಂದಲೇ ತಾನು ಅದಕ್ಕೆ ಅಷ್ಟು ಮಹತ್ವ ಕೊಡುತ್ತೇನೆ ಎಂದು ಹೇಳಿಕೊಳ್ಳುತ್ತಾನೆ. ಅರ್ಥವೆಂಬ ಲೋಕದ ಸೀಮೆ ಒಂದು ಅತ್ಯಂತ ಸೂಕ್ಷ್ಮ ಗೆರೆಯಾಗಿರಬಲ್ಲುದು. ಯಾರು ಬೇಕಾದರೂ ಯಾವ ಗಳಿಗೆಯಲ್ಲಿ ಬೇಕಾದರೂ ಅದರಿಂದಾಚೆ ಜೋಲಿ ಹೊಡೆಯುವ ಸಾಧ್ಯತೆಯಿರುತ್ತದೆ. ಆ ಸೂಕ್ಷ್ಮ ಗೆರೆ ಮನುಷ್ಯನ ಆಳಕ್ಕೆ ಸಂಬಂಧಿಸಿದ ಲೈಂಗಿಕ ಲೋಕದಲ್ಲಿಯೂ ಇರುತ್ತದೆ. ಅದಕ್ಕೇ ಅದು ಮುಖ್ಯ. ವಿಪರ್ಯಾಸಗಳ, ವೈರುಧ್ಯಗಳ ಜೊತೆ ಚೆಲ್ಲಾಟವಾಡುತ್ತಾ ಸಾಗುವ ಲವಲವಿಕೆಯ ಸಂಭಾಷಣೆ ಕುಂದೇರಾನ ಕಾದಂಬರಿಗಳ ಮುಖ್ಯ ಅಂಶ. ಸಂಗೀತದ ಬಂಧವನ್ನು ತಾನು ಸೃಷ್ಟಿಸುವ ಸಾಹಿತ್ಯದ ಮೇಲೆ ಆರೋಪಿಸುವ ಕುಂದೇರಾ ಅಂತಹ ಬಂಧದ ಮೂಲಕವೇ ಅನೇಕ ಅರ್ಥಗಳನ್ನು ಹೊಳೆಯಿಸುತ್ತಾನೆ.

***

‘ಜೋಕ್’ ಎನ್ನುವುದು ಆತನ ಕೃತಿಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಬರುವ ಒಂದು ಪ್ರಮುಖ ಪರಿಕಲ್ಪನೆ. ಹುಡುಗಾಟವಾಗಿ ಶುರುವಾದದ್ದು ದೊಡ್ಡಾಟವಾಗಿ ಶುರು ಮಾಡಿದವರನ್ನು, ಅದಕ್ಕೆ ತುತ್ತಾದವರನ್ನೂ ದುರಂತವೆನ್ನಬಹುದಾದ ಪರಿಣಾಮಗಳತ್ತ ಕೊಂಡೊಯ್ಯುತ್ತದೆ. ಶುರು ಮಾಡಿದವನ ಅಹಂಕಾರವನ್ನು ಟುಸ್ಸೆನ್ನಿಸಿ ಅದೆಂತಹ ಭ್ರಮೆ ಎಂದು ಸಾಬೀತುಪಡಿಸುತ್ತದೆ. ದ ಹಿಚ್ಚಿಕಿಂಗ್ ಗೇಮ್ (The Hitchhiking Game) ಕತೆಯನ್ನೇ ತೆಗೆದುಕೊಳ್ಳಿ. ಒಬ್ಬ ಯುವಕ ಯುವತಿ ಬೇಸಿಗೆಯ ರಜೆಯನ್ನು ಆರಾಮವಾಗಿ ಕಳೆಯಲು ಒಟ್ಟಿಗೆ ಕಾರಿನಲ್ಲಿ ಹೊರಟಿದ್ದಾರೆ. ಹುಡುಗಾಟಕ್ಕಾಗಿ ಪರಸ್ಪರ ಅಪರಿಚಿತರಂತೆ ನಟಿಸಲು ನಿರ್ಧರಿಸುತ್ತಾರೆ. ಆಗ ತಾನೇ ಭೇಟಿಯಾದವರಂತೆ, ಕಾರನ್ನು ಓಡಿಸುತ್ತಿರುವ ಯುವಕ ಲಂಪಟನಂತೆ, ಕಾರನ್ನು ಹಿಚ್ ಹೈಕ್ ಮಾಡಿರುವ ಯುವತಿ ಲೈಂಗಿಕ ಆಹ್ವಾನವನ್ನು ನೀಡುತ್ತಿರುವಂತೆ, ನಟಿಸಲು ನಿರ್ಧರಿಸುತ್ತಾರೆ. ಅದು ಹುಡುಗಾಟವಾಗಿ ಉಳಿಯದೇ ಅವರ ಸಂಬಂಧವನ್ನೇ ಹುಳಿಯಾಗಿಸಿ ನಾಶ ಮಾಡುತ್ತದೆ. ಎಡ್ವರ್ಡ್ ಅಂಡ್ ಗಾಡ್ (Edward and God) ಕತೆಯಲ್ಲಿ ಬರುವ ಯುವಕ ಅಧ್ಯಾಪಕ ನಾಸ್ತಿಕ ಸಮಾಜದಲ್ಲಿ ಕೆಲಸ ಮಾಡುತ್ತಿದ್ದವನು. ದೈವಭಕ್ತಿಯುಳ್ಳ ಹುಡುಗಿಯೊಬ್ಬಳ ಮನ ಒಲಿಸಲು ತಾನೂ ದೇವರಲ್ಲಿ ಶೃದ್ಧೆ ಇರುವನಂತೆ ನಟಿಸಲಾರಂಭಿಸುತ್ತಾನೆ. ಅದು ಸ್ಕೂಲನ್ನು ನಡೆಸುವ ಆಡಳಿತ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗುತ್ತದೆ. ಮಾರ್ಕ್ಸಿಸ್ಟ್ ನಾಸ್ತಿಕತೆಯ ಹಾದಿಗೆ ಅವನನ್ನು ತರಲು ಗಂಭೀರ ತರದ ಪ್ರಯತ್ನಗಳು ಪ್ರಾರಂಭವಾಗುತ್ತವೆ. ಯುವಕ ಆಡಲಾರ, ಅನುಭವಿಸಲಾರ. ತನಗೇನೂ ದೇವರಲ್ಲಿ ನಂಬಿಕೆಯಿಲ್ಲ, ಅವಳನ್ನು ಹೇಗಾದರೂ ಒಲಿಸಿಕೊಳ್ಳಲು ಈ ನಾಟಕವೆಲ್ಲಾ ಎಂದು ಹೇಳಿದರೆ ಪರಿಣಾಮ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಹೆಚ್ಚು. ಮೂರ್ಖರಿಗೆ ಮನದಟ್ಟು ಮಾಡಹೊರಡುವ ನೀನೇ ದೊಡ್ಡ ಮೂರ್ಖ ಎಂದು ಕುಂದೇರಾ ಒಂದು ಪಾತ್ರದ ಕೈಲಿ ಹೇಳಿಸುತ್ತಾನೆ.

ಇನ್ನೊಂದು ಪಾತ್ರ, “ಅಕ್ಷರಶಃ ನಂಬುವ ಪ್ರಕ್ರಿಯೆ, ಆ ನಂಬಿಕೆಯನ್ನೇ ಒಂದು ಮಹಾ ಅಭಾಸವನ್ನಾಗಿ ಪರಿವರ್ತಿಸುತ್ತೆ. ರಾಜಕೀಯ ದರ್ಶನಗಳಲ್ಲಿ ನಂಬಿಕೆಯಿರುವವರಿಗೆ ಉದ್ದೇಶ ಮುಖ್ಯವೇ ಹೊರತು ವಾದವಲ್ಲ. ರಾಜಕೀಯ ನಂಬಿಕೆಯನ್ನು ಅಕ್ಷರಶಃ ಅರ್ಥೈಸಿಕೊಳ್ಳುವ ಮೂರ್ಖರು ತಮ್ಮ ನಂಬಿಕೆಯ ವಿರುದ್ಧವೇ ತಿರುಗಿ ಬೀಳುವ ಪಾಷಂಡಿಗಳಾಗುತ್ತಾರೆ,” ಎನ್ನುತ್ತದೆ. ಪರಸ್ಪರ ಬಳಸಿಕೊಳ್ಳುವ ಈ ಲೈಂಗಿಕ ಹುಡುಗಾಟದಲ್ಲಿ ಸಿಕ್ಕಿ ಬೀಳುವ ಈ ಪಾತ್ರಗಳು ಹೊರಟಿದ್ದೆಲ್ಲಿಂದ, ಸೇರಿದ್ದೆಲ್ಲಿಗೆ ಎಂಬ ಗೊಂದಲಕ್ಕೆ ದುರಂತದ ಛಾಯೆಯಿರುತ್ತದೆ. ಅದು ಎಷ್ಟರ ಮಟ್ಟಿಗೆ ಹುಡುಗಾಟ ಎಂಬ ಗೊಂದಲ ಪಾತ್ರಗಳಿಗಷ್ಟೇ ಅಲ್ಲ, ಅದು ಓದುಗರಿಗೂ ದಾಟಿಕೊಳ್ಳುತ್ತದೆ. ಚ್ವಾತಿಕ್ ಎಂಬ ವಿಮರ್ಶಕ ಗುರುತಿಸುವಂತೆ ಇದು ಭಾಷೆಯದೇ ಕ್ರೈಸಿಸ್. ಒಂದು ಭಾಷಿಕ ಸಂದೇಶ ಅಥವಾ ಸಂಕೇತ ವಾಸ್ತವದಾಚೆಗೆ ನುಲುಚಿಕೊಂಡು ಹೋದಾಗ ತನ್ನ ಅರ್ಥಕ್ಕೆ ತಾನೇ ತಿರುಗಿ ಬಿದ್ದಂತಹ ವಿಪರ್ಯಾಸ. ಆಗ ಸತ್ಯ/ಅಸತ್ಯ, ತೋರಿಕೆ/ನೈಜತೆ, ಸಿನಿಕತೆ/ಪ್ರಾಮಾಣಿಕತೆ ಇತ್ಯಾದಿಗಳು ಕಲಸುಮೆಲೋಗರಗಳಾಗಿಬಿಡುತ್ತವೆ. ಕುಂದೇರಾನ ‘ಜೋಕ್’ ಕಾದಂಬರಿಯೂ ಸೇರಿದಂತೆ ಎಲ್ಲ ಪ್ರಬುದ್ಧ ಕಾದಂಬರಿಗಳಲ್ಲಿ ಬರುವ ಒಂದು ಮಹತ್ವದ ಥೀಮ್ ಇದು.

ಕುಂದೇರಾನ ಪ್ರಬುದ್ಧ ಕೃತಿಗಳಲ್ಲಿ ಹಲವಾರು ಕಥೆಗಳ ಎಳೆಗಳಿರುತ್ತವೆ. ಅರ್ಥೈಸುವ ಅನಂತ ಸಾಧ್ಯತೆಗಳನ್ನು ಅವು ಹುದುಗಿಸಿಕೊಂಡಿರುತ್ತವೆ. ಸಾಂಕೇತಿಕ ಅರ್ಥಸಾಪೇಕ್ಷತೆ ಆಧುನಿಕ ಕಾದಂಬರಿಯ ಒಂದು ಮಹತ್ವ ಗುಣ. ಕುಂದೇರಾನ ಪ್ರಬುದ್ಧ ಕೃತಿಗಳಲ್ಲಿ ಇಷ್ಟೇ, ಇದೇ, ಎಂದು ಮಿತಿಗೊಳಿಸಲಾಗದ ಸಂಕೇತಗಳ ಸಮೂಹವಿದೆ. ಅವು ವಿಚಿತ್ರ ಜೋಡಣೆಯಲ್ಲಿ ವಿಶಿಷ್ಟ ಅರ್ಥಗಳನ್ನು ಹೊಳೆಸುತ್ತಾ ಹೋಗುತ್ತವೆ. ಸಂಕೇತಗಳ ಜೊತೆ ಚೆಲ್ಲಾಟವಾಡುತ್ತಿರುವಂತೆ ಕಂಡು ಬರುವ ಕುಂದೇರಾನಿಗೆ ಆಸಕ್ತಿಯಿರುವುದು ಅನಂತ ಸಾಧ್ಯತೆಗಳನ್ನು ಒಳಗೊಂಡ, ಆದರೆ ಪುನರಾವರ್ತಿಸಲಾಗದ ಮನುಷ್ಯ ಬದುಕಿನಲ್ಲಿ.

ಮನುಷ್ಯನ ಕರ್ತತ್ವಶೀಲತೆ (agency) ಸೃಷ್ಟಿಶೀಲ-ವಿರೋಧಿ (counter-productive) ಯಾಗಿ ತಿರುಗಿಕೊಳ್ಳುವುದೇ ಚರಿತ್ರೆಯ ಒಂದು ದೊಡ್ಡ ವಿಪರ್ಯಾಸ. ಅದನ್ನು ಕುಂದೇರಾ ಮಹಾನ್ ಜೋಕ್ ಎಂದು ಕರೆಯುತ್ತಾನೆ. ಅಥವಾ ಚರಿತ್ರೆ ಇರುವುದೇ ಹಾಗೆ. ಅದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಜೋಕ್ ಎನ್ನುವ ಪರಿಕಲ್ಪನೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಹುದು. ಧೃತಿಗೆಡಿಸುವ ಶೂನ್ಯದಿಂದ, ಹೊರಲಾರದ ಗಾಳಿಭಾರದಿಂದ ತಪ್ಪಿಸಿಕೊಳ್ಳಲು ಆ ರೂಪಕದ ಅಗತ್ಯವಿದೆ. ಕುಂದೇರಾನ ಕಾದಂಬರಿಯ ಪಾತ್ರಗಳು ಚರಿತ್ರೆಯಿಂದ ಹುಟ್ಟಿದವೇನೋ ಸರಿ. ಅಷ್ಟೇ ಅಲ್ಲ, ಚರಿತ್ರೆಯನ್ನು ರೂಪಿಸಿದವೂ ಹೌದು. ಆದರೆ ಅದು ಆಗಿದ್ದು, ಇವರು ಮಾಡಿದ್ದರಿಂದ ಅಲ್ಲ, ಮಾಡಬೇಕೆಂದು ಹೊರಟಿದ್ದಕ್ಕೆ ವಿರುದ್ಧವಾಗಿ ಏನೋ ಆಯಿತಲ್ಲ, ಅದರಿಂದ ಆಗಿದ್ದು.

ವಾಸ್ತವವನ್ನು ನಿಯಂತ್ರಿಸುವುದು ಹೋಗಲಿ, ಅರ್ಥ ಮಾಡಿಕೊಳ್ಳುವುದೂ ಅಸಾಧ್ಯ. ಕುಂದೇರಾಗೆ ಕಮ್ಯೂನಿಸಮ್ಮಿನ ಬಗ್ಗೆ ಆದ ಭ್ರಮನಿರಸದಿಂದ ಹೊಮ್ಮಿದ ಕಾಣ್ಕೆ ಇದು ಎಂದು ಸರಳೀಕರಿಸಿಬಿಟ್ಟರೆ ಅದರ ಸಂಕೀರ್ಣತೆಗೆ ಅಪಚಾರ ಮಾಡಿದಂತೆ. ಐವತ್ತರ ದಶಕದ ಝೆಕ್ ಕಮ್ಯೂನಿಸಮ್ಮಿನ ಸಂಭ್ರಮಕ್ಕೆ ವಾಸ್ತವವೆನ್ನುವುದು ನಮಗೆ ಬೇಕಾದಂತೆ ಒಗ್ಗಬಲ್ಲದ್ದು, ಅದನ್ನು ಒಗ್ಗಿಸಿಕೊಳ್ಳಲು ಅಗಾಧ ವಿಲ್ ಬೇಕು; ಗುರಿಯನ್ನು ಮುಟ್ಟುವ ಛಲವಿದ್ದರೆ ಅದು ನಮಗೆ ದಕ್ಕಲೇ ಬೇಕು… ಹೀಗೇ. ಕುಂದೇರೀಯ ಎಂದು ಕರೆಯಬಹುದಾದಂತಹ ವಿಪರ್ಯಾಸದ ಮೂಲಕ ನಮಗೆ ಅರಿವಾಗುವುದು ಇಷ್ಟು: ಮನುಷ್ಯನ ಇಚ್ಛಾಶಕ್ತಿಯ ಬಗೆಗಿನ ಕಮ್ಯೂನಿಸ್ಟ್ ಸಂಭ್ರಮವಾಗಲಿ, ಎನ್ ಲೈಟನ್ ಮೆಂಟಿನ ತಾತ್ವಿಕ ಆಶಾವಾದವಾಗಲಿ, ಕೊನೆಗೆ ನಾವು ಎದುರುಗೊಳ್ಳುವುದು ಧೃತಿಗೆಡಿಸುವ ಖಾಲಿತನವನ್ನೇ. ಹಾಗಾಗಿಯೇ ಆ ಕಾದಂಬರಿ ಸ್ಟಾಲಿನ್ ವಿರೋಧಿ ನೆಲೆಯಿಂದ ಹೊರಟ ಪ್ರತಿಭಟನೆ ಎಂದು ಸರಳೀಕರಿಸುವುದರ ಬಗ್ಗೆ ಕುಂದೇರಾ ಉರಿದು ಬೀಳುತ್ತಾನೆ.

‘ದ ಜೋಕ್’ ಸಹ ಹುಡುಗಾಟ ಎಂದು ಕರೆಯಬಹುದಾದ ಒಂದು ಸಣ್ಣ ಘಟನೆಯಿಂದ ಪ್ರಾರಂಭವಾಗುತ್ತದೆ. ಯುವತಿಯೊಬ್ಬಳ ಮನಸ್ಸನ್ನು ಗೆಲ್ಲಲು ಒಬ್ಬ ಲುದ್ವಿಕ್ ಎಂಬ ಹೆಸರಿನ ಯುವಕ ರೋಚಕವಾದ ಒಂದು ಪೋಸ್ಟ್ ಕಾರ್ಡನ್ನು ಕಳುಹಿಸುತ್ತಾನೆ. ಬೇಸಿಗೆಯ ಶಿಬಿರದಲ್ಲಿ ರಾಜಕೀಯ ತರಬೇತಿ ಪಡೆಯುವಾಗ ನಡೆಯುವ ಘಟನೆ ಇದು. ಪರಿಣಾಮ ವಿಪರೀತವಾಗಿ ಲುದ್ವಿಕ್ ನನ್ನು ಪಾರ್ಟಿಯಿಂದ ಹೊರಹಾಕಲಾಗುತ್ತದೆ. ವಿಶ್ವವಿದ್ಯಾಲಯದಿಂದ ಹೊರದೂಡಲ್ಪಟ್ಟ ಲುದ್ವಿಕ್ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆಗೆ ಒಳಗಾಗುತ್ತಾನೆ. ಅವನನ್ನು ತೀವ್ರವಾಗಿ ಕಾಡುವ ಸಂಗತಿಯೆಂದರೆ ತನಗೆ ಅತ್ಯಂತ ಆಪ್ತರಾದ ಸ್ನೇಹಿತರೂ ಸಹ ಹೇಗೆ ಸರಾಗವಾಗಿ ತನ್ನ ಉಚ್ಛಾಟನೆಗೆ ಬೆಂಬಲವಿತ್ತರು ಎನ್ನುವುದು. ಪಾರ್ಟಿಗೆ ಬೇಕಿತ್ತು, ಮಾಡಿದೆವು ಎನ್ನುವ ಉಡಾಫೆ? ಈ ಮಟ್ಟಿಗೆ? ಗಣಿಯಲ್ಲಿ ಸೈನ್ಯದ ಭಾಗವಾಗಿ ಕೆಲಸ ಮಾಡುವಾಗಲೂ ಒಬ್ಬ ಅಮಾಯಕನನ್ನು ಹೇಗೆ ಸಲ್ಲದ ಶಿಕ್ಷೆಗೆ ಎಲ್ಲರೂ ಸೇರಿ ಗುರಿ ಮಾಡಿದ್ದರು ಎಂಬುದನ್ನು ಕಣ್ಣಾರೆ ನೋಡಿರುತ್ತಾನೆ. ಗುಂಪಿನೊಂದಿಗೆ ಇದ್ದಾಗೆಲ್ಲಾ ಸುತ್ತ ಮುತ್ತ ಇರುವ ಈ ಮಂದಿಯೇ ತಮ್ಮಲ್ಲಿ ಯಾರನ್ನು ಬೇಕಾದರೂ ಯಾವಾಗ ಬೇಕಾದರೂ ಸಮಷ್ಟಿಯ ಹಿತದ ನೆಪ ಹೇಳಿ ಸಾವಿನತ್ತ ತಳ್ಳಬಲ್ಲರಲ್ಲವೇ ಎಂದು ದಿಗಿಲು ಪಟ್ಟುಕೊಳ್ಳುತ್ತಿರುತ್ತಾನೆ.

‘ಜೋಕ್’ ಎನ್ನುವುದು ಆತನ ಕೃತಿಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಬರುವ ಒಂದು ಪ್ರಮುಖ ಪರಿಕಲ್ಪನೆ. ಹುಡುಗಾಟವಾಗಿ ಶುರುವಾದದ್ದು ದೊಡ್ಡಾಟವಾಗಿ ಶುರು ಮಾಡಿದವರನ್ನು, ಅದಕ್ಕೆ ತುತ್ತಾದವರನ್ನೂ ದುರಂತವೆನ್ನಬಹುದಾದ ಪರಿಣಾಮಗಳತ್ತ ಕೊಂಡೊಯ್ಯುತ್ತದೆ. ಶುರು ಮಾಡಿದವನ ಅಹಂಕಾರವನ್ನು ಟುಸ್ಸೆನ್ನಿಸಿ ಅದೆಂತಹ ಭ್ರಮೆ ಎಂದು ಸಾಬೀತುಪಡಿಸುತ್ತದೆ. ದ ಹಿಚ್ಚಿಕಿಂಗ್ ಗೇಮ್ (The Hitchhiking Game) ಕತೆಯನ್ನೇ ತೆಗೆದುಕೊಳ್ಳಿ. ಒಬ್ಬ ಯುವಕ ಯುವತಿ ಬೇಸಿಗೆಯ ರಜೆಯನ್ನು ಆರಾಮವಾಗಿ ಕಳೆಯಲು ಒಟ್ಟಿಗೆ ಕಾರಿನಲ್ಲಿ ಹೊರಟಿದ್ದಾರೆ. ಹುಡುಗಾಟಕ್ಕಾಗಿ ಪರಸ್ಪರ ಅಪರಿಚಿತರಂತೆ ನಟಿಸಲು ನಿರ್ಧರಿಸುತ್ತಾರೆ. ಆಗ ತಾನೇ ಭೇಟಿಯಾದವರಂತೆ, ಕಾರನ್ನು ಓಡಿಸುತ್ತಿರುವ ಯುವಕ ಲಂಪಟನಂತೆ, ಕಾರನ್ನು ಹಿಚ್ ಹೈಕ್ ಮಾಡಿರುವ ಯುವತಿ ಲೈಂಗಿಕ ಆಹ್ವಾನವನ್ನು ನೀಡುತ್ತಿರುವಂತೆ, ನಟಿಸಲು ನಿರ್ಧರಿಸುತ್ತಾರೆ. ಅದು ಹುಡುಗಾಟವಾಗಿ ಉಳಿಯದೇ ಅವರ ಸಂಬಂಧವನ್ನೇ ಹುಳಿಯಾಗಿಸಿ ನಾಶ ಮಾಡುತ್ತದೆ.

ಎಷ್ಟೋ ವರುಷಗಳ ನಂತರ ತನ್ನ ಅವನತಿಗೆ ಕಾರಣನಾಗಿದ್ದ ಸಹಪಾಠಿ ಪವೆಲ್ ನ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ಬಂದಂತೆ ಲುದ್ವಿಕ್ ಚುರುಕಾಗುತ್ತಾನೆ. ಅವನ ಹೆಂಡತಿಯ ಮೇಲೆ ತನ್ನ ಬಲೆ ಬೀಸಿ ತಾನು ಗೆದ್ದೆ ಎಂದು ಸಂಭ್ರಮಿಸುತ್ತಾನೆ. ಆದರೆ ಪವೆಲ್ ತನ್ನ ಹೆಂಡತಿಯಿಂದ ವಿಮುಖನಾಗಿ ಪ್ರತ್ಯೇಕವಾಗಿ ಬದುಕುತ್ತಿರುತ್ತಾನೆ. ಅವನ ಹೆಂಡತಿಯ ಮೇಲೆ ಬಲೆ ಬೀಸಿ ಸಿಕ್ಕಿ ಬಿದ್ದವನು ಲುದ್ವಿಕ್, ಪಾರಾದವನು ಪವೆಲ್. ತನ್ನ ಶತ್ರು ಪವೆಲ್ ಈಗ ಉದಾರ ಸುಧಾರಣಾವಾದಿಯಾಗಿ ಪರಿವರ್ತನೆ ಹೊಂದಿ ಕಮ್ಯೂನಿಸ್ಟ್ ಸರ್ವಾಧಿಕಾರದ ವಿರುದ್ಧ ಪ್ರಚಾರ ಮಾಡುತ್ತಾ ತುಂಬ ಜನಪ್ರಿಯ ಅಧ್ಯಾಪಕನಾಗಿರುತ್ತಾನೆ. ‘ಮರೆವು ಎನ್ನುವುದು ಇರಬಹುದು, ಪರಿಹಾರವೆನ್ನುವುದು ಮಾತ್ರ ಇಲ್ಲವೇ ಇಲ್ಲ’ ಎಂದು ಕಂಡುಕೊಳ್ಳುವ ಲುದ್ವಿಕ್ ಇನ್ನಷ್ಟು ಹತಾಶೆಯಲ್ಲಿ ಮುಳುಗುತ್ತಾನೆ.

ಈ ಆ್ಯಂಟಿ ಏಜೆನ್ಸಿ (anti-agency) ಯ ನಿದರ್ಶನ ‘ಅನ್ ಬೇರಬಲ್ ಲೈಟ್ ನೆಸ್ ಆಫ್ ಬೀಯಿಂಗ್ (Unbearable Lightness of Being) ಕಾದಂಬರಿಯಲ್ಲೂ ಬೇಕಾದಷ್ಟಿವೆ. ರಷಿಯಾ 1968 ರಲ್ಲಿ ಝೆಕ್ ಅನ್ನು ಆಕ್ರಮಿಸಿಕೊಂಡಾಗ ಕಾದಂಬರಿಯ ನಾಯಕಿ ತೆರೇಸಾ ಸತತವಾಗಿ ಪ್ರಾಗ್ ನ ಹಾದಿಬೀದಿಗಳಲ್ಲಿ ಆಕ್ರಮಣಕಾರರ ಭಾವಚಿತ್ರಗಳನ್ನು ಸೆರೆ ಹಿಡಿಯುತ್ತಾ ಹೋಗುತ್ತಾಳೆ. ಅದರ ಫಿಲ್ಮುಗಳನ್ನು ಸಿಕ್ಕ ಸಿಕ್ಕ ವಿದೇಶಿ ಪ್ರವಾಸಿಗರಿಗೆ ಕೊಡುತ್ತಾ ಹೋಗುತ್ತಾಳೆ. ಪಶ್ಚಿಮದ ವಾರ್ತಾಮಾಧ್ಯಮಗಳಲ್ಲಿ ಈ ಆಕ್ರಮಣದ ಸ್ಪಷ್ಟ ರೂಪ ಪ್ರಚಾರ ಪಡೆಯಲಿ ಎಂಬ ಉದ್ದೇಶ. ಈ ಪುಟ್ಟ ನಾಡು ಸಿಲುಕಿರುವ ದುಸ್ಥಿತಿಯನ್ನು ನೋಡಿ ಪಶ್ಚಿಮದ ದೊಡ್ಡಣ್ಣಂದಿರು ನೆರವಿಗೆ ಬಂದಾರು ಎಂಬ ದೂರದ ಹಂಬಲ. ಆದರೆ ರಷಿಯನ್ ರಹಸ್ಯ ಪೋಲೀಸ್ ದಳ ತನ್ನ ಶಕ್ತಿಯನ್ನು ಪ್ರತಿರೋಧಿಸಿದವರನ್ನು ಪತ್ತೆ ಹಚ್ಚಲು, ತಕ್ಕ ಶಿಕ್ಷೆ ಕೊಡಲು, ಅದೇ ಭಾವಚಿತ್ರಗಳನ್ನು ಬಳಸಿಕೊಂಡಿರುತ್ತದೆ. ಅದು ಅರಿವಾದಾಗ “ನಾಡಿಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇವೆ ಎಂದು ಅಂದುಕೊಂಡಿದ್ದ ಮೂರ್ಖರು! ನಿಜದಲ್ಲಿ ರಷಿಯನ್ ಪೋಲಿಸರಿಗೆ ಸಹಾಯ ಮಾಡುತ್ತಿದ್ದವರು!” ಎಂದು ತೆರೇಸಾ ಉದ್ಗರಿಸುತ್ತಾಳೆ.

ಈ ತರಹದ ವ್ಯಂಗ್ಯವನ್ನು ಹಿಡಿಯುವುದರಲ್ಲಿ ಕುಂದೇರಾನೇನೂ ಮೊದಲಿಗನಲ್ಲ. ಆದರೆ ಝೆಕ್ ಚರಿತ್ರೆಯನ್ನು, ಅದರ ಮೂಲಕ ಮನುಷ್ಯ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಈ ಕರ್ತತ್ವಶಕ್ತಿ-ವಿರೋಧಿ ಎಂಬ ಪರಿಕಲ್ನನೆಯನ್ನು ಅವನು ಬಳಸಿಕೊಳ್ಳುವ ರೀತಿ ಅಸಾಧಾರಣವಾದದ್ದು. ಅದು ಒಂದೋ ಎರಡು ಪಾತ್ರಗಳಿಗೆ, ಘಟನೆಗಳಿಗೆ ಸೀಮಿತವಾದದ್ದೂ ಅಲ್ಲ. ಅವನ ‘ದ ಬುಕ್ ಆಫ್ ಲಾಫ್ಟರ್ ಅಂಡ್ ಫರ್ಗೆಟ್ಟಿಂಗ್’ (The Book of Laughter and Forgetting) ಕೃತಿಯಲ್ಲಿ ಕ್ರಾಂತಿಕಾರರ ಬಗ್ಗೆ ಬರುವ ಈ ಭಾಗವನ್ನು ನೋಡಿ: ಆ ಯುವ ಕ್ರಾಂತಿಕಾರರಿಗೆ ಥಟ್ಟನೆ ಚರಿತ್ರೆಯ ವ್ಯಂಗ್ಯದ ಆಳ ಅಗಲಗಳು ಹೊಳೆದಂತಾಯಿತು. ತಾವೇ ರೂಪಿಸಿದ್ದು, ಆದರೆ ತಮ್ಮ ನಿಯಂತ್ರಣದ ವ್ಯಾಪ್ತಿಯಿಂದ ನುಲುಚಿಕೊಂಡು ತನ್ನದೇ ರೂಪದಲ್ಲಿ ಬೀಗುತ್ತಾ ನಿಂತಿದೆ! ಮೂಲದಲ್ಲಿ ಇದ್ದ ಉದ್ದೇಶಕ್ಕೂ, ಈಗ ರೂಪ ತಾಳಿರುವುದಕ್ಕೂ ತಾಳೆಯೇ ಇಲ್ಲ! ಬಂಡವಾಳಷಾಹಿತನದ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಸಮಾಜವಾದಿ ವ್ಯವಸ್ಥೆಗೆ ಹಂಬಲಿಸಿ ನಡೆದ ಕ್ರಾಂತಿ ಕೊನೆಗೆ ಸರ್ವಾಧಿಕಾರಕ್ಕೆ ಹಾದಿಯನ್ನು ಹಾಸಿದ್ದು ಯಾವ ರೀತಿಯ ವ್ಯಂಗ್ಯವಿರಬಹುದು? ಈ ಮಹಾನ್ ಜೋಕ್ ಒಬ್ಬಿಬ್ಬರ ‘ಅವಿವೇಕ’ ದಿಂದ ಮೂಡಿದ್ದಲ್ಲ. ಸಹಸ್ರಾರು ಮಂದಿಯ ಬೌದ್ಧಿಕ, ರಾಜಕೀಯ ಶಕ್ತಿಗಳು ಮಿಳಿತಗೊಂಡು ಸಾಗಿದಂತ ಚರಿತ್ರೆಯಲ್ಲೇ ಮೂಡಿದ ವ್ಯಂಗ್ಯ…’

ರಷಿಯಾ 1968 ರಲ್ಲಿ ಝೆಕ್ ಅನ್ನು ಆಕ್ರಮಿಸಿಕೊಂಡಾಗ ಕಾದಂಬರಿಯ ನಾಯಕಿ ತೆರೇಸಾ ಸತತವಾಗಿ ಪ್ರಾಗ್ ನ ಹಾದಿಬೀದಿಗಳಲ್ಲಿ ಆಕ್ರಮಣಕಾರರ ಭಾವಚಿತ್ರಗಳನ್ನು ಸೆರೆ ಹಿಡಿಯುತ್ತಾ ಹೋಗುತ್ತಾಳೆ. ಅದರ ಫಿಲ್ಮುಗಳನ್ನು ಸಿಕ್ಕ ಸಿಕ್ಕ ವಿದೇಶಿ ಪ್ರವಾಸಿಗರಿಗೆ ಕೊಡುತ್ತಾ ಹೋಗುತ್ತಾಳೆ. ಪಶ್ಚಿಮದ ವಾರ್ತಾಮಾಧ್ಯಮಗಳಲ್ಲಿ ಈ ಆಕ್ರಮಣದ ಸ್ಪಷ್ಟ ರೂಪ ಪ್ರಚಾರ ಪಡೆಯಲಿ ಎಂಬ ಉದ್ದೇಶ. ಈ ಪುಟ್ಟ ನಾಡು ಸಿಲುಕಿರುವ ದುಸ್ಥಿತಿಯನ್ನು ನೋಡಿ ಪಶ್ಚಿಮದ ದೊಡ್ಡಣ್ಣಂದಿರು ನೆರವಿಗೆ ಬಂದಾರು ಎಂಬ ದೂರದ ಹಂಬಲ. ಆದರೆ ರಷಿಯನ್ ರಹಸ್ಯ ಪೋಲೀಸ್ ದಳ ತನ್ನ ಶಕ್ತಿಯನ್ನು ಪ್ರತಿರೋಧಿಸಿದವರನ್ನು ಪತ್ತೆ ಹಚ್ಚಲು, ತಕ್ಕ ಶಿಕ್ಷೆ ಕೊಡಲು, ಅದೇ ಭಾವಚಿತ್ರಗಳನ್ನು ಬಳಸಿಕೊಂಡಿರುತ್ತದೆ. ಅದು ಅರಿವಾದಾಗ “ನಾಡಿಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇವೆ ಎಂದು ಅಂದುಕೊಂಡಿದ್ದ ಮೂರ್ಖರು! ನಿಜದಲ್ಲಿ ರಷಿಯನ್ ಪೋಲಿಸರಿಗೆ ಸಹಾಯ ಮಾಡುತ್ತಿದ್ದವರು!” ಎಂದು ತೆರೇಸಾ ಉದ್ಗರಿಸುತ್ತಾಳೆ.

ಚರಿತ್ರೆಯನ್ನು ಜೋಕ್ ಆಗಿ ನೋಡುವ ಪರಿಕಲ್ಪನೆ ಕುಂದೇರಾನದಲ್ಲ. ಅದು ಚರಿತ್ರೆಯೆಂಬ ಸಮಸ್ಯೆಗೆ ನೀತ್ಸೆ ಸೂಚಿಸುವ ಒಂದು ಬಗೆಯ ಪರಿಹಾರ; ಒಂದು ರೀತಿಯ ಲವಲವಿಕೆಯ ನಿರಾಶಾವಾದ (joyful pessimism). ಮನುಷ್ಯ ಬದುಕಿನ ಕತ್ತು ಹಿಸುಕುವ ಅಸಂಗತತೆಯಿಂದ ತಪ್ಪಿಸಿಕೊಳ್ಳಲು ಇರುವ ಕಲಾತ್ಮಕ ಸಂಧಾನ. ಅದಕ್ಕೇ ನಗುವಿನ ಶಕ್ತಿಯನ್ನು ಆಹ್ವಾನಿಸಿಕೊಳ್ಳಬೇಕು. ಮಿಖಾಯಿಲ್ ಬಾಖ್ತಿನ್ ತನ್ನ ‘ಲಾಫ್ಟರ್ ಅಂಡ್ ಫ್ರೀಡಮ್’ (Laughter and Freedom) ಬರಹದಲ್ಲಿ ನಗುವಿನ ಉಪಯೋಗ ಮನುಷ್ಯಾತೀತ ಶಕ್ತಿಗಳ ಜೊತೆ, ಸಾವಿನ ಜೊತೆ, ಮುಖಾಮುಖಿಯಾಗುವ ದಿಕ್ಕಿನಲ್ಲಿ ಮಾತ್ರ ಅಷ್ಟೇ ಅಲ್ಲ. ರಾಜ ಮಹಾರಾಜರುಗಳು ಸೋಲನ್ನು, ಘಟಾನುಟಿಗಳ ನಾಜೂಕತೆಯನ್ನು ಅರ್ಥ ಮಾಡಿಕೊಳ್ಳುವ ಮತ್ತು ನಮ್ಮನ್ನು ಉಸಿರು ಕಟ್ಟಿಸುವ ಎಲ್ಲ ಶಕ್ತಿಗಳ ಕಣ್ಣಲ್ಲಿ ಸ್ವಲ್ಪ ಮಟ್ಟಿಗಾದರೂ ಕಣ್ಣಿಟ್ಟು ನೋಡಿ ಧಿಕ್ಕರಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದ. ಎಲ್ಲದಕ್ಕೂ ಅದೇ ಪರಿಹಾರ ಎಂಬ ಭ್ರಮೆ ಕುಂದೇರಾನಿಗೆ ಇಲ್ಲ.

***

ಲಾಫ್ಟರ್ ಎನ್ನುವುದು ಕುಂದೇರಾನಿಗೆ ಒಂದು ಸಂಕೀರ್ಣ ಪರಿಕಲ್ಪನೆ. ಅದು ನಕ್ಕು ಮರೆಯುವ ಕ್ರಿಯೆಯಲ್ಲ. ನಗುವೆನ್ನುವುದು ಹಾಸ್ಯಪ್ರಜ್ಞೆಯಿಂದ ಹೊಮ್ಮುವಂತೆಯೇ ವ್ಯಂಗ್ಯಪ್ರಜ್ಞೆಯಿಂದಲೂ ಸಹ ಹೊಮ್ಮುತ್ತದೆ. ನಗು ಎರಡು ವಿಭಿನ್ನ ಮೆಟಫಿಸಿಕಲ್ ಭಾವಗಳನ್ನು ಬಿಂಬಿಸಬಲ್ಲುದು. ಶವವನ್ನು ಹೂಳುವ ಪ್ರಕ್ರಿಯೆಯಲ್ಲಿ ಒಬ್ಬನ ಹ್ಯಾಟು ಜಾರಿ ಗುಂಡಿಗೆ ಬಿದ್ದಾಗ ಅಂತ್ಯಸಂಸ್ಕಾರದ ಬಿಗುತನ ಒಮ್ಮೆಲೇ ಸಡಿಲಿಸಿ ನಗು ಉಕ್ಕುತ್ತದೆ. ಇಬ್ಬರು ಪ್ರೇಮಿಗಳು ಉಲ್ಲಾಸದಿಂದ ಕಲೆಯುತ್ತಾ ಹೋಗುವಾಗ ಅವರ ನಗುವಿಗಿರುವ ಅರ್ಥವೇ ಬೇರೆ. ಬದುಕಿರುವ ಬಗ್ಗೆಯೇ ಸಂಭ್ರಮಿಸುವಂತಹ ನಗು ಅದು. ಆದರೆ ಅಂಧಾಭಿಮಾನಿಗಳೂ ನಗುತ್ತಾರಲ್ಲ? ತಮ್ಮ ಅರ್ಥಲೋಕವನ್ನು ಒಪ್ಪದವರನ್ನು ನೇಣಿಗಟ್ಟುವಾಗ ಹೊಮ್ಮುವ ಅಟ್ಟಹಾಸದ ನಗು ಅದು. ಇನ್ನೊಂದು ಕಡೆ, ಎಲ್ಲದರಲ್ಲೂ ನಂಬಿಕೆ ಕಳೆದುಕೊಂಡವರೂ ಸಹ ತಾತ್ಸಾರದಿಂದ ನಗುತ್ತಿರುತ್ತಾರೆ. ಮನುಷ್ಯ ಬದುಕು ಎರಡು ‘ಅತಿ’ಗಳಿಂದ ಬಂಧಿಸಲ್ಪಟ್ಟಿದೆ. ಅತೀವ ಶೃದ್ಧೆ ಒಂದು ಕಡೆ. ಇನ್ನೊಂದು ಕಡೆ ಎಲ್ಲದರ ಬಗ್ಗೆಯೂ ತಾರ್ಕಿಕ ಸಂದೇಹ. ತನ್ನ ಮೊದಲ ಕೆಲವು ಕಾದಂಬರಿಗಳಲ್ಲಿ ‘ಬದುಕಿನ ಬಗೆಗಿನ ಗೇಯ ಪರಿಕಲ್ಪನೆ’ ಎಂದು ವ್ಯಾಖ್ಯಾನಿಸುವ ಕುಂದೇರಾ ನಂತರ ಅದನ್ನೇ ‘ದೇವತೆಗಳ ನಗು’ ಎಂದು ಕರೆಯುತ್ತಾನೆ. ಆ ಗೇಯ ಪರಿಕಲ್ಪನೆಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸ್ಟಾಲಿನ್ ಯುಗವನ್ನು ಯಾಕೆ ‘ಕವಿ ಮತ್ತು ಕುಣಿಕೆದಾರನ ಯುಗ’ ಎಂದು ಕರೆಯುತ್ತಾನೆ ಎಂಬ ಪ್ರಶ್ನೆಯತ್ತ ಹೋಗಬೇಕು. ಅವನ ಪ್ರಕಾರ ಸರ್ವಾಧಿಕಾರವೆನ್ನುವುದು ನರಕವಷ್ಟೇ ಅಲ್ಲ, ಅದು ಸ್ವರ್ಗದ ಕನಸೂ ಕೂಡ. ಒಂದೇ ಶೃದ್ಧೆಯ ದಿವ್ಯ ಬೆಳಕಲ್ಲಿ ಎಲ್ಲರೂ ತೇಲುತ್ತಾ, ಎಲ್ಲರಿಗೆ ಎಲ್ಲರೂ ಬಟಾಬಯಲಾಗಿ, ಸುಖ ಶಾಂತಿ ನೆಮ್ಮದಿಯ ಬಾಳನ್ನು ಬದುಕುವ ಕನಸು. ಅಂತಹ ‘ಸರ್ವೋದಯ’ ದ ಪರಿಕಲ್ಪನೆಗಳು ಎಲ್ಲ ಧರ್ಮಗಳಲ್ಲಿ, ಎಲ್ಲರಲ್ಲೂ ಬೇರೂರಿಲ್ಲದಿದ್ದರೆ ಸರ್ವಾಧಿಕಾರಿ ಶಕ್ತಿಗಳಿಗೆ ಅವುಗಳನ್ನು ಇಷ್ಟರ ಮಟ್ಟಿಗೆ ದುಡಿಸಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ. ಅಂತಹ ‘ಸ್ವರ್ಗ’ ಸಾಕಾರವಾಗುತ್ತಿರುವಾಗ ಅದರ ಬಗ್ಗೆ ತಕರಾರುಗಳು ಹುಟ್ಟುತ್ತವೆ, ಸಂದೇಹಗಳು ತಲೆಯೆತ್ತುತ್ತವೆ. ಹಾಗೆ ಅಡ್ಡಗಾಲು ಹಾಕುವವರನ್ನು ನಿವಾರಿಸಿಕೊಳ್ಳಲು ಆ ಸ್ವರ್ಗದ ಒಂದು ಮೂಲೆಯಲ್ಲಿ ‘ಗುಲಗ್’ (ಲೇಬರ್ ಕ್ಯಾಂಪು, ಯಾತನಾಶಿಬಿರ) ಗಳು ನಿರ್ಮಾಣವಾಗುತ್ತವೆ. ಬರಬರುತ್ತಾ ಗುಲಗ್ ಗಳ ಪ್ರಮಾಣ ದೊಡ್ಡದಾಗುತ್ತಾ ಹೋಗಿ ಸ್ವರ್ಗದ ಗಾತ್ರ ಕ್ಷೀಣಿಸುತ್ತಾ ಹೋಗುತ್ತದೆ. ಬದುಕನ್ನು ಸ್ವರ್ಗವಾಗಿಸಿಕೊಳ್ಳುವ ಅಂತಹ ಗೇಯ ಪರಿಕಲ್ಪನೆಗೆ ಕವಿಗಳೇನೂ ಹೊರತಾದವರಲ್ಲ. ಜಾಗತಿಕ ಯುದ್ಧದ ನಂತರ ಫ್ರೆಂಚ್ ಪಾಲ್ ಎಲುವಾರ್ದ್ ಕವಿ ಸರ್ರಿಯಲಿಸಂ ಹಾದಿಯಿಂದ ಹೊರಗೆ ಬಂದು ಸರ್ವಾಧಿಕಾರವನ್ನು ಕಾವ್ಯವಾಗಿಸುವುದರಲ್ಲಿ ತೊಡಗಿದಂತವನು. ಭ್ರಾತೃತ್ವ, ನ್ಯಾಯ, ಶಾಂತಿ, ಭವ್ಯ ಭವಿಷ್ಯ ಇತ್ಯಾದಿ ಮಹಾನ್ ಮಹಾನ್ ಪರಿಕಲ್ಪನೆಗಳ ಬಗ್ಗೆ ಹಾಡಿ ಹಾಡಿ ತಣಿಯದವನು. ಆ ‘ಸ್ವರ್ಗ’ದ ಶಕ್ತಿಗಳು ಝೆಕ್ ಕವಿ ಜಾಲ್ವಿಸ್ ಕಲಾಂದ್ರನನ್ನು ನೇಣಿಗೆ ಅಟ್ಟಿದಾಗ, ಎಲುವಾರ್ದ್ ತನ್ನ ಸ್ನೇಹಿತನಿಗಾದ ಅನ್ಯಾಯಕ್ಕೆ ಸೊಲ್ಲೆತ್ತಲಿಲ್ಲ. ವೈಯುಕ್ತಿಕವನ್ನು ಮೀರಿದ ಮಹಾನ್ ಕನಸುಗಳಿಗೆ ಬದ್ಧನಾಗಿ ತನ್ನ ಕಾಮ್ರೇಡನ ನೇಣು ಶಿಕ್ಷೆಯನ್ನು ಸಾರ್ವಜನಿಕವಾಗಿ ಅನುಮೋದಿಸಿದ. ಕುಣಿಕೆ ಬೀಳುವಾಗ ಕವಿ ಹಾಡುತ್ತಿದ್ದ! ಚಿತಾಗಾರದಿಂದ ಕಲಾಂದ್ರನ ದೇಹ ಸುಟ್ಟ ಹೊಗೆ ಗಾಳಿಯಲ್ಲಿ ಏರುತ್ತಿದ್ದಾಗ ಎಲುವಾರ್ದ್ ಎಂಬ ದೇವದೂತನ ದಿವ್ಯಗಾನ ಪ್ರಾಗ್ ನ ತುಂಬ ಹರಡುತ್ತಿತ್ತು.

ಕುಂದೇರಾನ ಪ್ರಕಾರ ಕವಿಗಳಷ್ಟೇ ಅಲ್ಲ, ಸ್ಟಾಲಿನ್ ಯುಗದಲ್ಲಿ ಬದುಕಿನ ಬಗೆಗಿನ ಗೇಯ ಮರುಳಿಗೆ ಬಲಿಗಾಗದಿದ್ದವರೇ ಇಲ್ಲ. ಅದೊಂದು ಸಮೂಹ ಸನ್ನಿಯ ಕಾಲ. ಈಗ ಜನರಿಗೆ ಅದರ ನೆನಪು ಪೂರ್ತಿಯಾಗಿ ಮಾಸಿರಬಹುದು. ಕ್ರಾಂತಿಯ ಸೌಂದರ್ಯವನ್ನು ಹಾಡಿ ಹೊಗಳುವವರು ಅದರಿಂದ ಹೊಮ್ಮುವ ಟೆರರ್ ಬಗ್ಗೆ ‘ಅದು ಸರಿ, ಇದು ಬೇಡ’ ಎಂಬ ಚೌಕಾಸಿ ಧೋರಣೆ ತಳೆಯುತ್ತಾರೆ. ಸ್ವರ್ಗದ ಪರಿಕಲ್ಲನೆಯಲ್ಲೇ ನರಕವೂ ಅಂತರ್ಗತವಾಗಿರುವಾಗ ಚೌಕಾಸಿಗೆಲ್ಲಿ ಜಾಗವಿರಲು ಸಾಧ್ಯ? ಗುಲಗ್ ಗಳನ್ನು ಧಿಕ್ಕರಿಸಬಹುದು. ಆದರೆ ಸ್ವರ್ಗದ ಮರುಳಿನ ಮೂಲಕ ಗದ್ದುಗೆಯೇರುವ ಸರ್ವಾಧಿಕಾರ ಶಕ್ತಿಗಳು ಗುಲಗ್ ಗಳು ಅನಿವಾರ್ಯ ಎಂಬಂತ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದರೆ?

***

ಮನುಷ್ಯ ಬದುಕು ಎರಡು ‘ಅತಿ’ಗಳಿಂದ ಬಂಧಿಸಲ್ಪಟ್ಟಿದೆ. ಅತೀವ ಶೃದ್ಧೆ ಒಂದು ಕಡೆ. ಇನ್ನೊಂದು ಕಡೆ ಎಲ್ಲದರ ಬಗ್ಗೆಯೂ ತಾರ್ಕಿಕ ಸಂದೇಹ. ತನ್ನ ಮೊದಲ ಕೆಲವು ಕಾದಂಬರಿಗಳಲ್ಲಿ ‘ಬದುಕಿನ ಬಗೆಗಿನ ಗೇಯ ಪರಿಕಲ್ಪನೆ’ ಎಂದು ವ್ಯಾಖ್ಯಾನಿಸುವ ಕುಂದೇರಾ ನಂತರ ಅದನ್ನೇ ‘ದೇವತೆಗಳ ನಗು’ ಎಂದು ಕರೆಯುತ್ತಾನೆ. ಆ ಗೇಯ ಪರಿಕಲ್ಪನೆಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸ್ಟಾಲಿನ್ ಯುಗವನ್ನು ಯಾಕೆ ‘ಕವಿ ಮತ್ತು ಕುಣಿಕೆದಾರನ ಯುಗ’ ಎಂದು ಕರೆಯುತ್ತಾನೆ ಎಂಬ ಪ್ರಶ್ನೆಯತ್ತ ಹೋಗಬೇಕು. ಅವನ ಪ್ರಕಾರ ಸರ್ವಾಧಿಕಾರವೆನ್ನುವುದು ನರಕವಷ್ಟೇ ಅಲ್ಲ, ಅದು ಸ್ವರ್ಗದ ಕನಸೂ ಕೂಡ. ಒಂದೇ ಶೃದ್ಧೆಯ ದಿವ್ಯ ಬೆಳಕಲ್ಲಿ ಎಲ್ಲರೂ ತೇಲುತ್ತಾ, ಎಲ್ಲರಿಗೆ ಎಲ್ಲರೂ ಬಟಾಬಯಲಾಗಿ, ಸುಖ ಶಾಂತಿ ನೆಮ್ಮದಿಯ ಬಾಳನ್ನು ಬದುಕುವ ಕನಸು. ಅಂತಹ ‘ಸರ್ವೋದಯ’ ದ ಪರಿಕಲ್ಪನೆಗಳು ಎಲ್ಲ ಧರ್ಮಗಳಲ್ಲಿ, ಎಲ್ಲರಲ್ಲೂ ಬೇರೂರಿಲ್ಲದಿದ್ದರೆ ಸರ್ವಾಧಿಕಾರಿ ಶಕ್ತಿಗಳಿಗೆ ಅವುಗಳನ್ನು ಇಷ್ಟರ ಮಟ್ಟಿಗೆ ದುಡಿಸಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ. ಅಂತಹ ‘ಸ್ವರ್ಗ’ ಸಾಕಾರವಾಗುತ್ತಿರುವಾಗ ಅದರ ಬಗ್ಗೆ ತಕರಾರುಗಳು ಹುಟ್ಟುತ್ತವೆ, ಸಂದೇಹಗಳು ತಲೆಯೆತ್ತುತ್ತವೆ. ಹಾಗೆ ಅಡ್ಡಗಾಲು ಹಾಕುವವರನ್ನು ನಿವಾರಿಸಿಕೊಳ್ಳಲು ಆ ಸ್ವರ್ಗದ ಒಂದು ಮೂಲೆಯಲ್ಲಿ ‘ಗುಲಗ್’ (ಲೇಬರ್ ಕ್ಯಾಂಪು, ಯಾತನಾಶಿಬಿರ) ಗಳು ನಿರ್ಮಾಣವಾಗುತ್ತವೆ.

ಕಿಚ್ (kitsch) ಎನ್ನುವುದು ಕುಂದೇರಾನ ಕಾದಂಬರಿಗಳಲ್ಲಿ ಪ್ರಧಾನವಾಗಿ ಕಾಣಸಿಗುವ ಪರಿಕಲ್ಪನೆ. ಹಾಗೆಂದರೇನು? ಡೌಲು, ಬೆಡಗು ಎನ್ನುತ್ತದೆ ಶಬ್ದಕೋಶ. ಶಾಬ್ದಿಕ ಅರ್ಥಕ್ಕೆ ಸೀಮಿತಗೊಳಿಸಿಕೊಳ್ಳದೇ ಕುಂದೇರಾನ ಕೃತಿಗಳಲ್ಲಿ ಹಲವಾರು ಕಡೆ ಅವತರಿಸುವ ಈ ಪರಿಕಲ್ಪನೆಯನ್ನು, ಅದರ ಕ್ಲಿಷ್ಟತೆಯನ್ನು ಹೊಕ್ಕು ನೋಡುವುದೇ ಸೂಕ್ತ. ‘ದ ಬುಕ್ ಆಫ್ ಲಾಫ್ಟರ್ ಅಂಡ್ ಫರ್ಗೆಟ್ಟಿಂಗ್’ ನ ಪ್ರಮುಖ ಪಾತ್ರವಾದ ತಮೀನ ಬರೀ ಮಕ್ಕಳಿರುವ ದ್ವೀಪವೊಂದರಲ್ಲಿ ಸಿಕ್ಕಿ ಬಿದ್ದಿರುತ್ತಾಳೆ. ಮಕ್ಕಳೆಂದರೆ ಮುಗ್ಧತೆಯ ಸಾಕಾರವಷ್ಥೇಯೆ? ಇದರ ಮೂಲಕ ಕುಂದೇರಾ ಎದುರಾಗುವುದು ಬಾಲ್ಯವೆಂಬ ಪರಿಕಲ್ಪನೆಯ ಕಿಚ್ ಅನ್ನು. ಹಾದಿ ತಪ್ಪಿಸುವ ಅದರ ಗೇಯ ಪರಿಕಲ್ಪನೆಯನ್ನು. ಆ ಕೃತಿಯ ಮುಖ್ಯ ವಸ್ತು ಸರ್ವಾಧಿಕಾರತ್ವ. ಕುಂದೇರಾನ ಕೃತಿಗಳೆಲ್ಲವೂ ಬಹುಸ್ತರೀಯ ಸಂಗೀತದಂತೆ, ಪರಸ್ಪರ ಅರ್ಥೈಸುವಲ್ಲಿ, ಬೆಳಕು ಚೆಲ್ಲುವಲ್ಲಿ ನಿರತವಾಗಿರುತ್ತವೆ. ಪುಸ್ತಕಗಳನ್ನು ನಿಷೇಧಿಸುವ, ಚರಿತ್ರಕಾರರನ್ನು ಮೌನವಾಗಿಸುವ, ಸ್ಮಾರಕಗಳನ್ನು ಕೆಡವುವ ಸರ್ವಾಧಿಕಾರದ ಉದ್ದೇಶ ಏನಿರಲು ಸಾಧ್ಯ? ಆರ್ಗನೈಸ್ಡ್ ಫರ್ಗೆಟ್ಟಿಂಗ್ (Organized forgetting) ತಾನೆ? ಅಂತಹ ಮರೆವಿಗೆ ತುತ್ತಾಗುವ ಒಂದು ದೇಶದ ಪ್ರಜೆಗಳು ಏನಾಗುತ್ತಾರೆ? ಸ್ಮೃತಿಯ ಹಂಗಿಲ್ಲದ ಮಕ್ಕಳನ್ನಾಗಿ ಅವರನ್ನು ಪರಿವರ್ತಿಸಿದಾಗ ಸರ್ವಾಧಿಕಾರಕ್ಕೆ ಹೆಚ್ಚು ಸಶಕ್ತವಾಗಿ ಆಳಲು ಸಾಧ್ಯವಾಗುತ್ತದೆ. ನಮ್ಮ ತಾಂತ್ರಿಕ ಯುಗ ಮಾಡುತ್ತಿರುವುದೂ ಅದನ್ನೇ. ಭವಿಷ್ಯದ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುವ, ಸಾಂಸ್ಕೃತಿಕೆ ಸ್ಮೃತಿಯ ಎಗ್ಗೇ ಇಲ್ಲದೆ, ವಿಚಾರವೆಂಬ ಪರಿಕಲ್ಪನೆಯನ್ನೇ ಸಂಶಯಿಸುವ ಸಮಾಜವಾಗಿ ನಾವಿಂದು ಬದಲಾಗುತ್ತಿದ್ದೇವೆ. ನೆನಪಿನಿಂದ ಮಾಗಿದ ಮತ್ತು ಬದುಕಿನ ವ್ಯಂಗ್ಯದ ಅರಿವಿರುವ ವಯಸ್ಕನೊಬ್ಬ ಬರೀ ಮಕ್ಕಳ ನಡುವೆ ಸಿಕ್ಕಿಬಿದ್ದ ತಮೀನಾಳಂತೆಯೇ ತಲ್ಲಣಿಸುತ್ತಿರುತ್ತಾನೆ ಎನ್ನುತ್ತಾನೆ ಕುಂದೇರಾ.

ಭಾವನೆಗಳಿಲ್ಲದೇ ಮನುಷ್ಯ ಬದುಕಲಾರ. ಆದರೆ ಭಾವನೆಗಳೇ ಮೌಲ್ಯಗಳಾಗಿಬಿಟ್ಟರೆ, ಸತ್ಯದ ಮಾನದಂಡವಾಗಿಬಿಟ್ಟರೆ, ಮಾಡಿದ್ದೆಲ್ಲವನ್ನೂ ಸಮರ್ಥಿಸಿಕೊಳ್ಳುವ ಹುನ್ನಾರವಾಗಿಬಿಟ್ಟರೆ ಪರಿಣಾಮ ಭಯ ಹುಟ್ಟಿಸಬಲ್ಲುದು. ರಾಷ್ಟ್ರೀಯ ಭಾವನೆಯ ಗೇಯಾತ್ಮಕ ಹುಮ್ಮಸ್ಸು ತನ್ನ ಅನಾಚಾರಗಳಿಗೆ ಭವ್ಯ ಅರ್ಥಗಳನ್ನು ಆರೋಪಿಸಿಕೊಂಡು ಬೀಗುತ್ತದೆ. ಕುಂದೇರಾನ ಪ್ರಕಾರ ಕ್ರಿಶ್ಚಿಯನ್ ನಾಗರಿಕತೆಯೆನ್ನುವುದು ಭಾವನೆಗಳ ಚರಿತ್ರೆಯೇ. ‘ಕಷ್ಟವನ್ನು ಸಹಿಸು’ ಎಂದು ಶಿಲುಬೆಯ ಮೇಲಿನ ಯೇಸು ಬೋಧಿಸಿದ. ವೀರರನ್ನು ಹಾಡಿ ಹೊಗಳುವ ಕಾವ್ಯ ಪ್ರಣಯಭಾವದ ಹಾದಿಯನ್ನು ತೆರೆಯಿತು. ಬೂರ್ಶ್ವಾ ಕುಟುಂಬದ ಪರಿಕಲ್ಪನೆ ಕೌಟುಂಬಿಕ ಬದುಕಿಗೆ ತಹತಹಿಸುವಂತೆ ಮಾಡಿತು. ರಾಜಕೀಯ ಫುಡಾರಿತನ ಆಳುವ ಆಸೆಗೆ ಭಾವನಾತ್ಮಕತೆಯ ಲೇಪ ಹಚ್ಚಿ ರಮ್ಯವಾಗಿಸುತ್ತದೆ. ಕುಂದೇರಾನ ಪ್ರಕಾರ ಪಶ್ಚಿಮವನ್ನು ಈ ಅತಿಯಿಂದ ಪಾರು ಮಾಡಿದ್ದು ರಿನೇಸಾನ್ಸ್. ಸಂದೇಹ, ವೈಚಾರಿಕತೆ, ಮನುಷ್ಯ ಲೋಕದ ಆಗುಹೋಗುಗಳ ಸಾಪೇಕ್ಷತೆ ಇತ್ಯಾದಿಗಳನ್ನು ಸಾಧ್ಯವಾಗಿಸಿದ ರಿನೇಸಾನ್ಸ್ ನಂತ ಪ್ರಕ್ರಿಯೆ ರಷಿಯಾದಲ್ಲಿ ಸಂಭವಿಸಿಯೇ ಇಲ್ಲ. ಅದಕ್ಕೇ ರಷಿಯಾದಲ್ಲಿ ವಿಚಾರ ಮತ್ತು ಭಾವನೆಯ ನಡುವಿನ ಸಮತೋಲನ (ಅಥವಾ ಅದರ ಕೊರತೆ) ಬೇರೆಯ ತರದ್ದು. “ಆ ಶಕ್ತಿ ನನ್ನ ದೇಶದ ಮೇಲೆ ಅಪ್ಪಳಿಸಿದಾಗ ಪಶ್ಚಿಮದ ರಿನೇಸಾನ್ಸ್ ನಂತರದ ಚೈತನ್ಯದ ಪ್ರವಾಹಕ್ಕೆ ನಾನೆಷ್ಟು ತಹತಹಿಸಿದೆ!” ಎನ್ನುತ್ತಾನೆ. ಅದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ರಷಿಯನ್ ಬರಹಗಾರ ಜೋಸೆಫ್ ಬ್ರಾಡ್ಸಕಿ ಝೆಕ್ ಆಕ್ರಮಣ ಒಂದು ಚಾರಿತ್ರಿಕ ಅಗತ್ಯ, ಆ ‘ಚಾರಿತ್ರಿಕ ಅಗತ್ಯ’ ಎನ್ನುವ ಪರಿಕಲ್ಪನೆ ರಷಿಯಾಕ್ಕೆ ಬಂದಿದ್ದು ಪಶ್ಚಿಮದ ಮೂಲಕವೇ ಎಂದು ಚಾಟಿಯೇಟಿನ ಉತ್ತರ ಕೊಟ್ಟ!

ಯೌವ್ವನವನ್ನು ಬದುಕಿನ ಒಂದು ಭಾಗವಾಗಿ ನೋಡದೇ ಒಂದು ಮೌಲ್ಯವಾಗಿ ನೋಡುವುದೂ ಇಂತಹ ಕಿಚ್ ನ ಭಾಗವೇ. ಭವಿಷ್ಯದ ಬಗ್ಗೆ ಮಾತಾಡುವಾಗೆಲ್ಲ ಸಂತೋಷದಿಂದ ಕುಣಿಯುತ್ತಾ, ನೆಗೆಯುತ್ತಾ ಇರುವ ಮಕ್ಕಳನ್ನು ತೋರಿಸುತ್ತಾರೆ. ಚುನಾವಣೆಯ ಪೋಸ್ಟರುಗಳಿಗೆ ಅಂತಹ ಚಿತ್ರಗಳನ್ನು ಬಳಸಲಾಗುತ್ತದೆ. ಯೌವ್ವನದ ಬಗ್ಗೆ ಮಾತಾಡುವಾಗಲೂ ರಾಜಕಾರಣಿಗಳು ಸಿಲ್ಲಿ ಅನ್ನಿಸುವಷ್ಟು ಹಲ್ಲು ಕಿರಿಯುತ್ತಿರುತ್ತಾರೆ. ಕುಂದೇರಾ ಅತ್ಯಂತ ಭಯದಲ್ಲಿ ಕಳೆದ ತನ್ನ ಯೌವ್ವನವನ್ನು ನೆನಪಿಸಿಕೊಂಡು ಬೆಚ್ಚಿ ಬೀಳುತ್ತಾನೆ. ಅಂತಹ ಟೆರರ್ ಗೆ ಕುಮ್ಮಕ್ಕು ಕೊಟ್ಟವರು ಹೆಚ್ಚಿನಂಶ ತನ್ನಂತ ಯುವಕರು; ಅವರ ‘ಇದ್ದರೆ ಎಲ್ಲ, ಇಲ್ಲದಿದ್ದರೆ ಏನೂ ಬೇಡ’ ಎಂಬ ಹುಂಬತನ, ನೀತಿವಾದ, ಗೇಯಭ್ರಮೆ ಎಲ್ಲವೂ ಅವನಿಗೆ ಯೌವ್ವನದ ಕಿಚ್ ನ ದರ್ಶನ ಮಾಡಿಸಿವೆ. ಕಾವ್ಯದ ಕಿಚ್ ಸಹ ಕುಂದೇರಾನ ದೃಷ್ಟಿಯಿಂದ ತಪ್ಪಿಸಿಕೊಳ್ಳಲಾರದು. ಕಾವ್ಯಾತ್ಮಕತೆ ಎಂಬ ಗೇಯ ಪರಿಕಲ್ಪನೆಯನ್ನು ಪ್ರಶ್ನಿಸುತ್ತಾ 1950 ರಲ್ಲಿ ಮಹಾನ್ ಕವಿ ಎನ್ನಿಸಿಕೊಂಡಿದ್ದ ಫ್ರೆಂಚ್ ಕಮ್ಯೂನಿಸ್ಟ್ ಪಾಲ್ ಎಲೂವಾರ್ದ್ ಝೆಕ್ ಲೇಖಕ ಜಾವಿಸ್ ಕಲಾಂದ್ರನನ್ನು ನೇಣಿಗೆ ಹಾಕಿದ್ದನ್ನು ಒಪ್ಪಿ, ಹಾಡಿ, ಹೊಗಳುತ್ತಾನಲ್ಲ? ಎಂದು ಕೇಳುತ್ತಾನೆ. ತನ್ನ ಕೃತಿಗಳಲ್ಲಿ ‘ಕಿಚ್’ ಇಲ್ಲ ಎಂದೇನೂ ಅವನು ಹೇಳುವುದಿಲ್ಲ. ಅದು ಬದುಕಿನ ಒಂದು ಭಾಗವೂ ಹೌದು ಎಂದು ಒಪ್ಪಿಕೊಳ್ಳುವ ಕುಂದೇರಾ ಬಹುಶಃ ತನ್ನನ್ನು ಸ್ವಲ್ಪ ಮಟ್ಟಿಗಾದರೂ ಪಾರು ಮಾಡುವುದು ಅದರ ಬಗೆಗಿನ ಪ್ರಜ್ಞೆ ಮಾತ್ರ ಎಂಬ ನಿಲುವು ತಾಳುತ್ತಾನೆ.

‘ಅನುವಾದಕರೆಂಬ ಮಹಾ ದ್ರೋಹಿಗಳು!’

ಕುಂದೇರಾನ ಕೃತಿಯನ್ನು ಅನುವಾದಿಸುವ ಪ್ರಯತ್ನದಲ್ಲಿ ಅನುವಾದದ ಬಗೆಗೆ ಅವನಿಗಿದ್ದ ಮಹಾ ತಾತ್ಸಾರದ ಬಗ್ಗೆ ಬರೆಯದಿದ್ದರೆ ಅನ್ಯಾಯವಾದೀತು. ಅವನ ಪ್ರಕಾರ ‘ಡೈಜೆಸ್ಟ್’ ಪ್ರವೃತ್ತಿ ಈಗಿನ ಕಾಲದ ಧೋರಣೆಯನ್ನು ಸಮರ್ಥವಾಗಿ ಬಿಂಬಿಸುತ್ತದೆ. ಈ ಪ್ರವೃತ್ತಿ ಹಿಂದಿನ ಸಂಸ್ಕೃತಿಯ ಎಲ್ಲ ಮಹಾನ್ ಕೃತಿಗಳನ್ನು ಸಂಕ್ಷಿಪ್ತರೂಪಕ್ಕಿಳಿಸಿ ನಿಮಗೆ ಸುಲಭವಾಗಿ ಪಚನವಾಗುವಲ್ಲಿ ಸಹಾಯ ಮಾಡುತ್ತದೆ ಎಂದು ನಂಬಿಸುತ್ತದೆ. ಮಹಾನ್ ಕೃತಿಗಳನ್ನು ಚಿತ್ರರೂಪಕ್ಕೆ, ರಂಗಕ್ಕೆ ಅಳವಡಿಸುವುದೂ ಸಹ ಅದರ ರೂಪವೆ. ಹಾಗೆಯೇ ‘ಈ ಅನುವಾದಕರು ಮಹಾ ದ್ರೋಹಿಗಳು. ನಮ್ಮ ಬರವಣಿಗೆಯಲ್ಲಿ ಅಸಾಧಾರಣವಾದ್ದು, ಒರಿಜಿನಲ್ ಆದ್ದನ್ನು ಅನುವಾದಿಸಲು ಹೋಗುವುದೇ ಇಲ್ಲ. ಕೆಟ್ಟದಾಗಿ ಅನುವಾದಿಸಿದ್ದಾರೆ ಎಂದು ವಿಮರ್ಶಕರು ಕೆಂಗಣ್ಣು ಬಿಟ್ಟಾರೆಂಬ ಭಯ! ತಮ್ಮನ್ನು ಕಾಪಾಡಿಕೊಳ್ಳಲು ನಮ್ಮನ್ನು ಕ್ಷುಲ್ಲಕವಾಗಿಸಿಬಿಡುತ್ತಾರೆ. ನನ್ನ ಕೃತಿಗಳ ಅನುವಾದಗಳನ್ನು ತಿದ್ದಲು ನಾನೆಷ್ಟು ಕಾಲವನ್ನು, ಶಕ್ತಿಯನ್ನು ವ್ಯಯ ಮಾಡಿದ್ದೇನೆಂದು ನಿಮಗೆ ಗೊತ್ತಿಲ್ಲ’ ಎಂದು ಯಾವ ಎಗ್ಗೂ ಇಲ್ಲದೇ ಗುರ್ರೆನ್ನುವ ಕುಂದೇರಾ ಕನ್ನಡದ ಅನುವಾದವನ್ನು ಓದುವಂತಿದ್ದರೆ ಎಂಬ ಊಹೆಯಿಲ್ಲದೇ ಈ ಟಿಪ್ಪಣಿಯನ್ನು ಮುಗಿಸುವುದು ಸಲ್ಲದೇನೋ!