ಅಪ್ಪನ ಹೆಗಲ ಮೇಲೆ ಸವಾರಿ

 ನಮ್ಮದು ಸಣ್ಣಕುಟುಂಬ. ಅಪ್ಪ, ಅವ್ವ, ಅಕ್ಕ ಮತ್ತು ನಾನು. ಒಂದು ಬೆಕ್ಕು, ಎರಡು ನಾಯಿ, ಏಳೆಂಟು ದನಗಳು, ನಾಲ್ಕಾರು ಕೋಳಿಗಳು. ಯಾವತ್ತೊ ಒಮ್ಮೊಮ್ಮೆ ಸಾಕುತ್ತಿದ್ದ ಒಂದೆರಡು ಹಂದಿಗಳು. ನಮ್ಮ ಮನೆ ಇದ್ದುದು ವೀರಾಜಪೇಟೆಯ ಕಾಟಿಬೆಟ್ಟ ಎಂಬಲ್ಲಿ. ಕಾಟಿ ಎಂದರೆ ಕಾಡುಕೋಣ. ಕಾಟಿಗಳು ಮೇಯುತ್ತಿದ್ದ ಅರಣ್ಯದ ನಡುವೆ ನಮ್ಮದೊಂದು ಮನೆ! ಉಳಿದ ಕುಟುಂಬಗಳು ಇಲ್ಲವೆಂದಲ್ಲ, ಇದ್ದವು. ದೂರದಲ್ಲಿ-ನಾಯಿ ಬೊಗಳಿದರೆ, ಕೋಳಿ ಕೂಗಿದರೆ ಓ! ಅಲ್ಲೆಲ್ಲೊ ಮನೆಗಳಿವೆ ಎನ್ನುವಷ್ಟು ದೂರದಲ್ಲಿ! ಮನೆಗೆ ಯಾರಾದರೂ ಬಂದರಂತೂ ಬೆಲ್ಲದ ‘ಕರಿ ಕಾಫಿ’ಯ ಸತ್ಕಾರ. ಎಲೆ ಅಡಿಕೆಯ ಆತಿಥ್ಯ. ಕಾಡಿನ ಮನೆಗೆ ಬರುತ್ತಿದ್ದವರೇ ವಿರಳ. ಬಂದು ಹೊರಡುವಾಗ ಆತ್ಮೀಯ ಬೀಳ್ಕೊಡುಗೆ. ‘ಮತ್ತೆಯಾವಾಗ’ ಎನ್ನುವ ಪ್ರಶ್ನೆಯೊಂದಿಗೆ. ಕೋಟೆಯಂತೆ ಸುತ್ತುವರಿದ ಮುಳ್ಳು ಬಿದಿರ ಮೆಳೆ. ಆ ಮೆಳೆಯಿಂದ ಹೊರಡುವ ನೂರೆಂಟು ಬಗೆಯ ನಾದ! ಕ್ಷಣ ಕ್ಷಣಕ್ಕೂ ನಾದದ ಬದಲಾವಣೆ-ಬೀಸುವ ಗಾಳಿಗೆ ತಕ್ಕಂತೆ! ಕಾಡು ಪ್ರಾಣಿಗಳ ಕೂಗು ಮೈನವಿರೇಳಿಸುತ್ತಿತ್ತು.

ಮೈನವಿರೇಳಿಸುತ್ತಿತ್ತು ಎಂದರೆ ಅಂದಿನ ಕಾಲಕ್ಕೆ ಸರಿಯಲ್ಲ. ಅವು ನಮ್ಮನ್ನು ಜಾಗ್ರತಾವಸ್ಥೆಯಲ್ಲಿಟ್ಟಿದ್ದವು ಎನ್ನುವುದೇ ಸರಿ. ಯಾಕೆಂದರೆ ಅಂದಿನ ಬದುಕು ಹಾಗಿತ್ತು. ಹೊಟ್ಟೆ ತುಂಬಿದವರಿಗೆ ಆ ಕೂಗು ರೋಮಾಂಚಕಾರಿ. ಆದರೆ ಹಸಿದವನಿಗೆ? ಅರೆ! ಕ್ರೂರ ಪ್ರಾಣಿಗಳ ಆ ಕಾಡಿನಲ್ಲಿ ಮನೆ ಮಾಡಿದ್ದಾದರೂ ಯಾಕೆ? ಇಷ್ಟಗಲದ ನೆಲ ಇದ್ದುದೇ ಅಲ್ಲಿ. ನಮ್ಮ ಅಪ್ಪ ಶೂರ! ಅವ್ವ ಅಪ್ಪನಿಗಿಂತಲೂ ಒಂದು ಕೈ ಮೇಲು! ಅತ್ತ ತಿತಿಮತಿ ಎಂಬ ಪಟ್ಟಣಕ್ಕೆ ಆರೇಳು ಮೈಲಿ ದೂರ. ಇತ್ತ ಬಾಳೆಲೆ ಎಂಬ ಪಟ್ಟಣಕ್ಕೆ ಅಷ್ಟೇ ದೂರ. ಅಂದು ‘ಕಾಡಿನ ದ್ವೀಪ’ದಲ್ಲಿ ಬದುಕಿದ ಆ ದಿನಗಳು ಇಂದು ಕಾಡುತ್ತವೆ. ಕಾಡಿನ ರೋಚಕ ಅನುಭವ ಅಲೆಯಂತೆ ಬಂದು ಮುಟ್ಟುತ್ತವೆ. ನೆನಪಿನ ಕೆನ್ನೆಗೆ ಮುತ್ತಿಕ್ಕುತ್ತವೆ.

ಅಪ್ಪ ಶೂರ ಅಂದೆನಲ್ಲ? ಹೌದು ಶೂರತನ ಇದ್ದುದಕ್ಕೆ ಅಲ್ಲವೆ ಮುಳ್ಳು ಪೊದೆ ಕಡಿದು, ಮುಳ್ಳು ಬಿದಿರ ಸವರಿ ಬಯಲು ಮಾಡಿ ಕಾಡಿನ ಕೋಟೆಯೊಳಗೆ ಮನೆ ಮಾಡಿದ್ದು. ಕತ್ತಿ, ಕೊಡಲಿ, ಗುದ್ದಲಿ, ಹಾರೆ ಆಯಿತು. ಇದ್ದುದು ಅಷ್ಟೆ ಸಾಧನಗಳು. ಕೋವಿಯಲ್ಲ! ಆನೆ ಬಂದರೆ? ಕೂಗು ಹಾಕಿ ಆರ್ಭಟಿಸುವುದು. ಕಾಡಾನೆಗಳಿಗೆ ಈ ಆರ್ಭಟ ಯಾವ ಲೆಕ್ಕ? ಅದಕ್ಕೆ ಅಪ್ಪ ಮಾಡಿದ ಉಪಾಯ ಬಿದಿರು ಪಟ್ಟೆಯ ಬಿಲ್ಲು ಕಲ್ಲಿನ ಹೊಡೆತ. ಆನೆಗಳಿಗೆ ಕಣ್ಣಿನ ಬಗ್ಗೆ ಜಾಗೃತೆಯಂತೆ. ಎಲ್ಲಾದರೂ ಬಿಲ್ಲುಕಲ್ಲು ಕಣ್ಣಿಗೆ ಬಡಿದುಗಿಡಿದರೆ ಎಂದು ಭಯಗೊಂಡು ಹಿಂದಿರುಗುತ್ತವೆ. ರಾತ್ರಿ ಆನೆಗಳು ಬಂದರೆ ಇನ್ನೊಂದು ಉಪಾಯವಿದೆ. ಒಂದೋ ಬಿದಿರಿನ ಸೂಟೆಯನ್ನು ಉರಿಸಿ ಮೇಲೆ ಎತ್ತಿ ಹಿಡಿದು ಬೊಬ್ಬೆ ಹಾಕುವುದು. ಬಿದಿರಿನ ಸೋಟೆ ಅಂದರೆ ಒಣ ಬಿದಿರನ್ನು ಸಿಗಿದು ಒಬ್ಬ ಎತ್ತಿ ಹಿಡಿಯುವಷ್ಟು ದಪ್ಪದ ಹೊರೆ ಕಟ್ಟುವುದು. ಆನೆಗಳು ಬರುತ್ತಿರುವ ಸೂಚನೆ ಗೊತ್ತಾದೊಡನೆ ಈ ಸೂಟೆಗೆ ಬೆಂಕಿ ಹಿಡಿಸುವುದು. ಆನೆ ಬರುವ ದಿಕ್ಕಿನ ಕಡೆಗೆ ಅಷ್ಟೆತ್ತರದಲ್ಲಿ ಕಾಣುವಂತೆ ಎತ್ತಿ ಹಿಡಿಯುವುದು. ಬೆಂಕಿ ಕಂಡೊಡನೆ ಆನೆಗಳು ಓಡುತ್ತವೆ. ಒಂದು ವೇಳೆ ಸೂಟೆ ಅಂದು ಇಲ್ಲದೇ ಇದ್ದರೆ ಬೆಂಕಿಕೊಳ್ಳಿಯನ್ನು ಆನೆಯತ್ತ ಎಸೆಯುವುದು. ಆನೆ ಒಂದು ಹೆಜ್ಜೆಯನ್ನು ಇತ್ತ ಇಡುವುದಿಲ್ಲ ಎನ್ನುವ ಉಪಾಯ ಅಪ್ಪನಿಗೆ ಗೊತ್ತಿತ್ತು.

ಅಪ್ಪನಿಗೆ ಕೋಪ ಹೆಚ್ಚು. ಒಂದೇ ಸಾರಿ ಹೇಳುವುದು. ಕೇಳಿಸಿಕೊಳ್ಳಬೇಕು. ಕೇಳಿಸಿಕೊಳ್ಳದೆಯೋ ಅಥವಾ ಸರಿಯಾಗಿ ಅರ್ಥವಾಗದೆಯೋ ಮತ್ತೊಮ್ಮೆ ಕೇಳಿದರಂತೂ ‘ಏನು ನಿನ್ ಕಿವಿ ಕಿವುಡಾಗಿದೆಯಾ’ ಎಂದೋ ಅಥವಾ ಇನ್ನೇನೋ ಬಯ್ಗಳ ತಪ್ಪಿದ್ದಲ್ಲ. ನಾವಂತೂ ಹೆದರಿ ಹೆದರಿ ಹೇಳುವ ಉತ್ತರವೋ ನಮಗೇ ಕೇಳುತ್ತಿರಲಿಲ್ಲ. ಇನ್ನು ಅಪ್ಪನಿಗೆ ಹೇಗೆ ಕೇಳಬೇಕು? ಆಗಂತೂ ‘ನಿಮ್ಮ ನಾಲಗೆಗೆ ಏನಾಗಿದೆ’ ಎಂದು ದಪ್ಪ ಧ್ವನಿ ಮಾಡಿದರಂತೂ ನಮ್ಮ ಬಾಯಿಂದ ಸುತಾರಾಂ ಮಾತೇ ಹೊರಡದಂತೆ ಮಾಡಿಬಿಡುತ್ತಿತ್ತು. ಹೆದರಿದ ನಾವು ಅಳುತ್ತಾ ಉತ್ತರ ಒಪ್ಪಿಸುತ್ತಿದ್ದೆವು. ಅಪ್ಪ ಎಲ್ಲಾದರೂ ಹೊರ ಹೋಗಿ ಬರುವಾಗ ಕೈಯಲ್ಲಿರುವ ಚೀಲವನ್ನೋ ಮತ್ತೊಂದನ್ನೋ ಕೂಡಲೆ ಕೇಳಿ ತಕ್ಕೊಂಡರೆ ಸರಿ, ಒಂದು ವೇಳೆ ತೆಗೆದುಕೊಳ್ಳದಿದ್ದರೆ…. ಕಾಡಿನ ಕೋಟೆ ಮನೆಯಲ್ಲಿ ಲಟಾಪಟಿ. ಒಂದು ವೇಳೆ ಅಪ್ಪ ಮನೆಗೆ ಬಂದುದು ನಮಗೆ ಗೊತ್ತಾಗಲಿಲ್ಲವೆಂದಿಟ್ಟುಕೊಳ್ಳಿ, ಒಮ್ಮೆ ಕ್ಯಾಕರಿಸಿ ಉಗುಳಿ, ಕೈಯಲ್ಲಿದ್ದ ದೊಣ್ಣೆಯನ್ನು ಜಗಲಿ ಮೇಲೆ ಉರುಳಿಸುತ್ತಿದ್ದ. ದೊಣ್ಣೆ ಉರುಳುವ ಸದ್ದು ನಮಗೆ ಎಚ್ಚರಿಕೆ ಮತ್ತು ಅವ್ವನಿಗೆ ಬಯ್ಗಳದ ಸುರಿಮಳೆಯ ಸಂಕೇತ.

ಅಪ್ಪನ ಬದುಕಿನಲ್ಲಿ ಅವ್ವ ಹೇಗೆ ಹೆಗಲಿಗೆ ಹೆಗಲು ಕೊಟ್ಟಳೊ? ಅಂಥಾ ಕಡುಕೋಪದ ಅಪ್ಪನ ಹೆಗಲ ಮೇಲೆ ಕೂರುವುದುಂಟೆ? ನಾನು ಕೂತಿದ್ದೇನೆ. ನಾನು ಕೂತಿದ್ದೇನೆ ಎನ್ನುವುದಕ್ಕಿಂತ ಅಪ್ಪ ನನ್ನನ್ನು ಅದೆಷ್ಟೋ ಬಾರಿ ಪ್ರೀತಿಯಿಂದ ಹೆಗಲ ಮೇಲೆ ಕೂರಿಸಿಕೊಂಡು ತಿತಿಮತಿ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾನು ಅಪ್ಪನ ಹೆಗಲೇರಿ ಎದೆಯ ಮೇಲೆ ಕಾಲನ್ನು ಇಳಿಬಿಟ್ಟು ಹಣೆಯನ್ನೂ ಮರವನ್ನು ತಬ್ಬಿದಂತೆ ತಬ್ಬಿ ಕುಳಿತಿದ್ದೇನೆ. ಅಪ್ಪನ ಹೆಗಲೇರಿದ ಮೇಲೆ ಅಪ್ಪನಿಗಿಂತಲೂ ಮೊದಲು ಕಂಡು ‘ನೋಡಲ್ಲಿ ಹಂದಿ, ನೋಡಲ್ಲಿ ಕೋಳಿ’ ಎಂದು ತೋರಿಸುತ್ತಿದ್ದೆ. ‘ನಿನಗಿಂತಲೂ ಮೊದಲು ನಾನೇ ಕಂಡೆ’ ಎಂದು ಹೆಮ್ಮೆ ಪಡುತ್ತಿದ್ದೆ. ಕಾಡಿನ ದಾರಿಯಲ್ಲಿ ಹೀಗೆ ಅಪ್ಪ ನನ್ನನ್ನು ಹೊತ್ತುಕೊಂಡರೂ ಸುಸ್ತಾಯಿತೆಂದು ದಾರಿಯಲ್ಲಿ ಇಳಿಸಿದ್ದಿಲ್ಲ. ಆದರೆ ನನಗೇ ಆಯಾಸವಾದಂತಾಗುತ್ತಿತ್ತು. ಮರ ತಬ್ಬಿದಂತೆ ಅಪ್ಪನ ಹಣೆಯನ್ನು ತಬ್ಬಿದ್ದರಿಂದ ಅಪ್ಪನ ಹಣೆ ಬೆವರುತ್ತಿತ್ತು. ಹಾಗಾಗಿ ನನ್ನ ಕೈ ಜಾರುತ್ತಿತ್ತು. ಜಾರಿ ಅಪ್ಪನ ಕಣ್ಣಿಗೆ ನನ್ನ ಕೈ ಅಡ್ಡವಾಗುತ್ತಿತ್ತು. ದಾರಿ ಕಾಣಾದಾದಾಗ ‘ಕೈ ಸ್ವಲ್ಪ ಮೇಲೆ ಮಾಡು’ ಎನ್ನುತ್ತಿತ್ತೆ ಹೊರತು ಬಯ್ಯುತ್ತಿರಲಿಲ್ಲ. ಆದರೆ ಕೆಲವೊಮ್ಮೆ ಅಪ್ಪನ ಹೆಗಲಿಂದ ಇಳಿದು ಓಡಿಬಿಡಬೇಕೆಂದು ಅನಿಸಿದ್ದು ಉಂಟು. ಮಗ್ಗಿ ಹೇಳು ಎಂದಾಗಲೋ, ಲೆಕ್ಕ ಹೇಳುವಾಗಲೋ ನಾನಂತೂ ಚಡಪಡಿಸಿ ಕಂಗಾಲಾಗುತ್ತಿದ್ದೆ.

ನನ್ನ ‘ಸವಾರಿ’, ಅಪ್ಪನ ನಡಿಗೆ, ಕಾಡು ದಾರಿಯಲ್ಲಿ ಸಾಗುತ್ತಿತ್ತು. ಮುಂದೆ ಮುಂದೆ ಹೋದಂತೆ ತೇಗದ ತೋಪು ಸಿಗುತ್ತಿತ್ತು. ಅಲ್ಲಿ ಅರಣ್ಯ ಇಲಾಖೆಯವರು ಸಾಲಾಗಿ ನೆಟ್ಟು ಬೆಳೆಸಿದ ತೇಗದ ಮರಗಳನ್ನು ಕಂಡೊಡನೆ ಅಪ್ಪನ ಲೆಕ್ಕ ಶುರುವಾಗುತ್ತಿತ್ತು. ಒಂದು ಸಾಲಿನಲ್ಲಿ ಇಷ್ಟು ಮರಗಳಿಗೆ ಅಂತ ಸಾಲುಗಳು ಇಷ್ಟಿವೆ. ಹಾಗಾದರೆ ಒಟ್ಟು ಮರಗಳೆಷ್ಟು? ಈ ಲೆಕ್ಕ ನನ್ನ ತಲೆಗಿಂತ ಮೇಲೆ ಹಾರಿಹೋಗುತ್ತಿದ್ದವು. ನಾನು ಏನೋ ಗುನುಗುತ್ತಿದ್ದೆ. ನನ್ನ ಬಾಯಿಗಿಂತಲೂ ಕೆಳಗಿದ್ದ ಅಪ್ಪನ ಕಿವಿಗೆ ಏನೆಂದು ಕೇಳುತಿತ್ತೊ… ಹೀಗೆ ಹಲವಾರು ಬಾರಿ ಅಪ್ಪನ ಹೆಗಲೇರಿದ ನಾನು ಕೆಳಗಿಳಿದ ಕೂಡಲೆ ನಡೆಯಲಾಗುತ್ತಿರಲಿಲ್ಲ. ಕಾಲು ಇಳಿಬಿಟ್ಟು ಕುಳಿತುದರಿಂದ ನನ್ನ ಎರಡೂ ಕಾಲುಗಳಿಗೆ ಸರಿಯಾಗಿ ರಕ್ತ ಸಂಚಾರವಾಗದೆ ಜುಂಗುಟ್ಟುತ್ತಿತ್ತು. ತಿತಿಮತಿಯಲ್ಲಿ ನನ್ನನ್ನು ಇಳಿಸಿದ ನಂತರ ನಮ್ಮ ಹೆಜ್ಜೆ ಹೋಟೆಲ್‌ನತ್ತ ಸಾಗುತ್ತಿತ್ತು. ತಿಂದುಂಡು ಮಜಾ ಮಾಡಲಲ್ಲ. ನೀರು ಕುಡಿದು ಸುಧಾರಿಸಿಕೊಳ್ಳಲು! ಅಪ್ಪ ಕುದುರೆ, ನಾನು ಸವಾರ. ಬಾಯಾರಿಕೆ ಆದುದು ಕುದುರೆಗೆ!

ಅಪ್ಪನಿಗೆ ಆಸೆ ಇತ್ತು. ಆದರೆ ಕೈಗೆಟುಕುತ್ತಿರಲಿಲ್ಲ. ರೋಷ ಇತ್ತು. ಅದರೊಳಗೆ ಪ್ರೀತಿ ಅಡಗಿತ್ತು. ಹೋಟೆಲ್ ಎಂದೆನಲ್ಲ -ನೀರು ಕುಡಿದ ದಿನವೂ ಇತ್ತು. ಬೊಳ್ಳ ಚಾಯ ಕುಡಿದ ದಿನವೂ ಇತ್ತು. ಬೊಳ್ಳ ಎಂದರೆ ನೀರು. ಚಾಯ ಎಂದರೆ ಚಹ ಎಂದರ್ಥ. ಅಂದರೆ ‘ನೀರಿಗೆ ಹಾಲು’ ಹಾಕಿ ಸಕ್ಕರೆ ಬೆರೆಸಿದ ಬಿಳಿ ಬಣ್ಣದ ಬಿಸಿ ಪಾನೀಯ ! ಒಂದು ಚಿಟಿಕೆಯಷ್ಟು ಚಹ ಪುಡಿ ಹಾಕಿರುವುದಿಲ್ಲ. ಆದರೂ ಬಿಳಿ ನೀರಿಗೆ ಚಹ ಎಂಬ ನಾಮಕರಣ! ಅಪ್ಪ ಕುಡಿಯುತ್ತಿದ್ದುದೂ ಅದನ್ನೆ, ನನಗೆ ಕುಡಿಸುತ್ತಿದ್ದುದೂ ಅದನ್ನೇ. ಅದರ ಬೆಲೆ ಅಂದು ಹತ್ತು ಪೈಸೆ! ಹೀಗೆ ಅಪ್ಪ ಮಗನ ಸವಾರಿ ಗೋಣಿಕೊಪ್ಪದ ಸಂತೆಗೂ ಹೋಗಿದೆ.

ಅಪ್ಪನ ಜಾಣತನ ನನಗೆ ಗೊತ್ತಾದುದು ಸಂತೆಯಲ್ಲಿ! ಹೇಗಂತಿರಾ? ಅರ್ಧ ಕೆ.ಜಿ. ಬೆಲ್ಲ ಬೇಕಾದರೆ ಐದಾರು ಅಂಗಡಿಗೆ ಹೋಗಿ ಅದರ ಬೆಲೆ ಕೇಳುವುದು. ಐದು ಪೈಸೆ ಕಡಿಮೆ ಬೆಲೆ ಹೇಳಿದ ಅಂಗಡಿಯಿಂದ ಬೆಲ್ಲ ತೆಗೆದುಕೊಳ್ಳುವುದು. ಒಣ ಮೀನಿನ ವ್ಯಾಪಾರದಲ್ಲಿ ಹಾಗೆ. ನಾಲ್ಕಾರು ಅಂಗಡಿ ಸುತ್ತಿ ಕಡಿಮೆ ಎಲ್ಲಿದೆ ಅಲ್ಲಿ ಮೀನು ತೆಗೆದುಕೊಳ್ಳುವುದು. ಹೊಗೆಸೊಪ್ಪು, ನಶ್ಯ ಹೀಗೆ… ಯಾವುದನ್ನೇ ತೆಗೆದುಕೊಳ್ಳಬೇಕಾದರೂ ಒಂದೇ ಅಂಗಡಿಯಲ್ಲಿ ಒಂದೇ ಮಾತಿಗೆ ವ್ಯಾಪಾರ ಮಾಡುತ್ತಲೇ ಇರಲಿಲ್ಲ. ಕಡಿಮೆ ಬೆಲೆಗೆ ಎಲ್ಲಿ ವಸ್ತು ಸಿಗುತ್ತದೋ ಅಲ್ಲಿ ಕೊಂಡುಕೊಳ್ಳುವುದು. ಹೀಗಾಗಿ ಹತ್ತೋ ಇಪ್ಪತ್ತೋ ಪೈಸೆ ಉಳಿಯುತ್ತಿತ್ತು. ಹೀಗೆ ಉಳಿಸಿದ ಹತ್ತಿಪ್ಪತ್ತು ಪೈಸೆ ಜೇಬಿನಲ್ಲಿರುತ್ತಿತ್ತು. ಇನ್ನೊಮ್ಮೆಗೆ ಆ ದುಡ್ಡು, ಬಳಕೆಯಾಗುತ್ತಿತ್ತು. ಅಂದು ಪೈಸೆಗೂ ಬೆಲೆ ಇದ್ದ ಕಾಲ. ನಲವತ್ತು ವರ್ಷಗಳ ಹಿಂದಿನ ಮಾತು!

ನಂತರ ನಮ್ಮ ಸವಾರಿ ಗೋಣಿಕೊಪ್ಪದ ‘ಚಡಖಾನ್’ ಬಟ್ಟೆ ಅಂಗಡಿಯತ್ತ… ನಾನಂತೂ ಕುಣಿದಾಡಿದೆ. ಹೊಸಾ ಬಟ್ಟೆ! ಅಪ್ಪ ಅಂಗಡಿಗೆ ನುಗ್ಗಿದೊಡನೆ ಅತ್ಯಂತ ಹೆಚ್ಚು ಬೆಲೆಯ ಬಟ್ಟೆಯನ್ನು ಎಳೆದು ನೋಡಿ ನನಗೆ ತೋರಿಸುತ್ತಿತ್ತು. ನಂತರ ಮತ್ತೊಂದು ಬೆಲೆಯ ಬಟ್ಟೆ. ಹೀಗೆ ಹಲವಾರು ಬಗೆಯ ಬಟ್ಟೆಯನ್ನೆಲ್ಲಾ ನೋಡಿ ನೋಡಿ ನನಗೆ ಇದರಲ್ಲಿ ಯಾವುದು ಎಂದು ಆಯ್ಕೆ ಮಾಡುವಲ್ಲಿ ವಿಫಲನಾಗುತ್ತಿದ್ದೆ. ಆದರೆ ಕೊನೆಗೆ? ಅತ್ಯಂತ ಕಡಿಮೆ ಬೆಲೆಯ ಖೋರಾ (ಕೋರಾ) ಬಟ್ಟೆ ನನಗೆ ದಕ್ಕುತ್ತಿತ್ತು. ಹೀಗೇಕೆ ಮಾಡಿದೆ ಎಂದು ಅಪ್ಪನನ್ನು ಕೇಳುವ, ಅದು ನನಗೆ ಬೇಡ ಎಂದು ತಿರಸ್ಕರಿಸುವ ಧೈರ್ಯ ನನಗೆಲ್ಲಿಂದ ಬರಬೇಕು? ಇನ್ನು ನಮ್ಮ ಸವಾರಿ ಮಿಠಾಯಿ ಅಂಗಡಿಯತ್ತ. ಬಾಂಬೆ ಮಿಠಾಯಿ ಅಂಗಡಿ ಅಂದು ಬಹು ಹೆಸರುವಾಸಿ. ಅಂಗಡಿ ಮುಂದೆ ನಿಂತರೆ ಪರಿಮಳವೋ ಪರಿಮಳ. ಬಾಯಿ ನೀರು ಕುಡಿದುಕೊಂಡೆ. ಆ ಸಿಹಿ ತಿಂಡಿಗೆ ಜೇನು ನೊಣಗಳು ಮುಗಿಬೀಳುತ್ತಿದ್ದವು. ಅವುಗಳೇ ಎಷ್ಟೋ ವಾಸಿ. ಜಿಲೇಬಿ, ಜಹಂಗೀರು, ಬೂಂದಿ….. ಯಾವುದೆಂದರೆ ಯಾವು ಯಾವುವೋ… ಜೇನುನೊಣಗಳಿಗೆ ಸ್ವಾತಂತ್ರ್ಯ! ಅಪ್ಪ ಆ ತಿಂಡಿಗಳ ಬೆಲೆ ಕೇಳಿ ನಂತರ ‘ಅದೆಲ್ಲಾ ನಾವು ತಿನ್ನುವಂಥದ್ದಲ್ಲಾ ಮಗನೆ’ ಎನ್ನುತ್ತಾ ಬೇರೊಂದು ಅಂಗಡಿಯಲ್ಲಿ ಗೋಲಿ ಮಿಠಾಯಿ ಕೊಡಿಸಿ ನನ್ನ ದುಃಖದ ನನ್ನ ಆಸೆಯ ಮನಸ್ಸಿಗೆ ಸಮಾಧಾನ ಹೇಳಿದ ಅಪ್ಪನ ಮನದ ನೋವು ಅಂದು ನನಗಂತೂ ಅರ್ಥವಾಗಿರಲಿಲ್ಲ.

ಇನ್ನೊಮ್ಮೆ ಸೋಡಾ ಫ್ಯಾಕ್ಟರಿಗೆ ಹೋದೆವು. ಬಣ್ಣ ಬಣ್ಣದ ಸೋಡಾ ಅಲ್ಲಿ ತಯಾರಾಗುತ್ತಿತ್ತು. ನಾನು ಪಿಳಿ ಪಿಳಿ ನೋಡುತ್ತಾ ನಿಂತೆ. ಕಿತ್ತಲೆ ಬಣ್ಣದ ಸೋಡಾ ನನ್ನ ಮನಸ್ಸನ್ನು ಸೆಳೆಯಿತು. ಸ್ವಲ್ಪ ಹೊತ್ತಿನ ಬಳಿಕ ಅಪ್ಪ ಆ ಬಾಟಲಿಗಳಲ್ಲಿರುವ ಸೋಡಾದ ಬಗ್ಗೆ ವಿವರ ನೀಡಿತು. ಅವರಿವರು ಬಂದು ಸೋಡಾ ಕುಡಿದು ಹೋಗುತ್ತಿದ್ದರು. ನನಗೆ ಆ ಬಾಟಲಿಯ ಅಂದ ಚೆಂದ ಸಂತಸ ನೀಡಿತು. ಟಶ್ಶೂ… ಟಶ್ಶೂ… ಸೋಡಾ ಬಾಟಲಿಯನ್ನು ತೆರೆಯುವಾಗಿನ ಸದ್ದು. ಆಗ ಬಾಟಲಿಯೊಳಗಿನ ಗೋಲಿ ಸೋಡಾದ ಒಳಗೆ ಮುಳುಗಿ ಮೇಲೆದ್ದು ಬಾಟಲಿಯ ಕುತ್ತಿಗೆಗೆ ಬರುತ್ತಿತ್ತು. ಆಹಾ! ನನಗೆ ಆ ಗೋಲಿ ಬೇಕಿತ್ತು! ಸಿಗುವುದೆಂತು? ಅದಿರಲಿ, ಅಪ್ಪ ‘ಖಾಲಿ ಸೋಡಾ’ ಬಾಟಲಿ ಕೊಡುವಂತೆ ಹೇಳಿತು. ಅಂಗಡಿ ಹುಡುಗ ಬಾಟಲಿ ಮೇಲೆ ಮರದ ಸಾಧನವೊಂದನ್ನು ಇಟ್ಟು ಬಲವಾಗಿ ಅದುಮಿದ. ಟಶ್ಶೂ… ಗೋಲಿ ನೊರೆಯೊಳಗೆ ಕೆಳಗಿಳಿಯಿತು. ಹೊಗೆ ಹೊರಗೆ ದಾಟಿತು. ‘ಕುಡೀಮನೆ(ಮಗನೆ)’ ಅಂತ ಹೇಳಿ ಬಾಟಲಿ ನನ್ನ ಕೈಗಿಟ್ಟಿತು. ನಾನು ಬಾಟಲಿಯನ್ನು ಬಾಯಿಗಿಟ್ಟೆ. ಸೋಡಾ ಬಾಯಿಗೆ ಇಳಿಯಲಿಲ್ಲ! ಅರೆ! ಇದೇಕೆ ಹೀಗೆ? ಓ! ಬಾಟಲಿಯನ್ನು ತಿರುಗಿಸಿ ಬಾಯಗಿಡಬೇಕು ಆಗ ಗೋಲಿ ಸೋಡಾಕೆ ದಾರಿ ಮಾಡುತ್ತದೆ. ಸರಿ, ಹಾಗೆ ಮಾಡಿ ಬಾಯಿಗಿಟ್ಟೆ. ಸೋಡಾ… ಅಯ್ಯಯ್ಯೋ ಸಪ್ಪೇ ಬರೀ ಸಪ್ಪೆ, ಗ್ಯಾಸ್ ಬೇರೆ… ಉಗುಳಲೆ? ಊಹುಂ ಉಗುಳಿದರೆ ಅಪ್ಪನ ಕೆಂಪುಕಣ್ಣು ನನ್ನನ್ನು ಹೆದರಿಸಿತು.

ಡಾಗ್ ಎಂಬ ನಾಯಿ ಮತ್ತು ಹಕ್ಕಿ ಹಾಡಿನ ದೆವ್ವ

ಅಪ್ಪ ಓದಿದ್ದು ಒಂದನೆಯೋ ಎರಡನೆಯೋ… ಲೆಕ್ಕ, ಮಗ್ಗಿ ಗೊತ್ತು. ಇಂಗ್ಲೀಷ್ ಓದಲು ಬರೆಯಲು ಗೊತ್ತಿಲ್ಲ. ಆದರೆ ಸಹಿ ಮಾಡುತ್ತಿದ್ದುದು ಇಂಗ್ಲೀಷ್‌ನಲ್ಲೆ ! ಇಂಗ್ಲೀಷ್ ಅಭಿಮಾನದಿಂದ ಅಪ್ಪ ನಮ್ಮ ನಾಯಿಗೆ ಡಾಗ್ ಎಂದು ನಾಮಕರಣ ಮಾಡಿತ್ತು. `ಡಾಗ್ ನಾಯಿ ಡಾಗ್ ನಾಯಿ ಬಾ` ಅಂತ ನಾಯಿಯನ್ನು ಕರೆದಾಗ ನಮಗಂತೂ ನಗುವೋ ನಗು. ಮತ್ತೆ ನಾವೂ ಕೂಡ ಹಾಗೇ ಕರೆಯುತ್ತಿದ್ದೆವು. ಮನೆಗೆ ಯಾರಾದರೂ ಬಂದರಂತೂ ಡಾಗ್ ನಾಯಿಯನ್ನು ಕಟ್ಟಲೇ ಬೇಕು. ಬಂದವರೂ ಕೂಡ ‘ಡಾಗ್ ನಾಯೀನ ಕಟ್ಟೀದೀರಿ ತಾನೆ’ ಎಂದೇ ಕೇಳುತ್ತಿದ್ದರು.

ನಮ್ಮ ಅವ್ವ ಅನಕ್ಷರಸ್ಥೆ. ಕೂಡಲು ಕಳೆಯಲು ಗೊತ್ತು. ಬಾಯಿ ಲೆಕ್ಕದ ಪ್ರವೀಣೆ. ಸಾಧು ಸ್ವಭಾವದ ಅವ್ವ ಧೈರ್ಯವಂತೆ. ರಾತ್ರಿ ಹಗಲು ಎರಡೂ ಒಂದೇ. ಕೈಯಲ್ಲೊಂದು ದೊಣ್ಣೆ ಇದ್ದರೆ ಸಾಕು ಸಮಯದ ಪರಿವೇ ಇಲ್ಲದೆ ನಡುಕಾಡಿನಲ್ಲೂ ನಡೆದಾಡಬಲ್ಲ ಧೀರೆ. ‘ಅವ್ವಾ ನಿಂಗೆ ಹೆದ್ರಿಕೆ ಆಗಲ್ವಾ?’ ಅಂತ ಕೇಳಿದ್ರೆ ‘ಕೈಯಲ್ಲಿ ದೊಣ್ಣೆ ಇದ್ರೆ ಯಾಕೆ ಹೆದ್ರಬೇಕು? ಪೊದೆಗೆ ಒಂದೆರಡು ಸತಿ ಬಡಿದರೆ ಆ ಸದ್ದಿಗೆ ಪ್ರಾಣಿಗಳು ಹೆದ್ರಿ ಓಡ್ತವೆ’ ಅಂತ ಹೇಳ್ತಾ ಇದ್ದಳು. ದೆವ್ವ ಗಿವ್ವಾ ಅಂತ ಒಮ್ಮೆಯೂ ಹೆದರಿಕೊಂಡವಳಲ್ಲ. ದೆವ್ವದ ಹತ್ತಾರು ಕಥೆ ಗೊತ್ತು. ಆದರೆ ಅದೆಲ್ಲಾ ಸುಳ್ಳು ಅಂತ ಹೇಳಿ ನಮಗೆ ಧೈರ್ಯ ತುಂಬಿದಾಕೆ.

ನಮ್ಮ ಅಪ್ಪ ಅಮ್ಮ ಊರಿಂದೂರಿಗೆ ವಲಸೆ ಹೋಗಿ ನೆಲೆ ನಿಂತಿದ್ದು ಕಾಟಿಬೆಟ್ಟದ ಕಾಡಿನಲ್ಲಿ ಅಂತ ಹಿಂದೆ ಹೇಳಿದ್ದೆ. ಹೀಗೆ ಅಲೆದಾಟದ ಬದುಕಿನಲ್ಲಿ ಹುಟ್ಟಿದ ಮಗು ನನ್ನ ಅಕ್ಕ. ಅದೋ ಏಳು ತಿಂಗಳಲ್ಲೇ ಭೂಮಿಗಿಳಿದ ಪುಣ್ಯಾತಗಿತ್ತಿ. ಅವ್ವ ಆ ಎಳೆ ಮಗುವಿನ ಜೀವ ಹೇಗೆ ಉಳಿಸಿದಳೊ! ಇಂದಿನಂತೆ ಅಂದು ಇನ್ಕ್ಯುಬೇಟರ್ ಇರಲಿಲ್ಲ. ಇದ್ದರೂ ಅಂದಿನ ಆ ಬಡತನದಲ್ಲಿ ಆಗುತ್ತಿತ್ತೇ? ಎರಡು ಗಾಜಿನ ಸೀಸೆಗೆ ಬಿಸಿ ನೀರು ತುಂಬಿ ಆಚೆ ಈಚೆ ಸೀಸೆ ಮಡಗಿ ಮಧ್ಯದಲ್ಲಿ ಮಗುವನ್ನು ಮಲಗಿಸುತ್ತಿದ್ದಳಂತೆ! ಅಂತೂ ಇಂತೂ ಅಕ್ಕ ಉಳಿಯಿತು. ಅವ್ವ ಸದಾ ಆಶಾವಾದಿ. ಒಮ್ಮೆಯೂ ಕೂಡ ಮುಂದೆ ಬದುಕು ಹೇಗಪ್ಪಾ ಎಂದವಳಲ್ಲ. ಎಷ್ಟೇ ಕಷ್ಟವಾದರೂ ಶಾಲೆಗೆ ಹೋಗಬೇಡಿ ಎಂದವಳಲ್ಲ.

ಹೊತ್ತು ಹೊತ್ತಿಗೆ ಎಂತದೋ ಒಂದು ಇರುತ್ತಿತ್ತು. ಬೇಯಿಸಿದ ಕುಂಬಳ ಕಾಯಿಯೋ, ಕಾಡು ಗೆಣಸೋ, ಪಪ್ಪಾಯಿಯೋ….. ಹೀಗೆ ಏನಾದರೂ ನಮ್ಮ ಹೊಟ್ಟೆ ಸೇರುತ್ತಿತ್ತು. ಅಂದು ಇದ್ದುದು ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೂ ಒಂದೇ ಬಗೆಯ ಸಾಬೂನು. ಸಾಬೂನು ತರುತ್ತಿದ್ದುದು ಆಗ ಗೀಟು ಲೆಕ್ಕದಲ್ಲಿ. ಎರಡು ಗೀಟು ಸಾಬೂನು ಇಡೀ ತಿಂಗಳಿಗಾಗುತ್ತಿತ್ತು! ಅದಕ್ಕೆ ಅವ್ವನ ಉಪಾಯ ಗೊತ್ತಾ? ನೀರಿಗೆ ಬೂದಿಯನ್ನು ಸುರಿದು ತಿರುಗಿಸಿ ಅದಕ್ಕೆ ಬಟ್ಟೆಯನ್ನು ಅದ್ದಿಡುವುದು. ನಂತರ ಕಾರೆ ಕಾಯಿಯನ್ನು ಸಾಬೂನು ಬದಲಿಗೆ ಬಳಸುವುದು.

ರಾತ್ರಿ ಮಲಗುವಾಗ ಒಂದು ಕಡೆ ನಾನು, ಇನ್ನೊಂದು ಕಡೆ ಅಕ್ಕ ಅವ್ವನನ್ನು ನಡುವೆ ಮಲಗಿಸಿಕೊಂಡು ತಬ್ಬಿಕೊಳ್ಳುತ್ತಿದ್ದೆವು. ಅವ್ವಾ ಕತೆ ಹೇಳವ್ವಾ ನಮ್ಮ ರಾಗ ಸುರುವಾಗುತ್ತಿತ್ತು. ಕಾಡಿನ ಏಕಾಂತ ಮನೆಯಲ್ಲಿ ಕಥೆಯ ಸಂಭ್ರಮ…. ಏಳು ಸಮುದ್ರ ದಾಟಿದ ರಾಜಕುಮಾರನ ಕಥೆ, ರಾಜಕುಮಾರಿ ಮತ್ತು ಗಿಣಿ, ರಕ್ಕಸಿ ಮತ್ತು ಹುಡುಗ, ಕಪಿ ಮತ್ತು ಹೆಂಗಸು, ಒಂದು ರಾತ್ರಿಗೆ ಒಂದು ಕಥೆ. ಕಥೆ ಮುಗಿಯಿತೋ…. ಅವ್ವಾ ಪದ ಹೇಳವ್ವಾ ಅಂತ ಪೀಡಿಸುತ್ತಿದ್ದೆವು. ಆಗ ಸೋಬಾನೆ ಪದ ಹೇಳುತ್ತಿದ್ದಳು.

ಒಂದೇ ಕಥೆಯನ್ನು ಅದೆಷ್ಟೋ ಬಾರಿ ಹೇಳಿಸಿಕೊಂಡಿದ್ದೇವೆ. ಸೋಬಾನೆಯನ್ನು ಕೂಡ ! ಕೆಲವೊಮ್ಮೆ ಕಥೆ ಅಥವಾ ಹಾಡು ಅರ್ಧಕ್ಕೆ ನಿಂತು ಹೋಗಿದ್ದೂ ಉಂಟು! ಬೇಸಿಗೆ ರಾತ್ರಿ ಭಯಾನಕ ಆದದ್ದಿದೆ. ಕಾಡುಪ್ರಾಣಿಗಳು ಒಣ ಎಲೆ, ಒಣ ಕಾಡನ್ನು ತುಳಿಯುವ ಸದ್ದು ಬಲು ದೂರಕ್ಕೆ ಕೇಳುತ್ತದೆ. ಆ ಥರಾ.. ದರಾ.. ಬರಾ.. ಪಟಾ ಪಟಾ.. ಸದ್ದಿಗೆ ನಾಯಿಗಳು ರಾತ್ರಿಯಿಡೀ ಬೊಗಳುತ್ತಾ ಎಚ್ಚರದಿಂದ ನಮ್ಮನ್ನು ಕಾಪಾಡಿವೆ. ಆನೆಯೋ, ಕಾಟಿಯೋ, ಕಡವೆಯೋ…. ನಾವಂತೂ ಅವ್ವಾ ಕತೆ ಬೇಡವ್ವಾ ಎನ್ನುತ್ತಾ ಅವ್ವನನ್ನು ಇನ್ನು ಬಿಗಿಯಾಗಿ ತಬ್ಬಿದ ರಾತ್ರಿಗಳು ಅದೆಷ್ಟೋ.

ಒಮ್ಮೊಮ್ಮೆ ಸಂಜೆ ಹೊತ್ತಿನಲ್ಲಿ ಅಥವಾ ರಾತ್ರಿ ಕಾಡಿನೆಡೆಯಿಂದ ಕರ್ಕಶವಾದ ಕೂಗು ಕೇಳುತಿತ್ತು. ಒಮ್ಮೆ ಅಲ್ಲಿ ಆ ಕೂಗು ಕೇಳಿದರೆ ಮತ್ತೊಮ್ಮೆ ಇಲ್ಲಿ ಕೇಳುತಿತ್ತು. ನಾವಂತೂ ಹೆದರಿ ಅವ್ವನನ್ನು ಒತ್ತಿ ಕೂರುತ್ತಾ, ಅದೆಂತವ್ವಾ….! ನಡಗುವ ಧ್ವನಿಯೊಡನೆ ಕೇಳುತ್ತಿದ್ದೆವು.
ಆ ಕೂಗು ಮರದ ಮೇಲಿನದು ಏನಿರಬಹುದು?
ಅದೊಂದು ಹಕ್ಕಿ !
ಅಯ್ಯಯ್ಯೋ ಹಕ್ಕಿಯ ಕೂಗಿಗೆ ಹೆದರುವುದೇ?
ಹೌದು,
ಮೌನ ರಾತ್ರಿಯಲ್ಲಿ ಕ್ಕೂ…. ವಾ…. ಕ್ಕೂ…. ವಾ ಹೆದರದೆ ಮತ್ತೇನು?
ಅದು ಜೇನು ಕುರುಬರ ದೆವ್ವಾ ಅಂತ ಅವ್ವ ಹೇಳಿದಳು.
ನಾವು ಗುಬ್ಬಚ್ಚಿಗಳೇ ಸೈ. ದೆವ್ವಾ ಅಂದ ಮೇಲೆ ಭಯವೇ. ಆದರೂ ಕಥೆ ಕೇಳುವಾಸೆ.
ಅವ್ವಾ ಕುರುಬರ ದೆವ್ವ ಕತೆ ಹೇಳವ್ವಾ….

ಅವ್ವಾ ಹೇಳತೊಡಗಿದಳು…
ಅವರು ಜೇನು ಕುರುಬರು. ಅಣ್ಣ ತಮ್ಮ ಇಬ್ಬರು ಜೇನು ಬೇಟೆಗೆಂದು ಹೋಗಿದ್ದಾಗ ಹೆಮ್ಮರದಲ್ಲಿ ಜೇನು ಕಾಣಿಸಿತಂತೆ. ಸಂಜೆ ಜೇನು ಕುಯ್ಯೋಣ. ಈ ಉರಿಬಿಸಿಲಿಗೆ ಬೇಡ ಎನ್ನುತ್ತಾ ಹಾಡಿಗೆ ಬಂದರಂತೆ. ಸಂಜೆ ಇಬ್ಬರು ಆ ಹೆಜ್ಜೇನು ಕುಯ್ಯಲು ಹೋದರು. ಅದು ದೊಡ್ಡ ಮರ ಬೇರೆ. ಹಾಗಾಗಿ ಮರಕ್ಕೆ ಕಾಡು ಬಳ್ಳಿಯನ್ನು ಸುತ್ತಿ ಏಣಿಕಟ್ಟಿ ಹತ್ತುವ ಏರ್ಪಾಡು ಮಾಡಿದರು. ಅಣ್ಣ ಮರ ಹತ್ತಿದ. ಜೇನು ಕುಯ್ದು ಇಳಿಸಿದ. ಯಾವಾಗ ಜೇನು ಕೆಳಗಿಳಿದು ತಮ್ಮನು ಕೈಸೇರಿತೋ ತಮ್ಮನಿಗೆ ದುರಾಸೆ ಆಯಿತು. ಜೇನನ್ನು ಪಕ್ಕಕ್ಕಿಟ್ಟು ಮರಕ್ಕೆ ಕಟ್ಟಿದ ಹಗ್ಗವನ್ನು ಕತ್ತರಿಸಿ ಏಣಿಯನ್ನು ತೆಗೆದುಬಿಟ್ಟ! ಯಾಕೆ ಹೀಗೆ ಮಾಡಿದೆ ಎಂದು ಅಣ್ಣ ಕೇಳುವ ಮೊದಲೇ ತಮ್ಮ ಜೇನಿನೊಡನೆ ಜಾಗ ಖಾಲಿ ಮಾಡಿದ!

ತಮ್ಮ ತನ್ನ ಪಾಡಿಗೆ ಹಾಡಿಯತ್ತ ನಡೆದ. ಅಣ್ಣ ಮರದಲ್ಲೇ ಉಳಿದ ರಾತ್ರಿಯಿಡೀ ಮರದಲ್ಲೇ ಕಾಲ ಕಳೆದ. ಹಾಡಿಯಲ್ಲಿ ಹೆಂಡತಿ ಗಂಡನಿಗಾಗಿ ಕಾದಳು. ಮೈದುನನಿಂದ ಸರಿಯಾದ ಉತ್ತರ ಸಿಗಲಿಲ್ಲ. ಅವನಲ್ಲಿ ಮತ್ತೇನು ದುರಾಸೆ ಇತ್ತೋ?
ಗಂಡನಿಗಾಗಿ ಚಡಪಡಿಸಿದ ಈಕೆ ಬೆಳಗಾಗುವುದನ್ನೇ ಕಾದಳು, ಬೆಳಗಾಯಿತು. ಮೈದುನ ಹರಶಿವಾ ಅಂತ ಬಾಯಿಬಿಡುತ್ತಿಲ್ಲ. ನಿನ್ನೆ ಯಾವ ಕಡೆಗೆ ಹೋದುದೆಂದೂ ಹೇಳಲಿಲ್ಲ. ಕಾಡಿನಲ್ಲಿ ಜೇನಿಗಾಗಿ ನಡೆದ ದಾರಿ ಯಾವುದು? ಹೆಂಡತಿ ಕಾಡನೆಲ್ಲಾ ಸುತ್ತಿದಳು. ಬಾಯಿಗೆ ಕೈ ಮಡಗಿ ಜೋರಾಗಿ ಕೂಗಿದಳು. ಹೀಗೆ ಕೂಗುತ್ತಾ ಕೂಗುತ್ತಾ ನಡೆದಳು.

ಅಲ್ಲೆಲ್ಲೋ ದೂರದಲ್ಲಿ ಜೇನ್ನೊಣಗಳ ಗುಂಯ್ ಸದ್ದು ಕೇಳುತಿತ್ತು. ಆ ಸದ್ದನ್ನು ಆಲಿಸುತ್ತಾ ಆಲಿಸುತ್ತಾ ಹೋದಳು. ಅಲ್ಲಿಂದ ಮತ್ತೊಂದು ಸದ್ದು….
ಅಯ್ಯೋ ಅಯ್ಯೋ ಎಂಬ ನರಳಾಟ. ಅತ್ತ ಓಡಿದಳು ಹೌದು, ತನ್ನ ಗಂಡನ ನರಳುವ ಸದ್ದಿಗೆ ಈಕೆ ಜೋರಾಗಿ ಕೂಗಿದಳು. ಹೆಮ್ಮರದಲ್ಲಿ ಆತ ಜೇನ್ನೊಣಗಳ ಕಡಿತಕ್ಕೆ ಸಿಕ್ಕಿ ಚಡಪಡಿಸುವುದನ್ನು ನೋಡಲಾಗುವುದಿಲ್ಲ.
ಇಳಿದು ಬನ್ನೀ….
ಗಂಡನ ರೋದನ ಯಾಕೆ ಹೀಗೆ?
ಎಂತೆಂಥಾ ಮರ ಏರಿ ಇಳಿದ ತನ್ನ ಗಂಡ ಇಂದೇಕೆ ಹೀಗೆ?
ಓ! ಹಗ್ಗ ಹರಿದಿದೆ, ಏಣಿ ಕಳಚಿದೆ ಇನ್ನು ಇಳಿಯುವುದೆಂತು?
ನೀಚ ಮೈದುನ ಹೀಗೆ ಮಾಡಿದನೆ?
ನಾನೇನು ಮಾಡಲಿ?

ಚೆನ್ನೀ…. ಹಾಡಿಗೆ ಹೋಗು ಬೇಗ ಹೋಗು. ಒಂದು ಮೊರ, ಸೋರೆ ಬುರುಡೆ, ಮಸಿ ತಕ್ಕೊಂಡು ಬಾ….. ಗಂಡ ಅಷ್ಟು ಹೇಳಿದ್ದೇ ತಡ ಈಕೆ ಹಾಡಿಗೆ ಓಡಿದಳು. ಈ ಎಲ್ಲಾ ವಸ್ತುಗಳನ್ನು ತಂದಳು. ಹೊತ್ತು ನೆತ್ತಿಗೇರಿದೆ. ಹೆಜ್ಜೇನು ನೊಣಗಳು ರೋಷಗೊಂಡಿವೆ. ಬಂದೇ ತಂದೇ ಎನ್ನುತ್ತ ಮರದಡಿಗೆ ನಡೆದಳು.
ಚೆನ್ನೀ…. ಅದೆಲ್ಲವನ್ನು ಮರದ ಬುಡದಲ್ಲೇ ಇಟ್ಟು ತಿರುಗಿ ನೋಡದೆ ಹೋಗು ಎಂದು ಗಂಡ ನುಡಿದ ಚೆನ್ನಿ ಮೊರ, ಸೋರೆ ಬುರುಡೆ, ಮಸಿ ಎಲ್ಲವನ್ನು ಜೋಡಿಸಿ ಮರದ ಕೆಳಗಿಟ್ಟು ಹೊರಟಳು. ತಿರುಗಿ ನೋಡಬೇಡ ಎಂದು ಆತ ಮತ್ತೊಮ್ಮೆ ಹೇಳಿದ. ಚೆನ್ನಿ ಅಷ್ಟು ದೂರ ನಡೆದಳು.
ಆಗ ಹೆಮ್ಮರ ಬಾಗಿತು, ಮತ್ತೂ ಬಾಗಿತು. ಚೆನ್ನಿ ಆಸೆಯ ಕಣ್ಣುಗಳಿಂದ ಹಿಂತಿರುಗಿ ನೋಡಿಯೇ ಬಿಟ್ಟಳು.
ಬಾಗಿದ ಮರ, ಇನ್ನೇನು ತನ್ನ ಗಂಡ ನೆಲಕ್ಕಿಳಿಯಬೇಕೆನ್ನುವಷ್ಟರಲ್ಲಿ ಮರ ಮತ್ತೆ ಮೇಲೇರಿತು!
ಅಯ್ಯೋ ಚೆನ್ನೀ – ನೀ ಮುಂಡೆಯಾದೆಯಲ್ಲೇ ಗಂಡನ ದುಗುಡ ತುಂಬಿದ ಮಾತು. ಚೆನ್ನಿಯ ಎದೆ ಒಡೆದಂತಾಯಿತು.
ಮರ ಮತ್ತೆ ಬಾಗಿ ಬರುವುದಿಲ್ಲ ಗಂಡ ತನ್ನ ಪಾಲಿಗಿಲ್ಲ.
ಹಾ! ವಿಧಿಯೆ?
ಆತ ಮರದಲ್ಲೇ ಉಳಿದ. ಊಟವಿಲ್ಲ, ನಿದ್ದೆಯಿಲ್ಲ, ಸಂಸಾರವಿಲ್ಲ, ನೀರಿಲ್ಲದೆ ಕೃಶವಾದ. ಹಾಗೇ ಮರದಲ್ಲೇ ಉಳಿದು ಕ್ರಮೇಣ ಆತ ಹಕ್ಕಿಯಾಗಿ ಕುರುಬರ ದೆವ್ವವಾಗಿ ಹಾರಿದ…. ಈಗ ಕ್ಕೂ…. ವಾ, ಕ್ಕೂ…. ವಾ ಎಂದು ಕೂಗು ಹಾಕುತ್ತ ಕಾಡಿನ ಹಾಡಿಯತ್ತ ಹಾರಿ ಬರುತ್ತಿದ್ದಾನೆ. ಆಗ ಹಾಡಿಯ ಮುಂದೆ ಕೆಂಡ ಮತ್ತು ಒಂದು ಬೀಡಿ ಇಡುತ್ತಾರಂತೆ….

ಕಥೆ ಕೇಳಿದ ನಾವು ಸಾಕವ್ವಾ ಕತೆ ಎಂದು ಪಿಸುಗುಟ್ಟಿದ್ದೆವು.

ಹಸುಗಳ ಪುರಾಣ…

ಬತ್ತದ ಒಕ್ಕಲು ಕೆಲಸದ ಕೊನೆಯ ದಿನ ಎತ್ತುಗಳ ಕೋಡುಗಳು ಉದ್ದವಾಗುತ್ತಿದ್ದವು. ಅರೆ! ಇದೇನು? ತುಂಡು ಕೋಡಿನ ಎತ್ತುಗಳಿಗೂ ಉದ್ದಕೋಡಿನ ಭಾಗ್ಯ! ಅದೇ ವಿಶೇಷ. ಕೆಲಸ ಮುಗಿದುದರ ಸಂಕೇತವಾಗಿ ಬತ್ತದ ಹುಲ್ಲು ತುಳಿದ ಎತ್ತುಗಳಿಗೆ ಹುಲ್ಲಿನ ಕೋಡನ್ನು ಮಾಡಿ ಕಟ್ಟುತ್ತಾರೆ. ಹಾಗೆ ಕಟ್ಟಿದ ಬಳಿಕ ದನಗಳನ್ನು ಸ್ವತಂತ್ರವಾಗಿ ಮೇಯಲು ಗದ್ದೆ ಬಯಲಿನತ್ತ ಅಟ್ಟುತ್ತಾರೆ. ಆರೇಳು ತಿಂಗಳು ಗದ್ದೆಯತ್ತ ಸುಳಿಯಲೂ ಬಿಡದ ಆ ಎಲ್ಲಾ ದನಗಳನ್ನು ಒಕ್ಕಲು ಕೆಲಸ ಮುಗಿದೊಡನೆ ಬಿಡುವುದು ವಾಡಿಕೆ. ಆಗ ಅವರಿವರ ದನಗಳು ಗದ್ದೆ ಬಯಲಲ್ಲಿ ಒಂದಾಗುತ್ತವೆ. ಅಲ್ಲೇ ಇರುವುದು ಮಜ ಅಲ್ಲಿಂದ ಇಲ್ಲಿಂದೆಲ್ಲಾ ಗುಟುರೇ ಗುಟುರು. ಆಹಾ! ಪೌರುಷದ ಪ್ರದರ್ಶನ. ಈ ಕಡೆ ಆ ಕಡೆಯಿಂದ ಗುಟುರು ಹಾಕುತ್ತ, ಬುಸುಗುಟ್ಟುತ್ತ, ಉಚ್ಚೆ ಹೊಯ್ದುಕೊಳ್ಳುತ್ತಾ ಮುಂಗಾಲಿಂದ ಮಣ್ಣನ್ನು ಕೆರೆಯುತ್ತಾ ಹೊಟ್ಟೆಗೆ ಗುದ್ದಿಕೊಳ್ಳುತ್ತಾ ಗದ್ದೆ ಏರಿಯನ್ನು ತಿವಿಯುತ್ತಾ ಹತ್ತಿರ ಹತ್ತಿರ ಬಂದು ಪರಸ್ಪರವಾಗಿ ಓರೆಗಣ್ಣಿನಿಂದ ನೋಡಿಕೊಳ್ಳುತ್ತಾ ಅಡ್ಡಡ್ಡವಾಗಿ ನಿಲ್ಲುತ್ತದೆ. ಗುದ್ದಾಟ ಇನ್ನು ಆರಂಭವಾಗಿಲ್ಲವೋ; ಒಂದರ ಬೆನ್ನಿಗೆ ಹೊಡೆದರಾಯಿತು. ಹಣಾಹಣಿ ಆರಂಭ. ಒಂದೈದು ಹತ್ತು ನಿಮಿಷಗಳ ಮಜವೋ ಮಜ. ನಮಗಾಗದವರ ಎತ್ತು ಸೋತು ಓಡಿದರಂತೂ ನಾವೇ ಗುದ್ದಾಡಿ ಓಡಿಸಿದಷ್ಟು ಖುಷಿ. ಈ ಗುದ್ದಾಟದಿಂದ ಕೆಲವು ಎತ್ತುಗಳು ಕೋಡು ಮುರಿದುಕೊಂಡದ್ದು ಉಂಟು. ಹೊಟ್ಟೆ ಸೀಳಿ ಕರುಳು ಹೊರಬಂದು ಸತ್ತ ಪ್ರಸಂಗವೂ ನಡೆದಿದೆ.

ಯಾರದೋ ಒಂದು ಗೂಳಿ ನಮ್ಮ ಕಾಟಿಬೆಟ್ಟದ ಕಾಡಿನಲ್ಲಿ ರಾಜನಂತೆ ಮೆರೆಯುತ್ತಿತ್ತು. ಯಾವ ಹುಲಿ ಚಿರತೆಗೂ ‘ಜುಂ’ ಅನ್ನದ ತುಡುಗು ಗೂಳಿಯಾಗಿತ್ತು. ಅದಕ್ಕೆ ಖಾಯಂ ಕೊಟ್ಟಿಗೆ ಎಂದೇನೂ ಇಲ್ಲ. ಒಂದು ದಿನ ಇವರ ಕೊಟ್ಟಿಗೆಯಲ್ಲಿ ತಂಗಿದರೆ ಮತ್ತೊಂದು ದಿನ ಇನ್ನೊಂದು ಕೊಟ್ಟಿಗೆಯಲ್ಲಿ ವಾಸ. ಅದು ಮಳೆಗಾಲದಲ್ಲಿ ಮಾತ್ರ. ಆದರೆ ಬೇಸಿಗೆಯಲ್ಲಿ ಅದಕ್ಕೆ ಕೊಟ್ಟಿಗೆ ಬೇಕಿಲ್ಲ. ಎಲ್ಲೋ ಆಯಾಸಗೊಂಡಲ್ಲಿ ನಿದ್ದೆ. ಕೊಬ್ಬಿ ಬೆಳೆದ ಆ ಗೂಳಿ ಯಾರ ಹಿಡಿತಕ್ಕೂ ಸಿಗುತ್ತಿರಲಿಲ್ಲ ಯಾವ ಕೆಲಸಕ್ಕೂ ಬರುತ್ತಿರಲಿಲ್ಲ. ಹಗಲು ಹೊತ್ತಿನಲ್ಲಿ ಯಾರ ಕಣ್ಣಿಗೂ ಬೀಳದೆ ರಾತ್ರಿಯಾದೊಡನೆ ಗುಟುರು ಹಾಕುತ್ತ ಬೇಲಿ ಮುರಿದು ಗದ್ದೆಗೆ ನುಗ್ಗಿ ಬೆಳೆ ನಾಶಮಾಡುತ್ತಿತ್ತು.

ಹಸು ಹದ್ರಿಗೆ ಬಂದಾಗ (ಜೋಡಿಯಾಗಲು ಬಂದಾಗ) ಒಂದೆಡೆ ನಿಲ್ಲುವುದಿಲ್ಲ. ಸದಾ ಓಟದಲ್ಲೇ ಇರುತ್ತದೆ. ಆಗ ಆ ಹಸುವಿನ ಹಿಂದೆ ನಾಲ್ಕಾರು ಗೂಳಿಗಳು, ಎತ್ತುಗಳು ಓಡುತ್ತಿರುತ್ತವೆ. ಹೀಗೆ ಓಡುತ್ತಾ ಓಡುತ್ತಾ ಆಯಾಸಗೊಂಡು ಹಿಂದುಳಿಯುತ್ತವೆ. ಸಾಮರ್ಥ್ಯ ಇರುವ ಗೂಳಿ ಹಸುವಿನ ಜೊತೆಯಾಗುತ್ತದೆ. ಹೀಗೆ ಜೋಡಿಯಾಗುವ ಕಾಲದಲ್ಲಿ ನಾನಾ ಬಣ್ಣದ ನಾನಾ ಗಾತ್ರದ ಗೂಳಿಗಳು ಎಲ್ಲೆಲ್ಲಿಂದಲೋ ಓಡಿ ಬರುತ್ತವೆ. ಆ ದಿನವಿಡೀ ಮೇವೂ ಇಲ್ಲ, ನೀರೂ ಇಲ್ಲ. ಓಟ ಓಟ… ಹಾಗೆ ಓಟದಲ್ಲಿ ಹಸುವಿನೊಡನೆ ಇರುತ್ತಿದ್ದುದು ಆ ಕಾಡಿನ ರಾಜನಾಗಿ ಮೆರೆಯುತ್ತಿದ್ದ ಗೂಳಿ.

ಕ್ರಮೇಣವಾಗಿ ಆ ಗೂಳಿಯ ಗುಟುರು ಕೇಳದಂತಾಯಿತು. ಬೇಟೆಗಾರನ ಗುಂಡಿಗೆ ಬಲಿಯಾಯಿತೊ ಅಥವಾ ಹುಲಿರಾಯನ ಹೊಟ್ಟೆ ಸೇರಿತೋ ತಿಳಿಯದಾಯಿತು. ದನಗಳ್ಳರು ಆ ಕಾಡಿನಲ್ಲೂ ಇದ್ದರು ಎಂಬ ವದಂತಿಯೂ ಇತ್ತು. ಆದರೆ ಆ ಗೂಳಿ ಕಳ್ಳರ ಕೈಗೆ ಸಿಕ್ಕಿರಲಾರದು. ಸ್ವಲ್ಪ ಸಾಧುವಾಗಿದ್ದ ಹಸು ಅಥವಾ ಎತ್ತುಗಳನ್ನೂ ಕಳ್ಳರು ಹಿಡಿದು ಅವುಗಳ ಕೋಡುಗಳನ್ನು ಕೀಸಿ ಸಪೂರಮಾಡಿ ನೋಡಿದರೆ ಪಕ್ಕನೆ ಗುರುತು ಹಚ್ಚದಂತೆ ಮಾಡುತ್ತಿದ್ದರಂತೆ ಹಾಗೆ ಮಾಡಿದ ಬಳಿಕ ಗೋಣಿಕೊಪ್ಪದ ದನದ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು ಎಂದು ಕೇಳಿದ್ದೆ.

ನಮ್ಮ ಕಾಳಿ ಹಸು ಹೆಸರಿಗೆ ತಕ್ಕಂತೆ ಕಪ್ಪಾಗಿತ್ತು. ಶರೀರದ ಯಾವ ಭಾಗದಲ್ಲೂ ಬೇರೆ ಬಣ್ಣ ಇಲ್ಲವೇ ಇಲ್ಲ, ಅದರ ಗೊರಸು, ಬಾಲ ಎಲ್ಲವೂ ಕಪ್ಪು ಕಪ್ಪು, ಈ ರೀತಿಯ ಮೈ ಬಣ್ಣದ ಹಸು ಇರುವುದೇ ವಿರಳ. ಇಂತಹ ಹಸುವಿನ ಹಾಲು ಬಲು ವಿಶೇಷ. ಔಷಧಿಗೆ ಬಲು ಪ್ರಾಮುಖ್ಯತೆ. ಕೆಚ್ಚಲು ಸಹ ಕಪ್ಪಾಗಿರುವ ಈ ಹಸುವಿನ ವಿಶೇಷತೆ ಎಲ್ಲಿಂದೆಲ್ಲಿಗೋ ಹರಡಿರಬೇಕು…

ನಡುರಾತ್ರಿ ಮೀರಿರಬಹುದು. ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಹುಲಿಗಿಲಿ ಬಂತೇನೋ ಎಂದು ‘ಚೂಕೂಡಿ’ ಮಲಗಿದೆವು. ನಾಯಿಗಳು ಮತ್ತೆ ಬೊಗಳತೊಡಗಿದವು. ಈಗ ನಮ್ಮ ಕೊಟ್ಟಿಗೆ ಮನೆಯಿಂದ ಸ್ವಲ್ಪ ದೂರದಲ್ಲಿತ್ತು. ಕೊಟ್ಟಿಗೆಯಲ್ಲಿ ದಡಬಡ ಸದ್ದಾಯಿತು. ಕೂಡಲೆ ಕೊಟ್ಟಿಗೆಗೆ ಹೋಗೋಣವೆಂದರೆ ಕೈದೀಪ ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಆ ದೀಪ ದಾರಿಯಲ್ಲೇ ಕೆಟ್ಟು ಹೋಗುತ್ತಿತ್ತು. ಮತ್ತೆ ದೀಪ ಉರಿಸಿ ದೀಪಕ್ಕೆ ಕೈ ಅಡ್ಡ ಮಾಡಿಕೊಂಡು ಕೊಟ್ಟಿಗೆಗೆ ಹೋದೆವು. ದೀಪ ಸಣ್ಣಗಾಳಿಗೆ ಕೆಟ್ಟು ಹೋಯಿತು. ಬ್ಯಾಟರಿ ಇಲ್ಲ, ದೊಂದಿ ಮಾಡಿಕೊಂಡಿಲ್ಲ.

ಕೊಟ್ಟಿಗೆಯಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ದನಗಳು ತಲೆ ಕೊಡವಿಕೊಳ್ಳುತ್ತಿವೆ ಎಂದು ಕಿವಿ ಹೊಡೆದುಕೊಳ್ಳುವ ಸದ್ದಿನಿಂದ ಗೊತ್ತಾಯಿತು. ಬುಸುಗುಟ್ಟುವ ಸದ್ದು ಕೇಳುತ್ತಿತ್ತು. ದನಗಳು ಗಾಬರಿ ಆಗಿವೆ ಎಂದು ತಿಳಿಯಿತು. ನಾಯಿಗಳು ಹೆದರಿ ಹೆದರಿ ಬೊಗಳುತ್ತಿವೆ. ಹುಲಿ ಇಲ್ಲೆಲ್ಲೋ ಇರಬಹುದು. ಕತ್ತಲೆ ಸಾಮ್ರಾಜ್ಯದಲ್ಲಿ ಹುಲಿಯೇ ಒಡೆಯ! ಮತ್ತೆ ದೀಪ ಉರಿಸಿ, ಕೈ ಅಡ್ಡ ಹಿಡಿದು ದೀಪದ ಜೀವ ಉಳಿಸಿದೆವು. ಆ ಬೆಳಕಲ್ಲಿ ದನಗಳೆಲ್ಲಾ ಎದ್ದು ನಿಂತು ಕಾಡಿನ ದಾರಿಯತ್ತ ನೋಡುತ್ತಿದ್ದವು. ಕಾಳಿ ಹಸು ಇರಲಿಲ್ಲ! ಕೊಟ್ಟಿಗೆಯ ಬಾಗಿಲು ತೆರೆದಿತ್ತು. ಹಸುವನ್ನು ಕಟ್ಟಿದ್ದ ಹಗ್ಗ ಕತ್ತರಿಸಲ್ಪಟ್ಟಿತ್ತು. ಕಳ್ಳರ ಕೈ ಸೇರಿದ ಕಾಳಿ ಹಸು ಹೀಗೆ ಕಣ್ಮರೆ ಆಯಿತು.

ಗುರುವಕ್ಕ ಹಸುವಿನದು ಇನ್ನೊಂದು ಕಥೆ. ಅಂದು ಸಂಜೆ ಎಂದಿನಂತೆ ಕೊಟ್ಟಿಗೆಗೆ ಬರಲಿಲ್ಲ, ಹುಲಿ ಹಿಡಿಯಿತೆ? ಇಲ್ಲ, ಇರಲಾರದು. ಯಾಕೆಂದರೆ ಕಾಡಿನ ಕಡೆಯಿಂದ ಹಿಂತಿರುಗಿದ ದನಗಳು ಗಾಬರಿ ಆದಂತೆ ಇರಲಿಲ್ಲ. ಅಕ್ಕ, ಅವ್ವ ಮತ್ತು ನಾನು ಹುಡುಕುತ್ತಾ ಹೊರಟೆವು. ಗುರುವಕ್ಕ ಈ ಬಾ ಹೀಗೆ ಅವ್ವ ಹಸುವನ್ನು ಕರೆದಳು. ಹೀಗೆ ಹಲವಾರು ಬಾರಿ ಕರೆದರೂ ಹಸುವಿನಿಂದ ಮಾರುತ್ತರ ಬರಲಿಲ್ಲ. ಹುಡುಕುತ್ತಾ ತೋಡು, ಗದ್ದೆ ಇಲ್ಲೆಲ್ಲಾ ಹುಡುಕಿ ನಂತರ ಕೆಸರು ಇರುವ ಕಡೆ ನೋಡೋಣವೆಂದು ಆ ಕಡೆ ಹೋದೆವು ನಿಜ, ಗುರುವಕ್ಕ ಆ ಕೆಸರಲ್ಲಿ ಸಿಕ್ಕಿಕೊಂಡಿತ್ತು.

ತಲೆ, ಬೆನ್ನು ಬಾಲ ಮೇಲೆ ಕಾಣುತಿತ್ತು. ಮುಳುಗಿ ಎಷ್ಟು ಹೊತ್ತಾಗಿತ್ತೋ? ಬೇಕೋ ಬೇಡವೋ ಎನ್ನುವಂತೆ ಕಿವಿ ಅಲುಗಿಸಿತು, ಕಣ್ಣು ಮಿಟುಕಿಸಿತು. ನಮ್ಮ ಮೂವರಿಂದ ಹಸುವನ್ನು ಕೆಸರಿಂದ ಎಳೆಯುವುದು ಆಗದ ಕೆಲಸ. ಮತ್ತಿಬ್ಬರು ನಮ್ಮೊಡನೆ ಸೇರಿಕೊಂಡರು. ನಾವು ಕೆಸರಿನಲ್ಲಿ ಇಳಿದೆವೋ ನಾವೂ ಹೂತು ಹೋಗುವುದು ಗ್ಯಾರಂಟಿ. ಮರದ ಗಳುವನ್ನು ಕೆಸರಿನ ಮೇಲೆ ಹಾಕಿ ಅದರ ಮೇಲೆ ನಿಂತು ಹಸುವನ್ನು ಎಳೆಯ ತೊಡಗಿದೆವು. ಊಹುಂ! ಎಳೆಯಲಾಗುತ್ತಿಲ್ಲ! ಹೊಟ್ಟೆ ಕೆಳಗಡೆಯಿಂದ ಗಳುವನ್ನು ತೂರಿ ಎತ್ತತೊಡಗಿದೆವು. ಹಸು ಕೊಂಚ ಮೇಲೆ ಬಂದಂತಾಯಿತು. ಕೋಡನ್ನು ಹಿಡಿದು ಸತ್ತದನವನ್ನು ಎಳೆಯುವಂತೆ ಎಳೆದೆವು. ಅಬ್ಬ! ಹಸು ದಡಕ್ಕೆ ಬಂತೇನೋ ನಿಜ. ಅದರ ಕಾಲುಗಳು ಮರಗಟ್ಟಿ ಹೋಗಿದ್ದರಿಂದ ನಿಲ್ಲುವ ಶಕ್ತಿ ಇರಲಿಲ್ಲ.

ನಾವು ಮತ್ತೆ ಗಳುವನ್ನು ಹೊಟ್ಟೆ ಕೆಳಗೆ ತೂರಿ ಗಳುವಿನ ಮೇಲೆ ಹಸು ಬಿದ್ದುಕೊಳ್ಳುವಂತೆ ಎತ್ತಿ ಹಿಡಿದೆವು. ನಮಗೆ ಹಿಡಿದುಕೊಳ್ಳಲಾಗುತ್ತಿಲ್ಲ, ಹಸುವಿಗೆ ನಿಂತುಕೊಳ್ಳಲು ಆಗುತ್ತಿಲ್ಲ, ಬಿಟ್ಟರೆ ಬಿದ್ದುಹೋಗುತ್ತದೆ. ಬಿಡದಿದ್ದರೆ ನಮ್ಮ ಮೇಲೆ ಹಸು ಒರಗುತ್ತದೆ. ಕೊನೆಗೆ ಹಸು ನೆಲದ ಮೇಲಿರಿಸಿದ ಕಾಲು ಕಂಬ ಕೊಟ್ಟು ನಿಲ್ಲಿಸಿದಂತೆ ನಿಂತುಕೊಳ್ಳುವಂತಾಯಿತು. ನಡೆಯಲು ಸಾಧ್ಯವೇ ಇಲ್ಲ ಏನು ಮಾಡಬೇಕು? ಕತ್ತಲಾವರಿಸುತ್ತಿದೆ. ಹಿಡಿದುಕೊಂಡವರು ಹಿಡಿದೇ ನಿಂತರು. ನಾವು ಮನೆಗೆ ಓಡಿದೆವು. ಸಧ್ಯ ಮನೆಯಲ್ಲಿ ಬಿಸಿನೀರಿತ್ತು, ತಂದೆವು, ಹಸುವನ್ನು ಬಿಸಿನೀರಿಂದ ತೊಳೆದೆವು. ಸೊಂಟಕ್ಕೆ ಬಿಸಿನೀರು ಯಾವಾಗ ಬಿತ್ತೋ ಒಂದೆರಡು ಹೆಜ್ಜೆ ನಡೆಯಿತು! ನಿಂತು ಮತ್ತೆ ಹೆಜ್ಜೆ ಹಾಕಿತು. ಸಧ್ಯ ಗುರುವಕ್ಕ ಬದುಕಿದಳು.

ಇಲ್ಲಿ ಬಿಟ್ಟರೆ ಇಲ್ಲೇ ನಿಂತು ತಿರುಗುವ ಬುಗುರಿ

ನಾನು ನನ್ನ ಅಕ್ಕನೊಡನೆ ಚಿಲ್ಕಿ ಆಟ ಆಡುತ್ತಿದ್ದೆ. ಅದರಲ್ಲಿ ಅವಳೇ ಗೆಲ್ಲುತ್ತಿದ್ದಳು. ನಂತರ ಕಲ್ಲಾಟ ಆಡುತ್ತಿದ್ದೆವು. ಕೋತ್ತೆಕಾ, ಕೊದಲೇ ಕಾ, ಬೆಚ್ಚೆಕಾ, ಬಾರೆ ಕಾ, ಕೈಮೇಲೆ ಮೂರೇ ಕಾ ಎನ್ನುತ್ತಾ ಆಡುವಾಗ ಮೇಂಗೈ ಮೇಲೆ ಮೂರು ಕಲ್ಲುಗಳು ಮಾತ್ರ ಕೂರಬೇಕು. ಮೂರಕ್ಕಿಂತ ಹೆಚ್ಚು ಅಥವಾ ಅದಕ್ಕಿಂತ ಕಡಿಮೆ ಕಲ್ಲುಗಳು ಕುಳಿತರೆ ಅವರು ಆಟವನ್ನು ಮುಂದುವರೆಸಲು ಅರ್ಹರಲ್ಲ. ಗೋಲಿ ಗಾತ್ರದ ಐದು ಕಲ್ಲುಗಳಿಂದ ಆಡುವ ಆಟ ಇದು ನನ್ನ ಕೈ ಮೇಲೆ ಮೂರು ಕಲ್ಲುಗಳು ಕುಳಿತುಕೊಂಡಿದ್ದು ನೆನಪಿಲ್ಲ. ಈ ಆಟದಲ್ಲೂ ಅಕ್ಕನದೇ ಮೇಲುಗೈ !ಹ್ಞಾ! ಅಪ್ಪನ ಕಣ್ಣಿಗೆ ಕಲ್ಲಾಟ ಕಾಣಕೂಡದು. ಈ ಆಟ ಆಡಿದರೆ ಮನೆಗೆ ಶನಿಯಂತೆ. ಹಾಗಾಗಿ ಅಪ್ಪ ಮನೆಯಲ್ಲಿಲ್ಲದ ದಿನ ಈ ಆಟ ಆಡುತ್ತಿದ್ದೆವು. ಆದರೇನು? ನನಗೆ ಈ ಆಟದಲ್ಲಿ ಆಸಕ್ತಿ ಇಲ್ಲದಾಯಿತು. ಗೆದ್ದರಲ್ಲವೆ ಆಸಕ್ತಿ ಉಳಿಯುವುದು. ನಾನು ಚಿಲ್ಕಿ ಮತ್ತು ಕಲ್ಲಾಟಕ್ಕೆ ಬರುವುದಿಲ್ಲವೆಂದು ಬಿಟ್ಟೆ ನನ್ನ ಆಸಕ್ತಿ ಬುಗುರಿ ಆಟದತ್ತ ಹೊರಳಿತು.

ನನಗೆ ಬುಗುರಿ ಮಾಡಿಕೊಡುವವರು ಯಾರು? ನಾನಾಗಿ ಮಾಡಿಕೊಳ್ಳಲು ಗೊತ್ತಿಲ್ಲ. ಅವ್ವ ಮತ್ತು ಅಕ್ಕ ಇವರಿಗೆ ಆಗದು ನಮ್ಮ ಮನೆಗೆ ಯಾರಾದರೂ ಬಂದರೆ ಅವರನ್ನು ಕಾಡಿದೆ ಬೇಡಿದೆ-ದಮ್ಮಯ್ಯ ಬುಗುರಿ ಮಾಡಿಕೊಡಿ ಎಂದು ದುಂಬಾಲು ಬಿದ್ದೆ. ಊಹುಂ! ಯಾರೂ ಮಾಡಿಕೊಡಲಿಲ್ಲ. ಇನ್ನು? ಅಪ್ಪನನ್ನೇ ಕೇಳಿಬಿಡಲೆ? ಕೋಪದಲ್ಲೇ ಇರುವು ಅಪ್ಪನೊಡನೆ ಹೇಗೆ ಕೇಳಲಿ? ಅಪ್ಪ…ಪ್ಪಾ… ಬುಗುರಿ ಮಾಡಿಕೊಡು… ಅಂತ ಧೈರ್ಯ ಮಾಡಿ ಕೇಳಿಯೇಬಿಟ್ಟೆ ಆ ಧ್ವನಿ ಹೇಗಿದ್ದಿರಬಹುದು? ಅಪ್ಪನ ಕಿವಿಗಂತೂ ಕೇಳಿಸಿತು. ಅಬ್ಬಾ! ನಾನು ಗೆದ್ದೆ. ಅಪ್ಪ ಬುಗುರಿ ಮಾಡಿ, ಬುಗುರಿ ಹಗ್ಗ ಮಾಡಿ ತಾನೇ ಹಗ್ಗ ಸುತ್ತಿ ಅಂಗಳದಲ್ಲಿ ಬಿಟ್ಟಿತು. ಆಹಾ! ಬುಗುರಿ ಹೇಗಾದರೂ ಇರಲಿ, ಅದು ಹೇಗಾದರೂ ತಿರುಗಲಿ, ನಾನೊಬ್ಬ ಬುಗುರಿಯ ಒಡೆಯ ಅಪ್ಪ ನನಗೆ ಮಾಡಿಕೊಟ್ಟ ಮೊಟ್ಟ ಮೊದಲ ಹಾಗೂ ಕೊನೆಯ ಆಟಿಕೆ. ಪಾಪ! ಅಪ್ಪ ಮಾಡಿಕೊಟ್ಟ ಆ ಬುಗುರಿ ಇಲ್ಲೊಮ್ಮೆ ಅಲ್ಲೊಮ್ಮೆ ತಿರುಗಿ ಮತ್ತೆಲ್ಲೊ ಹಾರಿ ಕಾಡಿನತ್ತ ಓಡಿಬಿಡುತಿತ್ತು. ಸುತಾರಾಂ ಅದು ನಿಂತಲ್ಲೇ ನಿಂತು ತಿರುಗಲಿಲ್ಲ ಅದನ್ನು ಚಾಟೆಕಾಲು ಬುಗುರಿ ಎಂದು ಕರೆದೆವು. ಆಕಾರದಲ್ಲಿ ಅದು ಬುಗುರಿ ಹೌದು. ಆದರೆ ಆಟಕ್ಕೆ ಆಗದ ಬುಗುರಿ ನನ್ನಿಂದ ಅದನ್ನು ಒಮ್ಮೆಯಾದರೂ ತಿರುಗಿಸಲು ಆಗಲೇ ಇಲ್ಲ ಸಂತೆಯಿಂದ ಬಣ್ಣದ ಬುಗುರಿಯನ್ನಂತೂ ತರಲಾಗಲಿಲ್ಲ. ಇದಾಗಿ ಕೆಲವು ದಿನಗಳ ಬಳಿಕ ಯಾರೋ ಒಬ್ಬರು ಬುಗುರಿ ಮಾಡಿಕೊಟ್ಟರು.

ಈ ಬುಗುರಿ ನನಗೆ ಹೇಳಿ ಮಾಡಿಸಿದಂತೆ ಇತ್ತು. ತುಂಡು ಮೊಳೆಯ ಬುಗುರಿ ಇಲ್ಲಿ ಬಿಟ್ಟರೆ ಇಲ್ಲೇ ನಿಂತು ತಿರುಗುವ ಬುಗುರಿ. ಒಳ್ಳೆ ನಿದ್ದೆ ಮಾಡುವ ಬುಗುರಿ ನಾನು ಅದರ ಬೆನ್ನಿಗೆ ಸೊಪ್ಪಿನ ರಸದಲ್ಲಿ ವೃತ್ತಾಕಾರದಲ್ಲಿ ಒಂದು ಗೆರೆ, ಇನ್ನೊಂದನ್ನು ಸುಣ್ಣದಿಂದ ಗೆರೆ ಹಾಕಿದೆ (ಎಲೆ ಅಡಿಕೆ ತಿನ್ನಲು ಇದ್ದ ಸುಣ್ಣ ಅದು) ಹಗ್ಗಸುತ್ತಿ ಬುಗುರಿ ಬಿಟ್ಟೆ. ಹಸಿರು, ಬಿಳಿ ಪಟ್ಟೆಯ ಆ ಬುಗುರಿ ನನ್ನ ಮನಸ್ಸನ್ನು ಗೆದ್ದಿತು. ಆಡಿದ ಬಳಿಕ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದೆ. ರಾತ್ರಿ ಮಲಗುವಾಗಲೂ ಜೇಬಿನಲ್ಲೇ! ತಿರುಗಿ ಮಲಗಿದಾಗ ಅದು ಒತ್ತುತಿತ್ತು, ಆದರೂ ಅದನ್ನು ತೆಗೆದಿಡುವ ಮನಸ್ಸು ಮಾಡಲಿಲ್ಲ. ಬುಗುರಿಯ ಮೊಳೆಯಿಂದ ಜೇಬು ತೂತವಾಯಿತು ಬಳಪ ಆ ತೂತಿನಿಂದ ಜಾರಿ ಬೀಳುತಿತ್ತು, ಅದರ ಬಗ್ಗೆ ಸಿಗಲಿಲ್ಲ ಬುಗುರಿಯೊಂದೇ ಮುಖ್ಯವಾಯಿತು.ಕೊಟ್ಟಿಗೆ, ಮನೆ, ಅಂಗಳ, ಗದ್ದೆ-ಎಲ್ಲೇ ಇರಲಿ ಇಷ್ಟಗಲ ಜಾಗದಲ್ಲಿ ಬುಗುರಿ ಬಿಡುತ್ತಿರಬೇಕು, ಅದು ತಿರುಗುತ್ತಿರುವಾಗ ಹಗ್ಗದಿಂದ ಎತ್ತಿ ಅಂಗೈ ಮೇಲೆ ನಿದ್ದೆ ಮಾಡಿಸಬೇಕು. ಅಷ್ಟೇ ಅಲ್ಲ, ನೆಲಕ್ಕೇ ಬಿಡದೆ ಹಗ್ಗ ಸುತ್ತಿ ರೊಂಯ್ಯನೆ ಬಿಟ್ಟು ಹಿಂದಕ್ಕೆ ಎಳೆದುಕೊಂಡರೆ ಗಾಳಿಯಲ್ಲಿ ತಿರುಗಿ ಅಂಗೈಯಲ್ಲಾಡಬೇಕು.

ನೆಲಮುಟ್ಟದೆ ಅಂಗೈಯಲ್ಲಿ ಬುಗುರಿ ತಿರುಗಿಸಬೇಕಾದರೆ ಸಾಕಷ್ಟು ಶ್ರಮಬೇಕು. ಶ್ರಮಪಟ್ಟೆ ನನ್ನ ಶ್ರಮ ವ್ಯರ್ಥವಾಗಲಿಲ್ಲ. ಅಂಗೈಯಲ್ಲೇ ತಿರುಗಿ ನಿದ್ದೆ ಮಾಡುತ್ತಿದ್ದ ಬುಗುರಿಯನ್ನು ನಾನೆಂದೂ ಮರೆಯಲಾಗದು. ಒಮ್ಮೆ ಅಪ್ಪನೊಡನೆ ಗದ್ದೆಗೆ ಹೋಗಿದ್ದೆ. ಅಪ್ಪ ಗದ್ದೆ ಬದಿಯ ಬೇಲಿಯನ್ನು ಸರಿಪಡಿಸುತಿತ್ತು ನಾನು ನನ್ನ ಆಟದಲ್ಲೇ ತೊಡಗಿದ್ದೆ. ಅಷ್ಟರಲ್ಲಿ ಅಪ್ಪ ಇದ್ದಕ್ಕಿದ್ದಂತೆ “ಓಡು ಮಗನೆ, ಓಡು” ಎಂದು ಕಿರುಚಿ ಹೇಳಿತು. ನನಗೆ ಯಾಕೆ ಏನು ಎಂದೇನೂ ಗೊತ್ತಾಗಲಿಲ್ಲ. ಅಪ್ಪ ಮತ್ತೊಮ್ಮೆ “…ಯ್ಯೋ ಮಗನೆ, ಆನೆ ಆನೆ ಓಡು ಓಡು” ಎಂದು ಮತ್ತೊಮ್ಮೆ ಕಿರುಚಿತ್ತಾ ಆನೆಗೆ ಗದರಿಸುತಿತ್ತು. ನನ್ನ ಎದೆ ಧಸಕ್ಕೆಂದಿತು ನನ್ನ ಪುಟ್ಟ ಕಾಲುಗಳು ಎಷ್ಟು ವೇಗದಲ್ಲಿ ಓಡಲು ಸಾಧ್ಯ? ಅಪ್ಪನ ಈ ಆತುರಕ್ಕೆ, ‘ಆನೆ ಆನೆ’ ಎಂದು ಹೇಳಿದ್ದಕ್ಕೆ ಓಡತೊಡಗಿದೆ ಬುಗುರಿಯನ್ನು ಅರ್ಧದಷ್ಟು ಮಾತ್ರ ಸುತ್ತಿದ್ದೆ. ಓಡುತ್ತಲೇ ಇದ್ದೆ ಅಪ್ಪ ನನ್ನ ಹಿಂದಿನಿಂದ ಬೊಬ್ಬೆ ಹಾಕುತ್ತಲೇ ಇತ್ತು. ಈ ಬೊಬ್ಬೆಗೆ ಆನೆ ಹಿಂತಿರುಗಿ ಕಾಡಿನತ್ತ ಹೋಯಿತು. ಅಷ್ಟು ದೂರ ಓಡಿದ ನಾನು ನಿಂತೆ. ಕಾಲು ಗಡಗಡ ನಡುಗುತ್ತಲೇ ಇತ್ತು. ತುಟಿ ಒಣಗಿ ಬಾಯರಿಕೆ ಆಯಿತು. ನನ್ನ ಓಟದ ನಡುವೆ ಬುಗುರಿ ಜಾರಿ ಎಲ್ಲಿ ಬಿದ್ದು ಹೋಯಿತೊ?! ಕೈಯಲ್ಲಿ ಹಗ್ಗ ಮಾತ್ರ ಉಳಿದಿತ್ತು. ಮರುದಿನ ನಾನು ಓಡಿ ಬಂದ ದಾರಿಯಲ್ಲೆಲ್ಲಾ ಹುಡುಕಿದೆ. ನನ್ನ ಆ ಪ್ರೀತಿಯ ಬುಗುರಿ ನನಗೆ ಕೊನೆಗೂ ಸಿಗದೇ ಹೋಯಿತು. ಅತ್ತು ಕರೆದು ರಂಪ ಮಾಡಿದೆ ಆನೆಗೆ ಹಿಡಿ ಶಾಪಹಾಕಿದೆ. ಏನೇ ಆದರೂ ನನ್ನ ಬುಗುರಿ ಕಾಡು ಪಾಲಾಯಿತು.

ನಾವು ಸೌದೆ ತರಲು, ಅಂಗಡಿಗೆ ಹೋಗಲು ಹಾಗೂ ದನ ಅಟ್ಟಲು ಹೋಗುತ್ತಿದ್ದ ದಾರಿಯಲ್ಲಿ ಆಲದ ಮರವಿತ್ತು. ಅದರ ಬಳ್ಳಿಯನ್ನು ಹಿಡಿದು ಉಯ್ಯಾಲೆ ಆಡುವುದು, ಮರ ಹತ್ತಿ ಆಟವಾಡುವುದು ಮಾಡುತ್ತಾ ಒಂದರ್ಧ ಗಂಟೆ ಅಲ್ಲಿ ಕಾಲಕಳೆಯುತ್ತಿದ್ದೆವು. ಒಂದು ದಿನ ದಾರಿಗಾಗಿ ಹೋಗುವಾಗ ನೋಡುತ್ತೇವೆ ಮರದ ಸುತ್ತ ಯಾರೋ ಗುಡಿಸಿ ಅಂಗಳದಂತೆ ಮಾಡಿದ್ದಾರೆ! ನಮ್ಮ ಆಟಕ್ಕೆ ಒಳ್ಳೆ ಜಾಗ ‘ಎನ್ನುತ್ತಾ’ ಹತ್ತಿರ ಹೋದೆವು ಅಲ್ಲಿ ನೋಡಿದರೆ ಮರದ ಬುಡದಲ್ಲಿ ತ್ರಿಶೂಲ, ಕುಂಕುಮ, ಹೂವು…! ಅರೆ! ಕಾಡಿನ ದೇವರಿಗೆ ಕಾಡಿನಲ್ಲೊಂದು ಮನೆ! ನಾವು ಭಯಗೊಂಡೆವು. ಆ ಅಂಗಳವನ್ನು ತುಳಿಯಲಿಲ್ಲ. ಮರಹತ್ತಲಿಲ್ಲ. ಉಯ್ಯಾಲೆ ಆಡಲಿಲ್ಲ ಭಯ ಭಕ್ತಿಯಿಂದ ಆ ದಾರಿಯಲ್ಲಿ ಹೋಗುತ್ತಿದ್ದೆವು. ರಾತ್ರಿ ಕಾಡಾನೆಗಳು ಆ ಅಂಗಳದಲ್ಲೆಲ್ಲಾ ಓಡಾಡಿ ತ್ರಿಶೂಲವನ್ನು ಕಿತ್ತು ಹಾಕಿ ಕುಂಕುಮವನ್ನೆಲ್ಲಾ ಹರಡಿ, ಲದ್ದಿಹಾಕಿ ತುಂಟಾಟ ಆಡಿ ಹೋಗಿದ್ದವು.

ನಮ್ಮ ಮನೆಗೆ ಯಾರಾದರೂ ಬಂದರೆ ಆ ಈ ಮಾತನಾಡುತ್ತಾ ಬೇಟೆ ವಿಚಾರವನ್ನೂ ಮಾತನಾಡುತ್ತಿದ್ದರು. ಬೇಟೆ ಕಥೆಯನ್ನು ಕೇಳಿದ ಮೇಲೆ ಅದರಂತೆ ನಾವು ಆಡದಿದ್ದರೆ ಹೇಗೆ? ನಮ್ಮ ಬೇಟೆ ಆಟಕ್ಕೆ ಕಾಡಿಗೆ ಹೋಗಬೇಕಿರಲಿಲ್ಲ ಏಕೆಂದರೆ ನಮ್ಮ ಅಂಗಳದ ಬದಿಯಲ್ಲೇ ನೆಲ್ಲಿ ಮರವಿತ್ತು, ಅಪ್ಪ ಅವ್ವ ಮನೆಯಲ್ಲಿ ಇರಲಿಲ್ಲ. ಆ ದಿನ ನಾವು ಬೇಟೆ ಆಟವನ್ನು ಶುರು ಮಾಡಿದೆವು.
ನಾನು ನೆಲ್ಲಿಕಾಯಿ ತಿನ್ನಲು ಬರುವ ಕೊಂಬು ಮೂಡದ ಗಂಡು ಜಿಂಕೆ! ಅಕ್ಕ ಬೇಟೆಗಾರ್ತಿ. ಅವಳು ಗಿಡದ ಬುಡದಲ್ಲಿ ಅವಿತು ಕುಳಿತಳು. ಕೈಯಲ್ಲಿ ಹಾರೆ ಇತ್ತು. ಅದು ಕೋವಿ! ನಾನು ನಾಗಾಲು ನಡಿಗೆಯಂತೆ ನಡೆದು ಗಿಡವೊಂದಕ್ಕೆ ಮೈ ಉಜ್ಜಿದೆ. ಬಗ್ಗಿ ನೆಲ್ಲಿಕಾಯಿ ತಿನ್ನುವಂತೆ ಮಾಡಿದೆ. ಹಾಗೆ ಅತ್ತ ನೋಡಿ, ಇತ್ತ ನೋಡಿ ನೆಲವನ್ನು ಮೂಸಿದಂತೆ ಮಾಡುತ್ತಾ ಅವಳು ಕುಳಿತಲ್ಲಿಗೆ ಹೋದೆ ಅವಳು ಹಾರೆಯನ್ನು ಕೋವಿಯಂತೆ ಗುರಿ ಹಿಡಿದು ಕುಳಿತಿದ್ದಾಳೆ. ಜಿಂಕೆ ಈಗಲೋ ಆಗಲೋ ಓಡಿ ಬಿಡುತ್ತದೆಂಬ ಕಾತರ ಆಕೆಯದು ಇನ್ನೇನು ಗುಂಡು ಸಿಡಿಯಬೇಕು ‘ಡಮಾರ್’ ಎಂದು ಸದ್ದು ಮಾಡಿದಳು. ಹಾರೆ ನನ್ನ ಹಣೆಗೆ ಚುಚ್ಚಿಯೇ ಹೋಯಿತು. ನಾನು ‘ಅವ್ವ’ ಎನ್ನುತ್ತಾ ಆಕಾಶಕ್ಕೆ ಕಾಲು ಕೊಟ್ಟವನಂತೆ ಮಾಡಿ ಬಿದ್ದುಹೋದೆ ಹಣೆ ಹಿಡಿದು ಉರುಳಾಡಿದೆ ಅಕ್ಕ ಗಾಬರಿಯಾದಳು ಕೂಡಲೇ ಅವಳು ಹಾರೆಯನ್ನು ಎಸೆದು ನನ್ನನ್ನು ತಬ್ಬಿಕೊಂಡಳು. ಅಲ್ಲೇ ಎತ್ತಿ ಕೂರಿಸಿದಳು. ಅಳಬೇಡ ಎಂದು ಕಣ್ಣೀರು ಒರಸಿದಳು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋದಳು. ಬೆಲ್ಲಕೊಟ್ಟಳು ಈ ಆಕಸ್ಮಿಕ ವಿಚಾರವನ್ನು ಮನೆಯಲ್ಲಿ ಹೇಳಲಿಲ್ಲ.

ಕಂಬಳಿಯ ಬೆರಳಿಗೆ ತೂತುಕಾಸು

ನಾನೊಮ್ಮೆ ಉಣ್ಣಿಬಾಧೆಗೆ ಒಳಗಾದೆ. ನನ್ನ ಒಳಕಿವಿಯಲ್ಲಿ ಅದರ ವಾಸ. ಅಸಾಧ್ಯ ನೋವು. ‘ಅವ್ವಾ ಕಿವಿ ಬೇನೆ…’ ನನ್ನ ರಾಗಾಲಾಪ ಕೇಳೋಣವೆಂದರೆ ಚಿಮ್ಮಟವಿಲ್ಲ. ಆಸ್ಪತ್ರೆಗೆ ಹೋಗಲಿಲ್ಲ. ಎಣ್ಣೆಬಿಟ್ಟು ಪ್ರಯತ್ನಿಸಲಾಯಿತು. ಉಣ್ಣಿ ಸಾಯಲಿಲ್ಲ. ನನಗೆ ನೋವು ತೀವ್ರವಾಗತೊಡಗಿತು. ಕೀಲು ಕುದುರೆಯಂತೆ ಕುಣಿಯತೊಡಗಿದೆ. ನನ್ನ ಅಕ್ಕ ನನ್ನ ಕಿವಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಳು. “ಒಂದಲ್ಲ ಎರಡು ಉಣ್ಣಿಗಳಿವೆ” ಎಂದು ಸರ್ಟಿಫಿಕೇಟು ಕೊಟ್ಟಳು. ತಕ್ಕೊಳ್ಳಿ ನನ್ನ ಕುಣಿಯಾಟ ಕೇಳಬೇಕೆ? ಹಾಗೇ ಬಿಟ್ಟರೆ ಇಡೀ ಉಣ್ಣಿ ಸಂತಾನವೇ ನನ್ನ ಕಿವಿಯೊಳಗೆ! ಮುದುಳಿಗೆ ಸೇರಿಕೊಂಡರೆ ನನ್ನ ಕಥೆ ಪಡ್ಚ! ಭಯದ ಭಾವನೆಗಳು ಕಾಡಿದವು. ಉಣ್ಣಿಗಳನ್ನು ಕಿತ್ತು ಹೊರಹಾಕುವ ದಾರಿ ಕಾಣುತ್ತಿಲ್ಲ. ಅಷ್ಟಕ್ಕೂ ನಾನು ಕಿವಿಯನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಅಂಥಾ ನೋವು ಎಣ್ಣೆ ಬಿಸಿಮಾಡಿ ಉಯ್ದರೆ ಹೇಗೆ? ಆ ಬಿಸಿಗೆ ಉಣ್ಣಿ ಸಾಯುವುದಿಲ್ಲ. ಉಣ್ಣಿ ಸಾಯುವಷ್ಟು ಎಣ್ಣೆ ಬಿಸಿಯಾದರೆ ನನ್ನ ಕಥೆ?

ಅವ್ವನ ತಲೆ ಓಡಿತು. ಕಾಡಿಗೆ ಓಡಿದಳು. ಕವರಿ ನಾರಿನ ರಸ ಇದಕ್ಕೆ ಸರಿಯಾದ ಮದ್ದು ಎಂದು ಆ ಮರದ ಕೆತ್ತೆಯನ್ನು ತಂದಳು. ಕವರಿ ಮರ ಪೊದೆಯಾಗಿ ಬೆಳೆಯುತ್ತದೆ. ಅದರೆ ತೊಗಟೆ ಒಳ್ಳೆಯ ನಾರನ್ನು ಕೊಡುತ್ತದೆ. ಹೊರೆ ಕಟ್ಟಲು ಆ ಮರದ ಹಗ್ಗವನ್ನು ಮಾಡುತ್ತಾರೆ. ಆನೆಗಳಿಗೆ ಮರ ಉತ್ತಮ ಆಹಾರ. ಸರಿ, ಅದರ ಕೆತ್ತೆಯನ್ನು ಜಜ್ಜಿ ರಸ ತೆಗೆಯಲಾಯಿತು. ಅದರ ರಸ ಅತ್ಯಂತ ಲೋಳೆ ಆ ಲೋಳೆ ಒಣಗಿದರೆ ಯಾವುದೇ ಕೀಟಗಳು ಬಂಧಿಯಾಗಿ ಸಾಯುತ್ತವೆ. ಹಾಗಾಗಿ ಆ ರಸವನ್ನು ನನ್ನ ಕಿವಿಗೆ ಬಿಡಲಾಯಿತು. ಒಂದೆರಡು ಹನಿ ನನ್ನ ಕಿವಿಗೆ ಬೀಳುವಾಗ ತಂಪಾಯಿತು. ಆ ಕ್ಷಣ ಏನೋ ನೆಮ್ಮದಿ ಆದಂತಾಯಿತು ನಂತರ ‘ಮುಲು ಮುಲು’ ಆರಂಭ! ಅಂದರೆ ಉಣ್ಣಿ ಚಡಪಡಿಸಿ ಸಾಯುತ್ತಿರುವುದೆ?

ಒಂದೆರಡು ದಿನದಲ್ಲಿ ನೋವು ಕಡಿಮೆ ಆದಂತಾಯಿತು. ಆದರೆ ಸತ್ತ ಉಣ್ಣಿ ಹೊರಬರಲಿಲ್ಲ. ನಡೆಯುವಾಗ, ಓಡುವಾಗ ಕಿವಿಯೊಳಗೆ ಅಲುಗಾಟ ಶುರುವಾಯಿತು. ಆ ಮದ್ದು, ಉಣ್ಣಿ ಮತ್ತು ಗುಗ್ಗೆ ಎಲ್ಲಾ ತ್ರಿಪಾಕಗಳು ಸೇರಿ ಒಂದು ಉಂಡೆಯಾಗಿ ನೆಲಗಡಲೆ ಬೀಜ ಅಲುಗಾಡುವಂತೆ ನನ್ನ ಪಾಡಾಯಿತು. ನನ್ನ ಎಡಗಿವಿ ಬಂದ್! ಗಿಲಕಿ ಸದ್ದಲ್ಲದೆ ಮತ್ತೊಂದಿಲ್ಲ. ಏನಾದರೂ ಆಗಲಿ ಹೀಗೂ ಹೇಗೋ ಅಂತೂ ಒಂದು ದಿನ ಆ ಉಂಡೆ ಹೊರಬಂತು. ಕಿವಿಗೆ ಏನೂತೊಂದರೆ ಆಗಲಿಲ್ಲ. ಬಂದ್ ಆಗಿದ್ದ ಕಿವಿ ಓಪನ್ ಆಯಿತು.

ಅವ್ವನನ್ನು ಪದೇ ಪದೇ ಕಾಡುತ್ತಿದ್ದುದು ಸೊಂಟ ನೋವು ಕೆಲಸ ಮಾಡಲು ಆಗುತ್ತಿಲ್ಲ, ಆದರೆ ಮಾಡದೆ ವಿಧಿಯಿಲ್ಲ. ಅಕ್ಕ ನಾನು ಶಾಲೆಗೆ ಹೋಗುವವರೆಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದೆವು. ದನ ಬಿಡುವ, ಸಗಣಿ ತೆಗೆಯುವ, ನೀರು ಹೊರುವ, ಸೌದೆ ತರುವ ಬೀಸುವ, ರುಬ್ಬುವ… ಹಳ್ಳಿ ಅಂದ ಮೇಲೆ ಕೆಲಸ ಇದ್ದೇ ಇರುತ್ತದೆ ಹಾಳಾದ ಸೊಂಟ ನೋವು ಅವ್ವನ ಪ್ರಾಣ ಹಿಂಡುತಿತ್ತು. ಆದರೂ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಆಸ್ಪತ್ರೆಗೆ ನಡೆದು ಹೋಗುವುದು ಹೇಗೆ? ಹಾಗಾಗಿ ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳೀಯವಾಗಿ ಮದ್ದು ಮಾಡಿಕೊಳ್ಳುತ್ತಿದ್ದೆವು. ಅವ್ವನ ಸೊಂಟ ನೋವಿಗೆ ಅಪ್ಪ ಮಾಡಿದ ಮದ್ದು ಮಾತ್ರ ಭಯಾನಕವಾಗಿತ್ತು. ಅಪ್ಪ ಒಂದು ರಾತ್ರಿ ಅವ್ವನ ಸೊಂಟಕ್ಕೆ ಹರಳೆಣ್ಣೆ (ಕ್ಯಾಸ್ಟ್ರಾಯಿಲ್) ಸವರಿತು. ಒಲೆಯಲ್ಲಿ ಬೆಂಕಿ ಉರಿಯುತಿತ್ತು. ಆ ಬೆಳಕಲ್ಲಿ ಅವ್ವನ ಸೊಂಟ ಹೊಳೆಯುತಿತ್ತು. ಅಪ್ಪ ಬೆಳೆಕೊಯ್ಯುವ ಹಲ್ಲು ಕತ್ತಿಯನ್ನು ಒಲೆಯೊಳಗೆ ಕಾಯಿಸಿತು. ಆ ಕತ್ತು ಕೆಂಪಗೆ ಕಾಯಿತು. ನಾವಿಬ್ಬರು ದುಃಖವನ್ನು ಒತ್ತಿರಿಸಿಕೊಂಡು ಮುದುಡಿ ಕುಳಿತ್ತಿದ್ದೆವು. ಅವ್ವ ಕವುಚಿ ಮಲಗಿದ್ದಳು. ಅಪ್ಪ ಕೆಂಪಗೆ ಕಾದ ಕತ್ತಿಯ ತುದಿಯಿಂದ ಅವ್ವನ ಸೊಂಟಕ್ಕೆ ಮೆಲ್ಲನೆ ಕೊತ್ತಿತು ಆಗ ಅವ್ವ “ಅವ್ವಾ” ಎಂದಳು. ಕತ್ತಿಯ ಬಿಸಿ ಮುಟ್ಟಿದಾಗ ‘ಚಟ್’ ಎಂದು ಸದ್ದಾಗುತ್ತಿತು. ಹೀಗೆ ಮೂರೋ ನಾಲ್ಕೋ ಬಾರಿ ಮಾಡಿರಬಹುದು. ಅಪ್ಪನ ಧೈರ್ಯ, ಅವ್ವನ ಅನಿವಾರ್ಯತೆ, ನಮ್ಮ ಸ್ಥಿತಿ-ಏನೆಂದು ಹೇಳಲಿ? ಈ ಮದ್ದಿನಿಂದ ನಾಲ್ಕು ಕಡೆ ಅವ್ವನ ಸೊಂಟದಲ್ಲಿ ಗಾಯ ಮೂಡಿತು. ಕೆಲವು ದಿನಗಳಲ್ಲಿ ಗಾಯವೇನೋ ವಾಸಿಯಾಯಿತು. ಆದರೆ ಸೊಂಟ ನೋವು ಮತ್ತೆ ಮತ್ತೆ ಕಾಡುತಿತ್ತು.

ನನ್ನ ಅಕ್ಕ ಏಳು ತಿಂಗಳಲ್ಲಿ ಹುಟ್ಟಿದ ಕೂಸು ಎಂದಿದ್ದೆ. ಬದುಕಿ ಉಳಿದ ಆಕೆ ಸೊಣಕಲು ಅಂದರೆ ಸೊಣಕಲು. ಆದರೆ ಗಟ್ಟಿ! ಅಷ್ಟು ಸುಲಭಕ್ಕೆ ಅವಳಿಗೆ ಶೀತ, ಕೆಮ್ಮು, ಜ್ವರ ಬರುತ್ತಿರಲಿಲ್ಲ, ಅವಳು ಜ್ವರದಿಂದ ಮಲಗಿದ್ದು ಗೊತ್ತೇ ಇಲ್ಲ ಎನ್ನುವಷ್ಟು ಆರೋಗ್ಯವಾಗಿದ್ದಳು. ಓಟದ ಸ್ಪರ್ಧೆಯಲ್ಲಿ ಶಾಲೆಯಿಂದ ಬಹುಮಾನ ತರುತ್ತಿದ್ದಳು. ಅಪ್ಪನೂ ಹಾಗೆ ಶೀತ, ನಗಡಿ, ಜ್ವರದಿಂದ ಮಲಗಿದ್ದಿಲ್ಲ, ಆದರೆ ನಾನು ಮಾತ್ರ ಒಂದಲ್ಲಾ ಒಂದು ತೊಂದರೆಗೆ ಒಳಗಾಗುತ್ತಿದ್ದೆ. ಒಂದು ದಿನ
ನನ್ನ ಕಾಲಿನ ಬೆರಳ ಸಂದಿಗೆ ಏನೋ ಚುಚ್ಚಿದಂತಾಯಿತು. ಅದು ಏನೆಂದು ಕಣ್ಣಿಗೆ ಕಂಡಿಲ್ಲ. ನೋವು ಮೆಲ್ಲೆ ಮೆಲ್ಲೆ ಆರಂಭವಾದುದು ತೀವ್ರವಾಗತೊಡಗಿತು. ನಡೆಯುವುದೇ ಕಷ್ಟ ಎನ್ನುವಂತಾಗಿ ಕುಂಟುತ್ತಾ ನಡೆಯತೊಡಗಿದೆ. ಸಿಡಿತ ತೀವ್ರವಾಯಿತು. ಆದರೂ ಆಸ್ಪತ್ರೆಗೆ ಹೋಗಲಿಲ್ಲ. ಹೇಗೂ ಸ್ಥಳೀಯ ಮದ್ದುಂಟಲ್ಲ! ಅವ್ವ ಅದ್ಯಾವುದೋ ಸೊಪ್ಪನ್ನು ತಂದು ಹಸಿ ಅರಶಿನ ಬೆರಸಿ ಅರೆದಳು. ಅಕ್ಕಿ ಪುಡಿ ಆ ಹಸಿಮದ್ದು ಎಲ್ಲವನ್ನು ಮಿಶ್ರಮಾಡಿ ಬಾಳೆಲೆಗೆ ಹಾಕಿ ಬಿಸಿ ಬೂದಿಯಲ್ಲಿ ಬೇಯಿಸಿದಳು. ಬಿಸಿ ಬಿಸಿ ಇರುವಾಗಲೇ ನನ್ನ ಪಾದಕ್ಕೆ, ಬೆರಳ ಸಂದಿಗೆ ಸೇರಿಸಿ ಮದ್ದು ಕಟ್ಟೆದಳು. (ಹಳ್ಳಿಯಲ್ಲಿ ಇದನ್ನು ಹಿಟ್ಟುಕಟ್ಟುವುದು ಅನ್ನುತ್ತಾರೆ) ಕಾಲಿಗೆ ಬಿಸಿ ಬಿಸಿ ಮದ್ದು ಮುಟ್ಟುವಾಗ ನೆಮ್ಮದಿ ಆದಂತಾಯಿತು. ಆದರೆ ತಣ್ಣಗಾದಕೂಡಲೆ ಮತ್ತೆ ಸಿಡಿತ ಶುರುವಾಯಿತು. ಯಾವ ಮದ್ದಿಗೂ ಜಗ್ಗಲಿಲ್ಲ. ಪಾದ ಊದಿಕೊಂಡಿತು. ಕಾಲನ್ನು ನೆಲಕ್ಕೆ ಊರಲೂ ಆಗುತ್ತಿರಲಿಲ್ಲ. ಇಲ್ಲಿಂದ ಅಲ್ಲಿಗೆ ಹೋಗಬೇಕಾದರೂ ಹಾರಿ ಹಾರಿ ಹೆಜ್ಜೆ ಹಾಕುತ್ತಿದ್ದೆ.

ಹೀಗೆ ಹಾರುವಾಗ ನೋವಿನ ಕಾಲಿಗೇನಾದರೂ ಮುಟ್ಟಿತೋ ಮುಗಿಯಿತು-ನೋವೋ ನೋವೋ ಇಡೀ ನರನಾಡಿ ಟಪ್ ಟಪ್ ಎನ್ನುತ್ತಿತ್ತು. ತಲೆನೋವು ಆರಂಭವಾಯಿತು. ಕಾಲು ಸಿಡಿತದಿಂದ, ಉರಿಯಿಂದ ರಾತ್ರಿ ಹಗಲು ನಿದ್ದೆ ಇಲ್ಲದಾಯಿತು. ಶಾಲೆಗೆ ಹೋಗದೆ ಎರಡು ತಿಂಗಳೇ ಆಗಿರಬಹುದು. ರಾತ್ರಿ ಹಗಲೆನ್ನದೆ ತಣ್ಣೀರಲ್ಲಿ ಪಾದವನ್ನು ಮುಳುಗಿಸಿ ಕೂರುತ್ತಿದ್ದೆ. ಕ್ಷಣಕ್ಷಣಕೂ ‘ಅವ್ವ…ಅವ್ವಾ…’ ಒಂದೇ ರಾಗ. ಪಾಪ! ಅವ್ವನಿಂದ ಏನು ಮಾಡಲು ಸಾಧ್ಯ? ಮದ್ದು ಗೊತ್ತಿದ್ದೆಲ್ಲಾ ಮಾಡಿ ಆಗಿದೆ. ಅಪ್ಪ ಹರಕೆ ಕಟ್ಟುವುದು ಮಾಡುತಿತ್ತು. ಸೂರಿನ ಗಳದಲ್ಲಿ ನಾಲ್ಕಾರು ಕಡೆ ಬಿಳಿ ಬಟ್ಟಯ ಗಂಟು ನನಗೆ ಹೇಳಿಕೊಂಡ ಹರಕೆಗೆ ಸಾಕ್ಷಿ ಆಗಿದ್ದವು. ಇನ್ನು ಆಸ್ಪತ್ರೆಗೆ ಹೋಗುವ ಮಾತೆ? ನನ್ನನ್ನು ಹೊರಬೇಕು ಯಾಕೋ ಏನೋ ಆಸ್ಪತ್ರೆಗೆ ಹೋಗಲೇ ಇಲ್ಲ.ಒಬ್ಬರು ಮೂರು ದಿನ ಬೆಳಿಗ್ಗೆ ಬಂದು ತುಳಸಿ ನೀರು ಮಂತ್ರಿಸಿ ಕಾಲಿಗೆ ಉಯ್ದರು. ಏನೇ ಆದರೂ ಆ ಕಾಲಿನ ಊದು ಕಡಿಮೆ ಆಗಲಿಲ್ಲ. ಇಡೀ ಶರೀರಕ್ಕೆ ನನ್ನ ಬಲಗಾಲು ನನಗೆ ಭಾರವಾಯಿತು. ನಾನು ಇಡೀ ಮನೆಗೆ ಭಾರವಾದೆ! ಮುಂದೇನು? ಅವ್ವನನ್ನು ಯಾವ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಕಣ್ಣೆದುರು ಅವ್ವ ಕಾಣುತ್ತಿರಬೇಕು. ಕಾಣದಿದ್ದರೆ ಕರೆಯುತ್ತಿದ್ದೆ. ಹತ್ತಿರಬಾ ಎಂದು ಪೀಡಿಸುತ್ತಿದ್ದೆ. ಪಾತ್ರೆಯೊಳಗೇ ಕಾಲು ಇರುತಿತ್ತು. ನೀರಿನಿಂದ ಹೊರ ತೆಗೆದೆನೋ ತಡೆದುಕೊಳ್ಳಲಾಗದಷ್ಟು ಸಿಡಿತ. ಹಾಗೇ ಆಯಾಸಗೊಂಡು ಒರಗುತ್ತಿದ್ದೆ.

ಹೀಗೆ ನರಳುತ್ತಿರುವಾಗ ಒಂದು ಸಂಜೆ ವೃದ್ಧರೊಬ್ಬರು ನಮ್ಮ ಮನೆಗೆ ಬಂದರು. ಮದ್ದು ಮಾಡಲು ಬಂದುದೋ, ಅಥವಾ ಹೀಗೆ ಸುಮ್ಮನೆ ಬಂದುದೋ ನನಗೆ ಗೊತ್ತಿಲ್ಲ. ಹಾಗೆ ಬಂದವರೊಡನೆ ನನ್ನ ಸ್ಥಿತಿಯನ್ನು ಹೇಳಿಕೊಂಡಿರಬೇಕು. ಅವರು ನನ್ನ ಕಾಲನ್ನು ನೋಡಿದರು. ಹಾವೋ, ನರಪಚೆಯೋ ಚುಚ್ಚಿದೆ. (ನರಪಚೆ ಎಂದರೆ ತೀಕ್ಷಣವಾದ ಕೂದಲನ್ನು ಹೊಂದಿರುವ ಕಂಬಳಿ ಹುಳು) ಹೀಗೆನ್ನುತ್ತಾ ‘ಕಂಬಳಿಯ ಬೆರಳು ಕೊಡಿ’ ಎಂದರು. ಕಂಬಳಿ ಬೆರಳು ಎಂದರೆ ಕಂಬಳಿಯ ಆಚೆ ತುದಿ ಈಚೆ ತುದಿಯಲ್ಲಿ ಬೆರಳು ಬೆರಳಾಗಿ ನೇತಾಡುತ್ತಿರುತ್ತದಲ್ಲ, ಅದು ಅವ್ವ ಕಂಬಳಿಯ ಒಂದೆರಡು ಬೆರಳನ್ನು ತುಂಡು ಮಾಡಿಕೊಟ್ಟಳು. ಆ ವೃದ್ಧರು ಒಂದು “ತೂತು ಕಾಸು” ಕೊಡಿ ಎಂದರು. ಆಗ ತೂತು ಕಾಸಿನ ಚಲಾವಣೆಯ ಅಂತ್ಯ ಕಾಲ. ಅವ್ವ ತೂತು ಕಾಸನ್ನು ಕೊಟ್ಟಳು ಆ ವೃದ್ಧರು ತೂತು ಕಾಸನ್ನು ಕಂಬಳಿಯ ಬೆರಳಿಗೆ ಕಟ್ಟಿದರು. ನಂತರ ಅದನ್ನು ನನ್ನ ಕಾಲಿನ ಪಾದದ ಗಂಟಿಗೆ ಕಟ್ಟಿದರು. ಒಂದೆರಡು ತಿಂಗಳಿಂದ ನಾನು ನೋವುಂಡವನು. ಈ ಮದ್ದಿನ ಮೇಲೆ ನಾನು ಹೇಗೆ ವಿಶ್ವಾಸ ತಾಳಲಿ? ಅವರು ಕಾಲಿಗೆ ಕಟ್ಟಿ ಹೋದರು. ನಾನು ಕಾಲಿಗೆ ಕಪ್ಪು ಬಳೆ ಹಾಕಿದಂತೆ ಹಾಕಿಕೊಂಡು ನೋವು ತಿನ್ನುತ್ತಾ ಕುಳಿತಿದ್ದೆ.

“ಅವ್ವಾ ನನ್ನನ್ನು ಹೊರಗೆ ಕೂರಿಸಲ್ವಾ” ಎಂದೆ. ಅವ್ವ ನನ್ನನ್ನು ಹೊರಗೆ ಕೂರಿಸಿದಳು ನಾನು ಜಗಲಿಯಲ್ಲಿ ಕುಳಿತು ಅಂಗಳದತ್ತ ಕಾಲನ್ನು ಇಳಿಬಿಟ್ಟುಕೊಂಡಿದ್ದೆ. ಮದ್ದು ಕಟ್ಟಿ ಒಂದು ಗಂಟೆ ಕಳೆದಿರಬಹುದು ಕಾಲನ್ನು ಇಳಿಬಿಟ್ಟುಕೊಂಡು ಕುಳಿತ ನನಗೆ ‘ಟಪ್’ ಎಂಬ ಸದ್ದು ಕೇಳಿದಂತಾಯಿತು ಇದೇನೆಂದು ಅತ್ತಿತ್ತ ನೋಡಿದೆ ಆ ಸದ್ದು ಬಂದುದು ನನ್ನ ಕಾಲಿನಿಂದ ಗಾಯ ಒಡೆದಿತ್ತು. ಕೀವು ಸರ್ರನೆ ಇಳಿಯುತಿತ್ತು… ಏನೋ ಹೊಸಗಾಳಿ, ಹೊಸ ಬೆಳಕು ಹರಿದಂತಾಗತೊಡಗಿತು. ನಾನು ಗಾಳಿಯಲ್ಲಿ ತೇಲುತ್ತಿರುವೆನೋ ಎಂಬ ಭಾವನೆ! ಮೈ ಹಗುರಾಗತೊಡಗಿತು. “ಅವ್ವಾ… ಬಾ ಇಲ್ಲಿ”… ಅವ್ವನನ್ನು ಕರೆದೆ, “ಅಕ್ಕಯ್ಯ-ಬಾ…” ಅವಳನ್ನು ಕರೆದೆ. ಅಪ್ಪ ಎಲ್ಲಿತ್ತೋ ಗೊತ್ತಿಲ್ಲ. ಇಡೀ ಶರೀರದಲ್ಲಿ ಟಪ್ ಟಪ್ ಎಂದು ನರ ಹೊಡೆದುಕೊಳ್ಳುತ್ತಿರುವುದಾಗಲಿ, ತಲೆ ನೋವಾಗಲಿ ಇಲ್ಲವೇ ಇಲ್ಲ. ಕೀವು ಪೂರ್ಣ ಇಳಿಯಿತು ಅವ್ವ ಕೂಡಲೆ ಕಾಲನ್ನು ತೊಳೆದಳು. ನಾನು ಎದ್ದು ನಿಂತೆ. ನಾನೇ ನಡೆದೆ! ಊಟ ಮಾಡಿದೆ. ಚಂದ ನಿದ್ದೆ ಮಾಡಿದೆ. ಒಂದೆರಡು ದಿನದಲ್ಲಿ ಗಾಯವಾಸಿ ಆಯಿತು. ವಾರಬಿಟ್ಟು ಶಾಲೆಗೂ ಹೋದೆ.

ನನ್ನ ಪ್ರಾಣ ಉಳಿಸಿದ ಆ ವೃದ್ಧರ ಚಿತ್ರ ಇನ್ನು ನನ್ನ ಕಣ್ಣ ಮುಂದಿದೆ. ಬಿಳಿಗಡ್ಡದ ಚೂಪು ಮುಖದ ಅವರನ್ನು ನಾನು ಹೇಗೆ ಮರೆಯಲಿ?

ನಮ್ಮ ಮನೆಗೆ ಅಪ್ಪನೇ ಇಂಜಿನಿಯರ್

ಅದು ೧೯೬೫ನೇ ಇಸವಿ ಇರಬೇಕು. ಕೊಡಗು ಕಂಡರಿಯದ ಮಳೆಗಾಲದ ವರ್ಷ ಎಂದು ನನ್ನ ಭಾವನೆ. ಹುಲ್ಲಿನ ಮನೆ ಸಾಮಾನ್ಯವಾಗಿ ಮಳೆಗಾಲ, ಚಳಿಗಾಲದಲ್ಲಿ ಬೆಚ್ಚಗೆ ಇರುತ್ತದೆ. ಬೇಸಿಗೆಯಲ್ಲಿ ತಂಪಾಗಿರುತ್ತದೆ. ಹೊಸ ಹುಲ್ಲಿನ ಹೊದಿಕೆ ಇದ್ದರೆ! ನಮ್ಮ ಮನೆಗೆ ಆ ವರ್ಷ ಹೊಸ ಹೊದಿಕೆ ಇದ್ದಂತಿಲ್ಲ, ಹಳೆ ಹುಲ್ಲು ಕುಂಬಾಗಿತ್ತು. ಹಾಗಾಗಿ ಮಾಡು ಅಲ್ಲಲ್ಲಿ ತೂತಾಗಿತ್ತು. ಯಾವ ತಡೆಯೂ ಇಲ್ಲದೆ ನೀರು ಸೊರೋ ಎಂದು ಸೋರುತಿತ್ತು. ಪಾತ್ರೆ ತುಂಬಿ ಚೆಲ್ಲುತ್ತಿತ್ತು. ಅದೆಷ್ಟು ಬಾರಿ ನೀರನ್ನು ಹೊರ ಚೆಲ್ಲಿದೆವೊ.

ಸೂರ್ಯ ಕಾಣುತ್ತಿಲ್ಲ. ಬರೇ ಬೆಳಕಿನ ಅನುಭವವಷ್ಟೆ. ಗಾಳಿ ಮಳೆಗೆ ಮರದ ಕೊಂಬೆಗಳು ಮುರಿದು ಬೀಳುತ್ತಿದ್ದವು. ಕೆಲವು ಮರಗಳು ಅರ್ಧದಿಂದಲೇ ಮುರಿದು ಬಿದ್ದವು. ಮತ್ತೆ ಕೆಲವು ಬೇರು ಕಳಚಿ ನೆಲಕ್ಕುರುಳಿದವು. ನಮ್ಮ ಮನೆ ನೆಲಕ್ಕುರುಳಲು ಕಾತರಿಸುತ್ತಿತ್ತು. ಹಗಲಿರುಳೆನ್ನದೆ ಒಂದೇ ಸಮನೆ ಸುರಿಯುತ್ತಿರುವ ಜಡಿಮಳೆ ಹಾಗೂ ಗಾಳಿಯ ಸದ್ದಲ್ಲದೆ ಮತ್ತೊಂದಿಲ್ಲ. ಜನರ ಸುಳಿವಿಲ್ಲ. ಧೋ… ಮಳೆ ಮಳೆ ಮಳೆ!!

ನಮ್ಮದು ಬೆಚ್ಚಗಿನ ಭದ್ರ ಮನೆಯಂತೂ ಅಲ್ಲ. ಬಿದಿರಿನ ನೆರಿಕೆ ಮನೆ. ಬಿದಿರಿನ ಬಾಗಿಲು. ಗಾಳಿ ಒಳನುಗ್ಗಲು ಯಾವ ಅಡ್ಡಿಯಿಲ್ಲ. ದಿನಗಳೆದಂತೆ ಮಳೆ ತೀವ್ರವಾಗತೊಡಗಿತು. ಮನೆಯೊಳಗೆ ಜಲದ ಬುಗ್ಗೆ! ಚರಂಡಿ ಮಾಡಿ ನೀರನ್ನು ಹೊರಬಿಡುತ್ತಿದ್ದೆವು. ನಮಗಂತೂ ಮನೆಯೊಳಗಿನ ಚರಂಡಿಯಲ್ಲಿ ನೀರಾಟ! ಅದು ಒಂದೆರಡು ದಿನವಾಗಿದ್ದರೆ ಪರವಾಗಿಲ್ಲ. ತಿಂಗಳಾನುಗಟ್ಟಲೆ ಮನೆಯೊಳಗಿನ ನೀರಾಟ ಎಷ್ಟು ಖುಷಿ ಕೊಡಬಹುದು? ಮನೆಯೊಳಗೆ ನೀರಲ್ಲಿ ಓಡಾಡಿ ಬೆರಳು ಸಂಧಿ ಹುಣ್ಣಾಯಿತು. ಕಾಲು ಒರೆಸಿ ಮಂಚ ಹತ್ತಿ ಕುಳಿತುಕೊಳ್ಳಬೇಕಿತ್ತು. ಸೌದೆ ಎಲ್ಲಾ ಒದ್ದೆ. ಬೆಂಕಿ ಇಲ್ಲದೇ ಇದ್ದರೆ ಕತೆ ಮುಗಿದಂತೆ. ಅದೊಂದು ಬೆಳಿಗ್ಗೆ…

ಅವ್ವ ಎಂದಿನಂತೆ ಒಲೆ ಉರಿಸಲು ಒಲೆಯ ಬಳಿ ಹೋದಳು. ಒಲೆಯೊಳಗೆ ಜಲದ ಬುಗ್ಗೆ! ಬೆಂಕಿ ಉರಿಸುವುದು ಹೇಗೆ? ಸೌದೆಯೂ ಒದ್ದೆ, ಒಲೆಯಲ್ಲಿ ನೀರು. ಮನೆಯೊಳಗೆಲ್ಲಾ ನೀರು. ನಮಗೆ ಕೇಳುವುದೇ ಬೇಡ ಹಸಿವು ಹಸಿವು… ಬಿಸಿಯಾದ ಊಟ ಬೇಕು. ಅವ್ವಾ ಊಟಕೊಡು… ಮನೆಯಲ್ಲಿ ಊಟಕ್ಕೇನೂ ಇಲ್ಲ ಎಂದಾಗಲೇ ಹಸಿವು ಹೆಚ್ಚು. ಅವ್ವ ಏನು ಮಾಡಬೇಕು? ಅಪ್ಪ ಯಾರನ್ನು ಹೇಗೆ ಸಮಾಧಾನಪಡಿಸಬೇಕು? ಬತ್ತವೂ ಒದ್ದೆ. ಕುಟ್ಟುವುದು ಹೇಗೆ? ರಾಟೆ ಇತ್ತು. ಗಟ್ಟಿ ನೆಲವಿಲ್ಲ! ಅವ್ವ ಅಡುಗೆ ಹೇಗೆ ಮಾಡಿದಳೊ ತಿಳಿಯದು ಮಳೆಯ ಆರ್ಭಟ ಹಾಗೇ ಇತ್ತು.

ಅದೊಂದು ರಾತ್ರಿ… ಅಕ್ಕ ನಾನು ಸುರುಟಿ ಮಲಗಿದ್ದೆವು. ಅವ್ವ ಆಕಳಿಸುತ್ತಲೋ ಬಿಕ್ಕಳಿಸುತ್ತಲೋ ಅಂತೂ ಜೀವ ಹಿಡಿದು ಕುಳಿತಿದ್ದಳು. ಅಪ್ಪ ಒಬ್ಬನೇ ‘ಗುನುಗುನು ಮಾತಾಡಿಕೊಳ್ಳುತ್ತಿತ್ತು. ಮನೆಯೊಳಗೆ ಕಾಲಿಟ್ಟಲ್ಲೆಲ್ಲಾ ಗುಜುಗುಜು ನೀರಿನ ಒರತೆ! ಮನೆ ಕುಸಿಯಬಹುದೆ? ಅಥವಾ ಮುರಿದು ಬೀಳಬಹುದೆ? ಹೌದು, ಮನೆಯ ನಡುಮಾಡಿನ ಮುಖ್ಯ ಮರ ‘ಲಟ್ ಅಂತ ಸದ್ದು ಮಾಡಿತು! ನಾವೆಲ್ಲಾ ಹೌಹಾರಿ ಕುಳಿತೆವು. ಮತ್ತೊಮ್ಮೆ ‘ಲಟ್ ಎಂದು ಸದ್ದಾಗಲು ಇನ್ನೇನು ಈಗ ಈ ಕ್ಷಣದಲ್ಲಿ ಮನೆ ಮುರಿದು ಬೀಳುತ್ತದೆ. ಕಗ್ಗತ್ತಲ ರಾತ್ರಿ, ಧೋ… ಮಳೆ, ಮನೆ ಬಿಟ್ಟು ಹೊರ ಹೋಗುವುದೆ? ಎಲ್ಲಿಗೆ? ಒಳಗೇ ಕುಳಿತಿರುವುದೆ? ಕುಸಿದು ಬಿದ್ದರೆ? ಮನೆಯ ಜೊತೆಯಲ್ಲೆ ನೆರಿಕೆ ಗೋಡೆಯ ಆಚೆ ದನಗಳು ಬೇರೆ! ಅವು ಮೇವಿಗೆ ಹೋಗದೆ ಎಷ್ಟು ದಿನ ಕಳೆದವೊ! ಒದ್ದೆನೆಲದಲ್ಲಿ ಅವು ನಿಂತೇ ಇವೆ. ಅಂತೂ ಹಲವು ಜೀವಗಳು ಸಮಾಧಿ ಆಗಲಿರುವ ಕ್ಷಣಗಳು. ಮನೆ ಎರಡು ಬಾರಿ ‘ಲಟ್ ಎಂದು ಸದ್ದು ಮಾಡಿ ನಮ್ಮನ್ನು ಜೀವಂತ ಶವವನ್ನಾಗಿ ಮಾಡಿತ್ತು. ಬೆಳಗಾಯಿತು…

ಅಂದು ಮನೆ ಕುಸಿಯಲಿಲ್ಲ, ಮುರಿದು ಬೀಳಲಿಲ್ಲ ಅಪ್ಪ ಮೈಲು ದೂರದ ಸಂಬಂಧಿಕರ ಮನೆಗೆ ಓಡಿತು. ನಾಲ್ಕಾರು ಜನರು ಬಂದರು. ಮನೆಯ ಸುತ್ತ ಅಲ್ಲಿ ಇಲ್ಲಿ ಅಂತ ‘ಕೊತ್ತ ಕೊಟ್ಟು ಮನೆ ಬೀಳದಂತೆ ಮಾಡಿದರು. ಅಬ್ಬಾ! ಮಳೆಗೆ ಹಬ್ಬ! ಬದುಕುಳಿದ ನಂತರ ನಮಗೆ ಹಬ್ಬವೇ. ಮುರಿದು ನಿಂತ ಮನೆಯಲ್ಲಿ ಮತ್ತೆ ಒಂದೆರಡು ವರ್ಷ ಕಳೆದವು.

ಅಪ್ಪ ಕಾಟಿಬೆಟ್ಟದ ಕಾಡಿನಲ್ಲಿ ಮತ್ತೊಂದು ಮನೆ ಕಟ್ಟಿತು. ಅದೂ ಕಂಬದ ಮನೆ, ಹುಲ್ಲಿನ ಮಾಡು. ನೆರಿಕೆಯ ಗೋಡೆ, ಬಿದಿರಿನ ಎರಡು ಬಾಗಿಲು, ಕಿಟಕಿ ಇಲ್ಲ! ನೆರಿಕೆಯ ಸಂಧಿಯೇ ಕಿಟಕಿ. ನಿಜಕ್ಕೂ ನಮಗೆ ದಟ್ಟ ಅನುಭವ ನೀಡಿದ ಪುಟ್ಟ ಮನೆ ಅದು. ಗೋಲಿ, ಚೆಂಡು, ಚಿಲ್ಕಿ, ಕಲ್ಲಾಟ, ಓದು, ಬಾಲ್ಯದ ಬದುಕಿಗೆ ಬೊಟ್ಟನ್ನಿಕ್ಕಿ ಮುದ್ದಾಡಿದ ಮನೆ. ಅಂದು ಮನೆ ಕಟ್ಟುವುದು ಸರಳ ಹಾಗೂ ಸುಲಭವಾಗಿತ್ತು ಅಷ್ಟಗಲದ ನೆಲವನ್ನು ಮಟ್ಟ ಮಾಡುವುದು, ಕಂಬ ನೆಡುವುದು, ಕಂಬದ ಮೇಲೆ ಅಡ್ಡ ಮರವನ್ನಿಡುವುದು, ಬಿದಿರಿನ ಗಳಗಳು, ಬಿದಿರಿನ ರೀಪರ್, ಹುಲ್ಲಿನ ಹೊದಿಕೆ, ಬಿದಿರಿನ ನೆರಿಕೆ, ನೆರಿಕೆಗೆ ಮಣ್ಣಿನ ಲೇಪನ, ಸಗಣಿ ಸಾರಿಸಿದ ನೆಲ ಕಂಬ ಮುರಿಯುವವರೆಗೆ ಅದು ಬೆಚ್ಚಗಿನ ಮನೆ. ಅಪ್ಪನದೇ ಪ್ಲಾನ್ ಅಂಡ್ ಎಸ್ಟಿಮೇಷನ್. ಹಳ್ಳಿಯಲ್ಲಿ ಮನೆಯ ಒಡೆಯನೇ ಇಂಜಿನಿಯರ್ ಅಲ್ವೆ? ಹಾಗೆ ನಮ್ಮ ಮನೆಗೆ ಅಪ್ಪನೇ ಇಂಜಿನಿಯರ್.

ಹಳೆ ಮನೆಯಿಂದ ಹೊಸ ಮನೆಗೆ ವಸ್ತು ಸಾಗಿಸುವುದು ಸುಲಭದ ಮಾತಲ್ಲ. ಆದರೆ ನಮ್ಮದು ಸುಲಭದ ಮಾತು. ಲಾರಿಯೂ ಬೇಡ, ಎತ್ತಿನ ಗಾಡಿಯೂ ಬೇಡ. ಅಲ್ಲಿ ಇದ್ದುದೇ ಒಂದೆರಡು ಮಡಕೆ, ಚೆಟ್ಟಿ, ತಟ್ಟೆ, ಮಣೆ, ಮುಕ್ಕಾಲಿ, ಒಂಟೆ ಕೈ ಕುರ್ಚಿ, ಅಕ್ಕಿ ತುಂಬಿಸಲು ಕೊಮ್ಮೆ, ಬತ್ತ ತುಂಬಲು ಕಡಿಕೆ, ರಾಟೆ, ಒನಕೆ, ಕತ್ತಿ ಗುದ್ದಲಿ…

ಹೊಸ ಮನೆಯ ಗೃಹ! ಪ್ರವೇಶಕ್ಕೆ ಯಾರಿಗೂ ಆಮಂತ್ರಣವಿಲ್ಲ. (ಮನೆಯ ಗೃಹ!?) ಹೋಮ ಹಾಕಿ ಒಕ್ಕಲಾದೆವು. ನಮ್ಮ ಪುಟಿಯುವ ಉತ್ಸಾಹವನ್ನು ತಡೆಯುವವರು ಯಾರು? ಹೊಸ ಮನೆಯ ಕಂಬಕ್ಕೆ ಮೊಳೆ ಹೊಡೆದು ನಮ್ಮ ಶಾಲೆಯ ಬ್ಯಾಗನ್ನು ನೇತು ಹಾಕಿದೆವು. ಅದು ಮೂರು ಕೊಠಡಿಯ ಮನೆ ಅಂಗಳದಿಂದ ಹತ್ತಿದ ಕೂಡಲೆ ಕೈಯಾರೆ, ಅಲ್ಲಿಂದ ಒಳನುಗ್ಗಿದರೆ ಗೆಸ್ಟ್ ರೂಂ ಕಮ್ ಅಪ್ಪನ ಬೆಡ್‌ರೂಂ! ಬಾಗಿಲೇ ಇಲ್ಲ! ಅದರಾಚೆ ಸ್ಟೋರ್ ರೂಂ ಅದಕ್ಕೂ ಬಾಗಿಲಿಲ್ಲ. ಅದರ ಪಕ್ಕ ಕಿಚನ್ ಕಮ್ ನಮ್ಮ ಮೂವರ ಬೆಡ್‌ರೂಂ ಕಮ್ ರೀಡಿಂಗ್ ರೂಮ್ ಒಟ್ಟು ಎರಡೇ ಬಾಗಿಲು. ಮುಂದಿನಿಂದ ನುಗ್ಗಲು ಬಂದು ಬಾಗಿಲು, ಅಡುಗೆ ಮನೆಯಿಂದ ಹೊರ ಹೋಗಲು ಹಿಂದಿನ ಬಂದು ಬಾಗಿಲು ಕಿಟಕಿ ಇಲ್ಲವೇ ಇಲ್ಲ. ಪೂರ್ತಿ ಇಲ್ಲ ಎಂದರೆ ತಪ್ಪಾದೀತು. ಏಕೆಂದರೆ ಅಡುಗೆ ಮನೆಯ ನೆರಿಕೆಯ ಕಿಟಕಿಯಷ್ಟಗಲಕ್ಕೆ ಮಣ್ಣಿನ ಲೇಪನ ಮಾಡಿರಲಿಲ್ಲ, ಹಾಗಾಗಿ ಅಷ್ಟಗಲ ಬಿದಿರಿನ ಪಟ್ಟೆಯ ಸಂಧಿಯಿಂದ ಬೆಳಕು ಕಷ್ಟಪಟ್ಟು ಒಳಬರುತಿತ್ತು, ಆದರೂ ಅದಕ್ಕೆ ಗೋಣಿ ಚೀಲದ ಪರದೆ ಬೇರೆ! ನಾಯಿ ಬೊಗಳಿದಾಗ ಪರದೆ ಸರಿಸಿ ನೋಡಲು! ಹ್ಞಾಂ! ಅಲ್ಲೇ ಇದ್ದುದು ಮಜಾ! ಅಡುಗೆ ಒಲೆ ಇದ್ದುದೇ ಅಲ್ಲಿ ಒಲೆಯ ಮುಂದೆ ಕೂರಲು ಒಂದು ಕ್ರಮವಿತ್ತು. ಗೋಡೆಗೆ ಒರಗಿಕೂರಲು ಅಪ್ಪನಿಗೆ ಆ ಸ್ಥಳ ಮೀಸಲು. ನಂತರ ಅಕ್ಕ, ಅವಳ ಬಳಿಕ ನಾನು ನನ್ನ ಬಳಿಕ ಅವ್ವ. ಹೀಗೆ ಅರ್ಧಚಂದ್ರಾಕಾರದಲ್ಲಿ ಒಲೆ ಮುಂದೆ ಕೂರುತ್ತಿದ್ದೆವು.
ಹಳ್ಳಿಯಲ್ಲಿ ಕತೆ ಹುಟ್ಟುವುದೇ ಒಲೆ ಬುಡದಲ್ಲಿ! ಅಪ್ಪನ ಬಾಲ್ಯ, ಅವ್ವನ ತವರು, ನಮ್ಮ ಶಾಲೆ, ಓವ್! ನೆನೆದರೆ ಅರಳುವುದು ಮನೆ. ಅಪ್ಪ ಮಾತು ಆರಂಭಿಸಿತೆಂದರೆ ನಮ್ಮದು ಕೇಳುವುದಷ್ಟೇ ಕೆಲಸ. ಅಪ್ಪನ ಎದುರು ಹೆಚ್ಚು ಮಾತಾಡಿದ್ದೇ ಇಲ್ಲ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ನಮ್ಮ ಪ್ರಶ್ನೆ ಅವ್ವನೊಡನೆ ಹಾಗಲ್ಲ ಪ್ರಶ್ನೆಗಳ ಸುರಿಮಳೆ. ಅದಕ್ಕೆ ತಕ್ಕನಾಗಿ ಅವ್ವನ ಉತ್ತರ. ಕಾವೇರಿ ನದಿಯ ಹಟ್ಟೂರು ಭಾಗಮಂಡಲ. ನಮ್ಮ ಅವ್ವನ ತವರೂರು ಅದೇ. ಭಾಗಮಂಡಲದ ಬೆಟ್ಟ, ಅಲ್ಲಿಯ ಮಳೆ, ಚಳಿ, ಭಯ ಹುಟ್ಟಿಸುವ ಜಿಗಣೆಗಳ ವರ್ಣನೆ… ಹೀಗೆ ಒಲೆ ಮುಂದೆ ಅವ್ವನ ಅನುಭವದ ಪುಟಗಳು ತೆರೆದುಕೊಳ್ಳುತ್ತಿದ್ದವು.

ನಾವು ಹೊಸ ಮನೆಗೆ ಬಂದ ಬಳಿಕ ಬದುಕು ಕೊಂಚ ಬದಲಾಯಿತು. ಮನೆಯಿಂದ ಓ ಅಲ್ಲಿ ಸೌದೆ ಕೊಟ್ಟಿಗೆ, ಅಲ್ಲಿಂದ ಕೊಂಚ ದೂರದಲ್ಲಿ ದನದ ಕೊಟ್ಟಿಗೆ ಮೊದಲಿನಂತೆ ಮನೆಯ ಜೊತೆಯಲ್ಲಿ ಕೊಟ್ಟಿಗೆ ಇದ್ದು ಕೊಟ್ಟಿಗೆಯಿಂದ ಬರುತ್ತಿದ್ದ ಘಾಟು ಈಗ ಇಲ್ಲವಾಯಿತು. ಇದೇ ಕೊಟ್ಟಿಗೆಯಿಂದ ಕಾಳಿ ಹಸುವನ್ನು ಕಳ್ಳರು ಕದ್ದದ್ದು. ಮೂರು ನಾಲ್ಕು ವರ್ಷಕ್ಕೊಮ್ಮೆ ಮನೆಗೆ ಹೊಸ ಹುಲ್ಲಿನ ಹೊದಿಕೆ ಹಾಕುತ್ತಿದ್ದೆವು. ನಾವು ಬೆಳೆದ ಹುಲ್ಲು ಸಾಲುತ್ತಿರಲಿಲ್ಲ, ಕ್ರಯಕ್ಕೆ ಹುಲ್ಲು ತರುತ್ತಿದ್ದೆವು. ಹೊಸ ಹುಲ್ಲು ಹಾಕಿದಾಗ ದೂರದಿಂದ ಮನೆಯನ್ನು ನೋಡುವುದೇ ಚಂದ. ನಾವೇ ಹೊಸ ಬಟ್ಟೆ ತೊಟ್ಟಷ್ಟು ಖುಷಿಯಾಗುತಿತ್ತು. ಹುಲ್ಲು ಹೊದಿಸಿದ ನಂತರ ಮನೆಗೆ ‘ದೃಷ್ಟಿ ತೆಗೆಯುತ್ತಿದ್ದರು. ಮನೆಯ ನಡು ಮಾಡಿನ ಮೇಲೆ ನಿಂತು ತೆಂಗಿನಕಾಯಿ ಒಡೆದು ಎರಡು ಮಾಡಿನ ಮೇಲೆ ಗಡಿಯನ್ನು ಉರುಳಿಸುತ್ತಿದ್ದರು. ಆ ಗಡಿ ಕವುಚಿ ಬಿದ್ದರೆ ಅಪಶಕುನ! ಗಡಿ ಮೇಲ್ಮುಖವಾಗಿ ಬಿದ್ದರೆ ಶುಭದ ಸಂಕೇತ ಆಗ ಅಪ್ಪನ ಮುಖ ಅರಳಿ ನಗು ಸೂಸುತಿತ್ತು. ನಮ್ಮದು ಹಾಗಲ್ಲ, ತೆಂಗಿನ ಹೋಳು, ಚೂರು ಬೆಲ್ಲಸಿಕ್ಕಿದರೆ ಯಾವ ಅಪಶಕುನವೂ ಬೇಕಿಲ್ಲ. ಮತ್ತೆ ಯಾವಾಗ ಮನೆಗೆ ಹೊದಿಕೆ ಬರುವುದೆಂಬ ಕಾತರ-ಕಾಯಿ ಹೋಳಿಗಾಗಿ! ಹೀಗೆ ಹುಲ್ಲು ಹೊದಿಸಿದ ಬಳಿಕ ಸೂರಿನಲ್ಲಿ ಜೋಲಾಡುವ ಹುಲ್ಲನ್ನು ನೇರವಾಗಿ ಕತ್ತರಿಸುತ್ತಿದ್ದರು. ಇದೆಲ್ಲಾ ಆಗಿ ಮನೆ ಒಳಗೆ, ಹೊರಗೆ, ಅಂಗಳವೆಲ್ಲ ಗುಡಿಸಿದ ನಂತರ ಮನೆಗೊಂದು ಕಳೆಬಂದಂತೆ. ಮಳೆಗಾಲದಲ್ಲಿ ಸೂರಿನ ನೀರಿನಲ್ಲಿ ಆಟ. ನಾಲ್ಕಾರು ಹುಲ್ಲನ್ನು ಒಂದು ಮಾಡಿ ಕಟ್ಟಿದರೆ ನೀರು ಹೆಚ್ಚಾಗಿ ಅದರ ಮೂಲಕ ಸುರಿಯುತಿತ್ತು. ಹೊಗೆ ಹಿಡಿದ ಹುಲ್ಲಿನ ನೀರು ಡಿಕಾಕ್ಷನ್ ಟೀಯಂತೆ ಕಾಣುತಿತ್ತು. ಹಾಗೆ ಬಿದ್ದ ನೀರು ನೊರೆ ನೊರೆಯಾಗಿ ಹರಿಯುತ್ತಿರಲು ನಮ್ಮದು ಹಾಡೋ ಹಾಡು ಯಾವ ಭಾಷೆಯ ಹಾಡೋ, ಯಾವ ರಾಗವೋ-ಮಳೆಯಲ್ಲಿ ಕೊಡೆ ಹಿಡಿದು ನಡೆಯುವಾಗ, ಅಥವಾ ಸ್ನಾನ ಮಾಡುವಾಗ ನಾವೆಲ್ಲರೂ ಗಾನಕೋಗಿಲೆಗಳೇ ಅಲ್ವೆ?

ಅದಿರಲಿ, ಈ ನಮ್ಮ ಹೊಸ ಮನೆಯಲ್ಲಿ ವಾಸಿಸುತ್ತಿದ್ದವರು ಅಪ್ಪ, ಅವ್ವ, ಅಕ್ಕ ಮತ್ತು ನಾನು ಮಾತ್ರವಲ್ಲ, ಇಲಿಗಳು, ಕಪ್ಪೆಗಳೂ ಇದ್ದವು. ಆ ಇಲಿ ಕಪ್ಪೆಗಳನ್ನು ಹಿಡಿಯಲು ಕೇರೆ ಹಾವು, ನಾಗರಹಾವು, ಕಟ್ಟಹಾವುಗಳೂ ಬರುತ್ತಿದ್ದವು! ಬೆಕ್ಕುಗಾಬರಿಯಿಂದ ‘ಕೊಸ್ ಎಂದು ಸದ್ದು ಮಾಡಿತೆಂದರೆ ಅಲ್ಲಿ ಹಾವು ಉಂಟೆಂದೇ ನಮ್ಮ ಭಾವನೆ ಹೌದು. ದೀಪದ ಬೆಳಕಲ್ಲಿ ನೋಡಿದರೆ-ನಿಜಕ್ಕೂ ಹಾವು! ಅಪ್ಪ ಅಷ್ಟು ಶೂರನಾದರೂ ಹಾವು, ಚೇಳು, ಕಂಬಳಿ ಹುಳು ಎಂದರೆ ಆಗದು. ಅವ್ವನದು ಒಂದು ಕೈ ಮೇಲೆ. ಹಾವೋ, ಚೇಳೋ ಕಂಡೊಡನೆ ಅವುಗಳಿಗೆ ‘ಮುಕ್ತಿ ಧಾಮದತ್ತ ದಾರಿ ತೋರಿಸುತ್ತಿದ್ದಳು. ಒಮ್ಮೆ ಹೀಗಾಯ್ತು: ಅಕ್ಕ ಮಲಗಿದ್ದಳು. ನಾನು ಮಲಗುವ ಹವಣಿಕೆಯಲ್ಲಿದ್ದೆ. ಅಪ್ಪ ಗೊರಕೆ ಶುರು ಮಾಡಿತ್ತು. ಅವ್ವ ಒಲೆಯ ಕೆಂಡಕ್ಕೆ ಬೂದಿ ಮುಚ್ಚುತ್ತಿದ್ದಳು. ಬೆಳದಿಂಗಳು ಬಾಗಿಲ ಸಂಧಿಯಂದ ಅಡುಗೆ ಮನೆಯ ನಮ್ಮ ಹಾಸಿಗೆ ಮೇಲೆ ಬೀಳುತಿತ್ತು. ನಾವು ಮೂವರು ನೆಲದಲ್ಲಿ ಹಾಸಿಕೊಂಡು ಮಲಗುತ್ತಿದ್ದವರು. ನಾಯಿ ಗಾಬರಿಯಿಂದ ಒಂದೆರಡು ಬಾರಿ ಬೊಗಳಿ ಸುಮ್ಮನಾಯಿತು. ಇನ್ನೇನು ದೀಪ ಕೆಡಿಸಬೇಕೆನ್ನುವಷ್ಟರಲ್ಲಿ ಬೆಕ್ಕು ‘ಕೊಸ್ ‘ಕೊಸ್ ಅನ್ನತೊಡಗಿತು ಓ! ಏನೋ ಉಂಟು ಬೇಟೆ ಎಂದುಕೊಂಡು ಬೆಕ್ಕಿನ ಬಳಿಗೆ ಹೋದೆವು. ಅಯ್ಯವ್ವೋ ಹಾವು!! ಉದ್ದಕ್ಕೆ ಬಿದ್ದುಕೊಂಡಿದೆ. ನಾವು ಬೊಬ್ಬೆ ಹಾಕಿದರೆ ಗಾಬರಿಯಿಂದ ಹಾವು ಎಲ್ಲೆಲ್ಲೋ ಹರಿದಾಡೀತು. ಅಥವಾ ನಿದ್ದೆ ಮಾಡುತ್ತಿದ್ದ ಅಪ್ಪ, ಅಕ್ಕ ಗಾಬರಿಯಿಂದ ಎದ್ದು ಎಲ್ಲಿ ಎಂಥ ಅನ್ನುತ್ತಾ ಹಾವನ್ನೇ ತುಳಿದರೆ? ಅವ್ವ ಮಹಾ ಬುದ್ಧಿವಂತೆ ನನ್ನನ್ನು ಇಲ್ಲಿ ನಿಲ್ಲಿಸಿ, ತಾನು ಇನ್ನೊಂದೆಡೆ ನಿಂತು ಮೆಲ್ಲನೆ ನೆಲಕ್ಕೆ ದೊಣ್ಣೆಯಿಂದ ಕುಟ್ಟಿದಳು. ಬೆಕ್ಕಂತೂ ಈಗ ಹಿಡಿದೆ ಆಗ ಹಿಡಿದೆ ಅನ್ನುವಂತೆ ಪೇಚಾಡುತಿತ್ತು. ಅಷ್ಟರಲ್ಲಿ ಹಾವಿಗೆ ಏನನ್ನಿಸಿತೊ ಹಿಂಬಾಗಿಲಿನ ಕಡೆ ಹರಿಯಿತು. ಮಲಗಿದ್ದ ಅಕ್ಕನ ಕಾಲಿನ ಮೇಲೆ ಹರಿದಾಡಿ ಹಿಂಬಾಗಿಲ ಸಂಧಿಯಿಂದ ಹೊರ ಹೋಯಿತು. ಸಧ್ಯ ಅದು ನಿಷ್ಕಂಟಕ ಕೇರೆ ಹಾವು. ಅವ್ವ ಅದಕ್ಕೆ ‘ಮುಕ್ತಿಧಾಮ` ತೋರಲಿಲ್ಲ ಬದುಕಲು ಬಿಟ್ಟಳು.

ಮೊಸರನ್ನ ತಿಂದ ಅಂಗಾರ ದೇವರು

ಅಪ್ಪನಿಗೆ ದೆವ್ವ ದೇವರು ಎಂದರೆ ಭಕ್ತಿ ಹೆಚ್ಚು. ವೆಂಕಟರಮಣ ಸ್ವಾಮಿ ಮನೆ ದೇವರು. ಅಂಗಾರ ಕೊಟ್ಟಿಗೆ ದೇವರು. ಚೌಂಡಿ (ಚಾಮುಂಡಿ), ಸಂಚಾರ ಗುಳಿಗ, ರಾಹು ಗುಳಿಗ ಭೂಮಿ ದೇವರು. ಅಯ್ಯಪ್ಪ ಕಾಡಿನ ದೇವರು. ಗಣಪತಿ ವಿಘ್ನ ನಿವಾರಕ. ಹೀಗೆ ಹಿಂಡು ದೇವರುಗಳಿಗೆಲ್ಲಾ ಕಾಟಿಬೆಟ್ಟದ ಕಾಡಿನ ಮನೆಯಲ್ಲೂ ಗಮ್ಮತ್ತು!

ವೆಂಕಟರಮಣ ಸ್ವಾಮಿಯ ‘ಹರಿಸೇವೆ’ ಮಾಡಲು ದೂರದ ಊರಿಂದ ಅರ್ಚಕರು ಬರುತ್ತಿದ್ದರು. ಹತ್ತೈವತ್ತು ಭಕ್ತರು ಸೇರುತ್ತಿದ್ದರು. ದೇವರು ಮೈಮೇಲೆ ಬರುವುದು, ಹಾರುವುದು, ಕುಣಿಯುವುದು-ರಾತ್ರಿ ಇಡೀ ಕಾರ್ಯಕ್ರಮವೇ. ಅದರಲ್ಲೂ ಪಾಷಾಣಮೂರ್ತಿ ಕೋಲ (ತೆರೆ) ಎಂದ ಮೇಲೆ ಕೇಳಬೇಕೆ? ಬೆಳಗಾದ ಮೇಲೆ ಕೊಟ್ಟಿಗೆಯಲ್ಲಿ ‘ಅಂಗಾರ’ ದೇವರಿಗೆ ಕೊಡುವ ಕಾರ್ಯಕ್ರಮ ಇರುತಿತ್ತು. ಪೂಜೆ ಮುಗಿಸಿ ಎಲ್ಲರೂ ಹೋದ ಮೇಲೆ ನಾವೇ ನಾಲ್ವರು.

ಮೈಮೇಲೆ ಬರುವುದು, ಹಾರುವುದು, ಕುಣಿಯುವುದನ್ನು ನೋಡಿದ್ದ ನಾನು ಅವ್ವ ಮತ್ತು ಅಕ್ಕನ ಮುಂದೆ ಅದೇ ರೀತಿ ನಟನೆ ಮಾಡುತ್ತಿದ್ದೆ ಅಪ್ಪನ ಮುಂದೆ ಖಂಡಿತವಾಗಿ ಅಲ್ಲವೇ ಅಲ್ಲ! ಹಾಗೆ ಮಾಡಬಾರದು ಎಂದು ಅವ್ವ ಹೇಳದೆ ಇರಲಿಲ್ಲ.

ಕೊಟ್ಟಿಗೆಯಲ್ಲಿ ಅಂಗಾರದೇವರಿಗೆ ಎಡೆ ಇಡುವ ಕೆಲಸ ನನ್ನದಾಯಿತು. ಕೊಟ್ಟಿಗೆಯ ಹೊರಗಡೆ ಒಂದು ಮೂಲೆಯಲ್ಲಿ ಚಪ್ಪಟೆಯಾದ ಒಂದು ಕಲ್ಲನ್ನು ಇಟ್ಟಿದ್ದೆವು. ಅದು ಪವಿತ್ರವಾದ ಅಂಗಾರನ ಕಲ್ಲು ಎಂದಾಯಿತು. ಹಾಲು ಕರೆದು ಹೊರಬರುವಾಗ ಪ್ರತಿ ನಿತ್ಯವೂ ಆಕಲ್ಲಿಗೆ ಹಾಲನ್ನು ಎರೆಯಬೇಕು ಇದೇ ಕಲ್ಲಿಗೆ ತಿಂಗಳಿಗೊಮ್ಮೆ ಮೊಸರನ್ನದ ಎಡೆ ಇಡುತ್ತಿದ್ದೆ. ಆ ಕೆಲಸ ತುಂಬಾ ಸರಳ. ಕಲ್ಲನ್ನು ತೊಳೆದು ಕೊಡಿ ಬಾಳೆಲೆ (ತುದಿ ಎಲೆ) ಯಲ್ಲಿ ಮೊಸರನ್ನ ಇಟ್ಟು ‘ತಿರುಗಿ’ ನಿಲ್ಲುತ್ತಿದ್ದೆ ಯಾಕೆಂದರೆ ದೇವರು ಪ್ರಸಾದವನ್ನು ಸ್ವೀಕರಿಸುವಾಗ ನೋಡಬಾರದು! ಕ್ಷಣ ಹೊತ್ತು ನಾನು ಹಾಗೆ ಬೆನ್ನು ಹಾಕಿ ನಿಂತ ಬಳಿಕ ತಿರುಗಿ ಕಲ್ಲನ್ನು ನೋಡುತ್ತಿದ್ದೆ. ನಂತರ ಇಷ್ಟಗಲದ ಬಾಳೆಲೆಯನ್ನು ಹರಿದು ಒಂದಿಷ್ಟು ಮೊಸರನ್ನವನ್ನು ಕಲ್ಲಿನ ಮೇಲಿಡುತ್ತಿದ್ದೆ. ಉಳಿದ ಅನ್ನವನ್ನು ನಾನು ಅಲ್ಲೇ ಕುಳಿತು ಗುಳುಂ ಮಾಡುತ್ತಿದ್ದೆ (ಪ್ರಸಾದ ಸ್ವೀಕಾರ) ತಣ್ಣಗಿನ ಅನ್ನಕ್ಕೆ ಮೊಸರು ಹಾಕಿ ಉಂಡರೆ ಅದರ ಗಮ್ಮತ್ತೇ ಬೇರೆ! ಹಾಗಾಗಿ ನನಗೆ ಆ ಕೆಲಸ ಪ್ರಿಯವೇ. ನಾನು ಹೀಗೆ ಊಟ ಮಾಡುವಾಗ ಒಂದುಕಡೆ ದನ, ಇನ್ನೊಂದು ಕಡೆಯಿಂದ ನಾಯಿ ನನ್ನನ್ನೇ ನೋಡುತ್ತಿದ್ದವು. ನಾಯಿಗೆ ಹಾಕಬಾರದಂತೆ! ಪ್ರಸಾದ ಅಶುದ್ಧವಾಗುತ್ತೆಂಬ ನಿಯಮ! ಹಾಗಾಗಿ ನಾಯಿಗೆ ಮನೆಯಲ್ಲಿ ರೊಟ್ಟಿಗಿಟ್ಟಿ ಹಾಕುತ್ತಿದ್ದೆನೇ ವಿನಃ ಅದಕ್ಕೆ ಮೊಸರನ್ನದ ಪ್ರಸಾದ ದಕ್ಕುತ್ತಿರಲಿಲ್ಲ. ನಾನು ಉಂಡು ಕೊಂಚ ಅನ್ನವನ್ನು ಉಳಿಸಿ ಎಲೆ ಸಹಿತ ಒಂದು ಹಸುವಿಗೆ ತಿನ್ನಲು ಕೊಡುತ್ತಿದ್ದೆ. ಆಗ ಉಳಿದ ದನಗಳು ನಾಲಗೆ ಹೊರಹಾಕಿ ತಮ್ಮ ಮೂಗನ್ನು ನೆಕ್ಕಿಸಿಕೊಳ್ಳುತ್ತಿದ್ದವಷ್ಟೆ. ಇಷ್ಟೆಲ್ಲಾ ಆಗುವಾಗ ಇಷ್ಟಗಲದ ಎಲೆಯಲ್ಲಿ ಕಲ್ಲಿನ ಮೇಲೆ ಇರಿಸಿದ್ದ ಮೊಸರನ್ನ ಎಲ್ಲಿ? ಖಾಲಿ! ಅರೆ! ಅಂಗಾರ ದೇವರು ಅದನ್ನು ಯಾವಾಗ ತಿಂದುಬಿಟ್ಟ? ನಮ್ಮ ನಾಯಿ ಬಾಲ ಆಡಿಸುತ್ತಾ ‘ನಾನು ತಿಂದೆ’ ಎಂದು ನಗುತಿತ್ತು.

ಕೆಲವೊಮ್ಮೆ ಶನಿವಾರ ತೆಂಗಿನಕಾಯಿ ಒಡೆದು ಪೂಜೆ ಮಾಡಬೇಕಿತ್ತು. ಅದರ ಹೊಣೆಯೂ ನನ್ನ ಮೇಲಿತ್ತು. ಕಲ್ಲನ್ನು ತೊಳೆಯುತ್ತಿದ್ದೆ. ಕಾಯನ್ನು ಒಡೆದು ಎರಡೂ ಗಡಿಯಲ್ಲಿ ಕಾಯ ನೀರನ್ನು ಪ್ರಸಾದವಾಗಿ ಕಲ್ಲಿಗೆ ಒರಗಿಸಿಡುತ್ತಿದ್ದೆ ನಂತರ ‘ತಿರುಗಿ’ ನಿಲ್ಲುತ್ತಿದ್ದೆ ಮತ್ತೆ ಸ್ವಲ್ಪ ನೀರನ್ನು ಕಲ್ಲಿಗೆ ಸುರಿದು ಉಳಿದ ನೀರನ್ನು ನಾನೇ ಕುಡಿಯುತ್ತಿದ್ದೆ ಆಮೇಲೆ ಒಂದು ಹೋಳನ್ನು ಕಲ್ಲಿನ ಮೇಲಿಟ್ಟು ಇನ್ನೊಂದು ಹೋಳನ್ನು ನಾನು ತಿಂದು, ಮತ್ತೊಂದು ಹೋಳನ್ನು ಹಸುವಿಗೆ ಕೊಡುತ್ತಿದ್ದೆ. ಉಳಿದ ಕಾಯಿ ಮನೆಯವರಿಗೆ ಆದರೂ ನಾಯಿಗೆ ಹಾಕುವಂತಿರಲಿಲ್ಲ-ಅಶುದ್ಧವಾಗುತ್ತದೆ! ಆದರೆ ಕಲ್ಲಿನ ಮೇಲೆ ಒಂದು ಹೋಳನ್ನು ಇಡುತ್ತಿದ್ದೆನಲ್ಲಾ ಅದನ್ನು ನಾಯಿ ತಿಂದು ಬಾಲ ಆಡಿಸಿ ತಪ್ಪಾಯಿತು ಅನ್ನುತ್ತಿತ್ತೋ, ಇನ್ನು ಕೊಡು ಅಂತ ಹೇಳುತಿತ್ತೋ ಬಲ್ಲವರಾರು?

ಅಂತೂ ಭಕ್ತಿಯಿಂದ ಕೊಟ್ಟಿಗೆಯಲ್ಲಿ ಈ ರೀತಿಯ ಪೂಜಾ ಕಾರ್ಯ ನೆರವೇರುತಿತ್ತು. ದನಕರುಗಳಿಗೆ ಏನೂ ತೊಂದರೆ ಆಗದಿರಲಿ ಎಂಬ ಸದುದ್ದೇಶ ಅದರಲ್ಲಿತ್ತು. ಈ ವಿಚಾರ ಹುಲಿರಾಯನಿಗೆ ಯಾರು ಹೇಳುವವರು? ವರ್ಷದಲ್ಲಿ ಒಂದೆರಡು ರಾಸು ಹುಲಿರಾಯನ ಪಾಲಾಗುತ್ತಲೇ ಇತ್ತು.

ಕಾಡಾನೆಗಳು ನಮ್ಮ ಫಸಲಿಗೆ ತೊಂದರೆ ಕೊಡದಿರಲಿ ಎಂದು ‘ಪೈಂಗುತ್ತಿ’ ಇಡುತ್ತಿದ್ದೆವು. ಮಲೆಯಾಳ ಭಾಷಿಕನೊಬ್ಬ ನಮ್ಮ ಮನೆಗೆ ಬಂದು ಪೈಂಗುತ್ತಿ ಇಡುತ್ತಿದ್ದ. ಈ ಪೂಜೆಗೆ ಮುಖ್ಯವಾಗಿ ‘ನವಧಾನ್ಯ’ ಬೇಕಿತ್ತು. ಅಂದರೆ ಒಂಬತ್ತು ಬಗೆಯ ಧಾನ್ಯವನ್ನು ಮಿಶ್ರಮಾಡಿ ಎಡೆ ಇಡುವುದು ಅದರ ಕ್ರಮ. ಅಕ್ಕಿ ಮತ್ತು ರಾಗಿ ನಮ್ಮಲ್ಲಿರುತಿತ್ತು. ಇನ್ನು ಉಳಿದಂತೆ ಹೆಸರು, ಕಡಲೆ ಮುಂತಾದವನ್ನು ಸಂತೆಯಿಂದ ತರಬೇಕು. ಇದರಲ್ಲಿ ವಿಶೇಷವಾಗಿ ಒಣ ಮೀನು ಇರಲೇ ಬೇಕು. ಕುರ್ಚಿ ಮೀನೋ ಮತ್ತಿ ಮೀನೋ ಸ್ಪಷ್ಟವಾಗಿ ನೆನಪಿಲ್ಲ, ಅಂತೂ ಒಣಮೀನು ಇತ್ತು. ಅದನ್ನು ಸುಟ್ಟು ನವಧಾನ್ಯಕ್ಕೆ ಮಿಶ್ರ ಮಾಡಬೇಕು. ನಂತರ ತೆಂಗಿನ ಕಾಯಿ ಹೋಳನ್ನು ಸೇರಿಸಬೇಕು. ಮೊದಲು ವಿಘ್ನನಿವಾರಕ ಗಣಪನಿಗೆ ಬಾಳೆಲೆಯಲ್ಲಿ ಅಕ್ಕಿಯ ಮೇಲೆ ತೆಂಗಿನಕಾಯಿಯನ್ನು ಕೂರಿಸಿದ ಬಳಿಕ ‘ಪೈಂಗುತ್ತಿ’ ಇಡುತ್ತಿದ್ದ. ನಾಲ್ಕಾರು ಮಾತುಗಳನ್ನು ಹೇಳಿಕೊಂಡ ಬಳಿಕ ‘ನವಧಾನ್ಯದ’ ಪ್ರಸಾದ ವಿತರಣೆಯಾಗುತಿತ್ತು. ಬಗೆಬಗೆಯ ಕಾಳುಗಳೊಂದಿಗೆ ತೆಂಗಿನಕಾಯಿ ಮತ್ತು ಸುಟ್ಟ ಒಣಮೀನು ವಿಶೇಷ ರುಚಿಕೊಡುತಿತ್ತು.

ಈ ಪೂಜೆ ವರ್ಷಂಪ್ರತಿ ಅಲ್ಲದಿದ್ದರೂ ಆನೆಗಳ ಹಾವಳಿ ತೀವ್ರವಾದ ವರ್ಷ ಮಾಡುತ್ತಿದ್ದೆವು. ಆದರೇನು? ಅವುಗಳು ಮಾಮೂಲಿಯಂತೆ ಬಾಳೆ, ಬತ್ತದ ಬೆಳೆಯನ್ನು ನಾಶಮಾಡದೆ ಇರುತ್ತಿರಲಿಲ್ಲ. ನಮಗೆ ತುಂಬಾ ಖುಷಿ ಕೊಡುತ್ತಿದ್ದುದು ಸತ್ಯನಾರಾಯಣ ದೇವರ ಪೂಜೆ. ಈ ಪೂಜೆಯನ್ನು ಕೆಲವೊಮ್ಮೆ ದನದ ಕೊಟ್ಟಿಗೆಯಲ್ಲಿ ಮಾಡಿಸುತ್ತಿದ್ದೆವು. ಕೊಟ್ಟಿಗೆಯ ಗುಂಡಿ ಗುಡುಪುಗಳನ್ನೆಲ್ಲಾ ಮುಚ್ಚಿ, ಗುಡಿಸಿ ಸಗಣಿಯಿಂದ ಸಾರಿಸಿ ಅಂಗಳದಂತೆ ಮಾಡುತ್ತಿದ್ದೆವು. ಎಲ್ಲವೂ ಶುದ್ಧವೋ ಶುದ್ಧ! ಒಣ ಮೀನು ಇತ್ಯಾದಿ ಮನೆಯೊಳಗೆ ಇರುವಂತಿಲ್ಲ. ಬಯ್ಗುಳ, ಹೊಡೆದಾಟ ನಿಷಿದ್ಧ. ಪೂಜೆಯ ದಿನ ನಾಯಿ, ಕೋಳಿಗಳಿಗೆಲ್ಲಾ ಬಂಧನ! ನಾವು ಗುರುಗಳ ಅನುಮತಿಯೊಂದಿಗೆ ಶಾಲೆಗೆ ಗೈರು. (‘ಗೈರು’ ಹಾಜರು)

ಅರ್ಚಕರು ಬರುವಾಗ ದೇವರ ಫೋಟೋವನ್ನು ತರುತ್ತಿದ್ದರು. ಫೋಟೋ (ಚಿತ್ರಪಟ)ವನ್ನು ನಡುವಿನಲ್ಲಿರಿಸಿ ಹೂವಿನಿಂದ ಅಲಂಕರಿಸಿ ಪೂಜಾಕಾರ್ಯವನ್ನು ಮುಂದುವರಿಸುತ್ತಿದ್ದರು. ಅಷ್ಟರಲ್ಲಿ ಹತ್ತಾರು ಭಕ್ತರು ಬಂದು ಸೇರಿಕೊಳ್ಳುತ್ತಿದ್ದರು. ಈ ಪೂಜೆಯ ವಿಶೇಷತೆಯೆಂದರೆ ಮನೆಯವರು ‘ಪೂಜೆಗೆ ಬನ್ನಿ’ ಎಂದು ಕರೆಯದಿದ್ದರೂ ಭಕ್ತರ ಕಿವಿಗೆ ಅಲ್ಲಿ ಪೂಜೆ ಇದೆಯಂತೆ ಎಂದು ತಿಳಿದರೂ ಸಾಕು ಹೋಗಲೇ ಬೇಕು! ಅದಿರಲಿ, ಮಂತ್ರಘೋಷ ನಡೆಯುತ್ತಿದ್ದಂತೆ ಅರ್ಚಕರು ತಂದೆಯ ಹೆಸರು, ನಕ್ಷತ್ರ ಇತ್ಯಾದಿಗಳನ್ನು ಕೇಳಿಕೊಂಡು ದೇವರಿಗೆ ಮಂತ್ರದೊಡನೆ ಹೇಳಿ ಒಪ್ಪಿಸುತ್ತಿದ್ದರು. ಇದೇ ಕ್ರಮದಲ್ಲಿ ನನ್ನ ಸರದಿ ಬಂದಾಗಲೂ ನನ್ನ ಹೆಸರು ನಕ್ಷತ್ರ ಇತ್ಯಾದಿಗಳನ್ನು ದೇವರಿಗೆ ಹೇಳುತ್ತಿದ್ದರು. ನನಗೆ ಒಳಗೊಳಗೇ ಖುಷಿ! ಸತ್ಯನಾರಾಯಣಸ್ವಾಮಿಗೆ ನನ್ನ ಹೆಸರು ಗೊತ್ತು! ನನ್ನ ಅಕ್ಕನ ಹೆಸರೂ ಗೊತ್ತು! ಇಡೀ ನಮ್ಮ ಮನೆಯವರ ಹೆಸರು ಗೊತ್ತು! ನಾವೇ ಗ್ರೇಟು! ನಮ್ಮ ಕಷ್ಟವೆಲ್ಲಾ ಪರಿಹಾರ ಆದಂತೆ…! ಅರ್ಚಕರು ಘಂಟೆ ಆಡಿಸುತ್ತಾ, ಆರತಿ ಬೆಳಗುತ್ತಾ ‘ಮಹಾ ಮಂಗಳಾರತಿ’ ಮಾಡುತ್ತಿರಲು ಇನ್ನೊಂದು ಕಡೆಯಿಂದ ಶಂಖ, ಜಾಗಟೆಯ ನಾದ ಮೊಳಗುತಿತ್ತು. ಇದಾಗಿ ಅರ್ಚಕರಿಂದ ಕಥೆ ಓದಿ ಹೇಳುವ ಘಟ್ಟ. ಇದಾದ ನಂತರ ಸೊಂಟ ಬಗ್ಗಿಸಿ ನಿಂತು ಅರ್ಚಕರಿಂದ ಗೌರವಯುತವಾಗಿ ಪಡೆದ ಪ್ರಸಾದ ರವೆ ಉಂಡೆಯ ರಸಗವಳ! ರವೆ ಉಂಡೆ ಸಿಕ್ಕಿತೋ ಇಲ್ಲವೋ ಅನ್ನುವಷ್ಟರಲ್ಲಿ ‘ಲಬಕ್’ ಎಂದು ಬಾಯೊಳಗೆ ಹಾರುತಿತ್ತು. ಅದನ್ನು ಜಗಿಯುವ ಪ್ರಸಂಗವೇ ಇಲ್ಲ. ಆಚೆ ಉರುಳಿಸಿ ಈಚೆ ಗುಳುಂ ಮಾಡಿ ಓರೆಗಣ್ಣಿನಿಂದ ಇನ್ನೊಂದು ಉಂಡೆಗಾಗಿ ಕಾಯುತ್ತಿದ್ದೆವು. ಆದರೆ ಒಬ್ಬನಿಗೆ ಒಂದೇ ಉಂಡೆ! ಬಾಯಿ ನೀರೂರಿಸುವ ಆ ಉಂಡೆ ಮತ್ತೊಮ್ಮೆ ಸಿಗಬೇಕಾದರೆ ಇನ್ನೊಂದು ಪೂಜೆಯ ವರೆಗೆ ಕಾಯಬೇಕಿತ್ತು. ಪೂಜೆಯ ಬಳಿಕ ಎಲ್ಲರಿಗೂ ಅನ್ನ ಪಾಯಸದ ಊಟ. ನಂತರ ಅರ್ಚಕರು ತಾವೇ ಹೊತ್ತು ತಂದಿದ್ದ ದೇವರ ಚಿತ್ರ ಪಟವನ್ನು ಹೆಗಲೇರಿಸಿ ಹೊರಡುತ್ತಿದ್ದರು.

ಇನ್ನೊಮ್ಮೆ ನಮ್ಮ ಮನೆಯಲ್ಲಿ ‘ದೇವರು ನಿಲ್ಲುವ’ ಪ್ರಸಂಗ ನಡೆಯಿತು. ಒಂದು ಸಂಜೆ ಜಡಿಯ ಎಂಬ ವೃದ್ಧರೊಬ್ಬರು ಬಂದರು. ಜೊತೆಯಲ್ಲಿ ಸಹಾಯಕನೂ ಇದ್ದ. ದೇವರು ಬರುವುದು ಜಡಿಯನ ಮೇಲೆ. ಆತ ಬಯಲಲ್ಲೇ ಸ್ನಾನ ಮಾಡಿದ. (ನಾವೂ ಸ್ನಾನ ಮಾಡುತ್ತಿದ್ದುದು ರಾತ್ರಿ ಸೂರಿನ ಕೆಳಗೆ!) ಸ್ನಾನದ ಬಳಿಕ ದುಡಿ ಬಡಿಯುತ್ತಾ ದೇವರನ್ನು ಕರೆಯುವುದು ಪ್ರಾರಂಭವಾಯಿತು. ದೇವರು ಬರುವಾತ ಸ್ಟೂಲಿನ ಮೇಲೆ ಕುಳಿತಿದ್ದ. ಶಿಷ್ಯ ದುಡಿಬಡಿಯುತ್ತಿರಲು ದೇವರು ಮೆಲ್ಲ ಮೆಲ್ಲನೆ ಬಂದು ಜಡಿಯನ ಮೈಮೇಳೆ ಬಂದೇ ಬಂತು. ಆತ ಎದ್ದು ನಿಂತ ಜೋರು ಜೋರೇ ಹಾರಿದ, ಕುಣಿದ. ಅಷ್ಟರಲ್ಲಿ ದೇವರಿಗೆ ಬಾಯಾರಿಕೆ ಆಯಿತು. ಬಾಯಿ ಚಪ್ಪರಿಸಿ ನಾಲಗೆ ಹೊರ ಹಾಕಿದ. ಹಾಗೆ ಕೇಳಿದ ಕೂಡಲೆ ಶಿಷ್ಯನು ಸಾರಾಯಿಯನ್ನು ಕುಡಿಯಲು ಕೊಡುತ್ತಿದ್ದ. ಮೈಮೇಲೆ ಬಂದ ದೇವರು ಬಿಸಿಲು ಮಾರಿಯೊ ಕನ್ನಂಬಾಡಿ ಅಮ್ಮನೊ! ಹೆಚ್ಚು ಮಾತಿಲ್ಲ. ಆಗೊಮ್ಮೆ ಈಗೊಮ್ಮೆ ಸೂಚನೆಯಷ್ಟೆ. ಅದು ಶಿಷ್ಯನಿಗೆ ಮಾತ್ರ ಗೊತ್ತಾಗುತಿತ್ತು. ಅವನು ಅದನ್ನು ಬಿಡಿಸಿ ಹೇಳುತ್ತಿದ್ದ. ನಂತರ ಕೇಳುವವರು ದೇವರ ಮುಂದೆ ಕೈ ಮುಗಿದು ನಿಲ್ಲುತ್ತಿದ್ದರು. ಆಗ ದೇವರು ಅಕ್ಕಿ ಕಾಳನ್ನು ಮೇಲಕ್ಕೆ ಎಸೆದು ಮತ್ತೆ ಹಿಡಿದು ಭಕ್ತನ ಕೈ ಮೇಲಿರಿಸುತ್ತಿದ್ದ. ಅಕ್ಕಿ ಕಾಳು ಮೂರು, ಐದು, ಏಳರ ಲೆಕ್ಕದಲ್ಲಿ ಬರಬೇಕು ಹಾಗೆ ಬಂದಲ್ಲಿ ಶುಭದ ಸಂಕೇತ. ಅದನ್ನು ‘ನಡೆದು ಬಂದುದು’ ಎನ್ನುತ್ತಾರೆ. ಭಕ್ತರೆಲ್ಲರ ಕೈಯಲ್ಲೂ ಇದೇ ಲೆಕ್ಕಾಚಾರದ ಕಾಳು ಇರುತಿತ್ತು.

ನಾಲ್ಕು, ಆರು, ಎಂಟರ ಲೆಕ್ಕದಲ್ಲಿ ಅಕ್ಕಿ ಕಾಳು ಬಂದಿದ್ದಲ್ಲಿ ಒಂದು ಕಾಳನ್ನು ಮೆಲ್ಲನೆ ನೆಲಕ್ಕೆ ಹಾಕಿಬಿಡುತ್ತಿದ್ದರೆಂದೇ ನನ್ನ ಊಹೆ. ಇಲ್ಲದಿದ್ದರೆ ಎಲ್ಲರಿಗೂ ‘ವಿಸಮ’ ಸಂಖ್ಯೆಯ ಕಾಳು ಬರಲು ಹೇಗೆ ಸಾಧ್ಯ? ಅದು ಹೇಗಾದರೂ ಇರಲಿ, ಆ ದೇವರ ಅಂಗೈಯಲ್ಲಿ ಬೆಂಕಿ! ಧಗ ಧಗನೆ ಉರಿಯುತ್ತಿದ್ದ ಬೆಂಕಿಯನ್ನು ಕಂಡು ನಾನಂತೂ ಭಯ, ಗೌರವ ಮತ್ತು ಅಚ್ಚರಿಯಿಂದ ಕೈ ಮುಗಿದು ನಿಂತೆ. ಅಷ್ಟರಲ್ಲಿ ಒಬ್ಬರು ‘ಭಕ್ತೆ’ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮುಂದೆ ಬಂದಳು. ಆಗ ದೇವರ ಕೈಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಆಕೆಯ ನೆತ್ತಿಯ ಮೇಲಿದ್ದು ‘ಅಭಯ’ ಹಸ್ತ ನೀಡಿದ. ಆ ಹೆಂಗಸಿನ ನೆತ್ತಿಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನೋಡಿದ ನನಗೆ ಕೊಟ್ಟಿಗೆ ನೆನಪಾಯಿತು. ಹಿಂದೊಮ್ಮೆ ಅಪ್ಪ ಎತ್ತಿನ ಕೋಡಿಗೆ ಬೆಂಕಿ ಇಟ್ಟದ್ದು, ಆ ಬೆಳಕಲ್ಲಿ ಕೊಟ್ಟಿಗೆ ಬೆಳಗಿದ್ದು… ಓಹೋ! ಈಕೆಯ ಹಲ್ಲು ಕೂಡ ಸಡಿಲ ಆಗಿರಬೇಕು. ಅಲುಗಾಡುವ ಹಲ್ಲು ಗಟ್ಟಿ ಆಗಬೇಕಾದರೆ ನೆತ್ತಿ ಮೇಲೆ ಬೆಂಕಿ ಉರಿಸಬೇಕು. ನನ್ನ ಅಪ್ಪನ ಮದ್ದು ಈ ಜಡಿಯನ ಬಳಿಯೂ ಉಂಟೆ? ಆದರೆ ಅಂದು ಎತ್ತಿನ ಕೋಡು ಕರಕಲು ಆದಂತೆ ಈಕೆಯ ತಲೆ ಕರಕಲಾಗಿಲ್ಲ! ಒಂದು ಚೂರು ಕೂಡ ಬೆಂಕಿಯ ಕಾವು ಮುಟ್ಟಲಿಲ್ಲ! ಅರೆ! ಇದೇನು? ಓ! ಇದೇ ಅಲ್ಲವೆ ‘ದೇವರ ಮಹಿಮೆ?

ಇದಾಗಿ ಸ್ವಲ್ಪ ಹೊತ್ತಿನ ಬಳಿಕ ಅಪ್ಪ ದೇವರನ್ನು ಏನೇನೋ ಬೇಡಿಕೊಂಡಿತು. ಹೀಗೆ ಬೇಡಿಕೊಳ್ಳುತ್ತಿರುವಾಗ ಮನೆಯ ಹಿತ್ತಲಿನೆಡೆಗೆ ಹೋಗಬೇಕೆಂದು ದೇವರು ಸಲಹೆ ನೀಡಿತು. ಆ ಪ್ರಕಾರ ನಾವೆಲ್ಲ ದೊಂದಿ ಬೆಳಕಿನಲ್ಲಿ ಹಿತ್ತಲಲಿನ ಬೇಲಿಕಡೆಗೆ ಹೋದೆವು ಬೇಲಿಸಂಧಿಯಲ್ಲಿ ಒಂದು ಸಣ್ಣ ಕುಡಿಕೆ! ಹ್ಞಾ! ‘ಇದೇ ನೋಡಿ, ನಿಮಗೆ ಮಾಟ ಮಾಡಿಟ್ಟದ್ದು’ ಎನ್ನುತ್ತ ದೇವರು ಕುಡಿಕೆಯನ್ನೆತ್ತಿ ತೋರಿಸಿತು. ಅದನ್ನು ನೊಡಿದ ಕೂಡಲೆ ಅಪ್ಪನಿಗೆ ಕೋಪ ಬಂತು. ನಮಗೆ ಮಾಟ ಮಾಡಿದ್ದಾರಲ್ಲ, ಕಾಡಿನಲ್ಲೂ ಈ ಜನ ಬದುಕಲು ಬಿಡೋದಿಲ್ಲ, ಓ ದೇವರೇ… ಇದು ಅಪ್ಪನ ಪ್ರಲಾಪ ಇದಕೇನು ಪರಿಹಾರ? ಮನೆಯ ನಾಲ್ಕು ಮೂಲೆಗೆ ನಾಲ್ಕು ಮೊಳೆ ಜಡಿಯಬೇಕು. ಹಾಗೆ ನಾಲ್ಕು ಮೊಳೆ ಜಡಿದೂ ಆಯಿತು. ಮತ್ತೊಂದು ಸಣ್ಣ ಕುಡಿಕೆಯೊಳಗೆ ಏನೇನೋ ಹಾಕಿ ಬಾಯಿಕಟ್ಟಿ ಬಿಳಿ ಬಟ್ಟೆಯಿಂದ ಸೂರಿಗೆ ಕಟ್ಟಲಾಯಿತು. ಗೃಹಲಕ್ಷ್ಮಿ ಮನೆಯಿಂದ ಹೊರ ಹೋಗದಿರಲೆಂದೆ? ಅಥವಾ ಬೇರಾವುದೇ ‘ಶನಿ’ ಈ ತಡೆಯನ್ನು ದಾಟಿ ಒಳಗೆ ನುಗ್ಗಬಾರದೆಂದೆ? ಅಂತೂ ಆ ರಾತ್ರಿ ನಮ್ಮ ಮನೆಗೆ ದೇವರು ಬಂದು ನಮಗೆಲ್ಲ ಅಭಯ ನೀಡಿತು. ಮನೆಯ ನಾಲ್ಕು ಮೂಲೆಗೆ ಮೊಳೆ ಜಡಿದು ಇಂದೋ ನಾಳೆಯೋ ಮುರಿದು ಬೀಳಲಿರುವ ಮನೆಗೆ ಭದ್ರತೆ ಮಾಡಿ ಜಡಿಯನ ತಂಡ ಹೊರಟಿತು-ಚೀಲ ತುಂಬಿಕೊಂಡು.

ಮನೆಗೆ ‘ತಡೆಗಟ್ಟು’ ಮಾಡಿದ್ದು ಸಮಾಧಾನ ತಂದಿತು, ನಿಜ ಆದರೆ ಆ ಬೇಲಿಸಂಧಿಯಲ್ಲಿ ಸಣ್ಣಕುಡಿಕೆ ಇಟ್ಟವರಾರು? ಮಾಟ ಮಾಡಿದವರಾರು? ಜಡಿಯನ ತಂಡ ಅಸಮಾಧಾನದ ಕಿಡಿ ಊದಿತು. ಹಗೆಯ ಹೊಗೆ ಎಬ್ಬಿಸಿತು. ಅವರ ಕಪಟತನ ಮುಗ್ಧ ಕುಟುಂಬಕ್ಕೆ ಅರ್ಥವಾಗಲೇ ಇಲ್ಲ.

ಕರೆದುಕೋ ಬಾ ಯಮರಾಯಾ…

ಸುಳುಗೋಡಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿಗೊಂದು ನಾಟಕ ತಂಡ ಬಂದಿತ್ತು. ಅದು `ಸದಾರಮೆ’ ನಾಟಕ ತಂಡ. ಮನೆ ಮಂದಿಯೆಲ್ಲಾ ನಾಟಕ ನೋಡಲು ಬರಬೇಕೆಂದು ನಮ್ಮ ಗುರುಗಳು ಹೇಳಿದ್ದರು. ನಾಟಕ ಪ್ರದರ್ಶನ ಇದ್ದುದು ರಾತ್ರಿ. ಹಾಗಾಗಿ ಆ ದಿನ ಮಧ್ಯಾಹ್ನವೇ ಮಕ್ಕಳನ್ನು ಕಳುಹಿಸಿದ್ದರು. ನಮಗೆ ಎಲ್ಲಿಲ್ಲದ ಕುತೂಹಲ. ನಾಟಕ ಎಂದರೇನೆಂದು ಗೊತ್ತಿರದ ನಾವು ಓಡೋಡುತ್ತಲೇ ಮನೆ ಸೇರಿದೆವು. ಅವ್ವನನ್ನು ಪುಸಲಾಯಿಸಿ ನಾಟಕ ನೋಡಲು ಒಪ್ಪಿಸಿದೆವು. ಅಪ್ಪನಿಂದ ಅನುಮತಿ ಸಿಕ್ಕಿದ್ದು ನಮ್ಮ ಪುಣ್ಯ. ದನಗಳನ್ನು ಕಟ್ಟಿ, ಕೋಳಿಗಳನ್ನು ಮುಚ್ಚಿ, ನಾಯಿಯನ್ನು ಕಟ್ಟಿ, ರಾತ್ರಿಗೆ ಅಡುಗೆ ಮಾಡಿಟ್ಟು, ಅಪ್ಪನಿಗೆ ಹೇಳಿ ನಾವು ಮೂವರು ನಾಟಕ ನೋಡಲು ಹೊರೆಟೆವು. ಕುತೂಹಲವಿದ್ದಲ್ಲಿ ಆಯಾಸವೆಲ್ಲಿ? ದಿನಕ್ಕೆ ಎರಡು ಬಾರಿ ಶಾಲೆಯನ್ನು ನೋಡುವಂತಾಯಿತು.

ಶಾಲೆಯನ್ನು ತಲುಪಿದೆವು. ಶಾಲೆಯ ಹಿಂದೆ ಇಂಜಿನ್‌ನ ಸದ್ದೋ ಸದ್ದು. ಡೈನಮೋ ಆರ್ಭಟಿಸುತ್ತಾ ತನ್ನ ಕೆಲಸ ಮಾಡುತ್ತಾ, ಬೆಳಕನ್ನು ಹೊರಸೂಸುತಿತ್ತು. ಆ ಬೆಳಕಲ್ಲಿ ಶಾಲೆ ಬೆಳಗುತಿತ್ತು. ಅಂಗಳದ ತುಂಬಾ ಪ್ರೇಕ್ಷಕರು ಕುಳಿತು ಹರಟುತ್ತಿದ್ದರು. ನಾವೂ ಮಣೆಯಷ್ಟು ಎತ್ತರದ ಬೆಂಚಲ್ಲಿ ಕುಳಿತೆವು. ನಾಟಕ ಪುಕ್ಕಟೆಯೋ ಅಥವಾ ಟಿಕೆಟ್ ಇತ್ತೋ ನೆನಪಿಲ್ಲ. ನಾಟಕ ಆರಂಭವಾಯಿತು.

ನಾಟಕದ ಸಂಭಾಷಣೆ ಏನೋ ಎಂತದ್ದೋ. ಅಂತೂ ನಾವೆಂದೂ ನೋಡರಿಯದ ವೇಷ ತೊಟ್ಟು ನಟರು ಓಡಾಡುತ್ತಿದ್ದರು. ಒಬ್ಬ ನಟ ದಿಂಬಿನ ಮೇಲೆ ತಲೆಯಿಟ್ಟು ಮಲಗಿದ್ದ. ಆಗ ಮತ್ತೊಬ್ಬ ನಟ ಆತನ ಬಳಿಗೆ ಬಂದು ಮೂಗಿಗೆ ಟವಲಿನ ಅಂಚಿನ ದಾರವನ್ನು ತೂರಿಸಿದ. ಮಲಗಿದ್ದಾತನಿಗೆ ಸೀನು ತಡೆಯಲಾಗಲಿಲ್ಲ. ಸೀನಲು ತಲೆಯೆತ್ತಿದಾಗ ಕಳ್ಳವೇಷಧಾರಿ ನಟ ಸರಕ್ಕನೆ ದಿಂಬನ್ನು ಎಳೆದೊಯ್ದ. ಪ್ರೇಕ್ಷಕ ವೃಂದ `ಗೊಳ್’ಎಂದು ನಕ್ಕಿತು. ನಂತರ ಸದಾರಮೆ ಸದಾರಮೆ ಸದಾರಮೆ. ಸದಾರಮೆ ನಂಬಿದವರಿಗೆ… ಹೀಗೆ ಎಂತದೋ ಒಂದು ಹಾಡು ಮುಗಿಯಿತು. ಮಾತೂ ಮುಗಿಯಿತು. ನಾಟಕ ಆಯಿತು. ನಾವು ನಮ್ಮ ನಮ್ಮ ದಾರಿ ಹಿಡಿದೆವು.ತಿಂಗಳು ಮೂಡಿತ್ತು ದಾರಿಯಲ್ಲಿ. ಒಂದಷ್ಟು ದೂರ ನಾಟಕ ನೋಡಲು ಬಂದ ಅವರಿವರಿದ್ದರು. ರಸ್ತೆಯ ಎರಡೂ ಕಡೆ ಕಾಫಿ ಕಿತ್ತಲೆ ತೋಟವಿತ್ತು. ಹಾಗೆ ನಡೆದು ನಡೆದು ರಸ್ತೆಯನ್ನು ಬಿಟ್ಟು ಕಿರುದಾರಿಯ ಕಡೆ ತಿರುಗಿದೆವು. ದಾರಿಯುದ್ದಕ್ಕೂ ನಾಟಕದ ಮಾತು ನಡದೇ ಇತ್ತು. ಊರು ಕೊನೆಯಾಯಿತು. ದಟ್ಟಕಾಡಿನ ಕಿರುದಾರಿ, ಅದು ನಮ್ಮ ದಾರಿ. ಆ ದಾರಿಯಲ್ಲಿ ನಾವು ಮೂವರೇ. ಓ ದೇವರೇ! ಬೇಕಿತ್ತಾ ನಾಟಕ?

ನಮ್ಮ ಗುನು ಗುನು ಮಾತು ನಿಂತಿತು. ಪಿಸು ಮಾತಿಗಿಳಿದೆವು. ಕಾಡು ದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರು ನಡೆಯಬೇಕು. ಹಾಗಾದರೆ ಮುಂದೆ ನಡೆಯುವವರು ಯಾರು? ಅವ್ವನಲ್ಲದೆ ಮತ್ತಾರು? ನಡುವೆ ಮತ್ತು ಹಿಂದೆ? ಒಂದು ಕ್ರಮದ ಪ್ರಕಾರ ನಾನು ನಡುವೆ, ಅಕ್ಕ ಹಿಂದೆ ಇರಬೇಕು. ಆದರೆ ಇಲ್ಲಿ ಆ ಕ್ರಮ ತಪ್ಪಿತು. ಅಕ್ಕ ಹಿಂದೆ ನಿಲ್ಲಲು ಸುತಾರಾಂ ಒಪ್ಪಲೇ ಇಲ್ಲ. ಕೊನೆಗೆ ಆ ಸ್ಥಾನ ನನಗಾಯಿತು. ಆಕೆಗೆ ನಡುವಿನ ಸ್ಥಾನ ದೊರಕಿತು. ಅವಳು ರಾತ್ರಿ ಹೊತ್ತಿನಲ್ಲಿ ನಡೆಯುವಾಗ ಕೊನೆಯವಳಾಗುತ್ತಲೇ ಇರಲಿಲ್ಲ. ಏಕೆಂದರೆ ರಾತ್ರಿ ಹಿಂದೆ ಇರುವವರ ಕಾಲನ್ನು ದೆವ್ವ ಮುಟ್ಟುತ್ತದೆ, ಮೈಯನ್ನೂ ಅದು ಮುಟ್ಟುತ್ತದೆ ಎಂದು ಯಾರೋ ಹೇಳಿದ್ದರು. ನಾನು ಗಂಡು, ಧೈರ್ಯಮಾಡಿ ಹಿಂದೆ ನಿಂತೆ ಆದರೇನು? ನಾನಂತೂ ಹೆದರಿ ಹೆದರಿ ಬೆಂಡಾಗಿದ್ದೆ. ಪದೇ ಪದೇ ಕೈಯಲ್ಲಿ ಹಿಂದೆ ತಡಕಾಡಿದ್ದೆ. ದೆವ್ವವೇನಾದರೂ ಹಿಂದೆ ಇದ್ದರೆ ಕೂಡಲೆ ಅವ್ವನಿಗೆ ಹೇಳಬಹುದೆಂದು. ಎಡಬಲಕ್ಕೆ ಕೈ ಚಾಚಿದರೆ ಕಾಡು. ಪಾದ ನುಸುಳುವಷ್ಟೇ ಅಗಲದ ದಾರಿ. ಹುಲ್ಲು ಕಳೆ ತುಂಬಿದ ಕಿರುದಾರಿ. ಯಾರಿಗೂ ಪಾದರಕ್ಷೆ ಇಲ್ಲ. ಹಾವೂ ಇರಬಹುದು, ಚೇಳೂ ಇರಬಹುದು. ತಿಂಗಳ ಬೆಳಕೇ ದಾರಿ ದೀಪ. ಬಯಲು ದಾರಿಯಲ್ಲಿ ತಿಂಗಳು ಬೆಳಕಲ್ಲಿ ನಡೆಯಬಹುದು. ಕಾಡಿನಲ್ಲಿ ಚಂದ್ರ ಎಷ್ಟು ಬೆಳಗಿದರೇನು ದಾರಿಗಡ್ಡವಾದ ಬೇರು, ಕಡ್ಡಿಯೆಲ್ಲಾ ಹಾವಿನಂತೆ, ನೆರಳೆಲ್ಲಾ ಆನೆಯಂತೆ…

ಆ ಕಾಡು ಶುರುವಾಗುವಲ್ಲಿ ಜೋಡುಕಟ್ಟೆ ಕೆರೆಯಿತ್ತು. ಕಾಡಿನಲ್ಲಿ ಇರುವ ಕೆರೆಗೆ ಇಂತಹ ಕಾಡು ಪ್ರಾಣಿಗಳೇ ನೀರು ಕುಡಿಯಲು ಬರುತ್ತವೆಂದು ಹೇಳುವುದು ಹೇಗೆ? ಆನೆಯೂ ಬರಬಹುದು, ಹುಲಿಯೂ ಬರಬಹುದು. ಕಾಡುಕೋಣ, ಕಾಡು ಹಂದಿ, ಕಡವೆ, ಜಿಂಕೆ…ಮೈಯೆಲ್ಲಾ ಕಣ್ಣು, ಕವಿಯಾದವರಂತೆ ಸೂಕ್ಷ್ಮಾತಿ ಸೂಕ್ಷ್ಮರಾಗಿ ನಡೆಯತೊಡಗಿದೆವು. ಕಾಡುಹುಳುಗಳ ಕಿರಿ ಕಿರಿ ಪಿರಿ ಪಿರಿ ಕೂಗು, ನಮ್ಮ ನಡಿಗೆಯೆ ಸರಪರ ಸದ್ದು… ಅವ್ವಾ, ನಿಲ್ಲವ್ವಾ… ಅಕ್ಕನ ಪಿಸುಧ್ವನಿಯ ಮೊರೆತ! ಅವ್ವ ಕೆರೆಯಲ್ಲಿ ಆನೆಯಿದೆ ಜಳ ಬಳ ಸದ್ದು ಕೇಳ್ತಿದೆ ಎಂದಳು. ನಾವು ಗಕ್ಕನೆ ನಿಂತೆವು. ಸದ್ದನ್ನಾಲಿಸಿದೆವು ನಮಗೆ ಜಳ ಬಳ ಸದ್ದು ಕೇಳಲಿಲ್ಲ. ಅದ್ದಾ! ಆನೆ ನೀರು ಕುಡಿಯುವ ಸದ್ದು! `ಗೊಡ ಗೊಡ’ ಅಂತ ಕೇಳ್ತಿದೆ ಎಂದಳು. ನನಗೆ ಹೊಟ್ಟೆಯೊಳಗಿನ ನಡುಕ ಕೈ ಕಾಲಿಗೆಲ್ಲಾ ವ್ಯಾಪಿಸಿತು. ಗೆಜ್ಜೆ ಕಟ್ಟಿದ್ದರೆ ಸದ್ದಾಗುತಿತ್ತೇನೊ ಅನ್ನುವಷ್ಟು ಹೆದರಿದ್ದೆ. ಅರೆ! ನಮಗೆ ಕೇಳದೆ ಸದ್ದು ಇವಳಿಗೆ ಕೇಳುತ್ತಿದೆಯಲ್ಲಾ… ಕೊನೆಗೆ ನಮಗೂ ಆ ಸದ್ದು ಕೇಳಿದಂತೆ, ಆನೆಯ ಸಿಂಡು (ವಾಸನೆ) ಬರುವಂತಾಯಿತು. ಅವ್ವ ಹೇಳಿದ್ದು ನಿಜವೆ? ನಮಗೆ ಕೇಳಿದ್ದು ನಿಜವೇ? ಅಂತೂ ಇಂತೂ ಕೆರೆಯ ಸರಹದ್ದನ್ನು ದಾಟಿಬಿಟ್ಟೆವು!! ಮುಂದೆ? ಮತ್ತೊಂದು ವಿಘ್ನ! ಅಲ್ಲಿರುವುದು ನಮ್ಮ ಸಂಬಂಧಿಕರೊಬ್ಬರ ಸುಡುಕುಣಿ! (ಸ್ಮಶಾನ)

ಶಾಲೆಗೆ ನಿತ್ಯವೂ ಇದೇ ದಾರಿಯಲ್ಲಿ ಹೋಗಿ ಬರುತ್ತಿದ್ದೆವು ದಾರಿಯಲ್ಲಿ ನಮ್ಮದು ದೆವ್ವ ದೇವರ ಬಗ್ಗೆ ಮಾತು. ನಮ್ಮ ಗುಂಪಿನ ಹಿರಿಯ ಹುಡುಗಿಯೊಬ್ಬಳು ಒಂದು ದಿನ ಇಲ್ಲಿ ಮಸಣದ ಮುಂದೆ ದೆವ್ವ ಬಿಳಿ ಬಟ್ಟೆ ಉಟ್ಟುಕೊಂಡು ಬೀಡಿ ಸೇದುತ್ತಿರುವುದನ್ನು ನೋಡಿದ್ದಾಗಿ ಹೇಳಿದ್ದಳು. ಆ ಕಥೆ ಇಲ್ಲಿ ಈಗ ನೆನಪಾಯಿತು. ಹಗಲಾಗಿದ್ದರೆ ಸ್ಮಶಾನ ದಾಟುವವರೆಗೆ ಓಡಿಬಿಡಬಹುದಿತ್ತು. ಈಗ ಅವ್ವನನ್ನು ಓಡಲು ಹೇಳುವುದೆ? ಅವ್ವ ಇದ್ದಾಗ ದೆವ್ವಕ್ಕೇನು ಕೆಲಸ? ಇದು ನನ್ನೊಳಗಿನ ಧೈರ್ಯ. ದಾರಿಯಲ್ಲಿ ಮತ್ತೊಮ್ಮೆ ನಿಂತುಬಿಟ್ಟೆವು. ನಮ್ಮ ದಾರಿಗಡ್ಡವಾಗಿ ಆನೆಯೊಂದು ನಿಂತಂತೆ ಕಂಡಿತು. ಅದು ಈ ಕಡೆ ನಡೆದು ಬಂದಂತೆ, ಆ ಕಡೆ ನಡೆದು ಹೋದಂತೆ… ತಿಂಗಳು ಬೆಳಕಿನಾಟ ತೆಳುಗಾಳಿಗೆ ನೆರಳಿನ ಚಲನೆಯಾಟ… ಎಷ್ಟೋ ಹೊತ್ತು ಹಾಗೆ ನಿಂತವರು ಅವ್ವನ ಅನುಭವದಿಂದಾಗಿ ಮತ್ತೆ ನಮ್ಮ ನಡಿಗೆ ಆರಂಭವಾಯಿತು. ಆದರೆ ಆ ಮಸಣ? ಇನ್ನೂ ಅದನ್ನು ದಾಟಲಿಲ್ಲ. ಅಕ್ಕ ಎಲ್ಲಿ ಕಿರುಚಿಬಿಡುತ್ತಾಳೆ ಪಾಪ! ಅವಳು ಹಿಂದೆ ಈ ಬಗ್ಗೆ ತುಂಬಾ ಹೆದರಿದವಳು. ನಡೆದು ನಡೆದು ಇನ್ನೇನು ಮಸಣ ಬಂದೇ ಬಿಡ್ತು. ಅದು ನಮ್ಮ ಮಾವನ ಮಸಣ. ಅಂದರೆ ಅಪ್ಪನ ತಂಗಿಯ ಗಂಡನ ಮಸಣ. ಮಸಣ ಯಾರದ್ದಾದರೇನು? ಭಯ ಎಂಬುದಿದ್ದ ಮೇಲೆ? ಅಬ್ಬಾ! ಮಸಣದ ಕಡೆ ನೋಡದೆ ದಾಟಿ ಬಿಟ್ಟೆವು. ಮುಂದೆ ನಮ್ಮ ಸಂಬಂಧಿಕರೊಬ್ಬರ ಗದ್ದೆಬಯಲು ಅದನ್ನು ದಾಟಿದರೆ ಮತ್ತೊಂದು ಕಾಡು. ಆ ಕಾಡು ಕೊನೆಯಾಗುವುದು ನಮ್ಮ ಅಂಗಳದಲ್ಲಿ. ನಮ್ಮ ಹಿಡಿದಿಟ್ಟ ಮಾತು ಸದ್ದು ಮಾಡಿಕೊಂಡು ಹೊರಬಂತು. ಆದರೆ ಯಾರ್‍ಯಾರು ಯಾವ ಪ್ರಮಾಣದಲ್ಲಿ ಹೆದರಿಕೊಂಡಿದ್ದೆವೆಂದು ಹೇಳಿಕೊಳ್ಳಲಿಲ್ಲ! ನನಗೆ ನಡುಕ ಬಂದುದನ್ನು ನಾನಂತೂ ಸುತಾರಾಂ ಹೇಳಿಕೊಳ್ಳಲಿಲ್ಲ.

ಮನೆ ತಲುಪುವಷ್ಟರಲ್ಲಿ ನಾಯಿ ಬೊಗಳಿ ತಾನು ಎಚ್ಚರ ಇರುವುದನ್ನು ಸೂಚಿಸಿತು. ಅಪ್ಪ ಎಚ್ಚರವಾಗಿತ್ತು. ನಾವು ಕಾಲು ಕೈ ತೊಳೆದೆವು. ರಾತ್ರಿ ಊಟ ಮಾಡಿದೆವೋ ಏನೋ ನೆನಪಿಲ್ಲ.
ನಾಟಕ ಎಂದಕೂಡಲೆ `ಸದಾರಮೆ’ ನಾಟಕ ನೆನಪಾಗುತ್ತದೆ. ತಿಂಗಳು ಬೆಳಕಿನ ದಾರಿ ನೆನಪಾಗುತ್ತದೆ. ಆ ಭಯ ನೆನಪಾಗುತ್ತದೆ. ಅವ್ವನ ಧೈರ್ಯ ನೆನಪಾಗುತ್ತದೆ. ಅಂತಹ ಪ್ರಸಂಗಕ್ಕೆ ಮತ್ತೆಂದೂ ಸಿಕ್ಕಿಕೊಳ್ಳುವುದು ಬೇಡವೆಂದರೂ ಒಂದೆರಡು ಬಾರಿ ಅನಿವಾರ್ಯವಾಗಿ ನಡು ರಾತ್ರಿಯಲ್ಲಿ ಲಾಟೀನು ಬೆಳಕಲ್ಲಿ ನಡೆದು ಹೋಗಿದ್ದೇವೆ.

ಇನ್ನೊಮ್ಮೆ ನಾನು ನನ್ನ ಗೆಳೆಯನೊಡನೆ ಇದೇ ರೀತಿಯ ಪೇಚಾಟಕ್ಕೆ ಸಿಕ್ಕಿಕೊಂಡಿದ್ದೇನೆ. ಅದು ಹೀಗೆ; ನನ್ನ ಗೆಳೆಯನ ಮನೆಯವರ ಬತ್ತವನ್ನು ಗೋಣಿಕೊಪ್ಪಲಿನ ಮಿಲ್ಲಿನಲ್ಲಿ ಅಕ್ಕಿ ಮಾಡಿಸುವ ಕೆಲಸವಿತ್ತು. ಅವರು ಶ್ರೀಮಂತ ಕುಟುಂಬದವರು. ಅವರಿವರ ಹಾಗೆ ಬತ್ತ ಕುಟ್ಟುವ ಕೆಲಸ ಮಾಡುತ್ತಿದ್ದುದು ಕಡಿಮೆ. ಆರೇಳು ತಿಂಗಳಿಗಾಗುವಷ್ಟು ಬತ್ತವನ್ನು ಒಮ್ಮೆಲೆ ಮಿಲ್ಲು ಮಾಡಿಸುತ್ತಿದ್ದರು. ಗಾಡಿಯಲ್ಲಿ ಬತ್ತವನ್ನು ಹೇರಿಕೊಂಡು ಹೋಗುತ್ತಿದ್ದರು. ಹೀಗೆ ಒಮ್ಮೆ ಮಿಲ್ಲಿಗೆ ಹೋಗುವಾಗ ನನ್ನ ಗೆಳೆಯನೊಡನೆ ನಾನೂ ಸೇರಿಕೊಂಡೆ. ಗಾಡಿಯಲ್ಲಿ ಕುಳಿತು ಪ್ರಯಾಣಿಸಿ ಮನರಂಜನೆ ಪಡೆಯುವ ಆಸೆ ನನ್ನದು. ಗಾಡಿ ಗೋಣಿಕೊಪ್ಪಲು ತಲುಪಿತು. ಮಿಲ್ ಮಾಡಿಸಿ ಅಕ್ಕಿಯನ್ನು ಗಾಡಿಗೆ ತುಂಬಿಸಿ ಹಿಂತಿರುಗುವಾಗ ಸಂಜೆ ಆಗಿತ್ತು.

ಗೋಣಿಕೊಪ್ಪಲಿನಿಂದ ತಿತಿಮತಿ ಮಾರ್ಗವಾಗಿ ಕೊಡಗಿನ ಗಡಿ ಆನೆ ಚೌಕೂರು ಸಮೀಪದ ಚೈನು ಗೇಟನ್ನು ದಾಟಿ ಮತ್ತಿಗೋಡು ಅರಣ್ಯವನ್ನು ನಮ್ಮ ಗಾಡಿ ಪ್ರವೇಶಿಸಿತು. (ಆನೆ ಚೌಕೂರು ಕೊಡಗು-ಮೈಸೂರು ಗಡಿ) ಅಲ್ಲಿಂದ ಕಾಟಿಬೆಟ್ಟದತ್ತ ನಮ್ಮ ಪಯಣ. ಈ ಚೈನುಗೇಟನ್ನು ಮುಟ್ಟುವಾಗಲೇ ದಾರಿ ಕಾಣುತ್ತಿರಲಿಲ್ಲ. ಹೇಳಿ ಕೇಳಿ ಆ ಕಾಡು ಆನೆಗಳ ಬೀಡು. ಹೆಸರೇ ಹೇಳುವಂತೆ ಆನೆ ಚೌಕೂರು! ಮತ್ತಿಗೋಡು ಮತ್ತು ಕಾಟಿಬೆಟ್ಟವನ್ನು ಇಬ್ಬಾಗಿಸಿದ ಕಲ್ಲು ರಸ್ತೆಯಲ್ಲಿ ನಮ್ಮ ಗಾಡಿ ಲಡಗುಟ್ಟುತ್ತಾ ಸಾಗಿತು. ಇದೇ ರಸ್ತೆಯಲ್ಲಿ ಅಪ್ಪನೊಡನೆ ನಾನು ನಡೆದು ಹೋಗಿದ್ದೇನೆ. ಆಗ ನನಗೆ ಅಪ್ಪ ಹುಲಿ ಹೇಲನ್ನು ತೋರಿಸಿತ್ತು. ಮೂಳೆ, ರೋಮದಿಂದ ಇದ್ದ ಆ ಲದ್ದಿಯನ್ನು ಕಂಡು ಹುಲಿಯೇ ಎದುರು ಇದೆಯೇನೋ ಎಂದು ಭಯಗೊಂಡಿದ್ದೆ. ಅಂಥಾ ದಾರಿಯಲ್ಲಿ ಈಗ ನಮ್ಮ ರಾತ್ರಿಯ ಪಯಣ…

ಗಾಡಿ ಮಾಲೀಕನ ಹೆಸರು ಬಲರಾಮ. ಅವನಿಗೆ ಸರಕಾರದ ಕೊಡುಗೆ ಈ ಗಾಡಿ. ಬಾಡಿಗೆಗಾಗಿ ಗಾಡಿ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ. ಗಾಡಿ ಲಡಾ ಬಡಾ ಸದ್ದು ಮಾಡುತ್ತಾ ಸಾಗುತಿತ್ತು. ಒಮ್ಮೆ ಹಗ್ಗವನ್ನು ಜಗ್ಗಿ ಎಳೆದು `ಆವ್ ಆವ್’ ಎನ್ನುತ್ತಾ ಗಾಡಿಯ ಕೆಳಗೆ ನೇತು ಹಾಕಿದ ಆ ಬೆಳಕು ಕೊಡೆಯಷ್ಟು ಅಗಲಕ್ಕೆ ಹರಡಿಕೊಂಡಿತು. ನಾವಿಬ್ಬರು ಅಕ್ಕಿ ಚೀಲದ ಮೇಲೆ ಕುಳಿತಿದ್ದೆವು. ಡಾಂಬರು ರಸ್ತೆಯಲ್ಲಿ ಸಾಗುತ್ತಿದ್ದಾಗ ನಮ್ಮ ಮಾತು ನಮ್ಮ ನಗು-ನಮ್ಮದೇ ಲೋಕ ತೆರೆದುಕೊಂಡಿತ್ತು. ಯಾವಾಗ ಚೈನುಗೇಟಿನ ತಿರುವು ಬಂತೋ ನಮ್ಮ ನಗುವೆಲ್ಲ ಅಡಗಿತು. ಮಾತು ಮೌನವಾಗತೊಡಗಿತು. ಆನೆ ಹುಲಿ.. ಯಾವುದು ಮೊದಲು? ನರಭಕ್ಷಕ ಹುಲಿ ಬಂದರೆ? ಕೇಡಿಗ ಆನೆ ಅಡ್ಡ ಬಂದರೆ? ಇಡೀ ಕಾಡಿನಲ್ಲಿ ಪ್ರತಿಧ್ವನಿಸುವ ಹಾಗೆ ಗಾಡಿಯ ಗಾಲಿಯ ಲಡಾ ಬಡಾ ಸದ್ದು ಕಾಡು ಪ್ರಾಣಿಗಳನ್ನು ಕೆರಳಿಸಬಹುದೆ? ಅಥವಾ ಹೆದರಿಸಬಹುದೆ? ಎತ್ತುಗಳು ತಮ್ಮ ಪಾಡಿಗೆ ತಾವು ನಡೆಯುತ್ತಾ ಸಾಗುತ್ತಿದ್ದವು. ಬಲರಾಮ ಎತ್ತುಗಳ ಮೈನೇವರಿಸುತ್ತಾ, ಬೆನ್ನು ತಟ್ಟುತ್ತಾ ಪುಸಲಾಯಿಸುತ್ತಾ ಎತ್ತುಗಳಿಗೆ ಧೈರ್ಯ ತುಂಬುತ್ತಿದ್ದ. ನೀಲ ಗಗನದಲ್ಲಿ ನಕ್ಷತ್ತ ಮಿನುಗುತಿತ್ತು. ಸ್ವಲ್ಪ ಹೊತ್ತಿನಲ್ಲಿ ನಕ್ಷತ್ರಗಳು ಮೋಡದಲ್ಲಿ ಮರೆಯಾದವು. ನಮ್ಮ ಗಾಡಿಯ ಲಾಟೀನು ಬೆಳಕಲ್ಲದೆ ಮತ್ತೊಂದಿಲ್ಲ. ಆಗ ಬಲರಾಮನಿಂದ ಒಂದು ಹಾಡು ಹೊರಟಿತು. ಇದೋ ಯಮರಾಯ, ನಾವು ಬಂದೆವು. ಕರೆದುಕೋ ಬಾ ಯಮರಾಯಾ… ಆಹಾ! ಭಗವಂತಾ ಮೊದಲೇ ಹೆದರಿದ ಗುಬ್ಬಚ್ಚಿಗಳಂತೆ ನಾವಿಬ್ಬರು ಮುದುಡಿ ಕುಳಿತಿದ್ದೇವೆ. ಆನೆ ಯಾವ ಕಡೆಯಿಂದ ಸೊಂಡಿಲು ಹಾಕಿ ನಮ್ಮನ್ನು ಎಳೆಯುವುದೋ, ಹುಲಿ ಯಾರನ್ನು ಮೊದಲು ಹಿಡಿದು ತಿನ್ನುವುದೋ ಎಂಬ ಭಯಲ್ಲಿರುವಾಗ ಬಾ ಯಮರಾಯ, ಕರೆದುಕೋ ನಮ್ಮನು ಎಂದರೆ… ಅರೆ! ಇವನಿಗೇನಾಗಿದೆ? ಯಮನಿಗೆ ವೀಳ್ಯ ಕೊಡುವ ಬಲರಾಮನಿಗೆ ಅದೆಂಥಾ ಧೈರ್ಯ? ಅವನ ಹಾಡು ಸಣ್ಣ ಧ್ವನಿಯದ್ದಲ್ಲ. ಧ್ವನಿ ಏರಿಸಿ ಹಾಡುತಿದ್ದ. ಕಾಟಿಬೆಟ್ಟದ ಕಾಡಿನ ಆ ರಾತ್ರಿಯ ನೀರವತೆಯನ್ನು ಕದಡಿಬಿಟ್ಟ. ನಮ್ಮಿಬ್ಬರನ್ನು ನಡುಗಿಸಿಬಿಟ್ಟ.

ಲಾಟೀನಿನ ಮಂದ ಬೆಳಕು. ಎತ್ತುಗಳು ತಮ್ಮ ಪಾಡಿಗೆ ತಾವು ನಡೆಯುತ್ತಿದ್ದವು. ನಾವಿಬ್ಬರು ಅಂಟಿಕೊಂಡು ಕುಳಿತ್ತಿದ್ದೆವು. ಬಲರಾಮ ಯಮನನ್ನು ಕರೆಯುತ್ತಲೇ ಇದ್ದ. ಮಿನುಗುತ್ತಿದ್ದ ನಕ್ಷತ್ರಗಳು ಮೋಡದ ಮರೆಯಲ್ಲಿ ಲೀನವಾಗಿದ್ದವು, ಗಾಳಿ ಬೀಸತೊಡಗಿತು. ಮಳೆ ಹನಿಯತೊಡಗಿತು. ಮಳೆ ತೀವ್ರವಾಯಿತು. ಎಲ್ಲಾ ಒದ್ದೆ ಮುದ್ದೆ. ಬೇಸಿಗೆಯಲ್ಲಿ ಹೀಗೆ ದಿಢೀರ್ ಮಳೆ ಬರುವ ಯಾವ ಪೂರ್ವ ಲಕ್ಷಣಗಳೇ ಇರಲಿಲ್ಲ ಹಾಗಾಗಿ ಯಾವ ರಕ್ಷಣಾ ವ್ಯವಸ್ಥೆಯೂ ಇಲ್ಲದೆ ತೊಂದರೆಗೆ ಸಿಕ್ಕಿಕೊಂಡೆವು.

ಗಾಡಿ ಕಲ್ಲು ರಸ್ತೆಯಿಂದ ಎಡಕ್ಕಿರುವ ಮಣ್ಣು ರಸ್ತೆಯತ್ತ ತಿರುಗಿತು. ಆ ರಸ್ತೆ ಬಲರಾಮನ ಮನೆಗೆ ಹೋಗುವ ದಾರಿ. ಬಲಕ್ಕೆ ತಿರುಗಿದರೆ ಕಾಟಿಬೆಟ್ಟದ ನಮ್ಮ ಮನೆಯತ್ತ ಹೋಗುವ ದಾರಿ. ಮಳೆ ಬಂದುದರಿಂದ ಗಾಡಿ ಹಿಡಿತಕ್ಕೆ ಬರುತ್ತಿರಲಿಲ್ಲ. ಈ ರಾತ್ರಿ ನಮ್ಮಲ್ಲಿದ್ದು ಬೆಳಿಗ್ಗೆ ಆ ಕಡೆ ಹೋಗೋಣ ಎಂದು ಬಲರಾಮ ಹೇಳಿದ ನಾವು ಏನಂದವೋ ಯಾರಿಗೆ ಗೊತ್ತು? ಒಟ್ಟಿನಲ್ಲಿ ಆನೆ ಮತ್ತು ಹುಲಿ ಬಾಯಿಗೆ ಬಲಿಯಾಗದಿದ್ದರೆ ಸಾಕು ಎಂದಿದ್ದೆವು. ಗಾಡಿ ಎಡಕ್ಕೆ ತಿರುಗಿತು. ಮಳೆಯೇನೋ ನಿಂತಿತ್ತು. ಬೇಸಿಗೆಯಲ್ಲಿ ಮಳೆ ನಿಂತ ಮೇಲೆ ಕಾಡು ಪ್ರಾಣಿಗಳ ಓಡಾಟ ಹೆಚ್ಚು. ಅವುಗಳಿಗೆ ಏನೋ ಉತ್ಸಾಹ. ನಮಗೆ ಆತಂಕ.

ದಾರಿಗಡ್ಡವಾಗಿ ಮರವೊಂದು ಬಿದ್ದಿತ್ತು! ಗಾಡಿ ದಾಟುವುದು ಹೇಗೆ? ಬಲರಾಮನ ಮುಂದಾಲೋಚನೆಯನ್ನು ಮೆಚ್ಚಬೇಕು. ಗಾಡಿಯಲ್ಲಿ ಖಾಯಂ ಆಗಿ ಕತ್ತಿ ಮತ್ತು ಕೊಡಲಿ ಇಟ್ಟಿದ್ದರಿಂದ ಒಳ್ಳೆಯದಾಯಿತು. ನಾವು ಮೂವರು ಸೇರಿ ಕೊಂಬೆಯನ್ನು ಕಡಿದೆವು. ಕಾಂಡವನ್ನು ತುಂಡು ಮಾಡಿ ತಳ್ಳಿದೆವು. ಕರ್ಣನು ತನ್ನ ರಥದ ಗಾಲಿಯನ್ನು ಕೆಸರಿನಿಂದ ಮೇಲೆತ್ತುತ್ತಿದ್ದಾಗ ಪಟ್ಟ ಪಾಡಿನಂತಾಯಿತು. ಈ ಮೂವರ ಪಾಡು! ಕೊನೆಗೂ ಗಾಡಿ ಬಲರಾಮನ ಮನೆಯನ್ನು ತಲುಪಿತು. ಮರುದಿನ ನಾನು ನಮ್ಮ ಮನೆಗೆ ಹೋಗಿ ಹಲ್ಲು ಕಿರಿದು ನಿಂತೆ. ಅಪ್ಪನಿಂದ ನನಗೆ `ಮಹಾಮಂಗಳಾರತಿ’ ಆಯಿತು. ಗಾಡಿ ಪ್ರಯಾಣದ ಪುಕ್ಕಟೆ ಮನರಂಜನೆ, ಹೊಟೇಲ್ ತಿಂಡಿಯ ಆ ನೆನಪು, ಇದೋ ಬಂದೆವು, ಬಾ ಯಮರಾಯ ಕರೆದುಕೋ ಎನ್ನುವ ಬಲರಾಮನ ಹಾಡು, ಮಳೆಯಲ್ಲಿ ತೊಯ್ದು ನಡುಗಿದ ಆ ರಾತ್ರಿ. ಇಂದು ನೆನೆದರೆ ಏನೋ ಒಂಥರಾ ಸುಖಾನುಭವ!

ಪೀರುವಿನ ಬೆಳ್ಳನೆಯ ಎತ್ತುಗಳು

ಪೀರು ಎಲ್ಲಿಂದ ಬಂದವನೋ ಗೊತ್ತಿಲ್ಲ, ಅವನ ಭಾಷೆ ಎಂಥದ್ದೋ ಅದೂ ಗೊತ್ತಿಲ್ಲ.  ‘ಪೀರು’ ಎಂಬ ಹೆಸರು ಅವನದು ಎಂದು ಅವರಿವರಿಂದ ತಿಳಿದು ಬಂದಿತ್ತು. ಬಿಳಿ ಪಂಚೆ ತೊಟ್ಟು ಬಿಳಿ ಶರಟು ಧರಿಸಿ  ತಲೆಗೆ ಮುಂಡಾಸು ಸುತ್ತಿಕೊಂಡು ತೀಡಿದ ಮೀಸೆಯವನಾಗಿ ನೀಳ ಕಾಯದ ಅವನು ಬಹು ಗಂಭೀರನಾಗಿಯೇ ಕಾಣುತ್ತಿದ್ದ. ಇಷ್ಟು ಗಂಭೀರನಾಗಿ ಕಾಣುತ್ತಿದ್ದುದರಿಂದಲೋ ಏನೋ ನಾವು ಅವನನ್ನು ಮಾತನಾಡಿಸುವ ಗೊಡವೆಗೆ ಹೋದವರಲ್ಲ. ಅವನಾಗಿ ಮಾತನಾಡಿಸಿದವನೂ ಅಲ್ಲ.  ಆದರೆ ನಮಗೆಲ್ಲಾ ‘ಪೀರು ’ ಏನೋ ಒಂದು ರೀತಿಯ ಅಭಿಮಾನ! ಮೇಲ್ನೋಟಕ್ಕೆ ಒರಟನಂತೆ ಕಂಡರೂ ಆತ ಪ್ರಾಣಿದಯಾಮಯಿ.

ಪೀರು ಹೇಗೋ ಹಾಗೆ ಅವನ ಎತ್ತಿನ ಗಾಡಿಯೂ ಕೂಡ. ಅವನ ಗಾಡಿಯೆಂದರೆ ಮೂಡಲ ಸೀಮೆಯ ಗಾಡಿಯಂತಲ್ಲ. ಅವನದು ಯಾವತ್ತೂ ಹೊಸದೇ ಅನ್ನುವಂಥಾದಾಗಿತ್ತು.  ಆತನ ಗಾಡಿಯ ಚಕ್ರಗಳ ನಡುವಿನ ಪಟ್ಟಿಗಳಿವೆಯೆಲ್ಲ, ಅವುಗಳಿಗೆ ಕೆಂಪು ಬಣ್ಣ ಬಳಿದಿದ್ದ.  ಕೀಲುಗಳಿಗೆ ಸದಾ ಕೀಲೆಣ್ಣೆ ಸುರಿಯುತ್ತಿದ್ದ. ಆ ಕೀಲುಗಳಿಗೆ ಗೆಜ್ಜೆಗಳ ಗೊಂಚಲು ಬೇರೆ! ಗಾಡಿಯ ತಡಿಕೆಗಳು ಗಟ್ಟಿ ಮುಟ್ಟಾಗಿದ್ದವು. ಅದರ ಮೂಕಿಗೂ ಬಣ್ಣವುಂಟು. ಗಾಡಿಗೆ ಬಿರಿಯೂ (ಬ್ರೇಕ್) ಇತ್ತು. ಆ ಬಿರಿಯ ಮರ ಲಾಟುಪೋಟಾದ್ದೇನೂ ಅಲ್ಲ.  ಬಿರಿಯ ಎರಡೂ ಹಗ್ಗಗಳು ತೆಂಗಿನ ನಾರಿನದು. ಆ ಹಗ್ಗ ಪೀರುವಿನ ಎರಡೂ ಪಾದಗಳಿಗೆ ಸಿಗುವಂತಿರುತ್ತಿದ್ದವು.  ಹಗ್ಗವನ್ನು ಪಾದದಿಂದ ಒತ್ತಿದಾಗ ಹಿಂದೆ ಚಕ್ರಕ್ಕೆ ಅಡ್ಡಲಾಗಿ ಕಟ್ಟಿದ್ದ ಮರಕ್ಕೆ ಅಂಟಿಕೊಳ್ಳುತ್ತಿತ್ತು. ಇನ್ನೂ ಜೋರಾಗಿ ಒತ್ತಿದಾಗ ಚಕ್ರ ತಿರುಗದೆ ಗಾಡಿ ನಿಲ್ಲುತ್ತಿತ್ತು.

ಒಂದು ವೇಳೆ ಇಷ್ಟಕ್ಕೂ ಗಾಡಿ ನಿಲ್ಲದೆ, ಇಳಿಜಾರಿನಲ್ಲಿ ವೇಗ ನಿಯಂತ್ರಣಕ್ಕೆ ಬಾರದಿದ್ದರೆ! ಮುಗ್ಗರಿಸಿದರೆ! ಹಾಗೆ ತೊಂದರೆ ಆಗದಿರಲೆಂದು ಗಾಡಿಯ ಕೆಳಗೆ ಒಂದು ದೊಣ್ಣೆಯಿಂದ ಹಗ್ಗವನ್ನು ಬಿಗಿಗೊಳಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದ.  ಜೊತೆಗೆ ಗಾಡಿಯ ಕೆಳಗೆ ಸದಾ ನೇತಾಡುವ ಲಾಟೀನು ಬೇರೆ!

ಗಾಡಿಯ ವರ್ಣನೆಯೇನೋ ಆಯ್ತು, ಆದರೆ ಅದಕ್ಕೆ ಕಟ್ಟುವ ಎತ್ತುಗಳು! ಆಹಾ! ಆ ಎತ್ತುಗಳ ಅಂದಚೆಂದವನ್ನು ನಿಂತು ನೋಡುವುದೇ ಒಂದು ಮೋಜು. ಎರಡು ಸಮನಾದ ಎತ್ತರದ ಎತ್ತುಗಳು. ಪೀರುವಿನ ಬಟ್ಟೆ ಹೇಗೋ ಹಾಗೇ ಎತ್ತುಗಳೂ ಬಿಳಿಯ ಬಣ್ಣದವುಗಳು. ಬಿಳಿಯ ಬಣ್ಣವೆಂದರೆ ಆ ಬಣ್ಣದೊಳಗೆ ಮತ್ತೊಂದು ಬಣ್ಣದ ಚುಕ್ಕಿಯೂ ಇಲ್ಲ, ಕಣ್ಣುಗಳನ್ನು ಬಿಟ್ಟರೇ! ಆ ಕೋಡುಗಳೋ ! ( ) ಈ ಆವರಣ ಚಿಹ್ನೆಗಳ ಥರ. ಕೀಸಿಕೀಸಿ ಸಪೂರ ಮಾಡಿದ ಆ ಕೋಡುಗಳನ್ನು ನೋಡುತ್ತಿದ್ದರೆ ನಮಗೆ ಅಂಥಾ ಕೋಡುಗಳು ಬಂದಷ್ಟು ಖುಷಿ.  ಆ ಎತ್ತುಗಳ ಗೊರಸೂ ಕೂಡ ಒಂದರಂತೆ ಮತ್ತೊಂದರದ್ದು.  ಎತ್ತುಗಳ ಆಯ್ಕೆಯಲ್ಲಿ ಪೀರುವಿನ ಜಾಣ್ಮೆಯನ್ನು ಮೆಚ್ಚಲೇಬೇಕು. ಹ್ಞಾ! ಗೊರಸುಗಳು ಸವೆಯದಿರಲಿ ಎಂದು ಲಾಳವನ್ನು ಕಟ್ಟಿಸಿದ್ದ . ಎತ್ತುಗಳನ್ನು ಹಿಡಿತಕ್ಕೆ ತರಲು ಮೂಗುದಾರವನ್ನು ಹಾಕಿದ್ದ. ಈ ರೀತಿಯ ಎತ್ತುಗಳಿಗೆ ದೃಷ್ಟಿಯಾದೀತೆಂಬ ಕಾರಣಕ್ಕೋ ಅಥವಾ ಚೆಂದ ಕಾಣಲೆಂದೋ ಅವುಗಳ ಕುತ್ತಿಗೆಗೆ ಕವಡಿಯ ಮಾಲೆ ತೊಡಿಸಿದ್ದ.  ಆ ಕವಡಿಯ ಬಣ್ಣವೂ ಬಿಳಿಯದೇ. ಮಿರಮಿರ ಮಿಂಚುವ ಎತ್ತುಗಳು ಥೇಟ್ ರೇಸ್ ಕುದುರೆಗಳೇ. ಗಾಡಿ ಕಟ್ಟಿದೊಡನೆ ಆ ಗೆಜ್ಜೆಗಳ ಝಲ್ ಝುಲ್ ನಾದ ಓ! ಪೀರುವಿನ ಗಾಡಿಯದೇ ಎಂದು ಸಾರಿ ಹೇಳುವಂತ್ತಿತ್ತು.

ಒಂದು ಕಾಲದಲ್ಲಿ ಸುಳುಗೋಡಿನ ಆ ಮಣ್ಣು ರಸ್ತೆಯಲ್ಲಿ ಚಲಿಸುತ್ತಿದ್ದುದು ಪೀರುವಿನ ಗಾಡಿಯೊಂದೇ. ಗಾಡಿ ಚಲಿಸಿದ ಗುರುತನ್ನು ಗಮನಿಸಿ ‘ಓಹೋ ಪೀರುವಿನ ಗಾಡಿ ಹೋಗಿದೆ’ ಎನ್ನುತ್ತ ಓಡಿ ಗಾಡಿಯ ಜೋಡಿಯಾಗುತ್ತಿದ್ದೆವು. ಗಾಡಿಯನ್ನು  ಹತ್ತಿಕೊಳ್ಳಲು ಅಲ್ಲ, ಅದರ ಹಿಂದೆ ನಡೆಯಲು! ಅಪರೂಪಕ್ಕೊಮ್ಮೆಮ್ಮೆ ಮೂಡಲ ಸೀಮೆಯಿಂದ ಅಂದರೆ ಮುಖ್ಯವಾಗಿ ಪಿರಿಯಾಪಟ್ಟಣ, ಹುಣಸೂರು ಕಡೆಗಳಿಂದ ಬೆಲ್ಲ, ಮೆಣಸು, ಕೊತ್ತಂಬರಿ, ಆಲೂಗೆಡ್ಡೆ ಮುಂತಾದ ದಿನಸಿ ವಸ್ತುಗಳನ್ನು ಹೊತ್ತು ತರುತ್ತಿದ್ದ ಗಾಡಿಗಳನ್ನು ನಾವು ನೋಡುತ್ತಿದ್ದೆವು, ಆದರೆ ಪೀರುವಿನ ಗಾಡಿಯನ್ನು ನೋಡುತ್ತಿದ್ದ ನಮ್ಮ ಕಣ್ಣುಗಳಿಗೆ ಆ ಗಾಡಿಯಾಗಲಿ, ಆ ಬಡಕಲು ಎತ್ತುಗಳಾಗಲಿ ಏನೇನೂ ಅಲ್ಲ.

ಪೀರು  ‘ಮಳು ಕೋಟೆ’ ಯ ಗಾಡಿಯನ್ನು ತನ್ನದ್ದಲ್ಲದಿದ್ದರೂ ತನ್ನದೇ ಎಂಬಂತೆ ನೋಡಿಕೊಂಡವ  ‘ಮಳು ’ ಎಂದರೆ ಕೊಡವ ಭಾಷೆಯಲ್ಲಿ ಮೆಣಸು ಎಂದು. ಅಲ್ಲಿ ಹೆಚ್ಚಾಗಿ ಮೆಣಸನ್ನು ಬೆಳೆಸುತ್ತಿದ್ದುದ್ದರಿಂದ ಆ ಹೆಸರು ಬಂದಿರಬಹುದೆ? ಇರಲಿ, ಮಳುಕೋಟೆಯಿಂದ ಗೋಣಿಕೊಪ್ಪಲಿನ ಮಿಲ್ಲಿಗೆ ಭತ್ತವನ್ನು ಸಾಗಿಸಿ ಅಕ್ಕಿ ಮಾಡಿಸಿಕೊಂಡು ಬರುವ ಕೆಲಸದಲ್ಲಿ ಪೀರುವಿಗೆ ಎಲ್ಲಿಲ್ಲದ ಉತ್ಸಾಹ. ಭತ್ತವನ್ನು ಗಾಡಿಗೆ ತುಂಬಿ, ನಾಲ್ಕಾರು ಕಂತೆ ಹುಲ್ಲನ್ನು ಚೀಲದ ಮೇಲೆ ಹರಡಿ, ಒಂದಷ್ಟು ಬೇಯಿಸಿದ ಹುರುಳಿ ಕಾಳನ್ನು ಹೇರಿಕೊಂಡು ಕಮಾನು ಕಟ್ಟಿದ ಗಾಡಿ ಹೊರಡುವಾಗ ಪೀರುವಿನ ಆ ಒರಟು ಮುಖದಲ್ಲೂ ಕಿರು ನಗೆ!  ಆ ಗಾಡಿಯ ಹಿಂದೆ ನಡೆವ ನಮಗೂ ಏನೋ ಉತ್ಸಾಹ. ಗಲ್ ಗಲ್ ಗೆಜ್ಜೆಯ ನಾದಕ್ಕೆ ತೆರೆದುಕೊಳ್ಳುವ ಕಿವಿ.

ಗೋಣಿಕೊಪ್ಪಲಿನಿಂದ ಹಿಂತಿರುಗಿ ಸುಳುಗೋಡಿನ  ‘ಚವುಂಡಿ ಕೊಟ್ಟ’ದ ಇಳಿಜಾರು ರಸ್ತೆಯಲ್ಲಿ ಗಾಡಿಯನ್ನು ಇಳಿಸುವುದೆಂದರೆ ಅದು ಹರಸಾಹಸವೇ. ಒಂದು ವೇಳೆ ಮಳೆ ಬಂತೋ… ಗಾಡಿ ಹಿಡಿತ ತಪ್ಪುವುದೇ ಸರಿ.  ಸಧ್ಯ ಮಳೆಯಲ್ಲಿ ಸಿಕ್ಕಿಕೊಂಡು ಫಜೀತಿ ಪಟ್ಟದ್ದು ನಾವು ನೋಡಲಿಲ್ಲ.  ಹೀಗೆ ಇಳಿಜಾರಿನಲ್ಲಿ ಗಾಡಿ ಇಳಿಯುತ್ತಿದ್ದಂತೆ ಗೆಜ್ಜೆಯ ಸದ್ದಿನೊಂದಿಗೆ ಪೀರು ಒತ್ತುವ ಬಿರಿಯ ‘ಕೊಂಯೀ..’ ಶಬ್ದ ಅಷ್ಟು ದೂರಕ್ಕೆ ಕೇಳುತ್ತಿತ್ತು. ಹಾಗೇ ನಿಧಾನವಾಗಿ ಇಳಿದ ಗಾಡಿ ಸಮತಟ್ಟು ರಸ್ತೆಯಲ್ಲಿ ಸಾಗುತ್ತಾ ಒಂದು ಸೇತುವೆ ಬಳಿ ನಿಂತುಕೊಳ್ಳುತ್ತದೆ. ಇಲ್ಲಿಯ ಗಮ್ಮತೇ ಬೇರೆ.

ಮಧ್ಯಾಹ್ನದ ಹೊತ್ತು. ರಣ ಬಿಸಿಲು ಬೇರೆ. ಆ ಹೊಳೆಯಲ್ಲಿ ಎತ್ತುಗಳಿಗೆ ಸ್ನಾನ. ಎತ್ತುಗಳನ್ನು ಗಾಡಿಯಿಂದ ಬಿಚ್ಚಿದ ಕೂಡಲೇ ಹೇಳುವುದೇ ಬೇಡ. ಕೂಡಲೇ ಹೊಳೆಯತ್ತ ಇಳಿಯುತ್ತವೆ. ನೀರು ಕಂಡೊಡನೆ ನೀರನ್ನು ಮುಟ್ಟುವಷ್ಟರಲ್ಲೇ ಎತ್ತುಗಳು ಉಚ್ಚೆ ಉಯ್ಯುತ್ತಾ ನೀರು ಕುಡಿದು ತಲೆ ಎತ್ತುತ್ತವೆ. ಆಗ ಅವುಗಳನ್ನು ಹೊಳೆಯ ನಡುಭಾಗಕ್ಕೆ ಅಟ್ಟುತ್ತಾನೆ. ಬಾಲ ಎತ್ತಿಕೊಂಡು ನಡುನೀರಿಗಿಳಿಯುವಾಗ ನಮ್ಮ ನಗು ಮುಗಿಲು ಮುಟ್ಟುತ್ತದೆ. ಬಾಲ ಎತ್ತಿಕೊಂಡು ದಢುಂ ಧುಢುಂ ಈಜಿದ ಎತ್ತುಗಳನ್ನು ಅಲ್ಲೇ ನಿಲ್ಲಿಸಿ ಹುಲ್ಲಿನಿಂದ ಮೈಯನ್ನು ಉಜ್ಜುತ್ತಾ ಇರುವಂತೆಲ್ಲಾ ಪೀರುವಿನ ವಾತ್ಸಲ್ಯಮಯೀ ಹೃದಯ ಅರಳಿಕೊಂಡಂತೆ. ತಾಯಿ ಮಗುವನ್ನು ಸ್ನಾನ ಮಾಡಿಸುವಾಗಿನ ಮನಃಸ್ಥಿತಿಯಂತೆ! ಸ್ನಾನದ ಬಳಿಕ ಎತ್ತುಗಳನ್ನು ಗಾಡಿಯ ಬಳಿಗೆ ಅಟ್ಟುತ್ತಾನೆ. ಅಲ್ಲಿ ಒಣ ಹುಲ್ಲನ್ನು ತಿನ್ನಿಸುತ್ತಾನೆ. ಬೆಂದ ಹುರುಳಿಕಾಳನ್ನು ಬಕೆಟ್‌ನಲ್ಲಿ ಇಡುತ್ತಾನೆ. ಒಂದರ ನಂತರ ಮತ್ತೊಂದರ ಭೋಜನವಾಗುತ್ತದೆ. ಎತ್ತುಗಳು ಹುರುಳಿ ಕಾಳನ್ನು ತಿನ್ನುವಾಗ ಆನೆ ಕ್ಯಾಂಪಿನ ಹುರುಳಿ ಕಾಳು ನಮಗೆ ನೆನಪಾಗದೆ ಇರಲಿಲ್ಲ. ಎತ್ತುಗಳು ಹುರುಳಿಕಾಳನ್ನು ತಿನ್ನುವಾಗ ನಾವು ಎಂಜಲು ನುಂಗಿಕೊಳ್ಳುತ್ತಿದ್ದೆವು. ಒಂದು ಕಾಳೂ ಕೂಡ ನಮ್ಮ ಬಾಯಿಗೆ ಬೀಳುತ್ತಿರಲ್ಲಿಲ್ಲ. ಅರೆಗಂಟೆಯಷ್ಟು ವಿಶ್ರಾಂತಿಯ ಬಳಿಕವಷ್ಟೇ ಮುಂದಿನ ಪಯಣ. ಎತ್ತುಗಳು ಎಂದು ದಣಿಯ ಕೂಡದು. ಅವುಗಳ ಬಾಯಲ್ಲಿ ಆಯಾಸದಿಂದ ನೂರೆ ಬರಕೂಡದು. ಇದು ಪೀರು ಎಂದೆಂದೂ ಕಂಡುಕೊಂಡ ಸತ್ಯ.

ಗಾಡಿಯ ಮೂಕಿಯನ್ನು ಎತ್ತಿದೊಡನೆ ಎತ್ತುಗಳು ಅದಕ್ಕೆ ಸರಿಯಾಗಿ ಬಂದು ನಿಂತುಕೊಳ್ಳುತ್ತಿದ್ದವು. ಕಣಿ ಬಿಗಿದ ಬಳಿಕ ಪೀರು ಹಾರಿ ಕುಳಿತು ಕೊಳ್ಳುತ್ತಿದ್ದ. ಗಾಡಿ ಹೊರಟಿತಾ? ಇಲ್ಲ. ಪೀರು ಕುಳಿತ ಮಾತ್ರಕ್ಕೆ ಗಾಡಿ ಹೊರಡುವುದಿಲ್ಲ. ಆಗಲೆ ನಾನು ಹೇಳಿದಂತೆ ಗಾಡಿ ಇಳಿಜಾರಿನಲ್ಲಿ ‘ಕೊಂಯ್ಯೀ’ ಸದ್ದು ಮಾಡಿಕೊಂಡು ಇಳಿದಿತ್ತಲ್ಲವೆ ? ಒಮ್ಮೆ ಇಳಿದ ಮೇಲೆ ಮತ್ತೆ ಹತ್ತಬೇಕಲ್ಲವೆ? (ಬದುಕಿನ ಏರಿಳಿತದಂತೆ !) ಈ ಸೇತುವೆಯ ಬಳಿಕ ದೊಡ್ಡ ಚಡಾವು (ದಿಬ್ಬ) ಆರಂಭವಾಗುತ್ತದೆ. ಚಡಾವು ಹತ್ತಬೇಕಾದರೆ ಎತ್ತುಗಳಿಗೆ  ‘ಶಹಬ್ಬಾಸ್’ ಹೇಳಬೇಕು.  ಅದು ಹೇಗಂತಿರಾ ? ಎರಡೂ ಕೈಗಳಿಂದ ಎರಡೂ ಎತ್ತುಗಳ ಬೆನ್ನನ್ನು ಏಕಕಾಲಕ್ಕೆ ಸವರಬೇಕು. ಹಾಗೆ ಸವರಿದ ಬಳಿಕ ಬೆನ್ನ ಮೇಲೆ ನಾಲ್ಕು ಬಾರಿ ಡಬ್ ಡಬ್ ಹೊಡೆಯಬೇಕು. ಹಾಗೆ ಹೊಡೆದ ಕೂಡಲೇ ಬಾಲಗಳನ್ನು ತಿರುವಬೇಕು.  ಹಾಗೆ ತಿರುವಿದ ಕೂಡಲೆ ಬಾಲದ ಬುಡಕ್ಕೆ ಕೈಹಾಕಿ ಕಚಗುಳಿ ಮಾಡಬೇಕು. ಆಗ ಏಕ್ ಧಂ ಎತ್ತುಗಳು ಸರಸರನೆ ನಡೆಯತೊಡಗುತ್ತವೆ. ಈ ಎಲ್ಲಾ ಪುಸಲಾವಣೆಯಿಂದ ದಿಬ್ಬ ಹತ್ತಿದ್ದೇ ಗೊತ್ತಾಗುವುದಿಲ್ಲ.  ಒಂದು ವೇಳೆ  ಅ ರೀತಿಯ ಪುಸಲಾವಣೆ ಮಾಡದೇ ಇದ್ದರೆ ಗಾಡಿ ಹಿಂದಕ್ಕೆ ಬಂದುಬಿಡುತ್ತದೆ. ಬಿರಿ ಒತ್ತಿದರಲ್ಲ, ಚಕ್ರಕ್ಕೆ ಕಟ್ಟೆ ಕೊಟ್ಟರಲ್ಲ,  ಗಾಡಿ ಹಿಮ್ಮುಖವಾಗಿ ಬಂದು ಎತ್ತುಗಳು ಕಾಲು ಮೇಲಾಗಿ ಬಿದ್ದರೆ ಪ್ರಾಣಾಪಾಯ ಖಂಡಿತ. ಹಾಗೆ ನೆನಸಿಕೊಳ್ಳುವಾಗಲೆ ಬೆವರೂರುತ್ತದೆ.  ಆದರೆ ಪೀರುವಿನ ಜಾಣತನದಿಂದ ಹಾಗೇನೂ ಆಗಲಿಲ್ಲ. ಪೀರುವಿನ ಕೈಯಲ್ಲಿ ಚಾವಟಿ ಇರುತ್ತಿತ್ತು.  ಆದರೆ ಎತ್ತುಗಳಿಗೆ ಒಮ್ಮೆಯೂ ಹೊಡೆದವನಲ್ಲ.  ‘ಚಟೀರ್ ’ ಎಂದು ಸದ್ದು ಮಾಡುವುದಕ್ಕಷ್ಟೇ ಚಾವಟಿ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾಗಿದ್ದ ನಾವು ಗುಂಪುಕೂಡಿಕೊಂಡು ಅವನು ಎತ್ತುಗಳಿಗೆ ಸ್ನಾನ ಮಾಡಿಸುತ್ತಿದ್ದ ರೀತಿ, ಹುಲ್ಲು , ಹುರುಳಿ ತಿನ್ನಿಸುತ್ತಿದ್ದುದು, ಗಾಡಿಯ ಶುಚಿತ್ವ, ಅವನ ವೇಷಭೂಷಣಗಳನ್ನೆಲ್ಲಾ ಪಿಳಿ ಪಿಳಿ ಕಣ್ಣು ಮಿಟುಕಿಸಿ ನೋಡುತ್ತಿದ್ದೆವು. ಆದರೆ ಒಮ್ಮೆಯಾದರೂ ಆ ಗಾಡಿಯಲ್ಲಿ ಹತ್ತಲಿಲ್ಲ. ನಮ್ಮನ್ನು ಮಾತಾಡಿಸುತ್ತಲೂ ಇರಲಿಲ್ಲ. ನಮ್ಮನ್ನು ನೋಡಿ ನಕ್ಕವನೂ ಅಲ್ಲ. ಯಾಕಿರಬಹುದು?

ಆದರೆ, ನಮ್ಮ ಅಪ್ಪ ಕಪ್ಪಡಿಗೆ ನನ್ನ ಮುಡಿಯನ್ನು ಹರಕೆ ಬಿಟ್ಟಿತ್ತು! ನಾನು ಗೇಣುದ್ದುದ ಜಡೆ ಹಾಕುತ್ತಿದ್ದೆ. ಶಾಲೆಯಲ್ಲಿ ಮಕ್ಕಳು ತಮಾಷೆ ಮಾಡುತ್ತಾರೆ, ಬೇಗ ಮುಡಿಕೊಡು ಅಂತ ಅಪ್ಪನಿಗೆ ದುಂಬಾಲು ಬಿದ್ದೆ.  ಕಪ್ಪಡಿಗೆ ಹೋಗುವುದಾದರೂ ಹೇಗೆ ? ವಾಹನದ ಸೌಕರ್ಯವಿಲ್ಲ.  ನಡೆದು- ಹೋಗುವುದು ಸಾಧ್ಯವಲ್ಲದ ಮಾತು. ನಲವತ್ತೈದು ವರ್ಷದ ಹಿಂದೆ ಹೇಗಿತ್ತು ಸ್ಥಿತಿ ? ಒಂದೋ ಅನಿವಾರ್ಯ ನಡಿಗೆ, ಅದಿಲ್ಲದಿದ್ದರೆ ಗಾಡಿ ವಿರಳಾತಿ ವಿರಳ ವಾಹನಗಳು.

ನಮ್ಮಪ್ಪ ಹತ್ತಿರದ ದೇವರಿಗೆ ಹರಕೆ ಹೇಳಿಕೊಂಡಿದ್ದರೆ ಸುಲಭವಾಗುತಿತ್ತು. ಆದರೆ ಹೇಳಿಕೊಂಡದ್ದು ಬಹುದೂರದ ಕಪ್ಪಡಿಗೆ. ಅಲ್ಲಿಗೆ ಹೋಗಿ ಮುಡಿಕೊಡಬೇಕು. ಅದು ಪ್ರಾಮಾಣಿಕತನ. ಕೊನೆಗೆ ಒಲಿದು ಬಂದ ವಾಹನ  ಪೀರುವಿನ ಗಾಡಿ! ಮಳುಕೋಟೆಯ ಗಾಡಿಯ ಯಜಮಾನ, ಗಾಡಿ ಹೊಡೆವ ಪೀರು, ಅಪ್ಪ ಮತ್ತು ನಾನು- ಕಪ್ಪಡಿಯತ್ತ ಪಯಣಿಸಿದೆವು. ಅದು ನನ್ನ ಜೀವನದ ಬಹುದೂರದ ಎತ್ತಿನ ಗಾಡಿಯ ಪಯಣ.  ಅಲ್ಲಿ, ಕಪ್ಪಡಿಯಲ್ಲಿ ಗಾಡಿಯ ಕೆಳಗೆ ಒಣಹುಲ್ಲು ಹಾಸಿದ ನೆಲದ ಮೇಲೆ ರಾತ್ರಿ ಅಪ್ಪನೊಡನೆ ಮಲಗಿದ ನೆನಪಿದೆ. ಅಕ್ಕನಿಗಾಗಿ ಬಾಳೆಹಣ್ಣು  ಜೇಬಿನಲ್ಲಿಟ್ಟುಕೊಂಡು ಮಲಗಿದ ನೆನಪಿದೆ. ಬೆಳಗ್ಗೆ ಎದ್ದು ಜೇಬಿಗೆ ಕೈ ಹಾಕುವಾಗ ಬಾಳೆ ಹಣ್ಣಿಗಾದ ಸ್ಥಿತಿ ನೆನಪಿದೆ. ನಾನೂ ತಿನ್ನದೆ ಅವುಗಳಿಗೂ ಕೊಡಲಾಗದೆ ಹಣ್ಣನ್ನು ಎಸೆದುದು ನೆನಪಿದೆ. ಆದರೆ ಪೀರು ನನ್ನೋಡನೆ ಮಾತನಾಡಿದ ನೆನಪಿಲ್ಲ. ಹಾಗಾದರೆ ಪೀರು ಯಾಕೆ ಮಾತಾಡಲಿಲ್ಲ ? ಕಾಟಿಬೆಟ್ಟದ ಕಾಡಿನ ನಡುವೆ ಬೆಟ್ಟದಷ್ಟು ಕಾಡುವ ಪ್ರಶ್ನೆ ಅದೇ.

ಪಾತಿ ನೆತ್ತಿ, ಜಾರು ಚಡ್ಡಿ

ಕಪ್ಪಡಿಯಲ್ಲಿ ಮುಡಿ ಕೊಟ್ಟೆ.  ನುಣ್ಣಗಿನ ತಲೆಗೆ ಟೋಪಿ ಬಂತು. ಶಾಲೆಗೆ ಹೋದರೆ ಮಕ್ಕಳು ನನ್ನ ಟೋಪಿಯನ್ನು ಕಿತ್ತುಕೊಂಡು ಗೋಳಾಡಿಸುತ್ತಿದ್ದರು. ಟೋಪಿ ಹಾಕದೆ ಹೋದರೆ  `ಕೊಟ್ಟ ಮಂಡೆ ಕಾಕ, ಮೈಸೂರ್‌ಕ್ ಪೋಕ’ ಎಂದು ಹೇಳಿಕೊಂಡು ಹಾಸ್ಯ ಮಾಡುತ್ತಿದ್ದರು. ನಾನು ಅಳುತ್ತಿದ್ದೆ. ಗುರುಗಳಿಗೆ ಪುಕಾರು ಕೊಡುತ್ತಿದ್ದೆ. ತಲೆಗೆ ಎಣ್ಣೆಯಲ್ಲ ಬೆಣ್ಣೆ ಹಾಕಿದರೂ ಕೂದಲು ಬೆಳೆಯುವುದು ಬೆಳೆಯುವಾಗಲೆ!

ಅಬ್ಬಾ! ಕೂದಲಂತೂ ಬಂತು. ಅಪಹಾಸ್ಯದಿಂದ ಬಚಾವಾದೆ.  ಅಕ್ಕ ತಲೆ ಬಾಚಿ ಕೂಮ್ ತೆಗೆದುಕೊಡುತ್ತಿದ್ದಳು. ಅಕ್ಕನಿಗೆ ಅವ್ವ ಬಾಚಿಕೊಡುತ್ತಿದ್ದಳು. ತಮಾಷೆಯೆಂದರೆ ಆಗ ನಮ್ಮಲ್ಲಿ
ನೋಡಿಕೊಳ್ಳಲು ಕನ್ನಡಿ ಇರಲಿಲ್ಲ. ನೀರಿನಲ್ಲಿ ಮುಖ ನೋಡಿಕೊಳ್ಳುತ್ತಿದ್ದೆವು!  ಬಾಚಣಿಗೆ ಇದ್ದುದ್ದು ಒಂದೇ ಒಂದು.  ಎರಡೂ ಕಡೆ ಹಲ್ಲಿದ್ದ ಬಾಚಣಿ ಅದು.  ಅದನ್ನು ಯಾರೋ ಕದ್ದುಬಿಟ್ಟರು!  ಸಣ್ಣ ಹಲ್ಲಿದ್ದ ಬಾಚಣಿಯಾದುದರಿಂದ ತಲೆ ಬಾಚಿದಾಗ ಹೇನು ಬರುತ್ತಿತ್ತು. ಅದರ ಉಪಯೋಗ ಯಾರಿಗೋ ತೀರಾ ಅಗತ್ಯವಿತ್ತೆಂದು ಕಾಣುತ್ತದೆ. ಹಾಗಾಗಿ ಅದನ್ನು ನಮ್ಮ ಮನೆಗೆ ಬಂದವರು ಯಾರೋ ಕದ್ದಿದ್ದರು.  ನಮಗೆ ಪರದಾಟ. ತಲೆ ಬಾಚಿಕೊಳ್ಳುವುದು ಹೇಗೆ? ಅದಕ್ಕೆ ಅವ್ವ ಮಾಡಿದ ಉಪಾಯ- `ಪಾಷಣ ಮೂರ್ತಿ`ಗೆ ಹರಕೆ ಹೇಳಿಕೊಳ್ಳುವುದೆಂದು. ಆ ವಿಚಾರ ಬಾಯಿಂದ ಬಾಯಿಗೆ ಹರಡಿತು. ಕೆಲವು ದಿನದ ಬಳಿಕ  ಆ ಬಾಚಣಿ ನಮ್ಮ ಅಂಗಳದಲ್ಲಿ ಬಿದ್ದಿತ್ತು!  ಅವ್ವ ಯಾವ ದೇವರಿಗೂ ಹರಕೆ ಮಾಡಿಕೊಂಡಿರಲಿಲ್ಲ.  ಹಳ್ಳಿಯ ಜನಕ್ಕೆ ಭಯ ಮತ್ತು ಭ್ರಮೆ ತೀರಾ ಹೆಚ್ಚಾಗಿರುತ್ತದೆಂದು ಬೇರೆ ಹೇಳಬೇಕಿಲ್ಲ.

ಅದೆಲ್ಲಾ ಇರಲಿ, ನನ್ನ ತಲೆ ಕತೆ ಕೇಳಿ: `ಹುಡುಗರು ಹೆಚ್ಚು ಉದ್ದವಾಗಿ ಕೂದಲು ಬಿಡಬಾರದು ಹಾಗೆ ಕೂದಲು ಬಿಟ್ಟರೆ ಕುತ್ತಿಗೆ ದಬ್ಬವಾಗುವುದಿಲ್ಲ’ ಇದು ನಮ್ಮ ಅಪ್ಪನ ಥಿಯರಿ. ಅ ಥಿಯರಿ ನನ್ನ ತಲೆಗೂ ಅನ್ವಯವಾಯಿತು. ಆಗಿನ ಕಾಲದಲ್ಲಿ ಕ್ಷೌರ ಮಾಡುವವರು ಒಂದು ಬ್ಯಾಗು ಅಥವಾ ಒಂದು ಸಣ್ಣ ಪೆಟ್ಟಿಗೆ ಹಿಡಿದು ಮನೆ ಮನೆಗೆ ಬರುತ್ತಿದ್ದರು. ಹಾಗೆ ನಮ್ಮ ಮನೆಗೂ ಒಬ್ಬ ಕ್ಷೌರಿಕ ಬಂದ. ಆತ ಬಂದೊಡನೆ ನನ್ನನ್ನು ಅಂಗಳದ ಒಂದು ಮರದ ಬುಡದಲ್ಲಿ ಮಣೆ ಹಾಕಿ ಕೂರಿಸಲಾಯಿತು. ನನ್ನ ಬಳಿ ಅಪ್ಪ ಕುಳಿತುಕೊಂಡಿತ್ತು.  ಕ್ಷೌರದವನ ಹಿಡಿತದಲ್ಲಿ ನನ್ನ ತಲೆ.

ಅಪ್ಪನ ಅಪ್ಪಣೆಯಂತೆ ಕ್ಷಾರಿಕ  ಕೆಲಸ ಶುರು ಮಾಡಿದ. ನೆತ್ತಿ ಬಿಟ್ಟು ಉಳಿದೆಲ್ಲಾ ಕಡೆ ನುಣ್ಣಗೆ ಕೆರೆದ. ನೆತ್ತಿ ಮೇಲೆ ಚಕ ಚಕ ಸದ್ದು ಮಾಡುತ್ತಾ ಮಿಷನ್ ಓಡಿಸಿದ. ಕೆರೆಯುವಾಗ ನೋವಾಗಲಿಲ್ಲ. ಮಿಷನ್ ಓಡಿಸುವಾಗ ಮಾತ್ರ ಅಸಾಧ್ಯ ನೋವಾಗುತ್ತಿತ್ತು.  ಕೂದಲು ಇನ್ನೂ ತುಂಡಾಗುವ ಮೊದಲೇ ಮಿಷನನ್ನು ತೆಗೆಯುತ್ತಿದ್ದ. ಮಿಷನ್ಗೆ ಸಿಕ್ಕಿಕೊಂಡ ಕೂದಲು ಬುಡದಿಂದಲೇ ಕಿತ್ತು ಬರುತಿತ್ತೋ ಏನೊ? ಜೋರಾಗಿ ಅಳುವಂತಿಲ್ಲ, ಸ್ವಾಭಿಮಾನ! `ಕುಸು ಕುಸು’ ಅಂತ ಅತ್ತೆ.  ಕಣ್ಣೀರು ಸುರಿಯಿತು. ನೆತ್ತಿ `ಬಟ್ಟಲು ಪಾತಿ’ಯಂತಾಯಿತು.  ತಲೆಯ ಸುತ್ತೆಲ್ಲಾ ನುಣ್ಣಗಾಗಿ `ಬೋಳಕೋಳಿ’ ಯಂತಾಯಿತು. ನಾನು ಈ ಸ್ಥಿತಿ ನೋಡಿ ಅತ್ತೆ.   `ನೆತ್ತಿ ಮೇಲೆ ಕೂದಲಿರಬೇಕು. ಬಿಸಿಲು ನೇರ ನೆತ್ತಿಗೆ ಬೀಳಬಾರದು. ಅದಕ್ಕೆ ಇನ್ನು ಮುಂದೆ ಹೀಗೆ
ಮಾಡಿಸಬೇಕು` ಅಪ್ಪ ನನ್ನನ್ನು ಸಮಾಧಾನ ಮಾಡಿದದ ರೀತಿ! ಅಪ್ಪನ ಸಮಾಧಾನದ ಮಾತು ನನಗೆ  ಪಥ್ಯವಾಗಲಿಲ್ಲ. ಮರುದಿನ ಶಾಲೆಗೆ ಹೋದೆ. ನನ್ನನ್ನು ನೋಡಿ ನಗದವರೂ ನಕ್ಕರು.  ನಾನು ಅಪಮಾನಿತನಾದೆ.  ಶಾಲೆಗೆ ಹೋಗಲು ಹಿಂದೇಟು ಹಾಕತೊಡಗಿದೆ.  ಹಾಗೆಂದು ಚಕ್ಕರ್ ಹೊಡೆದವನಲ್ಲ.  ಮನಸ್ಸಿಲ್ಲದ ಮನಸ್ಸಿನಿಂದ ಹೋಗುತ್ತಿದ್ದೆ.  ಸದ್ಯ ನನಗೆ ನೆತ್ತಿಯಲ್ಲಾದರೂ ಕೂದಲಿರುತ್ತಿತ್ತು.  ಆದರೆ ಅಪ್ಪನದು ಹಾಗಲ್ಲ. ಕ್ಷೌರದವ ಬಂದರೆ ಮನೆಯಲ್ಲಿ, ಅದಿಲ್ಲದಿದ್ದರೆ ತಿತಿಮತಿಗೆ ಹೋಗಿ ಗಡ್ಡ ಮೀಸೆ, ತಲೆಯೆಲ್ಲಾ ನುಣ್ಣಗೆ ಮಾಡಿಸಿಕೊಳ್ಳುತಿತ್ತು.  ಸದ್ಯ ನನ್ನ ತಲೆಯನ್ನು ನುಣ್ಣಗೆ ಮಾಡಲಿಲ್ಲವಲ್ಲ ಎಂದು ಸಮಾಧಾನ ಪಟ್ಟೆ.

ನನ್ನ `ಬಟ್ಟಲು ಪಾತಿ’ಯ ಕ್ಷೌರ ಮುಂದುವರೆಯಿತು. ಎರಡು ಮೂರು ತಿಂಗಳಿಗೊಮ್ಮೆ ತಿತಿಮತಿಗೆ ಅಪ್ಪನೊಡನೆ ನಾನು ಹೋಗುತ್ತಿದ್ದೆ.  ಅಲ್ಲಿಯ ಕ್ಷೌರದಂಗಡಿಯಲ್ಲಿ ಚರ್ಮದ ಬೆಲ್ಟ್
ನೇತಾಡುತಿತ್ತು.  ಕ್ಷೌರದವನು ಚಾಕುವನ್ನು ಆ ಬೆಲ್ಟ್‌ಗೆ ಸೊಂಯ್ ಸೊಂಯ್ ಎಂದು ತೀಡುತ್ತಿದ್ದ. ಆ ಚಾಕುವಿನಿಂದಲೇ ತಲೆ ಕೆರೆಯುತ್ತಿದುದು. ನನಗೆ ಭಯವಾಗುತ್ತಿತ್ತು. ಏಕೆಂದರೆ ಕೋಳಿ ಬಲಿ, ಹಂದಿ ಬಲಿಯೆಲ್ಲಾ ನೆನಪಾಗುತ್ತಿತ್ತು.  `ಹಾಳಾದ ಕ್ಷಾರ’ ಎಂದು ಕೊಳ್ಳುತ್ತಿದ್ದೆ.  ನಾನು ಹೇಳಿದಂತೆ ಅವನು ಮಾಡಲಾರನೆ? ಮಾಡಿಯಾನು. ಆದರೆ ಹೀಗೆ ಮಾಡು ಎಂದು ಹೇಳುವ ಧೈರ್ಯ ನನಗಿರಲಿಲ್ಲವಲ್ಲ. ನಾನೊಬ್ಬನೇ ತಿತಿಮತಿಗೆ ಹೋಗಿ ಕ್ಷೌರ ಮಾಡಿಸಿಕೊಂಡರೆ ಹೇಗೆ ? ಅದಾಗಬಹುದು. ಆದರೆ ಆನೆಕಾಡಿನ ದಾರಿಯಲ್ಲಿ ನಾನೊಬ್ಬನೇ ಹೋಗುವುದಾದರೂ ಹೇಗೆ?

ಅನಿವಾರ್ಯ ಎನಿಸುವಾಗ ಧೈರ್ಯ ತಾನಾಗಿಯೇ ಬರುತ್ತದೆ.  ನನ್ನ `ಬಟ್ಟಲು ಪಾತಿ’ಯ ಕ್ಷಾರದಿಂದ ಬಿಡುಗಡೆ ಹೊಂದಲೇ ಬೇಕು. ಒಂದು ದಿನ ಮನೆಯಲ್ಲಿ ತಿತಿಮತಿಗೆ ನಾನೊಬ್ಬನೇ ಹೋಗಿ ಸಾಮಾನು ತರುತ್ತೇನೆ ಎಂದು ಹೇಳಿದೆ.  `ಆಯಿತು ಹೋಗಿ ಬಾ’ ಎಂದು ಅನುಮತಿ ನೀಡಿದರು.  ನಾನು ಅದೇ ಸರಿಯಾದ ಸಮಯವೆಂದು ಆ ಕೂಡಲೆ ಅಂಗಡಿಗೆ ಹೊರಟು ನಿಂತೆ.  ಆಗ ಅಪ್ಪ `ಹೇಗೂ ಹೋಗುತ್ತೀಯಲ್ಲ, ಹಾಗೆ ಕ್ಷೌರ ಮಾಡಿಸಿಕೊಂಡು ಬಾ’ ಎಂದು ಹೇಳಿತು.  ನಾನು ಹೊರಟಿದ್ದೇನೋ ನಿಜ, ಆನೆಯೋ ಹುಲಿಯೋ ಬಂದರೇನು ಮಾಡಲಿ? ದಾರಿಯಲ್ಲಿ ಯಾರಾದರೂ ಸಿಕ್ಕಿದ್ದರೆ ಸಾಕಿತ್ತು. ಜೊತೆಗೊಬ್ಬರಿದ್ದರೆ ಬಲ ಹೆಚ್ಚು ಎಂಬ ತೀರ್ಮಾನಕ್ಕೆ ಬಂದೆ. ಆದರೇನು? ನರನಾಯಿ ಇಲ್ಲದ ದಾರಿ ಅದಾಗಿತ್ತು. ತಿತಿಮತಿಗೆ ಹೋದೆ. ನನ್ನ ಮಾಮೂಲಿ ಕ್ಷೌರದಂಗಡಿಗೆ ಹೋಗಲಿಲ್ಲ.  ಬೇರೊಂದು ಸೆಲೂನ್‌ಗೆ ಹೋದೆ.  `ಕ್ರಾಪ್’ ಮಾಡುವಂತೆ ಹೇಳಿದೆ. ಆತ ನೀಟಾಗಿ ಕ್ರಾಪ್ ಮಾಡಿ ತಲೆ ಬಾಚಿ ಕೂಮ್ ಮಾಡಿ ಕಳುಹಿಸಿದ. ಅಂಗಡಿಯಿಂದ ಸಾಮಾನು ತಕ್ಕೊಂಡೆ.  ದಾರಿಯಲ್ಲಿ ಹುಲಿ, ಆನೆಯ ಭಯಕ್ಕಿಂತ ಮನೆಯಲ್ಲಿ ಅಪ್ಪನ ಆರ್ಭಟ ಕೇಳುವುದಾದರೂ ಹೇಗೆಂದು ಭೀತನಾದೆ.

ಮನೆಗೆ ತಲುಪಿದ ಕೂಡಲೆ  `ಓ ಬಂದುಬುಟ್ಟಾ, ಎಲ್ಲಿ ಕ್ಷೌರ, ಹೇಗೆ ಮಾಡಿದ್ದಾನೆ` ಅಪ್ಪನ ಮೊದಲ ಪ್ರಶ್ನೆ. ನಾನು ತಲೆ ತೋರಿಸಿದೆ. `ರಾಮ ರಾಮಾ ಅವನು ಮೋಸ ಮಾಡಿಬಿಟ್ಟ. ಮಕ್ಕಳನ್ನು ಕಳುಹಿಸಿದರೆ ಸುಮ್ಮನೆ ಕೂರಿಸಿ ಹಣ ತಕ್ಕೊಂಡು ಮೋಸ ಮಾಡಿದ` ಅಪ್ಪನ ಆರ್ಭಟ ಇನ್ನೂ ಹೆಚ್ಚಾಗತೊಡಗಿತು.  ಅಪ್ಪ, ಈಗ ಕ್ರಾಪ್ ಮಾಡೋದೇ ಹೀಗೆ.  ಅವನು ಮೋಸ ಮಾಡಲಿಲ್ಲ  ಎಂದು ಧೈರ್ಯ ಮಾಡಿ ಹೇಳಿಬಿಟ್ಟೆ. ಅಕ್ಕ ಅವ್ವ ಎಲ್ಲ ಸೇರಿಕೊಂಡು ಅಪ್ಪನನ್ನು ಸಮಾಧಾನ ಮಾಡುವವರೆಗೆ ಸಾಕು ಸಾಕಾಯಾಯಿತು. ಆ ಘಟನೆಯ ಬಳಿಕ ಪ್ರತಿಬಾರಿ ನಾನೇ ಹೋಗಿ ಕ್ರಾಪ್ ಮಾಡಿಸಿಕೊಂಡು ಶಾಲೆಯಲ್ಲಿ ನಗೆಪಾಟಲಿಗೀಡಾಗುವುದರಿಂದ ಪಾರಾದೆ. ಅಲ್ಲಿಂದ ಮುಂದೆ ಅಪ್ಪ ನನ್ನ ತಲೆಯ ಸುದ್ದಿಗೆ ಬರಲಿಲ್ಲ. ನನ್ನ ತಲೆ ಸ್ವತಂತ್ರ ಪಡೆಯಿತು.

ಇನ್ನು ನನಗೆ ಬಟ್ಟೆ ಹೊಲಿಸುವುದರಲ್ಲಿ ಅಪ್ಪನದೇ ಸಿಸ್ಟಮ್. ನಾನು ಹೈಸ್ಕೂಲ್ ಮೆಟ್ಟಿಲು ಹತ್ತುವವರೆಗೆ ಕ್ರಾಸ್ ಬೆಲ್ಟ್  ಚಡ್ಡಿಯೇ ಗತಿ. ಚಡ್ಡಿಗೆ ಗುಂಡಿ ಇರುತ್ತಿರಲಿಲ್ಲ. ಧರಿಸುವುದು ಬಲು ಸುಲಭ ಬಿಚ್ಚುವುದು ಅಷ್ಟೇ ಸುಲಭ. ಕ್ರಾಸ್ ಬೆಲ್ಟ್ ಹೆಗಲ ಮೇಲೆ ಸಿಕ್ಕಿಕೊಳ್ಳುತ್ತಿತ್ತು.  ಮೊದಲು ಶರಟು ಹಾಕಬೇಕು ನಂತರ ಚೆಡ್ಡಿ ಕೋಸಿದರಾಯಿತು.  ಆ ಚೆಡ್ಡಿಯೋ  `ಲೊಳಲೊಳ’ ಅನ್ನುತಿತ್ತು.  ಹುಡುಗರಿಗೆ ಕೀಟಲೆ ಮಾಡಲು ಇನ್ನೇನು ಬೇಕು? ಒಮ್ಮೆ ಈಚೆ ಹೆಗಲಿನ ಬೆಲ್ಟ್, ಮತ್ತೊಮ್ಮೆ ಆಚೆ ಹೆಗಲಿನ ಬೆಲ್ಟ್ ಜಾರಿಸಿದರಾಯಿತು. ಚೆಡ್ಡಿ ಭೂಮಿ ಮೇಲೆ ಪತಕ್ ಅಂತ ಬೀಳವುದೇ. ಅದಕ್ಕೆ ನಾನೇ ಒಂದು ಉಪಾಯ ಕಂಡುಕೊಂಡೆ.  ಮೊದಲು ಚೆಡ್ಡಿ ಹಾಕಿ ಹೆಗಲ ಮೇಲೆ ಬೆಲ್ಟ್ ಕೋಸುವುದು.  ನಂತರ ಅದರ ಮೇಲೆ ಶರಟು ಹಾಕಿದರೆ ಬೆಲ್ಟ್ ಕಾಣಿಸುವುದೇ ಇಲ್ಲ. ಚೇಷ್ಟೆ ಮಾಡುವ ಮಕ್ಕಳಿಗೆ ಅವಕಾಶವಿಲ್ಲದಂತಾಯಿತು. ಆದರೆ ಹೊಸದೊಂದು ಸಮಸ್ಯೆ ಎದುರಾಯಿತು. ದಾರಿಯಲ್ಲ `ಅರ್ಜೆಂಟಾದರೆ ’ ತಕ್ಷಣವೆ ಚಡ್ಡಿ ಜಾರಿಸಲಾಗುವುದಿಲ್ಲ. ಶರಟು ಬಿಚ್ಚಿದ ಬಳಿಕವಷ್ಟೇ ಚಡ್ಡಿ ಜಾರಿಸಬೇಕಿತ್ತು. ಈ ಯಾವ ರಾಮಾಯಣವೇ ಬೇಡವೆಂದು ಅವ್ವನೊಡನೆ ಹೇಳಿ, ಅಪ್ಪನೊಡನೆ ಕಾಡಿಬೇಡಿ ಗುಂಡಿ ಚಡ್ಡಿಯನ್ನು ಹೊಲಿಸಿಕೊಂಡು ಸಮಸ್ಯೆಯಿಂದ ಪಾರಾದೆ  `ಕ್ರಾಸ್ ಬೆಲ್ಟ್’ ಚೆಡ್ಡಿಗೆ ಗುಡ್ ಬೈ ಹೇಳಿದೆ.

ಅಪ್ಪನಿಗೆ ಖಾಕಿ ಬಟ್ಟೆಯೆಂದರೆ ಇಷ್ಟ. ಶಾಲೆಯಲ್ಲಿ ಸಮವಸ್ತ್ರ ತೊಡದಿರುವ ದಿನ ಬಣ್ಣದ ಬಟ್ಟೆ ಹಾಕಬೇಕಿತ್ತಲ್ಲಾ ಹಾಗಾಗಿ ನನಗೆ ಖಾಕಿ ಸಮವಸ್ತ್ರವನ್ನೇ ಹೊಲಿಸಲಾಯಿತು. ನನ್ನ ಶರಟು ಉಳಿದವರಿಗಿಂತ ಭಿನ್ನವಾಗಿತ್ತು.  ಪೊಲೀಸ್ ಅಂಗಿಯಲ್ಲಿ ಹೆಗಲಿನಲ್ಲಿ ಬೆಲ್ಟ್ ಇರುತ್ತಲ್ಲ ಹಾಗೆ ನನ್ನ ಅಂಗಿಗೂ ಹೊಲಿಸಲಾಗಿತ್ತು. ಹಾಗೆ ಹೊಲಿಸಿದ್ದರಿಂದ ನನಗೆ ಕೊಂಚ ಲಾಭವೂ ಇತ್ತು.  ಅದೇನೆಂದರೆ ಹೆಗಲಿನ ಬೆಲ್ಟ್ ಅನ್ನು ಬಿಚ್ಚಿ ಸ್ಕೂಲ್ ಬ್ಯಾಗನ್ನು ನೇತು ಹಾಕಿ ಬೆಲ್ಟ್ ಗುಂಡಿ ಹಾಕಿದರೆ ಯಾವ ಕಾರಣಕ್ಕೂ ಬ್ಯಾಗು ಜಾರಿ ಬೀಳುವಂತಿಲ್ಲ. ಅಥವಾ ಕೊಡೆಯ ಕೊಕ್ಕೆಯನ್ನು ಹೆಗಲಿನ ಬೆಲ್ಟ್‌ಗೆ ಸಿಕ್ಕಿಸಿ ನಡೆಯುತ್ತಿದ್ದೆ.  ಹೈಸ್ಕೂಲ್‌ನಲ್ಲಿ ನನ್ನ ಗುರುವೊಬ್ಬರು ಖಾಕಿ ಬಟ್ಟೆ ನೋಡಿ  ಗಾರ್ಡ್ ಎಂದೇ ಕರೆಯುತ್ತಿದ್ದರು.

ಅಪ್ಪ, ಅಕ್ಕನ ಸುದ್ದಿಗೆ ಹೋಗುತ್ತಿರಲಿಲ್ಲ. ಅವಳಿಗೆ ಬೇಕಾದ ರೀತಿ ಬಟ್ಟೆ ಹೊಲಿಸಿಕೊಳ್ಳುತ್ತಿದ್ದಳು. ನಾನಂತೂ ನಾನಾ ಬಗೆಯಲ್ಲಿ ಆಟದ ವಸ್ತುವಿನಂತಾಗಿದ್ದೆ. ಕೆಲವರು ವರ್ಷದಲ್ಲಿ ಗೌರಿ ಹಬ್ಬ, ಹುತ್ರಿ ಹಬ್ಬದಲ್ಲೆಲ್ಲಾ ಹೊಸ ಬಟ್ಟೆ ಹೊಲಿಸುತ್ತಾರೆ.  ಆದರೆ ನಮ್ಮ ಕುಟುಂಬಕ್ಕೆ ಎಲ್ಲಾ ಹಬ್ಬವೂ ಒಂದೇ. ಕೈಯಲ್ಲಿ ಕಾಸಿದ್ದಾಗ ಹೊಸ ಬಟ್ಟೆ.

ಒಗ್ಗಟ್ಟಾದರೆ ಬೆತ್ತದ ರುಚಿಯಿದೆ

ಅದು `ಡೌನ್ ಡೌನ್ ಹಿಂದಿ`ಯ ಕಾಲ! ಎಲ್ಲಿ ನೋಡಿದರಲ್ಲಿ ಮುಷ್ಕರ. ವಾಹನಗಳ ಓಡಾಟವಿಲ್ಲ. ಅಂಗಡಿ ಮುಂಗಟ್ಟುಗಳಿರಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ. ಆದರೆ ಹಳ್ಳಿಯ ಶಾಲೆಗಳಿಗೆ ಮುಷ್ಕರದ ಬಿಸಿ ಮುಟ್ಟಿರಲಿಲ್ಲ.

ಪೊನ್ನಪಸಂತೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ತೆರೆದಿದ್ದವು. ನಾನು ಆಗ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ಅಂದು ಮಧ್ಯಾಹ್ನದ ಊಟ ಮಾಡುತ್ತಿದ್ದಾಗ ನಮ್ಮ ತರಗತಿಯ ಹಿರಿಯ ಹುಡುಗ ಸುಮಾರು ಹದಿನೈದು ಹುಡುಗರನ್ನು ಒಟ್ಟು ಮಾಡಿದ. ನಾವೂ ಸ್ಟ್ರೈಕ್ ಮಾಡೋಣ, ಬಾಳೆಲೆವರೆಗೆ `ಡೌನ್ ಡೌನ್ ಹಿಂದಿ` ಅಂತ ಘೋಷಣೆ ಕೂಗುತ್ತಾ ಹೋಗಿ ಬರೋಣ ಅಂತ ಕಿವಿ ಊದಿದ. ನಮಗೂ ಅದು ಒಳ್ಳೆಯ ಸಲಹೆ ಎಂದೆನಿಸಿತು. ಗುರುಗಳ ಕಣ್ಣಿಗೆ ಬೀಳದಂತೆ ರಸ್ತೆಗಿಳಿದೆವು. ಪಕ್ಕದಲ್ಲಿರುವ ಪ್ರೌಢಶಾಲೆಯ ತಿರುವು ದಾಟುವವರೆಗೂ ಘೋಷಣೆಯಾಗಲಿ, ಮಾತಾಗಲಿ ಇಲ್ಲ. ಅಲ್ಲಿಂದ ಮುಂದೆ ನಾವೇ ಶೂರರು. ಘೋಷಣೆಯೇ ಘೋಷಣೆ.

ನಾಯಕ: `ಏನೇ ಬರಲಿ`
ನಾವೆಲ್ಲರೂ: `ಒಗ್ಗಟ್ಟಿರಲಿ`
ನಾಯಕ: `ಡೌನ್ ಡೌನ್`
ನಾವೆಲ್ಲರೂ: `ಹಿಂದಿ`

ಈ ರೀತಿಯಾಗಿ ಆವೇಶದಿಂದ ಕೂಗುತ್ತಾ, ಕುಣಿದು ಕುಪ್ಪಳಿಸುತ್ತಾ ಸಾಗಿದೆವು. ಯಾವುದೇ ವಾಹನ ಬಂದರೂ ಅದನ್ನು ತಡೆದು ನಿಲ್ಲಿಸಬೇಕು. ನಮ್ಮ ಮಾತು ಮೀರಿದರೆ ವಾಹನದ ಚಕ್ರದ ಗಾಳಿಯನ್ನು ಬಿಡಬೇಕು. ಯಾವ ಅಂಗಡಿಯೂ ತೆರೆದಿರಕೂಡದು. ತೆರೆದಿದ್ದಲ್ಲಿ ಬಲವಂತವಾಗಿ ಬಾಗಿಲು ಹಾಕಿಸಬೇಕು ಇದು ನಮ್ಮ ನಾಯಕ ನಮಗೆ ನೀಡಿದ ಆಜ್ಞೆ. ಅವನ ಆಜ್ಞೆಯನ್ನು ನಾವು ಶಿರಸಾ ವಹಿಸುತ್ತೇವೆಂದು ತಲೆಯಾಡಿಸಿದೆವು.

ನಾವು ಘೋಷಣೆ ಕೂಗುತ್ತಾ ಹೋಗುತ್ತಿರಬೇಕಾದರೆ ಮುಂದೆ ನಂಬಿಯಾರ್ ಎಂಬವನ ಅಂಗಡಿ ತೆರೆದಿತ್ತು. ಆ ಸುತ್ತಲಿಗೆ ಆ ಅಂಗಡಿ ತುಂಬಾ ಹೆಸರುವಾಸಿಯಾಗಿತ್ತು. ಬಸ್‌ನಲ್ಲಿ ಪ್ರಯಾಣಿಸುವಾಗ ನಂಬಿಯಾರ್ ಅಂಗಡಿ ಹತ್ತಿರ ನಿಲ್ಲಿಸಿ ಎನ್ನುವಷ್ಟು ಹೆಸರುವಾಸಿಯಾದ ಅಂಗಡಿ. ಅಂಗಡಿಯಾತನ ಹೆಸರು ನಂಬಿಯಾರ್. ನರಪೇತಲ ನಾರಾಯಣ. ಆತ ಅದೆಷ್ಟು ಲಾಚಾರ್ ಆಗಿದ್ದ ಅಂದರೆ ಮೈಯಲ್ಲಿ ನರಗಳೆಷ್ಟು ಎಂದು ಎಣಿಸಬಹುದಿತ್ತೇನೋ! ಅವನ ಅಂಗಡಿಗೆ ಹಲಗೆಯ ಬಾಗಿಲು. ಅಂದರೆ ಒಂದು ಕಾಲದಲ್ಲಿ ಹಲಗೆಗಳನ್ನೇ ಒಂದರ ನಂತರ ಒಂದನ್ನು ಜೋಡಿಸಲಾಗುತಿತ್ತು. ಕನಿಷ್ಟ ಹತ್ತು ಹಲಗೆಯಾದರೂ ಇರುತಿತ್ತು. ಈಗಲೂ ಅಲ್ಲೊಂದು ಇಲ್ಲೊಂದು ಆ ಮಾದರಿಯ ಬಾಗಿಲಿನ ಅಂಗಡಿಗಳಿವೆ. ಸರಿ, ಆತನ ಅಂಗಡಿ ತೆರೆದಿತ್ತಲ್ಲಾ, ಹಲಗೆಗೆ ಒಂದೆರಡು ಕಲ್ಲೇಟು ಬಿತ್ತು. `ಒನ್ನೂ ಆಕಂಡ ಕುಟ್ಟಿಗಳೇ` (ಏನೂ ಮಾಡಬೇಡಿ ಮಕ್ಕಳೇ) ಎನ್ನುತ್ತ ಆತ ಬೇಗ ಬೇಗನೆ ಹಲಗೆ ಜೋಡಿಸಿ ಬಾಗಿಲು ಮುಚ್ಚಿ ಒಳಸೇರಿಕೊಂಡ. ಇದು ನಮಗೆ ದೊರೆತ ಮೊದಲನೇ ಜಯ!

ನಮ್ಮ ನಗು, ಕೇಕೆ, ಘೋಷಣೆ … ಸಾಗುತ್ತಲೇ ಇತ್ತು. ಹೀಗೆ ಬಾಳೆಲೆ ಎಂಬ ಪಟ್ಟಣದತ್ತ ನಮ್ಮ ನಡಿಗೆ ಸಾಗುತ್ತಿರಲು ಆ ಕಡೆಯಿಂದ ಒಬ್ಬ ಬನ್ ಬುಟ್ಟಿಯನ್ನು ಕಟ್ಟಿಕೊಂಡು ಸೈಕಲ್ ತುಳಿಯುತ್ತಾ ಬರುತ್ತಿದ್ದ. ರಸ್ತೆ ತುಂಬಾ ನಾವು ನಿಂತಿದ್ದೆವು. ಆತ ಬೆಲ್ ಮಾಡುತ್ತಾ ನಮ್ಮ ಹತ್ತಿರ ಸೈಕಲ್ ನಿಲ್ಲಿಸಿದ. ಮಾತಿಗೆ ಮಾತು ಬೆಳೆಯಿತು. ನಮ್ಮ ನಾಯಕ ಸೈಕಲ್‌ನ ಹ್ಯಾಂಡಲ್ ಹಿಡಿದುಕೊಂಡ. ನಮಗೆ ಚಕ್ರದ ಗಾಳಿ ಬಿಡುವಂತೆ ಆಜ್ಞೆ ಮಾಡಿದ. ನಮ್ಮಲ್ಲಿ ಒಬ್ಬ ಹಿಂದಿನ ಚಕ್ರದ ಗಾಳಿ ತೆಗೆದ. ಬ್ರೆಡ್, ಬನ್ನು ಇದ್ದ ಬುಟ್ಟಿಯನ್ನೇನೂ ಮಾಡದೆ `ಹೋಗು’ ಎಂದು ಕಳುಹಿಸಿದೆವು. ಇದು ನಮ್ಮ ಎರಡನೇ ಜಯ!

ಸೈಕಲ್ ವಾಲಾ ನಮ್ಮ ಶಾಲೆಯತ್ತ ಸೈಕಲ್ ತಳ್ಳುತ್ತಾ ಹೊರಟ. ನಾವು ಬಾಳೆಲೆಯತ್ತ ಹೊರಟೆವು. ಹೀಗೆ ಮೂರು ಕಿ.ಮೀ. ನಷ್ಟು ದೂರ ಸಾಗಿದ್ದೆವು. ಅಷ್ಟರಲ್ಲಿ ಹಿಂದಿನಿಂದ ಮೋಟಾರು ಸೈಕಲ್‌ನ ಆರ್ಭಟ ಕೇಳತೊಡಗಿತು. ನಮ್ಮ ನಾಯಕ-ಏನೇ ಬರಲಿ, ನಾವು – ಒಗ್ಗಟ್ಟಿರಲಿ ಎನ್ನುತ ಮುಗಿಲು ಮುಟ್ಟು ಘೋಷಣೆಯೊಂದಿಗೆ ಸಾಗುತ್ತಿದ್ದೆವು. ಬಿಸಿಲಿನ ಝಳವಾಗಲಿ, ಸಮಯದ ಪ್ರಜ್ಞೆಯಾಗಲಿ ನಮಗಿರಲಿಲ್ಲ. ಬಸ್ಸು, ಲಾರಿ, ಕಾರು, ಜೀಪು ಇವು ಯಾವೂ ಓಡಾಡುತ್ತಿಲ್ಲ. ಈ ಬೈಕ್‌ಗೇನು ಕೆಲಸ? ಬರಲಿ, ಸರಿಯಾದ ಬುದ್ಧಿ ಕಲಿಸೋಣ ಎನ್ನುತ್ತಾ ಏನೇನೋ ಲೆಕ್ಕಾಚಾರ ಹಾಕತೊಡಗಿದೆವು.

ಬೈಕಿನ ಸದ್ದು ಹತ್ತಿರ ಹತ್ತಿರ ಕೇಳತೊಡಗಿತು. ಇನ್ನೇನು ಒಂದೇ ಒಂದು ತಿರುವು ದಾಟಿದರೆ ಬೈಕ್ ನಮಗೆ ಕಾಣುತ್ತದೆ. ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ಮಾಡೋಣ ಎಂದು ರಸ್ತೆಗೆ ಅಡ್ಡ ನಿಂತೆವು. ಡೌನ್ ಡೌನ್ ಹಿಂದಿ ಘೋಷಣೆ ಮೊಳಗಿತು. ಏನೇ ಬರಲಿ, ಒಗ್ಗಟ್ಟಿರಲಿ ಒಕ್ಕೊರಲ ಕೂಗು ಕೂಗಿದೆವು. ಬೈಕ್ ಬಂದೇ ಬಂತು. ಏನೇ ಬರಲಿ ಎಂದು ಘೋಷಣೆ ಕೂಗಿದ ತಂಡದ ನಾಯಕ ನಮಗೆ ಏನೂ ಹೇಳದೆ ಶಾಲೆಯ ಕಡೆ ಓಡತೊಡಗಿದ. ನಾವು ಬೆಕ್ಕಸ ಬೆರಗಾಗಿ ನಿಂತೆವು. ಎದೆ ಧಸಕ್ಕೆಂದಿತು. ಒಗ್ಗಟ್ಟಿರಲಿ ಎಂದು ಕೂಗುವುದಕ್ಕೆ ಬಾಯಿ ಬರಲೇ ಇಲ್ಲ! ಬೈಕ್ ನಿಲ್ಲಿಸಿದ ಆ ವ್ಯಕ್ತಿ ಉದ್ದ ಕೋಲನ್ನು ಮುರಿದುಕೊಂಡು ನಮಗೆ ರಪರಪನೆ ಬಿಗಿಯತೊಡಗಿದರು. ನಾವು ಮೈಕೈ ಉಜ್ಜಿಕೊಂಡು `ಸಾರ್ ಸಾರ್ ದಮ್ಮಯ್ಯ ಸಾರ್, ಬುಟ್ಟು ಬುಡಿ ಸಾರ್, ಇನ್ನು ಮುಂದೆ ಹೀಗೆ ಮಾಡಕಿಲ್ಲ ಸಾರ್` ಎಂದು ಶಾಲೆಯ ಕಡೆ ಓಡತೊಡಗಿದೆವು. ನಮ್ಮ ನಾಯಕ ನಮಗಿಂತಲೂ ಮುಂದೆ ಅಷ್ಟು ದೂರದಲ್ಲಿ ಓಡುತ್ತಿದ್ದ ! ಬೆನ್ನ ಹಿಂದೆ ನಮ್ಮ ಗುರುವಿನ ಬೈಕು ರಕ್ಕಸನಂತೆ ಆರ್ಭಟಿಸುತ್ತಾ ಬರುತಿತ್ತು. ಒಂದೆಡೆ ನಮಗಿಂತಲೂ ಮುಂದೆ ದಾಟಿದ ಬೈಕು ನಿಂತಿತು. ಮತ್ತೊಮ್ಮೆ ನಮ್ಮ ಕಾಲುಗಳಿಗೆ ರಪರಪನೆ ಪೆಟ್ಟು ಬಿತ್ತು. ನಮ್ಮ ವೇಗ ಮತ್ತೂ ಹೆಚ್ಚಿತು. ಹೀಗೆ ಓಡುತ್ತಿರುವಾಗ ಓ ಅಲ್ಲಿ ಸೈಕಲನ್ನು ತಳ್ಳುತ್ತಾ ನಡೆದು ಸಾಗುತ್ತಿದ್ದ ಬ್ರೆಡ್‌ನವನು ಕಾಣ ಸಿಕ್ಕಿದ. ನಮಗಂತೂ ಈ ಸ್ಥಿತಿಯಲ್ಲಿ ಅವನನ್ನು ನೋಡಲಾಗಲಿಲ್ಲ. ಈ ಮೊದಲು ನಂಬಿಯಾರನ ಅಂಗಡಿ ಮುಚ್ಚಿಸಿ ಬಂದವರು ನಾವು. ಈಗ ಆತ ಅಂಗಡಿ ತೆರೆದಿದ್ದ. ನಾವು ನೋಡಿಯೂ ನೋಡದವರಂತೆ ಓಡತೊಡಗಿದೆವು. ಎಲ್ಲಿಯೂ ನಿಲ್ಲುವ ಪ್ರಶ್ನೆಯಿಲ್ಲ. ನಿಂತರೆ ಪೆಟ್ಟು. ಓಡಲು ಆಗುತ್ತಿಲ್ಲ. `ಅಯ್ಯಪ್ಪಾ, ಬೇಕಿತ್ತಾ?’ ಓಡುತ್ತಲೇ ನಮ್ಮ ಶಾಲೆಯನ್ನು ತಲುಪಿದೆವು. ಮುಂದೆ?

ಪುಂಡು ದನಗಳನ್ನು ಅಟ್ಟಿಕೊಂಡು ಬಂದು ಕೊಟ್ಟಿಗೆಯಲ್ಲಿ ಕೂಡುವಂತೆ ನಮ್ಮನ್ನು ಒಂದು ಕೊಠಡಿಯಲ್ಲಿ ಕೂಡಿದರು. ನಾವು ನಿಲ್ಲಲೂ ಆಗದ, ಕೂರಲೂ ಆಗದ ಸ್ಥಿತಿಯಲ್ಲಿದ್ದೆವು. ತುಟಿ ಒಣಗಿತ್ತು. ನಾಲಗೆಯಲ್ಲಿ ಪಸೆಯಿಲ್ಲ. ಈ ವಿಚಿತ್ರ ಕೈದಿಗಳನ್ನು ನೋಡಲು ಉಳಿದ ಮಕ್ಕಳು ಕಿಟಕಿಯ ಕಂಬಿಯಲ್ಲಿ ನೇತಾಡುತ್ತಿದ್ದರು. ನಿಮ್ಗೆ ಅಂಗೆ ಆಗ್ಬೇಕು ಅಂತ ಹುಡುಗಿಯರು ಟೀಕಿಸುತ್ತಿದ್ದರು. ನಮ್ಮ ನಾಯಕ ತಲೆ ತಗ್ಗಿಸಿ ನಿಂತಿದ್ದ. ಏನೇ ಬರಲಿ, ಒಗ್ಗಟ್ಟಿರಲಿ ಎಂದವ ಮೊದಲು ಓಡಿದ್ದ. ನಾವು ಆಗ ಪ್ಯಾಂಟ್ ಹಾಕುತ್ತಿರಲಿಲ್ಲ. ಚಡ್ಡಿ ಹಾಕುತ್ತಿದ್ದುದರಿಂದ ಬೀಳುತ್ತಿದ್ದ ಪೆಟ್ಟು ನೇರ ಕಾಲಿಗೇ ಬಡಿದು ಬಾಸುಂಡೆ ಬಂದಿತ್ತು. ಇನ್ನೂ ಪ್ರಾಥಮಿಕ ವಿಚಾರಣೆ ಆಗಿರಲಿಲ್ಲ. ತಕ್ಕೊಳ್ಳಿ ವಿಚಾರಣೆ ಶುರುವಾಯಿತು…

ದಂಡಾಧಿಕಾರಿ ಮುಖ್ಯೋಪಾಧ್ಯಾಯರು ವಿಚಾರಣೆಗಾಗಿ ದಂಡದೊಂದಿಗೆ ಬಂದರು. ಅವರು ಸುಮ್ಮನೆ ಬಿಡುವುದುಂಟೆ? ನಂತರ ಉಳಿದ ಗುರುಗಳಿಂದ ಮಾಮೂಲಿ ಪೂಜೆ. ಅಷ್ಟೇನಾ ? ಅಲ್ಲ, ಕೊನೆಗೆ ತಂದೆಗೊಂದು ಆಮಂತ್ರಣ! ಸಂಜೆಯಾಯಿತು. ನಮ್ಮ ಬಿಡುಗಡೆಯೂ ಆಯಿತು. ಅಷ್ಟರಲ್ಲಿ ಹಿಂದಿ ಮೇಷ್ಟ್ರು ಬಂದರು. ನಾಳೆ ಬರುವಾಗ ಹಿಂದಿ ಪಾಠವೊಂದನ್ನು ಬರೆದುಕೊಂಡು ಬರಬೇಕು ಎಂದರು. ನಾವು ತಲೆಯಾಡಿಸಿ ಮನೆಯತ್ತ ಹೊರಟೆವು.

ಮರುದಿನ ಹಾಸಿಗೆಯಿಂದ ಏಳಲಾಗದಷ್ಟು ಮೈಕೈ ನೋವು. ಹೆಜ್ಜೆ ಕಿತ್ತಿಡಲಾಗದಷ್ಟು ಕಾಲು ನೋವು. ಆದರೂ ಶಾಲೆಗೆ ಹೋಗಲೇ ಬೇಕು. ಇಲ್ಲದಿದ್ದರೆ ಗೈರು ಹಾಜರಾದುದರ ದಂಡನೆ ಉಳಿದುಬಿಡುತ್ತದೆ. ಏನಾದರೂ ಆಗಲಿ ಎನ್ನುತ್ತಾ ಅದಾಗ ತಾನೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ಒಳರೋಗಿಯಂತೆ ಕಾಲೆಳೆದುಕೊಂಡು ಶಾಲೆಯ ಮೆಟ್ಟಲೇರಿದೆವು. ಒಬ್ಬರನ್ನೊಬ್ಬರು ನೋಡಿಕೊಂಡು ಒಳಗೊಳಗೇ ನಕ್ಕೆವು. ನಮಗೆ ವಾರಗಟ್ಟಲೆ `ನಿತ್ಯ ಪೂಜೆ’ ಆಗುತ್ತಲೇ ಇತ್ತು. ಜನ್ಮಜನ್ಮಕೂ ಈ ಸ್ಥಿತಿ ಬೇಡಪ್ಪಾ ಎಂದು ಓದಿನಲ್ಲಿ ತೊಡಗಿದೆವು.

ಈಗಲೂ ಅಷ್ಟೆ. ಎಲ್ಲಾದರೂ ಸ್ಟೈಕ್ ಅಂತೆ ಎಂಬ ಸುದ್ದಿ ಕೇಳಿದರೆ ಸಾಕು ನಮ್ಮ ಗುರುವಿನ ಬೈಕ್ ನೆನಪಾಗುತ್ತದೆ. ಪೆಟ್ಟಿನ ರುಚಿ, ನಂಬಿಯಾರ್‌ನ ಅಂಗಡಿ, ಬ್ರೆಡ್ ಸೈಕಲ್ ಕಣ್ಣ ಮುಂದೆ ಸುಳಿದಾಡುತ್ತದೆ.

ಕಾಫಿ ಕಿತ್ತಳೆ ಹೂವು ಹೆಜ್ಜೇನು

ನಾಳೆ ಕಿತ್ತಳೆ ಕೊಯ್ಲಂತೆ! ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ ಮನಸ್ಸಿಗೆ ಹಬ್ಬದಷ್ಟು ಸಂಭ್ರಮ. ಶಾಲೆಗೆ ಬೇಗ ಬೇಗನೆ ಹೊರಡುವ ಕಾತರ. ಹತ್ತಿಪ್ಪತ್ತು ಮಂದಿ ಕೇರಳಿಗರು ಕಿತ್ತಳೆ ಕೊಯ್ಯುವುದೇ ಒಂದು ಚೆಂದ. ಒಬ್ಬ ಗೊಂಚಲನ್ನು ಕೊಕ್ಕೆಯಿಂದ ಅಲುಗಿಸುವುದು, ಇನ್ನಿಬ್ಬರು ಕೆಳಗೆ ಗೋಣಿ ತಾಟನ್ನು ಅಗಲಿಸಿ ಹಿಡಿಯುವುದು, ನೆಲಕ್ಕೆ ಮೆಲ್ಲನೆ ಸುರಿಯುವುದು, ಮತ್ತೊಬ್ಬ ಮರ ಹತ್ತಿ ಬಹು ಸೂಕ್ಷ್ಮವಾಗಿ ಕೊಂಬೆಯನ್ನು ಬಗ್ಗಿಸಿ ಕೊಯ್ದು ಚೀಲಕ್ಕೆ ತುಂಬಿಸುವುದು, ಭಾರ ಹೆಚ್ಚಾದಂತೆ ಇಳಿದು ಮೆಲ್ಲನೆ ಸುರಿಯುವುದು, ಹಾಗೆ ಸುರಿದುದನ್ನು ಬುಟ್ಟಿಗೆ ತುಂಬುವುದು, ಉಳಿದ ನಾಲ್ಕಾರು ಮಂದಿ ಬುಟ್ಟಿ ಹೊತ್ತು ಸಾಗಿಸುವುದು, ಹೀಗೆ ನಾಲ್ಕಾರು ಹಂತಗಳಲ್ಲಿ ಮುಖ್ಯ ಸ್ಥಳವೊಂದರಲ್ಲಿ ಕಿತ್ತಳೆ ರಾಶಿಯಾಗುತ್ತದೆ. ಹೀಗೆ ರಾಶಿ ಮಾಡಿದ ಸ್ಥಳದಿಂದ ಲಾರಿಗಳ ಮೂಲಕ ಮಾರುಕಟ್ಟೆಗೆ ಸಾಗಿಸುತ್ತಿದ್ದರು.

ರಂಗು ರಂಗಾಗಿ ಕಂಗೊಳಿಸುತ್ತಿದ್ದ ಕಿತ್ತಳೆಯ ಭಾರಕ್ಕೆ ಕೊಂಬೆ ಸೀಳಿ ಹೋಗುತಿತ್ತು. ಅಂಥದ್ದಕ್ಕೆ ಆಧಾರ ಕೊಡುತ್ತಿದ್ದರು. ಕೆಲವೊಮ್ಮೆ ಹಗ್ಗದಿಂದ ಎಳೆದು ಕಟ್ಟುತ್ತಿದ್ದರು. ಹಕ್ಕಿ ಕುಳಿತರೂ ರೆಂಬೆಗೆ ತಾಳಿಕೊಳ್ಳಲಾಗುವುದಿಲ್ಲವೆನ್ನುವಷ್ಟು ಹಣ್ಣುಗಳ ಸುರಿಮಳೆ. ಅಂಥಾ ಮರಕ್ಕೆ ಒಬ್ಬ ಮನುಷ್ಯ ಹತ್ತಿದರೆ! ಅವರು ಮರ ಹತ್ತುವಾಗಲೇ ಮರ ಅಲುಗಿ ಅಲ್ಲಿ ಇಲ್ಲಿ ಹಣ್ಣುಗಳು ಉದುರಿ ಬೀಳುತ್ತಿದ್ದವು. ಹಾಗೆ ಬಿದ್ದ ಹಣ್ಣುಗಳಿಗೆ ಮಕ್ಕಳೇ ವಾರಸುದಾರರು! ಏನಿಲ್ಲವೆಂದರೂ ಒಂದು ಮರದಿಂದ ಮೂರು ನಾಲ್ಕು ಹಣ್ಣುಗಳು ಉದುರುತ್ತಿದ್ದವು. ಗೋಣಿ ತಾಟು ಹಿಡಿದುಕೊಳ್ಳುತ್ತಿದ್ದಾಗ ತಾಟಿನಿಂದ ಹಾರಿ ಬೀಳುತ್ತಿದ್ದ ಹಣ್ಣುಗಳೂ ಮಕ್ಕಳ ಪಾಲಿಗೆ! ಕೆಲವೊಮ್ಮೆ ಹಣ್ಣಿನ ಮೇಲೆ ಹಣ್ಣು ಬಿದ್ದಾಗ ಅದುಕಂದಿ ಹೋಗುತ್ತದೆ. ಆ ರೀತಿ ಕಂದಿದ ಹಣ್ಣುಗಳೂ ಮಕ್ಕಳಿಗೇ. ಬುಟ್ಟಿಗೆ ತುಂಬಿಸಿ ಹೊತ್ತುಕೊಳ್ಳುವಾಗಲೂ ಹಣ್ಣು ಬೀಳುತಿತ್ತು. ಆಹಾ! ಸವಿ ಸವಿಯಾದ ಕಿತ್ತಳೆ ನಮ್ಮ ಒಡಲನ್ನು ಸೇರಿಕೊಳ್ಳುತ್ತಿದ್ದಂತೆ ಅಷ್ಟೆತ್ತರದಲ್ಲಿ ನಗುವ ಸೂರ್ಯ! ಅಯ್ಯಯ್ಯೋ ಹೊತ್ತೇರಿದೆ. ಥತ್ ತೇರಿ…. ಶಾಲೆಗೆ ತಡ! ಓಡಿ ಓಡಿ ಶಾಲೆಗೆ ತಲುಪುವಷ್ಟರಲ್ಲಿ ಬಾಗಿಲಲ್ಲಿ ನಿಂತ ಲೆಕ್ಕದ ಮಾಸ್ಟರ್! ನಮ್ಮ ದಾರಿಯ ಮಕ್ಕಳೆಲ್ಲರಿಗೂ ಹೋಲ್‌ಸೇಲ್ ಬಸ್ಕಿ ಹೊಡಿಸಿ ಸ್ವಾಗತ ಕೋರಿದರು! ಹಣ್ಣು ಸುಲಿದ ವಾಸನೆ ಬರಬಾರದೆಂದು ಅಂಟು ಸೊಪ್ಪನ್ನು ಕೈಗೆ ಉಜ್ಜಿಕೊಂಡಿದ್ದೆವು. ಕಿತ್ತಳೆ ಜೊತೆಗೆ ಸೊಪ್ಪಿನ ವಾಸನೆ ಸೇರಿ ಗಮ್ ಘಾಟು ಇಡೀ ತರಗತಿಯಲ್ಲಿ. ಪಾಠ ಏನು ಮಾಡಿದರೊ -ನಾವೆಷ್ಟು ಕೇಳಿದೆವೊ…. ಸಂಜೆ ಅಂತು ಆಯಿತು. ಶಾಲೆ ಬಿಟ್ಟೊಡನೆ ಓಡಿದೆವು ಛೆ! ನಿತ್ಯ ಮನಕ್ಕೆ ಉಲ್ಲಾಸ ನೀಡುತ್ತಿದ್ದ ಕಿತ್ತಲೆ ಮರಗಳು ಬೋಳಾಗಿ ನಿಂತಿದ್ದವು. ಆ ತೋಟದ ಕೊಯ್ಲು ಮುಗಿದಂತೆಯೇ. ಬಿದ್ದ ಹಣ್ಣುಗಳನ್ನು ಉಳಿದ ಯಾರೋ ಹೆಕ್ಕಿದ್ದರು. ಆಹಾ! ಶನಿವಾರವಾಗಿದ್ದರೆ? ಹೌದು, ಕೆಲವೊಮ್ಮೆ ನಮಗೆ ಶನಿವಾರವೂ ಹಣ್ಣು ಹೆಕ್ಕುವ ಅವಕಾಶ ಸಿಗುತ್ತಿತ್ತು. ಏಕೆಂದರೆ ಅಲ್ಲಿ ಕಿತ್ತಳೆ ತೋಟ ಹಲವಾರು ಇದ್ದವಲ್ಲ! ಚೀಲಗಟ್ಟಲೆ ಕಿತ್ತಳೆ ಹಣ್ಣು ನಮ್ಮೆಲ್ಲರ ಮನೆ ಸೇರುತಿತ್ತು.

ಕೊಯ್ಲು ಮುಗಿದ ಬಳಿಕ ರಾಶಿ ಹಾಕಿದ ಹಣ್ಣುಗಳನ್ನು ಒಳ್ಳೆಯದು, ಹಾಳಾದುದು ಎಂದು ಬೇರೆ ಬೇರೆ ಮಾಡಲಾಗುತಿತ್ತು. ಇದೆಲ್ಲಾ ಆದ ಬಳಿಕ ಲಾರಿಗೆ ತುಂಬಿಸುತ್ತಿದ್ದರು. ಲಾರಿಗೆ ತುಂಬಿದ ಬಳಿಕ ಮತ್ತೊಂದು ಕಿತ್ತಳೆ ರಾಶಿ ಪಕ್ಕದಲ್ಲಿ ಉಳಿದಿರುತಿತ್ತು. ಅಯ್ಯೋ! ಅದೆಲ್ಲಾ ಕೆಟ್ಟು ಹೋದ ಹಣ್ಣಿನ ರಾಶಿ… ಕೊಳೆತ ಹಣ್ಣಿನ ರಾಶಿಯನ್ನು ನೋಡಿದ ನಾವು ಹೊಟ್ಟೆ ಉರಿದುಕೊಳ್ಳುತ್ತಿದ್ದೆವು. ಗುತ್ತಿಗೆ ಪಡೆದವನಿಗೆ ಉಂಟಾಗುತ್ತಿದ್ದ ನಷ್ಟದ ಬಗ್ಗೆ ನಮಗೆ ಮರುಕವಾಗುತ್ತಿರಲಿಲ್ಲ. ಬದಲಾಗಿ ಆ ಎಲ್ಲಾ ಹಣ್ಣುಗಳನ್ನು ಮೊದಲೇ ನಮಗೆ ಕೊಟ್ಟಿದ್ದರೆ ಅವನ ಗಂಟೇನು ಹೋಗುತಿತ್ತು ಎಂಬುದು ನಮ್ಮ ಆರೋಪ.

ಎಲ್ಲಾ ತೋಟಗಳು ಬೋಳಾಗಿ ನಿಂತ ಮೇಲೆ ನಮ್ಮ ಗೋಳನ್ನು ಕೇಳುವವರು ಯಾರು? ಆಕಸ್ಮಿಕವಾಗಿ ಮರದ ಕವಟೆಯಲ್ಲಿ ಸಿಕ್ಕಿಕೊಂಡು ಕಳ್ಳ ಹಣ್ಣುಗಳ ಬೇಟೆಗೆ ತೋಟಕ್ಕೆ ನುಗ್ಗುತ್ತಿದ್ದೆವು. ಆಗ ತೋಟದಲ್ಲಿ ಕಾಫಿ ಗಿಡಗಳ ಆರೈಕೆಗಾಗಿ ತೋಡಿದ ಚರಂಡಿಗಳಲ್ಲಿ ತರಗೆಲೆಯ ಕೆಳಗೆ ಇದ್ದ ಹಣ್ಣುಗಳೋ ಅಥವಾ ಬಲಿಯದೇ ಇದ್ದ ಕಿತ್ತಳೆಯನ್ನು ಕೊಯ್ಯದೆ ಬಿಟ್ಟಿದ್ದ ಹಣ್ಣುಗಳೋ ನಮ್ಮ ಪಾಲಿಗೆ ಸಿಕ್ಕಿದರೆ ಪರಮಾನಂದ ಪಡುತ್ತಿದ್ದೆವು. ಆಗಂತೂ ನಮ್ಮಲ್ಲಿ ಆ ಒಂದೆರಡು ಹಣ್ಣುಗಳಿಗಾಗಿ ಹೊಡೆದಾಟವಾಗುತಿತ್ತು. ಆ ಕಿತ್ತಾಟದ ನಡುವೆ ಹಣ್ಣು ಕಿವಿಚಿ ಹೋಗಿ ರಸವೆಲ್ಲಾ ಸೋರಿ ಹೋಗಿ ರಂಪವಾಗಿ ಬಿಡುತಿತ್ತು.

ಒಮ್ಮೆ ಒಂದೇ ಒಂದು ಹಣ್ಣು ಮರದ ತುತ್ತ ತುದಿಯಲ್ಲಿ ಉಳಿದಿತ್ತು. ಮರವನ್ನು ಅಲುಗಿಸಿದೆವು. ಊಹುಂ! ಅದು ಬೀಳಲಿಲ್ಲ. ಕಲ್ಲು ಹೊಡೆದವು. ಗುರಿ ಮುಟ್ಟಲಿಲ್ಲ. ಕಟ್ಟಿಗೆಯಲ್ಲಿ ಹೊಡೆದೆವು. ಸಧ್ಯ ಬಿದ್ದಿತು. ಒಬ್ಬ ಹೆಕ್ಕಿಕೊಂಡ. ಹೆಕ್ಕಿಕೊಂಡವ ಸಿಕ್ಕಿದ ಕೂಡಲೆ ಓಡಿದ! ಓಡಿದವನನ್ನು ಸುಮ್ಮನೆ ಬಿಡುವುದುಂಟೆ? ಹಿಡಿದು ಅವನಿಗೆ ಒಂದೆರಡು ತಟ್ಟಬೇಕು. ಅವನು ಅಷ್ಟು ಸುಲಭವಾಗಿ ಸಿಗುವುದುಂಟೆ? ಆತ ಕಿತ್ತಳೆಯನ್ನು ಬ್ಯಾಗಿನೊಳಗೆ ಇರಿಸಿ ಓಡತೊಡಗಿದ. ಎಲ್ಲರೂ ಸೇರಿ ಅವನನ್ನು ಅಟ್ಟಿಕೊಂಡು ಓಡಿದೆವು. ಓಡಿ ಓಡಿ ಎಲ್ಲರಿಗೂ ಆಯಾಸ. ಕೊನೆಗೂ ಆತ ಸಿಕ್ಕಿದ. ಮೊದಲು ಹಣ್ಣನ್ನು ಕಿತ್ತುಕೊಳ್ಳಬೇಕು. ನಂತರ ವಿಚಾರಣೆ! ಸರಿ. ಆತನ ಬ್ಯಾಗನೆಲ್ಲಾ ಶೋಧಿಸಲಾಯಿತು. ನಮಗೆಲ್ಲರಿಗೂ ಓಟವೇ ಗುರಿಯಾಗಿತ್ತಲ್ಲ, ಹಾಗಾಗಿ ಈ ನಡುವೆ ಏನಾಯಿತೆಂದು ಯಾರಿಗೂ ಗೊತ್ತಾಗಲಿಲ್ಲ… ಬ್ಯಾಗಿನಲ್ಲಿದ್ದ ಕಿತ್ತಲೆ ಓಟದ ರಭಸದಲ್ಲಿ ಎಲ್ಲ ಬಿದ್ದು ಹೋಯಿತೋ ಏನೋ? ಅಥವಾ ಓಡುತ್ತಾ ಆತ ಸುಲಿದು ತಿಂದನೊ? ದೊಡ್ಡವರು ಯಾರೋ ದಾರಿಗಡ್ಡವಾದರು. ನಮ್ಮ ಕೇಸು ಅಲ್ಲಿಗೆ ಪುಸ್ಸು ಆಯಿತು.

ಕಾಫಿ ಮತ್ತು ಕಿತ್ತಳೆ ಕೊಯ್ಲು ಮುಗಿಯುತ್ತಿದ್ದಂತೆ ಬೇಸಿಗೆಯಲ್ಲಿ ಬಣಗೊಡುವ ದಾರಿ ಮಾತನಾಡಿಸುತ್ತಿದ್ದ ಕಾವಲುಗಾರನಿಲ್ಲದ ದಾರಿ. ಬೇಸರ ಕೊಂಚ ದಿನವಷ್ಟೆ. ದಿನ ಕಳೆದಂತೆ ತೋಟಗಳಿಗೆ ತುಂತುರು ನೀರು ಸಿಂಪಡಣೆ ಆರಂಭವಾಗುತ್ತಿತ್ತು. ಚರ್ ಚರ್ ಎಂದು ಸದ್ದು ಮಾಡುತ್ತಾ ಸುತ್ತುತ್ತಾ ನೀರು ಚಿಮ್ಮುತ್ತಿರಲು ಗಮ್ ಎನ್ನುವ ಮಣ್ಣಿನ ವಾಸನೆ ಮನಸ್ಸಿಗೆ ಹಿತವೆನ್ನಿಸುತಿತ್ತು. ನೀರು ಚಿಮ್ಮಿದ ಕೆಲವೇ ದಿನಗಳಲ್ಲಿ ಅಲ್ಲೆಲ್ಲಾ ನವ ಚೈತನ್ಯ ತುಂಬಿಕೊಳ್ಳುತ್ತಿತ್ತು. ಕಾಫಿ ಗಿಡದಲ್ಲಿನ ಹೂವಂತೂ ಮಲ್ಲಿಗೆ ವನದಲ್ಲಿ ವಿಹರಿಸಿದಂತೆ ನಮಗೆ ಮುದ ನೀಡುತಿತ್ತು. ಕಾಫಿ ಹೂವಿನೊಡನೆ ಕಿತ್ತಳೆ ಮರದಲ್ಲೂ ಹೂವು. ಈ ನಡುವೆ ಇನ್ನೊಂದು ಸಂಭ್ರಮ! ಅದು ಹೆಜ್ಜೇನಿನ ನಾದ.

ಹೆಜ್ಜೇನು ಒಂದೇ? ಎರಡೆ? ಉತ್ಪ್ರೇಕ್ಷೆಯಲ್ಲ, ನೂರಾರು ಹೆಜ್ಜೇನು! ಒಬ್ಬರ ಕಾಫಿ ತೋಟದಲ್ಲಿ ವಿಶಾಲವಾಗಿ ಹರಡಿಕೊಂಡು ಬೆಳೆದ ಎರಡು ಮರಗಳಲ್ಲಿ ನೂರಾರು ಹೆಜ್ಜೇನು ಗೂಡು. ಆ ಸುತ್ತಲಿನ ಎಲ್ಲಾ ತೋಟಗಳಲ್ಲಿ ಕಾಫಿ, ಕಿತ್ತಳೆ, ಬೇಲಿ ಗಿಡದ ಹೂವಿನದೇ ಕಾರುಬಾರು. ಅದೆಷ್ಟೋ ದೂರಕ್ಕೆ ಕೇಳುತ್ತಿದ್ದ ಜೇನು ನೊಣಗಳ ಝೆಂಕಾರದ ಸದ್ದು. ಓಡಾಡುವ ಜನರ ಬಟ್ಟೆ ಮೇಲೆ ನೊಣಗಳ ಬಾಯಿಂದ ಸುರಿದ ಹಳದಿ ಬೊಟ್ಟು. ಗಮ್ ಎನ್ನುವ ಜೇನಿನ ಪರಿಮಳ.

ಪ್ರತೀ ವರ್ಷವೂ ಜೇನು ಅಲ್ಲಿರುತಿತ್ತು. ನಿಗದಿತ ದಿನ ಅದರ ಕೊಯ್ಲು ಮಾಡುತ್ತಿದ್ದರು. ರಾತ್ರಿ ಬೆಳಗಾಗುವುದರೊಳಗೆ ಬಹಳಷ್ಟು ಕೊಯ್ದು ಆಗುತಿತ್ತು. ಹಾಗೆ ಕೊಯ್ದ ದಿನ ಓಹೋ… ಏನದರ ಸದ್ದು? ನಮಗೆಲ್ಲಾ ಭಯ. ಎಲ್ಲಿ ನೊಣಗಳು ಕಚ್ಚುತ್ತವೋ ಎಂದು. ಆದರೆ ಯಾರಿಗೂ ತೊಂದರೆ ಮಾಡಿದ ಉದಾಹರಣೆಗಳಿಲ್ಲ. ಜೇನು ಕೊಯ್ಲು ರಾತ್ರಿ ಮಾಡುತ್ತಿದ್ದುದರಿಂದ ನಮಗೆ ಆ ಕೆಲಸವನ್ನು ನೋಡಲಾಗುತ್ತಿರಲಿಲ್ಲ. ಯಾವಾಗ ಹೆಜ್ಜೇನಿನ ಕೊಯ್ಲು ಆರಂಭವಾಯಿತೋ ಆಗ ಆ ಸುತ್ತಲಿನ ಕಾರ್ಮಿಕರ ಮನೆಯಲ್ಲೂ ಜೇನೋ ಜೇನು. ಹೇಗಂತಿರಾ? ಜೇನು ಕೊಯ್ಯುವವ ಮೊದಲಿಗೆ ಎರಿ (ಹಲ್ಲೆ)ಯನ್ನು ಮುರಿಯುತ್ತಾನೆ. ಹಾಗೆ ಮುರಿದಾಗ ಸಿಗುವುದು ಜೇನು ಮರಿಗಳ ಗೂಡು. ಮುರಿದ ಎರಿಯನ್ನು ನೆಲಕ್ಕೆ ಎಸೆಯುತ್ತಾನೆ. ಹಾಗೆ ಎಸೆದ ಎರಿಯನ್ನು ಪಡೆದುಕೊಂಡವರು ಅದರಲ್ಲಿ ಉಳಿದುಕೊಂಡ ಜೇನಿನ ಭಾಗವನ್ನು ಕತ್ತರಿಸಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಾರೆ. ಹಾಗೆ ಉಳಿದುಕೊಂಡ ಜೇನನ್ನು ಹಿಂಡಿ ತೆಗೆದರೆ ಒಬ್ಬೊಬ್ಬರ ಮನೆಯಲ್ಲಿ ಏಳೆಂಟು ಬಾಟಲಿ ಜೇನು ಇರುತಿತ್ತು. ಅದು ಬೇಡವೆಂದು ಎಸೆದ ಎರಿಯಲ್ಲಿದ್ದ ಜೇನು, ಇನ್ನು ಉಳಿದ ಜೇನಿನ ಗಟ್ಟಿ ಎರಿ ಮರದಲ್ಲೇ ಇರುತಿತ್ತು. ಅದನ್ನು ಕೊಯ್ದು ಪಾತ್ರೆಯೊಳಗಿರಿಸಿ ಸೇದು ಬಾವಿಗೆ ಬಿಂದಿಗೆಯನ್ನು ಇಳಿಸುವಂತೆ ಇಳಿಸಲಾಗುತಿತ್ತು. ಹೀಗೆ ರಾತ್ರಿ ಪೂರ್ತಿ ಇದೇ ಕೆಲಸ. ಜೇನು ಕೊಯ್ಯುವವನು ಹಾಡು ಹೇಳುತ್ತಾ ಜೇನು ಕೊಯ್ಯುತ್ತಿದ್ದ ಎಂದು ಕೇಳಿದ್ದೆ.

ಸಂಗ್ರಹಗೊಂಡ ಜೇನು ತುಪ್ಪವನ್ನು ಟಿನ್ನಿನಲ್ಲಿ ತುಂಬಿ ಸೀಲು ಮಾಡಿ ಒಂದರ ಮೇಲೊಂದರಂತೆ ಟಿನ್ನನ್ನು ಇರಿಸುತ್ತಿದ್ದರು. ಒಂದು ಕೊಠಡಿಯ ತುಂಬಾ ಜೇನಿನ ಟಿನ್ನುಗಳೇ. ಜೇನು ಯಾವ ಮಾರುಕಟ್ಟೆಯತ್ತ ಸಾಗುತಿತ್ತೊ ನಮಗೆ ತಿಳಿಯದು. ಆ ಹೆಜ್ಜೇನಿನ ಒಡೆಯ ಭಾಗ್ಯವಂತ. ಆತನಿಗೆ ಜೇನು ಮಾತ್ರವೇ ಅಲ್ಲ. ಕಿತ್ತಳೆ, ಕಾಫಿ, ಹುಣಸೆ, ಭತ್ತ, ದನಕರುಗಳು ಲಾರಿಗಟ್ಟಲೆ ಲೋಡು. ಕುಬೇರನೇ ಹೌದು ಎನ್ನುವಷ್ಟು ಶ್ರೀಮಂತ. ಆತನ ಶ್ರೀಮಂತಿಕೆಯನ್ನು ನೋಡಿ ತಣಿದೆವು. ಅಂತಹ ಶ್ರೀಮಂತನ ತೋಟದ ನಡುವಿನ ಶಾಲೆಯ ದಾರಿ ಶ್ರೀಮಂತ ದಾರಿಯಲ್ಲವೆ? ಸುಳುಗೋಡು ಗ್ರಾಮದ ಒಂದು ಭಾಗವೇ ಆತನ ಪಾಲಿನದು. ನಾವೆಲ್ಲ ನಿತ್ಯವೂ ಆತನ ಶ್ರೀಮಂತಿಕೆ ಬಗ್ಗೆ ಮಾತನಾಡದೆ ಇರುತ್ತಿರಲಿಲ್ಲ. ಆದರೆ ಯಾಕೋ ಏನೋ ಆ ಶ್ರೀಮಂತನನ್ನು ಕಂಡೊಡನೆ ನಾವೆಲ್ಲ ಓಡಿ ಬಿಡುತ್ತಿದ್ದೆವು. ಶ್ರೀಮಂತನಿಗೆ ಗೌರವ ಕೊಡುವ ಕಾರಣದಿಂದಲೋ? ಅಥವಾ ನಾವೆಲ್ಲ ಹಾಗೆ ಕಾಣಿಸಿಕೊಳ್ಳುವುದು ತಪ್ಪು ಎಂಬ ಕಾರಣದಿಂದಲೋ… ಪ್ರಶ್ನೆ ಇಂದೂ ಹಾಗೇ ಉಳಿದಿದೆ.

ಆಸೆ ಹುಟ್ಟಿಸಿದ ಮೀಸೆ ಮೀನು

ನಮ್ಮ ಶಾಲೆಯ ದಾರಿಯಲ್ಲಿದ್ದ ಕೆರೆಯಲ್ಲಿ ಮೀಸೆ ಇರುವ ಕಪ್ಪು ಬಣ್ಣದ ಮೀನುಗಳು ಸಾಕಷ್ಟಿದ್ದವು. ಆ ಮೀನನ್ನು ಮುಯ್ಯ ಮೀನೆಂದೂ, ಬಾಲೆ ಮೀನೆಂದೂ ಕರೆಯುತ್ತಾರೆ. ಮುಕ್ಕಾಲು, ಒಂದು ಕೆ.ಜಿ. ಯಷ್ಟಾಗಬಲ್ಲ ಮೀನುಗಳವು. ಕೆರೆ ಸಾರ್ವಜನಿಕರದ್ದಾದರೂ ಅದರ ಕಾಲುವೆ ಖಾಸಗಿ ಜಮೀನಿನ ಮೂಲಕ ಹಾದು ಹೋಗುತ್ತಿತ್ತು. ಮಳೆಗಾಲದಲ್ಲಿ ಹೊಸನೀರು ತುಂಬುವಾಗ ಮೀನುಗಳಿಗೆ ಸಂಭ್ರಮ. ಮಳೆಗಾಲದಲ್ಲಿ ಮೀನುಗಳು ಮೊಟ್ಟೆ ಇಕ್ಕಲು ಹೊಳೆಯಿಂದ ಕಾಲುವೆ ಮೂಲಕ ಸಾಗಿ ಬರುತ್ತದೆ. ಮೊಟ್ಟೆ ಇಕ್ಕಿದ ಬಳಿಕ ಹಿಂತಿರುಗುತ್ತವೆ. ಹೀಗೆ ಮೀನುಗಳು ಹತ್ತುವ ಮತ್ತು ಇಳಿಯುವ ಸಂದರ್ಭದಲ್ಲಿ ತಿಳಿದ ಜನರು ಕೆರೆ, ತೋಡು, ಕಾಲುವೆ ಇಲ್ಲೆಲ್ಲಾ ಮೀನನ್ನು ಬೇಟೆಯಾಡುತ್ತಾರೆ. ಕೆರೆ ಸಾರ್ವಜನಿಕವಾಗಿದ್ದರೂ ಅಲ್ಲಿರುವ ಮೀನೆಲ್ಲಾ ಕೆಲವರದೇ ಎನ್ನುವಂತೆ ಹಿಡಿದುಕೊಳ್ಳುತ್ತಿದ್ದರು. ಶಾಲೆಗೆ ಹೋಗುತ್ತಿದ್ದ ನಾವು ಮೀನು ಹಿಡಿಯುವ ಸಂಭ್ರಮವನ್ನು ನಿಂತು ನೋಡುತ್ತಿದ್ದೆವು. ದಿನ ಹಿಡಿಯಲು ಹೋಗುತ್ತಿರಲಿಲ್ಲ. ನಮಗೆ ಮೀನು ಬೇಕು, ಹಿಡಿದುಕೊಡುವವರು ಯಾರು?

ಮಳೆಗಾಲದ ಒಂದು ದಿನ ಜನರು ಹೀಗೆ ಮೀನು ಹಿಡಿಯುತ್ತಿದ್ದುದನ್ನು ನೋಡಿದ ನಾನು ಮತ್ತು ಅಕ್ಕ ಬೇಗ ಬೇಗನೆ ಶಾಲೆಗೆ ಹೋದೆವು. ಹೋಗುತ್ತಾ ಶಾಲೆ ಪಕ್ಕದ ಹಳ್ಳಕ್ಕಿಳಿದು ನನ್ನ ಮೈಗೆ ಅವಳು ಅವಳ ಮೈಗೆ ನಾನು ನೀರೆರಚಿಕೊಂಡೆವು. ಬಟ್ಟೆಯನ್ನೆಲ್ಲಾ ಒದ್ದೆ ಮಾಡಿಕೊಂಡು ಶಾಲೆಗೆ ಹೋಗಿ ನಮ್ಮ ಗುರುಗಳ ಹತ್ತಿರ ನಿಂತು, ‘ಸಾರ್ ಊರಲ್ಲಿ ವಿಪರೀತ ಮಳೆ, ರಜೆ ಕೊಡಿ’ ಎಂದು ಅಂಗಲಾಚಿದೆವು. ಆದರೆ ಅವರು ರಜೆ ಕೊಡಲಿಲ್ಲ. ‘ಮಳೆ ಕಡಿಮೆ ಆಗಿದೆ, ಹೋಗಿ ಕ್ಲಾಸಿಗೆ’ ಎಂದು ಕಳಿಸಿದರು. ದಾರಿ ಕಾಣದ ನಾವು ನಮ್ಮ ನಮ್ಮ ಕ್ಲಾಸಿಗೆ ಹೋಗಿ ಕುಳಿತುಕೊಂಡೆವು. ಮಧ್ಯಾಹ್ನ ಆಗುವ ಹೊತ್ತಿಗೆ ನಮ್ಮ ಬಟ್ಟೆಯ ನೀರೆಲ್ಲಾ ಇಳಿದು ಕೊಂಚ ಒಣಗಿದಂತಾಯಿತು. ಸಂಜೆ ಶಾಲೆ ಬಿಟ್ಟೊಡನೆ ಓಡುತ್ತಾ ಕೆರೆಯ ಹತ್ತಿರ ಬಂದೆವು. ಆಗ ನಮ್ಮ ಕಣ್ಣಿಗೆ ಯಾವೊಂದು ಮೀನು ಕಾಣಲಿಲ್ಲ. ಸಂಜೆ ಆಗಿತ್ತು. ಸಪ್ಪೆ ಮೋರೆ ಹಾಕಿ ಮನೆ ಸೇರಿದೆವು.

ಮರುದಿನ ಶಾಲೆಗೆ ಹೋಗಿ ಬರುವಾಗ ಅದೇ ಕೆರೆಯಲ್ಲಿ ಜನಜಂಗುಳಿ ನೆರೆದಿತ್ತು. ಕೆಲವರು ಕತ್ತಿಯಿಂದ ಕಡಿದು ಮೀನು ಹಿಡಿಯುತ್ತಿದ್ದರು. ಇನ್ನು ಕೆಲವರು ಕೂಳಿಯಿಂದ ಚುಚ್ಚಿ ಹಿಡಿಯುತ್ತಿದ್ದರು. ಕೂಳಿ ಎಂದರೆ ಎತ್ತರವಾಗಿ ಮಾಡಿದ ಬುಟ್ಟಿ. ಅದಕ್ಕೆ ಎರಡೂ ಕಡೆ ತಳವಿಲ್ಲ. ಮೀನು ಓಡಾಡುವಲ್ಲಿ ಬುಟ್ಟಿಯನ್ನು ಕವಚುವಂತೆ ಕವುಚಿದರೆ ಮೀನು ಜಳಬಳ ಎಂದು ಅದರೊಳಗೆ ಓಡಾಡುತ್ತದೆ. ಆಗ ಮೇಲಿನಿಂದ ಕೈ ಹಾಕಿ ಹಿಡಿದುಕೊಳ್ಳಬಹುದು. ಅದನ್ನು ಕುತ್ತುಂಗೂಳಿ ಎಂದೂ ಕರೆಯುತ್ತಾರೆ. ಇನ್ನು ಕೆಲವರು ಗೋರಿಯಿಂದ ಗೋಚಿ ಪುಡಿ ಮೀನನ್ನು ಹಿಡಿಯುತ್ತಿದ್ದರು. ನಾನು ಅಕ್ಕ ಅದನ್ನೆಲ್ಲಾ ನೋಡುತ್ತಿದ್ದೆವು. ಅವ್ವನೊಡನೆ ಹೇಳುತ್ತಿದ್ದೆವು.

ಒಮ್ಮೆ, ‘ಅವ್ವಾ, ನಾವು ಮೀನು ಹಿಡಿಯಲು ಹೋಗೋಣ’ ಎಂದು ದುಂಬಾಲು ಬಿದ್ದೆವು. ಅವ್ವ ರೆಡಿ. ನನ್ನ ಕೈಯಲ್ಲಿ ಪಾತ್ರೆ, ಅವ್ವನ ಕೈಯಲ್ಲಿ ಗೋರಿ, ಅಕ್ಕನ ಕೈಯಲ್ಲಿ ಕೊಡೆ. ನಾವು ಮೂವರು ಕೆರೆಗೆ ಹೋದೆವು. ನಾನು ಮೊಣಕಾಲಷ್ಟು ನೀರಲ್ಲಿ ನಿಂತುಕೊಂಡೆ. ಅವ್ವ ಗೊರಗ ಹಾಕಿಕೊಂಡು ಮೀನನ್ನು ಗೋಚತೊಡಗಿದಳು. ಒಮ್ಮೆ ಗೋಚುವಾಗ ನಾಲ್ಕೈದು ,ಕೆಲವೊಮ್ಮೆ ಹತ್ತಿಪ್ಪತ್ತು ಪುಡಿ ಮೀನುಗಳು ಸಿಗುತ್ತಿದ್ದವು. ಅಕ್ಕ ಬೊಗಸೆಯಿಂದ ಒಂದೊಂದೇ ಮೀನನ್ನು ಹಿಡಿಯುತ್ತಿದ್ದಳು. ನಾನು ಆ ಎಲ್ಲಾ ಮೀನುಗಳನ್ನು ಪಾತ್ರೆಗೆ ಹಾಕಿಕೊಂಡು ಕಾವಲು ನಿಂತೆ. ಆಗ ನನ್ನ ಕಾಲಿಗೆ ಏನೋ ಸುತ್ತಿಕೊಂಡಂತಾಯಿತು. ಹಾವಲ್ಲ! ಅಟ್ಟೆ! ಅಟ್ಟೆಯೆಂದರೆ ರಕ್ತ ಹೀರುವ ಜಲಚರ. ನೆಲದ ಮೇಲೆ ಜಿಗಣೆ ಹೇಗೋ ಹಾಗೆ ನೀರಲ್ಲಿ ಸುಂಯ್ ಸುಂಯ್ ಎಂದು ಅತಿ ವೇಗವಾಗಿ ಓಡಾಡುವ ರಕ್ತ ಹೀರುವ ಜೀವಿ. ಅದು ಒಮ್ಮೆ ಮೈಗೆ ಅಂಟಿಕೊಂಡರೆ ಅಷ್ಟು ಸುಲಭವಾಗಿ ಕಿತ್ತು ಹಾಕಲಾಗುವುದಿಲ್ಲ. ಅದು ಒಮ್ಮೆ ರಕ್ತ ಹೀರಿದರೆ ಬಾಳೆ ಕಾಯಷ್ಟು ದೊಡ್ಡದಾಗಿ ಕಾಣುತ್ತದೆ. ಬೇಸಗೆಯಲ್ಲಿ ಕೆರೆಯಲ್ಲಿ ಕೋಣಗಳು ನೀರಿಗಿಳಿದರೆ ಅಟ್ಟೆಗಳಿಗೆ ಮೃಷ್ಟಾನ್ನ ಭೋಜನವಾದಂತೆ ಹತ್ತಾರು ಅಟ್ಟೆಗಳು ಕೋಣಗಳ ರಕ್ತ ಹೀರುತ್ತವೆ.

ನನಗೆ ಅಟ್ಟೆಯೆಂದರೆ ಭಯ. ಹಾಗಿರುವಾಗ ನನ್ನ ಕಾಲಿಗೆ ಅದು ಅಂಟಿಕೊಂಡರೆ? ಅಂದು ನಾನು ಮೀನಿನ ಪಾತ್ರೆ ಹಿಡಿದು ನಿಂತವ ಪಾತ್ರೆ ಎಸೆದು ಓಡಲೆ? ಅಥವಾ ಮೀನಿನ ಆಸೆಯಿಂದ ಅದು ರಕ್ತ ಹೀರಿಕೊಳ್ಳಲಿ ಎಂದು ಬಿಡಲೆ? ಪಾತ್ರೆಯನ್ನು ದಡದಲ್ಲಿಟ್ಟು ಕಿರುಚಾಡತೊಡಗಿದೆ. ಆಗ ನನಗೆ ಶೀತವಾಗಿ ಗಂಟಲು ಕಟ್ಟಿಹೋಗಿತ್ತು. ಧ್ವನಿ ಹೊರಡುವುದೇ ಕಷ್ಟವಾಗಿತ್ತು. ಹಾಗಾಗಿ ನನ್ನ ಕಿರುಚಾಟ ಬಹುದೂರಕ್ಕೆ ಕೇಳುತ್ತಿರಲಿಲ್ಲ. ಮಳೆಯ ಸದ್ದು ಬೇರೆ. ನನ್ನ ಸ್ಥಿತಿ ನೋಡಿ ಇವನಿಗೇನೋ ಆಗಿದೆ ಎಂದು ಅವ್ವ ಮತ್ತು ಅಕ್ಕ ಹತ್ತಿರ ಬಂದು ಕಾಲುಕುಡವುತಾ ನಿಂತ ನನ್ನ ಕಾಲನ್ನು ಹಿಡಿದು ಅಟ್ಟೆಯನ್ನು ಕಿತ್ತು ಎಸೆದರು. ಅಲ್ಲಿಂದ ನಾನು ನೀರಿಗಿಳಿಯಲು ಹಿಂಜರಿಯುತ್ತಿದ್ದೆ. ಆ ದಿನ ಅರ್ಧ ಸೇರು ಪುಡಿ ಮೀನು ನಮಗೆ ಧಕ್ಕಿತು. ಆದರೆ ದಪ್ಪ ಮೀನಿನ ಆಸೆ ಹಾಗೇ ಉಳಿಯಿತು.

ಮತ್ತೊಂದು ದಿನ ಅದೇ ಕೆರೆಯ ದಾರಿಗಾಗಿ ಶಾಲೆ ಬಿಟ್ಟು ಬರುತ್ತಿರಬೇಕಾದರೆ ಪಾದ ಮುಳುಗುವಷ್ಟೇ ನೀರಿನಲ್ಲಿ ಗೆಂಡೆ ಮೀನು ಓಡಾಡುವುದನ್ನು ನೋಡಿದೆ. ಇದೇ ಸುಸಮಯ ಇಂದಲ್ಲದಿದ್ದರೆ ಇನ್ನೆಂದಿಗೂ ಅಲ್ಲ ಎನ್ನುತ್ತ ಆ ಗೆಂಡೆಮೀನಿನ ಮೇಲೆ ಕವಚಿ ಬಿದ್ದೆ. ಹಾಗೆ ಬಿದ್ದ ರಭಸಕ್ಕೆ ಮೀನು ನನ್ನ ಕಾಂಕುಳ ಸಂಧಿಯಿಂದ ದಾಟಲು ಹವಣಿಸಿತು. ನಾನು ಕಂಕುಳನ್ನು ಅದುಮಿ ಮೀನನ್ನು ಹಿಡಿದುಕೊಂಡೆ. ನನ್ನ ಹೆಗಲಮೇಲಿನ ಪುಸ್ತಕದ ಚೀಲ ನೀರಿಗೆ ಬಿತ್ತು. ನನ್ನ ಮುಂಭಾಗ ಪೂರ್ತಿಜಲಮಯ. ಹಿಡಿಯೊಳಗೆ ಮೀನು! ಶಹಬ್ಬಾಷ್! ಇಂದು ಗೆದ್ದೆ! ಹಿಡಿಗಾತ್ರದ ಮೀನು ಹಿಡಿದ ನಾನು ಶೂರನಂತೆ ಮೆರೆದೆ. ಅಂದು ರಾತ್ರಿ ನಮ್ಮ ಮನೆಯಲ್ಲಿ ಮೀನು ಸಾರಿನ ಪರಿಮಳ ಹರಡಿತು.

ಏಡಿಯನ್ನು ಹಿಡಿಯುವುದು ಸುಲಭದ ಮಾತಲ್ಲ. ಕೆಲವರು ಅದನ್ನು ಹಿಡಿಯಲು ಹೋಗಿ ಕೊನೆಗೆ ಅದರ ಹಿಡಿತಕ್ಕೆ ಸಿಕ್ಕಿ ನರಳಿದವರುಂಟು. ಅದರ ದೊಡದಾದ ಎರಡು ಕಾಲುಗಳು ಕಟಿಂಗ್ ಪ್ಲೇಯರ್ ನಂತೆ ಒಮ್ಮೆ ಹಿಡಿಯಿತೆಂದರೆ ಆಯಿತು! ಗರಗಸದಂತಿರುವ ಕಾಲುಗಳಿಂದ ಹಿಡಿದುಕೊಂಡರೆ ನಮ್ಮ ಬೆರಳೇ ಕತ್ತರಿಸಿ ಹೋದೀತು. ಏಡಿಯ ದೊಡ್ಡ ಕಾಲುಗಳು ಬಲುರುಚಿ. ಹಾಗಾಗಿ ಅದೆಷ್ಟೋ ಮನೆಗಳಲ್ಲಿ ಅದರ ಕಾಲುಗಳಿಗಾಗಿ ಮಕ್ಕಳು ಜಗಳವಾಡಿ ಅಮ್ಮನ ಕೈಯಿಂದ ಏಟು ತಿನ್ನುತ್ತಾರೆ.

ಒಮ್ಮೆ ಅಕ್ಕ, ಅವ್ವ ಮತ್ತು ನಾನು ಮೀನು ಹಿಡಿಯುತ್ತಿರ ಬೇಕಾದರೆ ನನ್ನ ಕಣ್ಣಿಗೆ ಏಡಿಯೆಂದು ಕಾಣಿಸಿತು. ಹಿಡಿದು ಕೊಳ್ಳಲು ಹೋದೆ ಆದರೆ ಹಿಡಿಯುವ ಕ್ರಮ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಹೇಗೋ ಹಿಡಿದರಾಯಿತು., ಹಿಡಿದೊಡನೆ ಮುದುಡಿಕೊಳ್ಳುತ್ತದೆಂದೇ ನನ್ನ ಭಾವನೆ! ಹಾಗೆಂದು ಏಡಿಯನ್ನು ನಾನು ಹಿಡಿದುಕೊಂಡೆ. ಅದು ನನ್ನ ಎಡಗೈಯ ಕಿರು ಬೆರಳನ್ನು ಬಲವಾಗಿ ಕಚ್ಚಿ ಹಿಡಿದುಕೊಂಡು, ನಾನು ಅಯ್ಯೋ ಎಂದು ಕಿರುಚಿಕೊಂಡು ನೀರಿನಿಂದ ಕೈಯನ್ನು ಮೇಲೆತ್ತಿದೆ. ಆಗ ಅದರ ಹಿಡಿತ ಮತ್ತು ಹೆಚ್ಚಾಯಿತು. ಅವ್ವಾ…….. ಎಸಂಡ್ ಕಚ್ಚಿಕೊಂಡಿದೇ ….ಬಾ……. ಎಂದು ಕಿರುಚಿದೆ. (ಹಳ್ಳಿಯಲ್ಲಿ ಏಡಿಯನ್ನು ನಳ್ಳಿ, ಎಸಂಡ್ ಎಂದೆಲ್ಲಾ ಕರೆಯುತ್ತಾರೆ) ಇನ್ನೊಂದು ಕೈಯಿಂದ ಏಡಿಯನ್ನು ಕಿತ್ತು ಎಸೆಯಬಹುದಿತ್ತು. ಆ ಕೈಗೆ ಕಚ್ಚಿಬಿಡಬಹುದೆಂಬ ಭಯದಿಂದ ಹಾಗೆ ಮಾಡಲಿಲ್ಲ. ಅದನ್ನೇ ಹಿಡಿದು ಕಚ್ಚಿಬಿಡಬಹುದಿತ್ತು. ಆದರೆ ತುಟಿಯನ್ನೇ ಹಿಡಿದು ಅದು ಕಚ್ಚಿಬಿಡಬಹುದೆಂಬ ಭಯ. ಕೊನೆಗೆ ಹೇಗೋ ಅದು ನನ್ನ ಕೈಯನ್ನು ಬಿಟ್ಟಿತು. ನನ್ನ ಬೆರಳಿಂದ ರಕ್ತ ಸೋರತೊಡಗಿತು. ಗಾಯ ನಂಜಾಗಿ ಹಲವಾರು ದಿನ ಆ ನೋವಿನಿಂದ ನರಳಿದೆ. ಏಡಿ ಕಡಿದರೆ ಕೂಡಲೆ ಕೈಯನ್ನು ನೀರಿಗೆ ಅದ್ದಬೇಕು. ಆಗ ಅದು ತನ್ನ ಹಿಡಿತವನ್ನು ಸಡಲಿಸಿ ನೀರಿಗಿಳಿಯುತ್ತದೆಂದು ಅವ್ವ ಹೇಳಿದ ಮೇಲೆ ಗೊತ್ತಾಯಿತು.

ಏಡಿ ತನ್ನ ಕವಚದಲ್ಲೇ ಮುದ್ದೆ ಮುದ್ದೆಯಾಗಿ ದಾಳಿಂಬೆಯ ಬೀಜದಂತಿರುವ ಮೊಟ್ಟೆಗಳನ್ನು ರಕ್ಷಿಸುತ್ತದೆ. ಮೊಟ್ಟೆಗಳು ಅದೇ ಕವಚದಲ್ಲೇ ಮರಿಯಾಗುತ್ತವೆ. ಮರಿಗಳೆಲ್ಲಾ ಕವಚದಲ್ಲೇ ಮಿಜಿ ಮಿಜಿ ಎನ್ನುತ್ತ ಬೆಚ್ಚಗಿರುತ್ತದೆ. ಮರಿಗಳು ಬಲಿತು ಇನ್ನೇನು ತಾವೇ ಬದುಕಬಹುದೆಂದು ತಿಳಿದೊಡನೆ ಪೆಟ್ಟಿಗೆಯ ಮುಚ್ಚು ತೆರೆಯುವಂತೆ ಏಡಿ ತನ್ನ ಕವಚವನ್ನು ತೆರೆಯುತ್ತದೆ. ಆಗ ಮರಿಗಳೆಲ್ಲಾ ಕಿರು ನೀರಿಗೆ ಇಳಿಯುತ್ತವೆ. ನಂತರ ತಾವೇ ಆಹಾರ ಹುಡುಕಿಕೊಂಡು ತಾಯಿಯಿಂದ ಬೇರಾಗುತ್ತವೆ. ಒಂದು ಏಡಿ ಒಮ್ಮೆಗೆ ಹತ್ತಿಪ್ಪತ್ತು ಮರಿಗಳಿಗೆ ಜನ್ಮ ಕೊಡುತ್ತದೆ.

ಕೆಲವು ಜಾತಿಯ ಏಡಿಗಳು ನಮ್ಮ ಹೆಬ್ಬೆರಳ ಗಾತ್ರದಷ್ಟೇ ಇರುತ್ತವೆ. ಮತ್ತೆ ಕೆಲವು ಹಿಡಿಗಾತ್ರವಿದ್ದರೆ, ಇನ್ನು ಕೆಲವು ಚೊಂಬಿನಷ್ಟು ದೊಡ್ಡದಿರುತ್ತವೆ.ಯಾಕೋ ಏನೋ ಸಾವಿರಕ್ಕೆ ಒಂದೆರಡು ಹಾಲು ಏಡಿಗಳಾಗಿರುತ್ತದೆ. ಆ ಏಡಿಗಳು ಮೃದುವಾಗಿದ್ದು ಚಲನೆಯಲ್ಲಿ ವೇಗವಿಲ್ಲದೆ, ಹಿಡಿದುಕೊಳ್ಳಲು ಶಕ್ತಿ ಹೀನವಾಗಿರುತ್ತದೆ. ನಾವೇನಾದರೂ ಅಂಥವುಗಳನ್ನು ಹಿಡಿದು ಕಾಲು ಅದುಮಿದರೆ ಹಾಲಿನಂತಹ ದ್ರವ ಹೊರಬರುತ್ತದೆ. ನಂತರ ಸತ್ತೇ ಹೋಗುತ್ತದೆ.

 ತಳ ಹಿಡಿದ ಗೀರೈಸ್ ಬಲುರುಚಿ

ಅರೆ! ಶಾಲೆಗೂ ನೆಂಟರು ಬರ್‍ತಾರಾ? ಹೌದು, ಬರ್‍ತಾರೆ. ಪ್ರತೀ ತರಗತಿಗೂ ಬರ್‍ತಾರೆ. ಪಾಠನೂ ಮಾಡ್ತಾರೆ, ಅವ್ರು ನೆಂಟ್ರಲ್ಲಾ ಕಣ್ರೋ ಇನ್ಸ್‌ಪೆಕ್ಟರ್! ಶಾಲಾ ತನಿಖಾಧಿಕಾರಿ! ಅಂತ ನಾವು ಪಿಸುಗುಟ್ಟಿದೆವು. ಅವರು ತರಗತಿಗೆ ಬಂದವರೇ ನಗುನಗುತ್ತಲೇ ಮಾತು ಆರಂಭಿಸಿದರು. ಆ ಮಾತಿನಲ್ಲೇ ಪಾಠದ ಗುಟ್ಟೂ ಅಡಗಿತ್ತು. ಪ್ರಶ್ನೆಗಳನ್ನೂ ಕೇಳಿದರು. ನಮ್ಮ ಬಾಯಿಂದ ಹೆದರಿ ಹೆದರಿ ಒಂದೆರಡು ಶಬ್ದಗಳು ಹೊರ ಬಂದವೋ ಇಲ್ಲವೋ ಹ್ಞಾ! ಸರಿ ಸರಿ, ಇನ್ನು ಸ್ವಲ್ಪ ಜೋರಾಗಿ ಹೇಳು, ಬಿಡಿಸಿ ಸರಿಯಾಗಿ ಹೇಳು. ಗುಡ್ ಗುಡ್ ಹೀಗೆ ಹೇಳುತ್ತಾ ಪುಸಲಾಯಿಸುತ್ತಾ ನಗುತ್ತಾ ನಗಿಸುತ್ತಾ ಪಾಠ ಮಾಡಿದರು. ಹೊತ್ತು ಹೋಗಿದ್ದೇ ತಿಳಿಯಲಿಲ್ಲ. ನಿತ್ಯ ಇವರೇ ನಮಗೆ ಪಾಠಕ್ಕೆ ಬಂದಿದ್ದರೆ ಎಂದು ನಾವು ಗುಸು ಗುಸು ಪಿಸಿ ಪಿಸಿ ಅಂತ ಮಾತನಾಡಿಕೊಂಡೆವು. ಬೆತ್ತವನ್ನು ತೋರಿಸುವುದಾಗಲಿ, ಬಯ್ಯುವುದಾಗಲಿ, ಅವರು ಮಾಡಲಿಲ್ಲ. ಆ ದಿನ ತನಿಖಾಧಿಕಾರಿ ನೀಡಿದ ಮಾದರಿ ಪಾಠ ಅದಾಗಿತ್ತು. ಆ ದಿನ ಅವರೊಬ್ಬರೇ ಬಂದುದಲ್ಲ, ಅವರ ಜೊತೆಗೆ ಇನ್ನೂ ಕೆಲವರು ಬಂದಿದ್ದರು.

ಅಂದು ಮಧ್ಯಾಹ್ನ ಮಾಮೂಲಿಯಂತೆ ಉಪ್ಪಿಟ್ಟು ಇದ್ದೇ ಇತ್ತು. ಆದರೆ ಆ ಉಪ್ಪಿಟ್ಟಿನ ಪರಿಮಳವನ್ನು ಮೀರಿದ  ಗಮ್ ಗಮಾ ಪರಿಮಳ ಅಲ್ಲೆಲ್ಲಾ ಹರಡಿತ್ತು. ಏನದು? ಅದೇ ಗೀರೈಸ್! ಅಂದರೆ ತುಪ್ಪದ ಅನ್ನ. ನೆಂಟರಿಗೆ ಮಾಡಿದ ಸ್ಪೆಷಲ್ ಅಡುಗೆ. ಪಾತ್ರೆ ತೊಳೆಯುವಾಗ ಉಳಿದಿದ್ದ ಗೀರೈಸ್ ಮಕ್ಕಳ ಹೊಟ್ಟೆಗೂ ಬಿತ್ತು. ತಳ ಹಿಡಿದ ಗೀರೈಸ್ ಬಲುರುಚಿಯೆಂದು ಈ ಮೊದಲೇ ಹೇಳಿದ್ದೆ. ಮಕ್ಕಳು ಅದನ್ನು ಕಿತ್ತಾಡಿ ತಿಂದರು. ಕೈ ಮೂಸಿಕೊಳ್ಳುತ್ತಾ ಖುಷಿಪಡುತ್ತಿದ್ದರು. ಮಧ್ಯಾಹ್ನದ ಬಳಿಕ ಅಂದು ಶಾಲೆಗೆ ರಜೆ ಘೋಷಿಸಲಾಯಿತು. ತನಿಖಾಧಿಕಾರಿಗಳು ಹೀಗೆ ಬರುತ್ತಾ ಇದ್ದಿದ್ದರೆ… ತುಪ್ಪದ ಅನ್ನ ಸಿಗುತ್ತಾ ಇದ್ದಿದ್ದರೆ… ಹೀಗೆ ರೆ ಗಳ ಬಗ್ಗೆ ಮಾತನಾಡುತ್ತಾ ದಾರಿ ಸವೆಸಿದೆವು. ಅಂತೂ ಏನಾದರೊಂದು ಬದಲಾವಣೆ, ಏನಾದರೊಂದು ಹೊಸತನವಿದ್ದೇ ಇರುತಿತ್ತು.

ತಿಂಗಳಿಗೆ ಒಮ್ಮೆಯೋ ಎರಡು ಬಾರಿಯೋ ಒಂದೊಂದು ಸೌದೆ ತುಂಡನ್ನು ಶಾಲೆಗೆ ತಕ್ಕೊಂಡು ಹೋಗಬೇಕಿತ್ತು. ಕೆಲವರು ಮನೆಯಿಂದ ಒಡೆದ ಸೌದೆಯನ್ನು ಹೊತ್ತು ತರುತ್ತಿದ್ದರು. ಆದರೆ ನಮ್ಮ ಗುಂಪು ಹೇಳಿಕೇಳಿ ಕಾಡಿನ ಕಡೆಯಿಂದ ಹೋಗುತ್ತಿದ್ದವರು. ಒಣಗಿ ಬಿದ್ದ ಕೊಂಬೆಗಳು ಬೇಕಾದಷ್ಟಿರುತ್ತಿದ್ದವು. ಮೆಟ್ಟಿ ಮುರಿದು ಸೌದೆ ಕೊಳ್ಳಿಯನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಹೀಗೆ ಒಂದು ದಿನ ಎಲ್ಲರೂ ಒಂದೊಂದು ಕೊಳ್ಳಿ ಸೌದೆ ತಂದರೆ ತಿಂಗಳಿಗಾಗುವಷ್ಟು ಸೌದೆ ಸಂಗ್ರಹವಾಗುತ್ತಿತ್ತು. ಅನ್ನ, ಸಾರು, ತಯಾರಿಸಲು ಬೇಕಾದ ಸೌದೆ ಉಪ್ಪಿಟ್ಟು ತಯಾರುಮಾಡಲು ಬೇಡ.

ಒಮ್ಮೆ ನಾವು ಆಟದ ಮೈದಾನ ವಿಸ್ತರಣಾ ಕೆಲಸದಲ್ಲಿ ತೊಡಗಿದ್ದೆವು. ಮುಖ್ಯೋಪಾಧ್ಯಾಯರು ಕೆಲಸ ಮಾಡಿಸುತ್ತಿದ್ದರು. ನೆಲ ಮಟ್ಟ ಮಾಡುತ್ತಾ ಇರುವಾಗ ಒಬ್ಬ ಹುಡುಗ ಹುತ್ತವನ್ನು ಅಗೆಯುತ್ತಾ ಆ ಮಣ್ಣನ್ನು ಬುಟ್ಟಿಗೆ ತುಂಬಿಸುತ್ತಾ ಇದ್ದ. ನಾಲ್ಕಾರು ಬುಟ್ಟಿಯಷ್ಟು ಮಣ್ಣನ್ನು ಹೊತ್ತು ಸುರಿದೆವು. ಹೀಗೆ ಹುತ್ತವನ್ನು ಅಗೆಯುತ್ತಿರುವಾಗ ಬುಸ್ಸೆಂದು ಸದ್ದು ಮಾಡುತ್ತಾ ನಾಗರ ಹಾವೊಂದು ಹೆಡೆ ಎತ್ತಿ ಹೊರ ಬಂತು! ನಾವೆಲ್ಲಾ ಹೋ ಎಂದೆವು. ಮುಖ್ಯೋಪಾಧ್ಯಾಯರು ತಪಕ್ಕೆಂದು ಜಿಗಿದು ನಿಂತರು. ಹಾವು ಹಿಂದಕ್ಕೂ ಹೋಗದೆ ಮುಂದಕ್ಕೂ ಬರದೆ ಹೆಡೆ ಎತ್ತಿಕೊಂಡೇ ಇತ್ತು. ಮುಂದೇನು? ಹೋಡಿರೋ ಬಡಿರೋ ಈ ಆದೇಶಕ್ಕೂ ಕಾಯದೆ ಗುದ್ದಲಿ ಹಿಡಿದ ಹುಡುಗನ ಏಟಿಗೆ ಹಾವು ಚಡಪಡಿಸಿ ಸತ್ತೇ ಹೋಯಿತು.

ಅಂದು ಬರೇ ಪಾಠವೇ ಅಲ್ಲ, ಮನರಂಜನೆಯೂ ಇರುತಿತ್ತು. ಹರಿಕಥೆ ದಾಸರು ಬರುತ್ತಿದ್ದರು. ಒಂದೆರಡು ಗಂಟೆ ಹರಿಕಥೆ ಕಾರ್ಯಕ್ರಮವಿರುತಿತ್ತು. ಡೊಂಬರು ಬರುತ್ತಿದ್ದರು. ಅವರ ಹಾಸ್ಯದ, ಚಮತ್ಕಾರದ ಮಾತುಗಳು, ಕಬ್ಬಿಣವನ್ನು ಬಗ್ಗಿಸುವುದು, ಎದೆ ಮೇಲೆ ಕಲ್ಲನ್ನು ಇಟ್ಟು ಸುತ್ತಿಗೆಯಿಂದ ಹೊಡೆದು ಚೂರು ಮಾಡುವುದು, ಹಾವು ಮುಂಗುಸಿ ಆಟ, ಪುಂಗಿಯ ನಾದ… ಹೀಗೆ ಏನಾದರೊಂದು ಮನರಂಜನೆ ಇರುತಿತ್ತು. ಕೆಲವೊಮ್ಮೆ ಬೈಸಿಕಲ್‌ನ ಕಸರತ್ತು, ಗಾಜಿನ ಸೀಸೆ ಮೇಲೆ ಹಲಗೆ ಇಟ್ಟು ಅದರ ಮೇಲೆ ಅಂಗ ಸಾಧನೆ ಮಾಡುವುದು ಮಾಡುತ್ತಿದ್ದರು. ಏನೋ ಒಂದು ರೀತಿಯ ರೋಮಾಂಚನದ ಪ್ರದರ್ಶನ ನೀಡುತ್ತಿದ್ದರು. ಅಂಥವರೆಲ್ಲಾ ಇಂದು ಎಲ್ಲಿ ಹೋದರೊ?

ರಾಷ್ಟ್ರೀಯ ಹಬ್ಬಗಳಂದು ಮೆರವಣಿಗೆ, ಘೋಷಣೆ, ಭಾಷಣ, ಹಾಡು, ನೃತ್ಯ-ಬಾಯಿ ಸಿಹಿಗೆ ಮಿಠಾಯಿ, ಶಾಲೆಯಿಂದ ಮೆರವಣಿಗೆ ಹೊರಟು, ಮುಖ್ಯ ರಸ್ತೆಯ ಮೂಲಕ ಸಾಗಿ, ದೇವಸ್ಥಾನದ ಮುಂದೆ ಗುಂಪಾಗಿ ನಿಂತು ಪೂಜೆ ಮಾಡಿಸಿಕೊಂಡು ಹಿಂತಿರುಗಿ ಶಾಲೆಗೆ ಬಂದು ಸಭೆ ನಡೆಸಲಾಗುತ್ತಿತ್ತು. ಮೆರವಣಿಗೆ ಹೋಗುವಾಗ ಒಬ್ಬ ಬಾಯಿಗೆ ಕೈ ಹಿಡಿದು ಸ್ವಾತಂತ್ರೋತ್ಸವಕ್ಕೆ ಎಂದು ಜೋರಾಗಿ ಕೂಗಿ ಘೋಷಣೆ ಹೊರಡಿಸುತ್ತಿದ್ದ. ಆಗ ಉಳಿದವರು ಜೈ ಎನ್ನುತ್ತಿದ್ದೆವು. ನಂತರ ಅದೇ ಹುಡುಗ ಇಂದು ಗಣರಾಜ್ಯೋತ್ಸವಕ್ಕೆ ಜೈ, ಗಾಂಧಿ ಜಯಂತಿಗೆ ಜೈ, ಮಕ್ಕಳ ದಿನಾಚರಣೆಗೆ ಜೈ – ಅರೆ! ಇದೇನು? ಹೌದು, ಒಂದೇ ದಿನ ಎಲ್ಲಾ ಹಬ್ಬಗಳೂ ನಮ್ಮ ಬಾಯಲ್ಲಿ ನಲಿದಾಡುತ್ತಿದ್ದವು. ಏನೇ ಆಗಲಿ ರಾಷ್ಟ್ರೀಯ ಹಬ್ಬಗಳು ಯಾವುವೆಂದು ಗೊತ್ತಿತ್ತಲ್ಲ ಅಂತ ಎಂದು ನೆನದಾಗ ಸಮಾಧಾನವಾಗುತ್ತದೆ.

ಒಂದು ದಿನ, ಅದು ಯಾವ ಸಮಾರಂಭವೆಂದು ಸರಿಯಾಗಿ ನೆನಪಿಲ್ಲ. ಆದರೆ ಅಂದು ನಾನು ವಹಿಸಿದ ಜವಾಬ್ದಾರಿಯನ್ನಂತೂ ಮರೆಯಲಾರೆ. ಒಬ್ಬರು ಮೇಡಂ ನಾಳೆ ದಿನದ ಸಭೆಯಲ್ಲಿ ಮೊದಲಿಗೆ ಪ್ರಾರ್ಥನಾ ಗೀತೆ ಹಾಡುವರು ಯಾರು? ಎಂದು ಕೇಳಿದರು. ಅದೇನು ಮಹಾ? ನಾನು ಹಾಡುತ್ತೇನೆ ಎಂದು ಒಪ್ಪಿಕೊಂಡೆ. ನಾನು ಮತ್ತು ಅಕ್ಕ ಇಬ್ಬರು ಮನೆಯಲ್ಲಿ ನಿತ್ಯವೂ ಸಂಜೆ ದೇವರ ದೀಪದ ಮುಂದೆ ಬಾಯಿಪಾಠ ಹೇಳುತ್ತಿದ್ದೆವು. ಆಗ ಭಾಗ್ಯದ ಲಕ್ಷ್ಮಿ ಬಾರಮ್ಮಾ… ಹಾಡುತ್ತಿದ್ದೆವು. ಅದನ್ನೇ ನಾನು ನಮ್ಮ ಶಾಲೆಯ ಸಮಾರಂಭದಲ್ಲಿ ಹಾಡುತ್ತೇನೆಂದು ಯೋಚಿಸಿದೆ. ಆ ಸಮಾರಂಭದ ದಿನ….

ಸಭಾಂಗಣದ ತುಂಬಾ ಮಕ್ಕಳು, ವೇದಿಕೆಯಲ್ಲಿ ಗಣ್ಯರು ಕುಳಿತಿದ್ದರು. ಸಭೆ ಆರಂಭವಾಯಿತು. ಮೊದಲಿಗೆ ಪ್ರಾರ್ಥನೆ ಎಂದರು. ನನ್ನ ಹೆಸರು ಮೊಳಗಿತು. ನಾನು ವೇದಿಕೆ ಹತ್ತಿದೆ. ಸಭಿಕರನ್ನು ನೋಡಿದೆ. ಸಭಿಕರೆಲ್ಲರ ಕಣ್ಣು ನನ್ನ ಮೇಲೆ! ಎಷ್ಟೊಂದು ಕಣ್ಣುಗಳು!! ಹೀಗೆ ನೋಡಿದರೆ ನಾನು ಹೇಗೆ ಬಾಯಿಬಿಡಲಿ? ಅಂತೂ ಇಂತೂ ಪ್ರಾರ್ಥನಾ ಗೀತೆ ಹೊರಟಿತು ಭಾಗ್ಯದ ಲಕ್ಷ್ಮಿ ಬಾರಮ್ಮ, ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ… ನನ್ನ ಧ್ವನಿ ನನ್ನನ್ನೇ ಅಣಕಿಸಿತು. ನಾನು ಓದುತ್ತಿದ್ದೇನೆಯೋ, ಹಾಡುತ್ತಿದ್ದೇನೆಯೋ ಪದ್ಯವೋ ಗದ್ಯವೋ… ತುಟಿ ಒಣಗ ತೊಡಗಿತ್ತು, ಕಾಲು ನಡುಗತೊಡಗಿತು. ಸಭಿಕರೆಲ್ಲರೂ ನಿಂತಿದ್ದಾರೆ. ಹೆಜ್ಜೆಯ ಮೇಲೆ ಹೆಜ್ಜೆಯನ್ನಿಕ್ಕುತ, ಗೆಜ್ಜೆಯ ಕಾಲಿನ ಸದ್ದನು ಮಾಡುತ್ತ ಗದ್ಯ ಹೊರ ಬರುತ್ತಲೇ ಇತ್ತು. ಬಾಯಿ ಮುಚ್ಚಿ ನಡಿ ಒಳ ಮನದ ಒತ್ತಾಯ. ಅಂತೂ ನನ್ನ ಪ್ರಾರ್ಥನಾ-ಗದ್ಯ-(ಪದ್ಯ ಅಲ್ಲ) ಮುಗಿಯಿತು. ಅಂದು ವೇದಿಕೆಯಿಂದ ಇಳಿದವನು ಈವರೆಗೂ ಹಾಡು ಹೇಳಲೆಂದು ವೇದಿಕೆ ಹತ್ತಲಿಲ್ಲ.

ಇನ್ನೊಮ್ಮೆ ಅದೇ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವವೋ ಪರಿಸರ ದಿನಾಚರಣೆಯೋ ಗೊತ್ತಿಲ್ಲ. ಗಣ್ಯಾತಿಗಣ್ಯರು ಸಮಾರಂಭಕ್ಕೆ ಬಂದಿದ್ದರು. ಹಿಂದಿನ ದಿನ ಶಾಲೆಯ ಅಂಗಳದಲ್ಲಿ ಗುಂಡಿ ತೆಗದು ಗಿಡ ನೆಡಲು ಅಣಿ ಮಾಡಿದ್ದೆವು. ಮುಖ್ಯ ಅತಿಥಿಯಾಗಿ ಬಂದವರು ಶಾಸಕರೋ, ಮಂತ್ರಿಯೋ, ಯಾರೋ? ಅವರು ಬಿಳಿ ವಸ್ತ್ರಧಾರಿಯಾಗಿದ್ದರೆಂಬುದಷ್ಟೇ ನೆನಪು.

ನಾವೆಲ್ಲರು ಸಾಲಾಗಿ ನಿಂತು ಗೌರವ ಸೂಚಿಸಿದೆವು. ಅತಿಥಿ ಗಿಡ ನೆಡಲು ಗುಂಡಿಯ ಬಳಿ ಬಂದರು. ಅದು ಅಶೋಕ ಗಿಡವೋ, ಕ್ರಿಸ್‌ಮಸ್ ಗಿಡವೋ ಯಾರಿಗೆ ಗೊತ್ತು ಹೇಳಿ? ಅವರು ಮಣ್ಣು ಬಗೆದು ಗಿಡ ನೆಟ್ಟರು. ಗುಂಡಿಯ ಪಕ್ಕದಲ್ಲಿ ಬಿಂದಿಗೆಯಲ್ಲಿ ನೀರು ತುಂಬಿಸಿ ಇಟ್ಟಿದ್ದೆವು. ಅತಿಥಿ ಗಿಡ ನೆಟ್ಟ ಕೂಡಲೆ ಅವರ ಕೈಗೆ ನೀರು ಸುರಿವವರು ಯಾರು? ಆ ಕೆಲಸ ನನ್ನ ಪಾಲಿಗೆ ಬಂತು. ನಾನು ಅವರ ಕೈಗೆ ನೀರೆರೆದೆ. ಆ ನೀರು ಗಿಡದ ಬುಡಕ್ಕೆ ಬಿದ್ದಿತು. ಅಂದು ಅವರು ನೆಟ್ಟ ಗಿಡ, ನಾನು ನೀರೆರೆದ ಗಿಡ ಅದು. ನಾವೆಲ್ಲರೂ ಬೆಳೆಸಿದ ಗಿಡ. ನಲವತ್ತು ವರ್ಷದ ಹಿಂದಿನ ಆ ಗಿಡ ಹೇಗಿರಬಹುದು? ಶಾಲೆಯ ಕಟ್ಟಡಕ್ಕಿಂತ ಎತ್ತರ ಬೆಳೆದಿರಬಹುದೆ? ಆ ಮರದ ನೆರಳಲ್ಲಿ ಮಕ್ಕಳು ಇಂದು ಓದುತ್ತಿರಬಹುದೆ? ನಲವತ್ತು ವರ್ಷಗಳ ಹಿಂದೆ ಇದ್ದ ನನ್ನ ಆ ಗುರುಗಳು ಹೇಗಿರಬಹುದು?! ಕಳೆದ ದಿನಗಳನ್ನು ನೆನೆದುಕೊಳ್ಳುವುದೇ ಒಂದು ಚೆಂದ.

 ಕೊಂಯ್ಯೋ ಅನ್ನುತ್ತಿದ್ದ ಕೊಳಲು

ನಾಟಿ ನೆಟ್ಟ ಏಳೆಂಟು ದಿನಗಳವರೆಗೆ ಆ ನಾಟಿಯನ್ನು ನೋಡುವಾಗ ಬೇಸರವಾಗುತ್ತಿತ್ತು. ನಾಟಿಗಳೆಲ್ಲಾ ಬಾಡಿ ಹೊಗಿ ಸೋಗೆಗಳೆಲ್ಲಾ ಹಣ್ಣಾಗಿ ಅಡ್ಡಾದಿಡ್ಡಿ ಬಿದ್ದಿರುತ್ತಿದ್ದವು. ನಂತರ ಆ ನಾಟಿಗೆ ಜೀವ ಕೂಡುತ್ತಾ ಚಿಗುರು ಸೋಗೆಗಳು ತಲೆಯೆತ್ತಿ ಹಸಿರನ್ನು ಸೂಸುವಾಗ ಹೊಟ್ಟೆ ತುಂಬಿದಷ್ಟು ಖುಷಿ. ನಾಟಿಗಳೆಲ್ಲಾ ಪೂರ್ಣ ಹಸಿರಾಗುವಾಗ ನಾಟಿಗೆ ಕಪ್ಪು ಹತ್ತಿದೆ ಎಂದು ಕುಣಿದಾಡುತ್ತಿದ್ದೆವು. ಸೋಗೆಯಲ್ಲಿ ಕುಳಿತ ಇಬ್ಬನಿಯ ಹನಿಗಳು ಎಳೆ ಬಿಸಿಲಿನಲ್ಲಿ ಮುತ್ತಿನ ಹನಿಗಳಂತೆ ಕಾಣುತ್ತಿದ್ದವು. ಹೊತ್ತೇರುವ ವರೆಗೆ ಇಬ್ಬನಿ ಬಣ್ಣಬಣ್ಣದ ಮುತ್ತಿನ ಹನಿಗಳೇ. ಬೆಳಿಗ್ಗೆ ಎದ್ದು ಗದ್ದೆಯಲ್ಲಿ ಸುತ್ತಾಡುವುದೇ ಚಂದ. ಸಂತಸ ಎಂಬುದು ಕ್ಷಣಿಕ ಅಲ್ವೆ? ಇಬ್ಬನಿಯ ಹನಿಗಳು ಕ್ರಮೇಣ ಒಂದನೊಂದು ಕೂಡಿಕೊಂಡು ಅಥವಾ ಏಕಾಂಗಿಯಾಗಿ ಉದುರುತ್ತಿದ್ದವು- ಕ್ಷಣದ ಬದುಕಿನ ಸಾರ್ಥಕತೆಯಂತೆ!

ನಾಟಿಗೆ ಕಪ್ಪು ಹತ್ತುತ್ತಿದ್ದಂತೆ ‘ಅವ್ವ, ಈ ಬೆಳೆ ನಮ್ಮ ವರ್ಷದ ಖರ್ಚಿಗೆ ಸಾಕಾ?’ ಎಂದು ನಾವು ಕೇಳುತ್ತಿದ್ದೆವು. ಅವ್ವ ಯಾವತ್ತೂ ನಿರಾಶಾವಾದಿಯಲ್ಲ. ‘ಓ, ಸಾಕು’ ಎಂದು ಸಮಾಧಾನ ಹೇಳುತ್ತಿದ್ದಳು. ಆನೆಗಳು, ಹಂದಿಗಳು, ದನಗಳು, ಹಕ್ಕಿಗಳು, ಇಲಿಗಳು ಆ ಬೆಳೆಯ ವಾರಸುದಾರರಲ್ಲದಿದ್ದರೂ ಪಾಲುದಾರರಂತೂ ಹೌದೆ ಹೌದು. ಅವುಗಳೆಲ್ಲಾ ಕಿತ್ತಾಡಿ ತಿಂದು ಉಳಿಯುವುದಾದರೂ ಎಷ್ಡು? ಮಳೆ ಬಾರದೆ ಬೆಳೆ ಒಣಗಿದರೆ ಯಾರಿಗೆ ಎಷ್ಟೆಷ್ಟು?

ನಮ್ಮ ಗದ್ದೆಯಲ್ಲಿ ಒಂದು ಕದಿರು (ತೆನೆ) ಕಂಡ ಕೂಡಲೆ ಗದ್ದೆಗಿಳಿದು ಕದಿರು ಬಂದಿರುವ ಸಸಿಯ ಸೋಗೆಗೆ ಗಂಟು ಹಾಕಿ ಅದನ್ನು ಮುಟ್ಟಿ ನಮಸ್ಕರಿಸುತ್ತಿದ್ದೆವು. ಆ ಸಂತಸದಲ್ಲಿ ಮನೆಗೆ ಓಡಿ ಬಂದು ‘ಅವ್ವಾ ಗುಂಡಿ ಗದ್ದೇಲಿ ಕದಿರು ದಾಟಿದೆ. ಗಂಟುಹಾಕಿ ನಮಸ್ಕಾರ ಮಾಡಿದೆವು’ ಎಂಬ ಸುದ್ದಿ ಮುಟ್ಟಿಸಿದೆವು. ಅವ್ವಾ ಕದಿರು ಬಂದ ಮೇಲೆ ಎಷ್ಟು ದಿನಕ್ಕೆ ಕೊಯ್ಲಿಗೆ ಬರುತ್ತದೆ? ಎಂದು ಕದಿರು ಕಾಣುವಾಗಲೇ ಕೊಯ್ಲಿನ ಪ್ರಶ್ನೆ ನಮ್ಮದು. ಬೇರೆಲ್ಲಾ ಸಸಿಗಳಲ್ಲೂ ಬೇಗ ಬೇಗನೆ ತೆನೆ ಬರಲಿ ಬೇಗ ಬೇಗನೆ ಕೊಯ್ಲಿಗೆ ಬರಲಿ, ಹೊಸಾ ಅಕ್ಕಿಯ ಊಟ ಬೇಗನೆ ಸಿಗಲಿ ಎಂಬ ತವಕ- ಹಾರೈಕೆ-ನಮ್ಮದು.

ತೆನೆ ಹೊರಡುತ್ತಿದ್ದಂತೆ, ಕೆಲವೊಮ್ಮೆ ಅದಕ್ಕೂ ಮೊದಲು ಆನೆಗಳು ಗದ್ದೆಗಿಳಿದು ನಾಟಿಯನ್ನು ಕಿತ್ತು ತಿಂದು, ತುಳಿದು ಹಾಳು ಮಾಡಿದಾಗಲಂತೂ ಅವ್ವ ಅಳುನುಂಗಿ ಮಾತಾಡುತ್ತಿದ್ದಳು. ಅಪ್ಪ ಹಾಸಿಗೆ ಹಿಡಿದುದರಿಂದ ಹಾ ಶಿವ್ನೇ ………….  ಎಂದು ದುಃಖಿಸುತಿತ್ತು.

ಹಗಲು ದನಗಳು ಗದ್ದೆಗೆ ಬಂದರೆ ಹೇಗೋ ನೋಡಿಕೊಳ್ಳಬಹುದು. ಆದರೆ ರಾತ್ರಿ ಆನೆಗಳು ಗದ್ದೆಗಿಳಿದರೆ? ಕಾಡು ಹಂದಿಗಳು ಬಂದರೆ? ಕಾವಲು ಗದ್ದೆಯಲ್ಲಿ ಕಾಯುತ್ತಾ ರಾತ್ರಿ ಗದ್ದೆಯಲ್ಲಿ ಮಲಗಬೇಕು. ಹಾಗಾಗಿ ಗದ್ದೆಯಲ್ಲಿ ಗುಡಿಸಲು ಕಟ್ಟಿದೆವು. ಕಾವಲು ಮನೆಗೆ ಗೋಡೆಯಿಲ್ಲ, ಹೋಗಲಿ ಒಂದು ಮರೆಯಾದರೂ ಬೇಡವೆ? ಇಲ್ಲ, ಅದೂ ಇಲ್ಲ. ಗದ್ದೆಯಲ್ಲಿ ಮಲಗುವುದು ನಿದ್ದೆ ಮಾಡಲಿಕ್ಕಲ್ಲವಲ್ಲ. ಹಾಗಾಗಿ ಮರೆಯನ್ನು ಕಟ್ಟದೆ ಹಾಗೆ ಬಿಟ್ಟದ್ದಿರಬಹುದು.

ರಾತ್ರಿ ಕಾವಲಿನ ನೆಪದಲ್ಲಿ ಗದ್ದೆಯಲ್ಲಿ ಮಲಗುವುದು ನಿಜಕ್ಕೂ ಒಂದು ರೀತಿಯ ಮಜ ಅನ್ನಿಸುತ್ತಿತ್ತು. ಧಗಧಗಿಸುವ ಬೆಂಕಿಯ ಮುಂದೆ ಚಳಿಕಾಯಿಸುತ್ತಾ, ಲಾಬೀನು ಬೆಳಕಲ್ಲಿ ಓದುತ್ತಾ, ಬರೆಯುತ್ತಾ, ನಡುವೆ ಕಾಡು ಪ್ರಾಣಿಗಳಿಗೆ ಚೂ ಚೂ ಎಂದು ಹೆದರಿಸುತ್ತಾ ಕಳೆದ ದಿನಗಳನ್ನು ಬದುಕಿನ ಸಂಭ್ರಮ ಎನ್ನಲೆ? ಅಥವಾ ಬದುಕಿಗೆ ಅದೆಲ್ಲಾ ಅನಿವಾರ್ಯ ಎನ್ನಲೆ? ಅಪ್ಪ  ಮನೆಯಲ್ಲೇ ಮಲಗಿರುತಿತ್ತು. ಏಕೆಂದರೆ ಅಪ್ಪ ನಡೆದಾಡುವ ಸ್ಥಿತಿಯಲ್ಲಿರಲಿಲ್ಲ. ಅವ್ವ, ಅಕ್ಕ, ಮತ್ತು ನಾನು ರಾತ್ರಿ ಗದ್ದೆಯಲ್ಲಿ ಮಲಗುತ್ತಿದ್ದವರು. ನಾಯಿಯನ್ನು ಮನೆಯಲ್ಲೇ ಕಟ್ಟಿ ಹಾಕುತಿದ್ದೆವು. ಕಾರಣ ಆನೆ ಗದ್ದೆಗಿಳಿದರೆ ನಾಯಿ ಬೊಗಳುತ್ತಾ ನಮ್ಮ ಬಳಿಗೇ ಓಡಿ ಬರುತ್ತದೆ. ಆನೆಗಳು ನಾಯಿಯ ಬೊಗಳುವಿಕೆಗೆ ಕೆರಳುತ್ತವೆ. ನಾಯಿಯನ್ನು ಅಟ್ಟಿಕೊಂಡು ಬಂದರೆ ಸಿಕ್ಕಿ ಹಾಕಿಕೊಳ್ಳುವವರು ನಾವೇ. ಹಾಗಾಗಿ ನಾಯಿಯನ್ನು ಮನೆಯಲ್ಲಿ ಕಟ್ಟಿ ನಾವು ಗದ್ದೆಯಲ್ಲಿ ಮಲಗುತ್ತಿದ್ದುದು.

ಕಾಟಿಬೆಟ್ಟದ ಬಳಿಯ ಆದಿವಾಸಿ ಹಾಡಿಊರಿನ ಎಲ್ಲಾ ಗದ್ದೆಯವರು ತಮ್ಮ ಬೆಳೆಯನ್ನು ಕಾಪಾಡಲು ರಾತ್ರಿ ಗದ್ದೆಯಲ್ಲಿ ಮಲಗುತ್ತಿದ್ದರು. ಕೆಲವರು ಆಳುಗಳನ್ನು ಕಾವಲಿಗೆ ನೇಮಿಸಿಕೊಂಡಿದ್ದರು. ಅವರಲ್ಲಿ ಒಬ್ಬ ಆಳು ಕೊಳಲು ವಾದಕ. ಕಾವಲಿನ ಸಮಯವೇ ಆಗಿರಲಿ, ಬಿಡುವಿನ ಸಮಯವೇ ಆಗಿರಲಿ ಆತ ರಾತ್ರಿ ನಿದ್ದೆ ಬರುವರೆಗೆ ಕೊಳಲನ್ನು ಊದುತ್ತಾ ಇರುತ್ತಿದ್ದ. ಕಗ್ಗತ್ತಲೇ ಇರಲಿ, ಬೆಳದಿಂಗಳೇ ಇರಲಿ ಕೊಳಲಿನ ನಾದಕ್ಕೇನೂ ಅಡ್ಡಿಯಲ್ಲವಲ್ಲ. ನಿಶಬ್ದದ ಆ ರಾತ್ರಿಯಲ್ಲಿ ಆ ನಾದ ನಿಜಕ್ಕೂ ಆಹ್ಲಾದಕರ. ರಾತ್ರಿ ಮಲಗುವ ವೇಳೆಗೆ ನಮಗೆ ಪುಕ್ಕಟೆ ಮನರಂಜನೆ ಸಿಗುತ್ತಿತ್ತು.

ಕೊಳಲೂದುತ್ತಿದ್ದ ಆತನ ಹೆಸರು ಗೊತ್ತಿಲ್ಲ. ಆತನ ಚಹರೆ ನೆನೆದುಕೊಂಡರೂ ಸ್ಮರಣೆಗೆ ಬರುತ್ತಿಲ್ಲ. ಆದರೆ ಆ ನಾದ, ಆ ನಾದ ಬರುತ್ತಿದ್ದ ದಿಕ್ಕು ಇನ್ನು ಕಣ್ಣ ಮುಂದಿದೆ. ಆತ ರಾತ್ರಿ ಗದ್ದೆ ಕಾವಲುಗಾರ. ಹಗಲು ದನಗಳ ಕಾವಲುಗಾರ. ಹಗಲಿಡೀ ಕಾಡಿನಲ್ಲಿರುವ, ರಾತ್ರಿ ಗದ್ದೆಯಲ್ಲಿರುವ ಆತ ಒಂಟಿ ಜೀವಿ. ಆ ಕಾರಣದಿಂದಲೇ ಅವನನ್ನು ನೋಡಿದ ನೆನಪೇ ಇಲ್ಲ. ಒಟ್ಟಿನಲ್ಲಿ ಆತ ಒಂದು ಮನೆಯ ಸೇವಕ, ನಿಷ್ಠಾವಂತ ಅನಾಮಿಕ, ಕೊಳಲೂದುವ ರಸಿಕ.

ನನಗೂ ಹಾಗೆ ಕೊಳಲೂದುವ ಆಸೆ. ಕಂಡ ಕಂಡವರನ್ನು ಕೊಳಲಿಗಾಗಿ ಪೀಡಿಸಿದೆ. ಯಾರಿಂದಲೂ ಕೊಳಲು ಸಿಗಲಿಲ್ಲ. ನಮ್ಮ ಮನೆಯ ಸುತ್ತ ಮುತ್ತ ಬೇಕಾದಷ್ಟು ಬಿದಿರು ಬೆಳೆದಿತ್ತು. ಬಿದಿರಿನಿಂದ ಕೊಳಲು ಮಾಡುವುದೆಂದೇ ನಾನು ಭಾವಿಸಿದ್ದೆ. ಅಪ್ಪನೊಡನೆ ಕೊಳಲಿನ ಬಗ್ಗೆ ಕೇಳಿದೆ. ‘ಈ ಬಿದಿರು ಆಗೋದಿಲ್ಲ, ಅದಕ್ಕೆ ವಾಟೆ ಬಿದಿರು ಬೇಕು. ವಾಟೆ ಈ ಕಾಡಿನಲ್ಲಿ ಇಲ್ಲ.’ ಅಪ್ಪ ಹೀಗೆ ಹೇಳಿದ ಮೇಲೆ ನನಗೆ ಕೊಳಲು ಸಿಗುವುದು ಕನಸಿನ ಮಾತೇ ಸರಿ. ಏನು ಮಾಡುವುದು?

ಒಮ್ಮೆ ಅವ್ವನ ತವರು ಮನೆಗೆ ಅಂದರೆ ನಮ್ಮ ಸೋದರ ಮಾವನ ಮನೆಗೆ ಹೋಗುವ ಅವಕಾಶ ಬಂತು. ಮಾವನ ಮನೆ ಇರುವುದು ಭಾಗಮಂಡಲದಲ್ಲಿ. ನಮ್ಮ ಆ ಕಿರಿ ವಯಸ್ಸಿಗೆ ಅದು ಬಲು ದೂರದ ಪಯಣ. ಹಾಗಾಗಿ ನಮಗೆ ಕೊಂಚ ಜಂಭ! ಅಂದು ಬಸ್ಸಿನಲ್ಲಿ ಅಷ್ಟು ದೂರ ಹೋಗುವುದೆಂದರೆ ಜಂಭವೇ. ನಮ್ಮ ಗುರುಗಳ ಹತ್ತಿರ ಭಾಗಮಂಡಲಕ್ಕೆ ಹೋಗುವ ಬಗ್ಗೆ ಹೇಳಿ ರಜೆ ಕೊಡಿ ಎಂದು ಬೇಡಿಕೊಂಡೆವು. ಆಗ ಗುರುಗಳು ‘ಅಷ್ಟು ದೂರ ಹೋಗುತ್ತೀರಾ?’ ಎಂದು ಅಚ್ಚರಿಯಿಂದ ಕೇಳಿದ್ದರು. ಗುರುಗಳೇ ಹಾಗೆ ಕೇಳಿದರು ಅಂದ ಮೇಲೆ ನಮ್ಮದು ನಿಜಕ್ಕೂ ಬಲು ದೂರದ ಪ್ರಯಾಣವೇ ತಾನೆ? ನಲವತ್ತು ವರ್ಷಗಳ ಹಿಂದಿನದು ಈ ಮಾತು. ಸರಿ, ಭಾಗಮಂಡಲಕ್ಕೆ ಹೋದೆವು. ನನಗೆ ಕೊಳಲಿನದೇ ಕನಸು. ಅಲ್ಲಿ ಕೊಳಲಿನ ಪ್ರಸ್ತಾಪ ಮಾಡಿದೆ. ಅಲ್ಲಿ ಯಾರೋ ಒಬ್ಬ ಪುಣ್ಯಾತ್ಮರು ಕೊಳಲನ್ನು ಮಾಡಿ ಕೊಟ್ಟರು. ನಾನು ಕೊಳಲಿನ ಒಡೆಯನಾದೆ. ಎಲ್ಲಿಗೇ ಹೋಗಲಿ ನನ್ನ ಕೈಯಲ್ಲಿ ಕೊಳಲು ಇರುತ್ತಿತ್ತು.

ನಾನು ಕೊಳಲು ನುಡಿಸುವುದನ್ನು ಕಲಿಯಬೇಕು. ನಮ್ಮನ್ನು ರಂಜಿಸುತ್ತಿದ್ದ ಆ ಕೊಳಲು ವಾದಕನನ್ನು ಮೀರಿಸಬೇಕು. ‘ಕಾಟಿಬೆಟ್ಟದ ಕಾಡಿನಲ್ಲೊಬ್ಬ ಕೊಳಲು ವಾದಕ’ ಎಂಬ ಖ್ಯಾತಿ ಪಡೆಯಬೇಕೆಂಬ ಆಸೆ ನನ್ನದು. ಊದಲು ಪ್ರಯತ್ನಿಸಿದೆ, ನನಗೆ ಕೊಳಲು ಮಾಡಿಕೊಟ್ಟವರೊಡನೆ ಊದುವುದು ಹೇಗೆ ಎಂದು ಕೇಳಿದೆ. ಅವರು ಗೊತ್ತಿಲ್ಲ ಅಂದು ಬಿಟ್ಟರು. ಅಕ್ಕ, ಅವ್ವ, ಅಪ್ಪ – ಈ ಮೂವರೂ ಗೊತ್ತಿಲ್ಲ ಎಂದು ಬಿಟ್ಟರು! ನನಗೆ ಗುರು ಯಾರು? ನನಗೆ ನಾನೇ ಗುರುವಾದೆ. ಊದಲು ಪ್ರಯತ್ನಿಸಿದೆ. ಧ್ವನಿ ಬಂದೇ ಬಂತು – ಕೇವಲ  ಕೊಯ್ಯೀ ಎಂದು ಮಾತ್ರ!
ಕೊಳಲನ್ನು ಬಾಯಿಗಿಟ್ಟು ಎಲ್ಲಾ ರಂಧ್ರಗಳ ಮೇಲೆ ಬೆರಳಿಟ್ಟು ಊದಿದೆ. ಊಹುಂ! ಹುಬ್ಬನ್ನು ಕೆಳಗೆ ಮೇಲೆ ಮಾಡಿ ಭಾವನಾತ್ಮಕವಾಗಿ ಊದಲು ಪ್ರಯತ್ನಿಸಿದೆ. ನಾದ ಹೊಮ್ಮಲಿಲ್ಲ. ಶ್ರೀ ಕೃಷ್ಣ ಕತ್ರಿ ಕಾಲು ಮಾಡಿಕೊಂಡು ಊದುವಂತೆ ನಾನೂ ಕತ್ರಿ ಕಾಲು ಮಾಡಿ ನಿಂತು ಊದಿದೆ. ಯಾವ ಭಾವ ಭಂಗಿಯಿಂದಲೂ ನಾದ ಬರಲಿಲ್ಲ. ತುತ್ತೂರಿ ಊದುವಂತೆ ಊದಿದೆ ಪ್ರಯೋಜನವಾಗಲಿಲ್ಲ. ದನ ಮೇಯಿಸುವಾಗ ನನಗೆ ಅದೇ ಕೆಲಸ ರಾತ್ರಿ ಮನೆಯೊಳಗೂ ಅದೇ ಕೆಲಸ. ಮನೆಯೊಳಗೆ ಊದುವಾಗ ಅಪ್ಪನಿಂದ ಬೈಗುಳ ತಿಂದೆ. ರಾತ್ರಿ ಕೊಳಲು ಊದ ಬಾರದು. ಹಾವುಗಳು ಮನೆಯೊಳಗೆ ಬರುತ್ತದೆ. ನನ್ನ ಕೊಯ್ಯೀ ನಾದಕ್ಕೆ ಯಾವ ಹಾವಿಗೆ ಧೈರ್ಯ ಬಂದೀತು? ಸರಿ, ರಾತ್ರಿ ಊದುವುದನ್ನು ನಿಲ್ಲಿಸಿದೆ. ಹಗಲು ಪ್ರಯತ್ನಿಸಿ ಸೋತೆ. ಏಕಾಂತದಲ್ಲಿ ಊದುತ್ತಿದ್ದ ಆ ಕಾವಲುಗಾರನನ್ನು ನೆನೆದೆ. ಅವನನ್ನು ಭೇಟಿಯಾಗುವ ಸಂದರ್ಭವೇ ಬರಲಿಲ್ಲ.

ಮನಕ್ಕೆ ಮುದ ನೀಡಿ ರೋಮಾಂಚನಗೊಳಿಸುತ್ತಿದ್ದ ಆ ಅನಾಮಿಕನಿಗೆ ಗೌರವ ಸಲ್ಲಿಸುತ್ತೇನೆ. ಕೊಳಲೂದುವ ಯಾರನ್ನೇ ಕಾಣಲಿ ಅವರಿಗೆ ನನ್ನ ಅಭಿಮಾನದ ಗೌರವ ಉಂಟೇ ಉಂಟು. ನಾನು ಊದಲು ಕಲಿಯಲೇ ಇಲ್ಲ. ನಿಜ, ಆದರೆ ಎಂದೋ ಕೊಂಡುಕೊಂಡ ಕೊಳಲು ಇಂದೂ ಸಹ ಗೋಡೆ ಪೆಟ್ಟಿಗೆಯಲ್ಲಿದೆ, ಕಾಟಿಬೆಟ್ಟದ ಕಾಡಿನ ನೆನಪಿಗಾಗಿ.

ಕಾಡಬೆಂಕಿಯ ಸಾಲುದೀಪ

‘ಒಮ್ಮೆ ಮಳೆ ಬಂದಿದ್ದರೆ ಸಾಕಿತ್ತಪ್ಪಾ, ರಣ ಬಿಸಿಲು ಕಳೆಯುವುದು ಭಾರೀ ಕಷ್ಟ.’ ಈ ಮಾತು ಪ್ರತೀ ವರ್ಷದ ಬೇಸಗೆಯಲ್ಲಿ ಇರುವುದೇ. ಮಳೆ ಚಳಿಯಿಂದ ಹೇಗಾದರೂ ಬಚಾವಾಗಬಹುದು. ಆದರೆ ಬೇಸಗೆಯ ಕಾಡ್ಗಿಚ್ಚಿನಿಂದ ಬಚಾವಾಗುವುದು ಬಲು ಕಷ್ಟ. ಯಾವಾಗ ಯಾವ ಕಡೆಯಿಂದ ಬೆಂಕಿ ಬೀಳುತ್ತದೆಂದು ಯಾರಿಗೆ ಗೊತ್ತು?

ಕಾಟಿಬೆಟ್ಟ ಎಲೆ ಉದುರುವ ಕಾಡಿನ ಪ್ರದೇಶ. ಈ ಕಾಡು ಬೇಸಗೆಯಲ್ಲಿ ಪೂರ್ತಿ ಸತ್ತೇ ಹೋಗಿದೆಯೇನೋ ಎನ್ನುವಂತೆ ಭ್ರಮೆ ಹುಟ್ಟಿಸುವ ಕಾಡು. ಹುಲ್ಲು, ತರಗೆಲೆ, ಲಂಟಾನಗಳೆಲ್ಲಾ ಬೆಂಕಿ ಕಿಡಿಯನ್ನು ಕಾಯುತ್ತಿವೆಯೇನೋ ಎನ್ನುವಂತಿದ್ದವು. ಕಾಡ್ಗಿಚ್ಚೆಂದರೆ ತಾನೇ ತಾನಾಗಿ ಕಿಚ್ಚು ಹೊತ್ತಿಕೊಳ್ಳುವುದು. ಇರಬಹುದು ಎಲ್ಲೋ ಸಾವಿರಕ್ಕೊಂದೆರಡು ಜನ ತಮ್ಮ ತಮ್ಮ ಜಮೀನಿನ ಸುತ್ತಲಿರುವ ಕಾಡನ್ನು ಕಡಿದು ಸುಡುತ್ತಾರೆ. ಆಗ ಆಕಸ್ಮಿಕವಾಗಿ ಕಾಡಿಗೆ ಬೆಂಕಿ ದಾಟಿಬಿಡುವುದುಂಟು. ಆ  ರೀತಿ ಆಗುವುದು ವಿರಳಾತಿ ವಿರಳ. ಆದರೆ ಕಾಡಿನ ದಾರಿ ಹೋಕ ಬೀಡಿ ಸೇದಲು ಗೀರಿ ಎಸೆದ ಕಡ್ಡಿಗೆ ಕಾವಲು ಯಾರು? ಬೇಟೆಗಾರರ ಬಗ್ಗೆ ಏನೆಂದು ಹೇಳುವುದು?

ಕಾಟಿಬೆಟ್ಟದ ಸುತ್ತಲಿನ ಕಾಡೊಳಗಿನ ಹಳ್ಳಿ ಮನೆಗಳಲ್ಲಿ ವರ್ಷಕ್ಕೆ ಒಂದೆರಡಾದರೂ ಕಾಡ್ಗಿಚ್ಚಿಗೆ ಬಲಿಯಾಗದಿರದು. ನೂರಾರು ಮನೆಗಳಲ್ಲಿ ಮೂರೇ ಮೂರು ಹಂಚಿನ ಮನೆಗಳು. ಉಳಿದವು ಹುಲ್ಲಿನವುಗಳು. ನಾವು ಹೋಗುತ್ತಿದ್ದ ಶಾಲೆ ದಾರಿಯ ಮನೆಯೊಂದು ಆ ಊರಿನ ಅತ್ಯಂತ ಹಳೆಯ ಹುಲ್ಲಿನ ಮನೆ. ಆಂಗ್ಲರು ಭಾರತದಲ್ಲಿದ್ದಾಗಲೇ ಆ ಮನೆ ಅಲ್ಲಿ ಇತ್ತೆಂದು ಹೇಳುತ್ತಿದ್ದರು. ನಾವು ಶಾಲೆಗೆ ಆ ಒಂದು ದಿನ ಆ ಮನೆಯ ಅಂಗಳಕ್ಕಾಗಿಯೇ ದಾಟಿ ಹೋಗಿದ್ದೆವು. ಸಂಜೆ ಅದೇ ದಾರಿಗಾಗಿ ಹಿಂತಿರುಗಿ ಬಂದಾಗ ಅಲ್ಲೇನಿದೆ? ಮನೆ ಕಾಡ್ಗಿಚ್ಚಿಗೆ ಆಹುತಿಯಾಗಿತ್ತು. ಆರೇಳು ಪುಟ್ಟ ಪುಟ್ಟ ಮಕ್ಕಳಿದ್ದರು. ಎಲ್ಲರೂ ಪ್ರಾಣಪಾಯದಿಂದ ಬಚಾವಾಗಿದ್ದರು. ಆದರೆ ವರ್ಷದ ಊಟಕ್ಕೆಂದು ದಾಸ್ತಾನಿಟ್ಟಿದ ಬತ್ತ ಪೂರ್ತಿ ಕರಕಲಾಗಿ ಹೊಗೆಯಾಡುತಿತ್ತು. ಅವರ ಬದುಕು ಹೇಗೆ ಸಾಗಿತೋ ಎನೋ? ಆ ಮಕ್ಕಾಳ್ಯಾರು ಕೂಡ ಶಾಲೆಯ ಮುಖ ಕಂಡವರಲ್ಲ. ಹೀಗಿದ್ದ ಆ ಕುಟುಂಬ ಕೆಲವೇ ವರ್ಷಗಳಲ್ಲಿ ದಿಕ್ಕಾಪಾಲಾಗಿ ಹೋಯಿತು.

ನಾವು ನಮ್ಮ ಜಮೀನಿನ ಸುತ್ತಲಿನ ಕಾಡನ್ನು ಕಡಿದು ಅಲ್ಲಲ್ಲಿ ಗುಡ್ಡೆ ಮಾಡಿ ಸುಡುತ್ತಿದ್ದೆವು. ಹಾಗೆ ಸುಡುವಾಗ ಏಳುವ ಹೊಗೆಯನ್ನು ಕಂಡೊಡನೆ ಅದೊಂದು  ತೆಳು ನೀಲಿ ಬಣ್ಣದ ಹಕ್ಕಿಗಳು ಹಾರಿ ಬರುತ್ತಿದ್ದವು.

ಅವುಗಳನ್ನು ಅಪ್ಪ  ಹೊಗೆ ಗುಡುಮ ಹಕ್ಕಿ ಎಂದು ಹೆಸರಿಸುತ್ತಿತ್ತು. ಅವುಗಳು ಎಡೆ ಬಿಡದೆ ಒಂದು ರೀತಿಯ ಚಕಿ ಚಕಿ  ಎಂದು ಒಡಕಲು ಧ್ವನಿಯಿಂದ ಕೂಗುತ್ತಿದ್ದವು. ಪಕ್ಕದ ಮರದಲ್ಲಿ ಕುಳಿತು ಹೊಗೆ ಬಂದೆಡೆ ಕೂಗುತ್ತಾ ಹಾರಿ ಬರುತ್ತಿದ್ದವು. ಕಾಡಿಗೆ ಬೆಂಕಿ ಹಚ್ಚಿದ ಕೂಡಲೆ ಅಲ್ಲಿದ್ದ ಮಿಡತೆಗಳು ಇನ್ನಿತರ ಕೀಟಗಳು ಹಾರುತ್ತವೆ. ಅವುಗಳನ್ನು ತಿನ್ನಲು ಹಕ್ಕಿಗಳು ಬರುತ್ತಿದ್ದವು.
ನಾವು ಬೆಂಕಿ ದಾರಿ ಮಾಡಿ ಕಾಡಿನ ಬೆಂಕಿ ದಾಟದಂತೆ ಎಚ್ಚರ ವಹಿಸುತ್ತಿದ್ದೆವು. ಎಷ್ಟೇ ಎಚ್ಚರ ವಹಿಸಿದರೂ ಹಾರಿ ಬರುವ ಬೆಂಕಿ ಕಿಡಿಯನ್ನು ತಡೆಯುವುದು ಹೇಗೆ ? ಒಣ ಮರಕ್ಕೆ ಹಿಡಿದ ಬೆಂಕಿ ಕೆಡುವುದು ಯಾವಾಗ? ಗಾಳಿಯೊಡನೆ ಕೆಂಡ ಹಾರಿ ಎಲ್ಲೋ ಬೀಳುತ್ತದೆ. ಕಾಡಿಗೆ ಬೆಂಕಿ ಹಿಡಿದ ಹೊಗೆಯ ವಾಸನೆ ಬಂದ ಕೂಡಲೆ ನಾವು ಯಾರೂ ಮನೆಯೊಳಗೆ ಇರುತ್ತಿರಲಿಲ್ಲ. ಅಂಗಳದಲ್ಲಿ ನಿಂತು ಸುತ್ತಲೂ ಕಣ್ಣಾಯಿಸುತ್ತಿದ್ದೆವು. ಅಲ್ಲಿ ಇಲ್ಲಿ ಬೀಳುತ್ತಿದ್ದ ಬೂದಿಯನ್ನು ಕಂಡರಂತೂ ದಿಗಿಲುಗೊಳ್ಳುತ್ತಿದ್ದೆವು.

ಅಡುಗೆ ಆದ ಕೂಡಲೆ ಒಲೆಯ ಬೆಂಕಿಯನ್ನು ಕೆಡಿಸುತ್ತಿದ್ದೆವು. ಒಲೆಯ ಕಿಡಿಯೇ ಮನೆಯನ್ನು ಸುಟ್ಟದ್ದುಂಟು. ನಾವು ಶಾಲೆಯಿಂದ ಬರುವಾಗ ಕಾಟಿಬೆಟ್ಟದ ಕಾಡಿನ ಬೆಂಕಿಯ ಹೊಗೆ ಕಂಡರಂತೂ ನಮ್ಮ ಮನೆಗೆ ಬೆಂಕಿ ಬಿತ್ತೋ ಹೇಗೆ? ಕೊಟ್ಟಿಗೆಗೆ ಬೆಂಕಿ ಬಿತ್ತೋ ಹೇಗೆ? ಹಿಂದೊಮ್ಮೆ ಹುಲ್ಲು ಮುಂಡಕ್ಕೆ (ಮೆದೆ) ಬೆಂಕಿ ಹಿಡಿದು ನಾಶವಾದುದು ನೆನಪಿದೆ. ಅದೇ ಭಯದಲ್ಲಿ ಓಡಿಕೊಂಡೇ ಮನೆಗೆ ಬಂದೆವು. ಹೌದೇ ಹೌದು, ಮನೆಯ ಪಕ್ಕದಲ್ಲೇ ಕಾಡ್ಗಿಚ್ಚು ಉರಿಯುತ್ತಿತ್ತು. ಅಪ್ಪ ಅವ್ವ ದಾರಿ ಗುಡಿಸುತ್ತಿದ್ದರು. ಕುಡಿಯಲೆಂದು ನೀರು ಇರುವುದೇ ಒಂದೆರಡು ಬಿಂದಿಗೆ. ಆ ನೀರನ್ನು ಬೆಂಕಿಗೆ ಸುರಿಯುವುದಾ? ಹಾಗೆ ಸುರಿದರೆ ಮತ್ತೆ ನೀರು ತರಲು ಹೊತ್ತೆಷ್ಟು? ಯಾರದೋ ಗದ್ದೆಯಲ್ಲಿರುವ ಬಾವಿಗೆ ಓಡುವವರು ಯಾರು? ನೀರು ತಂದು ಅದನ್ನು ಬೆಂಕಿಗೆ ಸುರಿದು ನಂದಿಸುವುದು ಸಾಧ್ಯವೇ ಇಲ್ಲ. ಹಸಿಕೊಂಬೆಯನ್ನು ಮುರಿದು ಅದರಿಂದ ಬೆಂಕಿಗೆ ಹೊಡೆದು ನಂದಿಸುವ ಪ್ರಯತ್ನ ಮಾಡಿದೆವು. ನಮ್ಮ ನಾಲ್ವರ ಸಾಹಸಕ್ಕೆ ಬೆಂಕಿ ಸೋತಿತು. ಸಂಜೆ ತಂಪಾಗುತ್ತಿದ್ದಂತೆ, ಬೀಸುವ ಗಾಳಿಯೂ ಕಡಿಮೆ ಆಗುತ್ತಿದ್ದಂತೆ ಬೆಂಕಿ ನಂದುತ್ತಾ ಹೋಯಿತು. ಇನ್ನು ಆ ವರ್ಷ ಭಯವಿಲ್ಲವೆಂಬ ತೃಪ್ತಿ ನಮ್ಮದು.

ಬೆಟ್ಟಕ್ಕೆ ಬೆಂಕಿ ಹತ್ತಿದಾಗ ರಾತ್ರಿ ಕುಳಿತು ನೋಡಬೇಕು! ಆ ಬೆಂಕಿಯಿಂದ ನಮಗೇನೂ ಅಪಾಯ ಇಲ್ಲ ಎಂದಾಗ ಆ ನೋಟ ಅಪ್ಯಾಯಮಾನ! ಒಂದೆರಡು ಕಿಲೋ ಮೀಟರ್‌ವರೆಗೆ ಸಾಲಾಗಿ ಉರಿದ ಬೆಂಕಿ ದೀಪಾವಳಿಯ ಹಣತೆಯಂತೆ! ಅಥವಾ ನಗರದ ಬೀದಿಯ ಸಾಲು ದೀಪಗಳಂತೆ ಸುಂದರ! ಹಾಗೆ ನಾವು ನಮ್ಮ ಮನೆಯ ಕೈಯಾಲೆಯಲ್ಲಿ ಕುಳಿತು ಕಾಟಿಬೆಟ್ಟದ ಕಾಡಿನ ಬೆಂಕಿಯನ್ನು ನೋಡಿದ್ದೇವೆ. ಆದರೆ ನಗರದ ಬೀದಿಯ ಸಾಲು ದೀಪಗಳನ್ನಾಗಲಿ ದೀಪಾವಳಿಯ ಹಣತೆಗಳ ಸಾಲನ್ನಾಗಲಿ ಆಗ ನೋಡಿದವನಲ್ಲ. ಆದರೆ ಈಗ ಸಾಲು ದೀಪಗಳನ್ನ ನೋಡಿದರೆ ಕಾಡಿನ ಬೆಂಕಿ ನೆನಪಾಗುತ್ತದೆ. ಅದಿರಲಿ, ಒಮ್ಮೆ ಏನಾಯಿತೆಂದು ಮುಂದೆ ಹೇಳುತ್ತೇನೆ.

ಕಾಡೆಲ್ಲಾ ಒಣಗಿ ನಿಂತ ಕಡು ಬೇಸಗೆಯ ದಿನ. ಬೀಸುವ ಗಾಳಿಗೆ ಕನಿಕರವೇ ಇಲ್ಲ. ಗಾಳಿ ಕುಲುಮೆ ಗಾಳಿಯಷ್ಟು ಬಿಸಿ. ಹಸಿರು ಕಾಡಿನಿಂದ ಬೀಸಿ ಬರುವ ಗಾಳಿ ತಂಪಾಗಿರುತ್ತದೆ. ಆದರೆ ಇಡೀ ಕಾಡು ಒಣಗಿ ನಿಂತಿದೆ. ಆ ಕಡೆಯಿಂದ ಬೀಸಿ ಬರುವ ಗಾಳಿಗೆ ತಂಪಾಗಿರಲು ಸಾಧ್ಯವೇ? ಮನೆ ಹುಲ್ಲಿನದಾದರೂ ಅದೂ ಒಣಗಿ ಬಿಸಿಯನ್ನು ಹೊರಸೂಸುತಿತ್ತು. ಅಂಗಳ ಬಿಸಿಯಾಗಿ ಮುಖಕ್ಕೆ ಬಿಸಿರಾಚುತಿತ್ತು. ಒಟ್ಟಿನಲ್ಲಿ ಎಲ್ಲೆಡೆಯೂ ಕುಲುಮೆ ಮುಂದೆ ಕುಳಿತಂತೆ. ದಿನ ಬೆಳಗಾದರೆ ಆತಂಕ. ಮಳೆ ಬೀಳಬಾರದಾ? ಮಳೆಗಿಂತ ಮುನ್ನ ಬೆಂಕಿ ಬಿದ್ದರೆ? ಕಾಡೊಳಗಿನ ಮನೆಯೂ ಒಂದೇ, ಕಾಡೊಳಗಿನ ಬಿದಿರು ಮೆಳೆಯೂ ಒಂದೇ. ಒಂದೇ ಒಂದು ಕಿಡಿ ಸಾಕು. ಕಣ್ಣ ಮುಂದೆ ಬೂದಿ ರಾಶಿ ಬೀಳಲು. ಗಾಂಧಿ ಗುಲಾಬಿ ಅಥವಾ ಕಮ್ಯುನಿಸ್ಟ್ ಕಾಡು ಎನ್ನುವ ಲಂಟಾನ ಗಿಡ ಬೇಸಗೆಯಲ್ಲಿ ಬಹು ಅಪಾಯದ್ದು. ಬೂದು ಬಣ್ಣದ ಹೂ ಗೊಂಚಲು ಬೀಜ ಬಲಿತು ಮಳೆ ಬಿದ್ದೊಡನೆ ಬೀಳುತ್ತದೆ. ಆ ಗೊಂಚಲು ಹೊತ್ತುಕೊಂಡು ಬಹುದೂರ ಸಾಗುತ್ತದೆ. ಅದರ ಬೆಂಕಿ ಅಲ್ಲಲ್ಲಿ ಬಿದ್ದು ಧಗ್ ಧಗ್ ಎದ್ದು ಕಾಡಿನ ನಾಶಕ್ಕೆ ಕಾರಣವಾಗುತ್ತದೆ. ನಮ್ಮ ಸುತ್ತೆಲ್ಲಾ ಅದೇ ರೀತಿಯ ಕಾಡು ಇತ್ತು. ಹಾಗಿರುವ ಕಾಡಿಗೆ ಒಂದು ಮಧ್ಯಾಹ್ನ ಬೆಂಕಿ ಹಿಡಿಯಿತು.

ರಣ ಬಿಸಿಲು, ಒಣ ಗಾಳಿ, ಒಣ ಕಾಡು! ಬೆಂಕಿ ಹಚ್ಚಿದ ಹುಚ್ಚ ಯಾವನೊ? ಉರಿದ ಹೊಗೆ ಕಪ್ಪಾಗಿ ಗಗನಕ್ಕೇರುತಿತ್ತು. ಗಾಳಿಯೊಡನೆ ಜ್ವಾಲೆ- ಹೊಗೆ ಹೆಡೆಯಂತಾಡುತಿತ್ತು. ಸುಂಟರ ಗಾಳಿಯೊಡನೆ ಅಗ್ನಿಯ ನರ್ತನ, ಭೂ ಊ ….. ಬೆಂಕಿಯ ಆರ್ಭಟ. ಹಸಿಯೋ ಒಣಗಿದ್ದೊ, ಬಿದಿರ ಮೆಳೆ, ಗಾಂಧಿ ಗುಲಾಬಿ ಎಲ್ಲಾ ಒಂದಾಗಿ ದಹಿಸತೊಡಗಿತು. ಬಿದಿರ ಮೆಳೆಯ ಮೇಲೆ ಅಗ್ನಿಗೆ ಕೋಪವೋ ಎನ್ನುವಂತೆ ಲಟಾಪಟಾ ಸಿಡಿಯುತ್ತಾ ಉರಿಯುವಾಗ ನಮ್ಮ ಸ್ಥಿತಿ ಹೇಗಿದ್ದಿರಬಹುದು? ನಾವೆಲ್ಲರೂ ಅಂಗಳದಲ್ಲಿ ನಿಂತು ದೂರದ ಆ ಬೆಂಕಿಯನ್ನು ನೋಡುತ್ತಿದ್ದೆವು. ಸುಟ್ಟ ವಾಸನೆ, ಉದುರುವ ಬೂದಿ ದಟ್ಟ ಹೊಗೆ. ಗಾಳಿಗೆ ಗಾಂಧಿ ಗುಲಾಬಿಯ ಬೀಜದ ಗೊಂಚಲು ಗುಂಪುಗುಂಪಾಗಿ ಮೇಲೆದ್ದು ಎಲ್ಲೆಲ್ಲೋ ಬೀಳುತ್ತಿತ್ತು. ಹಾಗೆ ಬಿದ್ದಲ್ಲೆಲ್ಲಾ ಬೆಂಕಿ. ನಮ್ಮದು ಚಡಪಡಿಕೆ. ಮನೆಯಲ್ಲಿ ನೀರಿಲ್ಲ. ಅಪ್ಪನ ಆರೋಗ್ಯ ಅಷ್ಟಕಷ್ಟೆ. ಅವ್ವನ ಕೈ ಮುಂದಾಗಬೇಕು. ಅಕ್ಕ ನಾನು ಏನು ಮಾಡಬಹುದು? ನಮ್ಮ ಹುಲ್ಲಿನ ಮನೆಗೆ ಕಿಡಿ ಬಿದ್ದರೆ ಏನು ಮಾಡುವುದು? ಬೆಂಕಿ ಹಿಡಿದರೆ ಐದು ಹತ್ತು ನಿಮಿಷದಲ್ಲಿ ಭಸ್ಮವಾಗುತ್ತದೆ. ಬೆಂಕಿ ಮನೆಯ ಹತ್ತಿರ ಹತ್ತಿರ ಬರುತ್ತಿದೆ. ಮನೆಯ ವಸ್ತುಗಳನ್ನು ಎಳೆದು ತಂದು ಅಂಗಳಕ್ಕೆ ಹಾಕುವುದಾ? ಅಗ್ನಿ ತೇರಿನಂತೆ ಕುಣಿಯುತ್ತಿರುವಾಗ ಯಾವ ಹಸಿ ಕೊಂಬೆಯಿಂದ ಹೊಡೆದು ನಂದಿಸಲು ಸಾಧ್ಯ? ಯಾರನ್ನೂ ಕೂಗಿ ಕರೆಯುವುದು? ಅಗ್ನಿಯ ಆರ್ಭಟದಲ್ಲಿ ನರಪಿಳ್ಳೆಯ ಧ್ವನಿ ಎಷ್ಟರದು? ಅಪ್ಪ ಹರಕೆ ಹೇಳಿಕೊಳ್ಳುವಷ್ಟು ಪುರುಸೊತ್ತಿಲ್ಲ. ಹರಕೆ ಕಟ್ಟುವುದಾದರೂ ಎಲ್ಲಿ? ಸೂರಿಗೆ ಹರಕೆ ಕಟ್ಟುವುದಾ? ಸ್ವಲ್ಪ ಹೊತ್ತಲ್ಲಿ ಸುಟ್ಟು ಹೋಗಲಿರುವ ಸೂರಿಗೆ ಹರಕೆ ಕಟ್ಟಿ ಪ್ರಯೋಜನವೇನು? ಅಪ್ಪ ಹರಕೆ ಕಟ್ಟದೆ ಒಂದು ಹಿಡಿ ಮಣ್ಣನ್ನು ಎತ್ತಿ ಗಾಳಿಗೆ ತೂರಿತು! ಗಾಳಿ ಬೀಸುವ ದಿಕ್ಕು ಎತ್ತ ಕಡೆಗಿದೆ ಎಂಬ ಪರೀಕ್ಷೆ. ಅಬ್ಬಾ! ಗಾಳಿಯ ದಿಕ್ಕು ಇತ್ತ ಕಡೆಯಿಂದ ಅತ್ತ ಕಡೆಗೆ ಎಂದು ಗೊತ್ತಾದ ಮೇಲೆ ನಮಗೆಲ್ಲ ಜೀವ ಬಂದಂತಾಯಿತು. ಬೆಂಕಿ ಗಾಳಿಯ ದಿಕ್ಕನ್ನು ಅನುಸರಿಸಿ ಉರಿಯುತ್ತದೆ. ಬೆಂಕಿಯ ಓಟ ಇನ್ನೊಂದೆಡೆಗೆ ತಿರುಗಿತು.

ಹಾಗೆ ತಿರುಗಿದ ಬೆಂಕಿ ಅತ್ತ ಅತ್ತಲೇ ಉರಿಯುತ್ತಾ ಸಾಗಿತು. ನೂರಾರು ಎಕರೆ ಕಾಡು ದಹಿಸಿಹೋಯಿತು. ಆ ಕಾಡಿನ ಒತ್ತಿನಲ್ಲಿದ್ದ ನಮ್ಮ ಮನೆ ಪವಾಡವೋ ಎನ್ನುವಂತೆ ಉಳಿದುಕೊಂಡಿತು.

ಮರುದಿನದಿಂದ ಆ ಕಾಡು ಸ್ಮಶಾನ ಬಯಲಿನಂತಾಯಿತು. ಹಕ್ಕಿಗಳ ಹಾರಾಟವಿಲ್ಲ. ಕಾಡುಕೋಳಿಗಳ ಕೂಗಾಟವಿಲ್ಲ. ಜಿಂಕೆ, ಕಡವೆಗಳಾಗಲಿ, ಆನೆ, ಹಂದಿಗಳಾಗಲಿ ಓಡಾಡುತ್ತಿಲ್ಲ. ಹಸಿರು ಮನೆಯನ್ನು ಹುಡುಕಿ ಎಲ್ಲಿ ಹೋದವೋ. ದಟ್ಟವಾಗಿದ್ದ ಕಾಡು ಸುಟ್ಟು ಹೋದ ಮೇಲೆ ಬಯಲೋ ಬಯಲು. ಹಳ್ಳ ಕೊಳ್ಳದ ನೀರು ಬತ್ತಿ ಹೋಯಿತು. ಜನ ಮತ್ತು ದನ ನೀರನ್ನು ಹುಡುಕುತ್ತಾ ಎಲ್ಲಿಂದೆಲ್ಲಿಗೋ ಹೋಗುವ ಸ್ಥಿತಿ ಬಂತು. ಬಟ್ಟೆಯ ಗಂಟನ್ನು ಹೊತ್ತು ದೂರದ ಹಳ್ಳಕ್ಕೆ ಹೋಗಿ ಒಗೆದು ತರುತ್ತಿದ್ದೆವು. ಸಾರಿಗಾಗಿ ಕೆಸುವಿನ ಚಿಗುರನ್ನು ಆ ಹಳ್ಳದಿಂದ ತಂದುದು ನೆನಪಿದೆ.

ಮಳೆ ಬಂದ ಮರುದಿನ ಬೆಂಕಿ ಬಿದ್ದ ಕಾಡಿನಲ್ಲಿ ಸುತ್ತಾಡಬೇಕು. ಅದೊಂದು ವಿಶೇಷ ಅನುಭವ. ಕಾಡೆಲ್ಲಾ ಗಮ್ ಎನ್ನು ಬೂದಿ, ಮಸಿ ಮತ್ತು ಮಣ್ಣಿನ ವಾಸನೆ. ಓ! ಅಲ್ಲೊಂದು ಕಡೆ ಗುಳಿ ತೋಡಿ ಮುಚ್ಚಿದ ಮಣ್ಣಿನ ರಾಶಿ! ಏನದು? ಫೈರ್ ವಾಚ್‌ಮನ್ ಒಮ್ಮೆ ಬೆಂಕಿ ನಂದಿಸುತ್ತಿರುವಾಗ ಹೊಗೆ ತುಂಬಿದ ದಾರಿಯಲ್ಲಿ ನಿಂತುಕೊಂಡಿದ್ದ ಕಾಡಾನೆಗೆ ಬಲಿಯಾಗಿದ್ದ. ಅವನನ್ನು ಹೊತ್ತು ಹಾಕಿದ ಆ ಸ್ಥಳವೇ ಕೆಂಚನ ಸಮಾಧಿ ಸ್ಥಳ. ನಮಗೆ ತಿನ್ನಲು ಆನೆ ಕ್ಯಾಂಪಿನ ಬೆಂದ ಹುರುಳಿ ಕಾಳನ್ನು ಕೊಡುತ್ತಿದ್ದಾತ. ಆತನ ಮಕ್ಕಳು ಆನೆ ಮಾವುತರಾಗಿ ನಮ್ಮನ್ನು ಪ್ರೀತಿಯಿಂದ ಕಂಡವರು. ನಮ್ಮ ಮನೆಯನ್ನು ಕಟ್ಟಿಕೊಟ್ಟವರು.

ಜ್ವರ ಬಂದ ಕಾಲದಲ್ಲಿ

ಅಪ್ಪ ಅದೆಷ್ಟೋ ವರ್ಷಗಳವರೆಗೆ ಹಾಸಿಗೆ ಹಿಡಿದಿತ್ತು. ಅವ್ವನಿಗೆ ಸೊಂಟ ನೋವು ಬಿಟ್ಟರೆ ಬೇರೆ ಕಾಯಿಲೆ ವಿರಳಾತಿ ವಿರಳ. ಅಕ್ಕ ಸೆಣಕಲು ಶರೀರದವಳು. ಶೀತ, ಕೆಮ್ಮು, ಜ್ವರ ಬಂದುದು ಗೊತ್ತೇ ಇಲ್ಲ. ಆದರೆ ನನ್ನದು ಹಾಗಲ್ಲ. ಶೀತ, ಕೆಮ್ಮು, ಗಂಟಲು ನೋವು, ಜ್ವರ, ತಲೆನೋವು, ಅಷ್ಟೇ ಅಲ್ಲ, ಮೂಗಿನಲ್ಲಿ ರಕ್ತಸ್ರಾವ! ವರ್ಷದಲ್ಲಿ ಒಂದೆರಡು ಬಾರಿ ಏನಾದರೊಂದು ಇದ್ದೇ ಇರುತಿತ್ತು.

ಕೆಲವೊಮ್ಮೆ ಶಾಲೆಯಲ್ಲೆ ಮೈಕೈ ನೋವು ಶುರುವಾಗಿ ಜ್ವರದಿಂದ ನರಳಿದ್ದೇನೆ. ಜ್ವರ ಬಂತೆಂದರೆ ಮಧ್ಯಾಹ್ನ ಊಟ ಬೇಡವೇ ಬೇಡ. ಹಾಗೆಂದು ರಜೆ ಕೇಳಿ ಬೇಗನೆ ಮನೆಗೆ ಬಂದುದಾಗಲಿ, ಯಾಕಪ್ಪಾ ಸಪ್ಪೆಗಿದ್ದೀಯಾ ಅಂತ ಕೇಳಿದ್ದಾಗಲಿ ಇಲ್ಲ. ಸಂಜೆವರೆಗೂ ನರಳಿ, ಶಾಲೆ ಬಿಟ್ಟ ಬಳಿಕ ನಡಿಗೆ ಆರಂಭವಾಯಿತೆಂದರೆ, ಕಾಡು ಹಾದಿಯ ಸವೆಸಿ ಮನೆ ತಲುಪುವವರೆಗೆ ಅಕ್ಕನ ಗೋಳು. ನನ್ನ ಹೊರೆ ಪೂರ್ತಿ ಅವಳ ಹೆಗಲಿಗೆ. ಹಿಂದೆಲ್ಲಾ ಮನೆ ತಲುಪಿದೊಡನೆ ಕೈಕಾಲು ತೊಳೆದು ಏನಾದರೂ ತಿಂದು ವಿರಮಿಸುತ್ತಿದ್ದೆವು. ನಾನಂತೂ ಹಲಸಿನ ಮರದೆಡೆಗೋ ಮಾವಿನ ಮರದೆಡೆಗೊ ಓಡಿ ಮರಹತ್ತಿ ಹಣ್ಣಿನ ಬೇಟೆಯಾಡುತ್ತಿದ್ದೆ. ಜ್ವರ ಬಂದಾಗ? ಕೈಕಾಲು ತೊಳೆದ ಶಾಸ್ತ್ರವೂ ಬೇಡ ಏನೂ ಬೇಡ. ಒಮ್ಮೆ ಮಲಗಿದರೆ ಸಾಕು ಎಂದು ಮಲಗಿ ಬಿಡುತ್ತಿದ್ದೆ. ನಂತರ ಬಲವಂತಕ್ಕೆ ಅನ್ನಕ್ಕೆ ಹಾಲು ಹಾಕಿಕೊಂಡು ಒಂದೆರಡು ಬಾಯಿ ಊಟ ಮಾಡಿ ಮಲಗಿದ್ದೇನೆ. ನನಗೆ ಜ್ವರ ಎಂದು ತಿಳಿದ ಅಪ್ಪ ಮೆಲ್ಲನೆ ಎದ್ದು ಕಾಸನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಸೂರಿಗೆ ಹರಕೆ ಕಟ್ಟುತ್ತಿತ್ತು. ಏನೇ ಕಷ್ಟ ಬಂದರೂ ಅಪ್ಪ ಮಾಡುವ ಮೊದಲ ಕೆಲಸವೇ ಅದು. ಹಾಗಾಗಿ ಸೂರಿನ ಮರ ಬಿಳಿಬಟ್ಟೆಯ ಪಟ್ಟಿಯಿಂದ ಕಂಗೊಳಿಸುತ್ತಿತ್ತು. ಅವ್ವ ಹಣೆ ಮುಟ್ಟಿ ನೋಡಿ ಬೆಂಕಿ ಜರ ಎಂದು ಪರದಾಡುತ್ತಿದ್ದಳು. ಆಸ್ಪತ್ರೆಯ ಮುಖ ನೋಡುತ್ತಿದ್ದುದು ಅತ್ಯಂತ ಕೊನೆಯಲ್ಲಿ. ಅಂದರೆ ನಾಡು ಮದ್ದು ಕೆಂದದಿದ್ದರೆ ಮತ್ತು ಹರಕೆ ಕೈಕೊಟ್ಟಾಗ ! ಅದಕ್ಕೆ ಕಾರಣ ಇಲ್ಲದಿಲ್ಲ. ಆಸ್ಪತ್ರೆ ಇರುವುದು ಬಹುದೂರದಲ್ಲಿ. ವಾಹನಗಳಿಲ್ಲ. ನಡಿಗೆಯಲ್ಲದೆ ಬೇರೆ ಗತಿಯಿಲ್ಲ. ರೋಗಿ ನಡೆಯಬಲ್ಲನೇ? ಹೊರುವುದೆ? ಹೊರುವುದಾದರೂ ಯಾರು?

ನನ್ನ ಜ್ವರ ವಿಪರೀತಕ್ಕೆ ಹೋಯಿತು. ಹೆಜ್ಜೆ ಎತ್ತಿಟ್ಟರೂ ಮಿದುಳೇ ಅಲುಗುತಿದೆಯೋ ಎನ್ನುವಷ್ಟು ತಲೆ ಸಿಡಿತ. ಕಣ್ಣು ರೆಪ್ಪೆಗೆ ತೆರೆದು ಕೊಳ್ಳಲಾಗದ ಶಕ್ತಿಹೀನತೆ. ಮಲಗಿದಲ್ಲೇ ತಲೆ ಸುತ್ತು! ತಿರುಗಣೆಯಲ್ಲಿ ತಿರುಗಿದಂತೆ! ಎಂತದೊ ಮೈ ಮೇಲೆ ಬಿದ್ದಂತೆ, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದೇನೆ ಎನ್ನುವಂತೆ ಭ್ರಮೆ. ಗುಂಯ್ ಎನ್ನುವ ಸಹಿಸಲಾಗದ ಸದ್ದು. ಆ ಸದ್ದಿನ ಆಚೆ ಮತ್ತೇನೊ ಕೇಳದಂಥಾ ಸ್ಥಿತಿ. ಚಡಪಡಿಕೆ, ಕಿರುಚಬೇಕೆನ್ನುವ ಪ್ರಯತ್ನ. ಆದರೆ ಧ್ವನಿ ಹೊರಡದು. ತಲೆಗೇರಿದ ಜ್ವರ. ಹಣೆಗೆ ತಣ್ಣೀರಿನ ಪಟ್ಟಿ ಹಾಕಬೇಕೆಂದು ಮನೆಯವರಿಗೆ ತಿಳಿಯದು. ಜ್ವರ ಬಂದವರು ನೀರು ಕುಡಿಯಲೇ ಬಾರದು ಎಂಬ ತಪ್ಪು ಅಭಿಪ್ರಾಯ ಬೇರೆ! ಮೈಗೆ ಏನೋ ಸೋಂಕಿದೆ ಹಾಳಾದ ದೆವ್ವ ಎಂಬ ಮತ್ತೊಂದು ಭ್ರಮೆ! ಕಠಿಣ ದೇವರಿಗೆ ಮತ್ತೊಂದು ಹರಕೆ. ಇದ್ದ ಕೋಳಿಗಳೆಲ್ಲಾ ಗುಳಿಗ, ಚವುಂಡಿ ಪಾಷಾಣ ಮೂರ್ತಿ ದೇವರಿಗೆ ಹರಕೆ ಹೇಳಿ ಕೊಂಡಾಯಿತು. ಆದರೆ ನನ್ನ ಜ್ವರ ಇಳಿಯಿತಾ? ಬುಕ್ಕಲು ದಮ್ಮಿಲ್ಲ. ಉಚ್ಚೆಯೋ ಕೆನ್ನೀರು! ಇನ್ನು ಹೀಗಿದ್ದರೆ ಆಗದು. ಆಸ್ಪತ್ರೆಗೆ ಹೋಗುವುದೇ ಸರಿ ಎಂದು ಅವ್ವ ತೀರ್ಮಾನಿಸಿತು.

ನನ್ನನ್ನು ಹೊರಡಿಸಿ ಆಯಿತು. ಆದರೆ ನನಗೆ ನಿಲ್ಲಲು ತ್ರಾಣವಿಲ್ಲ. ನಿಲ್ಲಲೂ ಆಗುತ್ತಿಲ್ಲ ಅಂದ ಮೇಲೆ ನಡೆಯುವುದಾದರೂ ಹೇಗೆ? ನಾವು ಹೊರಟದ್ದು ಗೋಣಿಕೊಪ್ಪದ ಆಸ್ಪತ್ರೆಗೆ. ನಮ್ಮ ನಿತ್ಯದ ಶಾಲೆಯ ದಾರಿಗಾಗಿಯೇ. ಅದೇ ದಾರಿಯಲ್ಲಿ ನಾನು ಹಾಡುತ್ತಾ ಹಾರುತ್ತಾ ಓಡುತ್ತಾ ಹೋಗುತ್ತಿದ್ದೆ. ಅದೇ ದಾರಿ ನನ್ನ ನಡಿಗೆಯನ್ನು ತಡೆದಿದೆ. ಒಂದೆರಡು ಗಂಟೆ ನಡೆಯಬೇಕು. ಇರುವ ಒಂದೇ ಒಂದು ಬಸ್ಸು. ಆ ಬಸ್ಸು ದಾಟಿತೆಂದರೆ ಬದಲಿ ವ್ಯವಸ್ಥೆಯಿಲ್ಲ. ನನ್ನ ಆ ಸ್ಥಿತಿಯಲ್ಲಿ ಬಸ್ಸು ಸಿಗಲಾರದು. ಬಸ್ಸು ಹತ್ತುವುದು ಆಗುವ ಹೋಗುವ ಮಾತಾ? ನಿಂತು ದಾರಿಯನ್ನು ನೋಡುವುದೇ ಆಯಿತು.

ನನ್ನವ್ವ ಗಟ್ಟಿ. ನಡೆಯಲಾಗದ ನನ್ನನ್ನ ಎತ್ತಿ ಸೊಂಟದಲ್ಲಿ ಕೂರಿಸಿಕೊಂಡಳು. ನನ್ನ ಕಾಲು ನೆಲ ಮುಟ್ಟುತ್ತಿತ್ತು. ಅಷ್ಟು ದೊಡ್ಡದಾದ ನನ್ನನ್ನು ಆಕೆ ಸೊಂಟದಲ್ಲಿ ಕೂರಿಸಿಕೊಂಡು ನಡೆಯುವಾಗ ನಾನು ಅತ್ತುಬಿಟ್ಟೆ. ಛೇ! ಅವ್ವನಿಗೆ ಕಷ್ಟ ಕೊಟ್ಟೆನಲ್ಲಾ. ಅಪ್ಪ ಹಾಸಿಗೆ ಹಿಡಿದು ನರಳುತ್ತಿದೆ. ಇಲ್ಲದಿದ್ದರೆ ಹೆಗಲ ಮೇಲೆ ಹೊತ್ತುಕೊಂಡು ಸಂತೆ ಸಂತೆಗೆ ತಿರುಗಾಡಿಸುತ್ತಿದ್ದ ಅಪ್ಪ ನನ್ನನ್ನು ಸುಮ್ಮನೆ ಬಿಡುತ್ತಿತ್ತೆ? ಅಕ್ಕನಿಗೆ ನನ್ನನ್ನು ಹೊರುವಷ್ಟು ತಾಕತ್ತು ಇಲ್ಲವೇ ಇಲ್ಲ. ಅವ್ವ ನನ್ನ ಮೇಲೆ ಇಟ್ಟ ಆಸೆ. ನಾನು ಬದುಕಬೇಕು, ಬದುಕಿ ಏನೇನೋ ಆಗಬೇಕೆಂಬ ಕನಸು. ಎಲ್ಲ ತಾಯಂದಿರೂ ತಮ್ಮ ಮಕ್ಕಳ ಮೇಲೆ ಕಾಣುವ ಕನಸಿನಂತೆ. ಈ ಹಿಂದೆ ನಾಲ್ಕು ಮಕ್ಕಳನ್ನು ಕಳೆದುಕೊಂಡಾಗಿತ್ತು. ಈಗ ನನ್ನನ್ನು ಕಳೆದುಕೊಳ್ಳಬಾರದೆಂಬ ಹಠ!

ನಾನು ಅವ್ವನ ಸೊಂಟದಲ್ಲಿ ಕುಳಿತು ‘ಅವ್ವಾ, ನಿಂಗೆ ಕಷ್ಟ. ನನ್ನನ್ನು ಇಳಿಸವ್ವಾ’ ಎಂದು ಕೇಳಿಕೊಂಡೆ. ಅವ್ವ ನನ್ನನ್ನು ಇಳಿಸಿದಳು. ನಾನು ಇಳಿದುದಲ್ಲ. ಸೊಂಟದಿಂದ ಜಾರಿದೆ. ಜಾರಿ ನೆಲದಲ್ಲಿ ಕುಕ್ಕರು ಕಾಲಿನಲ್ಲಿ ಕುಳಿತೆ. ಎದ್ದೇಳಲು ಆಗುತ್ತಿಲ್ಲ. ನಡೆಯಲೂ ಆಗುತ್ತಿಲ್ಲ. ಕಾಡಿನ ನಡುವೆ ನಾವಿಬ್ಬರೇ. ಅವ್ವ ಏನು ಮಾಡಬೇಕು? ನಾನು ಅವ್ವನನ್ನು ಏನೆಂದು ಸಮಾಧಾನ ಪಡಿಸಬೇಕು? ಕುರುಡ ಮತ್ತು ಕುಂಟರಂತಾದೆವು. ಯಾರನ್ನಾದರೂ ಕರೆಯೋಣವೆಂದರೆ ಆ ಕಾಡಿನೊಳಗೆ ಯಾರಿದ್ದಾರೆ? ಅವ್ವ ಅಳಲಿಲ್ಲ. ಯಾರನ್ನೂ ಬಯ್ದುಕೊಂಡಿಲ್ಲ. ಅದು ಕಾಡಾನೆಗಳು ಮೇವು ಮುಗಿಸಿ ಹಿಂತಿರುಗುವ ದಾರಿ ಹಾಗೆಂದು ಅವ್ವ ಹೆದರಿಕೊಳ್ಳಲಿಲ್ಲ. ಒಂದೆಡೆ ಕಾಟಿಬೆಟ್ಟದ ಜೋಡು ಕಟ್ಟೆ ಕೆರೆ. ಇನ್ನೊಂದೆಡೆ ತೇಗದ ಮರಗಳ ತೋಪು. ಅವ್ವ ನನ್ನನ್ನು ಮತ್ತೆ ಎತ್ತಿ ಸೊಂಟದಲ್ಲಿ ಕೂರಿಸಿಕೊಂಡಳು. ನಾನು ಕಾಲನ್ನು ಕೊಕ್ಕೆ ಮಾಡಿಕೊಂಡೆ. ಹಾಗೆ ಹೆಚ್ಚು ಹೊತ್ತು ಕೊಕ್ಕೆ ಮಾಡಿಕೊಳ್ಳಲಾಗುತ್ತಿಲ್ಲ. ಕಾಲು ಬಚ್ಚುತ್ತಿತ್ತು. ಅವ್ವನನ್ನು ತಬ್ಬಿಕೊಂಡೆ. ಅವ್ವನ ಹೊಡೆದುಕೊಳ್ಳುವ ನರ, ಡವಗುಟ್ಟುವ ಎದೆ, ಪ್ರಯಾಸದ ನಡಿಗೆ ಒಬ್ಬ ಮಾತ್ರ ನಡೆದಾಡುವಷ್ಟೇ ಅಗಲದ ಕಾಡು ಹಾದಿಯಲ್ಲಿ ಅವ್ವನ ಹೆಜ್ಜೆ ಮೂಡಿತ್ತು, ಇಬ್ಬರ ಭಾರದೊಂದಿಗೆ! ನಮ್ಮ ಆ ಕಾಡಿನ ಹಾದಿ ಗದ್ದೆ ಬಯಲೊಂದರಲ್ಲಿ ಕೊನೆಯಾಯಿತು.

ಅದು ಭತ್ತದ ಬೆಳೆ ಹಣ್ಣಾಗಿದ್ದ ಕಾಲ. ಗದ್ದೆ ಕಾವಲುಗಾರರೊಬ್ಬರು ಕಾವಲು ಮನೆಯಿಂದ ಎದ್ದು ಬಂದರು. ಅವರು ನಮ್ಮ ಪರಿಚಯದವರು. ಏನು, ಎಂಥ ಎಂದು ಕೇಳಿದರು. ವಿಷಯ ತಿಳಿದು ಈಗ ಬಂದೆ ಎಂದು ಅವರ ಮನೆಗೆ ಓಡಿದರು. ಬಟ್ಟೆ ಬದಲಿಸಿ ಬಂದರು. ನನ್ನನ್ನು ಹೆಗಲು ಮೇಲೆ ಕೂರಿಸಿಕೊಂಡರು. ನಡಿಗೆ ಆರಂಭವಾಯಿತು. ಅವರು ನಡೆಯುತ್ತಿದ್ದರು, ನಿಜ. ಆದರೆ ಆಯಾಸವಾಗುತ್ತಿದ್ದುದು ನನಗೆ! ನನ್ನ ಕತ್ತು ಮತ್ತು ಸೊಂಟ ನೋಯತೊಡಗಿತು. ನನಗೆ ನಡೆಯಲು ಆಗುವುದಿಲ್ಲ. ಹೋಗಲಿ, ಹೆಗಲ ಮೇಲೆ ಕುಳಿತುಕೊಂಡರೂ ಹಿಂಸೆ. ಇಳಿಸಿ ಎನ್ನಲೆ? ಅಥವಾ ಹೆಗಲಲ್ಲೇ ಕುಳಿತು ಹಿಂಸೆ ಅನುಭವಿಸಲೇ? ಅಂತೂ ಇಂತೂ ಪೊನ್ನಪ್ಪಸಂತೆ ತಲುಪಿದೆವು. ಸ್ವಲ್ಪ ಹೊತ್ತಲ್ಲಿ ಬಸ್ಸು ಬಂತು. ಹತ್ತಿ ಗೋಣಿಕೊಪ್ಪಕ್ಕೆ ಹೋದೆವು. ಅಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ನನ್ನ ನಾಡಿ ಪರೀಕ್ಷಿಸಿದರು. ಕಣ್ಣು ಬಿಡಿಸಿ ನೋಡಿದರು. ನಾಲಗೆ ನೋಡಿದರು. ಕೆಂಪುಬಣ್ಣದ ನೀರು ಮದ್ದು ಮತ್ತು ಗುಳಿಗೆ ನೀಡಿದರು. ಅಲ್ಲೇ ಒಂದು ಡೋಸ್ ಕುಡಿಸಿದರು. ಆ ನೀರು ಮದ್ದು ಕೆಂಪಾಗಿದ್ದು ನೋಡಲು ಚೆಂದ. ಆದರೆ ಕುಡಿಯುವಾಗ ಮಾತ್ರ ಅಯ್ಯಪ್ಪಾ ಮತ್ತೊಮ್ಮೆ ಹೇಗೆ ಕುಡಿಯಲಿ ಎಂಬಷ್ಟು ಕೆಟ್ಟ ರುಚಿ. ಆದರೆ ಅದರ ಪರಿಣಾಮ ಮಾತ್ರ ಅದ್ಭುತ.

ಹೀಗೆ ಮದ್ದು ಪಡೆದು ಬಸ್ ಹತ್ತಿದೆವು. ಬಸ್ಸಿಳಿದು ಮತ್ತೆ ನನ್ನನ್ನು ಹೊತ್ತುಕೊಂಡರು. ಮನೆಗೆ ತಂದು ಬಿಟ್ಟರು. ದಿನದಿಂದ ದಿನಕ್ಕೆ ನಾನು ಚೇತರಿಸಿಕೊಳ್ಳತೊಡಗಿದೆ. ಆದರೆ ತಲೆ ನೋವು ಮಾತ್ರ ಹಾಗೇ ಇತ್ತು. ಅವ್ವ ಈರುಳ್ಳಿಯನ್ನು ಬೂದಿಯೊಡನೆ ಸವೆದು ಹಣೆಗೆ ಹಚ್ಚಿದಳು. ತಲೆ ನೋವು ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲಿ ಮೂಗಿನಲ್ಲಿ ರಕ್ತಸ್ರಾವವಾಗತೊಡಗಿತು. ಮೂಗು ತೊಳೆದೆ. ತೊಳೆದ ನೀರು ಬೋಗುಣಿ ತುಂಬಿತು. ರಕ್ತದಿಂದ ಕೆಂಪಾದ ನೀರು ನೋಡಿ ತಲೆ ಸುತ್ತಿ ಬಿದ್ದೆ. ಹೀಗೆ ಎರಡು ದಿನಕ್ಕೆ ಒಮ್ಮೆಯಾದರೂ ರಕ್ತ ಸ್ರಾವವಾಗುತ್ತಿತ್ತು. ಅವ್ವ ಅದಕ್ಕೆ ಬಟ್ಟೆಯ ದಿಮ್ಮಿ ಮಾಡಿ ತುರುಕಿದಳು. ಸದ್ಯ ಒಂದೇ ಹೊಳ್ಳೆಯಲ್ಲಿ ರಕ್ತ ಸ್ರಾವವಾಗುತ್ತಿದ್ದುದರಿಂದ ಒಂದೇ ಹೊಳ್ಳೆಗೆ ದಿಮ್ಮಿ ಹಾಕಲಾಗುತ್ತಿತ್ತು. ಒಂದು ವೇಳೆ ಎರಡೂ ಹೊಳ್ಳೆಯಲ್ಲಿ ಸ್ರಾವವಾಗಿ ಎರಡೂ ಕಡೆ ದಿಮ್ಮಿ ಹಾಕಿದ್ದರೆ ಹರೋ ಹರ!

ಜ್ವರ ಇಳಿಯಿತು. ರಕ್ತಸ್ರಾವ ನಿಂತಿತು. ಜ್ವರ ಬಂದ ಬಾಯಿಗೆ ಏನೇನೋ ತಿನ್ನುವಾಸೆ ! ಅವ್ವಾ ಅದು ಮಾಡಿಕೊಡು, ಅವ್ವಾ ಇದು ಮಾಡಿಕೊಡು ಅಂತ ಪೀಡಿಸತೊಡಗಿದೆ. ಒಮ್ಮೆಯಂತೂ ಮಾಂಸದ ಅಡುಗೆಗಾಗಿ ಪೀಡಿಸಿದೆ. ಅವ್ವ ಮಾಡಿ ಬಡಿಸಿದಳು. ಆದರೇನು? ಒಂದೇ ಒಂದು ತುತ್ತು ತಿನ್ನಲಾಗಲಿಲ್ಲ. ಜ್ವರ ಬಂದಲ್ಲಿಂದ ನಾನು ಯಾವುದೇ ಗಟ್ಟಿ ವಸ್ತು ತಿಂದೇ ಇಲ್ಲ. ಈಗ ತಿನ್ನುತ್ತೇನೆಂದು ಬಾಯಿಗೆ ಹಾಕಿದರೆ ಜಗಿಯಲು ಆಗುತ್ತಿಲ್ಲ. ಹಲ್ಲುಗಳೆಲ್ಲಾ ಕಸಕಸ ಅಲುಗ ತೊಡಗಿದವು. ಕಚ್ಚಿ ಹಿಡಿದುಕೊಳ್ಳಲೂ ಆಗದಷ್ಟು ಸಡಿಲವಾಗಿದ್ದವು. ಎಲ್ಲಾ ಹಲ್ಲುಗಳನ್ನು ಹಿಡಿದು ಅಲುಗಿಸಿದೆ. ಈಗಲೋ ಆಗಲೋ ಕಳಚಿ ಬೀಳುವಷ್ಟು ಸಡಿಲವಾಗಿದ್ದವು. ಕಿತ್ತಿದ್ದರೆ ಎಲ್ಲಾ ಹಲ್ಲುಗಳು ಕೈಗೆ ಬರುತ್ತಿದ್ದವು. ಹಾಲು ಹಲ್ಲುಗಳನ್ನು ಕಿತ್ತು ನಂತರ ಬಂದ ಹೊಸ ಹಲ್ಲುಗಳಿವು. ಈಗ ಮತ್ತೆ ಕಿತ್ತರೆ ತಿರುಗಿ ಹುಟ್ಟಲಾರವು. ಎಲ್ಲಾದರೂ ಕಿತ್ತುಗಿತ್ತು ಬುಟ್ಟಿಯಾ ಅಂತ ಅವ್ವ ಎಚ್ಚರ ಹೇಳಿದಳು. ನಾನು ಕೀಳುವ ಗೋಜಿಗೆ ಹೋಗಲಿಲ್ಲ. ಯಾವ ಗಟ್ಟಿ ವಸ್ತುಗಳನ್ನು ಜಗಿಯಲಿಲ್ಲ. ಮೆದು ಆಹಾರವನ್ನೇ ಸೇವಿಸತೊಡಗಿದೆ. ಕ್ರಮೇಣ ಹಲ್ಲುಗಳು ಗಟ್ಟಿಯಾದವು. ನಂತರ ರೊಟ್ಟಿ ಜಗಿಯುವಷ್ಟು ಗಟ್ಟಿಯಾಗಿ ಹಲ್ಲುಗಳು ಉಳಿದುಕೊಂಡವು.

ನಿತ್ರಾಣಗೊಂಡ ನಾನು ಮನೆಯಲ್ಲೆ ಇದ್ದೆ. ಶಾಲೆಗೆ ಹೋಗದೆ ಎಷ್ಟು ದಿನಗಳಾದವೋ ಏನೋ? ಅಕ್ಕ ನಿತ್ಯ ಶಾಲೆಗೆ ಹೋಗಿ ಬರುತ್ತಿದ್ದಳು. ಮನೆಯಲ್ಲಿ ಕುಳಿತುಕುಳಿತು ಬೇಸರ ಹಿಡಿದಿತ್ತು. ನಾಯಿಗಳೊಡನೆ ಮತ್ತು ಕರುವಿನೊಡನೆ ಆಡತೊಡಗಿದೆ. ನನ್ನ ಶಾಲೆ ದಾರಿಯ ಕಿತ್ತಲೆ ನೆನಪಾಗುತ್ತಿತ್ತು. ಅಕ್ಕ ಶಾಲೆಯಿಂದ ಬಂದೊಡನೆ ಆಕೆಯ ತಿಂಡಿ ಡಬ್ಬಿಯನ್ನು ತೆರೆಯುತ್ತಿದ್ದೆ. ಅವಳು ಅದರಲ್ಲಿ ನನಗೆ ತಿನ್ನಲು ಏನನ್ನಾದರೂ ತರುತ್ತಿದ್ದಳು. ಕಿತ್ತಲೆ ತೊಳೆ, ನೆಲ್ಲಿಕಾಯಿ, ಕಡ್ಡಿ ಮಿಠಾಯಿ, ಗೋಲಿ ಮಿಠಾಯಿ, ಹುರಿಗಡಲೆ ಹೀಗೇ ಇಂಥದ್ದೇ ಎಂದು ಹೇಳಲಾಗುವುದಿಲ್ಲ. ತಂದುಕೊಟ್ಟ ಆ ವಸ್ತುಗಳಿಂದ ಹೊಟ್ಟೆ ತುಂಬಬೇಕೆಂದೇನೂ ಇಲ್ಲ. ಆಕೆ ತಂದಿದ್ದಾಳೆ. ನಾನು ತಿಂದಿದ್ದೇನೆ. ಆಸೆಯಿಂದ ಕಾದು ಕುಳಿತ ನನಗೆ ಪ್ರೀತಿಯಿಂದ ತಂದು ಕೊಡುತ್ತಿದ್ದ ವಸ್ತುಗಳ ಬೆಲೆ ಕಟ್ಟಲಾಗದು.

‘ಕೋಳಿ ಮುಚ್ಚಿದ್ದೀರಾ’ ಅಂತ ಕೇಳುತ್ತಾರಾ?

ಕೋಳಿ ಮುಚ್ಚಿದ್ದೀರಾ’ ಅಂತ ಮನೆಗೆ ಬರುವ ಯಾರಾದರೂ ದೂರದಲ್ಲಿ ನಿಂತು ಕೇಳುತ್ತಾರೆಯೆ? ಸಾಮಾನ್ಯವಾಗಿ ನಾಯಿ ಕಟ್ಟಿದ್ದೀರಾ ಅಂತ ಕೇಳುವುದುಂಟು. ಆದರೆ ನಮ್ಮ ಮನೆಗೆ ಯಾರಾದರೂ ಬಂದರೆ ಓ ಅಲ್ಲಿ ನಿಂತು ‘ನಾಯಿ ಕಟ್ಟಿದ್ದೀರಾ, ಕೋಳಿ ಮುಚ್ಚಿದ್ದೀರಾ’ ಎಂದೇ ಕೇಳಿ ಮನೆಗೆ ಬರುತ್ತಿದ್ದರು.

ನಾವು ಬೆಕ್ಕು, ನಾಯಿ, ಕೋಳಿ, ಹಂದಿ ಮತ್ತು ದನ ಸಾಕಿದ್ದೇವೆ. ಆ ಒಂದೊಂದು ಪ್ರಾಣಿಗಳಲ್ಲಿ ಒಂದೊಂದು ವಿಶೇಷ ಗುಣಗಳನ್ನು ಕಂಡಿದ್ದೇವೆ. ಬಿಳಿ ಬಣ್ಣದ ಹೆಣ್ಣು ಬೆಕ್ಕು ದಶಕಕ್ಕಿಂತಲೂ ಹೆಚ್ಚು ಕಾಲ ನಮ್ಮೊಡನೆ ಬಾಳಿತ್ತು.  ಆದರೆ ಅದರ ಬಾಳಿನಲ್ಲಿ ಒಂದೇ ಒಂದು ಮರಿ ಹಾಕಲಿಲ್ಲ.  ನಮ್ಮ ಹಾಸಿಗೆಯಲ್ಲಿ ಅದಕ್ಕೊಂದು ಸ್ಥಾನ ಮೀಸಲು. ನಮ್ಮ ಕಿವಿಯನ್ನು ಚೀಪುತ್ತಾ ಗುರುಗುರು ಸದ್ದು ಮಾಡುತಿತ್ತು. ಕಿವಿಯನ್ನು ಚೀಪುವಾಗ ಅದರ ಬಿಸಿ ಉಸಿರು ಕಿವಿ ಕೆನ್ನೆಗೆಲ್ಲಾ ತಾಗುವಾಗ ಏನೋ ಒಂದು ರೀತಿಯ ಕಸಿವಿಸಿ. ಮನದೊಳಗೆ ಖುಷಿ ಖುಷಿ. ಒಮ್ಮೆ ಅದು ಬೇಟೆಯಾಡಲು ಹೊರಹೋಗಿದ್ದಾಗ ಬೇಟೆಗಾರನ ಗುಂಡೇಟಿಗೆ ಸಿಲುಕಿತ್ತು. ಆದರೆ ಅದು ರಕ್ತ ಸುರಿಸುತ್ತಾ ಓಡಿ ಬಂತು. ಹಲವು ವರ್ಷಗಳವರೆಗೆ ಬದುಕಿತ್ತು.

ನಾವು ಸಾಕಿದ ನಾಯಿಗಳು ಹಲವು. ಜೂಲಿ, ಟೈಗ, ಡಾಗ್, ಕಾಡು, ಕೆಂಜು ಮುಂತಾದವು. ಜೂಲಿ ಮರಿ ಹಾಕಿದ ನಾಲ್ಕಾರು ದಿನಗಳಲ್ಲಿ ಸತ್ತುಹೋಯಿತು. ಇನ್ನೂ ಕಣ್ಣು ಬಿಡದಿದ್ದ – ಆ ಮರಿಗಳಿಗೆ ನಾವು ಹಾಲುಣಿಸಿದೆವು. ಆದರೆ ಯಾವೊಂದು ಮರಿಯೂ ಬದುಕಲಿಲ್ಲ. ಟೈಗ(ಟೈಗರ್!) ನಾಯಿ ರಾತ್ರಿ ಬೊಗಳುತ್ತಾ ಕಾಡಿನೆಡೆಗೆ ಹೋದುದು ಬರಲೇ ಇಲ್ಲ. ಹುಲಿಯೋ ಕಿರುಬವೋ ಹಿಡಿದಿರಬೇಕು. ಒಂದೇ ನಾಯಿ ಇದ್ದರೆ ಅದಕ್ಕೆ ಧೈರ್ಯ ಕಡಿಮೆ. ಜೊತೆಗಿನ್ನೊಂದಿರಲೆಂದು ಮತ್ತೊಂದನ್ನು ಜೋಡಿ ಮಾಡುತ್ತಿದ್ದೆವು. ಹಾಗಾಗಿ ನಾವು ಒಮ್ಮೆಗೆ ಎರಡು ನಾಯಿಗಳನ್ನು ಸಾಕುತ್ತಿದ್ದೆವು. ಆ ನಾಯಿಗಳೋ ಆತ್ಮೀಯತೆಯ ಪ್ರತೀಕದಂತಿದ್ದವು. ನಾವು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದ ನಾಯಿಗಳು ನಮ್ಮನ್ನು ಕಂಡೊಡನೆ ಆಹಾ! ಅವುಗಳ ಸಂತೋಷವನ್ನು ನೋಡಿಯೇ ಅನುಭವಿಸಬೇಕು. ಓಡಿ ಬಂದು ಪಾದ ನೆಕ್ಕುವುದು, ಮೈಮೇಲೆ ನೆಗೆಯುವುದು, ಮನೆಗೆ ಓಡಿ ಹೋಗಿ ಕುಂಯ್‌ಗುಟ್ಟಿ ಸುದ್ದಿ ಮುಟ್ಟಿಸುವುದು, ಮತ್ತೆ ಓಡಿಬಂದು ಪಾದ ನೆಕ್ಕುವುದು, ಮನೆ ಸುತ್ತ ಓಡುವುದು ಬೊಗಳುವುದು – ಒಟ್ಟಿನಲ್ಲಿ ಆ ಸಂತಸವನ್ನು ಹೀಗೆಲ್ಲಾ ವ್ಯಕ್ತಮಾಡುತ್ತಿದ್ದವು. ನಾವು ಏನಾದರೂ ತಿನ್ನುವಾಗ ಅವುಗಳತ್ತ ಚೂರು ಎಸೆಯುತ್ತಿದ್ದವು.  ರೊಟ್ಟಿ ಚೂರೇ ಇರಲಿ, ಹಲಸಿನ ಬೀಜವೇ ಇರಲಿ ಎಸೆದಾಗ ಅದು ನೆಲಕ್ಕೆ ಬೀಳಲು ಬಿಡದೆ ಗಬಕ್ಕನೆ ಹಿಡಿದು ಗುಳುಂ ಮಾಡಿ ಬಾಲ ಅಲ್ಲಾಡಿಸುತ್ತಿದ್ದವು.

ಬಸರಿ ಮರನಮ್ಮ ದನಗಳ ಜೊತೆ ಮತ್ತೊಂದು ದನ ಸೇರುವಂತಿಲ್ಲ. ಕೋಳಿಗಳ ಜೊತೆ ಬೇರೊಂದು ಕೋಳಿಯನ್ನು ತಂದು ಬಿಡುವಂತಿಲ್ಲ. ಹಾಗೇನಾದರೂ ಕಂಡರೆ ಕೂಡಲೆ ಬೊಗಳುತ್ತಾ ದನವೇ ಇರಲಿ, ಕೋಳಿಯೇ ಇರಲಿ, ಬೇರೆ ಮಾಡುತ್ತಿದ್ದವು. ನಾಯಿಗಳಿಗೆ ನಮ್ಮವು ಪರರವು ಎಂದು ಹೇಗೆ ತಿಳಿಯುತ್ತಿತ್ತೋ ಗೊತ್ತಿಲ್ಲ. ನಾಯಿಗಳಿಗೆ ಬಣ್ಣದ ಕಲ್ಪನೆ ಇರಬಹುದೆ? ವಾಸನಾ ಬಲವೆ?  ಅಥವಾ ಲೆಕ್ಕಾಚಾರವೆ? ನಮ್ಮೊಡನೆ ಬೇರೆ ಮಕ್ಕಳು ಬಂದು ಆಟವಾಡಿದರೆ ನಾಯಿಗಳು ಸಹಿಸುತ್ತಿರಲಿಲ್ಲ. ನಾಯಿಗಳೆಂದರೆ ಹೀಗೇ – ಸ್ವಾಮಿ ನಿಷ್ಠೆಯ ದ್ಯೋತಕ ಅಲ್ವೆ?

ಕೋಳಿ ಮುಚ್ಚಿದ್ದೀರಾ ಅಂತ ಕೇಳಿಯೇ ಜನರು ಮನೆಗೆ ಬರುತ್ತಿದ್ದರೆಂದು ಹೇಳಿದ್ದೆ. ಅದಕ್ಕೆ ಕಾರಣ ಇಲ್ಲದಿಲ್ಲ. ಮನೆಯವರೇ ಆಗಲಿ, ಬೇರೆಯವರೇ ಆಗಲಿ ಅವರೆಲ್ಲರನ್ನು ನಮ್ಮ ಹುಂಜವೊಂದು  ಹಿಂದಿನಿಂದ ಬಂದು ಕುಕ್ಕುತಿತ್ತು. ಒಂದು ಕುಕ್ಕುವಿಕೆಗೆ ಗಾಯವೇ ಆಗಿರುತಿತ್ತು. ಕೋಳಿ ಬಂತೆಂದರೆ ಓಡಿದರೆ ಸರಿ. ಇಲ್ಲದಿದ್ದರೆ ಅದು ಕುಕ್ಕದೆ ಬಿಡುತ್ತಿರಲಿಲ್ಲ. ಅನ್ಯರನ್ನು ಕಂಡೊಡನೆ ಒಮ್ಮೆ ಕೊಕ್ಕರೇ ಕೋ ಅಂತ ಕೂಗಿ ರೆಕ್ಕೆ ಬಡಿದು ಹಾರಿ ಬರುತಿತ್ತು. ಹಾಗೆ ಹಾರಿ ಬಂದು ಹತ್ತಿರ ನಿಂತು ನೆಲಕ್ಕೆ ಒಂದೆರಡು ಬಾರಿ ಕುಕ್ಕುತಿತ್ತು. ನಂತರ ಮೈಮೇಲೆ ಎರಗುತಿತ್ತು. ಹೆಂಗಸರು ಮಕ್ಕಳು ಕಿರುಚಿಕೊಂಡು ಓಡಿ ಮನೆ ನುಗ್ಗುತ್ತಿದ್ದರು. ಅದು ಕುಕ್ಕುವಾಗಿನ ನೋವು ಬಲ್ಲವನೇ ಬಲ್ಲ. ಆ ನೋವಿನ ರುಚಿ ಉಂಡವರು ನಮ್ಮಲ್ಲಿಗೆ ಬರುವಾಗ ದೂರದಲ್ಲಿ ನಿಂತು ಕೋಳಿ ಮುಚ್ಚಿದ್ದೀರಾ ಅಂತ ಕೇಳಿಯೇ ಬರುತ್ತಿದ್ದರು.

ನಾವು ಕೋಳಿಗಳನ್ನು ಮಾರುತ್ತಿದ್ದೆವು. ಕೆಲವು ಕೋಳಿಗಳನ್ನು ದೆವ್ವಗಳಿಗೆ ಮೀಸಲಿಡುತ್ತಿದ್ದೆವು. ಮತ್ತೆ ಕೆಲವನ್ನು ನೆಂಟರು ಬಂದಾಗ ಪಡ್ಚ ಮಾಡುತ್ತಿದ್ದೆವು. ಒಮ್ಮೆ ಕಾಪಿನಿಂದ ಇಳಿಸಿದ ಹೂಪಿಳ್ಳೆಗಳನ್ನು ಕರೆದುಕೊಂಡು ಹೇಂಟೆ ಮೇವು ಮಾಡುತ್ತಿರುವಾಗ ಗುಳ್ಳೆನರಿಗೆ ಬಲಿಯಾಯಿತು. ಪಿಳ್ಳೆಗಳು ತಬ್ಬಲಿಯಾದವು. ಆ ಪಿಳ್ಳೆಗಳನ್ನು ಸಾಕುವ ಹೊಣೆ ನಮ್ಮದು. ಬೆಚ್ಚಗೆ ಕೂರಿಸಿಕೊಳ್ಳಬೇಕು. ನುಚ್ಚು ಹಾಕಿ ತಿನ್ನಿಸಬೇಕು. ನೀರು ಕುಡಿಸಬೇಕು. ಆ ಪಿಳ್ಳೆಗಳೋ ಎಡೆಬಿಡದೆ ಪೀ ಪೀ ಎಂದು ಕೂಗುತ್ತಾ ಅಮ್ಮನನ್ನು ಕರೆಯುತ್ತಿದ್ದವು. ನಾವು ಆ ಪಿಳ್ಳೆಗಳನ್ನು ಮಡಿಲಲ್ಲಿ ಕೂರಿಸಿಕೊಳ್ಳುತ್ತಿದ್ದೆವು. ನುಚ್ಚು ಕೊಟ್ಟು ತಿನ್ನಿಸುತ್ತಿದ್ದೆವು. ಆ ಪಿಳ್ಳೆಗಳಿಗೆ ಅಕ್ಕನ ಮಡಿಲು ಬಲು ಇಷ್ಟ. ಎಲ್ಲಾ ಐದೂ ಮರಿಗಳು ಅಕ್ಕನ ಮಡಿಲಲ್ಲಿ ಮುದ್ದೆಯಾಗಿ ಕುಳಿತು ನಿದ್ದೆ ಮಾಡುತ್ತಿದ್ದವು.  ಎಚ್ಚರ ಆದೊಡನೆ ಮಡಿಲಿಂದ ಹೊರಬಂದು ರೆಕ್ಕೆ ಬಡಿದು ಪುರ್ ಎಂದು ಹಾರಿ ನಮ್ಮ ಹೆಗಲಲ್ಲಿ ಕುಳಿತು ಮಜಾ ಪಡೆದುಕೊಳ್ಳುತ್ತಿದ್ದೆವು. ಹೀಗೆ ನಾವು ಜಗಲಿಯಲ್ಲಿ ಕುಳಿತುಕೊಂಡರೆ ಸಾಕು ಓಡಿ ಬಂದು ಅವ್ವ, ಅಕ್ಕ ಮತ್ತು ನನ್ನ ಮೈಮೇಲೆಲ್ಲಾ ಹತ್ತಿ ಕೂರುತ್ತಿದ್ದವು. ಎಲ್ಲಾ ಮರಿಗಳು ಚೆನ್ನಾಗಿ ಬಲಿತು ದೊಡ್ಡವಾದವು.

ಕೋಳಿಗಳಿಗೆ ಯಾವಾಗಲೂ ಬೇಡಿಕೆಯುಂಟು. ನನ್ನಲ್ಲಿ ಒಂದು ಆಸೆ ಮೊಳೆಯಿತು. ನಾನೇ ಸಂಪಾದನೆ ಮಾಡಿದ ಹಣದಿಂದ ಒಂದು ಹೇಂಟೆಯನ್ನು ಖರೀದಿಸಬೇಕು. ಅದರಿಂದ ಕೋಳಿ ಸಂತಾನ ದೊಡ್ಡದು ಮಾಡಬೇಕು. ಅವುಗಳನ್ನು ಮಾರಿ ಹಣ ಸಂಪಾದನೆ ಮಾಡಬೇಕು. ಆದರೆ ಮೂಲ ಬಂಡವಾಳವೆಲ್ಲಿ? ಅಂದರೆ ಕೋಳಿಯನ್ನು ಕೊಂಡುಕೊಳ್ಳಲು ನನ್ನಲ್ಲಿ ಹಣವಿಲ್ಲ. ಹಣ ಹೆಚ್ಚೇನು ಬೇಡ. ಕೇವಲ ಐದಾರು ರೂಪಾಯಿ ಸಾಕು. ಆದರೆ ಆ ಐದಾರು ರೂಪಾಯಿಯಾದರೂ ಎಲ್ಲಿಂದ ಬರಬೇಕು? ಹಾಂ! ಉಪಾಯ ಉಂಟು. ಶಿವರಾತ್ರಿಯಂದು ತಂಡದೊಡನೆ ಮನೆಮನೆ ಹೋಗುವುದೆಂಬ ತೀರ್ಮಾನಕ್ಕೆ ಬಂದೆ.

ರಾತ್ರಿ ಮನೆ ಮನೆ ಹೋಗಲು ನಮ್ಮ ಮನೆಯಲ್ಲಿ ಅನುಮತಿ ಸಿಗುವುದಿಲ್ಲ. ಅವ್ವ ಮತ್ತು ಅಕ್ಕನನ್ನು ಹೇಗಾದರೂ ಪುಸಲಾಯಿಸಬಹುದು. ಆದರೆ ಅಪ್ಪ ಅಷ್ಟು ಸುಲಭವಾಗಿ ಬಿಡುವ ಪೈಕಿ ಅಲ್ಲ. ಅಂತೂ ಇಂತು ಅತ್ತು ಕರೆದು ರಂಪ ಮಾಡಿದೆ. ಇನ್ನೂ ಮುಂದೆ ಹೋಗುವುದಿಲ್ಲ. ಇದೊಂದೇ ಸತಿ ಹೋಗಲು ಬಿಡು ಎಂದು ಗೋಗರೆದೆ. ಅಪ್ಪ ಉಂ ಅಂದದ್ದೊ ಅಥವಾ ತಿರುಗಿ ಮಲಗುವಾಗ ಮಂಚದ ಸದ್ದೊ – ಅಪ್ಪ ನನಗೆ ಅನುಮತಿ ಕೊಟ್ಟದ್ದೆಂದೇ ಭಾವಿಸಿದೆ. ಅವ್ವ ಅಕ್ಕನೊಡನೆ ಹೇಳಿ ತಂಡದೊಡನೆ ಸೇರಿಕೊಳ್ಳಲು ಓಡಿಬಿಟ್ಟೆ.

ಆ ಮನೆಯಲ್ಲಿ ಅದಾಗಲೇ ಮನೆ ಮನೆ ಹೊರಡಲು ತಯಾರಿ ನಡೆದಿತ್ತು. ಮಖಕ್ಕೆ ಬಣ್ಣ(ಮಸಿ) ಬಳಿದುಕೊಳ್ಳುತ್ತಿದ್ದರು. ಗೆಜ್ಜೆ ಕಟ್ಟಿಕೊಳ್ಳುತ್ತಿದ್ದರು. ಟಿನ್ನು ಜೋಡಿಸಿಕೊಳ್ಳುತ್ತಿದ್ದರು. ನನಗೂ ಬಣ್ಣ ಬಳಿಯಿರಿ ಎಂದೆ. ಗೆಜ್ಜೆ ಕೊಡಿ ಎಂದು ಕೇಳಿಕೊಂಡೆ. ನಾನು ಆ ಗುಂಪಿನಲ್ಲಿ ಅತ್ಯಂತ ಕಿರಿಯವ. ನನ್ನನ್ನು ರಾತ್ರಿ ಕರೆದೊಯ್ಯುವ ಮನಸ್ಸು ಅವರಿಗಿರಲಿಲ್ಲ. ಅಲ್ಲೂ ಅತ್ತುಕರೆದೆ. ನನ್ನ ಒತ್ತಾಯಕ್ಕೆ ಮಣಿದ ಅವರು ಬಾ ಎಂದರು, ಬಣ್ಣ ಬಳಿದರು. ಒಂದೇ ಒಂದು ಗೆಜ್ಜೆ ಕೊಟ್ಟರು. ಅದನ್ನು ಸೊಂಟಕ್ಕೆ ಕಟ್ಟಿಕೊಂಡೆ. ಆ ಗೆಜ್ಜೆಯೋ ನಡೆಯುವಾಗ ಸದ್ದಾಗುತ್ತಿರಲಿಲ್ಲ. ನಾನೇ ಅದನ್ನು ಹಿಡಿದು ಅಲುಗಾಡಿಸುತ್ತಿದ್ದೆ.

ಕಾಟಿಬೆಟ್ಟದ ಕಾಡಿನಲ್ಲಿ ನಮ್ಮದು ಶಿವರಾತ್ರಿಯ ಜಾಗರಣೆ. ಶಿವರಾತ್ರಿಯ ಮಹಾರಾತ್ರಿಯಂದು ಶಿವನಿಗಂದು ನಿದ್ದೆ. ನಮ್ಮದು ಐದಾರು ಜನರ ತಂಡ. ಒಬ್ಬನ ಕೈಯಲ್ಲಿ ದೊಂದಿ. ಅಂವ ಮುಂದೆ. ನಾವು ಎಡವುತ್ತ ತಡವುತ್ತ ಹಿಂದೆ. ಒಂದೊಂದು ಕಾಡುದಾಟಿದರೆ ಒಂದೊಂದು ಮನೆ. ನಮ್ಮ ದೊಂದಿ ಬೆಳಕಿಗೆ, ಗೆಜ್ಜೆ ಸದ್ದಿಗೆ, ಟಿನ್ನು ಬಡಿತಕ್ಕೆ ಹಾಗೂ ನಮ್ಮೆಲ್ಲರ ಬೊಬ್ಬೆಗೆ ಆನೆ ಹುಲಿಗಳು ಎಲ್ಲಿ ಅಡಗಿಕೊಂಡವೋ? ಆದರೆ ಮನೆ ಮನೆಗಳಲ್ಲಿ ನಾಯಿಗಳು ಮಾತ್ರ ಬೊಗಳಿದ್ದೇ ಬೊಗಳಿದ್ದು. ‘ಗೋವಿಂದಾನಿ ಗೋವಿಂದಾ ಗೋವಿಂದ. ಶ್ರೀರಾಮನ ಗೋವಿಂದಾ ಗೋವಿಂದ’ ಎಂದು ಕೂಗುತ್ತಾ ಅಂಗಳದಲ್ಲಿ ನಿಂತು ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೋ ಎಂದು ಒಂದೇ ರಾಗದಲ್ಲಿ ಹಾಡಿದೆವು. ಮನೆಯವರು ಕಣ್ಣು ಒಸಕಿಕೊಂಡು ಹೊರಬಂದರು.  ನಮ್ಮದು ಹಾಡು ಕುಣಿತ ಶುರುವಾಯಿತು. ತಟ್ಟೆ ಹಿಡಿದೆವು. ಅದಕ್ಕೆ ಕಾಸು ಹಾಕಿದರು. ಚೀಲ ತೋರಿಸಿದೆವು. ಅದಕ್ಕೆ ಒಂದಿಷ್ಟು ಅಕ್ಕಿ ಮತ್ತು ಬೆಲ್ಲ ಹಾಕಿದರು.

ಅಲ್ಲಿಂದ ಮತ್ತೊಂದು ಮನೆಯತ್ತ ಹೊರಟೆವು. ನಮಗಿದ್ದುದು ಒಂದೇ ಒಂದು ಬೆಳಕಿನ ವ್ಯವಸ್ಥೆ. ದೊಂದಿ ಹಿಡಿದು ಮುಂದೆ ನಡೆಯುತ್ತಿದ್ದಾತ ತಂಡದ ಹಿರಿಯ. ಕಾಡಿನ ದಾರಿಯಲ್ಲಿ ಗೆಜ್ಜೆ ಸದ್ದಿನೊಂದಿಗೆ ನಡೆಯುತ್ತಾ ಇರುವಾಗ ಆ ಸದ್ದನ್ನು ಮೀರಿದ ಸದ್ದೊಂದು ಕಾಡಿನೆಡೆಯಿಂದ ಕೇಳಿ ಬಂತು. ಅದು ಒಂದೇ ಒಂದು ಧ್ವನಿ. ಆ ಕರ್ಕಶ ಧ್ವನಿ ಯಾವ ಪ್ರಾಣಿಯದೆಂದು ಗೊತ್ತಾಗಲಿಲ್ಲ.  ಅದರ ಮತ್ತೊಂದು ಧ್ವನಿಯನ್ನು ಕೇಳುವಷ್ಟು ಧೈರ್ಯ ನಮ್ಮ ಯಾರಲ್ಲೂ ಇರಲಿಲ್ಲ. ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದ ನಾವು ಚೆಲ್ಲಾಪಿಲ್ಲಿ ಆಗಲಿಲ್ಲ. ಏಕೆಂದರೆ ನಮ್ಮ ಎಡಬಲಕ್ಕೆ ಕಾಡು.  ಒಂದೋ ಹಿಂದಕ್ಕೆ ಓಡಬೇಕು. ಇಲ್ಲ ಮುಂದೆ ಓಡಬೇಕು. ಹಿಂದಕ್ಕೆ ಓಡುವ ಧೈರ್ಯ ಇಲ್ಲವೇ ಇಲ್ಲ. ಏಕೆಂದರೆ ಆ ಸದ್ದು ಬಂದುದು ನಮ್ಮ ಹಿಂದಿನಿಂದಲೇ. ದೊಂದಿ ಹಿಡಿದಾತ ಮುಂದೆ ಓಡತೊಡಗಿದ ಉಳಿದವರೂ ಹಾಗೆ ಮಾಡದೆ ವಿಧಿಯಿಲ್ಲ. ನಮ್ಮ ಸೊಂಟಕ್ಕೆ ಕಾಲಿಗೆ ಕಟ್ಟಿದ ಗೆಜ್ಜೆಯ ಗಿಲಿಗಿಲಿ ಸದ್ದು, ತಮಟೆಯ ಬರಲಿಗಿದ್ದ ಟಿನ್ನಿನ ದರಬರ ಸದ್ದು ಕೇಳಿ ನಮ್ಮನ್ನು ಹೆದರಿಸಿದ್ದ ಪ್ರಾಣಿ ನಮಗಿಂತಲೂ ಹೆಚ್ಚು ಹೆದರಿತೋ ತಿಳಿಯಲಿಲ್ಲ. ನಮ್ಮ ಯಾರಲ್ಲೂ ಮಾತಿಲ್ಲ. ಓಡುವುದೇ ನಮ್ಮ ಗುರಿಯಾಗಿತ್ತು. ರಾತ್ರಿ ಕಾಡುದಾರಿಯಲ್ಲಿ ಓಡುವುದೆಂದರೆ? ನಮ್ಮ ಪುಣ್ಯಕ್ಕೆ ದೊಂದಿ ನಂದಲಿಲ್ಲ. ಓಡಿ ಓಡಿ ಒಂದೆಡೆ ನಿಂತೆವು. ಒಬ್ಬರನ್ನೊಬ್ಬರು ಮುಖ ನೋಡಿಕೊಳ್ಳಲು ನಾಚಿಕೆ. ಏಕೆಂದರೆ ಎಲ್ಲರೂ ಪುಕ್ಕುಲರೇ. ಯಾರು ಯಾರನ್ನೂ ಮೆಚ್ಚುವುದು? ಮೊದಲೇ ಮಸಿಬಳಿದು ಕೊಂಡಿದ್ದ ಕಪ್ಪು ಮುಖಗಳು ಬೇರೆ! ಅಂತೂ ಇಂತೂ ಯಾರದೋ ಮನೆ ಬಳಿ ನಿಂತು ಗೋವಿಂದಾನಿ ಗೋವಿಂದಾ- ಗೋವಿಂದ, ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೋ (ರಾಮಕೃಷ್ಣರು ಹೆದರಿ ಓಡಿದ್ದನ್ನು ಸುತಾರಾಂ ಬಾಯಿ ಬಿಡಲಿಲ್ಲ!) ಎಂದು ರಾಗ ಎಳೆದೆವು. ಆ ಮನೆಯವರು ಸತ್ಕಾರ ಮಾಡಿ ಕಳುಹಿಸಿದರು.

ಸಮರಾತ್ರಿ ಕಳೆದಿರಬಹುದು. ಜೋಡುಕಟ್ಟೆ ಕೆರೆಯ ಬಳಿ ಬಂದೆವು. ಅಲ್ಲಿ ನೂರಾರು ಕಪ್ಪೆಗಳು ವಟಗುಟ್ಟುವ ಧ್ವನಿ ಕೇಳುತಿತ್ತು. ನಮ್ಮ ದೊಂದಿ ಬೆಳಕನ್ನು ಕಂಡೊಡನೆ ಆ ಎಲ್ಲಾ ಕಪ್ಪೆಗಳು ಏಕಕಾಲಕ್ಕೆ ತಮ್ಮ ಕೂಗುವಿಕೆಯನ್ನು ನಿಲ್ಲಿಸಿದವು. ಶಾಲೆಗೆ ಹೋಗುವಾಗ ಆ ಕೆರೆಯ ನೀರ ಮೇಲೆ ಚಪ್ಪಟೆ ಕಲ್ಲನ್ನು ಕಪ್ಪೆ  ಹಾರುವಂತೆ ಎಸೆಯುತ್ತಿದ್ದುದು ನೆನಪಾಯಿತು. ಆ ಕೆರೆದಾಟಿ ಸುಳುಗೋಡು ಎಂಬ ಊರನ್ನು ಸೇರಿದೆವು. ಅಲ್ಲಿಯ ಶ್ರೀಮಂತರ ಮನೆಯಂಗಳದಲ್ಲಿ ಕಾಫಿಯನ್ನು ಒಣಹಾಕಿದ್ದರು. ಅದನ್ನು ತುಳಿಯುತ್ತಾ ಜಾರಿಬಿದ್ದೆದ್ದೆವು. ಅಲ್ಲಿಯೂ ಗೋವಿಂದಾನಿ ಗೋವಿಂದಾ…. ಮೊಳಗಿತು. ಮನೆಯವರು ಅಕ್ಕಿ, ಕಾಸು ನೀಡಿದರು. ಹೀಗೆ ಹಲವಾರು ಮನೆಗಳನ್ನು ಸುತ್ತಿ ಸುಸ್ತಾದೆವು. ತಿರುಗಿ ನಮ್ಮ ಊರಿನತ್ತ ಹೊರಟೆವು.

ಎಡವಿದ್ದೆಷ್ಟೊ, ಚಳಿಯಲ್ಲಿ ನಡುಗಿದ್ದೆಷ್ಟೊ. ನಾನಂತೂ ಹೆಜ್ಜೆಹೆಜ್ಜೆಗೂ ಇದುಬೇಕಿತ್ತಾ ಎಂದು ಪ್ರಶ್ನಿಸಿಕೊಳ್ಳದಿರಲಿಲ್ಲ. ಈ ನಡುವೆ ನನ್ನ ತಲೆಗೆ ಅಕ್ಕಿ ಚೀಲವನ್ನೂ ಹೊರಿಸಿದ್ದರು. ನಾನು ತುಟಿ ಪಿಟಕ್ಕೆನ್ನದೆ ಹೊತ್ತುಕೊಂಡಿದ್ದೆ. ಏಕೆಂದರೆ ನಾನು ಅತ್ತುಕರೆದು ಗುಂಪನ್ನು ಸೇರಿಕೊಂಡವನು. ಹಾಗಾಗಿ ಅವರು ಹೇಳಿದ ಮಾತನ್ನು ಕೇಳಲೇಬೇಕಿತ್ತು. ಅಕ್ಕಿ ಚೀಲವನ್ನು ತಲೆಯಲ್ಲಿ ಹೊತ್ತಿದ್ದೆ.  ಆ ಹೊರೆ ಹೊತ್ತು ಕತ್ತು ಉಳುಕಿದಂತಾಯಿತು. ತಲೆಯಿಂದ ಮೆಲ್ಲನೆ ಹೆಗಲಿಗೆ ಚೀಲವನ್ನು ಜಾರಿಸಿದೆ. ಹೆಗಲು ಸೋಲುತಿತ್ತು. ಮತ್ತೆ ಎತ್ತಿ ತಲೆ ಮೇಲೆ ಇರಿಸಿಕೊಳ್ಳುತ್ತಿದ್ದೆ. ಹೀಗೆ ತಲೆಗೆ ಚೀಲವನ್ನು ಎತ್ತಿಡುವಾಗ ನನ್ನ ಸೊಂಟಕ್ಕೆ ಕಟ್ಟಿದ್ದ ಒಂಟಿ ಗೆಜ್ಜೆ ಗಿಲಕ್ ಅಂತ ಸದ್ದು ಮಾಡುತಿತ್ತು. ಉಳಿದ ಸಮಯದಲ್ಲಿ ಸದ್ದಿಲ್ಲದೆ ಇದ್ದ ಗೆಜ್ಜೆಯನ್ನು ಹಿಡಿದು ಅಲುಗಿಸುತ್ತಿದ್ದೆ. ಈಗ ಆ ಗೆಜ್ಜೆ ಅಕ್ಕಿ ಚೀಲದ ಕುಣಿತಕ್ಕೆ ಸರಿಯಾಗಿ ಗಿಲಿಗಿಲಿ ಸದ್ದು ಮಾಡುತ್ತಾ ನನ್ನನ್ನು ಅಣಕಿಸುತ್ತಿತ್ತು. ನನಗೆ ಈ ಶಿಕ್ಷೆ ಖಂಡಿತವಾಗಿ ಬೇಡವಾಗಿತ್ತು. ಇದಕ್ಕೆಲ್ಲಾ ಹಾಳಾದ ಆ ಕೋಳಿ ಸಾಕುವ ಹುಚ್ಚು. ನಿಜವಾಗಿ ಕೋಳಿಯೂ ಬೇಡ, ಪಾಲು ಹಣವೂ ಬೇಡ ಅನ್ನುವಷ್ಟು ಬೇಸರವಾಗಿತ್ತು. ಶಿವನೇ ಒಮ್ಮೆ ಬೆಳಗು ಮಾಡಪ್ಪಾ, ಎಂದು ಬೇಡಿದೆ. ಇನ್ನು ಮುಂದೆ ಶಿವ ನಿದ್ರೆಮಾಡಲಿ ಬಿಡಲಿ, ಶಿವರಾತ್ರಿಯ ಮಹಾರಾತ್ರಿ ಮರ್ಯಾದೆಯಿಂದ ಮನೆಯಲ್ಲಿರುತ್ತೇನೆ. ಅಕ್ಕ ಅವ್ವನ ನಡುವೆ ಸುಖ ನಿದ್ದೆ ಮಾಡುತ್ತೇನೆಂದು ತೀರ್ಮಾನಿಸಿದೆ.

ಮುಂಗೋಳಿ ಕೂಗಿತು. ಅಬ್ಬಾ ಬೆಳಗಾಗುವ ಸೂಚನೆ ಬಂತಲ್ಲಾ ಎಂದು ಸಂತಸಗೊಂಡೆ. ಬೆಳಗಾಯಿತು. ಇನ್ನು ಸ್ನಾನ?! ಬಿಸಿನೀರುಂಟೆ? ಇಲ್ಲ, ಜಾಗರಣೆ ಮಾಡಿ ತಣ್ಣೀರಲ್ಲೇ ಸ್ನಾನ ಮಾಡಬೇಕು. ಹಾಗಾಗಿ ತೋಡಿನ ನೀರಿನಲ್ಲಿ ಸ್ನಾನ ಮಾಡುವ ಘೋರ ಶಿಕ್ಷೆಯನ್ನು ಪಡೆದುಕೊಂಡೆ. ಸಿಕ್ಕಿದ ಅಕ್ಕಿಯಲ್ಲಿ ಸ್ವಲ್ಪ ಪಾಯಸಕ್ಕೆಂದು ತೆಗೆದುಕೊಂಡೆವು. ರಾತ್ರಿ ಸಿಕ್ಕಿದ ಬೆಲ್ಲವನ್ನೇ ಪಾಯಸಕ್ಕೆ ಬಳಸಿದೆವು. ರಾತ್ರಿ ಯಾರಲ್ಲಿಂದ ಹೊರಟೆವೋ ಅಲ್ಲೆ ಹೊರಗೆ ಒಲೆ ಊಡಿದೆವು. ಪಾಯಸದ ಅಡುಗೆ ಆಯಿತು. ಊಟ ಮಾಡಿದೆವು. ಬಳಿಕ ಉಳಿದ ಅಕ್ಕಿಯನ್ನು ಸಮ ಪಾಲು ಮಾಡಿದೆವು.

(ಚಿತ್ರಗಳು: ಚರಿತಾ. ಫೋಟೋಗಳು: ರಶೀದ್)