”ತನ್ನದೇ ಬದುಕು ಮತ್ತು ಕಲ್ಪನೆಯಲ್ಲಿ ಕಾದಂಬರಿಕಾರನು ಸಮೃದ್ಧವಾದ ದ್ರವ್ಯವನ್ನು ಕಾಣುತ್ತಾನೆ. ಈ ದ್ರವ್ಯವನ್ನು ಅನ್ವೇಷಿಸಲು, ಬೆಳೆಸಲು, ಅದರೊಡನೆ ನಿಕಟವಾಗಿ ವ್ಯವಹರಿಸಲು ಬರೆಯುತ್ತಾನೆ. ಕಾದಂಬರಿ ಒಳಗೊಂಡಿರುವ ವಿವರಗಳು, ಒಟ್ಟಾರೆ ವಿನ್ಯಾಸ, ಪಾತ್ರಗಳು ಇವೆಲ್ಲ ಕಾದಂಬರಿಯ ಬರಹದಲ್ಲಿ ವಿಕಾಸ ಹೊಂದುತ್ತವೆ. ಇವೆಲ್ಲದರ ಮೂಲಕ ಕಾದಂಬರಿಕಾರನು ವ್ಯಕ್ತಪಡಿಸಲು ಬಯಸುವ ಬದುಕನ್ನು ಕುರಿತ ಗಹನವಾದ ನೋಟ ಹೊಮ್ಮುತ್ತದೆ. ಅದನ್ನೇ ನಾನು ಕಾದಂಬರಿಯ ಕೇಂದ್ರವೆಂದು ಕರೆದಿದ್ದೇನೆ”
ಓ.ಎಲ್.ನಾಗಭೂಷಣಸ್ವಾಮಿ ಕನ್ನಡಕ್ಕೆ ಅನುವಾದಿಸಿರುವ ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಭಾಷಣ ಮಾಲಿಕೆಯ ಏಳನೆಯ ಕಂತು.

ಬದುಕನ್ನು ಕುರಿತ ಗಹನವಾದೊಂದು ಅಭಿಪ್ರಾಯ ಅಥವಾ ಒಳನೋಟವು ಕಾದಂಬರಿಯಲ್ಲಿ ಅಡಗಿರುತ್ತದೆ. ಅದೇ ಕಾದಂಬರಿಯ ಕೇಂದ್ರವಾಗಿರುತ್ತದೆ. ಈ ಕೇಂದ್ರವನ್ನು ಅರಸುವ ಸಲುವಾಗಿ, ಅದರ ಪರಿಣಾಮಗಳನ್ನು ತಿಳಿಯುವ ಸಲುವಾಗಿ ಲೇಖಕರು ಬರೆಯುತ್ತಾರೆ. ಕಾದಂಬರಿಯ ಓದಿಗೂ ಇಂಥದೇ ಉದ್ದೇಶ ಇರುತ್ತದೆ. ಲೇಖಕರು ಕಾದಂಬರಿಯನ್ನು ಮೊದಲು ಕಲ್ಪಿಸಿಕೊಂಡಾಗ ಅದರ ಕೇಂದ್ರದ ಬಗ್ಗೆ ಸ್ಪಷ್ಟವಾಗಿ ಆಲೋಚನೆ ಮಾಡಬಹುದು, ಆ ಕೇಂದ್ರದ ಸಲುವಾಗಿಯೇ ಬರೆಯುತ್ತಿದ್ದೇವೆ ಅಂದುಕೊಳ್ಳಬಹುದು. ಕೆಲವೊಮ್ಮೆ ಈ ಕೇಂದ್ರ ಯಾವುದೆನ್ನುವುದು ಲೇಖಕರಿಗೆ ಗೊತ್ತೇ ಇರುವುದಿಲ್ಲ. ಕೆಲವೊಮ್ಮೆ ಕಾದಂಬರಿಯ ಕೇಂದ್ರಕ್ಕಿಂತ ನಿಜ ಬದುಕಿನ ಸಾಹಸ, ನಮ್ಮ ಅನುಭವದಿಂದ ತಿಳಿದ ಸತ್ಯ ಇವು ಮುಖ್ಯವೆನ್ನಿಸಬಹುದು. ಮತ್ತೆ ಕೆಲವು ಬಾರಿ ಖಾಸಗಿಯಾದ ಒತ್ತಡ, ಸಮುದಾಯದ ಬದುಕಿನ ನೈತಿಕ, ಸೌಂದರ್ಯಾತ್ಮಕ ಚಿತ್ರಣ ಇವು ಮುಖ್ಯವಾಗಿ ಕಂಡು ಕೇಂದ್ರವನ್ನು ಕಡೆಗಣಿಸಬಹುದು. ನಮ್ಮ ಬರವಣಿಗೆಯ ಚೆಲುವು, ಹೊಸತನ, ನಾವೇ ಕಲ್ಪಿಸಿದ ಘಟನೆಗಳ ಅನಿರೀಕ್ಷಿತತೆ ಇವು ಮುಖ್ಯವಾಗಿ ನಾವು ಬರೆಯುತ್ತಿರುವ ಕಾದಂಬರಿಗೆ ಕೇಂದ್ರವೊಂದಿದೆ ಅನ್ನುವುದನ್ನೇ ಮರೆಯಬಹುದು. ಇನ್ನು ಕೆಲವು ಲೇಖಕರು ಸಾಧ್ಯವಾದಷ್ಟೂ ಬೇಗ ಕಥೆಯ ಕೊನೆ ಮುಟ್ಟಬೇಕೆಂದು ಬಯಸುತ್ತಾ ಕಾದಂಬರಿಯ ಕೇಂದ್ರವನ್ನು ಮರೆಯಬಹುದು. ಕಾದಂಬರಿ ಬರೆಯುವುದು ಕಾಡಿನಲ್ಲಿ ಸಾಗಿದ ಹಾಗೆ-ನಾವು ಕಾಡಿನಲ್ಲಿ ನಡೆಯುತ್ತಾ, ಎದುರಾಗುವ ಒಂದೊಂದೂ ಮರವನ್ನು ಗಮನವಿಟ್ಟು ನೋಡುತ್ತಾ, ಅದರ ವಿವರಗಳನ್ನು ದಾಖಲೆಮಾಡುತ್ತಾ ಈ ಮರ, ಕಾಡಿನ ಒಂದು ಅಂಶವೆನ್ನುವುದನ್ನು ಮರೆತುಬಿಡಬಹುದಲ್ಲ, ಹಾಗೆಯೇ ಇದೂ. ಲ್ಯಾಂಡ್ ಸ್ಕೇಪಿನ ವಿವರಗಳಿಂದ ನಾವು ಎಷ್ಟೇ ಆಕರ್ಷಿತರಾದರೂ, ಮರುಳಾದರೂ ಈ ಲ್ಯಾಂಡ್ ಸ್ಕೇಪಿನೊಳಗೆ ನಿಗೂಢವಾದ ಏನೋ ಅಡಗಿದೆ, ಅದನ್ನು ತಿಳಿಯಬೇಕು ಅನ್ನುವುದು ಗೊತ್ತಿರುತ್ತದೆ. ಅದು ಕಾಡಿನ ಒಂದೊಂದೂ ಮರಕ್ಕಿಂತ ಮಿಗಿಲಾದ, ಎಲ್ಲ ಮರಗಳ ಮೊತ್ತಕ್ಕಿಂತ ಹಿರಿದಾದ ಗಹನವಾದ ಸಂಗತಿಯಾಗಿರುತ್ತದೆ. ಕೆಲವೊಮ್ಮೆ ಅದು ಸ್ಪಷ್ಟವಾಗಿ ತಿಳಿದೀತು, ಅನೇಕ ಬಾರಿ ತಳಮಳ, ಅಸ್ಪಷ್ಟತೆ ಕಾಡಿಯಾವು.

ಆಳವಾದ ಅರ್ಥವನ್ನು ಸೂಚಿಸುವ ಸಲುವಾಗಿಯೇ ಕಾದಂಬರಿಯ ಪ್ರತಿ ವ್ಯಕ್ತಿ, ವಸ್ತು, ಘಟನೆ, ಚಿತ್ರ, ನೆನಪು, ಮಾಹಿತಿ, ಕಾಲದ ನೆಗೆತ ಎಲ್ಲವನ್ನೂ ಈಗ ಹೇಗೆ ಇದೆಯೋ ಹಾಗೆ, ಎಲ್ಲಿದೆಯೋ ಅಲ್ಲಿ ಇಡಲಾಗಿದೆ ಅನ್ನುವುದು ಸಾಹಿತ್ಯಕ ಕಾದಂಬರಿ ಓದುವವರಿಗೆ ಗೊತ್ತಿರುತ್ತದೆ. ಇವೆಲ್ಲವುಗಳ ಮೂಲಕ ಸಾಗುತ್ತ ಓದುಗರಾಗಿ ನಾವು ಅರ್ಥದ ಅನ್ವೇಷಣೆಯಲ್ಲಿದ್ದೇವೆ ಅನ್ನುವ ಕಾರಣಕ್ಕೇನೇ ಕಾದಂಬರಿಯಲ್ಲಿ ಗುಪ್ತವಾಗಿರುವ ಕೇಂದ್ರದ ಸೂಚನೆ ಒಳಗೊಂಡಿವೆ ಅನ್ನುವ ಕಾರಣಕ್ಕೇನೇ ಇವೆಲ್ಲವೂ ತಮ್ಮ ಚೆಲುವು, ಶಕ್ತಿ, ನಿಜಬದುಕಿನ ಸಾಮೀಪ್ಯಗಳ ಕಾರಣದಿಂದ ನಮ್ಮ ಗಮನ ಸೆಳೆಯುತ್ತವೆ.

ಕಾದಂಬರಿಯ ಕೇಂದ್ರವೆನ್ನುವುದು ಒಂದು ಒಳನೋಟ, ಆಲೋಚನೆ, ಅಥವಾ ಜ್ಞಾನ, ಕೃತಿಯ ಸ್ಫೂರ್ತಿ ಕೇಂದ್ರ ಅನ್ನುವುದು ಲೇಖಕನಿಗೆ ಗೊತ್ತಿರುತ್ತದೆ. ಬರೆಯುವ ಕೆಲಸದಲ್ಲಿ ತೊಡಗಿರುವಾಗ ಸ್ಫೂರ್ತಿಯ ದಿಕ್ಕು ಬದಲಾಗುವುದು, ಆಕಾರ ಬದಲಾಗುವುದೂ ಉಂಟು ಅನ್ನುವುದೂ ಗೊತ್ತಿರುತ್ತದೆ. ಎಷ್ಟೋ ಕಾದಂಬರಿಕಾರರು ಕೇಂದ್ರವನ್ನು ವಸ್ತುವಿಷಯವಾಗಿ ಗ್ರಹಿಸುವುದುಂಟು, ಅದನ್ನು ಕಥೆಯ ರೂಪದಲ್ಲಿ ತಿಳಿಸಬೇಕು, ಕಾದಂಬರಿ ರೂಪು ಪಡೆಯುತ್ತಿರುವಂತೆಯೇ ಈ ಅಸ್ಪಷ್ಟ ಕೇಂದ್ರದ ಅರ್ಥ ಸ್ಪಷ್ಟವಾಗುತ್ತದೆ ಎಂದು ಭಾವಿಸುತ್ತಾರೆ. ಓದುಗರು ಕಾದಂಬರಿ ಓದುತ್ತಿರುವಾಗ ಅವರು ಕಲ್ಪಿಸಿಕೊಂಡಿರುವ ಕಾದಂಬರಿಯ ಕೇಂದ್ರ ಬದಲಾಗಬಹುದು, ಹಾಗೆಯೇ ಕಾದಂಬರಿಕಾರರು ಬರೆಯುತ್ತಾ ಇರುವಂತೆಯೇ ಕಾದಂಬರಿಯ ಕೇಂದ್ರ ಬದಲಾಗುವುದೂ ಉಂಟು. ಕಾದಂಬರಿ ಓದುವುದೆಂದರೆ ನಾವು ಮೇಲ್ಪದರದ ಸಂಗತಿಗಳಿಂದ ಖುಷಿ ಪಡುತ್ತಿರುವಾಗಲೇ ಕಾದಂಬರಿಯ ಕೇಂದ್ರ—ಅಥವಾ ಕಾದಂಬರಿಯ ನಿಜ ವಸ್ತುವಿಷಯವನ್ನು ಗುರುತಿಸುವುದೇ ಆಗಿದೆ. ಅದು ಕಾದಂಬರಿಯಲ್ಲಿರುವ ಇತರ ಎಲ್ಲ ವರ್ಣನೆಗಳಿಗಿಂತ ಹೆಚ್ಚು ಮುಖ್ಯವಾದದ್ದು.

‘ಮಾಬಿ ಡಿಕ್’ ಕಾದಂಬರಿಯ ಬಗ್ಗೆ ಬೋರೆಸ್ ಹೇಳುವುದನ್ನು ನೋಡಿ: ಓದುಗ ನಿಧಾನವಾಗಿ ಮಾಬಿ ಡಿಕ್ ಹೃದಯಕ್ಕೆ ತಲುಪುತ್ತಾನೆ. ಮೊದಲಿಗೆ ತಿಮಿಂಗಿಲ ಬೇಟೆಗಾರರ ದುರ್ಭರ ಬದುಕನ್ನು ಕುರಿತ ಕಾದಂಬರಿ ಎಂದು ತಿಳಿದಾನು. ಕಾದಂಬರಿಯ ಮೊದಲ ಅಧ್ಯಾಯಗಳಲ್ಲಿ ತಿಮಿಂಗಿಲ ಬೇಟೆಯ ವರ್ಣನೆಯ ವಿವರಗಳಿವೆ, ಹಾರ್ಪೂನರುಗಳ ಬದುಕಿನ ವಿವರಗಳಿವೆ. ಇವನ್ನು ಓದುತ್ತಾ ಇದು ಸಾಮಾಜಿಕ ವಿಮರ್ಶೆ ಇದ್ದೀತು, ವೃತ್ತಪತ್ರಿಕೆಯ ವರದಿ ಇದ್ದೀತು ಅನ್ನಿಸಬಹುದು. ಮುಂದುವರೆದ ಹಾಗೆ ಈ ಕಾದಂಬರಿಯು ಬಿಳಿಯ ತಿಮಿಂಗಿಲವನ್ನು ಹುಡುಕಿ ಕೊಲ್ಲಲು ಬಯಸುವ ಕ್ಯಾಪ್ಟನ್ ಅಹಾಬ್ ನ ಹುಚ್ಚುತನ ಕುರಿತದ್ದು ಅನ್ನಿಸಬಹುದು. ಕಾದಂಬರಿಯ ಮಧ್ಯ ಭಾಗದ ಅಧ್ಯಾಯಗಳು ಇದೊಂದು ಮನಶ್ಶಾಸ್ತ್ರೀಯ ಕಾದಂಬರಿ, ಪ್ರಬಲ ವಿಶಿಷ್ಟ ಶಕ್ತಿವಂತ ವ್ಯಕ್ತಿಯೊಬ್ಬನ ಗೀಳಿನಂಥ ಆಕ್ರೋಶವನ್ನು ವಿಶ್ಲೇಷಿಸುತ್ತಿದೆ ಅನ್ನಿಸುತ್ತದೆ. ಇನ್ನೂ ಮುಂದುವರೆದ ಹಾಗೆ ಕಾದಂಬರಿಯ ಪುಟ ಪುಟವೂ ವಿಶ್ವಾತ್ಮಕವಾದ ಆಯಾಮಗಳನ್ನು ತೆರೆ ತೆರೆದು ತೋರುವುದು ಅನುಭವಕ್ಕೆ ಬರುತ್ತದೆ.

ಕಾದಂಬರಿಯ ಕಥೆಗೂ ಕಾದಂಬರಿಯ ಕೇಂದ್ರಕ್ಕೂ ಇರುವ ಅಂತರ, ದೂರ ಕಾದಂಬರಿಯ ಪ್ರಖರತೆಯನ್ನೂ ಆಳವನ್ನೂ ಸೂಚಿಸುವ ಸಂಗತಿಯಾಗುತ್ತದೆ. ಕಾದಂಬರಿಗೆ ಕೇಂದ್ರವೊಂದು ಇದೆ ಎಂದು ಪ್ರತಿಕ್ಷಣವೂ ಭಾಸವಾಗುತ್ತ, ಅದೇನಿರಬಹುದು ಎಂದು ನಾವು ನಿರಂತರವಾಗಿ ಪ್ರಶ್ನಿಸಿಕೊಳ್ಳುತ್ತಾ, ಮನಸ್ಸು ಕಂಡುಕೊಳ್ಳುವ ಉತ್ತರವನ್ನು ನಿರಂತರವಾಗಿ ಪರಿಷ್ಕರಿಸಿಕೊಳ್ಳುತ್ತ ಇರುವಂತೆ ಮಾಡುವ ಮಹಾನ್ ಕಾದಂಬರಿ ‘ಮಾಬಿ ಡಿಕ್’. ಈ ಕಾದಂಬರಿಯ ಲೋಕ ಶ್ರೀಮಂತವಾಗಿದೆ, ಪಾತ್ರಗಳು ಸಂಕೀರ್ಣವಾಗಿವೆ, ಹಾಗೆಯೇ ಸೂಕ್ಷ್ಮವಿವರಗಳನ್ನು ಯೋಜಿಸುತ್ತಾ ಲೇಖಕ ಕೂಡಾ ಬರೆಯುವ ಕಾದಂಬರಿಯ ಕೇಂದ್ರವನ್ನು ಕುರಿತ ಹಲವು ಪರಿಷ್ಕಾರಗಳನ್ನು ಮಾಡಿಕೊಂಡಿರಬಹುದು.

ತನ್ನದೇ ಬದುಕು ಮತ್ತು ಕಲ್ಪನೆಯಲ್ಲಿ ಕಾದಂಬರಿಕಾರನು ಸಮೃದ್ಧವಾದ ದ್ರವ್ಯವನ್ನು ಕಾಣುತ್ತಾನೆ. ಈ ದ್ರವ್ಯವನ್ನು ಅನ್ವೇಷಿಸಲು, ಬೆಳೆಸಲು, ಅದರೊಡನೆ ನಿಕಟವಾಗಿ ವ್ಯವಹರಿಸಲು ಬರೆಯುತ್ತಾನೆ. ಕಾದಂಬರಿ ಒಳಗೊಂಡಿರುವ ವಿವರಗಳು, ಒಟ್ಟಾರೆ ವಿನ್ಯಾಸ, ಪಾತ್ರಗಳು ಇವೆಲ್ಲ ಕಾದಂಬರಿಯ ಬರಹದಲ್ಲಿ ವಿಕಾಸ ಹೊಂದುತ್ತವೆ. ಇವೆಲ್ಲದರ ಮೂಲಕ ಕಾದಂಬರಿಕಾರನು ವ್ಯಕ್ತಪಡಿಸಲು ಬಯಸುವ ಬದುಕನ್ನು ಕುರಿತ ಗಹನವಾದ ನೋಟ ಹೊಮ್ಮುತ್ತದೆ. ಅದನ್ನೇ ನಾನು ಕಾದಂಬರಿಯ ಕೇಂದ್ರವೆಂದು ಕರೆದಿದ್ದೇನೆ. ‘ಕಾದಂಬರಿ ರೂಪುಗೊಳ್ಳುತ್ತ ಹೋದ ಹಾಗೆ ಮುಖ್ಯ ಪಾತ್ರಗಳೇ ಅದರ ಹಾದಿಯನ್ನು ನಿರ್ಣಯಿಸುತ್ತವೆ’ ಎಂಬ ಇ.ಎಂ. ಫಾಸ್ರ್ಟರ್ ಹೇಳುವ ಮಾತನ್ನು ಒಪ್ಪಲಾರೆ. ಬರವಣಿಗೆಯ ಪ್ರಕ್ರಿಯೆಯ ನಿಗೂಢ ಅಂಶವನ್ನು ನಂಬುವುದಾದರೆ, ಕಾದಂಬರಿಯ ಕೇಂದ್ರವೇ ಕಾದಂಬರಿಯನ್ನು ಮುನ್ನಡೆಸುತ್ತದೆ ಎನ್ನುವುದು ಸರಿಯಾದ ಮಾತು. ಪ್ರಬುದ್ಧ ಚಿಂತನಶೀಲ ಓದುಗನು ಕೇಂದ್ರ ಎಲ್ಲಿದೆ ಎಂದು ಊಹಿಸುತ್ತ ಕಾದಂಬರಿಯನ್ನು ಓದುವ ಹಾಗೆಯೇ ಅನುಭವಸ್ಥ ಲೇಖಕನೂ ಬರೆಯುತ್ತ ಬರೆಯುತ್ತ ಕೇಂದ್ರ ವ್ಯಕ್ತವಾಗುತ್ತದೆ, ಈ ಕೇಂದ್ರವನ್ನು ಕಂಡುಕೊಳ್ಳುವುದು, ಫೋಕಸ್ಸಿಗೆ ತರುವುದು ಇದೇ ಬರಹದ ಅತ್ಯಂತ ದೊಡ್ಡ ಸವಾಲು ಮತ್ತು ಪ್ರತಿಫಲ.

ಆಳವಾದ ಅರ್ಥವನ್ನು ಸೂಚಿಸುವ ಸಲುವಾಗಿಯೇ ಕಾದಂಬರಿಯ ಪ್ರತಿ ವ್ಯಕ್ತಿ, ವಸ್ತು, ಘಟನೆ, ಚಿತ್ರ, ನೆನಪು, ಮಾಹಿತಿ, ಕಾಲದ ನೆಗೆತ ಎಲ್ಲವನ್ನೂ ಈಗ ಹೇಗೆ ಇದೆಯೋ ಹಾಗೆ, ಎಲ್ಲಿದೆಯೋ ಅಲ್ಲಿ ಇಡಲಾಗಿದೆ ಅನ್ನುವುದು ಸಾಹಿತ್ಯಕ ಕಾದಂಬರಿ ಓದುವವರಿಗೆ ಗೊತ್ತಿರುತ್ತದೆ.

ತಾನು ಬರೆಯುತ್ತಿರುವ ಕೃತಿ ತನ್ನ ಉದ್ದೇಶಕ್ಕಿಂತ ತೀರ ಹೊರತಾದ ಆಕಾರ, ಅರ್ಥಗಳನ್ನು ಪಡೆದೀತು ಎಂದು ಲೇಖಕನಿಗೆ ಅನ್ನಿಸುತ್ತದೆ. ದಾಸ್ತಯೇವ್ಸ್ಕಿ 1870ರಲ್ಲಿ ‘ದಿ ಡೆವಿಲ್ಸ್’ ಬರೆಯಲು ಯೋಜಿಸಿದ್ದ. ಆ ಹೊತ್ತಿನಲ್ಲಿ ಮೂರ್ಛೆಯ ರೋಗಕ್ಕೆ ತುತ್ತಾದ. ಅದರ ಪರಿಣಾಮ ಕುರಿತು ಮುಂದಿನ ತಿಂಗಳಲ್ಲಿ ತನ್ನ ಸೋದರಸೊಸೆ ಸೋಫ್ಯಾ ಇವಾನೋವ್ನಾಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ. ‘ಮತ್ತೆ ಬರವಣಿಗೆ ತೊಡಗಿದೆ. ತೊಂದರೆ ಏನೆಂದು ತಕ್ಷಣ ಹೊಳೆಯಿತು. ಎಲ್ಲಿ ತಪ್ಪು ಮಾಡಿದ್ದೇನೆ ತಿಳಿಯಿತು. ಇದು ಗೊತ್ತಾಗಿ ತನ್ನಷ್ಟಕ್ಕೇ ಸ್ಫೂರ್ತಿಯಿಂದೆಂಬಂತೆ ಹೊಸ ಯೋಜನೆ ರೂಪುತಳೆಯಿತು. ಎಲ್ಲವನ್ನೂ ಪೂರಾ ಬದಲಾಯಿಸಬೇಕಾಗಿತ್ತು. ಒಂದೇ ಒಂದು ಕ್ಷಣ ಕೂಡ ಯೋಚನೆ ಮಾಡದೆ ನಾನು ಬರೆದದ್ದೆಲ್ಲವನ್ನೂ ಹೊಡೆದು ಹಾಕಿದೆ, ಮತ್ತೆ ಮೊದಲ ಪುಟದಿಂದ ಆರಂಭಮಾಡಿದೆ. ಒಂದು ವರ್ಷದ ಇಡೀ ಕೆಲಸ ಕೊಚ್ಚಿ ಹೋಯಿತು’ ಅಂದಿದ್ದಾನೆ. ಒಟ್ಟು ಸುಮಾರು ಇನ್ನೂರು ಪುಟಗಳ ಬರವಣಿಗೆಯಲ್ಲಿ ನಿಜವಾಗಿ ಅವನು ಬದಲಾಯಿಸಿದ್ದು ನಲವತ್ತು ಪುಟ, ಪುಸ್ತಕದ ಬಹಳಷ್ಟು ಭಾಗ ಹಾಗೇ ಉಳಿಯಿತು ಎನ್ನುತ್ತಾನೆ ದಾಸ್ತಯೇವ್ಸ್ಕಿಯ ಜೀವನ ಚರಿತ್ರೆಕಾರ ಜೋಸೆಫ್ ಫ್ರಾಂಕ್. ಆದರೆ ಕೇಂದ್ರ ಬದಲಾಗಿತ್ತು, ಪಾತ್ರಗಳು ಸಂಕೀರ್ಣಗೊಂಡು ಪ್ರಖರವಾದ ರಾಜಕೀಯ ಕಾದಂಬರಿ ರೂಪುಗೊಂಡಿತ್ತು.

ಯಾವುದನ್ನು ನಾನು ಕಾದಂಬರಿಯ ಕೇಂದ್ರ ಅನ್ನುತಿದ್ದೇನೋ, ಕಾದಂಬರಿಕಾರರಿಗೆ ಸಹಜವಾಗಿ ಸ್ಫುರಿಸುತ್ತದೋ ಅದು ಎಷ್ಟು ಮುಖ್ಯವಾದದ್ದೆಂದರೆ ಕೇಂದ್ರವನ್ನು ಬದಲಾಯಿಸಿದ್ದೇವೆಂದು ಕಲ್ಪಿಸಿಕೊಂಡರೂ ಸಾಕು, ಕಾದಂಬರಿಯ ಪ್ರತಿ ವಾಕ್ಯ, ಪ್ರತಿ ಪುಟ ತೀರ ಬೇರೆಯದೇ ಅರ್ಥವನ್ನು ಪಡೆಯುತ್ತವೆ. ಎಲ್ಲಿಂದ ಹೊಮ್ಮುತ್ತಿದೆಯೆಂದು ಗೊತ್ತಾಗದ, ಆದರೆ ಇಡೀ ಕಾಡನ್ನು ಬೆಳಗುವ ಬೆಳಕಿನ ಆಕರ ಇದ್ದ ಹಾಗೆ ಕಾದಂಬರಿಯ ಕೇಂದ್ರ. ನಾವು ದಾಟಿ ಬಂದ ಪ್ರತಿ ಕಾಲುದಾರಿ, ಪ್ರತಿ ಮರ, ನಮ್ಮ ಮುಂದಿನ ಮುಳ್ಳು ಪೊದೆ ಎಲ್ಲವನ್ನೂ ಬೆಳಗುತ್ತದೆ ಬೆಳಕಿನ ಆ ಕೇಂದ್ರ. ಅಂಥದೊಂದು ಕೇಂದ್ರ ಇದೆ ಅನ್ನುವ ಭಾವ ಇರುವವರೆಗೆ ಓದು ಸಾಗಿರುತ್ತದೆ. ನಾವು ಕತ್ತಲಲ್ಲೇ ಇದ್ದರೂ ಬೆಳಕು ಕಂಡೀತೆಂಬ ಭರವಸೆಯಲ್ಲಿ ಮುಂದೆ ಸಾಗುತ್ತೇವೆ. ಕಾದಂಬರಿಯ ಕೇಂದ್ರ ಇದು ಎಂದು ಮೊದಲಲ್ಲೇ ಸ್ಪಷ್ಟವಾಗಿಬಿಟ್ಟರೆ ಓದುವುದು ಪುನರುಕ್ತಿ ಎನ್ನಿಸಿಬಿಡುತ್ತದೆ. ಮಾಬಿ ಡಿಕ್ ಕಾದಂಬರಿ ಓದುವಾಗ ‘ಈ ಕಾದಂಬರಿಯ ನಿಜ ವಸ್ತು ಏನು, ಇದರ ಕೇಂದ್ರ ಎಲ್ಲಿದೆ’ ಎಂದು ಬೋರೆಸ್ ಪ್ರಶ್ನೆ ಕೇಳಿಕೊಂಡಿದ್ದ. ವೈಜ್ಞಾನಿಕ, ಪತ್ತೇದಾರಿ, ಪ್ರಣಯ ಕಾದಂಬರಿ ಇಂಥವನ್ನು ಓದುವಾಗ ಈ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವುದೇ ಇಲ್ಲ. ನಾವು ಈಗಾಗಲೇ ಓದಿರುವ ಇಂಥ ಇತರ ಕಾದಂಬರಿಗಳ ಕೇಂದ್ರವನ್ನು ಎಲ್ಲಿ ಕಂಡಿದ್ದೇವೋ ಈಗಲೂ ಅಲ್ಲೇ ಅದನ್ನು ಕಾಣುತ್ತೇವೆ. ಕೇವಲ ಸಾಹಸಗಳ ವಿವರ, ದೃಶ್ಯ, ಮುಖ್ಯಪಾತ್ರ ಮತ್ತು ಕೊಲೆಗಳು ಮಾತ್ರ ಬೇರೆಯಾಗಿರುತ್ತವೆ. ವೈಜ್ಞಾನಿಕ ಕಾದಂಬರಿಗಳಲ್ಲಿ Stanislaw Lem, Philip K. Dick, ರೋಮಾಂಚಕ ಪತ್ತೇದಾರಿ ಕಾದಂಬರಿಗಳಲ್ಲಿ Patricia Highsmith, ಗೂಢಚರ್ಯೆ ಕಾದಂಬರಿಗಳಲ್ಲಿ John Le Carré ಬಿಟ್ಟರೆ ಮಿಕ್ಕಂತೆ ಇಂಥ ಕೃತಿಗಳು ಕೃತಿಯ ಕೇಂದ್ರ ಎಲ್ಲಿದೆ ಎಂದು ಹುಡುಕುವ ಒತ್ತಾಯವನ್ನೇ ಮೂಡಿಸುವುದಿಲ್ಲ. ಹಾಗಾಗಿ ಹತ್ತಾರು ಪುಟಗಳಿಗೆ ಒಮ್ಮೊಮ್ಮೆ ಕುತೂಹಲ ಕೆರಳಿಸುವಂಥ ಹುನ್ನಾರಗಳನ್ನು ಲೇಖಕರು ವರ್ಣಿಸುತ್ತಾರೆ. ಬದುಕಿನ ಪ್ರಶ್ನೆ ಏನು ಅನ್ನುವಂಥ ಗಹನ ಪ್ರಶ್ನೆಗಳನ್ನು ಕೇಳಿಕೊಳ್ಳುವ ಅಗತ್ಯವಿಲ್ಲದಿರುವುದರಿಂದ ಈ ಇಂಥ ಕಾದಂಬರಿಗಳನ್ನು ಓದುವಾಗ ಕ್ಷೇಮವಾಗಿದ್ದೇವೆ ಅನ್ನಿಸುತ್ತದೆ.

ಆರಾಮವಾಗಿ ಓದಬೇಕು, ಎಲ್ಲ ಸರಿಯಾಗಿದೆ ಅನ್ನುವ ಭಾವ ಮನಸ್ಸನ್ನು ತುಂಬಬೇಕು, ಎಲ್ಲವೂ ಪರಿಚಿತ ಅನ್ನುವ ನೆಮ್ಮದಿ ಇರಬೇಕು ಅನ್ನುವ ಬಯಕೆಯೇ ಇಂಥ ಕಾದಂಬರಿಗಳನ್ನು ಓದುವ ಹಾಗೆ ಪ್ರೇರೇಪಿಸುತ್ತದೆ. ನಾವಿರುವ ಜಗತ್ತಿನಲ್ಲಿ ನೆಮ್ಮದಿ ಇಲ್ಲ ಅನ್ನುವ ಕಾರಣಕ್ಕೆ, ಬದುಕಿನ ಅರ್ಥವನ್ನು ಹುಡುಕಬೇಕೆನ್ನುವ ಅಪೇಕ್ಷೆಗೆ ನಾವು ಮಹಾನ್ ಸಾಹಿತ್ಯಕ ಕಾದಂಬರಿಗಳನ್ನು ಓದುತ್ತೇವೆ. ಆಧುನಿಕ ಮನುಷ್ಯ ತನಗೂ ಜಗತ್ತಿಗೂ ಇರುವ ಸಂಬಂಧ ಹಾಳಾಗಿದೆ ಎಂಬ ಕಾರಣದಿಂದ ಕಾದಂಬರಿ ಓದುತ್ತಾನೆ; ಅಂದರೆ ಆಧುನಿಕ ಓದುಗ ಮುಗ್ಧತೆಯಿಂದ ಪ್ರಬುದ್ಧತೆಗೆ ಸಾಗಿ ಬಂದವನಾಗಿರುತ್ತಾನೆ. ಮಾನಸಿಕ ಕಾರಣಗಳಿಗಾಗಿಯೇ ನಾನು ಕಾದಂಬರಿ, ಆಧ್ಯಾತ್ಮ, ತತ್ವಶಾಸ್ತ್ರ, ಧರ್ಮವನ್ನು ಕುರಿತು ಯುವಕನಾಗಿದ್ದಾಗ ಓದುತ್ತಿದ್ದೆ. ಇಪ್ಪತ್ತರ ಹರಯದಲ್ಲಿದ್ದಾಗ ಕಾದಂಬರಿಯ ಕೇಂದ್ರವನ್ನು ಅರಸುತ್ತಿದ್ದೆ-ಅದು ಜೀವನ್ಮರಣದ ಪ್ರಶ್ನೆ ಅನ್ನುವ ಹಾಗೆ. ಬದುಕಿನ ಅರ್ಥ ಹುಡುಕುತ್ತಿದ್ದೆ ಮಾತ್ರವಲ್ಲ ಜಗತ್ತನ್ನು ಕುರಿತು ನನ್ನದೇ ದೃಷ್ಟಿ ಬೆಳೆಸಿಕೊಳ್ಳುತ್ತಿದ್ದೆ, ನೈತಿಕ ಸಂವೇದನೆ ರೂಪಿಸಿಕೊಳ್ಳುತ್ತಿದ್ದೆ, ಟಾಲ್ಸ್ ಟಾಯ್, ಸ್ಟೆಂಡಾಲ್, ಪ್ರೌಸ್ಟ್, ಮನ್, ದಾಸ್ತಯೇವ್ಸ್ಕಿ, ವೂಲ್ಫ್ ರಂಥ ಮಹಾನ್ ಲೇಖಕರಿಂದ ದೊರೆತ ಒಳನೋಟವನ್ನು ತಿದ್ದಿಕೊಳ್ಳುತ್ತಿದ್ದೆ.

ಬರೆಯುತ್ತ ಬರೆಯುತ್ತ ಕಾದಂಬರಿಯ ಕೇಂದ್ರ ಸ್ಪಷ್ಟವಾಗುತ್ತದೆ ಎಂದು ಕೆಲವು ಲೇಖಕರು ತಿಳಿಯುತ್ತಾರೆ. ಯಾವುದು ಅಗತ್ಯ, ಅನಗತ್ಯ, ಯಾವುದು ಹೆಚ್ಚು, ಕಡಿಮೆ, ಯಾವ ಪಾತ್ರ ಮುಖ್ಯ, ಅಲ್ಲ ಅನ್ನುವ ಸಂಗತಿ ಅವರು ಕೇಂದ್ರವನ್ನು ಗುರುತಿಸಿಕೊಂಡಾಗ ಸ್ಪಷ್ಟವಾಗುತ್ತದೆ; ಬರೆದದ್ದನ್ನು ಪರಿಷ್ಕರಿಸುವ ಸಮಯದಲ್ಲಿ ತಕ್ಕ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಸಾವಿರಾರು ಪುಟ ಬರೆದರೂ ಕೇಂದ್ರ ಸ್ಪಷ್ಟವಾಗದೆ ಹೋಗಬಹುದು.

ಇನ್ನು ಕೆಲವು ಲೇಖಕರು ಮೊದಲಿಗೇ ಕೇಂದ್ರವನ್ನು ಸ್ಪಷ್ಟಪಡಿಸಿಕೊಂಡು ಬರೆಯಲು ಆರಂಭಿಸುತ್ತಾರೆ. ಇದು ಹೆಚ್ಚಿನ ಶ್ರಮದ ಕೆಲಸ. ಅದರಲ್ಲೂ ಆರಂಭದ ಅಧ್ಯಾಯಗಳನ್ನು ಬರೆಯುವುದು ತೀರ ಕಷ್ಟವಾಗುತ್ತದೆ. ಟಾಲ್ಸ್ ಟಾಯ್ ನಾಲ್ಕು ವರ್ಷಗಳ ಕಾಲ ‘ವಾರ್ ಅಂಡ್ ಪೀಸ್’ ತಿದ್ದಿದ, ಆದರೆ ಅವನ ಕಾದಂಬರಿಯ ಕೇಂದ್ರ ಅಥವ ಮುಖ್ಯ ಐಡಿಯ ಬದಲಾಗಲಿಲ್ಲ. ಚರಿತ್ರೆಯಲ್ಲಿ ಬಿಡಿ ವ್ಯಕ್ತಿಯ ಪಾತ್ರವನ್ನು ಕುರಿತ ಸುದೀರ್ಘವಾದ ಚರ್ಚೆಯನ್ನು ಕಾದಂಬರಿಯ ಕೊನೆಯಲ್ಲಿ ಸೇರ್ಪಡೆ ಮಾಡಿದ. ಚರಿತ್ರೆ ಮತ್ತು ವ್ಯಕ್ತಿಯ ಸಂಬಂಧವೇ ‘ವಾರ್ ಅಂಡ್ ಪೀಸ್’ ಕೃತಿಯ ಕೇಂದ್ರ ಎಂಬ ಭಾವನೆ ಹುಟ್ಟಬಹುದು. ಆದರೆ ಇಂದಿನ ಓದುಗರ ಮಟ್ಟಿಗೆ ಚರಿತ್ರೆಯಲ್ಲಿ ವ್ಯಕ್ತಿಯ ಸ್ಥಾನದ ಚರ್ಚೆ ಕಾದಂಬರಿಯ ಕೇಂದ್ರವಲ್ಲ; ಮನಷ್ಯ ಬದುಕಿನ ನಾಜೂಕು, ದೌರ್ಬಲ್ಯ, ವಿಶ್ವದಲ್ಲಿ ನಮ್ಮ ಸ್ಥಾನ ಇಂಥ ಸಂಗತಿಗಳು ಕಾದಂಬರಿ ಓದಿ ಮುಗಿಸಿದ ಮೇಲೆ ಮನಸ್ಸಿನಲ್ಲಿ ಉಳಿಯುತ್ತವೆಯೇ ಹೊರತು ಚರಿತ್ರೆ ಮತ್ತು ಅದರ ಅರ್ಥದ ಚರ್ಚೆಯಲ್ಲ. ಕಾದಂಬರಿ ಓದುತ್ತ ಒಂದೊಂದು ವಾಕ್ಯವೂ ಕಾದಂಬರಿಯ ಕೇಂದ್ರವನ್ನು ಬೆಳಗುವುದನ್ನು ಅನುಭವಿಸುತ್ತೇವೆ. ಲೇಖಕನ ಉದ್ದೇಶದ ಹಾಗೆಯೇ ಓದುಗರಿಗೆ ಸಿರುಬ ಸುಖವು ಕಾದಂಬರಿಯ ಕೇಂದ್ರ ಇದು ಅನ್ನುವುದನ್ನು ಸೂಚಿಸುತ್ತದೆ.

ನಾವಿರುವ ಜಗತ್ತಿನಲ್ಲಿ ನೆಮ್ಮದಿ ಇಲ್ಲ ಅನ್ನುವ ಕಾರಣಕ್ಕೆ, ಬದುಕಿನ ಅರ್ಥವನ್ನು ಹುಡುಕಬೇಕೆನ್ನುವ ಅಪೇಕ್ಷೆಗೆ ನಾವು ಮಹಾನ್ ಸಾಹಿತ್ಯಕ ಕಾದಂಬರಿಗಳನ್ನು ಓದುತ್ತೇವೆ. ಆಧುನಿಕ ಮನುಷ್ಯ ತನಗೂ ಜಗತ್ತಿಗೂ ಇರುವ ಸಂಬಂಧ ಹಾಳಾಗಿದೆ ಎಂಬ ಕಾರಣದಿಂದ ಕಾದಂಬರಿ ಓದುತ್ತಾನೆ; ಅಂದರೆ ಆಧುನಿಕ ಓದುಗ ಮುಗ್ಧತೆಯಿಂದ ಪ್ರಬುದ್ಧತೆಗೆ ಸಾಗಿ ಬಂದವನಾಗಿರುತ್ತಾನೆ. ಮಾನಸಿಕ ಕಾರಣಗಳಿಗಾಗಿಯೇ ನಾನು ಕಾದಂಬರಿ, ಆಧ್ಯಾತ್ಮ, ತತ್ವಶಾಸ್ತ್ರ, ಧರ್ಮವನ್ನು ಕುರಿತು ಯುವಕನಾಗಿದ್ದಾಗ ಓದುತ್ತಿದ್ದೆ.

ಲೇಖಕರ ಉದ್ದೇಶ, ಪಠ್ಯದ ಅರ್ಥವಂತಿಕೆ, ಓದುಗರ ರುಚಿ, ಕಾದಂಬರಿಯನ್ನು ಓದುತ್ತಿರುವ ಕಾಲ ಮತ್ತು ಸ್ಥಳ ಇವೆಲ್ಲಕ್ಕೆ ಅನುಗುಣವಾಗಿ ಕೇಂದ್ರ ಬದಲಾಗುತ್ತದೆ. ಬದುಕಿನ ಅರ್ಥವನ್ನು ವಿವರಿಸುವ ಹಾಗೆಯೇ ಕಾದಂಬರಿಯ ಕೇಂದ್ರವನ್ನು ವಿವರಿಸುವುದು ಅಸಾಧ್ಯವಾದ ಕೆಲಸ ಅನ್ನಿಸೀತು. ಬದುಕಿನ ಅರ್ಥದ ಹಾಗೆಯೇ ಸಾಹಿತ್ಯಕ ಕಾದಂಬರಿಯ ಅರ್ಥವನ್ನೂ ತಾತ್ಪರ್ಯ ರೂಪದಲ್ಲಿ ಬೇರೆ ಮಾತುಗಳಲ್ಲಿ ವಿವರಿಸಲಾಗದು. ಆಧುನಿಕ ಸೆಕ್ಯುಲರ್ ಮನುಷ್ಯ ಇಂಥ ಕಾರ್ಯದ ವ್ಯರ್ಥತೆಯನ್ನು ಒಳಗೇ ಬಲ್ಲವನು. ಆದರೂ ತಾನು ಓದುತ್ತಿರುವ ಕಾದಂಬರಿಯ ಕೇಂದ್ರದ ಬಗ್ಗೆ ಚಿಂತಿಸುವಾಗ ಬದುಕಿನ ಅರ್ಥದ ಬಗ್ಗೆ ಯೋಚಿಸದೆ ಇರಲಾರ. ಅವನ ಮಟ್ಟಿಗೆ ಕೇಂದ್ರದ ಹುಡುಕಾಟವು ಲೋಕದಲ್ಲಿ ತನ್ನ ಬದುಕು ಎಂಥದು ಅನ್ನುವುದನ್ನು ಹುಡುಕುವ ಕೆಲಸ. ಅಂದರೆ, ನಾವು ಸಾಹಿತ್ಯಕ ಕಾದಂಬರಿ ಓದುವಾಗ ಕೇಂದ್ರವನ್ನು ಕುರಿತು ಚಿಂತಿಸುವುದು, ಅದು ಬದುಕನ್ನು ಕುರಿತ ನಮ್ಮ ನೋಟಕ್ಕೆ ಎಷ್ಟು ಸಮೀಪವೆನ್ನುವುದನ್ನು ಗುರುತಿಸುವುದು ಮುಖ್ಯ.

ಕೇಂದ್ರವೆನ್ನುವುದು ವಿಶಾಲವಾದ ದೃಶ್ಯದಲ್ಲಿ, ನಿರೂಪಣೆಯ ಚೆಲುವು, ಸ್ಪಷ್ಟತೆ, ವಿವರಣೆಗಳಲ್ಲಿ ಕೆಲವೊಮ್ಮೆ ಇರಬಹುದು-ಯುದ್ಧ ಮತ್ತು ಶಾಂತಿಯಲ್ಲಿರುವ ಹಾಗೆ. ಕೇಂದ್ರವೆನ್ನುವುದು ಕಾದಂಬರಿಯ ರೂಪ ಮತ್ತು ತಂತ್ರಕ್ಕೆ ನಿಕಟವಾಗಿ ಹೊಂದಿಕೊಂಡಿರಬಹುದು-ಯೂಲಿಸಿಸ್ ನಲ್ಲಿ ಇರುವ ಹಾಗೆ. ಪ್ಲಾಟು, ಥೀಮು, ವಿಷಯ ಕೂಡ ಯೂಲಿಸಿಸ್ ಕಾದಂಬರಿಯ ಕೇಂದ್ರವಲ್ಲ; ಮನುಷ್ಯನ ಮನಸ್ಸು ವರ್ತಿಸುವ ರೀತಿಗಳನ್ನು ಕಾವ್ಯಾತ್ಮಕವಾಗಿ ತೆರೆದಿಡುವುದು, ಆ ಮೂಲಕ ನಮ್ಮ ಬದುಕಿನಲ್ಲಿ ನಾವು ಈ ಮೊದಲು ಗಮನಿಸದೆ ಇದ್ದ ಸಂಗತಿಗಳ ದರ್ಶನ ಮಾಡಿಸುವುದು ಯೂಲಿಸಿಸ್ ನ ಕೇಂದ್ರ. ಜಾಯ್ಸ್ ನಂಥ ಸಮರ್ಥ ಲೇಖಕ ತನ್ನ ತಂತ್ರಗಳ ಮೂಲಕ ಕಾದಂಬರಿಯ ರೂಪವನ್ನೂ ಪರಿಣಾಮವನ್ನೂ ಬದಲಿಸಿದ ಮೇಲೆ ಅವೇ ತಂತ್ರಗಳನ್ನು ಮತ್ತೊಬ್ಬರು ಬಳಸಿದರೆ ಓದುಗರ ಮೇಲೆ ಅಂಥ ಪರಿಣಾಮ ಆಗುವುದಿಲ್ಲ. ಜಾಯ್ಸ್ ನಿಂದ ಫಾಕ್ನರ್ ಬಹಳಷ್ಟನ್ನು ಕಲಿತರೂ ಅವನ ‘ದಿ ಸೌಂಡ್ ಅಂಡ್ ಫ್ಯೂರಿ’ ಮತ್ತು ‘ಆಸ್ ಐ ಲೈ ಡೈಯಿಂಗ್’ ಗಳ ಶಕ್ತಿ ಇರುವುದು ಪಾತ್ರಗಳ ಮನಸಿನಲ್ಲಿ ಅಡಗಿರುವ ಆಲೋಚನೆಗಳನ್ನು ಜಾಯ್ಸ್ ನ ಹಾಗೆ ತೆರೆದು ತೋರುವುದರಲ್ಲಲ್ಲ; ಬದಲಾಗಿ ಮನಸಿನೊಳಗಿನ ಮಾತುಗಳನ್ನು ಹೆಣೆದಿರುವ ಬಗೆ, ಆ ಹೆಣಿಗೆ ಲೋಕವನ್ನೂ ಬದುಕನ್ನೂ ಕುರಿತು ನೀಡುವ ತಾಜಾ ನೋಟ ಇವು ಫಾಕ್ನರ್ ಕೃತಿಗಳ ಶಕ್ತಿ. ನಿರೂಪಣೆಯ ದನಿಯ ಜೊತೆ ಹೇಗೆ ಆಡಬೇಕು, ಕಾಲದಲ್ಲಿ ಹಿಂದೆ ಮುಂದೆ ಚಲಿಸುತ್ತ ಕಥೆ ಹೇಗೆ ಹೇಳಬೇಕು ಅನ್ನುವುದನ್ನು ಅವನು ಕಾನ್ರಾಡ್ ನಿಂತ ಕಲಿತ. ಇಂಥ ಜೋಡಣೆಯ ಇಂಪ್ರೆಶನಿಸ್ಟ್ ತಂತ್ರವನ್ನೇ ವರ್ಜೀನಿಯ ವೂಲ್ಫ್ ಮಿಸೆಸ್ ಡಾಲೊವೆ ಯಲ್ಲಿ ಬಳಸಿ ಸಣ್ಣಪುಟ್ಟ ಆಲೋಚನೆ, ಸಾಮಾನ್ಯ ಯೋಚನೆ, ನಾಟಕೀಯ ಭಾವ, ದುಃಖ, ಹೆಮ್ಮೆಗಳ ಮಿಶ್ರಣ ಬದುಕಿನ ಪ್ರತಿ ಕ್ಷಣದಲ್ಲೂ ಬಿಡಿಸಲಾಗದ ಹಾಗೆ ಬೆರೆತಿರುತ್ತವೆ ಅನ್ನುವುದನ್ನು ತೋರುತ್ತಾಳೆ. ಒಂದೇ ಪಾತ್ರದ ಪರಿಮಿತ ದೃಷ್ಟಿಕೋನದ ಮೂಲಕ ಕಾದಂಬರಿಯನ್ನು ವಿನ್ಯಾಸಗೊಳಿಸುವ ವಿಚಾರವನ್ನು ಪಾಲಿಸಿದವನು ಹೆನ್ರಿ ಜೇಮ್ಸ್. ಆತ ಮಿಸೆಸ್ ಹಂಫ್ರಿ ವಾರ್ಡ್ ಳಿಗೆ ಬರೆದ ಪತ್ರದಲ್ಲಿ ‘ಕಥೆಯೊಂದನ್ನು ಹೇಳಲು ಐದು ಲಕ್ಷ ದಾರಿಗಳಿವೆ. ಒಟ್ಟಾರೆ ಕಥೆಗೆ ಕೇಂದ್ರವೊಂದು ಇರುವುದಾದರೆ ಅವುಗಳಲ್ಲಿ ಯಾವುದು ಬೇಕಾದರೂ ಸಮರ್ಥನೀಯವಾಗಬಲ್ಲದು’ ಅನ್ನುತ್ತಾನೆ.

(ಫಾಕ್ನರ್:ದಿ ವೈಲ್ಡ್ ಪಾಮ್ಸ್ ಕತೃ)

ಕಾದಂಬರಿಗಳ ರೂಪ ಮತ್ತು ತಂತ್ರಗಳು ಕಾದಂಬರಿಯ ಅರ್ಥದ ಆಳವನ್ನು ಸೂಚಿಸುತ್ತವೆ. ಕಥೆಯೊಂದನ್ನು ಹೊಸತಾಗಿ ಹೇಳುವ ವಿಧಾನವನ್ನು ಕಂಡುಕೊಳ್ಳುವುದೆಂದರೆ ಲೋಕವನ್ನು ನೋಡಲು ಹೊಸದೊಂದು ಕಿಟಕಿ ಮಾಡಿಟ್ಟ ಹಾಗೆ. ನಾನೂ ಕಾದಂಬರಿಕಾರನಾಗಿ ಹೊಸತೊಂದು ದೃಷ್ಟಿಕೋನ ಹುಡುಕುತ್ತಾ ಇತರ ಕಾದಂಬರಿಕಾರರ ಬರಹದಲ್ಲಿ ಅದು ದೊರಕೀತೋ ಎಂದು ಆಸೆಯಿಂದ, ಕಾತರದಿಂದ, ಹತಾಶೆಯಿಂದಲೂ ಹುಡುಕಿದ್ದೇನೆ. ಲೋಕವನ್ನು ನನ್ನ ಮನಸಿನ ಕಣ್ಣಿನ ಮೂಲಕ ಕಾಣುವುದಕ್ಕೆ ನಾನೇ ಮಾಡಿಕೊಳ್ಳಬಹುದಾದ ಯಾವುದೇ ಪರಿಪೂರ್ಣ ಕಿಟಕಿ ಪುಟ್ಟದಾಗಿಯೇ ಇರಬೇಕಾದದ್ದು, ಖಾಸಗಿ ಚರಿತ್ರೆಗೆ ಲಗತ್ತಾಗಿರಬೇಕಾದದ್ದು ಅನಿವಾರ್ಯ.

ಫಾಕ್ನರ್ ನ “ದಿ ವೈಲ್ಡ್ ಪಾಮ್ಸ್” ಕಾದಂಬರಿ ನಿಜವಾಗಿ ಜೋಡಿ ಕಥೆಗಳಿಂದ ರೂಪುಗೊಂಡದ್ದು; ಅವೆರಡೂ ಪ್ರತ್ಯೇಕ, ಸ್ವತಂತ್ರ ಕಥೆಗಳಾಗಿ ಮನಸ್ಸಿನಲ್ಲಿತ್ತು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ. ಅವೆರಡರ ಹೆಣಿಗೆಯನ್ನು ಸಾಧಿಸುವ ಬದಲಾಗಿ ಆತ ಇಸ್ಪೀಟು ಎಲೆ ಕಲೆಸಿದ ಹಾಗೆ ಎರಡೂ ಕಥೆಗಳ ಅಧ್ಯಾಯಗಳನ್ನು ಒಂದರ ನಂತರ ಇನ್ನೊಂದರ ಹಾಗೆ ಜೋಡಿಸಿದ. ಮೊದಲ ಅಧ್ಯಾಯದಲ್ಲಿ ನಾವು ಹೆನ್ರಿ ಮತ್ತು ಚಾರ್ಲಟ್ ಎಂಬ ಪ್ರೇಮಿಗಳ ಕಷ್ಟ ಕುರಿತು ಓದುತ್ತೇವೆ, ಮತ್ತೆ ಮುಂದಿನ ಅಧ್ಯಾಯದಲ್ಲಿ ‘ಮುದುಕ’ ಎಂಬ ಹೆಸರಿನ ಕಥೆಯ ಮೊದಲ ಅಧ್ಯಾಯ ಓದುತ್ತೇವೆ. ಅದು ಮಿಸಿಸಿಪಿ ನದಿಯ ಪ್ರವಾಹದ ವಿರುದ್ಧ ಹೋರಾಡುತ್ತಿರುವ ಬಂದಿಯೊಬ್ಬನ ಕಥೆ. ವೈಲ್ಡ್ ಪಾಮ್ಸ್ ಕೃತಿಯಲ್ಲಿ ಈ ಎರಡೂ ಕಥೆಗಳು ಎಲ್ಲೂ ಸಂಗಮಗೊಳ್ಳುವುದೇ ಇಲ್ಲ. ಕೆಲವು ಪ್ರಕಾಶಕರು ಮುದುಕ ಕಥೆಯನ್ನು ಪ್ರತ್ಯೇಕವಾಗಿ ಮುದ್ರಿಸಿದ್ದೂ ಇದೆ. ಆದರೆ, ಇವೆರಡೂ ಕಥೆ ವೈಲ್ಡ್ ಪಾಮ್ಸ್ ಹೆಸರಿನ ಕಾದಂಬರಿಯ ಭಾಗವಾಗಿರುವುದರಿಂದ ನಾವು ಓದುತ್ತಾ ಅವೆರಡನ್ನೂ ಹೋಲಿಸುತ್ತೇವೆ, ಅವುಗಳಲ್ಲಿ ಸಾಮಾನ್ಯ ಅಂಶವಿದೆಯೇ, ಸಮಾನ ಕೇಂದ್ರವಿದೆಯೇ ಎಂದು ಹುಡುಕುತ್ತೇವೆ.


ಎರಡೂ ಕಥೆಗಳನ್ನು ಪ್ರತ್ಯೇಕವಾಗಿ ಓದುವುದು ಮತ್ತು ವೈಲ್ಡ್ ಪಾಮ್ಸ್ ನ ಭಾಗವಾಗಿ ಓದುವುದು ಬೇರೆ ಬೇರೆ ಅರ್ಥಗಳನ್ನು ಹೊಳೆಯಿಸುತ್ತವೆ. ಅಂದರೆ ಕಾದಂಬರಿಯ ವ್ಯಾಖ್ಯಾನಕ್ಕೆ ಅದರ ಕೇಂದ್ರ ಕಾರಣವಾಗುತ್ತದೆ. ಅರೇಬಿಯನ್ ನೈಟ್ಸ್ ಅನ್ನು ಬಿಡಿಕಥೆಗಳಾಗಿ ಓದಿದರೆ ಇನ್ ಸರ್ಚ್ ಆಫ್ ಲಾಸ್ಟ್ ಟೈಮ್ ಅನ್ನು ಅದಕ್ಕೊಂದು ಕೇಂದ್ರವಿದೆ ಎಂಬ ಅರಿವಿನಲ್ಲಿ ಅದರ ಪ್ರತ್ಯೇಕ ಭಾಗಗಳನ್ನು ಕಾದಂಬರಿಯ ಭಾಗಗಳಾಗಿ ಓದುತ್ತೇವೆ.

(ಮುಂದುವರಿಯುವುದು)