“ಕಾದಂಬರಿಗೆ ಕೇಂದ್ರವಿದೆ ಎಂದು ಗೊತ್ತಿರುವುದರಿಂದ, ಅಥವಾ ಹಾಗೆ ನಂಬುವುದರಿಂದ ಓದುತ್ತಿರುವ ನಾವು ಕಾಡಿನಲ್ಲಿ ಒಂದೊಂದು ಎಲೆಯನ್ನೂ ಮುರಿದು ಬಿದ್ದ ಕೊಂಬೆಯನ್ನೂ ಹುಷಾರಾಗಿ ಗಮನಿಸುತ್ತ ಸುಳಿವು ಹುಡುಕುತ್ತಿರುವ ಬೇಟೆಗಾರನ ಹಾಗೆ ಇರುತ್ತೇವೆ. ಓದುವಾಗ ನಮಗೆದುರಾಗುವ ಪ್ರತಿಯೊಂದೂ ಪದ, ವಸ್ತು, ಪಾತ್ರ, ಮುಖ್ಯಪಾತ್ರ, ಸಂಭಾಷಣೆ, ವರ್ಣನೆ, ಭಾಷೆ, ಶೈಲಿ, ಕಥನದಲ್ಲಿ ಎದುರಾಗುವ ತಿರುವು ಎಲ್ಲವೂ ಕಣ್ಣಿಗೆ ಕಾಣುವುದಕ್ಕಿಂತ ಮಿಗಿಲಾಗಿ ಮತ್ತೇನನ್ನೋ ಸೂಚಿಸುತ್ತಿವೆ ಎಂದು ಭಾವಿಸುತ್ತೇವೆ”
ಓ.ಎಲ್.ನಾಗಭೂಷಣಸ್ವಾಮಿ ಕನ್ನಡಕ್ಕೆ ಅನುವಾದಿಸಿರುವ ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಭಾಷಣ ಮಾಲಿಕೆಯ ಮೂರನೆಯ ಕಂತು.

 

ಕಾದಂಬರಿ ಅಂದರೆ ಇನ್ನೊಂದು ಬದುಕು. ಕನಸುಗಳ ಹಾಗೆ ಕಾದಂಬರಿಗಳೂ ನಮ್ಮ ಬದುಕಿನ ಬಣ್ಣ, ಜಟಿಲತೆಗಳನ್ನು ತೋರುತ್ತವೆ. ಕನಸಿನ ಹಾಗೇ ಕಾದಂಬರಿಗಳ ತುಂಬ ಜನ ಇರುತ್ತಾರೆ, ಮುಖಗಳಿರುತ್ತವೆ, ನಮಗೆ ಗೊತ್ತಿದೆ ಅನ್ನಿಸುವಂಥ ವಸ್ತುಗಳಿರುತ್ತವೆ. ಕಾದಂಬರಿ ಓದುವಾಗ ನಮಗೆ ಎದುರಾಗುವ ಸಂಗತಿಗಳಿಗೂ ಕನಸಿನ ಅಸಾಮಾನ್ಯ ಗುಣವಿರುತ್ತದೆ. ಕಾಲ್ಪನಿಕ ಸಂಗತಿಗಳನ್ನು ಕಾಣುತ್ತಾ ವ್ಯಕ್ತಿ, ಘಟನೆಗಳನ್ನು ಚಿತ್ರಿಸಿಕೊಳ್ಳುತ್ತಾ ನಿಜವಾಗಿ ನಾವೆಲ್ಲಿದ್ದೇವೆ ಅನ್ನುವುದನ್ನೇ ಮರೆಯುತ್ತೇವೆ. ಕಾದಂಬರಿ ಓದುವಾಗ ನಾವು ಕಲ್ಪಿತ ಜಗತ್ತಿನಲ್ಲಿ ಇರುತ್ತೇವೆ. ನಾವಿರುವ ಕಾದಂಬರಿಯ ಕಲ್ಪಿತ ಲೋಕವೇ ನಿಜವಾದ ಜಗತ್ತಿಗಿಂತ ಹೆಚ್ಚು ಖುಷಿಯ ಜಾಗವಾಗಿ ಕಾಣುತ್ತದೆ. ಕಾದಂಬರಿಯೊಳಗೆ ನಾವು ನಡೆಸುವ ಎರಡನೆಯ ಬದುಕು ನಮ್ಮ ವಾಸ್ತವಿಕ ಬದುಕಿಗಿಂತ ಹೆಚ್ಚು ನಿಜವೆಂದು ತೋರುತ್ತದೆ. ವಾಸ್ತವದ ಬದಲಾಗಿ ಕಾದಂಬರಿಯನ್ನು ಕಟ್ಟಿಕೊಳ್ಳುತ್ತೇವೆ, ಅಥವಾ ಕಾದಂಬರಿಯನ್ನೇ ನಿಜ ಜೀವನವೆಂದು ಭ್ರಮಿಸುತ್ತೇವೆ. ಆದರೂ ಈ ಭ್ರಮೆ, ಈ ಎಳಸತುನದ ಬಗ್ಗೆ ನಾವೆಂದೂ ದೂರು ಮಾಡುವವರಲ್ಲ. ‘ಕನಸು ಹೀಗೇ ಮುಂದುವರೆಯಲಿ,’ ಎಂದು ಎಷ್ಟೋ ಸಲ ಅನ್ನಿಸುತ್ತದಲ್ಲ ಹಾಗೆಯೇ ನಾವು ಓದುತ್ತಿರುವ ‘ಕಾದಂಬರಿ ಹೀಗೇ ಮುಂದುವರೆಯುತ್ತಲೇ ಇರಲಿ,’ ಅನ್ನಿಸುತ್ತದೆ; ಕಾದಂಬರಿಯೊಳಗಿನ ನಮ್ಮ ಎರಡನೆಯ ಬದುಕು ನಮ್ಮೊಳಗೆ ಸ್ಥಿರವಾಸ್ತವದ, ಇದೇ ಅಧಿಕೃತ ಬದುಕು ಎಂಬ ಭಾವ ಮೂಡಿಸುತ್ತಲೇ ಇರಲಿ ಅಂದುಕೊಳ್ಳುತ್ತೇವೆ. ತಾನೇ ವಾಸ್ತವ ಬದುಕು ಅನ್ನುವ ಭ್ರಮೆ ಮೂಡಿಸದ ಕಾದಂಬರಿ ಕಸಿವಿಸಿ ಹುಟ್ಟಿಸುತ್ತದೆ.

‘ಕಸನು ನಿಜವೆಂಬ ಕನಸು ಕಾಣುತ್ತೇವೆ’—ಇದು ಕನಸಿನ ವ್ಯಾಖ್ಯಾನ. ಹಾಗೆಯೇ ಕಾದಂಬರಿಯನ್ನು ನಿಜವೆಂದುಕೊಂಡು ಓದುತ್ತೇವೆ. ಆದರೂ ಹೀಗಂದುಕೊಂಡಿರುವುದು ಸುಳ್ಳು ಅನ್ನುವುದು ನಮ್ಮ ಮನಸ್ಸಿನ ಆಳದಲ್ಲಿ ಇದ್ದೇ ಇರುತ್ತದೆ. ಕಾದಂಬರಿಯ ಸ್ವರೂಪವೇ ಈ ವಿರೋಧ ಭಾವಗಳಿಗೆ ಕಾರಣವಾಗುತ್ತದೆ. ಬೇರೆ ಬೇರೆ ಸ್ಥಿತಿಗಳನ್ನು ಒಮ್ಮೆಗೇ ನಂಬುವ ನಮ್ಮ ಸಾಮರ್ಥ್ಯವನ್ನೇ ಕಾದಂಬರಿಯ ಕಲೆ ಅವಲಂಬಿಸಿರುತ್ತದೆ.

ಯಾವುದೇ ಕಾದಂಬರಿಯ ಬಗ್ಗೆ ನಾವು ಬಗೆಬಗೆಯ ನಿಲುವು ತಾಳಬಹುದು, ಅನೇಕ ಬಗೆಗಳಲ್ಲಿ ನಮ್ಮ ಮನಸ್ಸು, ಆತ್ಮಗಳನ್ನು ಕಾದಂಬರಿಗೆ ತೆತ್ತುಕೊಳ್ಳಬಹುದು, ಕಾದಂಬರಿಯನ್ನು ಅನೇಕ ರೀತಿಗಳಲ್ಲಿ ಓದಬಹುದು. ನಲವತ್ತು ವರ್ಷಗಳಿಂದ ಕಾದಂಬರಿ ಓದುತ್ತ ಸ್ವಂತ ಅನುಭವದಿಂದ ಇದು ನನಗೆ ಗೊತ್ತಾಗಿದೆ. ಕಾದಂಬರಿಯನ್ನು ಕೆಲವು ಬಾರಿ ತಾರ್ಕಿಕವಾಗಿ ಓದುತ್ತೇವೆ; ಇಲ್ಲಾ ಬರಿಯ ಕಣ್ಣಷ್ಟರಿಂದಲೇ ಓದುತ್ತೇವೆ; ಅಥವಾ ನಮ್ಮ ಕಲ್ಪನೆಯನ್ನೆಲ್ಲಾ ಬಳಸಿ, ಕೆಲವು ಬಾರಿ ನಮ್ಮ ಮನಸ್ಸಿನ ಸ್ವಲ್ಪ ಭಾಗ ಮಾತ್ರ ತೊಡಗಿಸಿ ಓದುತ್ತೇವೆ; ಇನ್ನು ಕೆಲವು ಬಾರಿ ನಮ್ಮಿಷ್ಟದ ಹಾಗೆ, ಮತ್ತೆ ಕೆಲವು ನಾವು ಹೇಗೆ ಓದಬೇಕೆಂದು ಪುಸ್ತಕ ಬಯಸುತ್ತದೋ ಹಾಗೆ ಓದುತ್ತೇವೆ. ಕೆಲವೊಮ್ಮೆ ನಮ್ಮ ದೇಹದ ಕಣಕಣವೂ ಓದಿನಲ್ಲಿ ಮಗ್ನವಾಗಿರುತ್ತವೆ. ಯುವಕನಾಗಿದ್ದಾಗ ನಾನು ಸಂಪೂರ್ಣವಾಗಿ ಕಾದಂಬರಿಗೇ ತೆತ್ತುಕೊಂಡ ಕಾಲವೂ ಇತ್ತು. ತೀರ ಗಮನವಿಟ್ಟು ಓದುತ್ತಾ ಆನಂದೋನ್ಮಾದ ಅನುಭವಿಸುತ್ತಿದ್ದೆ. ನನ್ನ ತಲೆಯಲ್ಲಿ ನಡೆಯುತ್ತಿದ್ದ, ನನ್ನ ಆತ್ಮ ಅನುಭವಿಸುತ್ತಿದ್ದ ಎಲ್ಲ ಸಂಗತಿಗಳನ್ನೂ ಚಿತ್ರಕಾರನ ಹಾಗೆ ಚಿತ್ರಿಸಬೇಕು ಎಂದು ನನ್ನ ಹದಿನೆಂಟನೆಯ ವಯಸಿನಿಂದ ಮೂವತ್ತನೆಯ ವಯಸಿನವರೆಗೆ ಬಯಸುತ್ತಿದ್ದೆ. ಚಿತ್ರಕಾರರು ಖಚಿತವಾಗಿ, ಸುಸ್ಪಷ್ಟವಾಗಿ, ಸಂಕೀರ್ಣವಾಗಿ ಪರ್ವತ, ಬಯಲು, ಬಂಡೆ, ಕಾಡು, ನದಿಗಳನ್ನೆಲ್ಲ ಜೀವಂತ ದೃಶ್ಯ ಆಗುವ ಹಾಗೆ ಚಿತ್ರಿಸುತ್ತಾರಲ್ಲ ಹಾಗೆ ಬರೆಯಬೇಕು ಅಂದುಕೊಳ್ಳುತ್ತಿದ್ದೆ.

ಕಾದಂಬರಿ ಓದುವಾಗ ನಮ್ಮ ಮನಸ್ಸಿನಲ್ಲಿ ಏನಾಗುತ್ತದೆ? ಚಲನಚಿತ್ರ, ವರ್ಣಚಿತ್ರ ನೋಡುವಾಗ, ಕವಿತೆ ಕೇಳುವಾಗ, ಮಹಾಕಾವ್ಯಕ್ಕೆ ಕಿವಿಗೊಟ್ಟಾಗ ನಮ್ಮ ಒಳ ಭಾವಗಳಲ್ಲಿ ಆಗುವ ಸಂವೇದನೆಗಳಿಗಿಂತ ಕಾದಂಬರಿ ಓದುವಾಗ ಆಗುವ ಸಂವೇದನೆ ಬೇರೆ ಥರದ್ದೇ? ಜೀವನ ಚರಿತ್ರೆ, ಚಲನಚಿತ್ರ, ಕವಿತೆ, ವರ್ಣಚಿತ್ರ ಅಥವ ಅಜ್ಜಿ ಕಥೆ ಕೊಡುವಂಥದೇ ಸಂತೋಷನ್ನು ಕಾದಂಬರಿಯೂ ಆಗಾಗ ನೀಡಬಲ್ಲದು. ಆದರೂ ಕಾದಂಬರಿಯ ವಿಶಿಷ್ಟ ಪರಿಣಾಮ ಮಿಕ್ಕ ಯಾವುದೇ ಸಾಹಿತ್ಯ ಅಥವ ಕಲೆಯ ಕೃತಿಗಳು ಮಾಡುವ ಪರಿಣಾಮಕ್ಕಿಂತ ತೀರ ಭಿನ್ನ. ಈ ವ್ಯತ್ಯಾಸವನ್ನು ನಿಮಗೆ ಹೇಳಬೇಕಾದರೆ ನಾನು ಯುವಕನಾಗಿ ಭಾವ ತೀವ್ರತೆಯಲ್ಲಿ ಕಾದಂಬರಿ ಓದುತ್ತಿರುವಾಗ ನನ್ನೊಳಗೆ ಮೂಡುತ್ತಿದ್ದ ಸಂಕೀರ್ಣ ಬಿಂಬಗಳನ್ನೂ ಓದುತ್ತಿದ್ದಾಗ ಮನಸ್ಸು ಏನು ಮಾಡುತ್ತಿತ್ತು ಅನ್ನುವುದನ್ನೂ ವಿವರಿಸಬೇಕು.
ವರ್ಣಚಿತ್ರ ನೋಡಲು ಮ್ಯೂಸಿಯಂಗೆ ಹೋಗುವ ವೀಕ್ಷಕ ಚಿತ್ರವು ಮೊದಲು ತನ್ನ ಕಣ್ಣನ್ನು ರಂಜಿಸಬೇಕು ಎಂದು ಬಯಸುವ ಹಾಗೇ ನಾನೂ ಕೂಡ ಕಾದಂಬರಿಯಲ್ಲಿ ಆಕ್ಷನ್ ಇರಬೇಕು, ಸಂಘರ್ಷ ಇರಬೇಕು, ವರ್ಣನೆ ಇರಬೇಕು ಎಂದು ಬಯಸುತ್ತಿದ್ದೆ; ಕಾದಂಬರಿಯನ್ನು ಓದುತ್ತಾ ವ್ಯಕ್ತಿಯ ಖಾಸಗಿ ಬದುಕನ್ನೂ ಒಟ್ಟಾರೆ ದೃಶ್ಯದ ಕತ್ತಲು ಮೂಲೆಗಳನ್ನೂ ಗುಟ್ಟಾಗಿ ಗಮನಿಸುತ್ತಿದ್ದೇನೆ ಎಂಬ ಭಾವದಲ್ಲಿ ಸುಖಿಸುತ್ತಿದ್ದೆ. ಯೌವನದ ದಿನಗಳಲ್ಲಿ ಕೆಲವು ಕಾದಂಬರಿ ಓದಿದಾಗ ವಿಶಾಲವಾದ, ಗಹನವಾದ ಲೋಕ ನನ್ನೊಳಗೆ ಮೂಡಿಕೊಳ್ಳುತ್ತಿತ್ತು. ಕೆಲವೊಮ್ಮೆ ಬೆಳಕು ಮಾಯವಾಗುತ್ತಿತ್ತು, ಕೆಲವೊಮ್ಮೆ ಕಪ್ಪು ಬಿಳುಪು ಖಚಿತವಾಗಿ ಬೇರ್ಪಡುತ್ತಿತ್ತು. ನೆರಳು ಚಲಿಸುತ್ತಿದ್ದವು. ಬೇರೆ ಬೇರೆ ಬಣ್ಣಗಳ ಬೆಳಕಿನಿಂದ ಬದುಕು ರೂಪ ತಳೆದಿದೆ ಅನ್ನಿಸಿ ಅಚ್ಚರಿಪಡುತ್ತಿದ್ದೆ. ಕೆಲವೊಮ್ಮೆ ಮುಸ್ಸಂಜೆಯ ನಸುಬೆಳಕು ಕತ್ತಲು ಎಲ್ಲವನ್ನೂ ಆವರಿಸಿಕೊಂಡು ಇಡೀ ಜಗತ್ತು ಒಂದೇ ಭಾವನೆ, ಒಂದೇ ಶೈಲಿಯಿಂದ ರೂಪುಗೊಂಡ ಹಾಗೆ ಕಾಣುತಿತ್ತು, ಖುಷಿಯಾಗುತ್ತಿತ್ತು, ಈ ವಾತಾವರಣಕ್ಕೆ ತಕ್ಕ ಪುಸ್ತಕ ಓದುತ್ತಿದ್ದೇನೆ ಅನ್ನಿಸುತ್ತಿತ್ತು. ನಾನು ಕಾದಂಬರಿಯ ಪ್ರಪಂಚಕ್ಕೆ ಸೇರಿ ಹೋಗುತ್ತಿದ್ದ ಹಾಗೆ ಕಾದಂಬರಿಯ ಪುಟ ತೆರೆಯುವ ಮೊದಲು ನಾನು ಮಾಡಿದ ಏನೇನೋ ಕೆಲಸ, ಇಸ್ತಾಂಬುಲ್ ನ ನಮ್ಮ ಮನೆಯಲ್ಲಿ ಕೂತಿದ್ದದ್ದು, ನೀರು ಕುಡಿದದ್ದು, ಅಮ್ಮನ ಜೊತೆ ಮಾತಾಡಿದ್ದು, ಆಗ ನನ್ನ ಮನಸ್ಸಿನಲ್ಲಿ ಬಂದ ಹಲವು ಭಾವ, ಸಣ್ಣಪುಟ್ಟ ಇರಿಸುಮುರಿಸು, ದುಗುಡ ಎಲ್ಲವೂ ನಿಧಾನವಾಗಿ ಮಸುಕಾಗುತ್ತ ಕರಗಿ ಹೋಗುವುದು ಗಮನಕ್ಕೆ ಬರುತ್ತಿತ್ತು.

ನಾನು ಕೂತಿದ್ದ ಕಿತ್ತಲೆ ಬಣ್ಣದ ಆರಾಮ ಕುರ್ಚಿ, ನನ್ನ ಪಕ್ಕದಲ್ಲಿದ್ದ ದುರ್ವಾಸನೆ ಬೀರುವ ಆಶ್ ಟ್ರೇ, ಕಾರ್ಪೆಟ್ಟು ಹಾಸಿರುವ ರೂಮು, ಬೀದಿಯಲ್ಲಿ ಫುಟ್ ಬಾಲು ಆಡುತ್ತ ಕಿರುಚಾಡುತ್ತಿರುವ ಮಕ್ಕಳು, ದೂರದಿಂದ ಕೇಳುತ್ತಿದ್ದ ಸ್ಟೀಮರಿನ ಸಿಳ್ಳೆ ಎಲ್ಲವೂ ನಿಧಾನವಾಗಿ ನನ್ನ ಮನಸ್ಸಿನಿಂದ ಜಾರುತ್ತಿದ್ದವು. ಒಂದೊಂದೇ ಪದವಾಗಿ, ವಾಕ್ಯವಾಗಿ ಇನ್ನೊಂದು ಹೊಸಲೋಕ ಕಣ್ಣೆದುರೇ ರೂಪು ತಳೆಯುತ್ತಿತ್ತು. ಒಂದೊಂದೇ ಪುಟ ಮುಂದೆ ಸಾಗುತ್ತಿದ್ದ ಹಾಗೆ ರೇಖೆ, ಛಾಯೆ, ಘಟನೆ, ಮುಖ್ಯಪಾತ್ರಗಳು ಎಲ್ಲ ಫೋಕಸ್ಸಿಗೆ ಬರುತ್ತ ಹೊಸ ಲೋಕ ಹರಳುಗಟ್ಟುತ್ತ, ಸುಸ್ಪಷ್ಟವಾಗುತ್ತಿತ್ತು. ಓದು ಆರಂಭಗೊಂಡ ನಿಮಿಷಗಳಲ್ಲಿ ಕಾದಂಬರಿಯ ಲೋಕದೊಳಕ್ಕೆ ನನ್ನ ಪ್ರವೇಶ ಮಾಡದ ಹಾಗೆ ನನ್ನನ್ನು ತಡೆಯುವ, ಪಾತ್ರ, ಘಟನೆ, ವಸ್ತುಗಳನ್ನು ನೆನಪಿಟ್ಟುಕೊಳ್ಳಲು ಅಡ್ಡಿ ಮಾಡುವ ಎಲ್ಲ ಸಂಗತಿಗಳ ಬಗ್ಗೆ ಕಿರಿಕಿರಿಯಾಗುತ್ತದೆ, ರೇಗುತ್ತದೆ. ಕಾದಂಬರಿಯ ಮುಖ್ಯ ಪಾತ್ರದ ದೂರದ ಸಂಬಂಧಿಯೊಬ್ಬ ಪ್ರತ್ಯಕ್ಷವಾಗಿ ಅವನು ಯಾರೆಂದು ತಿಳಿಯದಿರುವುದು, ಬಂದೂಕು ಯಾವ ಡ್ರಾ ದಲ್ಲಿ ಇದೆ ಅನ್ನುವುದು ಅಸ್ಪಷ್ಟವಾಗಿರುವುದು, ಎರಡು ಅರ್ಥವಿದೆ ಅನ್ನಿಸುವ ಆದರೆ ಎರಡನೆಯ ಅರ್ಥವೇನೆಂದು ಸ್ಪಷ್ಟವಾಗದಿರುವ ಸಂಭಾಷಣೆ ಇಂಥ ಸಂಗತಿಗಳಿಂದ ನನಗೆ ತುಂಬ ಕಿರಿಕಿರಿಯಾಗುತ್ತದೆ. ನನ್ನ ಕಣ್ಣು ಕಾತರದಿಂದ ಪುಟದ ಮೇಲಿರುವ ಪದಗಳನ್ನು ಸ್ಕ್ಯಾನ್ ಮಾಡುತ್ತಿರುವಾಗ ಈಗ ಅಸ್ಪಷ್ಟವಾಗಿರುವ ಸಂಗತಿಗಳೆಲ್ಲ ಹೇಗೋ ಕರೆಕ್ಟಾಗಿ ಹೊಂದಿಕೊಳ್ಳುತ್ತವೆಂದು ಅಸಹನೆಯಿಂದಲೂ ಖುಷಿಯಿಂದಲೂ ಕಾಯುತ್ತಿರುತ್ತೇನೆ. ನನ್ನ ಗ್ರಹಿಕೆಯ ಬಾಗಿಲುಗಳೆಲ್ಲ ಪೂರಾ ತೆರೆದುಕೊಂಡಿರುತ್ತವೆ, ಸಾಧು ಪ್ರಾಣಿಯೊಂದನ್ನು ಅಪರಿಚಿತ ವಾತಾವರಣದಲ್ಲಿ ತಂದು ಬಿಟ್ಟಾಗ ಅದರ ಮನಸ್ಸು ಹೇಗೆ ವರ್ತಿಸುತ್ತದೋ ಹಾಗೆಯೇ ನನ್ನ ಮನಸ್ಸು ಕೂಡ ಹೆಚ್ಚು ವೇಗದಲ್ಲಿ, ಒಂದು ಥರ ಭೀತಿಯಲ್ಲಿ ಕ್ರಿಯಾಶೀಲವಾಗಿರುತ್ತದೆ. ಕೈಯಲ್ಲಿ ಹಿಡಿದಿರುವ ಕಾದಂಬರಿಯ ಮೇಲೇ ನನ್ನ ಪೂರ್ಣ ಗಮನವಿಟ್ಟು, ನಾನು ಕಾಲಿಡುತ್ತಿರುವ ಜಗತ್ತಿನ ಜೊತೆಗೆ ನನ್ನನ್ನು ಶ್ರುತಿಗೊಳಿಸಿಕೊಳ್ಳುತ್ತ ಇರುತ್ತೇನೆ. ಓದುತ್ತಿರುವ ಒಂದೊಂದು ಪದವನ್ನೂ ಚಿತ್ರವಾಗಿಸಿಕೊಳ್ಳುತ್ತ, ಪುಸ್ತಕದಲ್ಲಿರುವ ಎಲ್ಲ ಸಂಗತಿಗಳನ್ನು ಕಣ್ಣೆದುರಿಗೆ ತಂದುಕೊಳ್ಳಲು ಯತ್ನಿಸುತ್ತೇನೆ.

ಒಂದಷ್ಟು ಹೊತ್ತು ಹೀಗೆ ಪ್ರಯತ್ನಪಟ್ಟು ದಣಿದರೆ ಫಲಿತಾಂಶ ದೊರೆಯುತ್ತದೆ. ಮುಸುಕಿದ ಮಂಜಿನ ತೆರೆ ಮೇಲೆದ್ದು ಭೂ ದೃಶ್ಯ ಸುಸ್ಪಷ್ಟವಾಗಿ ಮೈತೆರೆಯುವ ಹಾಗೆ ನಾನು ಕಾಣಲು ಬಯಸಿದ್ದ ವಿಶಾಲ ನೆಲನೋಟ ನನ್ನ ಕಣ್ಣೆದುರು ತೆರೆದುಕೊಳ್ಳುತ್ತದೆ. ಕಿಟಕಿಯಿಂದಾಚೆ ನೋಡಿದರೆ ಕಾಣುವ ಜಗತ್ತಿನಷ್ಟೇ ಸರಾಗವಾಗಿ ಕಾದಂಬರಿ ಹೇಳುತ್ತಿರುವ ಸಂಗತಿಗಳೆಲ್ಲ ಕಣ್ಣಿಗೆ ಕಾಣುತ್ತವೆ. ಟಾಲ್ಸ್ಟಾಯ್ನ ‘ಯುದ್ಧ ಮತ್ತು ಶಾಂತಿ’ ಕಾದಂಬರಿಯಲ್ಲಿ ಪಿಯರೆ ಬೆಟ್ಟದ ತುದಿಯಿಂದ ಬೊರೊಡಿನೋ ಯುದ್ಧವನ್ನು ಕಾಣುವ ವರ್ಣನೆ [3.2.21] ಇದೆಯಲ್ಲ ಅದು ನನ್ನ ಮಟ್ಟಿಗೆ ಕಾದಂಬರಿ ಓದುತ್ತಿರುವಾಗ ಮನಸ್ಸಿನಲ್ಲಿ ಏನಾಗುತ್ತದೆ ಅನ್ನುವುದರ ವರ್ಣನೆಯ ಹಾಗಿದೆ. ಬಹು ಬಗೆಯ ಅರ್ಥಗಳನ್ನು ಕಾದಂಬರಿ ಸೂಕ್ಷ್ಮವಾಗಿ ಹೆಣೆಯುತ್ತಿದೆ, ಅಗತ್ಯ ಬಿದ್ದಾಗ ಒದಗುವ ಹಾಗೆ ಆ ಅರ್ಥಗಳಿಗೆಲ್ಲ ಮನಸ್ಸಿನಲ್ಲಿ ತಕ್ಕ ಜಾಗ ಮಾಡಿಟ್ಟುಕೊಂಡಿರಬೇಕು ಅನ್ನಿಸುತ್ತದೆ. ಚಿತ್ರವೊಂದರ ವಿವರಗಳನ್ನು ಗ್ರಹಿಸುವ ಹಾಗೆಯೇ ಇದೂ ಕೂಡ. ನಾನು ಕಾದಂಬರಿಯ ಪದಗಳ ರಾಶಿಯ ನಡುವೆ ಇಲ್ಲ, ವಿಶಾಲವಾದ ಚಿತ್ರಣದ ಎದುರು ನಿಂತಿದ್ದೇನೆ ಅನ್ನಿಸುತ್ತದೆ. ಹೀಗಾಗುವುದಕ್ಕೆ ವಿವರಗಳನ್ನು ಗಮನಿಸುವ ಲೇಖಕರ ಶಕ್ತಿ ಮತ್ತೆ ಓದಿದ ಪದಗಳನ್ನು ವಿವರಗಳಾಗಿ ಕಲ್ಪಿಸಿ ಕಾಣುವ ಓದುಗರ ಸಾಮರ್ಥ್ಯ ಇವೆರಡೂ ನಿರ್ಣಾಯಕವಾಗುತ್ತವೆ. ನಿಸರ್ಗದ ನಡುವೆಯೋ, ಯುದ್ಧಭೂಮಿಯಲ್ಲೋ, ನಿಸರ್ಗದ ವಿಸ್ತಾರದಲ್ಲೋ ನಡೆಯದೆ ಕೋಣೆಯೊಳಗೆ, ಉಸಿರು ಕಟ್ಟಿಸುವಂಥ ವಾತಾವರಣದಲ್ಲಿ ನಡೆಯುವ ಕಾದಂಬರಿಗಳೂ ಇವೆ—ಕಾಫ್ಕನ ‘ಮೆಟಮಾರ್ಫಸಿಸ್’ ಥರದವು. ಇಂಥ ಕಥೆಗಳನ್ನು ಓದುವಾಗ ನಾವು ಗಮನಿಸುವ ನೆಲನೋಟವನ್ನು ಮನಸ್ಸಿನಲ್ಲೇ ವರ್ಣಚಿತ್ರವಾಗಿಸಿಕೊಂಡು, ಆ ದೃಶ್ಯದ ವಾತಾವರಣಕ್ಕೆ ನಮ್ಮನ್ನು ಹೊಂದಿಸಿಕೊಳ್ಳುತ್ತ, ಅದು ನಮ್ಮ ಮೇಲೆ ಪ್ರಭಾವ ಬೀರಲು ಅವಕಾಶಮಾಡಿಕೊಡುತ್ತ, ಇಂಥ ಮನೋಭಾವ ಎಲ್ಲೆಲ್ಲಿ ಹೇಗೆ ಹುಟ್ಟುತ್ತದೆಂದು ನಿರಂತರವಾಗಿ ಹುಡುಕುತ್ತ ಇರುತ್ತೇವೆ.

ಕಾದಂಬರಿ ಓದುವಾಗ ನಮ್ಮ ಮನಸ್ಸಿನಲ್ಲಿ ಏನಾಗುತ್ತದೆ? ಚಲನಚಿತ್ರ, ವರ್ಣಚಿತ್ರ ನೋಡುವಾಗ, ಕವಿತೆ ಕೇಳುವಾಗ, ಮಹಾಕಾವ್ಯಕ್ಕೆ ಕಿವಿಗೊಟ್ಟಾಗ ನಮ್ಮ ಒಳ ಭಾವಗಳಲ್ಲಿ ಆಗುವ ಸಂವೇದನೆಗಳಿಗಿಂತ ಕಾದಂಬರಿ ಓದುವಾಗ ಆಗುವ ಸಂವೇದನೆ ಬೇರೆ ಥರದ್ದೇ?

ಕಿಟಕಿಯಾಚೆಗೆ ದಿಟ್ಟಿಸುವುದನ್ನೂ ಕಾದಂಬರಿ ಓದುತ್ತ ಅದು ಚಿತ್ರಿಸುವ ಲೋಕದೊಳಕ್ಕೆ ಪ್ರವೇಶಿಸುವ ಬಗೆಯನ್ನೂ ವರ್ಣಿಸುವ ಇನ್ನೊಂದು ಉದಾಹರಣೆಯನ್ನು ಟಾಲ್ಸ್ಟಾಯ್ನ ‘ಅನ್ನ ಕರೆನೀನ’ದಲ್ಲಿ ನೋಡೋಣ. ಅನ್ನಾ ಮಾಸ್ಕೋದಲ್ಲಿ ವ್ರೋನ್ಸ್ ಕಿಯನ್ನು ಭೇಟಿ ಮಾಡಿರುತ್ತಾಳೆ; ರಾತ್ರಿಯ ರೈಲಿನಲ್ಲಿ ಸೇಂಟ್ ಪೀಟರ್ಸ್ ಬರ್ಗ್ ನ ತನ್ನ ಮನೆಗೆ ವಾಪಸ್ಸು ಹೊರಟಿರುತ್ತಾಳೆ; ಗಂಡನನ್ನೂ ಮಗುವನ್ನೂ ಬೆಳಗ್ಗೆ ನೋಡುತ್ತೇನೆಂದು ಖುಷಿಯಾಗಿದ್ದಾಳೆ. ಆಗ ಅನ್ನಾ ಹ್ಯಾಂಡ್ ಬ್ಯಾಗಿನಿಂದ ಪೇಪರ್ ನೈಫನ್ನೂ ಇಂಗ್ಲಿಶ್ ಕಾದಂಬರಿಯನ್ನೂ ತೆಗೆದಳು. ಮೊದಮೊದಲು ಓದುವುದಕ್ಕೆ ಆಗಲಿಲ್ಲ ಅವಳಿಗೆ. ಯಾಕೆಂದರೆ ಜನಗಳ ಓಡಾಟ, ಸದ್ದುಗಳು ಮನಸ್ಸು ತಟ್ಟುತಿದ್ದವು. ಆಮೇಲೆ ರೈಲು ಶುರುವಾದ ಮೇಲೆ ಬಗೆಬಗೆಯ ಸದ್ದು ಕೇಳದೆ ಇರಲು ಆಗಲಿಲ್ಲ. ಅವಳ ಎಡಗಡೆಯ ಕಿಟಕಿಗೆ ಹಿಮ ರಾಚುತ್ತಿತ್ತು, ಗಾಜಿಗೆ ಅಂಟಿಕೊಳ್ಳುತಿತ್ತು; ರೈಲಿನ ಗಾರ್ಡು ಕಾಣಿಸಿದ, ಅವನು ಮೈ ತುಂಬ ಕವುಚಿ ತೊಟ್ಟಿದ್ದ ಬಟ್ಟೆಗಳಿಗೆ ಒಂದು ಬದಿಯಲ್ಲಿ ಹಿಮ ಮೆತ್ತಿತ್ತು; ಹೊರಗೆ ಬೀಸುತ್ತಿರುವ ಪ್ರಚಂಡ ಹಿಮಗಾಳಿಯ ಬಗ್ಗೆ ಯಾರಿಗೋ ಹೇಳುತ್ತಿದ್ದ—ಅವಳ ಗಮನ ಚೆದುರಿ ಹೇಯಿತು. ಮತ್ತೂ ಅದೇ. ರೈಲಿನ ಅದೇ ಹೊಯ್ದಾಟ, ಕಿಟಕಿಗೆ ಬಡಿಯುವ ಅದೇ ಹಿಮ, ಅದೇ ಥಂಡಿ-ಶಾಖ-ಥಂಡಿಯ ಪುನರಾವರ್ತನೆ, ಅರೆಗತ್ತಲಲ್ಲಿ ಮತ್ತೆ ಮತ್ತೆ ಕಾಣಿಸುವ ಅವೇ ಮುಖ, ಕೇಳಿಸುವ ಅವೇ ದನಿಗಳು. ಅನ್ನಾ ಓದುವುದಕ್ಕೆ ಶುರು ಮಾಡಿದಳು. ಓದಿದ್ದು ಅರ್ಥವಾಗುತ್ತಿತ್ತು. ಓದಿದ್ದು, ಅರ್ಥವಾದದ್ದು ಸಂತೋಷ ತರಲಿಲ್ಲ. ಅಂದರೆ, ಇತರರ ಬದುಕಿನ ಬಿಂಬಗಳನ್ನು ಹಿಂಬಾಲಿಸುವುದಕ್ಕೆ ಖುಷಿಯಾಗಲಿಲ್ಲ. ತಾನೇ ಸ್ವತಃ ಹಾಗೆ ಬದುಕಬೇಕೆಂದು ತೀವ್ರವಾಗಿ ಅನ್ನಿಸುತಿತ್ತು. ರೋಗಿಯನ್ನು ಆರೈಕೆ ಮಾಡುತ್ತಿರುವ ನಾಯಕಿಯ ಬಗ್ಗೆ ಓದಿದಳು—ಸಪ್ಪಳ ಮಾಡದ ಹಾಗೆ ಹೆಜ್ಜೆ ಇಟ್ಟುಕೊಂಡು ತಾನೇ ಕಾಯಿಲೆಯವನ ರೂಮಿಗೆ ಹೋಗಬೇಕು ಅನ್ನಿಸಿತು. ಪಾರ್ಲಿಮೆಂಟಿನ ಸದಸ್ಯ ಭಾಷಣ ಮಾಡಿದ ಬಗ್ಗೆ ಓದುವಾಗ ತಾನೇ ಆ ಭಾಷಣ ಮಾಡಬೇಕು ಅನ್ನಿಸಿತು. ಲೇಡಿ ಮೇರಿ ಸವಾರಿ ಮಾಡಿಕೊಂಡು ಬೇಟೆ ನಾಯಿಗಳ ಹತ್ತಿರ ಹೋದದ್ದು, ನಾದಿನಿಯನ್ನು ರೇಗಿಸಿದ್ದು, ತನ್ನ ಧೈರ್ಯದಿಂದ ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದ್ದು ಓದುತ್ತಾ ತಾನೇ ಅದನ್ನೆಲ್ಲ ಮಾಡಬೇಕು ಅನ್ನಿಸಿತು. ಆದರೆ ಏನೂ ಮಾಡುವ ಹಾಗಿರಲಿಲ್ಲ. ಕೈಯಲ್ಲಿದ್ದ ನಯವಾದ ಚಾಕುವಿನ ಮೇಲೆ ಬೆರಳಾಡಿಸುತ್ತ ಬಲವಂತವಾಗಿ ಮುಂದಕ್ಕೆ ಓದಿದಳು.

ಅನ್ನಾಗೆ ಓದುವುದಕ್ಕೆ ಆಗಲಿಲ್ಲ. ಯಾಕೆಂದರೆ ವ್ರೋನ್ಸ್ ಕಿಯ ನೆನಪಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಯಾಕೆಂದರೆ ಬದುಕುವ ಆಸೆ ಅವಳಿಗಿತ್ತು. ಓದುತ್ತಿರುವ ಕಾದಂಬರಿಯ ಮೇಲೆ ಗಮನವಿಡಲು ಆಗಿದ್ದಿದ್ದರೆ ಲೇಡಿ ಮೇರಿ ಕುದುರೆ ಏರಿದ್ದನ್ನು, ನಾಯಿಗಳ ಹಿಂಡನ್ನು ಹಿಂಬಾಲಿಸಿದ್ದನ್ನು ಸುಲಭವಾಗಿ ಕಲ್ಪಿಸಿಕೊಳ್ಳಬಹುದಾಗಿತ್ತು. ಕಿಟಕಿಯಾಚೆ ಕಾಣುತ್ತಿರುವ ದೃಶ್ಯ ದಿಟ್ಟಿಸಿನೋಡುವಷ್ಟೇ ಸಲೀಸಾಗಿ ಓದುತ್ತಿರುವ ದೃಶ್ಯದೊಳಕ್ಕೆ ತಾನೂ ಕಾಲಿಟ್ಟು ಪ್ರವೇಶಮಾಡಬಹುದಾಗಿತ್ತು.

ನಿಸರ್ಗಚಿತ್ರಣವನ್ನು ನೋಡುವುದಕ್ಕೂ ಕಾದಂಬರಿಯ ಮೊದಲ ಪುಟಗಳನ್ನು ಓದುವುದಕ್ಕೂ ಸಮಾನ ಅಂಶಗಳಿವೆ ಎಂದು ಅನೇಕ ಕಾದಂಬರಿಕಾರರು ಭಾವಿಸುತ್ತಾರೆ. ‘ದಿ ರೆಡ್ ಅಂಡ್ ಬ್ಲಾಕ್’ ಕಾದಂಬರಿಯನ್ನು ಸ್ಟೆಂಡಾಲ್ ಹೇಗೆ ಆರಂಭ ಮಾಡುತ್ತಾನೆಂದು ನೆನಪು ಮಾಡಿಕೊಳ್ಳೋಣ. ಮೊದಲು ವೆರಿಯರ್ ಊರನ್ನು ದೂರದಿಂದ ನೋಡುತ್ತೇವೆ. ಅದು ಇರುವ ಬೆಟ್ಟ, ಊರಿನ ಬಿಳಿಯ ಮನೆಗಳು, ಮನೆಗಳ ಕೆಂಪು ಹೆಂಚಿನ ಚಾವಣಿ, ಸೊಂಪಾಗಿ ಬೆಳೆದ ಚೆಸ್ಟ್ ನಟ್ ಮರಗಳ ತೋಪು, ಊರಿನ ಹಾಳು ಬಿದ್ದ ಕೋಟೆಗೋಡೆಗಳು, ಕೆಳಗೆ ಹರಿಯುವ ನದಿ ಇವನ್ನೆಲ್ಲ ನೋಡಿ ಸಾ ಮಿಲ್ಲು, ಬಣ್ಣದ ಪ್ರಿಂಟುಗಳಿರುವ ಬಟ್ಟೆ ತಯಾರಿಸುವ ಫ್ಯಾಕ್ಟರಿ ನೋಡುತ್ತೇವೆ.

ಒಂದೇ ಒಂದು ಪುಟ ಓದುವಷ್ಟರಲ್ಲಿ ಕಾದಂಬರಿಯ ಮುಖ್ಯ ಪಾತ್ರಗಳಲ್ಲಿ ಒಬ್ಬನಾದ ಮೇಯರ್ ನನ್ನು ಭೇಟಿ ಮಾಡುತ್ತೇವೆ, ಅವನ ಮನಸ್ಸು ಹೇಗೆ ಅನ್ನುವುದು ಪತ್ತೆ ಹಚ್ಚುತ್ತೇವೆ. ಕಾದಂಬರಿಯ ಜಗತ್ತನ್ನು ಹೊರಗಿನಿಂದ ಅಲ್ಲ, ಕಾದಂಬರಿಯ ಜಗತ್ತಿನಲ್ಲಿ ವಾಸ ಮಾಡುತ್ತಿರುವ ಪಾತ್ರಗಳ ಕಣ್ಣಿನಿಂದ ನೋಡುವ ಸಾಮರ್ಥ್ಯದ ಮೂಲಕ ಓದಿನ ಸುಖ ಶುರುವಾಗುತ್ತದೆ. ಕಾದಂಬರಿ ಓದುತ್ತಿರುವಾಗ ದೂರದೃಶ್ಯ ಮತ್ತು ಧಾವಿಸುತ್ತಿರುವ ಕ್ಷಣಗಳ ನಡುವೆ, ಸಾಮಾನ್ಯ ಸ್ವರೂಪದ ಚಿಂತನೆ ಮತ್ತು ನಿರ್ದಿಷ್ಟ ಘಟನೆಗಳ ನಡುವೆ ಹೊಯ್ದಾಡುತ್ತಿರುತ್ತೇವೆ. ವೇಗ ಮತ್ತು ಸಾವಕಾಶದ ಈ ಮಿಶ್ರಣವನ್ನು ಕಾದಂಬರಿಯಲ್ಲದೆ ಮಿಕ್ಕ ಯಾವ ಸಾಹಿತ್ಯ ಪ್ರಕಾರವೂ ನೀಡಲಾರದು. ಕಾದಂಬರಿ ವರ್ಣಿಸುತ್ತಿರುವ ನೆಲನೋಟವನ್ನು ದೂರನಿಂತು ನೋಡುತ್ತಿದ್ದವರು ಹಾಗೆ ಹಾಗೇ ಆ ದೃಶ್ಯದ ಭಾಗವೇ ಆಗಿರುವ ವ್ಯಕ್ತಿಯ ಮನಸ್ಸಿನ ಭಾವಗಳ, ಸೂಕ್ಷ್ಮಗಳ ಒಳಕ್ಕೂ ಹೊಕ್ಕುಬಿಟ್ಟಿರುತ್ತೇವೆ. ಚೀನೀ ಲ್ಯಾಂಡ್ಸ್ಕೇ ಪ್ ಚಿತ್ರಣದಲ್ಲಿ ಬಂಡೆ, ಹೊಳೆ, ಎಲೆ ತುಂಬಿದ ಮರಗಳ ಹಿನ್ನೆಲೆಯ ನಡುವೆ ಚಿತ್ರಿತನಾಗಿರುವ ಮನುಷ್ಯನ ಪುಟ್ಟ ರೂಪವನ್ನು ನೋಡುವ ಹಾಗೇ ಇದೂ ಕೂಡ; ಮೊದಲು ಅವನನ್ನು ಗಮನಿಸುತ್ತೇವೆ ಆಮೇಲೆ ಅವನ ಸುತ್ತಲೂ ಇರುವ ನಿಸರ್ಗವನ್ನು ಅವನ ಕಣ್ಣಿನಿಂದ ನೋಡುತ್ತೇವೆ. ಆ ನೆಲದಲ್ಲಿ ಇರುವ ವ್ಯಕ್ತಿಯ ಭಾವನೆ, ಗ್ರಹಿಕೆಗಳಿಗೆ ಅನುಗುಣವಾಗಿ ದೃಶ್ಯ ವಿನ್ಯಾಸಗೊಂಡಿದೆ ಅನ್ನುವುದು ಅರ್ಥವಾಗುತ್ತದೆ; ಈ ಕ್ರಮದಲ್ಲಿ ‘ಓದ’ಬೇಕೆಂದೇ ಚೀನೀ ಚಿತ್ರಗಳು ವಿನ್ಯಾಸಗೊಂಡಿರುತ್ತವೆ. ಇದೇ ರೀತಿಯಲ್ಲಿ ಕಾದಂಬರಿಯಲ್ಲಿ ಚಿತ್ರಣಗೊಂಡಿರುವ ದೃಶ್ಯವೂ ಕಾದಂಬರಿಯ ಮುಖ್ಯ ಪಾತ್ರಗಳ ವಿಸ್ತರಣೆ, ಪಾತ್ರಗಳ ಮನಸ್ಥಿತಿಯ ಭಾಗ ಅನ್ನುವುದು ಅರ್ಥವಾಗುತ್ತದೆ. ಅವರೊಡನೆ, ಕಾದಂಬರಿಯ ದೃಶ್ಯಲೋಕದಲ್ಲಿ ಒಂದಾಗುತ್ತೇವೆ. ಒಟ್ಟಾರೆ ಸಂದರ್ಭವನ್ನು ಮನಸಿನಲ್ಲಿ ನೆನಪಿಟ್ಟುಕೊಂಡು ಪಾತ್ರಗಳ ಒಂದೊಂದೂ ಆಲೋಚನೆ, ಕ್ರಿಯೆಗಳನ್ನು ಅನುಸರಿಸುತ್ತೇವೆ, ಅವರು ಬದುಕಿರುವ ನೆಲದಲ್ಲಿ ಅವರು ಮಾಡುವುದಕ್ಕೆಲ್ಲ, ಹೇಳುವುದಕ್ಕೆಲ್ಲ ಅರ್ಥ ಹಚ್ಚುತ್ತೇವೆ. ಸ್ವಲ್ಪ ಹೊತ್ತಿನ ಮೊದಲು ಹೊರಗಿನಿಂದ ನೋಡುತ್ತಿದ್ದ ದೃಶ್ಯದ ಭಾಗವೇ ಆಗುತ್ತೇವೆ: ಬೆಟ್ಟವನ್ನು ನಮ್ಮ ಮನಸ್ಸಿನ ಕಣ್ಣಿನ ಮೂಲಕ ನೋಡುವುದರ ಜೊತೆಗೆ ಹೊಳೆಯ ನೀರಿನ ತಂಪು, ಕಾಡಿನ ಗಂಧಗಳನ್ನೂ ಅನುಭವಿಸುತ್ತೇವೆ; ಮುಖ್ಯ ಪಾತ್ರಗಳ ಜೊತೆ ಮಾತನಾಡುತ್ತ ಕಾದಂಬರಿಯ ಲೋಕದ ಆಳಕ್ಕೆ ಇಳಿಯುತ್ತೇವೆ. ದೂರದ್ದೂ ವಿಶಿಷ್ಟವೂ ಆಗಿರುವ ಸಂಗತಿಗಳನ್ನು ಜೋಡಿಸಿಕೊಳ್ಳುವುದಕ್ಕೆ, ಮುಖ್ಯ ಪಾತ್ರಗಳ ಮುಖ ಮತ್ತು ಆಲೋಚನೆಗಳನ್ನು ಕಾದಂಬರಿ ಲೋಕದ ಅಖಂಡತೆಯ ಭಾಗವಾಗಿ ನೋಡುವುದಕ್ಕೆ ಕಾದಂಬರಿಯ ಭಾಷೆ ನಮಗೆ ಸಹಾಯ ಮಾಡುತ್ತದೆ.

ನಾವು ಕಾದಂಬರಿಯಲ್ಲಿ ಮುಳುಗಿರುವಾಗ ಮನಸ್ಸು ಶ್ರಮ ಹಾಕುತ್ತಿರುತ್ತದೆ. ಲೋದಕೃಶ್ಯ, ಮರ, ಪ್ರಮುಖ ಪಾತ್ರಗಳ ಆಲೋಚನೆ, ಅವರು ಮುಟ್ಟುವ ವಸ್ತುಗಳು ಇವೆಲ್ಲವುಗಳ ನಡುವೆ ನಮ್ಮ ಮನಸ್ಸು ಜೀಕುತ್ತಿರುತ್ತದೆ; ವಸ್ತುಗಳ ಮತ್ತು ಅವು ಉದ್ದೀಪಿಸುವ ನೆನಪುಗಳ ನಡುವೆ, ಇತರ ಮುಖ್ಯ ಪಾತ್ರ ಮತ್ತು ಸಾಮಾನ್ಯ ಆಲೋಚನೆಗಳ ನಡುವೆ ಉಯ್ಯಾಲೆಯಾಡುತ್ತಿರುತ್ತದೆ. ನಮ್ಮ ಮನಸ್ಸು, ಗ್ರಹಿಕೆಗಳು ಹಲವು ಕಾರ್ಯಗಳನ್ನು ಏಕ ಕಾಲದಲ್ಲಿ ನಿರ್ವಹಿಸುತ್ತಿರುತ್ತದೆ. ನಮ್ಮ ಮನಸ್ಸು ಹೀಗೆ ಏನೇನೋ ಕೆಲಸಗಳಲ್ಲಿ ತೊಡಗಿದೆ ಅನ್ನುವುದು ನಮ್ಮಲ್ಲಿ ಅನೇಕರ ಗಮನಕ್ಕೆ ಬರುವುದೇ ಇಲ್ಲ. ಕಾರು ಡ್ರೈವು ಮಾಡುವಾಗ ಯಾವ ಯಾವ ಗುಂಡಿ ಒತ್ತುತ್ತೇವೆ, ಯಾವ ಯಾವ ಪೆಡಲು ಯಾವಾಗ ಅದುಮುತ್ತೇವೆ, ಅನೇಕ ನಿಯಮಗಳಿಗೆ ಅನುಸಾರವಾಗಿ ಸ್ಟೀರಿಂಗು ಹೇಗೆ ತಿರುಗಿಸುತ್ತೇವೆ, ರಸ್ತೆಯಲ್ಲಿ ಕಾಣುವ ಸಂಕೇತದ ಬೋರ್ಡುಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತಿರುತ್ತೇವೆ, ಮಿಕ್ಕ ಟ್ರಾಫಿಕ್ಕಿನ ಬಗ್ಗೆ ಹೇಗೆ ಗಮನ ಇಟ್ಟಿರುತ್ತೇವೆ ಇವೆಲ್ಲ ವಿವರ ಗೊತ್ತೇ ಆಗುವುದಿಲ್ಲವಲ್ಲ ಹಾಗೆಯೇ ಇದೂ ಕೂಡ.

ಡ್ರೈವರನ ಈ ಹೋಲಿಕೆ ಓದುಗರಿಗೆ ಮಾತ್ರವಲ್ಲ, ಕಾದಂಬರಿಕಾರರಿಗೂ ಅನ್ವಯವಾಗುತ್ತದೆ. ತಾವು ಯಾವ ತಂತ್ರ ಬಳಸುತಿದ್ದೇವೆ ಅನ್ನುವುದು ಎಷ್ಟೋ ಕಾದಂಬರಿಕಾರರಿಗೆ ಗೊತ್ತೇ ಇರುವುದಿಲ್ಲ. ತೀರ ಸಹಜವಾದ ಕಾರ್ಯದಲ್ಲಿ ತೊಡಗಿದವರ ಹಾಗೆ ಸ್ವಚ್ಛಂದವಾಗಿ, ತಮ್ಮ ತಲೆಯೊಳಗೆ ನಡೆಯುತ್ತಿರುವ ಜಟಿಲ ವ್ಯಾಪಾರ, ಲೆಕ್ಕಾಚಾರಗಳು ಯಾವುವೂ ಅವರ ಗಮನದಲ್ಲಿ ಇಲ್ಲ ಅನ್ನುವ ಹಾಗೆ ಬರೆಯುತ್ತಾರೆ. ಕಾದಂಬರಿ ಅನ್ನುವ ಕಾರಿನಲ್ಲಿ ಇರುವ ಗಿಯರ್, ಬ್ರೇಕು, ಮತ್ತೆಷ್ಟೋ ಥರದ ಸ್ವಿಚ್ಚುಗಳನ್ನು ಬಳಸುತ್ತಿರುವುದರ ಬಗ್ಗೆ ಅವರಿಗೆ ಗೊತ್ತೇ ಇರುವುದಿಲ್ಲ. ಇಂಥ ಬಗೆಯ ಕಾದಂಬರಿಕಾರರನ್ನೂ ಕಾದಂಬರಿ ಓದುಗರನ್ನೂ ‘ಮುಗ್ಧ’ರೆಂದು ಕರೆಯೋಣ. ಕಾದಂಬರಿಯನ್ನು ಬರೆಯುವ, ಮತ್ತು ಓದುವ ಕಾರ್ಯದ ‘ಕೃತಕ’ ಅಂಶಗಳು ಅರಿವಿಗೇ ಬರದಿರುವ ಮುಗ್ಧರು ಅವರು. ಇದಕ್ಕೆ ವಿರುದ್ಧವಾದ ಸಂವೇದನೆ ಇರುವ ಲೇಖಕರು, ಓದುಗರನ್ನು ‘ಪ್ರಬುದ್ಧರು’ ಅಥವಾ ‘ಚಿಂತನಶೀಲ’ರು ಎಂದು ಕರೆಯೋಣ. ಇವರು ಕಾದಂಬರಿಯ ಕೃತಕತೆಯಿಂದ, ಕಾದಂಬರಿಯು ಎಂದೂ ವಾಸ್ತವವಾಗದೆ ವಿಫಲಗೊಳ್ಳುತ್ತೆಂಬ ಸತ್ಯದಿಂದ, ಮೋಹಗೊಂಡಿರುತ್ತಾರೆ; ಕಾದಂಬರಿಯನ್ನು ಬರೆಯುವ ವಿಧಾನಗಳಿಗೂ ಓದುವಾಗ ನಮ್ಮ ಮನಸ್ಸು ವರ್ತಿಸುವ ರೀತಿಯ ಬಗೆಗೂ ತೀರ ನಿಕಟ ಗಮನ ನೀಡುತ್ತಾರೆ. ಕಾದಂಬರಿಕಾರನಾಗುವುದು ಎಂದರೆ- ಏಕ ಕಾಲದಲ್ಲಿ ಮುಗ್ಧನೂ ಪ್ರಬುದ್ಧನೂ ಆಗಿರುವ ಕಲೆ.

ಅಥವಾ ಮುಗ್ಧವೂ ‘ಭಾವುಕ’ವೂ ಆಗಿರುವುದು ಅಂತಲೂ ಅನ್ನಬಹುದು. ಜರ್ಮನಿಯ ಫ್ರೆಡೆರಿಕ್ ಶ್ಕಿಲರ್ ಮುಗ್ಧ (ನಯೀವ್) ಮತ್ತು ಭಾವುಕ (ಸೆಂಟಿಮೆಂಟಲ್) ಎಂಬ ವ್ಯತ್ಯಾಸವನ್ನು 1795ರ ತನ್ನ ಲೇಖನದಲ್ಲಿ ಮೊದಲು ಪ್ರತಿಪಾದಿಸಿದ. ಶ್ಕಿಲರ್ ಬಳಸುವ ಭಾವುಕ ಅನ್ನುವ ಅರ್ಥದ ಜರ್ಮನ್ ಪದ ‘ಸೆಂಟಿಮೆಂಟಲಿಶ್ಚ್’. ಮಗುವಿಗೆ ಇರುವ ಮುಗ್ಧತೆಯನ್ನು ನೀಗಿಕೊಂಡು ಚಿಂತನಾಶೀಲನೂ, ಕಳವಳಕ್ಕೆ ಈಡಾದವನೂ ಆಗಿರುವ ಆಧುನಿಕ ಕವಿಯನ್ನು ಈ ಪದ ಸೂಚಿಸುತ್ತದೆ. ನಾವು ಮಾಮೂಲಾಗಿ ಬಳಸುವ ಭಾವುಕತೆ ಅಥವ ಸೆಂಟಿಮೆಂಟಾಲಿಟಿ ಎಂಬ ಪದಗಳ ಅರ್ಥಕ್ಕಿಂತ ಬೇರೆಯಾದ ಅರ್ಥ ಇದು. ‘ಭಾವುಕ’ವೆನ್ನುವ ಮನಸ್ಸು ನಿಸರ್ಗದ ಸರಳತೆ ಮತ್ತು ಶಕ್ತಿಯಿಂದ ದೂರ ಸರಿದು ತನ್ನದೇ ಭಾವ ಮತ್ತು ಆಲೋಚನೆಗಳಲ್ಲಿ ಮಗ್ನವಾದ ಮನಸ್ಸನ್ನು ಸೂಚಿಸುತ್ತದೆ. [ಕನ್ನಡ ಅನುವಾದದ ಮಟ್ಟಿಗೆ ‘ಪ್ರಬುದ್ಧ’ ಎಂಬ ಪದವನ್ನು ಬಳಸಿಕೊಂಡಿದ್ದೇನೆ.]

ಆ ಲೇಖನದಲ್ಲಿ ಶ್ಕಿಲರ್ ಕವಿಗಳನ್ನು ‘ಮುಗ್ಧ’ ಮತ್ತು ‘ಭಾವುಕ/ಪ್ರಬುದ್ಧ’ ಎಂಬ ಎರಡು ಗುಂಪಾಗಿ ವಿಂಗಡಿಸುತ್ತಾನೆ: ಮುಗ್ಧಕವಿಗಳು ನಿಸರ್ಗದೊಡನೆ ಇರುವವರು, ನಿಸರ್ಗದಂತೆಯೇ ಶಾಂತವಾಗಿ, ಕ್ರೂರವಾಗಿ, ವಿವೇಕಿಗಳಾಗಿ ಇರುವವರು. ಅವರು ಕವಿತೆಯನ್ನು ಸ್ವ-ಚ್ಛಂದವಾಗಿ ಬರೆಯುತ್ತಾರೆ. ಬರೆಯುವಾಗ ಯೋಚನೆ ಮಾಡುವವರೂ ಅಲ್ಲ, ಬರೆದದ್ದರ ಬೌದ್ಧಿಕ ಮತ್ತು ನೈತಿಕ ಪರಿಣಾಮ, ಇತರರ ಪ್ರತಿಕ್ರಿಯೆಗಳ ಬಗ್ಗೆ ಚಿಂತಿಸುವವರೂ ಅಲ್ಲ. ಮುಗ್ಧ ಕವಿಗಳ ಮಟ್ಟಿಗೆ ಕಾವ್ಯವೆನ್ನುವುದು ನಿಸರ್ಗದ ಮುದ್ರೆಯ ಹಾಗೆ ಇರುತ್ತದೆ, ನಿಸರ್ಗವು ಅವರನ್ನು ತೊರೆಯದ ಜೀವಂತವಾದ ಸಂಗತಿಯಾಗಿರುತ್ತದೆ. ಅವರು ಯಾವ ನಿಸರ್ಗ ವಿಶ್ವದ ಭಾಗವಾಗಿದ್ದಾರೋ ಅದರಿಂದ ಕಾವ್ಯವು ಸ್ವಚ್ಛಂದವಾಗಿ ಉಕ್ಕಿಬರುತ್ತದೆ. ಕಾವ್ಯವು ಚಿಂತನೆಯಿಂದ ಮೂಡಿದ್ದಲ್ಲ, ಕವಿ ಉದ್ದೇಶಪಟ್ಟು ರಚಿಸಿದ್ದೂ ಅಲ್ಲ, ನಿರ್ದಿಷ್ಟವಾದ ಛಂದಸ್ಸಿನಲ್ಲಿ, ನಿರಂತರ ಸ್ವವಿಮರ್ಶೆ ಮತ್ತು ತಿದ್ದುಪಡಿಗಳ ಮೂಲಕ ಅಂತಿಮ ರೂಪ ಪಡೆಯುವದಂಥದೂ ಅಲ್ಲ; ಕವಿತೆಯು ನಿಶ್ಚಿಂತವಾಗಿ, ಅವಿಚಾರವಾಗಿ ತನ್ನನ್ನೇ ಬರೆದುಕೊಳ್ಳಬೇಕು, ನಿಸರ್ಗ, ಅಥವ ದೇವರು ಅಥವ ಇನ್ಯಾವುದೋ ಶಕ್ತಿ ಕವಿಯ ಮೂಲಕ ಅದನ್ನು ಬರೆಸಬೇಕು ಅನ್ನುವುದು ಅವರ ನಂಬಿಕೆ. ರೊಮಾಂಟಿಕ್ ಕವಿ ಕೋಲ್ ರಿಜ್ ನ ಭಾವನೆಗಳು ಹೀಗಿದ್ದವು. ಅವನು ಜರ್ಮನಿಯ ರೊಮ್ಯಾಂಟಿಕ್ ಕವಿಗಳನ್ನು ಅನುಸರಿಸಿದ್ದ; ತನ್ನ ಕವಿತೆ ‘ಕುಬ್ಲಾ ಖಾನ್’ ಮುನ್ನುಡಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದ. ಮುಗ್ಧ ಕವಿಯು ತನಗೆ ‘ದರ್ಶನ’ ದೊರೆತಿರುವುದರಿಂದ ತನ್ನ ಉಕ್ತಿ, ಮಾತು, ಪದ್ಯ ಇವೆಲ್ಲವೂ ನಿಸರ್ಗವನ್ನು ಚಿತ್ರಿಸುತ್ತವೆ, ಲೋಕವನ್ನು ಪ್ರತಿನಿಧಿಸುತ್ತವೆ, ಜಗತ್ತಿನ ಅರ್ಥವನ್ನು ಸಮರ್ಪಕವಾಗಿ, ಸಂಪೂರ್ಣವಾಗಿ ವ್ಯಕ್ತಪಡಿಸುತ್ತದೆ ಎಂಬ ದೃಢವಾದ ನಂಬಿಕೆ ಇಟ್ಟುಕೊಂಡಿರುತ್ತಾನೆ ಎಂದು ಶ್ಕಿಲರ್ ಹೇಳುತ್ತಾನೆ. ‘ಪ್ರಬುದ್ಧ’ ಕವಿ ಚಡಪಡಿಸುತ್ತಾನೆ, ತನ್ನ ಮಾತು ವಾಸ್ತವವನ್ನು ಪೂರಾ ಒಳಗೊಂಡಿವೆಯೋ, ವಾಸ್ತವ ಅನ್ನಿಸುತ್ತವೆಯೋ, ತನ್ನ ಉಕ್ತಿಗಳು ತನ್ನ ಇಷ್ಟಾರ್ಥವನ್ನು ತಿಳಿಸುತ್ತವೆಯೋ ಎಂದು ಆತಂಕಪಡುತ್ತಿರುತ್ತಾನೆ. ಹಾಗಾಗಿ ತಾನು ಬರೆವ ಕವಿತೆ, ಬಳಸುವ ತಂತ್ರ, ತನ್ನ ಪ್ರಯತ್ನದಿಂದ ಸೃಷ್ಟಿಗೊಂಡ ಕೃತಿಯ ಬಗ್ಗೆ ಚಿಂತಿತನಾಗಿರುತ್ತಾನೆ. ಮುಗ್ಧ ಕವಿಗೆ ಜಗತ್ತು ಇರುವ ರೀತಿಗೂ ತಾನು ಗ್ರಹಿಸಿರುವ ಜಗತ್ತಿಗೂ ಅಂಥ ವ್ಯತ್ಯಾಸವಿದೆ ಎಂದೇನೂ ಅನ್ನಿಸುವುದಿಲ್ಲ. ಆಧುನಿಕ- ಚಿಂತನಶೀಲ ಕವಿ ತನ್ನ ಗ್ರಹಿಕೆ, ತಾನು ಅರ್ಥಮಾಡಿಕೊಂಡ ಸಂಗತಿ, ತನ್ನ ಇಂದ್ರಿಯಗಳ ಪಟುತ್ವ ಇವುಗಳ ಬಗ್ಗೆಯೂ ಚಿಂತೆಮಾಡುತ್ತಾನೆ. ತನ್ನ ಗ್ರಹಿಕೆಗಳನ್ನು ಕಾವ್ಯವಾಗಿಸಿದ ತತ್ವಗಳು ಎಷ್ಟರ ಮಟ್ಟಿಗೆ ಶೈಕ್ಷಣಿಕ, ನೈತಿಕ, ಬೌದ್ಧಿಕ ಪ್ರಾಮುಖ್ಯ ಹೊಂದಿವೆ ಎಂದು ಚಿಂತಿಸುತ್ತಾನೆ.

ನನ್ನ ಯೌವನದ ದಿನಗಳಲ್ಲಿ ಈ ಪ್ರಬಂಧವನ್ನು ಮತ್ತೆ ಮತ್ತೆ ಓದಿದೆ; ಸ್ವಚ್ಛಂದ ಬರಹಕ್ಕೂ ಬುದ್ಧಿಯ ನೆರವು ಪಡೆದು ಎಚ್ಚರದಿಂದ ಉದ್ದೇಶಪೂರ್ವಕವಾಗಿ ಬರೆಯುವುದಕ್ಕೂ ಇರುವ ವ್ಯತ್ಯಾಗಳನ್ನು ಗಮನಿಸಿದೆ. ಆ ಲೇಖನ ಓದುತ್ತಿರುವಾಗ ನಾನೂ ಕಾದಂಬರಿಕಾರನೆಂದೂ, ನನ್ನ ಬೇರೆ ಬೇರೆ ಕಾದಂಬರಿಗಳಲ್ಲಿ ಪ್ರಯೋಗಿಸಿದ ಬೇರೆ ಬೇರೆ ಮೂಡುಗಳನ್ನೂ ಚಿಂತಿಸಿದೆ. ಚಿತ್ರಕಲೆಯನ್ನು ಕಲಿಯುವ ನನ್ನ ಪ್ರಯತ್ನವನ್ನು ನೆನೆದುಕೊಂಡೆ. ನನ್ನ ಏಳನೆಯ ವಯಸ್ಸಿನಿಂದ ಇಪ್ಪತ್ತೆರಡನೆಯ ವಯಸ್ಸಿನವರೆಗೆ ಸತತವಾಗಿ ಚಿತ್ರರಚನೆ ಮಾಡುತ್ತಿದ್ದೆ. ನಾನೊಬ್ಬ ಕಲಾವಿದನಾಗುತ್ತೇನೆಂದು ಕನಸು ಕಾಣುತ್ತಿದ್ದೆ. ಆದರೆ ನಾನು ಮುಗ್ಧ ಕಲಾವಿದನಾಗಿದ್ದೆ; ಇದು ನನಗೆ ತಿಳಿದು ಚಿತ್ರರಚನೆಯನ್ನು ಕೈ ಬಿಟ್ಟೆ. ನನ್ನ ಯೌವನದ ದಿನಗಳಲ್ಲಿ ಮುಗ್ಧ ಮತ್ತು ಚಿಂತನಶೀಲ ಸ್ಥಿತಿಗಳ ನಡುವೆ ಓಲಾಡುತ್ತಿದ್ದೆ ಅನ್ನಿಸುತ್ತದೆ.

ಮುಂದುವರೆದ ಹಾಗೆ ಶ್ಕಿಲರ್ ನ ಮನುಷ್ಯ ಮಾದರಿಗಳನ್ನು ಕುರಿತ ತಾತ್ವಿಕ ಬರಹವಾಗುತ್ತದೆ. ಪ್ರಬಂಧದ ಸಾಲುಗಳ ನಡುವೆ ನನ್ನ ಖಾಸಗಿ ಆಲೋಚನೆ ಮತ್ತು ಅಭಿಪ್ರಾಯಗಳನ್ನು ‘ಓದಿಕೊಳ್ಳುವುದಕ್ಕೆ’ ನನಗೆ ಖುಷಿಯ ಸಂಗತಿ. ‘ಎರಡು ಬಗೆಯ ಮನುಷ್ಯತ್ವಗಳಿವೆ,’ ಎಂದು ಹೇಳುವಾಗ ಅವನು ‘ಒಂದು ಗಯಟೆಯ ಹಾಗೆ ಮುಗ್ಧವಾದದ್ದು ಇನ್ನೊಂದು ತನ್ನ ಹಾಗೆ ಚಿಂತನಶೀಲವಾದದ್ದು,’ ಎಂದೆನ್ನುತ್ತಿದ್ದಾನೆ ಎಂದು ಜರ್ಮನ್ ಸಾಹಿತ್ಯಚರಿತ್ರೆಕಾರರು ಕೆಲವರು ಹೇಳುತ್ತಾರೆ. ಗಯಟೆಯ ಕಾವ್ಯಶಕ್ತಿ ಮಾತ್ರವಲ್ಲ, ಅವನ ಶಾಂತ ಚಿತ್ತ, ಅಬಾಧಿತ ಮನೋಧರ್ಮ, ಅಹಮನ್ಯತೆ, ಆತ್ಮವಿಶ್ವಾಸ, ಆತ್ಮಸಂಪನ್ನತೆ ಇವುಗಳ ಬಗ್ಗೆಯೂ ಶ್ಕಿಲರ್ ಗೆ ಅಸೂಯೆ ಇತ್ತು. ಗಯಟೆಗೆ ಪ್ರಖರಚಿಂತನೆಗಳು ನಿರಾಯಾಸವಾಗಿ ಒದಗುತ್ತಿದ್ದವು; ಅವನು ಎಂಥ ಸಂದರ್ಭದಲ್ಲೂ ತನ್ನತನ ಕಳೆದುಕೊಳ್ಳುತ್ತಿರಲಿಲ್ಲ; ಸರಳತೆ, ಸೌಜನ್ಯ, ಪ್ರತಿಭೆಗಳು, ಇವೆಲ್ಲ ತನ್ನಲ್ಲಿ ಇವೆ ಎಂದು ಗೊತ್ತೇ ಇಲ್ಲದೆ ಮಗುವಿನ ಹಾಗೆ ಗಯಟೆ ಇರುತಿದ್ದ ರೀತಿ, ಇವೆಲ್ಲವೂ ಶ್ಕಿಲರ್ ನ ಸ್ವಭಾವಕ್ಕೆ ವ್ಯತಿರಿಕ್ತವಾಗಿದ್ದವು. ಶ್ಕಿಲರ್ ಚಿಂತನಾಶೀಲ, ಬೌದ್ಧಿಕ ಮನೋಧರ್ಮದವನು, ತನ್ನ ಸಾಹಿತ್ಯಕ ಚಟುವಟಿಕೆಯಿಂದ ಸಂಕೀರ್ಣವಾದ ಭಾವಗಳನ್ನು ತಂದುಕೊಂಡು ಹಿಂಸೆಪಡುತ್ತಿದ್ದ. ತನ್ನ ಸಾಹಿತ್ಯಕ ವಿಧಾನ, ತಂತ್ರಗಳ ಬಗ್ಗೆ ಅವನಿಗೆ ಸಂಪೂರ್ಣ ಅರಿವಿತ್ತು, ಅವುಗಳ ಬಗ್ಗೆ ಪ್ರಶ್ನೆಗಳಿದ್ದವು, ಅನಿಶ್ಚತತೆಗಳಿದ್ದವು—ಎಲ್ಲಕ್ಕಿಂತ ಮಿಗಿಲಾಗಿ ಇವೆಲ್ಲ ಆಧುನಿಕತೆಯ ಲಕ್ಷಣಗಳೆಂದು ಶ್ಕಿಲರ್ ತಿಳಿದಿದ್ದ.

ಶ್ಕಿಲರ್ ಗೆ ಗಯಟೆಯ ಬಗ್ಗೆ ಹುಟ್ಟಿದ್ದಂಥದೇ ಕೋಪ ಈ ಪ್ರಬಂಧವನ್ನು ಮೂವತ್ತು ವರ್ಷಗಳ ಹಿಂದೆ ಓದಿದಾಗ ನನ್ನಲ್ಲೂ ಮೂಡಿತು. ಅದು ಟರ್ಕಿ ಭಾಷೆಯಲ್ಲಿ ಬರೆಯುತ್ತಿದ್ದ ಹಿಂದಿನ ತಲೆಮಾರಿನ ಕಾದಂಬರಿಕಾರರ ಶಿಶು ಸಹಜ ಸ್ವಭಾವದ ಬಗ್ಗೆ ಹುಟ್ಟಿದ ಸಿಟ್ಟು. ಅವರು ಕಾದಂಬರಿಗಳನ್ನು ಸುಲಭವಾಗಿ ಬರೆಯುತ್ತಿದ್ದರು; ಶೈಲಿ, ತಂತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇರಲಿಲ್ಲ. ಹತ್ತೊಂಬತ್ತನೆಯ ಶತಮಾನದ ಬಾಲ್ಜಾಕ್ ನ ರೀತಿಯ ಕಾದಂಬರಿಯೇ ತೀರ ಸಹಜ ರೀತಿ ಎಂದು ಪ್ರಶ್ನೆ ಇಲ್ಲದೆ ಒಪ್ಪಿಕೊಂಡಿದ್ದ ಜಗತ್ತಿನ ಎಲ್ಲ ಲೇಖಕರಿಗೂ ‘ಮುಗ್ಧ’ ಎಂಬ ಪದವನ್ನು ನಿಂದಾತ್ಮಕ ಅರ್ಥದಲ್ಲಿ ಅನ್ವಯಿಸಲು ಶರುಮಾಡಿದೆ. ಮೂವತ್ತೈದು ವರ್ಷಗಳ ಸಾಹಸದ ನಂತರ ಮುಗ್ಧ ಮತ್ತು ಪ್ರಬುದ್ಧ ಕಾದಂಬರಿಕಾರ ವ್ಯಕ್ತಿತ್ವಗಳ ನಡುವೆ ಸಮತೋಲನ ಕಂಡುಕೊಂಡಿದ್ದೇನೆ ಎಂದು ನನ್ನನ್ನೇ ನಂಬಿಸಿಕೊಳ್ಳುತ್ತಿದ್ದೇನೆ.

ಕಾದಂಬರಿಗಳಲ್ಲಿ ಚಿತ್ರಣಗೊಂಡಿರುವ ಜಗತ್ತನ್ನು ಚರ್ಚಿಸುವಾಗ ನಾನು ಲ್ಯಾಂಡ್ ಸ್ಕೇಪು ಚಿತ್ರಣದ ನಿದರ್ಶನ ನೀಡಿದೆ; ನಾವು ಕಾದಂಬರಿಯನ್ನು ಓದುವಾಗ ಮನಸ್ಸಿನಲ್ಲಿ ಏನೇನಾಗುತ್ತದೆ ಅನ್ನುವುದರ ಬಗ್ಗೆ ನಮ್ಮಲ್ಲಿ ಅನೇಕರಿಗೆ ಅರಿವೇ ಇರುವುದಿಲ್ಲ—ಡ್ರೈವಿಂಗ್ ಬಗ್ಗೆ ಡ್ರೈವರ್ ಗೆ ಹೇಗೆ ಅರಿವು ಇರುವುದಿಲ್ಲವಲ್ಲ ಹಾಗೇ ಎಂದು ಹೇಳಿದೆ. ಕಾರು ಸಾಗುತ್ತಿರುವಾಗ ಅದರ ಕಿಟಕಿಯಿಂದ ಕಾಣುವ ಲೋಕ, ಜನ ಎಲ್ಲವೂ ತಾವು ಹೇಗೆ ಕಾಣುತ್ತಿದ್ದೇವೋ ಹಾಗೇ ಇವೆ ಅಂದುಕೊಳ್ಳುವ ಹಾಗೆ ಮುಗ್ಧ ಓದುಗ ಮತ್ತು ಮುಗ್ಧ ಕಾದಂಬರಿಕಾರರು ತಿಳಿದಿರುತ್ತಾರೆ. ಕಾರಿನ ಕಿಟಕಿಯಿಂದ ಲೋಕವನ್ನು ಕಾಣುವ ದೃಶ್ಯದ ಶಕ್ತಿಯನ್ನು ನಂಬುವ ಮನುಷ್ಯ ಪ್ರಬುದ್ಧ ಕಾದಂಬರಿಕಾರನಿಗೆ ಹೊಟ್ಟೆ ಕಿಚ್ಚು ಹುಟ್ಟುವ ಹಾಗೆ ತಾನು ಕಂಡ ಜನಗಳ ಬಗ್ಗೆ ಮಾತಾಡುತ್ತಾ ನಿರ್ಣಯಗಳನ್ನು ಮಂಡಿಸುತ್ತಾನೆ ಮುಗ್ಧಲೇಖಕ. ಇದಕ್ಕೆ ವಿರುದ್ಧವಾಗಿ ಚಿಂತನಶೀಲ ಕಾದಂಬರಿಕಾರ ‘ಕಾರಿನ ಕಿಟಕಿಯಿಂದ ಕಾಣುವ ದೃಶ್ಯಕ್ಕೆ ಕಿಟಕಿಯ ಚೌಕಟ್ಟು ಮಿತಿಯನ್ನು ಒಡ್ಡುತ್ತದೆ, ಕಿಟಕಿಯ ಗಾಜು ಧೂಳಡರಿದ್ದರೆ ಸ್ಪಷ್ಟವಾಗಿ ಕಾಣುವುದೂ ಇಲ್ಲ,’ ಎಂದು ಹೇಳುತ್ತ ಮೌನಕ್ಕೆ ಶರಣಾಗಬಹುದು. ಅಥವಾ ಅನೇಕ ಸಮಕಾಲೀನ ಕಾದಂಬರಿಕಾರರ ಹಾಗೆ, ನನ್ನ ಹಾಗೆ, ಸ್ಟೇರಿಂಗು, ಗಾಲಿ, ಸ್ವಿಚ್ಚುಗಳು, ಧೂಳು ಮೆತ್ತಿದ ಕಿಟಕಿ ಗಾಜು, ಗಿಯರ್ ಗಳನ್ನು ಅವೆಲ್ಲವೂ ದೃಶ್ಯದ ಭಾಗಗಳು ಎಂಬಂತೆ ವಿವರಿಸಿ ಓದುಗರು ಎಂದಿಗೂ ಕಾದಂಬರಿಕಾರನ ದೃಷ್ಟಿಕೋನದ ಪರಿಮಿತಿಗಷ್ಟೇ ಸಿಕ್ಕಿಬೀಳದ ಹಾಗೆ ನೋಡಿಕೊಳ್ಳಬಹುದು.

ನಾವು ಕಾದಂಬರಿಯಲ್ಲಿ ಮುಳುಗಿರುವಾಗ ಮನಸ್ಸು ಶ್ರಮ ಹಾಕುತ್ತಿರುತ್ತದೆ. ಲೋದಕೃಶ್ಯ, ಮರ, ಪ್ರಮುಖ ಪಾತ್ರಗಳ ಆಲೋಚನೆ, ಅವರು ಮುಟ್ಟುವ ವಸ್ತುಗಳು ಇವೆಲ್ಲವುಗಳ ನಡುವೆ ನಮ್ಮ ಮನಸ್ಸು ಜೀಕುತ್ತಿರುತ್ತದೆ; ವಸ್ತುಗಳ ಮತ್ತು ಅವು ಉದ್ದೀಪಿಸುವ ನೆನಪುಗಳ ನಡುವೆ, ಇತರ ಮುಖ್ಯ ಪಾತ್ರ ಮತ್ತು ಸಾಮಾನ್ಯ ಆಲೋಚನೆಗಳ ನಡುವೆ ಉಯ್ಯಾಲೆಯಾಡುತ್ತಿರುತ್ತದೆ.

ಶ್ಕಿಲರ್ ನಿಂದ ಪ್ರಚೋದನೆಗೊಂಡು ನೀಡಿರುವ ಈ ನಿದರ್ಶನದಲ್ಲಿ ನಾವೆಲ್ಲ ಕೊಚ್ಚಿ ಹೋಗುವ ಮೊದಲು ಕಾದಂಬರಿಯನ್ನು ಓದುವಾಗ ನಮ್ಮ ಮನಸ್ಸಿನಲ್ಲಿ ಏನೇನಾಗುತ್ತದೆ ಅನ್ನುವ ಬಗ್ಗೆ ಮುಖ್ಯ ಅಂಶಗಳನ್ನು ಪಟ್ಟಿ ಮಾಡೋಣ. ಕಾದಂಬರಿಯನ್ನು ಓದುವಾಗ ಇವೆಲ್ಲ ನಡೆಯುತ್ತವೆ; ಆದರೆ ಪ್ರಬುದ್ಧ, ಚಿಂತನಶೀಲ ಮನೋಧರ್ಮದ ಕಾದಂಬರಿಕಾರ ಮಾತ್ರ ಇವನ್ನು ಗುರುತಿಸಿ ವಿವರಗಳನ್ನು ದಾಖಲಿಸಬಲ್ಲ. ಅಂಥದೊಂದು ವಿವರಗಳ ಪಟ್ಟಿ ಕಾದಂಬರಿಯು ನಿಜವಾಗಿ ಏನು ಅನ್ನುವುದನ್ನು ಹೇಳುತ್ತದೆ, ನಮಗೆ ಗೊತ್ತಿರುವ, ಮರೆತ ಸಂಗತಿಗಳನ್ನು ತಿಳಿಸುತ್ತದೆ.

1. ಕಾದಂಬರಿ ಓದುತ್ತಾ ಒಟ್ಟಾರೆ ದೃಶ್ಯವನ್ನು ಗಮನಿಸುತ್ತೇವೆ, ಕಥೆಯನ್ನು ಹಿಂಬಾಲಿಸುತ್ತೇವೆ. ‘ಡಾನ್ ಕ್ವಿಕ್ಸಾಟ್’ ಬಗ್ಗೆ ಬರೆಯುತ್ತ ಹೋಸ್ ಆರ್ಟಿಗಾ ಗಾಸೆ ಎಂಬ ವಿಮರ್ಶಕ ಮುಂದೇನಾಯಿತೆಂದು ತಿಳಿಯುವ ಕುತೂಹಲಕ್ಕಾಗಿ ಸಾಹಸ, ಶೃಂಗಾರ ಮತ್ತು ಜನಪ್ರಿಯ ಕಾದಂಬರಿಗಳನ್ನು ಓದುತ್ತೇವೆ, ಆದರೆ ಆಧುನಿಕ ಕಾದಂಬರಿ ಅಥವಾ ‘ಸಾಹಿತ್ಯಕ ಕಾದಂಬರಿ’ ಓದುವಾಗ ಕಾದಂಬರಿ ಸೃಷ್ಟಿಸುವ ವಾತಾವರಣವೇ ಮೌಲಿಕವಾಗಿರುತ್ತದೆ ಎನ್ನುತ್ತಾನೆ. ಆಧುನಿಕ ಕಾದಂಬರಿಯಲ್ಲಿ ಕಥನ ಕಡಮೆ, ಅದು ಲ್ಯಾಂಡ್ ಸ್ಕೇಪಿನ ಚಿತ್ರಣದ ಹಾಗಿರುತ್ತದೆ. ಕಾದಂಬರಿಯಲ್ಲಿ ಕಥನವೇ ಇರಲಿ ವರ್ಣನೆಯೇ ಇರಲಿ, ಆಥವ ಕಥನ ಇಲ್ಲದೆ ಬರಿಯ ವರ್ಣನೆಯೇ ಇರಲಿ, ನಾವು ಲ್ಯಾಂಡ್ ಸ್ಕೇಪು ಚಿತ್ರ ನೋಡುವ ಹಾಗೇ ಕಾದಂಬರಿಯನ್ನೂ ಓದುತ್ತೇವೆ. ಕಥನವನ್ನು ಹಿಂಬಾಲಿಸುತ್ತ ನಮಗೆದುರಾಗುವ ಎಲ್ಲ ಸಂಗತಿಗಳ ಅರ್ಥವೇನು, ಮುಖ್ಯ ಉದ್ದೇಶವೇನು ಎಂದು ಕಲ್ಪಿಸಿಕೊಳ್ಳುತ್ತೇವೆ. ಯಾವ ಘಟನೆಯನ್ನೂ ಹೇಳದೆ ಸುಮ್ಮನೆ ಮರದ ಒಂದೊಂದೂ ಎಲೆ ವರ್ಣಿಸುವ ಹಾಗೆ ಬರೆದಿದ್ದರೂ ಲೇಖಕ ಏನು ಹೇಳಲು ಬಯಸಿರಬಹುದು, ಹೀಗೆ ವರ್ಣನೆಗೊಳ್ಳುತ್ತಿರುವ ಒಂದೊಂದೂ ಎಲೆ ಯಾವ ಡಿಸೈನಿನ ಕಥೆಯನ್ನು ರೂಪಿಸಬಹುದು ಎಂದು ಕಲ್ಪಿಸಿಕೊಳ್ಳುತ್ತೇವೆ. ಯಾಕೆ ಹೀಗೆ, ಉದ್ದೇಶವೇನು, ನಿರೂಪಕನ ಐಡಿಯ ಏನು, ಈ ಎಲ್ಲ ವರ್ಣನೆಗೆ ಗುಪ್ತವಾದೊಂದು ಕೇಂದ್ರ ಇದೆಯೋ ಎಂದು ನಮ್ಮ ಮನಸ್ಸು ಸದಾ ತಡಕುತ್ತಿರುತ್ತದೆ.
2. ಓದುವ ಪದಗಳನ್ನು ಮನಸ್ಸಿನಲ್ಲಿ ಬಿಂಬವಾಗಿ ರೂಪಿಸಿಕೊಳ್ಳುತ್ತೇವೆ. ಕಾದಂಬರಿ ಕಥೆ ಹೇಳುತ್ತದೆ, ಆದರೆ ಬರಿಯ ಕಥೆಯಷ್ಟೇ ಅಲ್ಲ. ಅನೇಕ ವಸ್ತು, ವರ್ಣನೆ, ಶಬ್ದ, ಸಂಭಾಷಣೆ, ನೆನಪು, ತುಣಕು ಮಾಹಿತಿ, ಆಲೋಚನೆ, ಘಟನೆ, ದೃಶ್ಯ, ಕ್ರಿಯೆಯ ಗಳಿಗೆಗಳೆಷ್ಟರ ಮೂಲಕವೋ ಕಥೆ ನಿಧಾನವಾಗಿ ರೂಪು ಪಡೆಯುತ್ತದೆ. ಕಾದಂಬರಿಯಿಂದ ಸುಖ ಪಡೆಯುವುದೆಂದರೆ ಪದಗಳಿಂದ ದೂರ ಸರಿದು ಈ ಎಲ್ಲ ಸಂಗತಿಗಳನ್ನು ಮನಸ್ಸಿನಲ್ಲಿ ಬಿಂಬವಾಗಿ ರೂಪುಗೊಳಿಸಿಕೊಳ್ಳುವುದು ಎಂದರ್ಥ. ಪದಗಳು ಹೇಳುತ್ತಿರುವುದನ್ನು, ಹೇಳಲು ಬಯಸುವುದನ್ನು ನಮ್ಮ ಮನಸ್ಸಿನಲ್ಲಿ ಚಿತ್ರವಾಗಿಸಿಕೊಳ್ಳುತ್ತ ನಾವು ಓದುಗರು, ಕಥೆಯನ್ನು ಪೂರ್ಣಗೊಳಿಸುತ್ತೇವೆ. ಕಥೆಗಾರ ಏನು ಹೇಳಲು ಬಯಸಿದ್ದಾನೆ, ಉದ್ದೇಶಪಟ್ಟಿದ್ದಾನೆ, ಏನು ಹೇಳುತ್ತಿದ್ದಾನೆ ಎಂದು ನಾವು ಅಂದುಕೊಂಡಿದ್ದೇವೆ—ಇವನ್ನೆಲ್ಲ ಚಿತ್ರಗೊಳಿಸುವುದೆಂದರೆ ಅದು ಕಾದಂಬರಿಯ ಕೇಂದ್ರವನ್ನು ಹುಡುಕುವ ಕೆಲಸ.

3. ಲೇಖಕರು ಹೇಳುತ್ತಿರುವುದರಲ್ಲಿ ಎಷ್ಟು ನಿಜವಾದ ಅನುಭವ, ಎಷ್ಟು ಕಲ್ಪನೆ ಎಂದು ನಮ್ಮ ಮನಸ್ಸಿನ ಒಂದು ಭಾಗ ಆಶ್ಚರ್ಯಪಡುತ್ತಿರುತ್ತದೆ. ನಮ್ಮಲ್ಲಿ ಅಚ್ಚರಿ, ಮೆಚ್ಚುಗೆ, ಬೆರಗುಗಳನ್ನು ಮೂಡಿಸುವಂಥ ಭಾಗಗಳು ಎದುರಾದಾಗಲೆಲ್ಲ ಈ ಪ್ರಶ್ನೆ ಕೇಳಿಕೊಳ್ಳುತ್ತೇವೆ. ಕಾದಂಬರಿ ಓದುವುದೆಂದರೆ ಪುಸ್ತಕದಲ್ಲಿ ಆಳವಾಗಿ ಮುಳುಗಿ ಹೋಗಿರುವ ಹೊತ್ತಿನಲ್ಲೂ ಇದು ಎಷ್ಟು ಕಲ್ಪನೆ, ಎಷ್ಟು ನಿಜ ಎಂಬ ಅಚ್ಚರಿ ಇರುತ್ತದೆ. ಇಲ್ಲೊಂದು ತಾರ್ಕಿಕ ವಿರೋಧಾಭಾಸವಿದೆ. ಕಾದಂಬರಿಯಲ್ಲಿ ಮೈ ಮರೆತು, ಅಲ್ಲಿರುವುದನ್ನೆಲ್ಲ ನಿಜವೆಂದು ಅನುಭವಿಸುವುದು ಮತ್ತು ಅದೇ ಹೊತ್ತಿನಲ್ಲಿ ನಮಗಾಗುತ್ತಿರುವ ಅನುಭವದಲ್ಲಿ ಕಲ್ಪನೆಯ ಅಂಶ ಎಷ್ಟು ಎಂದು ಚಿಂತನೆ ಮಾಡುವುದು ಒಟ್ಟಿಗೇ ನಡೆಯುತ್ತವೆ. ಈ ವಿಶಿಷ್ಟವಾದ ತರ್ಕ ಮತ್ತು ಸಂಘರ್ಷವನ್ನು ಅವಲಂಬಿಸಿಯೇ ಕಾದಂಬರಿ ಕಲೆಯ ಶಕ್ತಿ ಇರುತ್ತದೆ. ಕಾದಂಬರಿ ಓದುವುದೆಂದರೆ ಪರಸ್ಪರ ವಿರುದ್ಧ ಐಡಿಯಾಗಳನ್ನು ನಿರಂತರವಾಗಿ ಮತ್ತೆ ದೃಢವಾಗಿ ನಂಬುವುದೇ ಆಗಿದೆ. ಹೀಗಾಗಿ ವಾಸ್ತವದ ಮೂರನೆಯ ಆಯಾಮ ನಮ್ಮ ಎದುರು ರೂಪು ತಳೆಯಲು ಶುರುವಾಗುತ್ತದೆ. ಕಾದಂಬರಿಯ ಸಂಕೀರ್ಣ ಜಗತ್ತಿನ ಘರ್ಷಣೆಯನ್ನು ಒಪ್ಪಿ ವಿವರಿಸಿಕೊಂಡ ಲೋಕ ನಮ್ಮ ಮನಸ್ಸಿನಲ್ಲಿ ರೂಪುತಳೆಯುತ್ತದೆ.

4. ಅಚ್ಚರಿ ಇನ್ನೂ ಇರುತ್ತದೆ. ವಾಸ್ತವವೆನ್ನುವುದು ಹೀಗಿದೆಯೇ? ಲೇಖಕ ಕಂಡು ವರ್ಣಿಸುತ್ತಿರುವ ಕಾದಂಬರಿ ಲೋಕ ನಮಗೆ ಗೊತ್ತಿರುವ ಲೋಕದ ಹಾಗೆ ಇದೆಯೇ? ಉದಾಹರಣೆಗೆ, 1870ರ ಸುಮಾರಿನಲ್ಲಿ, ಮಾಸ್ಕೋ ಮತ್ತೆ ಪೀಟರ್ಸ್ ಬರ್ಗ್ ನಡುವೆ ಪ್ರಯಾಣ ಮಾಡುತ್ತಿದ್ದ ಜನ ಅಷ್ಟು ಸುಲಭವಾಗಿ ಕಾದಂಬರಿ ಓದಿ ಮೈಮರೆಯುವಷ್ಟು ಪ್ರಶಾಂತತೆ, ಆರಾಮ ರೈಲಿನಲ್ಲಿ ಇರುತ್ತಿತ್ತೋ, ಅಥವಾ ಅನ್ನಾ ನಿಜವಾದ ಪುಸ್ತಕ ಪ್ರೇಮಿ, ಎಂಥ ಗದ್ದಲದ ನಡುವೆಯೂ ಓದಬಲ್ಲಳು ಎಂದು ಲೇಖಕ ಹೇಳುತ್ತಿದ್ದಾನೋ? ನಮ್ಮ ದಿನ ನಿತ್ಯದ ಅನುಭವಗಳಿಂದ ಪಡೆಯುವ ತಿಳಿವಳಿಕೆಗೆ ಸೂಕ್ತವಾದ ರೂಪ ನೀಡಿದರೆ ಅದು ವಾಸ್ತವದ ಬಗ್ಗೆ ಅಮೂಲ್ಯ ಜ್ಞಾನ ನೀಡುತ್ತದೆ ಎಂಬ ಆಶಾವಾದವು ಕಾದಂಬರಿಕಾರನ ಕಲೆಯ ಹೃದಯವೇ ಆಗಿದೆ.

5. ಇಂಥ ಆಶಾವಾದದ ಪ್ರಭಾವಕ್ಕೆ ಗುರಿಯಾಗಿ ಅದರ ನೆರಳಲ್ಲೇ ಹೋಲಿಕೆಗಳ ಖಚಿತತೆ, ಕಲ್ಪನೆ ಮತ್ತು ಕಥೆಯ ಶಕ್ತಿ, ವಾಕ್ಯಗಳ ಜೋಡಣೆ, ಗದ್ಯದಲ್ಲೂ ಕವಿತೆಯಲ್ಲೂ ಅಡಗಿರುವ ಸಂಗೀತ ಗುಣ ಇವನ್ನೆಲ್ಲ ಕಥೆಗಾರ-ಓದುಗರೂ ಅನುಭವಿಸುತ್ತಾರೆ. ಶೈಲಿಯ ಸಮಸ್ಯೆ ಮತ್ತು ಸುಖ ಕಾದಂಬರಿಯ ಕೇಂದ್ರವಲ್ಲ. ಆದರೂ ಈ ವಿಷಯ ಚರ್ಚಿಸುವುದಕ್ಕೆ ಸಾವಿರಾರು ಉದಾಹರಣೆ ಬೇಕಾಗುತ್ತವೆ.

6. ಕಾದಂಬರಿಯ ಪಾತ್ರಗಳು ನಡೆದುಕೊಳ್ಳುವ ರೀತಿ, ಮಾಡುವ ಆಯ್ಕೆಗಳ ಬಗ್ಗೆ ನಾವು ನೈತಿಕ ತೀರ್ಮಾನ ನೀಡುತ್ತೇವೆ. ಹಾಗೆ ಮಾಡುತ್ತಿರುವಾಗಲೇ ಕಾದಂಬರಿಕಾರನು ತಾನು ಸೃಷ್ಟಿಸಿರುವ ಪಾತ್ರಗಳ ಬಗ್ಗೆ ತೆಗೆದುಕೊಳ್ಳುವ ನೈತಿಕ ತೀರ್ಮಾನಗಳ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ನೈತಿಕ ತೀರ್ಮಾನ ಅನ್ನುವುದು ಕಾದಂಬರಿ ಪ್ರಕಾರದಲ್ಲಿ ಅನಿವಾರ್ಯವಾದ ಜವುಗು ಹುದುಲು. ಪಾತ್ರಗಳನ್ನು ವಿವರಿಸುವ ಮೂಲಕ ಕಾದಂಬರಿಯ ಕಲೆ ಅತ್ಯುತ್ತಮ ಫಲಿತಾಂಶ ಕೊಡುತ್ತದೆಯೇ ಹೊರತು ಜನರ ಬಗ್ಗೆ ತೀರ್ಮಾನ ಘೋಷಿಸುವುದರಿಂದ ಅಲ್ಲ ಅನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು. ಕಾದಂಬರಿ ಓದುತ್ತಿರುವಾಗ ನೈತಿಕತೆ ಅನ್ನುವುದು ಕಾದಂಬರಿಯೊಳಗಿನ ಲೋಕದ ಭಾಗವಾಗಿರಬೇಕೇ ಹೊರತು ನಮ್ಮೊಳಗಿಂದ ಎದ್ದು ಬಂದು ಪಾತ್ರಗಳನ್ನು ಗುರಿಯಾಗಿಸಿಕೊಂಡು ತೀರ್ಮಾನ ಮಾಡುವ ಆಯುಧವಾಗಿರಬಾರದು.

7. ಈ ಎಲ್ಲ ಕೆಲಸಗಳನ್ನೂ ನಮ್ಮ ಮನಸ್ಸು ಏಕಕಾಲದಲ್ಲಿ ಮಾಡುತ್ತಿರುವಾಗ ನಮ್ಮನ್ನೇ ನಾವು ಮೆಚ್ಚಿಕೊಳ್ಳುತ್ತಿರುತ್ತೇವೆ—ನಾವು ಪಡೆದ ತಿಳಿವಳಿಕೆ, ಅನುಭವದ ಆಳ, ಅರ್ಥವಂತಿಕೆಗಳ ಬಗ್ಗೆ ನಮ್ಮನ್ನೇ ನಾವು ಅಭಿನಂದಿಸಿಕೊಳ್ಳುತ್ತಿರುತ್ತೇವೆ. ಸಾಹಿತ್ಯಕ ಗುಣವಿರುವ ಕಾದಂಬರಿಗಳ ಬಗ್ಗೆ ಈ ಮಾತು ವಿಶೇಷವಾಗಿ ನಿಜ. ಕಾದಂಬರಿಯ ಜೊತೆಗೆ ನಾವು ಏರ್ಪಡಿಸಿಕೊಳ್ಳುವ ನಿಕಟ, ಆತ್ಮೀಯ ಸಂಬಂಧದ ಕಾರಣದಿಂದ ಓದುಗರಾಗಿ ಕಾದಂಬರಿಯು ನಮ್ಮ ಖಾಸಗಿ ಗೆಲುವು ಎಂದೇ ತಿಳಿಯುತ್ತೇವೆ. ಈ ಕಾದಂಬರಿಯನ್ನು ನಮಗಾಗಿ, ಕೇವಲ ನಮಗಾಗಿ ಬರೆಯಲಾಗಿದೆ ಎಂಬ ಸವಿಯಾದ ಭ್ರಮೆಯೊಂದು ನಿಧಾನವಾಗಿ ನಮ್ಮೊಳಗೇ ತಲೆ ಎತ್ತುತ್ತದೆ. ಲೇಖಕನಿಗೂ ನಮಗೂ ನಡುವೆ ಏರ್ಪಡುವ ಆತ್ಮೀಯತೆ, ವಿಶ್ವಾಸಗಳ ಕಾರಣದಿಂದ ಪುಸ್ತಕದ ಕೆಲವು ಭಾಗ ಅರ್ಥವಾಗದಿದ್ದರೆ, ಅಥವ ಕೆಲವು ಸಂಗತಿಗಳು ನಮ್ಮಿಷ್ಟಕ್ಕೆ ವಿರೋಧವಾಗಿದ್ದರೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾದಂಬರಿಯ ಲೋಕದೊಳಕ್ಕೆ ಕಾಲಿಡುವಾಗಲೇ ನಾವು ಒಂದಷ್ಟು ಮಟ್ಟಿಗೆ ಲೇಖಕನ ಜೊತೆಗೆ ಸಹಾಭಾಗಿಗಳಾಗಿರುತ್ತೇವೆ. ಕಾದಂಬರಿ ಓದುವಾಗ ಮನಸ್ಸಿನ ಒಂದು ಭಾಗ ಈ ಸಹಭಾಗಿತನವನ್ನು ಸಮರ್ಥಿಸುವ ಕೆಲಸದಲ್ಲಿ ತೊಡಗಿರುತ್ತದೆ. ಒಲ್ಲದ್ದನ್ನು ಬಚ್ಚಿಡುವ, ಸಲ್ಲದ್ದನ್ನು ಕೂಡ ಸರಿ ಇರಬಹುದೇನೋ ಅನ್ನುವ ಹಾಗೆ ತಿದ್ದಿಕೊಳ್ಳುವ, ಒಪ್ಪಬಹುದಾದಂಥ ಕಾರಣ ಹುಡುಕುವ ಕೆಲಸದಲ್ಲಿ ತೊಡಗಿರುತ್ತದೆ. ಕಥೆಯನ್ನು ನಂಬಬೇಕೆಂದೇ ನಾವು ಕಥೆಗಾರನನ್ನು ಆತ ಬಯಸುವಷ್ಟು ಮಟ್ಟಿಗೆ ನಂಬುವುದಿಲ್ಲ. ಕಥೆಗಾರನ ಕೆಲವು ಅಭಿಪ್ರಾಯ, ನಿಲುವು, ಗೀಳುಗಳ ಬಗ್ಗೆ ಆಕ್ಷೇಪಣೆ ಇದ್ದರೂ ನಿಷ್ಠೆಯಿಂದ ಕಥೆಯನ್ನು ಓದುತ್ತ ಇರುತ್ತೇವೆ.

8. ಮನಸ್ಸಿನ ಈ ಚಟುವಟಿಕೆಗಳೆಲ್ಲ ನಡೆಯುತ್ತಿರುವಾಗ ನಮ್ಮ ನೆನಪು ತೀವ್ರವಾಗಿ, ನಿರಂತರವಾಗಿ ಶ್ರಮಿಸುತ್ತಿರುತ್ತದೆ. ಲೇಖಕನು ನಮಗೆ ತೋರುತ್ತಿರುವ ಜಗತ್ತಿನ ಅರ್ಥ ತಿಳಿಯುವುದಕ್ಕೆ, ಆ ಜಗತ್ತನ್ನು ಓದಿ ಸುಖಿಸುವುದಕ್ಕೆ ಕಾದಂಬರಿಯ ಗುಪ್ತಕೇಂದ್ರವನ್ನು ಹುಡುಕಬೇಕು ಅನ್ನಿಸುತ್ತಿರುತ್ತದೆ. ಮರದ ಒಂದೊಂದೂ ಎಲೆಯ ವಿವರ ಬಾಯಿಪಾಠ ಮಾಡಿಕೊಳ್ಳುವ ಹಾಗೆ ಕಾದಂಬರಿಯ ಒಂದೊಂದೂ ವಿವರ ನೆನಪಿನಲ್ಲಿಟ್ಟುಕೊಳ್ಳಲು ಶ್ರಮಿಸುತ್ತೇವೆ. ಗಮನವಿರದೆ ಓದುವ ಓದುಗರಿಗೆ ಸಹಾಯವಾಗಲೆಂದು ಲೇಖಕ ಎಲ್ಲವನ್ನೂ ಸರಳಗೊಳಿಸಿ, ತಿಳಿಗೊಳಿಸಿ ಹೇಳಿರದಿದ್ದರೆ ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು ಕಷ್ಟದ ಕೆಲಸ. ಈ ಕಷ್ಟವೇ ಕಾದಂಬರಿ ಎಂಬ ರೂಪದ ಗಡಿಗೆರೆಗಳನ್ನು ನಿರ್ಣಯಿಸುತ್ತದೆ. ಓದುತ್ತ ನಾವು ಸಂಗ್ರಹಿಸಿಕೊಂಡ ವಿವರಗಳನ್ನೆಲ್ಲ ನೆನಪಿಟ್ಟುಕೊಳ್ಳುವುದಕ್ಕೆ ಅವಕಾಶಕೊಡುವಷ್ಟು ಮಾತ್ರ ಕಾದಂಬರಿಯ ಗಾತ್ರ ಇರಬೇಕು. ನಿಸರ್ಗದ ನಡುವೆ ನಾವು ಚಲಿಸುತ್ತಿರುವಾಗ ನಾವು ಕಂಡ ಎಲ್ಲ ಸಂಗತಿಗಳಿಗೆ ಹೇಗೆ ಪರಸ್ಪರ ಸಂಬಂಧ ಇರುತ್ತದೋ, ಏರ್ಪಡುತ್ತದೋ ಹಾಗೆ ಅಚ್ಚುಕಟ್ಟಾದ ಕಾದಂಬರಿಯಲ್ಲಿ ಬರುವ ಎಲ್ಲ ಸಂಗತಿಗಳಿಗೂ ಪರಸ್ಪರ ಸಂಬಂಧ ಇರುತ್ತದೆ, ಏರ್ಪಡುತ್ತದೆ. ರೂಪ ಮತ್ತು ವಾತಾವರಣಗಳ ಸಂಬಂಧದ ಈ ಜಾಲ ಗುಟ್ಟಾದ ಕೇಂದ್ರವನ್ನು ಸೂಚಿಸುತ್ತಿರುತ್ತದೆ.

9. ಕಾದಂಬರಿಯ ಗುಪ್ತ ಕೇಂದ್ರವನ್ನು ತೀರ ಗಮನಕೊಟ್ಟು ಅರಸುತ್ತೇವೆ. ಮುಗ್ಧ ಓದುಗರಾಗಿದ್ದರೂ ಪ್ರಬುದ್ಧ ಓದುಗರಾಗಿದ್ದರೂ ಕಾದಂಬರಿಯನ್ನು ಓದುವಾಗ ನಮ್ಮ ಮನಸ್ಸು ಮುಖ್ಯವಾಗಿ ಈ ಕಾರ್ಯದಲ್ಲೇ ತೊಡಗಿರುತ್ತದೆ. ಕಾದಂಬರಿಯಲ್ಲಿ ಗುಪ್ತವಾದ ಕೇಂದ್ರವೊಂದಿರುತ್ತದೆ ಎಂಬ ಸಂಗತಿಯೇ ಅದನ್ನು ಮಿಕ್ಕ ಸಾಹಿತ್ಯ ಪ್ರಕಾರಗಳಿಗಿಂತ ಬೇರೆಯಾಗಿಸುತ್ತದೆ. ಅಥವಾ ಕೇಂದ್ರವೊಂದಿದೆ, ಓದುತ್ತಿರುವಾಗ ಅದರ ಹುಡುಕಾಟದಲ್ಲಿರಬೇಕು ಎಂಬ ನಂಬಿಕೆ ಕಾದಂಬರಿಯಲ್ಲಿರುವ ಹಾಗೆ ಮಿಕ್ಕ ಪ್ರಕಾರಗಳಿಗಿಲ್ಲ
ಕಾದಂಬರಿಯ ಕೇಂದ್ರ ಯಾವುದರಿಂದ ರೂಪುಗೊಳ್ಳುತ್ತದೆ? ಕಾದಂಬರಿಯಾಗಲು ಕಾರಣವಾದ ಅಂಶಗಳೆಲ್ಲವೂ ಅದನ್ನು ರೂಪಿಸುತ್ತವೆ. ಕಾದಂಬರಿಯ ಕೇಂದ್ರವು ಅದರ ಮೇಲ್ಪದರದಿಂದ ಅದು ಹೇಗೋ ದೂರವಾಗಿರುತ್ತದೆ, ಒಂದೊಂದು ಪದವನ್ನೂ ಗಮನವಿಟ್ಟು ಓದುತ್ತ ಅದನ್ನು ಹುಡುಕಬೇಕು ಎಂದು ನಂಬಿರುತ್ತೇವೆ. ಕಾದಂಬರಿಯ ಕೇಂದ್ರವು ಎಲ್ಲೋ ಹಿನ್ನೆಲೆಯಲ್ಲಿ, ಅದೃಶ್ಯವಾಗಿ, ಹುಡುಕಲು ಕಷ್ಟವಾಗಿ, ನುಣುಚಿಕೊಳ್ಳುತ್ತ ಅತಿ ಚೈತನ್ಯಶೀಲವಾಗಿರುತ್ತದೆ ಎಂದು ಕಲ್ಪಿಸಿಕೊಳ್ಳುತ್ತೇವೆ. ಈ ಕೇಂದ್ರವನ್ನು ಕುರಿತ ಸೂಚನೆಗಳು ಎಲ್ಲೆಲ್ಲೂ ಇವೆ, ಕಾದಂಬರಿಯ ಕೇಂದ್ರವು ನಮಗೆದುರಾಗುವ ಎಲ್ಲ ವಿವರಗಳಿಗೂ ಸಂಪರ್ಕ ಕಲ್ಪಿಸುತ್ತದೆ ಎಂದು ಭಾವಿಸುತ್ತೇವೆ. ಈ ಕೇಂದ್ರ ಎಷ್ಟು ನಿಜ, ಎಷ್ಟು ಕಾಲ್ಪನಿಕ ಅನ್ನುವುದನ್ನು ಮುಂದೆ ನೋಡೋಣ.

ಕಾದಂಬರಿಗೆ ಕೇಂದ್ರವಿದೆ ಎಂದು ಗೊತ್ತಿರುವುದರಿಂದ, ಅಥವಾ ಹಾಗೆ ನಂಬುವುದರಿಂದ ಓದುತ್ತಿರುವ ನಾವು ಕಾಡಿನಲ್ಲಿ ಒಂದೊಂದು ಎಲೆಯನ್ನೂ ಮುರಿದು ಬಿದ್ದ ಕೊಂಬೆಯನ್ನೂ ಹುಷಾರಾಗಿ ಗಮನಿಸುತ್ತ ಸುಳಿವು ಹುಡುಕುತ್ತಿರುವ ಬೇಟೆಗಾರನ ಹಾಗೆ ಇರುತ್ತೇವೆ. ಓದುವಾಗ ನಮಗೆದುರಾಗುವ ಪ್ರತಿಯೊಂದೂ ಪದ, ವಸ್ತು, ಪಾತ್ರ, ಮುಖ್ಯಪಾತ್ರ, ಸಂಭಾಷಣೆ, ವರ್ಣನೆ, ಭಾಷೆ, ಶೈಲಿ, ಕಥನದಲ್ಲಿ ಎದುರಾಗುವ ತಿರುವು ಎಲ್ಲವೂ ಕಣ್ಣಿಗೆ ಕಾಣುವುದಕ್ಕಿಂತ ಮಿಗಿಲಾಗಿ ಮತ್ತೇನನ್ನೋ ಸೂಚಿಸುತ್ತಿವೆ ಎಂದು ಭಾವಿಸುತ್ತೇವೆ. ಕಾದಂಬರಿಗೊಂದು ಕೇಂದ್ರವಿದೆ ಎಂದು ನಂಬುವುದರಿಂದ ಅನಗತ್ಯವೆಂಬಂತೆ ತೋರುವ ಪ್ರತಿಯೊಂದು ವಿವರವೂ ಮುಖ್ಯವಾಗಿರಬಹುದು, ಕಾದಂಬರಿಯನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೋ ಅದಕ್ಕಿಂತ ಬೇರೆಯದೇ ಅರ್ಥ ಇರಬಹುದು ಅನ್ನಿಸುತ್ತದೆ. ನಿಜವಾಗಿರಲಿ ಅಥವ ಕಲ್ಪಿತವೇ ಆಗಿರಲಿ ಕಾದಂಬರಿಗೆ ಕೇಂದ್ರವೊಂದು ಇದೆ ಎಂಬ ಭಾವವೇ ಕಾದಂಬರಿಗೆ ಆಳವಿದೆ, ನಾವು ಮೂರು ಆಯಾಮದ ವಿಶ್ವದಲ್ಲಿ ಮಗ್ನರಾಗಿದ್ದೇವೆ ಅನ್ನಿಸುವುದಕ್ಕೆ ಕಾರಣವಾಗಿರುತ್ತದೆ.

ಮಹಾಕಾವ್ಯ, ಮಧ್ಯಕಾಲೀನ ರೊಮಾನ್ಸು, ಸಾಂಪ್ರದಾಯಕ ಸಾಹಸ ಕಥೆಗಳಿಗಿಂತ ಕಾದಂಬರಿ ಭಿನ್ನ ಅನ್ನಿಸುವ ಹಾಗೆ ಮಾಡುವುದೇ ಈ ‘ಕೇಂದ್ರ’. ಮಹಾಕಾವ್ಯದ ಪಾತ್ರಗಳಿಗಿಂತ ಅತಿ ಸಂಕೀರ್ಣವಾದ ಪಾತ್ರಗಳನ್ನು ಕಾದಂಬರಿ ಚಿತ್ರಿಸುತ್ತದೆ. ದಿನನಿತ್ಯದ ಬಾಳಿನಲ್ಲಿ ಎದುರಾಗುವ ಮನುಷ್ಯರ ಮೇಲೆ ದಿನ ನಿತ್ಯದ ಬದುಕಿನ ಎಲ್ಲ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಹಿನ್ನೆಲೆಯಲ್ಲಿ ಎಲ್ಲೊ ಕೇಂದ್ರವಿದೆ ಎಂಬ ಕಾರಣದಿಂದ ಈ ಗುಣ, ಶಕ್ತಿಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಇಂಥ ಭರವಸೆ ಇಟ್ಟುಕೊಂಡೇ ಓದುತ್ತೇವೆ. ನಮ್ಮ ಸಾಮಾನ್ಯ ಬದುಕಿನ ಎಲ್ಲ ವಿವರ, ನಮ್ಮ ಸಣ್ಣಪುಟ್ಟ ಫ್ಯಾಂಟಸಿ, ಅಭ್ಯಾಸ, ಪರಿಚಿತ ವಸ್ತು ಇವನ್ನೆಲ್ಲ ಚಿತ್ರಿಸುವ ಕಾದಂಬರಿಯನ್ನು ಕುತೂಹಲದಿಂದಲೂ, ಅಚ್ಚರಿಯಿಂದಲೂ ಓದುತ್ತೇವೆ; ಯಾಕೆಂದರೆ ಈ ಎಲ್ಲ ಸಾಮಾನ್ಯ ಸಂಗತಿಗಳು ಯಾವುದೋ ಒಳ ಅರ್ಥ ಹೊಂದಿವೆ, ಅವೆಲ್ಲ ಹಿನ್ನೆಲೆಯಲ್ಲಿ ಅಡಗಿರುವ ಕೇಂದ್ರದವನ್ನು ಆಧರಿಸಿದೆ ಎಂದು ಭಾವಿಸುತ್ತೇವೆ. ನಿಸರ್ಗ ಚಿತ್ರಣದಲ್ಲಿ ಕಾಣುವ ಒಂದೊಂದೂ ಎಲೆ, ಒಂದೊಂದೂ ಹೂ ಕುತೂಹಲ ಹುಟ್ಟಿಸಿ ಕಾಡುತ್ತವೆ ಯಾಕೆಂದರೆ ಅವುಗಳ ಹಿಂದೆ ಅರ್ಥ ಅಡಗಿದೆ.

ಕಾದಂಬರಿಗೆ ಮೂರು ಆಯಾಮದ ನಿಯೋಗಗಳಿರುವುದರಿಂದ ಅದು ಆಧುನಿಕ ಕಾಲದ ಮನುಷ್ಯರನ್ನು, ಇಡೀ ಮಾನವ ಕುಲವನ್ನು ಉದ್ದೇಶಿಸಿ ನುಡಿಯುತ್ತದೆ. ಖಾಸಗಿ ಅನುಭವ, ಇಂದ್ರಿಯಗಳಿಂದ ಪಡೆದ ಜ್ಞಾನಗಳನ್ನು ನುಡಿಯುತ್ತ ಜ್ಞಾನದ ತುಣುಕು, ಅರಿವಿನೊಂದು ಮಿಂಚು, ಗಹನವಾದ ಸಂಗತಿಗಳ ಬಗ್ಗೆ ಒಂದು ಕುರುಹು ಅಥವ ಕೇಂದ್ರವನ್ನು, ಯಾವುದನ್ನು ಟಾಲ್ಸ್ ಟಾಯ್ ‘ಬದುಕಿನ ಅರ್ಥ’ ಅನ್ನುತ್ತಾನೊ ಅದನ್ನು ಸೂಚಿಸುತ್ತದೆ. ತಲುಪಲು ಕಷ್ಟವಾದ, ಆದರೆ ಅಂಥದೊಂದು ಇದೆ ಎಂದು ನಾವು ಆಸೆಪಟ್ಟು ನಂಬಿಕೊಂಡಿರುವ ಸಂಗತಿಯನ್ನು ಸೂಚಿಸುತ್ತದೆ. ಫಿಲಾಸಫಿಯ ಕಷ್ಟಗಳಲ್ಲಿ ನರಳದೆ ಧರ್ಮದ ಸಾಮಾಜಿಕ ಒತ್ತಡಕ್ಕೆ ಗುರಿಯಾಗದೆ, ಕೇವಲ ನಮ್ಮದೇ ಅನುಭವ ಆಧರಿಸಿಕೊಂಡು, ನಮ್ಮದೇ ಬುದ್ಧಿ ಬಳಸಿಕೊಂಡು ಲೋಕದ ಆಪ್ತವಾದ, ಗಹನವಾದ ಜ್ಞಾನವನ್ನು ಪಡೆಯುವ ಕನಸು ಕಾದಂಬರಿಯ ಓದಿನಲ್ಲಿ ನಿಜವಾಗುತ್ತದೆ. ಇದು ಅತ್ಯಂತ ಮುಕ್ತವಾದ, ಪ್ರಜಾಪ್ರಭುತ್ವವಾದಿಯಾದ ಕನಸು.

ಇಂಥ ತೀವ್ರವಾದ ನಿರ್ದಿಷ್ಟವಾದ ಆಸೆ ಇಟ್ಟುಕೊಂಡು ನನ್ನ ಹದಿನೆಂಟನೆಯ ವಯಸಿನಿಂದ ಮೂವತ್ತನೆಯ ವಯಸಿನವರೆಗೆ ಕಾದಂಬರಿ ಓದುತಿದ್ದೆ. ಇಸ್ತಾಂಬುಲ್ ನ ನನ್ನ ಕೋಣೆಯಲ್ಲಿ ಕದಲದೆ ಕೂತು ಓದಿದ ಪ್ರತಿಯೊಂದು ಕಾದಂಬರಿಯೂ ಯಾವುದೇ ವಿಶ್ವಕೋಶ ಯಾವುದೇ ಮ್ಯೂಸಿಯಮ್ಮಿನ ಹಾಗೆ ನನ್ನ ಸುತ್ತಲೂ ಸುವ್ಯವಸ್ಥಿತವಾದ, ಬದುಕಿನ ವಿವರಗಳಿಂದ ಶ್ರೀಮಂತವಾದ ವಿಶ್ವವನ್ನು ನಿರ್ಮಿಸಿತು. ನನ್ನ ಬದುಕು ಎಷ್ಟು ನಿಜವೋ ಅಷ್ಟೇ ನಿಜವಾಗಿತ್ತು ಕಾದಂಬರಿಯ ಲೋಕ; ಫಿಲಾಸಫಿಯಲ್ಲೋ ಧರ್ಮದಲ್ಲೋ ಇರುವಷ್ಟೇ ವಿಸ್ತಾರವಾದ ಗಹನವಾದ ಡಿಮಾಂಡು, ಸಮಾಧಾನ, ಭರವಸೆಗಳನ್ನು ಇತ್ತಿತು. ಕನಸಿನಲ್ಲಿ ಇರುವವನ ಹಾಗೆ, ಮಿಕ್ಕೆಲ್ಲವನ್ನೂ ಮರೆತು, ಲೋಕದ ಜ್ಞಾನ ಪಡೆಯಲು, ನನ್ನನ್ನೆ ನಿರ್ಮಿಸಿಕೊಳ್ಳಲು, ನನ್ನ ಆತ್ಮಕ್ಕೆ ಆಕಾರ ಕೊಡಲು ಓದಿದೆ.

ಕಾದಂಬರಿಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಬೆಳೆಯುವ ಪ್ರೀತಿಯೇ ಆ ಕಾದಂಬರಿಯನ್ನು ಬೆಲೆಕಟ್ಟುವ ಒರೆಗಲ್ಲು ಎನ್ನುತ್ತಾನೆ ಇ.ಎಂ. ಫಾಸ್ಟರ್. ಜಗತ್ತಿನ ಬದುಕಿಗೂ ಮುಗ್ಧವಾಗಿ ಅನ್ವಯಿಸಬಹುದಾದ ಕೇಂದ್ರದ ಅರಸುವಿಕೆಯನ್ನು ಪ್ರಚೋದಿಸುವ ಶಕ್ತಿ ಇದೆಯೋ ಅನ್ನುವುದೇ ಕಾದಂಬರಿಯೊಂದರ ನಿಜವಾದ ಮೌಲ್ಯ, ನನ್ನ ಮಟ್ಟಿಗೆ. ಜೀವನ ಇರುವುದೇ ಹೀಗೆ ಅನ್ನಿಸುವ ಭಾವವನ್ನು ಬೆಳಗುತ್ತದಲ್ಲ ಅದು ಕಾದಂಬರಿಯೊಂದರ ಶಕ್ತಿ, ಮೌಲ್ಯ. ಹೀಗೆ ಉದ್ದೀಪಿಸುತ್ತದೆ ಎಂಬ ನಂಬಿಕೆ, ನಿರೀಕ್ಷೆಯೊಂದಿಗೇ ಕಾದಂಬರಿಯನ್ನು ಓದಬೇಕು.
ಗುಪ್ತ ಅರ್ಥದ ಅನ್ವೇಷಣೆಗೆ, ಕಳೆದು ಹೋದ ಮೌಲ್ಯದ ಅರಸುವಿಕೆಗೆ ತಕ್ಕದ್ದು ಎಂದರೆ ಜರ್ಮನ್ ಭಾಷೆಯಲ್ಲಿ ‘ರೂಪ ನಿರ್ಮಾಣ ಕಾದಂಬರಿ’ [ಬಿಲ್ಡಂಗ್ಸ್ ರೊಮಾನ್]ಯ ಮಾದರಿ. ಇದು ಪ್ರಮುಖ ಪಾತ್ರಗಳ ವ್ಯಕ್ತಿತ್ವ ರೂಪುಗೊಂಡ ಬಗೆ, ಪಡೆದ ಶಿಕ್ಷಣ, ಇಂಥ ಸಂಗತಿಗಳನ್ನು ಚಿತ್ರಿಸುತ್ತದೆ. ಫ್ಲಾಬೊ ಬರೆದ ‘ಸೆಂಟಿಮೆಂಟಲ್ ಎಜುಕೇಶನ್’, ಥಾಮಸ್ ಮನ್ ಬರೆದ ‘ಮ್ಯಾಜಿಕ್ ಮೌಂಟನ್’ ಇಂಥ ಪುಸ್ತಕಗಳನ್ನು ಓದುತ್ತ ನನಗೇ ತರಬೇತಿ ಕೊಟ್ಟುಕೊಂಡೆ. ಈ ಲೋಕ ಎಂಥದು ಎಂಬ ಜ್ಞಾನ, ಬದುಕಿನ ಸ್ವರೂಪ ಇವು ಕಾದಂಬರಿಯ ಯಾವುದೋ ಒಂದು ‘ಕೇಂದ್ರ’ದಲ್ಲಿ ಮಾತ್ರ ಇಲ್ಲ, ಕಾದಂಬರಿಯಲ್ಲಿ ಎಲ್ಲೆಲ್ಲೂ ಇದೆ ಅನ್ನುವ ಮೂಲ ಜ್ಞಾನ ಅರಿವಿಗೆ ಬರುತ್ತಿತ್ತು. ಒಳ್ಳೆಯ ಕಾದಂಬರಿಯ ಪ್ರತಿ ವಾಕ್ಯವೂ ಈ ಲೋಕದಲ್ಲಿ ಬದುಕುವುದು ಅಂದರೇನು ಅನ್ನುವ ಬಗ್ಗೆ ಗಹನವಾದ ಸಾರವತ್ತಾದ ಜ್ಞಾನದ ಭಾವವನ್ನು, ಇಂಥ ಜ್ಞಾನದ ಅರ್ಥವಂತಿಕೆಯ ಭಾವವನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ಕಾದಂಬರಿ ಲೋಕದ ಯಾನವೂ ನಿಜ ಲೋಕದ ನಮ್ಮ ಬದುಕು ಎರಡೂ ಇರುವ ಅಥವ ಇರದಿರುವ ಅರ್ಥದ ಹುಡುಕಾಟವಲ್ಲದೆ ಬೇರೇನೂ ಅಲ್ಲ ಅನ್ನುವುದನ್ನು ಕಲಿತೆ.

(ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಮಾಡಿದ ಭಾಷಣ ಮಾಲಿಕೆಯನ್ನು ಕನ್ನಡದ ಅನನ್ಯ ಭಾಷಾಂತರಕಾರ ಓ.ಎಲ್. ನಾಗಭೂಷಣ ಸ್ವಾಮಿ ‘ಮುಗ್ಧ-ಪ್ರಬುದ್ಧ – ಕಾದಂಬರಿ ಓದುವಾಗ, ಬರೆಯುವಾಗ ನಮಗೇನಾಗುತ್ತದೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಪ್ರಕಟಣೆಗೆ ಸಿದ್ದವಾಗಿರುವ ಈ ಪುಸ್ತಕದ ಆಯ್ದ ಅಧ್ಯಾಯಗಳು ಕೆಂಡಸಂಪಿಗೆಯಲ್ಲಿ ಪ್ರತಿ ವಾರ ಪ್ರತ್ಯಕ್ಷವಾಗಲಿವೆ)