ಯೋಚಿಸಿದಾಗ ಹೊಳೆಯುವುದು…. ಯೂರೋಪಿನ ಜನರು ಹಳೆಯದನ್ನು ಹಾಗೂ ಅವರ ಇತಿಹಾಸವನ್ನು ಪ್ರೀತಿಸುತ್ತಾರೆ. ಹಾಗೂ ಇತಿಹಾಸದ ಪ್ರವಾಸವೇ ಇಂದಿಗೂ ಅವರ ಬಂಡವಾಳವಾಗಿದೆ. “ಹೆರಿಟೇಜ್” ಎನ್ನುವ ಹೆಗ್ಗಳಿಕೆಯ ಕೋಡನ್ನು, ಹಾಗೂ ಹಳೆಯ ಕಾಲದ ತುಂಬು ಸಂಸಾರಗಳ ಅಗಾಧವಾದ ಪರಿಸರವನ್ನು ಕಾಪಿಟ್ಟುಕೊಳ್ಳುವ ಅವರ ಜಾಣ್ಮೆ, ಅದನ್ನು ಅಲಂಕರಿಸುವ ಅವರ ಪ್ರೀತಿ, ಅಂದಿನ ಉರುಟು ಕಾಡು ಕಲ್ಲುಗಳನ್ನು ದಾರಿಗೆ ಜೋಡಿಸಿ ಮಾಡಿದ ರಸ್ತೆಗಳನ್ನೂ ಇಕ್ಕೆಲದಲ್ಲಿ ಉಳಿಸಿಕೊಂಡು ಶಿಸ್ತಾಗಿರುವ ಊರುಗಳು ಅಂದಿನ ಫ್ರೆಂಚರ ಗಟ್ಟಿಮುಟ್ಟಿನ ವಸಾಹತುಗಳ ಮೂಲಕ ಇಂದಿಗೂ ತಮ್ಮ ಹೆಮ್ಮೆಯನ್ನು ತೋರುತ್ತವೆ.
ಹೆಚ್. ಆರ್. ಸುಜಾತಾ ತಿರುಗಾಟ ಕಥನ

 

“ತವರೂರ ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ, ಸಾಸಿವೆಯಷ್ಟೂ ಮರಳಿಲ್ಲ” ಹೆಣ್ಣೊಬ್ಬಳು ಗಂಡನ ಮನೆಯ ಕಲ್ಲು ದಾರಿಯನ್ನು ತುಳಿಯುತ್ತ ಸೇರಿದ ಮನೆಯಲ್ಲಿ ತನ್ನ ಜವಾಬ್ದಾರಿಯ ಹೊರೆಯನ್ನು ನಿಭಾಯಿಸುವಾಗ ತಾನು ಬೆಳೆದ ಅಕ್ಕರೆಯ ತೌರ ದಾರಿಯನ್ನು ಅಥವಾ ಹಗುರವಾಗಿದ್ದ ಕುಣಿಕುಣಿಯುವ ಬಾಲ್ಯವನ್ನು ಹಿಂತಿರುಗಿ ನೋಡಿ ನೆನೆದುಕೊಳ್ಳುವ ಒಂದು ಜನಪದ ಹಾಡಿದು. ಹಳ್ಳಿಯ ಮಣ್ಣಿನ ದಾರಿಗಳು ಇಕ್ಕಟ್ಟಾಗಿದ್ದು ಸ್ಥಳದ ಕಾಡು ಕಲ್ಲನ್ನು ತಬ್ಬಿಕೊಂಡು ಮಲಗಿರುತ್ತಿದ್ದವು.

ಮಳೆನೀರು ಆ ಕಿರುದಾರಿಯ ಅಂಚಿನಲ್ಲಿ ಮಾಡಿದ ಸಣ್ಣ ಕಾಲುವೆಯಲ್ಲಿ ಹರಿದು ಹೋಗುತ್ತಿತ್ತು. ಮನೆಯ ಬಚ್ಚಲು ನೀರು ಅದರೊಂದಿಗೆ ಹರಿದು ಹೋಗುತಿತ್ತು. ಬರುಬರುತ್ತಾ ಇಂಥ ಹಳ್ಳಿಯ ಕಾಲು ದಾರಿಗಳು ನಾಗರೀಕತೆಗೆ ತೆರೆದುಕೊಂಡು ಟಾರು ರಸ್ತೆಗಳಾಗಿ ಸಣ್ಣ ಪಟ್ಟಣಗಳ ದಾರಿಯಾಗಿ, ಸಿಮೆಂಟಿನ ಹೈವೇಗಳಾಗಿ ದೊಡ್ಡ ನಗರಗಳ ಬಾಗಿಲನ್ನು ತೆರೆದುಕೊಂಡವು. ಕಾಂಕ್ರೀಟು ಹರಿದಾರಿಗಳು ಜಗತ್ತನ್ನು ಚಿಕ್ಕದು ಮಾಡಿದವು. ಹಾರು ವಿಮಾನಗಳೂ, ನೀರ ಸಾಗು ದೋಣಿಗಳೂ ಕಣ್ಣಿಗೆ ತಾಕದಂತೆ ಧರೆ ತನ್ನ ಸೆರಗಲ್ಲಿ ಮುಚ್ಚಿಟ್ಟಿದ್ದ ನೆಲಗಳನ್ನು ಹುಡುಕಿ ತಡಕಿ ಜನಸಾಮಾನ್ಯನೂ ತುಳಿಯುವಂತೆ ಮಾಡಿದವು.

೧೭, ೧೮ನೇ ಶತಮಾನದಲ್ಲಿ ಫ್ರೆಂಚರ ಆಳ್ವಿಕೆಯ ತುಟ್ಟತುದಿಯ ನಾಗರಿಕತೆಗೆ ಒಳಗಾದ ಫ್ರಾನ್ಸಿನ ಸಣ್ಣ ಸಣ್ಣ ಪ್ರಾಂತ್ಯಗಳೂ ಕೂಡ ಫ್ರೆಂಚ್ ಶೈಲಿಯನ್ನು ಮೈಗೂಡಿಸಿಕೊಂಡಿವೆ. ಕಾನ್ಸಿಂದ ಮೊನಾಕ್ಕೋ, ಮಾಂಟೆಕಾರ್ಲೋ ಆಂಟೀಬ್ಸ್ ನಂಥ ಸಣ್ಣ ಊರುಗಳವರೆಗೂ ಪ್ರವಾಸದಲ್ಲಿ ಒಂದೇ ರೀತಿಯ ವಾಸ್ತುಶಿಲ್ಪದ ಮನೆಗಳು ಅಂಗಡಿಮುಂಗಟ್ಟುಗಳು, ರೆಸ್ಟೋರೆಂಟುಗಳು. ಯೂರೋಪಿನ ಯಾವ ದೇಶಗಳಿಗೆ ಹೋದರೂ ೩೦೦ ರಿಂದ ೪೦೦ ವರುಷದ ಇತಿಹಾಸದ ಊರುಗಳನ್ನು ಸುತ್ತು ಹಾಕುವ ಒಂದು ಪ್ರವಾಸ ಅಲ್ಲಿ ತೆರೆದುಕೊಳ್ಳುತ್ತದೆ.

ಹಳೆ ಕಟ್ಟಡಗಳು… ಒತ್ತಟ್ಟಿಗೆ ಜೋಡಿಸಿದಂಥ ಎತ್ತರದ ಮೂರು ಮಹಡಿಗಳ ಕಟ್ಟಡವಿರುವ ನಾಕು ಅಥವಾ ಆರು ದಿಕ್ಕಿಗೆ ದಾರಿಗಳು ತೆರೆದುಕೊಳ್ಳುವ ಚೌಕಿಗಳು ಅಚ್ಚುಕಟ್ಟಾಗಿ ಕಾಣುತ್ತವೆ. ರಾಜರಾಳ್ವಿಕೆಯ ಸಮೃದ್ಧಿಯನ್ನು ಎತ್ತಿ ತೋರುತ್ತವೆ. ಹಾಗೂ ಅಂದಿನ ಕಾಲದಲ್ಲಿ ಕಟ್ಟಿದ ಅವರೂರಿನ ರೂಪುರೇಶೆಗಳು ಇಂದಿಗೂ ಅಂದಿನ ಲೋಕದ ಭ್ರಮೆಯನ್ನೇ ಹುಟ್ಟಿಸುತ್ತವೆ. ಇದು ಹೇಗೆ ಸಾಧ್ಯ?

ಯೋಚಿಸಿದಾಗ ಹೊಳೆಯುವುದು…. ಯೂರೋಪಿನ ಜನರು ಹಳೆಯದನ್ನು ಹಾಗೂ ಅವರ ಇತಿಹಾಸವನ್ನು ಪ್ರೀತಿಸುತ್ತಾರೆ. ಹಾಗೂ ಇತಿಹಾಸದ ಪ್ರವಾಸವೇ ಇಂದಿಗೂ ಅವರ ಬಂಡವಾಳವಾಗಿದೆ. “ಹೆರಿಟೇಜ್” ಎನ್ನುವ ಹೆಗ್ಗಳಿಕೆಯ ಕೋಡನ್ನು, ಹಾಗೂ ಹಳೆಯ ಕಾಲದ ತುಂಬು ಸಂಸಾರಗಳ ಅಗಾಧವಾದ ಪರಿಸರವನ್ನು ಕಾಪಿಟ್ಟುಕೊಳ್ಳುವ ಅವರ ಜಾಣ್ಮೆ, ಅದನ್ನು ಅಲಂಕರಿಸುವ ಅವರ ಪ್ರೀತಿ, ಅಂದಿನ ಉರುಟು ಕಾಡು ಕಲ್ಲುಗಳನ್ನು ದಾರಿಗೆ ಜೋಡಿಸಿ ಮಾಡಿದ ರಸ್ತೆಗಳನ್ನೂ ಇಕ್ಕೆಲದಲ್ಲಿ ಉಳಿಸಿಕೊಂಡು ಶಿಸ್ತಾಗಿರುವ ಊರುಗಳು ಅಂದಿನ ಫ್ರೆಂಚರ ಗಟ್ಟಿಮುಟ್ಟಿನ ವಸಾಹತುಗಳ ಮೂಲಕ ಇಂದಿಗೂ ತಮ್ಮ ಹೆಮ್ಮೆಯನ್ನು ತೋರುತ್ತವೆ.

ಒಂದೇ ಒಂದು ನೆಲದ ಕಲ್ಲನ್ನೂ ಕೀಳಲು ಬಿಡದೆ ಉಳಿಸಿಕೊಂಡಿರುವ ಇಕ್ಕಟ್ಟಿನ ಅಂದಿನ ರಸ್ತೆಗಳು ಸ್ವಚ್ಚವಾಗಿದ್ದು ಪ್ರವಾಸಿಗರನ್ನು ಅಲ್ಲಿಯ ಸಣ್ಣ ಬೆಟ್ಟಗುಡ್ಡಗಳಿಗೆ ಏರಿಳಿಸುತ್ತವೆ.

ಮೆಡಿಟ್ಟೇರಿಯನ್ನಿನ ಅಗಾಧ ನೀಲಿ ಕಡಲುದ್ದಕ್ಕೂ ಹರಡಿರುವ ಕೇನ್ಸ್ ಕಡಲಂಚಲ್ಲೇ ವಿಸ್ತರಿಸಿರುವ ಒಂದು ಸಣ್ಣ ಊರು. ರಾಜಾರಸ್ತೆಗಳಲ್ಲಿ ಮಾತ್ರ ಕಾಂಕ್ರೀಟ್ ಹೊದ್ದು ದಾರಿಯುದ್ದಕ್ಕೂ ಹೊಚ್ಚಹೊಸ ಬ್ರಾಂಡಿನ ದುಬಾರಿಯಾದ ಅಂಗಡಿ ಮುಂಗಟ್ಟುಗಳನ್ನು ಹಳೆಶೈಲಿಯ ತನ್ನ ಕಟ್ಟಡಗಳಲ್ಲಿ ಅದು ತೆರೆದುಕೊಂಡಿದೆ. ವೈಭವದ ಕಪ್ಪು ಕಾರು ಬೈಕಿನ ಮೆರವಣಿಗೆಯಲ್ಲೂ ಅವರ ಹಿತ್ತಿಲು ಹೂವಿನ ಪ್ರೀತಿ ದಾರಿಯ ಇಕ್ಕೆಲದಲ್ಲಿ ಕಾಮನಬಿಲ್ಲಿನ ಬಣ್ಣವನ್ನು ನೆಲದಲ್ಲಿ ಚೆಲ್ಲಿ ಮುಕ್ಕಳಿಸುತ್ತವೆ.

ಜನರೂ ಅಷ್ಟೇ! ಹೊಸ ಪೋಷಾಕುಗಳ ದಾಸರಾದರೂ ತಮ್ಮ ಭಾಷೆಯಲ್ಲೇ “ಒಸ್ವಾ” “ಓಶೋ” ಎಂದು ಗುಡ್ ಮಾರ್ನಿಂಗ್ ಹಾಗೂ ಗುಡ್ ನೈಟ್ ಗಳನ್ನು ಫ್ರೆಂಚಿನಲ್ಲೇ ಉದ್ಗರಿಸುತ್ತಾ ಎದುರುಗೊಳ್ಳುತ್ತಾರೆ. ಸಣ್ಣ ಸಣ್ಣ ಪ್ರಾದೇಶಿಕತೆಯ ಪ್ರತ್ಯೇಕತೆ ಹಾಗೂ ಅವರ ದೇಶಭಾಶೆಗಳ ಪ್ರೀತಿಯನ್ನು ಅಲ್ಲಿನ ಜನ ತುಂಬ ಕಾಳಜಿಯಿಂದ ಜೋಪಾನ ಮಾಡಿಕೊಳ್ಳುತ್ತಾರೆ. ಫ್ರಾನ್ಸ್ ಆಧುನಿಕತೆ ಮತ್ತು ಸಾಂಪ್ರದಾಯಿಕತೆ ಎರಡನ್ನೂ ಹದವಾಗಿ ಹೊಂದಿರುವ ದೇಶ.

ಭೂಮ್ಯಾಕಾಶಗಳು ನೆಲದ ಮೇಲೆ ಹುಟ್ಟಿದ ಜೀವಕ್ಕೆ ಒಂದೇ ಆದರೂ ಭಿನ್ನತೆಯ ಅರಿವು ಆಯಾ ಪ್ರದೇಶಗಳಿಗೆ ಹಾಗೂ ಅದರ ಪರಿಸರಕ್ಕೆ ತಕ್ಕುನಾಗಿಯೇ ಇರುತ್ತದೆ. ಕಡಲಕ್ಕಿಗಳು ಮನೆಯಂಗಳದ ಅಕ್ಕಿ ಆಯುವ ಗುಬ್ಬಿಯಾಗಲಾರವು. ಗಿಳಿಗಳು ಹಾವು ನುಂಗುವ ಹದ್ದಾಗಲಾರವು. ಒಂದೊಂದು ಜೀವಿಗೂ ಪ್ರತ್ಯೇಕತೆ ಅನ್ನುವ ಧಿರಿಸಿದೆ. ಅಂತೆಯೇ ಎಲ್ಲ ಜೀವಿಗಳಿಗೂ ಒಂದೇ ನೀರು, ಒಂದೇ ನೆಲವಿದೆ. ಆ ನೆಲದಲ್ಲಿ ನೀರ ಹರಿವಿಗೆ ತಕ್ಕಂತೆ ನೆಲದ ಒಡಲು ಬದಲಾಗುತ್ತಲೇ ಅದರ ಹವಾಮಾನ ಗುಣವೂ ಬದಲಾಗುತ್ತದೆ.

ಈ ಭಿನ್ನತೆ ಅಲ್ಲಿ ಜೀವಿಸುವ ಜೀವಿಗಳಿಗೆ ಭಿನ್ನವಾದ ರೂಪವನ್ನೂ, ಬಣ್ಣವನ್ನೂ, ಮೈಕಟ್ಟುಗಳನ್ನು ದಯಪಾಲಿಸಿರುತ್ತದೆ. ಅಂತೆಯೇ ಇಂಥ ಪ್ರಾದೆಶಿಕತೆಯ ಮೇಲ್ಮೈ ಅಲ್ಲಿಗೆ ಹೊಂದುವಂಥ ಬಾಯ ಚಲನೆಯನ್ನು, ಭಾಷೆಯನ್ನು ಅಲ್ಲಿ ವಾಸಿಸುವ ಸಮೂಹಗಳಿಗೆ ದಯಪಾಲಿಸಿರುತ್ತದೆ. ಪ್ರತಿ ಪ್ರದೇಶದ ಜನರಿಗೂ ಒಂದು ರಾಗವಿರುತ್ತದೆ. ಮಾತೇ ಆದರೂ ಅದರೊಂದಿಗೆ ಆ ಪ್ರದೇಶದ ಒಂದು ವಿಶಿಷ್ಟ ಲಯ ಆ ಭಾಷೆಯೊಂದಿಗೆ ಮಿಳಿತವಾಗಿರುತ್ತದೆ. ಅಂತೆಯೇ ಒಂದೇ ಲಹರಿಯಿರುವ “ಬುಡಕಟ್ಟು” ಅಲ್ಲಲ್ಲಿ ವಿಂಗಡಣೆಗೊಂಡು ನೆಲೆಯಾಗಿರುತ್ತದೆ.

ಮೆಡಿಟ್ಟೇರಿಯನ್ನಿನ ಅಗಾಧ ನೀಲಿ ಕಡಲುದ್ದಕ್ಕೂ ಹರಡಿರುವ ಕೇನ್ಸ್ ಕಡಲಂಚಲ್ಲೇ ವಿಸ್ತರಿಸಿರುವ ಒಂದು ಸಣ್ಣ ಊರು. ರಾಜಾರಸ್ತೆಗಳಲ್ಲಿ ಮಾತ್ರ ಕಾಂಕ್ರೀಟ್ ಹೊದ್ದು ದಾರಿಯುದ್ದಕ್ಕೂ ಹೊಚ್ಚಹೊಸ ಬ್ರಾಂಡಿನ ದುಬಾರಿಯಾದ ಅಂಗಡಿ ಮುಂಗಟ್ಟುಗಳನ್ನು ಹಳೆಶೈಲಿಯ ತನ್ನ ಕಟ್ಟಡಗಳಲ್ಲಿ ಅದು ತೆರೆದುಕೊಂಡಿದೆ.

ಇದು ಬದುಕಿನ ಚಲನೆ. ಬದುಕು ಒಂದೇ ಆದರೂ ಬದುಕಿನ ರೂಪುರೇಷೆಗಳು, ಜನರ ಹುಟ್ಟಾಣಿಕೆ ಹಾಗೂ ಚಹರೆಗಳು ಕೂಡಾ ಅಲ್ಲಿನ ನೆಲದ ವೈಶಿಷ್ಟ್ಯತೆಯನ್ನು ತೋರಿಸುತ್ತ ಬೇರೆ ಬೇರೆಯಾಗಿರುತ್ತವೆ. ಕಾನ್ ಎಂಬ ಈ ಪ್ರದೇಶದ ಜನ ಬಿಳಿ ಛಾಯೆಯ ನೀಳವಾದ ಕಪ್ಪು ಕೂದಲಿನವರು. ಅತಿ ಎತ್ತರವೂ ಅಲ್ಲದ ಕುಳ್ಳಂತೂ ಅಲ್ಲದ ನೀಟಾದ ಮೈಕಟ್ಟಿನವರು. ಆದಷ್ಟೂ ಉದ್ದನೆಯ ಮುಖ ಚರ್ಯೆಯವರು. ಮೊಗದಲ್ಲಿ ಮೂಗು ಹಾಗೂ ತುಟಿಗಳು ಪ್ರಧಾನವಾಗಿದ್ದು ಸ್ವಲ್ಪ ಉಬ್ಬಿದಂತಿರುತ್ತದೆ. ದಪ್ಪಗಿರುವವರು ಕಡಿಮೆ.

ಮೂಲತಃ ಅಲ್ಲಿಯ ಜನ ಮೀನುಗಾರರಾಗಿದ್ದವರು. ಆದರೆ ಈಗ ಪ್ರವಾಸೋದ್ಯಮವೇ ಅವರ ಮುಖ್ಯ ಆದಾಯ.  ಇಂಥ ಒಂದು ಮುಗ್ಧ ಪರಿಸರದಲ್ಲಿ ೭೦ ವರುಷದ ಹಿಂದೆ ಹುಟ್ಟುಹಾಕಿದ “ಕಾನ್ ಫಿಲ್ಮ್ ಫೆಸ್ಟಿವಲ್” ಎಂಬ ಸಿನಿಮಾ ಜಾತ್ರೆ ಇಂದು ಈ ಕಡಲೂರಿಗೆ ಮಾನ್ಯತೆಯನ್ನು, ಪ್ರವಾಸೋದ್ಯಮವನ್ನು ಪರಿಚಯಿಸಿದೆ. ಅಲ್ಲಿ ಕಬ್ಬಿಣದ ಚೆಂಡುಗಳನ್ನು ಗುರಿಗೆ ಸೇರಿಸುವ ಆಟ ನಡೆಯುತಿತ್ತು. ಒಂದು ಚೌಕದಲ್ಲಿ ಆಟ ಆಡಲು ನೋಡಲು ಜನ ಸೇರಿದ್ದರು.

ಅವರ ನೆಲಮೂಲದ ಆ ಆಟ ಹಾಗೂ ಅಲ್ಲಿ ಆಟವಾಡುತ್ತಿದ್ದ ಆ ನೆಲದ ಹುಮ್ಮಸ್ಸನ್ನು ನೋಡಿ, ನಮ್ಮೂರಿನಲ್ಲಿ ಚೌಕಾಬಾರಕ್ಕೆ ಆಡುವ ಅಥವಾ ಕೋಳಿ ಅಂಕದಲ್ಲಿ ಉಸಿರುಕಟ್ಟಿ ಆಟ ನೋಡುವ ಜನರ ನೆನಪಾಯಿತು. ವಿಶೇಷ ದಿನಗಳಲ್ಲಿ ಹೊತ್ತು ಕಳೆಯಲು, ನಾಕು ಜನ ಸೇರಿ ಜೂಜಾಡುವ… ಕ್ರಿಯೆ ಆದಿಕಾಲದ್ದು ಅಲ್ಲವೇನು? ಎಂದು ನಾವೂ ನಿಂತು ನೋಡಿ ಬಂದೆವು.

ಇಂಥ ಬದುಕು ಇದ್ದಕ್ಕಿದ್ದ ಹಾಗೆ ನಮ್ಮೂರಿನ ನೆಲದ ಸಾಮ್ಯತೆಯ ಚೆಲುವನ್ನು ಕಟ್ಟಿಕೊಟ್ಟುಬಿಡುತ್ತವೆ. ಬೆಟ್ಟದ ಮೇಲೆ ಹರಡಿದ ಹಳೆ ಊರನ್ನು ನೋಡಲು ಹೋದಾಗ ರಸ್ತೆಯ ಇಕ್ಕೆಲದಲ್ಲಿ ನಮ್ಮ ಉತ್ತರ ಕರ್ನಾಟಕದ ವಾಡೆಗಳಂಥ ದೊಡ್ಡ ದೊಡ್ಡ ಹಳೆಯ ಗೋಡೆಗಳನ್ನು, ಮರದ ಹಳೆಯ ದಿಡ್ಡಿ ಬಾಗಿಲುಗಳನ್ನು ದಾಟುವಾಗ ಆ ದಾರಿಯಲ್ಲಿ ಒಬ್ಬ ಹುಡುಗ ಕಬ್ಬಿಣದ ಹಳೆಯ ಕೈ ಪಂಪಿನಲ್ಲಿ ನೀರು ಹೊಡೆದುಕೊಂಡು ಬಾಯಿಗಡ್ಡ ಕೈ ಹಿಡಿದು ಕುಡಿದು ಹೋದ.

ಆ ರಸ್ತೆಗೆ ಆ ಹಳೆ ಕಾಲದ ಕಬ್ಬಿಣದ ನಲ್ಲಿ ಎಂಥ ವಿಶೇಷ ಕಳೆ ತಂದಿತ್ತು! ಬೀದಿ ಬದಿಯಲ್ಲಿ ಮುಚ್ಚಿದ್ದ ದೊಡ್ಡ ದೊಡ್ಡ ಹಳೆ ಹೆಬ್ಬಾಗಿಲುಗಳ ಹಿಂದೆ ವಠಾರ ಅಥವಾ ಈಗಿನ ಮೂರು ಮಹಡಿಗಳ ಅಪಾರ್ಟ್ಮೆಂಟ್ ಗಳ ವಿನ್ಯಾಸ ಹಾಗೂ ಅದರ ಸುಂದರವಾದ ಬಾಲ್ಕನಿಗಳು ಕಾಣಿಸುತ್ತಿದ್ದವು. ಮರ ಹಾಗೂ ಹೆಂಚಿನ ಬಳಕೆ ಎಲ್ಲಾ ಕಡೆಯೂ ಹೇರಳವಾಗಿದ್ದವು.

ಕಾನ್ಸನ್ ನಲ್ಲಿ ಕ್ರಿಶ್ಚಿಯನ್ ಮಿಶನರಿಗಳು, ಚರ್ಚ್ ಗಳದ್ದೇ ವಿಶೇಷ. ಸಾವಿರ ವರುಷಗಳ ಹಳೆಯ ಚರ್ಚುಗಳಿವೆ. ಹಾಗೇ ಮೇಲೇರಿ ಹೋದರೆ ಒಂದು ಸಣ್ಣ ಬೆಟ್ಟ ಪ್ರದೇಶದಲ್ಲಿ ನಿಂತು ಕೆಳಗಡೆ ನೋಡಿದಾಗ ಸಮುದ್ರ ಹಾಗೂ ಕೇನ್ಸ್ ಎಂಬ ಈಗ ಬೆಳೆದು ನಿಂತ ಊರಿನ ರೂಪುರೇಷೆ ಬಿಚ್ಚಿಕೊಳ್ಳುತ್ತದೆ. ಬೆಟ್ಟದ ಮೇಲಿನ ಊರು ಅಲ್ಲಿನ ಹಳೆಯ ಊರಿನಂತಿದೆ. ಅಲ್ಲಿಯ ಸಣ್ಣ ಸಣ್ಣ ಕಟ್ಟಡಗಳು ಇಂದಿಗೂ ಗಟ್ಟಿಮುಟ್ಟಾಗಿದ್ದು ನಮ್ಮೂರಿನ ಯಾವುದೇ ಒಂದು ಸಣ್ಣ ಹಳೆ ಊರಿನ ದಾರಿಗೆ ತೆರೆದುಕೊಂಡ ಜಗುಲಿಗಳನ್ನು ಹೊಂದಿದ್ದವು. ಆ ಜನರು ನಮಗೆ ತಮ್ಮ ಮನೆಗಳ ಬಗ್ಗೆ ಖುಶಿಯಿಂದ ಹೇಳಿಕೊಂಡರು.

“ನಮ್ಮಂತೆ ಪರರ ಬಗೆವೊಡೆ” ಎಂಬ ನಮ್ಮಗುರುತನ್ನು ಅವರ ಸಾಮ್ಯತೆಯಲ್ಲಿ ಗುರುತಿಸುವ ಈ ಚಟವೇ…. ಹಾಗೂ ತನ್ನ ಬಳಿ ಇಲ್ಲದ್ದನ್ನು ಹುಡುಕಿ ಹೋಗುವ ಗೀಳು ಮನುಷ್ಯನ ಚಲನಾಶಕ್ತಿಯನ್ನು “ಪ್ರವಾಸ” ಎಂದು ಹಿಂದಿನಿಂದಲೂ ಅಣಿ ಮಾಡಿತೇನೋ…. ಹಾಗೆಯೇ ಆ ಪ್ರದೇಶದ ಭಿನ್ನತೆ ಹಾಗೂ ಆಕರ್ಷಣೆ ಪ್ರವಾಸ ಹೋದವರನ್ನು ಕಾರಣಾಂತರದಿಂದ ಅಲ್ಲೇ ಅಂಡೂರಿ ನೆಲೆಯಾಗುವಂತೆಯೂ ಮಾಡಿಬಿಡುವುದೇನೋ…..

ಭಾರತದಲ್ಲೂ ಫ್ರೆಂಚ್ ವಸಾಹತುಗಳು ಇದೇ ರೀತಿ ಸೃಷ್ಟಿಯಾಗಿದ್ದು ಅವರು ಬಿಟ್ಟು ಹೋದ ವಾಸ್ತು ಶಿಲ್ಪ ನಮ್ಮ ಭಾರತದಲ್ಲಿ ಮಿಳಿತವಾಗಿದ್ದು ಇಂದಿಗೂ ಉಳಿದಿರುವುದು ಫ್ರಾನ್ಸ್ ಪ್ರದೇಶದಲ್ಲಿ ನಿಂತ ಪ್ರತಿಯೊಬ್ಬ ಭಾರತೀಯರಿಗೂ ಕಣ್ಣೆದುರು ಸಾಕ್ಷಿಯಾಗಿ ನಿಲ್ಲುತ್ತದೆ. ‘ಮಳೆ ಬಿಟ್ಟರೂ ಬಿಡದ ಮಳೆ ಹನಿಯ ತೊಟ ತೊಟ ಸದ್ದಿನಂತೆ ‘. ಭಾರತದ ಅಥವಾ ಮೈಸೂರಿನ ಅಗಾಧ ವಿಸ್ತರಣೆಯಂತೆ ಫ್ರೆಂಚ್ ವಾಸ್ತುಶಿಲ್ಪಗಳು ನಮಗೆ ತೋರಿಬಿಡುತ್ತದೆ.