ಪುರಾಣಗಳಲ್ಲಿ ಉಲ್ಲೇಖಗೊಂಡಿರುವ 51 ಶಕ್ತಿಪೀಠಗಳ ಪೈಕಿ ಕಾಮಾಕ್ಯ ದೇವಿಯ ಈ ದೇವಸ್ಥಾನವೂ ಒಂದು ಎಂದು ಹೇಳಲಾಗುತ್ತದೆ. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತಾರಾ, ಕಾಳಿ, ಭೈರವಿ, ಧೂಮಮತಿ ಎನ್ನುವ ಹೆಸರುಗಳಲ್ಲಿ ಇಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಮುಖ್ಯ ಗೋಪುರದಲ್ಲಿ ಅವಳನ್ನು ಮಾತಂಗಿ, ತ್ರಿಪುರ ಸುಂದರಿ ಮತ್ತು ಕಮಲ ಎನ್ನುವ ಹೆಸರುಗಳಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ತಾಂತ್ರಿಕ ಶೈಲಿಯಲ್ಲಿ ಆರಾಧಿಸಲಾಗುತ್ತದೆ. ಎಲ್ಲಾ ದೇವಿಯರ ಗರ್ಭಗುಡಿಯಲ್ಲಿಯೂ ಹತ್ತು ಇಂಚು ಆಳದ ಯೋನಿಯಾಕಾರದ ಕಪ್ಪುಶಿಲೆಯೊಳಗಿನಿಂದ ಸದಾಕಾಲವೂ ನೀರಿನ ಬುಗ್ಗೆ ಉಕ್ಕುತ್ತಿರುತ್ತದೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ 

ನಾಡಿದ್ದು ಗೌರಿಹಬ್ಬ. ಈಗ ನೆನಪಾಗುತ್ತಿರುವವಳು ಅವಳದ್ದೇ ಸ್ವರೂಪಿಣಿಯಾಗಿ ಅಂದು ಅಲ್ಲಿ ಸಿಕ್ಕವಳು. ಅವತ್ತು ಹೋಗಬೇಕಿದ್ದ ಜಾಗಕ್ಕೆ ಕೇವಲ ಇಪ್ಪತ್ತು ನಿಮಿಷದ ದಾರಿ ಕ್ರಮಿಸಬೇಕಿತ್ತು. ಆದರೆ ಗೌಹಾಟಿಯ ಮಾಲೆಗಾಂವ್ ಬ್ರಿಡ್ಜ್ ಮೇಲಿನ ದಾರಿಯಲ್ಲಿ ತೆಗೆದುಕೊಂಡ ಸಮಯ ಬರೋಬರಿ 90 ನಿಮಿಷಗಳು ! ಕಣ್ಣು ರೆಪ್ಪೆಯಷ್ಟೇ ಅಂತರದಲ್ಲಿ ಹರಿಯುತ್ತಿದ್ದ ವಾಹನಗಳನ್ನು ನೋಡುತ್ತಲೇ ಚಾಲಕ ಧನಂಜೋಯ್‍ನನ್ನು ಕೇಳಿದೆ “ಇಲ್ಲಿ ದಿನವೂ ಹೀಗೇನಾ?”. “ಹೌದು ನಿತ್ಯವೂ ಹೀಗೆ. ಆದರೆ ಯಾಕೋ ಗೊತ್ತಿಲ್ಲ ಇವತ್ತು ಹೆಚ್ಚೇ ಜ್ಯಾಂ ಇದೆ” ಎಂದ. ಆತ ಕಳೆದ ಮೂವತ್ತು ವರ್ಷಗಳಿಂದ ಈ ಊರಲ್ಲಿ ಡ್ರೈವ್ ಮಾಡುತ್ತಿದ್ದಾನೆ. ಇದೇ ಸೇತುವೆ, ಇದೇ ಜನ, ಇಂಥದ್ದೇ ಟ್ರ್ಯಾಫಿಕ್ ಜ್ಯಾಂ. “ಅಬ್ಬಾ, ನಿನಗೆ ಬೇಜಾರಗಲ್ವಾ ಧನಂಜೋಯ್?” ಅಂತ ಗೊಣಗಿದೆ.

“ದೀದಿ, ಬೇಜಾರಾ?! ನಿಜ ಹೇಳಲಾ ಇದಕ್ಕೆ ಅಂತಲ್ಲ ನನಗೆ ಜೀವನದಲ್ಲಿ ಯಾವ ವಿಷಯಕ್ಕೂ ಬೇಜಾರಾಗೋಲ್ಲ” ಅಂದ ಮೂರು ಮಕ್ಕಳ ತಂದೆ, ಸ್ಲಂ ನಿವಾಸಿ. ಐದು ಜನಗಳ ಕುಟುಂಬಕ್ಕೆ ನಿತ್ಯವೂ ಎರಡು ಹೊತ್ತಿನ ಊಟವೂ ನಿಕ್ಕಿ ಇಲ್ಲದ ಆತನಿಗೆ ಯಾವುದಕ್ಕೂ ಬೇಸರವಾಗುವುದಿಲ್ಲವಂತೆ. ಒಂದಿಂಚೂ ಗಾಡಿ ಮುಂದೆ ಹೋಗದ್ದಾಗಿತ್ತು. ಹಾರ್ನ್ಗಳ ಶಬ್ದದಲ್ಲೇ ಕಣ್ಣು ಮುಚ್ಚಿದೆ. “ನೀವು ಕಾಮಾಕ್ಯ ಅಮ್ಮನ ದೇವಸ್ಥಾನಕ್ಕೆ ಹೋಗಲ್ವಾ ?” ಎಂದ. ಸಂಜೆಯೇ ಹಿಂದಿರುಗುವ ವಿಮಾನ ಕಾದಿರಿಸಲಾಗಿತ್ತು. ಇರುವ ಸಮಯದಲ್ಲಿ ಹೋಗಲು ಆಗುತ್ತದೋ ಇಲ್ಲವೋ ಎನ್ನುವ ಅನುಮಾನ, ಜೊತೆಗೆ ದೇವರಿಗಾಗಿ ದೇವಸ್ಥಾನಗಳಿಗೆ ಹೋಗುವ ಅಭ್ಯಾಸ ಇಲ್ಲದವಳು. ಹಾಗಾಗಿ ಕಾಮಕ್ಯ ದೇವಸ್ಥಾನ ವೀಕ್ಷಣಾ ಸ್ಥಳಗಳ ಪಟ್ಟಿಯಲ್ಲಿ ಇರಲಿಲ್ಲ. “ಹೂಂ, ಸಮಯ ಸಿಕ್ಕರೆ ವಾಪಸ್ಸು ಬರುವಾಗ ಹೋಗೋಣ” ಎಂದೆ. “ದೀದಿ ಎಂದೂ ಇಲ್ಲದಷ್ಟು ಟ್ರ್ಯಾಫಿಕ್ ಜ್ಯಾಂ ಇದೆ. ಇಲ್ಲೇ ಎಡಕ್ಕೆ ತಿರುಗಿದರೆ ಮಂದಿರ ಸಿಗುತ್ತದೆ. ಹೋಗಿ ಬಿಡೋಣ. ಬರುವಾಗ ತುಂಬಾ ದೂರ ಆಗುತ್ತೆ” ಎಂದ ಅವನ ಮಾತಿಗೆ ಮಣಿದು ಕಾಮಾಕ್ಯಳ ದೇವಸ್ಥಾನದ ಎದುರು ನಿಂತಿದ್ದೆ.

ಆಹಾ, ಅದೆಷ್ಟು ಸುಂದರವಾದ, ಜನಜಂಗುಳಿಯಿದ್ದರೂ ಪ್ರಶಾಂತವಾದ, ನೀಲಾಚಲ ಪರ್ವತದ ತುದಿಯಲ್ಲಿ ಸ್ಥಿತಗೊಂಡಿರುವ ಪರಬ್ರಹ್ಮ ಸ್ವರೂಪಿಣಿಯ ಜಾಗ. ಪುರಾಣಗಳಲ್ಲಿ ಉಲ್ಲೇಖಗೊಂಡಿರುವ 51 ಶಕ್ತಿಪೀಠಗಳ ಪೈಕಿ ಕಾಮಾಕ್ಯ ದೇವಿಯ ಈ ದೇವಸ್ಥಾನವೂ ಒಂದು ಎಂದು ಹೇಳಲಾಗುತ್ತದೆ. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತಾರಾ, ಕಾಳಿ, ಭೈರವಿ, ಧೂಮಮತಿ ಎನ್ನುವ ಹೆಸರುಗಳಲ್ಲಿ ಇಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಮುಖ್ಯ ಗೋಪುರದಲ್ಲಿ ಅವಳನ್ನು ಮಾತಂಗಿ, ತ್ರಿಪುರ ಸುಂದರಿ ಮತ್ತು ಕಮಲ ಎನ್ನುವ ಹೆಸರುಗಳಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ತಾಂತ್ರಿಕ ಶೈಲಿಯಲ್ಲಿ ಆರಾಧಿಸಲಾಗುತ್ತದೆ. ಎಲ್ಲಾ ದೇವಿಯರ ಗರ್ಭಗುಡಿಯಲ್ಲಿಯೂ ಹತ್ತು ಇಂಚು ಆಳದ ಯೋನಿಯಾಕಾರದ ಕಪ್ಪುಶಿಲೆಯೊಳಗಿನಿಂದ ಸದಾಕಾಲವೂ ನೀರಿನ ಬುಗ್ಗೆ ಉಕ್ಕುತ್ತಿರುತ್ತದೆ. ಇದನ್ನೇ ಪವಿತ್ರ ಜಲವೆಂದು ತೀರ್ಥವನ್ನಾಗಿ ಭಕ್ತರಿಗೆ ನೀಡಲಾಗುತ್ತದೆ.

ಆಹಾ, ಅದೆಷ್ಟು ಸುಂದರವಾದ, ಜನಜಂಗುಳಿಯಿದ್ದರೂ ಪ್ರಶಾಂತವಾದ, ನೀಲಾಚಲ ಪರ್ವತದ ತುದಿಯಲ್ಲಿ ಸ್ಥಿತಗೊಂಡಿರುವ ಪರಬ್ರಹ್ಮ ಸ್ವರೂಪಿಣಿಯ ಜಾಗ.

ಪುರಾಣದಲ್ಲಿ ನರಕಾಸುರನ ಮನೆ ದೇವತೆಯಾಗಿ ಆರಾಧನೆಗೊಳ್ಳುತ್ತಿದ್ದಳಂತೆ ಕಾಮಾಕ್ಯ ದೇವಿ. ನಂತರ 8 ರಿಂದ 17 ನೆಯ ಶತಮಾನದವರೆಗೂ ಮ್ಲೇಚ್ಛ ರಾಜವಂಶಸ್ಥರ ಆಳ್ವಿಕೆಗೆ ಒಳಗಾಗಿದ್ದರ ದಾಖಲೆಗಳಿವೆ. 1566 ಮತ್ತು 1572ರ ನಡುವೆ ಸುಲೈಮಾನ್ ವಂಶಜರಿಂದ ಸಂಪೂರ್ಣವಾಗಿ ನಾಶವಾಗಿದ್ದ ಈ ದೇವಿತಾಣವನ್ನು ವನಮಾಲ ವರ್ಮದೇವ, ಇಂದ್ರಪಾಲ, ಧರ್ಮಪಾಲ, ಬ್ರಹ್ಮಪಾಲ ರಾಜರುಗಳು ಹಲವಾರು ಬಾರಿ ಪುನರುಜ್ಜೀವನಗೊಳಿಸಿದ್ದಾರೆ. ಮುಂಗಾರಿನ ವೇಳೆಯಲ್ಲಿ ಬ್ರಹ್ಮಪುತ್ರ ನದಿಯು ಹೊಸ ನೀರಿನಿಂದ ತುಂಬಿ ಹರಿಯುವಾಗ ಈ ಯೋನಿಯಾಕಾರದ ಕಪ್ಪುಶಿಲೆಯೊಳಗಿನಿಂದ ಮೂರು ದಿನಗಳ ಕಾಲ ರಕ್ತವರ್ಣದ ನೀರು ಹೊರಬರುವುದರಿಂದ ಆ ಮೂರು ದಿನಗಳಲ್ಲಿ ದೇವಿಗೆ ಋತುಸ್ರಾವದ ಸಮಯವೆಂದು ನಂಬಲಾಗುತ್ತದೆ. ಆ ಸಮಯದಲ್ಲಿ ‘ಅಂಬುಬಚಿ ಮೇಳ’ ಎನ್ನುವ ಜಾತ್ರೆ ನಡೆಸಲಾಗುತ್ತದೆ. ಆ ಮೂರು ದಿನಗಳು ದೇವಸ್ಥಾನವನ್ನು ತೆರೆಯುವುದಿಲ್ಲ, ಅಲ್ಲಿ ತಾಂತ್ರಿಕ ಶೈಲಿಯಲ್ಲಿ ಪೂಜೆ ಮಾಡುವ ಬಾಬಾಗಳ ದಂಡು ನೆರೆದಿರುತ್ತದೆ. ನಂತರದ ದಿನಗಳಲ್ಲಿ ಪೂಜೆಯ ನಂತರ ಭಕ್ತರಿಗೆ ‘ಅಂಗೋದಕ್’ ಮತ್ತು ‘ಅಂಗ್ಬಸ್ತ್ರ್’ ಎನ್ನುವ ಪ್ರಸಾದವನ್ನು ನೀಡಲಾಗುತ್ತದೆ. ಅಂಗೋದಕ್ ಎಂದರೆ ಆ ಯೋನಿಯಾಕಾರದ ಶಿಲೆಯಿಂದ ಆ ಮೂರು ದಿನಗಳಲ್ಲಿ ಹೊರಬರುವ ರಕ್ತವರ್ಣದ ಜಲವನ್ನು ತೀರ್ಥವನ್ನಾಗಿ ಕೊಡುವುದು ಹಾಗೂ ಅಂಗ್ಬಸ್ತ್ರ್ ಎಂದರೆ ಆ ದಿನಗಳಲ್ಲಿ ದೇವಿಯ ಮೈಮೇಲೆ ಹೊದಿಸಿದ್ದ ವಸ್ತ್ರದ ತುಂಡೊಂದನ್ನು ರಕ್ಷೆಯಂತೆ ಭಕ್ತರಿಗೆ ಕೊಡುವುದು.

ಉತ್ತರಭಾರತದ ಇತರೆ  ದೇವಸ್ಥಾನಗಳಲ್ಲಿ ಇರುವಂತೆ ಇಲ್ಲಿಯೂ ಬೆಟ್ಟದ ತಪ್ಪಲಿನಲ್ಲೇ ‘ಪಾಂಡ’ (ಪುರೋಹಿತ)ಗಳ ಹಾವಳಿ ಇದೆ. ಅಲ್ಲಿ ಪಾಂಡಗಳ ನೊಂದಾಯಿತ ಸಂಘವೇ ಇದೆ. ಪೂಜೆ ಮಾಡಿಸುವುದಾಗಿ ದುಂಬಾಲು ಬೀಳುತ್ತಾರೆ. ರಸ್ತೆಯುದ್ದಕ್ಕೂ ಲೆಕ್ಕ ಮೀರಿದ ಸಂಖ್ಯೆಯ ಭಿಕ್ಷುಕರು, ನಿರ್ಗತಿಕರು ಸಿಗುತ್ತಾರೆ. ಯಾವುದೇ ದೇವಸ್ಥಾನಗಳ ಊರಿನಲ್ಲಿರುವಂತೆ ಬೆಟ್ಟ ಹತ್ತಿಹೋಗುವ ದಾರಿ ಪೂರ್ತೀ ಪೂಜೆಯ ಸಾಮಾನುಗಳ ಹಾಗು ದೇವರಿಗೆ ಸಂಬಂಧ ಪಟ್ಟ ಸಾಮಾನುಗಳು ಸಿಗುವ ಸಣ್ಣಸಣ್ಣ ಅಂಗಡಿಗಳಿವೆ. ನಡುನಡುವೆ ಗಣೇಶ, ಹನುಮಂತರ ಗುಡಿಗಳೂ ಇವೆ. ಹಸುಗಳು ನಮ್ಮ ಹೆಜ್ಜೆಯನ್ನು ತುಂಡರಿಸಿ ಹಾದುಹೋಗುತ್ತಿರುತ್ತವೆ. ನಡುನಡುವೆ ಬಾಬಾಗಳು ಸಾಕಿಕೊಂಡಿರುವ ಗೂಳಿಗಳೂ ನುಗ್ಗಿ ಗಾಬರಿ ಹುಟ್ಟಿಸುತ್ತವೆ.

(ಕಾಮಾಕ್ಯದಲ್ಲಿ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು)

ಬೆಟ್ಟದ ಕೆಳಗಿನಿಂದ ಹಾಗೇ ಹಿಂದೆ ಬಂದಿದ್ದ ಯುವ ಪಾಂಡ ಒಬ್ಬರು ಒಂದು ದಿನವಿಡೀ ಸಮಯ ತೆಗೆದುಕೊಳ್ಳ ಬಹುದಾಗಿದ್ದ ದೇವಸ್ಥಾನವನ್ನು ಕೇವಲ ಎರಡೇ ಗಂಟೆಗಳಲ್ಲಿ ಸುತ್ತಿಸಿ, ದೇವಿಯ ದರ್ಶನ ಮಾಡಿಸಿ ಪರಿಚಯ ಮಾಡಿಸಿಕೊಟ್ಟಿದ್ದರು. ದೇವಸ್ಥಾನದ ಹೆಬ್ಬಾಗಿಲಿನಿಂದ ಗರ್ಭಗುಡಿಯ ಒಳಕ್ಕೆ ಹೋಗುವ ದಾರಿಯಲ್ಲಿಯೇ ಬಲಿಪೀಠವಿದೆ. ಅಲ್ಲಿ ಹಿರಿಯ ಅರ್ಚಕರು ಸ್ವತಃ ಬಲಿಕಾರ್ಯ ನೆರವೇರಿಸುತ್ತಾರೆ. ಎಳೆ ಆಡು ಮತ್ತು ಮೇಕೆಗಳನ್ನು ಅಲ್ಲಿ ಬಲಿಕೊಡಲಾಗುತ್ತದೆ. ಆ ಬಲಿಯಿಂದ ಅಲ್ಲಿ ಸಣ್ಣದಾಗಿ ಹರಿಯುವ, ಹನಿಯುವ ರಕ್ತದ ಮೇಲೆ ಹೆಜ್ಜೆ ಇಟ್ಟುಕೊಂಡೇ ಒಳಕ್ಕೆ ಹೋಗಬೇಕಿರುತ್ತದೆ. ಪುಟ್ಟಪುಟ್ಟ ಮರಿಗಳು ನನ್ನ ಕಣ್ಣೆದುರೇ ಬಲಿಹೋಗುವಾಗ, ಅಲ್ಲಿ ಚಿಮ್ಮುವ ರಕ್ತವನ್ನು ನೋಡುತ್ತಿರುವಾಗ ನನಗೆ ಅರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಹರಿಯುತ್ತಿತ್ತು. ನಾಭಿಯಲ್ಲಿ ಶುರುವಾದ ನಡುಕ ಇಡೀ ದೇಹವನ್ನು ಆವರಿಸಿತ್ತು.

ಇದನ್ನು ಗಮನಿಸಿದ ಜೊತೆಯಲ್ಲಿದ್ದ ಪಾಂಡ “ಇಲ್ಲಿ ಬರೀ ಬಲಿ ಕೊಡುವುದು ಎಂದು ತಿಳಿಯಬೇಡಿ, ಎಷ್ಟೋ ಜನರು ತಮ್ಮ ಕಷ್ಟ ನಿವಾರಣೆಯಾದಲ್ಲಿ ಬಲಿಗಾಗಿ ಇರುವ ಮರಿಗಳನ್ನು ಮತ್ತು ಪಕ್ಷಿಗಳನ್ನು ಬಂಧನ ಮುಕ್ತಗೊಳಿಸುವ ಹರಕೆಯನ್ನೂ ಹೊತ್ತಿರುತ್ತಾರೆ” ಎಂದರು. ಆದರೂ ಜೀವಹಿಂಸೆಯನ್ನು ವಿರೋಧಿಸುವ, ಹರಕೆಯನ್ನು ಒಂದು ಆಮಿಷ ಎಂದುಕೊಂಡಿರುವ ನನ್ನ ಮನಸ್ಸು ತಹಬಂದಿಗೆ ಬರಲು ಹೆಚ್ಚು ಸಮಯವೇ ಹಿಡಿಯಿತು. ಹೊರ ಬರುವಾಗ ಜೊತೆಯಲ್ಲಿ ಬಂದಿದ್ದ ಪಾಂಡ ಅವರಿಗೆ ದಕ್ಷಿಣೆ ಕೊಡಲು ಮುಂದಾದೆ. ಎಷ್ಟು ಬಲವಂತ ಮಾಡಿದರು ಆತ “ದುಡ್ಡಿಗಾಗಿ ನಾನು ನಿಮ್ಮೊಡನೆ ಬರಲಿಲ್ಲ. ದಯವಿಟ್ಟು ನನಗೆ ದುಡ್ಡು ಬೇಡ” ಎಂದು ಕಡ್ಡಿ ತುಂಡರಿಸಿದಂತೆ ಹೇಳಿ ಹೊರಟುಹೋದರು. ಅದಕ್ಕಿಂತ ಹೆಚ್ಚು ನಾನೇನೂ ಮಾಡಲು ಅಸಹಾಯಕಳಾಗಿದ್ದೆ. ಸರಸರನೆ ಬೆಟ್ಟ ಇಳಿದು ಬಂದವಳು ಅಸ್ಸಾಂನ ಕೈಮಗ್ಗದ ರೇಷಿಮೆ ಸೀರೆ ಖರಿದಿಗೆ ಹೊರಟೆ.

ಅಸ್ಸಾಂನಲ್ಲಿ ತಯಾರಾಗುವ ಮಗ್ಗ ಸೀರೆಗಳು ಬಹುಪಾಲು ಕ್ರೀಂ ಬಣ್ಣದ ಹಿನ್ನಲೆಯ ಮೇಲೆ ಕೆಂಪು, ಕಪ್ಪು ಅಪರೂಪಕ್ಕೆ ನೀಲಿ, ಹಸಿರು ಹಳದಿ ಬಣ್ಣಗಳ ಕಸೂತಿ ಹೊಂದಿರುತ್ತವೆ. ಮೇಖ್ಲಾ ಎನ್ನುವ ಲಂಗದಾವಣಿಯಂತಹ ಸೀರೆಗಳೂ ಇವೆ. ಘೇಂದಾಮೃಗ, ಬೆತ್ತದ ಟೊಪ್ಪಿಗೆ, ಢಮರುಗ ಇವುಗಳು ಹೆಚ್ಚಿನ ಪಾಲು ಕಸೂತಿಯಲ್ಲಿ ಅರಳುವ ಆಕಾರಗಳು. ಸ್ವಲ್ಪ ಬಾಳಿಕೆ ಬರುವ, ನೋಡಲು ಸ್ವಲ್ಪವಾದರೂ ಚಂದವಿರುವ ರೇಷ್ಮೆ ಸೀರೆ ತೆಗೆದುಕೊಳ್ಳಬೇಕು ಎಂದರೆ ಕನಿಷ್ಠ 10ರಿಂದ 12 ಸಾವಿರ ರೂಪಾಯಿಗಳು ಪರ್ಸಿನಲ್ಲಿ ಇರಲೇ ಬೇಕು. ನಾನು ಹೋದ ಅಂಗಡಿಯಲ್ಲಿ  70 ಸಾವಿರ ರೂಪಾಯಿಗಳ ಗರಿಷ್ಠ ದರದ ಸೀರೆಯೂ ಇತ್ತು.

ಹೋದ ನೆನಪಿಗೆ ಎಂದು ಒಂದೇ ಒಂದು ಸೀರೆ ಕೊಂಡು (ಸಾಮರ್ಥ್ಯವೂ ಅಷ್ಟೇ ಇತ್ತು) ಹೊರಬಂದಾಗ, ಪ್ರಯಾಣಕ್ಕೆ ಇನ್ನೂ ಬಹಳ ಸಮಯ ಇತ್ತು. “ಏನು ಮಾಡೋಣ ಧನಂಜಯ್?” ಎಂದೆ. “ಬನ್ನಿ ಇನ್ನೊಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆ” ಎಂದವ ಕಾರು ನಿಲ್ಲಿಸಿದ್ದು ಇಲ್ಲಿಸಿದ್ದು ವಸಿಷ್ಠ ಮಹಾಮುನಿಗಳು ತಪಸ್ಸು ಮಾಡಿ ದೇಹ ತ್ಯಾಗ ಮಾಡಿದರು ಎಂದು ಹೇಳಲಾದ ದೇವಸ್ಥಾನದ ಬಳಿ. ವೇದಗಳಲ್ಲಿ ಉಲ್ಲೇಖ ಹೊಂದಿದೆ ಎನ್ನಲಾದ ಈ ದೇವಸ್ಥಾನವನ್ನು ಆರ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮೂಲಭೂತವಾಗಿ ಶಿವ ದೇವಸ್ಥಾನ ಇದು. ರಾಮಾಯಣದಲ್ಲಿಯೂ ಉಲ್ಲೇಖವಾಗಿದೆ ಎನ್ನುತ್ತಾ ವಿವರಣೆ ನೀಡುತ್ತಿದ್ದ ಪಂಡಿತರ ಹೆಸರು ಅಜಯ. ಮೂಗಿನಲ್ಲೇ ಮಾತನಾಡುತ್ತಿದ್ದವರು “ಶಿವನ ಜಟೆಯಿಂದ ಗಂಗೆ ಧರೆಗಿಳಿದಾಗ ವಸಿಷ್ಠರು ಇಲ್ಲಿಹರಿದ ಗಂಗೆಯ ನಡುವಿನಲ್ಲಿ ಕುಳಿತು ತಪಸ್ಸು ಮಾಡಿ ಶಿವನಲ್ಲಿ ಒಂದಾದರು” ಎನ್ನುತ್ತಾ ಬಂಡೆಗಳ ಮೇಲಿನಿಂದ ರಭಸದಲ್ಲಿ ಹರಿದು ಬರುತ್ತಿದ್ದ ನೀರನ್ನು ತೋರಿಸಿದರು. ಅದನ್ನು ಗಂಗಾ ನದಿ ಎನ್ನುತ್ತಾ ಈ ದೇವಸ್ಥಾನದಲ್ಲಿ ಗಂಗೆಯನ್ನು ಸಂಧ್ಯಾ, ಲಲಿತಾ ಮತ್ತು ಕಾಂತಾ ಎನ್ನುವ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ ಎನ್ನುವ ವಿಷಯವನ್ನೂ ತಿಳಿಸಿದರು. ಮುಂದುವರೆಯುತ್ತಾ “ಒಮ್ಮೆ ವಿಶ್ವಾಮಿತ್ರರಿಗೂ ವಸಿಷ್ಠರಿಗೂ ಇಲ್ಲಿಯೇ ಯುದ್ಧ (ಭಾರಿ ವಾಗ್ವಾದ?!) ನಡೆದಿತ್ತು” ಎಂದು ಕೂಡ ಹೇಳಿದರು. ಎಲ್ಲಿಯೂ ಫೋಟೊ ತೆಗೆದುಕೊಳ್ಳುವಂತಿರಲಿಲ್ಲ. ಅಲ್ಲಿನ ಕಟ್ಟದ ರಚನೆಯಾಗಲಿ, ಪೂಜಾ ವಿಧಾನವಾಗಲಿ ಆಕರ್ಷಣೀಯ ಎನಿಸಲಿಲ್ಲ ನನಗೆ. ಆದರೂ ಎಂದಿನಂತೆ ಶಿವ ಇರುವ ಕಡೆಯಲ್ಲಾ ಮನಸು ನಿರಾಳವಾಗುವುದು ತಪ್ಪಲಿಲ್ಲ.

ಸೀದಾ ವಿಮಾನ ನಿಲ್ದಾಣಕ್ಕೆ ಬಂದವಳು ಹಿಂದಿರುಗಿದ್ದು ನಮ್ಮ ಬೆಂಗಳೂರಿಗೆ. ಇಲ್ಲಿ ಸಿಕ್ಕಸಿಕ್ಕ ಹಿರಿಯ, ಕಿರಿಯ ಪರಿಚಯಸ್ಥರೆಲ್ಲಾ ‘ಕಾಮಾಕ್ಯ ದೇವಸ್ಥಾನಕ್ಕೆ ಹೋಗಿ ಬಂದಿರಿ ತಾನೆ?’ ಎಂದು ಕೇಳುತ್ತಾ ನೆಮ್ಮದಿಯ ಉಸಿರು ಬಿಡುವಾಗ, ಅಷ್ಟೊಂದು ಜನಜಂಗುಳಿಯಲ್ಲಿಯೂ ಸ್ವಲ್ಪವೂ ತ್ರಾಸಿಲ್ಲದೆ ದೇವಿಯ ದರ್ಶನವಾದದ್ದನ್ನು ನೆನೆಯುವಾಗ, ಒಂದು ಕಾಸೂ ದಕ್ಷಿಣೆ ಪಡೆಯದೆ ಪ್ರಸಾದ ತೀರ್ಥವನ್ನು ಕೊಟ್ಟು ದೇವಿದರ್ಶನ ಮಾಡಿಸಿದ ಪಾಂಡರ ನೆನಪಾದಾಗ, ಎಂದೂ ಇಲ್ಲದಷ್ಟು ಟ್ರ್ಯಾಫಿಕ್ ಜ್ಯಾಂ ಇದ್ದು ನನ್ನನ್ನು ದೇವಸ್ಥಾನದ ದಾರಿಗೆ ತಿರುಗಲು ಪ್ರೇರೇಪಿಸಿದ ಅಗೋಚರ ಶಕ್ತಿಯೆಡೆಗೆ ಗಮನ ಹೋದಾಗಲೆಲ್ಲಾ, ಬಹುಶಃ ನನ್ನೊಳಗಿನ ನರಕಾಸುರನೇ ರಸ್ತೆಯಲ್ಲಿ ಅಡ್ಡಗಟ್ಟಿ ಕಾಮಾಕ್ಯಳ ದರ್ಶನಕ್ಕೆ ಪ್ರೇರೇಪಣೆ ಕೊಟ್ಟನೇನೋ ಎಂದುಕೊಳ್ಳುತ್ತೇನೆ. ಜಗತ್ತಿನ ಎಲ್ಲಾ ಸಾಧ್ಯತೆಗಳ ಬಗ್ಗೆ ನಂಬಿಕೆ ಹೆಚ್ಚುತ್ತಾ ಹೋಗುತ್ತದೆ. ಒಳ್ಳೆಯತನಗಳ ಬಗ್ಗೆ ಮತ್ತಷ್ಟು ಆಕರ್ಷಿತಳಾಗುತ್ತಾ ಹೋಗುತ್ತೇನೆ. ‘ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತ ; ನಮಸ್ತಸ್ಯೈ ನಮಸ್ತಸ್ಯೈ, ನಮಸ್ತಸ್ಯೈ ನಮೋನ್ನಮಃ’ ಎಂದು ವಿನೀತಳಾಗುವ ಪ್ರಯತ್ನವನ್ನು ಎಂದೂ ಜಾರಿಯಲ್ಲಿ ಇಡುತ್ತೇನೆ.