“ರಾತ್ರಿ 1 ಗಂಟೆಯ ಸಮಯಕ್ಕೆ ನಮ್ಮ ಟೆಲಿಫೋನ್ ಕೂಗಿತು. ಅಷ್ಟು ಹೊತ್ತಿಗೆ ಬಂದ ಕಾಲ್ ಗೆ ಹೆದರಿ ಹಲೋ ಅಂದೆ. ಸಿನ್ಹಾ ಲೈನಿನಲ್ಲಿ. ಆತ ಗಾಭರಿಯಿಂದ , ‘ಸರ್ಕಾರ್ ಗೆ ಹಾರ್ಟ ಅಟ್ಯಾಕ್ ಆಗಿದೆ. ಬೇಗ ಬನ್ನಿ’ ಎಂದ. ಎಂತಹ ಪರಿಸ್ಥಿತಿಗೆ ತಯಾರಾಗಿದ್ದರೂ ಜೀವನದಲ್ಲಿ ಎಷ್ಟೋ ಸಲ ಅನೀರೀಕ್ಷಿತವಾಗಿ, ತಿರುವು ಬರುತ್ತೆ; ಜೊತೆಗೆ ಜಂಘಾಬಲ ಉಡುಗಿಹೋಗುತ್ತೆ. ಸಿನ್ಹಾ ಒಬ್ಬ ಹಾರ್ಟ ಪೇಷೆಂಟ್, ಅದಕ್ಕೋಸ್ಕರ ತಯಾರಿದ್ದೆವು. ಈಗ ಅಟ್ಯಾಕ್ ಆಗಿರುವುದು ನನ್ನ ಸಹೋದ್ಯೋಗಿಗೆ. ಸಿಂಧೂರಿ ಹೋಟೆಲ್ 10 ನಿಮಿಶದಲ್ಲಿ ಸೇರಿದೆ. ನಾನು ಅಲ್ಲಿ ತಲುಪಿದಾಗ, ಸರ್ಕಾರನ್ನು ಹೊಟೆಲ್ ಪಕ್ಕದಲ್ಲೇ ಇದ್ದ ಅಪೊಲೊ ಆಸ್ಪತ್ರೆ ಕ್ಯಾಸುಯಾಲ್ಟಿ ಎಮರ್ಜೆನ್ಸಿಗೆ ಸಾಗಿಸುತ್ತಿದ್ದರು.”
ಇ ಆರ್ ರಾಮಚಂದ್ರನ್ ಕಥಾನಕ

 

ಎಂಬತ್ತರ ದಶಕದಲ್ಲಿ ಮದರಾಸಿನಲ್ಲಿ  ಕೆಲಸಮಾಡುತ್ತಿದ್ದೆ. ಕೆಲಸದ ಮೇಲೆ ಕಲ್ಕತ್ತೆಗೆ  ತಿಂಗಳಿಗೆ ಎರಡು ಬಾರಿಯಾದರೂ ಹೋಗಿ ಬರುತ್ತಿದ್ದೆ. ಫಿಲಿಪ್ಸ್ ಕಂಪನಿಯ ಮೆಡಿಕಲ್ ಸಿಸ್ಟಮ್ಸ್ ವಿಭಾಗದಲ್ಲಿದ್ದ ನನಗೆ ಶಸ್ತ್ರಚಿಕೆತ್ಸೆಗೆ ಬೇಕಾಗುವ ಆಪರೇಷನ್ ಥಿಯೇಟರ್ ( ಆ.ಥಿ.) ಲೈಟುಗಳನ್ನು ಕಲ್ಕತ್ತೆಯಲ್ಲಿ ಒಂದು ಖಾಸಗಿ ಸಣ್ಣ ಕಾರ್ಖಾನೆಯ ಮೂಲಕ ಮಾಡಿಸಿ ಅದನ್ನು ಮಾರಾಟ ಮಾಡುವ ಜವಾಬ್ದಾರಿ ನನ್ನದಾಗಿತ್ತು. ಕಲ್ಕತ್ತೆಯಲ್ಲಿ ಫಿಲಿಪ್ಸ್ ನ ಎಲೆಕ್ಟ್ರಿಕ್ ಬಲ್ಬು ಕಾರ್ಖಾನೆ ಕೂಡಾ ಅಲ್ಲೇ ಇತ್ತು. ಹಾಗಾಗಿ ಅಲ್ಲಿನ ಇಂಜಿನಿಯರುಗಳು ನಮಗೆ ಉತ್ಪಾದನೆಯ ವಿಷಯದಲ್ಲಿ ಆಗಾಗ್ಗೆ ತಾಂತ್ರಿಕ ಸಹಾಯವನ್ನು ನೀಡುತ್ತಿದ್ದರು. ಇದರಿಂದ ನನಗೆ ಚೆನ್ನೈ ಮತ್ತು ಕಲ್ಕತ್ತಾ ನಡುವೆ ಓಡಾಡುವುದು ಅನಿವಾರ್ಯವಾಗಿತ್ತು.

ಕಲ್ಕತ್ತೆಯಲ್ಲಿ ನನ್ನ ಸಹೋದ್ಯೋಗಿ ಡಿ.ಪಿ. ಸರ್ಕಾರ್ ಅಲ್ಲಿನ ಕಾರುಭಾರು ನೋಡಿಕೊಳ್ಳುತ್ತಿದ್ದ. ಒಳ್ಳೆಯ ಇಂಜಿನಿಯರ್. ಸದಾ ಉತ್ಸಾಹಿ. ಪಳಗಿದ ಕೈ. ಉತ್ಪಾದನೆಯಲ್ಲಿ ಏನಾದರೂ ಸಮಸ್ಯೆಗಳು, ಒತ್ತಡಗಳು ಬರುವುದು ಸಹಜ. ಅಂತಹ ಸಮಯದಲ್ಲಿ ಸಂಯಮ ಕಳೆದುಕೊಳ್ಳದೆ ಪರಿಹಾರ ಕಂಡು ಹಿಡಿಯುತ್ತಿದ್ದ ಸರ್ಕಾರ್ ನ ಮನೋಭಾವ ನನಗೆ ಇಷ್ಟವಾಯಿತು.

ಕೆಲಸವಾದ ಮೇಲೆ ಖಡಕ್ ಚಾ ಬೇಕೇ ಬೇಕು. ಜೊತೆಗೆ ಗಂಗಾರಾಂಗೆ ಹೋಗಿ ಏನಾದರೂ ಸಿಹಿ ತಿನ್ನಲೇಬೇಕು. ಅವನ ಭಾಷೆಯಲ್ಲೇ ಹೇಳುವುದಾದರೆ ‘ನಮ್ಮ ತಂದೆ ತಾಯಿ ಇಬ್ಬರೂ ಸೇರಿ ನನಗೆ ಕೊಟ್ಟ ಉಡುಗೊರೆ – ಡಯಾಬಿಟೀಸ್. ಆದರೂ ಇವತ್ತು ಚೆನ್ನಾಗಿ ಕೆಲಸ ಮಾಡಿದ್ದೇವೆ. ಹೊಸ ಆ.ಥಿ. ಲೈಟು ಮಾಡುವ ಕೆಲಸ ಭರದಿಂದ ಸಾಗಿದೆ. ‘ಸೆಲಿಬ್ರೇಟ್’ ಮಾಡಿದರೆ ತಪ್ಪಿಲ್ಲ’ ಅಂತ ಚಂಚಂ ಮತ್ತು ಸಂದೇಶ್ ತಿಂದು, ಖಡಕ್ ಚಾಯ್ ಕುಡಿಯುತ್ತಿದ್ದೆವು. ಅವನನ್ನು ಮನೆಯ ಹತ್ತಿರ ಇಳಿಸಿ ನಾನು ನನ್ನ ಹೊಟೆಲ್ಲಿಗೆ ಹೋಗುತ್ತಿದ್ದೆ.

ಒಂದೆರೆಡು ಸಲ ಅವನ ಮನೆಗೆ ಊಟಕ್ಕೆ ಕರೆದಿದ್ದ. ‘ಘಾಸ್ ಪೂಸ್’ ತಿನ್ನುವ ನನಗೋಸ್ಕರ ಆವತ್ತು ಅವರ ಮನೆಯಲ್ಲಿ ವೆಜಿಟೇರಿಯನ್ ಊಟ. ನೆಲದ ಮೇಲೆ ಕೂಡಿಸಿ ನಮಗೆ ಊಟದ ಮಧ್ಯೆ ಸಿಹಿ ತಿಂಡಿಗಳನ್ನು ತಿನ್ನಿಸಿ ಅತಿಥಿ ಸತ್ಕಾರ ಮಾಡಿದಳು ಅವನ ಹೆಂಡತಿ. ಒಂದೇ ಸಲ ಇಷ್ಟು ಸಿಹಿ ತಿಂಡಿಯನ್ನು ಹೇಗೆ ತಿಂತೀರಾ ಅನ್ನುವ ಪ್ರಶ್ನೆಗೆ ನೀನು ಇಲ್ಲೇ ಬಂದು ಇದ್ದು ಬಿಡು ಅಭ್ಯಾಸವಾಗುತ್ತೆ ಎಂದ ಸರ್ಕಾರ್. ಮಗ ಸ್ಕೂಲು ಮುಗಿಸಿ ಕಾಲೇಜಿಗೆ ಹತ್ತುವುದರಲ್ಲಿದ್ದ.

ಹೀಗೆ ತಿಂಗಳಿಗೆರೆಡು ಬಾರಿ ನಾನು ಕಲ್ಕತ್ತೆಗೆ ಹೋದರೆ ವರ್ಷಕ್ಕೆ ಎರಡು ಬಾರಿ ಸರ್ಕಾರ್ ಚೆನ್ನೈಗೆ ಬರುತಿದ್ದ. ಅಲ್ಲಿ ನಮ್ಮ ಕಂಪನಿಯ ಸೇಲ್ಸ್ ಇಂಜಿನಿಯರುಗಳಿಗೆ ಆಪರೇಷನ್ ಥಿಯೇಟರ್ ಲೈಟಿನ ಬಗ್ಗೆ ತರಪೇತಿಯನ್ನು ಕೊಡುತ್ತಿದ್ದೆವು: ಹೇಗೆ ಮಾರಾಟ ಮಾಡುವುದು, ಶಸ್ತ್ರಚಿಕಿತ್ಸೆಯ ತಜ್ಞರಿಗೆ ಅದರ ವಿಷಯ ಹೇಗೆ ವಿವರಿಸಬೇಕೆಂದು ತೋರಿಸಿಕೊಡುತ್ತಿದ್ದೆವು. ಕೆಲಸವಾದ ಮೇಲೆ ಅತಿಥಿ ಸತ್ಕಾರ ಈಗ ನನ್ನ ಸರದಿ. ಅವನನ್ನು ದಾಸಪ್ರಕಾಶ್ ಹೋಟೆಲ್ಲಿಗೆ ಕರೆದುಕೊಂಡು ಹೋಗಿ ಇಡ್ಲಿ ದೋಸೆ ಫಿಲ್ಟರ್ ಕಾಫಿ ಕೊಡಿಸಿ ಅವನನ್ನು, ಅವನು ಉಳಿದುಕೊಂಡಿರುತ್ತಿದ್ದ ಹೋಟೆಲ್ಲಿಗೆ ಬಿಟ್ಟು ನಾನು ಮನೆಗೆ ಹೋಗುತ್ತಿದ್ದೆ.

ಒಂದು ಸಲ ಸರ್ಕಾರ್ ನ ಜೊತೆ ನಮಗೆ ಆಪರೇಷನ್ ಲೈಟನ್ನು ಮಾಡುತ್ತಿದ್ದ ಕಂಪನಿಯ ಮಾಲಿಕ ಸಿನ್ಹಾರನ್ನೂ ಚೆನ್ನೈಗೆ ಕರೆದಿದ್ದೆವು. ಆತನಿಗೆ ಹೃದಯ ರೋಗವಿತ್ತು. ಔಷಧಿ ಕಾಲಕಾಲಕ್ಕೆ ತೆಗೆದುಕೊಂಡು ಆಹಾರ ಸೇವನೆ ಮತ್ತು ವ್ಯಾಯಾಮದಲ್ಲಿ ಕಟ್ಟುನಿಟ್ಟಾಗಿದ್ದ ಕಾರಣ ಸಿನ್ಹಾನ ಆರೋಗ್ಯ ಬಹಳ ಮಟ್ಟಿಗೆ ನಿಯಂತ್ರಣದಲ್ಲಿತ್ತು. ಆದರೂ ಊರು ಬಿಟ್ಟು ಹೋದರೆ ಎಲ್ಲಿ ಆರೋಗ್ಯ ಏರು ಪೇರಾಗುವುದೋ ಅನ್ನುವ ಭಯ ಆತನಿಗೆ. ಅದಕ್ಕೆ ಅಪೊಲೊ ಆಸ್ಪತ್ರೆಯ ಪಕ್ಕದಲ್ಲೇ ಇರುವ ಸಿಂಧೂರಿ ಹೋಟೆಲ್ ನಲ್ಲಿ ರೂಮನ್ನು ಬುಕ್ ಮಾಡಿದೆ. ಅಲ್ಲಿಂದ ನಮ್ಮ ಆಫೀಸನ್ನು 10 ನಿಮಿಶದಲ್ಲಿ ತಲುಪಬಹುದು. ನನಗೇನೋ ತೋರಿತು ಇಬ್ಬರೂ ಒಂದೇ ರೂಮಿನಲ್ಲಿದ್ದರೆ ಒಳ್ಳೆಯದು ಅಂತ. ಅದಕ್ಕೆ ಡಬಲ್ ರೂಮನ್ನು ಬುಕ್ ಮಾಡಿದೆ. ನಾನು ಇಬ್ಬರಿಗೂ ಒಂದೇ ರೂಮ್ ಬುಕ್ ಮಾಡಿದ್ದು ಸರ್ಕಾರ್ ಗೆ ಇಷ್ಟವಾಗಲಿಲ್ಲ. ನನ್ನನ್ನು ಕೇಳದೆ ಯಾಕೆ ಹೀಗೆ ಮಾಡಿದೆ ಎಂದು ಗುಡುಗಿದ. ನನಗೆ ಏನು ಹೇಳಬೇಕೆಂದು ತೋಚಲಿಲ್ಲ. ಸುಮ್ಮನಿದ್ದೆ.

ಅವರಿಬ್ಬರೂ ಸಂಜೆ ಕಲ್ಕತ್ತಾದಿಂದ ವಿಮಾನದಲ್ಲಿ ಬಂದು ಹೋಟೆಲ್ ಗೆ ಸೇರಿದಮೇಲೆ ವಾಡಿಕೆಯಂತೆ ಸರ್ಕಾರ್ ನನಗೆ ಫೋನ್ ಮಾಡಿದ. ನಾನು ಬೆಳಿಗ್ಗೆ 9 ಗಂಟೆಗೆ ಅವರ ಹೋಟೆಲ್ಲಿಗೆ ಹೋಗಿ ಜೊತೆಗೆ ಆಫೀಸಿಗೆ ಹೋಗೋಣಾಂತ ಹೇಳಿ ಅವನ ಜೊತೆ ಬಂದ ಸಿನ್ಹಾನ ಆರೋಗ್ಯವನ್ನು ವಿಚಾರಿಸಿ ದಣಿದಿದ್ದ ಅವರಿಬ್ಬರಿಗೆ ಬೇಗ ಮಲಗಲು ಸೂಚಿಸಿದೆ.

ರಾತ್ರಿ 1 ಗಂಟೆಯ ಸಮಯಕ್ಕೆ ನಮ್ಮ ಟೆಲಿಫೋನ್ ಕೂಗಿತು. ಅಷ್ಟು ಹೊತ್ತಿಗೆ ಬಂದ ಕಾಲ್ ಗೆ ಹೆದರಿ ಹಲೋ ಅಂದೆ. ಸಿನ್ಹಾ ಲೈನಿನಲ್ಲಿ. ಆತ ಗಾಭರಿಯಿಂದ , ‘ಸರ್ಕಾರ್ ಗೆ ಹಾರ್ಟ ಅಟ್ಯಾಕ್ ಆಗಿದೆ. ಬೇಗ ಬನ್ನಿ’ ಎಂದ. ಎಂತಹ ಪರಿಸ್ಥಿತಿಗೆ ತಯಾರಾಗಿದ್ದರೂ ಜೀವನದಲ್ಲಿ ಎಷ್ಟೋ ಸಲ ಅನೀರೀಕ್ಷಿತವಾಗಿ, ತಿರುವು ಬರುತ್ತೆ; ಜೊತೆಗೆ ಜಂಘಾಬಲ ಉಡುಗಿಹೋಗುತ್ತೆ. ಸಿನ್ಹಾ ಒಬ್ಬ ಹಾರ್ಟ ಪೇಷೆಂಟ್, ಅದಕ್ಕೋಸ್ಕರ ತಯಾರಿದ್ದೆವು. ಈಗ ಅಟ್ಯಾಕ್ ಆಗಿರುವುದು ನನ್ನ ಸಹೋದ್ಯೋಗಿಗೆ. ಸಿಂಧೂರಿ ಹೋಟೆಲ್ 10 ನಿಮಿಶದಲ್ಲಿ ಸೇರಿದೆ. ನಾನು ಅಲ್ಲಿ ತಲುಪಿದಾಗ, ಸರ್ಕಾರನ್ನು ಹೊಟೆಲ್ ಪಕ್ಕದಲ್ಲೇ ಇದ್ದ ಅಪೊಲೊ ಆಸ್ಪತ್ರೆ ಕ್ಯಾಸುಯಾಲ್ಟಿ ಎಮರ್ಜೆನ್ಸಿಗೆ ಸಾಗಿಸುತ್ತಿದ್ದರು. ಆಗ ನನ್ನ ಎದುರಿನಲ್ಲೇ ಎರಡನೆ ಅಟ್ಯಾಕ್ ಆಯಿತು. ಐಸಿಯುಗೆ ತಕ್ಷಣ ರವಾನಿಸಿ ಚಿಕಿತ್ಸೆ ಶುರು ಮಾಡಿದರು. ಡ್ರಿಪ್ಸ್ ಹಾಕಿ ಅವರ ಹಾರ್ಟ ಸ್ಪೆಷಲಿಸ್ಟ್ ಗೆ ಬರಲು ಫೊನ್ ಮಾಡಿದರು. ಅವರು ಬಂದ ಸುಮಾರು ಇಪ್ಪತ್ತು ನಿಮಿಷದಲ್ಲಿ ಸರ್ಕಾರ್ ನ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂತು. ನಾನು ನನ್ನ ಸಹೋದ್ಯೋಗಿಗಳಿಗೆ, ಬಾಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಒಬ್ಬೊಬ್ಬರಾಗಿ ಬರಲು ಆರಂಭಿಸಿದರು.

ಸಿನ್ಹಾ ಬಹಳ ಹೆದರಿದ್ದರು. ಅವರಿಗೆ ರಾತ್ರಿ ನಿದ್ರೆ ಮಾಡುವಾಗ ಪಕ್ಕದಲ್ಲಿ ನರಳುವ ಶಬ್ಧ ಕೇಳಿಸಿತಂತೆ. ಎದ್ದು ದೀಪ ಹಾಕಿ ನೋಡಿದರೆ ಸರ್ಕಾರ್ ಎದೆ ಹಿಡಿದುಕೊಂಡು ನರಳುತ್ತಾ ಇದ್ದರಂತೆ. ಅವರು ತಕ್ಷಣವೇ ನನಗೆ ಫೋನ್ ಮಾಡಿ, ಅವರು ದಿನಾ ತೊಗೊಳ್ಳುವ ಬಿಪಿ ಗುಳಿಗೆಯನ್ನು ಅವನಿಗೆ ಕೊಟ್ಟು ಅವರೂ ಒಂದು ನುಂಗಿದರು.

ಪ್ರಾಣಕ್ಕೆ ಏನೂ ಅಪಾಯವಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಸರ್ಕಾರ್ ನ ಮನೆಯವರಿಗೆ ಫೋನ್ ಮಾಡಿದೆ. ಯಾರೂ ಫೋನ್ ಎತ್ತಲಿಲ್ಲ. ಬಹಳ ಸರ್ತಿ ಪ್ರಯತ್ನ ಮಾಡಿದರೂ ಯಾರೂ ಸಿಕ್ಕಲಿಲ್ಲ. ಬೆಳಕು ಹರಿಯುವ ವೇಳೆಗೆ ನಮ್ಮ ಆಫೀಸಿನವರಿಗೆ ಫೋನ್ ಮಾಡಿ ಅವರ ಮನೆಗೆ ಹೋಗಲು ಹೇಳಿದೆ. ಬಾಗಿಲಿಗೆ ಬೀಗ ಬಡಿದಿತ್ತು. ಮನೆಯವರು ಎಲ್ಲಿಗೆ ಹೋಗಿದ್ದಾರೆ, ಹೇಗೆ ಹುಡುಕುವುದು?

ಹೃದಯ ತಜ್ಙರು ಬಂದು ಪೇಷಂಟನ್ನು ಪರೀಕ್ಷಿಸಿ ಅವರು ಕೊಟ್ಟ ಔಷಧಿ ಕೆಲಸ ಮಾಡಲು ಸಮಯವಾಗುತ್ತೆ ಇನ್ನು 72 ಘಂಟೆ ಏನೂ ಹೇಳಕ್ಕೆ ಆಗುವುದಿಲ್ಲ ಎಂದರು. ನಮ್ಮ ಬಾಸ್, ಹೋಟೆಲ್ ಪಕ್ಕದಲ್ಲೇ ಇದ್ದ ಆಸ್ಪತ್ರೆ ಸೇರಿಸಿ ಏನೇನು ಮಾಡಬೇಕೋ ಅದೆಲ್ಲಾ ಮಾಡಿದ್ದೇವೆ.. ಇನ್ನು ದೇವರ ಮೇಲೆ ಭಾರ ಹಾಕಿ, ಪ್ರಾರ್ಥಿಸೋಣ ಎಂದರು. ಮಿಕ್ಕವರೆಲ್ಲಾ ಮನೆಗೆ ಹೋದರು ನಾನು ಅಲ್ಲೇ ಉಳಿದೆ. ಅವರೆಲ್ಲಾ ಆಮೇಲೆ ಕೆಲಸಕ್ಕೆ ಹೋಗಬೇಕಾಗಿತ್ತು.

ನಮ್ಮ ಸೆಕ್ರಟರಿ ಆಫೀಸಿನಿಂದ ಕಲ್ಕತ್ತೆಯ ಆಫೀಸಿನವರಿಗೆಲ್ಲಾ ಫೋನ್ ಮಾಡಿ ಸರ್ಕಾರ್ ನ ಮನೆಯವರನ್ನು ತಲುಪಲು ಪ್ರಯತ್ನ ಮಾಡಿದಳು. ಅವರು ಎಲ್ಲಿ ಹೋಗಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಕೊನೆಗೆ ಮಾರನೆಯ ದಿನ ಗೊತ್ತಾಯಿತು. ಹೆಂಡತಿ ಮಗ ಒಂದು ಗ್ರೂಪಿನಲ್ಲಿ 5 ದಿವಸಕ್ಕೆ ನೇಪಾಳಕ್ಕೆ ಹೋಗಿದ್ದಾರೆಂದು ತಿಳಿಯಿತು! ಕೊನೆಗೂ ಅವರು ಇಳಿದುಕೊಂಡಿದ್ದ ಹೊಟೆಲ್ ನ ಫೋನ್ ನಂಬರನ್ನು ಪತ್ತೆ ಹಚ್ಚಿ ಅವರಿಗೆ ವಿಷಯವನ್ನು ತಿಳಿಸಿದೆವು. ಕಲ್ಕತ್ತೆಯಿಂದ ಚೆನ್ನೈಗೆ ಬರಲು ಆಫೀಸಿನಿಂದ ಏರ್ ಟಿಕೆಟ್ ವ್ಯವಸ್ಥೆ ಮಾಡಿದ್ದಾಯಿತು, ಅಟ್ಯಾಕ್ ಆಗಿ ನಾಲ್ಕನೇ ದಿನಕ್ಕೆ ಬಂದಿಳಿದರು.

ಸಿನ್ಹಾ ಬಹಳ ಹೆದರಿದ್ದರು. ಅವರಿಗೆ ರಾತ್ರಿ ನಿದ್ರೆ ಮಾಡುವಾಗ ಪಕ್ಕದಲ್ಲಿ ನರಳುವ ಶಬ್ಧ ಕೇಳಿಸಿತಂತೆ. ಎದ್ದು ದೀಪ ಹಾಕಿ ನೋಡಿದರೆ ಸರ್ಕಾರ್ ಎದೆ ಹಿಡಿದುಕೊಂಡು ನರಳುತ್ತಾ ಇದ್ದರಂತೆ. ಅವರು ತಕ್ಷಣವೇ ನನಗೆ ಫೋನ್ ಮಾಡಿ, ಅವರು ದಿನಾ ತೊಗೊಳ್ಳುವ ಬಿಪಿ ಗುಳಿಗೆಯನ್ನು ಅವನಿಗೆ ಕೊಟ್ಟು ಅವರೂ ಒಂದು ನುಂಗಿದರು.

ಸರ್ಕಾರ್ ನ ಆರೋಗ್ಯ ಕ್ರಮೇಣವಾಗಿ ಸುಧಾರಿಸಿತು. ಇನ್ನು ಪ್ರಾಣಕ್ಕೆ ಭಯವಿಲ್ಲ. ಹತ್ತುದಿವಸ ನೋಡಿ ಆರೋಗ್ಯ ಸರಿಯಾಗಿದ್ದರೆ ಡಿಸ್ಚಾರ್ಜ್ ಮಾಡಬಹುದು ಎಂದರು. ಆದರೆ ಡಾಕ್ಟರುಗಳು ಒಂದು ಮಾತು ಹೇಳಿದರು. ಆಸ್ಪತ್ರೆಗೆ ಅವನನ್ನು ತಕ್ಷಣವೇ ಸೇರಿಸಿದ್ದು ಒಳ್ಳೆಯದಾಯಿತು. ಸ್ವಲ್ಪ ತಡವಾಗಿದ್ದಿದ್ದರೆ ಸರ್ಕಾರ್ ಉಳಿಯುತ್ತಿರಲಿಲ್ಲ. ಸಿನ್ಹಾ ಹೇಳಿದರು.. ನನಗೋಸ್ಕರ ಡಬಲ್ ರೂಮು ಬುಕ್ ಮಾಡಿದ್ದಿರಿ.. ನಾವಿಬ್ಬರೂ ಬೇರೆ ಬೇರೆ ರೂಮಿನಲ್ಲಿದ್ದು ಹೀಗಾಗಿದ್ದರೆ ನಮ್ಮರಲ್ಲೊಬ್ಬರು ಬದುಕುತ್ತಿರಲಿಲ್ಲ….

ಆ ಮೂರು ದಿನಗಳು, ಅವನ ಹೆಂಡತಿ ಮಗ ಬರುವುದಕ್ಕೆ ಮುಂಚೆ ನಮ್ಮ ಆಫೀಸಿನವರು ಒಂದು ಸಣ್ಣ ಪವಾಡವನ್ನೇ ಮಾಡಿದರು ಎಂದರೆ ಅತಿಶಯೋಕ್ತಿಯಾಗಲಾರದು. ರಾತ್ರಿ ಹೊತ್ತು ನಾವುಗಳು ಆಸ್ಪತ್ರೆಯಲ್ಲಿ ಡ್ಯೂಟಿ ಮಾಡುತ್ತಿದ್ದೆವು. ಬೆಳಗಿನ ಜಾವ ನಾವು ಮನೆಗೆ ಹೋದಾಗ ನಮ್ಮ ಸಹೋದ್ಯೋಗಿಗಳು ಬಂದು ನೋಡಿಕೊಳ್ಳುತ್ತಿದ್ದರು. ಹಗಲು ಹೊತ್ತು ಒಬ್ಬ ಸೆಕ್ರೆಟರಿ ಅಲ್ಲಿ ಇದ್ದು ಅವನನ್ನು ನೋಡಿಕೊಳ್ಳುತ್ತಿದ್ದು ಏನಾದರೂ ಔಷಧಿ ಬೇಕೆಂದರೆ ನಾವು ಹೋಗಿ ತರಸಿ ಕೊಡುತ್ತಿದ್ದೆವು. ಮನೆಯ ಊಟ ಕೊಟ್ಟರೆ ಒಳ್ಳೆಯದೆಂದು ಡಾಕ್ಟರು ಹೇಳಿದಾಗ, ಸೆಕ್ರೆಟರಿಗಳು ಅದನ್ನು ಮನೆಯಲ್ಲಿ ಮಾಡಿ ತರುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಹೀಗೆ ಸಹೋದ್ಯೋಗಿಗಳ ಸಹಾಯ ಮತ್ತು ಆರೈಕೆಯಿಂದ ಸರ್ಕಾರ್ ನ ಆರೋಗ್ಯ ಬಹಳಷ್ಟು ಸುಧಾರಿಸಿತು.

ಆಸ್ಪತ್ರೆ ನರ್ಸ್ ಗಳಿಂದ ನಡೆದ ವಿಷಯಗಳನ್ನೆಲ್ಲಾ ತಿಳಿದುಕೊಂಡ ಅವನ ಹೆಂಡತಿ, ಸಹೋದ್ಯೋಗಿಗಳ ಸೌಹಾರ್ದ್ಯಯತೆ ಮತ್ತು ಸೇವೆ ಕೇಳಿ ಕಣ್ಣಲ್ಲಿ ನೀರು ಹಾಕಿಕೊಂಡಳು. ನಮ್ಮ ಮೀಟಿಂಗು ರದ್ದಾಗಿದ್ದರಿಂದ ಮಾರನೇ ದಿನವೇ ಸಿನ್ಹಾ ಕಲ್ಕತ್ತೆಗೆ ಹೊರಟರು. ಹೊರಡುವ ಮುಂಚೆ ನನ್ನ ಕೈ ಹಿಡಿದು ‘ಸರ್ಕಾರ್ ಅದೃಷ್ಟವಂತ, ನೀವೆಲ್ಲಾ ಅವನನ್ನು ನಿಮ್ಮ ಮನೆಯವರ ಹಾಗೆ ನೋಡಿಕೊಂಡಿರಿ’ ಎಂದರು ಸಿನ್ಹಾ.

ಹತ್ತುದಿನದ ನಂತರ ಸರ್ಕಾರ್ ಕಲ್ಕತ್ತೆಗೆ ಹೋಗಬಹುದು ಎಂದಮೇಲೆ ಅವರು ಮೂವರೂ ಕಲ್ಕತ್ತೆಗೆ ಹೋಗುವುದಕ್ಕೆ ಟಿಕೆಟ್ ಇತ್ಯಾದಿ ಅಣಿ ಮಾಡಿದ್ದಾಯಿತು. ಅಲ್ಲಿ ಮನೆ ಸುರಕ್ಷಿತವಾಗಿ ತಲುಪ್ಪಿದ್ದಕ್ಕೆ ಅವರ ಮಗ ನಮಗೆ ಫೋನ್ ಮುಖಾಂತರ ತಿಳಿಸಿದ.

ಸ್ವಲ್ಪ ದಿನಗಳಾದ ಮೇಲೆ ಅವನ ಕೈ ಬರಹದಲ್ಲೇ ಒಂದು ಹೃದಯಸ್ಪರ್ಷಿ ಕಾಗದ ಬರೆದು ಎಲ್ಲರಿಗೂ ತನ್ನ ಮತ್ತು ಮನೆಯವರ ಧನ್ಯವಾದವನ್ನು ತಿಳಿಸಿದ ಸರ್ಕಾರ್. ಎಲ್ಲಿದಕ್ಕಿಂತಲೂ ಸೋಜಿಗ ಸಂಗತಿಯೆಂದರೆ, ನಮ್ಮ ಆಫೀಸಿನ ಒಂದೆರೆಡು ಪ್ಯೂನುಗಳ ಸೇವೆ. ಕೆಲಸವಾದ ಮೇಲೆ ಒಂದು ಹುಲ್ಲಿಕಡ್ಡಿಯನ್ನೂ ಅಲ್ಲಿಂದ ಇಲ್ಲಿ ಇಡಲು ನಿರಾಕರಿಸುವ ಪ್ಯೂನ್ ಗಳು ಎಷ್ಟೋ ರಾತ್ರಿ 11 ಘಂಟೆಗೆ ಮನೆಗೆ ಹೋಗುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಇರಿ ಎಂದು ಯಾರೂ ಹೇಳಿರಲಿಲ್ಲ. ಅವರಾಗಿಯೇ ತೋಚಿಕೊಂಡು ಸ್ವಲ್ಪ ಕೆಲಸಗಳನ್ನು ಅವರಲ್ಲಿ ಹಂಚಿಕೊಂಡಿದ್ದರು. ಊರಿಗೆ ಹೋಗುವ ಮುಂಚೆ ಸರ್ಕಾರ್ ಅವರಿಗೆ ದುಡ್ಡು ಕೊಡಲು ಹೋದಾಗ, ಅವರು ಕಣ್ಣಲ್ಲಿ ನೀರು ಹಾಕಿಕೊಂಡು, ನಮಗೆ ಏನೂ ಬೇಡಿ, ನಿಮಗೆ ವಾಸಿಯಾಯಿತಲ್ಲಾ ಅದೇ ನಮಗೆ ಸಾಕು ಎಂದರು.

ನಮ್ಮ ಬಾಸ್ ಎಲ್ಲರನ್ನೂ ಉದೇಶಿಸಿ ಮಾತನಾಡಿ, ಇದೇ ಟೀಂ ಸ್ಪಿರಿಟ್ ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು. ಆಗಿದ್ದ ಅಪಘಾತದ ಮಧ್ಯೆ ತಮ್ಮ ಸಹೋದ್ಯೋಗಿಯ ಆರೋಗ್ಯದ ಹೊಣೆಹೊತ್ತ ಸಹೋದ್ಯೋಗಿಗಳಿಗೆ ಜೊತೆಗೆ ಆಫೀಸಿನ ಕೆಲಸವನ್ನೂ ತೂಗಿಸಿಕೊಂಡು ಹೋಗಿದ್ದಕ್ಕೆ ಎಲ್ಲರನ್ನ ಅಭಿನಂದಿಸಿದರು. ಇದೆಲ್ಲದರ ಜೊತೆಗೆ ಸರ್ಕಾರ್ ನ ಊಟದ ಹೊಣೆಯನ್ನ ಹೊತ್ತ ಸೆಕ್ರೆಟರಿಗಳ ಪ್ರಶಂಸೆ ಎಲ್ಲರ ಬಾಯಲ್ಲಿ ಬಂತು. ಪ್ಯೂನ್ ಗಳಿಗೂ ಎರಡು ಮಾತು ಹೇಳಲು ಅವಕಾಶ ಮಾಡಿಕೊಟ್ಟರು ಬಾಸ್.

ಇದೆಲ್ಲಾ ಆದ ಮೇಲೆ ಮೇಲೆ ಮತ್ತೆ ಯಾಂತ್ರಿಕ ಜೀವನ ಶುರು. ಸರ್ಕಾರ್ ಗೆ ಹಾರ್ಟ್ ಅಟ್ಯಾಕ್ ಆಗಿದ್ದು ಕ್ರಮೇಣ ಎಲ್ಲರಿಗೂ ಮರೆತು ಹೋಯಿತು.

ಇದಾಗಿ ಮೂರು ವರ್ಷವಾದ ಬಳಿಕ ನಾನು ಪ್ರತಿವರ್ಷದಂತೆ ವರ್ಷದಾಂತ್ಯದ 31 ಡಿಸೆಂಬರ್ ಗೆ ಕೆಲಸಕ್ಕೆ ಕಲ್ಕತ್ತೆಗೆ ಹೋದೆ. ನಾನು ಮತ್ತು ಸರ್ಕಾರ್ ನಮ್ಮ ಆ.ಥಿ. ಲೈಟುಗಳನ್ನು ಯಾರ್ಯಾರು ಕೊಂಡಿದ್ದಾರೊ ಅವರ ಅಡ್ರೆಸ್ಸಿಗೆ ಎಲ್ಲವನ್ನೂ ರವಾನಿಸಲು ಅಣಿಮಾಡಿ, ಹಿಂದಿನ ವರ್ಷಕ್ಕಿಂತಲೂ 25% ನಮ್ಮ ವರಮಾನ ವೃಧ್ಧಿಯಾಗಿದೆಯೆಂದು ಸಂತೋಷಪಟ್ಟೆವು. ಗಂಗಾರಾಮಿನಲ್ಲಿ ಸೆಲೆಬ್ರೇಷನ್ ಮಾಡುವಾಗ ಸರ್ಕಾರ್ ಹೇಳಿದ.. ಜನವರಿ ಹತ್ತನೇ ತಾರೀಖು ನಾನು ಪ್ರತಿವರ್ಷದಂತೆ ಹೊಸ ವರ್ಷದ ಕೆಲಸ ಪ್ಲಾನ್ ಮಾಡುವುದಕ್ಕೆ ಚೆನ್ನೈಗೆ ಬರ್ತಿನಿ, ಎಂದ. ಅಲ್ಲಿಯ ತನಕ ಏನು ಮಾಡ್ತೀಯ ಎಂದೆ.

ಅವನಂದ : ವಾರಣಾಸಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಕಟ್ಟಿಸಿದ ಒಂದು ಮನೆ ಇದೆ. ಪಾಳು ಬಿದ್ದ ಮನೆ, ಅದಕ್ಕೆ ಆಯಸ್ಸು ಚೆನ್ನಾಗಿ ಆಗಿದೆ. ವರ್ಷಕೊಮ್ಮೆ ಹೋಗಿ, ಅದನ್ನು ದುರಸ್ಥಿ ಮಾಡಿಬರ್ತಿನಿ. ನಮ್ಮ ಬೆಂಗಾಲಿಗಳಲ್ಲಿ ಒಂದು ನಂಬಿಕೆ ಇದೆ. ಯಾರಾದರೂ ಕಾಶಿಯಲ್ಲಿ ಸತ್ತರೆ ಸೀಧಾ ಸ್ವರ್ಗಕ್ಕೆ ಹೋಗುತ್ತಾರೆ ಅಂತ. ನಮ್ಮ ಬಂಧು ಬಳಗದವರು ಎಷ್ಟೋ ಜನ ಬಂದಲ್ಲಿದ್ದರು. ಅವರಿಗೆ ಆರೋಗ್ಯ ಸರಿಯಾಗಿರಲಿಲ್ಲ, ಇವತ್ತೋ ನಾಳೆನೋ ಅನ್ನುವ ಕೇಸ್ ಗಳೇ. ಆದರೆ ಇಲ್ಲಿಯ ತನಕ ಯಾರೂ ಅಲ್ಲಿ ಸತ್ತಿಲ್ಲ. ನಮ್ಮ ಕೆಲಸ ಮೂರು ನಾಲ್ಕು ದಿನ ಆಗತ್ತೆ. ಅಲ್ಲಿ ಎರಡು ದಿನ ಇದ್ದು ಕಲ್ಕತ್ತೆಗೆ ಹೊರಡುತ್ತೇವೆ. ಬಂದ ಮೇಲೆ ನನ್ನ ಪ್ರೋಗ್ರಾಮ್ ಬಗ್ಗೆ ನಿನಗೆ ಫೊನ್ ಮಾಡಿ ತಿಳಿಸ್ತೀನಿ.

ಬೈ ಟಾಟಾ ಹೇಳಿ, ಬರಲಿರುವ ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರುತ್ತಾ ಬೀಳ್ಗೊಂಡೆವು. ಇದಾದ 5 ದಿವಸಕ್ಕೆ ಸರ್ಕಾರ್ ನ ಮಗನಿಂದ ಫೋನ್ ಬಂತು. ಸರ್ಕಾರ್ ಹಾರ್ಟ ಅಟ್ಯಾಕ್ ನಿಂದ ಅವನ ಕಾಶಿಯ ಮನೆಯಲ್ಲಿ ತೀರಿಕೊಂಡಿದ್ದ.

ದುರಸ್ತಿ ಸುಣ್ಣ ಬಣ್ಣ ಮುಗಿಸಿ, ಎರಡು ದಿನವಿದ್ದು, ರೈಲ್ವೇ ಸ್ಟೇಷನ್ ಗೆ ಹೊರಡಲು ರೆಡಿಯಾಗಿ, ಮಗ ಆಟೋರಿಕ್ಷ ತಂದಾಗ, ಸರ್ಕಾರ್ ಗೆ ಹಾರ್ಟ ಅಟ್ಯಾಕ್ ಆಗಿ ಕೂತಲ್ಲೇ ತೀರಿಕೊಂಡಿದ್ದ. ಸ್ವರ್ಗದ ಬಾಗಿಲನ್ನು ದಾಟಿ ಹೋಗಿದ್ದ. ಚೆನ್ನೈಯಲ್ಲಿ ಬರುತ್ತಿಯಾ ಎಂದು ಕೇಳಿದ್ದ ಪ್ರಶ್ನೆಗೆ ಕಾಶಿಯಲ್ಲಿ ತಾನಾಗಿಯೇ ಹೋಗಲು ಸಜ್ಜಾಗಿದ್ದ.

ಎಷ್ಟೋ ಪೂರ್ವಿಕರ ಮನದಾಶೆಯನ್ನು ಪೂರ್ತಿಗೊಳಿಸಲು ಬೇರೆಯವರಿಗೋಸ್ಕರ ಪ್ರತಿ ವರ್ಷವೂ ಮನೆಯನ್ನು ಶುಚಿಗೊಳಿಸಿ ಬರುವ ಸರ್ಕಾರ್ ಗೇ ಆ ಪುಣ್ಯ ದೊರಕಿತು. ಶುಚಿಯಾಗಿ ತಾನೇ ಸ್ವರ್ಗಕ್ಕೆ ಹೋದ. ಮೋಕ್ಷವನ್ನು ಕಂಡ.