ಚಿಟ್ಟಾಣಿಯವರೊಟ್ಟಿಗಿನ ಅಂದಿನ ಭೀಮ ಯಶಸ್ವಿಯಾಗಿದ್ದೇ ನಂತರ ಅವರು ಪ್ರತಿನಾಯಕನ ಪಾತ್ರಕ್ಕೆ ಅದರಲ್ಲೂ ಧೀರದತ್ತ ಪಾತ್ರಕ್ಕೆ ಬಹುವಾದ ಪ್ರಸಿದ್ಧಿಯನ್ನು ಪಡೆದರು. ಅವರಿಗೆ ಭೀಮನಂತೆ ಪ್ರಸಿದ್ಧಿ ನೀಡಿದ ಮತ್ತೊಂದು ಪಾತ್ರ ಚಿತ್ರಾಕ್ಷಿಕಲ್ಯಾಣದ ರಕ್ತಜಂಘನ ಪಾತ್ರ. ಈ ಪಾತ್ರವೂ ಅವರಿಗೆ ಆಕಸ್ಮಿಕವಾಗಿ ದೊರೆತದ್ದೆ. ಹಳದೀಪುರದ ಗಜಾನನ ಭಂಡಾರಿ ಸ್ತ್ರೀ ವೇಷಕ್ಕೆ ಬಂದಮೇಲೆ ಚಿಟ್ಟಾಣಿಯವರಿಗೆ ಅದುತನಕ ಚಿತ್ರಾಕ್ಷಿಯಾಗಿ ಎದುರು ಪಾತ್ರ ಮಾಡಿದ ಈ ಜನಪ್ರಿಯ ಜೋಡಿ ಬೇರ್ಪಟ್ಟಿತು. ಕಡತೋಕ ಕೃಷ್ಣ ಭಾಗವತರ ಆಯ್ಕೆ ಇದು. ಇವರಿಗೆ ರಕ್ತಜಂಘಾಸುರನ ಪಾತ್ರ ಮಾಡಲು ತಿಳಿಸಿದರು. ಅಲ್ಲಿಂದ ಜೋಡಿ ಪಾತ್ರಮಾಡುವ ಜಲವಳ್ಳಿಯವರು ಪ್ರತಿನಾಯಕನ ಖಳ ಪಾತ್ರಗಳ ಮೂಲಕ ಹೆಸರುಗಳಿಸಿದರು.
ನಾರಾಯಣ ಯಾಜಿ, ಸಾಲೇಬೈಲು ಬರೆದ ಲೇಖನ

 

ಜಲವಳ್ಳಿ ವೆಂಕಟೇಶರಾವ್ ಎನ್ನುವ ಹೆಸರೇ ಯಕ್ಷಗಾನಕ್ಕೆ ಒಂದು ಮಿಂಚು. ನಾನು ಮೊದಲು ನೋಡಿದ ಅವರ ಪಾತ್ರ ಶನಿ. ಸುರತ್ಕಲ್ ಮೇಳ ಹೊಳ್ಳಾಕುಳಿಯಲ್ಲಿ ಟೆಂಟ್ ಹಾಕಿದ್ದಾಗ ಚಿಕ್ಕಮಕ್ಕಳಾಗಿದ್ದ ನಾವೆಲ್ಲಾ ಅವರ ಪ್ರವೇಶಕ್ಕೆ ಬೆಚ್ಚಿಬಿದ್ದದ್ದಿದೆ. ಸಪುಷ್ಟವಾದ ಹರವಾದ ಎದೆಯದೇಹಕ್ಕೆ ಬಿಗಿದ ವೇಷ, ಕಿರೀಟ ಮೀಸೆಯಗತ್ತು ಶನಿಗಾಗಿಯೇ ಹೇಳಿ ಮಾಡಿಸಿದಂತಿದ್ದವು. ಮತ್ತೆ ಇವರ ವೇಷ ನೋಡಿದ್ದು ತೆಂಕಿನಲ್ಲಿಯೇ.

ಇವರಿಗೆ ಶೇಣಿ ಪ್ರಶಸ್ತಿ ಸಿಕ್ಕಾಗ ಕೊರ್ಗಿ ವೆಂಕಟೇಶ ಉಪಾಧ್ಯಾಯರು ಬರೆದ ಅಭಿನಂದನಾ ಲೇಖನ ಇವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಮತ್ತೆ ಇವರ ಬಡಗಿನ ವೇಶ ನೋಡಲು ಸಿಕ್ಕಿದ್ದು ಚಿಟ್ಟಾಣಿಯವರೊಂದಿಗಿನ ಇವರ ಗಧಾಯುದ್ಧದ ಭೀಮನಾಗಿ. ಅದರಲ್ಲೂ ಸರೋವರದಲ್ಲಿ ಅಡಗಿದ್ದ ಸುಯೋಧನನ್ನು ಮೇಲೆಕ್ಕೆ ಎಬ್ಬಿಸುವ ಕಡತೋಕರ ಪದ್ಯ “ಎಲಾ ಎಲಾ ಛೀ, ನೃಪ ಕುಲ ಕುನ್ನಿ” ಎನ್ನುವ ಎತ್ತುಗಡೆಗೆ ರಂಗದದಲ್ಲಿ ಜಲವಳ್ಳಿಯವರಷ್ಟು ಪ್ರಭಾವಶಾಲಿಯಾಗಿ ಮಿಂಚಿದ ಭೀಮ ಮತ್ತೋರ್ವ ಸಿಗಲಾರರು.

ಇವರ ಗಧಾಯುದ್ಧದ ಭೀಮ ಚಿಟ್ಟಾಣಿಯವರಿಗಲ್ಲ, ಬಹುಶಃ ರನ್ನನ ಗಧಾಯುದ್ಧದ “ನೋರೊಳಗಿದ್ದು ಬೆಮರ್ತನುರಗಪತಾಕಂ” ಎನ್ನುವ ಪದ್ಯಕ್ಕೆ ಅನುಭಾವಿಯಾಗಿ ಪ್ರತಿಸ್ಪಂದನೆ ಸಿಗಬೇಕೆಂದರೆ ಅದು ಜಲವಳ್ಳಿಯವರ ಭೀಮನ ತರಹ ಇದ್ದಿರಬೇಕೆನ್ನುವಷ್ಟರಮಟ್ಟಿಗೆ ಪ್ರಭಾವಶಾಲಿಯಾಗಿರುತ್ತಿತ್ತು. ಯಕ್ಷಗಾನದಲ್ಲಿ ಇರುವ ಕಸರತ್ತಿಗಿಂತಾ ಅಲ್ಲಿರುವ ಗತ್ತಿನಲ್ಲಿಯೇ ಉಭಯತಿಟ್ಟುಗಳಲ್ಲಿ ಮೆರೆದ ಅಪರೂಪದ ಶರಾವತಿಯ ನದಿತೀರದ ಕೊಡುಗೆ ಜಲವಳ್ಳಿಯವರು.

ಯಕ್ಷಗಾನವೆನ್ನುವದು ದೃಶ್ಯಕಾವ್ಯವಾದುದರಿಂದ ಪ್ರೇಕ್ಷಕನೂ ಒಂದು ಪ್ರಮುಖವಾದ ಅಂಗವೆನ್ನುವದನ್ನು ಮರೆಯಬಾರದು. ಎದುರು ಕುಳಿತ ಪ್ರೇಕ್ಷಕರನ್ನು ಅನುಲಕ್ಷಿಸಿಯೇ ಅಭಿನಯವನ್ನು ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ಕಲಾಪ್ರಕಾರಗಳಲ್ಲಿ ಅಭಿನಯಿಸುವಾಗ ಪ್ರೇಕ್ಷಕ ಬಯಸುತ್ತಾನೆ ಎಂದು ಎಲ್ಲವನ್ನು ಮಾಡುವ ಅಪಾಯಕ್ಕೆ ಸಿಕ್ಕಿದರೆ ಅದು ಕಲಾಪ್ರಕಾರದ ಮೂಲ ನಿರ್ವಚನೆಯನ್ನು ಹಾಳುಮಾಡುವ ಅಪಾಯವಿರುತ್ತದೆ. ಇಲ್ಲಿ ಪ್ರೇಕ್ಷಕ ಮತ್ತು ನಟನ ಸಂಬಂಧವೆನ್ನುವದು ಗುರುವಿಗೆ ವಿದ್ಯಾರ್ಥಿಗಳಿರುವಂಥ ರೀತಿಯಲ್ಲಿರಬೇಕು. ಕಾವ್ಯದ ಅಂತಃಸತ್ವವನ್ನು ಅರಿತು ರಸಪಾಕದ ರಂಜನೆಯನ್ನು ಬಯಸಿಬಂದ ಪ್ರೇಕ್ಷಕರಿಗೆ ನೀಡುವ ಹೊಣೆಗಾರಿಕೆ ಕಲಾವಿದನ ಮೇಲೆ ಇರುತ್ತದೆ.

ರಂಗಪ್ರಪಂಚ ಎಂದರೆ ಅದು ‘ಲೋಕವೃತಾನುಕರಣ, ಭಾವಾನುಕೀರ್ತನ, ಲೋಕಚರಿತ, ಕೃತಾನುಕರಣ’ ಎನ್ನುವ ಹಿನ್ನೆಲೆಯಲ್ಲಿ ನೋಡುವ ಮತ್ತು ಅದನ್ನು ಪ್ರೇಕ್ಷಕರಿಗೆ ತಲುಪಿಸಿ ಅವರನ್ನು ಆ ಮಟ್ಟಕ್ಕೆ ಏರಿಸುವ ಜವಾಬುದಾರಿ ಕಲಾವಿದನಿಗೆ ಇರುತ್ತದೆ. ಇದನ್ನು ಅರಿಯಬೇಕೆಂದರೆ ಆ ಕುರಿತು ಸಾಕಷ್ಟು ಶಿಕ್ಷಣ ಮತ್ತು ಸಂಸ್ಕಾರ ಎನ್ನುವುದಿರಬೇಕೆಂದು ತಿಳಿದುಕೊಂಡರೆ ಜಲವಳ್ಳಿಯವರಲ್ಲಿ ಅದು ಅಭಿಜಾತವಾಗಿ ಬಂದಿತ್ತು ಎನ್ನುವದನ್ನು ಅವರ ಯಾವುದೇ ವೇಷವನ್ನು ಗಮನಿಸಿದಾಗ ತಿಳಿಯುತ್ತಿತ್ತು. ಅವರೇ ಒಂದೆಡೆ ವಿಠಲ ಬಂಡಾರಿಯವರೊಟ್ಟಿಗಿನ ಸಂದರ್ಶನದಲ್ಲಿ ಸಂದರ್ಶನದಲ್ಲಿ ಹೇಳಿಕೊಂಡಂತೆ “ಕೂಲಿಕೆಲಸದಲ್ಲಿ ದಿನಕ್ಕೆ ೫೦ ಪೈಸೆ ಸಿಗುತ್ತಿತ್ತು, ಆದರೆ ಆಟದಲ್ಲಿ ವೇಷಹಾಕಿದರೆ ಮೂರು ರೂಪಾಯಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ರಂಗಕ್ಕೆ ತಾನು ಬಂದೆ” ಎಂದಿದ್ದಾರೆ. ಅವರ ಸಮಗ್ರ ಬದುಕಿನ ಮೂಲವನ್ನು ಗಮನಿಸಿದಾಗ ಅದು ಅವರ ವಿನಯವಂತಿಕೆ ಮತ್ತು ತನ್ನ ಸಮಕಾಲಿನ ಕಲಾವಿದರ ಕುರಿತಾದ ಗೌರವಕ್ಕಾಗಿ ಹಾಗೆ ಹೇಳಿದ್ದಾರೆನ್ನೆಬೇಕೆ ಹೊರತೂ ಪೂರ್ಣ ಸತ್ಯವಲ್ಲ.

ಅವರ ಹೃದಯದ ಆಳದಲ್ಲಿದ್ದಿದ್ದು ಯಕ್ಷಗಾನದ ಕಲೆಯ ಕುರಿತಾದ ಅಪರಿಮಿತ ಪ್ರೀತಿಯಾಗಿತ್ತು. ಆ ಕಾಲದಲ್ಲಿ ಮೆರೆದ ಮೂಡ್ಕಣಿ ನಾರಾಯಣ ಹೆಗಡೆ, ಕೆರಮನೆ ಶಿವರಾಮ ಹೆಗಡೆ, ಕೊಂಡದಕುಳಿ ಸಹೋದರರು, ಮಹಾಬಲ ಹೆಗಡೆಯವರನ್ನು ನೋಡಿ ಮತ್ತು ಶರಾವತಿಯ ಎಡದಂಡೆಯ ಮೇಲಿನ ಮಣ್ಣಿಗಿರುವ ಸಹಜವಾದ ಬಯಲಾಟದ ಕುರಿತಾದ ಸೆಳೆತ ಅವರನ್ನು ನಟನ ಕುರಿತಾಗಿರುವ ಶಾಸ್ತ್ರಕ್ಕೊಂದು ಉಪಮೆಯಾಗಿ ಬೆಳೆಸಿತು ಎನ್ನಬಹುದು.

‘ರತಿ ಕಲ್ಯಾಣ’ದಲ್ಲಿ ಅರ್ಜುನನ ಪಾತ್ರ ಮಾಡುವ ಕಲಾವಿದರೋರ್ವರು ಬಾರದೇ ಇರುವ ಕಾರಣಕ್ಕೆ ಆ ಪಾತ್ರವನ್ನು ಮಾಡುವ ಅನಿವಾರ್ಯತೆಯಿಂದಾಗಿ ಯಕ್ಷಗಾನ ಪ್ರಪಂಚಕ್ಕೆ ಬಂದ ಜಲವಳ್ಳಿಯವರು ಮುಂದೆ ಸತ್ಯಹೆಗಡೆಯವರು ಗುಂಡಬಾಳ ಮೇಳಕ್ಕೆ ಪರಿಚಯಿಸಿದ್ದು ಸ್ತ್ರೀ ವೇಷದಲ್ಲಿ. ಇಲ್ಲಿಯೂ ಸಹ ಇದು ಜಲವಳ್ಳಿಯವರ ಆಯ್ಕೆ ಆಗಿರಲಿಲ್ಲ. ಆ ಕಾಲದಲ್ಲಿ ಸ್ತ್ರೀ ವೇಷದ ಕೊರತೆಯಿರುವ ಕಾರಣಕ್ಕೆ ಮೇಳದ ಯಜಮಾನರ ಒತ್ತಾಸೆ ಇದಕ್ಕೆ ಕಾರಣ. ಆ ಕಾಲದ ಯಕ್ಷಗಾನ ಕಲಾವಿದರಿಗೆ ಇರುವ ಸಹಜವಾದ ಹೆರಳು ಹಾಕಿಕೊಳ್ಳುವಷ್ಟಿರುವ ಉದ್ದ ಕೂದಲು, ಬಡತನದ ಹಿನ್ನೆಲೆಯಿದ್ದರೂ ಸೊಂಪಾಗಿದ್ದ ಸುಂದರ ಕಾಯ ಮತ್ತು ಎಲ್ಲರೊಂದಿಗೆ ಕರಕರೆಯಿಲ್ಲದೇ ಬೆರೆಯುವ ಶಾಂತಗುಣ ಇವರಲ್ಲಿ ಸ್ತ್ರೀಪಾತ್ರದ ಲಕ್ಷಣವಿರುವದನ್ನು ಸತ್ಯಹೆಗಡೆಯವರು ಕಂಡಿರಬೇಕು.

ಹಿರಿಯರಾದ ಮತ್ತು ಉತ್ತರ ಕನ್ನಡ ಯಕ್ಷಗಾನ ಕಲಾವಿದರ ಕುರಿತಾಗಿ ನಿರ್ದಿಷ್ಟವಾಗಿ ಹೇಳಬಲ್ಲ ಮೇಲಿನ ಗಂಟಿಗೆ ನಾರಾಯಣ ಭಟ್ಟರು ಹೇಳುವಂತೆ ಜಲವಳ್ಳಿಯವರ ಸ್ತ್ರೀ ವೇಷ ಆ ಕಾಲದಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಿತ್ತಂತೆ. ಪೀಠಿಕೆ ಸ್ತ್ರೀ ವೇಷ, ಸಖಿ ವೇಷ ನಂತರ ತನ್ನ ಸಹಜ ಅಭಿನಯಗಳಿಂದ ಮುಖ್ಯವೇಷಕ್ಕೆ ಬಡ್ತಿಪಡೆದ ಇವರ ಅಜೋಮುಖಿ, ವಿಷಯೆ, ಮೇನಕೆ, ಮೋಹಿನಿ ಮುಂತಾದ ಲಾಸ್ಯ ಶೃಂಗಾರ ಪಾತ್ರಗಳಲ್ಲಿ ಬಹು ಪ್ರಸಿದ್ಧಿ ಪಡೆದರಂತೆ.

ಜಲವಳ್ಳಿಯವರು ಯಾವುದೇ ಪಾತ್ರ ವಹಿಸಲಿ ಅದನ್ನು ಸಹಜವಾಗಿ ನಿರ್ವಹಿಸುತ್ತಿದ್ದರು ಎನ್ನುವದಕ್ಕೆ ಡಾ. ಜಿ. ಎಸ್. ಭಟ್ಟರ ಲೇಖನದಲ್ಲಿ ಒಂದು ಮಾತು ಬರುತ್ತದೆ. “ಗುಂಡಬಾಳಾದಲ್ಲೊಮ್ಮೆ ಇವರು ಸ್ತ್ರೀವೇಷ ಹಾಕಿಕೊಂಡು ಮೂರೂರು ವಿಷ್ಣು ಭಟ್ಟರಜೊತೆ ಗಂಡಹೆಂಡಿರಂತೆ ಆಟಕ್ಕಿಂತ ಮೊದಲು ಹೊರಗೆ ದೇವಸ್ಥಾನದಲ್ಲಿ ಎಲ್ಲಕಡೆ ಸುತ್ತಾಡಿಕೊಂಡ ಬಂದ” ಉದಾಹರಣೆಯನ್ನು ಅವರು ಕೊಡುತ್ತಾರೆ. ಆದರೆ ಅದೇ ಅವರು ಮಹಾಬಲ ಹೆಗಡೆಯವರ ಜೊತೆ ರೇಣುಕೆಯ ಪಾತ್ರ ಮಾಡುವಾಗ ಈ ಚಲ್ಲುತನ ತೋರದೇ ಅವರಿಗೆ ಅನುಕೂಲೆಯಾಗಿ ಅಭಿನಯಿಸುತ್ತಾರೆ. ಶಿವರಾಮ ಹೆಗಡೆಯವರ ಜೊತೆಯೂ ಕೂಡಾ ಹೀಗೆ ಇರುತ್ತಿದ್ದರು. ಈ ಭಾವವಿರುವದರಿಂದಲೇ ಅವರು ಶೇಣಿಯವರ ಜೊತೆ ಅವರಿಗೆ ಎದುರು ಪಾತ್ರಧಾರಿಯಾಗಿ ಸೈ ಎನಿಸಿಕೊಳ್ಳಲಿಕ್ಕೆ ಕಾರಣ. ಇವರಲ್ಲಿ ತನಗೆ ಕಲೆಯ ಕುರಿತಾಗಿ ಗೊತ್ತಿಲ್ಲ; ಗೊತ್ತಿದ್ದವರಿಂದ ಕಲಿಯಬೇಕೆನ್ನುವ ತುಡಿತವಿತ್ತು. ಯಕ್ಷಗಾನವನ್ನು ಆಂತರ್ಯದಿಂದ ಅವರು ಪ್ರೀತಿಸುತ್ತಿದ್ದರು ಹಾಗೂ ಈ ಕಲೆಗೆ ಅವರಲ್ಲಿ ಅರ್ಪಣಾ ಮನೋಭಾವವನ್ನು ತೋರಿಸುತ್ತದೆ.

ದ್ರೌಪದಿ ಪ್ರತಾಪದ ದ್ರೌಪದಿ, ಕೀಚಕ ವಧೆಯ ಸೈರಂದ್ರಿ, ವಿಶ್ವಾಮಿತ್ರ ಮೇನಕೆಯ ಮೇನಕೆ, ಚಂದ್ರಹಾಸ ಚರಿತ್ರೆಯ ವಿಷಯೆ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ ಹೀಗೆ ವಿವಿಧ ಭಾವದ ವಿವಿಧ ಆಯಾಮಗಳುಳ್ಳ ಜಲವಳ್ಳಿಯವರ ಸ್ತ್ರೀವೇಷ ಆ ಕಾಲದಲ್ಲಿ ಜನಮೆಚ್ಚಿಕೊಂಡ ಪಾತ್ರವಾಗಿತ್ತು. ಕೋಲು ಮುಖ, ನೀಳ ಕಾಯ, ಸ್ವಭಾವತಃ ವಿನೋದದ ಪ್ರಕೃತಿ, ನಟನಾಗುವಲ್ಲಿ ಇರಬೇಕಾದ ಲವಲವಿಕೆ ನಾಟಕದ ಉಪಕರಣಗಳನ್ನು ಬಳಸುವ ಚತುರತೆ, ಪ್ರದರ್ಶನದ ಕುರಿತಾದ ಸ್ಪಷ್ಟ ಕಲ್ಪನೆ ಮತ್ತು ವಹಿಸಿಕೊಂಡ ಕೆಲಸದ ಬಗೆಗೆ ದಕ್ಷತೆ ಇವರಿಗಿತ್ತು.

ಜಲವಳ್ಳಿಯವರು ಮೇಳದ ಯಜಮಾನ ಬಯಸುವಂತಹ ಕಲಾವಿದರಾಗಿದ್ದರು. ಸ್ತ್ರೀ ಪಾತ್ರಕ್ಕೆಂದು ನಿಯಮಿತವಾಗಿದ್ದರೂ ಆ ಪಾತ್ರ ಮುಗಿದ ಮೇಲೆ ಮಲಗಿಕೊಳ್ಳುವ ಜಾಯಮಾನದವರಾಗಿರಲಿಲ್ಲ. ಇಡೀ ರಾತ್ರಿಯ ಆಟದಲ್ಲಿ ಯಾರಾದರೂ ಬರದಿದ್ದರೆ ಆಗ ಅವರ ಪಾತ್ರಗಳನ್ನೂ ಮಾಡುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ಗಧಾಯುದ್ಧದ ಭೀಮನ ಪಾತ್ರವನ್ನು ಮಾಡುವವರು ಬರದೇ ಇದ್ದ ಒಂದು ದಿನ ಯಜಮಾನರಾದ ಸತ್ಯಹೆಗಡೆಯವರು ಕೇಳಿಕೊಂಡಂತೆ ಇವರ ಭೀಮನ ಪಾತ್ರವನ್ನು ಮಾಡು ಎಂದರಂತೆ. ಅದೂ ಚಿಟ್ಟಾಣಿಯವರ ಎದುರು. ಇವರು ಅದಕ್ಕೂ ಸರಿ ಎಂದವರೇ ಭೀಮನ ಪಾತ್ರವನ್ನು ಅಭಿನಯಿಸಿ ಜೈಸಿಯೇ ಬಿಟ್ಟರು. ಅಲ್ಲಲ್ಲ ರನ್ನನ ಗಧಾ ಯುದ್ಧಕ್ಕೆ ಮೂರ್ತವಾಗಿ ಓರ್ವ ಭೀಮ ಸಿಕ್ಕೇ ಬಿಟ್ಟ.

ಇಲ್ಲಿ ಪ್ರೇಕ್ಷಕ ಮತ್ತು ನಟನ ಸಂಬಂಧವೆನ್ನುವದು ಗುರುವಿಗೆ ವಿದ್ಯಾರ್ಥಿಗಳಿರುವಂಥ ರೀತಿಯಲ್ಲಿರಬೇಕು. ಕಾವ್ಯದ ಅಂತಃಸತ್ವವನ್ನು ಅರಿತು ರಸಪಾಕದ ರಂಜನೆಯನ್ನು ಬಯಸಿಬಂದ ಪ್ರೇಕ್ಷಕರಿಗೆ ನೀಡುವ ಹೊಣೆಗಾರಿಕೆ ಕಲಾವಿದನ ಮೇಲೆ ಇರುತ್ತದೆ.

ಇಲ್ಲಿ ಭರತ ಮುನಿ ನಾಟ್ಯಶಾಸ್ತ್ರದಲ್ಲಿ ನಟನ ಕುರಿತಾಗಿ ಹೇಳುವ ವಾಸ್ತವಿಕತೆ-ಪ್ರಕೃತಿಯನ್ನು ನೆನಪಿಸಿಕೊಳ್ಳಬಹುದು. ಈ ವಾಸ್ತವಿಕ-ಪ್ರಕೃತಿಯನ್ನು ಅನುರೂಪ, ವಿರೂಪ ಮತ್ತು ರೂಪಾನುಸಾರಿ ಈ ಮೂರು ರೀತಿಯಲ್ಲಿ ತೋರಿಸಬೇಕು. ಪುರುಷರು ಪುರುಷ ಪಾತ್ರವನ್ನು ವಯಸ್ಕರು ವಯಸ್ಕರ ಪಾತ್ರವನ್ನು ರೂಪಿಸುವದು ಅನುರೂಪ. ಮುದುಕನು ಮಗುವಿನ ಪಾತ್ರವನ್ನು ರೂಪಿಸುವದು ವಿರೂಪ; ಗಂಡಸು ಹೆಣ್ಣಿನ ಹೆಣ್ಣು ಗಂಡಿನ ಪಾತ್ರವನ್ನು ನಿರ್ವಹಿಸುವದು ರೂಪಾನುಸಾರಿ, ಎಂದರೆ ಬಾಹ್ಯರೂಪದ ಅನುಕರಣೆ ಮಾತ್ರ. ನಾಟ್ಯಶಾಸ್ತ್ರದ ಕುರಿತು ಯಾವುದೇ ಅಧ್ಯಯನ ಮಾಡದ ಜಲವಳ್ಳಿಯವರ ಪಾತ್ರನಿರ್ವಹಣೆಯ ಇತಿಹಾಸವನ್ನು ತೆಗೆದುಕೊಂಡರೆ ಅವರು ಈ ಮೂರೂ ವಿಭಾಗದಲ್ಲಿಯೂ ಯಶಸ್ವಿಯಾಗಿದ್ದರು ಎನ್ನುವದನ್ನು ಗಮನಿಸಬೇಕು.

ಸರಿ, ಚಿಟ್ಟಾಣಿಯವರೊಟ್ಟಿಗಿನ ಅಂದಿನ ಭೀಮ ಯಶಸ್ವಿಯಾಗಿದ್ದೇ ನಂತರ ಅವರು ಪ್ರತಿನಾಯಕನ ಪಾತ್ರಕ್ಕೆ ಅದರಲ್ಲೂ ಧೀರದತ್ತ ಪಾತ್ರಕ್ಕೆ ಬಹುವಾದ ಪ್ರಸಿದ್ಧಿಯನ್ನು ಪಡೆದರು. ಅವರಿಗೆ ಭೀಮನಂತೆ ಪ್ರಸಿದ್ಧಿ ನೀಡಿದ ಮತ್ತೊಂದು ಪಾತ್ರ ಚಿತ್ರಾಕ್ಷಿಕಲ್ಯಾಣದ ರಕ್ತಜಂಘನ ಪಾತ್ರ. ಈ ಪಾತ್ರವೂ ಅವರಿಗೆ ಆಕಸ್ಮಿಕವಾಗಿ ದೊರೆತದ್ದೆ. ಹಳದೀಪುರದ ಗಜಾನನ ಭಂಡಾರಿ ಸ್ತ್ರೀ ವೇಷಕ್ಕೆ ಬಂದಮೇಲೆ ಚಿಟ್ಟಾಣಿಯವರಿಗೆ ಅದುತನಕ ಚಿತ್ರಾಕ್ಷಿಯಾಗಿ ಎದುರು ಪಾತ್ರ ಮಾಡಿದ ಈ ಜನಪ್ರಿಯ ಜೋಡಿ ಬೇರ್ಪಟ್ಟಿತು. ಕಡತೋಕ ಕೃಷ್ಣ ಭಾಗವತರ ಆಯ್ಕೆ ಇದು. ಇವರಿಗೆ ರಕ್ತಜಂಘಾಸುರನ ಪಾತ್ರ ಮಾಡಲು ತಿಳಿಸಿದರು. ಅಲ್ಲಿಂದ ಜೋಡಿ ಪಾತ್ರಮಾಡುವ ಜಲವಳ್ಳಿಯವರು ಪ್ರತಿನಾಯಕನ ಖಳ ಪಾತ್ರಗಳ ಮೂಲಕ ಹೆಸರುಗಳಿಸಿದರು. ಇದು ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತು ಎಂದರೆ ಸ್ತ್ರೀ ಪಾತ್ರದ ಜಲವಳ್ಳಿಯವರು ಜನರ ಮನಸ್ಸಿನಿಂದ ಮರೆತೇ ಹೋದರು. ಲಾಸ್ಯದ ನಾಜೂಕಿನ ಲಯಗಾರಿಕೆಯನ್ನು ಮೆರೆಸುತ್ತಿರುವ ಸ್ತ್ರೀ ಪಾತ್ರದಿಂದ ವೆಂಕಟೇಶ್ವರ ರಾವ್ ಎನ್ನುವ ಗಡಸು ಕಂಠದ, ಭೀಮಕಾಯದ, ಗತ್ತಿನ ರೂಪಾಂತರ ಹೊಂದಿದ ಪುರುಷ ವೇಷದ ಪ್ರವೇಶ ಅಂದಿನಿಂದಾಯಿತು ಎನ್ನಬಹುದು.

ಇನ್ನು ಜಲವಳ್ಳಿಯವರ ಕಲಾ ಬದುಕಿನಲ್ಲಿ ಅವರ ತೆಂಕಿನ ತಿರುಗಾಟವನ್ನು ಮರೆಯಲಿಕ್ಕೇ ಸಾಧ್ಯವಿಲ್ಲ. ಮಂಕಿಯಲ್ಲಿ ಇವರ ಶನಿಯ ಪಾತ್ರವನ್ನು ನೋಡಿದ ಕಸ್ತೂರಿ ವರದರಾಜ ಪೈಗಳು ಇವರನ್ನು ತಮ್ಮ ಸುರತ್ಕಲ್ ಮೇಳಕ್ಕೆ ಕರೆದರು. ಅಲ್ಲಿ ಪ್ರಥಮ ವರುಷವನ್ನು ಯಶಸ್ವಿಯಾಗಿ ಕಳೆದರು. ಮಾರನೆಯ ವರ್ಷ ಶೇಣಿ ಗೋಪಾಲಕೃಷ್ಣ ಭಟ್ಟರು ಬರುತ್ತಾರೆ ಎಂದಾಗ ಇವರಿಗೆ ದಿಗಿಲಾಗಿತ್ತಂತೆ. ಆದರೆ ಅವರ ವಿಕ್ರಮನ ಎದುರು ಶನಿ ಮೊದಲ ಪ್ರದರ್ಶನದಲ್ಲಿಯೇ ಯಶಸ್ಸುಗಳಿಸಿದ್ದು ಸಹ ಅಷ್ಟೇ ಸತ್ಯ. ಶೇಣಿಯವರೆ ಎದುರು ಎಂಥವರೂ ವೇಷ ಹಾಕುವದಿರಲಿ ಎದುರು ಕಾಣಿಸಲೂ ಹೆದರುವ ಕಾಲ ಅದು. ಅವರೆಂದರೆ ಯಕ್ಷಗಾನದ ವಾಲಿ ಎನ್ನುವ ಪ್ರತೀತಿಯಿದೆ. ಎದುರಾಳಿಯ ಅರ್ಧ ಸತ್ವವನ್ನೇ ತನ್ನ ಧೀಮಂತ ನಿಲುವಿನಿಂದ ಸೆಳೆದು ವಿಜೃಂಭಿಸುವ ಕಲಾವಿದ ಅವರು. ಆ ಮಹಾಶಕ್ತಿಯ ಎದುರು ಅವರ ಬಾಯಿಯಿಂದಲೇ ತನ್ನ ಎದುರು ವೇಷ ಜಲವಳ್ಳಿಯವರದಾಗಬೇಕೆಂಬ ಮಟ್ಟಿಗೆ ಬೆಳೆದರು ಅವರು.

ವಿಕ್ರಮ ಚರಿತ್ರೆ ಶನಿಮಹಾತ್ಮೆಯಾಗಿ ಬದಲಾವಣೆಗೊಂಡ ಪರ್ವ ಇದು. ಸೂಕ್ಷ್ಮವಾಗಿ ಅವಲೋಕಿಸಿದಾಗ ಇದರ ಹಿಂದೆ ಜಲವಳ್ಳಿಯವರ ಪಾತ್ರದ ನಿರೂಪಣೆಯ ಜೊತೆಗೆ ಇವರ ಬಣ್ಣಗಾರಿಕೆ ಮತ್ತು ಆಳವಾಗಿ ಅಭಿನಯದಲ್ಲಿ ಬಳಸುವ ಲೋಕಧರ್ಮೀ ಲಕ್ಷಣಗಳೂ ಕಾರಣವೆನ್ನಬಹುದು. ಬಣ್ಣಗಾರಿಕೆಯಲ್ಲಿ ಮತ್ತು ಮುಖವರ್ಣಿಕೆಯಲ್ಲಿ ಅವರು ತೋರುತ್ತಿದ್ದ ಅತಿಯಾದ ಮಹತ್ವ; ಅದು ಪುರುಷವೇಷವಾಗಲೀ ಸ್ತ್ರೀ ವೇಷವಾಗಲೀ; ಆಯಾ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿರುತ್ತಿತ್ತು.

ಸ್ವಭಾವತ ತೆಂಕು ತಿಟ್ಟು ಬಣ್ಣಗಳ ಕುರಿತು ತುಂಬಾ ಮಹತ್ವವನ್ನು ಕೊಡುತ್ತದೆ. ಬಡಗು ಬಣ್ಣಗಳಿಗಿಂತ ಭಾವ ಪ್ರಧಾನವಾಗಿರುತ್ತದೆ. ಇಲ್ಲಿ ಜಲವಳ್ಳಿಯವರು ಬಡಗಿನ ಭಾವವನ್ನು ತೆಂಕಿನ ಬಣ್ಣಗಾರಿಕೆಯನ್ನು ಒಂದು ಹದದಲ್ಲಿ ಬಳಸಿ ಶನಿ, ಭೀಮ ರಕ್ತಜಂಘಾಸುರ, ರಾವಣ, ದುಷ್ಟ ಬುದ್ಧಿ, ಕಂಸ ಹೀಗೆ ಪ್ರತಿನಾಯಕನ ಪಾತ್ರಕ್ಕೆ ಒಂದು ಹೊಸವೈಭವವನ್ನು ತಂದುಕೊಟ್ಟರು. ಇವರ ಬಣ್ಣಗಾರಿಕೆ ಕೆರೆಮನೆ ಶಿವರಾಮಹೆಗಡೆಯವರಿಗೂ ತುಂಬಾ ಇಷ್ಟವಾಗಿತ್ತು. ಅವರಿಗೆ ತನ್ನ ಹತ್ತಿರ ಮೀಸೆಯನ್ನು ಹಚ್ಚಿಕೊಳ್ಳುವದು ಎಂದರೆ ಇಷ್ಟವಾಗಿತ್ತು ಎಂದು ಅವರು ವಿಠಲ ಭಂಡಾರಿಯವರ ಸಂದರ್ಶನದಲ್ಲಿ ಹೇಳಿಕೊಂಡಿದ್ದನ್ನು ಗಮನಿಸಬಹುದಾಗಿದೆ.

ಉತ್ತರ ಕನ್ನಡದ ತಿಟ್ಟಿನಲ್ಲಿ ಮೂರೂರು ದೇವರು ಹೆಗಡೆಯವರು ನಾಟಕ ರಂಗದಿಂದ ಬಂದು ಯಕ್ಷಗಾನದ ಆಹಾರ್ಯಕ್ಕೇ ಒಂದು ಹೊಸ ಆಯಾಮವನ್ನು ನೀಡಿ ಜನಪ್ರಿಯರಾಗಿದ್ದರು. ಅವರ ನಂತರ ಮತ್ತೆ ಆ ಎತ್ತರದ ಕಲಾವಿದರಾಗಿ ಕಾಣಿಸಿಕೊಂಡವರು ಜಲವಳ್ಳಿಯವರು ಎನ್ನಬಹುದು.
ಯಕ್ಷಗಾನದಲ್ಲಿ ಕಲಾವಿದ ಯಶಸ್ವಿಯಾಗಲು ಭಾಗವತರೂ ಬಲು ಮುಖ್ಯ. ಕಲಾವಿದನ ಭಾವನೆಗಳು ರಂಗದಲ್ಲಿ ಪುಟಿದೇಳಬೇಕಾದರೆ ಕಲಾವಿದನ ಮನಸ್ಸನ್ನರಿಯುವ ಸೂಕ್ಷ್ಮತೆ ಭಾಗವತರು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಡತೋಕ ಮಂಜುನಾಥ ಭಾಗವತರ ಭಾಗವತಿಕೆ ಜಲವಳ್ಳಿಯವರ ಕಲಾ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವರ ನಂತರ ಕಾಳಿಂಗ ನಾವುಡರ ಭಾಗವತಿಕೆಯಲ್ಲಿ ಜಲವಳ್ಳಿಯವರು ಆನಂದಪಟ್ಟರು. ಆ ಕಾಲದಲ್ಲಿ ಕಾಳಿಂಗ ನಾವುಡ, ಚಿಟ್ಟಾಣಿ, ಜಲವಳ್ಳಿಯವರ ಜೋಡಿ ರಂಗವನ್ನು ಆಳಿತ್ತು.

ಭಾಷಾ ಶುದ್ಧಿ ಜಲವಳ್ಳಿಯವರ ಪಾತ್ರಕ್ಕೊಂದು ಹೊಸಮೆರಗು ತಂದುಕೊಳ್ಳಲು ಕಾರಣ. ಸ್ವತಃ ವಿದ್ಯಾಭ್ಯಾಸ ಮಾಡಿಲ್ಲ, ಯಾವ ಶಾಲೆಗೂ ಹೋಗಿಲ್ಲ ಎಂದು ಇವರ ಕುರಿತು ಪ್ರಚಲಿತವುಂಟು. ಅವರ ಸ್ತ್ರೀ ವೇಷದ ಕುರಿತು ನಾನು ನೋಡಿಲ್ಲ. ಅಭಿನಯ ಪ್ರಧಾನವಾದ ಸ್ತ್ರೀ ವೇಷ ಯಶಸ್ವಿಯಾಗಲು ಅಂಗ-ಉಪಾಂಗಗಳ ಸಮರ್ಥ ಬಳಕೆ ಅತ್ಯಂತ ಅಗತ್ಯ. ಸಮ್ಮತಿ-ಅಸಮ್ಮತಿ, ಮೆಚ್ಚುಗೆ-ತಿರಸ್ಕಾರ, ಸಿಟ್ಟು-ದ್ವೇಷ ಮೊದಲಾದ ಭಾವಗಳನ್ನು ಪ್ರಕಟಿಸಬೇಕಾದಾಗ ಅಂಗಗಳಾದ ತಲೆ-ಕೈ-ಕಾಲು-ಎದೆ-ಪಕ್ಕೆ-ಸೊಂಟ ಇವುಗಳನ್ನು ಉಪಾಂಗಗಳಾದ ಕಣ್ಣು-ಹುಬ್ಬು-ಮೂಗು-ತುಟಿ-ಗಲ್ಲ-ಗದ್ದ ಇವುಗಳ ಮೂಲಕ ಭಾವಗಳನ್ನು ಅಭಿವ್ಯಕ್ತಿಪಡಿಸಬೇಕಾಗುತ್ತದೆ.

ಅವರ ಸ್ತ್ರೀ ವೇಷದ ಕುರಿತು ಅನೇಕ ಹಿರಿಯರನ್ನು ವಿಚಾರಿಸಿದಾಗ ಮತ್ತು ಚಿಟ್ಟಾಣಿಯವರೊಂದಿಗಿನ ಅವರ ಯಶಸ್ಸಿನ ಜೋಡಿಪಾತ್ರಗಳ ವಿಷಯಗಳನ್ನು ಕಲೆಹಾಕುವಾಗ ಜನ್ಮ ಸಹಜವಾದ ಅಭಿನಯ ಅವರಿಗೆ ಸಿದ್ಧಿಸಿತ್ತು ಎನ್ನುವದನ್ನು ಊಹಿಸಬಹುದಾಗಿದೆ. ಇದೇ ಸಂದರ್ಭಗಳಲ್ಲಿ ನಮಗೆಲ್ಲ ಪರಿಚಿತವಾದ ಅವರ ಪುರುಷವೇಷಗಳನ್ನು ಗಮನಿಸುವುದಾದರೆ ವಾಚಿಕಾಭಿನಯದಲ್ಲಿ ಅವರು ರಂಗವನ್ನು ಆಳಿದ್ದರು ಎನ್ನುವದು ಸ್ಪಷ್ಟ. ಸ್ವರದ ಏರಿಳಿತ, ಸರಳವಾದ ಶಬ್ಧಪ್ರಯೋಗ, ಗಂಭೀರವಾದ ನಿಲುವು, ಅಲ್ಪಪ್ರಾಣ ಮತ್ತು ಮಹಾಪ್ರಾಣಗಳನ್ನು ಯುಕ್ತವಾಗಿ ಬಳಸುವಿಕೆ ಜಲವಳ್ಳಿಯವರಿಗೆ ಕರಗತವಾಗಿತ್ತು.

ತೆಂಕುತಿಟ್ಟಿನಲ್ಲಿ ವಾಚಿಕ ಅದರಲ್ಲೂ ಭಾಷಾ ಶುದ್ಧತೆ ತುಂಬಾ ಪ್ರಾಮುಖ್ಯ. ಸ್ವಲ್ಪ ತೊದಲು ನುಡಿ ಆಡಿದರೂ ರಂಗದಲ್ಲಿ ಅಂಥವರನ್ನು ಪ್ರೇಕ್ಷಕ ಒಪ್ಪಲಾರ. ಅದೂ ಶೇಣಿ ಸಾಮಗರಂಥವರ ಎದುರು ಕಾಣಿಸಬೇಕಾದರೆ ಈ ಭಾಷಾ ಜ್ಞಾನ ಅತ್ಯಗತ್ಯ. ಇಲ್ಲಿ ಜಲವಳ್ಳಿಯವರು ಗೆದ್ದದ್ದು ಮಾತ್ರವಲ್ಲ, ಸೈ ಸೈ ಎನಿಸಿಕೊಂಡಿದ್ದಾರೆ. ಈ ಕರಿತು ಅವರ ಸಮಕಾಲೀನ ತೆಂಕಿನ ಕಲಾವಿದರನ್ನು ಮಾತಾಡಿಸಿದಾಗ ಅವರೆಲ್ಲ ಜಲವಳ್ಳಿಯವರ ನಿರಂತರ ಅಧ್ಯಯನದ ಕುರಿತು ವಿವರವಾಗಿ ಹೇಳುತ್ತಾರೆ.

ಹಿರಿಯ ಕಲಾವಿದರ ಹತ್ತಿರ ಅವರಿಗೆ ಬಿಡುವಾದಾಗಲೆಲ್ಲಾ ಕಥೆ, ವಿಷಯ, ಪುರಾಣ, ಸಂದರ್ಭಗಳ ಸೋದಾರಣೆಯನ್ನು ಬಳಸುವಿಕೆ ಹೀಗೆ ಹಲವನ್ನು ಕೇಳಿತಿಳಿದುಕೊಳ್ಳುತ್ತಿದ್ದರೆನ್ನುತ್ತಾರೆ. ರಂಗದ ಮೇಲಿರಲಿ, ರಂಗದ ಹಿಂದಿರಲಿ ಅವರ ಕಿವಿ ವಿಷಯಗಳ ತಿಳಿಯುವಿಕೆಗಾಗಿ ಹಾತೊರೆಯುತ್ತಿತ್ತಂತೆ. ಇದು ಅವರ ಕುರಿತು ಅಭಿಮಾನದಿಂದ ಆಡುವ ಮಾತುಗಳು. ದಕ್ಷಿಣೋತ್ತರ ಜಿಲ್ಲೆಯ ಎಲ್ಲಾ ಯಕ್ಷಗಾನ ಕಲಾವಿದರ ಸಂಗಡ ಸಮರ್ಥವಾಗಿ ಎದುರು ಪಾತ್ರ ಮಾಡಿ ಅವರು ರೈಸಿದ್ದರು. ಶಂಭುಹೆಗಡೆಯವರ ಕಾರ್ತ್ಯವೀರ್ಯನಿಗೆ ಉಡುಪಿಯಲ್ಲಿ ರಾವಣನನ್ನು ಮಾಡಿ ರಂಗದಲ್ಲಿ ಮೆರೆದಿದ್ದರು.

ರಂಗದ ಮೇಲಿನ ಧೀರದತ್ತ ಪಾತ್ರಕ್ಕೆ ಎಷ್ಟು ಪ್ರಭಾವಶಾಲಿಯೋ ರಂಗದ ಹೊರಗೆ ಅಷ್ಟೇ ಸರಳವ್ಯಕ್ತಿ ಇವರು. “ಆರಾಮೇನ್ರೋ” ಎನ್ನುತ್ತಾ ನಗುಮುಖದ ಇವರ ಸ್ಪಟಿಕ ನಗು ಇಂದಿಗೂ ಎದುರು ಬರುತ್ತದೆ. ಕಲೆಯೇ ಕಾಲಕ್ಕಣುಗುಣವಾಗಿ ಸೃಷ್ಠಿಸಿಕೊಂಡ ಕಲಾವಿದ ಜಲವಳ್ಳಿಯವರು.