ಭಾರತದಲ್ಲೂ, ನಮ್ಮ ಪೌರಾಣಿಕ ಕತೆಗಳ ವೀರರು ಹಲವಾರು ಲೋಕಗಳ ಸಾಹಸ ಯಾತ್ರೆ ಮಾಡುತ್ತಾರೆ. ಹನುಮಂತ, ಸೂರ್ಯನನ್ನೇ ಮುಟ್ಟಲೆತ್ನಿಸುತ್ತಾನೆ, ಏಳೇಳು ಶರಧಿಗಳನ್ನು ಕೇವಲ ಕಾಲುವೆಯಂತೆ ದಾಟುತ್ತಾನೆ. ನಾರದನಂತೂ – ಅದರಲ್ಲೂ ನಾನು ಸಣ್ಣವನಿದ್ದಾಗ ನೋಡುತ್ತಿದ್ದ ತೆಲುಗು ಸಿನೆಮಾಗಳ ನಾರದ – ಮೋಡಗಳ ಮಧ್ಯೆ ತೇಲುತ್ತಾ ಭೂಲೋಕ, ಬ್ರಹ್ಮಲೋಕ, ಸ್ವರ್ಗ, ನರಕ, ವೈಕುಂಠ, ಕೈಲಾಸಗಳ ಮಧ್ಯೆ ಸುತ್ತುತ್ತಲೇ ಇರುತ್ತಾನೆ. ಆದರೆ, ಗೊರೂರು ರಾಮಸ್ವಾಮಿ ಅಯ್ಯಂಗಾರರ ಶಾಲುಸಾಬಿ ಹೇಳುವಂತೆ, ಇವರೆಲ್ಲರೂ ಅತಳ, ಸುತಳ, ವಿತಳಗಳಂತಹ ಏಳು ಮಹಾ ಲೋಕಗಳನ್ನು ಕೇವಲ ಛಪ್ಪನ್ನೈವತ್ತಾರು ದೇಶಗಳಾಗಿಸಿಬಿಡುತ್ತಾರೆಯೇ ಹೊರತು, ಕಾಲಯಾನ ಮಾಡುವುದಿಲ್ಲ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಾನು ಬೆಳೆದದ್ದು ಚಿಂತಾಮಣಿ ಎಂಬ ಸಣ್ಣ ಪಟ್ಟಣದಲ್ಲಿ. ಅಲ್ಲಿ “ಸಾಹಿತ್ಯ ಕೂಟ” ಎಂಬ ಸಂಸ್ಥೆ ಇದೆ. ಅದರ ಸ್ಥಾಪನೆಯಿಂದ ಹಿಡಿದು ಇಂದಿನ ವರೆಗೆ, ಹಲವು ಸಾವಿರ ವಾರಗಳಿಂದ ಆ ಸಂಸ್ಥೆ, ಪ್ರತಿ ಶನಿವಾರ, ಒಂದೇ ಒಂದು ಬಾರಿಯೂ ತಪ್ಪದಂತೆ ತನ್ನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ; ಮಳೆಯಿರಲಿ, ಛಳಿ ಇರಲಿ, ಮತ್ತಾವುದೋ ಅಡಚಣೆಯಿರಲಿ, ಆ ಸಂಸ್ಥೆಯ ಘೋಷ ವಾಕ್ಯಗಳಲ್ಲಿ ಒಂದು “ಕಾಲಾಯ ತಸ್ಮೈ ನಮಃ” ಎನ್ನುವುದು.

೧೯೭೦ರ ದಶಕದಲ್ಲಿ, ನಾನಿನ್ನೂ ಮಿಡ್ಲ್ ಸ್ಕೂಲಿನಲ್ಲಿದ್ದಾಗಲೇ, ‘ಸಾಹಿತ್ಯ ಕೂಟ’ದ ಶನಿವಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾನು ಪ್ರಾರಂಭಿಸಿದೆ. ಅಲ್ಲಿನ ಉಪನ್ಯಾಸಗಳು ಹಲವು ಬಾರಿ ನನ್ನ ಬುದ್ಧಿಗೆ ನಿಲುಕದಿದ್ದರೂ, ಕಾರ್ಯಕ್ರಮದ ಕೊನೆಯಲ್ಲಿ ನೀಡುತ್ತಿದ್ದ ಕಡಲೆ ಹಿಟ್ಟಿನ ರುಚಿಯಂತೂ ನನ್ನನ್ನು ಅಲ್ಲಿಗೆ ಪ್ರತಿ ವಾರವೂ ಸೆಳೆಯುತ್ತಲೇ ಇತ್ತು. ಆದರೆ ಎಲ್ಲಕ್ಕಿಂತ ನನ್ನ ಮನಸ್ಸಿನಲ್ಲಿ ನಿಂತಿರುವುದು ಈ “ಕಾಲಾಯ ತಸ್ಮೈ ನಮಃ” ಎನ್ನುವ ಮಂತ್ರ.

ಆ ಕಾಲದ ನನ್ನ ವಯಸ್ಸಿನ ಮಕ್ಕಳಂತೆ ನಾನೂ ಸಹ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ “ಡಾಬೂ” ಕಾಮಿಕ್ಸ್ ಓದುತ್ತಿದ್ದೆ. ಈ ಡಾಬೂ ಪುಟ್ಟ ಬಾಲಕನಿದ್ದರೂ – ನಂತರದ ವರ್ಷಗಳಲ್ಲಿ ಅವನು ಬೆಳೆದದ್ದೂ ಇದೆ – ಅವನಿಗೊಬ್ಬ ಹಿರಿಯ ಮಿತ್ರರಿದ್ದರು. ಅವರು ಮಿತ್ರರಷ್ಟೇ ಅಲ್ಲ, ಅವನ ವೈಜ್ಞಾನಿಕ ಮತ್ತು ತಾಂತ್ರಿಕ ಸಲಹೆಗಾರರೂ ಸಹ. ಅವನ ಎಷ್ಟೋ ಸಾಹಸಗಳಿಗೆ ಬೇಕಿದ್ದ ತಾಂತ್ರಿಕ ಪರಿಕರಗಳನ್ನು ನಿರ್ಮಿಸಿಕೊಡುತ್ತಿದ್ದವರೂ ಅವರೇ. ಅವರ ಹೆಸರು ಪ್ರೊಫೆಸರ್ ಅಧಿಕಾರಿ. (ಆ ಕಾಲದಲ್ಲಿ, “ಅಧಿಕಾರಿ” ಎಂಬ ಹೆಸರು ಕೇಳಿರದಿದ್ದ ನನಗೆ, ಅವರೊಬ್ಬ ಸರ್ಕಾರಿ ಅಧಿಕಾರಿ ಇರಬಹುದೆಂದು ಎಂಬ ಭಾವನೆ ಇದ್ದಿದ್ದು ಇನ್ನೊಂದು ವಿಷಯ).

(ಎಚ್. ಜಿ. ವೆಲ್ಸ್)

ಈ ಪ್ರೊ.ಅಧಿಕಾರಿ ಡಾಬೂವಿಗೆ ನಿರ್ಮಿಸಿಕೊಟ್ಟ ವೈಜ್ಞಾನಿಕ ಸಾಧನಗಳಲ್ಲಿ ನನಗೆ ಅತ್ಯಂತ ಬೆರುಗನ್ನು ಮೂಡಿಸಿದ್ದು ಕಾಲಯಂತ್ರ ಯಾನೆ “ಟೈಮ್ ಮಷೀನ್”. ಈ ಟೈಮ್ ಮಷೀನ್‌ನಲ್ಲಿ ಸಂಚಾರಮಾಡಿದ ಡಾಬೂ ಮತ್ತು ಅವನ ಸ್ನೇಹಿತೆ (ತಂಗಿ ?) ಕಮಲರ ಸಾಹಸ ಕಥಾನಕಗಳಿಗಿಂತ, ನನ್ನ ಆಲೋಚನೆಗೆ ಬಂದಿದ್ದು ಇಂತಹ ಟೈಮ್ ಮಷೀನ್ ಒಂದನ್ನು ಸೃಷ್ಟಿಸಲು ಸಾಧ್ಯವೇ ಎಂಬ ಪ್ರಶ್ನೆ. ಸಣ್ಣ ಬಾಲಕನಾಗಿದ್ದಾಗ ಮೂಡಿದ ಈ ಕುತೂಹಲ, ನನ್ನ ಮನಸ್ಸಿನಲ್ಲಿ ಇನ್ನೂ ಇದೆ. ನಾನೀಗ ಐದು ದಶಕಗಳನ್ನು ದಾಟಿದ್ದರೂ!

ಆ ಕಾಲದಲ್ಲಿ ನನ್ನ ಮನಸ್ಸಿನಲ್ಲಿ ಪ್ರಶ್ನೆಗಳೇನಾದರೂ ಎದ್ದರೆ, ಅವನ್ನು ನಾನು ಕೊಂಡೊಯ್ಯುತ್ತಿದ್ದುದು ನನ್ನ ಚಿಕ್ಕಪ್ಪನ ಬಳಿಗೆ. ಆ ವೇಳೆಗಾಗಲೇ, ಗಣಿತದಲ್ಲಿ ಎಂ.ಎಸ್ಸಿ. ಮಾಡಿ ಪಿ.ಎಚ್.ಡಿ. ಮಾಡಲಾರಂಭಿಸಿದ್ದ ನನ್ನ ಚಿಕ್ಕಪ್ಪ ನನಗೆ ಹಲವಾರು ಕತೆಗಳನ್ನು ಹೇಳುತ್ತಿದ್ದರು. ಆ ಕತೆಗಳು, ಆ ಕಾಲದ ಬಹುಪಾಲು ಮಕ್ಕಳಿಗೆ ಗೊತ್ತೇ ಇರುತ್ತಿದ್ದ ರಾಮಾಯಣ, ಮಹಾಭಾರತ, ಶಿವಾಜಿ ಮಹಾರಾಜ, ರಾಣಾ ಪ್ರತಾಪ ಸಿಂಹ, ಅಕ್ಬರ್-ಬೀರಬಲ್, ತೆನಾಲಿ ರಾಮಕೃಷ್ಣರ ಕತೆಗಳಷ್ಟೇ ಅಲ್ಲ. ಅವುಗಳಿಗಿಂತ ಮುಖ್ಯವಾಗಿ, ಗೆಲಿಲಿಯೋ, ನ್ಯೂಟನ್ ನಂತಹ ಸುಪ್ರಸಿದ್ಧ ವಿಜ್ಞಾನಿಗಳ ಕತೆ, ಗಣಿತಜ್ಞರಾದ ಕಾರ್ಲ್ ಫ್ರೆಡರಿಕ್ ಗಾಸ್‌, ಶ್ರೀನಿವಾಸ ರಾಮಾನುಜಂರಂತಹವರ ಕತೆ. ಈ ಕತೆಗಳಿಂದಾಗಿ ಪಠ್ಯ ಪುಸ್ತಕಗಳನ್ನೂ ಮೀರಿದ್ದ ವಿಜ್ಞಾನ ಮತ್ತು ಗಣಿತದ ಕೆಲವು ವಿಚಾರಗಳು ನನ್ನ ಮನಸ್ಸಿನಲ್ಲಿ ನೆಲೆಯೂರಲು ಆರಂಭಿಸಿದ್ದವು.

ಡಾಬೂವಿಗೆ ಪ್ರೊ.ಅಧಿಕಾರಿ ನಿರ್ಮಿಸಿಕೊಟ್ಟ ಕಾಲಯಂತ್ರದ ಸಾಧ್ಯತೆಯನ್ನು ನಾನು ನಮ್ಮ ಚಿಕ್ಕಪ್ಪನ ಮುಂದಿಟ್ಟೆ. ಆಗ ಅವರು ಎಚ್.ಜಿ.ವೆಲ್ಸ್‌ ನ “ದ ಟೈಮ್ ಮಷೀನ್” ಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು.

ವೆಲ್ಸ್ ತನ್ನ ಕಥಾನಾಯಕನ ಮೂಲಕ ಹೇಳಿಸುವಂತೆ, ಈ ಪ್ರಪಂಚದ ಪ್ರತಿಯೊಂದು ಭೌತಿಕ ವಸ್ತುವಿಗೂ “ಉದ್ದ”, “ಅಗಲ”, “ದಪ್ಪ”ಗಳೆಂಬ ಮೂರು ಆಯಾಮಗಳಿರಲೇ ಬೇಕು. (ಇದರ ವೈಜ್ಞಾನಿಕ ಸತ್ಯಾಸತ್ಯತೆಯನ್ನು ಮುಂದೊಮ್ಮೆ ಪರಿಶೀಲಿಸೋಣ). ಇದು, ನಮ್ಮೆಲ್ಲರ – ಹತ್ತು ವರ್ಷ ವಯಸ್ಸಿನ ಬಾಲಕನೂ ಸೇರಿದಂತೆ – ಅನುಭವ ಮತ್ತು ಜ್ಞಾನಕ್ಕೆ ದೊರಕುವ ವಿಷಯ. ಈ ಮೂರರಲ್ಲಿ ಒಂದೇ ಒಂದು ಆಯಾಮವಿರದಿದ್ದರೂ, ಅಂತಹ ವಸ್ತು ಇರಲು ಸಾಧ್ಯವಿಲ್ಲ. ಆದರೆ, ಒಂದು ವಸ್ತುವಿಗೆ ಈ ಮೂರು ಆಯಾಮಗಳಿದ್ದರಷ್ಟೇ ಸಾಲದು, ಅದರ ಭೌತಿಕ ಅಸ್ತಿತ್ವಕ್ಕೆ ಇನ್ನೂ ಒಂದು ಅಂಶದ ಅಗತ್ಯವಿದೆ. ಅದುವೇ ಅವಧಿ. ಒಂದು ನ್ಯಾನೋ ಸೆಕೆಂಡೋ, ಹದಿನಾಲ್ಕು ಬಿಲಿಯನ್ ವರ್ಷಗಳೋ, ಅಥವಾ ಅನಾದಿಯಿಂದ ಅನಂತದವರೆಗಿನ ಅವಧಿಯೋ, ಅದು ಇರಲೇಬೇಕು. ಅವಧಿಯಿಲ್ಲದ ವಸ್ತುವು ಇರಲು ಸಾಧ್ಯವಿಲ್ಲ. ಇದೂ ಸಹ ನಮ್ಮ ಅನುಭವಕ್ಕೆ ಸುಲಭವಾಗಿ ದಕ್ಕುವ ವಿಚಾರ. ಹಾಗಿದ್ದರೆ, ಅವಧಿಯಿಂದ ಎಣಿಕೆ ಮಾಡುವ ಕಾಲವೆಂಬುದೂ ಒಂದು ಆಯಾಮವೇ ತಾನೇ?!

ಮೊದಲು ಮೂರು ಆಯಾಮಗಳಲ್ಲಿ ಸಂಚರಿಸಲು ಸಾಧ್ಯವಿರುವಾಗ, ಈ ನಾಲ್ಕನೆಯ ಆಯಾಮದಲ್ಲಿ ಸಂಚರಿಸಲೂ ಸಾಧ್ಯವಿರಲೇಬೇಕಲ್ಲವೇ?! ಮೂರನೆಯ ಆಯಾಮವಾದ “ಆಳ-ಎತ್ತರ”ಗಳಲ್ಲಿ ಸುಲಭವಾಗಿ ಸಂಚರಿಸಲು, ಹೊಸ ತಂತ್ರಜ್ಞಾನ ಬೇಕಿರುವಂತೆ –- ಅದು ಸಬ್‌ಮರೀನ್ ಅಥವಾ ಏರೋಪ್ಲೇನ್ ಯಾವುದೇ ಇರಬಹುದು – ಈ ಕಾಲವೆಂಬ ನಾಲ್ಕನೆಯ ಆಯಾಮದಲ್ಲಿ ಸಂಚರಿಸಲು ಬೇಕಿರುವುದು ಹೊಸದೊಂದು ತಂತ್ರಜ್ಞಾನವಷ್ಟೇ! ಇದು ವೆಲ್ಸ್‌ನ ಕಥಾನಾಯಕನ ವಾದ.

“ಕಾಲದಲ್ಲಿ ಸಂಚಾರ ಮಾಡಲು ಸಾಧ್ಯವೇ?” ಎಂಬ ತಾರ್ಕಿಕ ಸಾಧ್ಯತೆಯ ಪ್ರಶ್ನೆಯನ್ನು, ನಮಗೆ ಅತಿ ಸುಲಭವಾಗಿ ಅರ್ಥವಾಗುವ ವಿಷಯಗಳ ಮೂಲಕ ಕೇವಲ ಒಂದು ತಂತ್ರಜ್ಞಾನದ ಪ್ರಶ್ನೆಯ ಚೌಕಟ್ಟಿಗೆ ಇಳಿಸಿದ್ದು ಎಚ್.ಜಿ.ವೆಲ್ಸ್‌ ನ ವೈಶಿಷ್ಟ್ಯ. ಎಚ್.ಜಿ.ವೆಲ್ಸ್‌ ನ ಬರಹಗಳ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳಲು, ಬರೆಯಲು, ಚರ್ಚಿಸಲು ಬಹಳಷ್ಟು ವಿಷಯಗಳಿವೆ. ಆದರೆ, ನಮ್ಮ ಈ ಕಾಲ ಸಂಚಾರದಲ್ಲಿ ಬೇರೊಂದು ರಸ್ತೆ ತೆಗೆದುಕೊಳ್ಳೋಣ. ಕಾಲವೆನ್ನುವುದು -ನಾವು ತೆಗೆದುಕೊಳ್ಳಲು ಸ್ವತಂತ್ರರಿರುವ – ರಸ್ತೆಯೋ? ಅಥವಾ, ನಮಗೆ ಇಷ್ಟವಿರಲಿ ಬಿಡಲಿ ತನ್ನೊಡನೆ ಸೆಳೆದೊಯ್ಯುವ ಪ್ರವಾಹವೋ? ಅದು ಪ್ರವಾಹವಾದರೆ, ಅದರ ದಡಗಳಾವುವು? ಅವನ್ನೂ ವಿಚಾರಿಸೋಣ.

*******

ಎಚ್.ಜಿ.ವೆಲ್ಸ್‌ ನ “ದ ಟೈಮ್ ಮಷೀನ್” ಪುಸ್ತಕ ಪ್ರಕಟವಾಗಿದ್ದು, ೧೮೯೫ರಲ್ಲಿ. ಎಂದರೆ, ಸುಮಾರು ನೂರಿಪ್ಪತ್ತೈದು ವರ್ಷಗಳ ಹಿಂದೆ. ಆಸಕ್ತಿಕರ ವಿಷಯವೆಂದರೆ, ಅಲ್ಲಿಯವರೆಗೂ, ಕಾಲದಲ್ಲಿ ಪ್ರವಾಸಮಾಡುವ ಕಲ್ಪನೆ ಅಥವಾ ಪರಿ-ಕಲ್ಪನೆ ಯಾರ ಮನದಲ್ಲೂ ಮೂಡದೆ ಇದ್ದದ್ದು.

ಸಾವಿರಾರು ವರ್ಷಗಳ ಹಿಂದೆಯೇ, ಕ್ರಿಸ್ತ ಪೂರ್ವದಲ್ಲೇ ಗ್ರೀಕ್ ಮಹಾಕವಿ ಹೋಮರ್ ತನ್ನ ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳಲ್ಲಿ ಕಲ್ಪಿಸುವ ಚಿತ್ರ ವಿಚಿತ್ರಗಳು ಒಂದೆರಡಲ್ಲ. ಅದರಲ್ಲೂ, ಒಡಿಸ್ಸಿಯಲ್ಲಿ ಅದರ ಕಥಾನಾಯಕ ಒಡಿಸ್ಸಿಯಸ್ (ಯೂಲಿಸೆಸ್ ಅವನ ರೋಮನ್ ಹೆಸರು) ದೇಶ ವಿದೇಶಗಳನ್ನು ಸುತ್ತಿ, ಹೋಮರನ ಸೃಷ್ಟಿಯ ಮಹಾ ಚಿತ್ರ-ವಿಚಿತ್ರಗಳನ್ನು ಕಾಣುತ್ತಾನೆ. ಆದರೆ, ಅವನ ಯಾತ್ರೆಗಳು ದೇಶದಿಂದ ದೇಶಕ್ಕೇ ಹೊರತು ಕಾಲದಿಂದ ಕಾಲಕ್ಕಲ್ಲ.

ಭಾರತದಲ್ಲೂ, ನಮ್ಮ ಪೌರಾಣಿಕ ಕತೆಗಳ ವೀರರು ಹಲವಾರು ಲೋಕಗಳ ಸಾಹಸ ಯಾತ್ರೆ ಮಾಡುತ್ತಾರೆ. ಹನುಮಂತ, ಸೂರ್ಯನನ್ನೇ ಮುಟ್ಟಲೆತ್ನಿಸುತ್ತಾನೆ, ಏಳೇಳು ಶರಧಿಗಳನ್ನು ಕೇವಲ ಕಾಲುವೆಯಂತೆ ದಾಟುತ್ತಾನೆ. ನಾರದನಂತೂ – ಅದರಲ್ಲೂ ನಾನು ಸಣ್ಣವನಿದ್ದಾಗ ನೋಡುತ್ತಿದ್ದ ತೆಲುಗು ಸಿನೆಮಾಗಳ ನಾರದ – ಮೋಡಗಳ ಮಧ್ಯೆ ತೇಲುತ್ತಾ ಭೂಲೋಕ, ಬ್ರಹ್ಮಲೋಕ, ಸ್ವರ್ಗ, ನರಕ, ವೈಕುಂಠ, ಕೈಲಾಸಗಳ ಮಧ್ಯೆ ಸುತ್ತುತ್ತಲೇ ಇರುತ್ತಾನೆ. ಆದರೆ, ಗೊರೂರು ರಾಮಸ್ವಾಮಿ ಅಯ್ಯಂಗಾರರ ಶಾಲುಸಾಬಿ ಹೇಳುವಂತೆ, ಇವರೆಲ್ಲರೂ ಅತಳ, ಸುತಳ, ವಿತಳಗಳಂತಹ ಏಳು ಮಹಾ ಲೋಕಗಳನ್ನು ಕೇವಲ ಛಪ್ಪನ್ನೈವತ್ತಾರು ದೇಶಗಳಾಗಿಸಿಬಿಡುತ್ತಾರೆಯೇ ಹೊರತು, ಕಾಲಯಾನ ಮಾಡುವುದಿಲ್ಲ.

ಹತ್ತೊಂಬತ್ತನೆಯ ಶತಮಾನದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಅರಿವು ಹೆಚ್ಚಾದಂತೆ, ಹಲವು ವಿಜ್ಞಾನಿಗಳೂ ಅಥವಾ ವಿಜ್ಞಾನವನ್ನು ಒಂದು ವಿದ್ಯೆಯಂತೆ ಕಲಿತವರೂ ಸಹ ವೈಜ್ಞಾನಿಕ ಕಥಾನಕಗಳನ್ನು ಬರೆದಿರುವುದನ್ನು ನಾವು ಕಾಣಬಹುದು. ಆದರೆ, ಇವರಿಗೂ ಸಹ ಕಾಲಯಂತ್ರದ ಆಲೋಚನೆ ಬರಲಿಲ್ಲ.

ಸಾವಿರ ವರ್ಷಗಳ ಹಿಂದಿನ ಅರೇಬಿಯಾದಲ್ಲಿ, ಷೆಹೆರ್ಜ಼ಾದೆ ಸಾವಿರದೊಂದು ರಾತ್ರಿಗಳಲ್ಲಿ ತನ್ನ ಗಂಡನಿಗಾಗಿ ಸೃಷ್ಟಿಸುವ ಕಥೆಗಳಲ್ಲಿ, ಏನೆಲ್ಲಾ ಅದ್ಭುತವಿದೆ! ನಾವಿಕ ಸಿಂದಬಾದ್ ಕಾಣುವ ದೇಶಗಳು ಒಂದೇ ಎರಡೇ?! ನೋಡುವ ವೈಚಿತ್ರ್ಯಗಳಿಗೆ ಕೊನೆ ಮೊದಲಿದೆಯೇ?!! ಆದರೂ, ಸಿಂದಬಾದನ ನೌಕೆ ಸಮುದ್ರದಲ್ಲಿ ಸಂಚರಿಸುವ ವಾಹನವೇ ಹೊರತು ಕಾಲದ ಹೊಳೆಗೆ ಸಿಲುಕದ ಎಚ್.ಜಿ.ವೆಲ್ಸ್‌ ನ ಟೈಮ್ ಮಷೀನ್ ಅಲ್ಲ.

(ಮೇರಿ ಷೆಲ್ಲಿ)

ಹದಿನೇಳನೆಯ ಶತಮಾನದ ಆಂಗ್ಲ ವಿಡಂಬನಕಾರ ಜಾನಥನ್ ಸ್ವಿಫ್ಟ್, ತನ್ನ ಅಂದಿನ “ಸಭ್ಯ ಸಮಾಜ”ವನ್ನು ವಿಡಂಬನೆ ಮಾಡಲು ತನ್ನ ಕಥಾನಾಯಕನನ್ನು ಕೊಂಡೊಯ್ಯದ ವಿಸ್ಮಯ ಪ್ರಪಂಚಗಳಿಲ್ಲ. ಗಲಿವರನ ಲಿಲಿಪುಟ್ ಯಾತ್ರೆಯ ಕತೆ ನಮ್ಮ ಚಿಕ್ಕಪ್ಪ ಹೇಳುತ್ತಿದ್ದ ನನ್ನ ಮೆಚ್ಚಿನ ಕತೆಗಳಲ್ಲಿ ಒಂದು. (ಆ ಕಾಲದಲ್ಲಿ ನನಗೆ ಅದು ಸಾಹಸ ಮತ್ತು ವಿಸ್ಮಯದ ಕತೆಯಷ್ಟೇ ಆಗಿತ್ತು. “ಗಲಿವರ್”ನ ಹೆಸರಿನ ಹಿಂದಿನ ವ್ಯಂಗ್ಯ, ಗಲಿವರ್ ಮೂತ್ರ ಮಾಡಿ ರಾಜನ ಅರಮನೆಯ ಬೆಂಕಿಯನ್ನು ಆರಿಸುವುದರ ಒಳಾರ್ಥ, ಇಡೀ ಕಾದಂಬರಿಯೇ ಅಂದಿನ ವ್ಯವಸ್ಥೆಯ ಕಟು ವಿಮರ್ಶೆ ಎಂದೆಲ್ಲಾ ತಿಳಿದದ್ದು ಮುಂದೆಂದೋ) ಆದರೆ, ಆ ಗಲಿವರನೂ ಕಾಲ ಸಂಚಾರ ಮಾಡಲಿಲ್ಲ.

೧೮೧೬ರ ಮೇ ತಿಂಗಳಿನಲ್ಲಿ, ಆಂಗ್ಲ ಕವಿ ಷೆಲ್ಲಿ ತನ್ನ ಪತ್ನಿ ಮೇರಿ, ಕವಿ ಬೈರನ್ ಮತ್ತಿತರರೊಂದಿಗೆ ಬೇಸಿಗೆಯ ರಜಾದಿನಗಳನ್ನು ಕಳೆಯಲು ಸ್ವಿಟ್ಜರ್ ಲ್ಯಾಂಡಿಗೆ ಬಂದ. ಆ ಸಮಯದಲ್ಲಿ ಅವರಿದ್ದ ಜಾಗದಲ್ಲಿ ಮಳೆಯ ಜೌಗು ಹಿಡಿದಿತ್ತು. ಕಾಲ ತಳ್ಳಲು, ಪ್ರತಿಯೊಬ್ಬರೂ ಹೊಸದೊಂದು ದೆವ್ವದ-ಕತೆಯನ್ನು ಸೃಷ್ಟಿಸಬೇಕೆಂದು ನಿಶ್ಚಯಿಸಲಾಯಿತು. ಮೇರಿಗೆ ಆಗ ಕೇವಲ ಹತ್ತೊಂಭತ್ತು ವರ್ಷ. ಅವಳೇನೂ ಕವಿ-ಲೇಖಕಿಯಾಗಿರಲಿಲ್ಲ. ಉಳಿದವರಾದರೋ, ಷೆಲ್ಲಿ, ಬೈರನ್‌ ನಂತಹ ಘಟಾನುಘಟಿಗಳು. ಇದು, ಮುಂದೊಮ್ಮೆ ಅವಳೇ ಹೇಳಿಕೊಂಡಂತೆ, ಅವಳಲ್ಲಿ ತಲ್ಲಣ ಮೂಡಿಸಿತು. ಅವಳ ಮನದಲ್ಲಿ ಹೊಸದೊಂದು ಸೃಷ್ಟಿಯ ಆತಂಕವಿದ್ದರೆ, ಹೊರಗಡೆ ಗುಡುಗು-ಸಿಡಿಲುಗಳ ಮಳೆ. ಇಂತಹ ತಲ್ಲಣದಲ್ಲಿ ಸೃಷ್ಟಿಯಾದದ್ದು, ಸಿಡಿಲಿನ ಶಕ್ತಿಯಿಂದ ನಿರ್ಜೀವ ದೇಹಕ್ಕೆ ಜೀವ-ಚೈತನ್ಯ ನೀಡುವ ಫ್ರಾಂಕನ್‌ಸ್ಟೈನ್ ಕತೆ. ಅವಳು ಆ ಕತೆಯಿಂದ ಸೃಷ್ಟಿಸಿದ್ದು ಕೇವಲ ಹೊಸದೊಂದು ಕಥನವಲ್ಲ. ಬದಲಿಗೆ, ಹೊಸದೊಂದು ಸಾಹಿತ್ಯ ಪ್ರಾಕಾರವನ್ನೇ. ಆ ಕತೆಯನ್ನು science-fiction ಅಂದರೆ “ವೈಜ್ಞಾನಿಕ ಸಾಹಿತ್ಯ”ದ ಉಗಮವೆಂದೇ ಭಾವಿಸಬಹುದು.

ಫ್ರಾಂಕನ್‌ಸ್ಟೈನ್ ಕಥಾನಕದ ನಂತರದ ವರ್ಷಗಳಲ್ಲಿ ಹಲವಾರು ಮಂದಿ, ವಿಜ್ಞಾನ-ತಂತ್ರಜ್ಞಾನಗಳನ್ನು ತಮ್ಮ ಸಾಹಿತ್ಯದ ಮೂಲ ದ್ರವ್ಯಗಳಲ್ಲಿ ಒಂದಾಗಿ ಬಳಸಲಾರಂಭಿಸಿದರು. “ವೈಜ್ಞಾನಿಕ ಸಾಹಿತ್ಯ”ದ ಸೃಷ್ಟಿಯ ಮುನ್ನ ಅದ್ಭುತ ಎನ್ನಬಹುದಾದ ಕಾಲ್ಪನಿಕತೆ ಇರಲಿಲ್ಲವೇ?! ಖಂಡಿತಾ ಇತ್ತು. ಈ ಮೊದಲೇ ಹೇಳಿದಂತೆ, ಯೂಲಿಸೆಸ್, ಸಿಂದಬಾದ್ ರಿಂದ ಹಿಡಿದು ಗಲಿವರನವರೆಗೆ ಎಲ್ಲರೂ ಎಂತೆಂತಹೋ ವಿಸ್ಮಯಗಳನ್ನು ಕಂಡರು. ಆದರೆ, ಈ ಎಲ್ಲಾ ವಿಸ್ಮಯಗಳ ಹಿಂದೆ, ದೈವೀಕತೆಯೋ, ಅಮಾನುಷತೆಯೋ, ಅತಿ-ಮಾನುಷವೋ ಆದ ನಮ್ಮ ಕೈಗೆಟುಕದ ಮಾಯೆ ಬೇಕಿತ್ತು. ಆದರೆ, “ವೈಜ್ಞಾನಿಕ ಸಾಹಿತ್ಯ”, ಈ ಮಾಯೆಯನ್ನು ನಮ್ಮ ಕೈಗೆಟುಕಬಹುದಾದಂತಹ ವಿಜ್ಞಾನ-ತಂತ್ರಜ್ಞಾನವನ್ನಾಗಿಸಿತು.

ವೈಜ್ಞಾನಿಕ ಸಾಹಿತ್ಯವನ್ನು ಅತ್ಯಂತ ಜನಪ್ರಿಯಗೊಳಿಸಿದವನು ಫ್ರೆಂಚ್ ಲೇಖಕ ಜೂಲ್ಸ್ ವೆರ್ನ್. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಬರೆಯಲಾರಂಭಿಸಿದ ವೆರ್ನ್, ತನ್ನ ಕಥಾನಾಯಕರುಗಳನ್ನು (ಎಲ್ಲರೂ ನಾಯಕರುಗಳೇ! ವಿಜ್ಞಾನ-ತಂತ್ರಜ್ಞಾನ ಬಂದರೂ, ಅದೇನೂ ಬದಲಾಗಲಿಲ್ಲ!!) ಭೂಮಿಯ ಕೇಂದ್ರಕ್ಕೆ, ಸಾಗರದ ಆಳಕ್ಕೆ, ಕೊನೆಗೆ ಚಂದ್ರನ ಮೈಮೇಲೂ ಕರೆದುಕೊಂಡು ಹೋದ. ಈ ಎಲ್ಲಾ ಸಾಹಸಗಳ ಹಿಂದೆ, ವೆರ್ನ್ ತನ್ನ ಕಲ್ಪನೆಯಲ್ಲಿ ಸೃಷ್ಟಿಸಿದ ತಂತ್ರಜ್ಞಾನದ ಬಲ ಇತ್ತು. ಅವನ ಕೆಲವೊಂದು ಕಲ್ಪನೆಗಳಂತೂ, ನಂತರದಲ್ಲಿ ಸೃಷ್ಟಿಯಾದ ನಿಜದ ತಂತ್ರಜ್ಞಾನಕ್ಕಿಂತ ದೂರವಿರಲಿಲ್ಲ ಎಂಬುದು ವೆರ್ನ್‌ ನ ಕಲ್ಪನಾ ಶಕ್ತಿಗೆ ಸಾಕ್ಷಿಯಾಗಿವೆ. ಆದರೆ, ಅವನಿಗೂ ಸಹ ಟೈಮ್ ಟ್ರಾವೆಲ್‌ ನ ಕಲ್ಪನೆ ಹೊಳೆಯಲಿಲ್ಲ. (ವೆರ್ನ್‌ ನ “ಅರೌಂಡ್ ದ ವರ್ಲ್ಡ್ ಇನ್ ಏಯ್ಟಿ ಡೇಸ್”ನ ಕಥಾನಾಯಕ ಫಿಲಿಯಾಸ್ ಫಾಗ್ ತನಗೇ ತಿಳಿಯದಂತೆ ಒಂದು ದಿನ ಹಿಂದಕ್ಕೆ ಬಂದಿದ್ದನ್ನು ಮುಂದೆ ನೋಡೋಣ)

ಹತ್ತೊಂಬತ್ತನೆಯ ಶತಮಾನದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಅರಿವು ಹೆಚ್ಚಾದಂತೆ, ಹಲವು ವಿಜ್ಞಾನಿಗಳೂ ಅಥವಾ ವಿಜ್ಞಾನವನ್ನು ಒಂದು ವಿದ್ಯೆಯಂತೆ ಕಲಿತವರೂ ಸಹ ವೈಜ್ಞಾನಿಕ ಕಥಾನಕಗಳನ್ನು ಬರೆದಿರುವುದನ್ನು ನಾವು ಕಾಣಬಹುದು. ಆದರೆ, ಇವರಿಗೂ ಸಹ ಕಾಲಯಂತ್ರದ ಆಲೋಚನೆ ಬರಲಿಲ್ಲ. ಉದಾಹರಣೆಗೆ, ಭೌತ ಶಾಸ್ತ್ರ, ಬಾಟನಿ, ಜೀವ ಶಾಸ್ತ್ರಗಳಲ್ಲಿ ಮಹತ್ತರ ಸಂಶೋಧನೆ ನಡೆಸಿದ ಮೇರು ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ವೈಜ್ಞಾನಿಕ ಸಾಹಿತ್ಯದಲ್ಲಿ ಕೈಯಾಡಿಸಿದ್ದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ.

(ಜಗದೀಶ್ ಚಂದ್ರ ಬೋಸ್)

“ಕಳೆದುಹೋದವನ ಕತೆ” (ಬೆಂಗಾಲಿಯಲ್ಲಿ: ನಿರುದ್ದೇಶರ್ ಕಾಹಿನಿ) ಎಂಬುದು ೧೮೯೬ರಲ್ಲಿ ಪ್ರಕಟವಾದ ಡಾ.ಬೋಸ್ ಬರೆದಂತಹ ಕತೆ. ಇದೂ ಸಹ, ಹಲವು ವೈಜ್ಞಾನಿಕ ಕತೆಗಳಂತೆ ಒಂದು ಸಾಹಸ ಯಾತ್ರೆಯ ಕತೆ. ಈ ಕತೆಯಲ್ಲಿ ಹಡಗಿನ ಕಪ್ತಾನ ಮತ್ತು ಆತನ ನಾವಿಕರು ಸಾಗರದ ಮಧ್ಯೆ ಹವಾಮಾನ ವೈಪರೀತ್ಯಗಳನ್ನು ಎದುರಿಸುತ್ತಾರೆ. ಚಂಡ ಮಾರುತ, ಬೆಟ್ಟದೆತ್ತರದ ಅಲೆಗಳಿಗೆ ಸಿಲುಕಿ ಹಡಗು ಮಗುಚಿಕೊಳ್ಳುವ ಜೀವನ್ಮರಣದ ಸಂದರ್ಭ ಉಂಟಾಗುತ್ತದೆ. ಆಗ, ಮಹತ್ತರ ವೈಜ್ಞಾನಿಕ ಪ್ರತಿಭೆ ಮತ್ತು ಕಲ್ಪನಾ ಶಕ್ತಿಯುಳ್ಳ ಹಡಗಿನ ಕಪ್ತಾನ ತನ್ನ ಬಳಿ ಇರುವ ಕೂದಲೆಣ್ಣೆಯ ಬಾಟಲನ್ನು ತೆಗೆದು ಅದರಲ್ಲಿನ ಎಣ್ಣೆಯನ್ನು ಹೊಯ್ದಾಡುತ್ತಿರುವ ಸಮುದ್ರದ ನೀರಿಗೆ ಚೆಲ್ಲುತ್ತಾನೆ. ಇದು, ಎಣ್ಣೆ ಮತ್ತು ನೀರಿನ ನಡುವಿನ ಸರ್ಫೇಸ್ ಟೆನ್ಷನ್ ಅಥವಾ ಇಂಟರ್‌ಫೇಷಿಯಲ್ ಟೆನ್ಷನ್ ಕಾರಣದಿಂದ ಕೆಲವು ಬದಲಾವಣೆಗಳಿಗೆ ಕಾರಣವಾಗುತ್ತವೆ. ಈ ಬದಲಾವಣೆಗಳಿಂದ ಮತ್ತಷ್ಟು ಬದಲಾವಣೆಗಳಾಗಿ, ಹವಾಮಾನದಲ್ಲೇ ಬದಲಾವಣೆಗಳುಂಟಾಗಿ ಕೆಲ ಸಮಯದಲ್ಲೇ ಸಮುದ್ರ ಶಾಂತವಾಗುತ್ತದೆ. ಈ ಕತೆ ನಮಗೆ “ಬಟರ್‌ಫ್ಲೈ ಎಫೆಕ್ಟ್” ನೆನಪಿಗೆ ತರಬಹುದು. (ದಕ್ಷಿಣ ಅಮೆರಿಕದ ಅಮೆಜ಼ಾನ್ ಅರಣ್ಯದಲ್ಲೆಲ್ಲೋ ಒಂದು ಚಿಟ್ಟೆ ತನ್ನ ರೆಕ್ಕೆ ಬಡಿದರೆ, ಅದು ಭಾರತದಲ್ಲಿ ಚಂಡ ಮಾರುತ ಒಂದನ್ನು ಸೃಷ್ಟಿಸಬಹುದು ಎಂಬಂತಹ ಪರಿ ಕಲ್ಪನೆ ಇದು. ಇದಕ್ಕೆ ಗಣಿತದ ತಳಹದಿ ಇತ್ತವನು ಖ್ಯಾತ ಹವಾಮಾನ ತಜ್ಞ ಮತ್ತು ಗಣಿತಜ್ಞ ಎಡ್ವರ್ಡ್ ಲೋರೆಂಜ಼್)

ಜಗದೀಶ್ ಚಂದ್ರ ಬೋಸರ ಕತೆಯ ಹಿಂದೆ ಒಂದು ಕುತೂಹಲಕಾರಿ ಸತ್ಯ ಕತೆ ಇದೆ. ಅವರ ಕತೆಯ ಹಡಗಿನ ಕಪ್ತಾನ ತನ್ನ ಮತ್ತು ತನ್ನ ನಾವಿಕರ ಜೀವ ಉಳಿಸಿಕೊಳ್ಳಲು ಕೂದಲೆಣ್ಣೆಯನ್ನೇ ಬಳಸಿದ್ದು ಕೇವಲ ಕಾಕತಾಳೀಯವಲ್ಲ. ಆ ಕಾಲದಲ್ಲಿ ಕಲ್ಕತ್ತಾದ ಕೂದಲೆಣ್ಣೆಯ ಕಂಪೆನಿಯೊಂದು ಕಥಾಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಸ್ಪರ್ಧೆಯ ಒಂದೇ ಷರತ್ತೆಂದರೆ, ಕತೆಯಲ್ಲಿ ಕಂಪೆನಿಯವರು ತಯಾರಿಸುವ ಕೂದಲೆಣ್ಣೆ ಮಹತ್ತರ ಪಾತ್ರವೊಂದನ್ನು ಹೊಂದಿರಲೇಬೇಕು. ಈ “ಕಳೆದುಹೋದವನ ಕತೆ”, ಈ ಸ್ಪರ್ಧೆಗೆ ಕಳುಹಿಸಲು ಡಾ.ಬೋಸ್‌ ಬರೆದದ್ದು. (ನಿಮ್ಮ ಮತ್ತು ನಿಮ್ಮ ಸಹ ನಾವಿಕರ ಜೀವ ರಕ್ಷಣೆ ಮಾಡುವ ಕೂದಲೆಣ್ಣೆಯ ಮುಂದೆ, ದಂತ ಕಾಂತಿಯನ್ನು ಹೆಚ್ಚಿಸುವ ಟೂತ್ ಪೇಸ್ಟ್ ಆಗಲಿ, ನಿಮ್ಮ ಯೌವ್ವನವನ್ನು ಮರಳಿ ನೀಡುವ ಸೋಪ್ ಆಗಲಿ ಯಾವ ಲೆಕ್ಕ?! ಸಂತೂರ್ ಸೋಪ್ ಮತ್ತು ಕಾಲ ಯಂತ್ರಗಳ ಸಂಬಂಧವನ್ನು ಮುಂದೆ ನೋಡೋಣ)

ಒಟ್ಟಿನಲ್ಲಿ, ಜಗದೀಶ್ ಚಂದ್ರ ಬೋಸ್‌ ರ ಈ ಜೀವರಕ್ಷಕ ಕೂದಲೆಣ್ಣೆ ನಿಮ್ಮ ಕೂದಲನ್ನು ‘ಕಾಲಿ’ಯೋ, ‘ಖಾಲಿ’ಯೋ ಮಾಡಬಹುದೇ ಹೊರತು, ಎಚ್.ಜಿ.ವೆಲ್ಸ್‌ ನ ಕಾಲಯಂತ್ರದಂತೆ ನಿಮ್ಮನ್ನು ಮುಂದಿನೊಂದು ಭೂತಕಾಲಕ್ಕೆ ಅಥವಾ ಹಿಂದಿನೊಂದು ಭವಿಷ್ಯತ್ತಿಗೆ ಕೊಂಡೊಯ್ಯುವುದಿಲ್ಲ.


ಸಾವಿರಾರು ವರ್ಷಗಳ ಇತಿಹಾಸವಿರುವ ಮಾನವನ ಕಲ್ಪನಾ ಶಕ್ತಿಗೆ ಹೊಸದೊಂದು ಸಾಧ್ಯತೆ ಕೊಟ್ಟವನು ಎಚ್.ಜಿ.ವೆಲ್ಸ್. ನಿಮಗೆ ಬಸ್/ಕಾರುಗಳಲ್ಲಿ ಪ್ರಯಾಣಿಸುವಾಗ ಅನುಭವಿಸುವ motion sickness ಇದ್ದರೆ ಅಥವಾ ನೌಕಾಯಾನದಲ್ಲಿ sea sickness ಆಗುವಂತಿದ್ದರೆ, ಟೈಮ್ ಮಷೀನ್ ಹತ್ತುವ ಮುನ್ನ ಕೊಂಚ ಆಲೋಚಿಸುವುದು ಒಳ್ಳೆಯದು. ಕಾಲ ಪ್ರಯಾಣದ ಫಜೀತಿಗಳಿಗೆ ಕೊನೆ ಮೊದಲಿಲ್ಲ. ನಮ್ಮ ಭಾಷೆ, ತರ್ಕದ ಮಿತಿಗಳನ್ನು ಎತ್ತಿ ತೋರಿ, ನಮ್ಮ ಪ್ರಜ್ಞಾ ಪ್ರಪಂಚವನ್ನೇ ತಲೆಕೆಳಗು ಮಾಡುವ ಕಾಲಯಾನದ ಕುರಿತು ಮತ್ತಷ್ಟು ವಿಚಾರಮಾಡೋಣ. ಅದಕ್ಕೂ ಮುನ್ನ, ಅಕಸ್ಮಾತ್ತಾಗಿ ಕಾಲಯಾನ ಮಾಡಿದವರನ್ನು ಭೇಟಿ ಮಾಡೋಣ.

(ಮುಂದುವರೆಯುವುದು)