ಕನ್ನಡ ನಾಡಿನ ಜೀವನದಿ ಕಾವೇರಿ ದಂಡೆಯಲ್ಲಿ ಅನೇಕ ವರ್ಷ ಅಲೆದಾಡಿ ಪಡೆದ ಅನುಭವದ ಕಥನ ‘ಕಾವೇರಿಯೋಡೊಪ್ಪಂ ಎಂಡೆ ಯಾತ್ರಗಳ್‌’ ಎಂಬ ಒ.ಕೆ.ಜೋಣಿ ಅವರ ಮಲಯಾಳಂ ಕೃತಿ. ಅದನ್ನು ಪತ್ರಕರ್ತ ವಿಕ್ರಂ ಕಾಂತಿಕೆರೆ ಅವರು  ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಕಾವೇರಿ ತೀರದ ಪಯಣ’ ಎಂಬ ಶೀರ್ಷಿಕೆಯ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿದೆ. ಲೇಖಕ ಜೋಣಿ ಅವರ ಮಾತುಗಳು ನದಿಸಂಸ್ಕೃತಿಯ ಬಗ್ಗೆ ತಿಳಿಸುವುದರೊಂದಿಗೆ ಇಡೀ ಕೃತಿಯ ಸಂಕ್ಷಿಪ್ತ ಪರಿಚಯವನ್ನೂ ಮಾಡಿಕೊಡುತ್ತವೆ. ಮುನ್ನುಡಿ ರೂಪದ ಅವರ ಮಾತುಗಳು ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ. 

If you wish to hear tales of the past,
sit down on one of these steps
and listen attentively to the murmuring of the waters;
you will be able to hear
so many forgotten stories of long ago
-Rabindranath Tagore
(The Ghats story)

ಭಾರತದ ಬಹುತೇಕ ಎಲ್ಲ ನದಿಗಳಿಗೂ ವೇದಕಾಲದಷ್ಟು ಹಳೆಯ ಪೌರಾಣಿಕ ಮತ್ತು ಶತ–ಶತಮಾನಗಳ ಐತಿಹಾಸಿಕ ಹಿನ್ನೆಲೆ ಇದೆ. ನದಿಗಳು ಹಾಗೂ ಅವುಗಳ ಸಂಗಮಗಳಿಗೆ ಭಾರತೀಯ ಸಂಸ್ಕೃತಿಯಲ್ಲೂ ಪವಿತ್ರ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಲೌಕಿಕ ಜೀವನಕ್ಕೆ ಮಾತ್ರವಲ್ಲ, ಅಧ್ಯಾತ್ಮ ಸಾಧನೆಗೂ ಹೇತುವಾಗಿರುವ ಕಾರಣ ನದಿಗಳನ್ನು ದೇವತೆಗಳಿಗೆ ಸಮಾನವಾಗಿ ಕಂಡಿದ್ದೇವೆ; ಕಾಣುತ್ತಿದ್ದೇವೆ. ಮಾನವನ ಕೃಷಿ ಚಟುವಟಿಕೆ ಮತ್ತು ನಿತ್ಯದ ಬದುಕಿಗೂ ನದಿಗಳೊಂದಿಗೆ ಹತ್ತಿರದ ಸಂಬಂಧ ಇದೆ. ಶಾಂತವಾಗಿ ಹರಿಯುವ ನದಿಗಳು ಕೆಲವೊಮ್ಮೆ ಮೇರೆ ಮೀರಿ ಅಟ್ಟಹಾಸ ಮೆರೆದು ವಿನಾಶಕಾರಿಯಾಗುತ್ತವೆ. ಆದ್ದರಿಂದ ಭಕ್ತಿಯಿಂದಲೂ ಭಯದಿಂದಲೂ ನದಿಗಳನ್ನು ಪೂಜಿಸುವುದನ್ನು ಪುರಾತನ ಕಾಲದಿಂದಲೇ ಮನುಷ್ಯ ರೂಢಿಸಿಕೊಂಡಿದ್ದಾನೆ.

(ಒ.ಕೆ.ಜೋಣಿ)

ಕ್ರಿಸ್ತಪೂರ್ವದಲ್ಲಿ ಭಾರತಕ್ಕೆ ಬಂದ ಯವನರು, ಇಲ್ಲಿ ಜನರು ನದಿಗಳನ್ನು ಪೂಜಿಸುವ ಬಗೆ ಕಂಡು ಬೆರಗಾಗಿದ್ದರು. ಮಹಾಪ್ರವಾಹದಂತೆ ಹರಿಯುತ್ತಿದ್ದ ಸಿಂಧು, ಗಂಗೆ, ನರ್ಮದಾ ಮುಂತಾದ ನದಿಗಳ ಓಘ ಅವರಲ್ಲಿ ವಿಸ್ಮಯ ಮೂಡಿಸಿತ್ತು. ಮೌರ್ಯರ ಕಾಲದಲ್ಲಿ ಭಾರತದ ನದಿಗಳು ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಜಲಕೊಂಡಿಯಂತೆ ಕೆಲಸ ಮಾಡಿದ್ದವು. ದೂರದ ಊರುಗಳ ಜೊತೆ ಸಂಪರ್ಕಕ್ಕೆ ಜಲಮಾರ್ಗಗಳನ್ನು ಬಳಸುತ್ತಿದ್ದ ಜನರು ಇದರಿಂದ ಪ್ರಭಾವಿತರಾಗಿ ಸಮುದ್ರ ಸಂಚಾರಕ್ಕೆ ಮುಂದಾದರು. ಸ್ವಚ್ಛ–ಸುಂದರ ನದಿಪಾತ್ರಗಳು ಅಧ್ಯಾತ್ಮ ಜೀವಿಗಳಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ನೆಮ್ಮದಿ ಒದಗಿಸುವ ತಾಣಗಳಾಗಿದ್ದವು. ಜಲಮೂಲಗಳು ವಿವಿಧ ಪ್ರಬೇಧದ ಸಸ್ಯ ಮತ್ತು ಜೀವಿಗಳ ಆವಾಸಕೇಂದ್ರಗಳು. ದೋಷಗಳಿಗೆ ಪರಿಹಾರ ನೀಡುವ ಮುಕ್ತಿದಾಯಿನಿ ಎಂಬ ನಂಬಿಕೆಯು ನದಿಗಳಿಗೆ ಪುತಾತನ ನಾಗರಿಕತೆಯಲ್ಲೇ ದೇವತೆಗಳ ಸ್ಥಾನ ನೀಡಿತ್ತು. ಜಲಗರ್ಭದಲ್ಲಿ ನಿಧಿ ಇದೆ ಎಂದೂ ಅದನ್ನು ಅಪ್ಸರೆಯರು ಕಾಯುತ್ತಿರುತ್ತಾರೆ ಎಂದೂ ಋಗ್ವೇದ ಹೇಳುತ್ತದೆ. ಬರಿಗಣ್ಣಿನ ನೋಟಕ್ಕೂ ಮಿಗಿಲಾದ ಶಕ್ತಿ ನದಿಗಳ ಅಂತರಾಳದಲ್ಲಿ ಅಡಗಿದೆ ಎಂದು ಪುರಾಣೇತಿಹಾಸಗಳಲ್ಲಿ ಮಾತ್ರವಲ್ಲ, ಬುದ್ಧನ ಜೀವನಚರಿತೆಯಲ್ಲೂ ಉಲ್ಲೇಖಿಸಲಾಗಿದೆ.

ನದಿಯೊಂದಿಗೆ ಸಂವಾದ ನಡೆಸಿದ್ದ ಬುದ್ಧ ತನ್ನ ಜ್ಞಾನೋದಯದ ಬಗ್ಗೆ ಪ್ರಶ್ನೆ ಎತ್ತಿದ್ದ ಮತ್ತು ಎಲ್ಲ ಸಂದೇಹಗಳಿಗೆ ನದಿಯಿಂದ ಉತ್ತರ ಪಡೆದುಕೊಂಡಿದ್ದ ಎಂಬ ವಿವರ ಹರ್ಮನ್‌ ಹೆಸ್ಸೆಯ ಕಾದಂಬರಿಯಲ್ಲಿ ಇದೆ. ಬಿಹಾರದ ಫಲ್ಗುಣಿ ನದಿಯೊಂದಿಗೆ ಬುದ್ಧನಿಗೆ ಆತ್ಮೀಯ ಸಂಬಂಧವಿತ್ತು. ಆತನಿಗೆ ಜ್ಞಾನೋದಯವಾದದ್ದೂ ಅಲ್ಲೇ ಎಂಬುದು ಗಮನಾರ್ಹ. ಬುದ್ಧ ತನ್ನನ್ನು ಲೌಕಿಕ ಜೀವನ ಮತ್ತು ಮೋಕ್ಷದ ನಡುವಿನ ಸೇತು ಎಂದು ಹೇಳಿಕೊಂಡಿದ್ದ. ಲೌಕಿಕ ಜೀವನದಿಂದ ಮುಕ್ತಿಮಾರ್ಗದೆಡೆಗೆ ಕೊಂಡೊಯ್ಯುವವರು ತೀರ್ಥಂಕರರು ಎಂಬ ನಂಬಿಕೆ ಜೈನಧರ್ಮದಲ್ಲೂ ಇದೆ. ಇಹದಿಂದ ಪರಲೋಕಕ್ಕೆ ಸಾಗುವುದರ ಸಂಕೇತವಾಗಿ ತೀರ್ಥಯಾತ್ರೆಯನ್ನು ಪರಿಗಣಿಸಲಾಗಿದೆ. ತೀರ್ಥ ಮತ್ತು ತೀರ್ಥಯಾತ್ರೆ ಬೌದ್ಧ–ಜೈನ ಧರ್ಮದಲ್ಲಿ ಮಾತ್ರವಲ್ಲ, ಆಚರಣೆಗಳಲ್ಲಿ ಭಿನ್ನವಾದ ಹಿಂದೂ ಧರ್ಮದಲ್ಲೂ ಇದೆ ಎಂಬುದು ವಿಶೇಷ.

ಸಿಕ್ ಧರ್ಮದ ಸ್ಥಾಪಕ ಎನ್ನಲಾಗುವ ಗುರುನಾನಕ್ (1469–1539)ಗೆ ಸಂಬಂಧಿಸಿದ ಕಥೆಯೊಂದರಲ್ಲಿ ನದಿಗಳ ವೈಶಿಷ್ಟ್ಯಗಳನ್ನು ವರ್ಣಿಸಲಾಗಿದೆ. ಸಂಸ್ಕೃತ ಮತ್ತು ಪಾರ್ಸಿ ಭಾಷೆಯನ್ನು ಚೆನ್ನಾಗಿ ಬಲ್ಲವನಾಗಿದ್ದ ನಾನಕ್‌ ಕುರಿಗಾಹಿ ಯಾಗಿಯೂ ಅಂಗಡಿಯಲ್ಲಿ ಕೆಲಸಗಾರನಾಗಿಯೂ ನವಾಬನ ಕಾರಕೂನನಾಗಿಯೂ ಕೆಲಸ ಮಾಡಿದ್ದ. ಆದರೆ ಅಲ್ಲೆಲ್ಲ ಅಸಂಬದ್ಧವಾಗಿ ನಡೆದುಕೊಂಡಿದ್ದ. ಕುರಿಗಾಹಿಯಾಗಿದ್ದ ವೇಳೆ ಕುರಿಗಳನ್ನು ತಮ್ಮಷ್ಟಕ್ಕೆ ಸುತ್ತಾಡಲು ಬಿಡುತ್ತಿದ್ದ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬಡವರಿಗೆ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದ. ಕಾರಕೂನನಾಗಿದ್ದಾಗ ಸುಳ್ಳು ಲೆಕ್ಕ ಬರೆಯಲು ನಿರಾಕರಿಸುತ್ತಿದ್ದ. 1499ರ ಒಂದು ದಿನ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ದಿಢೀರ್‌ ಅಪ್ರತ್ಯಕ್ಷನಾದ ನಾನಕ್‌ ನಾಲ್ಕನೇ ದಿನ ಎದ್ದು ಬಂದಿದ್ದ ಎಂಬ ಪ್ರತೀತಿ ಇದೆ. ನಾಲ್ಕು ದಿನ ಎಲ್ಲಿದ್ದ ಎಂಬುದನ್ನು ಯಾರಿಗೂ ಹೇಳಲಿಲ್ಲ. ಆದರೆ ಈ ಘಟನೆಯ ನಂತರ ನಾನಕ್ ಸಂಪೂರ್ಣ ಬದಲಾಗಿದ್ದ. ಹುಟ್ಟುಡುಗೆಯಲ್ಲಿ ನದಿಯಿಂದ ಎದ್ದು ಬಂದ ನಾನಕ್ ‘ಹಿಂದೂ ಮುಸ್ಲಿಂ ಎಂಬುದು ಬೇರೆ ಬೇರೆಯಲ್ಲ; ಒಂದೇ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದ.

ಸಂಸಾರವೆಂಬ ನದಿಯಲ್ಲಿ ನಾನೊಂದು ಮೀನು ಎಂದು ಹೇಳಿದ ನಾನಕ್‌ ಅವರ ಹೇಳಿಕೆಯೊಂದು ಹೀಗಿದೆ:
lord, thou art the mighty river.
thou knowest and seest all things
How can I, a poor fish know
thy depth and thy expanse?

ಗಂಗೆ, ಯಮುನೆ, ಸರಸ್ವತಿ, ಗೋದಾವರಿ, ನರ್ಮದಾ, ಸಿಂಧು, ಕಾವೇರಿಗೆ ಭಾರತೀಯ ಪುರಾಣಗಳಲ್ಲಿ ಪುಣ್ಯ ನದಿಗಳ ಸ್ಥಾನವಿದೆ. ಪುಣ್ಯಸ್ನಾನ ಮಾಡುವ ಕಡೆಗಳಲ್ಲೆಲ್ಲ ಈ ಏಳು ನದಿಗಳ ಸಾನ್ನಿಧ್ಯ ಇರಲಿ ಎಂದು ಸಪ್ತನದೀಸ್ತವದಲ್ಲಿ ಹೇಳಲಾಗಿದೆ.
ಗಂಗೇಚ ಯಮುನೇಚೈವ
ಗೋದಾವರಿ ಸರಸ್ವತಿ
ನರ್ಮದಾ ಸಿಂಧು ಕಾವೇರಿ
ಜಲೇಸ್ಮಿನ್‌ ಸನ್ನಿಧಿಂ ಕುರು

ನದಿಗಳಲ್ಲಿ ಸರಸ್ವತಿಗೆ ಅತ್ಯಂತ ಪವಿತ್ರ ಸ್ಥಾನವಿದೆ ಎಂದು ಋಗ್ವೇದ ಹೇಳುತ್ತದೆ. ನದಿಗಳ ತಾಯಿ ಎಂದು ಹೇಳಲಾಗುವ ಸರಸ್ವತಿಯ ವರ್ಣನೆಗೆಂದೇ ಋಗ್ವೇದದಲ್ಲಿ ನಲ್ವತ್ತಕ್ಕೂ ಹೆಚ್ಚು ಶ್ಲೋಕಗಳು ಮೀಸಲಾಗಿವೆ. ಗಂಗೆ ಮತ್ತು ಯಮುನೆ ಸಂಗಮಿಸುವ ಅಲಹಾಬಾದ್‌ನಲ್ಲಿ ಸರಸ್ವತಿ ಅದೃಶ್ಯಳಾಗಿ ಹರಿಯುತ್ತಿದ್ದಾಳೆ ಎಂಬ ಪ್ರತೀತಿ ಇದೆ. ಸರಸ್ವತಿಯ ಈ ‘ಭೂಗತ’ ಹರಿಯುವಿಕೆಗೆ ಸಂಬಂಧಿಸಿ ಅನೇಕ ಕಥೆಗಳೂ ಪ್ರಚಲಿತದಲ್ಲಿವೆ.

ಗಂಗೆ ಮತ್ತು ಕಾವೇರಿಗೆ ಪರಮಶಿವನ ಜೊತೆ, ಕೃಷ್ಣೆ ಮತ್ತು ಗೋದಾವರಿಗೆ ಮಹಾವಿಷ್ಣುವಿನ ಜೊತೆ ಸಂಬಂಧ ಕಲ್ಪಿಸುವ ಕಥೆಗಳೂ ಧಾರಾಳ ಇವೆ. ಕಾವೇರಿ ನದಿಯ ಹಾದಿಯಲ್ಲಿ ಸಿಗುವ ಮೂರು ದ್ವೀಪಗಳಾದ ಶ್ರೀರಂಗಪಟ್ಟಣ, ಶಿವನಸಮುದ್ರ ಮತ್ತು ಶ್ರೀರಂಗವನ್ನು ಮಹಾವಿಷ್ಣುವಿನ ವಾಸಸ್ಥಾನ ಎಂದೇ ಪರಿಗಣಿಸಲಾಗಿದೆ. ಸರಸ್ವತಿಯಂತೆಯೇ ಭೂಮಿಯ ಅಡಿಯಲ್ಲಿ ‘ಮಾಯ’ವಾಗಿರುವ ನದಿಗಳು ಇನ್ನೂ ಅನೇಕ ಇವೆ ಎಂಬ ನಂಬಿಕೆ ಭಾರತದಲ್ಲಿ ಇದೆ. ಕಡಲಾಚೆಗಿನ ಖಂಡದಲ್ಲಿ ಕುಳಿತು ಭಗವದ್ಗೀತೆಯ ಆಂತರ್ಯವನ್ನು ಅಭ್ಯಸಿಸಿದ ಟಿ.ಎಸ್.ಎಲಿಯಟ್‌ ಅಭಿಪ್ರಾಯಪಟ್ಟಂತೆ, ವಾಸ್ತವದಲ್ಲಿ ಆ ಅದೃಶ್ಯ ನದಿಗಳು ನಮ್ಮೊಳಗೇ ಹರಿಯುತ್ತಿರುತ್ತವೆ.

ನಂಬಿಕೆಗೆ ಜೋತುಬಿದ್ದವರಿಗೂ ಮುಗ್ಧತೆಯಿಂದ ಪೂಜಿಸಿದವರಿಗೂ, ಪರಿಸರ ಪ್ರೇಮಿಗಳಿಗೂ ನದಿಯೊಂದು ವಿಸ್ಮಯ. ಧಾರ್ಮಿಕ ಆಚರಣೆಗೂ ಮಿಗಿಲಾದ ಭಾವನಾತ್ಮಕ ಸಂಬಂಧವೊಂದುನದಿ ಮತ್ತು ಮನುಷ್ಯನ ನಡುವೆ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಒಲವು ಇಲ್ಲದ, ನಾಸ್ತಿಕನೂ ಭಾವಜೀವಿಯೂ ಆಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಕೂಡ ತಮ್ಮ ಚಿತಾಭಸ್ಮವನ್ನು ಗಂಗೆಗೆ ಸಮರ್ಪಿಸಬೇಕು ಎಂದು ಹೇಳಿರುವುದು ಇಲ್ಲಿ ಉಲ್ಲೇಖಾರ್ಹ.

ದೋಷಗಳಿಗೆ ಪರಿಹಾರ ನೀಡುವ ಮುಕ್ತಿದಾಯಿನಿ ಎಂಬ ನಂಬಿಕೆಯು ನದಿಗಳಿಗೆ ಪುತಾತನ ನಾಗರಿಕತೆಯಲ್ಲೇ ದೇವತೆಗಳ ಸ್ಥಾನ ನೀಡಿತ್ತು. ಜಲಗರ್ಭದಲ್ಲಿ ನಿಧಿ ಇದೆ ಎಂದೂ ಅದನ್ನು ಅಪ್ಸರೆಯರು ಕಾಯುತ್ತಿರುತ್ತಾರೆ ಎಂದೂ ಋಗ್ವೇದ ಹೇಳುತ್ತದೆ.

ಸಾವಿಗೀಡಾಗುವ ಒಂದು ದಶಕದ ಹಿಂದೆ, 1954ರ ಜೂನ್‌ 21ರಂದು ಅವರು ಬರೆದಿಟ್ಟ ಉಯಿಲಿನಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಮಾನವ ಮತ್ತು ನದಿಗಳ ನಡುವಿನ ಗಾಢ ಸಂಬಂಧವನ್ನು ವಿವರಿಸುವ ಸುಂದರ ಲೇಖನದ ರೂಪದಲ್ಲಿದೆ ಆ ಉಯಿಲು: ಅವರು ಬರೆಯುತ್ತಾರೆ…

ನನ್ನ ಚಿತಾಭಸ್ಮವನ್ನು ಗಂಗೆಯಲ್ಲಿ ಲೀನಗೊಳಿಸಬೇಕು. ಇದು ಧಾರ್ಮಿಕ ಹಿನ್ನೆಲೆಯ ನಿರ್ಧಾರವಲ್ಲ. ಅಲಹಾಬಾದ್‌ನಲ್ಲಿ ಬಾಲ್ಯವನ್ನು ಕಳೆಯುವಾಗಲೇ ಗಂಗೆ ಮತ್ತು ಯಮುನಾ ನದಿಯೊಂದಿಗೆ ನನ್ನ ಭಾವನಾತ್ಮಕ ಸಂಬಂಧ ಬೆಳೆದಿತ್ತು. ಈಗ ಆ ಸಂಬಂಧ ಗಾಢವಾಗಿದೆ. ಋತುಗಳು ಬದಲಾದಂತೆಲ್ಲ ಈ ನದಿಗಳಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿದಾಗ ಅವುಗಳೊಂದಿಗೆ ಬೆಸೆದುಕೊಂಡಿರುವ ಕಥೆ, ಹಾಡು, ಇತಿಹಾಸ, ಐತಿಹ್ಯ ಮುಂತಾದವೆಲ್ಲವೂ ನನ್ನ ಮನಸ್ಸಿನಲ್ಲಿ ಅಲೆಗಳನ್ನು ಎಬ್ಬಿಸುತ್ತವೆ. ಭಾರತದ ಕೋಟ್ಯಂತರ ಜನರ ನಿತ್ಯದ ಬದುಕಿನಲ್ಲಿ ಗಂಗೆಯ ಛಾಪು ಇದೆ. ದೇಶದ ಭವ್ಯ ಪರಂಪರೆಯ ಬಗ್ಗೆ ಗೌರವ ಇರುವ ವ್ಯಕ್ತಿಯಾಗಿರುವುದರಿಂದ ಮರಣದ ನಂತರ ನನ್ನನ್ನು ಗಂಗೆಯಲ್ಲಿ ಲೀನ ಮಾಡಬೇಕು.

ಗುಪ್ತರ ಕಾಲದಲ್ಲಿ (ಕ್ರಿ.ಶ 320–550) ಉತ್ತರ ಭಾರತದಲ್ಲಿ ನಿರ್ಮಿಸಲಾದ ಶಿಲಾದೇಗುಲಗಳ ಬಾಗಿಲುಗಳ ಇಕ್ಕೆಲಗಳಲ್ಲಿ ಗಂಗೆ ಮತ್ತು ಯಮುನೆಯನ್ನು ಚಿತ್ರಿಸಲಾಗಿದೆ ಎಂದು ಕಲಾ ಇತಿಹಾಸಕಾರ ಸಿ.ಶಿವರಾಮಮೂರ್ತಿ ವಿವರಿಸುತ್ತಾರೆ. ಭಾರತೀಯರಿಗೆ ಗಂಗೆ ಬರೀ ನದಿಯಲ್ಲ; ಗಂಗಾಮಾತೆ. ಈ ನದಿಯಲ್ಲಿ ಮುಳುಗೆದ್ದರೆ ಅದುವೇ ಪುಣ್ಯ ಸ್ನಾನ. ಮನೆಗಳಲ್ಲಿ ಗಂಗಾಜಲವನ್ನು ತಂದಿರಿಸುವುದು ಮತ್ತು ಸಾವಿನ ಸಂದರ್ಭದಲ್ಲಿ ಬಾಯಿಗೆ ಬಿಡುವುದನ್ನು ಪವಿತ್ರಕಾರ್ಯ ಎಂದೇ ನಂಬಲಾಗಿದೆ.

ಭಾರತದ ಎಲ್ಲ ನದಿಗಳಲ್ಲೂ ಗಂಗೆ ಅದೃಶ್ಯಳಾಗಿ ಸೇರಿದ್ದಾಳೆ ಎಂಬ ನಂಬಿಕೆಯೂ ಇದೆ. ಕಾವೇರಿಯನ್ನು ದಕ್ಷಿಣಗಂಗೆ ಎಂದೂ ಕಾವೇರಿ ಮಾತೆ ಎಂದೂ ಕರೆಯುವುದು ಇದೇ ಹಿನ್ನೆಲೆಯಲ್ಲಿ. ಕಾವೇರಿ ಮತ್ತು ಅದರ ಉದ್ಭವ ಸ್ಥಾನವಾದ ಬ್ರಹ್ಮಗಿರಿಯಿಂದ ಹರಿಯುವ ಸಣ್ಣ ಪುಟ್ಟ ತೊರೆಗಳನ್ನು ಪಾಪನಾಶಿನಿ ಎಂದೇ ಕರೆಯಲಾಗುತ್ತದೆ. ಬ್ರಹ್ಮಗಿರಿಯಲ್ಲಿ ಹುಟ್ಟುವ ತೊರೆಯೊಂದು ಕೇರಳದ ತಿರುನೆಲ್ಲಿಯಲ್ಲಿ ಕಾಳಿಂದಿ ನದಿಗೆ ಸೇರುತ್ತದೆ. ಇದನ್ನು ಅಲ್ಲಿಯ ಜನರು ಪಾಪನಾಶಿನಿ ಎಂದೇ ಕರೆಯುತ್ತಾರೆ. ಪಾಪನಾಶಿನಿ, ಶೋಕನಾಶಿನಿ ಎಂಬ ಹೆಸರಿರುವ ತೊರೆಗಳು ದಕ್ಷಿಣ ಭಾರತದಲ್ಲಿ ಸಾಕಷ್ಟು ಇವೆ. ಗಂಗೆ, ವರ್ಷದಲ್ಲಿ ಒಂದು ಬಾರಿ ಕಾವೇರಿಯನ್ನು ಸೇರುತ್ತಾಳೆ ಎಂದು ಹೇಳಲಾಗುತ್ತಿದ್ದು ತೀರ್ಥೋತ್ಭವದ ಆ ದಿನ ತಲಕಾವೇರಿಯಲ್ಲಿ ಹಬ್ಬದ ವಾತಾವರಣ.

ಬಿ.ಎಲ್‌.ರೈಸ್ ಕೊಡಗಿನ ಮಾಳಂಬಿಯಲ್ಲಿ ಶೋಧಿಸಿದ ಕ್ರಿ.ಶ 1004ರ ಶಿಲಾಶಾಸನವೊಂದರಲ್ಲಿ ಚೋಳರ ಮಹಾಮಹಿಪತಿ ಶ್ರೀ ಮಣಿರಾಜ ಕೇಸರಿವರ್ಮ ಪೆರ್ಮಾನಡಿಗಳ್ ಅವರನ್ನು ‘ಸಕಲಜನ ದುರಿತಹರಣ ನಿಪುಣೆ’ ಕವೇರಕನ್ಯೆಯನ್ನು (ಕಾವೇರಿ) ಪ್ರಿಯತಮೆಯಾಗಿ ಪಡೆದಾತ ಎಂದು ಬಣ್ಣಿಸಲಾಗಿದೆ. ಕಾವೇರಿ ನದಿ ತಟದಲ್ಲಿರುವ ತಿರುಶಿನಾಪಳ್ಳಿಯ ಕಲ್ಲಿನಕೋಟೆಯಲ್ಲಿರುವ ಶಿಲಾಶಾಸನವೊಂದರಲ್ಲಿ ಕಾವೇರಿಯು ಪಲ್ಲವರ ಒಲವಿನ ನದಿ ಎಂಬ ಉಲ್ಲೇಖವಿದೆ. ಕಾವೇರಿ, ಪಲ್ಲವರಾಜನ ಪತ್ನಿ ಎಂದು ಪಾರ್ವತಿಯೂ ಹೇಳುತ್ತಾಳೆ ಎಂದು ಅದರಲ್ಲಿ ಬರೆಯಲಾಗಿದೆ. ಶಿವನಿಗೆ ಕಾವೇರಿ ಮೇಲೆ ಮೋಹ ಉಂಟಾಗದಿರಲು ಪಾರ್ವತಿ ಕಂಡುಕೊಂಡ ವಿವೇಕದ ದಾರಿ ಅದಾಗಿರಬಹುದು ಎಂದು ಇಂಡಿಯನ್ ಎಪಿಗ್ರಫಿಯದ ಜನಕ ಡಾ.ಇ.ಫುಲ್ಟ್ಶ್‌ ಈ ಶಾಸನದ ವಿಶ್ಲೇಷಣೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಪರಮಶಿವನನ್ನೂ ಚಂಚಲಗೊಳಿಸುವಂಥ ಸೌಂದರ್ಯ ಕಾವೇರಿಯದಾಗಿತ್ತು ಎಂಬುದು ಇದರಿಂದ ವೇದ್ಯವಾಗುತ್ತದೆ.

ಸಂಸ್ಕೃತ ಕೃತಿ ‘ಮಹಾವಂಶಪುರಾಣ’ದಲ್ಲಿ ಗಂಗೆಯೊಂದಿಗೆ ಹೋಲಿಕೆ ಮಾಡುವ ಸಂದರ್ಭದಲ್ಲಿ ಕಾವೇರಿಗೆ ಅರ್ಧಗಂಗಾ ಎಂಬ ಹೆಸರು ನೀಡಲಾಗಿದೆ. ದಕ್ಷಿಣ ಭಾರತದಾದ್ಯಂತ ಕಾವೇರಿಗೆ ದಕ್ಷಿಣ ಗಂಗೆ ಎಂದೇ ಹೆಸರಿದೆ. ಕಾವೇರಿಯು ಕರ್ನಾಟಕ ಮತ್ತು ತಮಿಳುನಾಡಿನ ಜನರ ಆರಾಧ್ಯದೇವತೆಯೇ ಆಗಿದ್ದಾಳೆ. ಅನ್ನದಾತೆಯಾದ ಕಾವೇರಿ ಕುರಿತು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಸಾಕಷ್ಟು ಹಾಡುಗಳು ಜನಪ್ರಿಯವಾಗಿವೆ.

ಕೊಡವರು ಕಾವೇರಮ್ಮ ಎಂದೇ ಕರೆಯುವ ಕಾವೇರಿ ನದಿಯ ಉಪನದಿಗಳಲ್ಲಿ ಒಂದಾದ ಕಬಿನಿ ಹುಟ್ಟುವುದು ತಲಕಾವೇರಿಯ ಮತ್ತೊಂದು ಭಾಗದಲ್ಲಿ. ವಳಪಟ್ಟಣಂ, ಪಯಸ್ವಿನಿ ಮತ್ತಿತರ ಕಿರುನದಿಗಳು ಬ್ರಹ್ಮಗಿರಿಯಲ್ಲಿ ಹುಟ್ಟಿ ಮಲಬಾರ್ ಪ್ರದೇಶದ ಉತ್ತರದ ಕಡೆಗೆ ಹರಿಯುತ್ತವೆ. ಪೇರಳಶ್ಶೇರಿಯ ಸುಬ್ರಹ್ಮಣ್ಯ ದೇವಸ್ಥಾನದ ತೀರ್ಥಕ್ಕೂ ಕಾವೇರಿಗೂ ಸಂಬಂಧವಿದೆ ಎಂಬ ನಂಬಿಕೆ ಕೇರಳದ ಜನರಲ್ಲಿದೆ. ಕಾವೇರಿ ಸಂಕ್ರಮಣದ ದಿನ ಸುಬ್ರಹ್ಮಣ್ಯ ದೇವಸ್ಥಾನದ ಕಡೆಗೆ ಕಾವೇರಿ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಎನ್ನುವುದು ಈ ನಂಬಿಕೆಯ ತಿರುಳು. ಕಾವೇರಿ ಸಂಕ್ರಮಣದಂದು ಪೇರಳಶ್ಶೇರಿಯಲ್ಲೂ ಸಾವಿರಾರು ಮಂದಿ ಪುಣ್ಯಸ್ನಾನ ಮಾಡುತ್ತಾರೆ. ಕೊಡಗನ್ನು ಮಲಯಾಳಿಗಳು ಕಡು ಮಲೆನಾಡು ಎಂದೇ ಕರೆಯುತ್ತಿದ್ದರು ಎಂಬ ಮಾಹಿತಿ ಕೇರಳದ ಹಳೆ ದಾಖಲೆಗಳಲ್ಲಿ ಇದೆ.

ಸಪ್ತನದಿಸ್ತವದಂತೆ ಕಾವೇರಿಯ ಮಹಿಮೆ ಬಣ್ಣಿಸುವ ಕಾವ್ಯ ಮಲಯಾಳಂನಲ್ಲೂ ಇದೆ. ಕಿಳಿಪ್ಪಾಟ್‌ ಮಾದರಿಯ ‘ಕಾವೇರಿ ಮಹಾತ್ಮೆ’ ಎಂಬ ಈ ಕೃತಿಯನ್ನು ಆಗ್ನೇಯ ಪುರಾಣದ ಆಧಾರದಲ್ಲಿ ಕಡಿಯಂಕುಳತ್ತ್ ಶುಪ್ಪು ಮೇನವನ್‌ ಎಂಬ ಕವಿ 19ನೇ ಶತಮಾನದಲ್ಲಿ ರಚಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಚೆಂಬತ್ತಿಲ್‌ ಚಾತ್ತುಕುಟ್ಟಿ ಮನ್ನಾಡಿಯಾರ್ ಮತ್ತು ಸಿ.ಮಾಧವ ಮೇನೋನ್‌ ಮರುಮುದ್ರಣ ಮಾಡಿದ್ದಾರೆ.

ಪವಿತ್ರ ಸಪ್ತಲೋಕಗಳಲ್ಲಿ
ಅರುವತ್ತಾರು ಕೋಟಿ ತೀರ್ಥಗಳಿದ್ದು
ನಮ್ಮ ಪಾಪ ಕಳೆಯಲು ತುಲಾಸಂಕ್ರಮಣದ
ಪುಣ್ಯಸ್ನಾನ ಮಾಡಲಾಗುವುದು
ಎಂದು ಕಾವೇರಿ ಮಹಾತ್ಮೆಯಲ್ಲಿ ಬರೆಯಲಾಗಿದೆ. ತುಲಾಮಾಸದಲ್ಲಿ ಕಾವೇರಿ ದಡದಲ್ಲಿ ಈ ಗ್ರಂಥದ ಪಠಣ ಮಾಡಿದರೆ ದೇವತಾ ನಿಂದೆ, ಗುರುನಿಂದೆ, ಮಾತೃನಿಂದೆ, ಪಿತೃಹತ್ಯೆ, ಬ್ರಹ್ಮಹತ್ಯೆ, ಗೋಹತ್ಯೆ, ಪರರ ಸಂಪತ್ತಿನ ಅಪಹರಣ, ಪರಸ್ತ್ರೀ ಸಂಗಮ, ಮದ್ಯ ಸೇವನೆ, ನಿಷೇಧಿತ ಆಚರಣೆಗಳಲ್ಲಿ ಭಾಗಿ ಮುಂತಾದ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ಉಲ್ಲೇಖವೂ ಇದರಲ್ಲಿ ಇದೆ. ಕಾವೇರಿ ನದಿಯಲ್ಲಿ ಸ್ನಾನ, ತರ್ಪಣ, ಪಿತೃಕರ್ಮ ಇತ್ಯಾದಿಗಳನ್ನು ನೆರವೇರಿಸಲು ತುಲಾ ಮಾಸ ಉತ್ತಮ ಕಾಲ ಎಂದು ಕಾವೇರಿಸ್ತವದಲ್ಲಿ ಹೇಳಲಾಗಿದೆ. ಆದರೆ, ಪುರಾಣ ಪಾರಾಯಣದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿರುವ ಕೇರಳದ ಮನೆಗಳಲ್ಲಿ ಈ ಕೃತಿಯನ್ನು ಪಾರಾಯಣ ಮಾಡುತ್ತಿದ್ದುದನ್ನು ಸಾಬೀತು ಮಾಡಲು ಆಧಾರ ಇಲ್ಲ. ಕಾವೇರಿ ನದಿ ದಂಡೆಯ ಕರೂರ್‌ ಪಟ್ಟಣವನ್ನು ಕೇಂದ್ರೀಕರಿಸಿ ಕೇರಳ ಮತ್ತು ನೆರೆಯ ಪ್ರದೇಶಗಳನ್ನು ಆಳಿದವರು ಚೇರರು. ಅವರು ಪ್ರಭಾವ ಬೀರಿದ್ದ ಕೊಂಗುನಾಡಿನ ಯಾವುದೋ ತಮಿಳು ಕವಿ ಬರೆದಿರಬಹುದಾದ ಕಾವ್ಯವು ಮಲಯಾಳಂಗೆ ಭಾಷಾಂತರಗೊಂಡಿರಬಹುದು ಎಂಬ ಅಭಿಪ್ರಾಯವೂ ಇದೆ.

ಭಾರತದಲ್ಲಿ ಪುರಾಣಗಳೊಂದಿಗೆ ಸ್ಥಳೀಯ ಸಂಸ್ಕೃತಿಯನ್ನು ಬೆಸೆದು ಕಥೆ ಹೆಣೆಯುವ ಪ್ರಯತ್ನಗಳು ಲಾಗಾಯ್ತಿನಿಂದಲೇ ನಡೆದುಕೊಂಡು ಬಂದಿವೆ. ಗಂಗೆಯ ಜೊತೆ ಕಾವೇರಿಯ ಹೋಲಿಕೆ ಮಾಡಿದ್ದು ಮತ್ತು ಪುರಾಣದೊಂದಿಗೆ ಈ ನದಿಗೆ ಸಂಬಂಧ ಕಲ್ಪಿಸಿದ್ದು ಅಂಥ ಪ್ರಯತ್ನದ ಭಾಗವೇ ಆಗಿರಬೇಕು. ಯಮುನೆಯೊಂದಿಗೆ ಗಂಗಾನದಿ ವಿಲೀನ ವಾಗುವ ಅಲಹಾಬಾದಿನಲ್ಲಿ ಸರಸ್ವತಿಯ ಸಾನಿಧ್ಯವೂ ಇದೆ ಎಂದು ಹೇಳಲಾಗುತ್ತಿದ್ದು ಇದೇ ಪರಿಕಲ್ಪನೆಯಲ್ಲಿ ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಸುಜ್ಯೋತಿ ಎಂಬ ನದಿ ಗುಪ್ತಗಾಮಿನಿಯಾಗಿದೆ ಎಂಬ ನಂಬಿಕೆ ಇದೆ.

ಸ್ಕಂದಪುರಾಣದಲ್ಲೂ ಕಾವೇರಿಗೆ ಸಂಬಂಧಿಸಿದ ಕಥೆಗಳು ಇದ್ದು ಕೊಡವರ ವಿಶಿಷ್ಟ ಆಚರಣೆಗಳ ವಿವರವೂ ಇದೆ. ಕೊಡವ ಮಹಿಳೆಯರು ಉಡುವ ಸೀರೆಯ ನೆರಿಗೆ ಹಿಂದಕ್ಕೆ ಸರಿದದ್ದು ಯಾಕೆ ಎಂಬುದನ್ನು ವಿವರಿಸುವ ಕಥೆಯೊಂದು ಈ ಪೈಕಿ ಕುತೂಹಲಕಾರಿಯಾಗಿದೆ. ತಲಕಾವೇರಿಯಿಂದ ಅಪ್ರತ್ಯಕ್ಷಳಾದ ಕಾವೇರಿ ಮಾತೆಯನ್ನು ಭೇಟಿಯಾಗಿ ತಮ್ಮನ್ನು ಬಿಟ್ಟುಹೋಗಬಾರದು ಎಂದು ಕೋರಲು ಕೊಡವ ಮಹಿಳೆಯರು ಬಲಮುರಿಯಲ್ಲಿ ಕಾದು ನಿಂತಿದ್ದರೆಂದೂ ಅಲ್ಲಿ ಪ್ರವಾಹದ ರಭಸಕ್ಕೆ ಸಿಲುಕಿ ಅವರ ಸೀರೆಯ ನೆರಿಗೆ ಹಿಂದಕ್ಕೆ ಸರಿಯಿತು ಎಂದೂ ಇದರಲ್ಲಿ ವಿವರಣೆ ಇದೆ. ಕೊಡವರ ಉಡುಗೆ–ತೊಡುಗೆಯ ಮೇಲೂ ಕಾವೇರಿಯ ಪ್ರಭಾವ ಇದೆ ಎಂಬುದಕ್ಕೆ ಇದೊಂದು ಉದಾಹರಣೆ.

ಕೊಡವರ ಕಾವಲು ದೇವತೆಯಾದ ಕಾವೇರಿಯನ್ನು ಸ್ಕಂದ ಪುರಾಣದಲ್ಲಿ ಶಿವನ ಅರ್ಧಾಂಗಿ ಪಾರ್ವತಿಯ ಅವತಾರ ಎಂದು ಉಲ್ಲೇಖಿಸಲಾಗಿದೆ. ಸ್ಥಳೀಯ ವೈಶಿಷ್ಟ್ಯಗಳು ಪುರಾಣದಲ್ಲಿ ಸೇರಿಕೊಂಡು ಇನ್ನಷ್ಟು ಪ್ರಭಾವಿಯಾಗಿ ಜನಮಾನಸದಲ್ಲಿ ಬೆಸೆದುಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಕಾವೇರಿ ನದಿಗೆ ಸಂಬಂಧಿಸಿದ ಕಥೆಗಳು ಪುರಾಣದ ಜೊತೆ ತಳಕು ಹಾಕಿದ್ದು ಕೂಡ ಇಂಥ ಪ್ರಕ್ರಿಯೆಯ ಭಾಗ ಎಂದು ಖ್ಯಾತ ಸಮಾಜ ವಿಜ್ಞಾನಿ ಎಂ.ಎಸ್.ಶ್ರೀನಿವಾಸ್‌ ಅಭಿಪ್ರಾಯಪಡುತ್ತಾರೆ.

ಸಮುದ್ರಮಟ್ಟದಿಂದ 1355 ಮೀಟರ್ ಎತ್ತರಲ್ಲಿರುವ ತಲಕಾವೇರಿಯಲ್ಲಿ ಜೀವ ತಳೆಯುವ ಕಾವೇರಿಗೆ ದಕ್ಷಿಣ ಗಂಗೆ, ಅರ್ಧಗಂಗೆ ಎಂದೆಲ್ಲ ಪರ್ಯಾಯ ಹೆಸರುಗಳಿವೆ. 785 ಕಿಲೋಮೀಟರ್ ಕ್ರಮಿಸಿದ ನಂತರ ಈ ನದಿ ಬಂಗಾಳ ಕೊಲ್ಲಿಯಲ್ಲಿ ವಿಲೀನವಾಗುತ್ತದೆ. ನಿತ್ಯಹರಿದ್ವರ್ಣದಿಂದ ಕೂಡಿದ ಸಹ್ಯಾದ್ರಿಯ ಮಡಿಲಲ್ಲಿ ಜನಿಸಿ ಪೂಂಪಟ್ಟಣಂ ಎಂದು ಕರೆಯಲಾಗುವ ಪೂಂಪುಹಾರ್‌ (ತಮಿಳುನಾಡು) ವರೆಗಿನ ಕಾವೇರಿಯ ತಟದಲ್ಲಿ ಬಹುದೊಡ್ಡ ಜನಸಂಸ್ಕೃತಿ ಹುದುಗಿಕೊಂಡಿದೆ. ಗತಕಾಲದ ಸ್ಮರಣೆಗಳಿಗೆ ಜೀವತುಂಬುವ ಅನೇಕ ಸ್ಮಾರಕಗಳು ಇನ್ನೂ ಈ ನದಿಯ ದಡದಲ್ಲಿ ಉಳಿದಿವೆ. ಈ ಸ್ಮಾರಕಗಳಲ್ಲಿ ಪವಿತ್ರ ಭಕ್ತಿಯ ಕುರುಹುಗಳನ್ನೂ ರಾಜಕೀಯ ಮೇಲಾಟದ ಬಣ್ಣಗಳನ್ನೂ ಕಾಣಬಹುದಾಗಿದೆ.

ನದಿದಡದ ಉದ್ದಕ್ಕೂ ಶೈವ–ವೈಷ್ಣವ ಪಂಥಗಳ ಬೃಹತ್‌ ದೇವಸ್ಥಾನಗಳಿದ್ದು ಅವುಗಳ ಹಿನ್ನೆಲೆಯನ್ನು ಕೆದಕಿದರೆ ಅವುಗಳೊಂದಿಗೆ ಮಿಳಿತವಾಗಿರುವ ಕಾಲದ ಪ್ರಭುತ್ವದ ಚರಿತ್ರೆ ಕಣ್ಣ ಮುಂದೆ ನಿಲ್ಲುತ್ತದೆ. ವಿಜಯನಗರ ಅರಸರ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ನಿರ್ಮಿಸಿದ ಶ್ರೀರಂಗನಾಥ ದೇವಾಲಯ ಮತ್ತು ಚೋಳರು ತಂಜಾವೂರಿನಲ್ಲಿ ನಿರ್ಮಿಸಿದ ಬೃಹದೇಶ್ವರ ದೇವಸ್ಥಾನ ಇದಕ್ಕೆ ಉತ್ತಮ ಉದಾಹರಣೆ. ಈ ದೇವಸ್ಥಾನಗಳ ನಿರ್ಮಾಣ ಶೈಲಿ ಅಚ್ಚರಿ ಮೂಡಿಸುತ್ತದೆ. ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಮನಸ್ಸುಗಳು, ನಂತರ ಪರಿಸ್ಥಿತಿಗೆ ತಕ್ಕಂತೆ ಆದ ಬದಲಾವಣೆಗಳನ್ನು ಒಪ್ಪಿಕೊಂಡು ಮುಂದುವರಿಯುತ್ತಿರುವ ಸಾಮಾಜ, ಕಾವೇರಿ ದಡದಲ್ಲಿ ಮೇಳೈಸಿದ ರಾಜಕೀಯಕ್ಕೆ ಹಿನ್ನೆಲೆಯಾಗಿದ್ದ ಇತಿಹಾಸ ಮತ್ತು ವರ್ತಮಾನದ ಹುಡುಕಾಟ ಕಾವೇರಿಯ ಜೊತೆಗೆ ನನ್ನ ಪಯಣದ ಉದ್ದೇಶವಾಗಿತ್ತು. ಇತಿಹಾಸದ ಚರ್ವಿತ ಚರ್ವಣ ವ್ಯಾಖ್ಯಾನಗಳನ್ನು ಬದಿಗಿರಿಸಿ, ಪಠ್ಯಪುಸ್ತಕಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳಿಗೆ ಮೊರೆಹೋಗದೆ, ಆಯಾ ಪ್ರದೇಶಗಳಿಗೆ ಸಂಬಂಧಿಸಿದ ದಾಖಲೆಗಳ ಅಧ್ಯಯನ ಮತ್ತು ಮೂಲಗಳ ಪರಿಶೀಲನೆಯ ಮೂಲಕ ಈ ಪಯಣದ ಕಥನವನ್ನು ಪ್ರಾಮಾಣಿಕವಾಗಿಸಲು ಪ್ರಯತ್ನಿಸಿದ್ದೇನೆ. ಮಾಹಿತಿಗಾಗಿ ಅನೇಕ ದಾಖಲೆಗಳನ್ನು ಪರಾಮರ್ಶಿಸಿದರೂ ಸತ್ಯದರ್ಶನ ದಲ್ಲಿ ಆತ್ಮವಂಚನೆ ಮಾಡಿಕೊಳ್ಳದೆ ಅಂತಿಮ ತೀರ್ಮಾನ ಕೈಗೊಂಡಿದ್ದೇನೆ.

(ವಿಕ್ರಂ ಕಾಂತಿಕೆರೆ)

ಭಾರತೀಯ ಪುರಾತತ್ವಶಾಸ್ತ್ರದ ಅನೇಕ ಕೃತಿಗಳನ್ನು ಅಧ್ಯಯನ ಮಾಡಿದ್ದೇನೆ. ಇದಕ್ಕೆ ನೆರವಾರ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಸೆಂಟ್ರಲ್‌ ಲೈಬ್ರರಿಯ ಅಧಿಕಾರಿಗಳಿಗೆ ನನ್ನ ನಮನಗಳು. ಕಾವೇರಿ ದಡದಲ್ಲಿ ದಶಕಕ್ಕೂ ಹೆಚ್ಚು ಕಾಲ ಪಯಣಿಸಿದಾಗ ಜೊತೆ ಬಂದ, ಅಪೂರ್ವ ಮಾಹಿತಿಗಳನ್ನು ನೀಡಿದ, ಪದೇಪದೇ ಒಂದೇ ಪ್ರದೇಶದಲ್ಲಿ ಯಾಕೆ ತಿರುಗಾಡುತ್ತೀರಿ ಎಂದು ಕೇಳುತ್ತಲೇ ನೆರವಿಗೆ ನಿಂತ ಅನೇಕರನ್ನು ನೆನೆಯಬೇಕಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ.

ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರು ನಗಣ್ಯ ಮಾಡಿದ ಅನೇಕ ಪ್ರದೇಶಗಳು ನನ್ನ ಪಾಲಿಗೆ ವಿಶೇಷ ವಾಗಿದ್ದವು. ಅಂಥ ಸ್ಥಳಗಳು ಮತ್ತೆ ಮತ್ತೆ ನನ್ನ ನೆನಪಿನಂಗ ಳಕ್ಕೆ ಬಂದು ಹೋಗುತ್ತಿವೆ. ಪಯಣದ ವಿವರಗಳನ್ನು ಪುಸ್ತಕ ರೂಪಕ್ಕೆ ಇಳಿಸುವಾಗಲೂ ಹಳೆಬೀಡು, ಶ್ರವಣಬೆಳಗೊಳ, ಕನಕಗಿರಿ, ಮೇಲುಕೋಟೆ, ತಿರುವೈಯಾರ್‌, ಗಂಗೈಕೊಂಡ ಚೋಳಪುರ, ಶಿವನಸಮುದ್ರ ಮುಂತಾದ ಪ್ರದೇಶಗಳ ನಿಗೂಢಗಳು ನನ್ನನ್ನು ಕಾಡುತ್ತಲೇ ಇದ್ದವು.

ಜನರು ದೇವತೆಯಂತೆ ಕಾಣುವ, ಒಂಬತ್ತನೇ ಶತಮಾನದ ವೈಷ್ಣವ ಮಿಸ್ಟಿಕ್ ಕವಯಿತ್ರಿ ಆಂಡಾಳ್‌, 11ನೇ ಶತಮಾನದಲ್ಲಿ ಪತಿಯ ಚಿತೆಯಲ್ಲಿ ಜೀವಂತ ಸುಟ್ಟು ಭಸ್ಮವಾದ ಮಹಾಸತಿ ದೇಕಬ್ಬೆ, ಪುರುಷನ ಸ್ವಾರ್ಥಕ್ಕೆ ಒಳಗಾಗಿ ಕಾವೇರಿ ನದಿಯಲ್ಲಿ ಜೀವತ್ಯಾಗ ಮಾಡಿದ 17ನೇ ಶತಮಾನದ ಅಲಮೇಲಮ್ಮ, 18ನೇ ಶತಮಾನದ ದೇವದಾಸಿ ಕವಯಿತ್ರಿ ಮುದ್ದುಪಳನಿ, 19ನೇ ಶತಮಾನದಲ್ಲಿ ವಿಕ್ಟೋರಿಯ ರಾಣಿಯ ಆಶ್ರಯದಲ್ಲಿ ಬೆಳೆದು ಕೊನೆಗೆ ‘ವಿಕ್ಟೋರಿಯನ್‌ ನೈತಿಕತೆ’ಗೇ ಸವಾಲಾದ ಕೊಡಗಿನ ರಾಜಕುಮಾರಿ ಗೌರಮ್ಮ, 20ನೇ ಶತಮಾನದ ನೃತ್ಯಗಾರ್ತಿ, ಹಾಡುಗಾರ್ತಿ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ದೇವದಾಸಿ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ, ಬ್ರಾಹ್ಮಣ್ಯದ ಪ್ರಾಬಲ್ಯದಿಂದ ಬೆಳೆದ ಜಾತಿಯ ಗೋಡೆಗಳನ್ನು ಭಕ್ತಿಯ ಬಲದಿಂದ ಕೆಡವಿ ಹಾಕಲು ಪ್ರಯತ್ನಿಸಿ ಬಲಿಯಾದ ನಂದನಾರ್‌ ಮುಂತಾದವರು ಪದೇ ಪದೇ ಸ್ಮೃತಿಪಟಲದಲ್ಲಿ ಬಂದು ನಿಲ್ಲುತ್ತಾರೆ. ಎಷ್ಟೋ ವೇಳೆ ಅವರ ನೆನಪಿನಲ್ಲಿ ಮೈಮರೆತಾಗ ಅವರು ನಡೆದ ಹಾದಿಯಲ್ಲಿ ನನ್ನನ್ನು ಕರೆದುಕೊಂಡು ಹೋದ ಕಾವೇರಿಯನ್ನೇ ಮರೆತದ್ದೂ ಉಂಟು.

ಪಶ್ವಿಮಘಟ್ಟದ ಬ್ರಹ್ಮಗಿರಿಗೆ ಸೇರಿದ ಗಿರಿಶೃಂಗಗಳಲ್ಲಿ ಒಂದಾದ ತಲಕಾವೇರಿಯಿಂದ ಹರಿಯುತ್ತಿರುವ ಕಾವೇರಿಯೊಂದಿಗೆ ತಮಿಳುನಾಡಿನ ಪುರಾತನ ಬಂದರು ಪಟ್ಟಣ ಪೂಂಪುಹಾರ್ ವರೆಗೆ ವರ್ಷಾನುಗಟ್ಟಲೆ ಸವೆಸಿದ ಹಾದಿಯ ಮಧ್ಯೆ ಕಂಡ ಐತಿಯಾಸಿಕ ಸ್ಮಾರಕಗಳು, ಕೇಳಿದ ಪುರಾತನ ಕಥೆಗಳು, ಅನುಭವಿಸಿದ ವೈಯಕ್ತಿಕ ಅನುಭೂತಿ ಇತ್ಯಾದಿಗಳನ್ನು ವರ್ಷಗಳ ಬಳಿಕ ಅಕ್ಷರ ರೂಪಕ್ಕೆ ಇಳಿಸುವುದು ದೊಡ್ಡ ಸವಾಲಾಗಿತ್ತು. ಆದರೂ ಇದು ಹೃದಯ ತಣಿಸುವ ಸುಖಾನುಭವ ನೀಡಿತು.

ಐತಿಹಾಸಿಕ ಹಿನ್ನೆಲೆಯ ಕೃತಿ ರಚನೆ ಮಾಡುವುದು ನನ್ನ ಉದ್ದೇಶವಾಗಿತ್ತು. ದಕ್ಷಿಣ ಭಾರತದ ಇತಿಹಾಸದಲ್ಲಿ ಮಿಳಿತ ವಾಗಿರುವ ಇತರ ಕುತೂಹಲಕಾರಿ ಅಂಶಗಳನ್ನು ಓದುಗರ ಮುಂದಿಡುವ ಪ್ರಯತ್ನವನ್ನೂ ಮಾಡಿದ್ದೇನೆ. ಹರಿಯುವ ನದಿಯಲ್ಲಿ ಕಾಲೂರಿದಾಗಲೆಲ್ಲ ಅದು ಹೊಸ ನದಿಯೆಂದೇ ಭಾಸವಾಗುತ್ತದೆ ಎಂದು ಗ್ರೀಸ್‌ನ ಖ್ಯಾತ ಚಿಂತಕ ಹೆರಕ್ಲೀಟಸ್ ಹೇಳಿದ್ದ. ಈ ಮಾತಿನ ಹಿನ್ನೆಲೆಯಲ್ಲಿ ನನ್ನ ಪಯಣವನ್ನು ಮೆಲುಕು ಹಾಕಿದರೆ ಕಾವೇರಿಯ ಅನೇಕ ಜನ್ಮಗಳೊಂದಿಗೆ ನಾನು ಹೆಜ್ಜೆ ಹಾಕಿದ್ದೇನೆ ಎಂದೇ ಹೇಳಬಹುದು.