ಬಲ್ತಸಾರ್ ಮತ್ತು ಬ್ಲಿಮುಂಡಾರಿಗೆ ಅಂಥ ಯಾವ ತೋರಿಕೆಗಳ ಅವಶ್ಯಕತೆಯಿಲ್ಲ. “ನಿನ್ನ ಹೆಸರೇನು?” ಎಂದು ಸಂತೆಯಲ್ಲಿ ತನ್ನ ಹೆಸರು ಕೇಳಿದ ತರುಣಿ ಬ್ಲಿಮುಂಡಾಳ ಹಿಂದೆ ಬಲ್ತಸಾರ್ ನಡೆದು ಬಂದಿದ್ದಾನೆ. ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಮೊದಲ ದಿನವೇ ಬ್ಲಿಮುಂಡಾಳ ವಿಚಿತ್ರ ಅಭ್ಯಾಸವನ್ನು ಬಲ್ತಸಾರ್ ಕಾಣುತ್ತಾನೆ. ರಾತ್ರಿಯೇ ಹಾಸಿಗೆಯ ಪಕ್ಕದಲ್ಲಿ ಬ್ರೆಡ್ಡಿನ ತುಂಡೊಂದನ್ನು ತೆಗೆದಿಟ್ಟುಕೊಂಡು ಮುಂಜಾನೆ ಕಣ್ತೆರೆಯುವ ಮೊದಲೇ ಬ್ಲಿಮುಂಡಾ ಆ ಬ್ರೆಡ್ಡನ್ನು ತಿಂದು ಮುಗಿಸಿಯೇ ಕಣ್ಬಿಡುತ್ತಾಳೆ.
1998ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪೋರ್ಚುಗೀಸ್ ಭಾಷೆಯ ಬರಹಗಾರ ಹೋಸೆ ಸಾರಮಾಗೊ ಬರೆದ ಪ್ರಸಿದ್ಧ ಕಾದಂಬರಿ ಬಲ್ತಸಾರ್ ಮತ್ತು ಬ್ಲಿಮುಂಡಾ ಕುರಿತು ಕಾವ್ಯಾ ಕಡಮೆ ವಿಶ್ಲೇಷಿಸಿದ್ದಾರೆ.

 

ಬಲ್ತಸಾರನಿಗೆ ಬದುಕಿನ ಕುರಿತು ಅಂಥ ನಿರೀಕ್ಷೆಗಳಿಲ್ಲ. ಯುದ್ಧದಲ್ಲಿ ತನ್ನ ಎಡಗೈ ಕಳೆದುಕೊಂಡ ಅವನು ಅದೇ ಕಾರಣಕ್ಕೆ ಸೇನೆಯಿಂದ ಹೊರದೂಡಲ್ಪಟ್ಟವನು. ತನ್ನ ಹುಟ್ಟೂರಾದ ಮಾಫ್ರಾಗೆ ತೆರಳುವ ದಾರಿಯಲ್ಲಿ ರಾಜಧಾನಿ ಲಿಸ್ಬನ್‌ನಲ್ಲಿ ಕೈಕೋಳ ತೊಟ್ಟ ಖೈದಿಗಳ ಮೆರವಣಿಗೆ ಕಂಡು ನಿಲ್ಲುತ್ತಾನೆ. ರಾಜಾಜ್ಞೆಯಂತೆ ಆ ಖೈದಿಗಳಲ್ಲಿ ಕೆಲವರಿಗೆ ಚಡಿಯೇಟು ನೀಡಿ ಗಡಿಪಾರು ಮಾಡಲಾಗಿದೆ. ಇಬ್ಬರು ಹೆಂಗಸರನ್ನು ಜೀವಂತ ಸುಡಲಾಗುವುದು ಎಂದು ತಿಳಿದು ಜನಜಂಗುಳಿ ಭಾರಿಯಾಗಿಯೇ ನೆರೆದಿದೆ.

ಅಲ್ಲಿಗೆ ಒಬ್ಬ ತರುಣಿ ಬರುತ್ತಾಳೆ. ಸಾಲಾಗಿ ನಿಂತ ಖೈದಿಗಳ ಗುಂಪಿನತ್ತ ನೋಡಿ ಅಲ್ಲಿನ ಒಬ್ಬಾಕೆಯ ಮೇಲೆ ದೃಷ್ಟಿ ನೆಟ್ಟು “ಓಹ್, ಅಲ್ಲಿದ್ದಾಳೆ ನನ್ನ ತಾಯಿ” ಎನ್ನುತ್ತಾಳೆ. ಅವಳ ದನಿ ಉದಾಸೀನತೆಯಿಂದ ಕೂಡಿದೆ, ಭಾವರಹಿತವಾಗಿದೆ. ಮೊದಲ ಮಾತನ್ನು ನುಡಿದಷ್ಟೇ ಸಹಜವಾಗಿ ಅಲ್ಲೇ ನಿಂತಿದ್ದ ಬಲ್ತಸಾರನತ್ತ ತಿರುಗಿ “ನಿನ್ನ ಹೆಸರೇನು?” ಎಂದು ಕೇಳುತ್ತಾಳೆ.

ಅಷ್ಟೇ. ಬಲ್ತಸಾರ್ ಮತ್ತು ಬ್ಲಿಮುಂಡಾ ಜೊತೆಯಾಗುವುದು ಹೀಗೆ. ಹೀಗೆ ಶುರುವಾದ ಬಂಧ ನಂತರ ಎಂತೆಂಥದೋ ಸುರಂಗಗಳನ್ನು ಹಾಯುತ್ತದೆ, ಒಂದು ಬಾರಿ ಆಗಸದ ವಿಮಾನಯಾನದಲ್ಲೂ ವಿಸ್ಮಯಕಾರಿಯಾಗಿ ಜೊತೆಯಾಗುತ್ತದೆ! ಹದಿನೆಂಟನೆಯ ಶತಮಾನದ ಕತೆ ಹೇಳುತ್ತ ಅಲ್ಲಿ ರೋಚಕ ವಿಮಾನಯಾನದ ಅನುಭವವನ್ನು ಸೃಷ್ಟಿಸಲು ಹೋಸೆ ಸಾರಮಾಗೊರಂಥ ಓರಿಜಿನಲ್ ಲೇಖಕರೇ ಬರಬೇಕೇನೋ. ಅವರು ಬಲ್ತಸಾರ್ ಮತ್ತು ಬ್ಲಿಮುಂಡಾ ಕಾದಂಬರಿಯನ್ನು ಪೋರ್ಚುಗೀಸ್ ಭಾಷೆಯಲ್ಲಿ ಬರೆದದ್ದು 1982ರಲ್ಲಿ. ಆ ನಂತರ ಈ ಕಾದಂಬರಿ ಐವತ್ತಕ್ಕೂ ಅಧಿಕ ಆವೃತ್ತಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಸಾರಮಾಗೊ ಕಾದಂಬರಿಗಳ ಯಾವತ್ತೂ ವೈಶಿಷ್ಟ್ಯವಾದ ವರ್ಗಸಂಘರ್ಷ, ಮನುಷ್ಯರಿಗೆ ಸಾಧ್ಯವಾಗುವ ಅತೀಂದ್ರಿಯ ಶಕ್ತಿಗಳು, ದೇವರ ನೈಜ ಮುಖದ ಕುರಿತ ಚಿಂತನೆ ಮುಂತಾದ ಮ್ಯಾಜಿಕ್‌ಗಳು ಇಲ್ಲಿ ಕೂಡ ಕೆಲಸಮಾಡಿದೆ.

(ಹೋಸೆ ಸಾರಮಾಗೊ)

ಕಾದಂಬರಿಯನ್ನು ಕಾಲದ ಕೌದಿಯಲ್ಲಿ ಸೇರಿಸಿ ಹೊಲಿದಿರುವಂತೆ ಅಲ್ಲಲ್ಲಿ ಐತಿಹಾಸಿಕ ಉಲ್ಲೇಖಗಳಿವೆ. ಇಡೀ ಕತೆ ನಡೆಯುವುದು ಇಂದಿನ ಪೋರ್ಚುಗಲ್‌ನ ಪ್ರಮುಖ ಪ್ರವಾಸಿ ತಾಣವಾದ ಕಾನ್ವೆಂಟ್ ಆಫ್ ಮಾಫ್ರಾ ನಿರ್ಮಾಣವಾಗುವ ಸಮಯದಲ್ಲಿ. ಕಾದಂಬರಿ ಶುರುವಾಗುವುದೇ ಪೋರ್ಚುಗಲ್‌ನ ರಾಜ ಡಾಮ್ ಜೊವಾ ತನ್ನ ರಾಣಿ ಡೋನಾ ಮರಿಯಾಳ ಅಂತಃಪುರಕ್ಕೆ ಭೇಟಿ ಕೊಡುವ ಘಟನೆಯ ವಿವರಗಳ ಜೊತೆಗೆ. ಮದುವೆಯಾಗಿ ಇಷ್ಟು ವರ್ಷವಾದರೂ ಸಂತಾನ ಫಲಿಸದೇ ಪಟ್ಟದರಸಿಯ ಬಗೆಗೆ ಎಲ್ಲ ಕಡೆಗೂ ಪಿಸುನುಡಿಯಲ್ಲಿ ಗಾಳಿಮಾತುಗಳು ಹರಿದಾಡುತ್ತಿವೆ. ಈ ಬಾರಿಯಾದರೂ ರಾಣಿ ತಾಯಿಯಾದರೆ ತನ್ನ ರಾಜ್ಯದಲ್ಲಿ ದೊಡ್ಡದಾದ ಕಾನ್ವೆಂಟ್ ಒಂದನ್ನು ಕಟ್ಟಿಸುತ್ತೇನೆ ಎಂದು ರಾಜ ಪ್ರತಿಜ್ಞೆ ಮಾಡುತ್ತಾನೆ.

ರಾಜ ಮತ್ತು ರಾಣಿ ಮಿಲನಕ್ರಿಯೆಯಲ್ಲಿ ತೊಡಗಿರುವಾಗ ಮುಚ್ಚಿದ ಬಾಗಿಲಿನ ಹೊರಗೆ ತನ್ನ ಕೆಲಸ ಮುಗಿಸಿ ಹಿಂತಿರುಗಲಿರುವ ರಾಜನನ್ನು ಕಾಯುತ್ತ ಆಪ್ತ ಸಹಾಯಕರ ಒಂದು ಪಡೆಯೇ ನೆರೆದಿದೆ. ಇತ್ತ ಒಳಕೋಣೆಯ ಇನ್ನೊಂದು ಬಾಗಿಲಿನಲ್ಲಿ ರಾಣಿಯ ಸಖಿಯರು ಅಂಥದೇ ದುಗುಡದಲ್ಲಿ ಕಾಯುತ್ತಿದ್ದಾರೆ. ಅತ್ಯಂತ ಖಾಸಗೀ ಸಂಗತಿಗಳೂ ಅರಮನೆಯಲ್ಲಿ ಹೇಗೆ ಬಯಲಲ್ಲಿ ನಡೆದಂತೆ ಜರುಗುತ್ತವೆ ಎಂಬುದನ್ನು ನಿರೂಪಕರು ಗಮನಿಸುತ್ತಾರೆ. ಹೀಗಿದ್ದಾಗಲೂ ರಾಣಿಯ ಹಾಸಿಗೆ ಮೇಲಿನ ತಿಗಣೆಗಳು ಅವರಿಬ್ಬರ ರಕ್ತ ಕುಡಿಯುತ್ತಿದ್ದವು, ಆ ರಕ್ತದ ರುಚಿ ಸಾಮಾನ್ಯರ ರಕ್ತದ ರುಚಿಗಿಂಥ ಬೇರೆಯಾಗಿರಲಿಲ್ಲ ಎಂಬುದನ್ನು ಆ ತಿಗಣೆಗಳು ಅರಿತಿದ್ದವು ಎಂದು ಹೇಳಲು ಮರೆಯುವುದಿಲ್ಲ.

ಇತ್ತ ಅದೇ ರಾಜಧಾನಿಯಲ್ಲಿ ಜೊತೆಗೆ ಬದುಕುತ್ತಿರುವ ಬಲ್ತಸಾರ್ ಮತ್ತು ಬ್ಲಿಮುಂಡಾರಿಗೆ ಅಂಥ ಯಾವ ತೋರಿಕೆಗಳ ಅವಶ್ಯಕತೆಯಿಲ್ಲ. “ನಿನ್ನ ಹೆಸರೇನು?” ಎಂದು ಸಂತೆಯಲ್ಲಿ ತನ್ನ ಹೆಸರು ಕೇಳಿದ ತರುಣಿ ಬ್ಲಿಮುಂಡಾಳ ಹಿಂದೆ ಬಲ್ತಸಾರ್ ನಡೆದು ಬಂದಿದ್ದಾನೆ. ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಮೊದಲ ದಿನವೇ ಬ್ಲಿಮುಂಡಾಳ ವಿಚಿತ್ರ ಅಭ್ಯಾಸವನ್ನು ಬಲ್ತಸಾರ್ ಕಾಣುತ್ತಾನೆ. ರಾತ್ರಿಯೇ ಹಾಸಿಗೆಯ ಪಕ್ಕದಲ್ಲಿ ಬ್ರೆಡ್ಡಿನ ತುಂಡೊಂದನ್ನು ತೆಗೆದಿಟ್ಟುಕೊಂಡು ಮುಂಜಾನೆ ಕಣ್ತೆರೆಯುವ ಮೊದಲೇ ಬ್ಲಿಮುಂಡಾ ಆ ಬ್ರೆಡ್ಡನ್ನು ತಿಂದು ಮುಗಿಸಿಯೇ ಕಣ್ಬಿಡುತ್ತಾಳೆ. ಬಲ್ತಸಾರ್ ಕಾರಣ ಕೇಳಿದಾಗ ಖಾಲಿಹೊಟ್ಟೆಯಲ್ಲಿದ್ದಾಗ ಬ್ಲಿಮುಂಡಾಳಿಗೆ ವ್ಯಕ್ತಿಗಳ ಒಳಗನ್ನು ಕಾಣುವ ಶಕ್ತಿಯಿರುವುದು ತಿಳಿಯುತ್ತದೆ. ಹೀಗಾಗಿ ಕಣ್ಬಿಡುವ ಮುನ್ನವೇ ಅವಳು ಬ್ರೆಡ್ಡನ್ನು ತಿಂದೇ ತನ್ನ ದಿನಚರಿ ಪ್ರಾರಂಭಿಸುವುದು. “ಯೋಚಿಸಬೇಡ. ಎಂದಿಗೂ ನಾನು ನಿನ್ನ ಒಳಗನ್ನು ಹಾಗೆಲ್ಲ ಪ್ರವೇಶಿಸುವುದಿಲ್ಲ” ಎಂದು ಬಲ್ತಸಾರನಿಗೆ ಪ್ರಮಾಣ ಮಾಡುತ್ತಾಳೆ. ಇಂಥ ಬ್ಲಿಮುಂಡಾ ಒಂದು ಬಾರಿ ಖಾಲಿ ಹೊಟ್ಟೆಯಲ್ಲಿಯೇ ದೇವಸ್ಥಾನಕ್ಕೆ ಹೋಗಬೇಕಾಗಿ ಬರುತ್ತದೆ. ಆಗ ದೇವರ ಆಕೃತಿಯೊಳಗಿನ ಗಾಢಾಂಧಕಾರವನ್ನು ಕಂಡು, ಬೆಚ್ಚಿದ್ದಾಳೆ. ಆ ಕುರಿತು ಬಲ್ತಸಾರನ ಬಳಿಯೂ ಹಂಚಿಕೊಳ್ಳಲಾರಳು ಅವಳು.

ಅವರಿಬ್ಬರಿಗೂ ಸ್ನೇಹಿತನಂತಿರುವ ಪಾದ್ರಿ ಬಾರ್ತೊಲೊಮಿವ್ ಅವರ ಮದುವೆ ಮಾಡಿಸುತ್ತಾರೆ. ಬಲ್ತಸಾರನ ಇನ್ನೊಂದು ಹೆಸರು ಸೆಥೆ ಸೋಯಿಶ್ ಅಂದರೆ ಏಳು ಸೂರ್ಯರು. ಅದನ್ನು ಕಂಡು ಪಾದ್ರಿ ಬ್ಲಿಮುಂಡಾಳಿಗೂ ಸೆಥೆ ಲುವಾಶ್ ಅಂದರೆ ಏಳು ಚಂದ್ರರು ಎಂದು ಹೆಸರಿಡುತ್ತಾರೆ. ಸಣ್ಣದೊಂದು ಸ್ನೇಹದಿಂದ ಶುರುವಾದ ಈ ಮೂವರ ಒಡನಾಟ ನಂತರ ಅವರನ್ನು ಬಹುದೂರದವರೆಗೆ ಕರೆಯೊಯ್ಯುತ್ತದೆ. ಬಲ್ತಸಾರನಿಗೆ ಒಂದು ಕೈ ಇಲ್ಲ ಎನ್ನುವುದು ಪಾದ್ರಿಗೆ ಅಂಥ ದೊಡ್ಡ ವಿಷಯವೇನಲ್ಲ. “ದೇವರಿಗೂ ಎಡಗೈ ಇಲ್ಲ. ಬೈಬಲ್ಲಿನಲ್ಲೇ ನೋಡು ಬೇಕಾದರೆ, ಉಳಿದ ಧರ್ಮಗ್ರಂಥಗಳಲ್ಲೂ ನಾನು ಹುಡುಕಿದ್ದೇನೆ. ಎಲ್ಲಾದರೂ ದೇವರ ಎಡಗೈ ಬಗ್ಗೆ ಪ್ರಸ್ತಾಪ ಬಂದಿದೆಯೇ? ಎಲ್ಲ ಸಮಯದಲ್ಲೂ ಎಲ್ಲರೂ ದೇವರ ಬಲಕ್ಕೆ ಕುಳಿತುಕೊಳ್ಳುತ್ತಾರೆ. ಅವನು ಬಲಗೈಯಲ್ಲೇ ಆಶೀರ್ವದಿಸುತ್ತಾನೆ. ಅವನ ಎಡಗೈ ವಿಷಯ ಒಮ್ಮೆಯೂ ಎಲ್ಲಿಯೂ ಬಂದಿಲ್ಲ ಅಂದಮೇಲೆ ದೇವರೂ ನಿನ್ನಂತೆ ಒಂಟಿ ಕೈಯುಳ್ಳವನು ಅಂತಲೇ ಅರ್ಥ” ಎನ್ನುತ್ತಾರೆ ಪಾದ್ರಿ. ಕ್ರಿಶ್ಚಿಯನ್ ಧರ್ಮಗ್ರಂಥದಲ್ಲಿ ಬರುವ ತಂದೆ, ಮಗ ಮತ್ತು ಪವಿತ್ರ ಭೂತ (ಹೋಲಿ ಗೋಸ್ಟ್)ದಂತೆ ಇದ್ದರು ಈ ಮೂವರು ಎನ್ನುತ್ತಾರೆ ನಿರೂಪಕ.

ಈ ಕಾದಂಬರಿಯಲ್ಲಿ ನಿರೂಪಕನಿಗೊಂದು ವಿಶೇಷ ಸ್ಥಾನವಿದೆ. ನಾಟಕಗಳಲ್ಲಿ ಬರುವ ಸೂತ್ರಧಾರರಂತೆಯೇ ಮುಂದಾಗುವುದು, ಹಿಂದಾದದ್ದು, ಈಗ ನಡೆಯುತ್ತಿರುವುದು ಎಲ್ಲದರ ಪೂರ್ಣ ಪಾಠ ತಿಳಿದಿರುವುದು ಈ ನಿರೂಪಕರಿಗೆ. ಈಗ ನಡೆಯುತ್ತಿರುವ ಕಥೆ ಹೇಳುತ್ತಲೇ ಮುಂದೆಂದೋ ಘಟಿಸಬಹುದಾದ ಸಾವಿನ ಬಗ್ಗೆಯೋ, ಹುಟ್ಟಿನ ಬಗ್ಗೆಯೋ ಸುಳಿವು ಕೊಡುತ್ತಲೇ ಮುಂದುವರೆಸುತ್ತಾರೆ. ಸಲ್ಮಾನ್ ರಶ್ದಿಯವರು ತಮ್ಮ ಮಿಡ್‍ನೈಟ್ಸ್ ಚಿಲ್ಡ್ರನ್ ಪುಸ್ತಕದಲ್ಲಿ ಇದೇ ಬಗೆಯ ನಿರೂಪಣೆಯನ್ನು ಆವಾಹಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಹೀಗಾದಾಗ ನಿರೂಪಕರು ಕಾಣಿಸಿದಷ್ಟನ್ನೇ ಓದುಗರು ಕಾಣುವರು. ಬಲ್ತಸಾರನ ಭೂತದೊಳಗೆ ಎಂದಿಗೂ ಹೊಕ್ಕಿ ನೋಡುವುದಿಲ್ಲ ಎಂದು ಭಾಷೆ ಕೊಟ್ಟ ಬ್ಲಿಮುಂಡಾಳಿಂದಾಗಿ ಓದುತ್ತಿರುವ ನಮಗೂ ಆತನ ಭೂತಕಾಲದ ವಿವರಗಳು ತಿಳಿಯುವುದಿಲ್ಲ.

ರಾಣಿಯ ಹಾಸಿಗೆ ಮೇಲಿನ ತಿಗಣೆಗಳು ಅವರಿಬ್ಬರ ರಕ್ತ ಕುಡಿಯುತ್ತಿದ್ದವು, ಆ ರಕ್ತದ ರುಚಿ ಸಾಮಾನ್ಯರ ರಕ್ತದ ರುಚಿಗಿಂಥ ಬೇರೆಯಾಗಿರಲಿಲ್ಲ ಎಂಬುದನ್ನು ಆ ತಿಗಣೆಗಳು ಅರಿತಿದ್ದವು ಎಂದು ಹೇಳಲು ಮರೆಯುವುದಿಲ್ಲ.

ಪಾದ್ರೆ ಬಾರ್ತೊಲೊಮಿವ್ ದೆ ಗುಸ್ಮಾವ್ ಐತಿಹಾಸಿಕ ಹೆಸರು. ಅವರು ಹದಿನೆಂಟನೆಯ ಶತಮಾನದಲ್ಲೇ ಆಗಸದಲ್ಲಿ ಹಾರುವ ಕನಸು ಕಂಡವರು. ಅವರನ್ನು ಸಾರಮಾಗೊ ಈ ಕಾದಂಬರಿಯೊಳಗೆ ಕರೆತರುತ್ತಾರೆ. ಪಾದ್ರೆ ಬಾರ್ತೊಲೊಮಿವ್ ತಮ್ಮ ಕಲ್ಪನೆಯಲ್ಲಿ ಅರಳಿದ ವಿಮಾನಕ್ಕೆ ಪ್ಯಾಸರೋಲಾ (ಅಂದರೆ ಬೃಹತ್ ಹಕ್ಕಿ) ಎಂದು ಹೆಸರಿಡುತ್ತಾರೆ. ಈ ಪ್ಯಾಸರೋಲಾ ಕಟ್ಟಲು ಪಾದ್ರಿ, ಬಲ್ತಸಾರ್ ಮತ್ತು ಬ್ಲಿಮುಂಡಾರ ಸಹಾಯ ಕೇಳುತ್ತಾರೆ.

ಪಾದ್ರಿಯನ್ನು ಲಿಸ್ಬನ್‌ನಲ್ಲಿ ಎಲ್ಲರೂ ಹಾರಾಡುವ ಮನುಷ್ಯ ಎಂದೇ ಕರೆಯುವುದು. ಮೊದಲೊಮ್ಮೆ ದೊಡ್ಡದಾದ ಪುಗ್ಗವೊಂದನ್ನು ಅರಮನೆಯ ಮೇಲೆ ಹಾರಿಬಿಟ್ಟು ಪಾದ್ರಿ ಅಸಾಮಾನ್ಯವಾದುದನ್ನು ಸಾಧಿಸಿದ್ದಾರೆ. ಹಿಂದೊಮ್ಮೆ ತಯಾರಿಯಿಲ್ಲದೇ ಹಾರಲು ಹೋಗಿ ನಗೆಪಾಟಲಿಗೂ ಒಳಗಾಗಿದ್ದಾರೆ. ಹೀಗಾಗಿ ಈ ಬಾರಿ ಅಂಥ ಪ್ರಮಾದವಾಗಬಾರದೆಂದು ಪ್ಯಾಸರೋಲಾದ ನಿರ್ಮಾಣದ ಕುರಿತು ಯಾರಿಗೂ ಹೇಳಿಲ್ಲ. ರಾಜನಿಂದ ವಿಶೇಷ ಅನುಮತಿಯನ್ನು ಪಡೆದು ಪಾಳುಬಿದ್ದ ಕಟ್ಟಡವೊಂದರಲ್ಲಿ ಬಲ್ತಸಾರ್ ಮತ್ತು ಬ್ಲಿಮುಂಡಾರ ನೆರವಿನೊಂದಿಗೆ ಪ್ಯಾಸರೋಲಾದ ಕಟ್ಟುವಿಕೆ ಆರಂಭವಾಗಿದೆ.

ಪಾದ್ರಿಯ ನಕ್ಷೆಯ ಪ್ರಕಾರ ಪ್ಯಾಸರೋಲಾ ಹಾರಲು ಸಾಧ್ಯವಾಗುವುದು ಮನುಷ್ಯರೊಳಗೆ ಉಳಿದುಹೋಗಿರುವ ‘ಜೀವಂತ ಬಯಕೆ’ (ವಿಲ್)ಗಳ ಸಹಾಯದಿಂದ. ಈ ಬಯಕೆಗಳನ್ನು ಬ್ಲಿಮುಂಡಾ ತನ್ನ ಅತಿಂದ್ರಿಯ ಶಕ್ತಿಯಿಂದಷ್ಟೇ ಸಂಗ್ರಹಿಸಬಲ್ಲಳು. ಮುಂಜಾನೆಯೆದ್ದು ಖಾಲಿಹೊಟ್ಟೆಯಲ್ಲಿ ಆಕೆ ನಡೆದಳೆಂದರೆ ಈ ಬಯಕೆಗಳ ಹುಡುಕಾಟದಲ್ಲಿ ತೊಡಗಿದಳು ಅಂತಲೇ ಅರ್ಥ. ಅವಳ ಹಿಂದೆ ಬಲ್ತಸಾರ್ ಊಟ-ತಿಂಡಿಗಳ ಪೊಟ್ಟಣ ಹೊತ್ತು ನಡೆಯುತ್ತಾನೆ. ಖಾಲಿ ಹೊಟ್ಟೆಯಲ್ಲಿದ್ದಾಗ ಎಂದಿಗೂ ತನ್ನ ಕಣ್ಣಲ್ಲಿ ಕಣ್ಣಿಡದಂತೆ ಬ್ಲಿಮುಂಡಾ ಗಂಡನಿಗೆ ಕಟ್ಟಪ್ಪಣೆ ಮಾಡಿದ್ದಾಳೆ. ಬ್ಲಿಮುಂಡಾ ಮತ್ತು ಬಲ್ತಸಾರ್ ಬೆಳ್ಳಂಬೆಳಿಗ್ಗೆ ಒಬ್ಬರ ಹಿಂದೆ ಒಬ್ಬರು ನಡೆಯುವುದು ಊರಿನ ಜನರಿಗೆಲ್ಲ ಕಂಡು ಗೊತ್ತಿದೆ. ನೋಡಲು ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುವ ಈ ಗಂಡ ಹೆಂಡತಿಯ ಯಾನದ ಕುರಿತಾಗಿ ಮಾತ್ರ ಯಾರಿಗೂ ಆಸಕ್ತಿಯಿಲ್ಲ.

ಇತ್ತ ಪ್ರತಿಜ್ಞೆ ಮಾಡಿದ್ದೇ ನೆಪವೇನೋ ಎಂಬಂತೆ ರಾಣಿ ಗರ್ಭಿಣಿಯಾಗಿದ್ದಾಳೆ. ಆ ಸುದ್ದಿಯ ಹಿನ್ನಲೆಯಲ್ಲಿ ಕಾನ್ವೆಂಟ್ ಆಫ್ ಮಾಫ್ರಾದ ಕಾರ್ಯವೂ ಭರದಿಂದ ಶುರುವಾಗಿದೆ. ರಾಜ್ಯದೆಲ್ಲೆಡೆಯಿಂದ ಮಾಫ್ರಾಕ್ಕೆ ಕಲ್ಲು ಕಟೆಯುವವರೂ, ಮರಗೆಲಸದವರೂ, ಕೂಲಿಯಾಳುಗಳೂ ಬಂದಿಳಿದಿದ್ದಾರೆ. ಬರಲು ಇಷ್ಟವಿಲ್ಲ ಎಂದವರನ್ನು ರಾಜಾಜ್ಞೆಯ ಮೂಲಕ ಒತ್ತಾಯದಿಂದ ಕರೆತರಲಾಗಿದೆ. ಮಾಫ್ರಾದ ಖಾನಾವಳಿಗಳು, ವೇಶ್ಯಾಗೃಹಗಳು ಕಿಕ್ಕಿರಿದಿವೆ. ಚಿಕ್ಕದಾಗಿ ಶುರುವಾಗಿದ್ದ ಕಾನ್ವೆಂಟ್ ಆಫ್ ಮಾಫ್ರಾದ ನೀಲನಕ್ಷೆ ದಿನಗಳೆದಂತೆ ದೊಡ್ಡದಾಗುತ್ತಲೇ ಸಾಗುತ್ತಿದೆ. ರಾಜ್ಯದ ಬೊಕ್ಕಸವೂ ಬರಿದಾಗುತ್ತಿದೆ.

ಗುಪ್ತದಳಗಳ ತನಿಖೆಯ ಕಾರಣದಿಂದ ಪ್ಯಾಸರೋಲಾ ನಿರ್ಮಾಣವನ್ನು ನಿಲ್ಲಿಸಬೇಕಾಗಿ ಬರುತ್ತದೆ. ಪಾದ್ರಿ ಬಾರ್ತೊತೊಮಿವ್‌ರನ್ನು ಬಂಧಿಸಬೇಕಾಗಿ ಆಜ್ಞೆ ಹೊರಡುತ್ತದೆ. ಗೌಪ್ಯವಾಗಿ ಅವರಿಗೆ ಸಹಾಯ ಮಾಡುತ್ತಿದ್ದ ಬಲ್ತಸಾರ್ ಮತ್ತು ಬ್ಲಿಮುಂಡಾರಿಗೂ ಅಪಾಯದ ಮುನ್ಸೂಚನೆ ಹತ್ತುತ್ತದೆ. ಇಂಥ ಒಂದು ಉತ್ಕಟ ಕ್ಷಣದಲ್ಲಿ ಪ್ಯಾಸರೋಲಾವನ್ನು ತಾವೇ ಹಾರಿಸಿಕೊಂಡು ಹೋಗೋಣ ಅಂತ ಮೂವರೂ ನಿರ್ಧರಿಸುತ್ತಾರೆ. ಆಗಸದಲ್ಲಿ ಹಾರುವ ದೈತ್ಯ ಹಕ್ಕಿಯನ್ನು ಕಂಡು ಮಾಫ್ರಾದ ಜನ ದಿಗ್ಮೂಢರಾಗಿದ್ದಾರೆ. ಹಿಂದೆಂದೂ ಕಾಣದ ಈ ಪವಾಡದ ಕುರಿತು ನಾನಾ ಕತೆಗಳು ಹುಟ್ಟಿಕೊಳ್ಳುತ್ತವೆ.

ಹೀಗೆ ಹೊರಟ ಪ್ಯಾಸರೋಲಾ ಕತ್ತಲಾದದ್ದೇ ಮಾಂಟಜುಂಟೋ ಎಂಬ ಸ್ಥಳದಲ್ಲಿ ಇಳಿಯುತ್ತದೆ. ಸೋಲಿನ ನೋವು ತಾಳಲಾರದೇ ಪಾದ್ರಿ ಸ್ಪೇನ್‌ಗೆ ದೇಶಾಂತರ ಹೋಗುತ್ತಾರೆ. ಬಲ್ತಸಾರ್ ಬ್ಲಿಮುಂಡಾಳ ಜೊತೆಗೆ ಮಾಫ್ರಾಗೆ ತೆರಳಿ ಕಾನ್ವೆಂಟ್ ನಿರ್ಮಾಣದ ಕಾರ್ಯಪಡೆಯನ್ನು ಸೇರಿಕೊಳ್ಳುತ್ತಾನೆ. ಆಗಾಗ ಮಾಂಟಜೊಂಟೋಗೆ ತೆರಳಿ ಪ್ಯಾಸರೋಲಾವನ್ನು ದುರಸ್ತಿಗೊಳಿಸಿ ಬರುತ್ತಾನೆ.
ಕಾದಂಬರಿಯುದ್ದಕ್ಕೂ ದುಡಿಯುವ ಕೈಗಳ ಮೇಲಿನ ಸಾವಿರ ನದಿಗಳನ್ನು ಒಂದೊಂದಾಗಿ ಚಿತ್ರಿಸಿ ತೋರಿಸುವ ಸಂಯಮವನ್ನು ಲೇಖಕರು ತೋರಿದ್ದಾರೆ. ಜೊತೆಗೆ ರಾಜಾಡಳಿತವನ್ನೂ, ರಾಜ ಮನೆತನಗಳ ತೋರಿಕೆಯ ದರ್ಪವನ್ನೂ, ಪೊಳ್ಳುತನವನ್ನೂ ಲೇವಡಿ ಮಾಡುತ್ತಾರೆ. ಕಾದಂಬರಿಯಲ್ಲಿ ನೂರಾರು ಹೆಸರುಗಳು ಬಂದು ಹೋಗುತ್ತವೆ. ಈ ಎಲ್ಲ ಪಾತ್ರಗಳ ಕಥನ ಸಾಂದ್ರತೆಯನ್ನು ನೂಲಿನಲ್ಲಿ ಪೋಣಿಸಿಡುವಂತೆ ಬಲ್ತಸಾರ್ ಮತ್ತು ಬ್ಲಿಮುಂಡಾರ ಪ್ರೇಮ ಕಥನವಿದೆ. ಕೊನೆಗೊಮ್ಮೆ ಎಲ್ಲ ಎಲ್ಲೆಗಳ ಮೀರಿ ಬಲ್ತಸಾರನನ್ನು ಹೊತ್ತೊಯ್ಯುವ ಪ್ಯಾಸರೋಲಾ ಮತ್ತವನನ್ನು ಹುಡುಕಿ ಊರೂರು ಅಲೆಯುತ್ತಲೇ ವೃದ್ಧೆಯಾಗುವ ಬ್ಲಿಮುಂಡಾ ಓದುಗರೊಳಗೆ ಉಳಿದೇ ಹೋಗುತ್ತಾರೆ.

ಈ ಕಥೆ ಇಷ್ಟೇ ಆಗಿರದೇ ಅಲ್ಲಲ್ಲಿ ಸಿಗುವ ಬೈಬಲ್ಲಿನ ಉಲ್ಲೇಖಗಳಿಂದ ಬೇರೆಯದೇ ಎತ್ತರಕ್ಕೆ ಏರುತ್ತದೆ. ಹಾರುವ ಯಂತ್ರವೊಂದನ್ನು ವಿನ್ಯಾಸ ಮಾಡುವ ಪಾದ್ರಿ, ಅವನಿಗೆ ಸಹಾಯಕರಾಗಿರುವ ಒಂಟಿ ಕೈ ಗಂಡಸು ಮತ್ತು ಇನ್ನೊಬ್ಬರೊಳಗೆ ಇಣುಕಿನೋಡುವ ಶಕ್ತಿಯಿಳ್ಳ ಹೆಂಗಸು, ಜನಕರನ್ನೂ ಮೀರಿ ತನ್ನಷ್ಟಕ್ಕೇ ತಾನು ಹಾರುವ ಪ್ಯಾಸರೋಲಾ, ಅದನ್ನು ಹೊತ್ತೊಯ್ಯುವ ಜೀವಂತ ಬಯಕೆಗಳನ್ನು ತುಂಬಿನಿಂತ ಪೊಟ್ಟಣಗಳು… ಇವೆಲ್ಲ ವಿವರಿಸಿದಷ್ಟನ್ನೇ ಹೇಳದೇ ಇನ್ನೇನನ್ನೋ ಧ್ವನಿಸುವಂತೆ ಗೋಚರಿಸುತ್ತವೆ.

ಹೋಸೆ ಸಾರಮಾಗೊರ ಭಾಷೆ ಗಾಳಿಯಲ್ಲಿ ಕೊಳಲು ನಾದ ತೇಲಿಬಂದಂತೆ ಆವರಿಸುತ್ತದೆ. ಉದ್ದುದ್ದ ವಾಕ್ಯಗಳು, ಅಲ್ಲಲ್ಲೇ ಗೋಚರಿಸುವ ಪ್ರತಿಮೆಗಳು, ಸಿಕ್ಕಂತೆನಿಸಿದರೂ ಗುಟ್ಟು ಬಿಟ್ಟುಕೊಡದೇ ಸತಾಯಿಸುವ ವಾಕ್ಯಾರ್ಥಗಳು ಇವರ ಬರವಣಿಗೆಯ ಬಹುದೊಡ್ಡ ಪ್ಲಸ್ ಪಾಯಿಂಟ್. ಇಲ್ಲಿನ ಕೆಲವು ವಾಕ್ಯಗಳಂತೂ ಎರಡೆರಡು ಪುಟಗಳಷ್ಟು ಉದ್ದ ಇವೆ. ಹೀಗಾದಾಗ ಒಂದು ಬಾರಿ ಓದಿ ಎತ್ತಿಡದೇ ಮತ್ತೆ ಮತ್ತೆ ಓದಬಹುದಾದ ಸುಖವನ್ನು ಇವರ ಪುಸ್ತಕಗಳು ದಯಪಾಲಿಸುತ್ತವೆ.

ಈ ಕಾದಂಬರಿಯ ಬ್ಲಿಮುಂಡಾಳಂತೂ ಒಮ್ಮೆ ಓದುಗರ ಎದೆಯೊಳಗೆ ನಡೆದು ಬಂದವಳು ಹಾಗೆಲ್ಲ ಸುಲಭಕ್ಕೆ ಮರಳಿ ಹೋಗುವವಳಲ್ಲ!