ಪ್ರೊ. ಜಿ. ಎನ್. ದೇವಿ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿದ್ವಾಂಸರು. ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ದೇವಿಯವರು ಮೂಲತಃ ಸಾಹಿತ್ಯ ವಿಮರ್ಶಕರು. ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಆದಿವಾಸಿಗಳ ಭಾಷೆಗಳ ಅಧ್ಯಯನವನ್ನು ಕೈಗೆತ್ತಿಕೊಂಡವರು. ಪ್ರಪಂಚದ ಎಲ್ಲಾ ಬುಡಕಟ್ಟು ಭಾಷೆಗಳ ಗಣತಿ ಮಾಡುವ ಬೃಹತ್ ಕಾರ್ಯಯೋಜನೆಯ ಜವಾಬ್ದಾರಿಯನ್ನು ದೇವಿಯವರಿಗೆ  ಯುನೆಸ್ಕೋ ವಹಿಸಿದೆ. ಭಾಷೆಗಳ ಕುರಿತು ಬಹುದೊಡ್ಡ ಅಧ್ಯಯನ-ಸಂಶೋಧನೆ ಮಾಡಿರುವ ದೇವಿಯವರ ಜೊತೆ ಎಸ್. ಸಿರಾಜ್ ಅಹಮದ್  ನಡೆಸಿದ ಸುದೀರ್ಘ ಸಂದರ್ಶನದ ವಿವರಗಳು ಇಲ್ಲಿವೆ.

 

ಪ್ರೊ. ಗಣೇಶ ನಾರಾಯಣ ದಾಸ್ ದೇವಿಯವರು (ಜಿ. ಎನ್. ದೇವಿ) ಅಂತರಾಷ್ಟ್ರೀಯ ಖ್ಯಾತಿಯ ಭಾಷಾ ವಿದ್ವಾಂಸರು. ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಶ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ದೇವಿಯವರು ಮೂಲತಃ ಸಾಹಿತ್ಯ ವಿಮರ್ಶಕರು. ಸಾಹಿತ್ಯ ವಿಮರ್ಶೆಯಲ್ಲಿ ಪಾಶ್ಚಾತ್ಯ ಮಾನದಂಡಗಳ ಕಾರಣದಿಂದ ಭಾರತೀಯ ಸಾಹಿತ್ಯ ಮೀಮಾಂಸೆಯಲ್ಲಿ ಲಭ್ಯವಿರುವ ದೇಸೀ ವಿಮರ್ಶಾ ಮಾನದಂಡಗಳ ಬಗ್ಗೆ ವಿಸ್ಮೃತಿ ಆವರಿಸಿದೆ ಎಂಬ ವಾದ ಮಂಡಿಸಿ “ಆಫ್ಟರ್ ಅಮ್ನೇಸಿಯಾ” (ವಿಸ್ಮೃತಿಯ ನಂತರ) ಎಂಬ ಕೃತಿಯನ್ನು ರಚಿಸಿ ದೊಡ್ಡದೊಂದು ಸಾಹಿತ್ಯಿಕ ಚರ್ಚೆಯನ್ನು ಹುಟ್ಟು ಹಾಕಿದ್ದರು. ನಂತರ ಗುಜರಾತಿನ ಬುಡಕಟ್ಟುಗಳು ಹಾಗೂ ಆದಿವಾಸಿಗಳ ಸಾಹಿತ್ಯದಲ್ಲಿ ಆಸಕ್ತಿ ಮೂಡಿ ಆದಿವಾಸಿ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಿದರು. ಆದಿವಾಸಿಗಳ ಸಾಹಿತ್ಯವನ್ನು ಓದುತ್ತ ಅವರೊಡನೆ ಒಡನಾಡುತ್ತ ಅದಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ತಮ್ಮ ಪ್ರೊಫೆಸರ್ ಗಿರಿಗೆ ರಾಜಿನಾಮೆ ನೀಡಿ ಗುಜರಾತಿನ ತೇಜಗಡದಲ್ಲಿ ಆದಿವಾಸಿ ಅಕಾಡೆಮಿಯನ್ನು ಸ್ಠಾಪಿಸಿ ಆದಿವಾಸಿಗಳೊಂದಿಗೆ ಬದುಕಲು ಆರಂಭಿಸಿದರು. ಕ್ರಮೇಣ ಆದಿವಾಸಿಗಳ ಭಾಷೆಗಳ ಬಗ್ಗೆ ಗಮನ ತಿರುಗಿ ೨೦೧೦ರಲ್ಲಿ ಭಾರತದ ಎಲ್ಲಾ ರಾಜ್ಯಗಳಲ್ಲಿರುವ ಬುಡಕಟ್ಟು ಭಾಷೆಗಳ ಸ್ಥಿತಿಗತಿ, ಉಗಮ, ಇತಿಹಾಸ, ಭವಿಷ್ಯವನ್ನು ದಾಖಲಿಸುವ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ (ಪಿ.ಎಲ್. ಐ) ಎಂಬ ಜನಭಾಷಾ ಗಣತಿ ಎಂಬ ಬೃಹತ್ ಕಾರ್ಯವನ್ನು ಕೈಗೊಂಡರು. ಕೇವಲ ಭಾಷಾ ವಿದ್ವಾಂಸರನ್ನು ಆಧರಿಸದೆ ಶಾಲಾ ಉಪಾಧ್ಯಾಯರು, ಡ್ರೈವರುಗಳು, ಗುಮಾಸ್ತರು, ಯುವಕರು ಮೊದಲಾದವರ ನೆರವಿನಿಂದ ಕೇವಲ ೮೦ ಲಕ್ಷಗಳಲ್ಲಿ ಪೂರ್ಣಗೊಂಡ ಈ ಯೋಜನೆಯಲ್ಲಿ ೨೦೨೧ ರ ವೇಳೆಗೆ ೫೦ ಸಂಪುಟಗಳು ಪ್ರಕಟವಾಗಿದ್ದು, ಇನ್ನೂ ೫೦ ಸಂಪುಟಗಳು ಹೊರಬರಲಿವೆ. ಈ ಅಗಾಧ ಕಾರ್ಯವನ್ನು ಮೆಚ್ಚಿ ಯುನೆಸ್ಕೋ ಪ್ರಪಂಚದ ಎಲ್ಲಾ ಬುಡಕಟ್ಟು ಭಾಷೆಗಳ ಗಣತಿ ಮಾಡುವ ಬೃಹತ್ ಕಾರ್ಯಯೋಜನೆಯ ಜವಾಬ್ದಾರಿಯನ್ನು ದೇವಿಯವರಿಗೆ ವಹಿಸಿದೆ. ಭಾಷೆಗಳ ಕುರಿತು ಬಹುದೊಡ್ಡ ಅಧ್ಯಯನ-ಸಂಶೋಧನೆ ಮಾಡಿರುವ ದೇವಿಯವರ ಜೊತೆ ನಡೆಸಿದ ಸುದೀರ್ಘ ಸಂದರ್ಶನದ ವಿವರಗಳು ಇಲ್ಲಿವೆ.

ಭಾಷೆಗಳು ಸಾಯುತ್ತಿರುವುದು ಜಾಗತೀಕರಣದಿಂದಲ್ಲ, ಸ್ವಾತಂತ್ರ್ಯ ಸಮಾನತೆಯ ಆಶಯಗಳು ನಾಶವಾಗುತ್ತಿರುವುದಕ್ಕೆ-ಜಿ ಎನ್ ದೇವಿ
“ನಾನು ಒಂದೋ ಎರಡೋ ಭಾಷೆಗಳನ್ನು ಉಳಿಸುವ ಕುರಿತು ಮಾತನಾಡುತ್ತಿಲ್ಲ. ನಾವೆಲ್ಲ ಒಟ್ಟಾಗಿ ಉಳಿಸಬೇಕಾದದ್ದು ವೈವಿಧ್ಯತೆಯನ್ನು”ಜಿ ಎನ್ ದೇವಿ

ಸಮುದಾಯಗಳ ಉಳಿವಿಗಾಗಿ ಹೋರಾಡದೆ ಭಾಷೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ –ಜಿ ಎನ್ ದೇವಿ

ನಿಮ್ಮ ಹಾಗೂ ಕರ್ನಾಟಕದ ನಡುವಿನ ಸಂಬಂಧದ ಕುರಿತು ಹೇಳಿ. ನಿಮ್ಮ ಬೌದ್ಧಿಕ ಪ್ರಯಾಣದಲ್ಲಿ ಕರ್ನಾಟಕ ನಿರಂತರವಾದ ಪ್ರಭಾವವನ್ನು ಬೀರಿದೆ ಅನಿಸುತ್ತದೆ. ನಿಮ್ಮ ಮೊದಲ ಕೃತಿ ‘ಆಫ್ಟರ್ ಅಮ್ನೇಸಿಯಾ’ದ ಹೆಸರು ಎಕೆ ರಾಮಾನುಜನ್ ಅವರ ಪದ್ಯದಿಂದ ಪ್ರೇರಿತವಾದದ್ದು ಅಂತ ಒಂದು ಕಡೆ ಹೇಳಿದ್ದೀರಿ.

ನಾನು ಪಿಎಚ್‌ಡಿ ಮಾಡಿದ್ದು ಕನ್ನಡದ ದೊಡ್ಡ ಲೇಖಕ ಶಾಂತಿನಾಥ ದೇಸಾಯಿ ಅವರ ಮಾರ್ಗದರ್ಶನದಲ್ಲಿ. ಅವರು ಲೋಹಿಯಾವಾದಿ ಆಗಿದ್ದರೂ ಅಥವಾ ಲೋಹಿಯಾವಾದಿ ಆಗಿದ್ದ ಕಾರಣದಿಂದಲೇ ತಮ್ಮ ವಿಚಾರಗಳನ್ನು ನನ್ನ ಮೇಲೆ ಹೇರಲಿಲ್ಲ. ಅವರಿಗೆ ವಿಚಾರಗಳ ಸ್ವತಂತ್ರ ಅನ್ವೇಷಣೆಯಲ್ಲಿ ನಂಬಿಕೆಯಿತ್ತು. ಅವರು ಮಾರ್ಕ್ಸ್‌ವಾದ, ರಾಯ್‌ಚಿಂತನೆ, ಗಾಂಧಿ, ಬುದ್ಧ ಎಲ್ಲರ ಕುರಿತಾಗಿ ಬಹಳ ತೀವ್ರವಾಗಿ ಮಾತಾಡುತ್ತಿದ್ದರು.

ನಾನು ಪಿಎಚ್‌ಡಿ ಮುಗಿಸಿ ಇಂಗ್ಲೆಂಡಿನಲ್ಲಿ ನನ್ನ ಓದು ಮುಗಿಸಿದ ಮೇಲೆ ಭಾರತಕ್ಕೆ ವಾಪಾಸು ಬಂದು ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ಮಾಡುವ ಬದಲು ಹಳ್ಳಿಯೊಂದಕ್ಕೆ ಹೋಗಿ ಕೆಲಸ ಮಾಡಬೇಕೆಂದು ನಿರ್ಧಾರ ಮಾಡಿದೆ. ತಕ್ಷಣ ಸಾಧ್ಯವಾಗಲಿಲ್ಲ. ನಾನು ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾಲಯಕ್ಕೆ ಸೇರಿದೆ. ಒಂದೆರಡು ವರ್ಷಗಳಲ್ಲಿ ಪ್ರತಿ ಶನಿವಾರ ಭಾನುವಾರಗಳಂದು ನಾನು ಗುಜರಾತಿನ ಹಳ್ಳಿಗಳಿಗೆ ಸ್ಕೂಟರಿನ ಮೇಲೆ ಹೋಗಲು ಆರಂಭಿಸಿದೆ. ನಾಲ್ಕು ವರ್ಷಗಳಲ್ಲಿ ವಿಶ್ವವಿದ್ಯಾಲಯದ ಕೆಲಸ ಬಿಟ್ಟು ಹಳ್ಳಿಯೊಂದರಲ್ಲಿ ಸ್ಕೂಲನ್ನು ತೆರೆಯಬೇಕೆಂದು ಯೋಚಿಸಿದೆ. ಆದರೆ ನಮ್ಮ ಮಗಳು ಇನ್ನೂ ಚಿಕ್ಕವಳಾಗಿದ್ದ ಕಾರಣದಿಂದ, ಬೇರೆಲ್ಲ ಮಕ್ಕಳಂತೆ ಶಿಕ್ಷಣ ಪಡೆಯುವ ಅವಕಾಶದಿಂದ ಅವಳನ್ನು ವಂಚಿತಗೊಳಿಸುವ ಹಕ್ಕು ನನಗಿದೆಯೋ ಇಲ್ಲವೋ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಹಾಗಾಗಿ ನನ್ನ ನಿರ್ಧಾರವನ್ನು ಮುಂದೂಡಿದೆ. ಎರಡು ವರ್ಷದ ನಂತರ ಬರೋಡಾದಲ್ಲಿ ಸುಮಾರು 120 ವಿದ್ಯಾರ್ಥಿಗಳ ಗುಂಪೊಂದನ್ನು ಹುಟ್ಟು ಹಾಕಿ ಅವರ ಜೊತೆ ಹಳ್ಳಿಗಳಲ್ಲಿ ಬರಪರಿಹಾರ ಕೆಲಸವನ್ನು 1986-87-88ರ ಅವಧಿಯಲ್ಲಿ ಶುರುಮಾಡಿದೆ. ಆದರೆ ಇವೆಲ್ಲ ಕೆಲಸಗಳನ್ನು ನಾನು ದಾನಧರ್ಮದ ಬದಲಾಗಿ ಮಾಡುತ್ತಿದ್ದೆನೇ ಹೊರತು ಸಮಾಜಮುಖಿಯಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕೆಂಬ ಆಳವಾದ ನಂಬಿಕೆಯಿಂದಲ್ಲ. 1991ರಲ್ಲಿ ನಾನು ವಿಶ್ವವಿದ್ಯಾಲಯವನ್ನು ಬಿಡಲು ಮತ್ತೊಮ್ಮೆ ನಿರ್ಧರಿಸಿದೆ. ಅಲ್ಲಿಗೆ ನಮ್ಮ ಮಗಳು ಶಾಲಾ ಶಿಕ್ಷಣ ಮುಗಿಸಿ ಕಾಲೇಜನ್ನು ಸೇರಿದ್ದಳು. ನಮ್ಮ ಮಗಳು ಮತ್ತು ನನ್ನ ಹೆಂಡತಿ ಇಬ್ಬರೂ, ಕುಟುಂಬದ ಆದಾಯಕ್ಕೆ ತೊಂದರೆಯಾದರೂ ನನ್ನ ಕೆಲಸ ಬಿಡುವ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು. ಆದರೆ ನಾನು ಬರೆಯಬೇಕಾಗಿದ್ದ ಪುಸ್ತಕಗಳು-ಪೂರೈಸಬೇಕಾದ ಪ್ರಾಜೆಕ್ಟ್‌ಗಳು ಅರ್ಧ ಮುಗಿದಿದ್ದವು. ನನ್ನ ಪಿಎಚ್‌ಡಿ ವಿದ್ಯಾರ್ಥಿಗಳ ಸಂಶೋಧನೆಯನ್ನು ಮುಗಿಸಿಕೊಡಬೇಕಾದ ಹೊಣೆಯೂ ನನ್ನ ಮೇಲಿತ್ತು. 1996ರ ಸೆಪ್ಟೆಂಬರ್‌ನಲ್ಲಿ ನಮ್ಮ ಮಗಳು 20ನೇ ವರ್ಷಕ್ಕೆ ಕಾಲಿಟ್ಟ ಮೇಲೆ ನಾನು ವಿಶ್ವವಿದ್ಯಾಲಯವನ್ನು ಬಿಟ್ಟು ತೇಜಗಡಕ್ಕೆ ಬಂದೆ. ಕೃಷಿ ಹಿನ್ನೆಲೆಯ, ಪುಟ್ಟ ತಾಲೂಕಿನ ವಿಸ್ತರಣೆಯಂತಿದ್ದ ನನ್ನ ಹಳ್ಳಿಗೂ ತೇಜಗಡಕ್ಕೂ ಬಹಳ ವ್ಯತ್ಯಾಸವಿತ್ತು. ತೇಜಗಡ ನಿಜವಾದ ಆದಿವಾಸಿ ಗ್ರಾಮವಾಗಿತ್ತು. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನನಗೆ ಹಲವು ವರ್ಷಗಳು ಬೇಕಾದವು. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಸಮಯವನ್ನು ಕೊಡಲು ನಾನು ಸಿದ್ಧವಾಗಿದ್ದೆ. ಮುಖ್ಯವಾಗಿ ತೇಜಗಡಕ್ಕೆ ಹೋಗುವ ಮೊದಲು ಪ್ರಸನ್ನ ಅವರ ಸಲಹೆಯನ್ನು ಕೇಳಬೇಕೆಂದು ಶಿವಮೊಗ್ಗಕ್ಕೆ ಬಂದಿದ್ದೆ. ಹೆಗ್ಗೋಡಿನಲ್ಲಿ ಒಂದು ವಾರ ಕಾಲ ಇದ್ದು ಅವರೊಂದಿಗೆ ಮಾತುಕತೆ ನಡೆಸಿದೆ. ಹಾಗಾಗಿ ಕರ್ನಾಟಕವು ನನ್ನ ಜೀವನದಲ್ಲಿ ಮೂರು ರೀತಿಯಲ್ಲಿ ಬಹಳ ಮಹತ್ವದ ಪರಿಣಾಮವನ್ನು ಬೀರಿದೆ. ಮೊದಲನೆಯದಾಗಿ ಶಾಂತಿನಾಥ ದೇಸಾಯಿಯವರು ನನ್ನ ಬೌದ್ಧಿಕತೆಯ ಎಲ್ಲೆಗಳನ್ನು ವಿಸ್ತರಿಸಿದರು. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಮಡದಿ ನನ್ನ ನೈತಿಕತೆಯನ್ನು ರೂಪಿಸಿದಳು. ಪ್ರಸನ್ನ ಅವರು ತಮ್ಮ ಕೆಲಸದಿಂದ ನನ್ನನ್ನು ಪ್ರಭಾವಿಸಿದ್ದಾರೆ. ಹಾಗೆಯೇ ನಾನು ಎಕೆ ರಾಮಾನುಜನ್ನರಿಂದ ಬಹಳ ಆಕರ್ಷಿತನಾಗಿದ್ದೇನೆ. ರಾಮಾನುಜನ್ ಅವರದು ಅಪೂರ್ವ ಪ್ರತಿಭೆಯಲ್ಲ. ಅವರು ಮುಖ್ಯವಾಗುವುದು ಅವರ ಅಪೂರ್ಣ ಕೆಲಸ ಮತ್ತು ಅರೆಬರೆ ಒಳನೋಟಗಳಿಂದ. ನನಗೆ ಪೂರ್ಣ ದೃಷ್ಟಿಕೋನವನ್ನು ಹೊಂದಿರುವವರಿಗಿಂತ ಯಾವುದೋ ಪ್ರಶ್ನೆಗೆ ಉತ್ತರ ಹುಡುಕುತ್ತ ಏಗಾಡುವವರನ್ನು ಕಂಡರೆ ಹೆಚ್ಚು ಅಭಿಮಾನ. ಅವರ ಪ್ರಶ್ನೆ- ಪ್ರಯತ್ನಗಳು ಇನ್ನೊಬ್ಬರ ಬದುಕಿಗೆ ದಾರಿತೋರಬಲ್ಲವು.

ಇತ್ತೀಚೆಗೆ ಶೆಲ್ಡನ್ ಪೋಲಾಕ್ ಅವರು ‘ದಿ ವೈರ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭಾರತದ ಈಚಿನ ತಲೆಮಾರಿಗೆ ತನ್ನ ಗತಕಾಲದ ಬೌದ್ಧಿಕ ಪರಂಪರೆಗಳ ಬಗೆಗೆ ಪರಿಚಯವೇ ಇಲ್ಲ. ಭಾರತೀಯ ಚಿಂತನೆಗಳ ಇತಿಹಾಸವನ್ನೇ ಅರಿಯದ ತಲೆಮಾರು ಬೌದ್ಧಿಕತೆಯಿಂದ ವಿಮುಖವಾಗುತ್ತಿದೆ ಎಂದಿದ್ದಾರೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನೀವು ‘ಆಫ್ಟರ್ ಅಮ್ನೇಸಿಯಾ’ ಬರೆದಾಗಲೂ ಇದೇ ರೀತಿಯ ಬಗೆಯ ಪ್ರಶ್ನೆಗಳನ್ನು ಎತ್ತಿದ್ದೀರಿ.

ಮಾಧವ ದೇಶಪಾಂಡೆ ಎಂಬ ಸಮಾಜಶಾಸ್ತ್ರಜ್ಞ ಸುಮಾರು 40 ವರ್ಷಗಳ ಹಿಂದೆ ಲೇಖನವೊಂದನ್ನು ಬರೆದಿದ್ದರು. ಭಾರತೀಯ ಭಾಷೆಗಳಲ್ಲಿ ಬಹುಪಾಲು ಜನ ಭೂತಕಾಲವನ್ನು ಬಳಸುವುದರಲ್ಲಿ ಯಾವ್ಯಾವ ಬಗೆಯ ಸಮಸ್ಯೆಗಳಿವೆ ಎಂಬುದನ್ನು ಅಲ್ಲಿ ಚರ್ಚಿಸಿದ್ದರು. ಕಳೆದ 70 ವರ್ಷಗಳಲ್ಲಿ ಭೂತಕಾಲ ಮಾತ್ರವಲ್ಲ ವರ್ತಮಾನವನ್ನು ಎದುರಿಸುವುದು ಹಾಗೂ ಅದನ್ನು ಹೇಗೆ ಬಳಸಿಕೊಳ್ಳುವುದು ಎಂಬುದು ಭಾರತೀಯರಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಾಲದ ಜೊತೆ ನಮಗಿರುವ ವಿವಾದಾತ್ಮಕ ಸಂಬಂಧ ಭಾರತೀಯ ತತ್ವಶಾಸ್ತ್ರದ ಬಹುದೊಡ್ಡ ಸಮಸ್ಯೆಯೂ ಹೌದು. ನಾವು ಏಕಕಾಲಕ್ಕೆ ಹಲವು ಕಾಲಗಳಲ್ಲಿ ಬದುಕುತ್ತೇವೆ. ಬೆಂಗಳೂರು ಮುಂಬಯಿಯಂಥ ಆಧುನಿಕ ನಗರಗಳಿಗೆ ನಮ್ಮ ಕುಲ, ಜಾತಿ, ಗೋತ್ರಗಳನ್ನು ಕೊಂಡೊಯ್ಯುತ್ತೇವೆ. ಆದ್ದರಿಂದ ವರ್ತಮಾನದಲ್ಲಿ ನಮ್ಮ ಗತವನ್ನು ಮತ್ತೊಮ್ಮೆ ಹುಡುಕಿ ಕಟ್ಟಿಕೊಳ್ಳುವ ಯಾವುದೇ ಪ್ರಯತ್ನವು ಸಮರ್ಪಕವಾಗಿಲ್ಲ. ಗತವನ್ನು ಕುರಿತು ಮಾತಾಡುವಾಗ ಹಳಹಳಿಕೆ, ಆಕ್ರೋಶ, ಹತಾಶೆಗಳು ಸೇರಿರುತ್ತವೆ.

ಕಳೆದ ಎರಡು ಶತಮಾನಗಳಲ್ಲಿ ಬ್ರಿಟಿಶರು ನಮ್ಮ ಗತವನ್ನು ಭಿನ್ನ ದೃಷ್ಟಿಕೋನದಿಂದ ನೋಡುವ ಬಗೆಯನ್ನು ಕಲಿಸಿದರು. ಅವರು ನಮ್ಮ ಗತವನ್ನು ನೋಡುವ ಕ್ರಮ, ನಾವು ನಮ್ಮ ಗತವನ್ನು ನೋಡುವ ಕ್ರಮಗಳಲ್ಲಿ ಯಾವುದೇ ಬಗೆಯ ಸಾಮ್ಯತೆಯಿಲ್ಲ. ಹಾಗಾಗಿ ಅಲ್ಲಿ ಶೆಲ್ಡನ್ ಪೋಲಾಕ್ ಹಾಗೂ ಇಲ್ಲಿ ದೇವಿ ಇಬ್ಬರೂ ಸಹ ಎರಡು ತುದಿಗಳಲ್ಲಿ ನಿಂತು ಒಂದೇ ಸಮಸ್ಯೆಯ ಎಳೆಯನ್ನು ಹಿಡಿದುಕೊಂಡು ಅದರೊಂದಿಗೆ ಸೆಣಸಾಡುತ್ತಿದ್ದಾರೆ.

ನಿಮ್ಮ ಚಿಂತನೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಕಾರಣಕ್ಕೆ ಈ ಪ್ರಶ್ನೆ. ನಿಮ್ಮ ಕೃತಿಗಳಲ್ಲಿ ದೇಶೀಯ ಚಿಂತನಾಕ್ರಮಗಳು, ಮೀಮಾಂಸೆ, ದೇಶಿ ಸಾಹಿತ್ಯ ಪರಂಪರೆಗಳು-ಭಾಷೆಗಳನ್ನು ಹುಡುಕುವ ನಿರಂತರ ಪ್ರಯತ್ನವನ್ನು ಕಾಣಬಹುದು. ನಿಮ್ಮ ಒಟ್ಟು ಚಿಂತನಾಕ್ರಮ ವಸಾಹತೀಕರಣಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಸೃಷ್ಟಿಯಾಗಿದೆಯೆ?

ನಾನು ಬರೆದಿರುವುದು ಯಾವುದೇ ನಿರ್ದಿಷ್ಟ ವಾದವನ್ನು ಪ್ರತಿಪಾದಿಸುವುದಕ್ಕಲ್ಲ, ಬದಲಾಗಿ ಅರ್ಥಮಾಡಿಕೊಳ್ಳುವುದಕ್ಕಾಗಿ. ‘ಆಫ್ಟರ್ ಅಮ್ನೇಸಿಯಾ’ದಲ್ಲಿ ನಾನು ನಮ್ಮ ಸಾಹಿತ್ಯ ಕಲಿಕೆಯ ಕ್ರಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ನಡೆಸಿದೆ. ನಾವು ಬಳಸುವ ವಿಮರ್ಶೆ ಸಿದ್ಧಾಂತಗಳ ಸ್ವರೂಪ, ಅವುಗಳ ಪ್ರಸ್ತುತತೆಯನ್ನು ನಾನು ಅರಿತುಕೊಳ್ಳಲು ಯತ್ನ ಮಾಡಿದ್ದೇನೆ. ನನ್ನ ‘ಆಫ್ ಮೆನಿ ಹೀರೋಸ್’ ಕೃತಿಯಲ್ಲಿ ನಾವು ಕಾಲವನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೆ/ಎದುರಿಸಿದ್ದೇವೆ ಎಂಬುದನ್ನು ಕಂಡುಕೊಳ್ಳಲು ನೋಡಿದ್ದೇನೆ. ಚರಿತ್ರೆಯ ಪಲ್ಲಟಗಳ ನಡುವೆ ಜರುಗುವ ವಿದ್ಯಮಾನಗಳನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳುವುದು ನನ್ನ ಗುರಿಯೇ ಹೊರತು ನಿರ್ದಿಷ್ಟ ವಾದ ಮಂಡನೆಯಲ್ಲ. ಹೌದು ನಾನು ಬೆಳೆದ ಸಂದರ್ಭ, ಕಲಿತ ಇಂಗ್ಲಿಶ್ ಶಿಕ್ಷಣ, ಅರ್ಥ ಮಾಡಿಕೊಂಡ ರಾಜಕೀಯ ವ್ಯವಸ್ಥೆ ಎಲ್ಲವುಗಳ ಕಾರಣದಿಂದ ಪರಸ್ಪರ ವಿರುದ್ಧವಾದ ಭಾಷೆಗಳು, ಚಿಂತನೆಗಳು, ಸಂಪ್ರದಾಯಗಳು, ರಾಜಕೀಯಗಳ ನಡುವಿನ ಸಂಘರ್ಷದ ನಡುವೆಯೇ ನನ್ನ ವ್ಯಕ್ತಿತ್ವ ರೂಪುಗೊಂಡಿತು. ನನಗಿಂತ ಮೊದಲು ಆನಂದ ಕುಮಾರ ಸ್ವಾಮಿ, ಟ್ಯಾಗೋರ್, ಅರಬಿಂದೋ ಘೋಷ್‌ರಂಥ ಆಶಾವಾದಿ ಚಿಂತಕರು ಇಂಥ ಸಂಘರ್ಷಗಳ ನಡುವೆಯೇ ಸಂಶ್ಲೇಷಣೆ-ಸಮನ್ವಯ ಸಾಧ್ಯ ಎಂದು ನಂಬಿದ್ದರು. ಹಾಗೆಯೇ ಇನ್ನು ಕೆಲವರು ಪರಿಶುದ್ಧವಾದ ಜೀವನವನ್ನು ನಡೆಸಲು ಒಂದನ್ನು ಅವಲಂಬಿಸಿ ಇನ್ನೊಂದನ್ನು ತಿರಸ್ಕರಿಸಬೇಕು ಎಂದು ನಂಬಿದ ಬಲಪಂಥೀಯ ನಿರಾಶಾವಾದಿಗಳೂ ಇದ್ದರು. ನನಗೆ ಯಾವ ಶುದ್ಧತೆಯ ಬಗೆಗೂ ನಂಬಿಕೆಯಿಲ್ಲ. ಸಮನ್ವಯವೂ ಸಾಧ್ಯವಾಗುವುದಿಲ್ಲ. ನಾನು ಪರಸ್ಪರ ವಿರುದ್ಧವಾಗಿರುವ ಪರಂಪರೆಗಳ ನಡುವೆ ಸಮನ್ವಯ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರಿಯಲು ಸೆಣಸಾಡುತ್ತಿದ್ದೇನೆ. ಕೇವಲ ಒಂದರ ಅವಲಂಬನೆಯಿಂದ ಏನೂ ಸಾಧ್ಯವಾಗುವುದಿಲ್ಲ. ನಮಗೆ ಎರಡರ ಅಗತ್ಯವೂ ಇದೆ. ಹಾಗಾದರೆ ಇದಕ್ಕೆ ಪರಿಹಾರವೇನು? ನಾನು ಕಂಡುಕೊಂಡ ಉತ್ತರವೇನೆಂದರೆ ನಮ್ಮ ಸಾಮಾಜಿಕ ವಾಸ್ತವದ ನಡುವೆ ಇರುವ ಹಳ್ಳಿಗಳ ಜೀವನಕ್ರಮವನ್ನು ಅಭ್ಯಾಸ ಮಾಡಿ ಅವುಗಳ ಮೂಲಕ ಹೊಸ ಚಿಂತನೆಯನ್ನು ಕಂಡುಕೊಳ್ಳುವುದಾದರೆ ಅಲ್ಲಿ ನಮಗೆ ಹೊಸ ದಾರಿ ಕಾಣಬಹುದು. ಇಂಥ ಪರಸ್ಪರ ವಿರುದ್ಧವಾಗಿರುವ ಬೈನರಿಗಳ ಆಚೆ ನಡೆಯಬೇಕಾದ ಕಾರಣದಿಂದಲೇ ನನಗೆ ವಿಶ್ವವಿದ್ಯಾಲಯದ ನೌಕರಿಯನ್ನು ಬಿಟ್ಟು ಬುಡಕಟ್ಟು ಗ್ರಾಮಗಳಿಗೆ ಹೋಗಬೇಕಾಯಿತು. ಹಾಗಂತ ಹಳ್ಳಿಯ ಬದುಕು ಬಹಳ ಪರಿಶುದ್ಧವಾದದ್ದು ಎಂದು ನಾನು ನಂಬುವುದಿಲ್ಲ.

“ನಾನು ಭಾಷಾಶಾಸ್ತ್ರಜ್ಞನಲ್ಲ. ಮೂಲತಃ ಒಬ್ಬ ಸಾಹಿತ್ಯ ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಹೋರಾಟಗಾರ” ಎಂದು ನೀವು ಹೇಳಿಕೊಳ್ಳುತ್ತೀರಿ. ಮಾರುಕಟ್ಟೆ ಶಕ್ತಿಗಳು ಒಂದೇ ಭಾಷೆಯನ್ನು ನಮ್ಮ ಸಂಸ್ಕೃತಿಯ ಮೇಲೆ ಹೇರುತ್ತ ಏಕರೂಪಿ ಚಿಂತನೆ ಸಂಸ್ಕೃತಿಗಳನ್ನು ಬೆಳೆಸುತ್ತಿದ್ದರೆ ಇನ್ನೊಂದು ಕಡೆ ರಾಷ್ಟ್ರೀಯತೆಯ ಹೆಸರಿನಲ್ಲಿ ಒಂದು ಭಾಷೆಯನ್ನು ಹೊರಿಸುತ್ತಿರುವ ಹೊತ್ತಿನಲ್ಲಿ ನೀವು ದೇಶೀಯ ಭಾಷೆಗಳನ್ನು ದಾಖಲಿಸುವ-ಸಂರಕ್ಷಿಸುವ ಕೆಲಸವನ್ನು ಆರಂಭಿಸಿದಿರಿ. ಇದು ದೇಶೀವಾದದ ಕಡೆ ಚಲಿಸುವ ಕ್ರಮವೇ?

ಅಲ್ಲ. ವಸ್ತುನಿಷ್ಠವಾಗಿ ನೋಡುವುದಾದರೆ ಜಾಗತೀಕರಣ ಎನ್ನುವುದು, ಸ್ವಾತಂತ್ರ್ಯದ ಹಾಗೆ ಒಳ್ಳೆಯ ಸಂಗತಿ. ಅದು ನಮ್ಮನ್ನು ರಾಷ್ಟ್ರೀಯತೆಯ ಸಂಕುಚಿತ ಗಡಿಗೆರೆಗಳಿಂದ ದೂರಮಾಡುತ್ತದೆ. ಅದು ನಿಜವಾಗಿ ಸಾಕಾರಗೊಳ್ಳುವುದು ನಮ್ಮಲ್ಲಿ ವಿಶ್ವಮಾನವತೆ, ಅನಿಕೇತನ ತತ್ವದಂಥ ವಿಶಾಲ ಪ್ರಜ್ಞೆ ಬೆಳೆದಾಗ ಮಾತ್ರ. ಆದರೆ ಅದಕ್ಕೆ ವಿರುದ್ಧವಾಗಿ ಇಂದು ಬಂಡವಾಳದ ಹರಿವಿಗೆ ಜಾಗತಿಕ ಅವಕಾಶ ದೊರಕಿದೆಯೇ ಹೊರತು ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯದ ಆಶಯಗಳು ಸಂಪೂರ್ಣ ಮೂಲೆಗೆ ಸರಿದಿವೆ. ಭಾಷೆಗಳು ಸಾಯುತ್ತಿರುವುದು ಜಾಗತೀಕರಣದ ಕಾರಣದಿಂದಲ್ಲ, ಸ್ವಾತಂತ್ರ್ಯ ಸಮಾನತೆಯ ಆಶಯಗಳು ನಾಶವಾಗುತ್ತಿರುವ ಕಾರಣಕ್ಕೆ. ನಿಜವಾದ ಜಾಗತೀಕರಣದಲ್ಲಿ ಪ್ರತಿ ಅಂಗುಲ ಭೂಮಿಯೂ ಅಲ್ಲಿರುವ ಜನರೂ ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಇಡೀ ಜಗತ್ತು ಸ್ವಾತಂತ್ರ್ಯ, ಸಮಾನತೆಯ ಆಶಯಗಳಿಂದ ಜೀವಂತವಾಗಿರುತ್ತದೆ. ಈಗ ಕಾರ್ಪೋರೇಟ್ ಜಗತ್ತು ಮಾತ್ರ ಥಳಥಳಿಸುತ್ತಿದ್ದು ಉಳಿದವೆಲ್ಲ ಶವಗಳ ಹಾಗೆ ಮಂಕಾಗಿವೆ. ಹಾಗಾಗಿ ನಾನು ಭಾಷೆಗಳನ್ನು ಕುರಿತು ಮಾತಾಡುತ್ತಿರುವುದು ದೇಶೀವಾದದ ಕಾರಣದಿಂದಲ್ಲ. ಭಾಷೆಗಳನ್ನು ಆವರಿಸಿರುವ ಬದುಕಿನ ಬಗೆಗಿನ ಪ್ರೀತಿಯ ಕಾರಣದಿಂದ.

ಆದರೆ ನೀವು ಹೇಳುವ ಮಾದರಿಯ ಜಾಗತೀಕರಣ ಎಲ್ಲಾದರೂ ಎಂದಾದರೂ ಅನುಷ್ಠಾನಕ್ಕೆ ಬಂದಿದೆಯೆ?

ನೋಡಿ, ಮನುಷ್ಯನನ್ನು ಒಳಗೊಂಡಂತೆ, ಅವನಿಗಿಂತ ಎಷ್ಟೋ ಪಾಲು ದೊಡ್ಡದಾಗಿರುವ ಪ್ರಾಣಿ ಪಕ್ಷಿ ನದಿ ಸಮುದ್ರ ಸಕಲ ಚರಾಚರಗಳನ್ನೊಳಗೊಂಡಂತೆ, ಇಡೀ ವಿಶ್ವವು ನಿರಂತರ ವಿಕಾಸದ ಹಾದಿಯಲ್ಲಿ ಸಾಗುತ್ತಿದೆ. ಪದಾರ್ಥ(ಮ್ಯಾಟರ್), ಪ್ರಜ್ಞೆ, ಭಾಷೆ ಹೀಗೆ ಹಲವು ಅವಸ್ಥೆಗಳನ್ನು ಹಾದುಹೋಗಿರುವ ವಿಕಾಸದ ಹಾದಿಯಲ್ಲಿ ನಾವೀಗ ಭಾಷೆಯನ್ನೂ ದಾಟಿ ಹೋಗುವ ಸ್ಥಿತಿಗೆ ಬಂದಿದ್ದೇವೆ. ವಿಕಾಸದ ಪ್ರಕ್ರಿಯೆ ದೇಶ ಕಾಲ ಭಾಷೆ ಲಿಂಗಗಳನ್ನು ಆಧರಿಸಿಲ್ಲ. ಮನುಷ್ಯನೂ ಸಹ ಇಲ್ಲಿ ಮುಖ್ಯವಲ್ಲ. ನಾವು ತಪ್ಪಾಗಿ ಮನುಷ್ಯನನ್ನು ಈ ಸಮಗ್ರ ವಿಕಾಸದ ಪ್ರಕ್ರಿಯೆಯ ಕೇಂದ್ರವೆಂದು ಭಾವಿಸಿದ್ದೇವೆ. ನನ್ನ ಬಲವಾದ ನಂಬಿಕೆಯೇನೆಂದರೆ ಈ ವಿಕಾಸದ ಪಥದಲ್ಲಿ ಮುಂದೆ ಮನುಷ್ಯರಿಗಿಂತ ಭಿನ್ನವಾದ ಹಾಗೂ ವಿಶಾಲವಾದ ಪ್ರಜ್ಞೆಯನ್ನು ಹೊಂದಿರುವ ಜೀವಿಗಳು ಬರಬಹುದು. ನಾವಿನ್ನೂ ಧರ್ಮ, ದೇಶ, ಜನಾಂಗ, ಭಾಷೆ ಎಂಬ ಹಳೆಯ ಚೌಕಟ್ಟುಗಳಲ್ಲಿಯೇ ಸಿಕ್ಕಿಹಾಕಿಕೊಂಡಿರುವಾಗ ಇದನ್ನು ಮೀರಿದ ನೆಲೆಯಲ್ಲಿ ಚಿಂತಿಸಬೇಕಾದ ಸಂದರ್ಭ ಬರಬಹುದು. ಅಂಥ ಸಂಕ್ರಮಣ ಕಾಲದಲ್ಲಿ ನಾವು ವೈವಿಧ್ಯತೆಯನ್ನು ಎತ್ತಿಹಿಡಿಯುವ ಅಗತ್ಯವಿದೆ. ನಾನು ಹೇಳುವ ಭಾಷಿಕ ವೈವಿಧ್ಯತೆ ಹಲವು ಬಗೆಯ ಜೈವಿಕ, ಸಾಂಸ್ಕೃತಿಕ, ಸಾಮುದಾಯಿಕ ವೈವಿಧ್ಯತೆಗಳಲ್ಲಿ ಒಂದು. ಹಾಗಾಗಿ ಕೇವಲ ಒಂದೋ ಎರಡೋ ಭಾಷೆಗಳನ್ನು ಉಳಿಸುವ ಕುರಿತು ಮಾತನಾಡುತ್ತಿಲ್ಲ. ನಾವೆಲ್ಲ ಒಟ್ಟಾಗಿ ಚಿಂತಿಸಬೇಕಾದದ್ದು ವೈವಿಧ್ಯತೆ ಎಂಬ ಸ್ಥಿತಿಯ ಬಗ್ಗೆ. ನನ್ನನ್ನು ಬಹಳ ಸಾರಿ ದೇಶಿವಾದಿ ಎಂಬ ಹಣೆಪಟ್ಟಿಯ ಮೂಲಕ ವಿವರಿಸಿದ್ದಾರೆ. ನನ್ನ ಮೊದಲ ಪುಸ್ತಕ ಬಂದಾಗ ದೇಶೀವಾದದ ಚರ್ಚೆ ಶುರುವಾಗಿತ್ತು . ಇಲ್ಲಿ ಬಾಲಚಂದ್ರ ನೆಮಾಡೆ, ಅಲ್ಲಿ ಆಫ್ರಿಕಾದಲ್ಲಿ ಇಂಥ ಚರ್ಚೆಗಳ ಕಾರಣದಿಂದ ಹೊಸದೊಂದು ಚಿಂತನಾಕ್ರಮದ ಹುಡುಕಾಟ ನಡೆದಿತ್ತು. ಆದರೆ ನಾನು ಕೇವಲ ದೇಶೀವಾದಿಯಾಗಿದ್ದರೆ ಅಲ್ಲಿಯೇ ನಿಲ್ಲುತ್ತಿದ್ದೆ. ನನಗನ್ನಿಸುವಂತೆ ಅದನ್ನು ದಾಟಿ ಮುಂದೆ ನಡೆಯುವ ಪ್ರಯತ್ನದಲ್ಲಿ ನಾನಿದ್ದೇನೆ.

(ಡಿ ಆರ್ ನಾಗರಾಜ್)

ಇಲ್ಲಿಯೇ ಇನ್ನೊಂದು ಪ್ರಶ್ನೆಯನ್ನು ಕೇಳುವುದಾದರೆ, ನೀವು ಪ್ರತಿಪಾದಿಸುವ ವಿಸ್ಮೃತಿಯ ಕಲ್ಪನೆಯನ್ನು ಕನ್ನಡದಲ್ಲಿ ಡಿ ಆರ್ ನಾಗರಾಜರೂ ಚರ್ಚಿಸಿದ್ದಾರೆ. ಆದರೆ ಡಿ ಆರ್ ಅವರು ವಿಸ್ಮೃತಿಯ ಪರಿಕಲ್ಪನೆಯನ್ನು ಬೇರೆಯದೇ ಆದ ಎತ್ತರಕ್ಕೆ ಕೊಂಡೊಯ್ದು ಆಧುನಿಕ ಪೂರ್ವ ಪಠ್ಯಗಳನ್ನು ಮರುವಿಶ್ಲೇಷಿಸುವ ಮೂಲಕ ಅದನ್ನು ಮೀರುವ ಪ್ರಯತ್ನವನ್ನು ಮಾಡುತ್ತಾರೆ.

ಇದು ನನಗೆ ಬಹಳ ಸ್ವಾರಸ್ಯಕರ ಸಂಗತಿಯಾಗಿ ಕಾಣುತ್ತಿದೆ. ಇಂಥ ಪ್ರಯತ್ನ ಡಿ ಆರ್ ಅವರಲ್ಲಿ ಮಾತ್ರವಲ್ಲ. ಆಧುನಿಕ ಪೂರ್ವ ಸಾಮಾಜಿಕ ರಚನೆಗಳನ್ನು ಅರ್ಥ ಮಾಡಿಕೊಳ್ಳುವ ಹಂಬಲ ಆಂತ್ರೋಪಾಲಜಿಯಲ್ಲಿ ಆಗಿದೆ. ಸಾಹಿತ್ಯದಲ್ಲಿ ದಲಿತ ಸಾಹಿತ್ಯದ ಮೂಲಕ, ನಾನು ಬುಡಕಟ್ಟುಗಳ ಜೊತೆ ನಡೆಸಿದ ಅಧ್ಯಯನಗಳಲ್ಲಿ ಆಗಿದೆ. ಆಧುನಿಕ ಪೂರ್ವ ಸಮಾಜಗಳನ್ನು ಅರಿಯುವ ಬಗ್ಗೆ ಹೊಸ ಚಿಂತನಾ ಮಾದರಿ ಬೆಳೆಯುತ್ತಿದೆ. ಆದರೆ ಇದು ಮರಳಿ ಪ್ರಕೃತಿಯ ಕಡೆ ನಡೆಯಿರಿ ಎಂಬ ರೂಸೋನ ಮಾದರಿಯದಲ್ಲ. ಇಂಥ ಪ್ರಯತ್ನಗಳು ನಮಗೆ ತಿಳಿಸುವ ಸತ್ಯವೇನೆಂದರೆ ರ್ಯಾಷನಲಿಸಂ, ವಿಜ್ಞಾನ, ತಂತ್ರಜ್ಞಾನ, ಅಧಿಕಾರದ ರಚನೆಗಳು ಹಿಂಸಾತ್ಮಕವಾಗಿವೆ.ಇಂಥ ಹಿಂಸೆಯಿಂದ ಮನುಷ್ಯಕುಲವನ್ನು ರಕ್ಷಿಸಬೇಕಾದರೆ ಕಳೆದ 200-300 ವರ್ಷಗಳ ಇತಿಹಾಸದಲ್ಲಿ ಬಂದಿರುವ ಪಾಶ್ಚಿಮಾತ್ಯ ವೈಚಾರಿಕ ಸಿದ್ಧಾಂತಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಅಂಥ ಚಿಂತನೆ ಸಾಧ್ಯವಾಗುವುದು ಆಫ್ರಿಕಾ, ಇಂಡಿಯಾದಿಂದ ಬರುವ ಚಿಂತಕರಿಗೆ ಮಾತ್ರ. ಡಿ ಆರ್ ಅವರ ಅಧ್ಯಯನಗಳಲ್ಲಿ ನಾವು ಕಾಣುವುದು ಅಂಥ ಪ್ರಯತ್ನಗಳ ಆರಂಭವನ್ನು. ವಿಶೇಷವೆಂದರೆ, ಬಹಳ ಕ್ರಿಯಾಶೀಲ ಮನಸ್ಸುಗಳು -ಬೊಲಿವಿಯಾದಲ್ಲಿರಲಿ, ಅಥವಾ ಆಸ್ಟ್ರೇಲಿಯಾದ ಲಿಂಡಾ ಸ್ಮಿತ್(‘ಡಿ ಕಲೊನೈಜಿಂಗ್ ನಾಲೆಜ್’) ಇರಲಿ, ಇಂಡಿಯಾದ ಆಶಿಶ್ ನಂದಿಯಾಗಲಿ, ಕರ್ನಾಟಕದ ಡಿಆರ್ ನಾಗರಾಜರಾಗಲಿ, ನಾನಾಗಲಿ-ಹೇಳುತ್ತಿರುವುದು ಪಾಶ್ಚಿಮಾತ್ಯ ವಿಜ್ಞಾನ ಮತ್ತು ವೈಚಾರಿಕತೆಗಳು ನಮ್ಮನ್ನು ತಪ್ಪು ದಾರಿಗೆ ಕೊಂಡೊಯ್ದಿವೆ ಎಂದು. ಇವೆಲ್ಲವನ್ನು ಕಳಚಿಕೊಂಡು ನಾವೀಗ ಮನುಷ್ಯರಾಗಬೇಕಾಗಿದೆ. ಅದೇ ಹೊತ್ತಿನಲ್ಲಿ ಜಾಗತಿಕವಾಗುವುದು ಎಂದರೆ ಯಾವುದೋ ಒಂದು ರಾಷ್ಟ್ರದ, ಪ್ರದೇಶದ, ಸಮುದಾಯದ ನಿರ್ದಿಷ್ಟ ಲಕ್ಷಣಗಳಿಗೆ ಮಾತ್ರ ಸೇರಿದವರಾಗದೆ ಇವೆಲ್ಲವನ್ನೂ ಮೀರಿದ/ಮೀರುವ ಗುಣವನ್ನೂ ಹೊಂದಿದವರಾಗಬೇಕು.

ಸ್ಥಾಪಿತ/ಮುಖ್ಯ ಧಾರೆಯ ಸಾಹಿತ್ಯ ಸಾಂಸ್ಕೃತಿಕ ಪರಂಪರೆಗಳಿಗೂ ದೇಶೀಯ ಸಂಸ್ಕೃತಿಗಳಿಗೂ ದೊಡ್ಡ ಅಂತರವಿದೆ ಎನ್ನುತ್ತೀರಿ. ಈ ಅಂತರವನ್ನು ದೇಶೀಯ ಸಂಸ್ಕೃತಿಗಳಲ್ಲಿರುವ ಚರಿತ್ರೆ, ಜಾನಪದ, ಭಾಷಾಶಾಸ್ತ್ರ, ಮೀಮಾಂಸೆ ಮೊದಲಾದವುಗಳ ಮೂಲಕ ಇಲ್ಲವಾಗಿಸಲು ಪ್ರಯತ್ನ ಮಾಡುತ್ತಿದ್ದೀರಿ. ಇದು ಪುರೋಹಿತಶಾಹಿ ಬ್ರಾಹ್ಮಣ ಪರಂಪರೆಗಳ ಸಾರ್ವಕಾಲಿಕ ಜ್ಞಾನವನ್ನು ಪ್ರತಿಭಟಿಸುವ ಕ್ರಮವೇ?

ಖಂಡಿತವಾಗಿ. ನಾನು ಎಲ್ಲ ಬಗೆಯ ಪ್ರತ್ಯೇಕತೆಗಳ ವಿರುದ್ಧ ಸಮರಕ್ಕೆ ಸಿದ್ಧ. ಸದ್ಯದ ಜ್ಞಾನವನ್ನು ರೂಪಿಸಿಕೊಳ್ಳುವಲ್ಲಿ ಪಶ್ಚಿಮವನ್ನು ಅಥವಾ ಇಂಡಿಯಾವನ್ನು ಹೊರಗಿಡುವುದು, ಬುಡಕಟ್ಟು ದಲಿತ ಅನುಭವವನ್ನು ದೂರವಿಡುವುದು ಆಥವಾ ಬೌದ್ಧಿಕ/ಸಾಂಸ್ಕೃತಿಕ ಚಟುವಟಿಕೆಗಳಿಂದ ಬ್ರಾಹ್ಮಣರನ್ನು ದೂರವಿಡುವುದು-ಎಲ್ಲ ಬಗೆಯ ಪ್ರತ್ಯೇಕತೆಗಳನ್ನು ತೀವ್ರವಾಗಿ ವಿರೋಧಿಸುತ್ತೇನೆ. ನನಗೆ, ಪ್ರತ್ಯೇಕತೆ, ಸುಲಭವಾದ ಸಮನ್ವಯಗಳಿಗಿಂತ ಮಾನವೀಯವಾದ ಒಗ್ಗೂಡುವಿಕೆ ಸಹಜೀವನದ ಬಗ್ಗೆ ಹೆಚ್ಚು ಆಸಕ್ತಿ. ಎಲ್ಲವೂ ಪವಿತ್ರ ಎಂಬ ನಂಬಿಕೆ ನನ್ನದು. ಹಾಗಂತ ಪಾವಿತ್ರ್ಯದ ಹೆಸರಿನಲ್ಲಿ ನಡೆದಿರುವ ಅನ್ಯಾಯ-ಹಿಂಸೆಯನ್ನು ನಾನು ಬೆಂಬಲಿಸುವುದಿಲ್ಲ. ವೈವಿಧ್ಯತೆಗಳನ್ನು ಪೋಷಿಸಲು ಎಲ್ಲ ಬಗೆಯ ಪ್ರತ್ಯೇಕತೆಗಳನ್ನು ವಿರೋಧಿಸಬೇಕು. ಆ ಅರ್ಥದಲ್ಲಿ ನಾನು, ತಾನು ಮಾತ್ರ ಪವಿತ್ರ ಉಳಿದೆಲ್ಲವೂ ಅಪವಿತ್ರ ಎಂಬ ನಂಬಿಕೆಯಿಂದ ಹೊರಡುವ, ಪುರೋಹಿತಶಾಹಿಯ ವಿರೋಧಿಯೇ.

“ನನಗೆ ಭಾಷೆಗಳ ಕುರಿತ ವಿಶೇಷ ವ್ಯಾಮೋಹವಿಲ್ಲ. ಭಾಷೆಗಳು ಯಾಕೆ ಮುಖ್ಯವೆಂದರೆ ಅವು ಸಂಸ್ಕೃತಿ ಹಾಗೂ ನೆನಪುಗಳ ವಾಹಕಗಳು. ಭಾಷೆಗಳನ್ನು ಉಳಿಸುವ ಸರಿಯಾದ ಮಾರ್ಗವೆಂದರೆ ಭಾಷೆಗಳನ್ನು ಆಡುವವರಿಗೆ ಸೂಕ್ತವಾದ ಜೀವನೋಪಾಯವನ್ನು ಕಲಿಸುವುದು” ಎನ್ನುತ್ತೀರಿ. ಪ್ರಪಂಚದ ಹಲವು ಭಾಷೆಗಳನ್ನು ಕುರಿತು ಅಧ್ಯಯನ ಮಾಡಿರುವ ನಿಮ್ಮ ಅನುಭವದಲ್ಲಿ ಭಾಷೆಗಳು ಉಳಿಯುವುದು ಯಾವುದರಿಂದ? ಅವುಗಳನ್ನು ಆಡುವ ಜನರ ಸಂಖ್ಯೆಯಿಂದಲೇ? ಭಾಷೆಗಳ ಮೇಲಿನ ಅಭಿಮಾನದಿಂದಲೇ?

ಭಾಷೆಗಳು ಉಳಿಯುವುದು ಅವುಗಳನ್ನು ಬಳಸುವ ಅವಕಾಶಗಳು ಇದ್ದಾಗ ಮಾತ್ರ. ಇದು ಸಾಧ್ಯವಾಗದೇ ಹೋದಾಗ ಸಮುದಾಯಗಳು ಭಾಷೆಗಳಿಂದ ವಲಸೆ ಹೋಗುವ ನಿರ್ಧಾರ ಮಾಡುತ್ತವೆ. ಸಮುದಾಯಗಳಿಗೆ ಬದುಕುವ ಅವಕಾಶಗಳನ್ನು ಕಲ್ಪಿಸಿದಾಗ ಭಾಷೆಗಳು ಉಳಿಯುತ್ತವೆ. ಹಾಗಾಗಿ ಭಾಷೆಗಳು ಸಹಜವಾಗಿ ಹುಟ್ಟಿ ಬೆಳೆದು ಸಾಯುತ್ತವೆ. ಬದುಕುವ ಅವಕಾಶಗಳಿಗೆ ಅಪಾಯ ಬಂದರೆ ಅಕಾಲ ಮರಣ ಹೊಂದುತ್ತವೆ. ನಾನು ಇಂಥ ಭಾಷೆಗಳನ್ನು ಬಳಸುವ ಸಮುದಾಯಗಳ ಬದುಕಿನ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ. ಈ ಘನತೆ ಸಾಧ್ಯವಾದಾಗ ಅವುಗಳಿಗೆ ಬೇಕಾದ ಭಾಷೆಯಲ್ಲಿ ಮಾತಾಡುವ ಆಯ್ಕೆ/ಸ್ವಾತಂತ್ರ್ಯಗಳು ದೊರಕುತ್ತವೆ. ಸಮುದಾಯಗಳ ಉಳಿವಿಗಾಗಿ ಹೋರಾಡದೆ ಕೇವಲ ಭಾಷೆಗಾಗಿ ಹೋರಾಡಿದರೆ, ಯಾವ ಭಾಷೆಯನ್ನೂ ಸಹ ಉಳಿಸಲು ಸಾಧ್ಯವಿಲ್ಲ. ಭಾಷೆಗಳು ಸ್ಕೂಲು ಕಾಲೇಜುಗಳಲ್ಲಿ ಸೃಷ್ಟಿಯಾಗುವುದಿಲ್ಲ. ಅವು ಅಲ್ಲಿ ಮಿಂದು ಮಡಿಯುಟ್ಟು ಪಾವನವಾಗುತ್ತವೆ. ಭಾಷೆಗಳನ್ನು ಉಳಿಸಲು ಸಾಧ್ಯವಾಗುವುದು ಶಿಕ್ಷಣದಲ್ಲಿ ಬಳಕೆಯಾದಾಗ- ದೇಶ ಭಾಷೆಗಳು ಶಿಕ್ಷಣ ಮಾಧ್ಯಮದಲ್ಲಿ ಬಳಕೆಯಾದಾಗ ಎಂಬ ನಂಬಿಕೆಯನ್ನು ಹಲವು ವಿದ್ವಾಂಸರು ಹೊಂದಿದ್ದಾರೆ. ಅವು ಉಳಿಯುವುದು ಜೀವನೋಪಾಯದ ಮಾರ್ಗಗಳು ಸುಭದ್ರವಾಗಿದ್ದಾಗ. ಚರಿತ್ರೆಯಲ್ಲಿ ಇದಕ್ಕೆ ಹಲವಾರು ಉದಾಹರಣೆಗಳಿವೆ. ರೋಮನ್ ಸಾಮ್ರಾಜ್ಯದಲ್ಲಿ ಲ್ಯಾಟಿನ್ ಶಾಲೆ ಕಾಲೇಜುಗಳಲ್ಲಿ ಬಳಕೆಯಾದರೂ ಅದರ ನಾಶವನ್ನು ತಡೆಯಲು ಸಾಧ್ಯವಾಗಲಿಲ್ಲ. ನನಗೆ ಭಾಷೆಗಳ ಬಗ್ಗೆ ವ್ಯಾಮೋಹವಿಲ್ಲ ಎಂಬ ನನ್ನ ಮಾತಿನ ಅರ್ಥವೇನೆಂದರೆ ಭಾಷೆಯಲ್ಲಿನ ಸುಂದರ ಪದಪುಂಜಗಳಿಗಾಗಿ, ಉತ್ಕೃಷ್ಟ ಕಾವ್ಯಗಳ ಕಾರಣಕ್ಕಾಗಿ ಭಾಷೆಗಳು ಉಳಿಯಬೇಕಿಲ್ಲ. ಇವೆಲ್ಲವುಗಳಿಗಿಂತ ಭಾಷೆಗಳನ್ನು ಬಳಸುವ ಜನ ಬದುಕಬೇಕು ಎಂಬ ಅರ್ಥದಲ್ಲಿ ಈ ಮಾತುಗಳನ್ನು ಹೇಳಿದ್ದೇನೆ.

ಹಾಗಾದರೆ ಸಮುದಾಯವೊಂದು ಭಾಷೆಯನ್ನು ಬಿಡುವುದಾದರೆ ಅದು ಕೇವಲ ಭಾಷೆಯ ಆಯ್ಕೆಯ ಪ್ರಶ್ನೆಯಲ್ಲ.

ನಾನು ಬಹಳ ನೋವಿನಿಂದ ನಿಮಗೊಂದು ಉದಾರಣೆಯನ್ನು ಕೊಡುತ್ತೇನೆ. ಕಳೆದ ವಾರ ಭಾರತ ಸರ್ಕಾರ 2011 ರ ಭಾಷಾಗಣತಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. ಮರಾಠಿ ಭಾಷಿಕರ ಸಂಖ್ಯೆ ತೆಲುಗರಿಗಿಂತ ಹೆಚ್ಚಾಗಿದೆ- ಹಿಂದಿ ಮತ್ತು ಬಂಗಾಲಿ ಭಾಷೆಗಳ ನಂತರದ ಸ್ಥಾನದಲ್ಲಿ ಮರಾಠಿ ಇದೆ ಎಂಬ ಕಾರಣಕ್ಕೆ- ತಕ್ಷಣ ಮಹಾರಾಷ್ಟ್ರದಲ್ಲಿ ದೊಡ್ಡ ಸಂಭ್ರಮಾಚರಣೆ ಆರಂಭವಾಯಿತು. ಆದರೆ ನನ್ನ ಪ್ರಶ್ನೆಯೇನೆಂದರೆ ಎಷ್ಟು ಜನ ಉರ್ದು ಭಾಷಿಕರು ಉರ್ದುಗೆ ಬದಲಾಗಿ ಮರಾಠಿಯನ್ನು ತಮ್ಮ ಭಾಷೆಯನ್ನಾಗಿ ಘೋಷಿಸಿದ್ದಾರೆ? ಉರ್ದು ಮನೆಮಾತಾಗಿರುವವರು ಭಯದಿಂದ ಮರಾಠಿಯನ್ನು ತಮ್ಮ ಭಾಷೆ ಎಂದು ಹೇಳುತ್ತಿದ್ದಾರೆ.

ಭಾಷೆಯೆಂಬುದು ಕೇವಲ ಅಸ್ಮಿತೆಯ ಸಂಗತಿಯಾಗಿಲ್ಲ. ಅದು ಜನಗಳ ಅಸ್ತಿತ್ವವನ್ನೇ ಕಬಳಿಸುವಂತೆ ಆಕ್ರಮಣಕಾರಿಯಾಗಿ ಈಚಿನ ದಿನಗಳಲ್ಲಿ ಬೆಳೆಯುತ್ತಿದೆ ಎಂದು ನಿಮಗೆ ಅನಿಸುತ್ತಿದೆಯೆ?

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಾಹಿತಿಗಳ ಸಭೆಯಲ್ಲಿ ಕನ್ನಡವನ್ನು ಸ್ಕೂಲುಗಳಲ್ಲಿ ಶಿಕ್ಷಣಮಾಧ್ಯಮವಾಗಿ ಬಳಸಿಕೊಳ್ಳುವ ಕುರಿತು ಸರ್ಕಾರಕ್ಕೆ ಒತ್ತಾಯ ಹೇರಿದರು. ಇದು ಬಹಳ ಒಳ್ಳೆಯ ಬೆಳವಣಿಗೆ. ಹೀಗೆ ಮಾಡುವಾಗ ಇಲ್ಲಿ ಕೊಡವ ತುಳು ಕೊಂಕಣಿ ಭಾಷಿಕರೂ ಇದ್ದಾರೆ ಎಂಬುದನ್ನು ಮರೆಯಬಾರದು. ಕನ್ನಡದವರಿಗೆ ಕನ್ನಡದಲ್ಲಿ ಓದಿಬರೆಯಲು ಒತ್ತಾಯಿಸಲು ಹೇಗೆ ಸಾಧ್ಯವಾಗಬೇಕೋ, ಹಾಗೇ ತುಳು ಕೊಡವ ಕೊಂಕಣಿಗಳಿಗೂ ಇದು ಸಾಧ್ಯವಾಗಬೇಕು. ಕರ್ನಾಟಕದಲ್ಲಿರುವವರು ಕನ್ನಡ ಮಾತಾಡಬೇಕು ಎಂಬುದೇನೋ ಸರಿ. ಇದು ಕನ್ನಡವಲ್ಲದ ಭಾಷೆಗಳಿಗೆ ಆತಂಕವುಂಟು ಮಾಡಬಾರದು.

ಭಾಷೆಗಳ ಕುರಿತು ಕೆಲಸ ಮಾಡಲು ಶುರು ಮಾಡಿದಾಗ, ನೀವು ಸತ್ತಿರುವ, ಸಾಯುತ್ತಿರುವ ಭಾಷೆಗಳ ಸ್ಮಶಾನದೊಳಕ್ಕೆ ಕಾಲಿಡುತ್ತೀರ ಎಂದು ಭಾವಿಸಿದ್ದಿರಿ. ವಿಚಿತ್ರವೆಂದರೆ ಸ್ಮಶಾನದ ಬದಲಾಗಿ, ದಟ್ಟವಾದ ಕಾಡೊಳಕ್ಕೆ ಹೊಕ್ಕಂತಾಯಿತು ಎಂದಿದ್ದೀರಿ. ಈ ಕುರಿತು ಹೇಳಿ.

1991ನಲ್ಲಿ ಯುನೆಸ್ಕೋ ಅಳಿವಿನಂಚಿಗೆ ಸರಿದ ಭಾಷೆಗಳ ಕುರಿತು ಚರ್ಚೆಯನ್ನು ಆರಂಭಿಸಿತು. ನಂತರ ಅಳಿವಿನಂಚಿನ ಭಾಷೆಗಳ ಭೂಪಟವನ್ನೂ ಬಿಡುಗಡೆ ಮಾಡಿತು. 1961ರ ಗಣತಿಯಲ್ಲಿ 1652 ಭಾಷೆಗಳಿದ್ದರೆ, 1971 ರ ಗಣತಿಯಲ್ಲಿ ಕೇವಲ 109 ಭಾಷೆಗಳಿದ್ದವು. ನಾನೂ ಸಹ ಸಾಯುತ್ತಿರುವ ಭಾಷೆಗಳ ಕುರಿತಾಗಿ ಚಿಂತೆಗೊಳಗಾಗಿದ್ದೆ. ಹಾಗಾಗಿ ನಾನು ಈ ಬಗ್ಗೆ ಕೆಲಸ ಮಾಡಲು ಶುರು ಮಾಡಿದಾಗ ಭಾಷೆಗಳ ಸ್ಮಶಾನದಲ್ಲಿ ಪಿಶಾಚಿಯಂತೆ ಅಲೆಯಬೇಕಾಗಬಹುದೆಂದು ನಂಬಿದ್ದೆ. ಆದರೆ ನಾನು ದೇಶದ ಹಲವು ರಾಜ್ಯಗಳಿಗೆ ಹೋದಾಗ ಕೇವಲ ಒಂದಷ್ಟು ಭಾಷೆಗಳನ್ನು ನೋಡಬಹುದು ಎಂದುಕೊಂಡಿದ್ದೆ. ಉತ್ತರಾಖಂಡದಲ್ಲಿ ಕುಮಾವನಿ ಗಡವಾಲಿ ಎಂಬ ಒಂದೋ ಎರಡೋ ಭಾಷೆಗಳಿರಬಹುದು ಎಂದುಕೊಂಡರೆ ಅಲ್ಲಿ 18ಕ್ಕೂ ಹೆಚ್ಚು ಭಾಷೆಗಳಿದ್ದವು. ಪಂಜಾಬಿನಲ್ಲಿ ಪಂಜಾಬಿಯೊಂದೇ ಇರಬಹುದೆಂದುಕೊಂಡರೆ ಅಲ್ಲಿ ಕನಿಷ್ಟ 12 ಬಳಕೆಯಲ್ಲಿದ್ದವು. ಗುಜರಾತಿನಲ್ಲಿ ಗುಜರಾತಿ ಉರ್ದು ಹಿಂದಿಯಂಥ ಭಾಷೆಗಳಿರಬಹುದೆಂದುಕೊಂಡರೆ ಅಲ್ಲಿ 58 ಜೀವಂತ ಭಾಷೆಗಳಿದ್ದವು. ಇದರಿಂದ ನನಗೆ ದೊಡ್ಡ ಜ್ಞಾನೋದಯವಾಯಿತು. ಹಾಗಾಗಿ ನೂರಾರು ಸ್ವರಗಳಿಂದ ಕಿಕ್ಕಿರಿದ ಭಾಷೆಗಳ ಕಾಡಿನಲ್ಲಿ ಓಡಾಡುವಂತಾಯಿತು.

ಹಾಗಾದರೆ ಭಾಷೆಗಳ ಅಳಿವು ಎಂಬ ಆಲೋಚನೆಯೇ ಅನಗತ್ಯವಾದದ್ದೇ?

ಇದನ್ನು ಬಹಳ ನೇರವಾಗಿ ಹೇಳುತ್ತೇನೆ. ಯೂರೋಪಿನಲ್ಲಿ 1990 ಸುಮಾರಿನಲ್ಲಿ ಭಾಷೆಗಳ ಅಳಿವು ಎಂಬ ಚಿಂತನೆ ಹುಟ್ಟಿತು. ಇದಕ್ಕಾಗಿ ಬಹಳ ಹಣ ಐಟಿ ಸೆಕ್ಟರ್‌ಗಳಿಂದ ಹರಿದುಬಂದಿದೆ. ಅಂಥ ಅಧ್ಯಯನಗಳು ಕಂಡುಹಿಡಿದಿರುವ ಭಾಷೆಗಳ ಕಾರ್ಯಸಾಧ್ಯತೆಯ ಮಾಪನದ ಪ್ರಕಾರ, ಯೂರೋಪಿನ 74 ಭಾಷೆಗಳಲ್ಲಿ 58 ಭಾಷೆಗಳು ಮುಂದಿನ 30 ವರ್ಷಗಳಲ್ಲಿ ಸಾಯುತ್ತವೆ. 1970ರಲ್ಲಿ ಎಚ್‌ಐವಿ, 1950ರಲ್ಲಿ ಕ್ಯಾನ್ಸರ್, 1930ರಲ್ಲಿ ಮಲೇರಿಯಾ, 20 ನೇ ಶತಮಾನದ ಆರಂಭದಲ್ಲಿ ಟಿಬಿಗಳು ಚಾಲ್ತಿಗೆ ಬಂದವು. ಯೂರೋಪು ಕಾಲಕಾಲಕ್ಕೆ ಮನುಷ್ಯಕುಲವನ್ನೇ ನಾಶಮಾಡುವ ರೋಗಗಳನ್ನು ಕಂಡುಹಿಡಿದು ಜನರನ್ನು ಭಯಭೀತರನ್ನಾಗಿಸುವ ಚಟಕ್ಕೆ ಬಿದ್ದಂತೆ ಕಾಣುತ್ತದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಏಷ್ಯಾಗಳಲ್ಲಿ ನಾವು ಭಾಷೆಗಳ ಪಲ್ಲಟವನ್ನು ಕುರಿತು ಹೊಸ ಚಿಂತನೆಯನ್ನು ಆರಂಭಿಸಬೇಕಾಗಿದೆ. ಹಾಗೆಯೇ ಇಂಗ್ಲಿಶ್ ನಮ್ಮ ಭಾಷೆಗಳನ್ನು ದೊಡ್ಡಮಟ್ಟದಲ್ಲಿ ಪ್ರಭಾವಿಸುತ್ತಿದೆ ಹಾಗೂ ಜೀವಂತಿಕೆಯನ್ನು ನಾಶಮಾಡುತ್ತಿದೆ. ಹಾಗೆಯೇ ಹಿಂದಿಯೂ ಸಹ ದೇಶೀ ಭಾಷೆಗಳ ಅಸ್ತಿತ್ವನ್ನು ಕಬಳಿಸುತ್ತಿದೆ. ಇಂಗ್ಲಿಶ್ ಭಾಷಾ ಸಾಮ್ರಾಜ್ಯದ ಮಾದರಿಯಲ್ಲಿ ಹಿಂದಿ ಸಾಮ್ರಾಜ್ಯವೂ ಬೆಳೆಯುತ್ತಿದೆ. 2011ರ ಗಣತಿಯಲ್ಲಿ 52ಕೋಟಿ ಭಾರತೀಯರು ಹಿಂದಿ ಭಾಷಿಕರಿದ್ದಾರೆಂದು ಹೇಳಲಾಗಿದೆ. ಆದರೆ ಹಿಂದಿಯ ಒಳಗೆ 5 ಕೋಟಿ ಜನರಿಗಿಂತ ಹೆಚ್ಚು ಜನ ಮಾತಾಡುವ ಭೋಜಪುರಿಯನ್ನೂ ಸೇರಿದಂತೆ 48 ಮುಖ್ಯ ಭಾಷೆಗಳನ್ನು ಸೇರಿಸಲಾಗಿದೆ. ನಮ್ಮ ಭಾಷೆಗಳು ನಾಶವಾಗುತ್ತಿರುವುದು ಇಂಥ ಭಾಷಾ ವಸಾಹತುಶಾಹಿಯಿಂದ. ಯೂರೋಪಿಯನ್ನರು ಹೇಳುತ್ತಿರುವ ಭಾಷಾನಾಶವನ್ನು ನಾವಿಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ನಮ್ಮ ಆರ್ಥಿಕತೆ, ಯೋಜನೆಗಳು, ಶಿಕ್ಷಣಕ್ರಮ, ಮಾರುಕಟ್ಟೆ ನೀತಿಗಳು ನಿಸ್ಸಂದೇಹವಾಗಿ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತಿರುವುದಂತೂ ನಿಜ.

ಭಾಷೆಗಳು ಹುಟ್ಟುವ ಸಂದರ್ಭ ಎಂತಹದು? ಕೈಗಾರಿಕಾ ಕ್ರಾಂತಿಯ ನಂತರದಲ್ಲಿ ನಮ್ಮ ಈ ಆಧುನಿಕ ಯುಗದಲ್ಲಿ ಭಾಷೆಗಳು ಹುಟ್ಟುವ ಸಾಧ್ಯತೆಯಿದೆಯೆ? ಇಲ್ಲವಾದರೆ ಯಾಕೆ?

ಭಾಷೆಗಳು ಬಹಳ ದೀರ್ಘವಾದ ಅವಧಿಯಲ್ಲಿ ನಿಧಾನಕ್ಕೆ ಅಸ್ತಿತ್ವವನ್ನು ಪಡೆದುಕೊಳ್ಳುತ್ತವೆ. ನಂತರ ಸಮಾಜದಲ್ಲಿ ಚಾಲ್ತಿಗೆ ಬಂದು ಭಾಷೆ ಎಂದೋ ಹೊಸ ಭಾಷೆ ಎಂದೋ ಗುರುತಿಸಲ್ಪಡುತ್ತವೆ. ಸಮುದಾಯಗಳು ತಮ್ಮ ಜೀವನೋಪಾಯಕ್ಕೆ ಹೊಸಮಾರ್ಗಗಳನ್ನು ಹೊಸ ಪ್ರದೇಶಗಳನ್ನು ಹುಡುಕಿಕೊಳ್ಳುವ ಕಾರಣದಿಂದ ಭಾಷೆಗಳು ನಿಧಾನವಾಗಿ ರೂಪುಗೊಳ್ಳುತ್ತವೆ. ಸಮುದಾಯಗಳು ತೊಡಗಿಕೊಂಡಿರುವ ದುಡಿಮೆಯ ವಿಧಾನಗಳು ಮತ್ತು ಬಳಕೆಯಲ್ಲಿರುವ ಪದಸಂಪತ್ತು ಇವುಗಳ ನಡುವಿನ ಅಂತರ ಹೆಚ್ಚಾದ ಹಾಗೆ ಶಬ್ದಕೋಶವನ್ನು ಹಿಗ್ಗಿಸುವ ಅನಿವಾರ್ಯತೆ ಉಂಟಾಗುತ್ತದೆ. ಕಳೆದ ಎರಡು ಶತಮಾನಗಳಲ್ಲಿ ಪ್ರಪಂಚದಲ್ಲಿ ಅನೇಕ ಹೊಸ ಭಾಷೆಗಳು ಹುಟ್ಟಿವೆ. ಉದಾಹರಣೆಗೆ ದಕ್ಷಿಣ ಮತ್ತು ಪೂರ್ವ ಆಫ್ರಿಕಾ ಖಂಡದಲ್ಲಿ ಆಫ್ರಿಕಾನ್ಸ್, ನಾಗಾಲ್ಯಾಂಡ್‌ನಲ್ಲಿ ನಾಗಮೀಸ್(ಎರಡು ಭಾಷೆಗಳೂ ಸಹ, ಬಹು ದೊಡ್ಡ ಭಾಷಾ ಸಮೂಹಗಳಿಗೆ ಸಂಪರ್ಕಭಾಷೆಗಳಾಗಿದ್ದವು) ಸಂಜ್ಞಾ ಭಾಷೆ(ಕಿವಿ ಕೇಳದವರಿಗಾಗಿ), ಯಂತ್ರ ಭಾಷೆ( ಕಂಪ್ಯೂಟರ್‌ಗಳಿಗಾಗಿ), ಸ್ವತಂತ್ರ ಭಾಷೆಯಾದ ಕೊಂಕಣಿ(ಮೊದಲು ಕನ್ನಡ ಮರಾಠಿಗಳ ವಿಸ್ತರಣೆಯಾಗಿತ್ತು) ಮೊದಲಾದವು.

ಭಾಷೆಗಳು ಹೇಗೆ ಬೆಳೆಯುತ್ತವೆ? ಭಾಷೆಗಳ ವಿಕಾಸಕ್ಕೆ ಪೂರಕವಾದ ಕಾರಣಗಳೇನು?

ಭಾಷೆಗಳ ಬೆಳವಣಿಗೆಯನ್ನು ಕೇವಲ ಅವುಗಳನ್ನು ಆಡುವವವರ ಸಂಖ್ಯೆಯ ಆಧಾರದಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ಭಾಷೆಯಲ್ಲಿ ಎದ್ದುಕಾಣುವ ಶಬ್ದಾರ್ಥವ್ಯಾಪ್ತಿ, ಸಮಾನ ಹಾಗೂ ವಿರುದ್ಧ ಪದಗಳ ವೈವಿಧ್ಯ, ಮತ್ತು ಅದರ ಧಾರಣ ಶಕ್ತಿಗಳ ಆಧಾರದ ಮೇಲೆ ನಿರ್ಧರಿಸಬಹುದು. ಭಾಷೆಯ ಅಸ್ತಿತ್ವವಿರುವುದು ‘ಅದು ಹೇಗಿದೆ’ ಎಂಬುದನ್ನು ಅವಲಂಬಿಸಿದೆಯೇ ವಿನಾ ಕೇವಲ ಅದನ್ನು ‘ಯಾರು ಬಳಸುತ್ತಾರೆ’ ಎಂಬುದರ ಮೇಲಲ್ಲ. ಭಾಷೆಯ ಬೆಳವಣಿಗೆಗೆ ಪೂರಕವಾಗಿರುವ ಇತರ ಅಂಶಗಳೆಂದರೆ 1. ಭಾಷೆಯನ್ನು ಬಳಸುವವರು ಸೇರಿಸುವ ಹೊಸ ಶಬ್ದಗಳು, ಶೈಲಿಗಳು, ರೂಪಗಳು, ಸಂಕೇತ, ಪ್ರತಿಮೆಗಳು, ಸಂಕೀರ್ಣ ಅರ್ಥಗಳು 2. ಬೇರೆ ಭಾಷೆಗಳಿಂದ ಹರಿದುಬರುವ ಪದಗಳು, ನುಡಿಗಟ್ಟುಗಳು 3. ಭಾಷೆಯನ್ನು ಬಳಸುವವರಿಗೆ ಆ ಭಾಷೆಯಲ್ಲಿಯೇ ಸಿಗುವ ಉದ್ಯೋಗ- ಜೀವನೋಪಾಯದ ಕ್ರಮಗಳು.

ಕಾಲದ ಜೊತೆ ನಮಗಿರುವ ವಿವಾದಾತ್ಮಕ ಸಂಬಂಧ ಭಾರತೀಯ ತತ್ವಶಾಸ್ತ್ರದ ಬಹುದೊಡ್ಡ ಸಮಸ್ಯೆಯೂ ಹೌದು. ನಾವು ಏಕಕಾಲಕ್ಕೆ ಹಲವು ಕಾಲಗಳಲ್ಲಿ ಬದುಕುತ್ತೇವೆ. ಬೆಂಗಳೂರು ಮುಂಬಯಿಯಂಥ ಆಧುನಿಕ ನಗರಗಳಿಗೆ ನಮ್ಮ ಕುಲ, ಜಾತಿ, ಗೋತ್ರಗಳನ್ನು ಕೊಂಡೊಯ್ಯುತ್ತೇವೆ. ಆದ್ದರಿಂದ ವರ್ತಮಾನದಲ್ಲಿ ನಮ್ಮ ಗತವನ್ನು ಮತ್ತೊಮ್ಮೆ ಹುಡುಕಿ ಕಟ್ಟಿಕೊಳ್ಳುವ ಯಾವುದೇ ಪ್ರಯತ್ನವು ಸಮರ್ಪಕವಾಗಿಲ್ಲ.

ಪ್ರಾಚೀನ ತಮಿಳಿನಿಂದ ಕನ್ನಡ ಹುಟ್ಟಿದಂತೆ, ತಾಯ್ನುಡಿಯ ಒಡಲಿನಿಂದ ಹೊಸಭಾಷೆಯೊಂದು ಹೇಗೆ ಹುಟ್ಟುತ್ತದೆ? ಸಂಸ್ಕೃತ ಹಾಗೂ ದ್ರಾವಿಡ ಭಾಷೆಗಳ ನಡುವಿನ ಸಂಬಂಧ- ಪರಸ್ಪರ ಪೋಷಕವೋ ಅಥವಾ ಶೋಷಕವೋ- ಎಂತಹದು?

ಇದಕ್ಕೆ ಉತ್ತರ ಹೇಳಲು 500 ಪುಟಗಳ ಪುಸ್ತಕ ಬರೆಯಬೇಕಾಗುತ್ತದೆ…!! ಇದನ್ನು ಚುಟುಕಾಗಿ ಹೇಳಿದರೆ ಅಪಾರ್ಥಕ್ಕೆ ಕಾರಣವಾಗಬಹುದು ಎಂಬ ಅನುಮಾನವೂ ಇದೆ. ಆದರೂ, ಸಂಕ್ಷಿಪ್ತವಾಗಿ ಹೇಳುವುದಾದರೆ ಅಪ್ಪನಿಗೆ ಮಗಳು ಹುಟ್ಟುವ ಹಾಗೆ ಭಾಷೆಗಳು ಹುಟ್ಟುವುದಿಲ್ಲ. ವಿಶಾಲವಾದ ಮರುಭೂಮಿಗಳು ರೂಪುಗೊಳ್ಳುವ ಹಾಗೆ, ಮಿಲಿಯಗಟ್ಟಲೆ ಬಂಡೆಗಳು ಕ್ರಮೇಣ ಜರಾಜೀರ್ಣಗೊಂಡು ಮರಳಿನ ಕಣಗಳಾಗುವ ಹಾಗೆ ನಿಧಾನವಾಗಿ ಭಾಷೆಗಳು ರೂಪಪಡೆಯುತ್ತವೆ. ಭಾಷೆಗಳು ಸಾವಯವ/ಜೈವಿಕ ಸ್ವರೂಪದ ಸೃಷ್ಟಿಯಲ್ಲ. ಅವು ಸಾಮಾಜಿಕ ವ್ಯವಸ್ಥೆಯಲ್ಲಿ ರೂಪುತಳೆಯುವ ಸಂಗತಿಗಳಾಗಿವೆ. ತಮ್ಮಷ್ಟಕ್ಕೆ ತಾವೇ ಅವು ಅಸ್ತಿತ್ವವನ್ನು ಪಡೆಯಲಾರವು. ಅವು ಸಮಾಜಗಳು ಇರುವವರಗೆ ಇರುತ್ತವೆ, ಅವುಗಳನ್ನು ಆಡುವ ಭಾಷಾ ಸಮುದಾಯಗಳು ಇರುವವರೆಗೆ ಬದುಕಿರುತ್ತವೆ. ಭಾಷೆಗಳನ್ನು ‘ಕುಟುಂಬ’ಗಳ ಮೂಲಕ ವಿವರಿಸುವ ಪರಿಪಾಠ ಬೆಳೆದದ್ದು ಭಾಷಾಶಾಸ್ತ್ರವು ಒಂದು ಜ್ಞಾನಶಾಖೆಯಾಗಿ ಇತ್ತೀಚಿನ ದಿನಗಳಲ್ಲಿ ಬೆಳೆದ ಕಾರಣದಿಂದ. ಅದನ್ನು ‘ಹಿಸ್ಟಾರಿಕಲ್ ಲಿಂಗ್ವಿಸ್ಟಿಕ್ಸ್’ ಎಂದು ಕರೆಯಬಹುದು. ಈ ಶಾಖೆಯು ಭಾಷೆಗಳ ಬೆಳವಣಿಗೆಯನ್ನು ಸರಳರೇಖಾತ್ಮಕ ನೆಲೆಯಲ್ಲಿ ವಿವರಿಸುತ್ತದೆ. ಆದರೆ ಭಾಷೆಗಳು ಏಕರೂಪಿಯಾಗಿರದೆ ಬಹುಆಯಾಮದ ವ್ಯವಸ್ಥೆಗಳಾಗಿರುವುದರಿಂದ, ಅವುಗಳ ಹುಟ್ಟು ಮತ್ತು ಬೆಳವಣಿಗೆಯ ಸ್ವರೂಪವನ್ನು ಹಲವು ದಿಕ್ಕುಗಳಲ್ಲಿ ಹಲಬಗೆಯ ಚಲನೆಯಲ್ಲಿ ಕಾಣಬಹುದು.

ಮಾತಿನ ನಡುವೆ, ಭಾಷೆಗಳನ್ನು ಇಂಡೋ ಆರ್ಯನ್ ಭಾಷೆಗಳೆಂದು ವರ್ಗೀಕರಿಸುವ ಕ್ರಮದ ಬಗ್ಗೆ ನಿಮಗೆ ತಕರಾರು ಇದೆ ಎಂದಿರಿ. ಅದನ್ನು ವಿವರಿಸಿ.

ಭಾಷೆಗಳನ್ನು ಕುಟುಂಬಗಳನ್ನಾಗಿ ವರ್ಗೀಕರಿಸುವ ಕ್ರಮ ಯೂರೋಪಿನಲ್ಲಿ ವಸ್ತುಗಳನ್ನು ವರ್ಗೀಕರಿಸುವ ಕ್ರಮವನ್ನು ಆಧರಿಸಿದೆ. ಈ ಕ್ರಮ ಸುಮಾರು ಎರಡು ಶತಮಾನಗಳಷ್ಟು ಹಳೆಯದು. ಈ ಬಗೆಯ ವರ್ಗೀಕರಣದ ಹಿಂದಿರುವ ಮೂಲಕಲ್ಪನೆಯನ್ನೇ, ಹಲವು ಬಗೆಗಳಲ್ಲಿ ಮರುವಿಮರ್ಶೆ ಮಾಡಬೇಕು. ಡೇವಿಡ್ ಡಾಲ್ಬಿಯವರು ಹೇಳುವ ಮನುಷ್ಯರು ಬಳಸುವ ಎಲ್ಲಾ ಭಾಷೆಗಳನ್ನು ಒಳಗೊಳ್ಳುವ ‘ಭಾಷಾಪರಿಸರ’ (ಅಟ್ಮಾಸ್ಫಿಯರ್ ನಂತೆ ‘ಲಿಂಗ್ವಾಸ್ಫಿಯರ್’)ವನ್ನು ಆಧರಿಸಿ ನಾನು ಇಂಥ ಒಂದು ಪ್ರಯತ್ನವನ್ನು ಮಾಡಿದ್ದೆ. ಅದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಮಾತಾಡೋಣ.

ಆಧುನಿಕ ನಾಗರಿಕತೆಯ ಪ್ರಭಾವವನ್ನು(ಒಳ್ಳೆಯ ಮತ್ತು ಕೆಟ್ಟ) ಮುಖ್ಯವಾಗಿ ಇಂಗ್ಲಿಶ್‌ನ ಮೇಲೆ, ವಿಶಾಲ ನೆಲೆಯಲ್ಲಿ ಭಾರತೀಯ ಭಾಷೆಗಳ ಮೇಲೆ ಹೇಗೆ ಆಗಿದೆ ಎಂದು ವಿವರಿಸುತ್ತೀರ? ಭಾಷೆಗಳ ನಡುವಿನ ಮುಖಾಮುಖಿಯ ಸಂಕೀರ್ಣತೆ ಎಂತಹದು?

ಇದನ್ನು ಉತ್ತರಿಸಲು ನಾನು ಎರಡೋ ಮೂರೋ ಪುಸ್ತಕಗಳನ್ನು ಬರೆಯಬೇಕಾಗುತ್ತದೆ(ನಗು). ಇತಿಹಾಸದಲ್ಲಿ ಕೆಲವು ಮಸುಕಾದ ವಲಯಗಳಿರುತ್ತವೆ. ಎಲ್ಲವನ್ನೂ ಕಪ್ಪು ಬಿಳುಪು ಎಂದು ಗೆರೆಕೊರೆದು ವಿವರಿಸಲು ಸಾಧ್ಯವಿಲ್ಲ. ಇಂಗ್ಲಿಶಿನ ಮೇಲೆ ಭಾರತೀಯ ಭಾಷೆಗಳ ಪ್ರಭಾವವೂ ಬಹಳ ಮುಖ್ಯವಾದದ್ದು. ಸದ್ಯ ಚಾಲ್ತಿಯಲ್ಲಿರುವ ಸ್ಟ್ಯಾಂಡರ್ಡ್ ಇಂಗ್ಲಿಶ್ ಅಸ್ತಿತ್ವಕ್ಕೆ ಬಂದಿದ್ದು ಅದು ಬೇರೆ ಭಾಷೆಗಳ(ಭಾರತೀಯ ಭಾಷೆಗಳನ್ನು ಒಳಗೊಂಡು) ಪ್ರಭಾವಕ್ಕೆ ತೆರೆದುಕೊಂಡಾಗ. ಹಾಗೇ ಭಾರತೀಯ ಭಾಷೆಗಳು ಹಾಲಿ ಇರುವ ನಿರ್ದಿಷ್ಟ ರೂಪವನ್ನು ಪಡೆದುಕೊಂಡಿದ್ದು ಇಂಗ್ಲಿಶ್‌ನ ಪ್ರಭಾವ ಹೆಚ್ಚಾದ ಕಾರಣದಿಂದ. ಈ ಪ್ರಕ್ರಿಯೆ ಪರಸ್ಪರ ಪೂರಕ ಹಾಗೂ ದ್ವಿಮುಖ ಸ್ವರೂಪದ್ದು. ಭಾಷೆಗಳ ನಡುವಿನ ಮುಖಾಮುಖಿ ಇಂಗ್ಲಿಶಿಗಂತೂ ಕಂಗೆಡಿಸುವಂಥ ಸವಾಲನ್ನು ಒಡ್ಡಿತ್ತು. ಭಾರತೀಯ ಭಾಷೆಗಳು ಇಂಥ ಹಲವು ಬಗೆಯ ಸವಾಲುಗಳನ್ನು ಚರಿತ್ರೆಯಲ್ಲಿ ಎದುರಿಸುತ್ತಲೇ ಬಂದಿದ್ದವು.

ನಮ್ಮ ಸಂವಿಧಾನ ದೇಶೀಯ/ಬುಡಕಟ್ಟು ಭಾಷೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಂಥ ಬಗೆಯ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದೆ? ಅದರ ಸ್ವರೂಪವನ್ನು ಬದಲಾಯಿಸುವ ಅನಿವಾರ್ಯತೆ ಇದೆಯೇ?

ನನಗನ್ನಿಸುವ ಹಾಗೆ ಸಂವಿಧಾನದಲ್ಲಿ ರಾಷ್ಟ್ರೀಯತೆಯ ವ್ಯಾಖ್ಯಾನವಿಲ್ಲ. ಬಹುಶಃ 14 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ಘೋಷಿಸಿದ 8ನೇ ಶೆಡ್ಯೂಲ್ (ಲಾಂಗ್ವೇಜ್ ಶೆಡ್ಯೂಲ್) ಅನ್ನು ಕುರಿತು ನೀವು ಪ್ರಸ್ತಾಪಿಸುತ್ತಿದ್ದೀರಿ. ಸದ್ಯ 22 ಭಾಷೆಗಳು ಈ ಪಟ್ಟಿಗೆ ಸೇರಿವೆ.

2011 ರ ಗಣತಿಯ ಪ್ರಕಾರ ಭಾರತದಲ್ಲಿ 1369 ‘ವರ್ಗೀಕೃತ ಮಾತೃಭಾಷೆಗಳು’ ಇವೆ. ಅವುಗಳಲ್ಲಿ 22ನ್ನು ಶೆಡ್ಯೂಲ್ಡ್ ಭಾಷೆಗಳೆಂದು ರಕ್ಷಿಸಲಾಗಿದೆ. ಆದರೆ ನನ್ನ ಪ್ರಕಾರ ಎಲ್ಲ ಭಾಷೆಗಳನ್ನೂ ಒಂದೇ ರೂಪದಲ್ಲಿ ರಕ್ಷಿಸುವ ಪೋಷಿಸುವ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು.

ಭಾಷೆಗಳ ಮೇಲೆ ಜಾಗತೀಕರಣದ ಪ್ರಭಾವ ಎಂತಹದು? ಜಾಗತೀಕರಣದ ದಾಳಿಯಿಂದ ಭಾಷೆಗಳನ್ನು ರಕ್ಷಿಸುವಲ್ಲಿ ನಾವು ಸೋತಿದ್ದೇವೆಯೇ? ಇದರ ಪರಿಣಾಮಗಳು ಎಂಥವು?

ಮುಕ್ತ ಮಾರುಕಟ್ಟೆ ಆರ್ಥಿಕತೆಯನ್ನು ಪೋಷಿಸುವ ಜಾಗತೀಕರಣವು ದೇಶ ಪ್ರದೇಶದ ಭಾಷೆಗಳ ಬದುಕನ್ನು ಹದಗೆಡಿಸಿದೆ. ಭಾಷೆಗಳ ಅಸ್ತಿತ್ವಕ್ಕೆ ಸಂಚಕಾರ ಒದಗಿಬಂದಿದೆ. ಹಾಗಾಗಿ ಪ್ರಪಂಚದಾದ್ಯಂತ ಭಾಷೆಗಳು ಅವನತಿಯತ್ತ ಸಾಗಿವೆ. 2011ರ ಗಣತಿಯ ಅಂಕಿ ಅಂಶಗಳ ಪ್ರಕಾರ (2001 ಹಾಗು 2011ರ ಗಣತಿಯ ವಿವರಗಳನ್ನು ಹೋಲಿಸಿ ನೋಡಿದರೆ ) ದಾಖಲೆಯಲ್ಲಿರುವ 121 ಭಾಷೆಗಳಲ್ಲಿ 105 ಭಾಷೆಗಳ ಸ್ಥಿತಿ ಗಂಭೀರವಾಗಿದೆ. ಅಂದರೆ 95% ಭಾಷೆಗಳು ಭಾಷಾನಾಶದ ದಿಕ್ಕಿನಲ್ಲಿವೆ. ಇದಕ್ಕೆ ಹಲವಾರು ಕಾರಣಗಳಿದ್ದರೂ ಜಾಗತಿಕ ಬಂಡವಾಳದ ಪ್ರಭಾವ ಬಹಳ ಮುಖ್ಯವಾದದ್ದು.

ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿಸುವುದಕ್ಕೂ ಅದರ ಅಸ್ತಿತ್ವ ಹಾಗೂ ಬೆಳವಣಿಗೆಗೂ ಏನಾದರೂ ಸಂಬಂಧವಿದೆಯೇ?

ಭಾಷೆಯನ್ನು ‘ಶಿಕ್ಷಣ ಮಾಧ್ಯಮ’ವಾಗಿಸುವುದು ಶಾಲೆ ಕಾಲೇಜುಗಳಲ್ಲಿ ಕಲಿಯುವವರ ದೃಷ್ಟಿಯಿಂದ ಮುಖ್ಯವಾದದ್ದು. ಆದರೆ ಇದನ್ನು ಭಾಷೆಗಳ ಅಸ್ತಿತ್ವದ ದೃಷ್ಟಿಯಿಂದ ನೋಡುವಾಗ ಬೇರೆ ರೀತಿಯಿಂದ ನೋಡಬೇಕು. ಕಲಿಯುವವರ ದೃಷ್ಟಿಯಿಂದ ಮಾತೃಭಾಷೆಯಲ್ಲಿ ಶಿಕ್ಷಣ ದೊರಕಿದರೆ, ವೈಜ್ಞಾನಿಕವಾಗಿ ವ್ಯಕ್ತಿಯ ಗ್ರಹಿಕೆ ಪೂರ್ಣರೂಪದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎನ್ನಬಹುದು. ಭಾಷೆಯ ದೃಷ್ಟಿಯಿಂದ ಶಾಲಾ ಶಿಕ್ಷಣವು ಭಾಷೆಯ ಬೆಳವಣಿಗೆಗೆ ಯಾವ ಕೊಡುಗೆಯನ್ನು ನೀಡಲು ಸಾಧ್ಯವಿಲ್ಲ, ಅದರ ಅಳಿವಿಗೆ ಕಾರಣವೂ ಆಗಲು ಸಾಧ್ಯವಿಲ್ಲ. ಲ್ಯಾಟಿನ್ ಹಾಗೂ ಸಂಸ್ಕೃತಗಳು ಶಿಕ್ಷಣ ಮಾಧ್ಯಮಗಳಾಗಿ ಬಳಕೆಯಲ್ಲಿದ್ದೂ ಸಹ ನಶಿಸಿಹೋದವು. ಇಂಗ್ಲಿಶ್ ಶಿಕ್ಷಣ ಮಾಧ್ಯಮವಾಗಿಯೂ ಉಪಖಂಡದಲ್ಲಿ ಬಹಳ ವ್ಯಾಪಕವಾಗಿ ಬಳಕೆಯಲ್ಲಿಲ್ಲ. ದೈನಂದಿನ ಮಾತುಕತೆಯಲ್ಲಿಯೂ ಅದು ಬಹು ಜನರ ಆಯ್ಕೆಯಲ್ಲ. ಇವು ಚರಿತ್ರೆಯಲ್ಲಿ ದೊರಕುವ ವಾಸ್ತವ ಸಂಗತಿಗಳು. ಹೀಗೆ ಹೇಳುವಾಗ ನಾನು ಇಂಗ್ಲಿಶ್ ಶಿಕ್ಷಣ ಮಾಧ್ಯಮವಾಗಬೇಕು ಎಂದು ಹೇಳುತ್ತಿಲ್ಲ. ಸ್ಕೂಲುಗಳಲ್ಲಿ ಯಾವುದೇ ಭಾಷೆಯನ್ನು ನಿರ್ದಿಷ್ಟವಾಗಿ ಶಿಕ್ಷಣ ಮಾಧ್ಯಮವನ್ನಾಗಿ ಮಾಡಬಾರದು ಎಂಬುದು ನನ್ನ ನಿಲುವು. ಅದನ್ನು ತರಗತಿಯಲ್ಲಿ ಭಾಷೆಗಳನ್ನು ಮಾತಾಡುವವರ ಸಂಖ್ಯೆಯನ್ನಾಧರಿಸಿ ನಿರ್ಧರಿಸಬೇಕು. ಅಂದರೆ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಕೊಂಡೊಯ್ಯುವ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು. ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಶಿಕ್ಷಣ ನೀಡುವ ಸರ್ಕಾರ/ಸ್ಕೂಲುಗಳಂಥ ಸಂಸ್ಥೆಗಳಿಗೆ ನೀಡದೆ, ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ ನೀಡಬೇಕು. ಒಂದೇ ಕ್ಲಾಸ್‌ರೂಮಿನಲ್ಲಿ ಕೂತಿರುವ ಕಾರಣಕ್ಕೆ, ತರಗತಿಯಲ್ಲಿರುವ ಎಲ್ಲ ಮಕ್ಕಳಿಗೆ ಒಂದೇ ರೂಪದ ಶಿಕ್ಷಣಮಾಧ್ಯಮವನ್ನು ಹೇರುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಬಹುಭಾಷಾ ಶಿಕ್ಷಣ ನಮ್ಮ ಕಾಲದ ಅಗತ್ಯವಾಗಿದೆ. ಅದರಿಂದ ಎಲ್ಲ ಭಾಷೆಗಳಿಗೂ ಅನುಕೂಲವಾಗುತ್ತದೆ.

ಸರ್ಕಾರಗಳು ಯಾವ ಬಗೆಯ ಭಾಷಾನೀತಿಯನ್ನು ಅಳವಡಿಸಿಕೊಳ್ಳಬೇಕು?

ಯಾವುದೇ ಭಾರತೀಯ ಭಾಷೆಗಳನ್ನು ಕಡೆಗಣಿಸದೆ, ಗರಿಷ್ಠ ಪ್ರಮಾಣದ ಭಾಷೆಗಳಿಗೆ ಗರಿಷ್ಠ ರಕ್ಷಣೆ.

ಭಾಷೆಗಳನ್ನು ಕುರಿತು ಅಧ್ಯಯನ ಮಾಡುವ, ದಾಖಲಿಸುವ ನಿಮ್ಮ ಹಂಬಲ ಶುರುವಾಗಿದ್ದು ಯಾವುದೋ ರಮ್ಯ ಆಶಾವಾದದಿಂದಲ್ಲ. ಬದಲಾಗಿ ಇದು ಶುರುವಾದದ್ದು ಸಮುದಾಯಗಳನ್ನು ಉಳಿಸುವ ಅವರ ಜೀವನಕ್ರಮವನ್ನು ಉಳಿಸುವ ಒತ್ತಾಸೆಯಿಂದ ಎನ್ನುತ್ತೀರಿ. ನೀವು 2010 ರಲ್ಲಿ ಭಾರತದಲ್ಲಿ ಬಳಕೆಯಲ್ಲಿರುವ ಭಾಷೆಗಳ ಸ್ಥಿತಿಗಳನ್ನು ಕುರಿತು ನಡೆಸಿದ ಜನಭಾಷಾಗಣತಿ- ‘ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’(ಪಿಎಲ್‌ಎಸ್‌ಐ)ಯಲ್ಲಿ ಪಾಲ್ಗೊಂಡವರು ಭಾಷಾಕೋವಿದರೋ, ಶಾಸ್ತ್ರಜ್ಞರೋ ಅಲ್ಲ. ಈ ಗಣತಿಯನ್ನು ಮಾಡಿದವರು ಶಿಕ್ಷಕರು, ಕಾರ್ಮಿಕರು, ರೈತರು, ಡ್ರೈವರುಗಳು. ಇದೆಲ್ಲ ಸಾಧ್ಯವಾಗಿದ್ದು ಹೇಗೆ?

ನಾನು ಹುಟ್ಟಿದ್ದು ಸ್ವಾತಂತ್ರದ ನಂತರ. ಹಾಗಾಗಿ ನಾನು ಸರ್ಕಾರ ಕೊಡಮಾಡುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಪಿಎಚ್‌ಡಿಯವರೆಗೆ ಅಧ್ಯಯನ ಮಾಡಿದೆ. ಸಮಾನತೆಯ ಸೌಲಭ್ಯವನ್ನು ಬಳಸಿಕೊಂಡು ಸ್ವತಂತ್ರ ಸಮಾಜವನ್ನು ನಾವು ಕಟ್ಟಲು ಸಾಧ್ಯವಾಗಲಿಲ್ಲವಲ್ಲ ಎಂಬ ಆಳವಾದ ಪಾಪಪ್ರಜ್ಞೆ ನನ್ನನ್ನು ಸದಾ ಬಾಧಿಸುತ್ತದೆ. ಹಾಗಾಗಿ ಇದನ್ನು ಸಾಧಿಸಲು ಏನನ್ನು ಮಾಡಿದರೂ ಅದನ್ನು ನನ್ನ ವೈಯಕ್ತಿಕ ಕರ್ತವ್ಯವೆಂದು ಭಾವಿಸಿ ಮಾಡಿದ್ದೇನೆ. ಈ ಕಾರಣದಿಂದ ನಾನು ಬುಡಕಟ್ಟು/ ಡಿನೋಟಿಫೈಡ್/ ಅಲೆಮಾರಿ ಸಮುದಾಯಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡೆ. ನಾನು ನಿರಂತರವಾಗಿ ಅವರ ಹಕ್ಕುಗಳಿಗಾಗಿ ಒಂದಲ್ಲ ಒಂದು ರೀತಿ ಹೋರಾಟ ನಡೆಸುತ್ತಲೇ ಬಂದಿದ್ದೇನೆ. ಜನಭಾಷಾಗಣತಿ(ಪಿಎಲ್‍ಎಸ್‍ಐ) ಹುಟ್ಟಿದ್ದು ನನಗೆ ಮೂಲತಃ ಸಾಹಿತ್ಯ-ಭಾಷೆಗಳ ಕುರಿತು ಇದ್ದ ಆಸಕ್ತಿಯ ಕಾರಣದಿಂದ. ಭಾಷೆಗಳ ಬಗ್ಗೆ ಆಸಕ್ತಿ ಹುಟ್ಟಿದ್ದು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಬಗೆಗೆ ನನಗಿದ್ದ ಬಾಧ್ಯತೆಯ ಕಾರಣದಿಂದ. ಇದನ್ನು ಸೂಕ್ಷ್ಮವಾಗಿ ನೋಡಿದಾಗ-ಭಾಷೆಗಳು ಕಣ್ಮರೆಯಾಗುತ್ತಿರುವುದು, ಅಳಿವಿನಂಚಿಗೆ ಸರಿಯುತ್ತಿರುವುದು ಅವುಗಳನ್ನಾಡುವ ಜನರ ಜೀವನಕ್ರಮವೇ ಕಣ್ಮರೆಯಾಗುತ್ತಿದೆ ಎಂಬ ಕಾರಣದಿಂದ ಎಂದು ಗೊತ್ತಾಯಿತು. ನಾನು ಕೆಲಸಕ್ಕೆ ರಾಜಿನಾಮೆ ನೀಡಿ ಆದಿವಾಸಿಗಳ ಜೊತೆ ಕೆಲಸ ಮಾಡಲು ತೇಜಗಡಕ್ಕೆ ಬಂದು ಅಲ್ಲಿ ಆದಿವಾಸಿ ಅಕಾಡೆಮಿಯನ್ನು ಆರಂಭಿಸಿದಾಗ ಅಲ್ಲಿ ಸಮುದಾಯಗಳಿಗೆ ಬೇಕಾದ ಜೀವನೋಪಾಯದ ಕ್ರಮಗಳನ್ನು ಸೃಷ್ಟಿಸಿದರೆ ಜನಗಳು ವಲಸೆ ಹೋಗುವುದನ್ನು ತಪ್ಪಿಸಬಹುದು ಎಂದು ಗೊತ್ತಾಗಿತ್ತು. ಅಲ್ಲಿ ಹೆಚ್ಚು ಕಡಿಮೆ 7 ಲಕ್ಷ ಜನಸಂಖ್ಯೆ ಇರುವ ಸುಮಾರು 2200 ಹಳ್ಳಿಗಳಲ್ಲಿರುವ 22000 ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸುವ ದೊಡ್ಡ ಪ್ರಯತ್ನ ನಡೆಸಿದ್ದೆ. ಇದು ನನಗೆ ಹೊಸಬದುಕು ನೀಡಿದ ಅನುಭವವವೇ ಆಗಿತ್ತು. ಈ ಅನುಭವದ ಆಧಾರದ ಮೇಲೆ ನನಗೆ ಆದಿವಾಸಿಗಳು, ಶಾಲಾ ಶಿಕ್ಷಕರು ಇನ್ನಿತರರ ಜೊತೆ ಕೆಲಸ ಮಾಡಲು ಸಾಧ್ಯ ಅನಿಸಿತು. ಭಾಷಾಗಣತಿಯ ಆಲೋಚನೆ ಬಂದಿದ್ದು ಹೇಗೆ ಎಂದರೆ ಭಾರತ ಸರ್ಕಾರವು ಇಂಥದೊಂದು ಗಣತಿಯನ್ನು ಕೈಗೊಳ್ಳಲು ಯೋಚಿಸಿತ್ತು. ಆದರೆ ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ. ಇದು ಹಲವರಲ್ಲಿ ತೀವ್ರ ಅತೃಪ್ತಿಯನ್ನುಂಟು ಮಾಡಿತು. ಇದಕ್ಕೆ ಉತ್ತರವಾಗಿ ನಾವು ಹಲವು ರಾಜ್ಯಗಳಿಗೆ ಭೇಟಿನೀಡಿ ತಂಡಗಳನ್ನು ರೂಪಿಸಿ ಭಾಷೆಗಳ ಗಣತಿಯನ್ನು ಆರಂಭಿಸುತ್ತೇವೆ ಎಂದು ಘೋಷಿಸಿದೆವು. ನಮ್ಮ ಉದ್ದೇಶ ಬಹಳ ಸರಳವಾಗಿತ್ತು. ನಾನು ಯಾವುದಾದರೂ ರಾಜ್ಯವೊಂದಕ್ಕೆ ಉಪನ್ಯಾಸ ನೀಡಲು ಹೋದಾಗ ಅಥವಾ ಇನ್ನಾವುದೋ ಉದ್ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಸಿಕ್ಕ ಹಲವು ಕೆಲವರನ್ನು ನಿಮಗೆ ಭಾಷೆಗಳ ಬಗ್ಗೆ ಆಸಕ್ತಿಯಿದೆಯೇ ಎಂದು ಕೇಳುತ್ತಿದ್ದೆ. ನನಗೆ ಸಿಗುತ್ತಿದ್ದ ಉತ್ತರ ಯಾವಾಗಲೂ ಬಹಳ ಪ್ರೋತ್ಸಾಹದಾಯಕವಾಗಿರುತ್ತಿತ್ತು. ನಂತರ ಇದೇ ಬಗೆಯ ಆಸಕ್ತಿಯಿರುವ ಹಲವರ ವಿಳಾಸ ಪರಿಚಯಗಳನ್ನು ಪಡೆದುಕೊಂಡು ಹಲವು ರೀತಿಯ ಪ್ರಯತ್ನ- ಭೇಟಿಗಳ ತರುವಾಯ ಪ್ರತಿಯೊಂದು ರಾಜ್ಯದಲ್ಲಿ ತಂಡವೊಂದನ್ನು ಸಿದ್ಧಗೊಳಿಸಲಾಗುತ್ತಿತ್ತು. ಅಂಥ ತಂಡಗಳಿಗೆ ಹಲವು ಬಗೆಯ ಕಾರ್ಯಾಗಾರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಒಂದು ಅಥವಾ ಎರಡು ವರ್ಷಗಳ ಅವಧಿಯಲ್ಲಿ ಇಂಥ ಕಾರ್ಯಾಗಾರಗಳಲ್ಲಿ ನಿಜವಾದ ಆಸಕ್ತಿಯಿರುವವರು ಮಾತ್ರ ಉಳಿದು ಉತ್ತಮ ತಂಡವೊಂದು ಸಿದ್ಧಗೊಳ್ಳುತ್ತಿತ್ತು. ಹೀಗೆ 2010ರಲ್ಲಿ ಕೆಲಸ ಶುರುವಾಯಿತು. ನಂತರ 2010-2011ರ ಎರಡು ವರ್ಷಗಳಲ್ಲಿ ನಾವು ಭಾಷಾಗಣತಿಯ ಬಗೆಗೆ ಕನಸು ಕಾಣುತ್ತ, ಅದರ ರೂಪುರೇಷೆಗಳನ್ನು ಸಿದ್ಧಪಡಿಸುತ್ತ ಹೋದೆವು. 2012ರ ಹೊತ್ತಿಗೆ ಪ್ರತಿಯೊಂದು ರಾಜ್ಯದಲ್ಲಿ ಪರಿಣಿತ ತಂಡವೊಂದನ್ನು ಕಟ್ಟಿ ಗಣತಿಯ ನೀಲನಕ್ಷೆಯನ್ನು ರೂಪಿಸಿದ್ದೆವು. ಈ ತಂಡಗಳಲ್ಲಿ ಮುಖ್ಯವಾಗಿ ಇರಬೇಕಾದವರು ಆ ಪ್ರದೇಶದ ಭಾಷೆಗಳನ್ನು ಆಡುವವರೇ ಹೊರತು ಭಾಷಾಪಂಡಿತರಲ್ಲ-ಕೆಲವರ ಹೊರತಾಗಿ- ಎಂಬುದು ನನ್ನ ಉದ್ದೇಶವಾಗಿತ್ತು. 2012 ರ ಹೊತ್ತಿಗೆ ಹೆಚ್ಚು ಕಡಿಮೆ ಎಲ್ಲ ಭಾಷೆಗಳ ಪ್ರತಿನಿಧಿಗಳು ಪಿಎಸ್‌ಎಲ್‌ಐನ ಯೋಜನೆಯಲ್ಲಿ ಇದ್ದುದರಿಂದ, ಅವರಿಗೆ ಪ್ರತಿ ಭಾಷೆಯನ್ನು ಕುರಿತ ಪುಟ್ಟ ಇತಿಹಾಸ, ಸ್ಥೂಲ ವ್ಯಾಕರಣ, ಮುಖ್ಯ ಪದಕೋಶ, ವಿಶಿಷ್ಟ ನುಡುಗಟ್ಟುಗಳು-ಪಾರಿಭಾಷಿಕಗಳು ಇತ್ಯಾದಿಗಳ ವಿವರಗಳನ್ನು ಒಳಗೊಂಡ ಸುಮಾರು 20-40 ಪುಟಗಳ ಲೇಖನವನ್ನು 2012ರ ಜನವರಿಯಿಂದ 2013ರ ಸೆಪ್ಟೆಂಬರ್‌ವರೆಗೆ ಸಿದ್ಧಪಡಿಸಲು ಕೇಳಿಕೊಂಡೆವು. ನಮ್ಮ ತಂಡಗಳಿಗೆ ಕೇವಲ 20ತಿಂಗಳ ಅವಧಿಯಲ್ಲಿ ಪ್ರತಿ ಸಮುದಾಯದ ಭಾಷೆಯನ್ನು ಕುರಿತು 20-40 ಪುಟಗಳ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಯಿತು. ಎಲ್ಲ ಭಾಷೆಗಳ ಮಾಹಿತಿ ಸಿದ್ಧವಾದ ಮೇಲೆ ಅದನ್ನು ಪರಿಷ್ಕರಿಸಲು 2013ರಲ್ಲಿ ರಾಷ್ಟ್ರೀಯ ಸಂಪಾದಕ ಮಂಡಲಿಯೊಂದನ್ನು ರಚಿಸಲಾಯಿತು. ಈ ಮಂಡಲಿಯು ಲಭ್ಯವಿದ್ದ ಎಲ್ಲ ಮಾಹಿತಿಯನ್ನು ಪರಿಷ್ಕರಿಸಿ ಪ್ರಕಟಣೆಗೆ ಸಿದ್ಧಗೊಳಿಸಿತು. 2014ರಲ್ಲಿ ಜನಭಾಷಾಗಣತಿಯ ಮೊದಲ ಸಂಪುಟ ಸಿದ್ಧಗೊಂಡಿತು. ಕಳೆದ ನಾಲ್ಕು ವರ್ಷಗಳಲ್ಲಿ 56 ಪುಸ್ತಕಗಳು ಪ್ರಕಟಗೊಂಡಿದ್ದು 2020ರವೇಳೆಗೆ 91 ಪುಸ್ತಕಗಳು ಪ್ರಕಟಗೊಳ್ಳುವ ನಿರೀಕ್ಷೆಯಿದೆ. ವಿಶೇಷವೆಂದರೆ ಇಂಥ ಯೋಜನೆಗೆ ಹೆಚ್ಚು ಹಣ ಬೇಕಾಗಲಿಲ್ಲ. ನಾನು ಈ ಯೋಜನೆಗೆ ಪ್ರಯಾಣ ಮಾಡುವಾಗ ಯಾವ ಟಿಎ/ಡಿಎಗಳನ್ನು ನಿರೀಕ್ಷಿಸಲಿಲ್ಲ. ನಾನು ಯಾವುದೋ ಉಪನ್ಯಾಸಕ್ಕೋ ವಿಚಾರ ಸಂಕಿರಣಕ್ಕೋ ಹೋದ ಸಂದರ್ಭವನ್ನು ಬಳಸಿಕೊಂಡು ನಮ್ಮ ಸಭೆಗಳನ್ನು ಸ್ಕೂಲು ಕಾಲೇಜುಗಳಲ್ಲೋ, ಮರಗಳ ಕೆಳಗೋ, ಧರ್ಮಶಾಲೆಗಳಲ್ಲೋ, ರೈಲ್ವೇ ಪ್ಲಾಟ್‌ಫಾರಮ್‌ಗಳಲ್ಲೋ, ಸ್ನೇಹಿತರ ಮನೆಗಳಲ್ಲೋ, ಗೆಸ್ಟ್‌ಹೌಸುಗಳಲ್ಲೋ ನಡೆಸುತ್ತಿದ್ದೆವು. ಇಂಥ ಸಭೆಗಳನ್ನು ಸೆಮಿನಾರುಗಳ ರೂಪದಲ್ಲಿ ನಡೆಸುತ್ತಿರಲಿಲ್ಲ. ಎಲ್ಲವನ್ನೂ ಅನೌಪಚಾರಿಕವಾಗಿ ನಡೆಸಿದ್ದರಿಂದ ನಮ್ಮ ಯೋಜನೆಗೆ ಬಹಳ ದೊಡ್ಡ ಪ್ರಮಾಣದ ಹಣ ಬೇಕಾಗಲಿಲ್ಲ. ಪ್ರತಿಯೊಬ್ಬ ಲೇಖಕರಿಗೂ ನಾವು 3000 ದಿಂದ 4000ದವರೆಗೆ, ಭಾಷಾಂತರಕಾರರಿಗೆ 2000ರಿಂದ 3000ದವರೆಗೆ ಸಂಭಾವನೆಯನ್ನು ನೀಡಿದೆವು. ಒಟ್ಟು ಯೋಜನೆಯನ್ನು ಟಾಟಾ ಟ್ರಸ್ಟ್‌ನವರು ನಮ್ಮ ಭಾಷಾರಿಸರ್ಚ್ ಸೆಂಟರಿಗೆ ನೀಡಿದ 80ಲಕ್ಷ ರೂಪಾಯಿ ಹಣದಲ್ಲಿ ಪೂರ್ಣಗೊಳಿಸಿದೆವು.

ಟಾಟಾ ಟ್ರಸ್ಟ್‌ನವರು ನಿಮ್ಮ ಯೋಜನೆಯ ಕೊನೆಯ ಹಂತದಲ್ಲಿ ಈ ಹಣವನ್ನು ದೇಣಿಗೆಯಾಗಿ ನೀಡಿದರು ಎಂದು ನಾನು ಓದಿದ್ದೆ. ಟ್ರಸ್ಟ್‌ನವರು ನಿಮ್ಮ ಯೋಜನೆಗೆ ನೀಡಿದ ಸಹಾಯವನ್ನು ಕುರಿತು ನಿರ್ದಿಷ್ಟವಾದ ಪ್ರಶ್ನೆಯನ್ನು ಕೇಳಬೇಕು. ಯಾಕೆಂದರೆ ಟಾಟಾ ಸಂಸ್ಥೆಯು ದೇಶದ ಹಲವು ಕಡೆಗಳಲ್ಲಿ ಆದಿವಾಸಿ ಸಮುದಾಯಗಳನ್ನು ಎತ್ತಂಗಡಿ ಮಾಡಿ ಅವರ ಜೀವನಕ್ರಮ ನಾಶವಾಗುವುದಕ್ಕೂ ಕಾರಣವಾಗಿದೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಟಾಟಾ ಉದ್ಯಮ ಸಮೂಹಗಳು ಆದಿವಾಸಿ ಸಮುದಾಯಗಳ ಬದುಕನ್ನು ನಾಶಗೊಳಿಸಿವೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಉದ್ಯಮ ಸಮೂಹಗಳನ್ನು ಹೊರತು ಪಡಿಸಿ, ಸಮಾಜ ಕಲ್ಯಾಣಕ್ಕಾಗಿ ಜಮ್‌ಶೆಡ್‍ಜಿ ಟಾಟಾ ಅವರು ಸ್ಥಾಪಿಸಿದ ಒಂದು ಟ್ರಸ್ಟ್ ಇದೆ. ಇದೂ ಸಹ ಒಂದು ಸಮೂಹ ಸಂಸ್ಥೆಯಾಗಿ ಬೆಳೆದಿದೆ ಯಾಕೆಂದರೆ, ಟಾಟಾ ಕುಟುಂಬದ ಪ್ರತಿ ಸದಸ್ಯನೂ ಇನ್ನೊಂದು ಟ್ರಸ್ಟ್‌ಅನ್ನು ಸ್ಥಾಪಿಸಿ ಅದಕ್ಕೆ ಸೇರಿಸಿದ್ದಾನೆ. ಟಾಟಾಟ್ರಸ್ಟ್ ಮತ್ತು ಟಾಟಾ ಉದ್ಯಮ ಸಮೂಹಗಳು ಬೇರೆಯಾಗಿ 40 ವರ್ಷಗಳಾದವು. ಟಾಟಾ ಟ್ರಸ್ಟ್‌ಗಳು ಕ್ಯಾನ್ಸರ್ ಆಸ್ಪತ್ರೆಗಳು, ಟಾಟಾ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್‌ ಸ್ಟಡೀಸ್ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮೊದಲಾದ ಸಂಸ್ಥೆಗಳನ್ನು ನಡೆಸುತ್ತವೆ. ಆಶ್ಚರ್ಯದ ಸಂಗತಿಯೆಂದರೆ ಟಾಟಾ ಉದ್ಯಮಗಳನ್ನು ವಿರೋಧಿಸುವ ಬಹಳಷ್ಟು ಜನ ಆದಿವಾಸಿ ಸಮಾಜಸೇವಾ ಕಾರ್ಯಕರ್ತರು ಟಾಟಾ ಇನ್ಸ್‍ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌(ಟಿಐಎಸ್‌ಎಸ್‌)ನಲ್ಲಿಯೇ ತರಬೇತಿ ಪಡೆಯುತ್ತಾರೆ. ರಾಜಮೋಹನ್ ಗಾಂಧಿಯವರು 40 ವರ್ಷಗಳ ಹಿಂದೆ ಸ್ಥಾಪಿಸಿದ ಸಂಸ್ಥೆಯೊಂದರ ಸಭೆಯಲ್ಲಿ ನಿನ್ನೆ ನಾನು ಮುಂಬಯಿಯಲ್ಲಿ ಭಾಗವಹಿಸಿದ್ದೆ. ಮುಂಬಯಿಯ ಹಲವು ದೊಡ್ಡ ಉದ್ಯಮಿಗಳು ಹಾಜರಿದ್ದ ಆ ಸಭೆಯಲ್ಲಿ ರಾಜಕೀಯ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂಸ್ಥೆಯೊಂದನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನೀವು ಇಂಥ ಸಂಸ್ಥೆಯನ್ನು ಕಟ್ಟುವುದಾದರೆ, ಅಲ್ಲಿ ತರಬೇತಿ ಪಡೆಯುವ ಕಾರ್ಯಕರ್ತರು ಮೊದಲು ನಿಮ್ಮನ್ನೇ ಟೀಕಿಸುತ್ತಾರೆ ಎಂದು ನಾನು ಹೇಳಿದೆ. ಅದಕ್ಕೆ ಅಲ್ಲಿದ್ದ ಉದ್ಯಮಿಗಳು ನಾವು ಮಾಡಲಾಗದ ಕೆಲಸವನ್ನು ಸಾಮಾಜಿಕ ಕಾರ್ಯಕರ್ತರು ಮಾಡಿದರೆ ಅದಕ್ಕೆ ನಮ್ಮ ತಕರಾರೇನು ಇಲ್ಲ ಎಂದರು. ನಾನು ಟಾಟಾ ಟ್ರಸ್ಟ್‌ನಿಂದ ಹಣ ಪಡೆದಿರುವುದು ಸತ್ಯ. ಇದರ ಬಗ್ಗೆ ಯಾರಿಗಾದರೂ ಅದು ಆಕ್ಷೇಪಗಳಿದ್ದರೆ, ಅದನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ. ಇನ್ನೊಂದು ಸತ್ಯವೇನೆಂದರೆ ನಾನು ಇದನ್ನು ಮಾಡದಿದ್ದರೆ ಬೇರೆ ಯಾರು ಮಾಡುತ್ತಿದ್ದರೋ, ಯಾರು ಇಷ್ಟೆಲ್ಲ ಸಂಪುಟಗಳನ್ನು ಪ್ರಕಟಿಸುತ್ತಿದ್ದರೋ ಗೊತ್ತಿಲ್ಲ. ಸರ್ಕಾರವು 2007ರ 11 ನೇ ಪಂಚವಾರ್ಷಿಕ ಯೋಜನೆಯಲ್ಲಿ 280 ಕೋಟಿಗಳಷ್ಟು ಹಣವನ್ನು ಮೀಸಲಿಡುವ ಮೂಲಕ ಇದೇ ಬಗೆಯ ಯೋಜನೆಯನ್ನು ‘ನ್ಯೂ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ದ ಹೆಸರಿನಲ್ಲಿ ನಡೆಸಲು ಉದ್ದೇಶಿಸಿತ್ತು. ಅಷ್ಟೇ ಅಲ್ಲ ಯೋಜನೆ ಪೂರ್ಣಗೊಳ್ಳಲು 10 ವರ್ಷಗಳ ಅವಧಿ ನೀಡಲಾಗಿದ್ದು, ಒಟ್ಟು 600 ಕೋಟಿರೂಗಳ ಅಂದಾಜು ವೆಚ್ಚವನ್ನು ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಯೋಜನೆ ಆರಂಭವಾಗಲೇ ಇಲ್ಲ. ಆಕ್ಷೇಪ ಮಾಡುವವರಿಗೆ ನನ್ನ ಉತ್ತರವೇನೆಂದರೆ, ಭಾಷಾಗಣತಿಯ ಸಂಪುಟಗಳನ್ನೋ, ನಮ್ಮ ಕೆಲಸವನ್ನೋ ಬಯ್ಯಬೇಡಿ. ಆಕ್ಷೇಪ ಬೈಗುಳಗಳು ನನ್ನ ಮೇಲಿರಲಿ. ಅವನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ.

ಪಿಎಸ್‌ಎಲ್‌ಐನ ಮುಖ್ಯಾಂಶಗಳನ್ನು ಚುಟುಕಾಗಿ ಹೇಳಲು ಸಾಧ್ಯವೆ?

ಪಿಎಸ್‌ಎಲ್‌ಐನ ಮುಖ್ಯ ಸಂಗತಿಯೆಂದರೆ ಅದು ಸ್ವತಂತ್ರ ಭಾರತದಲ್ಲಿ ಸರ್ಕಾರದ ಯಾವುದೇ ಬೆಂಬಲವಿಲ್ಲದೆ ಸ್ವತಂತ್ರವಾಗಿ ಕೈಗೊಂಡ ಮೊದಲ ಭಾಷಾಗಣತಿಯಾಗಿದೆ. ಇದು ಭಾರತದಲ್ಲಿ 780 ಭಾಷೆಗಳನ್ನು ಗುರುತಿಸಿದೆ. ಅವುಗಳಲ್ಲಿ ಸುಮಾರು 300 ಭಾಷೆಗಳ ಕುರಿತು ತಮ್ಮ ಸಮುದಾಯಗಳ ಹೊರಗೆ ತಿಳಿದೇ ಇರಲಿಲ್ಲ. ಗುರುತಿಸದೇ ಉಳಿದಿರುವ ಇನ್ನೂ 100 ಭಾಷೆಗಳು ಇರಬಹುದು ಎಂಬ ಅಂದಾಜು ಇದೆ. 220 ಭಾಷೆಗಳು ಕಳೆದ ನಾಲ್ಕೈದು ದಶಕಗಳಲ್ಲಿ ಕಣ್ಮರೆಯಾಗಿವೆ. 2020ರ ವೇಳೆಗೆ ಭಾರತೀಯ ಭಾಷೆಗಳ ಕುರಿತು 50 ಸಂಪುಟಗಳ 92 ಪುಸ್ತಕಗಳು ಒಟ್ಟು ಅಂದಾಜು 35000 ಪುಟಗಳಷ್ಟು ಮಾಹಿತಿ ದೊರೆಯಲಿದೆ.

ಸದ್ಯ ನೀವು ಗ್ಲೋಬಲ್ ಲಾಂಗ್ವೇಜ್ ಸ್ಟೇಟಸ್ ರಿಪೋರ್ಟ್ ಎಂಬ ಜಾಗತಿಕ ಮಟ್ಟದ ಭಾಷಾ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಈ ಕುರಿತು ಹೇಳಿ.

ಗ್ಲೋಬಲ್ ಲಾಂಗ್ವೇಜ್ ಸ್ಟೇಟಸ್ ರಿಪೋರ್ಟ್(ಜಿಎಲ್‍ಎಸ್‍ಆರ್)ನ ಹೆಸರೇ ಸೂಚಿಸುವಂತೆ ಅದು ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಬುಡಕಟ್ಟು ಭಾಷೆಗಳ ಸ್ಥಿತಿಗತಿಗಳ ದಾಖಲೀಕರಣದ ಪ್ರಕ್ರಿಯೆ. ಇದು ಪ್ರಪಂಚದಾದ್ಯಂತ ಒಟ್ಟು 60000 ಜೀವಂತ ಭಾಷೆಗಳ ಸದ್ಯದ ಸ್ಥಿತಿಯನ್ನು ಸಮೀಕ್ಷೆ ಮಾಡಿ ಅವುಗಳ ಭವಿಷ್ಯವನ್ನು ಕುರಿತು ವಿವರಿಸಲಿದೆ. ಚುಟುಕಾಗಿ ಹೇಳುವುದಾದರೆ ಭಾಷೆಗಳ ಜಾತಕವನ್ನು ನೋಡುವುದೇ ಇದರ ಉದ್ದೇಶ. ಪಿಎಸ್‌ಎಲ್‌ಐ ಭಾಷೆಗಳ ವರ್ತಮಾನವನ್ನು ಕುರಿತಾಗಿದ್ದರೆ, ಜಿಎಲ್‌ಎಸ್‌ಆರ್‌ ಭವಿಷ್ಯದ ಕುರಿತಾಗಿದೆ. ನಮ್ಮ ಸಮಾಜ ನಿಧಾನವಾಗಿ ಭಾಷೆಗಳನ್ನೂ ಮೀರಿದ ಸ್ಥಿತಿಯ ಕಡೆಗೆ ಸರಿಯುತ್ತಿದೆ. ಭವಿಷ್ಯದಲ್ಲಿ ಮನುಷ್ಯ ಸಮಾಜ ಭಾಷೆಗಳಿಗೂ ಆಚೆ, ಸಂವಹನವನ್ನು ಕೇವಲ ಚಿತ್ರಗಳ (ಇಮೇಜ್) ಮೂಲಕ ಹೇಗೆ ನಡೆಸಬಹುದು. ಭಾಷೆಗಳಿಲ್ಲದ ಸಮಾಜದಲ್ಲಿ ಸಂವಹನ ಹೇಗೆ ನಡೆಯಬಹುದು ಎಂಬುದರ ಬಗ್ಗೆ ಅದು ಚರ್ಚೆ ನಡೆಸಲಿದೆ.

ನೀವು ಪ್ರಮಾಣ ಭಾಷೆ(ಸ್ಟ್ಯಾಂಡರ್ಡ್ ಲಾಂಗ್ವೇಜ್) ಹಾಗೂ ಉಪಭಾಷೆಗಳ(ಡಯಲೆಕ್ಟ್) ನಡುವಿನ ವ್ಯತ್ಯಾಸಗಳನ್ನು ಒಪ್ಪುವುದಿಲ್ಲ. ಆ ಬಗೆಯ ವರ್ಗೀಕರಣಗಳೇ ಅರ್ಥಹೀನ ಎನ್ನುತ್ತಾ ಮುಖ್ಯಭಾಷೆಯೆಂಬ ನದಿಯ ಪಾತ್ರದ ಕಡೆ ಹರಿದು ಬರುವ ಹಲವು ತೊರೆಗಳೇ ಉಪಭಾಷೆಗಳು ಎಂದು ವಿವರಿಸುತ್ತೀರಿ. ಈ ರೀತಿಯ ವರ್ಗೀಕರಣಗಳು ಆಧುನಿಕಪೂರ್ವ ಯುಗದಲ್ಲಿ ಇರಲಿಲ್ಲ ಎನ್ನುತ್ತೀರಿ. ಹಾಗಾದರೆ ಈ ಬಗೆಯ ವರ್ಗೀಕರಣ/ಶ್ರೇಣೀಕರಣಗಳು ಚಾಲ್ತಿಗೆ ಬಂದದ್ದು ಹೇಗೆ?

1842ರಲ್ಲಿ ಇಂಗ್ಲೆಂಡಿನಲ್ಲಿ ಚಾರಿಟೀಸ್ ಮೂವ್‌ಮೆಂಟ್ ಎಂಬ ಚಳವಳಿಯೊಂದು ನಡೆಯಿತು. ಅದು ಮುಖ್ಯವಾಗಿ ದಿನಪೂರ್ತಿ ಕೆಲಸಕ್ಕೆ ದಿನಪೂರ್ತಿ ಕೂಲಿಯನ್ನು ನೀಡಬೇಕೆಂದು ಬಡಜನರು ನಡೆಸಿದ ಚಳವಳಿಯಾಗಿತ್ತು. ಇದರ ನಂತರ ಬ್ರಿಟಿಷ್ ಸರ್ಕಾರವು ಚಳವಳಿಯಲ್ಲಿ ಭಾಗವಹಿಸಿದವರಿಗೆ ಶಿಕ್ಷೆ ನೀಡಲು ಮುಂದಾಯಿತು. ಶಿಕ್ಷೆಯ ಭಾಗವಾಗಿ ಚಳವಳಿಯಲ್ಲಿ ಭಾಗವಹಿಸಿದವರ ಮಕ್ಕಳಿಗೆ ಇಂಗ್ಲಿಶ್‌ಅನ್ನು ಒಂದು ವಿಷಯವಾಗಿ ಕಲಿಸಲು ನಿರ್ಧಾರ ಮಾಡಿತು. ಆಗ ಲ್ಯಾಟಿನ್ ಅನ್ನು ಮಾತ್ರ ಶಾಲೆಗಳಲ್ಲಿ ಕಲಿಸಲಾಗುತ್ತಿತ್ತು. ಇಂಗ್ಲಿಶನ್ನು ವಿಷಯವಾಗಿ ಕಲಿಸಲು ಶುರುಮಾಡಿದಾಗ ಇಂಗ್ಲೆಂಡಿನಲ್ಲಿ ಯಾವ ಇಂಗ್ಲಿಶನ್ನು ಕಲಿಸಬೇಕು ಎಂಬ ಬಗ್ಗೆ ಚರ್ಚೆ ಶುರುವಾಯಿತು. ಯಾಕೆಂದರೆ ಅಲ್ಲಿನ ಮಕ್ಕಳು ತಂತಮ್ಮ ಪ್ರಾಂತೀಯ ಭಾಷೆಗಳಲ್ಲಿ ಮಾತಾಡುತ್ತಿದ್ದರು. ಹಾಗಾಗಿ 1850, 60, 70ರ ದಶಕಗಳಲ್ಲಿ ಸುಮಾರು 30 ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಸುದೀರ್ಘ ಚರ್ಚೆ ನಡೆದು ಸ್ಟ್ಯಾಂಡರ್ಡ್ ಇಂಗ್ಲಿಶ್ ಎಂಬ ಒಂದು ಪ್ರಮಾಣೀಕೃತ ಭಾಷೆ, ಹಾಗೆಯೇ ಉಳಿದವನ್ನು ಉಪಭಾಷೆಗಳು ಎಂದು ನಿರ್ಧರಿಸಲಾಯಿತು. ಹಾಗಾಗಿ ಇಂಗ್ಲೆಂಡಿನಲ್ಲಿ ಉಪಭಾಷೆಗಳು/ಪ್ರಾಂತೀಯ ಭಾಷೆಗಳ ವಿಚಾರ ಚಾಲ್ತಿಗೆ ಬಂದಿದ್ದು- 1870ರಲ್ಲಿ ಸಾಮಾಜಿಕ ಚಳುವಳಿಗಳ ಮೂಲಕ. ಇದರ ತರುವಾಯ ನಮ್ಮ ದೇಶದಲ್ಲಿ ಏನಾಯಿತು ಎಂದರೆ ಇಂಗ್ಲಿಶನ್ನು ಹೊರತು ಪಡಿಸಿದ ದೇಶೀಯ ಭಾಷೆಗಳಿಗೆ ವರ್ನಾಕ್ಯುಲರ್ಸ್ ಎಂಬ ಲ್ಯಾಟಿನ್ ಪಾರಿಭಾಷಿಕ ಶಬ್ದವನ್ನು ಬಳಸಲಾಯಿತು. ನಾನು 7ನೇ ತರಗತಿಯ ಪರೀಕ್ಷೆಯನ್ನು ಬರೆದಾಗ ಈ ಪರೀಕ್ಷೆಯನ್ನು ನಡೆಸುವ ಸಂಸ್ಥೆಯನ್ನು ವರ್ನಾಕ್ಯುಲರ್ ಬೋರ್ಡ್ ಎಂದು ಕರೆಯಲಾಗುತ್ತಿತ್ತು. ಮೂಲತಃ ಈ ವರ್ನಾಕ್ಯುಲರ್ ಎಂಬುದೇ ನಿಂದನೆಯ ಅರ್ಥವನ್ನು ಕೊಡುವ ಶಬ್ದವಾಗಿದ್ದು ಲ್ಯಾಟಿನ್‌ಅನ್ನು ಮಾತನಾಡಲು ಬರದ ಅನಾಗರಿಕ ಸಮುದಾಯಗಳನ್ನು ಕುರಿತು ಈ ಪದವನ್ನು ಬಳಸಲಾಗುತ್ತಿತ್ತು. ಈ ವಿಚಾರ ಚರ್ಚೆಗೆ ಬಂದಾಗ ಭಾಷೆಗಳನ್ನು ಕುರಿತು ವ್ಯವಹರಿಸುವ ಹಲವು ಸಂಸ್ಥೆಗಳು ಬ್ರಿಟಿಶ್ ಪರಿಕಲ್ಪನೆಯನ್ನೇ ಅನುಸರಿಸಿ ಲಿಪಿಯಿಲ್ಲದ ಭಾಷೆಗಳು ಉಪಭಾಷೆಗಳೇ ಇರಬಹದು ಎಂದುಕೊಂಡು ಇಲ್ಲಿಯೂ ಇದೇ ಪಾರಿಭಾಷಿಕದ ಮೂಲಕ ವಿವರಿಸುವ ಪರಿಪಾಠ ಶುರುವಾಯಿತು. ಕನ್ನಡದ ಹಲವು ವಿವಿಧ ಭಾಷಾರೂಪಗಳನ್ನು ಉಪಭಾಷೆಗಳು ಎಂದು ಕರೆಯಲಾಯಿತು. ಲಿಪಿಯಿಲ್ಲದ, ಬರಹದಲ್ಲಿ ದೊರಕದ ಗೌಳಿಗಳು ಅಥವಾ ಸಿದ್ದಿಗಳ ಭಾಷೆಗಳನ್ನು ಉಪಭಾಷೆಗಳು ಎಂದು ಕರೆಯಲು ಸಾಧ್ಯವಿಲ್ಲ. ಸುಮಾರು 40-50ವರ್ಷಗಳಿಂದ ಭಾರತದಲ್ಲಿ 22 ಭಾಷೆಗಳನ್ನು ಪ್ರಮುಖಭಾಷೆಗಳೆಂದು/ಶೆಡ್ಯೂಲ್ಡ್ ಭಾಷೆಗಳೆಂದು ಕರೆದು ಉಳಿದವನ್ನೆಲ್ಲ ಉಪಭಾಷೆಗಳು ಎಂದು ಕರೆಯಲಾಗಿದೆ. ನಾನು ಬರಹದಲ್ಲಿಲ್ಲದ ಭಾಷೆಯನ್ನು ಉಪಭಾಷೆಯೆಂದು ವರ್ಗೀಕರಿಸುವ ಕ್ರಮವನ್ನೇ ಬಲವಾಗಿ ವಿರೋಧಿಸುತ್ತೇನೆ. ಅವುಗಳನ್ನು ನಾವು ಉಪಭಾಷೆಗಳು ಎಂದು ಕರೆಯದೆ ಭಾಷೆಗಳು ಎಂದು ಕರೆಯಬೇಕು. ಪಿಎಸ್‌ಎಲ್‌ಐನಲ್ಲಿ ಇದನ್ನು ಹೇಗೆ ವ್ಯಾಖ್ಯಾನಿದ್ದೇವೆ ಎಂದರೆ ಯಾವ ಭಾಷೆಗೆ ತನ್ನದೇ ಆದ ವ್ಯಾಕರಣವಿದೆಯೋ ಅದು-ಲಿಪಿಯಿರಲಿ ಇಲ್ಲದಿರಲಿ- ಸ್ವತಂತ್ರ ಭಾಷೆಯೇ. ಗಮನಿಸಬೇಕಾದ ಸಂಗತಿಯೆಂದರೆ ಇಂಗ್ಲಿಶಿಗೆ ಇವತ್ತಿಗೂ ತನ್ನದೇ ಆದ ಲಿಪಿಯಿಲ್ಲ. ಅದು ರೋಮನ್ ಲಿಪಿಯನ್ನು ಬಳಸಿದರೂ ಅದನ್ನು ಪ್ರಮಾಣೀಕೃತ ಭಾಷೆಯೆಂದು ಪರಿಗಣಿಸಿರುವಾಗ, ನಮ್ಮಲ್ಲಿರುವ ಹಲವು ಭಾಷೆಗಳಿಗೆ ಯಾಕೆ ಇದೇ ಮಾನದಂಡವನ್ನು ಬಳಸಬಾರದು?

ಮರಾಠಿ ಹಾಗೂ ಕನ್ನಡಗಳು ಹಲವು ಉಪಭಾಷೆಗಳನ್ನು ಹೊಂದಿವೆ. ಹಾಗೆಯೇ ತೆಲುಗು ಸಹ. ಮೌಖಿಕವಾಗಿ ಬಳಕೆಯಲ್ಲಿರುವ ಭಾಷೆಗಳೆಲ್ಲ ಯಾವುದೋ ಭಾಷೆಯ ಉಪಭಾಷೆಗಳಲ್ಲ. ಇತ್ತೀಚಿನವರೆಗೆ ಕೊಂಕಣಿಯನ್ನು ಮರಾಠಿಯ ಅಥವಾ ಕನ್ನಡದ ಉಪಭಾಷೆಯೆಂದು ಕರೆಯಲಾಗುತ್ತಿತ್ತು. ಆದರೆ ಅದೀಗ ಒಂದು ರಾಜ್ಯದ ಭಾಷೆಯಾಗಿರುವ ಕಾರಣದಿಂದ ಸ್ವತಂತ್ರ ಭಾಷೆಯೆಂದು ಪರಿಗಣಿಸಲಾಗಿದೆ. 19ನೇ ಶತಮಾನದ ಉದ್ದಕ್ಕೂ ಒರಿಯಾ ಭಾಷೆಯನ್ನು ಬಂಗಾಳಿಯ ಉಪಭಾಷೆಯೆಂದು ಪರಿಗಣಿಸಲಾಗುತ್ತಿತ್ತು. ಅದೀಗ ಸ್ವತಂತ್ರ ಭಾಷೆಯ ಅಸ್ತಿತ್ವ ಪಡೆದಿದೆ. ಆದ್ದರಿಂದ ಯಾವ ಭಾಷೆಗೆ ತನ್ನದೇ ಆದ ವ್ಯಾಕರಣ, ಸಮುದಾಯಗಳಿವೆಯೋ ಅಂಥವುಗಳನ್ನು ಭಾಷೆಗಳೆಂದು ಪರಿಗಣಿಸಬೇಕು.

ಒಂದು ದಿನ ನೀವು ಏನನ್ನೋ ಓದುತ್ತ ಇರುವಾಗ, ದ್ರಾವಿಡ ಭಾಷೆಗಳು ಇಂಡೋ ಆರ್ಯನ್ ಭಾಷೆಗಳ ಸಮೂಹದಿಂದ ಭಿನ್ನವಾಗಿ ಉಳಿಯುತ್ತವೆ ಎಂದು ಇದ್ದಕ್ಕಿದ್ದಂತೆ ಹೊಳೆಯಿತು ಎಂದು ಎಲ್ಲೋ ಒಂದು ಕಡೆ ಬರೆದಿದ್ದೀರಿ. ಆ ಸಂದರ್ಭವನ್ನು ನೆನಪಿಸಿಕೊಳ್ಳಲು ಸಾಧ್ಯವೇ?

1977ರಲ್ಲಿ ಅಥವಾ ಅದಕ್ಕಿಂತ ಒಂದು ವರ್ಷ ಹಿಂದೆ, ಆರ್.ಸಿ. ನಿಗಮ್ ಎಂಬುವವರು ಒಂದು ಪುಟ್ಟ ವರದಿಯನ್ನು ಪ್ರಕಟಿಸಿದರು. ಆರ್.ಸಿ. ನಿಗಮ್ ಅವರು 1971ರ ಸಮೀಕ್ಷೆಯಲ್ಲಿ ಭಾಷೆಗಳ ಕುರಿತ ಅಂಕಿಅಂಶಗಳನ್ನು ಪ್ರಕಟಿಸುವ ಕಾರ್ಯನಿರ್ವಹಿಸುತ್ತಿದ್ದರು. ಅದರಲ್ಲಿ ಪಟ್ಟಿ ಮಾಡಿದ ಭಾಷೆಗಳ ಅಂಕಿ ಸಂಖ್ಯೆಗಳು ಗಣನೀಯವಾಗಿ ಕಡಿಮೆಯಾಗಿದ್ದನ್ನು ನಾನು ಗಮನಿಸಿದೆ. ಆ ಭಾಷೆಗಳು ಎಲ್ಲಿ ಹೋದವು ಎಂಬುದನ್ನು ತಿಳಿದುಕೊಳ್ಳಬೇಕೆಂಬ ತೀವ್ರ ಕುತೂಹಲ ನನ್ನಲ್ಲಿ ಉಂಟಾಯಿತು. ಈ ವರದಿಯನ್ನು ನಾನು 1977ರಲ್ಲಿ ಶಿವಾಜಿ ವಿಶ್ವವಿದ್ಯಾಲಯದ ರೆಫರೆನ್ಸ್ ವಿಭಾಗದಲ್ಲಿ ಕೂತು ಓದಿದಾಗ, ನಾನು ಭಾರತದ ಭೂಪಟವೊಂದನ್ನು ಅಲ್ಲಿಯೇ ಬರೆದೆ. ಭಾಷೆಗಳ ಕುರಿತು ಆಗ ನನಗೆ ಯಾವುದೇ ಜ್ಞಾನವಿರಲಿಲ್ಲ. ನನಗಿದ್ದ ಸೀಮಿತ ತಿಳುವಳಿಕೆಯ ಆಧಾರದ ಮೇಲೆ ಆ ಭೂಪಟದ ಮೇಲೆ ಎಲ್ಲೆಲ್ಲಿ ಭಾಷೆಗಳ ಸಾಂದ್ರತೆ ಹೆಚ್ಚಾಗಿದೆಯೋ ಅಲ್ಲಲ್ಲಿ ಗುರುತುಗಳನ್ನು ಮಾಡಿದೆ. ಆಶ್ಚರ್ಯವೆಂದರೆ ದಕ್ಷಿಣದಲ್ಲಿ ಇಂಥ ಗುರುತುಗಳು ಹೆಚ್ಚಾಗಿದ್ದು ಒಂದು ಉದ್ದನೆಯ ಪಟ್ಟಿಯಂತೆ ಕಾಣುವ ನಿರ್ದಿಷ್ಟ ಭಾಗದಲ್ಲಿ- ಸೂರತ್‌ನಿಂದ ಆರಂಭಿಸಿ ಹೌರಾದವರೆಗೆ- ಆ ಭಾಗದಿಂದ 300ರಿಂದ 400 ಕಿಲೋಮೀಟರ್ ಉತ್ತರಕ್ಕೆ ಮತ್ತು 300-400 ಕಿಮೀ ದಕ್ಷಿಣಕ್ಕೆ ಸರಿಯಾಗಿ ಭಾರತದ ಧ್ವಜದ ನಡುವೆ ಇರುವ ಪಟ್ಟಿಯಂತಿರುವ ಭಾಗದಲ್ಲಿ ಖಾಲಿ ಜಾಗವೊಂದು ಇರುವುದನ್ನು ಗಮನಿಸಿದೆ. ಭಾರತದ ಧ್ವಜದಲ್ಲಿರುವ ಹಾಗೆ ಉತ್ತರ ದಕ್ಷಿಣದ ಎರಡೂ ಕಡೆಗಳಲ್ಲಿ ಭಾಷೆಗಳು ಇಡಿಕಿರಿದು ತುಂಬಿದಂತೆ ಕಾಣಿಸಿದರೆ ನಡುವಿನ ಭಾಗ ಖಾಲಿಯಾಗಿತ್ತು. ಇದೆಲ್ಲವೂ ನನಗೆ ಸರಿಯಾಗಿ ಅರ್ಥವಾಗಲು ಎರಡು ಮೂರು ದಿನಗಳು ಬೇಕಾದವು. ಮಧ್ಯದಲ್ಲಿ ಇಷ್ಟು ಖಾಲಿ ಜಾಗ ಹೇಗೆ ಉಂಟಾಯಿತು? ಯಾಕೆ ಉತ್ತರದಲ್ಲಿ ಇಂಡೋಆರ್ಯನ್ ಭಾಷೆಗಳು, ದಕ್ಷಿಣದಲ್ಲಿ ದ್ರಾವಿಡ ಭಾಷೆಗಳು ಹೇಗೆ ಇಡಿಕಿರಿದವು? ಈ ಕಾರಣದಿಂದಲೇ ಭಾಷಾಕುಟುಂಬಗಳ ಆಧಾರದಲ್ಲಿ ಭಾಷೆಗಳನ್ನು ವರ್ಗೀಕರಿಸುವ ಕ್ರಮದ ಬಗ್ಗೆ ನನಗೆ ಬಹಳ ವಿರೋಧವಿದೆ. ಇದನ್ನು ವಿವರಿಸಲು ನನಗೆ ಹೆಚ್ಚು ಸಮಯವಿಲ್ಲ. ಈ ಎರಡು ಭಾಷಾಕುಟುಂಬಗಳು ಸಾವಿರಾರು ವರ್ಷಗಳ ಸಾಂಸ್ಕೃತಿಕ ಒಡನಾಟದ ಹೊರತಾಗಿಯೂ ಯಾಕೆ ಒಂದಾಗಲಿಲ್ಲ ಎಂಬ ಪ್ರಶ್ನೆ ಎದುರಾಯಿತು. ಆಗ ನನಗೆ ಮಿಂಚಿನಂತೆ ಹೊಳೆದಿದ್ದೇನೆಂದರೆ, ಮಧ್ಯೆ ಭಾಷಿಕವಾಗಿ ಖಾಲಿಯಾಗಿ ಕಾಣುವ ಇಂಡಿಯಾ, ಬುಡಕಟ್ಟು ಸಮುದಾಯಗಳು ಬದುಕುತ್ತಿದ್ದ ಇಂಡಿಯಾ, ಇವೆರಡೂ ಭಾಷಾ ಕುಟುಂಬಗಳು ದೂರ ದೂರ ಇರುವಂತೆ ಮಾಡಿತು. ಇದು ನನ್ನಲ್ಲಿ ಬುಡಕಟ್ಟು ಭಾಷೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರೇರೇಪಿಸಿತು. ಈ ಸಮುದಾಯಗಳು ಎರಡು ಭಾಷಾ ಕುಟುಂಬಗಳನ್ನು ದೂರವಿರಿಸಿದ್ದು ನಿಜವೇ ಆದರೆ ಅಲ್ಲಿನ ಜನ ಆಡುವ ಭಾಷೆಗಳು ಯಾವುವು? ಅವರು ಆಡುವುದು ದ್ರಾವಿಡ ಭಾಷೆಗಳನ್ನೋ, ಇಂಡೋ ಆರ್ಯನ್ ಭಾಷೆಗಳನ್ನೋ? ಅವರಾಡುವ ಭಾಷೆಗಳ ಬಗ್ಗೆ ನಮಗೆ ಯಾಕೆ ಏನೂ ತಿಳಿದಿಲ್ಲ? ಹಾಗಾಗಿಯೇ ಮೂರು ವರ್ಷಗಳ ನಂತರ 1980ರಲ್ಲಿ ನಾನು ಬರೋಡಾಕ್ಕೆ ಉಪನ್ಯಾಸಕನಾಗಿ ಹೋದಾಗ ಸ್ಕೂಟರ್ ತೆಗೆದುಕೊಂಡು ಬುಡಕಟ್ಟುಗಳು ಅವರ ಭಾಷೆಗಳ ಬಗ್ಗೆ ಅರಿತುಕೊಳ್ಳಲು ಆರಂಭಿಸಿದೆ.

ಮಾತಿನ ನಡುವೆ, ಭಾಷೆಗಳನ್ನು ಇಂಡೋ ಆರ್ಯನ್ ಭಾಷೆಗಳೆಂದು ವರ್ಗೀಕರಿಸುವ ಕ್ರಮದ ಬಗ್ಗೆ ನಿಮಗೆ ತಕರಾರು ಇದೆ ಎಂದಿರಿ. ಅದನ್ನು ವಿವರಿಸಿ.

ದ್ರಾವಿಡ ಭಾಷೆಗಳ ವರ್ಗೀಕರಣವನ್ನು ಪ್ರೊ. ಎಲಿಸ್ ಅವರು ತಮಗೆ ತಿಳಿದ ಭಾಷಾಶಾಸ್ತ್ರದ ಆಧಾರದ ಮೇಲೆ ಮಾಡಿದರು. ಅದು ಆಗಿನ ಕಾಲಕ್ಕೆ ಸರಿಯಿರಬಹುದು. ಮುಖ್ಯವಾಗಿ ಅವರು ವಿಲಿಯಮ್ ಜೋನ್ಸ್ ಅವರು ಮಾಡಿದ ಇಂಡೋ ಆರ್ಯನ್ ಭಾಷಾ ಕುಟುಂಬಗಳ ವರ್ಗೀಕರಣಕ್ಕೆ ಪ್ರತಿಕ್ರಿಯೆಯಾಗಿ ಇಂಥದೊಂದು ವಾದವನ್ನು ಮಂಡಿಸಿದ್ದರು. ಆದರೆ ಎಲಿಸ್ ಅವರಾಗಲೀ ಜೋನ್ಸ್ ಅವರಾಗಲೀ ಇಂಡೋ ಆರ್ಯನ್ ಹಾಗೂ ದ್ರಾವಿಡ ಭಾಷಾ ಕುಟುಂಬಗಳಿಗೆರಡಕ್ಕೂ ಸೇರಿದ ಮರಾಠಿ ಮತ್ತು ಒರಿಯಾದಂಥ ಭಾಷೆಗಳ ರಚನೆಗಳನ್ನು ವಿವರಿಸಲು ಅಸಮರ್ಥರಾಗಿದ್ದಾರೆ.

ಮೇಲಾಗಿ ಭಾಷೆಗಳನ್ನು ಕುಟುಂಬಗಳನ್ನಾಗಿ ವರ್ಗೀಕರಿಸುವ ಕ್ರಮ ಯೂರೋಪಿನಲ್ಲಿ ವಸ್ತುಗಳನ್ನು ವರ್ಗೀಕರಿಸುವ ಕ್ರಮವನ್ನು ಆಧರಿಸಿದೆ. ಈ ಕ್ರಮ ಸುಮಾರು ಎರಡು ಶತಮಾನಗಳಷ್ಟು ಹಳೆಯದು. ಈ ಬಗೆಯ ವರ್ಗೀಕರಣದ ಹಿಂದಿರುವ ಮೂಲಕಲ್ಪನೆಯನ್ನೇ, ಹಲವು ಬಗೆಗಳಲ್ಲಿ ಮರುವಿಮರ್ಶೆ ಮಾಡಬೇಕು. ಡೇವಿಡ್ ಡಾಲ್ಬಿಯವರು ಹೇಳುವ ಮನುಷ್ಯರು ಬಳಸುವ ಎಲ್ಲಾ ಭಾಷೆಗಳನ್ನು ಒಳಗೊಳ್ಳುವ ‘ಭಾಷಾಪರಿಸರ’ (‘ಅಟ್ಮಾಸ್ಫಿಯರ್’ ನಂತೆ ‘ಲಿಂಗ್ವಾಸ್ಫಿಯರ್’)ವನ್ನು ಆಧರಿಸಿ ನಾನು ಇಂಥ ಒಂದು ಪ್ರಯತ್ನವನ್ನು ಮಾಡಿದ್ದೆ. ಅದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಮಾತಾಡೋಣ.

ಇನ್ನು ನೀವು ಬುಡಕಟ್ಟು/ಆದಿವಾಸಿ ಸಮುದಾಯಗಳ ನಡುವೆ ಮಾಡಿದ ಕೆಲಸ-ಅಧ್ಯಯನಗಳ ಹಿನ್ನೆಲೆಯಲ್ಲಿ ಮಾತಾಡುವುದಾದರೆ ಅದು ಭಾಷೆ ಮತ್ತು ಸಾಹಿತ್ಯಗಳ ಕುರಿತಾದ ಸ್ಥಾಪಿತ ನಂಬಿಕೆಗಳನ್ನು ಅಲ್ಲಾಡಿಸುವಂತಿದೆ. ಆದಿವಾಸಿ ಸಾಹಿತ್ಯ ಮತ್ತು ಭಾಷೆಗಳಲ್ಲಿರುವ ಅಪಾರ ವೈವಿಧ್ಯ, ಅದರ ಬಗ್ಗೆ ನಮಗಿರುವ ಅಜ್ಞಾನಗಳನ್ನು ನೀವು ಪ್ರಸ್ತಾಪಿಸುತ್ತ ನೀವು ಅದನ್ನು “ಜನಪದ” ಸಾಹಿತ್ಯ ಎಂದು ಕರೆಯದೆ “ಸಾಹಿತ್ಯ” ಎನ್ನಬೇಕು- ಆದಿವಾಸಿ ಭಾಷೆಗಳನ್ನು “ಉಪಭಾಷೆಗಳು” ಎನ್ನದೆ “ಭಾಷೆಗಳು” ಎಂದು ಕರೆಯಬೇಕು ಎನ್ನುತ್ತೀರಿ. ಈ ಕುರಿತು ಇನ್ನಷ್ಟು ಹೇಳಿ.

ಸುಮಾರು 1920ರಲ್ಲಿ ವೆರಿಯರ್ ಎಲ್ವಿನ್ ಅವರು ಭಾರತಕ್ಕೆ ಬಂದು ಗಾಂಧಿಯವರ ಸೂಚನೆಯ ಮೇರೆಗೆ ಬಸ್ತರ್‍ಗೆ ಬಂದು ಅಲ್ಲಿನ ಆದಿವಾಸಿಗಳ ಜೊತೆ ಕೆಲಸ ಮಾಡಲು ತೊಡಗಿ ಅಲ್ಲಿನ ವೈವಿಧ್ಯಮಯ ಸಾಹಿತ್ಯವನ್ನು ಸಂಗ್ರಹಿಸಿದರು. ನಂತರ ಮಾನವಶಾಸ್ತ್ರಜ್ಞರು ಆದಿವಾಸಿ ಸಾಹಿತ್ಯವನ್ನು ಸಂಗ್ರಹಿಸಿದರೂ ಅದನ್ನು ಜನಪದ ಅಥವಾ ಮೌಖಿಕ ಸಾಹಿತ್ಯ ಎಂದು ಕರೆಯುವ ಪರಿಪಾಠ ಜಾರಿಯಲ್ಲಿತ್ತು. ನಾನು ಗುಜರಾತ್ ರಾಜಸ್ತಾನದ ಗರಾಸಿಯಾ ಭಿಲ್ಲರ ಜೊತೆ ಕೆಲಸ ಮಾಡಲು ಆರಂಭಿಸಿದಾಗ ಅವರಲ್ಲಿ ಅಪಾರ ಭಾಷಿಕ ಮತ್ತು ಕಾವ್ಯ ವೈವಿಧ್ಯದಿಂದ ತುಂಬಿದ, ಬಹಳ ಸಂಕೀರ್ಣ ಕಥಾನಕವುಳ್ಳ ಮಹಾಭಾರತದ ಭಿತ್ತಿಯ ನಾಲ್ಕು ಮಹಾಕಾವ್ಯಗಳಿರುವುದನ್ನು ಕಂಡೆ. ಅಲ್ಲಿ ಅರ್ಜುನನ ಬದಲಾಗಿ ವಾಸುಕಿ ನಾಯಕ. ವಾಸುಕಿಯ ಶಕ್ತಿಗೆ ಅರ್ಜುನ ಬೆದರಿಬಿಟ್ಟಿದ್ದಾನೆ. ವಾಸುಕಿಗೆ ಬಹಳ ದ್ರೌಪದಿಯ ಜೊತೆ ಬಹಳ ರಮ್ಯವಾದ-ಉತ್ಕಟವಾದ ಗೆಳೆತನ ಇದೆ. ಮಹಾಭಾರತ ಯುದ್ಧವನ್ನು ಕೃಷ್ಣನಲ್ಲ ಭೀಷ್ಮ ಮುನ್ನಡೆಸಿದ್ದಾನೆ. ವ್ಯಾಸರ ಬದಲಾಗಿ ಗಣೇಶ ಇದ್ದಾನೆ… ಗರಾಸಿಯಾ ಜನಾಂಗದಲ್ಲಿ ನಾಲ್ಕು ಮಹಾಭಾರತಗಳಿದ್ದರೆ, ಬಂಜಾರರಲ್ಲಿ ಅವರದೇ ಆದ ರಾಮಾಯಣವಿದೆ. ಹಿಮಾಚಲದ ವನಗುಜ್ಜರರು ಸುಮಾರು 6-7ಸಾವಿರ ಹಾಡುಗಳನ್ನು ನೆನಪಿನಿಂದ ಹಾಡಬಲ್ಲರು. ಬಂಜಾರರ ಗುಂಪಿಗೆ ಸೇರಿದ ಲೆಂಗಿಗಳಲ್ಲಿ, ನಾಯಕರಲ್ಲಿ ಬ್ರೆಕ್ಟ್‌ನನ್ನೂ ಮೀರಿಸಬಲ್ಲ ತಂತ್ರಗಳಿರುವ ನಾಟಕಗಳಿವೆ…. ಇದೆಲ್ಲವನ್ನು ನೋಡಿ ನಾನು ಅನಂತಮೂರ್ತಿಯವರು ಸಾಹಿತ್ಯ ಅಕಾಡೆಮಿಯಲ್ಲಿದ್ದಾಗ ಆದಿವಾಸಿಗಳ ಸಾಹಿತ್ಯವನ್ನು ಪ್ರಕಟಿಸಬೇಕೆಂಬ ಯೋಜನೆಯನ್ನು ಪ್ರಸ್ತಾಪಿಸಿದೆ. ಅದರಂತೆ 18 ಸಂಪುಟಗಳಲ್ಲಿ ಆದಿವಾಸಿ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸಿದೆ… ನಂತರ ರಮಾಕಾಂತರಥರ ಕಾಲದಲ್ಲಿ ಸಾಹಿತ್ಯ ಅಕಾಡೆಮಿಯ ದಿಕ್ಕುಧೋರಣೆಗಳು ಬದಲಾದವು…….

ಆದಿವಾಸಿಗಳ ಕುರಿತಾದ ಕೆಲಸಕ್ಕೆ ಹೊಂದಿಕೊಂಡೇ ನೀವು ಹೇಳುವ ಅಭಿವೃದ್ಧಿಯ ಪರಿಕಲ್ಪನೆಯನ್ನು ಗಮನಿಸಿದರೆ- ಸಮುದಾಯಗಳು ತಾವು ನೆಲೆಸಿರುವ ಕಡೆಯಲ್ಲಿಯೇ ಸ್ವಯಂಪೂರ್ಣ ಬದುಕಿನ ಕ್ರಮವನ್ನು ಕಂಡುಕೊಳ್ಳಬೇಕು ಎನ್ನುತ್ತ ಸ್ವಾವಲಂಬನೆಯ ಮಾರ್ಗವನ್ನು ಎತ್ತಿಹಿಡಿಯುತ್ತೀರಿ. ಮುಖ್ಯವಾದ ಪ್ರಶ್ನೆಯೇನೆಂದರೆ, ನೀವು ಗಾಂಧಿಯವರನ್ನು ತೇಜಗಡದಲ್ಲಿ ಹೊಸದಾಗಿ ರೂಪಿಸಿಕೊಂಡಿರೋ ಅಥವಾ ಅವರು ನಿಮ್ಮ ಚಿಂತನೆ ಕೆಲಸಗಳಲ್ಲಿ ಮೊದಲಿನಿಂದ ಜೊತೆಗಿದ್ದರೋ? ಗಾಂಧಿಯವರನ್ನು ನೀವು ಹೇಗೆ ಕಂಡುಕೊಂಡಿರಿ?

ಗಾಂಧಿಯವರನ್ನು ನಾನು ಕಂಡುಕೊಂಡದ್ದು ನಾನು ಸುಮಾರು 15 ಜನ ಆದಿವಾಸಿಗಳ ಜೊತೆ ಎರಡುವರ್ಷಗಳ ಕಾಲ ದೀರ್ಘವಾದ ವಿಚಾರವಿಮರ್ಶೆ-ಸಂವಾದದಲ್ಲಿ ತೊಡಗಿಕೊಂಡಿದ್ದಾಗ. ಅವರಿಗಾಗಿ ನಾನೊಂದು ಡಿಪ್ಲೋಮಾ ಕೋರ್ಸ್‌ಅನ್ನು ರೂಪಿಸಿದ್ದೆ. ಅದರ ವಿಶೇಷತೆ ಏನೆಂದರೆ-ಅಲ್ಲಿ ಅವರು ಮಾತಾಡಬೇಕು, ನಾನು ಕೇಳಿಸಿಕೊಳ್ಳಬೇಕು. ಅಲ್ಲಿ ಯಾವ ಕ್ಲಾಸ್ ರೂಮುಗಳೂ ಇರಲಿಲ್ಲ. ನಾವು ಹೊರಗೆ-ಯಾಕೆಂದರೆ ಆಗ ಅಲ್ಲಿ ವಿದ್ಯುತ್ತಿನ ಸೌಲಭ್ಯ ಇರಲಿಲ್ಲ-ಬಂಡೆಗಳ ಮೇಲೆ ಮರಗಳ ಕೆಳಗೆ ಕೂತು ಕೆಲವೊಮ್ಮೆ ರಾತ್ರಿ 2-3ಗಂಟೆಯವರೆಗೂ ವಿಚಾರ ವಿಮರ್ಶೆ ನಡೆಸುತ್ತಿದ್ದೆವು. ಆ ದಿನಗಳಲ್ಲಿ ನಾನು ಟ್ರೈಬಲ್ ಅಕಾಡೆಮಿಯನ್ನು ಆರಂಭಿಸಿದ್ದೆ. ಎರಡುವರ್ಷಗಳ ಚರ್ಚೆ ಸಂವಾದದ ನಂತರ ‘ನಮಗೀಗ ಆದಿವಾಸಿಗಳಿಗೆ ಏನು ಬೇಕು ಎಂದು ಗೊತ್ತಿರುವುದರಿಂದ, ಪಕ್ಕ ಇರುವ ಹಳ್ಳಿಗೆ ಹೋಗಿ ಅವರ ಜೊತೆ ನಾವು ಯಾಕೆ ಕೆಲಸ ಮಾಡಬಾರದು?’ ಎಂದು ನಾನು ಹೇಳಿದೆ. ಈ ಪ್ರಸ್ತಾವ ಆದಿವಾಸಿ ಯುವಕರ ಕಡೆಯಿಂದಲೇ ಬಂದಿತ್ತು. ನಾಲ್ಕು ವರ್ಷಗಳಲ್ಲಿ ನಾವು ಮಾಡಿದ ಕೆಲಸ ಸುಮಾರು ಲಕ್ಷಾಂತರ ಆದಿವಾಸಿಗಳನ್ನೊಳಗೊಂಡ 22,000 ಹಳ್ಳಿಗಳಿಗೆ ಹರಡಿತು.

ಹಾಗೆ ನೋಡಿದರೆ ಗಾಂಧಿಯವರನ್ನು ನಾನು ಕಂಡುಕೊಂಡಿದ್ದು ಬೇರೆ ಬೇರೆ ರೂಪಗಳಲ್ಲಿಯೇ. ಮೊದಲಿನಿಂದ ಅವರ ಜೊತೆಗೆ ನಾನು ಇರಲಿಲ್ಲ. ಗಾಂಧಿಯವರ ಪ್ರಾಮುಖ್ಯತೆ ನನಗೆ ಗೊತ್ತಾಗಿದ್ದು 1996ರಲ್ಲಿ. ನಾನು ಸಮುದಾಯಗಳ ಜೊತೆ ಕೆಲಸ ಆರಂಭಿಸಿದಾಗ. ಆಗ ನಾನು ಗಾಂಧಿಯವರ ಆತ್ಮಕಥೆಯನ್ನು ಮತ್ತೊಮ್ಮೆ ಓದಿದೆ. ಯಾಕೆಂದರೆ ಅವರು ಸಾಬರಮತಿ ಆಶ್ರಮವನ್ನು ಶುರುಮಾಡಿದ ಮೇಲೆ ಅದರ ಮ್ಯಾನೇಜರ್ ಆಗಿ ಹೇಗೆ ನಡೆಸಿದರು ಎಂಬುದನ್ನು ನಾನು ತಿಳಿದುಕೊಳ್ಳಬೇಕಿತ್ತು. ಅದರಿಂದ ನಾನು ಬಹಳ ಕಲಿತೆ.

ಗಾಂಧಿಯವರು ಬಹಳ ದೊಡ್ಡ ಶಿಕ್ಷಕ. ಅವರ ವ್ಯಕ್ತಿತ್ವ ಎಂಥದೆಂದರೆ ಅವರು ಜೀವನದ ಹಲವು ಸಂದರ್ಭಗಳಲ್ಲಿ ನಮಗೆ ಕಲಿಸುತ್ತಲೇ ಇರುತ್ತಾರೆ. ನನ್ನ ಕೆಲಸವನ್ನು ಹೇಗೆ ಮುನ್ನಡೆಸಬೇಕು ಎಂದು ತಿಳಿಯದ ಕಷ್ಟದ ಗಳಿಗೆಗಳಲ್ಲಿ ಅವರು ಬಹಳ ಕಲಿಸಿದ್ದಾರೆ. ಆದರೆ ಅವರ ಜೊತೆಗಿನ ನನ್ನ ಸಂಬಂಧ ಬಹಳ ಸಮಸ್ಯಾತ್ಮಕವಾದುದು. ಮಗನೊಬ್ಬ ತಂದೆಯನ್ನು ದ್ವೇಷಿಸುತ್ತಲೇ ಪ್ರೀತಿಸುವ ಬಗೆಯಲ್ಲಿ ನಾನು ಅವರನ್ನು ಅರ್ಥಮಾಡಿಕೊಂಡಿದ್ದೇನೆ…. ಫ್ರಾಯ್ಡ್ ಹೇಳುವ ಹಾಗೆ ತಂದೆಯನ್ನು ದ್ವೇಷಿಸುವ ಮೂಲಕವೇ ಮಗನ ಬೆಳವಣಿಗೆ ಶುರುವಾಗುತ್ತದೆ. ಆದರೆ ನಿಜವಾದ ಪ್ರಬುದ್ಧತೆ ಬರುವುದು ದ್ವೇಷಿಸುವ ಮಗ, ಮತ್ತೆ ತಂದೆಯನ್ನು ಅರಿತು ಪ್ರೀತಿಸಲು ಶುರುಮಾಡಿದಾಗ ಅನಿಸುತ್ತದೆ. ಹಾಗಾಗಿ ನಾನು ಕಾರ್ಲ್ ಮಾರ್ಕ್ಸ್‌ ಅವರನ್ನು ಓದುವಾಗ ಗಾಂಧಿಯವರನ್ನು ಒಂದು ತಮಾಶೆ ಎಂದುಕೊಂಡಿದ್ದೆ. ದಲಿತ ಸಾಹಿತ್ಯವನ್ನು ಓದುವಾಗ ಹಾಸ್ಯಾಸ್ಪದ ವ್ಯಕ್ತಿ ಎಂದುಕೊಂಡಿದ್ದೆ. ನನ್ನನ್ನು ನಾನು ವಿದ್ವಾಂಸ ಅಂದುಕೊಳ್ಳುವಾಗ, ಅವರು ಎಲ್ಲವನ್ನೂ ಹೇಗೆ ಸರಳೀಕರಿಸಿ ನೋಡುತ್ತಾರೆ ಎಂದು ವ್ಯಂಗ್ಯವಾಡಿದ್ದೆ. ಆಧುನಿಕತೆಯ ಬಗ್ಗೆ ಚಿಂತಿಸುವಾಗ ಗಾಂಧಿಯವರು ಹೇಗೆ ಎಲ್ಲವನ್ನೂ ಖಚಿತವಾಗಿ ಗ್ರಹಿಸಬಲ್ಲರು ಅನ್ನಿಸಿತು… ಈಗ…… ಅವರು ಎಂಥ ಬಗೆಯ ಹೋರಾಟದ ಮೂಲಕ ಅವರು ‘ಗಾಂಧಿಯಾದರು’ ಎಂಬುದು ಅರಿವಾಗುತ್ತಿದೆ. ಅವರು ನಾವು ಅರಿತುಕೊಳ್ಳಲಾಗದ ಎಷ್ಟೋ ವಿಷಯಗಳ ಕುರಿತು ದೊಡ್ಡ ಬೆಳಕು ಚೆಲ್ಲಿದ್ದಾರೆ.

ಮುಖ್ಯವಾಗಿ ಗಾಂಧಿಯವರು ನಮಗೆ ಭಯವಿಲ್ಲದೆ ಬದುಕುವುದನ್ನು ಕಲಿಸಿದರು. ಎರಡನೆಯದಾಗಿ ದುರಾಸೆಯಿಲ್ಲದ ಜೀವನ ಹಾಗೂ ದ್ವೇಷವಿಲ್ಲದೆ ಬದುಕುವುದನ್ನು ಕಲಿಸಿದರು. ಕೋಮು ದ್ವೇಷ, ಧರ್ಮಾಂಧತೆಯ ಕರಿನೆರಳುಗಳು ದಟ್ಟವಾಗಿ ಎಲ್ಲ ಕಡೆ ಹರಡಿರುವಾಗ ದ್ವೇಷವಿಲ್ಲದೆ ಬದುಕುವುದು ಇಂದಿನ ಬಹು ದೊಡ್ಡ ಅಗತ್ಯವಾಗಿದೆ. ಬಂಡವಾಳಶಾಹಿಗಳ ದುರಾಸೆಯ ನಡುವೆ ಸರಳ ಜೀವನ ನಡೆಸುವುದೂ ಸಹ ಅಷ್ಟೇ ದೊಡ್ಡದು. ಎಲ್ಲ ಬಗೆಯ ಪ್ರಭುತ್ವಗಳು ಪ್ರಜೆಗಳ ಪರಮವಿರೋಧಿಯಾಗಿ ಬೆಳೆಯುತ್ತಿರುವುದರಿಂದ ಇಂಥ ಪ್ರಭುತ್ವಗಳನ್ನು ಭಯವಿಲ್ಲದೆ ಪ್ರಶ್ನಿಸುವುದೂ ಸಹ ಅನಿವಾರ್ಯವಾದ ತತ್ವವಾಗಿದೆ. ಬಂಡವಾಳಶಾಹಿ, ಪ್ರಭುತ್ವ ಹಾಗೂ ಧರ್ಮಾಂಧತೆಗಳ ವಿರುದ್ಧ ತಿರುಗಿಬೀಳುವ ಬಹುದೊಡ್ಡ ತತ್ವಗಳನ್ನು ಗಾಂಧಿಯವರು ನಮಗೆ ಕಲಿಸಿಕೊಟ್ಟಿದ್ದಾರೆ. ಇಂಥ ತತ್ವಗಳು ಬೇರೆ ಬೇರೆ ದೊಡ್ಡ ಚಿಂತಕರಿಂದಲೂ ನಮ್ಮ ಕಡೆ ಹರಿದುಬಂದಿವೆ. ಆದರೆ ಈ ಮೂರು ತತ್ವಗಳು ಗಾಂಧಿಯವರಿಗೆ ಮುಖ್ಯವಾಗಿರುವಂತೆ ನಮಗೂ ಈಗ ಅಷ್ಟೇ ಮುಖ್ಯವಾಗಿವೆ. ಗಾಂಧಿಯರನ್ನು ನಾನು ಕಂಡುಕೊಳ್ಳುವುದು ಈ ಮೂರು ನೆಲೆಯಲ್ಲಿಯೇ.

(ಪ್ರಸನ್ನ‌ ಹೆಗ್ಗೋಡು)

ಇಲ್ಲಿಯೇ ಇನ್ನೊಂದು ಚಿಕ್ಕ ಪ್ರಶ್ನೆ. ನಿಮಗೆ ಪ್ರಸನ್ನ ಅವರ ಜೊತೆ ಮೊದಲಿನಿಂದಲೂ ಬಹಳ ಆತ್ಮೀಯವಾದ ಸಂಬಂಧವಿದೆ. ಇತ್ತೀಚೆಗೆ ನಿಮ್ಮ ದಕ್ಷಿಣಾಯಣವೂ ಸಹ ಪ್ರಸನ್ನರ ಜೊತೆ ಕೈಜೋಡಿಸಿದೆ. ಅವರ ಗಾಂಧಿವಾದಿ ಪ್ರಯೋಗಗಳ ಕುರಿತು ಹೇಳಿ.

ಪ್ರಸನ್ನ ಅವರು ಕರ್ನಾಟಕದ ಅತ್ಯಂತ ಪ್ರತಿಭಾಶಾಲಿ ನಿರ್ದೇಶಕರು. ನನಗೆ ಅವರ ಬಗ್ಗೆ ಅಪಾರ ಗೌರವವಿದೆ. ಯಾಕೆಂದರೆ ಹಲವು ಬಗೆಯ ವೈಯುಕ್ತಿಕ ಏಳುಬೀಳುಗಳ ನಡುವೆಯೂ ಅವರು ಅಚಲವಾದ ಬದ್ಧತೆಯಿಂದ ಕೆಲಸಮಾಡುತ್ತಿದ್ದಾರೆ. ಅವರ ಚರಕದ ಚಟುವಟಿಕೆಗಳನ್ನು ಯಾವುದೇ ಬಗೆಯ ಮಾರ್ಗದರ್ಶನವಿಲ್ಲದೆ, ಯಾವ ಬಗೆಯ ನಿಯಮಿತ ಸರ್ಕಾರದ ಅನುದಾನವೂ ಇಲ್ಲದೆ, ಯಾವ ರಾಜಕೀಯ ಪಕ್ಷಗಳ ಆಶ್ರಯವನ್ನೂ ಅವಲಂಬಿಸದೆ ನಿರಂತರವಾಗಿ ನಡೆಸುತ್ತ ಬಂದಿದ್ದಾರೆ. ಒಂದು ಪಕ್ಷ ಪ್ರಸನ್ನ ಅವರು ಮಹಾರಾಷ್ಟ್ರದಲ್ಲಿ ಇದ್ದಿದ್ದರೆ ಅವರು ಮಾಡುತ್ತಿರುವ ಕೆಲಸಕ್ಕೆ ಅಣ್ಣಾ ಹಜಾರೆ ಅಥವಾ ಬಾಬಾ ಆಮ್ಟೆಯವರಿಗೆ ಸಿಕ್ಕ ಪ್ರಾಶಸ್ತ್ಯವೇ ದೊರಕುತ್ತಿತ್ತು. ಮೂವತ್ತು ವರ್ಷಗಳ ಹಿಂದೆ ಪರಿಚಯವಾದ ಅವರ ಬಗ್ಗೆ ನನಗೆ ಇಂದಿನವರೆಗೂ ಒಂದಿಷ್ಟೂ ಗೌರವ ಕಡಿಮೆಯಾಗಿಲ್ಲ.

ಆದಿವಾಸಿಗಳ ನಡುವೆ ನೀವು ಮಾಡಿರುವ ಕೆಲಸ ಇಂಡಿಯಾದ ಬಹುತ್ವವನ್ನು ಗಟ್ಟಿಗೊಳಿಸುವ ಪ್ರಯತ್ನವೇ ಆಗಿದೆ. ಆದರೆ ಈಚಿನ ದಿನಗಳಲ್ಲಿ ಆದಿವಾಸಿ ಸಮುದಾಯಗಳು ಕೋಮುವಾದಿ ರಾಜಕಾರಣಕ್ಕೆ ತುತ್ತಾಗಿವೆ. ಗುಜರಾತಿನ ದಂಗೆಗಳ ಸಂದರ್ಭದಲ್ಲಿ ನೀವು ಕೆಲಸ ಮಾಡಿದ ಆದಿವಾಸಿ ಪ್ರದೇಶಗಳಲ್ಲಿ ಕೋಮುದ್ವೇಷ ಚೆಲ್ಲಾಡಿದ್ದನ್ನು ನೋಡಿ ನಿಮಗೆ ಏನು ಅನ್ನಿಸಿತು?

ಶೀತಲಯುದ್ಧದ ಸಂದರ್ಭದಲ್ಲಿ ಬಹಳಷ್ಟು ಆಫ್ರಿಕನ್ ದೇಶಗಳು ಒಂದು ಇನ್ನೊಂದರೊಡನೆ ಕಾದಾಡಿದವು. ಇಂಥ ಕದನಗಳ ಹಿಂದೆ ಅಮೇರಿಕಾದ ಒತ್ತಾಸೆ ಇತ್ತು ಹಾಗೇ ರಷ್ಯಾದ ಹಿತಾಸಕ್ತಿಯೂ ಸಹ. ನಾನು ಆದಿವಾಸಿ ಪ್ರದೇಶಗಳಲ್ಲಿ ನಡೆದ ಕೋಮುಸಂಘರ್ಷವನ್ನು ಬೇರೆ ರೀತಿಯಲ್ಲಿ ನೋಡುತ್ತೇನೆ. ಈ ಪ್ರದೇಶಗಳಲ್ಲಿ 85% ಆದಿವಾಸಿಗಳು, 10% ಹಿಂದುಗಳು, 5% ಮುಸ್ಲಿಮರಿದ್ದಾರೆ. ಆದಿವಾಸಿಗಳನ್ನು ಹಿಂದೂ ಮುಸ್ಲಿಮರ ದಂಗೆಗಳಲ್ಲಿ ಭಾಗಿಯಾಗಲು ಪ್ರಚೋದಿಸಲಾಯಿತು. ಆಫ್ರಿಕಾದ ದೇಶಗಳು ಅಮೇರಿಕದ ಮೇಲೆ ಅವಲಂಬಿತವಾಗಿದ್ದಂತೆ, ಆದಿವಾಸಿಗಳನ್ನು ಸರ್ಕಾರದ ಅನುದಾನಗಳ ಮೇಲೆ ಅವಲಂಬಿತರಾಗಿರುವಂತೆ ಮಾಡಲಾಗಿತ್ತು. ಮುಖ್ಯವಾಗಿ ಆದಿವಾಸಿ ಪ್ರದೇಶಗಳಲ್ಲಿ ಸ್ವಾವಲಂಬನೆಯ ದಾರಿಗಳನ್ನು ತೋರಿಸಿದರೆ ಹಲವು ಅಪಾಯಗಳಿಂದ ದೂರವಾಗಬಹುದು. ನನ್ನ ‘ನೊಮ್ಯಾಡ್ ಕಾಲ್ಡ್ ಥೀಫ್’(ಕಳ್ಳನೆಂದು ಕರೆಯಲಾಗುವ ಅಲೆಮಾರಿ)ನಲ್ಲಿ ಬರೆದಿರುವಂತೆ, ಗುಜರಾತಿನ ದಂಗೆಗಳ ಹೊತ್ತಿನಲ್ಲಿ ಗುಜರಾತಿನ ಸರ್ಕಾರವು ಅಲ್ಲಿನ ಸ್ವಸಹಾಯ ಗುಂಪುಗಳನ್ನು ಮುಚ್ಚುವಂತೆ ಮಾಡಿತ್ತು. ಯಾಕೆಂದರೆ ಅವು ಸ್ವಾವಲಂಬನೆಯ ದಾರಿಗಳನ್ನು ಅವರಿಗೆ ತೋರಿಸಿದ್ದವು. ಹಿಂದೂ, ಮುಸ್ಲಿಮರು-ಆದಿವಾಸಿಗಳ ನಡುವಿನ ಕದನವನ್ನು ಗಮನವಿಟ್ಟು ನೋಡಿದರೆ ಅದು ನಿಜವಾಗಿ ಸ್ವಾವಲಂಬನೆಯ ವಿರುದ್ಧ ಸರ್ಕಾರ ಹಾಗೂ ರಿಲಯನ್ಸ್ ಕಂಪನಿಗಳು ನಡೆಸಿದ ಕೂಡುಯುದ್ಧ ಎನ್ನಿಸುತ್ತದೆ….. 19ನೇ ಶತಮಾನದಲ್ಲಿ ಬ್ರಿಟಿಶರ ಒಡೆದು ಆಳುವ ನೀತಿಯ ಕಾರಣದಿಂದ ಹಿಂದೂ ಮಸ್ಲಿಮರ ನಡುವಿನ ದಂಗೆಗಳು ನಡೆದ ಹಾಗೆ ಇಲ್ಲಿಯೂ ದಂಗೆಗಳು ನಡೆದವು. ಹಾಗಾಗಿ ನಾನು ಕೇವಲ ಆದಿವಾಸಿಗಳನ್ನು ದೂರಲಾರೆ. ಆದರೆ ಇಂಥ ಬೆಳವಣಿಗೆಗಳನ್ನು ಖಂಡಿತಾ ಒಪ್ಪಲಾರೆ.

ದಂಗೆಗಳ ನಂತರವಾದರೂ ಆದಿವಾಸಿಗಳು ಕೂಡುಜೀವನದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆಯೇ?

ಆದಿವಾಸಿಗಳು ಮುಖ್ಯಧಾರೆಯ ರಾಜಕೀಯಕ್ಕಿಂತ ಭಿನ್ನವಾಗಿರುವವರು. ಅವರಿಗೆ ವ್ಯವಸ್ಥೆಯ ಬಗ್ಗೆ ಸಿಟ್ಟೂ ಇಲ್ಲ ಸಂತೋಷವೂ ಇಲ್ಲ. ಅವರು ಇವೆಲ್ಲವುಗಳಿಂದ ನಿರ್ಲಿಪ್ತವಾಗಿ ಉಳಿದಿದ್ದಾರೆ, ಇನ್ನೂ ಮುಂಬರುವ ಕೆಲವು ಕಾಲದವರೆಗೆ ಅವರು ಹೀಗೆಯೇ ಇರುತ್ತಾರೆ. ಅವರ ಗುಣವೇ ಭಿನ್ನವಾಗಿರುವಂಥದ್ದು. ಅವರ ಜೀವನ ಕ್ರಮ, ಆರ್ಥಿಕ ದೃಷ್ಟಿಕೋನ ಬಹಳ ಭಿನ್ನವಾಗಿದೆ. ಸುಮಾರು 70ವರ್ಷಗಳ ಅವಧಿಯಲ್ಲಿ, ಸುಮಾರು 70,000 ರಷ್ಟು ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿಯೂ ಸಹ ಅಲ್ಲಿನ ಆದಿವಾಸಿಗಳು ಹತ್ತಿರವಿರುವ ಪಟ್ಟಣವೊಂದಕ್ಕೆ ನುಗ್ಗಿ ದಾಂಧಲೆ ಮಾಡಿದ ಉದಾಹರಣೆಯನ್ನು ನಾನು ಇದುವರೆಗೂ ನೋಡಿಲ್ಲ. ಅವರು ಮೂಲತಃ ಅಹಿಂಸೆಯಲ್ಲಿ ನಂಬಿಕೆಯುಳ್ಳವರು. ಯಾಕೆಂದರೆ ಅವರಿಗೆ ನಮ್ಮಂಥ ದುರಾಸೆಗಳಿಲ್ಲ. ದುರಾಸೆಯೇ ಎಲ್ಲ ಬಗೆಯ ಹಿಂಸೆಗಳಿಗೆ ಜನ್ಮ ನೀಡುತ್ತದೆ. ಹಾಗೆಯೇ ಭಯವೂ ಸಹ ಎಲ್ಲ ಬಗೆಯ ರಾಜಕಾರಣಕ್ಕೆ ನಾಂದಿ ಹಾಡುತ್ತದೆ. ಆದ್ದರಿಂದ ಆದಿವಾಸಿಗಳು ನನ್ನ ಪ್ರಕಾರ ಎಲ್ಲ ಬಗೆಯ ರಾಜಕಾರಣದಿಂದ ದೂರನಿಂತವರು. ಹಾಗೇ ಹಿಂಸೆ ಹಾಗೂ ದುರಾಸೆಗಳಿಂದ ಮಾರುದೂರ ನಿಲ್ಲುವವರು.

ಭಾರತವನ್ನು ಒಂದು ಭಾಷಿಕ ಪ್ರಜಾಪ್ರಭುತ್ವ ಎಂದು ಕರೆಯಲಾಗುತ್ತದೆ. ನಮ್ಮ ಪ್ರಜಾಪ್ರಭುತವವನ್ನು ಉಳಿಸಿದ ಹಾಗೆಯೇ ನಮ್ಮ ಭಾಷೆಗಳನ್ನು ಸಹ ನಾವು ಉಳಿಸಬೇಕಾಗಿದೆ. ದುರದೃಷ್ಟವೇನೆಂದರೆ, ಸಂವಿಧಾನದಲ್ಲಿ ನಾವು ಮಾಡಿರುವ ಭಾಷೆಗಳ ವರ್ಗೀಕರಣದ ಕಾರಣದಿಂದ, ಭಾಷಾವಾರು ಪ್ರಾಂತ್ಯಗಳ ರಚನೆಯ ಕಾರಣದಿಂದ ಆದಿವಾಸಿ ಭಾಷೆಗಳು ಮೂಲೆಗುಂಪಾಗುತ್ತಿವೆ. ಹೀಗಿರುವಾಗ ಸಂವಿಧಾನದ ಮೂಲಕ ಆದಿವಾಸಿ ಭಾಷೆಗಳನ್ನು ಹೇಗೆ ರಕ್ಷಿಸಬಹುದು?

ಲಿಪಿಯಲ್ಲಿರುವ ಎಲ್ಲ ಭಾಷೆಗಳಿಗೆ ರಕ್ಷಣೆಯನ್ನು ನೀಡುವ ದೃಷ್ಟಿಯಿಂದ ಸಂವಿಧಾನದ 8ನೇ ಪರಿಚ್ಛೇದವನ್ನು ರಚಿಸಲಾಯಿತು. ಅದರಂತೆ ಲಿಪಿಯಿರುವ ಭಾಷೆಗಳಿಗೆ ಪ್ರಾಶಸ್ತ್ಯ ನೀಡಲಾಯಿತು. ಆದರೆ ಕಾಲಕ್ರಮೇಣ ನಾವು ಈ ಪರಿಚ್ಛೇದಕ್ಕೆ ಹೊಸ ಭಾಷೆಗಳನ್ನು -ಲಿಪಿಯಿರಲಿ ಬಿಡಲಿ-ಸೇರಿಸಬೇಕಾಗಿತ್ತು. ಇದು ಆಗುತ್ತಿಲ್ಲ. ಬರಲಿರುವ ದಿನಗಳಲ್ಲಿ ಸಂವಿಧಾನನದಿಂದ ಮಾನ್ಯತೆ ಪಡೆದಿರುವ ಭಾಷೆಗಳು ಹಾಗೂ ಮಾನ್ಯತೆ ಪಡೆಯದಿರುವ ಭಾಷೆಗಳ ನಡುವಿನ ಕಂದರ ದೊಡ್ಡದಾಗುವ ಲಕ್ಷಣಗಳಿವೆ. ಇವುಗಳ ನಡುವೆ ಅಸಹನೆ, ಅನುಮಾನ, ರೋಷ ಆವೇಶಗಳು ಹೆಚ್ಚಾಗಿ ಭಾರತದ ಹಲವಾರು ಪ್ರಜೆಗಳಿಗೆ ಸಹಜವಾಗಿ ದೊರಕಿರುವ ಭಾಷಿಕ ಪೌರತ್ವವನ್ನೇ ನಿರಾಕರಿಸಿದಂತಾಗುತ್ತದೆ. ಉದಾಹರಣೆಯ ಮೂಲಕ ಹೇಳುವುದಾದರೆ, ಈಚೆಗೆ ನಡೆದ ಜನಗಣತಿಯಲ್ಲಿ ಭಾರತದ ಜನಸಂಖ್ಯೆಯನ್ನು ಮಾನ್ಯತೆ ಹೊಂದಿದ ಅಥವಾ ಇಲ್ಲದ ಭಾಷೆಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ ಸುಮಾರು 60ಲಕ್ಷ ಜನರನ್ನು ಭಾರತೀಯ ನಾಗರಿಕರೆಂಬ ಪಟ್ಟಿಯಿಂದಲೇ ತೆಗೆದುಹಾಕಿದ್ದರು. ಅವರಿಗೆ ಭಾಷಿಕ ಪೌರತ್ವವನ್ನು ನಿರಾಕರಿಸಲಾಗಿತ್ತು. ಹಾಗಾಗಿ ಮುಂಬರುವ ದಿನಗಳಲ್ಲಿ ಬಹುಪಾಲು ಭಾರತೀಯರು ಭಾಷಿಕ ನೆಲೆಯಲ್ಲಿ ಬಹು ದೊಡ್ಡ ಅಪಾಯ ಹಾಗೂ ಅನುಮಾನವನ್ನು ಎದುರಿಸಬೇಕಾದ ತೊಂದರೆ ಇದೆ. ಇದು ಪ್ರಜಾಪ್ರಪ್ರಭುತ್ವ ವ್ಯವಸ್ಥೆಗೆ ಬಹು ದೊಡ್ಡ ಕಂಟಕವನ್ನು ಸೃಷ್ಟಿಸಬಲ್ಲದು.

ಆರಾಮವಾಗಿ ವಿಶ್ರಾಂತ ಜೀವನವನ್ನು ಕಳೆಯಬೇಕಾದ ನೀವು ಕಲ್ಬುರ್ಗಿಯವರ ಹತ್ಯೆಯ ನಂತರವೂ ಧಾರವಾಡಕ್ಕೆ ನೆಲೆ ಹುಡುಕಿಕೊಂಡು ಬಂದಿರಿ. ಮೊದಲಿನಿಂದಲೂ ನೀವು ಒಣ ಸಿದ್ಧಾಂತಿಗಳಾಗದೆ ಬೀದಿಗೆ ಇಳಿದು ಅಲ್ಲಿಂದ ಮಾತಾಡುವವರ ಜಾಯಮಾನಕ್ಕೆ ಸೇರಿದವರು. ಅದಕ್ಕಾಗಿಯೇ ನಿಮ್ಮ ಪ್ರೊಫೆಸರ್‌ ಹುದ್ದೆಯನ್ನು ಬಿಟ್ಟು ಆದಿವಾಸಿ ಪ್ರದೇಶಗಳ ಕಡೆ ನಡೆದಿರಿ. ಇದು ನಿಮ್ಮ ಬೌದ್ಧಿಕ ಅನ್ವೇಷಣೆಯ ಮಾದರಿಯೇ?

ಇರಬಹುದು. ನನ್ನ ವಿಚಾರಗಳಿಗೂ ನನಗೂ ಹೆಚ್ಚು ಅಂತರವಿರಬಾರದು ಎಂಬುದು ನನ್ನ ನಂಬಿಕೆ. ನನ್ನ ವಿಚಾರಗಳಿಗೆ ಅನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ ಹಾಗೇ ನನ್ನ ವಿಚಾರಗಳನ್ನೂ ಸಹ ನನ್ನ ನಡೆಯ ಮೂಲಕವೇ ಸ್ಪಷ್ಟಪಡಿಸಿಕೊಳ್ಳುತ್ತೇನೆ. ಸೆಮಿನಾರೊಂದರಲ್ಲಿ ಒಂದು ರೀತಿ ಮಾತನಾಡಿ ಮರುದಿನ ಬೇರೊಂದು ರೀತಿ ನಡೆದುಕೊಳ್ಳಲು ನನಗೆ ಆಗುವುದಿಲ್ಲ. ಇದು ಬಹಳ ದೊಡ್ಡ ಗುಣವೆಂದು ಹೇಳಲಾರೆ. ಆದರೆ ನಾನು ಇರುವುದು ಹೀಗೆಯೇ.

ಕೊನೆಯದಾಗಿ, ನೀವು ನಮ್ಮ ಭಾಷಿಕ ಸಮುದಾಯಗಳಲ್ಲಿರುವ ವೈವಿಧ್ಯತೆ ಕಾಣೆಯಾಗುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದ್ದೀರಿ. ಹಾಗೆ ನೋಡಿದರೆ, ಮನುಷ್ಯ ನಾಗರಿಕತೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು ವಾಚಾಳಿಗಳಾಗಿರುವವರು ನಾವು. ದಿನಕ್ಕೆ ಇಪ್ಪತ್ನಾಲಕ್ಕು ಗಂಟೆಗಳನ್ನೂ ಸಹ ಮಾತಾಡಿಯೋ ಅಥವಾ ಬೇರೆಯವರು ಮಾತಾಡುವುದನ್ನು ಕೇಳಿಯೋ ಬದುಕುವ ನಮ್ಮಲ್ಲಿ ವೈವಿಧ್ಯತೆಯಿಲ್ಲ ಎಂಬುದು ದೊಡ್ಡ ದುರಂತದ ಸಂಗತಿ. ನಮ್ಮ ಕಾಲದಲ್ಲಿ ಕೇವಲ ಜನಾಂಗೀಯ ಹತ್ಯೆಗಳು ಮಾತ್ರ ನಡೆಯುತ್ತಿಲ್ಲ ‘ಫೋನೋಸೈಡ್’ (ಪದಹತ್ಯೆ/ಧ್ವನಿಹತ್ಯೆ) ಸಹ ನಿರಂತರವಾಗಿ ನಡೆಯುತ್ತಿವೆ ಎಂಬುದು ಯಾಕೆ ನಮ್ಮ ಅರಿವಿಗೆ ಬರುತ್ತಿಲ್ಲ?

ನಾಗರಿಕತೆಗಳ ವಿಕಾಸ ಬಹಳ ನಿಧಾನವಾಗಿ ನಡೆಯುವ ಪ್ರಕ್ರಿಯೆ. ಅದರಲ್ಲಿ ವೈವಿಧ್ಯತೆಯ ಪಾತ್ರ ಬಹಳ ದೊಡ್ಡದು. ಎಲ್ಲಿ ವೈವಿಧ್ಯತೆ ನಾಶವಾಗುತ್ತದೆಯೋ ಅಲ್ಲಿ ವಿಕಾಸದ ಪ್ರಕ್ರಿಯೆ ಕುಂಠಿತವಾಗುತ್ತದೆ. ಇದರಿಂದ ಅಲ್ಲಿ ಬದುಕುವ ಪ್ರಾಣಿ ಪಕ್ಷಿ ವೃಕ್ಷ ಸಂಕುಲಗಳು ವಿನಾಶದ ಸುಳಿಯಲ್ಲಿ ತಾವೇ ಹೋಗಿ ಸಿಲುಕಿಕೊಳ್ಳುತ್ತವೆ. ವಿಕಾಸದ ಹಾದಿಯಲ್ಲಿ ನಡೆಯಲು ವೈವಿಧ್ಯತೆಯೇ ದಾರಿದೀಪ. ನಮ್ಮ ಸಮಸ್ಯೆ ಭಾಷೆಗಳು ಕಣ್ಮರೆಯಾಗುತ್ತಿರುವುದು ಮಾತ್ರವೇ ಅಲ್ಲ. ಭಾಷೆಗಳ ಒಡಲಲ್ಲಿ ಇರುವ ಪದಗಳೂ ಸಹ ಕ್ರಮೇಣ ಕಾಣೆಯಾಗುತ್ತಿವೆ ಅಥವಾ ನಿರುಪಯೋಗಿಯಾಗುತ್ತಿವೆ. ಎಲ್ಲ ಭಾಷೆಗಳಲ್ಲೂ ಪದಗಳಿಗೆ ಇರುವ ಹಲವಾರು ಅರ್ಥಸಾಧ್ಯತೆಗಳೂ ಕಾಣೆಯಾಗುತ್ತಿವೆ. ನಮ್ಮ ತಂದೆ, ತಾತ ಮುತ್ತಾತ ಮೊದಲಾದವರು ತಮ್ಮ ದೈನಂದಿನ ಮಾತುಕತೆಗಳಲ್ಲಿ ಹಲವು ಗಾದೆ ನುಡಿಗಟ್ಟುಗಳನ್ನು ಬಳಸುತ್ತಿದ್ದರು. ನಾನೀಗ ಸಂಜೆಯ ವೇಳೆಗೆ ದಣಿದರೆ ‘ಸುಸ್ತಾಯಿತು’ ಎನ್ನುತ್ತೇನೆ. ನನ್ನ ತಂದೆ ಅಷ್ಟನ್ನು ಹೇಳಲು ತನ್ನ ಆಕಳನ್ನೋ ಕರುವನ್ನೋ ಯಾರೋ ಕದ್ದುಬಿಟ್ಟಿದ್ದಾರೆ ಎಂದು ಹೇಳುತ್ತಿದ್ದ. ಇಂಗ್ಲಿಶಿನಲ್ಲಿ ನಾನು ಆತಂಕಗೊಂಡಿದ್ದೇನೆ / ಗಲಿಬಿಲಿಗೊಂಡಿದ್ದೇನೆ ಎನ್ನಲು ‘ಬಟರ್‍ಫ್ಲೈಸ್ ಇನ್ ದ ಸ್ಟಮಕ್’ ಎನ್ನುತ್ತಾರಲ್ಲ ಅದರ ಬದಲು ನಾವೀಗ ಐ ಆಮ್ ಟೆರಿಫೈಯ್ಡ್ ಎಂದು ಬಿಡುತ್ತಾರೆ. ನಮ್ಮ ಹುಡುಗರು ಏನನ್ನಾದರೂ ಬೈಯಲೂ ಸಹ ಒಂದು ವಾಕ್ಯವನ್ನೋ ಪದವನ್ನೋ ಬಳಸದೆ ಕೇವಲ ‘ಶಿಟ್’ ಎಂದು ಬಿಡುತ್ತಾರೆ ನೋಡಿ ಹಾಗೆ. ಅವರಿಗೆ ‘ಶಿಟ್’ ಎಂಬುದನ್ನು ಪದಶಃ ವಿವರಿಸುವುದನ್ನು ಬಿಟ್ಟರೆ ಅದನ್ನು ಬೇರೆ ರೀತಿಯಲ್ಲಿ ಹೇಳಲೂ ಸಹ ಆಗದಷ್ಟು ಭಾಷಿಕ ದಾರಿದ್ರ್ಯ ಆವರಿಸಿದೆ. ಇಂಥ ದಾರಿದ್ರ್ಯ ನಮ್ಮ ವಿದ್ಯಾವಂತ ಪೀಳಿಗೆಯನ್ನು ಆವರಿಸಿರುವುದು ನಿಜವಾದ ಆತಂಕದ ಸಂಗತಿ.

ಈಗ ಸದ್ಯ ತೇಜಗಡದಲ್ಲಿ-ನೀವು ಅಲ್ಲಿಂದ ಬಂದ ಮೇಲೆ- ಏನಾಗುತ್ತಿದೆ?

2006 ರಲ್ಲಿಯೇ ನಾನು 2016ಕ್ಕೆ ಅಲ್ಲಿಂದ ಹೊರಡಲು ನಿರ್ಧರಿಸಿದ್ದೆ. ಹತ್ತುವರ್ಷಗಳ ಅವಧಿಯಲ್ಲಿ ಅಲ್ಲಿನ ಯುವಕರಿಗೆ ತರಬೇತಿ ನೀಡಿ ಅವರಿಗೆ ಹಲವು ಬಗೆಯ ಜವಾಬ್ದಾರಿಗಳನ್ನು ನೀಡಿ ಸಜ್ಜುಗೊಳಿಸಿದೆ. ಅದೀಗ ಭಾಷಾ ಅಕಾಡೆಮಿಯ ರೂಪದಲ್ಲಿ ಕೆಲಸಮಾಡುತ್ತಿದೆ. ಅಲ್ಲಿನ ಯುವಕರು ತಮಗೆ ಬೇಕಾದ ಅಭಿವೃದ್ಧಿಯ ಮಾದರಿಯನ್ನು ತಾವೇ ರೂಪಿಸಿಕೊಂಡಿದ್ದಾರೆ. 2016ರಲ್ಲಿ ನಾನು ಅಲ್ಲಿಂದ ಹೊರಟಾಗ ಯಾರೂ ಅಳಲಿಲ್ಲ. ಮುಂದೇನು ಮಾಡಬೇಕೆಂದು ಕೇಳಲಿಲ್ಲ. ನನ್ನ ಬದುಕಿನ ಉಳಿದ ಸಮಯವನ್ನು ಅಸ್ಸಾಮಿನ ತೇಜಪುರದಲ್ಲಿ ಕಳೆಯಲು ನಿರ್ಧರಿಸಿದ್ದೆ. ಆದರೆ ಕಲ್ಬುರ್ಗಿಯವರ ಘೋರ ಹತ್ಯೆಯ ನಂತರ ಧಾರವಾಡಕ್ಕೆ ಬರಬೇಕೆನಿಸಿ ಬಂದು ನೆಲೆಸಿದೆ.

ಹಾಗೆಯೇ ಪಿಎಸ್‌ಎಲ್‌ಐನ ಯೋಜನೆಯ ಎಲ್ಲಾ ಸಂಪುಟಗಳು 2020ಕ್ಕೆ ಪ್ರಕಟಗೊಳ್ಳುತ್ತವೆ. 2021ಕ್ಕೆ ಇನ್ನೊಂದು ಸುತ್ತಿನ ಭಾಷಾಗಣತಿಯನ್ನು ನಡೆಸಲು ಸಮರ್ಥ ತಂಡವೊಂದಕ್ಕೆ ತರಬೇತಿ ನೀಡಿ ಈಗಾಗಲೇ ಸಜ್ಜುಗೊಳಿಸಲಾಗಿದೆ. ಇದರ ನಂತರ 2031ಕ್ಕೆ ಸುಮಾರು 30ವರ್ಷ ವಯೋಮಾನದ ಯುವಕರ ತಂಡವೊಂದಕ್ಕೆ ಕಳೆದ ಆರುವರ್ಷಗಳಿಂದ ತರಬೇತಿ ನೀಡಿ ಭಾಷಾಗಣತಿಯ ಕಾರ್ಯವನ್ನು ಸ್ವಯಂಪೂರ್ಣ ವ್ಯವಸ್ಥೆಯಂತೆ ಕೆಲಸ ನಿರ್ವಹಿಸಲು ಸಾಧ್ಯವಾಗುವಂತೆ ಪ್ರಯತ್ನ ನಡೆದಿದೆ.