1
ಅವ್ವಳ ಕೈಬಳೆ ನಾಡಿ

ಕನಸು ಕಸೆದ ಓಣಿಯಲಿ ನೆನಪುಗಳ ಹುಡುಕುತ್ತಾ ಸಾಗಿದೆ
ಅವ್ವಳ ಕೈಬಳೆ ನಾಡಿಯಲಿ ಹೆಜ್ಜೆಗಳ ನುಡಿಸುತ್ತಾ ಸಾಗಿದೆ

ಪ್ರೀತಿ ಹಂಚಿ ಕುಡಿದ ಬಟ್ಟಲಲಿ ಸ್ವಾರ್ಥದ ನೆರಳು ತುಂಬಿದೆ
ಅವ್ವಳ ಎದೆಯ ಜೋಳಿಗೆಯಲಿ ಕನಸುಗಳ ಹೆಣೆಯುತ್ತಾ ಸಾಗಿದೆ

ಮನಸು ಆಲಿಸುವ ಕಿವಿಗಳು ಮಾತು ಬದಲಿಸುವ ಊಸರವಳ್ಳಿ
ಅವ್ವಳ ಒಡಲ ಧ್ಯಾನದಲಿ ಮುತ್ತುಗಳ ಸವಿಯುತ್ತಾ ಸಾಗಿದೆ

ಕೋಮು ನಾಲಿಗೆಯಲಿ ಹೊಂಚಿ ಹಾಕುವ ಅಸತ್ಯದ ನಾತವು ತುಂಬಿದೆ
ಅವ್ವಳ ಉಡಿಯಲಿ ಸೌಹಾರ್ದ ಬೀಜಗಳ ಹೀರುತ್ತಾ ಸಾಗಿದೆ

ಕೂಡಿಬಾಳುವ ನೆಪದಲಿ ದೇಹ ಹೀರುವ ಕೊಳೆತ ಮನಸ್ಸುಗಳ ಕಂಡೆ
ಅವ್ವಳ ಕನಸಲಿ ಮುಗ್ಧ ಚಂದಿರನ ನಗು ಸವಿಯುತ್ತಾ ಸಾಗಿದೆ

ಎದೆಯ ರೆಕ್ಕೆಗೆ ಹೆಗಲಾದ ಸಖಿಯ ನೋಟವು ಬಿರಿಯಾಗಿದೆ‘ಕಿರಸೂರ’
ಅವ್ವಳ ಎದೆಯುಸಿರಲಿ ಮತ್ತೆ ಮತ್ತೆ ಚಿಗುರುತ್ತಾ ಸಾಗಿದೆ

2
ಅಳುವ ಮೋಡದ ಕಣ್ಣಿಗೆ

ಅಳುವ ಮೋಡದ ಕಣ್ಣಿಗೆ ನೆಲದ ಬಾಯಿ ಸಿಕ್ಕಾಗ ಎಂಥಾ ಚಂದ
ಕೊರಗೊ ರೆಂಬೆಯ ಒಡಲಿಗೆ ಮಣ್ಣ ನಗು ಸಿಕ್ಕಾಗ ಎಂಥಾ ಚಂದ

ಹಸಿರೆಲೆ ಮೇಲೆ ನಗು ಕಳಚಿಟ್ಟ ಚಿಟ್ಟೆಯ ಮನಸ್ಸು ಬರಿದಾಗಿದೆ
ಮರಗೋ ದುಂಬಿಯ ಒಡಲಿಗೆ ಬೆಳಕ ಸಿರಿ ಹೊಕ್ಕಾಗ ಎಂಥಾ ಚಂದ

ಮುಳ್ಳು ಪಾದದ ಮೇಲೆ ನವಿಲು ಕಣ್ಣಿನ ನೋಟ ಶಾಂತವಾಗಿದೆ
ಕುಣಿಯೋ ರೆಪ್ಪೆಯ ಕರುಳಿಗೆ ಆಗಸ ನಕ್ಕಾಗ ಎಂಥಾ ಚಂದ

ಅಲೆವ ನದಿಯ ಕಣ್ಣುಗಳು ಬಿಸಿಲ ನೆತ್ತಿಗೆ ಮುದುಡಿ ಕುಂತಿವೆ
ದುಡಿವ ಕೊರಳುಗಳಿಗೆ ಮೋಡ ಹನಿಗಳಾದಾಗ ಎಂಥಾ ಚಂದ

ಬತ್ತಿದ ಕಣ್ಣ ರೆಪ್ಪೆಯು ಮಡುಗಟ್ಟಿ ದುಃಖದ ಕೆರೆಯಾಗಿದೆ ಕಿರಸೂರ
ಮನದ ಗಾಯಕೆ ಬುದ್ಧನ ಕರುಣೆ ಮೂಡಿದಾಗ ಎಂಥಾ ಚಂದ

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.