ಅಲೆಮಾರಿ ಚುಕ್ಕಿಗಳು

ತಲೆಗೆ ಸುತ್ತಿದ ನಿರಿಗೆ ಸರಿಪಡಿಸುತ್ತಾ
ಅಂಗಳದ ತುದಿಯಲಿ
ಹೊರಳಾಡುವ
ಎಳೆಯ ಪಾದದ ತುಟಿಗೆ ಮುತ್ತಿಡುತ್ತಾ
ನೆಲಗಂಬಕ್ಕೆ ಆತುಕೊಂಡಳು
ನಿಟ್ಟುಸಿರ ಕಾವಿನಲಿ

ಮೋಡದ ಮರೆಯಲಿ
ಚಂದ್ರ ನಿದ್ಯಾಗ ಹೊಕ್ಹಂಗ
ಚುಕ್ಕಿಗಳು ಅಲೆಮಾರಿಯಾಗಿ ಕಾಣಿಸಿದವು

ಕಾಲ ಬೆರಳಡಿಯಲಿ
ಮುಳ್ಳಿನ ಗಾಯ ಹೊತ್ತ
ಹೂವಿನ ದನಿಗಳು
ಸಾಲು ನೆರಳಿನ ಇರುವೆಯ ಹೆಜ್ಜೆಗಳಾಗಿವೆ
ಅವಳ ಮೈಮಿಡಿವಳಗ
ನಿರಂತರ ಉರಿವ ಚಿಮಣಿ ಬತ್ತಿ
ಹಾಸಿಗೆಯ ಬೆಚ್ಚನೆಯ ಕಣ್ಣುಗಳಲಿ
ತೇವಕಾಯುವ ನೇಯ್ಗೆ

ಕತ್ತಲ ಕೂಟದಲಿ ಕೂದಲ ಹೆರಳೊಳಗೆ
ಬೀಡುಬಿಟ್ಟ ಚುಕ್ಕಿಗಳ ವಿಹಾರ
ಗುಪ್ತ ನಿದ್ರ್ಯಾಗ ಸಿಕ್ಹಂಗ
ಅವಳ ರೆಕ್ಕೆಗಳಲಿ ಬೆವರಿನ ದೂಪವಾಗಿ ಗೋಚರ

ಪಾದಗಳಿಗೆ ನೆಲದ
ನೆರಳಾಗಿ ಮೂಡಿದ ಕಂದೀಲು
ನೆನಪುಗಳ ನೆಲೆಯಾಗಿ
ಮೂಡುವ ಹೊತ್ನ್ಯಾಗ
ಹೊಗೆ ಜಂತಿಯ ಕಣ್ಣಾಗ ನವಿಲುಗರಿಯಾಗಿ ಹರಿಡಿದ್ಹಂಗ

ಹೀಗೆ!
ಮಿನುಕು ನೋಟದ ಬಾವಲಿ ಕಣ್ಣುಗಳ ಹಾಗೆ
ಇರುಳ ಮೈ ಸುತ್ತುವ ಅವಳ ಯಾನದಲಿ
ಕರುಳ ಬಳ್ಳಿಯ ಬೇರುಬಿಟ್ಟ
ಚಿಮಣಿಯ ಬತ್ತಿಯ ನಾಡಿ ಜೀವ ಐತಿ

ಹಸಿವಿಗೆ ಗೋರಿಯಾದ ಪ್ರಸಾದ

ಥರಗುಟ್ಟುವ ಚಳಿಯ ಹೊಡೆತಕ್ಕೆ
ಬಿರುಕ ನೆಲದಂತಾದ ತುಟಿಗಳ ಹೊತ್ತು
ಗಾಳಿ ಗೋಪುರಗಳ ದಾಟಿ
ಬೆಂಕಿಯ ನಾಲಿಗೆಯಲಿ ಬೆಚ್ಚನೆಯ ಕಾವಿಗೆ
ದಾಪುಗಾಲಿಟ್ಟಾಗಲೇ ಘಂಟೆಯ ನಾದ ಢಣ! ಢಣ!

ಅವುಡುಗಚ್ಚಿ ಓಟಕಿತ್ತಿದ ಓಣಿಯ ಹೆಂಗಸರೆಲ್ಲಾ
ನೆತ್ತರದ ಪಾದಗಳಲಿ
ಸೀಳುನಾಯಿಗಳ ತೆವಲುಗಳ ನುಂಗಿ
ದ್ವಾರಬಾಗಿಲದ ಹೊಸ್ತಿಲಲಿ
ಸಾಲುಗಟ್ಟಿವೆ ಪ್ರಸಾದದ ಸರದಿಯ ನೋಟದತ್ತ

ಕರುಳು ಕುಡಿಗಳ ಬಗಲಲ್ಲಿ ತಿವಿಯುತ
ಬೀದಿ ಬದಿಯಲ್ಲಿ ಕಾಳಗ ಹೂಡಿದಂತೆ
ಅನ್ನದಗಳುಗಳ ನೆಕ್ಕಲು ಹಂದಿಗಳ ತಿಕ್ಕಾಟ
ಎಂಜಲೆಲೆಯ ಮ್ಯಾಲೆ ಕಣ್ಣಿಡುವ
ಬಳಗದ ಬರೆ ತಣಿಸಲು
ಕಾತುರದ ನಿರ್ಧಾರದ ಹೊಸ್ತಿಲಲಿ ಕಾಗೆಗಳ ಕೂಗಿನಾಟ

ನಿಬ್ಬೆರಗಣ್ಣಲಿ ಕಲ್ಲುದೇವರ ಮುಂದೆ
ಮುಂಗೈಚಾಚಿದ ನಂಬಿಕೆಗಳು
ಹಸಿವಿನ ಕುಣಿಕೆಗೆ ಸಿಲುಕಿದ್ದು ಸೋಜಿಗ!

ಅಳುವ ಮಗುವಿನ ನೆತ್ತಿಗೆ
ಅಂಗಾರದ ತಿಲಕವಿಟ್ಟು ಪ್ರಸಾದ ಚಪ್ಪರಿಸುವ
ಗಂಟಲುಗಳು ಮೂಕವೇದನೆಯ ರೋಧನ
ಹಸಿವಿಗೆ ಸಮಾಧಿಯಾದ ಪ್ರಸಾದ
ನಿಟ್ಟುಸಿರುಗಳ ನೆಲೆಗಳಿಗೆ
ವಿಷದ ಬಟ್ಟಲು ಉಣಬಡಿಸಿದ್ದು ಖೇದಕರ

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.

 

(ಕಲೆ: ವಿನ್ಸೆಂಟ್ ವ್ಯಾನ್ ಗಾಗ್)