ದಾರದ ಚಿತ್ತ

ತೊಟ್ಟಿಲು ತೂಗುವ ಕೈಗಳಲಿ ಹರಿದ ಹಗ್ಗದ ತುಂಡೊಂದು
ಮನಸ್ಸುಗಳ ಬೆಸೆವ ಸಂತನಂತೆ ಕಂಡಾಗ
ಚದುರಿದ ಆತ್ಮಗಳ ನಡುವೆ ನಿಂತು ಬಿರುಕ ಬಿಟ್ಟ ಹಗ್ಗದ ಕಣ್ಣೊಳಗೆ
ಹಸಿದ ಕರುಳ ತಣಿಸಿ ಮನಸ್ಸುಗಳ ಸೆಳೆವ ದಾರದ ಎಳೆಗಳ ನೋಟ

ಮುದುಡುವ ಹೂವಿನ ಎದೆಗಳಲಿ ಮಾಲೆಯಾಗಿಸುವ ಸೂಪ್ತ ನಕ್ಷೆ
ಹೆಂಗಳೆಯ ಮುಡಿಯೊಳಗೆ ಆಗಸ ತುಂಬುವ
ಈ ದಾರದ ಎಳೆಯೊಳಗೆ ಅವಳು ನಿಶ್ಯಬ್ಧ ಎರೆಹುಳುವಿನ ಧ್ಶಾನ

ಕೈಗಳ ಬೆರಳಡಿ ಹೊರಳಾಡುವ ದಾರದ ಎಳೆಯೊಂದು
ತಪಸ್ಸಿಗೆ ಸಿದ್ಧಕೊಂಡಂತೆ ಗೋಚರಿಸುವಾಗ
ಅನಾಥವಾಗಿ ಹಲುಬಿ ಶವಾಗಾರದ ಪಾಲಾಗುವ ಚಿಂದಿ ಬಟ್ಟೆಗಳನು ಕರುಳ ತೆಕ್ಕೆಗೆ ಹಾಕ್ಕೊಂಡು ಹಾಸಿಗೆಯ ಕಣ್ಣಾಗಿ
ನಿಟ್ಟುಸಿರ ಜೋಗುಳವಾಗಿ ಕಾಣುವಳು ನೆಲದೊಳಗೆ

ಮುಕ್ಕರಿಸಿ ಮುಗಿ ಬೀಳುವ ಗೆದ್ದಲುಗಳ ಸಂತೆಯೊಳಗೆ
ಅವಳು ತುಂಡು ದಾರಗಳ ಹೊಸೆದು ಜಂತಿಗೆ ನೇತುಬಿಟ್ಟ ನೆಲುಗಣಿ
***
ಬೆದೆಗೆ ಬಂದ ಎಮ್ಮೆಯ ಕೊರಳಲಿ ಈ ಹಗ್ಗದ ನಂಟು
ಮಾಯಾವಿ ಕೋಲಿನಂತೆ
ಪದರು ಪದರಾಗಿ ಚದುರಿ ಬೆಟ್ಟದ ತುದಿಯವರಿಗೂ ಹೊಕ್ಕು
ಗರಿಕೆ ಹುಲ್ಲಿನ ದೇಬಾಳೆ ಬೇರಿನ
ನೆಲೆಯಂತೆ ಕಾಣುವುದು ಬಯಲು ನಗೆ ಬೀಸಿ

ಎರೆಹೊಲದ ಬಿರುಕ ನೆರಳಡಿ ಕೂರಿಗೆ ದಿಂಡಿಗೆ ಹೆಗಲಾಗಿ
ಕೀಲುಬಿಟ್ಟ ಬಂಡಿಯ ಚಕ್ರದಲಿ ಬೆಸೆದು ಬೇರಾಗುವ ನೊಗವಾಗಿ
ಮಳೆಹನಿಗಳ ರಭಸದಲಿ ಕಿಂಡಿಯಾಗಿರುವ
ಗುಡಿಸಲುಗಳ ಕಣ್ಣೊಳಗೆ ತೇವ ಕಾಯುವ ಬಂಧು
ಅವಳ ಉಡಿಯಲಿ ಉರಿಯ ಪಾದಗಳ ಮೈಯೊಳಗೆ
ಉಯ್ಯಾಲೆ ನೆತ್ತಿಯಲಿ ಕುಣಿವ ನವಿಲು ಗರಿಗಳ ನಕ್ಷೆ
***
ಈ ಹಗ್ಗದ ನಾಡಿಯೊಳಗೆ ಬೆಸುದು ಬೇರಾಗುವ ಕರುಳಿನ ಧ್ಯಾನ
ಈ ಹಗ್ಗದ ಚದುರು ಮುಖಗಳ ನಡುವೆ ಸೀಳುನೋಟದ ದಾರಿಗಳು
ಎಳೆಯ ಪಾದಗಳ ರೆಕ್ಕೆಗೆ ಉಯ್ಯಾಲೆ
ಹಸಿರು ಹೊಲದ ಗಡಿಯುದ್ಧು ನೆದುರುಗೊಂಬೆಯ ಲಾಡಿ ತುಂಬಿದ
ಹಗ್ಗದೊಳಗೆ ರೇಷ್ಮೆ ಹುಳುವಿನ ರಕ್ತಚರಿತ್ರೆ

 

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.

 

(ಕಲೆ: ಉಂಬರ್ತೋ ಬೊಚ್ಚೋನಿ, ಇಟಲಿಯ ಸುಪ್ರಸಿದ್ಧ ಕಲಾವಿದ)