ಹೆಗಲು ತೂಗುವ ನಕ್ಪತ್ರ
ಬತ್ತಿದ ಬೆವರು ತೂಗುವ ನಕ್ಷತ್ರದ ನಗು ನನ್ನೊಳಗೆ ಶಾಶ್ವತ
ಒಲೆಯೂದಿ ಕಣ್ಣುಗಳ ತಿಕ್ಕುವ ಅವಳ ಕೆನ್ನೆಗೆ ಬಹಳ ಹಿತ
ಹಾಸಿಗೆಯ ಸುರುಳಿಗೆ ಕಚಕುಳಿ ಇಕ್ಕುವ ನಕ್ಷತ್ರದ ನೋಟ
ಬಳಲಿ ಬಾಯಾರಿದ ತುಟಿಗಳ ತೆಕ್ಕೆಗೆ ಯಾವಾಗಲೂ ಶಾಂತ
ಮುರಿದ ಟೊಂಗೆಯಲಿ ನೇತಾಡುವ ಅವಳ ಚಿಗುರುಗಳು
ನಕ್ಷತ್ರದ ಜೋಳಿಗೆಯಾಗಿ ಹೆಗಲು ಕಾಯುವ ಶಾಂತಿದೂತ
ಕನಸುಗಳ ಕನವರಿಕೆಯಲಿ ಒಂಟಿಯಾದ ಏಕಾಂತಕೆ
ಮುಂಗೈ ಚಾಚಿದ ನಕ್ಷತ್ರಗಳು ಉಯ್ಯಾಲೆ ತೂಗುವ ಚಿತ್ತ
ಕಾಡೊಳಗೆ ಹೊಕ್ಕು ಜೀವ ತೇಯುವ ಅಲೆಮಾರಿ ನಕ್ಷತ್ರಗಳು
ಹೆಗಲು ನಾಡಿಗೆ ಮುಕ್ಕಿದ ಸುಕ್ಕುಗಳ ಮುಕ್ಕುವ ಅವಧೂತ
ಅಲೆಗಳಿಗೂ ಮಿಗಿಲಾಗಿ ಕೊರಳು ಕಾಯೊ ನಕ್ಷತ್ರಗಳು
ಚದುರಿದ ದೀಪಗಳ ನಿಟ್ಟುಸಿರಿಗೆ ಅನುಗಾಲದ ಅಮೃತ
ಗವ್ವೆನ್ನುವ ರಾತ್ರಿಯ ತಿಕ್ಕಲುಗಳ ಮೆಟ್ಟಿ ನಿಂತ ನಕ್ಷತ್ರಗಳು
ಒಂಟಿ ತೆಕ್ಕೆಗೆ ಜೋಗುಳವಾಗಿ ಹರಡಿಕೊಂಡವು ಸುತ್ತಮುತ್ತ
ನಕ್ಷತ್ರದ ನಕಾಶೆಯಲ್ಲಿ ಅವಿತ ಕಿರಸೂರ ಕನಸುಗಳು
ಎಲ್ಲೆಗೂ ಮಿಗಿಲಾಗಿ ಸಹಚರತೆ ಕಟ್ಟುವ ದಿಟ್ಟ ನೋಟದತ್ತ
Ollheya gazal