ಹೊಸ್ತಿಲ ತಳದೊಳಗೆ
ಹೆಗಲಿಗೆ ಬಿಗಿದ ರುಮಾಲು ಬೆಳಕನರಿಸಿ ಹೊರಡುವಾಗ
ಅವಳು ಕೈಬಳೆ ಸದ್ದಲಿ ಸಗಣಿ ಸಾರಿಸಿ ಕಾಲ್ಗೆಜ್ಜೆ ನುಡಿಸುವಳು
ಅವಳ ಮೈಬೆವರ ವಾಸನೆಗೆ ತೆವಲು ಹಾಕುವ ಬೀದಿ
ಹೊಸ್ತಿಲ ನೆರಳಿಗೆ ಬೆದರುಗೊಂಬೆಯಾಗಿ ನಿಲ್ಲುವುದು
ಅನೇಕಾನೇಕ ರಾತ್ರಿಗಳ ಕುಡಿದ ಈ ವಸ್ತಿಲೊಳಗೆ
ಅವಳ ಕಣ್ಣೀರ ಯಾತ್ರೆಗಳ ನಡಿಗೆ ಅಮೃತ ಪಾತ್ರೆಯಾಗಿದ್ದು ದಿಟ
ಅಂಗಳದ ಕಣ್ಣುಗಳಿಗೆ ನೆತ್ತರದ ನಾಡಿಯಾಗಿ ಗೋಚರಿಸೋ ಹೊಸ್ತಿಲು ದಿಕ್ಕಿರದ ಹಕ್ಕಿಗಳ ಕೊರಳಿಗೆ ಶಾಶ್ವತ ನೆಲೆಯ ಗೂಡು
ನೆಲವೇ ಧೂಳಿನ ಬಲೆಯಲ್ಲಿ ಹೊರಳಾಡಿ ಹಸಿರ ತೆಕ್ಕೆಗಾಗಿ ಹಪಹಪಿಸುವಾಗ ಬಾಗಿಲೇ ಇರದ ಮನೆಯೊಳಗೆ
ಹೊಸ್ತಿಲು ಮಾತ್ರ ನಿರಾಧಾರದ ನಿದ್ರೆಗೆ ಜಾರದೆ ಸದಾ ಎಚ್ಚರ!
ಒಮ್ಮೊಮ್ಮೆ ತನ್ನವನ ನೆರಳಾಗಿ ಗೋಚರಿಸೋ
ಈ ಹೊಸ್ತಿಲ ತಳವೇ ಅವಳ ಕನಸುಗಳ ನಿಧಿ