ತೇವ ಕಾಯುವ ಬುತ್ತಿ

ಸಾಲುದೀಪದ ಹಾಗೆ
ಕೂಲಿಯ ಬೆನ್ನುಬಿದ್ದ
ಇರುವೆಗಳ ನೆತ್ತಿಯಲಿ
ಬುತ್ತಿಯ ಗಂಟು
ಜೋಗುಳದ ನಾದದಂತೆ

ಕೂಗುಹಾಕಿ ಬಳಗ ಕಲೆ ಹಾಕುವ
ಕಾಗೆಗಳ ಕಂಠದಲಿ
ಅನ್ನದಗಳುಗಳು ಜೋಗುಳದ
ನೆಲೆಯಾಗಿ ಗೋಚರ

ಬಿಸಿಲಿಗೆ ಬೆನ್ನುಮಾಡಿದ
ಮಧರಂಗಿ ಕೈಯಾಗ
ಮಣ್ಣ ಹೆಂಟೆಗಳ ಚಿತ್ರ ಮೂಡಿಸಿದ
ಬುತ್ತಿಯ ಒಡಲು
ದೀಪದ್ಹಂಗ ಹೊಳೆದಾದೊ

ಗೋಡೆ ಕಣ್ಣೊಳಗೆ ಬೆಸೆದು ಹಣ್ಣಾಗುವ
ಗೌಂಡಿಯ ಹೊಕ್ಕಳಿಗೆ
ಈ ಬುತ್ತಿಯ ಗಂಟಿನ ಒಳರಸ
ಕರುಳ ಲೇಪನದಂತೆ

ಸಜ್ಜೆಯ ತೆನೆ ಕೊಯ್ಯುವ
ಬಗ್ಗಿ ಗದ್ದೆಯ ಕಳೆ ಕೀಳುವ
ಹೆಜ್ಜೆ ಸದ್ದಿನ ರಸ್ತೆಯ ಇಕ್ಕೆಲಗಳಲಿ
ಬೆಟ್ಟದ ನೆತ್ತಿಗೆ ಸಿಲುಕಿ
ಬಂಡೆಯ ಅಂಗಳದಲಿ
ಹೂವಿನ ದನಿ ಕೊಡುವ
ಎದೆಗಳಲಿ
ಬುತ್ತಿಯ ಗಂಟು
ಬೆನ್ನ ಬರೆಗಳ ಕಾವು ತಣಿಸೋ
ನವ ಚಿಗುರಿನ ತಾಣ

ಚುಕ್ಕಿಗಳ ಎದೆಗೊತ್ತಿಕೊಂಡು
ಕುರಿಹಿಕ್ಕೆಗಳ ಗುಡಿಸುವ
ಅವಳು
ಚಂದಿರನ ತಿಳಿಗೊಳದಲಿ
ಮಣ್ಣ ನಾಲಿಗೆಯ ಹಾಸಿ
ಕೇರಿಯೊಳಗೆ
ಬೆವರ ದೂಪದ ನದಿಯಾಗಿ ಹರಿದಾಳ

ಅವಳೆಂದರೆ
ಬುತ್ತಿಯ ಕಣ್ಣಾಗಿ
ಬತ್ತಿದ ನಾಡಿ ತಣಿಸೋ ನೈಜ ಕಣಜ

 

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.