ಅವಳ ಬೇಡಿಕೆ

‘ಇವತ್ತೇನು ಮಾಡುವೇ?’
ನೀರು ಬಿಡದ ಬಟ್ಟೆಯ
ಚುಡಾಯಿಸುವ ನೋಟ!

ಗಂಟು ಬಿಚ್ಚಿದರೆ,
ತಿಳಿ ಬಣ್ಣದ ಬಿಳಿಯುಡುಪು
ಮೈಯಿಗೆ ಒತ್ತಿ ಕೂತ,
ಬದುಕಿಸುವ ‘ಉಸಿರು’
ಶಾಲನ್ನು ಕುರ್ಚಿಗೆ ಹೊದೆಸಿ
ಬುತ್ತಿ ಕಟ್ಟಿ ಹೊರಟಳವಳು

ಬಗಲಲಿ ಜೋತ ವೆನಿಟಿ ಬ್ಯಾಗು,
ಹೊಸ ಸ್ಟೈಲಿನಿಂದ ಕುಳ್ಳಗಾದ ಜುಟ್ಟು,
ಒಳ ತೊಡುಗೆ ಎಳೆದ ರೇಖೆಗಳ
ಮುಚ್ಚುವುದಿರಲಿ, ಮರೆಮಾಚದೂ..
ಮರೆತಿದ್ದ ಶಾಲಿಗಾಗಿ ಬೇಡಿಕೆ!
ಅವಳ ಒಳತೊಡುಗೆಯ ಬ್ರಾಂಡ್‌ಅನ್ನು
ಪ್ರಪಂಚವೇ ಕೂಗಿ ಹೇಳುತ್ತದಾದರೂ
ಕಾಣುವ ಕಣ್ಣುಗಳಿಂದಲೆ ಅರಿವು ಸಿದ್ಧಿ!

ವೇಗದ ನಡಿಗೆಯಲ್ಲೇ
ಪ್ರಾರ್ಥನೆಯಿಡುತ್ತಾಳೆ ಆಕೆ,
ಮಳೆಯ ತಡೆಗಾಗಿಯಂತೂ ಅಲ್ಲ!
ತೊಯ್ದ ದೇಹದ ಒಳ ನೋವನೆಲ್ಲ
ತಿಳಿಯಾಗಿ ಜಗತ್ತೂ ಕಾಣಲೆಂದು

ಗಾಢ ದೇಹದಲಿ ಅಳಿಸಲಾಗದ ಸಾವಿರ ಕಲೆಗಳಿವೆ!

ಕೀರ್ತಿ ಮೂಲತಃ ಉಡುಪಿಯ ಬೈಂದೂರಿನವರು.
ಸದ್ಯ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಕವನ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸ