ನನಗೆ ತಣ್ಣಗಿನ ನೀರೆಂದರೆ ನಡುಕ. ಹಾಗಾಗಿ ನೀರಿನಲ್ಲಿ ಮುಳುಗಲು ಹಿಂದು ಮುಂದು ನೋಡುತ್ತಿದ್ದೆ. ಹಾಗೇ ನೋಡಿ ವಾಪಸ್‌ ಬರುವುದು ಅಂತ ನನ್ನ ಇರಾದೆ ಇತ್ತು. ನನ್ನ ಸ್ನೇಹಿತೆ ಸಂಗಮದಲ್ಲಿ ಸ್ನಾನ ಮಾಡುವೆ ಎಂದಾಗ ಅವರ ಜೊತೆ ಹೋದೆ. ಒಂದು ದೋಣಿ ನದಿಯ ಸಂಗಮದ ಜಾಗಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಬಟ್ಟೆ ಬದಲಿಸಲು ಒಂದು ತಡಿಕೆಯನ್ನು ಮಾಡಿದ್ದರು ದೋಣಿಯ ಮೇಲೆಯೇ. ನಾನೂ ನೀರಿನಲ್ಲಿ ಇಳಿದು ಮುಳುಗು ಹಾಕಿ ಬರುತ್ತೀನಿ ಅಂದುಕೊಂಡರೂ ಯಾಕೋ ಆಗುತ್ತಲೇ ಇರಲಿಲ್ಲ. ಸುಮ್ಮನೇ ನಿಂತೇ ಇದ್ದೆ. ನನ್ನ ಸ್ನೇಹಿತೆ ಬಂದು ನನ್ನನ್ನು ಅನಾಮತ್ತು ನೀರಿನಲ್ಲಿ ಮುಳುಗಿಸಿದರು. ಅಷ್ಟೇ! ಅದೆಂತಹ ಬಿಡುಗಡೆಯ ಭಾವ!
‘ದೇವಸನ್ನಿಧಿ’ ಅಂಕಣದಲ್ಲಿ ಕುಂಭಮೇಳಕ್ಕೆ ಭೇಟಿ ನೀಡಿದ ಅನುಭವದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

ಬೆಂಗಳೂರಿನಿಂದ ಪ್ರಯಾಗಕ್ಕೆ ಹೊರಟ ವಿಮಾನದಲ್ಲಿ ನನ್ನ ಪಕ್ಕ ಉಡುಪಿಯ ಸುಮಾರು ನನ್ನದೇ ವಯಸ್ಸಿನ ಒಬ್ಬರು ಪಕ್ಕದಲ್ಲಿ ಕುಳಿತಿದ್ದರು. ಅವರ ಪಕ್ಕ ವಯಸ್ಸಾದ ಅವರ ತಂದೆ. ಒಬ್ಬರಿಗೊಬ್ಬರ ಪರಿಚಯ ಆದಂತೆ ಅವರು ತಮ್ಮ ತಂದೆಯನ್ನು ಕುಂಭಮೇಳಕ್ಕೆ ಕರೆದುಕೊಂಡು ಹೋಗುತ್ತಿರುವುದು ತಿಳಿಯಿತು. ಇಲ್ಲ ಇಲ್ಲ ..ಊಹೂಂ ಅವರು ವಯೋವೃದ್ಧ ತಂದೆಯನ್ನು ಕುಂಭಮೇಳದ ಜನಜಂಗುಳಿಯಲ್ಲಿ ಬಿಟ್ಟು ಬರಲು ಹೊರಟವರಲ್ಲ. ಪ್ರತಿ ಕುಂಭಮೇಳಕ್ಕೂ ಹೋಗುತ್ತಿದ್ದ ತಂದೆಯ ಜತೆ 2019ರ ಪ್ರಯಾಗ ಕುಂಭಮೇಳದ ಅನುಭವದಲ್ಲಿ ತಾನೂ ಜತೆಯಾಗಲು ಹೊರಟ ಮಗ ಆತ.

ಕುಂಭಮೇಳ ಅಂದರೆ ಸಾಕು ಹತ್ತಾರು ಚಿತ್ರಗಳು ನೆನಪಿನ ಚಿತ್ರಶಾಲೆಯಲ್ಲಿ ಚಿತ್ತಪಟದಲ್ಲಿ ಹಾದು ಹೋಗುತ್ತವೆ. ವಯಸ್ಸಾದ ತಂದೆ ತಾಯಿಯರನ್ನು ಬಿಟ್ಟು ಹೋಗುವ ಜಾಗ ಮಾತ್ರ ಎನ್ನುವ ವಿದೇಶಿ ದೃಷ್ಟಿಕೋನ ಒಂದು ಕಡೆಯಾದರೆ, ಜೀವಮಾನದಲ್ಲಿ ಒಮ್ಮೆಯಾದರೂ ಕುಂಭಮೇಳಕ್ಕೆ ಹೋಗಿ ನದಿಯಲ್ಲಿ ಮಿಂದು ಬರುವ ಆಸ್ತಿಕ ಭಾವ ಮತ್ತೊಂದೆಡೆ. ಜೊತೆಗೆ ಅಂತಹದ್ದೊಂದು ಬೃಹತ್‌ ಸಮ್ಮೇಳನವನ್ನು ನೋಡುವ ಕುತೂಹಲಿಗರು, ಫೋಟೋಗ್ರಾಫರ್‌ಗಳು ಅಷ್ಟೊಂದು ಸಂಖ್ಯೆಯಲ್ಲಿ ಸೇರುವ ನಾಗಾ ಸಾಧು ಸನ್ಯಾಸಿಗಳನ್ನು ನೋಡುವ ಅವಕಾಶ ಮತ್ತೆಲ್ಲಿ ಸಿಗುತ್ತೆ! ಅದರ ಜೊತೆ ಸಿಗುವ ಕಥೆಗಳು… ಆಸ್ತಿಕ ಮನಸ್ಸುಗಳ ಜೊತೆ ಅಲೆಮಾರಿ, ಕುತೂಹಲಿ ಮನಸ್ಸುಗಳ ಸಂಗಮ ಕುಂಭಮೇಳ. ಇದರ ಬಗ್ಗೆ ಅನೇಕ ವಿದೇಶೀ ಡಾಂಕ್ಯುಮೆಂಟರಿಗಳಿದ್ದರೂ, ಅವೆಲ್ಲಾ ತಾಂತ್ರಿಕವಾಗಿ ಅದ್ಭುತ ಅನ್ನಿಸಿದರೂ ಕುಂಭಮೇಳದ ನಿಜವಾದ ಅಂತರಂಗವನ್ನು ಹಿಡಿಯಲು ಸೋತಿವೆ ಅಂತಲೇ ಅನ್ನಿಸುತ್ತೆ ನನಗೆ. ಯಾಕೆಂದರೆ ಕುಂಭಮೇಳವನ್ನು ಒಟ್ಟಾಗಿ ನೋಡಲು ಅದಕ್ಕೊಂದು ಆಸ್ತಿಕ ಮನಸ್ಥಿತಿ ಬೇಕು. ಅದೇ ಕುಂಭಮೇಳದ ಒಟ್ಟು ಹೂರಣ.

ಅನೇಕ ವರ್ಷಗಳಿಂದ ನನಗೂ ಹೋಗಬೇಕೆನ್ನುವ ಆಸೆ ಇದ್ದರೂ ಹೋಗಲಾಗಿರಲಿಲ್ಲ. 2019ರ ಪ್ರಯಾಗ ಕುಂಭಮೇಳಕ್ಕೆ ಹೋಗಬೇಕೆನಿಸಿದರೂ ವೃತ್ತಿಜೀವನದ ಅನೇಕ ಒತ್ತಡಗಳಿಂದ ರಜಾ ಹಾಕಿ ಹೋಗಲು ನೂರೆಂಟು ತಾಪತ್ರಯಗಳಿದ್ದವು. ಸದ್ಯ ಕೋವಿಡ್‌ ತರಹ ಒಂದು ಬರಬಹುದೆಂಬ ಕಲ್ಪನೆಯೂ ಇರಲಿಲ್ಲ ಆಗ. ಅದೂ ಪ್ರಯಾಗದ ಅರ್ಧ ಕುಂಭಮೇಳದ ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲ ಕೇಳಿ ಹೋಗಬೇಕೆನಿಸಿದರೂ ವಿಮಾನದ ಏರಿದ ಬೆಲೆಗೆ ಹೆದರಿ ಹಾಗೂ ಹೀಗೂ ಮುಂದೆ ತಳ್ಳಿ ಕಡೆಗೆ ಹೋಗೇ ಬರೋದು ಅಂತ ಬುಕ್‌ ಮಾಡಿಬಿಟ್ಟೆ. ಅದೇ ದಿನ ಯಾವುದೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಕ್ಕ ಒಬ್ಬ ಹಿರಿಯ ಗೆಳತಿಯೊಂದಿಗೆ ಮಾತಿನ ನಡುವೆ ಹೇಳಿದಾಗ ಅವರು ನಾನು ಜೊತೆಯಾಗುತ್ತೇನೆ, ವಿಮಾನದ ವಿವರ ಕಳಿಸಿ ಅಂದರು. ನಾನೂ ಕಳಿಸಿ ಸುಮ್ಮನಾದೆ. ಅತ್ಯುತ್ಸಾಹಿಯಾದ ಅವರು ಟಿಕೆಟ್‌ ಬುಕ್‌ ಮಾಡಿಕೊಂಡು ಮೆಸೇಜ್‌ ಕಳಿಸಿದರು. ಹೀಗೆ ನಾವು ಇಬ್ಬರೂ ಒಟ್ಟಿಗೆ ಹೋಗುವುದು ಅಂತಾಯಿತು.

ಕುಂಭಮೇಳ ಶುರು ಆಗಿದ್ದು 2019ರ ಜನವರಿ 15 ರಿಂದ ನಾವು ಹೋಗಿದ್ದು ಫೆಬ್ರವರಿ ಮಧ್ಯೆ. ಮುಖ್ಯವಾದ ಸ್ನಾನದ ದಿನಗಳೆಲ್ಲಾ ಆಗಲೇ ಮುಗಿದು ಹೋಗಿದ್ದವು. ಕುಂಭಮೇಳದ ಹಿಂದಿನ ಕಥೆ ಮತ್ತು ಆಖ್ಯಾನ ಅನೇಕರಿಗೆ ಗೊತ್ತೇ ಇರುತ್ತದೆ. ಸಮುದ್ರಮಂಥನದ ನಂತರ ಬಂದ ಅಮೃತದ ನಾಲ್ಕು ಬಿಂದುಗಳು ಬಿದ್ದ ಪ್ರಯಾಗ, ಹರಿದ್ವಾರ, ನಾಸಿಕ ಮಾತ್ತು ಉಜ್ಜೈನಿಯಲ್ಲಿ ಸರದಿಯಲ್ಲಿ ಕುಂಭಮೇಳ ನಡೆಯುತ್ತದೆ. ಸೂರ್ಯ, ಚಂದ್ರ ಮತ್ತು ಗುರುವಿನ ಸ್ಥಾನ ಯಾವ ರಾಶಿಯಲ್ಲಿ ಇರುತ್ತೆ ಅನ್ನುವುದರ ಮೇಲೆ ಜಾಗ ಮತ್ತು ದಿನ ನಿಗದಿಯಾಗುತ್ತೆ. ಸೂರ್ಯ ಮತ್ತು ಚಂದ್ರ ಕಟಕ ರಾಶಿಯಲ್ಲಿದ್ದು ಗುರು ಮೇಷ ರಾಶಿಯಲ್ಲಿದ್ದಾಗ ಪ್ರಯಾಗರಾಜದಲ್ಲಿ ಕುಂಭಮೇಳ ನಡೆಯುತ್ತದೆ. ಪ್ರಯಾಗ ಗಂಗಾ ಮತ್ತು ಸರಸ್ವತೀ ಈ ಮೂರು ನದಿಗಳ ಸಂಗಮ ಸ್ಥಾನ. ಸರಸ್ವತೀ ಇಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಎಂಬುದು ಜನರ ನಂಬಿಕೆ. ಕುಂಭಮೇಳದ ಸಮಯದಲ್ಲಿ ನದಿ ಅಮೃತವೇ ಆಗುವುದರಿಂದ ಅಂತಹ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡುವುದರಿಂದ ಪುನರ್‌ ಜನ್ಮಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಯಿದೆ.

2019 ರಲ್ಲಿ ನಡೆದ ಪ್ರಯಾಗ ಕುಂಭಮೇಳ ಅರ್ಧಕುಂಭಮೇಳ. ಕುಂಭಮೇಳದ ಬಗ್ಗೆ ಅನೇಕ ಪುರಾಣಗಳಲ್ಲಿ ಉಲ್ಲೇಖ ಇದೆ. ಶ್ರೀಮದ್ಭಾಗವತ ಪುರಾಣ, ಮತ್ಸ್ಯ ಪುರಾಣಗಳಲ್ಲಿ ಇದರ ವಿವರ ಬರುತ್ತದೆ. 6ನೇ ಶತಮಾನದಲ್ಲಿ ಹರ್ಷವರ್ಧನನ ಕಾಲದಿಂದಲೂ ಐತಿಹಾಸಿಕ ಉಲ್ಲೇಖ ಸಿಗುತ್ತದೆ. ಆ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಾದ ಹ್ಯುಯೆನ್‌ ತ್ಸಾಂಗ್‌ ಬರೆದಿರುವ ಪ್ರವಾಸಿ ಕಥನದಲ್ಲಿ ಕುಂಭಮೇಳದ ಬಗ್ಗೆ ಮಾಹಿತಿ ಸಿಗುತ್ತದೆ.

ಕುಂಭಮೇಳಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಸಾಧು ಸನ್ಯಾಸಿಗಳು ಬರುತ್ತಾರೆ. ಮತ್ತೆಲ್ಲೂ ಕಾಣದ ನಾಗಾ ಸನ್ಯಾಸಿಗಳು ಶಾಹಿಸ್ನಾನಕ್ಕೆ ಅಲ್ಲಿ ನೆರೆಯುತ್ತಾರೆ. ನಾಗಾ ಸಾಧುಗಳು ಉಳಿದ ಎಲ್ಲಾ ಸ್ನಾನಗಳಿಗೂ ಮೊದಲು ಈ ಸ್ನಾನವನ್ನು ಮಹಾರಾಜರಂತೆ ತಾವು ಮೊದಲು ಮಾಡಿ ನೆರೆದಿರುವ ಜನರನ್ನು ಹರಸುವುದರಿಂದ ಇದಕ್ಕೆ ಆ ಹೆಸರು. ಅದಕ್ಕೇ ಕುಂಭಮೇಳವನ್ನು ವಿಶ್ವದ ಅತಿ ದೊಡ್ಡ ಧಾರ್ಮಿಕ ಸಮಾವೇಶ ಅನ್ನುವುದು. ಮೊದಲು ಇಲ್ಲಿ ಒಂದಷ್ಟು ಗಲಿಬಿಲಿ, ಅವ್ಯವಸ್ಥೆ ಆಗುತ್ತಿತ್ತು. ಆದರೆ ಈಗ ನಾನು ಭಾಗವಹಿಸಿದ ಕುಂಭಮೇಳದಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ನೀರು, ರಸ್ತೆ, ವಸತಿ, ಟೆಂಟುಗಳು ಎಲ್ಲವೂ ಸ್ವಚ್ಛವಾಗಿದ್ದವು.

ನಾವು ಹೋದಾಗ ಜನಸಂದಣಿ ಕಡಿಮೆಯಾಗಿತ್ತು. ಕುಂಭಮೇಳದ ಚಟುವಟಿಕೆಗಳು ಗಂಗಾ ತಟದ ನೂರಾರು ಎಕರೆ ಜಾಗದಲ್ಲಿ ಹರಡಿಕೊಂಡಿತ್ತು. ನದಿಯನ್ನು ದಾಟಲು ಅನೇಕ ಕಡೆಗಳಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿದ್ದರು. ಸಾಧು ಸನ್ಯಾಸಿಗಳು ಅವರವರ ಸಂಪ್ರದಾಯದ ಪ್ರಕಾರ ಅಖಾಡಗಳನ್ನು ಮಾಡಿಕೊಂಡಿರುತ್ತಾರೆ. ಪ್ರತಿ ಅಖಾಡವೂ ತಮ್ಮ ತಮ್ಮ ಟೆಂಟ್‌ಗಳನ್ನು ಹೊಂದಿರುತ್ತದೆ. ಶೈವ ಸಂಪ್ರದಾಯದ ಜೂನಾ, ನಿರಂಜನೀ, ಮಹಾನಿರ್ವಾಣ, ಆವಾಹನ, ಅಟಲ್‌, ಆನಂದ, ಅಗ್ನಿ ಅಖಾಡಗಳು, ವೈಷ್ಣವ ಸಂಪ್ರದಾಯದ ನಿರ್ವಾಣಿ, ನಿರ್ಮೋಹಿ, ದಿಗಂಬರ ಅಖಾಡಗಳು, ಸಿಖ್ಖರ ನಿರ್ಮಲ, ನಯಾ ಉದಾಸೀನ, ಬಡಾ ಉದಾಸೀನ ಅಖಾಡ ಹೀಗೆ ಅನೇಕ ಅಖಾಡಗಳು ಅವರವರ ಸಂಪ್ರದಾಯದ ಸಂತರಿಗೆ ನೆಲೆಯಾಗುತ್ತವೆ.

ಪ್ರಯಾಗದ ವಿಶೇಷ ಅಂದರೆ, ಮೊತ್ತಮೊದಲ ಬಾರಿಗೆ ಕಿನ್ನರ ಅಖಾಡ ಶುರು ಆಗಿದ್ದು. ಇದು ಟ್ರ್ಯಾನ್ಸ್‌ ಜಂಡರ್‌ಗಳಿಗಾಗಿಯೇ ಸಂಘಟನೆಯಾದ ಅಖಾಡ. ಅದರ ಗುರು ಕಿನ್ನರ ಮಹಾಮಂಡಲೇಶ್ವರ ಲಕ್ಷ್ಮೀನಾರಾಯಣ ತ್ರಿಪಾಠಿ. ಇವತ್ತು ನಾವು LGBTQ ಬಗ್ಗೆ ಇಷ್ಟೊಂದು ಮಾತನಾಡುವ ಕಾಲದಲ್ಲಿ ಇಂತಹ ಒಂದು ಒಳಗೊಳ್ಳುವಿಕೆ ಕುಂಭಮೇಳದಲ್ಲೂ ನಡೆದಿರುವುದು ನಾವು ಒಂದು ಸಮಾಜವಾಗಿ ನದಿಯಂತೆ ಬಂದಿದ್ದನ್ನು ಸೇರಿಸಿಕೊಳ್ಳುತ್ತಾ ನಡೆಯುವ ಪ್ರಕ್ರಿಯೆ ಸಮಾಧಾನ ನೀಡುತ್ತದೆ. ಅವರಿಗೆ ಅಲ್ಲಿ ಸ್ಥಾನ ಪಡೆದುಕೊಳ್ಳುವುದು ಸುಲಭವಾಗಿರಲಿಲ್ಲ. ಅನೇಕ ವರ್ಷಗಳ ಹೋರಾಟದ ನಂತರ ಇದು ಅವರಿಗೆ ಸಿಕ್ಕಿದ್ದು ಮತ್ತು ಬೇರೆ ಅಖಾಡಗಳು ಅವರನ್ನು ಒಪ್ಪಿಕೊಂಡಿದ್ದು. ಜೂನಾ ಅಖಾಡ ಅವರನ್ನು ಬೆಂಬಲಿಸಿತ್ತು.. ನಾನು ಅಲ್ಲಿಗೆ ಹೋಗಿದ್ದಾಗ ಅನೇಕ ಅಖಾಡಗಳು ಶಿಬಿರವನ್ನು ತೆಗೆಯುತ್ತಿದ್ದರು. ನಾಗಾಸನ್ಯಾಸಿಗಳು ಆಗಲೇ ಹೊರಡುತ್ತಿದ್ದರು. ಕಿನ್ನರ ಅಖಾಡ ಮಾತ್ರ ಸಂಭ್ರಮದಿಂದ ಗಲಗಲ ಅನ್ನುತ್ತಿತ್ತು. ಹಾಡು, ನೃತ್ಯ, ಭಜನೆ, ಪ್ರವಚನ, ನಗು, ಕಲರವ ಎಲ್ಲಾ ಒಟ್ಟಿಗೆ ಆ ಶಿಬಿರದಲ್ಲಿ ಕಾಣುತ್ತಿತ್ತು. ಕುತೂಹಲದಿಂದ ಅಲ್ಲೇನು ನಡೆಯುತ್ತಿದೆ ಎಂದು ಬರುವ ಜನಗಳು! ಕಿನ್ನರ ಮಹಾಮಂಡಲೇಶ್ವರ ಹೋರಾಟಗಾರ್ತಿ(ಗಾರ) ಲಕ್ಷ್ಮೀ ತ್ರಿಪಾಠಿಯದು ಆಕರ್ಷಕ ವ್ಯಕ್ತಿತ್ವ.

ಪ್ರಯಾಗ ಗಂಗಾ ಮತ್ತು ಸರಸ್ವತೀ ಈ ಮೂರು ನದಿಗಳ ಸಂಗಮ ಸ್ಥಾನ. ಸರಸ್ವತೀ ಇಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಎಂಬುದು ಜನರ ನಂಬಿಕೆ. ಕುಂಭಮೇಳದ ಸಮಯದಲ್ಲಿ ನದಿ ಅಮೃತವೇ ಆಗುವುದರಿಂದ ಅಂತಹ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡುವುದರಿಂದ ಪುನರ್‌ ಜನ್ಮಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಯಿದೆ.

ನಾವೊಂದು ಆಟೋ ಬಾಡಿಗೆಗೆ ತೆಗೆದುಕೊಂಡು ಹೊರಗೆ ಹೋಗಿದ್ದೆವು. ಇಂತಹ ಜಾಗ ಅಂತೇನಿಲ್ಲ. ಎಲ್ಲಿ ಏನಾದರೂ ಕಂಡರೆ ನಿಲ್ಲಿಸೋದು. ಸಾಯಂಕಾಲ ಗಂಗಾಆರತಿಯ ನಂತರ ಕಿನ್ನರ ಅಖಾಡದಲ್ಲಿ ಸ್ವಲ್ಪ ಹೊತ್ತು ಕಳೆದು ಮುಂದೆ ಒಂದೆರಡು ಟೆಂಟುಗಳನ್ನು ನೋಡುತ್ತಾ ಹೊರಟಾಗ ಒಂದು ಸಣ್ಣ ಟೆಂಟ್‌ನಲ್ಲಿ ವಾಸಿಸುತ್ತಿದ್ದ ಭಂಗಿ ಸೇದುತ್ತಾ ಕೂತಿದ್ದ ಸಾಧುವೊಬ್ಬರು ಮಾತಿಗೆ ಸಿಕ್ಕರು. ಹರಿದ್ವಾರದ ಈ ಸಾಧು ಇನ್ನೇನು ಹೊರಡುವ ಸಿದ್ಧತೆಯಲ್ಲಿದ್ದರು.

ಮಾರನೇ ದಿನವೂ ಹೀಗೇ ಸಿಕ್ಕ ಕಡೆ ನಡೆದದ್ದೂ ನಡೆದದ್ದೇ. ಕುಂಭಮೇಳದ ಇಡೀ ಸ್ವಾದ ಅನುಭವಿಸಲು ಮೊದಲ ದಿನಗಳಲ್ಲೇ ಹೋಗಬೇಕು. ನಾನು ಹೋದಾಗ ದೊಡ್ಡ ಸಂಖ್ಯೆಯಲ್ಲಿ ಸಾಧುಗಳು ಇರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಇದ್ದರು. ಅನೇಕರು ಹಣಕ್ಕಾಗಿ ದುಂಬಾಲು ಬೀಳುತ್ತಿದ್ದರು. ಒಬ್ಬ ಸಾಧು ಅಂತೂ ಕೇಳಿದಷ್ಟು ಕೊಡಲಿಲ್ಲ ಅಂತ ಕೆಂಗಣ್ಣು ಮಾಡಿಕೊಂಡು ಬೈದು ಅಟ್ಟಿದ. ಮತ್ತೊಬ್ಬ ಸಾಧು ಒಂಟಿಕಾಲಿನ ಮೇಲೆ ನಿಂತಿದ್ದರು. ಏನು ಮಾತನಾಡಿಸಿದರೂ ಆತ ಮಾತನಾಡಲಿಲ್ಲ. ಯಾರಿಂದಲೂ ಹಣ ಕೇಳಲಿಲ್ಲ. ಎಲ್ಲ ಪ್ರಶ್ನೆಗೂ ಬರೀ ಮೌನದ ಉತ್ತರ. ಆತ ಹಾಗೆಯೇ 20 ದಿನದಿಂದ ನಿಂತಿದ್ದರಂತೆ. ಪ್ರಕೃತಿ ಕರೆಗೆ ಏನು ಮಾಡುತ್ತಾರೋ ಗೊತ್ತಾಗಲಿಲ್ಲ.

ಮತ್ತೊಂದು ಶಿಬಿರದಲ್ಲಿ ಒಬ್ಬ ಮಹಿಳಾ ಸಾಧು ನಾನು ಎಲ್ಲಿ ಕೆಲಸ ಮಾಡುತ್ತೇನೆ ಅಂತ ಕೇಳಿದರು. ಆಗ ನಾನು ನೋಕಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ನೋಕಿಯಾ ಹೆಸರು ಕೇಳಿದೊಡನೆ ನೋಡು ನನ್ನ ಫೋನ್‌ ಕಳೆದುಹೋಗಿದೆ. ಯಾರಿಗೂ ಫೋನ್‌ ಮಾಡೋಕೆ ಆಗ್ತಾಯಿಲ್ಲ. ನನಗೆ ಒಂದು ಫೋನ್‌ ಕೊಡಿಸು. ಮನೆಯವರ ಜೊತೆ ಮಾತಾಡಬಹುದು ಅಂತ ದುಂಬಾಲು ಬಿದ್ದರು! ಇನ್ನೊಂದು ಕಡೆ ನಾಗಾ ಸನ್ಯಾಸಿ ಎಂದು ಹೇಳಿಕೊಂಡ ಸಾಧು ಒಬ್ಬರು ತ್ರಿಶೂಲದಿಂದ ಅನೇಕ ಸರ್ಕಸ್‌ ತರಹದ ಕಸರತ್ತು ಮಾಡಿ ತೋರಿಸಿದರು. ಗೊತ್ತು ಗುರಿಯಿಲ್ಲದೆ ಸಿಕ್ಕ ಸಾಧು ಸಂತರನ್ನು ಮಾತನಾಡಿಸಿಕೊಂಡು ಹತ್ತಾರು ಕಿ. ಮೀ. ನಡೆದಿದ್ದೇ ನಡೆದಿದ್ದು. ಕಿಲೋಮೀಟರ್‌ಗಟ್ಟಲೆಯ ಗಂಗಾ ನದಿಯ ಬರಿದಾದ ಪಾತ್ರದಲ್ಲಿ ಕುಂಭ ನಗರಿ ಎದ್ದಿತ್ತು. ರಾತ್ರಿ ಉಳಿಯಲು ಅಚ್ಚುಕಟ್ಟಾದ, ಎಲ್ಲಾ ಅನುಕೂಲಗಳಿರುವ ಟೆಂಟ ಮನೆಗಳು. ನಮ್ಮ ಟೆಂಟ್‌ ಮನೆ, ಪಕ್ಕದಲ್ಲಿದ್ದ ಗಂಗೆಯ ಹರಿವು ಕುಂಭಪರ್ವದ ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಈಗ ಸುಂದರ ನೆನಪುಗಳು.

ಕುಂಭಕ್ಕೆ ಹೋಗೋದೇ ಸಂಗಮದಲ್ಲಿ ಸ್ನಾನ ಮಾಡಲು. ಬೇರೆ ಜಾಗಗಳಲ್ಲಿ ಪೂಜೆ, ಅರ್ಚನೆ, ಅಭಿಷೇಕಕ್ಕೆ ಮಹತ್ವ. ಇಲ್ಲಿ ನಮಗೆ ನಾವೇ ನೀರಿನಿಂದ ಅಭೀಷೇಕ ಮಾಡಿಕೊಳ್ಳುವುದು ಮುಖ್ಯ ಕೆಲಸ. ಯೋಗಮಾಗದಲ್ಲಿ ನಮಗೆ ನಾವೇ ಪಟ್ಟಾಭಿಷೇಕ ಮಾಡಿಕೊಂಡು ಮುಂದೆ ನಮ್ಮ ಆಂತರಿಕ ಯೋಗಯಾತ್ರೆಯನ್ನು ಮುಂದುವರೆಸುವುದಾಗಿ ನಮಗೆ ನಾವೇ ವಚನ ಕೊಟ್ಟುಕೊಂಡು ಮರಳುವುದು. ಇದು ಕುಂಭದ ಅಂತರಂಗ.

ಆದರೆ ಏನು ಮಾಡುವುದು? ನನಗೆ ತಣ್ಣಗಿನ ನೀರೆಂದರೆ ನಡುಕ. ಹಾಗಾಗಿ ನೀರಿನಲ್ಲಿ ಮುಳುಗಲು ಹಿಂದು ಮುಂದು ನೋಡುತ್ತಿದ್ದೆ. ಹಾಗೇ ನೋಡಿ ವಾಪಸ್‌ ಬರುವುದು ಅಂತ ನನ್ನ ಇರಾದೆ ಇತ್ತು. ನನ್ನ ಸ್ನೇಹಿತೆ ಸಂಗಮದಲ್ಲಿ ಸ್ನಾನ ಮಾಡುವೆ ಎಂದಾಗ ಅವರ ಜೊತೆ ಹೋದೆ. ಒಂದು ದೋಣಿ ನದಿಯ ಸಂಗಮದ ಜಾಗಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಬಟ್ಟೆ ಬದಲಿಸಲು ಒಂದು ತಡಿಕೆಯನ್ನು ಮಾಡಿದ್ದರು ದೋಣಿಯ ಮೇಲೆಯೇ. ನಾನೂ ನೀರಿನಲ್ಲಿ ಇಳಿದು ಮುಳುಗು ಹಾಕಿ ಬರುತ್ತೀನಿ ಅಂದುಕೊಂಡರೂ ಯಾಕೋ ಆಗುತ್ತಲೇ ಇರಲಿಲ್ಲ. ಸುಮ್ಮನೇ ನಿಂತೇ ಇದ್ದೆ. ನನ್ನ ಸ್ನೇಹಿತೆ ಬಂದು ನನ್ನನ್ನು ಅನಾಮತ್ತು ನೀರಿನಲ್ಲಿ ಮುಳುಗಿಸಿದರು. ಅಷ್ಟೇ! ಅದೆಂತಹ ಬಿಡುಗಡೆಯ ಭಾವ! ಅದಕ್ಕೆ ತ್ರಿವೇಣಿ ಸಂಗಮ ಕಾರಣಾನಾ, ಪ್ರಯಾಗದ ಕ್ಷೇತ್ರಶಕ್ತಿಯಾ, ಕುಂಭಮೇಳದ ಗ್ರಹಗಳ ಸ್ಥಾನವಾ, ನನ್ನ ಮಿತಿಯನ್ನು ಮೀರಿದ್ದಾ… ಒಟ್ಟಿನಲ್ಲಿ ನಿಜಕ್ಕೂ ಅದೊಂದು ಅನುಭೂತಿ. ಇವತ್ತಿಗೂ ಅದೊಂದು ಸುಂದರ ಭಾವ. ಯಾವ್ಯಾವುದೋ ಅಂಟಿದ್ದ ಭೂತದ ಭಾರ ಇಳಿದಂತೆ.. ಅದಕ್ಕೆ ನಾನು ಎಂದೂ ಅವರಿಗೆ ಋಣಿ. ಅದಕ್ಕೇ ಒಬ್ಬಳೇ ಹೊರಟಿದ್ದ ನನಗೆ ಜೊತೆಯಾದರೇನೋ. ಬಹುಶಃ ಇಂತಹದ್ದೇ ಎಂದು ಹೇಳಲಾಗದ ಆದರೆ ಇಂತಹ ಅನೇಕ ಕಾರಣಗಳಿಗೆ ಕುಂಭಮೇಳದ ಯಾತ್ರೆ ಸಾಕ್ಷಿಯಾಯಿತು.

ಕುಂಭ ಒಂದು ಅನುಭೂತಿ, ಕುಂಭ ಎಂದರೆ ಪುರಾಣಪ್ರಪಂಚಕ್ಕೆ ಕೀಲಿಕೈ. ಯುಗಗಳಲ್ಲಿ ಇಲ್ಲಿ ಹಾರಿಹೋಗಿರುವ ಹಲವು ಗರುಡರ ನೆನಪು. ಅನೇಕ ಪ್ರಾಚೀನ ಪುರಾಣಗಳ ಪುಟಗಳು ಮೇಲೆದ್ದುಬಂದು ನಮ್ಮ ಕೈಹಿಡಿದು ಇದು ನೋಡು, ಅದು ನೋಡು ಎಂದು ನೆನಪಿಸುವ ಪುಳಕ. ಈ ದೇಶದಲ್ಲಿ ಭಗವಂತ ನನ್ನನ್ನು ಸದ್ಯ ಹುಟ್ಟಿಸಿದಿಯಲ್ಲಾ ಎಂದು ಕಾಣದ ಶಕ್ತಿಗೆ ಸಹಜವಾಗಿ ಕೈಜೋಡಿಸುವ ಧನ್ಯತೆ. ಒಂದಷ್ಟು ಆನಂದದ ಕಣ್ಣೀರು ಕೆನ್ನೆಯ ಮೇಲೆ. ಮರಳಿಬರುವಾಗ ಹಗುರವಾದ ಹೃದಯ. ಶುಭ್ರವಾಗಿರುವ ಮನಸ್ಸಿನ ಆಕಾಶ.

(ಫೋಟೋಗಳು: ಲೇಖಕರವು)