ಓದುಗರು ಇದನ್ನು ಕಥೆಯ ಏಕಧಾರೆಗಾಗಿ ಓದಬಾರದು, ಪುಟಪುಟದಲ್ಲೂ ತೆರೆದುಕೊಳ್ಳುವ ಕಥಾ ಮಾಲಿಕೆಗಳನ್ನು ಆಲಿಸುತ್ತ, ಆದರೆ ಮೈ ಮರೆಯದೆ, ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’; ‘ಶ್ವೇತಭವನದಂತಿದ್ದ ಆಕೆಯ ಭವತ್ಕೇಶಪಾಶ ಪ್ರಪಂಚಕ್ಕೆ ಗೋದ್ರೇಜ್ ಲೇಪಿಸಿ ಕಪ್ಪು ವರ್ಣಕ್ಕೆ ತಿರುಗಿಸಿದ್ದಳು’; ‘ಸತ್ಯಭಾಮಳಂಥ ಸುಂದರ ಯುವತಿ ತೇಲಲೀಯದ ಗುಂಡೂ ಹೌದು, ಮುಳಗಲೀಯದ ಬೆಂಡೂ ಹೌದು’ ಇಂಥ ಪ್ರಾಚೀನ ನುಡಿಗೋಡಂಬಿಗಳು ಅನಿರೀಕ್ಷಿತವಾಗಿ ಸಿಕ್ಕಾಗ ಮೆಲ್ಲುವುದನ್ನು ಓದುಗರು ತಪ್ಪಿಸಿಕೊಳ್ಳಬಾರದು.
ಕುಂ.ವೀರಭದ್ರಪ್ಪ ನವರ “ನಿಜಲಿಂಗ” ಕಾದಂಬರಿಯ ಕುರಿತು ಓ.ಎಲ್.ನಾಗಭೂಷಣ ಸ್ವಾಮಿ ಮಾತುಗಳು

 

ಕುಂವೀ ಅವರ ಕಾದಂಬರಿಯಲ್ಲಿ ಓದುಗರು ಏನೇನು ನಿರೀಕ್ಷಿಸಬಹುದೋ ಅವೆಲ್ಲವೂ ನಿಜಲಿಂಗದಲ್ಲಿರುವಂತೆಯೇ ನಿರೀಕ್ಷಿಸಿರದ ಸಂಗತಿಗಳೂ ಇದ್ದು, ಇದೇನು ನಯಾಗರವೋ ಜೋಗ್ ಜಲಪಾತವೋ ಎಂಬ ಭ್ರಮೆ ಹುಟ್ಟಿಸುವಂಥ ಅವರ ಟ್ರೇಡ್ ಮಾರ್ಕ್ ಭಾಷೆಯಲ್ಲಿ ಜೆಟ್ ವೇಗಕ್ಕಿಂತ ತುಸು ಹೆಚ್ಚು, ಬೆಳಕಿನ ವೇಗಕ್ಕಿಂತ ತುಸು ಕಡಿಮೆ ಅನ್ನುವ ಸ್ಪೀಡಿನಲ್ಲಿ ಸಾಗುತ್ತ ರೂಪುಗೊಳ್ಳುವ ಕೃತಿಯ ಜೋಡಣೆ, ಕಟ್ಟಣೆ ಇಂಥವುಗಳನ್ನೆಲ್ಲ ಗಮನಿಸುವುದಕ್ಕೆ ಸಾಕಾಗುವಷ್ಟು ವ್ಯವಧಾನವನ್ನು ನೀಡದ ಅವರ ಆಪ್ತ ಒತ್ತಾಯಕ್ಕೆ ಮಣಿದು ಕಾದಂಬರಿಯ ಸ್ಪೀಡೋದಿನಲ್ಲಿ ನನ್ನ ಮನಸ್ಸು ಏನೇನು ಕೆಲವು ಸಂಗತಿಗಳನ್ನು ದಾಖಲಿಸಿಕೊಂಡಿತೋ ಅದಷ್ಟನ್ನೇ ಈ ಕೃತಿಯೊಡನೆ ಸೇರಿಸುತಿದ್ದೇನೆ. ಸಮರ್ಥ ಲೇಖಕರು ಹೇಗೆ ಕೃತಿಯನ್ನು ನಿರೂಪಿಸಿರುತ್ತಾರೋ ಅದೇ ರೀತಿಯಲ್ಲಿ ಅದರ ಬಗ್ಗೆ ಬರೆಯಬೇಕೆಂಬ ಒತ್ತಡವೂ ಮನಸ್ಸಿನಲ್ಲಿ ಮೂಡುತ್ತದೆ ಅನ್ನುವುದಕ್ಕೆ ಇಗೋ ಒಂದು ಕ್ಷಣ ಮೊದಲು ನೀವು ಓದಿ ಮುಗಿಸಿದ, ನನ್ನದಲ್ಲದ ರೀತಿಯಲ್ಲಿ ಬರೆದಿರುವ ಈ ಎರಡು ವಾಕ್ಯಗಳೇ ಸಾಕ್ಷಿ! ಕುಂವೀ ಕಾದಂಬರಿ ಹಾಗೆ ಓದುಗರನ್ನು ಆವರಿಸಿಕೊಂಡು ತಾನು ಜಗತ್ತನ್ನು, ಜನರನ್ನು ಕಂಡಂತೆಯೇ ನಾವೂ ಕಾಣಲು ಒತ್ತಾಯಿಸುತ್ತದೆ.

ನನ್ನ ತಲೆಮಾರಿನ ಮತ್ತೆ ಯಾವ ಕಥೆಗಾರರೂ ಕುಂವೀಯವರ ಹಾಗೆ ಉಚೃಂಖಲ ಕಲ್ಪನಾವಿಲಾಸವನ್ನೂ ನಿಷ್ಠುರ ವಾಸ್ತವ ಪ್ರಜ್ಞೆಯನ್ನೂ ಪ್ರಖರ ವಿಡಂಬನೆಯನ್ನೂ ಸಂದು ಕಾಣದ ಹಾಗೆ ಬೆಸೆದು ಕುಂವೀಯವರಷ್ಟು ಸಮೃದ್ಧವಾದ ಬರಹವನ್ನು ಮಾಡಿಲ್ಲ. ಈ ಮಾತಿನಲ್ಲಿ ಇರುವ ಎಲ್ಲ ಗುಣಗಳೂ ಕುಂವೀ ಕಾದಂಬರಿಗಳ ಕಿಕ್ಕಿರಿದ ಬದುಕಿನ ವಿಸ್ತಾರ ಕ್ಯಾನ್ ವಾಸಿಗೆ ಕಾರಣವಾಗಿವೆ. ಹಾಗೆಯೇ ವ್ಯವಧಾನವಿರದ ಓದುಗರಿಗೆ ತೊಡಕನ್ನೂ ಒಡ್ಡುತ್ತವೆ. ಹಾಗೆ ನೋಡಿದರೆ ಅದು ತೊಡಕಲ್ಲ, ಕನ್ನಡದ ಓದುಗವರ್ಗ ಪಾಶ್ಚಾತ್ಯ ಮಾದರಿಯ ಕಾದಂಬರಿ ರೂಪದ ಕೃತಕ ಶಿಶು ಆಹಾರಕ್ಕೆ ಒಗ್ಗಿರುವುದರಿಂದ ಪೌರ್ವಾತ್ಯ ಮಾದರಿಯ ಕಥೆಕಟ್ಟುವ ಕ್ರಮಕ್ಕೆ ದೂರವಾಗಿದ್ದಾರೆಯಾದ್ದರಿಂದ ತೊಡಕು ಅಂದುಕೊಳ್ಳುತ್ತಾರೆ.

ಅದೇನೆಂದರೆ ಹರಿವ ನದಿಗೆ ಮೈಯೆಲ್ಲ ಕಾಲು ಇರುವ ಹಾಗೆ ಕುಂವೀ ತಮ್ಮ ಕಾದಂಬರಿಯ ಕಥನ ಇಡುವ ಒಂದೊಂದು ಹೆಜ್ಜೆಗೂ ಒಂದೊಂದು ನದಿಯನ್ನು ಸೃಷ್ಟಿಯಾಗುವ ಹಾಗೆ ಮಾಡುತ್ತಾರೆ. ಯಾವುದು ನದಿ, ಯಾವುದು ತೊರೆ, ಯಾವುದು ಉಪನದಿ, ಯಾವುದು ಕಿರು ಹಳ್ಳ ಅಂತ ಗೊತ್ತಾಗುವುದು ಕಾದಂಬರಿ ಮುಗಿದ ಮೇಲೆಯೇ. ಈ ನಿಜಲಿಂಗ ಕಾದಂಬರಿಯನ್ನೇ ನೋಡಿ. ಕನಿಷ್ಠಪಕ್ಷ ಮುನ್ನೂರಾದರೂ ಪಾತ್ರಗಳ ಹೆಸರು ಬರುತ್ತವೆ. ಒಂದೊಂದು ಪಾತ್ರದ ವೈಶಿಷ್ಟ್ಯ, ಅದರ ಹಿನ್ನೆಲೆ, ಅದು ಯಾಕೆ ಈ ಕ್ಷಣದಲ್ಲಿ ಹೀಗೆ ವರ್ತಿಸುತ್ತದೆ ಅನ್ನುವ ಕಿರು ಕಥೆಗಳನ್ನು ಮುನ್ನೂರೂ ಪಾತ್ರಗಳಿಗೆ ಕೆಲವೇ ವಾಕ್ಯಗಳಲ್ಲಾದರೂ ಒದಗಿಸುತ್ತಾರೆ. ಈ ಕಾದಂಬರಿಯಲ್ಲಿ, ಮಿಕ್ಕ ಕುಂವೀ ಕಾದಂಬರಿಗಳ ಹಾಗೆಯೇ, ಯಾರೂ ಅಮುಖ್ಯರಲ್ಲ. ವ್ಯಾಸನ ಮಹಾಭಾರತ, ಬಾಣನ ಕಾದಂಬರಿ, ದಶಕುಮಾರ ಚರಿತೆ, ಅಥವ ಅರೇಬಿಯನ್ ನೈಟ್ಸ್ ಗಮನವಿಟ್ಟು ಓದಿದವರಿದ್ದರೆ ಕುಂವೀ ಕಥನ ಆ ಮಾದರಿಯದ್ದು ಅನ್ನುವುದು ಹೊಳೆಯುತ್ತದೆ. ವ್ಯಾಸ ಹೇಳಿದ್ದನ್ನು ಅವನ ಶಿಷ್ಯ ವೈಶಂಪಾಯನ ಕೇಳಿ ಜನಮೇಜಯನಿಗೆ ಹೇಳಿದ್ದನ್ನು ಕೇಳಿ ಉಗ್ರಶ್ರವನು ನೈಮಿಶಾರಣ್ಯದ ಮುನಿಗಳಿಗೆ ಹೇಳಿದ್ದನ್ನು ಲೋಮಹರ್ಷಣ ಕೇಳಿ-ಹೀಗೆ ಕಥೆಯೊಳಗೆ ಕಥೆಹೇಳುವ ಇನ್ನೊಬ್ಬರು ಮತ್ತೊಬ್ಬರು ಮತ್ತಿನ್ನೊಬ್ಬರು ಇರುವ ಹಾಗೆ; ತೆಲುಗಿನ ‘ಕಲಾಪೂರ್ಣೋದಯ’ ಮಹಾಕಾವ್ಯದಲ್ಲಿ ಬ್ರಹ್ಮನ ಸೃಷ್ಟಿ, ಕವಿಯ ಸೃಷ್ಟಿ ಎರಡೂ ಒಂದರೊಳಗೊಂದು ಬೆರೆತು ಹೋಗುವ ಹಾಗೆ, ನಿಜಲಿಂಗ ಕಾದಂಬರಿಯಲ್ಲೂ ಶಂಭುಲಿಂಗಪ್ಪನು ಲೇಖಕನಿಗೆ ಹೇಳುವ ಕಥೆ, ಅವರಿಬ್ಬರೂ ಲಿಂಗದಳ್ಳಿಯ ಗೌಡರಿಂದ ಕೇಳುವ ಕಥೆ, ಲಿಂಗದಳ್ಳಿಯ ಗೌಡರು, ಗಂಡೀಕೋಟೆಯ ಚನ್ನೇಗೌಡರು, ಮೇಷ್ಟರು ಕೃಷ್ಣಮೂರ್ತಿಯ ನೋಟ್ ಬುಕ್ಕು, ದಂಡಪಾಣಿಯ ಮಕ್ಕಳಾದ ದಂಡಪಾಣಿ, ಚಕ್ರಪಾಣಿ, ಶೂಲಪಾಣಿ ಮತ್ತೆ ಇನ್ನೊಮ್ಮೆ ಲೇಖಕ ಇವರೆಲ್ಲ ನಿರೂಪಕರು ಸೇರಿ ಕಾದಂಬರಿಯ ಕಾಯ ನಿರ್ಮಿಸುತ್ತಾರೆ. ಮಧ್ಯೆ ಮಧ್ಯೆ ಒಬ್ಬೊಬ್ಬ ನಿರೂಪಕರೂ ಹೇಳುವ ಭಿನ್ನ ನಿರೂಪಣೆಗಳ ಬಗ್ಗೆ ಲೇಖಕರ ವ್ಯಾಖ್ಯಾನವೂ ಸೇರುತ್ತದೆ.

ಯಾರು ಯಾರಿಗೆ ಹೇಳಿದರು ಅನ್ನುವುದನ್ನು ಹೀಗೆ ಬರೆಯಲು ಹೊರಟಾಗ ತೊಡಕು ಅನ್ನಿಸಿದರೂ ಓದುವಾಗ ಹಾಗಾಗದು. ಮೊದಲನೆಯ ಭಾಗದಲ್ಲಿ ಸ್ವಾತಂತ್ರಪೂರ್ವದ ತರೀಕೆರೆಯ ಅರಸನ, ಅವನ ದಳವಾಯಿಯ, ಕ್ಯಾಪ್ಟನ್ ಸಿದ್ಧಲಿಂಗನ, ಮತ್ತೆ ಶಂಭುಲಿಂಗಪ್ಪನ ಅಜ್ಜಿಯ ಕಥೆ ಆರಂಭವಾಗಿ, ಎರಡನೆಯ ಭಾಗದಲ್ಲಿ ಬಲುಮಟ್ಟಿಗೆ ಅಜ್ಜಿಯ ಜೀವನ ಚಿತ್ರಣ ನಡೆದು, ಮೂರನೆಯ ಭಾಗದಲ್ಲಿ ಅವಳ ಮಗ ಅಂದರೆ ಶಂಭುಲಿಂಗಪ್ಪನ ತಂದೆ ನಿಜಲಿಂಗನ ಬದುಕಿನ ಅದ್ಭುತ ಚಿತ್ರಣ ತೊಡಗಿ, ಅದು ನಾಲ್ಕು ಐದನೆಯ ಭಾಗದಲ್ಲೂ ಮುಂದುವರೆದು, ಜೊತೆಜೊತೆಗೇ ಸ್ವಾತಂತ್ರೋತ್ತರ ರಾಜಕಾರಣದ ವಿಡಂಬನೆ ಮತ್ತು ಕಳ್ಳರ ಬದುಕಿನ ತೀರ ಅಪರೂಪದ ಕಥನಗಳು ಬೆಳೆದು ಐದನೆಯ ಭಾಗದಲ್ಲಿ ಮಂಗಳ ಮುಖಿಯರು ಊರಲ್ಲಿ ತರುವ ಧನಾತ್ಮಕ ಬದಲಾವಣೆಗಳನ್ನು ಚಿತ್ರಿಸುತ್ತಲೇ ಆ ಮಂಗಳ ಮುಖಿ ನಾಯಕಿಯ ರಹಸ್ಯ ಸ್ಫೋಟವಾಗಿ ಕೊನೆಯ ಭಾಗದಲ್ಲಿ ಇದು ಹಲವು ನಿರೂಪಣೆಗಳನ್ನು ದಾಖಲಿಸಿರುವುದೇ ಹೊರತು ನಿಜವಾದ ಮುಕ್ತಾಯವಲ್ಲ ಅನ್ನುವ ಸಮಾರೋಪವಿದೆ.

ಅಂದರೆ ತೀರ ಅಂದರೆ ತೀರ ಸ್ಥೂಲವಾಗಿ ಮೂರು ತಲೆಮಾರುಗಳ ಮೂರು ಭಿನ್ನ ಲೋಕಗಳ ಮೂರು ಭಿನ್ನ ಲಿಂಗಗಳ ಕಥೆ ಎಂದು ಒಂದು ಮಾತಿನ ಶರಾ ಹೇಳಿದರೆ ಅದು ಕಾದಂಬರಿಗೆ ಅನ್ಯಾಯ. ಓದುಗರು ಇದನ್ನು ಕಥೆಯ ಏಕಧಾರೆಗಾಗಿ ಓದಬಾರದು, ಪುಟಪುಟದಲ್ಲೂ ತೆರೆದುಕೊಳ್ಳುವ ಕಥಾ ಮಾಲಿಕೆಗಳನ್ನು ಆಲಿಸುತ್ತ, ಆದರೆ ಮೈ ಮರೆಯದೆ, ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’; ‘ಶ್ವೇತಭವನದಂತಿದ್ದ ಆಕೆಯ ಭವತ್ಕೇಶಪಾಶ ಪ್ರಪಂಚಕ್ಕೆ ಗೋದ್ರೇಜ್ ಲೇಪಿಸಿ ಕಪ್ಪು ವರ್ಣಕ್ಕೆ ತಿರುಗಿಸಿದ್ದಳು’; ‘ಸತ್ಯಭಾಮಳಂಥ ಸುಂದರ ಯುವತಿ ತೇಲಲೀಯದ ಗುಂಡೂ ಹೌದು, ಮುಳಗಲೀಯದ ಬೆಂಡೂ ಹೌದು’ ಇಂಥ ಪ್ರಾಚೀನ ನುಡಿಗೋಡಂಬಿಗಳು ಅನಿರೀಕ್ಷಿತವಾಗಿ ಸಿಕ್ಕಾಗ ಮೆಲ್ಲುವುದನ್ನು ಓದುಗರು ತಪ್ಪಿಸಿಕೊಳ್ಳಬಾರದು. ಹಾಗೆ ವ್ಯವಧಾನದಿಂದ ಓದಿದಾಗ ಉಷಾಳ ಸ್ವಪ್ನ ಪ್ರಪಂಚ ಕಾವ್ಯ ಗುಣವೂ ಅರಿವಾಗುತ್ತದೆ: ‘ಫಕ್ಕನೆ ಎಚ್ಚರಗೊಂಡು ನೋಡುತ್ತಾಳೆ ತನ್ನ ಮಗ್ಗುಲು ನೀಳಕಾಯದ ರಾಜಕುಮಾರ! ಉಷಾ ಎಂದು ಪಲುಕುತ್ತಿರುವನು, ತನ್ನೆರಡು ದೀರ್ಘ ಬಾಹುಗಳಿಂದ ಬಿಗಿದಪ್ಪುತ್ತಿರುವನು, ತನ್ನ ಮುಖದ ತುಂಬೆಲ್ಲ ಮುತ್ತುಗಳನ್ನು ಬಿತ್ತುತ್ತಿರುವನು, ನೀಳ ನಾಸಿಕದ ತುದಿಯಿಂದ ತನ್ನ ಮುಖದ ಮೇಲೆ ಪ್ರೇಮಕವಿತೆಯನ್ನು ಬರೆಯುತ್ತಿರುವನು…[ಅದನ್ನು] ವಾಚಿಸಬೇಕೆನ್ನುವಷ್ಟರಲ್ಲಿ ತನ್ನಪ್ಪುಗೆಯಲ್ಲಿ ಎತ್ತಿಕೊಂಡೊಯ್ದು ಪುಷ್ಪಕ ವಿಮಾನದಲ್ಲಿ ಕೂರಿಸಿದ, ಚಾಲಕನ ಹಂಗಿರದ ಆ ವಾಹನ ವಾಯುವೇಗದಲ್ಲಿ ಹಾರಿ ನೋಡುನೋಡುವಷ್ಟರಲ್ಲಿ ಹಲವು ಲೋಕಗಳನ್ನು ಕ್ರಮಿಸಿತು. ಸ್ಪಟಿಕ ಜಲಾಶಯದ ನಟ್ಟನಡುವೆ ಪುಷ್ಟವಿರಚಿತ ದೋಣಿಯಲ್ಲಿ ತಮ್ಮನ್ನು ಮೆಲ್ಲಗೆ ಇಳಿಸಿದ ಬಳಿಕ… ಜಲವಿಹಾರ ಜಲಕೇಳಿ ಜನನಿನಾದ! ನಾಲ್ಕು ಕಾಲಿನ ಪಕ್ಷಿಗಳು! ಕಾಲುಗಳಿಲ್ಲದ ಸಸ್ತನಿಗಳು! ಬಗೆಬಗೆಯ ಕಥೆಗಳನ್ನು ಹೇಳುತ್ತಿರುವ ಉರಗಗಳು! ಪುಷ್ಪಗಳೊಡಲಿನಿಂದ ಮೂಡಿ ಬಂದು ತನ್ನ ಶರೀರದ ಸ್ವೇದ ರಂಧ್ರಗಳಲ್ಲಿ ವಾಸ್ತವ್ಯ ಹೂಡುತ್ತಿರುವ ಶತಕೋಟಿ ಸುಂದರಿಯರು!’ ಇಂಥ ನುಡಿಯೊಳಗೇ ಸೃಷ್ಟಿಯಾಗುವ ಸಿನಿಮಾದಂಥ ದೃಶ್ಯಗಳ ಖುಷಿ ಓದಿನ ವೇಗದಲ್ಲಿ ತಪ್ಪಿಹೋಗಬಾರದು.

ಅದೇನೆಂದರೆ ಹರಿವ ನದಿಗೆ ಮೈಯೆಲ್ಲ ಕಾಲು ಇರುವ ಹಾಗೆ ಕುಂವೀ ತಮ್ಮ ಕಾದಂಬರಿಯ ಕಥನ ಇಡುವ ಒಂದೊಂದು ಹೆಜ್ಜೆಗೂ ಒಂದೊಂದು ನದಿಯನ್ನು ಸೃಷ್ಟಿಯಾಗುವ ಹಾಗೆ ಮಾಡುತ್ತಾರೆ. ಯಾವುದು ನದಿ, ಯಾವುದು ತೊರೆ, ಯಾವುದು ಉಪನದಿ, ಯಾವುದು ಕಿರು ಹಳ್ಳ ಅಂತ ಗೊತ್ತಾಗುವುದು ಕಾದಂಬರಿ ಮುಗಿದ ಮೇಲೆಯೇ.

ಸತ್ಯಭಾಮೆ, ಅವಳ ಗೆಳತಿ ವಿಕ್ಟೋರಿಯ ಬಾಯಲ್ಲಿ ಸಟ್ ಆಗಿ, ಮತಾಂತರಗೊಂಡು ಸಿದ್ಧಲಿಂಗನ ಹೆಂಡತಿ ಪೌಲೀನ್ ಯಶೋಧಳಾಗಿ, ಮತ್ತೆ ದಿಕ್ಕು ತಪ್ಪಿ, ಪಡಬಾರದ ಪಾಡುಪಟ್ಟರೂ ಸ್ವಾಭಿಮಾನೀ ಅನಂತರಮ್ಮನಾಗಿ, ಮಗು ನಿಜಲಿಂಗನ ತಾಯಿಯಾಗಿ ಬೆಳೆಯುವಂಥ ಗಟ್ಟಿ ಹೆಣ್ಣು ಪಾತ್ರವನ್ನು ಕುಂವೀ ಇತರ ಕಾದಂಬರಿಗಳಲ್ಲಿ ಮಾತ್ರವಲ್ಲ ಕನ್ನಡದ ಇತರ ಕೃತಿಗಳಲ್ಲೂ ಅಪರೂಪಕ್ಕೆ ಮಾತ್ರ ಕಾಣಬಹುದು. ಇನ್ನು ಕಾದಂಬರಿಗೆ ಹೆಸರು ಕೊಟ್ಟಿರುವ ನಿಜಲಿಂಗ ಆಧುನಿಕ ಕಾಲದ ರಾಬಿನ್ ಹುಡ್. ಉಚಲ್ಯಾದಂಥ ಆತ್ಮಕಥೆಗಳು ಕನ್ನಡಕ್ಕೆ ಬಂದಿರಬಹುದು. ಆದರೆ ವಾಸ್ತವದಲ್ಲಿ ಬೇರು ಬಲವಾಗಿ ಬಿಟ್ಟಿದ್ದರೂ ಕಲ್ಪನಾಶೀಲವಾಗಿ ಅರಳುವ ಅಕ್ಷರಶಃ ನೂರಾರು ಕಳ್ಳರು ಅವರ ಸಾಹಸ, ಪ್ರಣಯ, ನೋವು, ನಲಿವು, ಗೆಲುವು, ವೈಫಲ್ಯಗಳು ಕಾದಂಬರಿಯಾಗಿ ರೂಪು ಪಡೆದಿರುವುದು ಮೊದಲೆಂದಾದರೂ ಆಗಿದ್ದು ನನಗೆ ನೆನಪಿಲ್ಲ. ಜೊತೆಗೆ ಈ ಪ್ರಾಮಾಣಿಕ ಸತ್ಯವಂತ ಸಾಹಸೀ ಕಳ್ಳರೊಡನೆ ಮುಖ್ಯಮಂತ್ರಿಯಾದಿಯಾಗಿ ರಾಜಕೀಯ ಜಗತ್ತು, ಸಿನಿಮಾ ಜಗತ್ತುಗಳನ್ನು ಬೆಸೆದು ಹೊಸೆದು ವಿಡಂಬಿಸಿ ಕುಂವೀ ಕಾದಂಬರಿಗೆ ಇನ್ನೊಂದು ಆಯಾಮ ನೀಡುತ್ತಾರೆ. ಕಳ್ಳನ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುವ ಮುಖ್ಯಮಂತ್ರಿ ನಗೆಯುಕ್ಕಿಸುವ ಹಾಗೇ ನಮ್ಮ ಸಮಕಾಲೀನ ರಾಜಕೀಯದ ವಿಷಾದಮಯ ವಿಡಂಬನೆಯೂ ಆಗುತ್ತಾನೆ. ಈ ವಿಡಂಬನೆ ಇದೆಯಲ್ಲ ಅದು ಕುಂವೀ ಬ್ರಾಂಡಿನದ್ದು.

ಕಾದಂಬರಿಯ ಕೊನೆಯ ಭಾಗದಲ್ಲಿ ತಾವೇ ತಾವಾಗುವ ತೃತೀಯ ಲಿಂಗಿಗಳು-ಬಬಿತಾ, ಹೇಮಮಾಲಿನಿ, ಸಾಧನಾ ಇಂಥವರದ್ದು ಇನ್ನೊಂದು ಲೋಕ. ಶಂಭುಲಿಂಗ, ಸಿದ್ಧಲಿಂಗ, ನಿಜಲಿಂಗ, ತೃತೀಯಲಿಂಗ! ನಿಜವಾಗಿ ಕಳ್ಳರು ಮತ್ತು ತೃತೀಯಲಿಂಗಿಗಳು ಸಮಾಜದ ಹಿತಚಿಂತಕರು ಅನ್ನುವ ಹಾಗೆ ಈ ಭಾಗ ಬೆಳೆಯುತ್ತದೆ.

ಶಂಭುಲಿಂಗ ತನ್ನ ಮೂಲ ಅರಸಿ ಹೊರಟವನು, ದುರ್ಬಲ. ಸಿದ್ಧಲಿಂಗ ಕ್ರೂರಿ, ದಮನಕಾರಿ. ಇನ್ನು ನಿಜಲಿಂಗ ನಿಜ-ಲಿಂಗ. ಚತುರ, ಮಾನವೀಯ, ಕರುಣಾಮಯಿ ರಾಬಿನ್ ಹುಡ್ ನಂಥ ನಾಯಕ. ಅವನು ತೃತೀಯಲಿಂಗಿಯ ವೇಷಧಾರಣೆ ಮಾಡಿ ಉಷಾ ಪರಿಣಯವನ್ನು ಯಶಸ್ವಿಯಾಗಿ ನೆರವೇರಿಸಿಕೊಳ್ಳುತ್ತಾನೆ. ಅದು ವೇಷಧಾರಣೆ ಎಂದು ಗೊತ್ತಾದಾಗ ತೃತೀಯಲಿಂಗದ ವಿವರಣೆ ಕಾದಂಬರಿಯ ತಾಂತ್ರಿಕ ಅಗತ್ಯ ಮಾತ್ರವೋ ಎಂಬ ಸಂಶಯ ಸಣ್ಣದಾಗಿ ಸುಳಿದು ಹೋಗುತ್ತದೆ.

ಕಾದಂಬರಿಯ ಆರಂಭದಲ್ಲೇ ಒಂದು ಮಾತು ಬರುತ್ತದೆ. ‘ಚಿಗುರು ವರ್ತಮಾನದಲ್ಲಿದ್ದರೂ ಕಥೆಯ ಮೂಲ ಬೇರುಗಳಿರುವುದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ. ತ್ರಿಭುಜಾಕೃತಿಯಂಥ ಕಥೆಯ ಒಂದು ಮೂಲೆಯಲ್ಲಿ ಆಂಗ್ಲರ ವಸಾಹತುಶಾಹಿ ಇದ್ದರೆ ಇನ್ನೊಂದು ಮೂಲೆಯಲ್ಲಿರುವುದು ತರಿಕೆರೆಯ ಇತಿಹಾಸದ ಪಳೆಯುಳಿಕೆ. ಅಂತಿಮ ಮೂಲೆಯಲ್ಲಿ ದಾಸ್ಯ ಶೃಂಖಲೆಯ ಪರಿವೇಷದಲ್ಲಿರುವ ಭಾರತ. ಈ ತ್ರಿಕೊನಾಕೃತಿಯ ನಟ್ಟನಡುವೆ ವೇಣುಗೋಪಾಲಭಟ್ಟರ ಕುಟುಂಬದ ಅಸಹಾಯಕತೆಯ ಚಿತ್ರಣ.’ ಈ ಮಾತಿಗೆ ಕಾರಣವಾಗುವುದು ‘ಹೆಣ್ಣು ವೇಷದಲ್ಲಿದ್ದ ಶಂಭುಲಿಂಗಪ್ಪನ ತಂದೆಯ ಚಿತ್ರ’. ಅಂದರೆ ಕುಂವೀಯವರು ಇಡೀ ಕಾದಂಬರಿಯ ವಿನ್ಯಾಸವನ್ನು ಮೊದಲು ಮನಸ್ಸಿನಲ್ಲಿ ಮೂಡಿಸಿಕೊಂಡು ವಿಸ್ತರಿಸುತ್ತ ಹೋಗಿರುವುದು ಸ್ಪಷ್ಟವಾಗುತ್ತದೆ. ಹಾಗೆ ನಿಜಲಿಂಗ ಎಂಬ ಹೆಸರಿನ ಅವರದ್ದೊಂದು ಸಣ್ಣಕಥೆಯೂ ಇದೆ. ಅದರಲ್ಲಿಲ್ಲದ ವಿಸ್ತಾರಗಳೂ ಆಯಾಮಗಳೂ ಈ ಕಾದಂಬರಿಗೆ ಪ್ರಾಪ್ತವಾಗಿವೆ.

ಯಾರೋ ಒಬ್ಬ ಕವಿ, ಮಹಾಕಾವ್ಯ ಎಂಬುದಿಲ್ಲ, ಇರುವುದೇನಿದ್ದರು ಭಾವಗೀತೆ ಮಾತ್ರ, ಸಾವಿರ ಭಾವಗೀತೆ ಸೇರಿದರೆ ಮಹಾಕಾವ್ಯವಾಗುತ್ತದೆ ಅಂದದ್ದು ನೆನಪಾಗುತ್ತದೆ. ಕುಂವೀ ಕೂಡ ಕಾದಂಬರಿ ಎಂಬುದಿಲ್ಲ, ಇರುವುದು ಸಣ್ಣ ಕಥೆ ಮಾತ್ರವೇ. ಸಾವಿರ ಸಣ್ಣ ಕಥೆಯನ್ನು ಸೇರಿಸಿದರೆ ಕಾದಂಬರಿಯಾಗುತ್ತದೆ ಎನ್ನುವವರೋ ಅನ್ನುವ ಯೋಚನೆ ಬಂದು ಹೋಗುತ್ತದೆ. ಹಾಗೆ ಸೇರ್ಪಡೆ ಮಾಡುವ ಕಲೆಗಾರಿಕೆ ಕಡಮೆಯದ್ದಲ್ಲ. ಉದಾಹರಣೆಗೆ ಕಥೆಯ ಮೊದಲಲ್ಲೇ ಕಾಣಿಸಿಕೊಳ್ಳುವ ಉಷಾ ಬೆಳೆದು ಮುಖ್ಯ ಪಾತ್ರವಾಗುವುದು ಕಾದಂಬರಿ ಮುಕ್ಕಾಲು ಮುಗಿದ ಮೇಲೆ. ವೇಣುಗೋಪಾಲ ಭಟ್ಟರ ಸಂಸಾರದ ದಾರುಣ ಚಿತ್ರ ಸ್ವಾತಂತ್ರಪೂರ್ವದ್ದಾದರೆ, ಕಾಮಲಾಪುರದ ದಿವಾಕರರೆಡ್ಡಿಯ ಕುಟುಂಬದ ಕಥೆಯೇನು ಕಡಿಮೆ ದಾರುಣವೇ? ಒಂದು ಇನ್ನೊಂದರ ಪ್ರತಿಬಿಂಬ. ಹಾಗೆ ಈ ಕಾದಂಬರಿಯಲ್ಲಿ ನಿಜಲಿಂಗನು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವ ಪ್ರತಿಮೆಯೊಂದು ಸುಳಿದು ಹೋಗುತ್ತದೆ. ಇಡೀ ಕಾದಂಬರಿಯೇ ಹಾಗೆ ಸ್ವಾತಂತ್ರ್ಯಪೂರ್ವ-ಸ್ವಾತಂತ್ರ್ಯೋತ್ತರ ಭಾರತದ ವಿಷಾದಮಯ ಬದುಕಿಗೆ ಎತ್ತಿಹಿಡಿದ ವಿಡಂಬನೆಯ ಕನ್ನಡಿ.