ಈ ಗುಡಿಯ ಮುಖಮಂಟಪದ ಸೊಗಸೇ ಬೇರೆ. ಐದು ಅಂಕಣ, ಇಪ್ಪತ್ನಾಲ್ಕು ಕಂಬಗಳು. ಒಂದು ಕಂಬದ ವಿನ್ಯಾಸದಂತೆ ಮತ್ತೊಂದಿಲ್ಲ. ಮಂಟಪದ ಮೂರು ಕಡೆ ಪ್ರವೇಶದ್ವಾರಗಳು. ಪೂರ್ವದ ಬಾಗಿಲಿಂದ ಒಳಬರುತ್ತಿರುವಂತೆಯೇ ಗರ್ಭಗುಡಿಗೆ ಎದುರಾಗಿ ಕುಳಿತ ನಂದಿವಿಗ್ರಹ ಅತ್ಯಾಕರ್ಷಕ. ನಂದಿಗೆ ತೊಡಿಸಿದ ಆಭರಣಗಳಿರಲಿ, ಗಂಟೆಯ ಹಗ್ಗದ ಗಂಟೂ ತೀರಾ ನೈಜವಾಗಿ ಶೋಭಿಸುತ್ತದೆ. ರಾಮೇಶ್ವರ ಲಿಂಗವು ಕಣ್ಣುಗಳಿರುವಂತೆ ಕಾಣುವುದೊಂದು ವಿಶೇಷ. ಗರ್ಭಗುಡಿಯ ಹೊರಗಿನ ಗೋಡೆಗಳಲ್ಲಿ ನಾಲ್ಕು ದೇವಕೋಷ್ಠಗಳಿವೆ. ಇವುಗಳಲ್ಲಿ ಇರಿಸಿರುವ ಮಹಿಷಮರ್ದಿನಿ, ಸಪ್ತಮಾತೃಕೆಯರು, ಗಣೇಶ ಹಾಗೂ ಮಯೂರವಾಹನ ಕಾರ್ತಿಕೇಯರ ವಿಗ್ರಹಗಳು ಪುರಾತನ ಶಿಲ್ಪಕಲೆಯ ಸುಂದರ ಮಾದರಿಗಳಾಗಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತ್ತನೆಯ ಕಂತು

 

ನಮ್ಮ ನಾಡಿನ ಇತಿಹಾಸದ ವೈಭವವನ್ನು ಸಾರುತ್ತಿರುವ ಪುರಾತನ ದೇಗುಲಗಳಲ್ಲಿ ಹಲವು ಗುಡಿಗಳು ಆಯಾ ಕಾಲದ ಅರಸರಿಂದಲೋ ಅವರ ಅನುಜ್ಞೆಯ ಮೇರೆಗೆ ಪ್ರಧಾನಿ, ದಂಡನಾಯಕರಿಂದಲೋ ನಿರ್ಮಿತವಾಗಿ ಆ ಅರಸುಮನೆತನಗಳ ಪ್ರತಿಷ್ಠೆಯ ಸಂಕೇತವಾಗಿ ಉಳಿದುಬಂದಿರುವುದನ್ನು ಕಾಣುತ್ತೇವೆ. ಇನ್ನು ಕೆಲವು ದೇವಸ್ಥಾನಗಳ ನಿರ್ಮಾಣದಲ್ಲಿ ರಾಜಮನೆತನಗಳ ಕೊಡುಗೆಯೇನೂ ಇಲ್ಲದೆ ಜನಸಾಮಾನ್ಯರ ಶ್ರದ್ಧಾಸಕ್ತಿಗಳೇ ವಿಶೇಷವಾಗಿರುವುದನ್ನು ಗುರುತಿಸಬಹುದು. ಇಂತಹ ವಿಶಿಷ್ಟ ಗುಡಿಯೊಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿದೆ.

ಸೊರಬದಿಂದ ಹನ್ನೊಂದು ಕಿ.ಮೀ. ದೂರದಲ್ಲಿರುವ ಕುಪ್ಪಗದ್ದೆ ಎಂಬ ಗ್ರಾಮದ ರಾಮೇಶ್ವರ ದೇವಾಲಯವನ್ನು ಕುರಿತ ಕಿರುಪರಿಚಯ ಇಲ್ಲಿದೆ. ಈ ಕುಪ್ಪಗದ್ದೆ ಎಂಬ ಗ್ರಾಮವು ಪುರಾತನಕಾಲದಲ್ಲಿ ಪುಷ್ಪಾವತಿ ಎಂಬ ನಗರವಾಗಿತ್ತಂತೆ. ಕ್ರಿ.ಶ. 1189 ರಲ್ಲಿ ಈ ನಗರದಲ್ಲಿ ರಾಮೇಶ್ವರ ದೇಗುಲವು ಸ್ಥಾಪಿತವಾಯಿತು. ಇದನ್ನು ನಿರ್ಮಿಸಿದವನು ಮನೆಮನೆ ಎಂಬ ಕುಟುಂಬಕ್ಕೆ ಸೇರಿದ ರಾಮ ಎಂಬ ಬ್ರಾಹ್ಮಣ. ಆದ್ದರಿಂದಲೇ ಇಲ್ಲಿನ ಶಿವಲಿಂಗಕ್ಕೆ ರಾಮೇಶ್ವರ ಎಂಬ ಹೆಸರು. ಬಳ್ಳಿಗಾವೆಯ ಕೋಡಿಮಠದ ಕಾಳಾಮುಖ ಪಂಥಕ್ಕೆ ಸೇರಿದ ವಾಮಶಕ್ತಿ ಯತಿಯೆಂಬುವವರು ಈ ದೇಗುಲ ಪ್ರತಿಷ್ಠಾಪನೆಯನ್ನು ನೆರವೇರಿಸಿದರೆಂದು ಶಾಸನದಲ್ಲಿ ಉಲ್ಲೇಖವಿದೆ.

ಹೊಯ್ಸಳರ ಪ್ರಾರಂಭಕಾಲದ ವಾಸ್ತುಶಿಲ್ಪವನ್ನು ಅನುಸರಿಸಿ ನಿರ್ಮಿತವಾಗಿರುವ ದೇವಾಲಯದ ಕಟ್ಟಡದ ಸ್ವರೂಪ, ಕೆತ್ತನೆಗಳು ಮೇಲುನೋಟಕ್ಕೆ ಸರಳವಾಗಿರುವಂತೆ ಕಂಡರೂ ತನ್ನ ಪ್ರಾಚೀನತೆಯಿಂದಲೇ ಗಮನಸೆಳೆಯುವಂತಿದೆ. ಹೊರಗೋಡೆಗಳ ಮೇಲಿನ ಶಿಲಾಪಟ್ಟಿಕೆಗಳಲ್ಲಿ ಬಳ್ಳಿಗಳ ನಡುವೆ ಕೆತ್ತಿರುವ ಆನೆ, ಹನುಮ, ಹಂಸ, ಶಾರ್ದೂಲ ಮೊದಲಾದವು ಆಕರ್ಷಕವಾಗಿವೆ. ದೊಡ್ಡದಾದ ಮುಖಮಂಟಪದ ಒರಗುಗೋಡೆಗಳ (ಕಕ್ಷಾಸನ) ಮೇಲೆ ಉದ್ದಕ್ಕೂ ಏಕರೂಪದ ಸುಂದರ ಶಿಖರಗಳನ್ನು ರೂಪಿಸಲಾಗಿದೆ. ನಡುನಡುವೆ ವಜ್ರಾಕೃತಿಯ ವಿನ್ಯಾಸಗಳನ್ನು ಕೆತ್ತಿದೆ.

ವಿಶೇಷ ಕೆತ್ತನೆಗಳೇನೂ ಇರದ ಏಳು ಹಂತದ ಸರಳವಾದ ನಾಗರಶೈಲಿಯ ವಿಮಾನಗೋಪುರದ ಮೇಲೆ ಸುಂದರವಾದ ಕಳಶವಿದೆ. ಗರ್ಭಗುಡಿಯ ಮೂರು ಕಡೆ ಆಕರ್ಷಕ ಜಾಲಂದ್ರ (ಕಿಟಕಿ)ಗಳಿವೆ. ಹಾಗೆಯೇ ಗರ್ಭಗುಡಿಗೂ ಮುಂದಿನ ಮಂಟಪಕ್ಕೂ ನಡುವಿನ ಅಂಕಣವಾದ ಶುಕನಾಸಿಯಲ್ಲೂ ಇಂಥ ಜಾಲಂದ್ರಗಳನ್ನು ಅಳವಡಿಸಿದೆ.

ಈ ಗುಡಿಯ ಮುಖಮಂಟಪದ ಸೊಗಸೇ ಬೇರೆ. ಐದು ಅಂಕಣ, ಇಪ್ಪತ್ನಾಲ್ಕು ಕಂಬಗಳು. ಒಂದು ಕಂಬದ ವಿನ್ಯಾಸದಂತೆ ಮತ್ತೊಂದಿಲ್ಲ. ಮಂಟಪದ ಮೂರು ಕಡೆ ಪ್ರವೇಶದ್ವಾರಗಳು. ಪೂರ್ವದ ಬಾಗಿಲಿಂದ ಒಳಬರುತ್ತಿರುವಂತೆಯೇ ಗರ್ಭಗುಡಿಗೆ ಎದುರಾಗಿ ಕುಳಿತ ನಂದಿವಿಗ್ರಹ ಅತ್ಯಾಕರ್ಷಕ. ನಂದಿಗೆ ತೊಡಿಸಿದ ಆಭರಣಗಳಿರಲಿ, ಗಂಟೆಯ ಹಗ್ಗದ ಗಂಟೂ ತೀರಾ ನೈಜವಾಗಿ ಶೋಭಿಸುತ್ತದೆ. ರಾಮೇಶ್ವರ ಲಿಂಗವು ಕಣ್ಣುಗಳಿರುವಂತೆ ಕಾಣುವುದೊಂದು ವಿಶೇಷ. ಗರ್ಭಗುಡಿಯ ಹೊರಗಿನ ಗೋಡೆಗಳಲ್ಲಿ ನಾಲ್ಕು ದೇವಕೋಷ್ಠಗಳಿವೆ. ಇವುಗಳಲ್ಲಿ ಇರಿಸಿರುವ ಮಹಿಷಮರ್ದಿನಿ, ಸಪ್ತಮಾತೃಕೆಯರು, ಗಣೇಶ ಹಾಗೂ ಮಯೂರವಾಹನ ಕಾರ್ತಿಕೇಯರ ವಿಗ್ರಹಗಳು ಪುರಾತನ ಶಿಲ್ಪಕಲೆಯ ಸುಂದರ ಮಾದರಿಗಳಾಗಿವೆ.

ರಾಮೇಶ್ವರ ದೇಗುಲದ ಪಕ್ಕದಲ್ಲೇ ದೊಡ್ಡದೊಂದು ಕೆರೆ. ಇದರಿಂದ ದೇಗುಲದ ಪರಿಸರ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಪುರಾತನಕಾಲದಲ್ಲಿ ಕುಪ್ಪಗದ್ದೆಯ ಆಸುಪಾಸಿನಲ್ಲಿ ಇನ್ನೂ ಹಲವಾರು ದೇಗುಲಗಳಿದ್ದುವಂತೆ. ಇಂತಹ ದೇಗುಲಗಳ ಅವಶೇಷಗಳಿಂದ ರಕ್ಷಿಸಲಾಗಿರುವ ಹಲವು ಉತ್ತಮ ಶಿಲ್ಪಗಳನ್ನು ರಾಮೇಶ್ವರಗುಡಿಯ ಸಮೀಪದ ಒಂದು ಸಾಧಾರಣ ಕೊಠಡಿಯಲ್ಲಿ ಇರಿಸಲಾಗಿದೆ. ಇವುಗಳಲ್ಲಿ ಕದಂಬರ ಕಾಲದ ಅತ್ಯಂತ ಪ್ರಾಚೀನ ಶಿಲ್ಪಮಾದರಿಗಳಲ್ಲೊಂದಾದ ದ್ವಿಬಾಹು ನರಸಿಂಹನ ವಿಗ್ರಹವೂ ಇರುವುದೊಂದು ವಿಶೇಷ. ಇದಲ್ಲದೆ ಗಣಪತಿ, ಅನಂತಶಯನ ವಿಷ್ಣು, ಕಾಲಭೈರವರ ವಿಗ್ರಹಗಳು ಇವೆ.

ಈ ಸಂಗ್ರಹದ ಅತ್ಯುತ್ತಮ ಶಿಲ್ಪವೆಂದರೆ ಕೊಳಲು ನುಡಿಸುತ್ತಿರುವ ಶ್ರೀಕೃಷ್ಣನ ವಿಗ್ರಹ. ಈ ಶಿಲ್ಪದ ಪ್ರಭಾವಳಿಯ ಸುತ್ತಲೂ ದಶಾವತಾರ ರೂಪಗಳನ್ನು ಕೆತ್ತಿದೆ. ಕೃಷ್ಣನ ಎಡಬಲಗಳಲ್ಲಿ ಗೋಪಿಕಾಸ್ತ್ರೀಯರು ನಿಂತಿದ್ದರೆ, ಶಿಲ್ಪದ ಬುಡದಲ್ಲಿ ಸುತ್ತಲೂ ಗೋವುಗಳನ್ನು ಕಾಣಬಹುದು. ಈ ಬೆಡಗಿನ ಶಿಲ್ಪವನ್ನು ನೋಡುವುದಕ್ಕಾದರೂ ನೀವು ಕುಪ್ಪಗದ್ದೆಗೆ ಒಮ್ಮೆ ಹೋಗಲೇಬೇಕು. ಅಳಿದುಳಿದ ಈ ಪುರಾತನಶಿಲ್ಪಗಳನ್ನು ರಕ್ಷಿಸಿಡುವಲ್ಲಿ ಇಲಾಖೆ ತೀರಾ ನಿರ್ಲಕ್ಷ್ಯ ತೋರಿರುವುದು ವಿಷಾದನೀಯ. ಈಗಲಾದರೂ ಸ್ಥಳೀಯರ ನೆರವಿನಿಂದ ಈ ಸಂಪತ್ತನ್ನು ವ್ಯವಸ್ಥಿತವಾಗಿರಿಸಿ, ಕುಪ್ಪಗದ್ದೆಯನ್ನು ಪ್ರವಾಸಿಕೇಂದ್ರವಾಗಿ ಬೆಳೆಸುವ ಸಾಧ್ಯತೆಯನ್ನು ಪರಿಶೀಲಿಸಬೇಕಿದೆ.

ಇತಿಹಾಸ ಪ್ರಸಿದ್ಧವಾದ ಬನವಾಸಿಯನ್ನು ನೋಡಹೋಗುವವರು ಅಲ್ಲಿಂದ ಕೇವಲ ಹನ್ನೆರಡು ಕಿ.ಮೀ. ದೂರದಲ್ಲಿರುವ ಕುಪ್ಪಗದ್ದೆಗೂ ಭೇಟಿನೀಡಿ ಇಲ್ಲಿನ ದೇಗುಲ ಮತ್ತು ಶಿಲ್ಪಕಲೆಯ ಉತ್ತಮ ಮಾದರಿಗಳನ್ನು ಕಣ್ತುಂಬಿಕೊಳ್ಳುವರೆಂದು ನಮ್ಮ ಆಶಯ.