ಬಸವಣ್ಣ ಅವರ ಕ್ರಾಂತಿಯ ವಿಸ್ತರಣೆ ಇಲ್ಲೆಲ್ಲ ಪ್ರಭಾವ ಮಾಡಿದೆ. ಅಷ್ಟಿಲ್ಲದಿದ್ದರೆ ಬುದ್ಧ ಬಸವ ಅಂಬೇಡ್ಕರ್ ಎಂದು ದಲಿತ ಬಂಡಾಯದ ಲೇಖಕರು ಒಪ್ಪಿಕೊಂಡು ಕುವೆಂಪು ಸಾಹಿತ್ಯವನ್ನು ಇಷ್ಟು ಪರಿಯಲ್ಲಿ ಸಮರ್ಥಿಸಲು ಮುಂದಾಗುತ್ತಿರಲಿಲ್ಲ. ಬಸವಣ್ಣ ಅವರ ನಂತರಕ್ಕೆ ದೊಡ್ಡ ಮಟ್ಟದ ಅವೈದಿಕ ಲೇಖಕ ಕಾಣಿಸಿದ್ದು ಕುವೆಂಪು ಅವರಲ್ಲಿ ಮಾತ್ರ. ಎಂತಹ ಯುಗ ಸಂಯೋಜನೆಯ ಸೃಜನಶೀಲತೆಯ ಲೇಖಕ!
ಡಾ. ಕೆ.ಸಿ. ಶಿವಾರೆಡ್ಡಿ ಸಂಪಾದಕತ್ವದ ‘ಕುವೆಂಪು ಸಮಗ್ರ ಸಾಹಿತ್ಯ’ ಸಂಪುಟಗಳ ಕುರಿತು ಡಾ. ಮೊಗಳ್ಳಿ ಗಣೇಶ್ ಬರೆದ ಲೇಖನ

 

ಹೊಸ ಮಿಲೇನಿಯಂ ಆಗಮನದ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಕುಲಪತಿ ಎಂ.ಎಂ.ಕಲಬುರ್ಗಿ ಅವರಿಗೆ ಒಂದು ಪತ್ರ ಬರೆದು; ಕುವೆಂಪು ಸಾಹಿತ್ಯದ ಭಜನೆ ಮಾಡುವುದು ಬೇಡಾ; ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಿಸಿ ಎಂದು ಕೋರಿದ್ದರು. ತಕ್ಷಣವೇ ಕಲಬುರ್ಗಿ ಅವರು ಮುಂದಾಗಿ ಕುವೆಂಪು ಸಮಗ್ರ ಕಾವ್ಯ ಸಂಪುಟಗಳ ಪ್ರಸಾರಾಂಗದಿಂದ ತಂದಿದ್ದರು. ಆ ನಂತರ ಈ ಬೃಹತ್ ಯೋಜನೆ ನೆನೆಗುದಿಗೆ ಬಿದ್ದು ಬಹಳ ತಡವಾಗಿ ಅಂತೂ ಈಗ ಅವರ ಎಲ್ಲ ಬರಹಗಳು ಹನ್ನೆರಡು ಸಂಪುಟಗಳಲ್ಲಿ ಹೊರಬಂದಿದೆ.

ಈ ಎಲ್ಲ ಸಂಪುಟಗಳೂ ಒಬ್ಬರಿಂದ ಸಂಪಾದಿಸಲು ಸಾಧ್ಯವಿಲ್ಲ. ಹತ್ತಾರು ಕೈಗಳು ಬೇಕು. ಆ ಎಲ್ಲ ಸಹಕಾರಿ ಕೈಗಳ ಶಕ್ತಿಯಿಂದ ಇಂತಹದೊಂದು ಬೃಹತ್ ಸಂಪುಟಗಳನ್ನು ಪ್ರೊ.ಕೆ.ಸಿ.ಶಿವಾರೆಡ್ಡಿ ಅವರು ಕಷ್ಟಪಟ್ಟು ಸಂಪಾದಿಸಿದ್ದಾರೆ. ಅವರ ಪರಿಶ್ರಮ ಸಾರ್ಥಕವಾದುದು. ಈ ಕೆಲಸ ಆಗಿರುವುದು ತೇಜಸ್ವಿ ಹಾಗೂ ಕಲಬುರ್ಗಿ ಅವರ ಆಳವಾದ ಚಾರಿತ್ರಿಕ ಪ್ರಜ್ಞೆಯ ಎಚ್ಚರದಿಂದಾಗಿ. ಬೇಂದ್ರೆ ಮಹಾಕವಿಯ ಸಾಧನಕೇರಿಯಿಂದ ಬಂದ ಕಲಬುರ್ಗಿ ಕುವೆಂಪು ಅವರನ್ನು ‘ಶತಮಾನದ ಪ್ರತಿಭೆ’ ಎಂದು ಕರೆದು ಮೊದಲ ಸಂಪುಟಕ್ಕೆ ಮುನ್ನುಡಿ ಬರೆಯುತ್ತಾರೆ.

“ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಭಾವನಾತ್ಮಕ-ವೈಚಾರಿಕ-ಆಧ್ಯಾತ್ಮಿಕ ಆಶಯಗಳೂ; ಗದ್ಯನಿಷ್ಟ ಪದ್ಯನಿಷ್ಟ ಆಕೃತಿಗಳೂ; ಮಾರ್ಗಮುಖಿ-ದೇಶಿಮುಖಿ ಸಂವೇದನೆಗಳೂ, ಕಥಾತ್ಮಕ-ಅಕಥಾತ್ಮಕ ರೂಪಗಳೂ, ಖಂಡಕಾವ್ಯ-ಮಹಾಕಾವ್ಯ ಶಿಲ್ಪಗಳೂ ಆಗಾಗ ಮೂಡುತ್ತ-ಮುಳುಗುತ್ತ ಸಾಗಿಬಂದಿವೆ. ಸಾವಿರ ವರ್ಷಗಳ ಈ ಎಲ್ಲ ಸಾಧನೆಗಳೂ ಕುವೆಂಪು ಅವರ ಬರವಣಿಗೆಯಲ್ಲಿ ಏಕೀಭವಿಸಿರುವುದು ಒಂದು ವಿಶೇಷ. ಹೀಗಾಗಿಯೇ ಅವರ ಸಾಹಿತ್ಯದಲ್ಲಿ ಆಧುನಿಕ ಪ್ರವಾಹಗಳೊಂದಿಗೆ ಪ್ರಾಚೀನ ಪರಂಪರೆಗಳನ್ನೂ ಓದಿದ ಅನುಭವ ಆಗುತ್ತದೆ”. ಕುವೆಂಪು ಸಮಗ್ರ ಕಾವ್ಯ ಸಂಪುಟಕ್ಕೆ ಎಂ.ಎಂ.ಕಲಬುರ್ಗಿ ಅವರು ಬರೆದ ಮುನ್ನುಡಿಯ ಮಾತುಗಳಿವು. ಶತಮಾನದ ಪ್ರತಿಭೆ ಎಂದು ಗುರುತಿಸುತ್ತ, ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯ ಬಹುರೂಪಿ ಧಾರೆಗಳೆಲ್ಲ ಕುವೆಂಪು ಅವರಲ್ಲಿ ಸಂಯೋಗವಾಗಿದ್ದರ ಮಹತ್ತನ್ನು ಸೂಕ್ಷ್ಮವಾಗಿ ಧ್ವನಿಸುತ್ತಾರೆ.

ಬಸವಣ್ಣ ಹಾಗೂ ಅವರ ಸಮಕಾಲೀನ ಅಲಕ್ಷಿತ ಶೈವ ಸಂವೇದನೆಯ ವಚನ ಕವಿಗಳು ಸನಾತನ ಸಾಹಿತ್ಯಕ್ಕೆ ಹೊರತಾದ ಸಾಹಿತ್ಯ ಸಂಸ್ಕೃತಿಯನ್ನು ಸೃಷ್ಟಿಸಿದರು. ಅದು ನಿರ್ಣಾಯಕ ಸಾಹಿತ್ಯ ಪಲ್ಲಟ. ದಮನಿತ ಶೂದ್ರ ಲೋಕ ಕೇವಲ ಮೌಖಿಕವಾಗಿದ್ದುದು ಲಿಖಿತ ಬರಹ ಪರಂಪರೆಯ ಅಕ್ಷರ ಜ್ಞಾನಕ್ಕೆ ಪ್ರವೇಶಿಸಿತ್ತು. ಅನಕ್ಷರಸ್ಥ ದಲಿತ ತತ್ವಪದಕಾರರು ತಾವೇ ಕವಿಗಳೂ, ಸಂಗೀತಗಾರರೂ ಆಗಿ ವಚನ ಹಾಗೂ ಭಕ್ತಿಪಂಥದ ದಾಸ ಕವಿಗಳ ನಡುವೆ ನಿಂತು ವಿಮೋಚನೆಯ ಪದಗಳ ಊರೂರು ಕೇರಿಗಳಲ್ಲಿ ಹಾಡುತ್ತಿದ್ದರು. ಅತ್ತ ದಲಿತರು ಶೈವ ಕಾವ್ಯವನ್ನು ವಿಸ್ತಾರವಾದ ಮಹಾಕಾವ್ಯ ಪರಂಪರೆಯತ್ತ ಬೆಳೆಸಿ ಚಂಪೂ ಕಾವ್ಯ ಶೈಲಿಯಲ್ಲಿ ಕರ್ನಾಟಕದ ಉದ್ದಕ್ಕೂ ತಳ ಸಮುದಾಯಗಳು ತಮ್ಮ ಸೀಮೆಯ ಸಾಂಸ್ಕೃತಿಕ ವೀರರ ಸುತ್ತ ಕಾವ್ಯ ಕಟ್ಟಿ ಹಗಲು ರಾತ್ರಿ ಹಾಡಿ ಜಾತ್ರೆ ಉತ್ಸವ ಮಾಡಿ ದಲಿತ ಮೌಖಿಕ ಮಹಾಕಾವ್ಯ ಪರಂಪರೆ ಇನ್ನೊಂದು ದೇಶಿ ಮಾರ್ಗವನ್ನು ಕಂಡುಕೊಂಡಿತ್ತು.

ಬಸವಣ್ಣ ಅವರ ಕ್ರಾಂತಿಯ ವಿಸ್ತರಣೆ ಇಲ್ಲೆಲ್ಲ ಪ್ರಭಾವ ಮಾಡಿದೆ. ಅಷ್ಟಿಲ್ಲದಿದ್ದರೆ ಬುದ್ಧ ಬಸವ ಅಂಬೇಡ್ಕರ್ ಎಂದು ದಲಿತ ಬಂಡಾಯದ ಲೇಖಕರು ಒಪ್ಪಿಕೊಂಡು ಕುವೆಂಪು ಸಾಹಿತ್ಯವನ್ನು ಇಷ್ಟು ಪರಿಯಲ್ಲಿ ಸಮರ್ಥಿಸಲು ಮುಂದಾಗುತ್ತಿರಲಿಲ್ಲ. ಬಸವಣ್ಣ ಅವರ ನಂತರಕ್ಕೆ ದೊಡ್ಡ ಮಟ್ಟದ ಅವೈದಿಕ ಲೇಖಕ ಕಾಣಿಸಿದ್ದು ಕುವೆಂಪು ಅವರಲ್ಲಿ ಮಾತ್ರ. ಎಂತಹ ಯುಗ ಸಂಯೋಜನೆಯ ಸೃಜನಶೀಲತೆಯ ಲೇಖಕ! ವಿಪರ್ಯಾಸ ಎಂದರೆ; ಈ ನಮ್ಮ ಮಹಾಕವಿ ಕುವೆಂಪು ವಚನ, ಜನಪದ, ತತ್ವಪದ ಹಾಗೂ ದಾಸ ಸಾಹಿತ್ಯದ ಅವೈದಿಕ ಕಾವ್ಯಗಳ ಬಗ್ಗೆ ಉಪೇಕ್ಷೆಯಲ್ಲಿದ್ದರು. ಕೊನೆಗಾಲದಲ್ಲಿ ಬೂಸಾ ಸಾಹಿತ್ಯದ ಹಗರಣದಲ್ಲಿ ದಲಿತರ ಮಾತಿನ ಪರವಾಗಿದ್ದರು. ಶೂದ್ರ ಜಗತ್ತಿನ ಮಹಾ ಸಾಂಸ್ಕೃತಿಕ ವೀರ ಸಾಹಿತ್ಯ ಮತ್ತು ರಾಜಕೀಯ, ಸಾಮಾಜಿಕ ಪ್ರಜ್ಞೆಯ ಸುಧಾರಣೆಗಾಗಿ ಇಪ್ಪತ್ತನೆ ಶತಮಾನದಲ್ಲಿ ಮೂಡಿಬಂದಿದ್ದು ಒಂದು ವಿಶಾಲ ಅವಕಾಶ.

ಕುವೆಂಪು ಅವರು ಜನಪದ, ತತ್ವಪದ, ವಚನ ಭಕ್ತಿ ಕಾವ್ಯಗಳೆಲ್ಲ ಏನನ್ನು ಪರೋಕ್ಷವಾಗಿ ಹೇಳುತ್ತಿದ್ದವೊ ಅವನ್ನೆಲ್ಲ ಆಧುನಿಕ ಪ್ರಜ್ಞೆಯಲ್ಲಿ ಅಭಿವ್ಯಕ್ತಿ ಮಾಡಿದರು. ಅದರಿಂದಲೇ ಶಂಭೂಕ, ಜಲಗಾರನಂತಹ ಪಾತ್ರಗಳು ಅವರಿಂದ ಬಂದವು. ಅವರನ್ನು ಶೈವೀಕರಿಸಿದ್ದರು. ಶಿವ ಸಂವೇದನೆ ದಟ್ಟವಾಗಿ ಕುವೆಂಪು ಸಮಗ್ರ ಸಾಹಿತ್ಯದಲ್ಲಿ ಬೇರೆ ಬೇರೆ ರೂಪಗಳಲ್ಲಿ ಹಬ್ಬಿದೆ. ಹನ್ನೆರಡನೆ ಶತಮಾನದ ಶೈವ ಪ್ರತಿಭೆಯು ಕುವೆಂಪು ಅವರಲ್ಲಿ ಬೃಹತ್ತಾಗಿ ವಿಸ್ತರಿಸಿರುವುದಕ್ಕೂ ವಚನ ಸಾಹಿತ್ಯದ ಅಖಂಡತೆಗೂ ಅವ್ಯಕ್ತ ಪರಂಪರೆಗಳ ಸಂಬಂಧವಿದೆ. ನಿಸರ್ಗಾರಾಧನೆಯ ಅವರ ಕಾವ್ಯದಲ್ಲಿ ಭಕ್ತಿ ಪಂಥ ಕವಿಗಳ ದಿವ್ಯತೆಯೂ ಸರಳತೆಯೂ ಹದವಾಗಿ ಬೆಸುಗೆಯಾಗಿದೆ. ಹಾಗೆ ನೋಡಿದರೆ ಅವರ ಎರಡು ಬೃಹತ್ ಕಾದಂಬರಿಗಳು ಜನಪದ ಕಾದಂಬರಿಗಳು. ಆ ಕಾದಂಬರಿಗಳ ಮಲೆನಾಡ ಕೌಟುಂಬಿಕ ಸಂಬಂಧಗಳ ಜನಪದ ಲೋಕ ಬೇರೊಂದು ದರ್ಶನವ ತೋರುತ್ತವೆ. ಮಂಟೇಸ್ವಾಮಿ, ಮಾದೇಶ್ವರ ಕಾವ್ಯಗಳು ದಲಿತರ ಬಯಲು ಸೀಮೆಯ ಎರಡು ಮಹಾಕಾವ್ಯ ಕಥನಗಳು. ಶೂದ್ರ ಜಗತ್ತಿನ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಎಂಬ ಈ ಎರಡು ಕಾದಂಬರಿಗಳು ಶೂದ್ರ ಜಾನಪದದ ಲಿಖಿತ ಆಧುನಿಕ ಕಥನಗಳು. ದಲಿತರ ಈ ಎರಡೂ ಕಾವ್ಯಗಳೂ ಕುವೆಂಪು ಅವರ ಕಾದಂಬರಿಗಳು ಮೂಲತಃ ಶೈವ ಸ್ವರೂಪದವು ಎಂಬುದು ಆಕಸ್ಮಿಕವಲ್ಲ; ಅದು ಚಾರಿತ್ರಿಕ ಒತ್ತಡಗಳಿಂದಾದ ಅಭಿವ್ಯಕ್ತಿಗಳು.

ಕುವೆಂಪು ಯುಗದ ಕವಿ ಪ್ರತಿಭೆ ಎಂದು ಎಂ.ಎಂ.ಕಲಬುರ್ಗಿ ಅವರು ಸಾರ್ಥಕವಾದ ಮಾತನ್ನು ಸೂಚಿಸಿದ್ದಾರೆ. ಪಂಪನಿಂದ ಹಿಡಿದು ಹದಿನೈದನೆ ಶತಮಾನದ ದಲಿತರ ಮಾದೇಶ್ವರ ಕಾವ್ಯ ಪರಂಪರೆ ತನಕ ಚಾಚಿಕೊಂಡು ಎಲ್ಲ ಸಾಂಸ್ಕೃತಿಕ ಹಿನ್ನೆಲೆಗಳನ್ನು ಸಂಯೋಗಿಸಿಕೊಂಡು ಅವೈದಿಕ ಹಿಂದುತ್ವವನ್ನು ಈ ಮಟ್ಟದಲ್ಲಿ, ದಾರ್ಶನಿಕ ಔನ್ನತ್ಯದಲ್ಲಿ ಹಾಗೆಯೇ ವೈಚಾರಿಕ ಮಾನವತ್ವದಲ್ಲಿ ಪ್ರತಿಪಾದಿಸಿದ ಮತ್ತೊಬ್ಬ ಲೇಖಕನನ್ನು ಇಪ್ಪತ್ತನೆ ಶತಮಾನದಲ್ಲಿ; ಸ್ಥಳೀಯ ಭಾರತೀಯ ಭಾಷೆಗಳಲ್ಲಿ ನಾನು ಕಂಡಿಲ್ಲ. ಸೋವಿಯತ್ ರಷ್ಯಾದ ಕ್ರಾಂತಿಯನ್ನೂ ಹೀರಿಕೊಂಡು ಕುವೆಂಪು ಕ್ರಾಂತಿ ಕವಿತೆಗಳನ್ನು ಬರೆದಾಗ ಬಂಡಾಯ ಲೇಖಕರು ಅದೆಲ್ಲಿದ್ದರೊ… ವೈಚಾರಿಕ ಕ್ರಾಂತಿಗಾಗಿ ಎಪ್ಪತ್ತರ ದಶಕದಲ್ಲಿ ಕುವೆಂಪು ಕರೆ ನೀಡಿದಾಗ; ಅವತ್ತಿನ ಯುವ ಕವಿಯಾಗಿದ್ದ ಚಂಪಾ ಹಾಗೂ ಮುಂತಾದವರು ದಾರ್ಶಕನ ದೀನತೆಯನ್ನು ಬಿಟ್ಟು ಧಿಕ್ಕಾರ ಭಾಷೆಯಲ್ಲಿ ಕಾವ್ಯ, ವಿಚಾರ, ಕಥೆ ಕಟ್ಟಲು ಸಾಧ್ಯವಾಯಿತು. ತಂತಾನೆ ಭಕ್ತಿ, ವಚನ, ತತ್ವ, ಪಥ ಬದಲಾಗಿ ಧಿಕ್ಕಾರ, ಹೋರಾಟ, ದಂಗೆ, ಪ್ರತಿರೋಧಗಳು ಸಾಮಾಜಿಕ ವರ್ತಮಾನದ ಜೊತೆಗೆ ಪಲ್ಲಟವಾಗಿ ಹೊಸಬಗೆಯ ಸಾಹಿತ್ಯಕ್ಕೆ ಸಾವಿರಾರು ದಾರಿಗಳು ತೆರೆದುಕೊಂಡವು.

ನಿಸರ್ಗಾರಾಧನೆಯ ಅವರ ಕಾವ್ಯದಲ್ಲಿ ಭಕ್ತಿ ಪಂಥ ಕವಿಗಳ ದಿವ್ಯತೆಯೂ ಸರಳತೆಯೂ ಹದವಾಗಿ ಬೆಸುಗೆಯಾಗಿದೆ. ಹಾಗೆ ನೋಡಿದರೆ ಅವರ ಎರಡು ಬೃಹತ್ ಕಾದಂಬರಿಗಳು ಜನಪದ ಕಾದಂಬರಿಗಳು.

ಒಬ್ಬ ಲೇಖಕ ಒಂದಲ್ಲ; ಹತ್ತಾರು, ನೂರಾರು ದಮನಿತ ತಲೆಮಾರುಗಳ ಎಚ್ಚರಿಸಿ ಬರಹಗಾರರನ್ನಾಗಿಸುವಂತೆ ಪ್ರೇರೇಪಿಸುವುದು ಸಾಮಾನ್ಯವೇ… ನೆನ್ನೆ ನೆನ್ನೆಗಿಂತಲೂ ಇಂದು ಇಂದಿಗೆ ನಾಳೆ ನಾಳೆಗೆ ಹೆಚ್ಚೆಚ್ಚು ಪ್ರಸ್ತುತ ಕುವೆಂಪು ಸಾಹಿತ್ಯದ ಸಮಗ್ರತೆ. ಈ ಕಾಲದ ತಲೆಮಾರು ಕುವೆಂಪು ಅವರನ್ನು ಅರ್ಥಮಾಡಿಕೊಳ್ಳದೆ ಹೋದರೆ ಬಹಳ ಕಷ್ಟವಿದೆ. ಸಾಹಿತ್ಯ ಮಾತ್ರ ಮತೀಯವಾಗಬಾರದು. ನಿರ್ಮತೀಕರಣ, ನಿರ್ಧರ್ಮೀಕರಣವೇ ಸಾಹಿತ್ಯದ ಮೂಲ ತತ್ವ. ಮನುಜ ಮತವನ್ನು ಕುವೆಂಪು ಪ್ರತಿಪಾದಿಸಿದರು. ಸರ್ವಧರ್ಮ ಸಮನ್ವಯವೇ ಮಾನವತ್ವ ಎಂದರು. ನವೋದಯದ ಶ್ರೀ ರಾಮಾಯಣ ದರ್ಶನದ ಮೂಲಕ ಪಾಪಿಗೂ ಉದ್ದಾರವಿದೆ ಎಂದು ಬರೆದರು. ಜೈನ ಧರ್ಮೀಯರೂ, ಬೌದ್ಧರೂ, ಹಿಂದುತ್ವದ ಮುಂದೆ ದೇವರನ್ನೂ ಆ ದೈವದ ಸಂಸ್ಕಾರವನ್ನೂ ಬೇರೆ ರೀತಿಯಲ್ಲಿ ಅರ್ಥೈಸಿ ಬದಲಾಯಿಸಿದ್ದರು. ಕುವೆಂಪು ಅವರಿಗೆ ಬೌದ್ಧ ಪೂರ್ಣಿಮೆ ಬಹಳ ಇಷ್ಟವಾಗಿತ್ತು.

ಧರ್ಮಗಳ ಕೊಡೆಗಳ ನೆರಳ ಕೆಳಗೆ ಕನ್ನಡ ಸಾಹಿತ್ಯ ಪರಂಪರೆಗಳು ಸಾಕಷ್ಟು ಹರಿದಾಡಿ ಬತ್ತಿಹೋಗಿವೆ. ಈಗ ಅವುಗಳ ಬರಿದೇ ಮತೀಯತೆ ದೋಷ ಸ್ವರೂಪದಲ್ಲಿ ಹಿಂದುತ್ವವನ್ನು ಬಲಾತ್ಕಾರ ಭಯದಲ್ಲಿ ಪ್ರತಿಪಾದಿಸುತ್ತಿವೆ. ಉಗ್ರ ಹಿಂದುತ್ವ ಈಗ ಬಲಿತಿದೆ. ಕುವೆಂಪು ಅವರು ಪುರೋಹಿತಶಾಹಿ ವ್ಯವಸ್ಥೆಯ ಬಗ್ಗೆ ಬಹಳ ಸಲ ಎಚ್ಚರಿಸುತ್ತಿದ್ದುದು ನಾಳಿನ ಅದರ ರಾಜಕೀಯ ಪ್ರಭುತ್ವ ಧರ್ಮರಾಜಕಾರಣ ಮುನ್ನೋಟದಿಂದಾಗಿ ಎಪ್ಪತ್ತರ ದಶಕದಲ್ಲಿ ಅವೈದಿಕ ಜಗತ್ತಿನ ವಿಚಾರ ಕ್ರಾಂತಿಗೆ ಕುವೆಂಪು ಕರೆ ನೀಡಿದ್ದರು. ಇವತ್ತು ಅದೇ ವೈದಿಕ ಪುರೋಹಿತಜಾತಿ ಶಾಹಿ ಹಿಂದುತ್ವ ತಲೆ ಎತ್ತಿ ನಿಂತಿದೆ. ಹಿಂದೂ ಎಂಬ ಒಂದು ‘ಧರ್ಮ’ ಅಳಿದು ‘ಜಾತಿ’ ಎಂಬ ಧರ್ಮ ವಿಕಾರವಾಗಿ ಬೆಳೆದು ಪ್ರಭುತ್ವ ಶಕ್ತಿಯಾಗಿದೆ.

(ಡಾ. ಕೆ.ಸಿ. ಶಿವಾರೆಡ್ಡಿ)

ದಕ್ಷಿಣ ಭಾರತ ಯಾವತ್ತೂ ಕೂಡ ಶೈವ ಸಂವೇದನೆಯ ಪರಂಪರೆಗಳ ಮೂಲಕ ಆರ್ಯ ಪರಂಪರೆಯನ್ನು ತಡೆಯುತ್ತಲೇ ಬಂದಿದ್ದವು. ಕುವೆಂಪು ಸಾಹಿತ್ಯ ಕೂಡ ಇಡೀಯಾಗಿ ಒಂದು ತಡೆಗೋಡೆಯಾಗಿ ಪರಿವರ್ತನಾ ಶೀಲ ಹಿಂದೂ ಮಾನವೀಕರಣವನ್ನು ಪ್ರತಿಪಾದಿಸಲು ತನ್ನೆಲ್ಲ ಆಯಾಮಗಳಿಂದ ಯತ್ನಿಸಿತ್ತು ಎಂಬುದು ಬಹಳ ಮುಖ್ಯ.

ಇಂತಹ ಉನ್ನತ ಲೇಖಕರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಕನ್ನಡ ವಿಶ್ವವಿದ್ಯಾಲಯದ ಮೂಲಕವೇ ‘ಜ್ಞಾನ ಪ್ರಸಾರಾಂಗ’ ಎಂಬ ಯೋಜನೆಯಲ್ಲಿ ಪ್ರಕಟಿಸಿ ಕರ್ನಾಟಕದ ಎಲ್ಲ ಹೈಸ್ಕೂಲು, ಪಿ.ಯು.ಕಾಲೇಜು, ಪದವಿ ಕಾಲೇಜುಗಳ ಲೈಬ್ರರಿಗಳಿಗೆ ತಾನೇ ದುಡ್ಡು ಕೊಟ್ಟು ಖರೀದಿಸಿ ಹಂಚಿದರೆ, ಅದು ಶೈಕ್ಷಣಿಕ ವಿಸ್ತರಣೆಯಾಗುತ್ತದೆ. ಮುಖ್ಯವಾಗಿ ಗ್ರಾಮೀಣ ಬಡ ಮಕ್ಕಳಿಗೆ ನಮ್ಮ ನಾಡು ನುಡಿ ಸಮಾಜ ಸಾಹಿತ್ಯಗಳನ್ನು ಪರಿಚಯಿಸಿದಂತಾಗುತ್ತದೆ. ಆ ನಂತರ ಅವನ್ನೆಲ್ಲ ಡಿಜಿಟಲೀಕರಣಗೊಳಿಸುವುದು ಬಹಳ ಸುಲಭ. ಗ್ರಂಥಾಲಯಗಳಿಗೆಂದು ನೀಡುವ ಸರ್ಕಾರಿ ಅನುದಾನ ದುರುಪಯೋಗ ಆಗುವುದು ತಪ್ಪುತ್ತದೆ.

ಒಂದು ನಾಡಿನ ಸಮಗ್ರ ಅಧ್ಯಯನ, ಸಂಶೋಧನೆ, ಹೊಸ ಬರಹಗಳ ಸಂಶೋಧನೆ, ಪ್ರಾಚೀನ, ಮಧ್ಯಕಾಲೀನ, ಆಧುನಿಕ ಯುಗದ ಕಾಲಪಲ್ಲಟಗಳ ಬಹುರೂಪಿ ಜ್ಞಾನ ಪರಂಪರೆಗಳ ಪ್ರಕಟಣೆಗಾಗಿಯೇ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಬಹುದು. ಸಂಸ್ಕೃತ ಒಂದು ಸಾಹಿತ್ಯ ಧರ್ಮದ ಭಾಷೆ. ಅದಕ್ಕೇ ಒಂದು ಬೃಹತ್ ಯೋಜನೆಗಳ ವಿಶ್ವವಿದ್ಯಾಲಯವನ್ನು ಭಾರತದ ಉದ್ದಕ್ಕೂ ಸ್ಥಾಪಿಸಿರುವಾಗ ಅಭಿಜಾತ ಭಾಷೆಗಳಲ್ಲಿ ಕನ್ನಡವೂ ಒಂದೆಂದು ಗುರುತಾಗಿರುವಾಗ; ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದ ತನಕದ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಆಚಾರ ವಿಚಾರಗಳ ಜೊತೆಗೆ ಹೇಗೆ ಕನ್ನಡ ಸಾಹಿತ್ಯ ಪರಂಪರೆಗಳು ಬೆಳೆದು ಬಂದಿವೆ ಎಂಬ ವಾಸ್ತವದ ಜೊತೆಗಿನ ಕೊಂಡಿಗಳನ್ನು ಬೆಸೆಯುವ ಅಧ್ಯಯನಗಳೂ ಆಗಬೇಕಲ್ಲವೇ… ಈ ಎಲ್ಲ ಜ್ಞಾನ ಪ್ರಸಾರಕ್ಕೆ ತಕ್ಕಂತೆ ಕರ್ನಾಟಕದ ತುಂಬ ಪ್ರತಿಭಾವಂತ ಜಾತ್ಯಾತೀತ ವಿದ್ವಾಂಸರು ಈ ಕಾಲದಲ್ಲೂ ಇದ್ದಾರೆ.

ಕುವೆಂಪು ಸಮಗ್ರ ಸಾಹಿತ್ಯ ಇಂದಿನ ನಾಳಿನ ತಲೆಮಾರುಗಳಿಗೆ ಸಾಕಾಗುವುದಿಲ್ಲ. ಶಿವರಾಮ ಕಾರಂತರು ವಿಜ್ಞಾನ ಜಗತ್ತಿನ ಎನ್‍ಸೈಕ್ಲೋಪಿಡಿಯಾ ಮಾದರಿಯ ಬರಹಗಳನ್ನು ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಬರೆವ ಕಾಲಕ್ಕೆ ಆ ಕುವೆಂಪು ಕ್ವಾಂಟಂ ಥಿಯರಿಯನ್ನೂ ಭಾವಿಸಿ ಆಧ್ಯಾತ್ಮದ ವಿಜ್ಞಾನವನ್ನು ವಿವೇಚಿಸುತ್ತಿದ್ದರು. ಬಹಳ ಮುಂದೆ ಹೋಗಿ ಶುಷೂಪ್ತಿಯ ದಂಡೆ ತಲುಪಿದ್ದರು. ಎಂತಹ ವೈಚಾರಿಕ ಆಧ್ಯಾತ್ಮಿಕ ದಿವ್ಯ ವಿಪರ್ಯಾಸ… ಯಾವತ್ತೂ ಸಮುದ್ರಗಳಿಗೆ ಎಸೆದರೆ; ಸಮುದ್ರದ ಅಲೆಗಳು ಎಲ್ಲವನ್ನೂ ದಂಡೆಗೇ ತಂದು ಎಸೆಯುತ್ತವೆ. ವಿಶ್ವ ಎನ್ನುವುದು ಒಂದು ಇದೆ; ಆದರ ಆ ಅವ್ಯಕ್ತ ವಿಶ್ವ ಯಾರನ್ನೂ ವಿಶ್ವಮಾನವ ಎಂದು ಒಪ್ಪಿಕೊಳ್ಳುವುದಿಲ್ಲ. ಕಾಲವೂ ಹಾಗೆಯೇ ಎಲ್ಲರನ್ನೂ ಹಾಯ್ದು ಹೋಗುವವು ಗಾಳಿಯ ಉಸಿರಿನ ಮಾರುತಗಳು. ಆ ಜಾತಿ, ಈ ಜಾತಿ, ಜನಾಮಗ ಎಂಬ ವ್ಯತ್ಯಾಸ ಇಲ್ಲಿ ಚಳಿ ಮಳೆ ಗಾಳಿ ಬಿಸಿಲಿಗೆ, ಅವೆಲ್ಲ ಸಮನಾಗಿರುತ್ತವೆ. ಪೂರ್ಣದೃಷ್ಟಿ ಇದ್ದರೂ ಮಹಾ ಕವಿ ಯಾವ ಕಾಲಕ್ಕೂ ಮಹಾ ಆಗಿ ವರ್ತಮಾನಕ್ಕೆ ಬೇಕೇ ಬೇಕು ಎಂದೆನಿಸುವುದಿಲ್ಲ. ಪಂಪ ಆದಿ ಕವಿ ಎಂದು ಗೌರವಿಸಿ ಆಚರಿಸಿ ನೆನಪಿಸಿಕೊಳ್ಳುತ್ತೇವೆ. ಕುವೆಂಪು ಅವರಾಗಲಿ; ಯಾವುದೇ ಆಧುನಿಕೋತ್ತರ ಲೇಖಕನೇ ಆಗಲಿ, ಕಾಲದ ಸರದಿಯಲ್ಲಿ ಸಾಗಿ ಹೋಗಬೇಕು. ಅದೇ ಪರಂಪರೆಯ ಸೃಜನಶೀಲ ಚಲನೆ.

ಆದರೆ ಚರಿತ್ರೆಯಲ್ಲಿ ಕೆಲವು ಲೇಖಕರನ್ನು ಮಾದರಿಯಾಗಿ ಮತ್ತೆ ಮತ್ತೆ ನೆನಪಿಗೆ ಓದಿಗೆ ತಂದುಕೊಳ್ಳುತ್ತಲೇ ಇರಬೇಕು. ಚಾರಿತ್ರಿಕ ನೆನಪಿನ ಕರ್ತವ್ಯವನ್ನು ಪ್ರೊ.ಕೆ.ಸಿ.ಶಿವಾರೆಡ್ಡಿ ಕುವೆಂಪು ಸಮಗ್ರ ಸಾಹಿತ್ಯ ಸಂಪುಟಗಳನ್ನು ದೀರ್ಘ ಪರಿಶ್ರಮದಿಂದ ಏಕೀಕರಣಗೊಳಿಸಿ ತಂದಿರುವುದು ಸ್ಮರಣೀಯ ಕೆಲಸ.

ಇಂತಹ ಸಮಗ್ರ ಸಾಹಿತ್ಯ ಸಂಪುಟಗಳು ಹತ್ತನೆ ಶತಮಾನದಿಂದ ಆರಂಭಿಸಿ ಇಪ್ಪತ್ತನೇ ಶತಮಾನದವರೆಗಿನ ಅತ್ಯುನ್ನತ ಸಾಹಿತ್ಯ ಪರಂಪರೆಗಳ ಸಂಪುಟಗಳು ಪ್ರಕಟವಾಗಬೇಕು. ಹಾಗೆಯೇ ಅಲೆಮಾರಿ, ಆದಿವಾಸಿ, ಬುಡಕಟ್ಟು ಹಾಗೂ ದಲಿತ ಮೌಖಿಕ ಪರಂಪರೆಯ ಕಾವ್ಯ ಪರಂಪರೆಗಳೂ ಇಡಿಯಾಗಿ ಪ್ರಕಟವಾಗಬೇಕು. ಆಗ ಕುವೆಂಪು ಅವರ ಪೂರ್ಣದೃಷ್ಟಿಗೆ ಅರ್ಥ ಬರುತ್ತದೆ. ಸರ್ಕಾರಗಳು ಇಂತಹ ಬೃಹತ್ ಯೋಜನೆಗಳಿಗೆ ಬೆಂಬಲವಾಗಿ ನಿಂತು ಕನ್ನಡ ವಿಶ್ವವಿದ್ಯಾಲಯಕ್ಕೆ ಒತ್ತಾಸೆಯಾದರೆ; ಕನ್ನಡ ನಾಡು ನುಡಿಗೆ ಬಹಳ ಉಪಕಾರವಾಗುತ್ತದೆ.


(ಕೃತಿ: ಕುವೆಂಪು ಸಮಗ್ರ ಸಾಹಿತ್ಯ, ಸಂಪಾದಕರು: ಡಾ. ಕೆ.ಸಿ. ಶಿವಾರೆಡ್ಡಿ, ಪ್ರಕಾಶನ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ)