ಮೊನ್ನೆ ಸಂಕ್ರಾಂತಿಗೆ ಮತ್ತ ನಮ್ಮ ಕೆಂಡಸಂಪಿಗೆ ಶುರು ಆತು.. ಖರೇನ ಮನಸ್ಸಿಗೆ ಅಗದಿ ಖುಶಿ ಆತು… ಹಿಂತಾ ಸಂದರ್ಭದೊಳಗ ನಿಮ್ಮ  ಮುಂದ ನನ್ನ ’ಕೆಂಡಸಂಪಿಗೆ’ ಜೊತಿ ಇರೋ ಒಡನಾಟ ಹಂಚಗೋಬೇಕು ಅಂತ ಅನಿಸಿ ಒಂದ ನಾಲ್ಕ ಲೈನ ಬರದೇನಿ, ದಯವಿಟ್ಟ ಓದಿ  ಈ ’ಕೆಂಡಸಂಪಿಗೆಗೆ’ ಮತ್ತ ಸ್ವಾಗತಾ ಮಾಡ್ರಿ.

ಹಂಗ ನಾ ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಅಂತ ಎಂದೂ ಅನ್ಕೋಂಡಿದ್ದಿಲ್ಲ ಆದರೂ ಇವತ್ತ  ಎರಡ ಮಾಟನ ಛಂದನ ಪುಸ್ತಕಾ ಆಗೋ ಅಷ್ಟ ಲೇಖನ ಕನ್ನಡದಾಗ ಬರದೇನಿ ಅಂದರ ಅದಕ್ಕ ಕಾರಣ ಈ ಕೆಂಡಸಂಪಿಗೆನ  ಅಂತ ನಿಮಗೇಲ್ಲಾ ಗೊತ್ತ ಇದ್ದದ್ದ ಅದ. ಆರ‍ ವರ್ಷದ ಹಿಂದ ನಾ ಒಂದ ಆರ್ಟಿಕಲ್ ಹಾಳ್ಯಾಗ ಬರದಿದ್ದ ಓದಿ
“ದೋಸ್ತ, ದಿಸ್ ಆರ್ಟಿಕಲ್ ಇಸ ವರ್ಥ್ ಟೇಕಿಂಗ್ ಟ್ರಬಲ್ ಆಪ್ ಟೈಪಿಂಗ”

ಅಂತ ಹವಾ ಹಾಕಿ ನನಗ ಬರಿಲಿಕ್ಕೆ ಹಚ್ಚಿ ಅದನ್ನ ಕೆಂಡಸಂಪಿಗೆ ಒಳಗ  ಪಬ್ಲಿಶ್ ಆಗೋ ಹಂಗ ನೋಡ್ಕೊಂಡಂವಾ ನಮ್ಮ ರಿಷಿಕೇಷ ಬಹಾದ್ದೂರ ದೇಸಾಯಿ. ಅಕಸ್ಮಾತ ಅವತ್ತ ಅಂವಾ ಏನರ
“ದೋಸ್ತ, ದಿಸ್ ಆರ್ಟಿಕಲ್ ಇಸ ನಾಟ್ ವರ್ಥ್, ಡೊಂಟ ಟೇಕ ಟ್ರಬಲ್ ಆಫ್ ರೈಟಿಂಗ್ ”

ಅಂತ ಅಂದ ಬಿಟ್ಟಿದ್ದರ ನಾ ಇವತ್ತ ಎರಡ ಬುಕ್ಕ ಒಂದ ನೂರಾ ಇಪ್ಪತ್ತ ಪ್ರಹಸನ ಬರಿತಿದ್ದಿದ್ದಿಲ್ಲಾ, ನಿಮಗೂ ಇವತ್ತ ಮತ್ತ ಈ ಪ್ರಹಸನ ಓದೊ ತ್ರಾಸ ಇರತಿದ್ದಿಲ್ಲಾ. ನಂದ ಒಂದನೇದಕ್ಕ ಅಂದರ ಒಂದನೇ ಲೇಖನಕ್ಕ  ಗರ್ಭಪಾತ ಆಗಿ, ನನ್ನ ಲೇಖಕನ ಪಾತ್ರ ಹುಟ್ಟೊಕಿಂತ ಮೊದ್ಲ ಸತ್ತ ಹೋಗಿ ಪ್ರಹಸನ ಮುಗದ ಹೋಗಿರತಿತ್ತ. ಆದರ ನನ್ನ ಹಣೇಬರಹಕ್ಕ ಹಂಗ ಆಗಲಿಲ್ಲ.

ನಾ ಹಂಗ ಒಂದ ಆರ್ಟಿಕಲ್ ಬರದೇ… ಅಡ್ಡಿಯಿಲ್ಲಾ ಹಿಂಗ ಬರಕೋತಿರ್ರಿ ಅಂತ ಎಡಿಟರ್ ಅಂದ್ರು.. ಮುಂದ ಅವರ ಮಾತ ಕೇಳಿ ನಾನೂ ಉಮೇದಿಲಿ ಬರಿಲಿಕತ್ತೆ… ಹಂಗ ಒಮ್ಮೆ ಕೆಂಡಸಂಪಿಗೆ ಒಳಗ ವಾರಕ್ಕೊಮ್ಮೆ ಬರಿಲಿಕ್ಕೆ ಶುರು ಮಾಡಿ, ಮುಂದ ಹದಿನೈದ ದಿವಸಕ್ಕೊಮ್ಮೆ, ತಿಂಗಳಿಗೊಮ್ಮೆ ಬರಕೋತ ಹೊಂಟಿದ್ದೆ… ಮುಂದ ಒಂದ ದಿವಸ ಒಮ್ಮಿಂದೊಮ್ಮಿಲೇ  ಕಾರಣಾಂತರಗಳಿಂದ ನಮ್ಮ ಕೆಂಡಸಂಪಿಗೆ ಬಂದ ಆಗಿ ಬಿಡ್ತ… ಹಂಗ ಅದ ಬಂದ ಆತ ಅಂತ ನಾ ಏನ ಬರೆಯೋದ ಬಿಡಲ್ಲಿಲ್ಲ, ಅಲ್ಲೆ- ಇಲ್ಲೆ ಸಣ್ಣ-ಪುಟ್ಟ ಪೊರ್ಟಲ್ ಒಳಗ ಬರಕೋತನ ಇದ್ದೆ… ಅಲ್ಲಾ ಆವಾಗ ಬರೇಯೋದ ಒಂದ ಚಟಾ ಆಗಿತ್ತ. ಇನ್ನ ಹಂಗ ಹಚಗೊಂಡಿದ್ದ ಚಟಾ ಅಷ್ಟ ಸರಳ ಬಿಡೋ ಮನಷ್ಯಾ ನಾ ಅಲ್ಲೇ ಅಲ್ಲಾ.

ಆದರ ನಾ ಯಾವಾಗ ಕೆಂಡಸಂಪಿಗೆ ಒಳಗ ಬರಿಲಿಕ್ಕೆ ಶುರು ಮಾಡಿದ್ದೆ ಆವಾಗ ನಾಲ್ಕ ಮಂದಿಗೆ ಈ ಮಗಾನೂ ಬರಿಲಿಕ್ಕೆ ಶುರು ಮಾಡ್ಯಾನ ಅಂತ ಗೊತ್ತಾತ. ಅದರಾಗ ನಾವ ಆ ಸುಡಗಾಡ ಫೇಸಬುಕ್ ಹುಳಾ ಬ್ಯಾರೆ, ಕೆಂಡಸಂಪಿಗೆ ಒಳಗ ಲೇಖನಾ ಬರದ ಅದರ ಲಿಂಕ್ ಫೇಸಬುಕ್ ಗ್ವಾಡಿ ಮ್ಯಾಲೆ ಹಾಕಿ ನಮ್ಮ ಲೇಖನದ್ದ ಒಂದ ಟ್ರೇಲರ್ ಕೊಟ್ಟ ಪೋಸ್ಟ ಮಾಡೋದು ಮುಂದ ಹತ್ತತ್ತ ನಿಮಿಷಕ್ಕೊಮ್ಮೆ ಎಷ್ಟ ಲೈಕ ಬಂತ ಎಷ್ಟ  ಕಮೆಂಟ್ ಬಂದ್ವು ಅಂತ ಎಣಿಸಿಗೋತ ಕೂಡೋದ ಒಂದ ಚಟಾ ಆಗಿತ್ತ. ಹಿಂಗ ಯಾವಾಗ ನಾ ಕೆಂಡಸಂಪಿಗೆ ಒಳಗ ಬರದಿದ್ದ ಫೇಸಬುಕ್ಕಿನಾಗ ಟ್ರೇಲರ್ ಬರಲಿಕ್ಕತ್ತ ಆ ಫೇಸಬುಕ್ಕ್ ದೋಸ್ತರೇಲ್ಲಾ ಕೆಂಡಸಂಪಿಗೆ ಒಳಗ ಹೊಕ್ಕರ. ಅಲ್ಲೆ ಕೆಂಡಸಂಪಿಗೆ ಓಳಗ ಓದಿ ಮತ್ತ ಫೇಸಬುಕ್ಕಿನಾಗ ಬಂದ ಕಮೆಂಟ್ ಮಾಡತಿದ್ದರ ಹೊರತ ಅಲ್ಲೇ ಕೆಂಡಸಂಪಿಗೆ ಒಳಗ ಕಮೆಂಟ್ ಮಾಡತಿದ್ದಿಲ್ಲಾ. ನಾ ಎಷ್ಟ ಬಡಕೊತಿದ್ದೆ, ಅಲ್ಲೇ ಕಮೆಂಟ ಮಾಡ್ರೀಲೇ ಎಡಿಟರ್ ಖುಶ್ ಆಗ್ತಾರ, ನನ್ನ ಕಡೆ ಬರಸಿದ್ದಕ್ಕೂ ಸಾರ್ಥಕಾತು ಅಂತ ಅವರಿಗೂ ಸಮಾಧಾನ ಆಗ್ತದ ಅಂದರು ಕೇಳತಿದ್ದಿಲ್ಲಾ. ಅಲ್ಲಾ ಹಂಗ ಕೆಂಡಸಂಪಿಗೆ ಸಂಪಾದಕರ ಈ ಪ್ರಹಸನಕ್ಕ ಎಷ್ಟ ಕಮೆಂಟ ಬಂದಾವ ಅನ್ನೋದ ನೋಡಿ ಭಾಳ ಕಮೆಂಟ್ ಬಂದರ ಏನರ ಸಂಭಾವನೇ ಕೊಡ್ತಾರ ಅನ್ನೋ ಹಂಗ ಏನ ಇದ್ದಿದ್ದಿಲ್ಲಾ ಆ ಮಾತ ಬ್ಯಾರೆ. ಆದರ ಒಂದ ಮಜಾ ಅಂದರ ನನಗ ಕೆಂಡಸಂಪಿಗೆ ಒಳಗ ಬರೋ ಕಮೆಂಟಕ್ಕಿಂತಾ ಫೇಸಬುಕ್ಕಿನಾಗ ಕಮೆಂಟ್ ಜಾಸ್ತಿ ಬರ್ತಿದ್ದವು. ಅಲ್ಲಾ ಎಲ್ಲೆ ಯಾರನ ಜಾಸ್ತಿ ಹಚಗೊಂಡಿರ್ತೇವಿ ಅಲ್ಲೇ ಜಾಸ್ತಿ ಕಮೆಂಟ್ ಬರ್ತಾವ ಆ ಮ್ಯಾತ ಬ್ಯಾರೆ. ಹಂಗ ಕೆಂಡಸಂಪಿಗೆ ಒಳಗ ಓದೋರ ಬ್ಯಾರೆ ಬರೆಯೋರ ಬ್ಯಾರೆ… ಅಲ್ಲಾ ಅದು ಒಂಥರಾ ಬುದ್ಧಿ ಜೀವಿಗಳ ತಾಣ ಬಿಡ್ರಿ ಅದೇಲ್ಲಾ ನಮ್ಮಂಥವರಿಗೆ ತಿಳಿಯಂಗಿಲ್ಲಾ, ನಾವ ತಿಳ್ಕೋಳಿಕ್ಕೂ ಹೋಗಿಲ್ಲಾ. ಸುಮ್ಮನ ಬರೇಯೋದೊಂದ ನಮ್ಮ ಕೆಲಸ..ಬರಿತಿದ್ದೆ.

ಇನ್ನ ಯಾವಾಗ ನಮ್ಮ ಮಂದಿ ಕೆಂಡಸಂಪಿಗೆ ಒಳಗ ನನ್ನ ಲೇಖನಾ ಓದಲಿಕತ್ತರ ನಂಗ ಒಂದಿಷ್ಟ ಮಂದಿ  ನಾ ಕಂಡಲ್ಲೇಲ್ಲಾ ’ಕೆಂಡಸಂಪಿಗೆ’,’ಕೆಂಡಸಂಪಿಗೆ’ ಅಂತ ಕರಿಲಿಕತ್ತರು. ಅಲ್ಲಾ ಹಂಗ ಯಾವದರ ಹುಡಗಿಗೆ ’ಕೆಂಡಸಂಪಿಗೆ’ ಅಂತ ಕರದರ ಅದ್ಕೊಂದ ಅರ್ಥ ಇರ್ತದ, ಎಲ್ಲಾ ಬಿಟ್ಟ ನನ್ನಂಥ ಬಟ್ಲ ಹೂವಿನ ಮಾರಿಗೆ ಕೆಂಡಸಂಪಿಗೆ ಅಂತ ಕರದರ ಆಜು ಬಾಜುದವರ ಏನ ತಿಳ್ಕೋಬಾರದ ಹೇಳ್ರಿ? ನಾ ಎಷ್ಟ ಹೇಳಿದರು ಮತ್ತು ಕಂಡ ಕಂಡಲ್ಲೇ ’ಕೆಂಡಸಂಪಿಗೆ’ ಅಂತನ ಕರಿತಿದ್ದರು. ಒಮ್ಮೊಮ್ಮೆ ನಾ ಹೆಂಡ್ತಿ ಜೊತಿಗೆ ಹೋಗಬೇಕಾರ ಹಂಗ ಯಾರರ ’ಏ, ಕೆಂಡಸಂಪಿಗೆ’ ಅಂತ ಒದರಿದರ ಆಜು ಬಾಜುದವರ ’ಅಂವಾ ಇವನ ಹೆಂಡ್ತಿಗೆ ಕೆಂಡಸಂಪಿಗೆ ಅಂತ ಕರಿಲಿಕತ್ತಾನ’ ಅಂತ ತಿಳ್ಕೊತಿದ್ದರು. ಅಲ್ಲಾ ನನ್ನ ಹೆಂಡ್ತಿ ಏನ ಕೆಂಡಸಂಪಿಗೆ ಇದ್ದಂಗ ಇಲ್ಲಾ ಆ ಮಾತ ಬ್ಯಾರೆ ಆದ್ರು ಪಾಪ ಮಂದಿ ತಪ್ಪ ತಿಳ್ಕೋಬಾರದ ನೋಡ್ರಿ. ಅದ ಹಿಂಗ ಆತಲಾ, ಎಲ್ಲೇ ಯಾರ ಭೇಟ್ಟಿ ಆದ್ರು

“ಮತ್ತೇನಲೇ…ಕೆಂಡಸಂಪಿಗಿ …ಹೆಂಗ ಇದ್ದಿ?”,
“ಮತ್ತೇನಪಾ…ಕೆಂಡಸಂಪಿಗೆ…ಇಷ್ಟ ದಿವಸ ಎಲ್ಲೆ ಹೋಗಿದ್ದಿ”  ಅಂತ ನನ್ನ ಮಾತಡ್ಸೋರು.

ಲಗ್ನ ಅನ್ನಂಗಿಲ್ಲಾ, ಮುಂಜವಿ ಅನ್ನಂಗಿಲ್ಲಾ, ಬಾರ್ ಅನ್ನಂಗಿಲ್ಲಾ, ಮುಕ್ತಿಧಾಮ ಅನ್ನಂಗಿಲ್ಲಾ  ಸಿಕ್ಕ ಸಿಕ್ಕಲ್ಲೇ
ಮತ್ತೇನಪಾ…ಕೆಂಡಸಂಪಿಗೆ’ ಅಂತ ಕರೆಯೋರ.  ನನಗಂತೂ ಅದನ್ನ ಕೇಳಿ ಕೇಳಿ ಸಾಕ ಸಾಕಾಗಿ ಬಿಟ್ಟಿತ್ತ. ಅದೇನೋ ನನ್ನ ಪುಣ್ಯಾ ನಾ ಕೆಂಡಸಂಪಿಗೆ ಒಳಗ ಬರಿಲಿಕ್ಕೆ ಶುರು ಮಾಡಿ ಒಂಬತ್ತ ತಿಂಗಳ ಆಗೋದರಾಗ ನಂದ ಒಂದನೇದ ಹೊರಗ ಬಂತ…ನಾ ಹೇಳಲಿಕತ್ತಿದ್ದ ನಂದ ಒಂದನೇ ಬುಕ್ “ಕುಟ್ಟವಲಕ್ಕಿ” ಪಬ್ಲಿಶ್ ಆತ. ಅದನ್ನ ನಮ್ಮ ಛಂದ ಪುಸ್ತಕದ ವಸುಧೇಂದ್ರವರು  ಸಿಜರಿನ್ ಮಾಡಿ ಹೊರಗ ತಗದಿದ್ದರು ಆ ಮಾತ ಬ್ಯಾರೆ. ಆದರ ಯಾವಾಗ ಕುಟ್ಟವಲಕ್ಕಿ ಬಂತ ನೋಡ್ರಿ, ನಮ್ಮ ಜನಾ ಕೆಂಡಸಂಪಿಗೆ ಬಿಟ್ಟ ಬಿಟ್ಟರು…ಮತ್ತೇನಲೇ ’ಕುಟ್ಟವಲಕ್ಕಿ’ ಅಂತ ಶುರು ಮಾಡಿದ್ರು. ಒಟ್ಟ ಹೆಸರ ಇಡೋರಿಗೆ ಒಂದ ಏನರ ಕಾರಣ ಬೇಕ ಅಂತಾರಲಾ ಅದ ಸುಳ್ಳಲ್ಲ ಬಿಡ್ರಿ… ಜನಾ ಕುಟ್ಟವಲಕ್ಕಿ- ಕುಟ್ಟವಲಕ್ಕಿ ಅಂತ ಕರಿಲಿಕ್ಕೆ ಶುರು ಮಾಡಿದ್ರು. ಮುಂದ ನಂದ ಎರಡ ವರ್ಷ ಬಿಟ್ಟ ಎರಡನೇದ ’ಗೊಜ್ಜವಲಕ್ಕಿ’ ಬಂದ ಮ್ಯಾಲೆ ಗೊಜ್ಜವಲಕ್ಕಿ, ಗೊಜ್ಜವಲಕ್ಕಿ ಅಂತ  ಶುರು ಮಾಡಿದ್ರು…ಏನ ಮಾಡ್ತೀರಿ ಈ ಮಂದಿಗೆ? ಅದ ಏನೋ ಪುಣ್ಯಾ ವಸುಧೇಂದ್ರವರು ನಂದ ಎರಡ ಬುಕ್ಕಿಗೆ ನಿಲ್ಲಿಸಿ ಬಿಟ್ಟರು…ಇಲ್ಲಾಂದ್ರ ನಮ್ಮ ಜನ ಇಷ್ಟೊತ್ತಿಗೆ ಮೊಸರವಲಕ್ಕಿ-ಮೊಸರವಲಕ್ಕಿ ಅಂತ ಶುರು ಮಾಡ್ತಿದ್ರು..ಅಲ್ಲಾ ಹಂಗ ಒಂದಿಷ್ಟ ಮಂದಿ ಈಗೂ ’ಮತ್ತೇನಲೇ ಗೊಜ್ಜವಲಕ್ಕಿ, ಮೊಸರವಲಕ್ಕಿ ಯಾವಗ ಬರ್ತದ’ ಅಂತ ಕೇಳ್ತಾರ. ಹೋಗ್ಲಿ ಬಿಡ್ರಿ ,ಅನ್ನೋರಗೇನ ಏನ ಮಾಡಿದ್ರು ಅಂತಾರ.

ಆದರೂ ಏನ ಅನ್ನರಿ ನಾ ಬರಿಲಿಕ್ಕೆ ಶುರು ಮಾಡಿದ್ದ ಈ ’ಕೆಂಡಸಂಪಿಗೆ’ ಇಂದ, ಇವತ್ತ ನಾಲ್ಕ ಮಂದಿ ’ ಮತ್ತೇನಪಾ ಕೆಂಡಸಂಪಿಗೆ’ ಅಂತ ಅನ್ನೊಹಂಗ ಆಗಿದ್ದ ಕೆಂಡಸಂಪಿಗೆ ಇಂದ. ನಾ ನನ್ನ ಜೀವನದಾಗ ಕನ್ನಡದಾಗ ಬರಿತೇನಿ, ಬರಿ ಬಹುದು ಅಂತ ಅನ್ಕೊಳೊಹಂಗ ಮಾಡಿದ್ದ ಈ ಕೆಂಡಸಂಪಿಗೆ. ನನ್ನ ಜೀವನದಾಗ ಬರಹಗಾರ ಅಂತ ಒಂದ ಹೊಸಾ ಅಧ್ಯಾಯ ಹುಟ್ಟಿ ಹಾಕಿದ್ದ ಈ ಕೆಂಡಸಂಪಿಗೆ.  ಆ ಕೆಂಡಸಂಪಿಗೆ ಇವತ್ತ ಮತ್ತ ಅರಳಿ ನನ್ನಂತ ಒಂದಿಷ್ಟ ಮಂದಿಗೆ ’ಮತ್ತೇನಪಾ…ಕೆಂಡಸಂಪಿಗೆ’ ಅಂತ ಅನಿಸ್ಗೊಳ್ಳಿಕ್ಕೆ ಅವಕಾಶ ಕೊಡ್ಲಿ, ಈ ಕೆಂಡಸಂಪಿಗೆ ಇನ್ನೂ ಘಮಾ… ಘಮಾ  ಅಂತ ತನ್ನ ಸುವಾಸನೇ ಬೀರಲಿ ಅಂತ ಆಶಿಸುತ್ತಾ ಕೆಂಡಸಂಪಿಗೆಗೆ ತುಂಬ ಹೃದಯದ ಸ್ವಾಗತ ಕೋರತಾ. ನಾ ಮತ್ತ ಕೆಂಡಸಂಪಿಗೆಗೆ ಬರಿಬೇಕು ಅಂತ ಮಾಡೇನಿ. ಜನಾ ಏನ ಬೇಕಾದ ಅನ್ನವಲ್ಲರಾಕ..ನೀವು ನಾ ಬರದಿದ್ದನ್ನ ಓದ್ತೀರಿ, ಸಾಧ್ಯ ಆದರ ಕಮೆಂಟ್ ಬರೀತಿರಿ ಅಂತ ಅನ್ಕೊಂಡ ನನ್ನ ನಾಲ್ಕ ಮಾತ ಮುಗಸ್ತೇನಿ.