ರಾಮೇಶ್ವರ ಗುಡಿಯ ಹೊರಭಾಗದ ಗೋಡೆಯ ಮೇಲೆ ಸ್ಥಾಪಿತರಾದ ದ್ವಾರಪಾಲಕರನ್ನು ಗಮನಿಸಿ. ಒಂದೆಡೆ ದಕ್ಷಬ್ರಹ್ಮನಿದ್ದಾನೆ. ಶಿವನ ವಿಷಯದಲ್ಲಿ ಅಪರಾಧಿಯಾದ ದಕ್ಷ ದ್ವಾರಪಾಲಕನಾಗಿರುವುದೇನೋ ಸರಿಯೇ. ಇಲ್ಲಿ ಇನ್ನೊಬ್ಬ ದ್ವಾರಪಾಲಕನಾಗಿ ನಿಂತವನು ಸಾಕ್ಷಾತ್ ನರಸಿಂಹ! ವಿಷ್ಣುವಿನ ರೂಪಗಳಲ್ಲೇ ಉಗ್ರನೆನಿಸಿದ ಶಂಖಚಕ್ರಗದಾಧಾರಿ ನರಸಿಂಹನನ್ನು ಬಾಗಿಲಲ್ಲಿ ನಿಲ್ಲಿಸಿಬಿಟ್ಟಿರುವುದರಿಂದ ಶಿವಪಾರಮ್ಯವನ್ನು ಸಾರುವುದಕ್ಕೆ ಮತ್ತೇನೂ ಬೇಡವೆಂದು ದೇಗುಲದ ಶಿಲ್ಪಿ ಯೋಚಿಸಿರಬೇಕು. ಅಲ್ಲೇ ಪಕ್ಕದ ಗೋಡೆಯ ಮೇಲೆ ಗರುಡ ಹನುಮರು ಮುಷ್ಠಿ ಬಿಗಿಹಿಡಿದು ಜಗಳವಾಡುತ್ತಿರುವಂತೆ ಶಿಲ್ಪಚಿತ್ರವೊಂದನ್ನು ನಿರೂಪಿಸಿದೆ. ತಮ್ಮ ಆರಾಧ್ಯದೇವನೇ ಬಾಗಿಲು ಕಾಯುತ್ತಿರುವಾಗ ಬೇರೇನೂ ಕೆಲಸವಿಲ್ಲದೆ ಅವರೇನು ಮಾಡಿಯಾರು?
ಟಿ. ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಅರವತ್ತೇಳನೆಯ ಕಂತು

 

ವಿಜಯನಗರ ಸಾಮ್ರಾಜ್ಯದ ಅಳಿವಿನ ಆಘಾತಕ್ಕೊಳಗಾಗಿದ್ದ ಕನ್ನಡನಾಡಿನ ರಾಜಕೀಯ ಸ್ಥಿರತೆಯನ್ನು ಮುಂದಿನ ವರುಷಗಳಲ್ಲಿ ಕಾಪಾಡಿಕೊಳ್ಳಲು ಯಶಸ್ವಿಯಾದ ಪ್ರದೇಶಗಳಲ್ಲಿ ಕೆಳದಿಯ ನಾಯಕಪ್ರಭುಗಳ ಸಂಸ್ಥಾನ ಪ್ರಮುಖವಾದುದು. ಚೌಡಪ್ಪ ನಾಯಕ, ಶಿವಪ್ಪನಾಯಕ, ಸಂಕಣ್ಣನಾಯಕ, ಸದಾಶಿವ ನಾಯಕ, ಕೆಳದಿಯ ಚನ್ನಮ್ಮ, ವೀರಮ್ಮಾಜಿ, ವೆಂಕಟಪ್ಪ ನಾಯಕ ಮೊದಲಾದವರ ಆಳ್ವಿಕೆಯಲ್ಲಿ 250ಕ್ಕೂ ಹೆಚ್ಚು ವರ್ಷಗಳ ಕಾಲ ಸುಸ್ಥಿರ ಆಡಳಿತವನ್ನು ಕಂಡ ಕೆಳದಿ ಅಥವಾ ಇಕ್ಕೇರಿ ಪ್ರಾಂತ್ಯದ ಇತಿಹಾಸ ಕನ್ನಡ ನಾಡಿನ ಪ್ರಮುಖ ಅಧ್ಯಾಯಗಳಲ್ಲೊಂದು. ಈ ಗತವೈಭವಕ್ಕೆ ಸಾಕ್ಷಿಯಾಗಿ ಕೆಳದಿಯ ರಾಮೇಶ್ವರ ಹಾಗೂ ಇಕ್ಕೇರಿಯ ಅಘೋರೇಶ್ವರ ದೇವಾಲಯಗಳು ಇಂದಿಗೂ ಉಳಿದು ಬಂದಿವೆ.

ನಾಯಕದೊರೆಗಳ ಮೊದಲ ರಾಜಧಾನಿ ಕೆಳದಿ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿರುವ ಕೆಳದಿ ಸಾಗರ ತಾಲ್ಲೂಕಿನಲ್ಲಿದೆ. ಸಾಗರದಿಂದ ಎಂಟು ಕಿ.ಮೀ. ದೂರದಲ್ಲಿರುವ ಇಲ್ಲಿನ ಪ್ರಮುಖ ಐತಿಹಾಸಿಕ ನಿರ್ಮಾಣಗಳಲ್ಲಿ ರಾಮೇಶ್ವರ ದೇವಾಲಯವೂ ಒಂದು. ಬೂದು ಹಸಿರು ಬಣ್ಣದ ಕಲ್ಲಿನಲ್ಲಿ ಕಟ್ಟಲಾಗಿರುವ ಈ ಗುಡಿಸಂಕೀರ್ಣದಲ್ಲಿ ರಾಮೇಶ್ವರ ದೇವಿ ಹಾಗೂ ವೀರಭದ್ರ ದೇವಾಲಯಗಳಿವೆ. ವಿಜಯನಗರ ಶೈಲಿಗನುಸಾರವಾಗಿ ನಿರ್ಮಾಣಗೊಂಡಂತೆ ತೋರಿದರೂ ಈ ದೇವಾಲಯಗಳಲ್ಲಿ ಅನೇಕ ವೈಶಿಷ್ಟ್ಯಗಳಿರುವುದು ಗಮನಾರ್ಹ. ದೇವಿಯ ಗುಡಿ ಪ್ರತ್ಯೇಕವಾಗಿದೆ. ಉಳಿದೆರಡು ದೇಗುಲಗಳಿಗೂ ಮುಖಮಂಟಪವಿದ್ದು ಇವನ್ನು ಜೋಡಿಸುವ ಇನ್ನೊಂದು ಮಂಟಪವೂ ಇದೆ. ದೇವಾಲಯ ಕಟ್ಟಡವನ್ನು ಆವರಿಸಿದ ಹೆಂಚಿನ ಮಾಡು. ಮರದ ಬೃಹತ್ತಾದ ಕಂಬಗಳು ಸೊಗಸಾಗಿವೆ.

ವೀರಭದ್ರ ಗುಡಿಯ ಒಳಛಾವಣಿಯಿಡೀ ಮರದ ಕೆತ್ತನೆಯಿಂದ ಕಂಗೊಳಿಸುತ್ತದೆ. ಬಗೆಬಗೆಯ ಚಿತ್ತಾರದ ವಿನ್ಯಾಸ, ಸೂರಿನ ಅಂಚಿನುದ್ದಕ್ಕೂ ವಿವಿಧ ದೇವತೆಗಳ ಬಿಂಬಗಳನ್ನು ಕೆತ್ತಿರುವ ಕಾಷ್ಠ ಫಲಕಗಳನ್ನು ಜೋಡಿಸಲಾಗಿದೆ. ಈ ಫಲಕಗಳಲ್ಲಿ ಗಣಪತಿ ವೀರಭದ್ರ, ದುರ್ಗೆ ಮುಂತಾದ ದೇವತೆಗಳಲ್ಲದೆ ಯಕ್ಷರು, ಗಾಯಕರು, ನರ್ತಕರು, ವಾದ್ಯಗಾರರೂ ಕಂಡುಬರುತ್ತಾರೆ. ನಡುನಡುವೆ ಹೂಬಳ್ಳಿಗಳನ್ನು ಚಿತ್ರಿಸಲಾಗಿದೆ. ಒಳಸೂರಿನಲ್ಲಿ ಕಾಷ್ಠಶಿಲ್ಪವನ್ನು ರೂಪಿಸಿರುವ ಅತ್ಯುತ್ತಮ ಮಾದರಿಗಳಲ್ಲಿ ಈ ದೇಗುಲವನ್ನು ಉದಾಹರಿಸಬಹುದು. ಸೂರಿನಿಂದ ಮುಂದುವರೆದು ಅಡ್ಡತೊಲೆ, ಆಧಾರ ಕಂಬಗಳಿಗೂ ಈ ಕೆತ್ತನೆಯ ಸೊಗಸು ಹರವಿಕೊಂಡಿದೆ.

ದೇಗುಲದ ಮುಂದಿನ ಧ್ವಜಸ್ತಂಭದ ಮೇಲುಗಡೆ ಕೋಷ್ಠವಿದ್ದು ಅದರಲ್ಲಿ ದೇವರಿಗೆ ಅಭಿಮುಖನಾಗಿ ನಂದಿ ಕುಳಿತಿದ್ದಾನೆ. ಕಂಬದ ಕೆಳಭಾಗದ ಭಿತ್ತಿಗಳಲ್ಲಿ ಗಣಪತಿ, ವೀರಭದ್ರ, ವೇಣುಗೋಪಾಲ ಮೊದಲಾದ ಆಕರ್ಷಕ ಶಿಲ್ಪಗಳನ್ನು ಕಾಣಬಹುದು. ಗುಡಿಯ ಮಂಟಪದ ಹೊರ ಅಂಚಿನಲ್ಲಿ ಆಧಾರವಾಗಿರುವ ಕಂಬಗಳು ವಿಜಯನಗರ ಶೈಲಿಯವು. ಕಾಲು ಮೇಲೆತ್ತಿ ನಿಂತ ಸಿಂಹಗಳು ಇಲ್ಲವೇ ಕುದುರೆ ಮೇಲೇರಿದ ಗಡ್ಡಧಾರಿ ಯೋಧರು ಈ ಕಂಬಗಳ ಮೇಲೆ ಕಂಡುಬರುತ್ತಾರೆ. ಮೇಲುಸೂರಿಗೆ ಆಧಾರವಾಗಿರುವ ಈ ಕಂಬಗಳು ಪ್ರಾಕಾರದ ಸುತ್ತುಗೋಡೆಯ ಮೇಲೆ ನಿಂತಿವೆ. ಸುತ್ತುಗೋಡೆಯ ಹೊರಭಿತ್ತಿಯ ಮೇಲೆಲ್ಲ ಕಿರುಗೋಪುರಗಳ ವಿನ್ಯಾಸವಿದೆ.

ನವರಂಗದ ಕಂಬಗಳ ಮೇಲೆ ವಿಜಯನಗರದ ಶೈಲಿಯಂತೆ ಅನೇಕ ಉಬ್ಬುಶಿಲ್ಪಗಳಿದ್ದು ಪರಿವಾರದೊಡನಿರುವ ನಾಯಕ ಅರಸ, ನಾಗದೇವತೆ, ಸುಲಭ ವಿವರಣೆಗೆ ನಿಲುಕದ ಹಲವು ಚಿತ್ರಚಿತ್ತಾರಗಳಿವೆ. ಭುವನೇಶ್ವರಿಯ (ಒಳಸೂರಿನ) ಮೇಲೆ ಚಿತ್ರಿಸಿರುವ ಪೌರಾಣಿಕಪಕ್ಷಿ ಗಂಡಭೇರುಂಡದ ಚಿತ್ರಣವನ್ನು ನೀವು ನೋಡಲೇಬೇಕು. ಇದೇ ಮುಂದಿನ ಶತಮಾನಗಳಲ್ಲಿ ಮೈಸೂರು ಸಂಸ್ಥಾನ ಹಾಗೂ ನಾಡಿನ ಇತರ ಲಾಂಛನಗಳಲ್ಲಿ ಶೋಭಿಸುವುದಕ್ಕೆ ಮೂಲವಾದ ಚಿತ್ರವೆನಿಸಿದೆ.

ರಾಮೇಶ್ವರ ಗುಡಿಯ ಹೊರಭಾಗದ ಗೋಡೆಯ ಮೇಲೆ ಸ್ಥಾಪಿತರಾದ ದ್ವಾರಪಾಲಕರನ್ನು ಗಮನಿಸಿ. ಒಂದೆಡೆ ದಕ್ಷಬ್ರಹ್ಮನಿದ್ದಾನೆ. ಶಿವನ ವಿಷಯದಲ್ಲಿ ಅಪರಾಧಿಯಾದ ದಕ್ಷ ದ್ವಾರಪಾಲಕನಾಗಿರುವುದೇನೋ ಸರಿಯೇ. ಇಲ್ಲಿ ಇನ್ನೊಬ್ಬ ದ್ವಾರಪಾಲಕನಾಗಿ ನಿಂತವನು ಸಾಕ್ಷಾತ್ ನರಸಿಂಹ! ವಿಷ್ಣುವಿನ ರೂಪಗಳಲ್ಲೇ ಉಗ್ರನೆನಿಸಿದ ಶಂಖಚಕ್ರಗದಾಧಾರಿ ನರಸಿಂಹನನ್ನು ಬಾಗಿಲಲ್ಲಿ ನಿಲ್ಲಿಸಿಬಿಟ್ಟಿರುವುದರಿಂದ ಶಿವಪಾರಮ್ಯವನ್ನು ಸಾರುವುದಕ್ಕೆ ಮತ್ತೇನೂ ಬೇಡವೆಂದು ದೇಗುಲದ ಶಿಲ್ಪಿ ಯೋಚಿಸಿರಬೇಕು. ಅಲ್ಲೇ ಪಕ್ಕದ ಗೋಡೆಯ ಮೇಲೆ ಗರುಡ ಹನುಮರು ಮುಷ್ಠಿ ಬಿಗಿಹಿಡಿದು ಜಗಳವಾಡುತ್ತಿರುವಂತೆ ಶಿಲ್ಪಚಿತ್ರವೊಂದನ್ನು ನಿರೂಪಿಸಿದೆ. ತಮ್ಮ ಆರಾಧ್ಯದೇವನೇ ಬಾಗಿಲು ಕಾಯುತ್ತಿರುವಾಗ ಬೇರೇನೂ ಕೆಲಸವಿಲ್ಲದೆ ಅವರೇನು ಮಾಡಿಯಾರು?

(ಫೋಟೋಗಳು: ಲೇಖಕರವು)

ಹೊರಗೋಡೆಗಳ ಮೇಲಿನ ಭಿತ್ತಿಚಿತ್ರಗಳಲ್ಲಿ ವಾಸ್ತುಪುರುಷನ ಶಿಲ್ಪವಿರುವುದು ಗಮನಾರ್ಹ. ಗೋಡೆಯ ಮೇಲಂಚಿನಲ್ಲಿ ವಾದ್ಯಗಾರರು, ನರ್ತಕಿಯರು, ಶಿವ, ವೀರಭದ್ರ ಮೊದಲಾದ ಕಿರುಶಿಲ್ಪಗಳಿವೆ. ಸರ್ಪರೂಪದ ರಾಹು ಚಂದ್ರನನ್ನು ನುಂಗಲು ಬರುವಂತೆ ಗ್ರಹಣವನ್ನು ಸೂಚಿಸುವ ಉಬ್ಬುಶಿಲ್ಪ ಸ್ವಾರಸ್ಯಕರವಾಗಿದೆ.

ಕೆಳದಿಯ ದೇಗುಲದ ಈ ವಿಶೇಷಗಳನ್ನೆಲ್ಲ ಕಣ್ತುಂಬಿಕೊಂಡಮೇಲೆ ದೇವಾಲಯದ ಬದಿಗೇ ಇರುವ ಚಾರಿತ್ರಿಕ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಲು ಮರೆಯದಿರಿ.