ಒಂದು ಹಂದಿಯ ದೃಶ್ಯ

ಮೂಲ: ಇಂಗ್ಲಿಷ್ ಕವಿ Ted Hughes (1930-1998)ನ View of a Pig

ಕೈಗಾಡಿಯ ಮೇಲೆ ಬಿದ್ದಿತ್ತು ಹಂದಿ ಸತ್ತು
ಮೂರು ಮಂದಿಯ ಭಾರವಿದ್ದಂತೆ ಇತ್ತು
ಕೆಂಪು ಬಿಳುಪಿನ ಕಣ್ಣಿನೆವೆಗಳ ಮುಚ್ಚಿ
ಕೈಕಾಲುಗಳನ್ನು ಮೇಲಕ್ಕೆ ಚಾಚಿ

ಎಂಥ ಕೆಂಪು ಘನ ಎಂಥದೀ ವಜನ
ಸಾವಿಗಿಂತಲು ಮುಂದೆ ಹೋದ ಮರಣ
ನಿರ್ಜೀವಾವಸ್ಥೆಗಿಂತ ಆಚೆಗಿನ ಸ್ಥಿತಿ
ಒಂದು ಹಿಟ್ಟಿನ ಚೀಲದ ಗತಿ

ಒಂದೇಟು ಹಾಕಿ ನೋಡಿದೆ ಪಾಪ!
ಸತ್ತವರ ಅವಮಾನಿಸಿದಾಗ ಆಗುವ ಪಶ್ಚಾತ್ತಾಪ
ಆಗಲೆ ಇಲ್ಲ. ಹಂದಿಯಂತೂ ಹಾಗೆ
ಆಪಾದಿಸುವ ಹಾಗೆ ಕಾಣಿಸಲಿಲ್ಲ ನನಗೆ.

ತುಸು ಜಾಸ್ತಿಯೇ ಸತ್ತುಬಿಟ್ಟಿತ್ತು – ಬರಿಯ ನೆಣ –
ಮಾಂಸದ ಕೆಲವಾರು ಮಣ –
ರಣಗುಟ್ಟಿ ಆತ್ಮಗೌರವವಂತು ಹೊರಟುಹೋಗಿತ್ತು
ಆಗಿರಲಿಲ್ಲ ಅದೀಗ ತಮಾಷೆಯ ವಸ್ತು.

ಅನುಕಂಪವನ್ನೂ ಮೀರಿದ ಸಾವು
ಅದರ ಬದುಕಿನ ಸದ್ದು ಗದ್ದಲ ನೋವು
ಇಲ್ಲಿ ನೆನೆಯುವುದು ಸರಿಯಲ್ಲ
ಈಗ ಅದಕ್ಕೆಲ್ಲ ಅರ್ಥವೂ ಇಲ್ಲ.

ಎತ್ತೋದಾದರು ಹೇಗೆ ಈ ಇಂಥ ರಣಭಾರ
ಕೊರೆಯುವ ತಾಪತ್ರಯ ಯಾರಿಗೆ ಬೇಕಿದರ?
ಬಾಯ್ಬಿಟ್ಟು ಕುತ್ತಿಗೆಯ ಹಸಿ ಘಾಯ
ಹುಟ್ಟಿಸುವಂತಿತ್ತು ಮರುಕವನ್ನಲ್ಲ ಭಯವ!

ಒಮ್ಮೆ ನಾನೊಂದು ಹಂದಿಯ ಹಿಡಿಯಲೆಂಬ
ಆಸೆಯಿಂದೋಡಿದ್ದೆನದರ ಹಿಂದೆ ಸಂತೆ ತುಂಬ
ಮೋಟರ್ ಕಾರಿಗಿಂತಲು ಹೆಚ್ಚದರ ವೇಗ
ಕಬ್ಬಿಣವ ಕೂಡ ಕೊರೆಯಬಲ್ಲ ಕರ್ಕಶ ಧ್ವನಿಯ ಸಲಗ

ಸುಡುವ ಒಲೆಯಂತೆ ಬಿಸಿ ಹಂದಿಗಳ ನೆತ್ತರು
ಕಚ್ಚಿಬಿಟ್ಟರೆ ಕುದುರೆಗಳಿಗಿಂತ ಜೋರು
ತೆಗೆದುಬಿಡುತ್ತವೆ ಅರ್ಧಚಂದ್ರಾಕಾರ ಮಾಂಸ
ಬೆಂಕಿ ಕೆಂಡಗಳೂ, ಸತ್ತ ಬೆಕ್ಕುಗಳೂ ಅವುಗಳ ಗ್ರಾಸ.

ಇಂಥ ಬಿರುದು ಬಾವಲಿಗಳೆಲ್ಲ
ಈಗ ಮುಗಿದೇಹೋಗಿದ್ದುವಲ್ಲ
ನೋಡುತ್ತ ನಿಂತೆ: ಅವರದನ್ನ ಬೇಯಿಸಲಿದ್ದರು
ಮರದ ಕೊರಡಿನಂತೆ ಸುಡಲಿದ್ದರು.