ತಂದೆ ಏಕೆ ಹೀಗಾದರೂ ಅಂತ ಈವತ್ತಿಗೂ ನನಗೆ ಗೊತ್ತಾಗುತ್ತಿಲ್ಲ. ಸ್ನಾನ, ಸಂಧ್ಯಾವಂದನೆ, ಪೂಜೆ, ಅಚರಣೆ, ಯಾವುದನ್ನೂ ತಂದೆ ತಪ್ಪಿಸಿದವರಲ್ಲ. ಅವರ ತಂದೆಯ ಭಯದಲ್ಲೇ ಬೆಳೆದಿದ್ದರು. ತಂದೆ ಸತ್ತು ಹೋದ ಮೇಲೆ ಹೀಗೆಲ್ಲ ಆದದ್ದು. ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ. ನಮ್ಮ ತಾತ ಸತ್ತರು. ಆಮೇಲೆ ನಮ್ಮಪ್ಪ ತುಂಬಾ ಬದಲಾಗಿಬಿಟ್ಟರು.
ಕೆ. ಸತ್ಯನಾರಾಯಣ ಬರೆದ ಕಥೆ “ಪ್ರೀತಿ ಬೇಡುವ ರೀತಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ನನ್ನ ಮದುವೆ ಆದದ್ದು ತುಂಬಾ ತಡವಾಗಿ. ಆದರೇನಂತೆ? ಅದರಿಂದಾಗಿ ನನ್ನ ದಾಂಪತ್ಯ ಜೀವನದ ಅರ್ಥ, ಆಳ, ಸಂಭ್ರಮ, ವಿನ್ಯಾಸಕ್ಕೆಲ್ಲ ಯಾವ ರೀತಿಯಲ್ಲೂ ಕಿಂಚಿತ್ತಾದರೂ ಊನ ಬರಬಾರದು ಎನ್ನುವಷ್ಟು ಅಚ್ಚುಮೆಚ್ಚಿನಲ್ಲಿ ನನ್ನನ್ನು ನೋಡಿಕೊಳ್ಳುತ್ತಿರುವ ವಿನುತ ನನಗೆ ಹೆಂಡತಿಯಾಗಿ ಸಿಕ್ಕಿದಳು. ಕೆಲಸ ತಡವಾಗಿ ಸಿಕ್ಕಿದ್ದು, ತಂದೆಯ ಅನಾರೋಗ್ಯ, ನರಳಾಟ, ಸಾವು, ತಂಗಿಯರ ಮದುವೆಯ ಸಾಲ, ಹಿಂದೆಯೇ ತೀರಿ ಹೋದ ತಾಯಿಯ ಕ್ಯಾನ್ಸರ್‌ ಚಿಕಿತ್ಸೆಯ ಸಾಲ, ಮಾನಸಿಕ ಖಿನ್ನತೆ ಎಲ್ಲವೂ ಈಗ ನನ್ನ ಬದುಕಿನಲ್ಲಿ, ಹಿಂದಿನ ಜನ್ಮದ್ದು, ಮತ್ತೆ ಯಾರದೋ ಬದುಕಿನದು ಅನ್ನುವಷ್ಟು ನಾನು-ವಿನುತ ಪರಸ್ಪರ ಅನುರಾಗ-ಸಮರ್ಪಣೆಯ ತೀವ್ರತೆಯಲ್ಲಿ ಮುಳುಗಿದ್ದೇವೆ.

ನಿಮಗೆ ತಂದೆ-ತಾಯಿ ಇಬ್ಬರೂ ತೀರಿ ಹೋಗಿದ್ದಾರೆ. ತಂದೆಯಂತು ತೀರಿ ಹೋಗಿ ವರ್ಷಗಳೇ ಆಗಿವೆ. ಒಂಟಿಯಾಗೇ ಕಾಲ ಕಳೆದು ಮೂವತ್ತಾರು ತಲುಪಿದ್ದೀರಿ. ಏನಪ್ಪಾ, ಹೇಗಿರುತ್ತೋ, ಯಾವ ರೀತಿಯ ಸಂಬಂಧ ಸಿಕ್ಕುತ್ತೋ ಅಂತ ಆತಂಕ ಆಗಿತ್ತು. ಅದೆಲ್ಲ ಕಾರಣವಿಲ್ಲದ ಆತಂಕ ಎಂದು ಈಗ ಗೊತ್ತಾಗಿದೆ. ಎಲ್ಲ ರೀತಿಯಲ್ಲೂ ತುಂಬಿದ, ಸದಾ ತುಳುಕುತ್ತಿರುವ ಜೀವನ ನನ್ನದು ನಿಮ್ಮಿಂದಾಗಿ ಎಂದು ಕೃತಜ್ಞತಾ ಭಾವದಿಂದ ಹೇಳುತ್ತಲೇ ದಾಂಪತ್ಯ ಲೋಕದ ಮತ್ತಷ್ಟು ಆಳಕ್ಕೆ ಇಳಿಯುತ್ತಿದ್ದಳು ವಿನುತ.

*****

ಇಂತಹ ವಿನುತ ಈಚೆಗೆ ಆಸ್ಫೋಟದ ಗಡಿಬಿಡಿಯ ಹೊಯ್ದಾಟದಲ್ಲೇ ಇದ್ದಾಳೆ. ನೀವು ಯಾಕೆ ನನ್ನಿಂದ ಇದನ್ನೆಲ್ಲ ಮುಚ್ಚಿಟ್ಟಿರಿ. ಇದು ತುಂಬಾ ಸೂಕ್ಷ್ಮವಾದ ಸಂಗತಿ. ಮದುವೆಗೆ ಮುಂಚೆ ನೀವು ಇದನ್ನೆಲ್ಲ ಹೇಳಬೇಕಿತ್ತು. ಆಮೇಲೆ ನಾನು ನಿಮ್ಮನ್ನು ಮದುವೆ ಆಗುತ್ತಿದ್ದೆನೋ ಇಲ್ಲವೋ ಎಂಬುದು ನನ್ನ ಆಯ್ಕೆಯಾಗಿರುತ್ತಿತ್ತು.

ಹೀಗೆಲ್ಲ ಮಾತು ಹಿಡಿದು ಆಫೀಸಿಗೂ ರಜಾ ಹಾಕಿ ಮನೆಯಲ್ಲೇ ಕುಳಿತಿದ್ದಾಳೆ. ಮಾತಿಲ್ಲ, ಕತೆಯಿಲ್ಲ. ನನಗೆ ಮನೆಯಲ್ಲಿ ಇರಲು ಬೇಸರ. ಮನೆ ಬಿಟ್ಟು ಹೋಗಲು ಭಯ. ಎಂತಹ ಬಿಕ್ಕಟ್ಟು ಅಂದರೆ, ಯಾರ ಹತ್ತಿರವೂ ಹೇಳಿಕೊಳ್ಳುವ ಹಾಗೂ ಇಲ್ಲ.

*****

ನಿಮ್ಮ ತಂದೆ ವಿಕೃತ ಕಾಮಿಯಾಗಿದ್ದರು ಅಂತ ಮದುವೆಗೆ ಮುಂಚೆ ನೀವು ಯಾಕೆ ಹೇಳಲಿಲ್ಲ. ನಲವತ್ತೈದು ದಾಟಿದ ನಂತರ ಸಲಿಂಗರತಿಗೆ ತೊಡಗಿದರಂತೆ. ಅದೂ ಅವರ ಆಫೀಸಿನ ನೋಟಿಸ್‌ ಸರ್ವರ್‌ ಜೊತೆ. ಇದರ ಜೊತೆಗೆ ವೇಶ್ಯೆಯರ ಸಹವಾಸವೂ ಇತ್ತಂತೆ. ಅವರ ಹತ್ತಿರವೂ ಸಾಲ ಉಳಿಸಿಕೊಳ್ಳುತ್ತಿದ್ದರಂತೆ. ನಿಮ್ಮ ಚಿಕ್ಕಪ್ಪನ ಮಗನೊಬ್ಬ ಪೆದ್ದನಂತೆ. ಕೆಲಸವಿಲ್ಲದ ಕಾರ್ಯವಿಲ್ಲದ ಅವನ ಕೈಲಿ ಮುಷ್ಠಿ ಮೈಥುನ ಮಾಡಿಸಿಕೊಂಡು, ಪ್ರತಿಸಲ ಹಾಗೆ ಮಾಡಿಸಿಕೊಂಡಾಗಲೂ ಅವನೊಬ್ಬನಿಗೆ ಮಾತ್ರ ಕೈ ತುಂಬಾ ದುಡ್ಡು ಕೊಡುತ್ತಿದ್ದರಂತೆ. ಈ ಕೊರಗಿನಲ್ಲೇ ಯಾವ ರೀತಿಯ ಬೇನೆಯೂ ಇಲ್ಲದೆ ಹಾಯಾಗಿದ್ದ ನಿಮ್ಮ ತಾಯಿಗೆ ಕ್ಯಾನ್ಸರ್‌ ಬಂದು ಸತ್ತರಂತೆ.
ಯಾಕೆ ಇದನ್ನೆಲ್ಲ ನೀವು ಮದುವೆಗೆ ಮುಂಚೆ ಹೇಳಲಿಲ್ಲ?

*****

ನೀನು ಹೇಳಿದ್ದೆಲ್ಲ ನಿಜ ವಿನುತ. ಇದರಿಂದ ನಮ್ಮ ಕುಟುಂಬಕ್ಕೆ ಬೇಸರವಾಗಿದೆ, ಅವಮಾನವಾಗಿದೆ. ಬಂಧು ಬಳಗದಲ್ಲಿ ತಲೆ ಎತ್ತದಂತೆ ಕೂಡ ಆಗಿದೆ. ತಂದೆ ಏಕೆ ಹೀಗಾದರೂ ಅಂತ ಈವತ್ತಿಗೂ ನನಗೆ ಗೊತ್ತಾಗುತ್ತಿಲ್ಲ. ಸ್ನಾನ, ಸಂಧ್ಯಾವಂದನೆ, ಪೂಜೆ, ಅಚರಣೆ, ಯಾವುದನ್ನೂ ತಂದೆ ತಪ್ಪಿಸಿದವರಲ್ಲ. ಅವರ ತಂದೆಯ ಭಯದಲ್ಲೇ ಬೆಳೆದಿದ್ದರು. ತಂದೆ ಸತ್ತು ಹೋದ ಮೇಲೆ ಹೀಗೆಲ್ಲ ಆದದ್ದು. ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ. ನಮ್ಮ ತಾತ ಸತ್ತರು. ಆಮೇಲೆ ನಮ್ಮಪ್ಪ ತುಂಬಾ ಬದಲಾಗಿಬಿಟ್ಟರು. ನೇಮದ ಬದುಕು ಹೋಯಿತು.

ಅಪರಕರ್ಮಗಳಲ್ಲಿ ಆಸಕ್ತಿ ಶುರುವಾಗಿ ಅದರ ಹುಚ್ಚೇ ಹಿಡಿದುಬಿಟ್ಟಿತು. ಹೆಣ ಹೊರುವುದಕ್ಕೆ ಹೋಗುವರು. ಹೆಣ ಸುಡುವುದಕ್ಕೆ ಹೋಗುವರು. ನಂತರ ತಿಥಿ, ಕರ್ಮಾಂತರ, ಬ್ರಾಹ್ಮಣಾರ್ಥಗಳಿಗೂ ಇಳಿದರು. ಇದೆಲ್ಲದರ ಅಗತ್ಯ ಇರಲಿಲ್ಲ. ಕೈ ತುಂಬಾ ಸಂಬಳ. ನಂತರ ಪೆನ್‌ಷನ್‌ ಕೂಡ ಬರುತ್ತಿತ್ತು. ಒಂದಷ್ಟು ವರ್ಷಗಳ ನಂತರ ಇದರಲ್ಲೂ ಆಸಕ್ತಿ ಹೋಯಿತು. ಆಮೇಲೆ ನೋಟೀಸ್‌ ಸರ್ವರ್‌ ಜೊತೆ ಸಂಬಂಧ, ಪ್ರೀತಿಯೆಲ್ಲ ಶುರುವಾದದ್ದು. ಚಿಕ್ಕಪ್ಪನ ಮಗ ದತ್ತಾತ್ರೇಯ ಪೆದ್ದ ಅಂತ ಗೊತ್ತಿತ್ತು. ಚೆನ್ನಾಗಿ ಉಪಯೋಗಿಸಿಕೊಂಡರು. ಇವರು ಕೊಡುವ ದುಡ್ಡಿನಾಸೆಗೆ ದಿನಾ ಮನೆ ಬಾಗಿಲಿಗೆ ಬಂದು ನಿಲ್ಲುವನು. ಜೊತೆಗೆ ಪ್ರೇಮನಗರದ ವೇಶ್ಯೆಯರಿಗೆ ಕೊಡಬೇಕಾದ ಸಾಲದ ಬಾಬ್ತು. ಬಂಧುಗಳು ದಾಯಾದಿಗಳ ನಡುವೆ ತಲೆ ಎತ್ತದ ಹಾಗಾಯಿತು. ಮನೆ ಒಳಗೆ ಕೂಡ ನಾವೆಲ್ಲ ಒಬ್ಬರ ಜೊತೆ ಒಬ್ಬರು ಮಾತನಾಡುವುದನ್ನು ನಿಲ್ಲಿಸಿಬಿಟ್ಟೆವು.

ಇದೆಲ್ಲ ಯಾಕೆ ಹೀಗಾಯ್ತು, ಹೀಗಾಗುತ್ತೆ, ನಮ್ಮ ಮನೇನಲ್ಲೇ ಆಗುತ್ತೆ ಅಂತ ಈವತ್ತಿಗೂ ಅರ್ಥವಾಗಿಲ್ಲ. ನಮ್ಮಮ್ಮನಿಗೆ ಕ್ಯಾನ್ಸರ್‌ ಹುಣ್ಣು, ನೋವು, ಸಾವೆಲ್ಲ ಈ ಅವಮಾನದಿಂದಲೇ ಬಂದಿರಬಹುದು.

ಇದನ್ನೆಲ್ಲ ನೋಡಿದ ನನಗೇ ಮದುವೆ ಆಗೋಕೆ ಭಯವಾಯ್ತು. ಮದುವೇನೇ ಬೇಡ ಅಂತ ನಿರ್ಧಾರ ಮಾಡಿಬಿಟ್ಟಿದ್ದೆ. ನಮ್ಮ ಬಾಸ್‌ ಚಿಕ್ಕರಾಮಯ್ಯ ತುಂಬಾ ಒತ್ತಾಯ ಮಾಡಿ ನಿನ್ನ ಜೊತೆ ಮದುವೆ ಮಾಡಿಸಿದರು.

ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. ಈಗ ಎಲ್ಲ ಹೇಳಿದ್ದೀನಿ. ಮೊದಲು ಹೇಳಲಿಲ್ಲ ಅನ್ನುವುದನ್ನು ಬಿಟ್ಟರೆ ನನ್ನದೇನೂ ತಪ್ಪಿಲ್ಲ. ಇದೆಲ್ಲವನ್ನೂ ಮದುವೆಯಾಗುವ ಹುಡುಗಿಗೆ ತಿಳಿಸುವ ಅಗತ್ಯ ನನಗೆ ಗೊತ್ತಾಗಲಿಲ್ಲ. ನಿನಗೆ ಹೇಳಿಲ್ಲ ಅನ್ನುವುದನ್ನು ಬಿಟ್ಟರೆ, ಇದನ್ನು ಯಾರಿಂದಲೂ ಮುಚ್ಚಿಟ್ಟಿಲ್ಲ. ಇಡೀ ಊರಿಗೆ, ಸಂಬಂಧಿಗಳಿಗೆಲ್ಲ ಗೊತ್ತಿದೆ.

*****

ವಿನುತ ನಾನು ಹೇಳುವುದನ್ನೆಲ್ಲ ಸಾವಧಾನದಿಂದ ಕೇಳಿಸಿಕೊಂಡಂತೆ ಕಂಡಳು. ಪ್ರಶ್ನೆಯನ್ನು ನೇರವಾಗಿಯೇ ಕೇಳಿದಳು. ಪ್ರಶ್ನೆ ಕೇಳುವಾಗ ಆಫೀಸಿಗೆ ಹೊರಡುವ ಮುನ್ನ ದಿನವೂ ಗಬಗಬನೆ ಊಟ ಮಾಡುವಂತೆ ಆವತ್ತೂ ಆತುರಾತುರವಾಗಿ ಊಟ ಮಾಡುತ್ತಿದ್ದಳು. ಆ ಗಡಿಬಿಡಿ ಮಧ್ಯೆಯೂ –

ಇದು ಪ್ರಾಮಾಣಿಕತೆಯ ಪ್ರಶ್ನೆ ಮಾತ್ರವಲ್ಲ, ಇನ್ನು ಹತ್ತು ವರ್ಷದ ನಂತರ ನೀವು ಕೂಡ ನಿಮ್ಮ ತಂದೆಯಂತೆ ಆಗೋಲ್ಲ ಅಂತ ನಾನು ಹೇಗೆ ನಂಬಲಿ. ಹಾಗೇನಾದರೂ ಆದರೆ ನಾನು ನನ್ನ ಮಕ್ಕಳು ಏನು ಮಾಡಬೇಕು? ಯಾವ ಹೆಂಗಸು ಕೂಡ ತನ್ನ ಗಂಡ ನಲವತ್ತೈದು-ನಲವತ್ತೆಂಟು ಆದ ಮೇಲೆ ನಿಮ್ಮ ತಂದೆಯ ಹಾಗೆ ವಿಕೃತ ಕಾಮಿ ಆಗಬೇಕು ಅಂತ ಇಷ್ಟ ಪಡೋಲ್ಲ. ನಿಮ್ಮ ಅಕ್ಕ-ತಂಗಿ ಕೂಡ ನನ್ನ ತರಾನೇ ಯೋಚಿಸುತ್ತಾರೆ ಅಂತ ಮರೀಬೇಡಿ.

*****

ವಿನುತಳಿಗೆ ನಾನೇನು ಉತ್ತರ ಹೇಳಬಹುದು? ನಾನು ನಮ್ಮ ತಂದೆ ಹಾಗೆ ಆಗೋಲ್ಲ ಅಂತ ಮಾತಿನ ಭರವಸೆ ಕೊಡಬಹುದು. ಹಾಗೆ ಭರವಸೆ ಕೊಟ್ಟರೂ ಅವಳು ಒಪ್ಪಬೇಕಲ್ಲ. ಅವಳು ಒಪ್ಪಲಿ, ಬಿಡಲಿ ಅವಳನ್ನು ಸಮಾಧಾನ ಪಡಿಸೋಕೆ ನಾನು ಯಾವ ಧೈರ್ಯದಿಂದ ನನ್ನ ಬಗ್ಗೆ ಭರವಸೆ ಕೊಡಲಿ?

ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ.

ಯಾವ ಮಾತನ್ನೂ ಕೂಡ ಆಡದೆ ನಮ್ಮ ದಾಂಪತ್ಯ ಜೀವನ ಒಂದು ನಿಲುಗಡೆಗೆ ಬಂತು. ಎಂಟು ಹತ್ತು ದಿನಕ್ಕೆ ಒಂದೋ ಎರಡೋ ಮಾತನಾಡುತ್ತಿದ್ದೆವು.

“ನೀವು ಇಂತಹ ಹಿನ್ನೆಲೆಯವರು ಎಂದು ಹೇಳಿದರೆ, ನಾನು ಈಗ ನಿಮ್ಮನ್ನು ಬಿಟ್ಟರೆ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಡೀ Pension Benefit ಖರ್ಚು ಮಾಡಿ ನನ್ನ ಮದುವೆ ಮಾಡಿದರು ಗೊತ್ತಾ? ಇನ್ನು ಮುಂದೆ ಹೊರ ಜಗತ್ತಿಗೆ ದಂಪತಿಗಳು ಎಂದು ಕಾಣುವ ಹಾಗೆ ಇದ್ದುಬಿಡೋಣ.”

ದಿನ ಕಳೆಯುತ್ತಾ ಕಳೆಯುತ್ತಾ ಗಂಭೀರವಾದಳು. ಪುಸ್ತಕಗಳ ರಾಶಿ ತಂದು ಏನೇನೋ ಬರೆದುಕೊಳ್ಳುತ್ತಿದ್ದಳು. ಮಧ್ಯರಾತ್ರಿ ಎದ್ದು ಹೋಗಿ ಬಾಲ್ಕನಿಯಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುತ್ತಿದ್ದಳು. ಅವಳ ಒಳಗುದಿ ನನಗೆ ಗೊತ್ತಾಗುತ್ತಿತ್ತು. ನಾನಾದರೂ ಏನು ಸಮಾಧಾನ ಹೇಳಲಿ?

ಮೂರು ನಾಲ್ಕು ದಿನಕ್ಕೆ ಒಮ್ಮೆ ಅಡುಗೆ ಮಾಡುತ್ತಿದ್ದಳು. ಆದರೆ ಲಹರಿ ಬಂದವಳಂತೆ ಇದ್ದಕ್ಕಿದ್ದಂತೆ ಮೂರುನಾಲ್ಕು ತಿನಿಸುಗಳನ್ನು ಒಂದೇ ದಿನ ತಯಾರಿಸುತ್ತಿದ್ದಳು.

ಒಂದು ದಿನ ಮಧ್ಯರಾತ್ರಿ ನನ್ನನ್ನು ಎಬ್ಬಿಸಿದಳು. ನೋವಾಗುವಂತೆ ಭುಜ ತಿವಿದು ಎಬ್ಬಿಸಿದಳು. ಸಿಟ್ಟಿನಿಂದ ಉರಿಯುತ್ತಿದ್ದಳು.

ನಾನು ಇನ್ನೂ ಒಂದು ಕಾರಣಕ್ಕೆ ನಿಮ್ಮನ್ನು ತಪ್ಪಾಗಿ ತಿಳಿದೆ. ಮದುವೆಯ ಹೊಸದರಲ್ಲಿ ನಿಮ್ಮಲ್ಲಿದ್ದ ಲೈಂಗಿಕ ತೀವ್ರತೆಯ ಹಿಂದೆ ಲೈಂಗಿಕ ಮುಗ್ಧತೆಯಿದೆಯೆಂದು ತಿಳಿದಿದ್ದೆ. ಈಗ ಗೊತ್ತಾಗ್ತಿದೆ ನಾನು ಮೋಸ ಹೋದೆ. ನಿಮ್ಮ Sexual Personality ಯೇ ಸರಿಯಾಗಿ Form ಆಗಿಲ್ಲ. ಹಾಗಾಗಿದ್ದರೆ ನಿಮ್ಮ ತಂದೆಯ ಬಗ್ಗೆ ನೀವು ನನಗೆ ಖಂಡಿತವಾಗಿ ಹೇಳಿರುತ್ತಿದ್ದಿರಿ. ನಿಮ್ಮ ಸೋದರ ಸಂಬಂಧಿ ದತ್ತಾತ್ರೇಯನ್ನ ನಿಮ್ಮ ತಂದೆ ನಾಶ ಮಾಡಿದ್ದರ ಬಗ್ಗೆ ಕೂಡ ನಿಮಗೆ ಬೇಸರವಿಲ್ಲ” ಎಂದು ಬುಸುಗುಟ್ಟುತ್ತಾ ವಿನುತ ತಿವಿದು ತಿವಿದು ಏಳಿಸಿದಾಗ ನಾನು ಗಲಿಬಿಲಿಗೊಂಡು ಎದ್ದು ಕೂತೆ. ಹಾಗೆ ಕೂತಿದ್ದವನನ್ನು ಮತ್ತೆ ಹಾಸಿಗೆಗೆ ದೂಡಿ ತಲೆ ಚಚ್ಚಿಕೊಂಡು ಹೊರಟುಹೋದಳು.

ವಿನುತ ಭಾವಿಸಿದ್ದಂತೆ ನಾನೇನೂ ಲೈಂಗಿಕ ಮುಗ್ಧ ಎಂದು ಹೇಳಿಕೊಂಡಿರಲಿಲ್ಲ. ಮದುವೆಯಾದ ಹೊಸದರಲ್ಲಿ Thrill ಇದ್ದದ್ದು ನಿಜ. ಆದರೆ ಅದು ಹೊಸದಾಗಿ ಸುಖ ಕಂಡವನ Excitement. ಜೀವನದಲ್ಲಿ ಮೊದಲ ಬಾರಿಗೆ ಮಧುರವಾದ ಭಾವನೆಗಳನ್ನು, ಕಂಪನಗಳನ್ನು ಅನುಭವಿಸುತ್ತಿದ್ದೆ. ನನ್ನ ಸಂತೋಷದಿಂದ ಅವಳಿಗೂ ಸಂತೋಷವಾಗುತ್ತಿತ್ತು. ಇದಕ್ಕೂ ನಮ್ಮ ತಂದೆಗೂ ಏನು ಸಂಬಂಧ? ತಂದೆಯವರ ಬದಲಾದ ಜೀವನ ಶೈಲಿಯಿಂದಾಗಿ ಕುಟುಂಬದ ಎಲ್ಲ ಸದಸ್ಯರು ಪ್ರತಿ ಕ್ಷಣವೂ ಪ್ರಪಾತದ ತುದಿಯಲ್ಲಿ ಕುಳಿತವರಂತೆ ದಿನ ನೂಕುತ್ತಿದ್ದೆವು. ಆ ದಿನಗಳಲ್ಲಿ ತಂದೆ ಮನೆಗೆ ಸರಿಯಾಗಿ ಸಾಮಾನು ಕೂಡ ತಂದು ಹಾಕುತ್ತಿರಲಿಲ್ಲ. ಬೇರೆ ಯಾರಿಗೂ ಉದ್ಯೋಗವಿಲ್ಲ. ತಂದೆಯವರೇ ಒಂದೊಂದು ದಿನ ರಾತ್ರಿ ತಡವಾಗಿ ಮನೆಗೆ ಬಂದು, ಎಲ್ಲರನ್ನೂ ಎಬ್ಬಿಸಿ, ಇಲ್ಲ, ಇಲ್ಲ, ನಮ್ಮ ಕುಟುಂಬ ಇನ್ನು ಮುಂದೆ ಬರೋಲ್ಲ. ನೀವೆಲ್ಲ ಹೂಂ ಅಂದರೆ ಎಲ್ಲರೂ ಒಟ್ಟಿಗೇ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಗೋಳಿಡುತ್ತಿದ್ದರು. ಮಾರನೆ ದಿನ ಬೆಳಿಗ್ಗೆಯಿಂದ ಮತ್ತೆ ಹಿಂದಿನದೇ ಹಾದಿ. ಮನೆಯಲ್ಲಿ ಬೇರೆ ಯಾರಿಗೂ ಕೆಲಸವಿಲ್ಲ. ತಂದೆ ತೀರಿಹೋದ ತಕ್ಷಣವೇ ಅಮ್ಮನಿಗೆ ಕ್ಯಾನ್ಸರ್‌. ಯಾವಾಗ Sexual personality form ಆಗಬೇಕು? ಮದುವೆ, ಹೆಣ್ಣಿನ ವಿಷಯವಿರಲಿ, ನಾಳೆಯ ಬೆಳಿಗ್ಗೆಯ ಬಗ್ಗೆ ಕೂಡ ನಾವು ಯೋಚನೆ ಮಾಡುತ್ತಿರಲಿಲ್ಲ. ನಮ್ಮ ಇಡೀ ಕ್ಲಾಸಿನಲ್ಲಿ ನಾನೊಬ್ಬನೇ ಹೀಗಿದ್ದೆ ಎಂದು ಕಾಣಿಸುತ್ತದೆ ಅಥವಾ ಈಗ ಹಾಗೆನ್ನಿಸುತ್ತದೋ?

ದತ್ತಾತ್ರೇಯನ ವಿಷಯದಲ್ಲಿ ನಾನಾಗಲೀ, ಮನೆಯವರಾಗಲೀ ಏನು ಮಾಡುವ ಹಾಗಿತ್ತು. ನಕಲಿ ಶಾಮನ ತರ ಅವನು, ಹೊಟ್ಟೆಬಾಕ ಬೇರೆ. ತಂದೆಯವರ ಜೊತೆ ಸೇರಿ ಅವನು ಹೀಗೆಲ್ಲ ಮಾಡ್ತಿರೋದು ಕೂಡ ನಮಗೆ ಗೊತ್ತಿರಲಿಲ್ಲ, ಒಂದು ಸಲ ಇಬ್ಬರೂ ಭೀಮಣ್ಣನ ತೆಂಗಿನ ತೋಪಿನಲ್ಲಿ ಸಿಕ್ಕಿಬೀಳುವ ತನಕ.

ನಮ್ಮನ್ನೇಕೆ ಅನ್ನಬೇಕು. ಚಿಕ್ಕಪ್ಪ ಸತ್ತು ಹೋದ ಮೇಲೆ, ದತ್ತಾತ್ರೇಯನ ಅಣ್ಣ-ತಮ್ಮಂದಿರೆಲ್ಲ ಸೇರಿ ಹಳೆ ಮನೆ ಒಡೆಸಿ Apartment ಕಟ್ಟಿಕೊಂಡರು. ಇವನು ಅವರ ಜೊತೆಯೇ ಇದ್ದರೆ, ಬೆಳೆಯುವ ಚಿಕ್ಕ ಮಕ್ಕಳ ಮೇಲೆ ಕೆಟ್ಟ ಪರಿಣಾಮವಾಗುತ್ತೆ ಅಂತ ಕರೆದುಕೊಂಡು ಹೋಗಿ ವಜ್ರಪುರದ ಆಶ್ರಮಕ್ಕೆ ಸೇರಿಸಿಬಿಟ್ಟರು. ದತ್ತಾತ್ರೇಯನಿಗೆ ಆಶ್ರಮಕ್ಕೆ ಹೋಗಲು ಸ್ವಲ್ಪವೂ ಇಷ್ಟವಿರಲಿಲ್ಲ. ಆಗಾಗ್ಗೆ ಇವರಲ್ಲಿ ಯಾರಾದರೂ ಒಬ್ಬರು ನೋಡಿಕೊಂಡು ಬರಲು ಹೋದರೆ, ಹೊಡೆದು ಬಡಿದು ಮಾಡುತ್ತಿದ್ದನಂತೆ. ಕಿರಿಯವನಾದ ಶಿವರಾಮಣ್ಣ ಹೋದಾಗ ಚಪ್ಪಲಿಯಲ್ಲಿ ಹೊಡೆಯಲು ಬಂದನಂತೆ. ಈಗ ಹೇಗಿದ್ದಾನೋ?

ನಾಲ್ಕು ದಿನವಾದ ಮೇಲೆ ನಾನು ಕೂಡ ವಿನುತಳ ರೂಂನ ಹತ್ತಿರ ಹೋಗಿ ಬಾಗಿಲ ಬಳಿಯಲ್ಲಿ ನಿಂತು ಇದನ್ನೆಲ್ಲ ಹೇಳಿದೆ. ಮಲಗಿದ್ದಳು. ನಿದ್ದೆ ಬರದೆ ಹೊರಳಾಡುತ್ತಿದ್ದಳು. ನನ್ನ ಮಾತುಗಳು ಮುಗಿದ ನಂತರ, ಎದ್ದು ದೀಪ ಹಾಕಿದಳು. ಎದುರುತ್ತರ ಕೊಡಬಹುದು, ಏನಾದರೂ ಹೊಸ ಪ್ರಶ್ನೆ ಕೇಳಬಹುದು ಎಂದುಕೊಂಡೆ. ಮುಖ ಸಪ್ಪಗಿತ್ತು. ನನ್ನನ್ನು ಒಂದೆರಡು ನಿಮಿಷ ದೃಷ್ಟಿಸಿ ನೋಡಿ, ಮುಖ ಕೆಳಗೆ ಹಾಕಿಕೊಂಡು ಕುಳಿತುಬಿಟ್ಟಳು. ದೀರ್ಘವಾಗಿ ಉಸಿರು ಬಿಡುತ್ತಿದ್ದಳು. ಹಾಸಿಗೆ ತುಂಬೆಲ್ಲಾ ಪುಸ್ತಕಗಳು. ನಾನು ಎಷ್ಟು ಹೊತ್ತು ನಿಂತಿರಲು ಸಾಧ್ಯ. ನನ್ನ ರೂಮಿಗೆ ವಾಪಸ್‌ ಬಂದೆ. ನನಗೆ ನಿದ್ದೆ ಬರುವ ತನಕವೂ ವಿನುತ ರೂಮಿನ ದೀಪ ಆರಿಸಿದಂತೆ ಕಾಣಲಿಲ್ಲ.

*****

ಕೆಲವು ವಾರಗಳ ನಂತರ ಅದೊಂದು ಭಾನುವಾರ ಬೆಳಿಗ್ಗೆ ಹತ್ತರ ಸಮಯದಲ್ಲಿ ನನ್ನ ರೂಮಿನ ಮುಂದೆ ಬಂದು ನಿಂತಳು. ನಾನೂ ಕೂಡ ಏನೂ ತೋಚದೆ ಎದ್ದು ಸುಮ್ಮನೆ ಹಾಸಿಗೆಯ ಮೇಲೆ ಕುಳಿತಿದ್ದೆ. ಈ ಕೆಲವು ತಿಂಗಳಿಂದ ಮನಸ್ಸು ಏನನ್ನೂ ನಿರೀಕ್ಷಿಸುವುದನ್ನು ನಿಲ್ಲಿಸಿಬಿಟ್ಟಿತ್ತು. ನಾನು ಏನನ್ನೂ ಯೋಚನೆ ಕೂಡ ಮಾಡುತ್ತಿರಲಿಲ್ಲ. ಯೋಚನೆಗೆ ಏನೂ ಹೊಳೆಯುತ್ತಿರಲಿಲ್ಲ ಕೂಡ.

ಸ್ವಲ್ಪ ತರಕಾರಿ ತರೋಣ, ಹಾಗೇ ದಿನಸಿ ಅಂಗಡಿ ಹತ್ತಿರಾನೂ ಹೋಗಿ ಬರೋಣ ಎಂದು ಅವಳು ನಿಧಾನವಾಗಿ ಹೇಳಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಹಾಗೆ ಸಂಭ್ರಮವೂ ಅಗಲಿಲ್ಲ. ಅವಳ ಕೈಯಲ್ಲಿ ಒಂದೆರಡು ಚೀಲಗಳಿದ್ದವು. ತೀರಾ ಸಾಧಾರಣ ಸೀರೆಯಲ್ಲಿದ್ದಳು. ತಲೆಯನ್ನು ಕೂಡ ಸರಿಯಾಗಿ ಬಾಚಿಕೊಂಡಿರಲಿಲ್ಲ. ಅದನ್ನೆಲ್ಲ ಪ್ರಸ್ತಾಪಿಸುವ ಸ್ಥಿತಿಯಲ್ಲಿ ಮನಸ್ಸು ಇರಲಿಲ್ಲ, ಸಂಬಂಧ ಕೂಡ ಇರಲಿಲ್ಲ.

ಕಾಂಪೋಂಡ್‌ ಗೇಟ್‌ ಹಾಕುವಾಗ ನನ್ನನ್ನು ಹಿಡಿದುಕೊಂಡಳು. ಏಕೋ ಬವಳಿ ಬಂದಂತಾಗುತ್ತಿದೆಯಲ್ಲ ಎಂದಳು. ಮುಖದಲ್ಲಿ ದಣಿವಿತ್ತು. ಹಣೆಯಲ್ಲಿ ಬೆವರ ಹನಿಗಳು ಕಾಣಿಸಿದವು.

ಮನೆಗೆ ವಾಪಸ್‌ ಹೋಗೋಣ. ವಿಶ್ರಾಂತಿ ಪಡೆದು ನಂತರ ಅಂಗಡಿ ಬೀದಿಗೆ ಹೋಗೋಣ ಎಂದೆ.

ಇಲ್ಲ ಹಾಗಲ್ಲ, ಮೊದಲು ದತ್ತಾತ್ರೇಯನನ್ನು ನೋಡಿಕೊಂಡು ಬರೋಣ ಎಂದು ಹೇಳುವ ಹೊತ್ತಿಗೆ ಅವಳೇ ಚೇತರಿಸಿಕೊಂಡು ತಕ್ಷಣವೇ ಗೆಲುವಾಗಿಬಿಟ್ಟಳು.

*****

ಹೆಸರಿಗೆ ಆಶ್ರಮ. ನಿಜದಲ್ಲಿ ಅದೊಂದು ಹಾಸ್ಟೆಲ್‌ ಅಷ್ಟೇ. ಕೆಳಗಡೆ ಕಛೇರಿಯಿತ್ತು. ಮೊದಲ ಮಹಡಿಯಲ್ಲಿ ಎಂಟು-ಹತ್ತು ರೂಮುಗಳಿರುವಂತೆ ಕಂಡಿತು. ಮೇನೇಜರ್‌ ಸಂಪಂಗಿರಾಮಯ್ಯನವರ ಹತ್ತಿರ ಹೋಗಿ ಪರಿಚಯ ಹೇಳಿಕೊಂಡೆವು. ಹೇಳಲೋ ಬೇಡವೋ ಎನ್ನುವಂತೆ ಸಂಪಂಗಿರಾಮಯ್ಯ ಮುಂದಿನ ಮಾತುಗಳನ್ನು ಹೇಳಿದರು.

ನಿಜವಾಗಲೂ ನೀವು ಅವರ ಸಂಬಂಧದವರೋ ಅಲ್ಲವೋ ಗೊತ್ತಿಲ್ಲ. ಅವರು ಯಾವ ಸಂಬಂಧಿಗಳನ್ನೂ ನೋಡೋಲ್ಲ. ಬಂದವರನ್ನೆಲ್ಲ ಹೊಡೆದು, ಪರಚಿ ಕಳಿಸಿ ಬಿಡ್ತಾರೆ. ಅದೊಂದೇ ತೊಂದರೆ. ಇಲ್ಲ ಅಂದರೆ ಬಹಳ ಒಳ್ಳೆಯ ಮನುಷ್ಯ. ಈಗ ಇಲ್ಲಿ ಆಶ್ರಮವಾಸಿಗಳಿಗೆ ಕತೆಗಳನ್ನು ಹೇಳೋಕೆ, ಟ್ರಸ್ಟಿಗಳಿಗೆ ಭಾಷಣ ಬರೆದುಕೊಡೋಕ್ಕೆ ಅವರೊಬ್ಬರಿಗೇ ಬರೋದು. ಮೇಕಪ್‌ ಕೂಡ ಚೆನ್ನಾಗಿ ಮಾಡ್ತಾರೆ. ನಮ್ಮ ಟ್ಟಸ್ಟ್‌ದೇ ಒಂದು ಸ್ಕೂಲಿದೆ. ಅಲ್ಲಿ ನಾಟಕ-ವಿವಿಧ ವಿನೋದಾವಳಿ ನಡೆದಾಗಲೆಲ್ಲ ಇವರನ್ನೇ ಮೇಕಪ್‌ ಮಾಡೋಕೆ ಕರೆದುಕೊಂಡು ಹೋಗ್ತಾರೆ. ನಮ್ಮ ಹಾರ್ಮೋನಿಯಂ ಮಾಸ್ಟರ್‌ ವೀರಭದ್ರಪ್ಪ ಕೂಡ ಒಂದೊಂದು ಸಲ ನಾಟಕದ ಮೇಕಪ್‌ ಮಾಡಿಸೋಕೆ ದತ್ತಾತ್ರೇಯನನ್ನು ಕರೆದುಕೊಂಡು ಹೋಗ್ತಾರೆ. ಒಂದೊಂದು ಸಲ ಈ ಆಫೀಸ್‌ಗೆ ಬಂದು ಕುಳಿತುಕೊಂಡು ಲೆಕ್ಕ ಪತ್ರ ನೋಡ್ತಾರೆ. ಸದ್ಯ ನೀವು ಇಲ್ಲಿ ಕುಳಿತಿರುವಾಗ ಅವರು ಬರದೆಹೋದರೆ ಸಾಕು. ಸುಮ್ಮನೆ ರಾಮಾಯಣವಾಗುತ್ತೆ. ಈಗೊಂದೆರಡು ತಿಂಗಳ ಹಿಂದೆ ಹೀಗೆ ಬಂದು ಕುಳಿತುಕೊಂಡಿದ್ದಾಗ ಅವರನ್ನು ಇಲ್ಲಿಗೆ ಸೇರಿಸಿದ್ದಾಗ ಮಾಡಿಕೊಂಡಿದ್ದ ಫೈಲ್‌ ಇತ್ತಲ್ಲ ಅದನ್ನು ಕಿತ್ತುಕೊಂಡು, ಫೈಲ್‌ ಒಳಗೆ ಇದ್ದ ಕಾಗದ ಪತ್ರಗಳನ್ನೆಲ್ಲ ಹರಿದು ಕಸದ ಬುಟ್ಟಿಗೆ ಹಾಕಿಬಿಟ್ಟರು. ಮನಸ್ಸಿಗೆ ಏನು ಗಾಯವೋ? ನೋವೋ? ಸಂಬಂಧಿಗಳು ಯಾರೂ ಬೇಡ ಅಂತಾರೆ. ಮೊದಲೇ ಹೇಳಿದೆನಲ್ಲ, ಅದೊಂದು ದೋಷ ಬಿಟ್ಟರೆ ನಮಗೇನೂ ತೊಂದರೆಯಿಲ್ಲ. ಎಲ್ಲರ ಜೊತೆ ಹೊಂದಿಕೊಂಡು ಸುಸೂತ್ರವಾಗಿ ಇದ್ದಾರೆ. ದಯವಿಟ್ಟು ನೀವು ಬೇಗ ಹೊರಟು ಹೋಗಿ.”

*****

ಹಾಸ್ಟೆಲ್‌ ತುಂಬಾ ತಗ್ಗಿನ ಪ್ರದೇಶದಲ್ಲಿ ಇದ್ದುರಿಂದ ಎಷ್ಟು ಹೊತ್ತಾದರೂ ಬಸ್‌, ಆಟೋ ಸಿಗದೆ ನಡೆದುಕೊಂಡು ಬಂದು ಕೋತಿ ಬಂಡೆ ಬಸ್‌ ಸ್ಟ್ಯಾಂಡ್‌ಗೆ ತಲುಪಿದೆವು. ಅಲ್ಲೂ ಎಷ್ಟು ಹೊತ್ತಾದರೂ ಬಸ್‌ ಬರಲೇ ಇಲ್ಲ. ಅಲ್ಲೇ ಬೆಂಚಿನ ಮೇಲೆ ಕಾಯುತ್ತಾ ಕುಳಿತಿದ್ದೆವು. ಹೀಗೆ ಎಷ್ಟೋ ಹೊತ್ತಿನ ತನಕ ಏನೂ ಮಾತನಾಡದೆ ಕುಳಿತಿದ್ದಾಗ ಇದ್ದಕ್ಕಿದ್ದಂತೆ ವಿನುತ, ಲೋಕದ ಆಳದಿಂದೆಲ್ಲೋ ಹೊರಟ ಧ್ವನಿಯಲ್ಲಿ ಹೇಳಿದಳು:

“ವಿಕಾರವಾಗಿ, ವಿಕೃತವಾಗಿ ಕಂಡ ನಿಮ್ಮಪ್ಪ ಕೂಡ ಪ್ರೀತಿಯ ಮನುಷ್ಯನಾಗಿರಬೇಕು. ಪ್ರೀತಿಸುವುದು ಹೇಗೆಂದು ಗೊತ್ತಿರದೇ ಕಂಡ ಕಂಡ ಕಡೆಯಲ್ಲ ಅದನ್ನೇ ಹುಡುಕಿರಬೇಕು. ವಿಕಾರ, ವಿಕೃತಿ ಎಂದು ನಮಗೆ ಕಾಣುವುದು ಕೂಡ ಪ್ರೀತಿಯ ಬಯಕೆಯೇ ಅಗಿರುತ್ತೆ.”

ದಿನಸಿ, ತರಕಾರಿ ಎಲ್ಲವನ್ನೂ ತಗೊಂಡು ಹೋಗಿ ಅಡುಗೆ ಮಾಡಿದ ನಂತರ, ಅಲ್ಲೇ ಅಡುಗೆ ಮನೆಯಲ್ಲೇ ನೆಲದ ಮೇಲೆ ಕುಳಿತು ಏನೇನೋ ಮಾತನಾಡುತ್ತಾ, ಮಾಡಿದ ಊಟವನ್ನೇ ಮತ್ತೆ ಮತ್ತೆ ಮಾಡುತ್ತಾ, ಕೊನೆಗೂ ಊಟ ಮುಗಿಸಿ ಎದ್ದಾಗ ಹೊರಗಡೆ ಸಂಜೆಯಾಗಿತ್ತು.

(ಕೆ. ಸತ್ಯನಾರಾಯಣ ಅವರ “ಮನುಷ್ಯರು ಬದಲಾಗುವರೆ” ಕಥಾ ಸಂಕಲನದಿಂದ ಈ ಕತೆಯನ್ನು ಆಯ್ದುಕೊಳ್ಳಲಾಗಿದೆ)