ಕಷ್ಟ ಸುಖವನ್ನು ಹೇಳಿಕೊಂಡರೆ ಮನಸ್ಸು ಹಗುರಾಗುವುದು. ಸುಖವನ್ನು ಹಂಚಿಕೊಂಡರೆ ಹೆಚ್ಚಾಗುವುದು, ಕಷ್ಟವನ್ನು ಹಂಚಿಕೊಂಡರೆ ಕಡಿಮೆಯಾಗುವುದು ಎಂಬ ಮಾತೇ ಇದೆಯಲ್ಲ. ಆದರೆ ಸಂತೋಷದ ಆಚರಣೆಗೆ ಆಸಕ್ತಿ ತೋರುವವರು ಕಷ್ಟದ ಮಾತುಗಳಿಗೆ ಕಿವಿಯಾಗುವರೇ.. ಪಾಂಡವರು ಆಜ್ಞಾತವಾಸದಲ್ಲಿದ್ದಾಗ, ದ್ರೌಪದಿಯ ಮಾತುಗಳಿಗೆ ಕಿವಿಯಾದವನು ಭೀಮ. ಸಾಂಗತ್ಯವೆಂದರೆ ಇದಕ್ಕಿಂತ ಹೆಚ್ಚಿನದೇನಿದೆ…
ಸುಕನ್ಯಾ ವಿಶಾಲ ಕನಾರಳ್ಳಿ ಬರಹ ನಿಮ್ಮ ಓದಿಗಾಗಿ.

 

ಕೃಷ್ಣನನ್ನು ಬಿಟ್ಟರೆ ದ್ರೌಪದಿಗೆ ಅತ್ಯಂತ ಆಪ್ತನಾದವನು ಭೀಮ. ಧರ್ಮರಾಯನಿಗೆ ಸದಾ ದೊಡ್ಡಣ್ಣನ ಗಾಂಭೀರ್ಯ. ಅರ್ಜುನ ಸಿಕ್ಕ ಸಿಕ್ಕ ಸುಂದರಿಯರೆಲ್ಲರ ಹೃದಯ ಚೋರ. ನಕುಲ ಸಹದೇವರು ಆಟಕ್ಕುಂಟು ಲೆಕ್ಕಕ್ಕಿಲ್ಲ.
ಉಳಿದವನು ಭೀಮನೊಬ್ಬನೇ.

ಧಾಂಡಿಗ ಭೀಮನಿಗೆ ಮಾತ್ರ ದ್ರೌಪದಿಗೆ ಸಂಗಾತಿಯಾಗಬಲ್ಲ ಸಾಮರ್ಥ್ಯವಿತ್ತು. ಅದಕ್ಕೇ ಕೀಚಕ ಕಾಟ ಕೊಟ್ಟಾಗ ಅಜ್ಞಾತವಾಸದ ನೆಪ ಹೇಳದೇ ಸಹಾಯಕ್ಕೆ ಧಾವಿಸಿದವನು ಭೀಮನೇ. ತುಂಬಿದ ಸಭೆಯಲ್ಲಿ ವಸ್ತ್ರಾಪಹರಣವಾದಾಗ ವೀರಶೂರರೆಲ್ಲರೂ ನಾಲಿಗೆ ಸತ್ತವರಂತೆ ಕೂತಿದ್ದಾಗ ತೊಡೆ ತಟ್ಟಿ ಪ್ರತೀಕಾರದ ವೀರ ಪ್ರತಿಜ್ಞೆ ಮಾಡಿದವನೂ ಅವನೇ. ಅಜ್ಞಾತವಾಸದಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದಾಗ ದ್ರೌಪದಿಗೆಂದೇ ಏನಾದರೂ ವಿಶೇಷವನ್ನು ಮಾಡಿಕೊಂಡು ತರುತ್ತಿದ್ದು ಅವಳು ತಿನ್ನುತ್ತಾ ಕಷ್ಟಸುಖಗಳನ್ನು ಹೇಳಿಕೊಳ್ಳುವಾಗ ತನ್ಮಯತೆಯಿಂದ ಕೇಳಿಸಿಕೊಂಡು ಸ್ಪಂದಿಸುತ್ತಿದ್ದವನೂ ಅವನೇ.

ಅದಕ್ಕೇ ಗಂಡನಾದವನು ಭೀಮನಷ್ಟು ಸ್ಪಂದಿಸಲಿ ಅಂತ ಬಯಸಿ ಪೂಜೆ ಸಲ್ಲಿಸುವ ದಿನ ಸಾಂಪ್ರದಾಯಿಕವಾಗಿ ಭೀಮನ ಅಮವಾಸ್ಯೆ.

ನಾನು ಬೆಳೆದ ಊರಿನಲ್ಲಿ ‘ಬೆಳ್ಳಿ’ ಎಂಬ ಹೆಸರಿನ ನೆಂಟನೊಬ್ಬನಿದ್ದ. ಜಮೀನಿಲ್ಲ, ಹೇಳಿಕೊಳ್ಳುವ ಬೇರೆ ಯಾವ ಕೆಲಸವೂ ಇರಲಿಲ್ಲ. ಲಿಂಗಾಯಿತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಆ ಊರಿನ ದೊಡ್ಡ ಬೀದಿಯಲ್ಲಿ ಹಿಂದಿನವರಿಂದ ಬಂದ ಒಂದು ಸಾಧಾರಣ ಮನೆ ಬಿಟ್ಟರೆ ಇನ್ನೇನೂ ಇಲ್ಲ.

ಮದುವೆಯಾಯಿತು. ಎರಡು ಮಕ್ಕಳೂ ಆದವು. ‘ಬೆಳ್ಳಣ್ಣಯ್ಯ’ ತಮ್ಮದೇ ಮತಸ್ಥರ ಮನೆಗಳಿಗೆ ಹೋಗಿ ಪಾತ್ರೆ ತೊಳೆಯುತ್ತಾ, ಸುತ್ತು ಕೆಲಸ ಮಾಡುತ್ತಾ, ಮದುವೆ ಮತ್ತು ಸಮಾರಂಭಗಳಲ್ಲಿ ಅಡಿಗೆ ಇತ್ಯಾದಿ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಸಂಸಾರವನ್ನು ತೂಗಿಸಲು ಆರಂಭಿಸಿದರು.

ಸೈಕಲ್ಲನ್ನೂ ತುಳಿಯದ ಬೆಳ್ಳಣ್ಣಯ್ಯ ಹಬ್ಬ ಹರಿದಿನಗಳಲ್ಲಿ ಬೀದಿಯ ಮೇಲೆ ಬರುವ ನಂದಿಧ್ವಜ ಕುಣಿಯುವುದನ್ನು ಎಂದೂ ತಪ್ಪಿಸುತ್ತಿರಲಿಲ್ಲ. ಆ ಉದ್ದವಾದ ಮತ್ತು ಭಾರದ ಧ್ವಜ ಕುಣಿಯಲು ಅಪಾರ ಸಮತೋಲನ ಬೇಕು. ಊರಿನ ಗತ್ತು ಗಮ್ಮತ್ತುಗಳ ಬೊಜ್ಜುಧಾರಿ ಜಮೀನ್ದಾರಿ ‘ಗಂಡಸರು’ ಗರಿಗರಿಯಾದ ಪಂಚೆ ಉಟ್ಟು ಹಿಂದಕ್ಕೆ ಕೈ ಕಟ್ಟಿಕೊಂಡು ನೋಡುತ್ತಿದ್ದರೆ ಉಟ್ಟ ಮಾಸಲು ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಸೊಂಟಕ್ಕೆ ಕಟ್ಟಿಕೊಂಡ ಜೋಳಿಗೆಯಲ್ಲಿ ಧ್ವಜದ ಬುಡವನ್ನು ಇರಿಸಿಕೊಂಡು ತನ್ಮಯತೆಯಿಂದ ಧ್ವಜ ಕುಣಿಯುವ ಬೆಳ್ಳಣ್ಣಯ್ಯನನ್ನು ನನ್ನ ಬಾಲ್ಯದಿಂದಲೂ ಅಚ್ಚರಿಗಣ್ಣುಗಳಿಂದ ದಿಟ್ಟಿಸುತ್ತಿದ್ದೆ. ಯಾವತ್ತಿಗೂ ಬೊಬ್ಬೆ ಹೊಡೆಯದ, ಹೋಟೆಲ್ಲುಗಳಲ್ಲಿ ಯಾವತ್ತೂ ತಿನ್ನದ ಬೆಳ್ಳಣ್ಣಯ್ಯ ಹೋದ ಮನೆಗಳ ಹೆಂಗಸರು ಮಕ್ಕಳ ದಿನ ನಿತ್ಯದ ಕಷ್ಟ ಸುಖಗಳಿಗೆ ಕಿವಿ ಕೊಡುವ ಬಂಧುವಾಗಿದ್ದರು. ಆ ಸಣ್ಣ ಊರೇ ಅವರ ದೊಡ್ಡ ಜಗತ್ತಾಗಿತ್ತು.

‘ಹೂಂ, ಹಂಗಂತೀಯಾ?’ ಅಂತ ಅವರು ಗಲ್ಲಕ್ಕೆ ಕೈಯಾನಿಸಿ ನಿಲ್ಲುವ ರೀತಿ ಎಲ್ಲರ ಅಪಹಾಸ್ಯಕ್ಕೆ ಪಾತ್ರವಾಗಿತ್ತು. ಪಾತ್ರೆ ತೊಳೆಯುವುದಕ್ಕೆ ಮಾತ್ರ ಸಂಬಳ ಕೊಡುತ್ತಿದ್ದರೂ ಸಹ ‘ಬೆಳ್ಳಣ್ಣಯ್ಯಾ, ಇವತ್ತು ಮುನ್ಸಿಪಾಲ್ಟಿ ನೀರು ಬಿಡಲ್ಲವಂತೆ, ಒಂದೆರಡು ಬಿಂದಿಗೆ ನೀರೆಳೆಯೋಣ ಬನ್ನಿ,’ ಅಂದರೆ ಕೈ ಹಚ್ಚಿ ಆಮೇಲೆ, ‘ನಾನಿನ್ನೂ ಹಲಸಿನಮರದ ಮನೆಯೋರ ಪಾತ್ರೆ ತೊಳದಿಲ್ಲ, ಹೊಂಟೆ,’ ಅನ್ನುತ್ತಾ ಪಂಚೆಯನ್ನು ಮತ್ತೊಮ್ಮೆ ಬಿಗಿದುಕೊಂಡು ಧಾವಿಸುತ್ತಿದ್ದ ಬೆಳ್ಳಣ್ಣಯ್ಯ ಸಪೂರ ದೇಹದ ಆರೋಗ್ಯವಂತ ವ್ಯಕ್ತಿ.

ಮನೆಗಳ ಪಾತ್ರೆ ತೊಳೆಯುವ ಕೆಲಸ ಮುಗಿದ ಮೇಲೆ ತನ್ನ ಮನೆಯಲ್ಲಿ ಪಾತ್ರೆ ತೊಳೆಯುವ, ಕಸ ಗುಡಿಸಿ ಸಾರಿಸುವ, ಹೆಂಡತಿಗೆ ಮೈ ಹುಷಾರಿಲ್ಲದಿದ್ದರೆ ಅಡಿಗೆಯನ್ನೂ ಮಾಡಿ ಮುಗಿಸುವ ಬೆಳ್ಳಣ್ಣಯ್ಯ ಇಬ್ಬರು ಗಂಡು ಮಕ್ಕಳಿಗೆ ವಿದ್ಯೆಯನ್ನೂ ಕೊಡಿಸಿದ್ದರು. ಅವರ ಹೆಂಡತಿ ಯಾರ ಮನೆಯಲ್ಲೂ ಬೇಡಿದ್ದಿಲ್ಲ.

ಜಮೀನ್ದಾರಿ ಲಂಪಟತನ ಮತ್ತು ಗತ್ತು ಗಮ್ಮತ್ತುಗಳು ಗಂಡಸುತನವನ್ನು ರೂಪಿಸಿದ್ದ ಆ ಊರಿನಲ್ಲಿ ಬೆಳ್ಳಣ್ಣಯ್ಯನ ವ್ಯಕ್ತಿತ್ವ ಬರಬರುತ್ತಾ ‘ನಾನು ಅವನಲ್ಲ, ಅವಳು’ ಎಂಬ ಹೆಣ್ಣಿಗತನಕ್ಕೆ ರೂಪಕವಾಗಿಸಿಬಿಟ್ಟಿತು.

ನೀನೇನು ಗಂಡಸೋ, ಬೆಳ್ಳಿಯೋ ಎಂದು ಯಾವ ಎಗ್ಗೂ ಇಲ್ಲದೇ ಬೈಯ್ಯುವ ಠೇಂಕಾರಿಗಳು ತಾವೆಷ್ಟು ಮಟ್ಟಿಗೆ ಮನುಷ್ಯರು ಎನ್ನುವುದನ್ನು ಯಾವತ್ತೂ ಎದೆ ಮುಟ್ಟಿ ನೋಡಿಕೊಳ್ಳಲು ಆಗದವರು.

ಬೆಳ್ಳಣ್ಣಯ್ಯ ಮಾತ್ರ ಅಪಹಾಸ್ಯದ ಮಾತುಗಳಿಗೆ ‘ಏಂಬೇಕಾರೂ ಹೇಳ್ಕ, ನಂಗೇನು?’ ಎಂದು ಇನ್ನೊಂದು ಮನೆಯ ಪಾತ್ರೆ ತೊಳೆಯಲು ಧೀ ಎಂದು ನಡೆದು ಬಿಡುತ್ತಿದ್ದರು.

ಆ ಮನುಷ್ಯ ಯಾವತ್ತೂ ಸೋಮಾರಿಯಾಗಿ ಕೂತಿದ್ದೇ ನಾನು ಕಂಡಿರಲಿಲ್ಲ. ಆ ಊರಿನ ದೇವಸ್ಥಾನಕ್ಕೆ, ಮಠಕ್ಕೆ, ಛತ್ರಕ್ಕೆ, ಕೆರೆಗೆ, ಮೂಲೆ ಮೂಲೆಗೂ ತನ್ಮಯತೆಯಿಂದ ಅವರಷ್ಟು ಮಟ್ಟಿಗೆ ಸೇರಿ ಹೋಗಿದ್ದ ಬೇರೆ ಯಾರನ್ನೂ ನನ್ನ ಬದುಕಿನ ಸಮಯದಲ್ಲಿ ಕಂಡಿಲ್ಲ. ಎಂಬತ್ತನ್ನೂ ದಾಟಿ ಬದುಕಿದ್ದ ಬೆಳ್ಳಣ್ಣಯ್ಯ ಆ ಊರಿನ ಆಸ್ಪತ್ರೆಗೆ ಮಾತ್ರ ಹೋಗಿರಲಿಲ್ಲ ಅಂತನ್ನಿಸುತ್ತೆ.

ಮದುವೆ ಎಂಬ ವ್ಯವಸ್ಥೆಯೊಳಗೇ ಇರುವ ಒಂಟಿತನಕ್ಕೆ ಅತ್ಯಂತ ಹೆಚ್ಚು ಪಕ್ಕಾಗುವವಳು ಹೆಣ್ಣೇ ಅಂತೆ. ಅದರ ಮೂಲದಲ್ಲಿ ‘ಗಂಡಸುತನ’ದ ತಪ್ಪು ಪರಿಕಲ್ಪನೆ ಇರುವುದೇ ಕಾರಣ ಅಂತ ನನಗನ್ನಿಸುತ್ತೆ.

ಭೀಮನಮವಾಸ್ಯೆಯ ದಿನ ಬೆಳ್ಳಿಯೂ ನೆನಪಾಗುತ್ತಾರೆ.