ಇಂದು ಬುಡಕಟ್ಟುಗಳ ಭಾಷೆಯ ಬಿಕ್ಕಟ್ಟೆಂದರೆ, ಆಯಾ ಭಾಗದ ಬಹುಸಂಖ್ಯಾತರ ಭಾಷೆಯನ್ನು ಬುಡಕಟ್ಟುಗಳು ಅನಿವಾರ್ಯವಾಗಿ ಬಳಸಬೇಕಾಗಿದೆ. ಹಾಗಾಗಿ ತಮ್ಮ ವೃತ್ತಿ ಬದುಕಿಗೆ ಅಂಟಿಕೊಂಡಿದ್ದ ಭಾಷೆಗಳನ್ನು ಬುಡಕಟ್ಟುಗಳ ಹೊಸ ತಲೆಮಾರು ಬಳಸುತ್ತಿಲ್ಲ. ಬಳಸುವ ಅಗತ್ಯವೂ ಕಾಣುತ್ತಿಲ್ಲ. ಆದರೆ ಎಷ್ಟೋ ಬಾರಿ ಈ ಬುಡಕಟ್ಟು ಭಾಷೆ ನುಡಿಗಟ್ಟುಗಳು ಆಯಾ ಸಮುದಾಯದ ಚರಿತ್ರೆಯನ್ನೂ ಹೇಳುತ್ತಿರುತ್ತದೆ. ಹೀಗೆ ಬುಡಕಟ್ಟುಗಳ ಭಾಷೆಯೊಂದು ನಶಿಸಿದರೆ, ಅದರ ಜತೆ ಆ ಸಮುದಾಯದ ಚರಿತ್ರೆಯೂ ನಶಿಸಿದಂತೆ. ಈ ಬಗ್ಗೆ ನೋಮ್ ಚೋಮಸ್ಕಿಯನ್ನು ಒಳಗೊಂಡಂತೆ ಜಗತ್ತಿನ ಭಾಷಾತಜ್ಞರು ಎರಡು ದಶಕಗಳಿಂದ ಇಂತಹ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಒಂಭತ್ತನೇ ಕಂತು.

ಗಂಟಿಚೋರ ಸಮುದಾಯ ಇತರೆ ಸಮುದಾಯಗಳಿಗಿಂತ ಕಳ್ಳತನದಲ್ಲಿ ಪ್ರಾವಿಣ್ಯತೆ ಸಾಧಿಸಿದ್ದರು. ಹಾಗಾಗಿಯೇ ಇವರ ಕಳ್ಳತನದ ಪ್ರವೃತ್ತಿಯ ವಿಶೇಷತೆಯ ಕಾರಣಕ್ಕೆ ಇವರಿಗೆ ಈ ಪ್ರಾವಿಣ್ಯದ ಹೆಸರನ್ನೇ ಜನರು ಕರೆದಿದ್ದಾರೆ. ಹೀಗೆ ತುಡುಗುತನದ ವಿಶೇಷ ಪ್ರಾವಿಣ್ಯತೆಯನ್ನು ಈ ಸಮುದಾಯ ಸಾಧಿಸಿತ್ತು ಎನ್ನುವುದಕ್ಕೆ ಮುಖ್ಯವಾಗಿ ಅವರ ತುಡುಗುತನಕ್ಕೆ ಪೂರಕವಾಗಿ ಒಂದು ಭಾಷೆಯನ್ನೇ ಸೃಷ್ಟಿಸಿಕೊಂಡಿದ್ದರು. ಈಗ ಈ ಭಾಷೆ ಬಳಕೆಯಲ್ಲಿಲ್ಲವಾದರೂ ಈ ಭಾಷೆ ಗಂಟಿಚೋರ ಸಮುದಾಯದ ಮುಖ್ಯವಾದ ಗುರುತಾಗಿದೆ. ಈ ಭಾಷೆಯು ಒಂದು ಬಗೆಯ ಗುಪ್ತ ಭಾಷೆ. ಅನ್ಯರಿಗೆ ಈ ಶಬ್ದಗಳು ಅರ್ಥವಾಗುತ್ತಿರಲಿಲ್ಲ. ಈ ಭಾಷೆಯನ್ನು ಒಳಗಿನ ಭಾಷೆ ಎಂತಲೂ, ತುಡುಗು ಭಾಷೆ ಎಂತಲೂ, ವಡ್ಡರಿ ಮಾತು ಎಂತಲೂ ಕರೆಯುತ್ತಾರೆ. ಒಟ್ಟಾರೆ ಬುಡಕಟ್ಟು ಸಮುದಾಯಗಳ ಈ ಬಗೆಯ ಆಂತರಿಕ ಸಂವಹನದ ಭಾಷೆಯನ್ನು ಮರಗು ಭಾಷೆ ಎಂದು ಕರೆಯುತ್ತಾರೆ.

ಯಾವುದೇ ಬುಡಕಟ್ಟು ಸಮುದಾಯವು ಆಂತರಿಕ ರಕ್ಷಣೆಯ ಕಾರಣಕ್ಕೆ ತನ್ನದೇ ಆದ ಭಾಷೆಯೊಂದನ್ನು ಮತ್ತು ತನಗೇ ವಿಶಿಷ್ಠವಾದ ನುಡಿಗಟ್ಟನ್ನು ಕಟ್ಟಿಕೊಂಡಿರುತ್ತದೆ. ಈ ನುಡಿಗಟ್ಟು ಬುಡಕಟ್ಟಿನ ಒಂದು ಚಹರೆ ಕೂಡ ಆಗಿದೆ. ಈ ನುಡಿಗಟ್ಟುಗಳು ಆಯಾ ಸಮುದಾಯದ ವೃತ್ತಿ ಮತ್ತು ದಿನವಹಿ ದುಡಿಮೆಯ ಜತೆ ನಂಟನ್ನು ಬೆಸೆದುಕೊಂಡಿದ್ದವು. ಕಾಲಾನಂತರ ಬುಡಕಟ್ಟುಗಳು ತಮ್ಮ ವೃತ್ತಿಗಳಿಂದ ಸ್ಥಿತ್ಯಂತರ ಹೊಂದಿದಂತೆ ಈ ವೃತ್ತಿಗಳಿಗೆ ಅಂಟಿಕೊಂಡಿದ್ದ ಭಾಷೆ ಮತ್ತು ನುಡಿಗಟ್ಟುಗಳು ಇಲ್ಲವಾಗುತ್ತಿವೆ. ಅಂದರೆ ಸದ್ಯಕ್ಕೆ ಬುಡಕಟ್ಟು ಭಾಷೆಗಳು ಅಳಿವಿನಂಚಿನಲ್ಲಿವೆ. 1980 ರಲ್ಲಿ ಜರ್ಮನ್ ನ ವೆರ್ನರ್ ಹೆರ್ಜಾಗ್ ಎನ್ನುವ ಸಿನಿಮಾ ನಿರ್ದೇಶಕನ ಚಿತ್ರ `ವೇರ್ ದ ಗ್ರೀನ್ ಆಂಟ್ಸ್ ಡ್ರೀಮ್’ ಎನ್ನುವ ಸಿನೆಮಾದಲ್ಲಿ ಬುಡಕಟ್ಟು ಭಾಷೆಯ ಅವಸಾನವನ್ನು ಚಿತ್ರಿಸಿದ್ದಾನೆ. ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ಬುಡಕಟ್ಟು ವಾಸಿತ ಪ್ರದೇಶದಲ್ಲಿ ಯುರೇನಿಯಂ ಮೈನಿಂಗ್ ಕಂಪನಿಯನ್ನು ಆಫ್ರಿಕನ್ ಬುಡಕಟ್ಟುಗಳು ವಿರೋಧಿಸುತ್ತವೆ. ಕೊನೆಗೆ ಕೋರ್ಟಿನಲ್ಲಿ ಒಬ್ಬ ಬುಡಕಟ್ಟಿನ ಮನುಷ್ಯ ತನ್ನ ಮೇಲಿನ ದಬ್ಬಾಳಿಕೆಯನ್ನು ಅವರದೇ ಭಾಷೆಯಲ್ಲಿ ಹೇಳುತ್ತಾನೆ. ಅದು ನ್ಯಾಯಾಧೀಶನಿಗೆ ಅರ್ಥವಾಗುವುದಿಲ್ಲ. ಬುಡಕಟ್ಟಿನ ಜನರನ್ನು ಅನುವಾದ ಮಾಡಲು ಕೇಳಿದರೆ, ಸದ್ಯಕ್ಕೆ ಅವನ ಭಾಷೆ ಬರುವುದು ಆತನಿಗೆ ಮಾತ್ರ. ಆ ಭಾಷೆ ಬರುವ ಕೊನೆಯ ಮನುಷ್ಯ ಆತನೆ ಎಂದು ಹೇಳುತ್ತಾರೆ. ಹೀಗೆಯೇ ಬುಡಕಟ್ಟಿನ ನೂರಾರು ಭಾಷೆಗಳು ಅವಸಾನಗೊಂಡಿವೆ. ಈ ಕಾರಣಕ್ಕೆ ಅವರ ನುಡಿಗಟ್ಟನ್ನಾದರೂ ದಾಖಲಿಸಬೇಕಿದೆ.

ಇಂದು ಬುಡಕಟ್ಟುಗಳ ಭಾಷೆಯ ಬಿಕ್ಕಟ್ಟೆಂದರೆ, ಆಯಾ ಭಾಗದ ಬಹುಸಂಖ್ಯಾತರ ಭಾಷೆಯನ್ನು ಬುಡಕಟ್ಟುಗಳು ಅನಿವಾರ್ಯವಾಗಿ ಬಳಸಬೇಕಾಗಿದೆ. ಹಾಗಾಗಿ ತಮ್ಮ ವೃತ್ತಿ ಬದುಕಿಗೆ ಅಂಟಿಕೊಂಡಿದ್ದ ಭಾಷೆಗಳನ್ನು ಬುಡಕಟ್ಟುಗಳ ಹೊಸ ತಲೆಮಾರು ಬಳಸುತ್ತಿಲ್ಲ. ಬಳಸುವ ಅಗತ್ಯವೂ ಕಾಣುತ್ತಿಲ್ಲ. ಆದರೆ ಎಷ್ಟೋ ಬಾರಿ ಈ ಬುಡಕಟ್ಟು ಭಾಷೆ ನುಡಿಗಟ್ಟುಗಳು ಆಯಾ ಸಮುದಾಯದ ಚರಿತ್ರೆಯನ್ನೂ ಹೇಳುತ್ತಿರುತ್ತದೆ. ಹೀಗೆ ಬುಡಕಟ್ಟುಗಳ ಭಾಷೆಯೊಂದು ನಶಿಸಿದರೆ, ಅದರ ಜತೆ ಆ ಸಮುದಾಯದ ಚರಿತ್ರೆಯೂ ನಶಿಸಿದಂತೆ. ಈ ಬಗ್ಗೆ ನೋಮ್ ಚೋಮಸ್ಕಿಯನ್ನು ಒಳಗೊಂಡಂತೆ ಜಗತ್ತಿನ ಭಾಷಾತಜ್ಞರು ಎರಡು ದಶಕಗಳಿಂದ ಇಂತಹ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಈ ಮಧ್ಯೆ ನಶಿಸಲಿರುವ ಬುಡಕಟ್ಟು ಭಾಷೆಯನ್ನು ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ. ಬುಡಕಟ್ಟುಗಳ ನುಡಿ ಉಳಿವಿನ ಬಗೆಗೆ ವಿದ್ವಾಂಸರಾದ ಜಿ.ಎನ್.ದೇವಿಯವರು ತುಂಬಾ ಕೆಲಸ ಮಾಡಿದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಪ್ರೊ.ಕಿಕ್ಕೇರಿ ನಾರಾಯಣ ಅವರು ಜೇನುಕುರುಬರ ಜೇನುನುಡಿಯ ಬಗ್ಗೆ ತುಂಬಾ ವಿಶೇಷವಾದ ಮತ್ತು ಆಳವಾದ ಅಧ್ಯಯನ ಮಾಡಿದ್ದಾರೆ. ಇದು ಬುಡಕಟ್ಟು ಭಾಷೆಯ ಒಂದು ಮಾದರಿ ಅಧ್ಯಯನವೂ ಆಗಿದೆ. ಅಂತೆಯೇ ಪ್ರೊ.ಕೆ.ಎಂ.ಮೇತ್ರಿ ಅವರು ಮರಗು ಭಾಷೆ ಎಂಬ ಹೆಸರಲ್ಲಿ ಪ್ರಕಟಿಸಿದ ಪುಸ್ತಕ ಹಲವು ಬುಡಕಟ್ಟುಗಳ ಗುಪ್ತ ಭಾಷೆಯನ್ನು ಪರಿಚಯಾತ್ಮಕ ನೆಲೆಯಲ್ಲಿ ವಿವರಿಸುತ್ತದೆ. ಉಳಿದಂತೆ ಬುಡಕಟ್ಟುಗಳ ಅಧ್ಯಯನಗಳಲ್ಲಿ ಅಷ್ಟೇನೂ ಸಮಗ್ರವಲ್ಲದ ಬುಡಕಟ್ಟು ನುಡಿಗಟ್ಟುಗಳನ್ನು ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗಂಟಿಚೋರ ಸಮುದಾಯದ ತುಡುಗು ನುಡಿಯ ನುಡಿಗಟ್ಟು ಮತ್ತು ತುಡುಗು ನುಡಿಯ ಸಂದರ್ಭಗಳನ್ನು ನೋಡೋಣ.

ಎಮ್. ಕೆನಡಿ ಅವರ ಕೃತಿಯಲ್ಲಿ ಗುರುತಿಸುವ ವಡ್ಡರಿ ಭಾಷೆಯ ಪದಗಳು:

ನಾಮಪದಗಳು:

ಅಂಥ ಏಂಡಿ- ಬೆಳ್ಳಿ ಆಭರಣ
ಅಂಥ ಬಂಗರ- ಬಂಗಾರ
ಅಡಪಮ್-ಚೀಲ
ಉಲ್ಮುಖ/ ವಾಘನಖ-ಡೊಂಕಾದ ಚೂರಿ
ಕಾಂಸ್ಯ-ಗಂಡಸು
ಕೆಂಪು-ಬಂಗಾರ
ಕೌರಿ-ಹೆಂಗಸು
ಗಂಟ-ಗಂಟು
ಗೂಟಮ್-ಕನ್ನ ಕೊರೆಯುವ ಮೊಳೆ
ಗೋಡ-ಗೋಡೆ
ಘಡ್ಡಡ/ಘೋಷಡ/ಕಟ್ಟೆಡ- ಫೌಜುದಾರ
ಚಕ್ಕ-ಪೆಟ್ಟಿಗೆ
ಚಿನಿ-ಬಂಗಾರ
ಚಿನ್ನೈಡ-ಹಗುರ
ಜರಿಯ-ಮುದುಕ
ಜರಿಯಾಳ-ಮುದುಕಿ
ತಲಪುಕಯಲ-ಬೆಳ್ಳಿ
ನೆಲ್ಲಕುಕ್ಕಲು-ಪೋಲೀಸ್ ಸಿಪಾಯಿ.
ನೆಲ್ಲಕುಕ್ಕುಲು-ಪೋಲೀಸ್ ಸಿಪಾಯಿ
ಪಠಶಿ-ಗುಪ್ತಭಾಷೆ
ಪೀನ್ಯ- ಹುಡುಗ
ಪೀನ್ಯಾಳ-ಹುಡುಗಿ
ಪೈಸಲು-ರೂಪಾಯಿ
ಪೊಗೆ ಬಂಡಿ- ರೇಲ್ವೆ
ಫಡ್ಡ ಇಲ್ಲ- ದೊಡ್ಡ ಮನೆ (ಜೈಲು)
ಫಡ್ಡಡ-ಜಡ
ಫಾರಶೀ- ಗುಪ್ತಭಾಷೆ
ಬಂಟಿಗಾ- ಪೋಲೀಸ್
ಬಚ್ಕು-ಆಭರಣ
ಬಿಳುಪು-ಬೆಳ್ಳಿ
ಬೋಖ ಪಾರಶೋಟಿ ಗೂಟಮ್- ತೂತು ತೆಗೆಯುವ ಮೊಳೆ
ಭೋಖ-ತೂತು
ಮಂಗಕರ-ಅಮಲದಾರ
ಮಂಗಕರ-ಅಮಲ್ದಾರ
ಮುಚನಿ-ಕದ್ದಮಾಲು
ಮುಚಾಡ-ಕಳ್ಳ
ಮುಚಿಲ ಬಟ್ಟಲ/ದೊಂಟು-ಕದ್ದ ವಸ್ತು
ಯರವಲಕ-ಚಿನ್ನದ ಆಭರಣ
ಯರ್ರೆ ಮಂಕಡ/ಯರ್ರ ಮೋಥಡಾ- ಯುರೋಪಿಯನ್
ಯೆರೆವಲಕ- ಚಿನ್ನದ ಆಭರಣ
ರೊಂಡಿ-ಪೇಟ
ರೊಂಡಿ-ಸೊಂಟ
ವೈಪಲು-ರೂಪಾಯಿ
ಶಿಂಗೇರಾ- ಶತ್ರುಗಳು
ಶಿಟಿ-ಕಂದೋಟಿ( ಹಣ ತುಂಬುವ ಚೀಲ)

ಈ ನುಡಿಗಟ್ಟು ಬುಡಕಟ್ಟಿನ ಒಂದು ಚಹರೆ ಕೂಡ ಆಗಿದೆ. ಈ ನುಡಿಗಟ್ಟುಗಳು ಆಯಾ ಸಮುದಾಯದ ವೃತ್ತಿ ಮತ್ತು ದಿನವಹಿ ದುಡಿಮೆಯ ಜತೆ ನಂಟನ್ನು ಬೆಸೆದುಕೊಂಡಿದ್ದವು. ಕಾಲಾನಂತರ ಬುಡಕಟ್ಟುಗಳು ತಮ್ಮ ವೃತ್ತಿಗಳಿಂದ ಸ್ಥಿತ್ಯಂತರ ಹೊಂದಿದಂತೆ ಈ ವೃತ್ತಿಗಳಿಗೆ ಅಂಟಿಕೊಂಡಿದ್ದ ಭಾಷೆ ಮತ್ತು ನುಡಿಗಟ್ಟುಗಳು ಇಲ್ಲವಾಗುತ್ತಿವೆ.

ಕ್ರಿಯಾ ಪದಗಳು:

ಅಡಿಕಟ್ಟು-ಮರಿಮಾಡು
ಆಸ್ಯಾವನೆ-ಅದಾರ
ಇರಾಸ-ಕೊಡು
ಉಂಡೈ-ಅಲ್ಲಿ ಅದೆ
ಉಂಡ್ಯೆ- ಅಲ್ಲಿ ಅದೆ.
ಒಚಕರ-ಬಂದನು
ಕಾಸಿಗೊ-ತಿನ್ನು
ಕೋಶ್ಕಿಯಾ-ಕತ್ತರಿಸು
ಚಪ್ಪರ ಮಾಡಿಕೋ-ಮುಚ್ಚಿಟ್ಟುಕೋ
ಚಾಪ್ರ ಮಾಡಿಕೊ- ಬಚ್ಚಿಟ್ಟುಕೊ
ಚಿಕಿ-ಆತನ ಹತ್ತಿರ ಇದೆ.
ಚಿನಿ ಹಾಕುವುದು-ನಕಲಿ ಬಂಗಾರದಿಂದ ಮೋಸಮಾಡುವುದು.
ಚಿನ್ನೈಡ-ಹಗುರ
ಜೆರಿಗಿ ಏಲಗ್ಯಾ- ಹೋಗು
ಡಾಂಗಿಕುಸಿ-ಅಡಗು
ತಾಪಸಿ ಚಪ- ಸುಳ್ಳೇ ಹೇಳು
ತಾಸು- ಹೋಗು
ತುಲಗ-ಹೇಳಬೇಡ
ಧರಿಸಿಕೋ-ಇಡಿ
ಧರಿಸಿಗೋ-ಜಗಳ ತೆಗಿ
ಪಾಂಸ-ನೋಡು
ಪಾಂಸಕತ್ತಾರ- ನೋಡಕತ್ತಾರ
ಪಾಂಸು-ನೋಡು
ಪಾರ ಏಲಗರ-ತಪ್ಪಿಸಿಕೊಂಡು ಹೋಗು
ಪಾರ ಏಲಗ್ಯಾ-ಓಡಿಹೋಗು
ಬಡಬರ- ಬಂದನು
ವಗಾಸಿಗೊ-ಮಲಗು

ವಿಜಾಪುರದ ಗಂಟಿಚೌಡೇರಲ್ಲಿ ಬಳಕೆಯಲ್ಲಿದ್ದ ಪದಗಳು:

ಕನಸ್ಯಾ-ಹಳ್ಳಿಯವ
ಗೈನು-ಮನೆ.
ಗೋಷಡ-ಬ್ರಾಹ್ಮಣ
ತೆಲಪಡು/ಕಯಲ/ವೈಪಲು- ರೂಪಾಯಿ.
ಪಡ್ಡ-ನಡೆಯಲಿ
ಪಾರ ಏಲಗರ- ಓಡಿ ಹೋಗು
ಪಿಸ್ಕಾಕ-ಚೂರಿ
ಬಂಟಗಿಯಾ/ಬಂಟಕರ- ಪೋಲೀಸ್ ಸಿಪಾಯಿ
ಬಡಕ-ಆಭರಣ/ಮಾಲು
ಯರಡಿ-ಚಿನ್ನ
ಯೆಂಡಿ- ಬೆಳ್ಳಿ

ವಿಜಾಪುರದವರಲ್ಲಿ ಮಾತ್ರವಿದ್ದ ಗುಪ್ತ ಭಾಷೆ:

ಇರಟ-ಪಾಟೀಲ
ಕಡು-ಮಾಲು
ಕೆಂಪು-ಚಿನ್ನ
ಕೆವರೇರ- ಹೆಂಗಸು
ಕೊಡ್ಡರಕಿ-ಕಳವು
ಕೊಡ್ರು-ಕಳ್ಳ.
ಗೈನವಡಸು- ಕನ್ನ ಕೊರಿಯೋಣ
ಚಪ್ರಮಾಡಿಕೋ-ಬಚ್ಚಿಡು
ದೊಡ್ಡಿ ಇರಟ- ಪೋಲೀಸ್ ಅಮಲದಾರ
ನೇಟಗರ-ವಾಲೀಕಾರ
ಬುಡ್ಸು-ಓಡು
ಮಗಾಣಿ-ರೊಕ್ಕ ಹಾಕುವ ಚೀಲ
ಶಟೊ-ಕಳವಿನ ಮಾಲು ಕೊಂಡುಕೊಳ್ಳುವವನು.

ಬಾಲೇಹೊಸೂರಲ್ಲಿ ಬಳಕೆಯಲ್ಲಿದ್ದ ವಿಶಿಷ್ಠ ಪದಗಳು:

ಚಪ್ರಮಾಡ- ಮುಚ್ಚಿಡು
ಜನಿವಾರ- ಜಂಗಮರು
ಜಿಡ್ಡರು- ಕುರುಬರು.
ಪರ್ಯಾರ-ಹರಿಜನ
ಪಾವಸ್ತನ- ಬರ್ತಾನ.
ಬುಚೆಟ್ಟರಿ-ಅವನ ಕೂಡೆ ಮಾತಾಡಬ್ಯಾಡರಿ.
ಬುಡುಸು- ಓಡಿ ಹೋಗು
ಬುಯ್ಯ ಆಡಬೇಡ-ಮಾತನಾಡಬೇಡ.
ವಾಲ್ಮೀಕಿ ನೆಮತ್ತ- ತಳವಾರ

ತುಡುಗುತನದ ಉಪಕರಣಗಳು:

ಮುಳ್ಳೆ ಮುಕ್ಕ (ಉಳಿಮುಖ)- ಸರ ಕತ್ತರಿಸುವ ತುಂಬಾ ಚಿಕ್ಕ ಚಾಕು. ಇದನ್ನು ಬಾಯಲ್ಲಿಟ್ಟುಕೊಳ್ಳಬಹುದಿತ್ತು. ಇದನ್ನು ಮಹಿಳೆಯರು ತುಡುಗಿಗೆ ಬಳಸುತ್ತಿದ್ದರು.

ಪದಬಳಕೆಯ ಸ್ವರೂಪ:

ಏ ಕಾಣ್ಸ್ಯ ಕಾಸ್ತಾನ ಬಿಟ್ಟು ಬರ್ರಿ- ಒಬ್ಬ ನೋಡಕತ್ಯಾನ ಬಿಟ್ಟು ಬರ್ರಿ
ಪೀನ್ಯ ಕಡೆ ಪಣ್ಣೈತಿ ತಾಸು ತಾಸು- ಆ ಹುಡುಗನ ಕಡೆ ಹಣ ಇದೆ ನೋಡು
ಕೌರಿ ಆಸೇತಿ ತಾಸು- ಹೆಣ್ಣಮಗಳ ಕಡೆ ಐತಿ ನೋಡು.
ಬಂಟಿಗಾ ಬಂದ – ಪೋಲಿಸ್ ಬಂದ.
ನೀ ಚಪ್ರ ಮಾಡು, ನಾ ಧರಿಸಿಕಂಡು ಬಿಡಸ್ತನಿ- ನೀ ಕಳವು ಮಾಡು ನಾನು ಅವರಿವರನ್ನು ನೋಡತೀನಿ.
ಲೇ ಪಿಣ್ಯಾ ಬಂಟಿಗ ಬಂದ ಧರಸ್ತನ ಬಿಡಸು-ಪೋಲಿಸ್ ಬಂದ ಬೇಗ ಜಾಗ ಕಾಲಿ ಮಾಡು.
ಬುಡ್ಸಾನು ನಡೀರಿ- ಓಡಿ ಹೋಗೋಣ ನಡೀರಿ.
ಬುಯ್ಯ ಆಡಿಕಂಡು ಕೂತಗಂತಿನಿ, ತಾಸಿಗಂಡು ನಡಿ- ನಾನು ಮಾತಾಡ್ತಿರ್ತೀನಿ ನೀನು ತೊಗಂಡು ಹೋಗು.
ಬುಗುಡಿಗಾನ ತಟಾಸಿಗಂಡು ನಡಿ- ಕುರಿಯನ್ನು ಹೊಡಕೊಂಡು ಹೋಗು

ಸಂಜ್ಞೆ/ಸಂಕೇತಗಳ ಸಂವಹನ:

ಗಂಟಿಚೋರ ಸಮುದಾಯವು ತುಡುಗು ಮಾಡಲು ತನ್ನದೇ ಆದ ಗುಪ್ತ ಭಾಷೆಯನ್ನು ಬಳಸಿದಂತೆ ಸಂಜ್ಞೆ ಮತ್ತು ಸಂಕೇತಗಳನ್ನು ಕೂಡ ಬಳಸುತ್ತಿದ್ದರು. ಇವು ಈ ಸಮುದಾಯಕ್ಕೆ ಮಾತ್ರ ಅನನ್ಯವಾದ ಗುರುತಾಗಿದೆ. ಕಾರಣ ಸಂಕೇತಗಳು ತುಡುಗುತನದಲ್ಲಿ ತೊಡಗಿದವರಿಗೆ ಮಾತ್ರ ಅರಿವಿಗೆ ಬರುತ್ತಿತ್ತು. ಇದು ಒಂದು ಬಗೆಯ ಸಂವಹನದ ಮಾದರಿಯಾಗಿತ್ತು. ಇಂತಹ ಸಂಕೇತಗಳು ಸ್ಥಳೀಯವಾಗಿ ಗದಗ ಭಾಗದವರಿಗೂ, ಬಿಜಾಪುರದ ಭಾಗದವರಿಗೂ ಒಂದು ಬಗೆಯ ಫರಕಿರುತ್ತಿತ್ತು. ಇಷ್ಟಾಗಿಯೂ ಕೆಲವು ಸಾಮಾನ್ಯ ಸಂಕೇತ/ಸಂಜ್ಞೆಗಳನ್ನು ಗುರುತಿಸಬಹುದು. ಇದನ್ನು ಸಮುದಾಯದ ಹಿರಿಯರು ತಮ್ಮ ಅನುಭವವನ್ನು ನೆನಪಿಸಿಕೊಂಡು ಹೇಳುತ್ತಾರೆ.

ಮುಖ್ಯವಾಗಿ ನಾನು ಬಾಲೇಹೊಸೂರು ಮತ್ತು ಗದಗದಲ್ಲಿ ಕ್ಷೇತ್ರಕಾರ್ಯ ಮಾಡಿದಾಗ ಈ ಸಂಜ್ಞೆ/ಸಂಕೇತಗಳ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿತು:
ಮೆಲ್ಲಗೆ ಕೆಮ್ಮಿ ಕ್ಯಾಕರಿಸಿ ಉಗುಳುವುದು: ಜಾಗೃತೆಯಿಂದ ಇರು, ಅಪಾಯವಿದೆ ಎಚ್ಚರದಿಂದಿರು ಎನ್ನುವುದನ್ನು ಸೂಚಿಸುತ್ತದೆ.

ಜೋರಾಗಿ ಕೆಮ್ಮಿ ಕ್ಯಾಕರಿಸಿ ಉಗುಳುವುದು: ಅಪಾಯವಿಲ್ಲ, ಅಥವಾ ಅಪಾಯ ತಪ್ಪಿತು. ಪೋಲಿಸರಾಗಲಿ, ಇತರೆ ಜನರಾಗಲಿ ಇದ್ದರೆ ಅವರು ಹೋದರು ಎನ್ನುವುದನ್ನು ಮತ್ತು ಇನ್ನು ನಿನ್ನ ಕೆಲಸವನ್ನು ಮುಂದುವರೆಸು ಎನ್ನುವುದನ್ನು ಸೂಚಿಸುತ್ತದೆ.

ತಲೆ ತುರಿಸಿ ಯಾವುದಾದರೂ ದಿಕ್ಕಿನೆಡೆಗೆ ಕೈ ತೋರುವುದು: ಕೈ ತೋರಿದ ಕಡೆಯಿಂದ ನಿನಗೆ ಅಪಾಯವಿದೆ ಎನ್ನುವುದನ್ನು ಸೂಚಿಸುತ್ತದೆ.

ಗುರುತಿನ ವಸ್ತುವನ್ನು ಅಡಗಿಸಿಡುವುದು: ತುಡುಗುತನಕ್ಕೆ ಚಿಕ್ಕ ಚಿಕ್ಕ ಗುಂಪುಗಳನ್ನು ಮಾಡಿಕೊಂಡು ಪ್ರತ್ಯೇಕವಾಗಿ ಹೋಗುವಾಗ ಎಲ್ಲರ ಎದುರೇ ಒಂದು ಪ್ರದೇಶದಲ್ಲಿ ಚಿಕ್ಕ ಕಲ್ಲನ್ನೋ ಮರದ ತುಂಡನ್ನೋ ಒಬ್ಬೊಬ್ಬರ ಗುರುತನ್ನಾಗಿ ಅಡಗಿಸಿಡುವುದು. ತುಡುಗುಮುಗಿಸಿಕೊಂಡು ಮೊದಲು ಬಂದವರು ತಮ್ಮ ಗುರುತನ್ನು ತೆಗೆದುಕೊಂಡು ಹೋಗುವರು. ಹಿಂದೆ ಬಂದವರು ಯಾರು ಯಾರು ಹೋಗಿದ್ದಾರೆ ಎನ್ನುವುದನ್ನು ಗುರುತುಗಳು ಇಲ್ಲದಿರುವುದರಿಂದ ತಿಳಿದುಕೊಳ್ಳುತ್ತಿದ್ದರು. ಯಾವುದಾದರು ಗುರುತು ಹಾಗೆ ಉಳಿದಿದ್ದರೆ ಕೊನೆಯವರು ಬರುವ ತನಕ ಕಾಯುವ ಪದ್ಧತಿ ಇತ್ತು. ಹೀಗೆ ಸಾಮೂಹಿಕ ತುಡುಗು ಮಾಡಲು ಈ ಬಗೆಯ ಸಂಕೇತವನ್ನು ಬಳಸುತ್ತಿದ್ದರು.

ಒಲೆಗುಂಡು ಜೋಡಿಸುವುದು: ಯಾವುದೋ ಒಂದು ನಿರ್ದಿಷ್ಟ ಪ್ರದೇಶಕ್ಕೆ ತುಡುಗಿಗೆ ಹೋದರೆ, ಆ ಸ್ಥಳದಿಂದ ತಾವು ಕೆಲಸ ಮುಗಿಸಿಕೊಂಡು ಹೋಗಿದ್ದೇವೆ ಎನ್ನುವುದನ್ನು ತಮ್ಮದೇ ಇನ್ನೊಂದು ತಂಡಕ್ಕೆ ಹೇಳುವ ಕಾರಣ, ನಿಗದಿತ ಸ್ಥಳದಲ್ಲಿ ಒಲೆಗುಂಡಿನ ಹಾಗೆ ಮೂರು ಕಲ್ಲನ್ನು ಜೋಡಿಸಿ ಹೋಗುತ್ತಿದ್ದರು. ಹಿಂದೆ ಬಂದವರು ಈ ಒಲೆಗುಂಡನ್ನು ನೋಡಿ ಕೆಲಸ ಮುಗಿದಿದೆ ಎಂದು ಭಾವಿಸಿ ಅವರನ್ನು ಸೇರಿಕೊಳ್ಳುವ ಪೂರ್ವ ನಿರ್ಧಾರಿತ ಜಾಗಗಳಿಗೆ ಹೋಗುತ್ತಿದ್ದರು. ಅಂತೆಯೇ ತಾವು ಗುಟ್ಟಾಗಿ ಉಳಿದ ಜಾಗವನ್ನು ಬಿಟ್ಟು ಹೋಗುವ ಮುಂಚೆಯೂ ಹೀಗೆ ಒಲೆಗುಂಡಿನ ಸಂಕೇತವನ್ನು ಮಾಡುತ್ತಿದ್ದರು. ಒಲೆಯ ಮುಂದೆ ಮಣ್ಣನ್ನು ಕಾಲಿನಿಂದ ಕೆದರಿ ಅಲ್ಲಿ ಹೆಜ್ಜೆ ಮೂಡಿಸಿ ಮುಂದೆ ಹೋಗುತ್ತಿದ್ದರು. ಸುಮಾರು ನೂರಿನ್ನೂರು ಮೀಟರಿಗೊಂದರಂತೆ ಮಣ್ಣಲ್ಲಿ ಹೆಜ್ಜೆ ಗುರುತು ಮಾಡಿ ಮುಂದುವರಿದಿರುತ್ತಾರೆ. ಈ ಹೆಜ್ಜೆಗಳನ್ನು ಗುರುತಿಸುತ್ತಾ ಮುಂದೆ ಹೋದವರನ್ನು ಪತ್ತೆಹಚ್ಚುತ್ತಿದ್ದರು. (ಎಸ್.ವಿ. ಹಲ್ದಿಪುರ್:1914:16)

(ಚಿತ್ರಗಳು: ಲೇಖಕರ ಸಂಗ್ರಹದಿಂದ)