ಆಗೆಲ್ಲ ಗಂಡ ಸತ್ತ ಮೇಲೆ ಹೆಂಗಸು ಬಸುರಿಯಾದರೆ, ಅವಳಿಗೆ ಮಗು ಹುಟ್ಟದಿದ್ದರೂ ಬಸುರಿ ಆಗಿದ್ದಾಳೆಂದು ತಿಳಿದರೆ ಸಾಕು ಅಂಥವರ ಮನೆಯಿಂದ ಅವಳಷ್ಟೇ ಅಲ್ಲ, ಆ ಮನೆಯ ಯಾರನ್ನೂ ಹತ್ತಿರ ಸೇರಿಸುತ್ತಿರಲಿಲ್ಲ.ಅಂಥವರ ಮನೆಯಿಂದ ಯಾರನ್ನೂ ಯಾವುದೇ ಮಂಗಳಕಾರ್ಯಕ್ಕೂ ಕರೆಯುತ್ತಿರಲಿಲ್ಲ. ಹಾಗೊಮ್ಮೆ ಕರೆದರೂ ಮನೆಯ ಹೊರಗೆ ಅಥವಾ ಹಿತ್ಲಕಡೆ ಕಟ್ಟೆ ಮೇಲೆ ಅವರು ಕೂರಬೇಕಾಗಿತ್ತು. ಅವರಿಗೆ ಅಲ್ಲೇ ಊಟ-ತಿಂಡಿ ಹಾಕುತ್ತಿದ್ದರು. ಅವರು ತಿಂದಮೇಲೆ ತಮ್ಮತಮ್ಮ ಬಾಳೆಎಲೆ ಎತ್ತಿ, ಲೋಟವನ್ನು ತೊಳೆದಿಟ್ಟು ಕವುಚಿ ಇಡಬೇಕಾಗಿತ್ತು. ಅವರನ್ನು ಮನೆಯ ಒಳಗೆ ಸೇರಿಸುತ್ತಿರಲಿಲ್ಲ.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಆರನೆಯ ಕಂತು.

 

ನಾವು ಚಿಕ್ಕಂದಿನಲ್ಲಿರುವಾಗ ನಮಗೆ ತುಂಬ ಕುತೂಹಲವಿದ್ದದ್ದು ಆ ಮನೆಯಿಂದ ಬರುತ್ತಿದ್ದ ಶಬ್ದದ ಮೇಲೆ. ಪ್ರತಿ ದಿವಸ ಸಂಜೆಯಾಗುತ್ತಿದ್ದಂತೆ, ಒಮ್ಮೊಮ್ಮೆ ಬೆಳಗ್ಗೆಯೂ ಆ ಮನೆಯಿಂದ ಯಾರಿಗೋ ಹೊಡೆಯುತ್ತಿರುವ ಶಬ್ದ ಕೇಳಿ ಬರುತ್ತಿತ್ತು. ಛಟೀರ್, ಛಟೀರ್ ಎಂಬ ಶಬ್ದ, ನಡುನಡುವೆ ಹೆಂಗಸಿನ ಹೂಂಕಾರ, ‘..ಸುಮ್ಮಂಗಿರತ್ಯ.’ ಎಂಬ ಗಂಡಸಿನ ಶಬ್ದದ ಮೇಲೆ ಆ ಮನೆಯಲ್ಲಿ ಗಂಡಸೊಬ್ಬ ಹೆಂಗಸಿಗೆ ಹೊಡೆಯುತ್ತಿದ್ದಿರಬಹುದು ಎಂದುಕೊಳ್ಳುತ್ತಿದ್ದೆವು.

ಅದು ಸಿದ್ದಾಪುರ ಪೇಟೆಯಿಂದ ಸ್ವಲ್ಪ ದೂರದಲ್ಲಿರುವ ಒಂದು ಬೀದಿ. ರಸ್ತೆಯ ಎರಡೂ ಪಕ್ಕಗಳಲ್ಲಿ ಸಾಲು ಸಾಲು ಹೆಂಚಿನ ಮನೆಗಳು. ಅವಕ್ಕೆಲ್ಲ ಕಪ್ಪನೆಯ ಮರದ ಬಾಗಿಲುಗಳು, ನಡುನಡುವೆ ಕೆಲವು ಅಂಗಡಿಗಳು, ಅವುಗಳ ಮಧ್ಯೆಯೇ ಒಂದು ದೇವಸ್ಥಾನ. ಒಂದಕ್ಕೊಂದು ಅಂಟಿಕೊಂಡು ಸಾಲುಗೇರಿಯಂತಿರುವ ಆ ಮನೆಗಳೆಲ್ಲ ರೈಲು ಬೋಗಿಯಂತೆ ಕಾಣುತ್ತಿದ್ದವು. ಹೆಬ್ಬಾಗಿಲ ಮುಂದೆ ನಿಂತು ನೋಡಿದರೆ ಮನೆಯ ಹಿತ್ಲಕಡೆವರೆಗೂ ಎಲ್ಲವೂ ಕಾಣಿಸುವಂತಿದ್ದವು.. ಆ ಎರಡೂ ಸಾಲು ಮನೆಗಳ ನಡುವಿನ ಉದ್ದಕ್ಕೆ ಇರುವ ಸಣ್ಣ ರಸ್ತೆ, ಯಾವುದೋ ಐತಿಹಾಸಿಕ ಪ್ರದೇಶವೊಂದರ ಅವಶೇಷವೆಂಬಂತೆ ತೋರುತ್ತಿದ್ದ ಆ ಬೀದಿಯಲ್ಲಿ ನಾವು ಸಾಕಷ್ಟು ವರ್ಷಗಳಿರಬೇಕಾಗಿ ಬಂದಿತ್ತು. ಪ್ರತಿದಿವಸ ಬೆಳಗ್ಗೆ ಹಾಲು ತರುವ ಪಾಳಿ ನನ್ನದು. ಹೀಗೆ ದಿನಾ ಬೆಳಗ್ಗೆ 6 ಗಂಟೆಗೆಲ್ಲ ಎದ್ದು ಅರ್ಧ ಕಿ.ಮೀ. ದೂರದವರೆಗೂ ನಡೆದು ಹೋಗಿ ಹಾಲು ತರುವಾಗಲೆಲ್ಲ ಆ ಒಂದು ಮನೆಯಿಂದ ಗಂಡಸಿನ ಶಬ್ದ ಬರುತ್ತಿತ್ತು. “ಸಾಕಾ…ಸಾಕ..” ಎಂಬ ಛಟೀರ್ ಛಟೀರ್ ಎಂಬ ಹೊಡೆತದ ಶಬ್ದ. ಪ್ರತಿದಿವಸ ಬೇಡವೆಂದರೂ ಆ ಮನೆಯ ಮುಂದೆ ಹಾದುಹೋಗುವಾಗ ಕಾಲುಗಳು ಸ್ವಲ್ಪ ತಡೆದು ನಿಲ್ಲುತ್ತಿದ್ದವು. ಬಹುಶಃ ಅಲ್ಲಿ ಗಂಡ ಹೆಂಡತಿಗೆ ಹೊಡೆಯುತ್ತಿರಬೇಕು, ಹೊಡೆದೂ ಹೊಡೆದೂ ಆರ್ಭಟಿಸುವ ಅವನ ಶಬ್ದ ಇದ್ದಿರಬೇಕು ಎನಿಸುತ್ತಿತ್ತು. ಆದರೆ ಎಲ್ಲಿಯೂ ಹೆಣ್ಣಿನ ಶಬ್ದ ಕೇಳಿಸುತ್ತಿರಲಿಲ್ಲ. ಗಂಡಸಿನ ಧ್ವನಿ ಮಾತ್ರ ಸ್ವಲ್ಪ ಹೊತ್ತು ಆರ್ಭಟವಾಗಿ ಕೇಳಿಬಂದು ಕಡೆಗೆ ನಿಂತು ಹೋಗುತ್ತಿತ್ತು. ಕೆಲವೊಮ್ಮೆ ಈ ಶಬ್ದ ರಾತ್ರಿ ಸಮಯದಲ್ಲಿಯೂ ಕೇಳಿಬರುತ್ತಿತ್ತು. ಶಾಲೆಯಿಂದ ಮನೆಗೆ ಬಂದು ಏನೋ ಮಹತ್ತರವಾದದ್ದನ್ನು ಹೇಳುವಂತೆ ಅಮ್ಮನಲ್ಲಿ ಹೇಳಿದರೆ ಅಮ್ಮ, ‘ನಿಂಗ್ಳಪಾಡಿಗೆ ನಿಂಗ ಶಾಲೆಗೆ ಹೋಗಿ-ಬಂದು ಮಾಡಿ, ಇದೆಲ್ಲ ಉಪದ್ವಾಪತನ ನಿಂಗಕ್ಕೆ ಬ್ಯಾಡ ‘ ಎಂದು ಬೈಸಿಕೊಂಡಮೇಲೆ ಅಮ್ಮನ ಬಳಿ ಕೇಳಿದರೆ ಪ್ರಯೋಜನವಿಲ್ಲವೆಂದು ಸುಮ್ಮನಾದರೂ ಆ ಶಬ್ದದ ಕುರಿತ ಕುತೂಹಲ ಮಾತ್ರ ಸ್ವಲ್ಪವೂ ಕಡಿಮೆಯಾಗಲೇ ಇಲ್ಲ.

ನಾವು ಈ ಮೊದಲು ಇಟಗಿಯ ಸಮೀಪದ ಹಳ್ಳಿಯೊಂದರಲ್ಲಿದ್ದೆವು. ಅಲ್ಲಿಂದ ಸಿದ್ದಾಪುರಕ್ಕೆ ಬಂದು ಇಲ್ಲಿನ ಬೀದಿಗಳೆಲ್ಲ ಪರಿಚಯವಾಗಿ, ಅಲ್ಲಿರುವ ಮನೆಗಳ ಹುಡುಗರ ಪಾಳ್ಯವೆಲ್ಲ ಪರಿಚಯವಾಗುವುದು ಸ್ವಲ್ಪ ಸಮಯ ತೆಗೆದುಕೊಂಡಿತ್ತು. ಹಾಗಾಗಿ ಆ ಮನೆಯ ಜನಗಳ ಪರಿಚಯ ಮೊದಲಾಗಿರಲಿಲ್ಲ. ಆದರೆ ಸ್ವಲ್ಪ ದಿವಸಗಳ ನಂತರ ತಿಳಿಯಿತು, ಆ ಮನೆಯ ಇಬ್ಬರು ಮಕ್ಕಳೂ ನಾ ಹೋಗುವ ಶಾಲೆಗೇ ಬರುತ್ತಿದ್ದರು. ಹಾಗೆ ಬರುವಾಗಲೆಲ್ಲ ಅವರನ್ನೊಮ್ಮೆ ನಿನ್ನ ಅಪ್ಪ ಯಾಕೆ ನಿನ್ನ ಅಮ್ಮನಿಗೆ ಹೊಡೆಯುತ್ತಾನೆಂದು ಕೇಳಿಬಿಡ್ಲಾ ಎನಿಸುತ್ತಿತ್ತು. ಆದರೆ ಅವನನ್ನು ನೋಡಿದರೆ ಅಷ್ಟೆಲ್ಲ ಜೋರಿನವನ ಹಾಗೆ ಕಾಣುತ್ತಿರಲಿಲ್ಲ.

ಬಿಳೀ ಪೈಜಾಮ ಹಾಕಿಕೊಳ್ಳುತ್ತಿದ್ದ, ಗುಲಾಬಿ, ನೀಲಿ, ಹಳದಿ ಬಣ್ಣದ ಯಾವುದೇ ಡಿಸೈನ್ ಇಲ್ಲದ ಅಂಗಿ ಹಾಕಿಕೊಳ್ಳುವ ಅವನ ಹೆಸರು ನಾರಾಯಣ ಎಂದು. ಎಲ್ಲರೂ ಬಟ್ಟೆ ನಾಣಿ ಎಂದೂ ಚಿಕ್ಕವರೆಲ್ಲ ಬಟ್ಟೆ ನಾಣಿಮಾವ ಎಂದೂ ಕರೆಯುತ್ತಿದ್ದರು. ನೋಡಲು ಬೆಳ್ಳಗೆ ಎತ್ತರಕ್ಕೆ ಇದ್ದ ನಾಣಿಮಾವನನ್ನು ನೋಡಿದರೆ ಅವ ಯಾರಿಗಾದರೂ ಹೊಡೆಯುತ್ತಾನೆ ಎನ್ನುವ ಹಾಗಿರಲಿಲ್ಲ. ಸದಾಕಾಲ ಹರಳೆಣ್ಣೆ ಕುಡಿದವನಂತೆ ಇರುತ್ತಿದ್ದ ಅವನು ಜೀವನವೇ ಸಾಕೆಂಬಂತೆ ಇರುತ್ತಿದ್ದ. ಅವನ ಮುಖದಲ್ಲಿ ನಗುವೂ, ಅಳುವೂ, ಸಿಟ್ಟೂ ಒಟ್ಟಾರೆ ಯಾವ ರಸಗಳೂ ಇರುವ ಹಾಗೆ ಕಾಣಿಸುತ್ತಿರಲಿಲ್ಲ. ಅಂಥವನು ಹೆಂಡತಿಗೆ ಹೊಡೆಯುತ್ತಾನಾ..? ಎಂದು ಅಚ್ಚರಿಯಾಗುತ್ತಿತ್ತು. ಇವನಷ್ಟು ಇವನ ಹೆಂಡತಿ ನೋಡಲು ಚೆನ್ನಾಗಿರಲಿಲ್ಲ. ಗುಂಗುರು ಕೂದಲಿನ ಉಬ್ಬು ಹಲ್ಲಿನ ಎತ್ತರಕ್ಕೆ ಇದ್ದ ಅವಳ ಹೆಸರು ಭಾಗೀರಥಿ. ಭಾಗತ್ತೆ ಎಂದೇ ಕರೆಯಲ್ಪಡುವ ಅವಳು ಸಂಜೆ ಹೊತ್ತು ಅಂಗಡಿಯಲ್ಲಿ ವ್ಯಾಪಾರಕ್ಕೆ ಕೂರುತ್ತಿದ್ದಳು. ಅವಳನ್ನು ನೋಡಿ ಪಾಪ ಎಂದೂ ಅನಿಸುತ್ತಿತ್ತು.

ಆದರೆ ಕೆಲವು ದಿವಸಗಳ ನಂತರ ತಿಳಿದದ್ದು, ಹೊಡೆಯುವುದು ಗಂಡನಲ್ಲ, ಹೆಂಡತಿಯೇ ಎಂದು. ಅದೂ ನಾಣಿಮಾವನ ಅಕ್ಕನ ಮಗಳು ನಮಗೆ ದೂರದ ಸಂಬಂಧಿಯಾಗಿದ್ದ ಶರಾವತಿ ಒಮ್ಮೆ ನಮ್ಮನೆಗೆ ಬಂದವಳು ಅಮ್ಮನಲ್ಲಿ ‘ಆ ಅತ್ತೆ ಸರಿ ಇಲ್ಲೆ, ಮಾವಂಗೆ ಹೊಡೀತು. ಇವ ಒಳ್ಳೆ ಬೂಚಿಕರ ಇದ್ದಹಾಂಗಿದ್ದ (ಪುಟ್ಟ ದನಕರುವಿಗೆ ನಮ್ಮ ಕಡೆ ಬೂಚಿಕರ ಎಂದು ಕರೆಯುತ್ತಾರೆ.). ಹೊಡತ ತಿಂದಕಂಡೂ ಭಾಗೀ ಭಾಗೀ ಎಂದು ಅದರ ಹಿಂದೆನೇ ಹೋಗ್ತ ಮಾರಾಗಿತ್ತಿ. ಅದಕ್ಕೆ ನಾಣಿಮಾವನ ಅಪ್ಪ, ಅಮ್ಮ, ಎಲ್ಲ ಪಂಚಾತ್ಗೆ ಮಾಡಲೆ ಬೈಂದ..’ ಎಂದು ಹೇಳಿದಮೇಲೆಯೇ ಗೊತ್ತಾಗಿದ್ದು, ಭಾಗತ್ತೆ ಅಷ್ಟೆಲ್ಲ ಜೋರಿದ್ದಾಳೆ ಮತ್ತು ಹೊರಗಿನವರಿಗೆ ಗೊತ್ತಾಗಕೂಡದೆಂದು ಇವನೇ ಸಾಕಾ.. ಮಾಡತ್ಯನೇ ಎಂದು ಅವಳು ಹೊಡೆದಾಗಲೆಲ್ಲ ಹೇಳುತ್ತಾನೆಂದು. ಅದಕ್ಕೆ ನಮಗೆಲ್ಲ ಅವನೇ ಹೆಂಡತಿಗೆ ಹೊಡೆಯುತ್ತಾನೆಂದು ಅನಿಸಿದ್ದು.

ಹೆಂಡತಿಯೇ ಗಂಡನಿಗೆ ಹೊಡೆಯುತ್ತಾಳೆ ಎಂಬುದೇ ಆ ಕಾಲಕ್ಕೆ ಬಹುದೊಡ್ಡ ಕ್ರಾಂತಿಕಾರಿ ವಿಷಯವಾಗಿತ್ತು. ಹಾಗಾಗಿ ಎಂದಿಗಿಂತಲೂ ಹೆಚ್ಚಿನ ಕುತೂಹಲ ಅವಳನ್ನು ನೋಡೋದಾಗಿತ್ತು. ಆಗೆಲ್ಲ ಗಂಡನ ಪಾದಕ್ಕೆರಗಿ ಎರಡೂ ಕೈಗಳನ್ನು ಕಣ್ಣಿಗೊತ್ತಿಕೊಳ್ಳುವ ಪತಿವ್ರತಾ ಶಿರೋಮಣಿಗಳನ್ನೇ ಹೆಚ್ಚಾಗಿ ನೋಡಿದ್ದರಿಂದ ಗಂಡನಿಗೆ ಹೊಡೆಯುವ ಈ ಹೆಂಗಸಿನ ಕುರಿತು ಬಹಳ ಮಜ ಎನಿಸುತ್ತಿತ್ತು ನನಗೆ. ಒಂಥರದಲ್ಲಿ ಅವಳೊಬ್ಬ ಹೀರೋಯಿನ್ ಥರ ಅನಿಸಿಬಿಟ್ಟಿದ್ದಳು. ದಿನಾ ಮೂರುಸಂಜೆ ಆಗುತ್ತಿದ್ದಂತೆ ಶಾಲೆಯಿಂದ ಬಂದ ನನಗೆ ಓದಿ, ಬರೆದು ಮಾಡುವ ಸಮಯದಲ್ಲಿ ಸದಾ ಅವಳು ನೆನಪಾಗಿ ಮನೆಯಿಂದ ಹೊರಗೆ ಬಂದು ನಿಲ್ಲುತ್ತಿದ್ದೆ. ಅವಳು ಗಂಡನಿಗೆ ಹೊಡೆಯುವ ಶಬ್ದ ಕೇಳುವುದಕ್ಕಾಗಿ. ಅವಳು ಯಾವುದರಿಂದ ಹೊಡೀತಾಳೆ, ಕೈಯಿಂದಲೇ ಹೊಡಿತಾಳಾ ಅಥವಾ ದಾಸವಾಳ ಬರ್ಲು (ಎಳೆ ಕೋಲು) ತಗಂಡು ಅಥವಾ ಬೆತ್ತದಿಂದ ಹೊಡೀತಾಳ? ಆಗಾಗ ಅಜ್ಜ ಮಕ್ಕಳಿಗೆ, ಮಾವ ದನಕರುಗಳಿಗೆ ಹೊಡೆಯುವ ಬಾರುಕೋಲೇನಾದ್ರೂ ತಗೋತಿದ್ಲಾ? ಏನಾದ್ರಾಗಲಿ, ಒಂದ್ಸಲನಾದ್ರೂ ಅವಳ ಮನೆಗೆ ಹೋಗಿ ಅವಳು ಹೇಗೆ ಗಂಡನಿಗೆ ಹೊಡೆಯುತ್ತಾಳೆ, ಆಗ ನಾಣಿಮಾವ ಹೇಗಿರುತ್ತಿದ್ದ ಎಂಬುದನ್ನೆಲ್ಲ ನೋಡಬೇಕೆಂಬ ಅದಮ್ಯ ಆಸೆಯಾಗುತ್ತಿತ್ತು ನನಗೆ.

ಹೀಗೆ ದಿನಾ ಬೆಳಗ್ಗೆ 6 ಗಂಟೆಗೆಲ್ಲ ಎದ್ದು ಅರ್ಧ ಕಿ.ಮೀ. ದೂರದವರೆಗೂ ನಡೆದು ಹೋಗಿ ಹಾಲು ತರುವಾಗಲೆಲ್ಲ ಆ ಒಂದು ಮನೆಯಿಂದ ಗಂಡಸಿನ ಶಬ್ದ ಬರುತ್ತಿತ್ತು. “ಸಾಕಾ…ಸಾಕ..” ಎಂಬ ಛಟೀರ್ ಛಟೀರ್ ಎಂಬ ಹೊಡೆತದ ಶಬ್ದ. ಪ್ರತಿದಿವಸ ಬೇಡವೆಂದರೂ ಆ ಮನೆಯ ಮುಂದೆ ಹಾದುಹೋಗುವಾಗ ಕಾಲುಗಳು ಸ್ವಲ್ಪ ತಡೆದು ನಿಲ್ಲುತ್ತಿದ್ದವು.

ಅವರೊಂದು ಸಣ್ಣದಾದ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರು. ಬೆಳಗ್ಗೆ ಅವಳ ಗಂಡನೂ, ಸಂಜೆಹೊತ್ತು ಅವಳೂ ನೋಡಿಕೊಳ್ಳುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಅವನು ಊರಲ್ಲಿದ್ದ ಏಕೈಕ ಮಠವಾದ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗುತ್ತಿದ್ದ. ಕಡೆಗವನು ಬರುವುದು ರಾತ್ರಿಯಾದ ಮೇಲೆಯೇ. ಬಹುಶಃ ಅವಳ ಹೊಡೆತವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವನು ಮನೆಯಿಂದ ಹೊರಗೆ ಹೋಗುತ್ತಿದ್ದನೆನಿಸುತ್ತದೆ. ಆದರೆ ಅವನು ರಾತ್ರಿ ಬಂದಮೇಲೆಯೂ ಹೊಡೆತ ಬೀಳುತ್ತಿತ್ತು. ಮೊದಲೆಲ್ಲ ಮೂರುಸಂಜೆ ಕೇಳುತ್ತಿದ್ದ ಶಬ್ದ ಕಡೆಕಡೆಗೆ ರಾತ್ರಿ ಕೇಳುತ್ತಿದ್ದುದು ಬಹುಶಃ ಈ ಕಾರಣಕ್ಕಾಗಿಯೇ ಇರಬೇಕು.

ಕಡೆಗೂ ನನಗೆ ಅವಳು ಅವನಿಗೆ ಹೊಡೆಯುವ ಆ ಅದ್ಭುತ ಕ್ಷಣ ನೋಡಲು ಸಿಗಲೇ ಇಲ್ಲ. ಅವರು ಯಾರನ್ನೂ ಮನೆಗೆ ಸೇರಿಸುತ್ತಲೇ ಇರಲಿಲ್ಲ. ಹಾಗಾಗಿ ನನಗೆ ಅಲ್ಲಿಗೆ ಹೋಗಲಾಗಲಿಲ್ಲ. ಅದಾಗಿ ಎಷ್ಟೋ ವರ್ಷಗಳ ನಂತರ ಅಂದರೆ ನಾವು ಆ ಬೀದಿಯನ್ನು ಬಿಟ್ಟು ಸಿದ್ದಾಪುರದ ಹುಡದಿಬೈಲಲ್ಲಿ ಮನೆಮಾಡಿ, ಅಲ್ಲಿಯೇ ನಾನು ಹೈಸ್ಕೂಲಿಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಗಂಡನಿಗೆ ಹೊಡೆಯುವ ಅತ್ತೆ ಮರೆತೇ ಹೋಗಿದ್ದಳು.

ಹೀಗೆ ಮರೆತು ಹೋದ ದಿನಗಳಲ್ಲೇ ಒಂದು ದಿನ ಅವಳ ಅಮ್ಮ ನಮ್ಮಮನೆಗೆ ಬಂದು ಅಪ್ಪನಲ್ಲಿ ಪ್ರಶ್ನೆ ಕೇಳುತ್ತಿದ್ದಳು. “ಎನ್ನ ಮಗಳ ಸಂಸಾರ ಸರಿಮಾಡಿಕೊಡಿ ಭಟ್ರೆ…” ಎಂದು ಕಣ್ಣೀರು ಸುರಿಸುತ್ತ ಹೇಳಿದ ಆ ಅಮ್ಮಮ್ಮ ಮೊಣಕಾಲಿನವರೆಗೆ ಒಂದು ಹಳೆಹಳೇ ಸೀರೆ ಉಟ್ಟಿದ್ದಳು. ಕೂದಲೆಲ್ಲ ಬೆಳ್ಳಗಾಗಿ, ಅವಳ ಎರಡೂ ಹುಬ್ಬುಗಳೂ ಬಿಳಿಯಾಗಿದ್ದಲ್ಲದೆ ಜೋತುಬಿದ್ದಿದ್ದವು. ಇಳಿಬಿದ್ದ ಕೆನ್ನೆ, ಗುಳಿಬಿದ್ದ ಕಣ್ಣುಗಳು, ಆ ಅಜ್ಜಿಗೆ ಮೀಸೆ ತುಸು ಹೆಚ್ಚೇ ಇದ್ದು ಅದೂ ಬೆಳ್ಳಗಾಗಿತ್ತು. ಶಾಲೆಯಲ್ಲಿ ಮಾಸ್ತರು ಹೇಳಿದ ಶಬರಿಯ ಕತೆ ನೆನಪಾಗಿ ಬಹುಶಃ ಶಬರಿ ಹೀಗೆಯೇ ಇದ್ದಳೇನೋ ಎಂದೆನಿಸುವ ಹಾಗಿದ್ದಳು. ಅವಳಿಗೆ ಅಪ್ಪ ಅದೇನು ಹೇಳಿದನೋ… ಅಲ್ಲಿಂದ ಎದ್ದು ಸೀದ ನಮ್ಮನೆ ಒಳಗೆ ಹೋಗಿ ಅಡುಗೆ ಮನೆಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಬೀಡಿ ಸೇದತೊಡಗಿದಳು. ಆಗಷ್ಟೇ ಹೈಸ್ಕೂಲು ಮೆಟ್ಟಿಲು ಹತ್ತಿದ್ದ ನಾನು, ಮಧ್ಯಾಹ್ನ ಊಟಕ್ಕೆಂದು ಬಂದವಳು ಅಡುಗೆ ಮನೆಯಲ್ಲಿ ಕುಕ್ಕರಗಾಲಿನಲ್ಲಿ ಬೀಡಿ ಸೇದುತ್ತ ಕುಳಿತಿದ್ದ ಈ ಅಮ್ಮಮ್ಮನನ್ನು ನೋಡಿ ಆಶ್ಚರ್ಯವಾಗಿ ಹಾಗೆಯೇ ಎರಡು ನಿಮಿಷ ನಿಂತು, ಕಡೆಗೆ ಹೆಬ್ಬಾಗಿಲಿಗೆ ಬಂದು ‘ಏನು…’ ಎಂದು ಹುಬ್ಬು ಹಾರಿಸಿದ ಅಪ್ಪನಲ್ಲಿ, ಏನೋ ಮಹಾನ್ ಗುಟ್ಟು ಹೇಳುವಂತೆ ‘ಆ ಅಮ್ಮಮ್ಮ ಬೀಡಿ ಸೇದ್ತಾ ಕುಂತಿದ್ದು..’ ಎಂದೆ. ಅದನ್ನು ಕೇಳಿ ತಕ್ಷಣ ಅಪ್ಪ ಅಮ್ಮ ಇಬ್ಬರೂ ನಕ್ಕರು. ಅಮ್ಮ ‘ದೊಡ್ಡಕೆ ಹೇಳಡ ಮಾರಾಯ್ತಿ. ಅದ್ಯಾರು ಗೊತ್ತಿದ್ದ…’ ಎಂದು ಕೇಳಿದಳು. ಇಲ್ಲವೆಂದು ತಲೆ ಅಲ್ಲಾಡಿಸಿದೆ. ‘ಅದೇ ಹಳೆಮನೆಯಲ್ಲಿರುವಾಗ ಪಕ್ಕದಮನೆ ಅತ್ತೆ ಗಂಡನಿಗೆ ಹೊಡಿತಿತ್ತಲ್ಲ, ಭಾಗತ್ತೆ, ಅದರ ಅಮ್ಮ ಇದು’ ಎಂದಳು. ಅರೆ.. ಹೌದಾ.. ಆಶ್ಚರ್ಯವಾಗಿ ‘ಗಂಡನಿಗೆ ಹೊಡೆಯುವ ಮಗಳು, ಬೀಡಿ ಸೇದುವ ಅಮ್ಮನೂ… ಚೆನ್ನಾಗಿದೆ ತಾಯಿ-ಮಗಳು ಜೋಡಿ’ ಎಂದು ಛೇಡಿಸುವ ಹಾಗೆ ಹೇಳಿದ್ದಕ್ಕೆ ‘ಪಾಪ. ಅವರ ಜೀವನವೂ ಎಷ್ಟು ಕಷ್ಟ ಗೊತ್ತಿದ್ದ, ಹಾಗೆಲ್ಲ ಹೇಳಲಾಗ’ ಎಂದು ಗದರಿದಳು ಅಮ್ಮ.

ಆಗಂತೂ ನನಗೆ ಇದೊಂದು ಜಗತ್ತಿನ ಅತ್ಯದ್ಭುತಗಳಲ್ಲೊಂದಾಗಿತ್ತು. ಆವರೆಗೆ ನಾನು ನೋಡಿದ ಸಿನಿಮಾಗಳಲ್ಲಾಗಲಿ, ನಾಟಕಗಳಲ್ಲಾಗಲೀ, ಓದಿದ ಕತೆ ಕಾದಂಬರಿಗಳಲ್ಲಾಗಲೀ ಯಾವೊಬ್ಬ ಮಹಿಳೆಯೂ ಬೀಡಿ ಸೇದಿದ್ದನ್ನು ಓದಿರಲೂ ಇಲ್ಲ, ನೋಡಿರಲೂ ಇಲ್ಲ, ಕೇಳಿರಲೂ ಇಲ್ಲ. ಅದುವರೆಗೂ ಗಂಡಸರು ಬೀಡಿ ಸೇದುತ್ತಿದ್ದದ್ದು ನೋಡಿ, ಬೀಡಿ ಸೇದುವುದು ಗಂಡಸರು ಮಾತ್ರ ಎಂಬುದು ನನ್ನ ಕಲ್ಪನೆಯಾಗಿ, ಈ ಹೆಂಗಸೊಬ್ಬಳು ಅದೂ ಇಂಥ ಹಣ್ಣುಹಣ್ಣು ಮುದುಕಿಯೊಬ್ಬಳು ಬೀಡಿಯನ್ನು ನಮ್ಮನೆಗೆ ಬಂದು ಇಷ್ಟೆಲ್ಲ ರಾಜಾರೋಷವಾಗಿ ಸೇದುತ್ತಿದ್ದುದು ನಿಜಕ್ಕೂ ಹೀಗೆಲ್ಲ ಉಂಟಾ ಎಂದು ಆಶ್ಚರ್ಯವಾಗಿ ಹೋಗಿತ್ತು. ಅವಳು ಬೀಡಿ ಎಲ್ಲಿಂದ ತರುತ್ತಾಳೆ, ಅವಳಿಗ್ಯಾರು ಬೀಡಿ ತಂದುಕೊಡುತ್ತಾರೆ, ಇವಳೇ ಅಂಗಡಿಗೆ ಹೋಗಿ ತರುತ್ತಾಳಾ, ಹೇಗೆ ಅಂಗಡಿಯಲ್ಲಿ ಇವಳು ಕೇಳುತ್ತಾಳೆ ಎಂಬೆಲ್ಲ ಪ್ರಶ್ನೆಗಳೇಳುತ್ತಿದ್ದವು.

ಹಾಗೆ ನೋಡಿದರೆ ಈ ಅಮ್ಮಮ್ಮ ನಮಗೆ ದೂರದ ಸಂಬಂಧಿ. ಆದರೆ ಅಷ್ಟಾಗಿ ಪರಿಚಯ ಇರಲಿಲ್ಲ. ಅದಕ್ಕೊಂದು ಕಾರಣವೂ ಇತ್ತು. ಸಿದ್ದಾಪುರಕ್ಕೆ ತಾಗಿದಂತೆಯೇ ಇದ್ದ ಹಳ್ಳಿ ಬಾಜಿಕಟ್ಟೆಯವಳಾದ ಈ ಅಮ್ಮಮ್ಮ ನೆಂಟರಿಷ್ಟರ ಮನೆಗೆ ಅಷ್ಟೆಲ್ಲ ಬರುತ್ತಿರಲಿಲ್ಲ. ಹಾಗಾಗಿ ನಮಗೆಲ್ಲ ಅವಳ ಪರಿಚಯ ಅಷ್ಟಿರಲಿಲ್ಲ. ಅವಳು ಬರುತ್ತಿರಲಿಲ್ಲ ಎನ್ನುವುದಕ್ಕಿಂತ ಅವಳನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಯಾಕೆಂದರೆ ‘ಅವಳು ಮಾಲೇರವಳು’ ಎಂದಿದ್ದಳು ಅಮ್ಮ. ಹಾಗಂದರೇನು ಎಂದು ಕೇಳಿದ್ದಕ್ಕೆ ‘ಗಂಡ ಸತ್ತಮೇಲೆ ಹೆಂಗಸರು ಬಸುರಿಯಾದರೆ, ಅಂಥವರನ್ನು, ಅಂಥ ಕುಟುಂಬವನ್ನು ಮಾಲೇರು’ ಎಂದು ಕರೆಯುತ್ತಾರೆ ಎಂದಿದ್ದಳು.

ನಿಜ, ಆಗೆಲ್ಲ ಗಂಡ ಸತ್ತ ಮೇಲೆ ಹೆಂಗಸು ಬಸುರಿಯಾದರೆ, ಅವಳಿಗೆ ಮಗು ಹುಟ್ಟದಿದ್ದರೂ ಬಸುರಿ ಆಗಿದ್ದಾಳೆಂದು ತಿಳಿದರೆ ಸಾಕು ಅಂಥವರ ಮನೆಯಿಂದ ಅವಳಷ್ಟೇ ಅಲ್ಲ, ಆ ಮನೆಯ ಯಾರನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ಆ ಮನೆಯವರನ್ನು ಮಾಲೇರು ಎಂದೂ, ಕೆಲವು ಕಡೆ ಬಾಂದು ಮನೆಯವರು ಎಂದು ಕರೆಯುತ್ತಿದ್ದರು. ಅಂಥವರ ಮನೆಯಿಂದ ಯಾರನ್ನೂ ಯಾವುದೇ ಮಂಗಳಕಾರ್ಯಕ್ಕೂ ಕರೆಯುತ್ತಿರಲಿಲ್ಲ. ಹಾಗೊಮ್ಮೆ ಕರೆದರೂ ಮನೆಯ ಹೊರಗೆ ಅಥವಾ ಹಿತ್ಲಕಡೆ ಕಟ್ಟೆ ಮೇಲೆ ಅವರು ಕೂರಬೇಕಾಗಿತ್ತು. ಅವರಿಗೆ ಅಲ್ಲೇ ಊಟ-ತಿಂಡಿ ಹಾಕುತ್ತಿದ್ದರು. ಅವರು ತಿಂದಮೇಲೆ ತಮ್ಮತಮ್ಮ ಬಾಳೆಎಲೆ ಎತ್ತಿ, ಲೋಟವನ್ನು ತೊಳೆದಿಟ್ಟು ಕವುಚಿ ಇಡಬೇಕಾಗಿತ್ತು. ಅವರನ್ನು ಮನೆಯ ಒಳಗೆ ಸೇರಿಸುತ್ತಿರಲಿಲ್ಲ. ಆಗೆಲ್ಲ ತೋಟ, ಗದ್ದೆ ಕೆಲಸಕ್ಕೆ ಬರುವ ಹಸಲರು, ದಿವರ ಪೈಕಿಯ ಆಳುಗಳ ಹಾಗೆಯೇ ಇವರನ್ನು ಕಾಣುತ್ತಿದ್ದರು. ಅಷ್ಟೇ ಏಕೆ, ಅವರ ಮನೆಯಿಂದ ಮದುವೆಗೆ ಹೆಣ್ಣನ್ನು ತರುತ್ತಿರಲಿಲ್ಲ. ಊರಲ್ಲಿ ಅಥವಾ ನೆಂಟರಿಷ್ಟರಲ್ಲಿ ಯಾರದ್ದಾದರೂ ಮದುವೆ, ಮುಂಜಿ ಸಮಾರಂಭ ನಡೆದರೆ ಅಂಥ ಹೆಂಗಸರನ್ನು ಕರೆಯುತ್ತಿರಲಿಲ್ಲ. ಕರೆದರೂ ಅವರು ದೂರದಿಂದ ಕಿಟಕಿಯಲ್ಲಿ ನೋಡಿ ಖುಷಿಪಟ್ಟು ಹೋಗಬೇಕಾಗುತ್ತಿತ್ತು. ಜೊತೆಗೆ ಅಂಥ ಕುಟುಂಬ ಎಷ್ಟೋ ತಲೆಮಾರಿನವರೆಗೂ ಬಹಿಷ್ಕೃತವಾಗಿಯೇ ಇರುತ್ತಿತ್ತು. ಎಷ್ಟೋ ವರ್ಷಗಳ ನಂತರವೂ, ಆ ಕುಟುಂಬದಲ್ಲಿ ಯಾವಾಗಲೋ ಯಾರಿಗೋ ನಡೆದುಹೋಗಿದೆ ಎಂದಾದರೂ ಅಂಥವರ ಮನೆಗೆ ಮಠಾಧೀಶರು ಹೋಗುತ್ತಿರಲಿಲ್ಲ. ಅವರು ಕೂಡ ದೇವಸ್ಥಾನಗಳಿಗೆ, ಮಠಗಳಿಗೆಲ್ಲ ಬರುವುದು ನಿಷಿದ್ಧವಾಗಿತ್ತು. ಅಷ್ಟರಮಟ್ಟಿಗೆ ಸಾಮಾಜಿಕವಾದ ಬಹಿಷ್ಕಾರ ಅವರಿಗೆ ಹಾಕಲಾಗುತ್ತಿತ್ತು. ಅವರ ಮಕ್ಕಳಿಗೂ ಇದೇರೀತಿ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದರು. ಹಾಗಂತ ಇದಕ್ಕೆಲ್ಲ ಕಾರಣರಾದ ಆ ಗಂಡಸರಿಗೆ ಮಾತ್ರ ಯಾವ ಬಹಿಷ್ಕಾರವೂ ಇರುತ್ತಿರಲಿಲ್ಲ. ಬಹಿಷ್ಕಾರ ಇರುವುದಕ್ಕೆ ಅವರು ಯಾರು ಎಂದು ಗೊತ್ತಿದ್ದರೆ ತಾನೆ? ಇಂಥವರೇ ತನ್ನ ಈ ದುರವಸ್ಥೆಗೆ ಕಾರಣರು ಎಂದು ಆ ಹೆಂಗಸರೂ ಬಹಿರಂಗವಾಗಿ ಯಾರೊಡನೆಯೂ ಹೇಳಿಕೊಳ್ಳುತ್ತಲೂ ಇರಲಿಲ್ಲ. ಒಂದೊಮ್ಮೆ ಹೇಳಿಕೊಂಡರೂ ಅದನ್ನು ನಂಬುವವರು ಯಾರು? ಅದಕ್ಕೆ ಸಾಕ್ಷಿ ಪುರಾವೆಗಳೆಲ್ಲಿದ್ದವು? ಅಂಥದ್ದೇ ಒಂದು ದುರವಸ್ಥೆ ಈ ಅಮ್ಮಮ್ಮನ ಬದುಕಲ್ಲೂ ನಡೆದುಹೋಯಿತು.

ಈ ಅಮ್ಮಮ್ಮ ಮೊದಲೆಲ್ಲ ಹೀಗಿರಲಿಲ್ಲ. ಚೆಂದವಾಗಿ ಸಂಸಾರ ಮಾಡಿಕೊಂಡು ಗೌರವಸ್ಥರಂತೆಯೇ ಬದುಕಿದ್ದವಳು. ಅವಳ ಹೆಸರು ಸುಬ್ಬಿ. ಈ ಸುಬ್ಬಿಯ ಗಂಡ ರಾಮಯ್ಯ ಹೆಗಡೆ ಬೇರೆ ಊರಿಂದ ಈ ಬಾಜಿಕಟ್ಟೆಗೆ ಬಂದು ನೆಲೆಸಿದವನು. ಅದೂ ಇದೂ ಎಂದು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದವನು. ಕುಂಬಳೆಯಿಂದ ಈ ಸುಬ್ಬಿಯನ್ನು ತಂದು ಮದುವೆಯಾಗಿದ್ದ. ಆಗೆಲ್ಲ ಹೆಣ್ಣುಮಕ್ಕಳ ಸಂಖ್ಯೆ ತೀರ ಕಡಿಮೆ ಇದ್ದ ಕಾರಣ ಗಂಡಿಗೆ ಮದುವೆಗೆ ಹೆಣ್ಣೇ ಸಿಗದೇ ದೂರದ ಊರುಗಳಾದ ಕಾಸರಗೋಡು, ಕೇರಳ, ಮಹಾರಾಷ್ಟ್ರಗಳಿಂದೆಲ್ಲ ಹೆಣ್ಣುಗಳನ್ನು ತರುತ್ತಿದ್ದರು. ಹಾಗೆ ಅಷ್ಟುದೂರದಿಂದ ತಂದ ಹೆಣ್ಣು ಸುಬ್ಬಿಯಾಗಿದ್ದಳು. ಮದುವೆಯಾಗಿ ಒಂದು ಮಗ ಹುಟ್ಟಿದ ಮೇಲೆ, ಕಾಡಿಗೆ ಜೇನು ಕೊಯ್ಯಲು ಹೋದವನು ಕಡೆಗೆ ಬಂದದ್ದು ಹೆಣವಾಗಿ. ಅವ ಹೇಗೆ ಸತ್ತನೆಂಬುದು ತುಂಬ ನಿಗೂಢವಾಗಿತ್ತು. ಹಾವು ಕಡಿದ ಸತ್ತನೆಂದೂ, ರಾಹು ಬಡಿದಿದೆ ಎಂದೂ, ಹೇಳಿದರು. ಆದರೆ ಅವನ ಮೈಮೇಲೆ ಒಂದು ಸಣ್ಣ ಗಾಯವೂ ಇರಲಿಲ್ಲ. ಒಟ್ಟಿನಲ್ಲಿ ಹೇಗೆ ಸತ್ತ ಎಂಬುದು ಮಾತ್ರ ತಿಳಿಯಲಿಲ್ಲ. ಇತ್ತ ಸುಬ್ಬಿಯನ್ನು ಗಂಡ ಸತ್ತನೆಂದು ತಲೆ ಬೋಳಿಸಿ, ಬಿಳಿ ಸೀರೆ ಉಡಿಸಿ, ಜಪಸರ ಹಿಡಿಸಿ, ದೇವರ ಮುಂದೆ ಕೂರಿಸಿಬಿಟ್ಟರು. ಅವಳಿಗೇನೋ ತಲೆಬೋಳಿಸಿ ಮಡಿ ಸೀರೆ ಉಡಿಸಿ ಕೂರಿಸಿರಬಹುದು, ಅವಳೊಳಗಿನ ಯೌವನಕ್ಕೆ ಯಾವ ಮಡಿಸೀರೆಯನ್ನೂ ಉಡಿಸಿರಲಿಲ್ಲವಲ್ಲ? ಚಿಕ್ಕ ವಯಸ್ಸಿಗೇ ಮದುವೆ ಮಾಡಿದ್ದರಿಂದ ಗಂಡ ಸಾಯುವ ಹೊತ್ತಿಗೆ ಸುಬ್ಬಿಗೆ ಕಡುಕಟ್ಟು ಪ್ರಾಯ. ಕಣ್ಣುಕುಕ್ಕುವ ಅವಳ ಪ್ರಾಯಕ್ಕೆ ಯಾವ ಮಡಿಯೂ ಇರಲಿಲ್ಲ. ಹಾಗಾಗಿ ಊರಿನ ಗಂಡಸರ ಕಣ್ಣುಗಳು ಬಿಡಬೇಕಲ್ಲ? ಸ್ವತಃ ಸುಬ್ಬಿಯೇ ಮಡಿಸೀರೆ ಉಟ್ಟರೂ ತನ್ನ ಪ್ರಾಯಕ್ಕೆ ಕಡಿವಾಣ ಹಾಕಬೇಕಲ್ಲ?

ಹಾಗೆ ಗಂಡ ರಾಮಯ್ಯ ಸತ್ತಮೇಲೆ ಅವಳಿಗೆ ಹುಟ್ಟಿದ್ದೇ ಈ ಭಾಗೀರಥಿ. ನೋಡಲು ಸುಬ್ಬಿಯಷ್ಟೂ ಚೆನ್ನಾಗಿರಲಿಲ್ಲ, ಕಪ್ಪಗೆ ಇದ್ದ, ಉಬ್ಬು ಹಲ್ಲಿನ ಭಾಗೀರಥಿ ನೋಡಲು ಚೆಂದವಿಲ್ಲ ಎಂಬುದಕ್ಕಾಗಿಯಲ್ಲ, ಅವಳು ಸುಬ್ಬಿಯ ಗಂಡ ಸತ್ತಮೇಲೆ ಹುಟ್ಟಿದವಳು ಎಂಬ ಕಾರಣಕ್ಕಾಗಿಯೇ ಊರವರೆಲ್ಲ ಸೇರಿಸುತ್ತಿರಲಿಲ್ಲ. ಬಹಿಷ್ಕೃತ ಪ್ರಾಣಿಯೆಂಬಂತೆ ನೋಡುತ್ತಿದ್ದರು. ಚಿಕ್ಕಂದಿನಲ್ಲಿ ಆಟ ಆಡುವುದಕ್ಕೂ ಯಾರೂ ಅವಳನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಆಗೆಲ್ಲ ಅಳುತ್ತ ಮನೆಗೆ ಬರುತ್ತಿದ್ದಳು. ಕಡೆಕಡೆಗೆ ತಿರುಗಿನಿಂತು ಎಲ್ಲರ ಹತ್ರನೂ ಜಗಳ ಆಡುತ್ತಿದ್ದಳು. ಹೀಗೆ ಸದಾ ಸಾಮಾಜಿಕ ನಿಂದನೆ ಸಹಿಸದ ಬಾಗಿ ಸಿಡುಕಿನವಳಾಗಿದ್ದರೆ, ಅಮ್ಮ ಸುಬ್ಬಿ ಮಾತ್ರ ಎಲ್ಲರ ಮನೆಗೂ ಹೋಗಿ ಅದೂ ಇದೂ ಕೆಲ್ಸ ಮಾಡಿಕೊಟ್ಟು, ಊಟ ತಗಂಡು ಬಂದು ಮನೆಗೆ ಬಂದು ತಿನ್ನುತ್ತಿದ್ದಳು. ಎನ್ನ ಹಣೆಬರಹವೇ ಇಷ್ಟು ಎಂದು ಹೇಳಿಕೊಂಡರೂ ಒಮ್ಮೆಯೂ ಅವಳು ಕಣ್ಣೀರು ಹಾಕಿರಲಿಲ್ಲ. ಇದನ್ನೆಲ್ಲ ಮರೆಯಲು ಅವಳಿಗಿದ್ದ ಏಕೈಕ ಸಾಧನವೆಂದರೆ ಬೀಡಿ. ಮೊದಮೊದಲು ಗಂಡ ಸತ್ತ ಮೇಲೆ ಅವನ ಅಂಗಿಯ ಜೇಬಲ್ಲಿ ತಡಕಾಡಿ ಇರಬರ ಬೀಡಿಕಟ್ಟನ್ನೆಲ್ಲ ಸೇದಿದಳು. ಕಡೆಗೆ ಪಕ್ಕದಲ್ಲೇ ಇದ್ದ ಶಾಂಭಟ್ಟನ ಮನೆಯ ಆಳು ಗಣಪನ ಹತ್ತಿರ ತರಿಸಿಕೊಳ್ಳುತ್ತಿದ್ದಳು. ಅವಳಿಗೆ ಬೀಡಿ ತಂದುಕೊಡುವ ಕೆಲಸ ಇವನದ್ದು. ಅದೆಷ್ಟೇ ಕೆಲಸ ಇರಲಿ, ಪ್ಯಾಟಿಗೆ ಹೋಗಿ ಬಂದವ ಸುಬ್ಬಿಗೆ ಬೀಡಿಕಟ್ಟನ್ನು ತರಲು ಮಾತ್ರ ಮರೆಯುತ್ತಿರಲಿಲ್ಲ. ಹೀಗೆ ಅವ ಬೀಡಿ ತಂದುಕೊಡುವುದನ್ನು ನೋಡಿದ ಕೆಲವರು ಇವನೇ ಅವಳ ಬಸುರಿಗೆ ಕಾರಣನಾಗಿರಬೇಕೆಂದೂ ಗುಸುಗುಸು ಎಂದು ಮಾತನಾಡಿಕೊಳ್ಳುತ್ತಿದ್ದರು. ‘ಗಂಡ ಸತ್ತಮೇಲೆ ಅವ ರಾತ್ರಿ ಎಲ್ಲ ಇವಳ ಮನೆಗೆ ಹೋಗ್ತಿದ್ನಡೇ..’ ಎಂದು ಹೆಂಗಸರೂ ಅವರವರೊಳಗೇ ಹೇಳಿಕೊಂಡರೆ, ಕೆಲವೊಬ್ಬರು ಮಾತ್ರ ಪಕ್ಕದ ಮನೆ ಶಾಂಭಟ್ಟ ಕಾರಣ, ಅವಂದೇ ಇದೆಲ್ಲ ಕಿತಾಪತಿ ಎಂದೂ ಹೇಳುತ್ತಿದ್ದರು. ಯಾಕೆಂದರೆ ಅವನು ಹೆಚ್ಚಾಗಿ ತನ್ನ ಮನೆಯ ಕೆಲಸಕ್ಕೆ ಸುಬ್ಬಿಯನ್ನು ಕರೆಯುತ್ತಿದ್ದ. ಊರೊಳಗೆ ಯಾರೂ ಅವಳನ್ನು ಸೇರಿಸದ ಹೊತ್ತಲ್ಲಿ “ಅವಳಿಗ್ಯಾರು ದಿಕ್ಕು ಪಾಪ, ಏನೋ ಕೆಲ್ಸ ಮಾಡಕ್ಯಂಡು, ಉಂಡಕಂಡು ಹೋಗ್ಲಿ’ ಎಂದು ತನ್ನ ಮನೆಯ ಕೆಲಸಕ್ಕೆ ಮೊದಲು ಕರೆದವನೇ ಶಾಂಭಟ್ಟ. ಹಾಗಾಗಿ ಅವನದ್ದೂ ಏನಾದರೂ ಇರಬಹುದು ಎಂದೂ ಮಾತನಾಡಿಕೊಂಡರು.

ಸುಬ್ಬಿಯ ಈ ಸ್ಥಿತಿಗೆ ಯಾರು ಕಾರಣರೋ ಗೊತ್ತಿಲ್ಲ. ಒಟ್ಟಿನಲ್ಲಿ ಸುಬ್ಬಿಯ ಬದುಕು ಮಾತ್ರ ಚಿಂತಾಜನಕವಾಗಿತ್ತು. ಒಂದುಕಡೆ ಬಡತನ, ಮತ್ತೊಂದುಕಡೆ ಈ ಸಾಮಾಜಿಕ ಬಹಿಷ್ಕಾರ, ಅದರ ಜೊತೆಗೆ ಒಬ್ಬಳೇ ಹೆಂಗಸೆಂಬ ಕಾರಣಕ್ಕೆ ಈ ಗಂಡಸರ ಕಾಟ, ಇವನ್ನೆಲ್ಲ ತಡೆದುಕೊಳ್ಳಲಾಗದೇ ಅವಳು ಮತ್ತಷ್ಟು ಮತ್ತಷ್ಟು ಬೀಡಿ ಸೇದುತ್ತಿದ್ದಳು. ಯಾರದ್ದಾದರೂ ಮನೆಯ ಕೆಲಸಕ್ಕೆ ಬೇಕೆಂದು ಅವಳನ್ನು ಕರೆಯಲು ಹೋದರೆ ಆಳಲೆಕ್ಕದ ಪಗಾರಿನ ಜೊತೆಗೆ ಒಂದು ಬೀಡಿಕಟ್ಟನ್ನೂ ಅವಳಿಗೆ ತಂದುಕೊಡಬೇಕಾಗಿತ್ತು. ‘ಸುಬ್ಬಿ ಚೊಲೋ ಕೆಲ್ಸ ಮಾಡ್ತು, ಖರ್ಮ ಈ ಬೀಡಿ ಸೇದದೊಂದು ಇಲ್ದೇ ಹೋಗಿದ್ರೆ ಬಾಕಿ ಎಲ್ಲ ಅಡ್ಡಿಲ್ಯಾಗಿತ್ತು…’ ಎಂದು ಹೆಂಗಸರೆಲ್ಲ ಹೇಳುವಂತಿದ್ದ ಸುಬ್ಬಿಗೆ ಅಲ್ಲಿಂದ ಕಾಯಂ ಆಗಿ ಬೀಡಿಸುಬ್ಬಿ, ಬೀಡಿ ಅಮ್ಮ, ಬೀಡಿ ಅಮ್ಮಮ್ಮ ಎಂದಾಗಿ ಹೋಯಿತು. ಇಷ್ಟೆಲ್ಲ ಆದರೂ ಅವಳ ಮೇಲಿನ ಬಹಿಷ್ಕಾರ ಮಾತ್ರ ಕಿಂಚಿತ್ತೂ ಕಡಿಮೆಯಾಗದೆ, ಅವಳೂ ಅವಳ ಮಕ್ಕಳೂ ತುಂಬ ಅವಮಾನ ಎದುರಿಸುತ್ತಿದ್ದರು. ಇಂಥದ್ದೇ ಸಮಯದಲ್ಲೇ ಅವಳ ದೊಡ್ಡ ಮಗ ಓಡಿಹೋಗಿದ್ದು ಬೀಡಿಅಮ್ಮಮ್ಮನ ಜಂಘಾಬಲವೇ ಅಲ್ಲಾಡಿಸಿಬಿಟ್ಟಿತು.

ಅವಳ ದೊಡ್ಡಮಗ ಅಂದರೆ ಅವಳ ಗಂಡ ಇರುವಾಗಲೇ ಹುಟ್ಟಿದವನು ಕೃಷ್ಣಮೂರ್ತಿ, ಬಲು ಚುರುಕಿನವನು. ಅಪ್ಪ ಇರುವಾಗಲೇ ಶಾಲೆಗೆ ಹೋಗುತ್ತಿದ್ದವನು. ಓದಲೂ ಚುರುಕಾಗಿದ್ದ. ಯಾವಾಗ ಅಪ್ಪ ತೀರಿಹೋದ, ಅಷ್ಟರ ನಂತರ ಇವನ ಸಾಮಾಜಿಕ ಪರಿಸ್ಥಿತಿಗಳು ಬದಲಾಗಿ, ಇವನಿಗೆ ಏಕದಂ ಬಡತನ ಆವರಿಸಿಕೊಂಡುಬಿಟ್ಟಿತು. ಅಮ್ಮ ಬಸುರಿಯಾಗಿ, ತಂಗಿ ಭಾಗೀರಥಿ ಹುಟ್ಟುವಾಗ ಇವನಿನ್ನೂ ಐದನೇ ತರಗತಿಯಲ್ಲಿದ್ದ. ಇಂಥ ಯಾವಸೂಕ್ಷ್ಮಗಳೂ ಅವನಿಗೆ ತಿಳಿಯದೇ, ಯಾರಾದರೂ ‘ಏನಾ.. ನಿಂಗೆ ತಂಗಿ ಹುಟ್ಟಿದ್ದನಾ.. ಅದರ ಅಪ್ಪ ಯಾರಾ…?’ ಎಂದೆಲ್ಲ ಕೇಳಿದರೆ ಏನು ಹೇಳಬೇಕೆಂದು ತಿಳಿಯದೇ ಸುಮ್ಮನೆ ನಿಲ್ಲುತ್ತಿದ್ದ. ಅವರೆಲ್ಲರ ಕುಹಕಗಳೆಲ್ಲ ಅರ್ಥವಾಗದ ವಯಸ್ಸು ಅವನದ್ದು. ಆದರೆ ಹೈಸ್ಕೂಲಿಗೆ ಹೋಗುವಷ್ಟರಲ್ಲಿ ಊರವರ ನಿಂದನೆ, ಅಮ್ಮನ ಸೆರಗು ಹಿಡಿದು ಹೋಗಿ ಯಾರದ್ದೋ ಮನೆಯ ಹೆಬ್ಬಾಗಿಲ ಕಟ್ಟೆಯ ಮೇಲೆ ಕುಳಿತು ಊಟಮಾಡಿಕೊಂಡು, ಬಾಳೆಎಲೆ ಎತ್ತಿಹಾಕಿ, ಅಲ್ಲೆಲ್ಲ ಶಗಣಿಹಾಕಿ ಸಾರಸಿ ಬರುವುದು, ಯಾರೊಬ್ಬರೂ ತನ್ನನ್ನು ಮುಟ್ಟಿಸಿಕೊಳ್ಳದಿರುವುದು, ಸದಾ ತಾನು ಆಟವಾಡುವುದಿದ್ದರೆ ಹಸಲರ, ದಿವರ ಕೇರಿಯ ಹುಡುಗರೊಂದಿಗೇ ಆಟವಾಡಬೇಕಾಗಿದ್ದದ್ದು ಎಲ್ಲವೂ ಅವನನ್ನು ಹಿಂಡಿ ಹಿಪ್ಪೆಮಾಡಿಬಿಟ್ಟಿದ್ದವು. ಒಮ್ಮೆ ಈ ಬ್ರಾಹ್ಮಣರ ಕೇರಿ ಹುಡುಗರೊಂದಿಗೆ ಆಟವಾಡುತ್ತ ಶೇಷಜ್ಜನ ಮನೆಯ ಅಂಗಳದಲ್ಲಿದ್ದವ, ಆಟವಾಡುವ ಭರದಲ್ಲಿ ಅರಿವಿಲ್ಲದೇ ಅವರ ಮನೆಯೊಳಗೆ ಹೋಗಿಬಿಟ್ಟ. ಅದನ್ನು ನೋಡಿದ ಶೇಷಜ್ಜ ಬೆತ್ತ ತಗಂಡು ಅಂಗಳದಲ್ಲಿ ಅಡ್ಡ ಮಲಗಿಸಿ ಮೈತುಂಬ ಬಾಸುಂಡೆ ಬರುವ ಹಾಗೆ ಹೊಡೆದು, ‘ರಂಡೆಮಗನೆ ಎಮ್ಮನೆ ಮೈಲಿಗೆ ಮಾಡತ್ಯನೋ…’ ಎಂದು ಹೊಡೆದು ಅಟ್ಟಿದ್ದನ್ನು ಸಹಿಸಲಾರದೆ, ಎಂಟನೇ ತರಗತಿಯಲ್ಲಿರುವಾಗಲೇ ‘ನಿನ್ನಿಂದಲೇ ಇದೆಲ್ಲ ಆಗಿದ್ದು, ಅಪ್ಪ ಸಾಯೋ ಬದ್ಲು ನೀನೇ ಸಾಯಕ್ಕಾಗಿತ್ತು..’ ಎಂದು ಅಮ್ಮನಿಗೆ ಬೈದು ಮನೆಬಿಟ್ಟು ಓಡಿಹೋದವ ಎಷ್ಟು ವರ್ಷಗಳಾದರೂ ಬರಲೇ ಇಲ್ಲ. ಅವ ಇಂದು ಬರುತ್ತಾನೆ, ನಾಳೆ ಬರುತ್ತಾನೆಂದು ಬೀಡಿ ಅಮ್ಮಮ್ಮ ಕಣ್ಣೀರಿಟ್ಟಿದ್ದೇ ಬಂತು. ಮಗನ ಹಾದಿ ಕಾದು ಕಾದು, ಕಡೆಗೆ ಸೋತು ಅವರಿವರಲ್ಲಿ ಹೇಳಿಕೊಂಡು ಅತ್ತು ಸುಮ್ಮನಾದರೂ ಆಳದಲ್ಲಿ ಅವನಾಡಿದ ಮಾತುಗಳು ಅವಳನ್ನು ಸದಾ ಚುಚ್ಚುತ್ತಿದ್ದವು. ಗಂಡ ಸತ್ತ ಕೂಡಲೇ ತಾನೂ ಸಾಯಬೇಕಾಗಿತ್ತು ಎಂದು ಅನಿಸಿದ್ದು ಅದೆಷ್ಟು ಸಲವೋ. ಆದರೆ ಮಗನ ಮುಖ ನೋಡಿಕೊಂಡು ಸುಮ್ಮನಾಗಿದ್ದ ಬೀಡಿ ಅಮ್ಮಮ್ಮಂಗೆ ಈಗ ಮಗನೇ ಇಲ್ಲದಂತಾಗಿ, ತನ್ನ ಅವಸ್ಥೆಯನ್ನು ಮಗನೇ ಎದ್ದುಬಂದು ಅಣಕಿಸಿದಂತಾಗಿ, ಮತ್ತೂ ಬೀಡಿ ಸೇದತೊಡಗಿದಳು. ಹೀಗೆ ಅವಮಾನ, ನಿಂದನೆ, ಕಷ್ಟದಲ್ಲೇ ಕಳೆದ ಬೀಡಿ ಅಮ್ಮಮ್ಮಂಗೆ ಮಗನ ನಂತರ ಬಂದ ಬಹುದೊಡ್ಡ ಸವಾಲೆಂದರೆ ಮಗಳು. ದಿನೇದಿನೆ ಬೆಳೆಯುತ್ತಿದ್ದ ಮಗಳು ಭಾಗೀರಥಿ ಈಗ ದೊಡ್ಡ ತಲೆನೋವಾಗಿದ್ದಳು.

ನಿಜ, ಆಗೆಲ್ಲ ಗಂಡ ಸತ್ತ ಮೇಲೆ ಹೆಂಗಸು ಬಸುರಿಯಾದರೆ, ಅವಳಿಗೆ ಮಗು ಹುಟ್ಟದಿದ್ದರೂ ಬಸುರಿ ಆಗಿದ್ದಾಳೆಂದು ತಿಳಿದರೆ ಸಾಕು ಅಂಥವರ ಮನೆಯಿಂದ ಅವಳಷ್ಟೇ ಅಲ್ಲ, ಆ ಮನೆಯ ಯಾರನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ಆ ಮನೆಯವರನ್ನು ಮಾಲೇರು ಎಂದೂ, ಕೆಲವು ಕಡೆ ಬಾಂದು ಮನೆಯವರು ಎಂದು ಕರೆಯುತ್ತಿದ್ದರು.

ಅವಳಿಗೆ ಆಗ ಪ್ರಾಯಗಾಲದಲ್ಲಿ ಎಷ್ಟು ಕಷ್ಟವಾಗಿತ್ತೋ ಅದಕ್ಕಿಂತಲೂ ಹೆಚ್ಚಿನ ಕಷ್ಟ ಅವಳ ಮಗಳು ಭಾಗಿಯನ್ನು ಮದುವೆ ಮಾಡುವುದಾಗಿತ್ತು. ಮಾಲೇರ ಮನೆ ಅಥವಾ ಬಾಂದು ಮನೆಯೆಂದು ಯಾರೂ ಆ ಮನೆಯಿಂದ ಹೆಣ್ಣು ತರಲು ಒಪ್ಪುತ್ತಿರಲಿಲ್ಲ. ಜಾತಕವನ್ನೇ ಅವರಿಂದ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದ ಸುಬ್ಬಮ್ಮಮ್ಮಂಗೆ ಹೆದರಿಕೆಯಾಗಿ, ತನ್ನ ಮಗಳಿಗೆ ಮದುವೆಯೇ ಆಗದಿದ್ರೆ ಇವಳನ್ನೂ ತಾನು ನೋಡಿಕೊಳ್ಳುವುದು ಹೇಗೆಂದು ಅರಿಯದೆ ಬೀಡಿ ಸೇದುವುದನ್ನು ಇನ್ನೂ ಹೆಚ್ಚು ಮಾಡಿದಳು. ಅಲ್ಲಿ ಓಡಾಡಿ, ಕಾಡಿಬೇಡಿ, ಕಡೆಗಂತೂ ಬೀಡಿ ಅಮ್ಮಮ್ಮನ ಮಗಳು ಭಾಗಿಗೆ ಒಬ್ಬ ಗಂಡು ಸಿಕ್ಕಿದ. ಯಾವ ಕೆಲಸವೂ ಇಲ್ಲದ, ಜಮೀನೂ, ಮನೆ ಏನೂ ಇಲ್ಲದ ಈ ನಾಣಿಮಾವನಿಗೆ ಅಂತೂ ಇಂತೂ ಮದುವೆ ಮಾಡಿ, ತಾನೇ ಒಂದು ಪುಟ್ಟ ಅಂಗಡಿಯನ್ನೂ ಹಾಕಿಕೊಟ್ಟು ಮಗಳ ಸಂಸಾರವನ್ನು ತೂಗಿಸತೊಡಗಿದಳು ಅಮ್ಮಮ್ಮ. ಭಾಗೀರಥಿ ವ್ಯವಹಾರ ಚತುರೆ. ಅಂಗಡಿಯನ್ನು ತಾನೇ ನಿಭಾಯಿಸುತ್ತಿದ್ದಳು. ಮನೆಯೊಳಗೇ ಒಂದು ಕೋಣೆಯಲ್ಲಿ ಬಟ್ಟೆ ಇಟ್ಟು, ಅಲ್ಲೇ ವ್ಯಾಪಾರ ಶುರುಮಾಡಿದಳು. ಹುಬ್ಬಳ್ಳಿಯಿಂದ ಬಟ್ಟೆತಂದು ವ್ಯಾಪಾರ ಮಾಡುತ್ತಿದ್ದಳು. ಇವಳಿಗೆ ಹುಬ್ಬಳ್ಳಿಗೆ ಹೋಗಿಬಂದು ಮಾಡಲು ಸಹಾಯಕನಾಗಿದ್ದವನು ಬೀಡಿ ಅಮ್ಮಮ್ಮನ ಆಳು ಗಣಪ.

ಹೋಗಿ ಒಂದು ಬಟೆಯನ್ನೂ ತರಲು ಆಗದವ, ಸುಮ್ಮನೆ ಅಂಗಡಿಯನ್ನೂ ನೋಡಿಕೊಳ್ಳಲಾಗದವ ಅವಳ ಗಂಡ ನಾಣಿಮಾವ. ತನ್ನ ಓರಗೆಯವರಿಗೆಲ್ಲ ಎಷ್ಟು ಒಳ್ಳೊಳ್ಳೆ ಗಂಡ ಸಿಕ್ಕರು, ತನಗೆ ಮಾತ್ರ ಹೀಗೆ ಆಯಿತು. ಇದಕ್ಕೆ ತನ್ನ ಹುಟ್ಟೂ ಕೂಡ ಕಾರಣ ಎಂದು ಅಮ್ಮನ ಮೇಲೆ, ತನ್ನನ್ನು ಕೇವಲವಾಗಿ ನೋಡುತ್ತಿದ್ದ ಊರಿನವರ ಮೇಲೆ, ನೆಂಟರಿಷ್ಟರ ಮೇಲೆ, ಕಡೆಗೆ ಇಡೀ ಬದುಕಿನ ಮೇಲೆಯೇ ಸಿಟ್ಟುಬಂದು ತನಗೆ ಸಿಕ್ಕ ಗಂಡ ಇಂಥ ದಡ್ಡ ಎಂದು ಗಂಡನ ಮೇಲೆ ಎಲ್ಲ ಸಿಟ್ಟನ್ನೂ ಕಾರಿಕೊಳ್ಳುತ್ತಿದ್ದಳು ಭಾಗತ್ತೆ. ಹಾಗೆ ಕಾರಿಕೊಂಡಾಗಲೇ ಅವನಿಗೆ ಹೊಡೆತ ಬೀಳುತ್ತಿತ್ತು. ಅವಳಿಂದ ಹೊಡೆತ ತಿಂದ ನಾಣಿಮಾವ ‘ಹೊಡಿಯಡ್ದೇ, ನೋಯ್ತು..’ ಎನ್ನುತ್ತಿದ್ದನೇ ಹೊರತು ತಿರುಗಿ ನಿಲ್ಲಬೇಕು, ಪ್ರತಿಭಟಿಸಬೇಕು ಎಂದೂ ತಿಳಿಯುತ್ತಿರಲಿಲ್ಲ. ಅದಕ್ಕೆ ಅವನು ಇದರಿಂದ ಹೊರಬರಲು ಕಂಡುಕೊಂಡದ್ದು ರಾಘವೇಂದ್ರಸ್ವಾಮಿ ಮಠ. ದಿನಾ ಸಂಜೆ ಮಠಕ್ಕೆ ಹೋದವನು, ಭಜನೆಮಾಡುತ್ತ ಅಲ್ಲಿ ಕೊಟ್ಟ ಪ್ರಸಾದ ತಿನ್ನುತ್ತ ರಾತ್ರಿಯ ತನಕವೂ ಅಲ್ಲಿಯೇ ಇದ್ದು ಮನೆಗೆ ಹೊರಡುತ್ತಿದ್ದ. ಇತ್ತ ಭಾಗತ್ತೆ ಬಟ್ಟೆ ಅಂಗಡಿಯನ್ನೂ ನೋಡಿಕೊಂಡು, ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿ, ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದಳು.

ಹೀಗಿದ್ದ ದಿನಗಳಲ್ಲೇ ಒಂದು ದಿನ ನಾಣಿಮಾವ ಕಾಣೆಯಾಗಿಬಿಟ್ಟ. ಅವ ಮಠಕ್ಕೆ ಹೋಗಿರಬೇಕು ಎಂದುಕೊಂಡರೆ ಅವತ್ತು ರಾತ್ರಿಯಲ್ಲ, ಮಾರನೇ ದಿನ, ಆ ಮಾರನೇ ದಿನ ಕೂಡ ಮನೆಗೆ ಬರದಿದ್ದು ಭಾಗತ್ತೆಗಿಂತಲೂ ಬೀಡಿಅಮ್ಮಮ್ಮಂಗೆ ಭಯವಾಗತೊಡಗಿ, ಆ ಭಾಗದಲ್ಲೆಲ್ಲ ಜೋತಿಷ್ಯದಲ್ಲಿ ಪ್ರಸಿದ್ಧಿ ಪಡೆದ ನನ್ನ ಅಪ್ಪನಲ್ಲಿ ಜ್ಯೋತಿಷ್ಯ ಕೇಳಲೆಂದು ಬಂದಿದ್ದಳು. ಮಗಳು ಭಾಗತ್ತೆಗೆ ಗಂಡ ಹೋದರೆ ಹೋಗಲಿ, ‘ಅವನೇನು ಸಂಸಾರ ನೋಡುತ್ನಾ? ಅಂಥ ದಡ್ಡನನ್ನು ತಂದು ಎನ್ನ ಕುತ್ಗಿಗೆ ಕಟ್ಟಿದ್ದೆ, ನಯಾಪೈಸೆ ಕೆಲ್ಸ ಮಾಡತ್ನಿಲ್ಲೆ. ಎಂತದು ತಿಳೀತೂ ಇಲ್ಲೆ, ಅವ ಹೋದ್ರೆ ಹೋಗ್ಲಿ ಎಂದು ಹೇಳಿದ್ದಕ್ಕೆ, ಬೀಡಿ ಅಮ್ಮಮ್ಮ ಮಗಳಿಗೆ ಸರಿಯಾಗಿ ಬೈದಳು, ‘ಅವ ಕೆಲ್ಸ ಮಾಡತ್ನೋ ಬಿಡತ್ನೋ.. ಕೂಸೆ, ಆದ್ರೆ ಅವ ಗಂಡು, ನಿನ್ನ ಗಂಡ. ಈ ಮನಿಗೆ ಒಂದು ಗಂಡು ದಿಕ್ಕೂ ಅಂತ ಇದ್ದವ. ಗಂಡು ದಿಕ್ಕಿಲ್ಲದ ಮನೆ ಹ್ಯಾಂಗಿರ್ತು, ಆ ಹೆಂಗಸ್ರ ಪಾಡೆಂತದ್ದು ಎಂದು ಎಂಗೆ ಗೊತ್ತಿದ್ದು ಕೂಸೆ. ಆ ಕಷ್ಟ ಎನಗೇ ಮುಗದುಹೋಗ್ಲಿ. ನಿಂಗೆ ಬಪ್ದು ಬ್ಯಾಡ. ಕಷ್ಟವೋ ಸುಖವೋ ಅವನನ್ನು ಕರೆಸಿ, ಅವನೊಟ್ಟಿಗೇ ನೀನು ಬದುಕವು. ಇದು ನಿಂಗೊಬ್ಳಿಗೇ ಕಷ್ಟ ಅಲ್ಲ, ನಿನ್ನ ಮಕ್ಳಿಗೂ ಕಷ್ಟಾಗ್ತು, ಈಗ ಮಕ್ಕಳಾದ್ರೂ ನಿನ್ನಪಾಲಿಗಿದ್ದ. ಕಡಿಗೆ ಅವೂ ಇರತ್ವಿಲ್ಲೆ, ಎನ್ನ ಹಾಂಗೆ ನಿನ್ನ ಬದುಕು ಆಪ್ದು ಬ್ಯಾಡ್ದೇ ಬ್ಯಾಡ…’ ಎಂದು ಕಣ್ಣೀರು ತುಂಬಿ ಹೇಳಿದಳು ಬೀಡಿ ಅಮ್ಮಮ್ಮ. ಹಾಗೆ ಬೀಡಿ ಅಮ್ಮಮ್ಮ ಹೇಳುವಾಗ ಓಡಿಹೋದ ಅವಳ ದೊಡ್ಡ ಮಗನೇ ನೆನಪಾದ. ಅವ ಈಗ ಎಲ್ಲಿದ್ದಿರಬಹುದು, ಹೇಗಿದ್ದಿರಬಹುದು, ಅಂದು ತನ್ನೊಡನೆ ಜಗಳವಾಡಿ, ತನ್ನನ್ನೇ ಬೈದು, ತನ್ನ ಕುರಿತು ಹೇಸಿಕೊಂಡು ಹೋದ ಆ ದಿನವನ್ನು ಎಂದಿಗೂ ಮರೆಯಲಾರಳು ಅವಳು. ಮಗಳ ಬದುಕೂ ಹೀಗಾಗಬಾರದೆಂಬುದು ಅವಳ ಕಳಕಳಿ. ಅದಕ್ಕೆ ಮಗಳಿಗೆ ಬೈದು, ಅಳಿಯನನ್ನು ಹುಡುಕಿಕೊಡಿ ಎಂದು ಕೇಳಲು ಬಂದಿದ್ದಳು. ಅಪ್ಪ ನಾಣಿಮಾವ ಬರ್ತಾನಾ, ಬರೋದಿಲ್ವಾ.. ಏನು ಹೇಳಿದ್ನೋ, ಒಟ್ನಲ್ಲಿ ಪುಸಪುಸನೆ ಒಂದು ಬೀಡಿ ಸೇದಿ, ಒಂದು ಲೋಟ ಚಾ ಕುಡಿದು, ಕಣ್ಣೀರು ಹಾಕಿ ಹೋದ ಬೀಡಿ ಅಮ್ಮಮ್ಮ ಕಡೆಗೇನಾದಳೋ ತಿಳಿಯದು. ಮತ್ತೆ ನಮ್ಮನೆಗೆ ಬರಲಿಲ್ಲ. ಹಾಗೆಯೇ ಅವಳ ಅಳಿಯ ನಾಣಿಮಾವನೂ ಬರಲಿಲ್ಲ. ಮಗಳು, ತಾಯಿ ಇಬ್ಬರೂ ಸೇರಿಯೇ ಮಕ್ಕಳನ್ನು ಬೆಳೆಸಿದರು. ಭಾಗತ್ತೆಯ ಮಕ್ಕಳು ದೊಡ್ಡವರಾಗೋ ಹೊತ್ತಿಗೆ ಕಾಲ ಸ್ವಲ್ಪ ಬದಲಾಗಿತ್ತು. ಮಕ್ಕಳಿಬ್ಬರೂ ಚೆನ್ನಾಗಿ ಓದಿದರು, ಮಗ ಓದಿ ನೌಕರಿ ಹಿಡಿದರೆ, ಮಗಳನ್ನು ಒಳ್ಳೆ ಮನೆಗೇ ಮದುವೆ ಮಾಡಿಕೊಟ್ಟರು.

ಈಗಲೂ ಅಮ್ಮಮ್ಮ ಒಮ್ಮೆ ಹಿಡಿದ ಬೀಡಿಯನ್ನು ಮತ್ತೆ ಬಿಡಲಿಲ್ಲ. ಎಲ್ಲಿಯಾದರೂ ನೆಂಟರ ಮನೆಗೆ ಬಂದಾಗಲೆಲ್ಲ ಬೀಡಿ ಸೇದುವುದನ್ನು ಕಾಣುತ್ತಿದ್ದೆವು. ಮಗಳು ಭಾಗತ್ತೆ ಮಾತ್ರ ಈಗ ಯಾರಿಗೆ ಹೊಡೆಯುತ್ತಾಳೆ…? ಹೊಡೆಯುವವರಿಲ್ಲದೆ ಕೈ ತುರಿಸುತ್ತಿತ್ತೇನೋ ಎಂದೆಲ್ಲ ತಮಾಷೆ ಮಾಡಿದರೂ ಅವರಿಬ್ಬರ ಸಾಹಸ ಮಾತ್ರ ಎಂಥವರಾದರೂ ಮೆಚ್ಚುವಂಥದ್ದೇ…

ನಂತರ ನಾನು ಮಾಧ್ಯಮಕ್ಕೆ ಬಂದು ಅದರಲ್ಲೂ ನಾನು ಮಹಿಳಾ ಪುರವಣಿಗಳನ್ನೆಲ್ಲ ನೋಡಿಕೊಳ್ಳುವ ಸಮಯದಲ್ಲಿ ಸಾಕಷ್ಟು ಮಹಿಳಾ ಪರ ಲೇಖನಗಳನ್ನು ಬರೆಯುವಾಗಲೆಲ್ಲ, ಹೋಗಿ ಹೋಗಿ ಹೆಂಗಸ್ರು ಸಿಗರೇಟು ಸೇದುತ್ತಾರೆ, ತಪ್ಪಲ್ವಾ ಮೇಡಂ, ಎಂದು ಕೆಲವು ಹುಡುಗರೆಲ್ಲ ಕೇಳುವಾಗಲೆಲ್ಲ ಹೆಂಗಸರು ಸಿಗರೇಟು ಸೇದುವುದು ತಪ್ಪೆಂದರೆ ಗಂಡಸರು ಸೇದುವುದೂ ತಪ್ಪಲ್ಲವೇ? ಅದ್ಯಾಕೆ ಹೆಂಗಸರಿಗೆ ಮಾತ್ರ ಹೇಳುತ್ತೀರಿ ಎಂದು ಪ್ರಶ್ನಿಸುವಾಗಲೆಲ್ಲ ನನಗೆ ಚಿಕ್ಕಂದಿನಲ್ಲಿ ನಮ್ಮನೆ ಅಡುಗೆ ಮನೆಯಲ್ಲಿ ಕುಕ್ಕುರುಗಾಲಲ್ಲಿ ಕುಳಿತು ಬೀಡಿ ಸೇದುತ್ತಿದ್ದ ಆ ಅಮ್ಮಮ್ಮ ನೆನಪಾಗುತ್ತಾಳೆ. ಗಂಡನಿಗೆ ಹೊಡೆದು, ಹೆದರಿಸುತ್ತಿದ್ದ ಆ ಅತ್ತೆ ನೆನಪಾಗುತ್ತಾಳೆ. ಇದೆಲ್ಲ ನೆನಪಾಗುವಾಗಲೆಲ್ಲ ಈಗ ನನಗೆ ಕಾಡುವ ಮತ್ತೊಂದು ದೊಡ್ಡ ಪ್ರಶ್ನೆ ಎಂದರೆ, ಆ ರೀತಿ ಆ ನಾಣಿಮಾವನಿಗೆ ಹೊಡೆದು, ಕೆಲವು ಬಾರಿ ಒದ್ದು ಆಚೆ ಕಳಿಸಿದ ಆ ಅತ್ತೆ, ಅವಳೆಂದರೆ ಹೆದರಿ ನಡುಗುವ ಈ ಮಾವ, ಇವರಿಬ್ಬರಿಗೂ ಅದ್ಹೇಗೆ ಇಬ್ಬರು ಮಕ್ಕಳು ಹುಟ್ಟಿದರು ಎಂಬುದಾಗಿ!

 

(ಮುಂದುವರಿಯುವುದು)