ಮಿಂಚು ಹುಳುವಿನಂತೆ ಹೊಳೆಯುತ್ತಿದ್ದ ಆಫ್ರಿಕಾದ ‘ಡರ್ಬನ್’ ಕಡಲ ತೀರ ಸ್ವಲ್ಪ ಸ್ವಲ್ಪವೇ ಗೋಚರಿಸತೊಡಗಿತ್ತು. ಮತ್ತೂ ಮತ್ತೂ ಹತ್ತಿರವಾದಂತೆ ಕಡಲು ಮುಗಿಯಲೇ ಇಲ್ಲ. ಹಡಗಿನೊಳಗಿದ್ದ ಯಾರೂ ತೀರ ಕಂಡ ಬಳಿಕ ನಿದ್ರೆ ಮಾಡಿರಲಿಲ್ಲ. ಅಂತೂ ಬೆಳಗಿನ ಜಾವ ಸುಮಾರು ನಾಲಕ್ಕು ಗಂಟೆಯ ವೇಳೆಗೆ ಹಡಗು ಬಂದರು ತಲುಪಿತು. ಬರೋಬ್ಬರಿ ೭೨ ದಿನಗಳ ತರುವಾಯ ಹೊಸ ಮನುಷ್ಯರು, ಭೂಮಿ ಅವರ ಕಣ್ಣಿಗೆ ಬಿದ್ದಿತ್ತು. ಹಡಗು ನಿಲ್ಲಲೂ ಪುರ್ಸೊತ್ತು ಕೊಡದೆ ಎಲ್ಲಾ ಕೂಲಿಗಳು ಚಂದ್ರಗ್ರಹಕ್ಕೆ ಕಾಲಿರಿಸುವಂತೆ ಭೂಮಿಗೊಮ್ಮೆ ಕಾಲಿರಿಸಲು ಹಪಹಪಿಸುತ್ತಿದ್ದರು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಒಂಭತ್ತನೇ ಕಂತು.

ಕಥೆ ಅರ್ಧದಲ್ಲಿ ನಿಲ್ಲಿಸಿದಾಗ ಉಮ್ಮ ನಿಗೆ ಅಜ್ಜನ ಚಹಾದ ನೆನಪು ಬಂದು ಅವರ ಲೋಟಕ್ಕೆ ಮತ್ತಷ್ಟು ಚಹಾ ಸುರುವಿದ್ದರು.ಅಷ್ಟರಲ್ಲೇ ಕಡಲ ಮಧ್ಯೆ ಕೌತುಕದ ಬಗ್ಗೆ ತಿಳಿಸುತ್ತಾ ಚಿಕ್ಕಪ್ಪಾ ಹೇಳ ತೊಡಗಿದರು.

“ಉಷ್ಣ ವಲಯದ ಸಮುದ್ರದ ನೀರು ಶೀತ ವಲಯಕ್ಕೆ ತಳ್ಳಲ್ಪಟ್ಟು ಕಡಲಿನಲ್ಲಿ ಪ್ರತಿಕೂಲ ವಾತವಾರಣ ಸೃಷ್ಟಿಯಾಗುತ್ತಿತ್ತು. ಸಮುದ್ರದಲ್ಲಿ ಈ ಬಗೆಯ ವಾತಾವರಣ ಹೊಸತಲ್ಲ. ನೀರಿನ ಕಣಗಳು ಕುದಿಯಲಾರಂಭಿಸಿ ಅಗಾಧ ಪ್ರಮಾಣದಲ್ಲಿ ಉತ್ತರದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಉತ್ತರಕ್ಕೆ ರಭಸವಾಗಿ ಹರಿಯತೊಡಗುತ್ತದೆ. ಇದೇ ಪರಿಣಾಮ ನೀರು ಶೀತ ಸಾಗರಕ್ಕೆ ಸೇರಿದಾಗ ಅಲ್ಲಿನ ಶಾಂತ ಪರಿಸ್ಥಿತಿ ಪ್ರಕ್ಷುಬ್ಧವಾಗುತ್ತದೆ. ನೀರಿನ ಪ್ರಮಾಣದಲ್ಲಿ ಕೊಂಚ ಏರು ಪೇರಾದರೂ ಕಡಲಿನಲ್ಲಿ ಚಂಡಮಾರುತ ಅಥವಾ ಸುನಾಮಿಯೇಳುತ್ತದೆ. ಬಿಸಿ ನೀರಿನ ಪ್ರವಾಹಗಳ ಶೀತ ಸಾಗರದ ಕಡೆಗೆ ಸೇರುವ ಹೊತ್ತಿಗೆ ಹೊಸ ಬಗೆಯ ವಿದ್ಯುತ್ ಸಂಚಾರವಾಗುತ್ತದೆ. ಈಗ ಇಂತಹ ಸಾಗರ ಪ್ರವಾಹವನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಯೋಜನೆಯ ಕುರಿತು ವಿಜ್ಞಾನಿಗಳು ಮಾತಾಡುತ್ತಿದ್ದಾರೆ. ಈ ಬಗೆಯ ಹೊಸ ಸಂಶೋಧನೆಗೆ ಹಲವು ರಾಷ್ಟ್ರಗಳು ಕೈಜೋಡಿಸಲು ತಯಾರಾಗಿ ನಿಂತಿವೆ”. ಅಷ್ಟರಲ್ಲೇ ಅಜ್ಜ ಕೊನೆಯ ಚಹಾದ ಹನಿಯೂ ಮುಗಿಸಿ ಕತೆಗೆ ಮರಳಿದರು.

ಒಂದು ದಿನ ಕಡಲಿನ ಬಾಲ್ಕನಿಯಲ್ಲಿ ನಿಂತು ಗಾಳ ಹಾಕುತ್ತಿದ್ದ ಇದಿನಬ್ಬನಿಗೆ ದೂರದಲ್ಲಿ ವಾತಾವರಣ ಕಪ್ಪಿಟ್ಟಿರುವುದು ಅರಿವಾಗತೊಡಗಿತು.

” ಜನರಲ್ ಜನರಲ್, ಅಲ್ಲಿ ನೋಡಿ ” ಎನ್ನುತ್ತಾ ಅಧಿಕಾರಿಗಳನ್ನು ಕರೆದಿದ್ದ. ಕಡಲಲ್ಲಿರುವ ಅಧಿಕಾರಿಗಳಿಗೆ ಭೀತಿ ಶುರುವಾಯಿತು. ಕಡಲು ಮುಂದೆ ಚಲಿಸುತ್ತಿದ್ದಂತೆ ವಾತಾವರಣದ ತುಂಬೆಲ್ಲಾ ಕತ್ತಲಾವರಿಸ ತೊಡಗಿತು. ” ಜೀಸಸ್, ಜೀಸಸ್ ” ಎಂದು ಆಗಾಗ ಅಧಿಕಾರಿಗಳು ಗಾಬರಿಯಿಂದ ಕೂಗಿಕೊಳ್ಳುವುದು ನೋಡಿ ಅವರು ಭಯದಿಂದ ನಲುಗುವುದು ವ್ಯಕ್ತವಾಗುತ್ತಿತ್ತು. ಕಡಲ ನೀರು ಒಂದೇ ಸಮನೆ ಗತಿ ಬದಲಿಸುತ್ತಿತ್ತು. ಕ್ಯಾಬಿನಿಂದ ಕೆಳಗಿಳಿದು ಇದಿನಬ್ಬ ಮತ್ತು ಉಳಿದವರು ಒಂದನೇ ಮಹಡಿ ಸೇರಿಕೊಂಡರು. ಹಡಗಿನ ಓಲಾಟ ವಿಪರೀತವಾಗಿತ್ತು. ಇದಿನಬ್ಬ ದೇವರ ಮೊರೆ ಹೋಗಿದ್ದ. ಎಲ್ಲರಿಗೂ ಅವರವರ ದೇವರ ನೆನಪು. ಯಾರಿಗೂ ಯಾರ ಬಗ್ಗೆ ಚಿಂತೆ ಇಲ್ಲ. ನೀರಿನ ಅಲೆಗಳು ಆಗಾಗ್ಗೆ ಸೇರು ಸೇರು ನೀರನ್ನು ಹಡಗಿನೊಳಗೆ ಎತ್ತಿ ಎತ್ತಿ ಹಾಕುತ್ತಿತ್ತು. ಇದ್ದಕ್ಕಿದ್ದಂತೆ ಭಯಂಕರವಾಗಿ ಫೂತ್ಕರಿಸುತ್ತ ಭೀಮಾಕಾರದ ಅಲೆಯೊಂದೆದ್ದಿತು. ಎಲ್ಲರೂ ಕಣ್ಣುಗಳನ್ನು ತೆರೆದು ನೋಡುತ್ತಿದ್ದರು. ಬೃಹತ್ ಅಲೆ ಹಡಗಿಗೆ ಹತ್ತಿರವಾದಂತೆ ಎಲ್ಲರ ಕಿರುಚಾಟ, ಗದ್ದಲಗಳು ಮುಗಿಲು ಮುಟ್ಟಿದವು. ಇನ್ನೇನು ಆ ಹೆದ್ದೆರೆ ಬಡಿದು ಹಡಗು ನುಚ್ಚುನೂರಾಗುತ್ತದೆ ಎನ್ನುವಷ್ಟರಲ್ಲಿ ಎಲ್ಲರ ಕಣ್ಣಗಳು ಅವರಿಗರಿವಿಲ್ಲದಂತೆ ಒಮ್ಮೆ ಮುಚ್ಚಿದವು. ಏನಾಶ್ಚರ್ಯ! ಹಡಗನ್ನೊಮ್ಮೆ ಎತ್ತಿ ತೇಲಿಸಿ ಎಸೆದು ಅದೇ ಕೊನೆಯ ಅಲೆಯಂತೆ ಪ್ರಕ್ಷುಬ್ಧವಾದ ಕಡಲು ಮತ್ತೆ ಶಾಂತವಾಯಿತು. ಎಲ್ಲರೂ ನಿಟ್ಟುಸಿರಿಟ್ಟರು.

ಇದಿನಬ್ಬ ಅಂಗಸ್ನಾನದ ಬಳಿಕ ಪ್ರಾರ್ಥನೆಗೆ ನಿಂತ.

ಇನ್ನಷ್ಟು ದಿನಗಳು ನೀರ ಮೇಲೆ ಕಳೆದವು. ನೀರೆಂದರೆ ಸಾಕೋ ಸಾಕೆನಿಸುವಷ್ಟು ನೋಡಿ ಸುಸ್ತಾಗಿತ್ತು. ಕಡಲ ಮಧ್ಯೆ ಆಗೊಮ್ಮೆ ಈಗೊಮ್ಮೆ ಸಿಗುವ ಕಾಂಡ್ಲಾ ಕಾಡುಗಳು ಅಷ್ಟುದ್ದದ ಕಡಲಿಗೆ ಸಡ್ಡು ಹೊಡೆದು ನಿಂತ ಬಾಹುಬಲಿಯಂತೆ ಭಾಸವಾಗುತ್ತಿತ್ತು. ಮರಗಳನ್ನೆಲ್ಲಾ ಕಾಣುವಾಗ ವಿಶೇಷ ಖುಷಿ. ನೀಲಿ ನೋಡಿ ಸೋತ ಕಣ್ಣುಗಳಿಗೆ ಹಸಿರು ಮುದ ನೀಡದಿರುತ್ತದೆಯೇ. ಹಡಗಿನಲ್ಲಿದ್ದ ಎಲ್ಲರೂ ತೀರಕ್ಕಾಗಿ ಹಾತೊರೆದರು. ಅನ್ನ ನೀರು ಮರೆತು ಹುಚ್ಚು ಹಿಡಿಯುವ ಮಟ್ಟಕ್ಕೆ ಬಂದರು. ಎಷ್ಟೋ ರಾತ್ರಿ ಹಗಲುಗಳ ನಂತರ ಹಡಗು ಆಫ್ರಿಕಾ ಖಂಡದ ತೀರಕ್ಕೆ ಹತ್ತಿರವಾಗುತ್ತಿತ್ತು, ದೂರದಲ್ಲಿ ಬಂದರು ಕಾಣಲು ಆರಂಭವಾಗಿ ಸುಮಾರು ತಾಸುಗಳೇ ಕಳೆದಿತ್ತು. ಸಂಜೆಯಾಯಿತು, ರಾತ್ರಿಯಾಗುತ್ತಾ ಬಂತು.

*
ಮಿಂಚು ಹುಳುವಿನಂತೆ ಹೊಳೆಯುತ್ತಿದ್ದ ಆಫ್ರಿಕಾದ ‘ಡರ್ಬನ್’ ಕಡಲ ತೀರ ಸ್ವಲ್ಪ ಸ್ವಲ್ಪವೇ ಗೋಚರಿಸತೊಡಗಿತ್ತು. ಮತ್ತೂ ಮತ್ತೂ ಹತ್ತಿರವಾದಂತೆ ಕಡಲು ಮುಗಿಯಲೇ ಇಲ್ಲ. ಹಡಗಿನೊಳಗಿದ್ದ ಯಾರೂ ತೀರ ಕಂಡ ಬಳಿಕ ನಿದ್ರೆ ಮಾಡಿರಲಿಲ್ಲ. ಅಂತೂ ಬೆಳಗಿನ ಜಾವ ಸುಮಾರು ನಾಲಕ್ಕು ಗಂಟೆಯ ವೇಳೆಗೆ ಹಡಗು ಬಂದರು ತಲುಪಿತು. ಬರೋಬ್ಬರಿ ೭೨ ದಿನಗಳ ತರುವಾಯ ಹೊಸ ಮನುಷ್ಯರು, ಭೂಮಿ ಅವರ ಕಣ್ಣಿಗೆ ಬಿದ್ದಿತ್ತು. ಹಡಗು ನಿಲ್ಲಲೂ ಪುರ್ಸೊತ್ತು ಕೊಡದೆ ಎಲ್ಲಾ ಕೂಲಿಗಳು ಚಂದ್ರಗ್ರಹಕ್ಕೆ ಕಾಲಿರಿಸುವಂತೆ ಭೂಮಿಗೊಮ್ಮೆ ಕಾಲಿರಿಸಲು ಹಪಹಪಿಸುತ್ತಿದ್ದರು. ನೆಲ ಕಾಣುತ್ತಿದ್ದಂತೆ ಎಲ್ಲರೂ ಆವೇಶಗೊಂಡರು. ಒಂದಿಬ್ಬರಂತೂ ಮೈ ಮೇಲೆ ದೆವ್ವ ಬಂದವರಂತೆ ಕುಣಿಯತೊಡಗಿದರು.

ಆ ಖುಷಿಗೂ ಒಂದರ್ಥವಿರದಿರಲಿಲ್ಲ. ಕಣ್ಣು ತುಂಬಾ ನೀಲಿ ನೀಲಿ ತುಂಬಿ ನೀರಸಗೊಂಡ ಬಳಿಕ ನೆಲವನ್ನು ಕಾಣುವುದೆಂದರೆ ಯಾರಿಗೆ ತಾನೇ ಖುಷಿಯಾಗದು.” ಬ್ರೋಂ” ಎಂಬ ಶಬ್ದದೊಂದಿಗೆ ಹಡಗು ಸೈರನ್ ಹಾಕಿತು. ಅದು ಹಡಗಿನ ಕೊನೆಯ ಶಿಲ್ಲು. ಅದು ದೀರ್ಘ ಪ್ರಯಾಣದಿಂದ ಸುಸ್ತಾಗಿ ಮಲಗಿದವನ ಗೊರಕೆಯಂತಿತ್ತು. ಬಂದರಿನಲ್ಲಿ ಎಲ್ಲ ಕೂಲಿಯವರು ಇಳಿದದ್ದಾಯಿತು. ತಂಗಾಳಿ ಬೀಸಿ ಬರುವಾಗ ಆ ಮುಂಜಾನೆಗೂ ವಿಶೇಷ ಅನುಭೂತಿ. ಇದಿನಬ್ಬ ಮತ್ತೆ ಪ್ರಾರ್ಥನೆಗೆ ನಿಂತ. ಅಧಿಕಾರಿಗಳು ವಿಶ್ರಮಿಸಲು ಹೋದರು. ಕೂಲಿಯವರು ಭೂಮಿಯನ್ನೇ ಚಾಪೆ ಮಾಡಿ ಮಲಗಿದರು. ಪ್ರಶಾಂತ ಊರು. ಯಾರು ಬಂದರೂ ಹಲ್ಲು ಕಿರಿದು ನಗುವ  ಅಲ್ಲಿನ ಸ್ಥಳೀಯರು ಆಜಾನುಬಾಹುಗಳು. ಅರೆ ಬರೆ ವಸ್ತ್ರ ತೊಟ್ಟ ಹೆಂಗಸರು. ಮೀನು ಹಿಡಿಯುವುದು, ಮಾರುವುದು ವಿಚಿತ್ರ ಭಾಷೆಯಲ್ಲಿ ಚೌಕಾಸಿ ಮಾಡುವುದನ್ನು ನೋಡಿ ಇದಿನಬ್ಬನಿಗೆ ಒಂಥರಾ ಹಾಸ್ಯಾಸ್ಪದ ಎನಿಸುತ್ತಿತ್ತು.

ಹೆಚ್ಚೇನು ಚೌಕಾಸಿಗೆ ನಿಲ್ಲದೆ ಕೊಟ್ಟ ರಿಯಾಯಿತಿ ಬೆಲೆಗೆ ಕೊಳ್ಳುವ ವ್ಯಾಪಾರಿಗಳು. ಪರಿಸರಕ್ಕೆ ಹೊಂದಿಕೊಂಡು ಬೆಳೆದ ಜನ ಜೀವನ. ಆಗಾಗ ಕಡಲಲ್ಲಿ ಕಾಣುವ ಆದಿವಾಸಿಗಳ ತೆಪ್ಪ. ಎಲೆಯನ್ನೇ ಉಡುಪು ಮಾಡಿಕೊಂಡವರೇ ಹೆಚ್ಚಿನವರು, ಅವರಿಗೆ ಬಟ್ಟೆಗಳ ಬಳಕೆ ಗೊತ್ತೇ ಇರಲಿಲ್ಲ. ನೇಸರ ಮೆಲ್ಲನೆ ಮೇಲೇಳುತ್ತಿದ್ದ. ಹಡಗಿನ ಯಾತ್ರೆಯಿಂದ ಜಿಗುಪ್ಸೆಗೊಂಡು ಆಯಾಸದಿಂದ ಸುಸ್ತಾದವರಿಗೆಲ್ಲಾ ಗಡದ್ದು ನಿದ್ದೆ ಆವರಿಸಿತ್ತು. ಬಿಸಿಲು ಬೀಳುವ ಹೊತ್ತಿಗಾಗಲೇ ಅಧಿಕಾರಿಗಳು ಸುಃಖ ನಿದ್ದೆಯಿಂದೆದ್ದರು. ” ಹೊರಡಿ ಹೊರಡಿ ” ಎಂದು ಒಂದೇ ಸಮನೆ ಕೂಗ ತೊಡಗಿದರು. ಮಲಗಿದ್ದಲ್ಲಿಂದಲೇ ಕೂಲಿಗಳು ಹೊಸ ಮಳೆಗೆ ಹುಲ್ಲು ಮೊಳಕೆಯೊಡೆಯುವಂತೆ ಏಳ ತೊಡಗಿದರು. ಆ ಹೊತ್ತಿಗೆ ಅಲ್ಲಿ ಕೆಲವು ಸ್ಥಳೀಯ ನಿವಾಸಿಗಳು ನಿಂತಿದ್ದರು. ಮತ್ತೆ ಯಾತ್ರೆ ಶುರುವಾಯಿತು. ಈ ಬಾರಿ ನಡೆದುಕೊಂಡೆ ಹೋಗಬೇಕಾಗಿತ್ತು.

ಆಫ್ರಿಕಾವೆಂದರೆ ಸೂರ್ಯನ ಬೆಳಕು ಬೀಳದ ಖಂಡವೆಂಬ ಪ್ರತೀತಿ ಇದೆ. ಈ ಖಂಡದ ಒಂದು ಭಾಗ ಪೂರ್ತಿ ಕಗ್ಗಾಡು. ಲಕ್ಷಾನುಗಟ್ಟಲೆ ಪ್ರಾಣಿ ಪಕ್ಷಿಗಳ ನೆಲೆ ಬೀಡು. ಎತ್ತ ತಿರುಗಿದರೂ ಕಾಣ ಸಿಗುವ ಕಣ್ಣು ಸೋಲುವಷ್ಟು ಹರಡಿಕೊಂಡ ಹಸಿರು. ದಾರಿ ಸಾಗುತ್ತಿತ್ತು, ಅಧಿಕಾರಿಗಳು ಕತ್ತೆಯ ಬೆನ್ನಿಗೆ ಕಟ್ಟಿದ ಡೇರೆಯಲ್ಲಿ ಕುಳಿತಿದ್ದರು. ತಂಡವನ್ನು ಮುನ್ನಡೆಸಲು  ಸ್ಥಳೀಯನಾದ ಒಬ್ಬ ಗುಲಾಮನಿದ್ದ. ಬೆಟ್ಟ ಗುಡ್ಡಗಳ ಕಡಿದಾದ ಅಡ್ಡದಾರಿಗಳಲ್ಲಿ ಚಲಿಸುತ್ತಾ ಅವರು ಈಸ್ಟ್ ಇಂಡಿಯಾ ಕಂಪೆನಿಯ ಕಚೇರಿಗೆ ತಲುಪ ಬೇಕಾಗಿತ್ತು. ಗುಡ್ಡಗಳಲ್ಲಿ ಚಲಿಸುವಾಗ ವಿಶೇಷ ಜಾಗ್ರತೆ ವಹಿಸಬೇಕಿತ್ತು. ಯಾವ ಕಾಡು ಪ್ರಾಣಿ ಯಾವ ಹೊತ್ತು ದಾಳಿ ಮಾಡುತ್ತದೆಯೆಂದು ಹೇಳಲಾಗುವುದಲ್ಲ. ಬಹಳ ಜಾಗ್ರತೆಯಾಗಿ ನಡೆಯಬೇಕೆಂದು ಅವನು ಹೇಳಿ ಎಚ್ಚರಿಸುತ್ತಿದ್ದ.

ಹೆಚ್ಚೇನು ಚೌಕಾಸಿಗೆ ನಿಲ್ಲದೆ ಕೊಟ್ಟ ರಿಯಾಯಿತಿ ಬೆಲೆಗೆ ಕೊಳ್ಳುವ ವ್ಯಾಪಾರಿಗಳು. ಪರಿಸರಕ್ಕೆ ಹೊಂದಿಕೊಂಡು ಬೆಳೆದ ಜನ ಜೀವನ. ಆಗಾಗ ಕಡಲಲ್ಲಿ ಕಾಣುವ ಆದಿವಾಸಿಗಳ ತೆಪ್ಪ. ಎಲೆಯನ್ನೇ ಉಡುಪು ಮಾಡಿಕೊಂಡವರೇ ಹೆಚ್ಚಿನವರು, ಅವರಿಗೆ ಬಟ್ಟೆಗಳ ಬಳಕೆ ಗೊತ್ತೇ ಇರಲಿಲ್ಲ. ನೇಸರ ಮೆಲ್ಲನೆ ಮೇಲೇಳುತ್ತಿದ್ದ. ಹಡಗಿನ ಯಾತ್ರೆಯಿಂದ ಜಿಗುಪ್ಸೆಗೊಂಡು ಆಯಾಸದಿಂದ ಸುಸ್ತಾದವರಿಗೆಲ್ಲಾ ಗಡದ್ದು ನಿದ್ದೆ ಆವರಿಸಿತ್ತು.

“ಬಕ್ರ್…ಕ್ರೀ…ಟ್ಟ ಟ್ಟ ಊಶಃ ಟ್ಟ ಟ್ಟ ” ಎಂದು ನಾಲ್ಕು ಬಾರಿ ನಾಲಗೆ ಬಡಿದು, ಶಿಳ್ಳೆ ಹಾಕುವ ವಿಚಿತ್ರ ಭಾಷೆ ಆತ ಮಾತನಾಡುತ್ತಿದ್ದ. ಆ ಭಾಷೆ ಆಫ್ರಿಕಾದ ಕಾಡಿನ ಆದಿವಾಸಿಗಳ ಭಾಷೆ. ಬ್ರಿಟಿಷರ ಕ್ರೂರ ಆಳ್ವಿಕೆಯಿಂದ ಬಲಾತ್ಕಾರದ ನಾಗರಿಕತೆಯ ಫಲವಾಗಿ ಈ ಭಾಷೆ ಮಾತನಾಡುವವರು ಹೊರಗಿನ ಜನರ ಚಾಕರಿಗೆ ದೊರೆಯುತ್ತಿದ್ದರು. ಸಾಲು ಸಾಲಾಗಿ ತಂಡ ಸಾಗುತ್ತಿತ್ತು.

ಒಮ್ಮೆ ಒಬ್ಬೊಬ್ಬರಾಗಿ ನಡೆದು ಸಾಗುವ ಕಿಷ್ಕಿಂದೆಯಂತಹ ಸ್ಥಳ ಎದುರಾಯಿತು. ಅಲ್ಲಿ ಸ್ಫಟಿಕ ಶುದ್ಧ ನೀರಿನ ಸಣ್ಣ ತೊರೆ ಹರಿಯುತ್ತಿತ್ತು. ಅದನ್ನು ದಾಟಿ ಒಬ್ಬ ಹೋಗುವಷ್ಟು ಇಕ್ಕಟ್ಟಾದ ಮರಗಳ ಮಧ್ಯೆ ಇರುವ ದಾರಿಯಲ್ಲಿ ನಡೆಯಬೇಕಾಗಿತ್ತು. ನಮ್ಮನ್ನು ಮುನ್ನಡೆಸುತ್ತಿದ್ದ ವ್ಯಕ್ತಿ ತೊರೆಯಲ್ಲಿ ಬಾಯಿಯಿಟ್ಟು ನೀರು ಕುಡಿದ. ಅವನು ಸ್ಥಳೀಯನಾದ್ದರಿಂದ, ಆ ನೀರು ಕುಡಿಯಬಹುದಾದ್ದು ಎಂದು ಇತರರು ಅರ್ಥ ಮಾಡಿಕೊಂಡರು.  ಕೂಲಿಗಳೆಲ್ಲಾ ಅವನನ್ನೇ ಅನುಸರಿಸಿದರು. ಯಾತ್ರೆ ಮುಂದುವರಿಯಿತು. ತೊರೆ ಮಧ್ಯ ಸ್ವಲ್ಪ ಸೂರ್ಯ ಇಣುಕುತ್ತಿದ್ದರಿಂದ ತಂಡದಲ್ಲಿದ್ದ ಸಮಯ ಜ್ಞಾನಿಗಳು ವೇಳೆ ಗೊತ್ತು ಮಾಡಿಕೊಂಡರು. ಸುಮಾರು ಹನ್ನೊಂದು ಹನ್ನೊಂದುವರೆ ಆಗಿರಬೇಕು. ಮತ್ತೆ ಸಾಲು ಸಾಲು ಸಾಗುವ ದಾರಿ ಬಂತು. ಜಿಗಣೆಗಳು ಕೂಲಿಗಳ ಅರ್ಧ ರಕ್ತ ಹೀರಿದ್ದವು. ಸಾಲು ಸಾಲಾಗಿ ಏರ ಬೇಕಾದ ಸಣ್ಣ ಬೆಟ್ಟ ಬಂತು. ಮಳೆಗಾಲದ ಸಂಜೆಯಂತೆ ಕತ್ತಲು ಕವಿದ ಕಗ್ಗಾಡು. ಇದ್ದಕ್ಕಿದ್ದಂತೆ ಹಿಂದಿನಿಂದ ಕಿರುಚಿದ ಶಬ್ದ ಕೇಳಿ ಬಂತು. ಎಲ್ಲರ ಕಣ್ಣು ಅತ್ತ ಹೊರಳಿತು. ಸಾಲಿನ ಕೊನೆಯಲ್ಲಿ ಬರುತ್ತಿದ್ದ ಕೂಲಿಯವನು ಆರ್ತನಾದಗೈಯ್ಯುತ್ತಿದ್ದ. ಯಾವುದೋ ಒಂದು ವಿಚಿತ್ರ ಸಸ್ಯ ಆತನನ್ನು ಹಿಡಿದು ಹಾಕಿತ್ತು. ಆತನ ಕಾಲುಗಳು ಜಖಂಗೊಂಡಿದ್ದವು. ನೋಡ ನೋಡುತ್ತಿದ್ದಂತೆ ಕೂಲಿಯವನನ್ನು ಅದು ಸಂಪೂರ್ಣ ನುಂಗಿ ಹಾಕಿತು.

ನಮ್ಮ ತಂಡಕ್ಕೆ ದಾರಿತೋರುತ್ತಿದ್ದ ಸ್ಥಳೀಯ ವ್ಯಕ್ತಿ, ಮತ್ತೊಮ್ಮೆ ಜೋರಾಗಿ  ” ಟ್ಟ್ ಟ್ಟಾ….ಹುರ್ರಾ…ಹ್ರೀ ಹ್ರೀ” ಅಂದ. ಈಗ ಎಲ್ಲರಿಗೂ ಅಲ್ಪ ಸ್ವಲ್ಪ ಅರ್ಥವಾಯಿತು. “ದಾರಿಯಲ್ಲಿ ಸಿಗುವ ಸಸ್ಯವನ್ನಾಗಲೀ, ಬಳ್ಳಿಯನ್ನು ಮುಟ್ಟ ಬೇಡಿ ” ಎಂಬ ಆಕ್ಷೇಪವೆಂಬುದು ಆತನ ಹಾವಭಾವದಲ್ಲಿ ಗೊತ್ತಾಗುತ್ತಿತ್ತು. ಮುಂದೆ ಎಲ್ಲರೂ ಜಾಗರೂಕರಾಗಿಯೇ ಇದ್ದರು. ಕೂಲಿಗಳ ತಂಡ ವಿಶಾಲವಾದ ಹುಲ್ಲುಗಾವಲಿಗೆ ಬಂತು. ಎಲ್ಲರೂ ಕೈ ಕೈ ಹಿಡಿದು ನಡೆಯುವಂತೆ ಸಲಹೆಯೂ ಬಂತು. ಆಳೆತ್ತರಕ್ಕೆ ಬೆಳೆದ ಹುಲ್ಲೆಂದರೆ ಬಿದಿರಿನಷ್ಟೂ ಬೆಳೆಯಬಲ್ಲದೇ ಎಂಬುವಷ್ಟು ದಷ್ಟಪುಷ್ಟವಾಗಿತ್ತು. ದೂರದಲ್ಲಿ ಕಾಡೆಮ್ಮೆ ಜಿಂಕೆಗಳು ಮೇಯುತ್ತಿದ್ದವು. ಮಧ್ಯಾಹ್ನ ಕಳೆದಿತ್ತು .ನಡೆಯುತ್ತಾ ಎಲ್ಲರೂ ಬಸವಳಿದಿದ್ದರು. ಎಲ್ಲರ ಕೈಕಾಲುಗಳ ಮೇಲೆ ಗೀರು ಗಾಯಗಳಾಗಿ ರಕ್ತ ತೊಟ್ಟಿಕ್ಕುತ್ತಿದ್ದವು. ಒಬ್ಬ ಸ್ಥಳೀಯ ನಿವಾಸಿ ಅಲ್ಲೇ ಹತ್ತಿರದಲ್ಲಿದ್ದ ಮಾವಿನ ಹಣ್ಣಿನಂತಹ ಮರಕ್ಕೆ ರಪ ರಪನೆ ಹತ್ತಿ ಕೊಂಬೆ ಅಲುಗಾಡಿಸಿ ನೂರಾರು ಕಾಯಿ ಬೀಳಿಸಿದ. ಸಿಹಿಯಾಗಿದ್ದ ಹಣ್ಣುಗಳನ್ನು ಎಲ್ಲರೂ ಹೊಟ್ಟೆ ತುಂಬಾ ತಿಂದು ದಣಿವಾರಿಸಿಕೊಂಡರು.

ಸ್ವಲ್ಪ ನಡೆಯುತ್ತಿದ್ದಂತೆ ವಿಶಾಲ ಮೈದಾನದಂತಹ ಊರು. ಹತ್ತಾರು ಡೇರೆಗಳನ್ನು ವ್ಯವಸ್ಥಿತವಾಗಿ ಕಟ್ಟಲಾಗಿತ್ತು. ಕುದುರೆಗಳು ಮೇಯುತ್ತಿದ್ದವು. ” ಹೇ ಕೆಂಪಿನಿ ಬಾವುಟ ” ಕೂಲಿಯವನೊಬ್ಬ ತಮಿಳಿನಲ್ಲಿ ಕೂಗಿ ಹೇಳಿದ. ಅವರ ಅನಕ್ಷರಸ್ಥ ಮಾತುಕತೆ ಅಷ್ಟೊಂದು ಅಪಭ್ರಂಶ ವಾಗಿತ್ತು. ಡೇರೆಗೆ ಹತ್ತಿರವಾದೊಡನೆ ನಮ್ಮನ್ನು ಮುನ್ನಡೆಸುತ್ತಿದ್ದ ವ್ಯಕ್ತಿ, ಎಲ್ಲರನ್ನೂ ನಿಲ್ಲಲು ಹೇಳಿ ಡೇರೆಯೊಳಗಡೆ ಹೊಕ್ಕ. ಐದು ನಿಮಿಷಗಳ ತರುವಾಯ ಹತ್ತಾರು ಬ್ರಿಟಿಷ್ ತಲೆಗಳು ಅದರ ಒಳಗಿಂದ ಹೊರ ಬರುವುದು ಕಾಣಿಸಿತು. ಅವರೆಲ್ಲರೂ ಬ್ರಿಟಿಷ್ ಸರಕಾರ ನೇಮಿಸಿದ ವಕ್ತಾರರು. ಎರಡು ಜನ ಅಧಿಕಾರಿಗಳು ಮತ್ತು ಆಫ್ರಿಕಾದ ಓರ್ವ ಪ್ರಜೆಯ ಜೊತೆಗೆ ಇನ್ನೊಬ್ಬ ಇಂಡಿಯನ್ ಸೇರಿ ನಾಲ್ಕು ಜನರು ಕೂಲಿಯವರ ಬಳಿ ಬಂದರು. ಇಂಡಿಯನ್ ಬಿಳಿಯರಷ್ಟು ಬಿಳಿಯನಾಗಿರದೆ, ಆಫ್ರಿಕಾದವರಷ್ಟು ಕಪ್ಪಾಗಿರದೆ ಮಧ್ಯಮ ಮೈಬಣ್ಣ ಹೊಂದಿದ್ದವನು. ಅವನು  ಆಫ್ರಿಕಾದ ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ ಜನರ ಮಧ್ಯೆ ಇರುವ ದುಬಾಷಿ. ಇಂಡಿಯನ್ಗೆ ಆಫ್ರಿಕಾದವರ ಭಾಷೆ ಬರುತ್ತಿದ್ದರೂ ತಮಿಳಾಗಲಿ, ಸಿಂಹಳ ಭಾಷೆಯಾಗಲಿ ಬರುತ್ತಿರಲಿಲ್ಲ. ಇಂಗ್ಲೀಷ್ ಅಧಿಕಾರಿಗಳು ಒಬ್ಬೊಬ್ಬರಾಗಿ ಮಾತನಾಡಲು ಶುರುವಿಟ್ಟರು. ಬುಡಕಟ್ಟಿನ ಜನರ ಶಿಳ್ಳೆ ಭಾಷೆಗೆ ಸಮರ್ಪಕವಾಗಿ ಇಂಡಿಯನ್ ಅನುವಾದಿಸುತ್ತಿದ್ದ. ಕೂಲಿಯಾಳುಗಳಿಗೆ ಬಹುತೇಕರಿಗೆ ಒಂಚೂರು ಅರ್ಥವಾಗುವಂತಿರಲಿಲ್ಲ. ಎಲ್ಲರೂ ಪಿಳಿ ಪಿಳಿ ಕಣ್ಣು ಬಿಟ್ಟು ಆ ರಂಗವನ್ನು ಕುತೂಹಲದಿಂದ ನೋಡುತ್ತಿದ್ದರು. ಇಂಗ್ಲೀಷ್ನಲ್ಲಿ ಮಾತನಾಡುವಾಗ ತಲೆಯಾಡಿಸುತ್ತಿದ್ದ ಇದಿನಬ್ಬನನ್ನು ಗಮನಿಸಿದ ಅಧಿಕಾರಿ ಹತ್ತಿರ ಕರೆದ.

” ಕ್ಯಾನ್ಯೂ ಟ್ರಾನ್ಸೇಲೇಟ್ ಟು ಯುವರ್ ಲಾಂಗ್ವೇಜ್ (ನಿನ್ನ ಬಾಷೆಯಲ್ಲಿ ಬಾಷಾಂತರಿಸಬಹುದೇ?) ?’’ ಎಂದು ಪ್ರಶ್ನಿಸಿದ.
“ಶುವರ್ ” ಎನ್ನುತ್ತಾ ಇದಿನಬ್ಬ ತಲೆಯಾಡಿಸಿದ. ಬ್ರಿಟಿಷ್ ಅಧಿಕಾರಿಯ ಮಾತುಗಳನ್ನು ಸಿಂಹಳೀಸ್ ಮತ್ತು ತಮಿಳಿಗೆ ಅನುವಾದಿಸಿದ.
” ನಿಮಗೆ ಇಲ್ಲಿನ ಕರಾರು ಪ್ರಕಾರ ಹತ್ತು ವರ್ಷ ದುಡಿಯಬೇಕು. ಮೊದಲೇ ತಿಳಿಸಿದಂತೆ ಕರಾರು ಮುಗಿದು ಊರಿಗೆ ಮರಳುವಾಗ ನಿಮ್ಮ ನಿಮ್ಮ ಕೂಲಿ ನೀಡಲಾಗುತ್ತದೆ. ನಿಮಗೆ ಇಲ್ಲಿ ಚಿನ್ನ ಅಗೆಯುವ ಕೆಲಸವಿದೆ, ಸರಕಾರದ ನಿಯಮವನ್ನುಲ್ಲಂಘಿಸಿ, ಕಳ್ಳತನಕ್ಕಿಳಿದರೆ ಮರಣದಂಡನೆ ವಿಧಿಸಲಾಗುತ್ತದೆ ” ಎಂಬ ಅವರ ಭಾಷಣದ ಪ್ರಮುಖ ಭಾಗವನ್ನು ಇದಿನಬ್ಬ ಭಾಷಾಂತರಿಸಿದ. ಎಲ್ಲರೂ ‘ಆಗಲಿ’ ಎಂಬಂತೆ ತಲೆ ಅಲ್ಲಾಡಿಸಿದರು.

ಅಧಿಕಾರಿಯೊಬ್ಬ ಸ್ಥಳೀಯ ಯುವಕನಲ್ಲಿ ಎಲ್ಲಾ ಕೂಲಿಗಳ ಕಣ್ಣಿಗೆ ಬಟ್ಟೆ ಕಟ್ಟುವಂತೆ ಹೇಳಿದ. ಹಾಗೆಯೇ ಮಾಡಲಾಯಿತು. ಪರಿಚಯವಿಲ್ಲದ ಹೊಸ ಕೂಲಿಗಳಿಗೆ ರಸ್ತೆ ತಿಳಿಯದಿರಲಿ ಮತ್ತು ಗಣಿಗೆ ಬರುವ ದಾರಿಯನ್ನು ಕಳ್ಳರಿಗೋ, ದರೋಡೆಕೋರಿಗೋ ಹೇಳಿಕೊಡದಿರಲಿ ಹಾಗೂ ಸ್ವತಃ ಕೂಲಿಗಳೇ ಅಲ್ಲಿನ ಕಷ್ಟ ಕಂಡು ಕೆಲಸ ಬಿಟ್ಟು ಓಡಿಹೋಗದಿರಲಿ ಎಂದು ಹಾಗೆ ಮಾಡಲಾಗುತ್ತಿತ್ತು. ಕಿವಿಗೆ ಆಜ್ಞೆಗಳು ಕೇಳುತ್ತಿದ್ದವು. ಎಡವುತ್ತ ತಡವರಿಸುತ್ತ ಎದ್ದು ಬಿದ್ದು ಚಿನ್ನದ ಗಣಿಯ ಕಡೆಗೆ ನಡೆಯತೊಡಗಿದರು. ಉರಿ ಬಿಸಿಲು ಬೆವರ ಸ್ನಾನ ಮಾಡಿಸುತ್ತಲೇ ಇತ್ತು. ಸುಮಾರು ಅರ್ಧ ತಾಸುಗಳ ತರುವಾಯ ಎಲ್ಲರ ಕಣ್ಣುಗಳಿಗೆ ಕಟ್ಟಿದ್ದ ಬಟ್ಟೆ ಬಿಚ್ಚಲಾಯಿತು. ಕೆಲವರಂಥೂ ಉಸಿರಾಡಲೇ ಇಲ್ಲ ಎನ್ನುವಷ್ಟು ಗಾಬರಿಯಿಂದ ಕಣ್ಣು ತೆರೆ ತೆರೆದು ಸುತ್ತ ಮುತ್ತ ನೋಡತೊಡಗಿದರು. ಎಣ್ಣೆ ಹಚ್ಚದ ತಲೆಗೂದಲಂತೆ ಧೂಳು ಕೆಂಬಣ್ಣಕ್ಕೆ ತಿರುಗಿದ ಆಕಾಶ. ಅಧಿಕಾರಿಗಳಿಗೆ ಮಾಸ್ಕ್ ಇತ್ತು. ಕೂಲಿಗಳು ಕೆಮ್ಮಲಾರಂಭಿಸಿದರು. ಒಳ ಹೋದ ಯಾವ ನುಸಿಯೂ ತಪ್ಪಿಸಿಕೊಳ್ಳಲಾಗದಷ್ಟು ಅಭೇಧ್ಯವಾದ ಎತ್ತರದ ಗೋಡೆಯ ಮಧ್ಯೆ ಅವರು ಬಂಧಿಯಾಗಿದ್ದರು. ಹೊರಗಿನಿಂದಲೂ ಒಳ ಹೋಗುವಂತಿರಲಿಲ್ಲ.

ಮುಂದೆ ವಿಶಾಲವಾದ ಗೋಡೆಗಳಲ್ಲಿ ಗಾಳಿ ನುಸುಳುವಷ್ಟೂ ಸಂದು ಬಿರುಕು ಕಿಂಡಿ ಯಾವುದನ್ನೂ ಕಾಣದೆ ಯಾವ ರೀತಿ ಒಳ ಬಂದೆವೆಂದು ನೆನೆದು ಇದಿನಬ್ಬನಿಗೆ ದಿಗಿಲು. ರಣ ಬಿಸಿಲು ದೇಹದ ನೀರೀನಂಶವನ್ನು ಹೀರಿ ಹಿಂಡಿತ್ತು. ಮುಂದಿದ್ದ ಅಧಿಕಾರಿ ಕಬ್ಬಿಣದ ಗೂಟವೊಂದನ್ನು ಕೆಳಕ್ಕೆ ನೂಕಿದ. ಏನಾಶ್ಚರ್ಯ ! ಬೃಹತ್ ಭೂಮಿ ಮುಖ ಬಾಗಿಲು ತೆರೆದು ಭೂಗತ ಜಗತ್ತೊಂದು ಅನಾವರಣಗೊಂಡಿತು. ಕೂಲಿಗಳು ಮೆಟ್ಟಿಲಿಳಿಯುತ್ತ ಅಧಿಕಾರಿಗಳನ್ನು ಹಿಂಬಾಲಿಸಿದರು. ಅದು ವಿಶಾಲವಾದ ಮೈದಾನ. ಸುತ್ತ ಮುತ್ತ ಕಟ್ಟಡಗಳು. ನೂರಾರು ಟ್ರಕ್ಕುಗಳು, ಕಿರುಗುಡುತ್ತ ಕೆಲಸ ಮಾಡುವ ಭಾರೀ ಯಂತ್ರಗಳು. ಎಲ್ಲರಿಗೂ ಕೆಲಸಕ್ಕೆ ಹಾಕುವ ವಿಶೇಷ ವಸ್ತ್ರವನ್ನು ವಿತರಿಸಿದರು. ಕೆಂಪು ಬಣ್ಣದ ಜಾಕೆಟ್ ನಂತಹ ಯುನಿಫಾರ್ಮ್ ಧರಿಸಿ ಕೂಲಿಗಳೆಲ್ಲ ಕೆಲಸಕ್ಕೆ ಕೂಡಿಕೊಂಡರು. ಟ್ರಕ್ಕುಗಳಲ್ಲಿ ಅವರನ್ನು ತುಂಬಿ ದೂರ ಒಯ್ಯಲಾಯಿತು. ಧೂಳುಗಳೇ ತುಂಬಿರುವ ಕರ್ಮ ಭೂಮಿಯದು.

ಮನುಷ್ಯನ ಅತೀವ ಅತ್ಯಾಸೆಯಿಂದ ಭೂಮಿಯನ್ನು ಅಗೆದಗೆದು ಅತ್ಯಾಚಾರ ಮಾಡಿದ್ದು ಸ್ಪಷ್ಟವಾಗಿ ಕಾಣಬಹುದಿತ್ತು. ಎಲ್ಲರೂ ಟ್ರಕ್ಕಿನಿಂದಿಳಿದರು. ಅಲ್ಲಲ್ಲಿ ಕೂಲಿಗಳ ಟೆಂಟುಗಳಿದ್ದವು. ಸುತ್ತ ಮುತ್ತ ಮನುಷ್ಯರೇ ಸುಳಿದಿರದಷ್ಟು ನೀರವತೆ. ಅರೇ! ಇಲ್ಲಿ ಗಂಡಸರೇ ಇಲ್ವಾ? ಆ ಸೆಖೆಯ ಮಧ್ಯಾಹ್ನ ಪುರುಷರೆಲ್ಲಾ ಮಲಗಿ ಬಿಟ್ರಾ ಎಂಬಿತ್ಯಾದಿ ಪ್ರಶ್ನೆಗಳು ಇದಿನಬ್ಬನನ್ನು ಕೊರೆಯಲಾರಂಭಿಸಿದವು. ಅದೊಂದು ವಿಚಿತ್ರ ಹಳ್ಳಿ. ಅಲ್ಲಿ ಮಹಿಳೆಯರೆಲ್ಲ ಅರ್ಧಂಬರ್ಧ ಬಟ್ಟೆ ತೊಟ್ಟಿದ್ದರು. ಹೆಚ್ಚಿನವರು ದೊಡ್ಡ ದೊಡ್ಡ ಎಲೆಗಳನ್ನು ಸುತ್ತಿ ಕೊಂಡ ಕಪ್ಪು ವರ್ಣದ ಧೃಡಕಾಯ ಹೆಂಗಸರು. ಅಧಿಕಾರಿಗಳು ಕಳಿಸಿ ಕೊಟ್ಟ ಆ ಸ್ಥಳೀಯ ವ್ಯಕ್ತಿ, ಕೂಲಿ ಜನರ ಗುಂಪನ್ನು ವಿಭಜಿಸಿ ಬೇರೆ ಬೇರೆ ಟೆಂಟುಗಳಿಗೆ ಕಳಿಸಿಕೊಟ್ಟ. ಹಾಗೆಯೇ ಇದಿನಬ್ಬನಿಗೂ ಒಂದು ಟೆಂಟು ಸಿಕ್ಕಿತು. ನೋಡಿದರೆ ಮೂರ್ನಾಲ್ಕು ಹೆಂಗಸರು ಮಾತ್ರ ಇದ್ದಾರೆ. ಅವರೇನೋ ಶಿಳ್ಳೆಯ ಭಾಷೆಯಲ್ಲಿ ಮಾತಾಡುತ್ತಿದ್ದಾರೆ.

ಇದಿನಬ್ಬ ಒಂದೂ ಅರ್ಥವಾಗದೆ ದಿಗ್ಮೂಢನಾಗಿ ನಿಂತಿದ್ದಾನೆ. ಸ್ವಲ್ಪ ಹೊತ್ತಿನ ತರುವಾಯ ಟೆಂಟಿನ ಒಳಗಿನಿಂದ ಗಂಡಸರ ಶಬ್ದ ಕೇಳುತ್ತಿದೆ. ನೋಡುವುದೇನು, ಟೆಂಟಿನ ಒಳಗೆ ಬೇರೆ ಜಗತ್ತೇ ಇದೆ. ಹಲವರು ಅದರೊಳಗಿನ ಸುರಂಗ ಮಾರ್ಗದೊಳಗೆ ಕೆಲಸ ಮಾಡುತ್ತಿದ್ದರು. ನಾಚಿಕೆ. ಮುಜುಗರ ಮತ್ತು ಭಯದಿಂದ ಇದಿನಬ್ಬ ಟೆಂಟಿನೊಳಗೆ ಪ್ರವೇಶಿಸಿದ. ಮೆಟ್ಟಿಲಿಳಿಯುತ್ತಿದ್ದ ಇದಿನಬ್ಬನಿಗೆ ಕೆಲಸಗಾರರು ಭವ್ಯ ಸ್ವಾಗತ ಕೋರಿದರು. ಇದಿನಬ್ಬನ ಮೈ ಬಣ್ಣವೂ ಬಿಳಿಯೇನಲ್ಲ, ಕಡು ಕಪ್ಪು. ಲಕ್ಷಣವಾದ ಧೃಡಕಾಯ ಯುವಕ. ಆಫ್ರಿಕಾ ಆದಿವಾಸಿ ಸಂಸ್ಕೃತಿಯು ಇದಿನಬ್ಬನಿಗೆ ತುಂಬಾ ಇಷ್ಟವಾಯಿತು. ಅದು ಎಂಥವರಿಗೂ ಇಷ್ಟವಾಗದಿರದು.

(ಈ  ಕಿರು ಕಾದಂಬರಿಯ ಮುಂದುವರೆದ ಭಾಗ ಮುಂದಿನ ಭಾನುವಾರ ಪ್ರಕಟವಾಗಲಿದೆ.)