‘ಪಿತೂರಿ ಪ್ರಿಯರಾದ ಕೆಲವರು ನೀನು ನನ್ನ ಹಾಗೆ ಪದ್ಯ ಬರೆಯುತ್ತಿ, ನನ್ನನ್ನು ಅನುಸರಿಸುತ್ತಿ ಎಂದು ಒಮ್ಮೆ ದೂರು ಕೊಟ್ಟಿದ್ದರು. ನನ್ನ ಪದ್ಯ ಇನ್ನೊಮ್ಮೆ ಓದುವ ಆಶೆಯಿಂದ ನಿನ್ನದನ್ನು ಓದಿದರೆ, ಅದು ನನ್ನ ಪದ್ಯಕ್ಕಿಂತ ಚೆನ್ನಾಗಿತ್ತು. ಬೇರೆ ರೀತಿಯದಾಗಿತ್ತು’  – ಪಿ.ಲಂಕೇಶ್ ಅವರು ‘ಗೋಪಿ ಮತ್ತು ಗಾಂಡಲೀನ’ ಕವನಸಂಕಲನಕ್ಕೆ ಬರೆದ ‘ಪರಿಚಯ’ ಬರಹದ ಸಾಲುಗಳಿವು. ಬಿ ಆರ್ ಎಲ್ ಅವರಿಗೆ ಎಪ್ಪತ್ತೈದು ತುಂಬುತ್ತಿರುವ ಹಿನ್ನೆಲೆಯಲ್ಲಿ ಕವನ ಸಂಕಲನವು ಮರುಮುದ್ರಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಲಂಕೇಶ್ ಅವರ ಬರಹ ನಿಮ್ಮ ಓದಿಗಾಗಿ. 

 

ಪ್ರಿಯ ಲಕ್ಷ್ಮಣ: ನಿನ್ನಂಥ ದಡ್ಡನನ್ನು ನಾನು ನೋಡೇ ಇಲ್ಲ. ಬಿ.ಎ. ಪಾಸು ಮಾಡಿದೊಡನೆ ಮಹಾ ಸಾಧಿಸಿಬಿಟ್ಟವನಂತೆ ಓದು ನಿಲ್ಲಿಸಲು ನಿರ್ಧರಿಸಿದೆ. ಅಪ್ಪ, ಮನೆ,ತಾಪತ್ರಯ ಏನೇನೋ ನೆಪ ಹೇಳಿಕೊಂಡು ಅಡ್ಡಾಡಿದೆ; ಸ್ವಂತ ಊರಾದ ಚಿಂತಾಮಣಿಯಲ್ಲಿ ‘ಡಿಲಿಜೆನ್ಸ್’ ಎಂಬ ಗಂಭೀರ ಹೆಸರಿನ ಹೈಸ್ಕೂಲಿಗೆ ಸೇರಿಕೊಂಡು ಪಾಠ ಮಾಡುತ್ತ ಖುಷಿ ಪಡುವುದರ ಜೊತೆಗೆ ಊರ ಹುಡುಗರನ್ನೆಲ್ಲ ಕಟ್ಟಿಕೊಂಡು ಹಿಪ್ಪೀ ಹಾಡು, ಬೇಂದ್ರೆ ಹಾಡು, ಸೌಂಡ್ ಆಫ್ ಮ್ಯೂಸಿಕ್‍ನ ಹಾಡು ಎಂಥೆಂಥದೋ ತರಲೆಯನ್ನೆಲ್ಲ ಹಾಡಿಕೊಂಡು ತಿಂದು ಕುಡಿದು ಜೀವಿಸತೊಡಗಿದೆ. ಈಚೆಗೆ ನೀನು ಪಶ್ಚಾತ್ತಾಪ ವ್ಯಕ್ತಪಡಿಸಬಹುದು ಎಂಬ ಆಶೆಯಿಂದ ನಾನು ಮೊನ್ನೆ ‘ಹ್ಯಾಗಿದ್ದೀಯ’ ಎಂದು ಕೇಳಿದ್ದಕ್ಕೆ ಬಹಳ ಆನಂದದಿಂದ ಇರುವುದಾಗಿ ಹೇಳಿ ನನಗೆ ನಿರಾಶೆಯನ್ನುಂಟು ಮಾಡಿದೆ.

ನಿನ್ನ ಬಗ್ಗೆ ನನಗೆ ಬಹಳ ಆಶೆಯಿತ್ತು: ನೀನೂ ನಮ್ಮ ಅನೇಕರಂತೆ ಎಂ.ಎ. ಪಾಸು ಮಾಡಬಹುದು, ದೊಡ್ಡ ದೊಡ್ಡ ಪುಸ್ತಕ ಓದಿಕೊಂಡು ಕ್ಯಾಮು, ಕಾಫ್ಕ ಇಂಥವರಿಂದ ಹಿಡಿದು ಮಾಕ್ರ್ಸ್, ಲೋಹಿಯಾ ಇಂಥವರವರೆಗೆ ನಿರರ್ಗಳವಾಗಿ ಮಾತಾಡುತ್ತ ಪ್ರೊಫೆಸರ್ಗಳು, ಕನ್ನಡಾಭಿಮಾನಿಗಳು, ಮರಿ ಕವಿಗಳು ಇವರನ್ನು ಇಂಪ್ರೆಸ್ ಮಾಡುವುದಕ್ಕಾಗಿ ಸಮಯಕ್ಕೆ ತಕ್ಕ ಆಶೆ, ನಿರಾಶೆಯ ಪೋಸ್ ಹಾಕಿ ಕೊನೆಗೊಂದು ದಿನ ಯಜಮಾನಿಕೆಯ  ಸ್ಥಾನ ಆಕ್ರಮಿಸಿಕೊಂಡು ಚಿಕ್ಕವರಿಗೆ ಮುನ್ನುಡಿ ಬರೆದುಕೊಟ್ಟು ಕೃತಕೃತ್ಯ ಭಾವನೆ ಪಡೆಯಬಹುದು ಎಂದು ಹಂಬಲಿಸಿದ್ದೆ. ಆದರೆ ಎಷ್ಟಾದರೂ ನೀನು ನನ್ನ ವಿದ್ಯಾರ್ಥಿಯಾಗಿದ್ದವನು ತಾನೆ: ನನ್ನಿಂದ ಏನನ್ನೂ ಕಲಿಯದಿದ್ದರೂ ನನ್ನ ಹಾಗೆ ನಿರರ್ಥಕ ಪ್ರಾಣಿಯಾಗುವುದನ್ನು ನೀನು ಕಲಿತ ಹಾಗೆ ಕಾಣುತ್ತೆ. ನಮ್ಮ ಸಂಬಂಧ ನೆನೆದರೆ ನನಗೆ ನಗೆ ಬರುತ್ತೆ:

ಹೋದ ವರ್ಷ ನೀನು ನನ್ನನ್ನು ನಿನ್ನ ಶಾಲೆಗೆ ಬರಲು ಆಹ್ವಾನಿಸಿ ಎಳೆದುಕೊಂಡು ಹೋಗಲು ಸಜ್ಜಾದದ್ದು, ನನಗೊಬ್ಬನಿಗೇ ಬರಲು ನಾಚಿಕೆಯಾಗಿ ಮಿತ್ರರಾದ ಶರ್ಮ, ವೈಯನ್ಕೆ ಇವರನ್ನೂ ನಾನು ಕರೆದು ತಂದದ್ದು, ಅಲ್ಲಿ ನೀನು ನಿನ್ನ ಶಾಲೆಯ ಹುಡುಗರಿಂದ ನನಗೆ ‘ಗಾರ್ಡ್ ಆಫ್ ಆನರ್’ ಕೊಟ್ಟದ್ದು, ಇದರಿಂದೆಲ್ಲ ಸಂಭ್ರಮ, ಸಂಕೋಚದಿಂದ ಉಡುಗಿ ಹೋಗಿ ನಾನು ಐದೇ ನಿಮಿಷ ತೊದಲುತ್ತ ಭಾಷಣ ಮಾಡಿದರೂ ನೀನು ನನ್ನನ್ನು ಹೊಗಳಿ ಊಟ ಹಾಕಿಸಿ ಫೋಟೊ ತೆಗೆದು ಬೀಳ್ಕೊಟ್ಟದ್ದು: ಹಹ್ಹಾ! ನೀನು ಕವಿಯಾಗದೆ ಮತ್ತಾರು ಆದಾರು?

ಈ ನಡುವೆ ನೀನು ಡಿಲಿಜೆನ್ಸ್ ಶಾಲೆ, ಮತ್ತಿತರ ಅಕೃತ್ಯಗಳ ಮಧ್ಯೆ ಪದ್ಯ ಬರೆಯುತ್ತಿ ಮತ್ತು ಫೋಟೊ ತೆಗೆಯುತ್ತಿ ಎಂಬ ಪುಕಾರು ಎದ್ದಿತ್ತು. ಫೋಟೊ ತೆಗೆಯುವ ಚಾಳಿ ನಿನಗೆ ತಂದೆಯಿಂದ ಬಂದದ್ದು ಅಂತ ಬಲ್ಲೆ; ಪದ್ಯ ಬರೆಯುವುದನ್ನು ಎಲ್ಲಿ ಎತ್ತಿಕೊಂಡೆಯೋ ದೇವರೇ ಬಲ್ಲ. ನಾ ಬಲ್ಲಂತೆ ನಿನಗೆ ಕನ್ನಡ ಸಾಹಿತ್ಯದ ಮಾಹಿತಿ ಸರಿಯಾಗಿರಲಿಲ್ಲ. ನಾನು ಮತ್ತು ವೈಯನ್ಕೆ ನಮ್ಮ ಹಲವಾರು ಮಾತುಗಳ ಮಧ್ಯೆ ಬೇಂದ್ರೆ, ಪುಟ್ಟಪ್ಪ, ಪಂಜೆ ಅಂತ ಮಾತಾಡಿದಾಗ ಆ ಹೆಸರುಗಳ ಪೂರ್ಣ ಅರ್ಥ ಆಗದೆ ನೆಹರೂ, ಗಾಂಧೀಜಿಯ ಹೆಸರು ಕೇಳಿದಂತೆ ಮೈಯೆಲ್ಲ ಕಿವಿಯಾಗಿ ಕೇಳುತ್ತ ಇದ್ದಕ್ಕಿದ್ದಂತೆ “ ‘ಪುಟ್ಟಪ್ಪ’ ‘ಕುವೆಂಪು’ ಎರಡೂ ಒಬ್ಬರೇನಾ ಸಾರ್?” ಎಂಬಂಥ ಮುಗ್ಧ ಪ್ರಶ್ನೆ ಹಾಕಿ ನಮ್ಮ ತಲೆ ರೋಸಿಹೋಗುವಂತೆ ಮಾಡುತ್ತಿದ್ದೆ. ಪರಿಸ್ಥಿತಿ ಹೀಗಿದ್ದು ನಿನ್ನ ಪದ್ಯ ಪೇಪರಲ್ಲಿ ಅಚ್ಚಾದಾಗ ಅನುಮಾನದಿಂದಲೇ ನೋಡಿದೆ: ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲ ನಮ್ಮ ಜಾಣ ಬ್ರಾಹ್ಮಣರ ಹುಡುಗರ ಥರ ನೀನೂ ಮಾಡಿರಬಹುದೆಂದೂ, ನಮ್ಮ ಲಕ್ಷ್ಮಣ ಇಂಥ ಕೆಲಸಕ್ಕೆ ಸೀರಿಯಸ್ಸಾಗಿ ಇಳಿಯಲಾರನೆಂದೂ ತಿಳಿದೆ. ನಿನ್ನ ಪದ್ಯವನ್ನು ಕವಿಯೊಬ್ಬನ ಪದ್ಯ ಎಂದು ಗಂಭೀರವಾಗಿ ಓದಲು ನಿರಾಕರಿಸಿದೆ. ಆದರೆ ನೀನು ಬಿಡಲಿಲ್ಲ; ಬರೆದೆ;

ನಿನ್ನ ಮಾತು ನನ್ನ ಮನಸ್ಸಿನಲ್ಲಿ  ಸಿಕ್ಕಿಕೊಂಡು ನಾನು ಎಂಥ ಚಲೋ ಹುಡುಗಿ ನೋಡಲಿ, ಮರ ನೋಡಲಿ. ಪೋಲಿ ಹುಡುಗರನ್ನು ನೋಡಲಿ, ರೋಮಾಂಚನ ಬರುವಂತೆ ಮಾಡಿದೆ. ಮೇಲಾಗಿ, ನೀನು ಬೆಂಗಳೂರಿಗೆ ಬಂದಾಗಲೆಲ್ಲ ಎರಡೋ ಮೂರೋ ಸಿನಿಮಾಗಳ ಮಧ್ಯೆ ನನ್ನನ್ನೂ ನೋಡಿ ನಿನ್ನ ಪದ್ಯಗಳನ್ನು ಯಾರೋ ಪ್ರಿಂಟ್ ಮಾಡುತ್ತಾರೆಂದೂ ಮುನ್ನುಡಿ ಬರೆದು ಕೊಡಬೇಕೆಂದೂ ಮನಸ್ಸಿಗೆ ಬಂದದ್ದು ಗೀಚಬಹುದೆಂದೂ ಸ್ಪಷ್ಟಪಡಿಸಹತ್ತಿದೆ. ‘ನಾನೂ ಬರೆಯುವ ಮನುಷ್ಯ. ಅಥವಾ ಮುಂದಾದರೂ ಕನ್ನಡತಿಯ ಆಕಾರ ಬದಲಿಸಬೇಕೆನ್ನುವಾತ. ಯಜಮಾನಿಕೆ ಸರಿಯಲ್ಲ. ನೋಡು ಲಕ್ಷ್ಮಣ, ದಶದಿಕ್ಕುಗಳಲ್ಲೂ ಮುನ್ನುಡಿ ಬರೆಯಲು ಲೇಖನಿ, ತಕ್ಕಡಿ ಹಿಡಿದು  ಸಿದ್ಧರಾಗಿ ನಿಂತಿರುವ ಮಂದಿ ಇವೆ, ಅದರಲ್ಲಿ ಇಲ್ಲಿ ನೋಡು. ಈ ಯಜಮಾನ ಹೇಗೆ ಮುನ್ನುಡಿ ಬರೆಯುವುದರಲ್ಲಿ ಪಳಗಿದ್ದಾನೆ ನೋಡು, ದಯವಿಟ್ಟು ಕ್ಷಮಿಸು’, ಎಂದರೂ ಕೇಳದೆ ಸಿಕ್ಕಸಿಕ್ಕಲ್ಲಿ ‘ನೀವೇನೇ ಹೇಳಿ’ ಎಂಬ ಪಲ್ಲವಿಯೊಡನೆ ಗೊಣಗಿದೆ. ನಿನಗೆ ಬುದ್ಧಿ ಇದ್ದರೆ ತಾನೆ? ಅದರ ಪರಿಣಾಮ ಅನುಭವಿಸು.

ಪಿತೂರಿ ಪ್ರಿಯರಾದ ಕೆಲವರು ನೀನು ನನ್ನ ಹಾಗೆ ಪದ್ಯ ಬರೆಯುತ್ತಿ, ನನ್ನನ್ನು ಅನುಸರಿಸುತ್ತಿ ಎಂದು ಒಮ್ಮೆ ದೂರು ಕೊಟ್ಟಿದ್ದರು. ನನ್ನ ಪದ್ಯ ಇನ್ನೊಮ್ಮೆ ಓದುವ ಆಶೆಯಿಂದ ನಿನ್ನದನ್ನು ಓದಿದರೆ, ಅದು ನನ್ನ ಪದ್ಯಕ್ಕಿಂತ ಚೆನ್ನಾಗಿತ್ತು. ಬೇರೆ ರೀತಿಯದಾಗಿತ್ತು. ಅಥವಾ ನನ್ನ ಪದ್ಯ ಅಥವಾ ಇನ್ನೊಬ್ಬರ ಪದ್ಯ ನನಗೆ ನೆನಪೇ ಇರುವುದಿಲ್ಲವಾದ್ದರಿಂದ  ಸಾಮಾನ್ಯವಾಗಿ ‘ಮೂಲವ್ಯಾಧಿ’ಯಿಲ್ಲದೆ- ಇದು ಹಳೆಯ ಶ್ಲೇಷೆಯಾಗುತ್ತಿದೆ – ಪದ್ಯ  ಓದಿ ಸಂತೋಷಿಸುವುದು ಸುಲಭ, ಅನೇಕ ಸಲ ಸುಮತಿ (ಇವನು ನಿನ್ನಂಥ ಇನ್ನೊಬ್ಬ ಹುಚ್ಚ) ನನ್ನ ಪದ್ಯವನ್ನೇ ನನಗೆ ಕೋಟ್ ಮಾಡಿ ಬೆನ್ನು ಚಪ್ಪರಿಕೆ ಪಡೆದಿದ್ದಾನೆ ಮತ್ತು ನನ್ನ ದಡ್ಡತನ ಸಾಧಿಸಿ ತೋರಿಸಿದ್ದಾನೆ. ಇರಲಿ, ನಿನ್ನ ಪದ್ಯದಲ್ಲಿ ನಾನು ನೋಡಿದ್ದು ವಿಚಿತ್ರ ರೀತಿಯ ಲವಲವಿಕೆ. ನಿಜವಾದ ಕವಿಯಲ್ಲಿ ಇರುವ ಲವಲವಿಕೆ, ನಿನ್ನ “ಗೋಪಿ ಮತ್ತು ಗಾಂಡಲೀನ” ಎಂಬ ಕವನದ ವಸ್ತು ಎಂಥವರಿಗೂ ಹೊಳೆಯುವಂಥದ್ದು- ಅಷ್ಟೇಕೆ, ಕೆಲವರಿಗೆ ಹೊಳೆಯುವುದು ಅದೊಂದೇ, ಯಾವಳೋ ಹೆಂಗಸು ಬಟ್ಟೆ ಬಿಚ್ಚಿಕೊಂಡು ಕುಣಿಯುವಾಗ ನೀನು ನಿನ್ನ ಗೆಳೆಯರ ಜೊತೆಗೆ ಬಾಯಿ ಬಿಟ್ಟುಕೊಂಡು ನೋಡುವ ದೃಶ್ಯ ನನಗೆ ನಗೆ ತರಿಸುತ್ತದೆ. ಆದರೆ ನೋಡು ನೀನು ಮೂಲತಃ ಮುಗ್ಧನಾದ್ದರಿಂದ ಅಲ್ಲಿ ಪಟ್ಟ ಅಚ್ಚರಿ, ತಕ್ಕೊಂಡ ಲಯವೆಲ್ಲ ಅಲ್ಲಿ ಬಂದಿವೆ.

ಎಷ್ಟಾದರೂ ನೀನು ನನ್ನ ವಿದ್ಯಾರ್ಥಿಯಾಗಿದ್ದವನು ತಾನೆ: ನನ್ನಿಂದ ಏನನ್ನೂ ಕಲಿಯದಿದ್ದರೂ ನನ್ನ ಹಾಗೆ ನಿರರ್ಥಕ ಪ್ರಾಣಿಯಾಗುವುದನ್ನು ನೀನು ಕಲಿತ ಹಾಗೆ ಕಾಣುತ್ತೆ. ನಮ್ಮ ಸಂಬಂಧ ನೆನೆದರೆ ನನಗೆ ನಗೆ ಬರುತ್ತೆ:

ಗಾಂಡಲೀನ ನಿನ್ನಲ್ಲಿ ಕೇವಲ ಲೈಂಗಿಕಾಕಾಂಕ್ಷೆ ಕೆರಳಿಸದೆ ತನ್ನ ಮೈಯಲ್ಲಿ ನಿನ್ನ ಕಣ್ಣು ನೆಟ್ಟುಕೊಳ್ಳುವುದರ ಜೊತೆಗೆ ನಿನ್ನ ಮೈಯಲ್ಲೂ ನಿನ್ನ ಆಸಕ್ತಿ ಕೆರಳಿಸಿದ್ದಾಳೆ. ನೀನು ಮಧ್ಯಮ ವರ್ಗದ ಬ್ರಾಹ್ಮಣ ಹುಡುಗ, ಇದಕ್ಕೆಲ್ಲ ಹೊಸಬ ಎಂಬುದು ಮುಖ್ಯ; ಆದರೆ ಇತರೇ ಹುಡುಗರಂತೆ ಸಂಪೂರ್ಣ ದಿಗ್ಭ್ರಮೆ ಅಥವಾ ಭಯ ಅನುಭವಿಸದೆ ನೀನು ಧೈರ್ಯದಿಂದ  ನೋಡುತ್ತಿದ್ದಿ ನೋಡಿಕೊಳ್ಳುತ್ತಿದ್ದೀ ಎಂಬುದೂ ಮುಖ್ಯ. ಆದ್ದರಿಂದಲೇ ಗೋಪಿ ನಿನ್ನ ಒಂದು ಭಾಗವೇ. ಆತನಿಗಾದ ಅನುಭವ, ಪಾಪಪ್ರಜ್ಞೆ, ನೈತಿಕ ನಿಲವು ದಾಟಿ ಒಂದು ಅಸಂಬದ್ಧ  ನಾಟಕೀಯ ಭಾವನೆ ಕೆರಳಿಸಲು ಕವನ ಶಕ್ತವಾಗಿದೆ. ಇನ್ನೊಂದು ಮಾತು, ನಿಸಾರ, ಚೆನ್ನಯ್ಯ, ಅನಂತಮೂರ್ತಿ ಇಂಥವರಲ್ಲಿ ಇಂಥ ಘಟನೆ ಬಂದಿದ್ದರೆ ಒಂದು ರೀತಿಯ ಮುನಿಸು, ಭಯ, bravado ಇರುತ್ತಿತ್ತಾಗಿ ಇಲ್ಲಿಯ ರೀತಿಯ ವಿನೋದಪೂರ್ಣ ತೀವ್ರತೆಯಿಂದ ಕವನ ವಂಚಿತವಾಗುತ್ತಿತ್ತು. ನಿನ್ನ ಕವನ ಯಾಕೆ ಚೆನ್ನಾಗುತ್ತದೆಂದರೆ ಬಟ್ಟೆ ಬಿಚ್ಚುವ ಫ್ಯಾಶನಬಲ್ ಸ್ಥಳದಲ್ಲೂ ನೀನು-ಸ್ವಭಾವತಃ ಗೋಪಿಗಿಂತಲೂ ದೊಡ್ಡ ಗಾಂಪನಾಗಿದ್ದರಿಂದ- snobbish ನಿಲುವು ತೆಗೆದುಕೊಳ್ಳುವುದಿಲ್ಲ, ನೀನಾಗಿಯೇ ಉಳಿಯುತ್ತಿ. ನಿನ್ನ ಪದ್ಯಗಳ ಈ ಮನೋಧರ್ಮ ತಿಳಿಯಲು ನಿನ್ನನ್ನು ಅರಿತಿದ್ದರೆ ಒಳ್ಳೆಯದೆಂದು ಮೇಲಿನದನ್ನೆಲ್ಲ ಹೇಳಬೇಕಾಯಿತು.

ಈ ಪದ್ಯದಲ್ಲಿ ನಿನ್ನ ನವ್ಯತೆ ಕೇವಲ ನವ್ಯ-pose ಆಗದೆ ತನ್ನತನ ತೋರಿದೆ; ಇದನ್ನು ಓದಿದಾಗಲೇ ನನಗೆ ನಿನ್ನ ಬೇರೆ ಪದ್ಯಗಳು ಪ್ರಿಯವಾದ ಪಾಪಗಳಂತೆ ಕಾಡತೊಡಗಿದ್ದು. ಆಮೇಲೆ: ನೀನು ಕ್ಯಾಮರಾ ಹಿಡಿದುಕೊಂಡು ಅಲೆಯುತ್ತಾ  ಫೋಟೊ ತೆಗೆದು ಅಪ್ಪನನ್ನು ಮೆಚ್ಚಿಸುವುದರ ಜೊತೆಗೆ ನಿನ್ನಿಂದ ಫೋಟೊ ತೆಗೆಸಿಕೊಳ್ಳುವ ವಸ್ತುಗಳನ್ನು ಬಹಳ ಸೂಕ್ಷ್ಮವಾಗಿ ನೋಡುವೆ ಎನ್ನುವುದರ ಬಗ್ಗೆ ಮಾಹಿತಿ ‘ಫೋಟೊಗ್ರಾಫರ್’ ಎಂಬ ಪದ್ಯದಲ್ಲಿ ದೊರೆಯುತ್ತದೆ. ಅದೂ ಮದುವೆಯ ಗುಂಪನ್ನು ಕಂಡರೆ ನಿನ್ನ ಕ್ಯಾಮರಾ ಕಣ್ಣು ಪ್ರಜ್ವಲಿಸುತ್ತದೆ; ಶಾಲೆ, ಆಫೀಸಲ್ಲಿ ಬರೀ ಹುಡುಗರಿರಲು ಸಾಧ್ಯ.

ಮದುವೆಯಲ್ಲಿ ಹೇಗೆ ಸಾಧ್ಯ? ನಿನಗೆ ಪರಸ್ತ್ರೀಯರನ್ನು ಕಂಡರೆ ಇಷ್ಟು ಕಾಳಜಿ, ಪೋಲಿಭಾವನೆ, ಕಾಮುಕ ದೃಷ್ಟಿ ಇದೆಯೆಂಬುದು ನನಗೆ ನಿನ್ನ ಪದ್ಯ ಓದಿಯೇ  ಗೊತ್ತಾದದ್ದು. ನಾನು ಒಂದು ಕಾಲಕ್ಕೆ ನಿನ್ನ ವಿದ್ಯಾಗುರು ಆಗಿದ್ದೆನೆಂದೋ ಏನೋ ನನ್ನ ಜೊತೆಗಿದ್ದಾಗ ಎದುರಿಗೆ ಮಣಕದಂಥ ಹೆಣ್ಣು ಬಂದಾಗಲೂ ಋಷಿಶಿಷ್ಯನಂತೆ ಧ್ಯಾನದ ಸೋಗು ಹಾಕಿ ಆಕಾಶ ನೋಡುತ್ತಿರುತ್ತಿ. ಆದರೆ ಒಂದು. ನಿನ್ನ ಗುಟ್ಟು ಪದ್ಯದಲ್ಲಾದರೂ ರಟ್ಟಾಗದಿದ್ದರೆ ಕವಿಯಾಗಲು ಸಾಧ್ಯವಿಲ್ಲ, ಇಲ್ಲಿ ರಟ್ಟಾಗಿದೆ. ನಮ್ಮಲ್ಲಿ ಬಹಳ ಜನ ಕತ್ತೆಹಾದರ ಮಾಡಿಯೂ ಅಧ್ಯಾತ್ಮದಲ್ಲೇ ಹುಚ್ಚರಂತೆ ಓಡಾಡುವುದು ಬರೆವುದು. ತನ್ನ ಅನುಭವವನ್ನು ಎದುರಿಸುವ ಗೈರತ್ತಿಲ್ಲದೆ ಹಳ್ಳಿಯ ಕತೆಯಾಗಿಯೋ ಪುರಾಣ ಕತೆಯಾಗಿಯೋ ಬರೆದು ಪಾರಾಗುವುದು ಕಂಡು ಬರುತ್ತದೆ; ಇಂಥವರು ಲೇಖಕರಾದದ್ದು ಅಪರೂಪ. ಹೀಗೆಂದುಕೊಂಡು ನಿನಗಾದದ್ದನ್ನೆಲ್ಲ ಹಾಳೆಯ ಮೇಲೆ ಸುರುವಿದರೂ ಆಗುವುದಿಲ್ಲ. ನಿನ್ನ ‘ಫೋಟೊಗ್ರಾಫರ್’ ಕವನ ನನಗೆ ತುಂಬ ಹಿಡಿಸಿದ್ದು ಅದು ಕಲೆಯಾಗಿ ಚೆನ್ನಾಗಿದ್ದುದರಿಂದ. ನೀನು ಫೋಟೊ ತೆಗೆಯಲು ಮದುವೆಗೆ ಅಪರಿಚಿತನಾಗಿ,  ಹೊರಗಿನವನಾಗಿ ಹೋಗುತ್ತಿ; ಅಲ್ಲಿಯ ದೃಶ್ಯಗಳಲ್ಲಿ ತೊಡಗುತ್ತೀ. ಹೀರೋ ಆಗಿ ಮೆರೆಯುತ್ತಿ, ಹುಡುಗಿಯರ ಮೀನುಖಂಡ, ಬೆನ್ನು, ತೋಳನ್ನು ಕಂಡ ನಿನ್ನ ಎದೆ ಝಲ್ಲೆನ್ನುತ್ತೆ.

ಫೋಟೊ, ನಗೆ, ಫೋಟೊ, ನಗೆ; ನೀನು ಅಲ್ಲಿಯ ಒಂದು ಅಂಗ… ನಗೆ… ಮದುವೆ ಮುಗಿಯುತ್ತಾ ಬರುತ್ತೆ. ಎಲ್ಲ ಫೋಟೊ ತೆಗೆದುಕೊಂಡು ಹೊರಡುತ್ತಾರೆ. ನೀನು ಎಷ್ಟಾದರೂ ಬಾಡಿಗೆಗೆ ಬಂದವ, ಹಿಂದೆ ಉಳಿಯುತ್ತೀ. ನಿನ್ನ ಕ್ಯಾಮರಾದಲ್ಲಿ, ಕಲೆಯಲ್ಲಿ, ಮೈಯಲ್ಲೆಲ್ಲ ತೆಗೆದ ಫೋಟೊಗಳು, ನೆಗೆಟಿವ್‍ಗಳು. ಈ ಪದ್ಯದ ಉದ್ದಕ್ಕೂ ಬರುವ ಲೈಂಗಿಕ ವಿವರಗಳು ಒಂದು ಚೆಂದ; ಉದ್ದಕ್ಕೂ ನಿನ್ನ ಒಬ್ಬಂಟಿತನ, ಪರಕೀಯತೆಯ ಪೊರೆ ಬಿಚ್ಚಲು ನಡೆಸುವ ರೊಮಾನ್ಸ್ ಗಳು ಮತ್ತು ಆ ಭ್ರಮೆ ಒಂದು ಚೆಂದ; ಉದ್ದಕ್ಕೂ ಪಸರಿಸಿರುವ ವ್ಯವಹಾರಪ್ರಜ್ಞೆ ಮತ್ತು ಅದನ್ನು ಹೋಗಲಾಡಿಸಲು ಹೆಣಗಿ ಸೋಲುವ  ದುರಂತ ಇನ್ನೊಂದು ಚೆಂದ.

ಪದ್ಯ ಕೇವಲ ನಿನ್ನ ಅನುಭವದ ಹೇಳಿಕೆಯಾಗಿ ನಿಲ್ಲದೆ ತನ್ನದೇ ಆದ ಜಗತ್ತು, ಜೀವ ಪಡೆಯುತ್ತದೆ; ಕ್ಯಾಮರಾದ ಲೆನ್ಸಿನ ನಿರ್ಜೀವತೆ ನೋಡುವವನ ನಿರ್ಜೀವತೆಯಾಗುತ್ತದೆ. ಅಂದರೆ ಕ್ಯಾಮರಾ ಮತ್ತು ಚಿತ್ರಗ್ರಾಹಕ ವ್ಯಕ್ತಿ ನಿನಗೆ ಗೊತ್ತಿಲ್ಲದಂತೆಯೇ ಸಂಕೇತವಾಗುತ್ತವೆ. ಇದು ದುರಂತವಾಗಿದ್ದರೂ ನಿನ್ನ ಸುಂದರ ವರ್ಣನೆಗಳು ಮತ್ತು ನಿನ್ನ ತುಂಬುಗಂಟಲ ಮಾತಿನಲ್ಲಿ ಮೋಹಕವಾಗುತ್ತವೆ. ಅದಕ್ಕೆ ನೀನು ಕವಿಯೆಂದು ಹೇಳಿದ್ದು. ಕವಿಯನ್ನು ನಾವು ಮೆಚ್ಚುವುದು ಸುಖದ ಕೊಡುಗೆಗಲ್ಲ, ದುಃಖದ ಕೊಡುಗೆಗಲ್ಲ; ಅನುಭವದ ಕೊಡುಗೆಗೆ. ಕವಿ ಈ ಅರ್ಥದಲ್ಲಿಯೇ ತನ್ನ, ಎಲ್ಲರ ಬಗ್ಗೆ ಮಹಾ ಕ್ರೂರಿ: ಸುಖ, ದುಃಖವನ್ನು ಒಳಗೊಂಡೂ ಅವನ್ನು ಮೀರಿ ನಿಲ್ಲುವ ಅವನ ನಿರ್ಲಿಪ್ತತೆಯ ಮೂಲಕವೇ ಆತ ಅನುಭವ ಕೊಡುವುದು, ಕಲಾವಿದನಾಗುವುದು.

ನೀನು ಚಿಕ್ಕವನು. ಕಾಮುಕನಾಗಿರುವುದು ಸಹಜ ಮತ್ತು ಸುಲಭ. ನಿನ್ನ ಬಹುಪಾಲು ಪದ್ಯಗಳು ಕಾಮದ ಬೆನ್ನುಹತ್ತಿವೆ. ಕೆಲವಂತೂ ನಿನ್ನ ತೀಟೆಗಳನ್ನು ಮಾತ್ರ ಹೇಳುತ್ತವೆ. ಪದ್ಯದ ದೃಷ್ಟಿಯಿಂದ, ಹೀಗೆ ಕಾಮವನ್ನೇ ನೀನು ಅವಲಂಬಿಸಿದರೆ, ಇದೇ ಕಾಮದ ಕಾವನ್ನು ಮುಂದೆಯೂ ಇಟ್ಟುಕೊಳ್ಳದಿದ್ದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ, ನೆನಪಿರಲಿ. ಆದರೆ ನಿನ್ನ ಕಾಮ ಕೇವಲ ಬೊಗಸೆಗೆ ಸಿಗುವ ಮೊಲೆ, ತೆಕ್ಕೆಗೆ ಹಿಗ್ಗನ್ನುಣಿಸುವ ತೊಡೆಗಳಿಗೆ ಸೀಮಿತವಾಗದೆ ಇನ್ನಿತರ ವಿಚಾರಗಳೊಂದಿಗೆ ತಳಕುಹಾಕಿಕೊಂಡಿದೆ. ಹಾವು ಅಂದರೆ ಅದೇ, ತಂಗಿ ಅಂದರೆ ಅದೇ, ಮದುವೆ ಅಂದರೆ ಅದೇ, ಕ್ಯಾಮೆರಾ ಅಂದರೆ ಅದೇ: ಹೆಣ್ಣ ನೆರಳಿನಲ್ಲಿ ನಿನ್ನ ಕಲ್ಪನೆ ಪುಂಗಿ ಊದುತ್ತದೆ. ಕಾಮ ಕೈಕೊಡಲು  ಸಾಧ್ಯ. ಎಳೆವಯಸ್ಸು ಬಹಳ ದಿನ ಇರುವುದಿಲ್ಲ, ಮದುವೆಯಾಗುತ್ತಿ ಅಥವಾ ಆಗದಿದ್ದರೂ ಬೆಳೆದು ಮುದುಕನಾಗುತ್ತಿ. ಗಾಂಡಲೀನ ನಿನಗೆ ಮೊದಲ ಸಲ ಹುಚ್ಚು ಹಿಡಿಸಿದಷ್ಟು ಎರಡನೆ ಸಲ ಹಿಡಿಸಲಾರಳು. ಮದುವೆಯ ಸಂದರ್ಭಗಳು ಸಂಭ್ರಮ ಕಳೆದುಕೊಳ್ಳುತ್ತವೆ, ಅಲ್ಲಿ ಹುಡುಗಿಯರು ಬೋರುಗಳಂತೆ ಓಡಾಡುತ್ತಾರೆ. ವಾಸಂತಿ ಹೋಗುತ್ತಾಳೆ, ಹೊಸ ವಾಸಂತಿ ನಿನ್ನನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಆಗಲೂ ನಿನಗೆ ಬದುಕು ತನ್ನೆಲ್ಲ ವಯ್ಯಾರ ಬಿಚ್ಚಬೇಕು, ನಿನ್ನ ಇಡೀ ದೇಹ ಈಗಿನ ಸೀಮಿತ ವಲಯಗಳನ್ನು ಮೀರಿ ಝೇಂಕರಿಸಬೇಕು. ಅಂದರೆ ಈಗಿನ ನಿನ್ನಲ್ಲಿಯ ಬೆರಗುಗಣ್ಣಿನ ಹುಡುಗ ನಿನ್ನ ಮುಪ್ಪಿನ ಗೋಡೆ ಹತ್ತಿ ಹೆಚ್ಚು ದೂರಕ್ಕೆ, ಹೆಚ್ಚು ಆಶ್ಚರ್ಯದಿಂದ ನೋಡಬೇಕು. ಏಟ್ಸನಲ್ಲಿ ಹಾಗಾಯಿತು, ಗಯಟೆಯಲ್ಲಿ ಹಾಗಾಯಿತು: ಅದು ಕೇವಲ ಆಕಸ್ಮಿಕವಲ್ಲ. ಹುಟ್ಟಿನಿಂದ ಬಂದ ಕುತೂಹಲ ಮತ್ತು ಜೀವನ ಶಕ್ತಿ ಮಾಸುವ ಗುಣ ಪಡೆದಿವೆ: ಚಳಿಗಾಲದಲ್ಲಿ ನಮ್ಮೂರ ಜನ ಬೆಂಕಿಯನ್ನು ಕಾಪಾಡುವಂತೆ ಕಾಪಾಡಬೇಕು. ಆ ಜೀವಶಕ್ತಿಗೆ ಕಟ್ಟಿಗೆ ತುಂಬಬೇಕು. ‘ಕಾಮ’ ಹಲವು ಟೊಂಗೆ ಪಡೆಯುವುದು ಹಾಗೆ; ‘ಲಿಂಗ’ ನಮ್ಮ ಶಿವಭಕ್ತರ ದೃಷ್ಟಿಯಲ್ಲಿ ಅರ್ಥ ಪಡೆದಂತೆ.

ನಿನ್ನ ಪದ್ಯದ ಸಂಕೀರ್ಣತೆ, ಭಾಷೆ, ಪ್ರತಿಮೆ, ಹಾಳುಮೂಳನ್ನೆಲ್ಲ ಹಿಡಿದು ಅಲ್ಲಾಡಿಸುವುದಕ್ಕೆ ಮನಸ್ಸಿಲ್ಲ. ನಮ್ಮಲ್ಲೀಚೆಗೆ ಅಭಿಪ್ರಾಯ ಪ್ರೇರಿಸುವುದು, ವಿಮರ್ಶೆಯ ಹಿಕ್ಕೆಹಾಕುತ್ತ ಹೋಗುವುದು ಅತಿಯಾಗಿದೆ; ನಾನೂ ಸಾಕಷ್ಟು ಹಾಕಿದ್ದೇನೆ. ಎಲ್ಲೆಲ್ಲೂ ಜಾಣರು ಪಂಡಿತರು ಅಭಿರುಚಿವಂತರು, ಡಾಕ್ಟರುಗಳು, ಪ್ರೊಫೆಸರುಗಳು ಕತ್ತು ನಿಮಿರಿಸಿ ಹೊಸ ಹೊಸ ಭಂಗಿಯಲ್ಲಿ ತೀರ್ಪುಕೊಡುವ ದೃಶ್ಯಗಳಿವೆ. ಈ ಹವೆಯಲ್ಲಿ ಹೊಸ ಜೀವಗಳು  ಹುಟ್ಟುವುದು, ಬೆಳೆಯುವುದು ಕಷ್ಟ. ಈ ಗದ್ದಲದಲ್ಲಿ ನಿನ್ನಂಥ ಮುಗ್ಧನ ಧ್ವನಿ ನಿನ್ನ ಕಿವಿಗೇ ತಾಗದಿದ್ದೀತು. ತಾಗದಿದ್ದರೂ ನಿನ್ನ ಕ್ಯಾಮರಾ. ನಿನ್ನ ಗೆಳೆಯರು ನಿನ್ನ ಏಕಾಕಿತನ ಕಟ್ಟಿಕೊಂಡು ಪದ್ಯ ರಚನೆಗೆ ಹಂಗಾಮಿ ಬಿಡುವುಕೊಟ್ಟು ಅಡ್ಡಾಡಬಲ್ಲೆ ನೀನು.

ಅದು ಒಳ್ಳೆಯದು. ಇನ್ನೂ ನೆನಪಿದೆ: ನಾಲ್ಕು ವರ್ಷದ ಕೆಳಗೆ ರಾಮಕೃಷ್ಣ ವಿದ್ಯಾರ್ಥಿ ಮಂದಿರದಿಂದ ಕದ್ದು ಓಡಿಬಂದು ಸಿನಿಮಾ, ಹುಡುಗಿಯರು, ಪೋಲಿ ಮಾತು, ನನ್ನ ಪದ್ಯ, ಹರಟೆ ಕೇಳಿ, ನೋಡಿಕೊಂಡು ವ್ಯಾಯಾಮ ಮಾಡಿ ಹುಚ್ಚುಚ್ಚಾಗಿ ಕುಣಿದು ನಕ್ಕು ವಿದ್ಯಾರ್ಥಿ ಮಂದಿರದತ್ತ ನೀನು ನಿಧಾನಕ್ಕೆ ಹೋಗುತ್ತಿದ್ದದ್ದು.