ಒಂದು ಮುಕ್ತ ಛಂದದ ಕಾವ್ಯವನ್ನು ಬರೆಯುವಾಗಲೇ ಪ್ರತಿ ಸಾಲಿನ ನವಿರಾದ ಹೊಂದಾಣಿಕೆಗೆ ಅದೆಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಕವಿತೆಯನ್ನು ತೀವ್ರವಾಗಿ ಅನುಭವಿಸುತ್ತ ಬರೆಯುವ ಎಲ್ಲರಿಗೂ ಗೊತ್ತು. ಗಜಲ್ ಎಂದರೆ ಅದರ ಪ್ರತಿ ಸಾಲನ್ನೂ ಒಂದೇ ಮಾತ್ರೆಗೆ ಅಳವಡಿಸಬೇಕು. ಕನ್ನಡದಲ್ಲಿ ಮೊಟ್ಟಮೊದಲ ಸಲ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿ ಹಿಡಿದಿಡುವ ಕೆಲಸವನ್ನು ಗಿರೀಶ್ ಜಕಾಪುರೆ ಮಾಡಿದ್ದಾರೆ. ಉದ್ದುದ್ದದ ಸಾಲುಗಳ, ಒಂದೇ ಸಾಲಿನಲ್ಲಿ ಪರಸ್ಪರ ವೈರುಧ್ಯದ ಚಿತ್ರಣ ಕೊಡುವ ಗಜಲ್ ಗಳು ಈಗಾಗಲೇ ಕನ್ನಡದಲ್ಲಿ ಬಹಳಷ್ಟು ಬಂದಿದೆ.
ಗಿರೀಶ್ ಜಕಾಪುರೆ ಬರೆದ “ಮನದ ಮುಂದಣ ಮಾಯೆ” ಗಜಲ್ ಸಂಕಲನದ ಕುರಿತು ಶ್ರೀದೇವಿ ಕೆರೆಮನೆ ಬರಹ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

 

ಒಂದು ಕಾವ್ಯಪ್ರಕಾರವನ್ನು ಅದರ ಮೂಲ ಬಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಯಲ್ಲಿ ಅದೇ ಛಂದಸ್ಸಿನಲ್ಲಿ ಬರೆಯುವುದೆಂದರೆ ಸುಲಭದ ಮಾತಲ್ಲ. ಅದರ ಮೂಲ ಸ್ವರೂಪವನ್ನೂ, ಅದು ಮತ್ತೊಂದು ಭಾಷೆಗೆ ಬಂದಾಗ ಹಾಗೆಯೇ ಉಳಿಸಿಕೊಂಡು ರಚಿಸಬೇಕೆಂದರೆ ಅದರ ಬಗ್ಗೆ ಆಳವಾದ ಅಧ್ಯನವಿರಬೇಕು. ಅಂತಹದ್ದೊಂದು ಆಳ ಅಧ್ಯಯನ ಹಾಗೂ ಸತತ ಪ್ರಯತ್ನದಿಂದ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿಯೇ ಕನ್ನಡಕ್ಕೆ ತರುವಲ್ಲಿ ಬಹುತೇಕ ಯಶಸ್ವಿಯಾಗಿರುವ ಗಿರೀಶ ಜಕಾಪುರೆಯವರು ತಮ್ಮ ಮತ್ತೊಂದು ಗಜಲ್ ಸಂಕಲನ ‘ಮನದ ಮುಂದಣ ಮಾಯೆ’ಯ ಮೂಲಕ ನಮ್ಮ ಮುಂದಿದ್ದಾರೆ.

ಒಂದು ಮುಕ್ತ ಛಂದದ ಕಾವ್ಯವನ್ನು ಬರೆಯುವಾಗಲೇ ಪ್ರತಿ ಸಾಲಿನ ನವಿರಾದ ಹೊಂದಾಣಿಕೆಗೆ ಅದೆಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಕವಿತೆಯನ್ನು ತೀವ್ರವಾಗಿ ಅನುಭವಿಸುತ್ತ ಬರೆಯುವ ಎಲ್ಲರಿಗೂ ಗೊತ್ತು. ಗಜಲ್ ಎಂದರೆ ಅದರ ಪ್ರತಿ ಸಾಲನ್ನೂ ಒಂದೇ ಮಾತ್ರೆಗೆ ಅಳವಡಿಸಬೇಕು. ಕನ್ನಡದಲ್ಲಿ ಮೊಟ್ಟಮೊದಲ ಸಲ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿ ಹಿಡಿದಿಡುವ ಕೆಲಸವನ್ನು ಗಿರೀಶ್ ಜಕಾಪುರೆ ಮಾಡಿದ್ದಾರೆ. ಉದ್ದುದ್ದದ ಸಾಲುಗಳ, ಒಂದೇ ಸಾಲಿನಲ್ಲಿ ಪರಸ್ಪರ ವೈರುಧ್ಯದ ಚಿತ್ರಣ ಕೊಡುವ ಗಜಲ್ ಗಳು ಈಗಾಗಲೇ ಕನ್ನಡದಲ್ಲಿ ಬಹಳಷ್ಟು ಬಂದಿದೆ. ಗಿರೀಶ ಜಕಾಪುರೆಯವರು ಸದ್ದಿಲ್ಲದೇ ಸರಿಯಾದ ರಾಜಮಾರ್ಗವನ್ನು ಕನ್ನಡದ ಕಿರಿಯ ಗಜಲ್ ಕಾರರಿಗೆ ಹಾಕಿಕೊಡುತ್ತಿದ್ದಾರೆ.

ಇವರ ಮನದ ಮುಂದಣ ಮಾಯೆಯ ಗಜಲ್ ಗಳಲ್ಲಿ ಹದಿನಾರು ಮಾತ್ರೆಯಿಂದ ಹಿಡಿದು ನಲವತ್ತು ಮಾತ್ರೆಗಳವರೆಗಿನ ಸಾಲುಗಳಿವೆ. ಛೋಟಿ ಬೆಹರ್’ನಿಂದ ಬಡಿ ಬೆಹರ್’ಗಳು ತಮ್ಮನ್ನು ಹೀಗೆಯೇ ಬರೆಯಬೇಕು ಎಂಬುದನ್ನು ಕಲಿಸಿಕೊಡಲು ಎಂಬಂತೆ ಉದಾಹರಣೆಗಳಾಗಿ ನಮ್ಮೆದುರು ನಿಂತಿವೆ. ಇನ್ನು ವಿಷಯ ವ್ಯಾಪ್ತಿಯಂತೂ ಭೂಮ್ಯಾಕಾಶಕ್ಕೆ ವ್ಯಾಪಿಸಿದೆ. ಗಜಲ್’ಗಳಲ್ಲಿ ಇರಲೇಬೇಕಾದ ಪ್ರೀತಿ ಪ್ರೇಮ ವಿರಹಗಳು ಸಹಜವೆಂಬಂತೆ ಹಾಸುಹೊಕ್ಕಾಗಿದ್ದರೆ ಸಾಮಾಜಿಕ ವಿಷಯಗಳೂ ನಡುನಡುವೆ ಭಾವನೆಗಳಿಗೆ ಢೀ ಕೊಟ್ಟು ಗುಡುಗು ಸಿಡಿಲಿನ ಆರ್ಭಟವನ್ನು ಸೃಷ್ಟಿಸಲು ಹಿಂದುಮುಂದು ನೋಡುವುದಿಲ್ಲ.

(ಗಿರೀಶ್ ಜಕಾಪುರೆ)

ಪದೇಪದೇ ಕೇಳುತ್ತಿದ್ದೀರಿ ಹೇಗಿದ್ದೀರಿ ಎಂದು
ಗೊತ್ತು ನನಗೆ ನೀವೇ ಕಾಲು ಜಗ್ಗಿದ್ದೀರಿ ಎಂದು ( ಗಜಲ್-೧೫)

ಜಗದ ರೀತಿನೀತಿಗಳು ಇಲ್ಲಿ ಮನ ಸೆಳೆಯುವ ಗಜಲ್ ಗಳಾಗಿವೆ ಎಂಬುದನ್ನು ಈ ಶೇರ್ ಗಳಲ್ಲಿಯೇ ಕಾಣಬಹುದು. ಹೇಗಿದ್ದೀರಿ ಎನ್ನುತ್ತಲೇ ನಮ್ಮ ಖುಷಿಯನ್ನು ಕಿತ್ತುಕೊಳ್ಳುವ ಜನರ ನಡುವೆಯೇ ಬದುಕಬೇಕಾದ ಅನಿವಾರ್ಯತೆಯನ್ನು ಈ ಶೇರ್ ಗಳು ಹೇಳುತ್ತದೆ.

ನೆರಳ ಬಯಕೆಯಿದ್ದರೆ ಸುಮ್ಮನೆ ಗಿಡನೆಡು
ಬಿಸಿಲಿನ ಭಯವಿದ್ದರೆ ಸುಮ್ಮನೆ ಗಿಡ ನೆಡು (೭೧)

 ಗಜಲ್’ಗಳಲ್ಲಿ ಇರಲೇಬೇಕಾದ ಪ್ರೀತಿ ಪ್ರೇಮ ವಿರಹಗಳು ಸಹಜವೆಂಬಂತೆ ಹಾಸುಹೊಕ್ಕಾಗಿದ್ದರೆ ಸಾಮಾಜಿಕ ವಿಷಯಗಳೂ ನಡುನಡುವೆ ಭಾವನೆಗಳಿಗೆ ಢೀ ಕೊಟ್ಟು ಗುಡುಗು ಸಿಡಿಲಿನ ಆರ್ಭಟವನ್ನು ಸೃಷ್ಟಿಸಲು ಹಿಂದುಮುಂದು ನೋಡುವುದಿಲ್ಲ.

ಅದಕ್ಕಿಂತ ಹೆಚ್ಚಾಗಿ ಸಂಕಲನದಲ್ಲಿ ಪರಿಸರ ಕಾಳಜಿಯ ಗಜಲ್ ಗಳು ಹೆಚ್ಚು ಗಮನ ಸೆಳೆಯುತ್ತವೆ. ಗಿಡ ನೆಡು ಎನ್ನುವ ಎಪ್ಪತ್ತೊಂದನೆಯ ಗಜಲ್ ನಮಗೆ ಗಿಡಗಳ ಅವಶ್ಯಕತೆಯನ್ನು ಹೇಳುತ್ತಲೇ ಖುಷಿಯಲ್ಲೂ, ಬೇಸರದಲ್ಲೂ ಕೊನೆಗೆ ವಿರಹದಲ್ಲೂ ಗಿಡ ನೆಡಬೇಕು ಎನ್ನುತ್ತ ನಾವು ಯೋಚಿಸುವ ರೀತಿಯನ್ನೇ ಬದಲಾಯಿಸಿಬಿಡುತ್ತದೆ.

ಬಿಸಿರಕ್ತ ಬಸಿದು ಭಾರತಾಂಬೆಯ ಗುಡಿ ಕಟ್ಟಿದವರು ನಾವು
ಬಿಕ್ಕದಿರಿ ಬಂಧುಗಳೇ ಸಾಯಲೆಂದೇ ಹುಟ್ಟಿದವರು ನಾವು (ಗಜಲ್-೬೭)

ಎನ್ನುತ್ತ ಗಜಲ್ ಕಾರ ನಮ್ಮ ಸೈನಿಕರನ್ನೂ ನೆನೆಸಿಕೊಳ್ಳುತ್ತರಲೇ ಬಹಳಷ್ಟು ಗಜಲ್ ಗಳಲ್ಲಿ ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಕಾರಣರಾದ ಗಾಂಧೀಜಿಯವರನ್ನು ನೆನಪಿಸಿಕೊಳ್ಳುತ್ತಾರೆ. ಗಾಂಧೀಜಿಯ ಹೆಸರಿನಲ್ಲಿ ಮಾಡುವ ದುರಾಚಾರವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವಾಗ ನಮ್ಮ ಬಗ್ಗೆ ನಾವೇ ತಟ್ಟಿಕೊಂಡು ನೋಡಿಕೊಳ್ಳಬೇಕೆನಿಸುವಂತಿದೆ.

ಹೀಗಾಗಿಯೇ ಬಾಪು ಇನ್ನೇನು ಮಾಡೋಣ ಎನ್ನುತ್ತ ಗಾಂಧೀಜಿಯವರ ಎಲ್ಲ ತತ್ವ ಸಿದ್ಧಾಂತಗಳನ್ನು ನಮಗೆ ಬೇಕಾದಂತೆ ತಿರುಚಿಕೊಂಡು ಹಾಯಾಗಿರುವ ನಮ್ಮ ಸ್ವಾರ್ಥದ ಕುರಿತು ಈ ಗಜಲ್ ಹೇಳುತ್ತದೆ.

ಒಂದಕ್ಕೆ ಹೊಡೆದರೆ ಇನ್ನೊಂದು ಗಲ್ಲವನೂ ಮುಂದೆ ಮಾಡಲು ಹೇಳಿದಿರಿ
ಇನ್ನೊಂದಕ್ಕೂ ತೆಗೆದು ಬಾರಿಸಿದ್ದೇವೆ ಬಾಪು, ಇನ್ನೇನು ಮಾಡೋಣ (ಗಜಲ್-೨೮)

ಅಂದ ಹಾಗೆ ಇಡೀ ಸಂಕಲನವನ್ನು ವಿರಹದಲ್ಲಿ ಅದ್ದಿ ತೆಗೆದಂತೆ ಭಾಸವಾಗುತ್ತದೆ. ಹೆಚ್ಚಿನ ಗಜಲ್ ಗಳು ಕಳೆದು ಹೋದವಳ ನೆನಪಿಗೆಂಬಂತೆ ಬರೆದ ವಿರಹದ ಪತ್ರಗಳೆಂಬಂತೆ ಭಾಸವಾಗುತ್ತದೆ.

ಇಡೀ ಸಂಕಲನವನ್ನು ಒಟ್ಟಾಗಿ ಗಮನಿಸಿದರೆ ಇನ್ನೊಂದು ಸೂಕ್ಷ್ಮತೆಯನ್ನು ಕಾಣಬಹುದು. ವಿರಹದ ಜೊತೆಜೊತೆಗೇ ಮದಿರೆ ಕೂಡ ಇಡೀ ಸಂಕಲನವನ್ನು ತನ್ನ ತೆಕ್ಕೆಯೊಳಗೆ ಅಪ್ಪಿಕೊಂಡಿದೆ. ಮಧುಶಾಲೆ ಗಜಲ್ ನ ಮುಖ್ಯಪಾತ್ರ. ಸಾಕಿ ಎಂಬುದು ಗಜಲ್ ಕಾರನ ಆತ್ಮ ಸಖಿ. ಹೀಗಾಗಿ ಗಜಲ್ ಕಾರರು ಒಂದುತೊಟ್ಟು ಕುಡಿಯದಿದ್ದರೂ ಶರಾಬಿನ ಬಗ್ಗೆ ಯಥೇಚ್ಛವಾಗಿ ಬರೆಯಲು ಇಚ್ಚಿಸುವುದು ತಪ್ಪೇನಲ್ಲ.

ನೀನು ಇರದಾಗಲೂ ಸಾಗುತ್ತದೆ ಬದುಕು, ಆದರೆ ಸ್ವಲ್ಪ ಸಪ್ಪೆ
ಸಖಿ, ನಿನ್ನ ವಿರಹದಲೂ ರುಚಿಸುತ್ತದೆ ಮಧು, ಆದರೆ ಸ್ವಲ್ಪ ಸಪ್ಪೆ (ಗಜಲ್ ೧೯)

ವಿರಹ ಮತ್ತು ಮಧುವನ್ನು ಬೆರೆಸಿ ಕಾಕ್ ಟೇಲ್ ಮಾಡಿ ಕುಡಿಯುವವರಿಗೆ ಯಾವುದರ ಅಮಲು ಹೆಚ್ಚು ಎಂದು ತಿಳಿಯುವ ಕುತೂಹಲವಿರುತ್ತದೆ. ವಿರಹದ ನೋವಿಗೆ ಮದಿರೆ ಸಾಥ್ ನೀಡದಿದ್ದರೆ ಹೇಗೆ ನಡೆದೀತು ಹೇಳಿ?

ಊಟ, ತಿಂಡಿ, ನಿದ್ರೆ ಬಿಡಬಹುದು. ಆದರೆ ಮದಿರೆಯ ನಶೆಯನ್ನು ಮರೆಯುವುದು ಹೇಗೆ ಸಾಧ್ಯ? ಅದಕ್ಕೆಂದೇ ಸಂಕಲನದ ಪ್ರತಿ ಗಜಲ್ ನಲ್ಲೂ ಒಂದು ಶೇರ್ ಕಡ್ಡಾಯವಾಗಿ ಮದಿರೆ ಹಾಗೂ ನಶೆಯ ಕುರಿತಾಗಿದೆ. ಗಿರೀಶ್ ಜಕಾಪುರೆಯವರಿಗೆ ಗಾಲಿಬ್ ತುಂಬಾ ಇಷ್ಟದ ಗಜಲಕಾರ. ಬಹುಶಃ ಆತನ ನೆನಪಿಗಾಗಿ ಒಂದಾದರೂ ಮಧು ತುಂಬಿದ ಶೇರ್ ಅನ್ನು ಬರೆದು ಸಮರ್ಪಿಸುತ್ತಿರಬಹುದೆ.

ಒಂದೇ ಭಾವನೆಗಳಿರುವ ಮುಸಲಸಿಲ್ ಗಜಲ್ ಗಳು ಓದಿ ಮುಗಿಸಿದರೂ ಕಲ್ಲುಸಕ್ಕರೆಯ ಸವಿ ಎಷ್ಟೋ ಸಮಯದವರೆಗೆ ನಾಲಿಗೆಯ ತುದಿಯಲ್ಲಿ ಉಳಿದುಬಿಡುವಂತೆ ಮನಸ್ಸಿನಾಳದಲ್ಲಿ ನವಿರಾಗಿ ಕುಳಿತುಬಿಟ್ಟರೆ ಗೈರ್ ಮುಸಲಸಿಲ್ ಗಜಲ್ ಗಳು ಹಲವು ಬಗೆಯ ಹೂಗಳನ್ನು ಪೋಣಿಸಿ ಮಾಲೆಕಟ್ಟಿದಂತೆ ತನ್ನ ಮನಮೋಹಕ ಬಣ್ಣಗಳಿಂದಲೇ ಆಕರ್ಷಿಸುತ್ತವೆ.

ಏನೇ ಇರಲಿ, ಕನ್ನಡ ಗಜಲ್ ಲೋಕದ ಅನಭಿಷಿಕ್ತ ದೊರೆ ಅಲ್ಲಮ ತನ್ನ ಮನದ ಮುಂದಣ ಮಾಯೆಯನ್ನು ನಮ್ಮೆದುರು ಅನಾವರಣಗೊಳಿಸುತ್ತಿದ್ದಾರೆ. ಅಲ್ಲಮನನ್ನು ಆವರಿಸಿಕೊಂಡಿರುವ ಗಜಲ್ ಎಂಬ ಮಾಯೆ ಅವರನ್ನು ಬಿಟ್ಟು ದೂರ ಸರಿಯದಿರಲಿ

ಅಲ್ಲಮ ಯಾರು? ಬಲ್ಲವರು ಕೇಳುತಿಹನು
ಅವನೆಂದರೆ ಎಲ್ಲವೂ ಅಳಿದ ಮೇಲೆ ಉಳಿದವನು (ಗಜಲ್-೫೦)